(ಮೊದಲಿನವರು ಗುರುನಾಥ ಗೌಡರು, ಎರಡನೆಯವರು ಶೀನಾ ಸಿದ್ದಿ.) |
ಘಟನೆ ಒಂದು:
ಮುಂಜಾನೆ ಕರಾಳವಾಗಿತ್ತು. ಏಳು ಗಂಟೆಯಿರಬೇಕು. ಮನೆಯ ಪಕ್ಕದ ಕಾಡಿನಲ್ಲಿ ನಾಯಿ ಕೂಗಿದ ಶಬ್ದ. ಹಾಗೂ ಅದೇ ವೇಳೆಗೆ ಕೆಂಪು ಅಳಿಲು (ನಮ್ಮಲ್ಲಿ ಅದನ್ನು ಕೇಶಳಿಲು ಎನ್ನುತ್ತಾರೆ) ಅದೂ ಕೂಗಿದ ಶಬ್ದ. ವಿಕಾರವಾಗಿತ್ತು. ಏನೋ ಆಗಿರಬೇಕೆಂದು ಓಡೋಡಿ ಹೋದೆ.
ಮುಂಜಾನೆಯೇ ನಮ್ಮೂರಲ್ಲಿ ಕೇಶಳಿಲುಗಳು ತೆಂಗಿನ ಮರಕ್ಕೆ ದಾಳಿ ಇಡುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಎನ್ನಿಸಿದೆ. ತೆಂಗಿನ ಹಿಂಡಿಗೆಗೆ ತೂತು ಕೊರೆದು ಅದರಲ್ಲಿನ ನೀರು ಹೀರಿ, ಒಳಗಿನ ತಿರುಳನ್ನು ತಿಂದು ಮುಗಿಸಿ ತೆಂಗಿನ ಬೆಳೆಗಾರರಿಗೆ ಸಮಸ್ಯೆಯಾಗಿರುವ ಕೇಶಳಿಲನ್ನು ದಿನಂಪ್ರತಿ ತೆಂಗಿನಮರಗಳನ್ನು ಬಡಿದು ಓಡಿಸುವುದು ಸಾಮಾನ್ಯವಾಗಿದೆ. ಇವತ್ತು ಬೆಳಿಗ್ಗೆ ಕೇಶಳಿಲಿನ ಜೋಡಿ ಯಾವುದೋ ತೆಂಗಿನ ಮರವನ್ನು ಗುರಿಯಾಗಿ ಇರಿಸಿಕೊಂಡು ಓಡಿ ಬಂದಿದ್ದವಿರಬೇಕು. ಮರದಿಂದ ಮರಕ್ಕೆ ಹಾರುತ್ತ ಬರುತ್ತಿದ್ದವು. ನಮ್ಮುರಲ್ಲಿ ಹೊಸ ರಸ್ತೆ ಕಾಮಗಾರಿ ನಡೆಯುತ್ತಿದೆ. ಇದರ ಪರಿಣಾಮವಾಗಿ ಒಂದು ಜಾಗದಲ್ಲಿ ಮರಗಳ ನಡುವೆ ದೊಡ್ಡ ಗ್ಯಾಪ್ ಇದೆ. ಈ ಜಾಗದಲ್ಲಿ ಅಳಿಲುಗಳು ಮರದಿಂದ ಮರಕ್ಕೆ ಹಾರಲು ಬಹಳ ಕಷ್ಟ ಪಡಬೇಕು.
ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಅಳಿಲು ಹಾರಿತಿರಬೇಕು. ಆದರೆ ಇನ್ನೊಂದು ಬದಿಯ ಮರ ಅದರ ಹಿಡಿತಕ್ಕೆ ಸರಿಯಾಗಿ ಸಿಕ್ಕಲಿಲ್ಲ. ಮರದಿಂದ ಉರುಳಿತು. ಉರುಳಿದ ಹೊಡೆತಕ್ಕೆ ಒಮ್ಮೆ ಏಳಲೇ ಆಗಲಿಲ್ಲ. ಹಾಗೇ ಕುಂಟುತ್ತ, ಏಳುತ್ತ ಬೀಳುತ್ತ ಹೋಗುತ್ತಿತ್ತು. ಇದನ್ನು ನೋಡಿದ್ದು ನಮ್ಮ ಪಕ್ಕದ ಮನೆಯ ನಾಯಿ ಓಡೋಡಿ ಬಂದದ್ದೇ ಕೇಶಳಿಲಿನ ಕುತ್ತಿಗೆಗೆ ಬಾಯಿ ಹಾಕಿಯೇ ಬಿಟ್ಟಿತು. ನಾನು ಓಡಿ ಹೋಗಿ ಬಿಡಿಸಲು ನೋಡಿದೆ. ನಾಯಿ ಗುರ್ರೆಂದಿತು. ಕಲ್ಲೆತ್ತಿಕೊಂಡೆ. ನಾಯಿಯ ಜೊತೆಗೆ ಅಳಿಲು ಕಿರ್ರೆನ್ನುತ್ತಿತ್ತು. ನಾಗಿ ನನ್ನನ್ನು ಹೆದರಿಸಲು ಗುರ್ರೆಂದರೆ ಅಳಿಲು ಪ್ರಾಣ ಹೋಗುವ ಅಂತಿಮ ಕ್ಷಣದಲ್ಲಿ ಕಿರ್ ಎನ್ನುತ್ತಲಿತ್ತು. ನಾನು ಕಲ್ಲೆತ್ತಿಕೊಂಡದ್ದನ್ನು ಕಂಡ ನಾಯಿ ಅಳಿಲನ್ನು ಬಿಟ್ಟು ಹೋಗುತ್ತದೆ ಎಂದುಕೊಂಡೆ. ತಥ್.. ಕಚ್ಚಿಕೊಂಡೇ ಹೋಯಿತು. ಕಣ್ಣೆದುರೇ ಒಂದು ಕೆಂಪಳಿತು ನಾಯಿಯ ಬಾಯಿಗೆ ಆಹಾರವಾಯಿತು. ತೋ.. ಎಂತಾ ಕೆಲಸ ಆಗಿಬಿಟ್ಟಿತಲ್ಲ. ಅಳಿಲನ್ನು ಉಳಿಸಲಾಗಲಿಲ್ಲವಲ್ಲ ಎಂದು ಮನಸ್ಸು ಹಳಹಳಿಸುತ್ತಿದ್ದರೆ, ಆ ಅಳಿಲಿನ ಸಂಗಾತಿ ಮರದ ಮೇಲಿಂದ ರೋಧಿಸುತ್ತಿತ್ತು. ಮನಸ್ಸು ಭಾರವಾಗಿಯೇ ಮರಳಿದೆ. ಪರಿಸರ ದಿನದ ಆರಂಭದಲ್ಲಿಯೇ ಇಂತಹ ಘಟನೆ ನೋಡಬೇಕಾಗಿ ಬಂತಲ್ಲ ಛೇ.. ಎಂದುಕೊಂಡೆ.
ಘಟನೆ ಎರಡು:
ಕಳವೆಯಲ್ಲಿ ಕಾನ್ಮನೆ ಪರಿಸರ ಜ್ಞಾನ ಕೇಂದ್ರದ ಉದ್ಘಾಟನೆ ಇವತ್ತು. ಅಳಿಲಿನ ಘಟನೆ ನೆನಪಿನಲ್ಲಿಯೇ ಕಳವೆಗೆ ಹೋದೆ. ಶಿವಣ್ಣ (ಶಿವಾನಂದ ಕಳವೆ) ಮಕ್ಕಳಿಗೆ ಮರಗಳು ಭೂಮಿಗೆ ಬಂದ ಕತೆ ಹೇಳುತ್ತಿದ್ದರು. ಕೆಲ ಹೊತ್ತಿನಲ್ಲಿಯೇ ಕಾನ್ಮನೆ ಉದ್ಘಾಟನೆಗಾಗಿ ಹಿರಿಯರೆಲ್ಲ ಬಂದರು ಉದ್ಘಾಟನೆಯೂ ಆಯಿತು.
ಕಾರ್ಯಕ್ರಮದ ವಿಶೇಷ ಘಟ್ಟವಾಗಿ ಇಬ್ಬರು ಕಾಡಿನ ಒಡನಾಡಿಗಳಿಗೆ ಸನ್ಮಾನ ಇಟ್ಟುಕೊಳ್ಳಲಾಗಿತ್ತು. ಒಬ್ಬರು ಬೇಡ್ತಿ ಕೊಳ್ಳಗಳಲ್ಲಿ ಅಡ್ಡಾಡುತ್ತ ಕಾಡಿನ ಅಧ್ಯಯನ ಮಾಡಿದ ಶೀನಾ ಶಿದ್ದಿ ಪುರ್ಲೆಮನೆ. ಕಳೆದ 60 ದಶಕಗಳಿಂದ ಕಾಡಿನಲ್ಲಿಯೇ ಸುತ್ತಾಡುತ್ತ ಅನುಭವ ಗಳಿಸಿಕೊಂಡವರು. ಇನ್ನೋರ್ವರು ಗುರುನಾಥ ಗೌಡ ಬಸೂರು. 1980ರ ದಶಕದಲ್ಲಿ ಕಣ್ಣನ್ನು ಕಳೆದುಕೊಂಡರೂ ಸಂಗೀತ ಕಲಿತು, ಕಾಡನ್ನು ಬೆಳೆಸಿ, ಅಕ್ಕಿ ಗಿರಣಿಯನ್ನು ತಯಾರಿಸಿ, ಕೆರೆಗೆ ಕಾಯಕಲ್ಪ ಕೊಟ್ಟು ಕಣ್ಣಿದ್ದವರೂ ನಾಚುವಂತೆ ಮಾಡಿದ ಸಾಹಸಿ. ಇಬ್ಬರನ್ನೂ ನೋಡಿ ಮನಸ್ಸು ಪುಳಕಿತವಾಯಿತು.
ಶೀನಾ ಸಿದ್ದಿಯವರ ಸನ್ಮಾನದ ಸಂದರ್ಭದಲ್ಲಿ ಅವರಿಗೆ ಸ್ವಂತ ಮನೆಯಿಲ್ಲ, ಅತಿಕ್ರಮಣ ಜಮೀನಿನಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ. ಇತ್ತೀಚೆಗೆ ಅವರಿಗೆ ರೇಷನ್ ಕಾರ್ಡು ಸಿಕ್ಕಿದೆ ಎಂದು ಹೇಳುತ್ತಿದ್ದರು ಶಿವಣ್ಣ. ಶೀನಾ ಸಿದ್ದಿ ಭಾವುಕರಾಗಿದ್ದರು. ಅವರ ಕಣ್ಣಲ್ಲಿ ನೀರು ಕಂಡು ಸಭೆಯಲ್ಲಿದ್ದ ಬಹುತೇಕರು ಗದ್ಗದಿತರಾದರು. ಗುರುನಾಥ ಗೌಡರ ಸಾಧನೆಯನ್ನು ಹೇಳಿದಂತೆಲ್ಲ ಸಭೆಯಲ್ಲಿದ್ದ ಹೈಸ್ಕೂಲು ಮಕ್ಕಳ ಕಣ್ಣಲ್ಲೂ ನೀರು. ಇಬ್ಬರ ಸನ್ಮಾನ ಮುಗಿಯುತ್ತಿದ್ದಂತೆ ಕರತಾಡನ ಜೋರಾಗಿತ್ತು.
ನಂತರ ಮಾತನಾಡಿದರು ಗುರುನಾಥ ಗೌಡರು. ತಾನು ಮಾಡಿದ ಸಾಧನೆಗಳ ಬಗ್ಗೆ ಹೇಳಿದರು. ಕೆರೆ ಕಟ್ಟಿದ್ದು, ಆ ಸಂದರ್ಭದಲ್ಲಿ ಹಲವರು ಹಣ ಮಾಡಿಕೊಳ್ಳಲು ಪ್ರಯತ್ನಿಸಿದ್ದು, ಸೇರಿದಂತೆ ಹಲವು ಸಂಗತಿಗಳನ್ನು ಬಿಚ್ಚಿಟ್ಟರು. ಯಾಕೋ ಅವರನ್ನು ಮುಟ್ಟಿ ಮಾತನಾಡಿಸಬೇಕು ಅನ್ನಿಸಿತು. ಆದರೆ ಸಾಧ್ಯವಾಗಲಿಲ್ಲ. ಕಾಡಿನ ಒಡನಾಡಿ, ಕಣ್ಣಿಲ್ಲದಿದ್ದರೂ ಸಾಧನೆ ಮಾಡಿದ ಇಬ್ಬರು ಸಾಧಕರನ್ನು ಸನ್ಮಾನ ಮಾಡಿದ ಶಿವಾನಂದ ಕಳವೆಯವರ ಬಗ್ಗೆ ಹೆಮ್ಮೆಯೂ ಆಯಿತು.
ಪರಿಸರ ದಿನದ ಆರಂಭ ಬೇಸರದಿಂದ ಆಗಿದ್ದರೂ ಅಂತ್ಯದಲ್ಲಿ ಒಂದೊಳ್ಳೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾರ್ಥಕತೆ ಲಭಿಸಿತ್ತು. ಪರಿಸರದ ಜೊತೆಗೆ ಸದಾ ಒಡನಾಡುತ್ತ, ಪರಿಸರದ ಜೊತೆಗೆ ಪರಿಸರವಾಗುತ್ತ ಬಂದ ಈ ಇಬ್ಬರು ಸಾಧಕರು ಬಹಳ ಗ್ರೇಟ್ ಎನ್ನಿಸಿತು. ಅಳಿಲನ್ನು ನಾಯಿಯ ಬಾಯಿಯಿಂದ ಬಿಡಿಸಲು ಸಾಧ್ಯವಾಗಲಿಲ್ಲ ಎನ್ನುವ ಭಾವ ಮತ್ತೆ ಮತ್ತೆ ಕಾಡಿ ಮನಸ್ಸು ಮೂಕವಾಯಿತು. ಪರಿಸರ ದಿನ ಎರಡು ಭಿನ್ನ ಅನುಭವಗಳನ್ನು ನೀಡಿತು. ಮನಸ್ಸು ಭಾವನೆಗಳ ಜೊತೆಯಲ್ಲಿ ಹೊಯ್ದಾಡಿತು.
No comments:
Post a Comment