Saturday, June 21, 2014

ಸಂಜೆಗಾನ

(ಚಿತ್ರ ಕೃಪೆ : ದಿನೇಶ ಮಾನೀರ್)
*
ಇಳಿ ಬಿಸಿಲ ಸಂಜೆಯಲಿ,
ಪಡುವಣದ ಬಾನಿನಲಿ
ಹಾರಿ ನಲಿದಿತ್ತು ಹಕ್ಕಿ ಹಿಂಡು,
ಹೊಂಬಣ್ಣ ಚೆಲ್ಲುವ ಬಾನು ಕಂಡು ||

ಇರುಳ ಸಂಜೆಗೆ ರವಿಯು
ಇಂದಿನ ದಿನ ಮುಗಿಸಿ
ನಾಳೆ ಬರುವೆನು ಎಂದು
ಸಾಗುತಿದ್ದ, ಜೊತೆಗೆ ಮುಳುಗುತಿದ್ದ ||

ಹಕ್ಕಿ ಹಿಂಡದು ರವಿಯ
ಹೊಂಬಣ್ಣದ ಸಿರಿ ಕಂಡು
ಪ್ರಕೃತಿಯೇ ತೋಳಾಗಿ ಚಾಚುತ್ತಿತ್ತು
ಹೊಸ ಹುರುಪು ಶಕ್ತಿಯಲಿ ಚೀರುತ್ತಿತ್ತು ||

ಹಗಲಿಂದ ಇರುಳವರೆಗೆ
ಹೊಟ್ಟೆಗೆ ಬೇಟೆಯೇ ಆಯ್ತು
ಮನೆಯೊಳಗೆ ಕಾದಿರುವ
ಮರಿಗಷ್ಟು ಕೊಟ್ಟರೆ ಆಯ್ತು ||

ಬಾನಿನಾ ರವಿ ಜೊತೆಗೆ
ಹಾರಿರುವ ಹಕ್ಕಿ ಕೂಡ
ಗೂಡು ಸೇರಲು ಮುಂಚೆ
ಸಾಗುತ್ತಿತ್ತು, ಜೊತೆಗೆ ಹಾರುತ್ತಿತ್ತು ||

**
(ಈ ಕವಿತೆಯನ್ನು ಬರೆದಿರುವುದು 24.11.2006ರಂದು ದಂಟಕಲ್ಲಿನಲ್ಲಿ)
(ದಿನೇಶಣ್ಣನ ಪೋಟೋಕ್ಕೆ ಧನ್ಯವಾದಗಳು)

No comments:

Post a Comment