Saturday, May 3, 2014

ಪುಣ್ಯಕೋಟಿಯ ಕಥೆ...

ಧರಣಿ ಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ನಾಟ ದೇಶದೊಳ್
ಇರುವ ಕಾಳಿಂಗನೆಂಬ ಗೊಲ್ಲನ
ಪರಿಯ ನಾನಿಂತು ಪೇಳ್ವೆನು
....ಎಂದು ಅಮ್ಮ ರಾಗವಾಗಿ ಹೇಳುತ್ತಿದ್ದರೆ ನಾವೆಲ್ಲ ತಂಡಾಗಿ ಕೇಳುತ್ತಿದ್ದೆವು.
              ಪುಣ್ಯಕೋಟಿ ಎಂಬ ಗೋವಿನ ಕಥೆಯನ್ನು ಅಮ್ಮ ಅದೆಷ್ಟು ಚನ್ನಾಗಿ ಹಾಡುತ್ತಾಳೆಂದರೆ ಕೇಳುಗರಾದ ನಾವು ಇಂಚಿಂಚೂ ಹಂದ್ಯಾಡುತ್ತಿರಲಿಲ್ಲ. ಮುಂದೇನಾಯ್ತು..? ಎನ್ನುವ ಕುತೂಹಲದೊಂದಿಗೆ ಕೇಳುತ್ತಿದ್ದೆವು. ಬಾಲ್ಯದಲ್ಲಿ ನಮ್ಮ ಪಾಲಿಗೆ ಪುಣ್ಯಕೋಟಿ ಗೋವಿನ ಕಥೆಯೇ ಸರ್ವಸ್ವ. `ಅಮ್ಮಾ ಕಥೆ ಹೇಳು..' ಎಂದು ಅಮ್ಮನನ್ನು ಗೋಗರೆದಾಗಲೆಲ್ಲ ಅಮ್ಮ ಹೇಳುತ್ತಿದ್ದುದು ಇದೇ ಕಥೆ.
               ಅಮ್ಮ ಬಾಲ್ಯದಲ್ಲಿ ನನಗೆ ಹಾಗೂ ನನ್ನ ವಾರಗೆಯ ಹುಡುಗರಿಗೆ ಪುಣ್ಯಕೋಟಿ ಕಥೆಯನ್ನು ಕೇಳುವಂತೆ ಮಾಡಿದವಳು. ನಾನಂತೂ ಆಕೆಯ ಬಾಯಿಂದ ಅದೆಷ್ಟು ಸಹಸ್ರ ಸಾರಿ ಪುಣ್ಯಕೋಟಿಯ ಕಥೆಯನ್ನು ಕೇಳಿದ್ದೇನೋ ಗೊತ್ತಿಲ್ಲ. ಮೊದಲ ಸಾರಿ ನಾನು ಪುಣ್ಯಕೋಟಿ ಕಥೆಯನ್ನು ಎಷ್ಟು ತನ್ಮಯನಾಗಿ ಕೇಳಿದ್ದೆನೋ ಈಗಲೂ ಅಷ್ಟೇ ತನ್ಮಯನಾಗಿ ಕೇಳುತ್ತೇನೆ. ಅದು ಅಮ್ಮ ಹೇಳುವ ರೀತಿಗಾ ಅಥವಾ ಪುಣ್ಯಕೋಟಿ ಕಥೆಯಲ್ಲಿರುವ ಶಕ್ತಿಯಾ ಗೊತ್ತಿಲ್ಲ. ಕೇಳುತ್ತ ಕೇಳುತ್ತ ಮನಸ್ಸು ಹಾಗೇ ಏನೋ ಒಂದು ರೀತಿಯಂತಾಗುತ್ತದೆ.
ಅದರಲ್ಲಿಯೂ ಪುಣ್ಯಕೋಟಿ ಮನೆಗೆ ವಾಪಾಸು ಬಂದು ತನ್ನ ಕರುವಿನ ಬಳಿ ತಾನು ಹುಲಿಯ ಬಾಯಿಗೆ ಹೋಗುತ್ತಿದ್ದೇನೆ ಎಂದು ಹೇಳಿದಾಗ ಕರು ಹೇಳುತ್ತದಲ್ಲ
`ಆರ ಬಳಿಯಲಿ ಮಲಗಲಮ್ಮ
ಆರ ಮೊಲೆಯನು ಕುಡಿಯಲಮ್ಮ
ಆರು ನನಗೆ ಹಿತವರು..
ಎನ್ನುವ ಸಾಲುಗಳು ಬಂದಾಗಲಂತೂ ಅರಿವಿಲ್ಲದಂತೆಯೇ ಕಣ್ಣಲ್ಲಿ ಹನಿಗೂಡುತ್ತದೆ. ಕಥೆ ಹೇಳುವ ಪ್ರಕ್ರಿಯೆಯೇ ಮರೆತು ಹೋಗುತ್ತಿರುವ ಇಂದಿನ ಜಮಾನಾದಲ್ಲಿ ಪುಣ್ಯಕೋಟಿ ಕತೆಯ ಬಗ್ಗೆ ಹೇಳಿದರೆ ಏನೂ ಅನ್ನಿಸುವುದಿಲ್ಲವೇನೋ. ಆದರೆ ಆ ಕಥೆಯನ್ನು ಯಾರೇ ಕೇಳಿದರೂ ಸಾಕು ಅವರ ಬದುಕು ಬಹಳಷ್ಟು ಬದಲಾವಣೆಯಾಗುವುದಂತೂ ಖಂಡಿತ.
                     ಬಹುಶಃ ಯಾರು ಬಾಲ್ಯದಲ್ಲಿ ಪುಣ್ಯಕೋಟಿಯ ಕಥೆಯನ್ನು ಕೇಳುತ್ತಾರೋ ಅವರು ತಮ್ಮ ಬದುಕಿನಲ್ಲಿ ಗೋಹತ್ಯೆಯಂತಹ ಕಾರ್ಯಕ್ಕೆ ಕೈಹಾಕಲಾರರು ಎನ್ನುವುದು ನನ್ನ ಭಾವನೆ. ಪುಣ್ಯಕೋಟಿ ಕಥೆ ಗೋವಿನ ಬಗೆಗೆ ನಮ್ಮಲ್ಲೊಂದು ಆರಾಧನಾ ಭಾವವನ್ನು ಹುಟ್ಟುಹಾಕುತ್ತದೆ. ಸತ್ಯ, ಪ್ರಾಮಾಣಿಕತೆಯಿಂದ `ಅರ್ಬುಧ' ಎಂಬ ವ್ಯಾಘ್ರನ ಮನಸ್ಸನ್ನೇ ಪರಿವರ್ತಿಸುವ ಪುಣ್ಯಕೋಟಿ ನಮ್ಮ ಮನಸ್ಸುಗಳನ್ನೂ ಅರಿವಿಲ್ಲದಂತೆಯೇ ಬದಲಿಸಿಬಿಡುತ್ತದೆ. ಕಥೆಯಲ್ಲಿ ಹುಲಿ ಹೇಗೆ ತನ್ನಪ್ರಾಣವನ್ನು ತಾನು ಬಲಿಗೊಡುತ್ತದೆಯೋ ಹಾಗೆಯೇ ನಮ್ಮೊಳಗಿನ ಕ್ರೂರತನಕ್ಕೆ ಕಥೆಯ ಕೇಳುವಿಕೆಯಿಂದಲೇ ಬಲಿ ಬಿದ್ದುಬಿಡುತ್ತದೆ.
                   ಪುಣ್ಯಕೋಟಿಯ ಕಥೆಯ ಕುರಿತು ಇನ್ನೊಂದು ಪ್ರಮುಖ ಅಂಶವನ್ನು ಹೇಳಲೇಬೇಕು.  ಈ ಕಥೆಯನ್ನು ಕೇಳಿದ ನಂತರ ನಮ್ಮ ಮನಸ್ಸಿನಲ್ಲಿ ಪುಣ್ಯಕೋಟಿಯದ್ದೊಂದು ಚಿತ್ರಣ ಮನಸ್ಸಿನಲ್ಲಿ ಮೂಡುತ್ತದೆ. ಪುಣ್ಯಕೋಟಿ ಎಂಬ ದನ ಸಾಮಾನ್ಯ ದನದಂತಲ್ಲ. ಇದು ಬೇರೆಯ ರೀತಿಯದ್ದು ಎನ್ನುವ ಭಾವನೆ ಮೂಡುತ್ತದೆ. ನಮ್ಮೆದುರು ಕಾಣುವ ಸೀದಾ ಸಾದಾ ದನವಲ್ಲ ಬದಲಿಗೆ ದನದ ಬಣ್ಣ ವಿಶೇಷವಾದುದು, ಅದರ ನಿಲುವು ಉತ್ಕೃಷ್ಟವಾದುದು ಎಂಬ ಭಾವನೆ ಮೂಡುತ್ತದೆ. ಪುಣ್ಯಕೋಟಿಯೆಂದರೆ ಬಿಳಿ ಬಣ್ಣದ ದನ, ಮೈಮೇಲೆ ಕಪ್ಪು ಬಣ್ಣದ ಚಿಟ್ಟುಗಳು ಇದ್ದೇ ಇರುತ್ತವೆ ಎನ್ನುವ ಕಲ್ಪನೆ ಮೂಡಿ ಗೋವಿನ ಬಗ್ಗೆ ಮತ್ತಷ್ಟು ಗೌರವವೂ ಮೂಡುತ್ತದೆ.
                   ನಮ್ಮ ಜಾನಪದರ ಕಲ್ಪನೆಗಳೇ ವಿಶಿಷ್ಟವಾದುದು. ಪ್ರಾಣಿಗಳು, ಪಕ್ಷಿಗಳು, ಕಲ್ಲು, ಮರಗಳು, ಹಕ್ಕಿಗಳು ಹೀಗೆ ಕಣ್ಣಿಗೆ ಕಂಡದ್ದರ ಮೇಲೆಲ್ಲ ಹಾಡನ್ನು ಹಾಡಿ ಆ ಹಾಡನ್ನು ತಲೆತಲಾಂತರಕ್ಕೆ ಪ್ರಸಾರ ಮಾಡುವಂತೆ ಮಾಡಿದ್ದಾರೆ. ಲಾವಣಿಯ ರೂಪದಲ್ಲೋ, ಜಾನಪದ ಗೀತೆಯ ರೀತಿಯಲ್ಲೋ ಮುಂದಿನ ತಲೆಮಾರಿನವರೂ ಕೇಳುವಂತೆ ಮಾಡಿದ್ದಾರೆ. ಜಾನಪದ ಹಾಡಿನ ಮೂಲಕವೇ ಒಳ್ಳೆಯ ಗುಣಗಳು, ಜ್ಞಾನ, ಮಾನವೀಯತೆ ಮುಂತಾದ ಗುಣಗಳು ತಲೆಮಾರಿಗೆ ಹರಿದುಬರುವಂತೆ ಮಾಡಿದ್ದಾರೆ. ಈ ಮೂಲಕ ಗ್ರೇಟ್ ಎನ್ನಿಸಿಕೊಳ್ಳುತ್ತಾರೆ.
                 ಮಕ್ಕಳು ಕಥೆಯನ್ನು ಕೇಳಬೇಕು ಎಂದು ಹಿರಿಯರೊಬ್ಬರು ಹೇಳುತ್ತಿದ್ದರು. ಮಕ್ಕಳು ಕಥೆಯನ್ನು ಕೇಳುವುದರಿಂದ ಅನೇಕ ಉಪಯೋಗಗಳಿವೆ. ಮೊದಲನೆಯದಾಗಿ ಮಗು ಕಥೆ ಕೇಳುವುದರಿಂದ ಅದರ ಕೀಟಲೆಗೆ ಕಡಿವಾಣ ಹಾಕಬಹುದು, ಉತ್ತಮ ಕೇಳುವ ಮುಂದೆ ಉತ್ತಮ ಹೇಳುಗನಾಗುತ್ತಾನೆ, ಆತನ ಅರಿವಿನ ಶಕ್ತಿ ಹೆಚ್ಚಾಗುತ್ತದೆ ಎನ್ನುವ ಮಾತಿದೆ. ಯಾರು ಚಿಕ್ಕಂದಿನಲ್ಲಿ ಕಥೆ ಕೇಳಿರುತ್ತಾನೋ ಆತ ಮುಂದೆ ಉತ್ತಮ ಹೇಳುಗನಾಗಿ ಬದಲಾಗುತ್ತಾನೆ. ಅಜ್ಜಿಯೋ, ಅಮ್ಮನೋ.. ಹಿರಿಯರು ಹೇಳುವ ಕಥೆಯನ್ನು ತನ್ಮಯತೆಯಿಂದ ಕೇಳಿದರೆ ಏಕಾಗ್ರತೆ ಬೆಳೆಯಬಲ್ಲದು. ಸಮಾಜದ ಕಡೆಗಿನ ಭಾವನೆಗಳು ಬದಲಾಗಬಲ್ಲದು.
                ಖಾಸಗಿಯೆನ್ನಿಸಬಹುದು. ಹೇಳಲೇಬೇಕೆನ್ನಿಸುವಂತದ್ದು.. ಆದರೆ ಇತ್ತೀಚೆಗೆ ನಡೆದಿದ್ದು.. ನನ್ನ ತಂಗಿಯ ಮಗ ಶ್ರೀವತ್ಸ ಸಂಜೆ ಮಲಗುವ ಸಂದರ್ಭದಲ್ಲಿ ಕಥೆ ಹೇಳು ಎಂದು ಪೀಡಿಸುತ್ತಾನೆ. ಕಥೆ ಕೇಳುತ್ತ ಮಲಗುವುದನ್ನು ರೂಢಿಸಿದವಳು ನನ್ನ ತಂಗಿ. ಆರಂಭದಲ್ಲಿ ಕಾಕಣ್ಣ-ಗುಬ್ಬಣ್ಣನ ಕಥೆಯನ್ನು ಕೇಳುತ್ತ, ತಾನೂ ಆ ಕಥೆಯನ್ನು ಹೇಳುತ್ತ ಮಲಗಿದವನು ನಂತರದ ದಿನಗಳಲ್ಲಿ ಬೇರೆಯ ಕಥೆಯನ್ನು ಹೇಳುವಂತೆ ಪೀಡಿಸಿದ. ಅಮ್ಮ ಆತನಿಗೆ `ಪುಣ್ಯಕೋಟಿ'ಯ ಕಥೆ ಹೇಳಿದಳು.
                 ಧರಣಿಮಂಡಲ ಮಧ್ಯದೊಳಗೆ ಎನ್ನುವ ಸಾಲನ್ನು ರಾಗವಾಗಿ ಹಾಡುತ್ತ, ಅದರ ಅರ್ಥವನ್ನು ಹೇಳುತ್ತ ಶ್ರೀವತ್ಸನಿಗೆ ಕಥೆ ಕೇಳಿಸಿದಳು. ಕೇಳಿದ.. ಕೇಳಿ.. ಕೇಳುತ್ತ ಕೇಳುತ್ತ ನಿದ್ದೆ ಮಾಡಿದ. ಮರುದಿನದಿಂದ ಶ್ರೀವತ್ಸನ ನಡವಳಿಕೆಯಲ್ಲಿ ಅದೇನೋ ಬದಲಾವಣೆ ಕಂಡಿತು. ಮರುದಿನ ಮತ್ತೆ ಪುಣ್ಯಕೋಟಿಯ ಕಥೆ ಹೇಳು ಅಂದ. ಅಮ್ಮ ಹೇಳಿದಳು. ಕೇಳುತ್ತ ನಿದ್ದೆಹೋದ. ನಂತರ ತಾನೂ ಆ ಕಥೆಯ ಸಾಲನ್ನು ಹೇಳಲು ಕಲಿತ. ಕೊಟ್ಟಿಗೆಯಲ್ಲಿ ದನಗಳು ಕಂಡರೆ ಅದಕ್ಕೆ ಬಾಳೆಕುಂಡಿಗೆಯ ಹಾಳೆಯನ್ನು ಹಾಕುವುದು, ಹುಲ್ಲನ್ನು ನೀಡುವುದು, ಪುಟ್ಟ ಆಕಳುಕರು ಕಂಡರೆ ಮುದ್ದಿಸುವುದನ್ನು ಮಾಡಲು ಆರಂಭಿಸಿದ. (ನಾನು ಹಲವು ಬಾರಿ ಆತನ ಈ ಕ್ರಿಯೆಗಳನ್ನು ವಿಸ್ಮಯದಿಂದ ನೋಡಿದ್ದೇನೆ).  ಪಕ್ಕದ ಮನೆಯಲ್ಲಿ ಮೂರು ದನಗಳಿವೆ. ಅವುಗಳಲ್ಲಿ ಎರಡು ಕಪ್ಪು ಬಣ್ಣದ್ದಾದರೆ ಇನ್ನೊಂದು ಬಿಳಿ ಬಣ್ಣದ ದನ. ಆ ಬಿಳಿ ಬಣ್ಣದ ದನವನ್ನು ಆತ ಪುಣ್ಯಕೋಟಿ ಎಂದು ಕರೆದ. ಕಪ್ಪು ದನಗಳಲ್ಲಿ ಒಂದು ದನ ದೈತ್ಯದೇಹಿಯಾಗಿತ್ತು. ಯಾರು ತಿಳಿಸಿದ್ದರೋ ಏನೋ `ಗಾಮಿ'(ಗಮಯ, ಕಾಡೆಮ್ಮೆ) ಎಂದು ಕರೆದ. ಅಷ್ಟೇ ಏಕೆ ಯಾರಾದರೂ ಆತನನ್ನು ಗದರಿಸಿದರೆ, ಆತನ ವಾರಗೆಯ ಹುಡುಗರು ರಗಳೆ ಮಾಡಿದಾಗಲೆಲ್ಲ `ನಿನ್ನನ್ನು ಹುಲಿ ಕಚ್ಚಿಕೊಂಡು ಹೋಗುತ್ತದೆ ತಡೆ..' ಎಂದೂ ಹೇಳಲು ಆರಂಭಿಸಿದ.
                    ಖಂಡಿತ ನಾನು ಹೊಗಳಿಕೊಳ್ಳಬೇಕು ಅಥವಾ ಇನ್ನೇನಕ್ಕೋ ಈ ವಿಷಯವನ್ನು ಹೇಳುತ್ತಿಲ್ಲ. ಒಂದು ಕಥೆ ಮಗುವಿನ ಮೇಲೆ ಯಾವ ರೀತಿ ಪರಿಣಾಮ ಬೀರಬಲ್ಲದು ಎನ್ನುವುದನ್ನು ತಿಳಿಸಲು ಹೇಳಿದ್ದಷ್ಟೇ. ಶ್ರೀವತ್ಸ ಈಗ ಪುಣ್ಯಕೋಟಿಯ ಕತೆಯನ್ನು ಸಂಪೂರ್ಣ ಹೇಳು ಕಲಿತಿದ್ದಾನೆ. ಅಷ್ಟೇ ಅಲ್ಲ ಬೇಸರವಾದಾಗ ಅಥವಾ ಆತನನ್ನು ಮಾತನಾಡಿಸಲಿಲ್ಲ ಎಂದಾದರೆ ಸಾಕು `ಯಾರ ಬಳಿ ನಾನು ಮಲಗಲಿ..? ಯಾರ ಹತ್ತಿರ ಮಾತಾಡಲಿ..? ನನ್ನನ್ನು ಯಾರೂ ಕೇಳ್ತಾ ಇಲ್ಲ...' ಎಂದೂ ಹೇಳಲು ಆರಂಭಿಸಿದ್ದಾನೆ.
**
           ಮಕ್ಕಳಿಗೆ ಕಥೆ ಹೇಳಿ. ಮಕ್ಕಳು ಕಥೆ ಕೇಳಲಿ. ಪ್ರಾಣಿಗಳು, ಪಕ್ಷಿಗಳು, ಮರಗಳು ಮಾತನಾಡುವುದನ್ನು ಬೆರಗಿನಿಂದ ಕೇಳಲಿ. ಪುಣ್ಯಕೋಟಿಯಂತಹ ಸತ್ಯ ನಿಷ್ಟೆಯ ಗೋವುಗಳು ಆದರ್ಶವಾಗಲಿ. ತನ್ಮೂಲಕ ಮಕ್ಕಳ ಮನಸ್ಸು ಸತ್ಯ, ನಿಷ್ಟೆ ಪ್ರಾಮಾಣಿಕತೆಯ ಕಡೆಗೆ ತಿರುಗಲಿ.. ಮಕ್ಕಳ ಮನಸ್ಸು ಅರಳಲು ಕಥೆ ಪೂರಕ. ಅಜ್ಜಿಯ ಬಳಿ ಮಕ್ಕಳನ್ನು ಬಿಡಿ. ಕಥೆ ಹೇಳಲು ಹೇಳಿ.. ಮಕ್ಕಳು ಬದಲಾಗುವುದನ್ನು ನೋಡಿ. ತನ್ಮೂಲಕ ಮಕ್ಕಳ ನಡತೆ ತನ್ನಿಂದ ತಾನೇ ಬದಲಾಗುವುದನ್ನು ಗಮನಿಸಿ. ನಿಮಗೆ ಖುಷಿಯಾಗಬಹುದು.

No comments:

Post a Comment