Thursday, January 24, 2019

ಅಣುರಣನ-೧

ಆತ್ಮೀಯ ಓದುಗ ಬಳಗಕ್ಕೆ 
ಪ್ರೀತಿಯ ವಂದನೆಗಳು..

ಯಾವುದೇ ಒಂದು ಮುಕ್ತಾಯ ಇನ್ನೊಂದು ಆರಂಭಕ್ಕೆ ಕಾರಣ ಎಂದು ಹೇಳುತ್ತಾರೆ. ನಾನು ಬರೆದ ಬೆಂಗಾಲಿ ಸುಂದರಿ ಇದೀಗ ಪುಸ್ತಕ ರೂಪದಲ್ಲಿ ನಿಮ್ಮ ಮುಂದಿದೆ. ಆ ಹೊಸ್ತಿಲಿನಲ್ಲಿಯೇ ನನ್ನ ಮೂರನೇ ಕಾದಂಬರಿ ಅಣುರಣನವನ್ನು ಆರಂಭಿಸುತ್ತಿದ್ದೇನೆ. ಈ ಹಿಂದೆ ಅಘನಾಶಿನಿ ಅಂಗಳದಲ್ಲಿಯೇ ನನ್ನ ಮೊದಲ ಕಾದಂಬರಿ ಅಘನಾಶಿನಿ ಕಣಿವೆಯಲ್ಲಿ ಹಾಗೂ ಎರಡನೇ ಕಾದಂಬರಿಯಾದ ಬೆಂಗಾಲಿ ಸುಂದರಿಯನ್ನು ನಿಮ್ಮ ಓದಿಗೆ ಬಿಟ್ಟಿದ್ದೆ. ಅವುಗಳನ್ನು ನೀವು ಪ್ರೀತಿಯಿಮದ ಆದರಿಸಿದ್ದರಿ. ಅಷ್ಟೇ ಕುತೂಹಲದಿಂದ ಕಾದಿದ್ದೀರಿ. ಮುಂದೇನು ಎಂದು ಪ್ರಶ್ನಿಸಿದ್ದಿರಿ. ಯಾವಾಗ ಮುಂದಿನ ಭಾಗವನ್ನು ಹಾಕುತ್ತೀರಾ ಎಂದು ಹಿತವಾಗಿ ಬೈದಿದ್ದೀರಿ. ಆ ಕಾದಂಬರಿಗಳ ಪೈಕಿ ಬೆಂಗಾಲಿಯನ್ನು ಮುಗಿಸಿ ಪುಸ್ತಕ ರುಪದಲ್ಲಿ ನಿಮ್ಮೆದುರು ಇಟ್ಟಿದ್ದೇವೆ. ಅದೀಗ ಮಾರುಕಟ್ಟೆಯಲ್ಲಿ ಲಭ್ಯ. (ಫೆ.೩ಕ್ಕೆ ಬಿಡುಗಡೆಯಾಗುತ್ತಿದೆ). 
ಅಘನಾಶಿನಿ ಕಣಿವೆಯಲ್ಲಿ ಕಾದಂಬರಿ ಇನ್ನೂ ಮುಗಿದಿಲ್ಲ. ಶೀಘ್ರದಲ್ಲಿಯೇ ಅದನ್ನು ಮುಕ್ತಾಯ ಮಾಡುವ ಭರವಸೆ ನೀಡುತ್ತಿದ್ದೇನೆ.

ಅಂದಹಾಗೆ ನನ್ನ ಈ ಕಾದಂಬರಿಯ ಕುರಿತು ಕೆಲವು ಮಾತುಗಳನ್ನು ಹೇಳಲೇ ಬೇಕು. ಈ ಕಾದಂಬರಿಯ ಒನ್ ಲೈನ್ ಕಳೆದ ೨ ವರ್ಷಗಳಿಂದ ನನ್ನ ಮನಸ್ಸಿನಲ್ಲಿ ಕೊರೆಯುತ್ತಲೇ ಇತ್ತು. ಅದಕ್ಕೀಗ ಅಕ್ಷರ ರೂಪವನ್ನು ಕೊಡುತ್ತಿದ್ದೇನೆ. ನಾನು ಶಿರಸಿಯಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾಗ ಕಂಡಂತಹ ಪ್ರತ್ಯಕ್ಷ ಘಟನೆಗಳು, ಸನ್ನಿವೇಶಗಳು ಈ ಕಾದಂಬರಿಯಲ್ಲಿದೆ. ಒಂದು ನದಿ, ಅದರ ಸುತ್ತಲ ಘಟನೆಗಳು, ಒಮದು ಅಣು ಸ್ಥಾವರ, ಅದರ ಸುತ್ತಲಿನ ಹಲವು ಸಂಗತಿಗಳು, ಮಾನವೀಯ ನೆಲೆಗಳು, ಭಾವನೆಗಳು, ಸಂಬಂಧಗಳ ಇತ್ಯಾದಿಗಳನ್ನಜ ಒಳಗೊಂಡ ಕಾದಂಬರಿ ಇದು. ಪ್ರತ್ಯಕ್ಷ ಭೇಟಿ ಕೊಟ್ಟು, ಹಲವು ಮಾಹಿತಿಗಳನ್ನು ಸಂಗ್ರಹಿಸಿ, ಪತ್ರಿಕೆಗಳಲ್ಲಿ ಬಂದಂತಹ ಮಾಹಿತಿಗಳನ್ನು ಆಧಾರವಾಗಿ ಇಟ್ಟುಕೊಂಡು ಬರೆಯುತ್ತಿರುವ ಕಾದಂಬರಿ ಇದು. ಈ ಕಾದಂಬರಿಯನ್ನೂ ನನ್ನ ಹಿಂದಿನ ಕಾದಂಬರಿಗಳಂತೆಯೇ ನೀವು ಪ್ರೀತಿಯಿಮದ ಆದರಿಸಿಕೊಳ್ಳುತ್ತೀರಿ ಎನ್ನುವ ಭಾವನೆ ನನ್ನದು.

ಮತ್ತೊಮ್ಮೆ ಪ್ರೀತಿಯಿಂದ
ವಿನಯ್ ದಂಟಕಲ್
೯೮೮೦೧೯೦೬೪೨

----------------------

`ನಮ್ಮ ಹೊಸ ಪತ್ರಿಕೆಯಲ್ಲಿ ಉತ್ಸಾಹಿ ವರದಿಗಾರರು ಬೇಕಾಗಿದ್ದಾರೆ.`
ಹೀಗೊಂದು ಜಾಹೀರಾತು ಕಣ್ಣಿಗೆ ಬೀಳುವ ವೇಳೆಗೆ ವಿಜಯ್ ಗುಂಟಕಲ್ಲು ಸಾಕಷ್ಟು ಹೈರಾಣಾಗಿದ್ದ. ಹತ್ತಾರು ಕಡೆಗಳಲ್ಲಿ ಉದ್ಯೋಗಕ್ಕಾಗಿ ಅಲೆದಾಡಿ ಒದ್ದಾಟ ನಡೆಸಿದ್ದ. ಹಲವು ಕಡೆಗಳಲ್ಲಿ ಸಂದರ್ಶನಗಳಲ್ಲಿ ಪಾಲ್ಗೊಂಡು, ನೀವು ಬೇಡ ಎನ್ನಿಸಿಕೊಂಡಿದ್ದ.
`ಇನ್ನು ನಿನಗೆ ಕೆಲಸ ಸಿಗೋದಿಲ್ಲ ಸುಮ್ಮನೆ ಮನೆಯಲ್ಲಿ ಕೆಲಸ ಮಾಡ್ಕೊಂಡು ಇರು. ಇರೋ ಎರಡು ಎಕರೆ ಜಮೀನನ್ನು ಚನ್ನಾಗಿ ದುಡಿಸಿ, ಒಳ್ಳೆ ಬೆಳೆ ತೆಗೆದು ಯಶಸ್ವಿ ಕೃಷಿಕ ಎನ್ನಿಸಕೊ` ಎಂಬ ತಂದೆಯ ಮಾತಿಗೆ ಓಗೊಟ್ಟು ಕೃಷಿಯತ್ತ ಮುಖ ಮಾಡಿದ್ದ.
ವಿಜಯ್ ಗುಂಟಕಲ್ಲು ಓದಿದ್ದು ಕಡಿಮೆಯೇನಲ್ಲ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಉತ್ತಮ ಅಂಕಗಳೊಂದಿಗೆ ಪಾಸು ಮಾಡಿದ್ದ. ಆದರೆ ಅವನ ಅದೃಷ್ಟಕ್ಕೆ ಆತನಿಗೆ ಬೇಕಾದಂತಹ ಉದ್ಯೋಗ ಸಿಕ್ಕಿರಲಿಲ್ಲ. ಯಾವುದೆ ಕ್ಷೇತ್ರವಾದರೂ ಆರಂಭದ ದಿನಗಳಲ್ಲಿ ಸುಲಭವಾಗಿ ಸಿಗುವುದಿಲ್ಲವಲ್ಲ. ಹಾಗಾಗಿತ್ತು ವಿಜಯ್ನ ಪಾಡು.
ಸ್ನಾತಕೋತ್ತರ ಪದವಿಯ ಪರೀಕ್ಷೆಯನ್ನು ಮುಗಿಸಿದ ನಂತರ ಅದರ ಫಲಿತಾಂಶ ಬರುವ ಮೊದಲೇ ಸಾಕಷ್ಟು ಪತ್ರಿಕಾ ಕಚೇರಿಗಳಿಗೂ, ವಾರ್ತಾ ವಾಹಿನಿಗಳಿಗೂ ತನ್ನ ಸ್ವ ವಿವರಗಳನ್ನು ಮಿಂಚಂಚೆಯಯ ಮೂಲಕ ಕಳಿಸಿದ್ದ. ಅಲ್ಲದೇ ತಾನೂ ಬೆಂಗಳೂರಿಗೆ ಹೋಗಿ ಪತ್ರಿಕಾ ಹಾಗೂ ವಾರ್ತಾ ವಾಆಹಿನಿಗಳ ಕಚೇರಿಗೆ ಎಡತಾಕಿ ಬಂದಿದ್ದ, ನಾಳೆ ಬನ್ನಿ, ನಾಡಿದ್ದು ಬನ್ನಿ, ಮುಂದಿನ ವಾರ ಬನ್ನಿ ಎಂಬ ಮಾತುಗಳನ್ನು ಕೇಳಿಸಕೊಂಡು ವಾಪಾಸಾಗಿದ್ದ.
ನಡು ನಡುವೆ ಮಿತ್ರರುಗಳ ಸಲಹೆಯಂತೆ ಸ್ಥಳೀಯವಾಗಿ ಡಾಟಾ ಎಂಟ್ರಿ, ಕಂಪ್ಯೂಟರ್ ಆಪರೇಟರ್, ಹೊಟೆಲ್ ರಿಸೆಪ್ಷನಿಷ್ಟ್ ಹೀಗೆ ಹಲವು ತಾತ್ಕಾಲಿಕ ಕೆಲಸಗಳಲ್ಲಿಯೂ ತನ್ನನ್ನು ತಾನು ತೊಡಗಿಸಿಕೊಂಡಿದ್ದ. ಈ ಎಲ್ಲ ಕಡೆಗಳಲ್ಲಿ ಕೊಡುತ್ತಿದ್ದ ಹಣವನ್ನು ಬಂಗಾರವೆಂಬಂತೆ ಕಾಪಾಡಿ ಉಳಿಸಿಕೊಳ್ಳಲು ಯತ್ನಿಸಿದ್ದ. ಮೊದ ಮೊದಲು ಸಣ್ಣ ಪುಟ್ಟ ಕೆಲಸ ಮಾಡಲು ಸ್ವಾಭಿಮಾನ ಅಡ್ಡ ಬಂದಿತ್ತಾದರೂ, ನಂತರದ ದಿನಗಳಲ್ಲಿ ಕೆಲಸ ಹಿಡಿಯಲೇಬೇಕು ಎಂಬ ಅನಿರ್ವಾತೆ ಆತನನ್ನು ಕಾಡಿತ್ತು. ಹೀಗಾಗಿ ಈ ಎಲ್ಲ ವೃತ್ತಿಗಳಲ್ಲಿಯೂ ತನ್ನನ್ನು ತಾನು ತೊಡಗಿಸಿಕೊಂಡಿದ್ದ. ಆದರೆ ತಾತ್ಕಾಲಿಕವಾಗಿದ್ದ ಈ ಎಲ್ಲ ಕೆಲಸಗಳೂ ಒಂದು ದಿನ ಮುಗಿದ ಮರುದಿನ ಮುಮದೇನು ಮಾಡುವುದು ಎಂಬ ಶೂನ್ಯ ಆತನನ್ನು ಆವರಿಸಿತ್ತು. ತದನಂತರದಲ್ಲಿಯೇ ಆತನ ತಂದೆ ವಿಜಯನ ಬಳಿ ಕೃಷಿ ಮಾಡು ಎನ್ನುವ ಸಲಹೆ ನೀಡಿದ್ದರು. ತಾನೂ ಅದರಲ್ಲಿ ತೊಡಗಿಸಿಕೊಂಡಿದ್ದ. ಇಂತಹ ಸಂದರ್ಭದಲ್ಲಿಯೇ ವಿಜಯ್ ನಿಗೆ ಆತನ ಮಿತ್ರ `ಉತ್ಸಾಹಿ ಯುವಕರು ಪತ್ರಿಕೆಗೆ ಬೇಕಾಗಿದ್ದಾರೆ' ಎನ್ನುವ ಜಾಹೀರಾತನನ್ನು ನೀಡಿದ್ದ. ಮತ್ತೊಮ್ಮೆ ಆತನ ಕಣ್ಣಲ್ಲಿ ಹೊಸ ಮಿಂಚೊಂದು ಮೂಡಿತ್ತು.
ಆ ದಿನ ಸಂಜೆಯೇ ಆತ ತನ್ನ ಸ್ವವಿವರವನ್ನು ಆ ಪತ್ರಿಕೆಗೆ ಕಳುಹಿಸಿ, ಅವರ ಉತ್ತರಕ್ಕಾಗಿ ಕಾಯತೊಡಗಿದ್ದ.

(ಮುಂದುವರಿಯುತ್ತದೆ)


Friday, January 18, 2019

ಕರ್ನಾಟಕಕ್ಕೆ ಬೇಕು ಇನ್ನೊಂದು ರಣಜಿ ತಂಡ

ಪ್ರಸ್ತುತ ಕ್ರಿಕೆಟ್‌ನಲ್ಲಿ ರಾಜ್ಯದಲ್ಲಿ ಹೇರಳ ಪ್ರತಿಭೆಗಳು ಬೆಳಕಿಗೆ ಬರುತ್ತಿವೆ. ಇದರಿಂದಾಗಿ ಹಲವು ಕ್ರಿಕೆಟ್ ಆಟಗಾರರು ರಾಜ್ಯದ ತಂಡದಲ್ಲಿ ಅವಕಾಶ ಸಿಗದೇ ಬೇರೆ ರಾಜ್ಯಗಳ ಕಡೆಗೆ ಮುಖ ಮಾಡಿದ ನಿದರ್ಶನಗಳೂ ಇದೆ. ಹೀಗಿದ್ದಾಗಲೇ ರಾಜ್ಯಕ್ಕೆ ಇನ್ನೊಂದು ರಣಜಿ ತಂಡಕ್ಕೆ ಅವಕಾಶ ಸಿಗಲಿ ಎನ್ನುವ ಅಭಿಪ್ರಾಯ ವ್ಯಾಪಕವಾಗಿದೆ.
ಪ್ರಸ್ತುತ ರಣಜಿ ಪಂದ್ಯಾವಳಿಯಲ್ಲಿ  ಗುಜರಾತ್ ರಾಜ್ಯದಿಂದ ಗುಜರಾತ್, ಬರೋಡಾ ಹಾಗೂ ಸೌರಾಷ್ಟ್ರ ತಂಡಗಳು ಆಡುತ್ತಿವೆ. ಮಹಾರಾಷ್ಟ್ರ ರಾಜ್ಯದಿಂದ ಮುಂಬೈ, ಮಹಾರಾಷ್ಟ್ರ ಹಾಗೂ ವಿದರ್ಭ ತಂಡಗಳು ಆಡುತ್ತಿವೆ. ತೆಲಂಗಾಣ ರಾಜ್ಯ ವಿಭಜನೆಯಾಗುವ ಮೊದಲು ಆಂಧ್ರದಲ್ಲಿ ಹೈದರಾಬಾದ್ ಹಾಗೂ ತೆಲಂಗಾಣ ತಂಡಗಳಿದ್ದವು. ಇದೀಗ ತೆಲಂಗಾಣ ಹಾಗೂ ಹೈದರಾಬಾದ್ ತಂಡಗಳಿವೆ. ರಣಜಿ ಟ್ರೋಫಿ ಆರಂಭದ ದಿನಗಳಿಂದಲೂ ಈ ತಂಡಗಳು ಅಸ್ತಿತ್ವದಲ್ಲಿದೆ. ಭಾಷಾವಾರು ಪ್ರಾಂತ್ಯ  ರಚನೆಗೂ ಮೊದಲು ಇದ್ದ ಪ್ರದೇಶಗಳನ್ನು ಪ್ರತಿನಿಧಿಸಿ ಈ ತಂಡಗಳು ಆಡುತ್ತಿವೆ. ಅದೇ ಮಾನದಂಡದಲ್ಲಿ ಕರ್ನಾಟಕಕ್ಕೆ ಇನ್ನೊಂದು ತಂಡ ರಚನೆಗೆ ಅವಕಾಶ ನೀಡಲಿ ಎನ್ನುವ ಅಭಿಪ್ರಾಯಗಳು ವ್ಯಾಪಕವಾಗಿದೆ.
ಕರ್ನಾಟಕದಲ್ಲಿ ಕ್ರಿಕೆಟ್ ಪ್ರತಿಭೆಗಳು ಸಾಕಷ್ಟಿವೆ. ಕನಿಷ್ಟ 3 ತಂಡಗಳನ್ನು ರಚನೆ ಮಾಡುವಷ್ಟು ಗುಣಮಟ್ಟದ ಕ್ರಿಕೆಟ್ ಆಟಗಾರರು ರಾಜ್ಯದಲ್ಲಿದ್ದಾರೆ. ಆದರೆ ರಣಜಿ ಸೇರಿದಂತೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ರಾಜ್ಯದಿಂದ ಒಂದೇ ತಂಡ ಆಡಬೇಕು. ಇದರಿಂದ ಹಲವು ಆಟಗಾರರು ಅವಕಾಶ ವಂಚಿತರಾಗುತ್ತಿದ್ದಾರೆ. ಈ ಕಾರಣದಿಂದ ಹುಬ್ಬಳ್ಳಿ, ಬೆಳಗಾವಿ ಅಥವಾ ಉತ್ತರ ಕರ್ನಾಟಕದ ಯಾವುದೇ ಪ್ರಮುಖ ಸ್ಥಳವನ್ನು ಕೇಂದ್ರವಾಗಿರಿಸಿಕೊಂಡು ಇನ್ನೊಂದು ತಂಡವನ್ನು ರಣಜಿಯಂತಹ ಪ್ರಮುಖ ಟೂರ್ನಿಗಳಿಗೆ ಕಳಿಸಬೇಕು ಎನ್ನುವ ಆಗ್ರಹ ಹೆಚ್ಚಿದೆ.
ಹುಬ್ಬಳ್ಳಿ, ಶಿವಮೊಗ್ಗಗಳಂತಹ ನಗರಗಳಲ್ಲಿ ಉತ್ತಮ ಕ್ರಿಕೆಟ್ ಮೈದಾನಗಳಿವೆ. ಉತ್ತರ ಕರ್ನಾಟಕದಲ್ಲಿ  ಗ್ರಾಮೀಣ ಭಾಗಗಳಲ್ಲಿ ಗುಣಮಟ್ಟದ ಕ್ರಿಕೆಟ್ ಕಲಿಗಳಿದ್ದಾರೆ. ಕರ್ನಾಟಕದಿಂದ ಇನ್ನೊಂದು ತಂಡವನ್ನು ಕಳಿಸಿದರೆ ಹಲವು ಗ್ರಾಮೀಣ ಪ್ರತಿಭೆಗಳನ್ನು ಪೋಷಿಸಿದಂತಾಗುತ್ತದೆ. ಅಲ್ಲದೇ ಇತರ ಭಾಗಗಳಿಗೂ ಹೆಚ್ಚಿನ ಪ್ರಾಾಮುಖ್ಯತೆ ನೀಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ ಗಮನ ಹರಿಸಲಿ ಎನ್ನುವುದು ಅಭಿಮಾನಿಗಳ ಆಶಯ.

ಪ್ರತಿಭೆಗಳ ವಲಸೆ
ಕರ್ನಾಟಕ ತಂಡದಲ್ಲಿ ಅವಕಾಶ ಸಿಗದೇ ಹಲವು ಆಟಗಾರರು ಬೇರೆ ಬೇರೆ ರಾಜ್ಯಗಳ ಕಡೆಗೆ ಮುಖ ಮಾಡಿದ್ದಾರೆ. ಕರ್ನಾಟಕ ತಂಡದ ಆರಂಬಿಕ ಆಟಗಾರನಾಗಿದ್ದ ಕೆ. ಬಿ. ಪವನ್ ಹಾಗೂ ಬೌಲರ್ ಅಬ್ರಾರ್ ಖಾಜಿ ಪ್ರಸ್ತುತ ರಣಜಿ ಪಂದ್ಯಾವಳಿಯಲ್ಲಿ ನಾಗಾಲ್ಯಾಂಡ್ ಪರ  ಆಡುತ್ತಿದ್ದಾರೆ. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ರಾಬಿನ್ ಉತ್ತಪ್ಪ ಪ್ರಸ್ತುತ ಸೌರಾಷ್ಟ್ರ ತಂಡದ ಪರ ಆಡುತ್ತಿದ್ದಾರೆ. ಇವರಷ್ಟೇ ಅಲ್ಲದೇ ಇನ್ನೂ ಹಲವು ಕ್ರಿಕೆಟ್ ಆಟಗಾರರು ಬೇರೆ ಬೇರೆ ರಾಜ್ಯಗಳ ಕಡೆಗೆ ಮುಖ ಮಾಡಿದ್ದಾರೆ. ಆ ರಾಜ್ಯಗಳ ಪರ ಉತ್ತಮವಾಗಿ ಆಟವನ್ನಾಡುತ್ತಿದ್ದಾರೆ. ಹೀಗಿದ್ದಾಗ ಕರ್ನಾಟಕ ರಣಜಿಯಂತಹ ದೇಸೀಯ ಟೂರ್ನಿಗಳಲ್ಲಿ ಇನ್ನೊಂದು ತಂಡವನ್ನು ಕಳಿಸುವುದು ಉತ್ತಮ ಎನ್ನುವ ಅಭಿಮತ ಕ್ರಿಕೆಟ್ ಅಭಿಮಾನಿಗಳು ಹಾಗೂ ಪಂಡಿತರದ್ದಾಗಿದೆ.

Friday, January 11, 2019

ಮತ್ತೆ ಮತ್ತೆ ಅವಕಾಶ ಸಿಕ್ಕರೂ ಎಡವುತ್ತಿರುವ ರಾಹುಲ್

ಕ್ರಿಕೆಟ್‌ನಲ್ಲಿ ಕೆಲವು ಆಟಗಾರರಿದ್ದಾರೆ. ಹೇರಳ ಪ್ರತಿಭೆಯನ್ನು ಹೊಂದಿದ್ದರೂ, ಪದೇ ಪದೆ ಅವಕಾಶಗಳನ್ನು ಪಡೆಯುತ್ತಿದ್ದರೂ ಉತ್ತಮ ಪ್ರದರ್ಶನ ನೀಡಲು ವಿಫಲರಾಗುತ್ತಿದ್ದಾರೆ. ಟೀಕಾಕಾರರ ಬಾಯಿಗೆ ಆಹಾರವಾಗುತ್ತಿದ್ದಾರೆ. ಉತ್ತಮ ಆಟ ಆಡುವ ಸಾಮರ್ಥ್ಯ ಇದ್ದರೂ ಕಳಪೆ ಆಟದ ಮೂಲಕ ತಂಡದಿಂದ ಹೊರಹಾಕಲ್ಪಡುತ್ತಿದ್ದಾರೆ. ಅಂತವರಲ್ಲಿ ಒಬ್ಬ ಕೆ. ಎಲ್. ರಾಹುಲ್.
ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯಬೇಕು ಎಂದು ಹಲವಾರು ವರ್ಷಗಳ ಕಾಲ ಕನಸು ಕಂಡು, ಶ್ರಮ ಪಟ್ಟವರು ಅನೇಕರು. ಇನ್ನೂ ಕೆಲವರು ಕೆಲವೇ ದಿನಗಳ ಕಾಲ ಶ್ರಮ ಪಟ್ಟು ತಂಡದಲ್ಲಿ ತಂಡಕ್ಕೆ ಆಯ್ಕೆಯಾಗುತ್ತಾರೆ. ಅವಕಾಶ ಸಿಕ್ಕ ತಕ್ಷಣ ಪ್ರಾರಂಭದಲ್ಲಿ ಮೂರ್ನಾಲ್ಕು ಪಂದ್ಯಗಳನ್ನು ಉತ್ತಮವಾಗಿ ಆಡುವ ಮೂಲಕ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲು ಮುಂದಾಗುತ್ತಾರೆ. ತದನಂತರದಲ್ಲಿ ಅವರುಗಳಿಗೆ ಅಭಿಮಾನಿ ಬಳಗವೂ ಹುಟ್ಟಿಕೊಳ್ಳುತ್ತದೆ. ಜಾಹಿರಾತುದಾರರು ಬೆನ್ನು ಬೀಳುತ್ತಾರೆ. ಆದರೆ ನಂತರದ ದಿನಗಳಲ್ಲಿ ಮಾತ್ರ ಅವರು ತಮ್ಮ ಜವಾಬ್ದಾರಿಯನ್ನೇ ಮರೆತರೋ ಎಂಬಂತಾಗುತ್ತಾರೆ.
ಅಗಾಧ ಪ್ರತಿಭೆಯನ್ನು ಹೊಂದಿದ ಅದೆಷ್ಟೋ ಆಟಗಾರರು ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಆದರೆ ಬೇಜವಾಬ್ದಾರಿಯುತ ಆಟದಿಂದಾಗಿ ಅಂತವರು ಸ್ಥಾನ ಕಳೆದುಕೊಂಡ ನಿದರ್ಶನಗಳು ಸಾಕಷ್ಟಿದೆ. ಪ್ರತಿಭೆಯಿದ್ದರೂ, ಕಳಪೆ ಆಟ ಪ್ರದರ್ಶಿಸಿ ತಂಡದಿಂದ ಹೊರ ನಡೆದ ನಿದರ್ಶನಗಳು ಸಾಕಷ್ಟಿದೆ. ಅಂತಹ ಸಾಲಿಗೆ ಹೊಸದಾಗಿ ಸೇರ್ಪಡೆಯಾಗುತ್ತಿರುವ ಆಟಗಾರ ಕನ್ನಡಿಗ ಕೆ. ಎಲ್. ರಾಹುಲ್.
ರಾಹುಲ್ ತಂಡಕ್ಕೆ ಸೇರಿದ ಮೊದಲ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್‌ಟ್‌‌ನಲ್ಲಿ ಆಕರ್ಷಕ ಶತಕ ಭಾರಿಸಿದಾಗ ಈತನ ಬಗ್ಗೆ ಹೊಗಳಿದವರು ಅನೇಕ ಜನ. ರಾಹುಲ್ ದ್ರಾವಿಡ್‌ರ ನಂತರ ಭಾರತ ತಂಡಕ್ಕೆ ಆಸ್ತಿಯಾಗಬಲ್ಲ ಆಟಗಾರ ಎಂದು ವಿಶ್ಲೇಷಿಸಿದವರೂ ಅನೇಕ ಜನ. ಅದಕ್ಕೆ ತಕ್ಕಂತೆ ಒಂದಷ್ಟು ಸರಣಿಗಳಲ್ಲಿ ಸತತ ಶತಕಗಳನ್ನು ಭಾರಿಸಿ ಭೇಷ್ ಎನ್ನಿಸಿಕೊಂಡ ಕೆ. ಎಲ್. ರಾಹುಲ್ ನಂತರದಲ್ಲಿ ಮಾತ್ರ ಕಳಪೆ ಆಟದಿಂದ ಕ್ರೀಡಾಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ತಂಡದಲ್ಲಿ ಸತತ ಅವಕಾಶ ಪಡೆದರೂ ಕೂಡ ಅದರ ಲಾಭ ಪಡೆಯಲು ರಾಹುಲ್ ವಿಫಲರಾಗುತ್ತಿದ್ದಾರೆ. ಎರಡಂಕಿ ಮೊತ್ತವನ್ನು ತಲುಪಲೂ ಕೂಡ ಒದ್ದಾಡುತ್ತಿದ್ದಾರೆ. ಸಾಲು ಸಾಲು ವೈಲ್ಯ ಇದೀಗ ರಾಹುಲ್ ಸ್ಥಾನಕ್ಕೆ ಕುತ್ತನ್ನು ತರುತ್ತಿದೆ. ತಾವೇ ಮಾಡಿಕೊಳ್ಳುತ್ತಿರುವ ಯಡವಟ್ಟುಗಳು ರಾಹುಲ್‌ರ ಕ್ರೀಡಾಬದುಕಿಗೆ ಕರಿನೆರಳಾಗಿ ಪರಿಣಮಿಸುತ್ತಿದೆ.
ಕೆ. ಎಲ್. ರಾಹುಲ್‌ರ ಕೆಲವು ಇನ್ನಿಂಗ್ಸ್ ಗಳನ್ನು 8 ಗಮನಿಸಿದರೆ ಅವರ ಬ್ಯಾಟಿನಿಂದ ಅರ್ಧಶತಕ ದಾಖಲಾಗಿ ಹಲವು ಕಾಲಗಳೇ ಆಗಿದೆ. 9, 2, 0, 2, 44, 14, 13, 17, 26, 16 ಇವು ರಾಹುಲ್‌ರ ಕಳೆದ 10 ಇನ್ನಿಂಗ್ಸ್ ಗಳ ಸ್ಕೋರ್. ಇದರಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರಿಸಿದ 44 ರನ್ ಗರಿಷ್ಠ ಸ್ಕೋರ್. ಈ ಎಲ್ಲ 10 ಇನ್ನಿಂಗ್ಸ್ ಗಳಿಂದ  ರಾಹುಲ್ ರನ್ ಗಳಿಕೆ 143.
ಇತ್ತೀಚಿನ ದಿನಗಳಲ್ಲಿ ಭಾರತದ ತಂಡದಲ್ಲಿ ಸ್ಥಾನ ಪಡೆಯಲು ತೀವ್ರ ಸ್ಪರ್ಧೆ ನಡೆಯುತ್ತಿದೆ. ಅದರಲ್ಲೂ ಆರಂಭಿಕ ಸ್ಥಾನಕ್ಕಂತೂ ಹೇರಳ ಸ್ಪರ್ಧೆ ನಡೆಯುತ್ತಿದೆ. ರಾಹುಲ್, ಮುರಳಿ ವಿಜಯ್, ಪೃಥ್ವಿ ಶಾ ಹಾಗೂ ಮಾಯಾಂಕ್ ಅಗರ್ವಾಲ್ ಆರಂಭಿಕ ಸ್ಥಾಾನಕ್ಕೆ ಪೈಪೋಟಿ ನಡೆಸುತ್ತಿದ್ದಾರೆ. ರಾಹುಲ್ ಹಾಗೂ ಮುರಳಿ ವಿಜಯ್ ವಿಲವಾಗುತ್ತಿರುವ ಸಂದರ್ಭದಲ್ಲಿ ಪೃಥ್ವಿ ಶಾ ಹಾಗೂ ಮಾಯಾಂಕ್ ಅಗರ್ವಾಲ್ ಉತ್ತಮ ಆಟದ ಮೂಲಕ ತಂಡದಲ್ಲಿ ಖಾಯಂ ಸ್ಥಾಾನ ಪಡೆದುಕೊಳ್ಳಲು ಮುಂದಾಗುತ್ತಿದ್ದಾರೆ. ಹೀಗೆಯೇ ಮುಂದುವರಿದಲ್ಲಿ ರಾಹುಲ್ ತಂಡದಿಂದ ಹೊರಬೀಳುವುದು ಖಚಿತ ಎಂಬಂತಾಗಿದೆ. ಮುಂದಿನ ದಿನಗಳಲ್ಲಿ ರಾಹುಲ್ ಎಚ್ಚೆತ್ತುಕೊಳ್ಳದಿದ್ದಲ್ಲಿ ಅವರ ಸ್ಥಾನ ಇನ್ನೊಬ್ಬರ ಪಾಲಿಗೆ ಮೀಸಲಾಗುವುದು ನಿಶ್ಚಿತ.

------------

ಮುಳುವಾಯಿತೆ ಪ್ರಸಿದ್ಧಿ
ಭಾರತ ಕ್ರಿಕೆಟ್ ತಂಡದ ಮೋಸ್ಟ್ ಪ್ಯಾಷನೇಬಲ್ ಪ್ಲೇಯರ್ ಎನ್ನುವ ಖ್ಯಾತಿ ರಾಹುಲ್ ಪಾಲಿಗಿದೆ. ವಿಶಿಷ್ಟ ಕೇಶ ವಿನ್ಯಾಸ, ಹೊಸ ಬಗೆಯ ಸ್ಟೈಲ್ ಮೂಲಕ ಎಲ್ಲರ ಮನಸ್ಸನ್ನು ಸೆಳೆದಾತ ರಾಹುಲ್. ಸಾಲು ಸಾಲು ಜಾಹೀರಾತುಗಳಲ್ಲಿಯೂ ಮಿಂಚುತ್ತಿರುವ ರಾಹುಲ್ ಪಾಲಿಗೆ ಪ್ರಸಿದ್ಧಿಯೇ ಮುಳುವಾಗುತ್ತಿದೆಯೇ ಎನ್ನುವ ಪ್ರಶ್ನೆ ಎಲ್ಲರ ಮನಸ್ಸಿನಲ್ಲಿ ಮೂಡಿದೆ. ಆಟದ ಕಡೆಗೆ ಗಮನ ಕೊಡುವುದಕ್ಕಿಿಂತ ಇತರ ಕಡೆಗೆ ಗಮನ ಕೊಡುವುದು ಜಾಸ್ತಿಯಾಗುತ್ತಿದೆಯೇ? ಟಿವಿ ಶೋಗಳು, ಜಾಹೀರಾತುಗಳು, ಪ್ಯಾಶನ್  ಜಗತ್ತು ರಾಹುಲ್ ಆಟವನ್ನು ಹಾಳು ಮಾಡುತ್ತಿವೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಇವನ್ನು ದೂರವಿಟ್ಟು ಸಂಪೂರ್ಣ ತನ್ನ ಬ್ಯಾಟಿಂಗ್ ಬಗ್ಗೆಯೇ ಆದ್ಯತೆ ನೀಡಿದಾಗ ಮಾತ್ರ ರಾಹುಲ್‌ರಿಂದ ಉತ್ತಮ ಆಟವನ್ನು ನಿರೀಕ್ಷೆ ಮಾಡಲು ಸಾಧ್ಯ.