Sunday, May 23, 2010

ಚಿತ್ರವಿಮರ್ಷೆ : ಶಂಕರ್ ಐಪಿಎಸ್

ವಿಜಯ್ ತಾಕತ್ತಿನ ಪ್ರದರ್ಶನ

ಶಂಕರ್ ಐಪಿಎಸ್ ಇದು ವಿಜಯನ  ದಾಢಸಿತನ ಅನಾವರಣ ಮಾಡುವ ಚಿತ್ರ. ಒಳ್ಳೆಯವರಿಗೆ ಒಳ್ಳೆಯವನಾಗಿ ಕೆಟ್ಟವರಿಗೆ ಕೆಟ್ಟವನಾಗಿ ಕಾಣಿಸಿಕೊಳ್ಳುವ ಶಂಕರ್ (ವಿಜಯ್)ಗೆ ಅಪರಾಧಿಗಳನ್ನು ಮಟ್ಟಹಾಕುವುದೇ ಕೆಲಸ. ಕಂಡಕಂಡಲ್ಲಿ ಅಪರಾಧಿಗಳನ್ನು, ರೌಡಿಗಳನ್ನು, ಅತ್ಯಾಚಾರಿಗಳನ್ನು ಹಿಗ್ಗಾ ಮುಗ್ಗಾ ಜಾಡಿಸಿ ಎನ್ಕೌಂಟರ್ ಹೆಸರಿನಲ್ಲಿ ಹತ್ಯೆ ಮಾಡುವ ಶಂಕರ್, ಮಿಸ್ ಇಂಡಿಯಾ ಆಗಬೇಕೆಂಬ ಕನಸನ್ನು ಹೊಂದಿರುವ ಹುಡುಗಿ(ಕ್ಯಾಥರೀನ್ ಥೆರೇಸಾ) ಗೆ ಸಹಾಯ ಮಾಡುತ್ತಾನೆ. ಆಕೆಗೆ ಮಿಸ್ ಇಂಡಿಯಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರ ಬಗ್ಗೆ ತರಬೇತಿ ಕೊಡಿಸುತ್ತಾನೆ. ಆದರೆ ಆಕೆಯ ಮೇಲೆ ಆಸಿಡ್ ದಾಳಿಯಾಗುತ್ತಾದೆ. ಹೆಸರಾಂತ ಉದ್ಯಮಿಯೊಬ್ಬನ ಮಗ ಆಕೆಯ ಮೇಲೆ ಆಸಿಡ್ ದಾಳಿ ಮಾಡುತ್ತಾನೆ. ಆಸಿಡ್ ದಾಳಿಗೆ ಒಳಗಾದ ಆಕೆಗೆ ನ್ಯಾಯವನ್ನು ಕೊಡಿಸಿ, ಸಮಾಜಕ್ಕೆ ಬುದ್ಧಿಹೇಳುವ ದಕ್ಷ ಅಧಿಕಾರಿಯಾಗಿ ವಿಜಯ್ ಚಿತ್ರದುದ್ದಕ್ಕೂ ಮಿಂಚಿದ್ದಾರೆ. ಮಾಡೆಲ್ ಟ್ರೈನಿಯಾಗಿ ಕೆಲಸ ಮಾಡುವ ನಾಯಕಿ (ರಾಗಿಣಿ) ವಿಜಯ್ಗೆ ಬೆಂಗಾವಲಾಗಿ ನಿಂತು ಅಪರಾಧಿಗಳ ಮಟ್ಟಹಾಕುವ ನಾಯಕನ ಕಾರ್ಯದಲ್ಲಿ ಸಹಾಯ ಮಾಡುತ್ತಾಳೆ.
ಹೆಸರಿಗೆ ತಕ್ಕಂತೆ ಇದು ಖಾಕಿ ಚಿತ್ರ. ಹಾಗಾಗಿ ಚಿತ್ರದುದ್ದಕ್ಕೂ ಚಾಲೆಂಜುಗಳು, ಧಮಕಿಗಳು, ಫೈಟ್ಗಳು ಇದ್ದೇ ಇವೆ. ಚಿತ್ರದಲ್ಲಿ ಖಾಕಿ ಹಾಗೂ ಕಪ್ಪುಕೋಟುಗಳು ಪರಸ್ಪದ ಎದುರಾಳಿಗಳಾಗುತ್ತವೆ. ಇವೆರಡೂ ಪರಸ್ಪರ ಮೇಲಾಟದಲ್ಲಿ ತೊಡಗುತ್ತವೆ. ಪೊಲೀಸ್ ಅಧಿಕಾರಿ ಶಂಕರ್ಗೆ ಎದುರಾಗಿ ನಿಂತು ಸವಾಲು ಹಾಕುವ ಪಾತ್ರದಲ್ಲಿ ರಂಗಾಯಣ ರಘು ಬೊಂಬಾಟಾಗಿ ನಟಿಸಿದ್ದಾರೆ.
ಚಿತ್ರದಲ್ಲಿ ಅವಿನಾಶ್ ಹಾಗೂ ಶೋಭರಾಜ್ ಅವರುಗಳಿಗೆ ಅಪರೂಪಕ್ಕೆ ಒಳ್ಳೆಯ ಪಾತ್ರಗಳು ದೊರಕಿವೆ. ಚಿತ್ರಗಳಲ್ಲಿ ಯಾವಾಗಲೂ ವಿಲನ್ ಪಾತ್ರಗಳನ್ನು ಮಾಡುತ್ತಿದ್ದ ಶೋಭರಾಜ್ ಹಾಗೂ ಅವಿನಾಶ್ ಈ ಚಿತ್ರದಲ್ಲಿ ಬೇರೆಯ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದುದ್ದಕ್ಕೂ ಕಾಣಿಸಿಕೊಂಡಿರುವ ವಿಜಯ್ ಎಲ್ಲ ರೀತಿಯ ಅಭಿನಯಗಳನ್ನೂ ಮಾಡಿದ್ದಾರೆ. ಈ ಚಿತ್ರದಲ್ಲಿ ಅವರೆ ಕಾಮಿಡಿಯನ್, ಅವರೇ ಆಕ್ಷನ್ ಕಿಂಗ್, ಅವರೇ ಚಾಲೇಂಜರ್ ಕೊನೆಗೆ ಅವರೇ ಐಟಂ ಸಾಂಗಿಗೂ ಹೆಜ್ಜೆ ಹಾಕುತ್ತಾರೆ. ಎಲ್ಲಾ ಸಂಭಾಷಣೆಯನ್ನು ನಿಧಾನವಾಗಿ ಸ್ಪಷ್ಟವಾಗಿ ಉಚ್ಛರಿಸಿ ಎಲ್ಲರ ಸಿಳ್ಳೆ ಗಿಟ್ಟಿಸಿಕೊಳ್ಳುತ್ತಾರೆ. ಸಂಭಾಷಣೆಗಳನ್ನು ವೇಗವಾಗಿ ಹೇಳಿದ್ದರೆ ವಿಜಯ್ನ್ನು ಮತ್ತೊಬ್ಬ `ಸಾಯಿಕುಮಾರ್' ಅನ್ನಬಹುದು. ಆದರೂ ಕೆಲವೊಮ್ಮೆ ಸಡನ್ನಾಗಿ ಸಿಟ್ಟಿಗೇಳುವುದು ನೋಡುಗರಿಗೆ ಕಿರಿಕಿರಿ ಉಂಟುಮಾಡುತ್ತದೆ. ಫೈಟುಗಳನ್ನು ಚೆನ್ನಾಗಿಯೇ ಮಾಡಿ ಪ್ರೇಕ್ಷಕರನ್ನು ಸೆಳೆಯುವ ವಿಜಯ್ ಚಿತ್ರದಲ್ಲಿ ಬೇಜಾನಾಗಿ ಬಟ್ಟೆ ಬಿಚ್ಚಿ ತಮ್ಮ ಸಿಕ್ಸ್ ಪ್ಯಾಕ್ ಶರೀರ ಪ್ರದಶರ್ಿಸುವ ಮೂಲಕ ತಾಕತ್ತು ತೋರಿಸಿದ್ದಾರೆ.
ಈ ಚಿತ್ರದಲ್ಲಿ ನಾಯಕಿಯರಿಗೆ ಕೊಂಚ ಸ್ಕೋಪ್ ಕಡಿಮೆ. ಮಾಡೆಲ್ ಆಗಿದ್ದ ಕ್ಯಾಥರೀನ್ಗೆ ಇದು ಕನ್ನಡದ ಮೊದಲ ಚಿತ್ರ. ಚಿತ್ರದಲ್ಲಿ ಅವರದ್ದು ಮಿಸ್ ಇಂಡಿಯಾ ಸ್ಪಧರ್ಿಯ ಪಾತ್ರ. ಆದರೂ ಅವರು ತಮಗೆ ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ರಂಗಾಯಣ ರಘು ಚಿತ್ರದ ಪ್ಲಸ್ ಪಾಯಿಂಟ್ಗಳಲ್ಲಿ ಒಂದು. ಚಿತ್ರದಲ್ಲಿ 5 ಹಾಡುಗಳಿವೆ. ಆದರೆ ಈ ಹಾಡುಗಳು ಮಾತ್ರ ಏನು ಮಾಡಿದರೂ ನೆನಪಲ್ಲಿ ಉಳಿಯಲಾರವು. ಇದಕ್ಕೆ ಸಂಗೀತ ನಿದರ್ೆಶಕರು ಕಾರಣವೋ ಗೀತೆಗಳನ್ನು ಬರೆದವರು ಕಾರಣವೋ ತಿಳಿಯುವುದಿಲ್ಲ. ವಿಜಯ್ ತೆರೆಯ ಮೇಲೆ ಇದ್ದಷ್ಟೂ ಹೊತ್ತು ಇತರ ಪಾತ್ರಗಳು ಮಾತೇ ಆಡದಿರುವುದು ಚಿತ್ರದ ಮೈನಸ್ ಪಾಯಿಂಟ್ಗಳಲ್ಲಿ ಒಂದು.
ಇನ್ನುಳಿದಂತೆ ದಾಸರಿ ಸೀನು ಅವರು ಕ್ಯಾಮರಾ ಮೂಲಕ ಉತ್ತಮ ದೃಷ್ಯಗಳನ್ನು ಸೆರೆಹಿಡಿಯಲು ಪ್ರಯತ್ನಿಸಿದ್ದಾರೆ. ಸಂಭಾಷಣೆಯಲ್ಲಿರುವ ಗಟ್ಟಿತನ ಸೆಳೆಯುತ್ತದೆ. ವಿಜಯ್ ವಿಜ್ರಂಭಣೆಗೆ ಬೇಕಾದ ಸಂಭಾಷಣೆಗಳನ್ನು ನಿದರ್ೇಶಕ ರಮೇಶ್ ಬಾಬೂ ಕೆತ್ತಿದ್ದಾರೆ. ಉತ್ತಮ ಸಂದೇಶವನ್ನು ಹೇಳಲು ಹೊರಟ ರಮೇಶ್ ಬಾಬೂ ಅದನ್ನು ಮಾಸ್ ಜನರ ಮನಸ್ಸಿಗೆ ಮುಟ್ಟಿಸುವಲ್ಲಿ ಕೆಲವೊಮ್ಮೆ ವಿಫಲರಾಗಿದ್ದಾರೆ. ಚಿತ್ರವನ್ನೂ ಇನ್ನೂ ಉತ್ತಮವಾಗಿ ಮಾಡಲು ರಮೇಶ್ ಬಾಬೂ ಪ್ರಯತ್ನಿಸಿದ್ದರೆ ಮಾಸ್ ಜೊತೆಗೆ ಕ್ಲಾಸ್ ಜನರನ್ನು ಸೆಳೆಯಬಹುದಿತ್ತು.
ಮಾಸ್ಗೆ ಬೇಕಾಗಿರುವ ಎಲ್ಲ ಮಸಾಲೆ ಅಂಶಗಳನ್ನೂ ಒಳಗಿರಿಸಿಕೊಂಡು, ಸಂಪೂರ್ಣ ವಿಜಯ್ ತಾಕತ್ ಹಾಗೂ ದಾಢಸಿತನದ ಮೇಲೆ ಹೊರಬಂದಿರುವ ಶಂಕರ್ ಐಪಿಎಸ್ ವಿಜಿ ಅಭಿಮಾನಿಗಳಿಗೆ ಹಬ್ಬದೂಟ ನೀಡುತ್ತದೆ.

ವಿನಯ್ ದಂಟಕಲ್

Saturday, May 22, 2010

ಕ್ಲಾಸಿಕ್ ಸಿನೆಮಾ

ನಗಿಸುತ್ತಲೇ ಅಳಿಸುವ
ಮೇರಾ ನಾಮ್ ಜೋಕರ್

ನಿರದೆಶಕ : ರಾಜ್ ಕಪೂರ್
ನಿರಮಾಪಕ : ರಾಜ್ ಕಪೂರ್
ಕಥೆ : ಕೆ. ಏ. ಅಬ್ಬಾಸ್
ಸಂಗೀತ : ಶಂಕರ್ ಜೈಕಿಷನ್
ಸಂಕಲನ : ರಾಜ್ ಕಪೂರ್
ಚಿತ್ರ ಬಿಡುಗಡೆ : 18 ಡಿಸೆಂಬರ್ 1970

ಮೇರಾ ನಾಮ್ ಜೋಕರ್ ಹಿಂದಿ ಚಿತ್ರರಂಗದ ಪ್ರಸಿದ್ದ ಚಲನಚಿತ್ರಗಳಲ್ಲೊಂದು. ರಾಜ್ ಕಪೂರ್ ಎಂಬ ವಿಶಿಷ್ಟ, ವಿಚಿತ್ರ ಹಾಗೂ ವಿಲಕ್ಷಣ ಪ್ರತಿಭೆಯನ್ನು ಜಗತ್ತಿಗೆ ಪರಿಚಯಿಸಿದ ಚಿತ್ರ ಮೇರಾ ನಾಮ್ ಜೋಕರ್. 
ಮೂರು ಭಾಗಗಳಲ್ಲಿರುವ ಈ ಚಿತ್ರ ರಾಜು ಎಂಬ ಜೋಕರ್ ಬದುಕಿನ ಮೂರು ಕಾಲಘಟ್ಟಗಳನ್ನು ವಿವರಿಸುತ್ತದೆ. ಮೊದಲ ಭಾಗದಲ್ಲಿ ಯುವ ರಾಜೂ (ರಿಷಿ ಕಪೂರ್) ತನ್ನ ಶಿಕ್ಷಕಿ ಮೇರಿ (ಸಿಮಿ ಅಗರವಾಲ್)ಯ ಆಕರ್ಷಣೆಗೆ ಒಳಗಾದರೆ ಎರಡನೇ ಭಾಗದಲ್ಲಿ ರಾಜೂ (ರಾಜ್ ಕಪೂರ್) ಜೆಮಿನಿ ಸರ್ಕಸ್ನ ಪಾತ್ರಧಾರಿ ರಷ್ಯಾದ ಮರೀನಾ (ಕ್ಷೇನಿಯಾ ರ್ಯಾರಬೆಂಕಿನಾ)ಳನ್ನು ಪ್ರೀತಿಸುತ್ತಾನೆ. ಈ ಭಾಗ ಹೆಚ್ಚು ತಮಾಷೆಯಿಂದ ಕೂಡಿದ್ದು ನೋಡುಗರ ಹೊಟ್ಟೆ ಹುಣ್ಣಾಗಿಸುತ್ತದೆ. ಮೂರನೇ ಭಾಗದಲ್ಲಿ ರಾಜೂ, ಮೀನಾ(ಪದ್ಮಿನಿ)ಳ ಪ್ರೇಮಪಾಶದಲ್ಲಿ ಬೀಳುತ್ತಾನೆ. ಆದರೆ ಚಿತ್ರನಟಿಯಾಗುವ ಕನಸನ್ನು ಹೊಂದಿದ ಆಕೆ ತನ್ನ ಆಸೆ ಈಡೇರಿಸಿಕೊಳ್ಳಲು ರಾಜುವನ್ನು ಬಳಸಿಕೊಂಡು ನಂತರ ಆತನನ್ನು ಮರೆತು ಬಿಡುತ್ತಾಳೆ. ಕೊನೆಯಲ್ಲಿ ರಾಜು ಏನಾಗುತ್ತಾನೆ ಎಂಬುದು ಚಿತ್ರದ ಕಥೆ. ರಿಷಿ ಕಪೂರ್ಗೆ ಇದು ಪಾದಾರ್ಪಣೆಯ ಚಿತ್ರ. ಚಿತ್ರದಲ್ಲಿ ಹಲವು ಅಂಶಗಳು ನೋಡುಗರನ್ನು ಸೆಳೆಯುತ್ತವೆ.
ಜೊಕರ್ ರೀತಿಯ ಗೊಂಬೆ, ಅದರ ಜೊತೆ ರಾಜೂ ಮಾತನಾಡುವುದು, ಸರ್ಕಸ್ ನೋಡುತ್ತಿದ್ದಾಗಲೇ ರಾಜೂನ ತಾಯಿ ಸಾಯುವುದು, ಆಕೆ ಸತ್ತಾಗ ರಾಜೂ ಕಪ್ಪು ಕನ್ನಡಕ ಧರಿಸಿ ಅಳುವುದು, ನಂತರ ದುಃಖದ ನಡುವೆಯೂ ಎಲ್ಲರನ್ನೂ ನಗಿಸುವುದು, ಹಿಂದಿ ಭಾಷೆ ಬರದ ಮರೀನಾಗೆ ತನ್ನ ಪ್ರೇಮ ನಿವೇದನೆ ಮಾಡುವುದು, ಆಕೆ ಹರುಕು ಮುರುಕು ಹಿಂದಿಯಲ್ಲಿ ರಾಜೂನ ತಾಯಿಯ ಜೊತೆ ಮಾತನಾಡುವುದು ಈ ಮುಂತಾದ ದೃಷ್ಯಗಳು ಅತ್ಯಂತ ಸುಂದರವಾಗಿ ಮೂಡಿಬಂದಿದೆ.
ಹಾಡುಗಳು ಈ ಚಿತ್ರದ ಪ್ಲಸ್ ಪಾಯಿಂಟ್. ಚಿತ್ರದಲ್ಲಿನ ಎಲ್ಲಾ ಹಾಡುಗಳೂ ಒಂದಕ್ಕಿಂತ ಇನ್ನೊಂದು ಉತ್ತಮವಾಗಿ ಮೂಡಿ ಬಂದಿವೆ. ಮುಖೇಶ್ ಸಿರಿಕಂಠದಲ್ಲಿ ಒಡಮೂಡಿದ `ಜಾನೇ ಕಹಾಂ ಗಯೇ ವೋ ದಿನ್', `ಜೀನಾ ಯಹಾಂ ಮರ್ನಾ ಯಹಾಂ', `ಕಾಟೇ ನಾ ಕಾಟೆ ರೈನಾ', `ಕೆಹ್ತಾ ಹೈ ಜೋಕರ್', ಲತಾ ಮಂಗೇಶ್ಕರ್ ಹಾಡಿದ `ಅಂಗ್ ಲಗ್ ಜಾ ಬಲ್ಮಾ', ಮನ್ನಾ ಡೇ ಹಾಡಿದ ಕಾಮಿಡಿ ಗೀತೆ `ಏ ಭಾಯ್ ಜರಾ ದೇಖೆ ಚಲೋ' ಈ ಮುಂತಾದ ಹಾಡುಗಳು ಜನಮಾನಸದಲ್ಲಿ ಅಚ್ಚಳಿಯದೇ ಉಳಿದುಬಿಟ್ಟಿವೆ.
ಚಿತ್ರದಲ್ಲಿ ಧರಮೇಂದ್ರ, ಮನೋಜ್ ಕುಮಾರ್, ಧಾರಾ ಸಿಂಗ್, ಅಚಲಾ ಸಚ್ದೇವ್ ಮುಂತಾದವರೂ ನಟಿಸಿದ್ದಾರೆ. 255 ನಿಮಿಷದ ಜಿತ್ರ ನೀಡುಗರಿಗೆ ಬಹಳ ಖುಷಿ ಕೊಡುವ ಚಿತ್ರ. ಸುಮಾರು ನಾಲ್ಕು ತಾಸು ಅರಾಮವಾಗಿ ನೋಡಬಹುದಾದ ಚಿತ್ರ. ಹಿಂದಿ ಚಿತ್ರರಂಗದ ಕ್ಲಾಸಿಕ್ ಸಿನೆಮಾಗಳಲ್ಲಿ ಒಂದೆಂದು ಹೆಸರಾಗಿದೆ.

ವಿನಯ್ ದಂಟಕಲ್

Tuesday, May 18, 2010

ಮರೆತರೂ ಮರೆಯದ ಮೊಘಲ್-ಇ-ಆಝಂ

ಎವರ್ ಗ್ರೀನ್ ಲವ್ ಸ್ಟೋರಿ...

ಮರೆತರೂ ಮರೆಯದ
ಮೊಘಲ್-ಇ-ಆಝಂ

ಚಿತ್ರ ನಿರದೆಶಕ : ಕೆ. ಆಸಿಫ್
ಕಥೆ : ಅಮನ್, ಕೆ. ಆಸಿಫ್, ಕಮಲ್ ಅಮ್ರೋಹಿ, ವಜಾಹತ್ ಮಿರಜಾ, ಎಹಸಾನ್ ರಿಜ್ವಿ
ಸಂಗೀತ : ನೌಶಾದ್
ಚಿತ್ರಬಿಡುಗಡೆ : 5 ಆಗಸ್ಟ್ 1960
ತಾರಾಗಣ : ಪೃಥ್ವಿರಾಜ್ ಕಪೂರ್, ದಿಲೀಪ್ ಕುಮಾರ್, ಮಧುಬಾಲಾ, ದುರ್ಗ ಕೋಟೆ ಮುಂತಾದವರು.

ಹಿಂದಿ ಚಿತ್ರರಂಗದಲ್ಲಿ ಎವರ್ಗ್ರೀನ್ ಲವ್ಸ್ಟೋರಿ ಎಂಬ ಖ್ಯಾತಿ ಪಡೆದುಕೊಂಡಿದ್ದು ಕೆ. ಆಸಿಫ್ ನಿದರ್ೇಶನದ ಮೊಘಲ್-ಇ-ಆಝಂ. 1960ರ ದಶಕದ ಹಿಂದಿ ಚಿತ್ರರಂಗದ ಹಣೆಬರಹವನ್ನು ಬದಲಿಸಿದ ಈ ಚಿತ್ರ ಈಗಲೂ ಪ್ರೇಮಿಗಳ ಪಾಲಿನ ಬೈಬಲ್.
ಹಿಂದಿ ಹಾಗೂ ಉದರ್ು ಭಾಷೆಗಳಲ್ಲಿ ತಯಾರಾದ ಈ ಚಿತ್ರ ಭಾರತದಲ್ಲಿ ಮೊಘಲ್ ಆಳ್ವಿಕೆಯ ಕಾಲದಲ್ಲಿ ನಡೆದ ಅಮರ ಪ್ರೇಮಕಥೆಯನ್ನು ಹೊಂದಿದೆ. ಆಸ್ಥಾನದ ನೃತ್ಯಗಾತಿ ಅನಾರ್ಕಲಿ (ಮಧುಬಾಲಾ)ಯನ್ನು ಮೊಘಲ್ ರಾಜಕುವರ ಸಲೀಂ (ದಿಲೀಪ್ ಕುಮಾರ್) ಪ್ರೇಮಿಸಿ ಮದುವೆಯಾಗಲು ಬಯಸುತ್ತಾನೆ. ಆದರೆ ಸಲೀಂ ಹಾಗೂ ಅನಾರ್ಕಲಿ ಇವರ ಪ್ರೇಮವನ್ನು ಮಹಾರಾಜ ಅಕ್ಬರ್ (ಪೃಥ್ವಿರಾಜ್ ಕಪೂರ್) ವಿರೋಧಿಸುತ್ತಾನೆ. ಸುಖದ ಸುಪ್ಪತ್ತಿಗೆಯಲ್ಲಿ ವಾಸಿಸುವ ದೇಶವನ್ನು ಆಳುವ ಮಹಾರಾಜನ ಮಗನೊಬ್ಬ ಸಾಮಾನ್ಯ ನೃತ್ಯಗಾತಿಯನ್ನು ಮದುವೆಯಾಗುವುದನ್ನು ಅಕ್ಬರ್ ತಡೆಯುತ್ತಾನೆ. ಅಲ್ಲದೆ ಅಕ್ಬರ್ ಅನಾರ್ಕಲಿಯನ್ನು ಜೈಲಿಗೆ ತಳ್ಳುತ್ತಾನೆ. ಸಲೀಂನನ್ನು ಪ್ರೀತಿಸಿದ ಆಕೆಗೆ ಚಿತ್ರಹಿಂಸೆ ನೀಡುತ್ತಾನೆ. ಆದರೂ ಆಕೆ ಸಲೀಂನ ಮೇಲಿನ ಪ್ರೀತಿಯನ್ನು ಮರೆಯುವುದಿಲ್ಲ.
ಕೊನೆಗೊಮ್ಮೆ ಸಲೀಂ ಪಕ್ಕದ ರಾಜ್ಯದ ಜೊತೆಗೆ ನಡೆದ ಯುದ್ಧದಲ್ಲಿ ಸೋಲುತ್ತಾನೆ. ಅಲ್ಲದೆ ಆತನನ್ನು ಗಲ್ಲಿಗೇರಿಸಲು ಮುಂದಾಗುತ್ತಾರೆ. ಆಗ ಅದನ್ನು ತಪ್ಪಿಸುವ ಅನಾರ್ಕಲಿ ಸಲೀಂನ ಬದಲು ತಾನು ಸಾಯಲು ಸಿದ್ಧಳಾಗುತ್ತಾಳೆ. ಕೊನೆಗೆ ಅನಾರ್ಕಲಿ ಬದುಕಿದ್ದಂತೆಯೇ ಆಕೆಯನ್ನು ಗೋರಿಯೊಳಕ್ಕೆ ತಳ್ಳಿ ಗೋಡೆಕಟ್ಟಲಾಗುತ್ತದೆ. ರಾಜಕುವರ ಸಲೀಂನ ಮೇಲಿನ ಪ್ರೀತಿಗಾಗಿ ಸಾಮಾನ್ಯ ನೃತ್ಯಗಾತಿ ತನ್ನ ಜೀವವನ್ನೇ ಬಲಿಕೊಡುತ್ತಾಳೆ.
ಚಿತ್ರದಲ್ಲಿ ಪೃಥ್ವಿರಾಜ್ ಕಪೂರ್, ದಿಲೀಪ್ ಕುಮಾರ್, ಮಧುಬಾಲಾ ಒಬ್ಬರಿಗೊಬ್ಬರು ಪೈಪೋಟಿ ನೀಡುವಂತೆ ನಟಿಸಿದ್ದಾರೆ. ಈ ಚಿತ್ರದಲ್ಲಿ ಈ ಮೂವರೂ ನೀಡಿರುವ ಭಾವಪೂರ್ಣ ಅಭಿನಯ ನೋಡುಗರನ್ನು ಸೆಳೆಯುತ್ತದೆ. ಅನಾರ್ಕಲಿ ಹಾಗೂ ಸಲೀಂರ ನಡುವಿನ ಪ್ರೇಮಮಯ ಸನ್ನಿವೇಶಗಳು, ಇಬ್ಬರೂ ಒಬ್ಬರನ್ನೊಬ್ಬರು ಅಗಲಿರುವಾಗಿನ ದೃಶ್ಯಗಳು ಹಾಗೂ ಕ್ಲೈಮ್ಯಾಕ್ಸ್ ಚಿತ್ರದ ವಿಶೇಷತೆಗಳಲ್ಲಿ ಒಂದೆನಿಸಿವೆ. ಚಿತ್ರದಲ್ಲಿನ ಹಾಡುಗಳೂ ಅಷ್ಟೆ. ಒಂದಕ್ಕಿಂತ ಇನ್ನೊಂದು ಚೆನ್ನಾಗಿ ಮೂಡಿಬಂದಿವೆ. ಮೊಹಮ್ಮದ್ ರಫಿ ಹಾಗೂ ಇತರರು ಹಾಡಿದ ಲತಾ ಮಂಗೇಶ್ಕರ್ ಹಾಡಿದ `ಏ ಮೊಹಬ್ಬತ್ ಜಿಂದಾಬಾದ್' ಹಾಗೂ `ಪ್ಯಾರ್ ಕಿಯಾ ತೋ ಡರ್ನಾ ಕ್ಯಾ' ಎಂಬ ಹಾಡುಗಳು ಈಗಲೂ ಜನರನ್ನು ಸೆಳೆಯುತ್ತಿವೆ.
1960ರಲ್ಲಿಯೇ 1 ಕೋಟಿ ಹಣವನ್ನು ಖಚರ್ುಮಾಡಿ ಈ ಚಿತ್ರವನ್ನು ನಿರಮಾಣ ಮಾಡಿದ ಖ್ಯಾತಿ ಆಸಿಫ್ಗೆ ಸಲ್ಲುತ್ತದೆ. ಅತ್ಯಂತ ವೈಭವೋಪೇತವಾಗಿ ಚಿತ್ರೀಕರಣವಾಗಿರುವ ಈ ಚಿತ್ರ ಹಿಂದಿಚಿತ್ರರಂಗದಲ್ಲೊಂದು ಮೈಲಿಗಲ್ಲು ಎಂದೇ ಖ್ಯಾತಿ ಪಡೆದಿದೆ.

Sunday, May 16, 2010

ನೋವು-ನೆರವು ದಾಖಲಾದಾಗ....

ಕಳೆದ ವರ್ಷ ಉತ್ತರ ಕರ್ನಾಟಕ ಹಲವು ಪ್ರದೇಶಗಳಲ್ಲಿ ಸುರಿದ ಭಾರಿ ಮಳೆ-ನೆರೆಯ ಭೀಕರತೆ ಈಗ ಇತಿಹಾಸ. ಆದರೆ ಸಂಕಷ್ಟಕ್ಕೀಡಾಗಿ ಜೀವನದ ಹಳಿ ತಪ್ಪಿದವರ ಬದಕು-ಬವಣೆ, ಸಮಯದಲ್ಲಿ ಸ್ಪಂದಿಸಿದವರ ಕಾರ್ಯವನ್ನು ದಾಖಲು ಮಾಡುವ ಅಪರೂಪದ ಕೆಲಸ  ರಾಜಧಾನಿಯ ಚ್ರೈತ್ರ ರಶ್ಮಿ ಪ್ರಕಾಶನದಿಂದ ನಡೆದಿದೆ.
ಈ ಪ್ರಕಾಶನ ಸಂಸ್ಥೆ ಹೊರತಂದ `ನೆರೆಯ ನೋವಿಗೆ ಸ್ಪಂದನ' ಪುಸ್ತಕ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಬಸವನಗುಡಿಯ ಸೃಷ್ಟಿ ವೆಂಚರ್ಸ್ ನ ಪುಳಿಯೋಗರೆ ಪಾಯಿಂಟ್ ಕಟ್ಟಡದಲ್ಲಿ ನಡೆದಾಗ, ನೋವಿನ ನೆನಪು ಸಭಿಕರ ಹೃದಯವನ್ನು ಆವರಿಸಿಕೊಂಡಿತೆಂದರೆ ಅತಿಶಯೋಕ್ತಿಯಲ್ಲ. ಇದಕ್ಕೆ ಈ ಮೂರು ಘಟನಾವಳಿಗಳೇ ತುಣುಕುಗಳೇ ಸಹೃದಯರ ಎದೆತುಂಬಿಬರಲು ಸಾಕಾಗಿತ್ತು.


`ನಮ್ಮ ಹಣಿಬಾರ ಛಂದ ಇಲ್ಲ ಬಿಡ್ರಿ. ತುಸು ಕಾಳು ಪಾಳ ನಿತ್ಯದ ಗಂಜಿಗೆ ಇಟಕೊಂಡಿದ್ವಿ. ಅದೂ ಹೋತು. ಜೀವ ಇದ್ದೂ ಇಲ್ಲದಂಗಾಗೇದ. ನಾವೂ ಹೊಳೆ ನೀರಿನಾಗ ಕೊಚ್ಚಿಕೊಂಡು ಹೋಗಿದ್ರ ಭೇಷಿತ್ತು'.
-----
`ಕುಡಿಯಾಕ ಬೇರೆ ನೀರೇ ಇಲ್ರಿ. ಈ ಪ್ರವಾಹದ ರಾಡಿ ನೀರಲ್ಲೇ ಅನ್ನ-ಸಾರು ಮಾಡ್ತಾರ್ರಿ. ಎಷ್ಟು ದಿನ ಬದುಕ್ತೀವಿ ಅನ್ನಾದು ಆ ದೇವ್ರಿಗೆ ಗೊತ್ತದ...'
----
`ಮಳೀ ಸಂಜೀಕ ಅಥವಾ ರಾತ್ರೀಗ ನಿಲ್ಲಬಹ್ದು ಅಂತಾ ಅಂದ್ಕೊಂಡಿದ್ವಿ. ರಾತ್ರಿ ಮಲಗಿದ ಮ್ಯಾಗ ಮಳಿ ಆರ್ಭಟ ಮತ್ತೂ ಜೋರಾತು. ಡೋಣಿ ಊರೊಳಗ ನುಗ್ತಾ ಐತಿ ಅಂತ ಗೊತ್ತಾತು. ಮನಿಗಳೆಲ್ಲಾ ಕುಸಿಯಾಕ ಹತ್ತಿದ್ವು. ತುಂಬಿದ ಮನಿ ಬಿಟ್ಟು ಹೋಗೋದು ಹ್ಯಾಂಗ ಅಂತ ಚಿಂತಿ ಆತು. ಆದ್ರ ಮೊದಲು ಜೀಂವಾ ಉಳೀಲಿ. ನಂತ್ರ ಮನೀ ಅಂತ ಇದ್ದ ಬದ್ದ ಆಹಾರ, ಅಕ್ಕಿ-ಬ್ಯಾಳಿ ಎಲ್ಲ ಗಂಟು ಕಟಗೊಂಡ ಮನಿಯಿಂದ ಹೊರಗ ಓಡಿದ್ವಿ. ಹತ್ತೇ ನಿಮಿಷಕ್ಕ ಮನೀ ಕೊಚಿಗಂಡು ಹೋತು...'
-------
ಎಸ್. ಎಂ. ಜಾಮದಾರ ಹಾಗೂ ಸಾವಯವ ಕೃಷಿ ಮಿಷನ್ ಅಧ್ಯಕ್ಷ ಆ. ಶ್ರೀ. ಆನಂದ್ ನೆರೆಯ ಸಮಯದಲ್ಲಿ ತಾವು ಕೈಗೊಂಡ ಕ್ರಮಗಳನ್ನು ಸಭೆಗೆ ತಿಳಿಸಿದರು. ನೊಂದವರಿಗೆ ಸಹಾಯ ಮಾಡಿದ ಸಾವಯವ ಕೃಷಿ ಮಿಷನ್ನಿನ ಕಾರ್ಯಗಳನ್ನು ವಿವರಿಸಲಾಯಿತು.
ಉತ್ತರ ಕರ್ನಾಟಕದ ಮಂದಿಯ ಆಹಾರ, ಉತ್ಪಾದನೆ, ಬೇಳೆ ಕಾಳು ಬೆಳೆಯುವಿಕೆ, ರೈತಾಪಿ ಕೆಲಸಗಳ ಬಗ್ಗೆ ಆನಂದ್ ಸಾಕಷ್ಟು ಮಾಹಿತಿ ನೀಡಿದರು.
ನೆರೆ ಹಾವಳಿಯಲ್ಲಿ ಸಿಲುಕಿ ಹಲವು ಜನರನ್ನು ರಕ್ಷಿಸಿದ ಬಯಲು ನಾಡಿನ ತಿಮ್ಮಣ್ಣ ಹುಳಸದ್ ಉಪಸ್ಥಿತರಿದ್ದರು. ಪ್ರವಾಹ ಬಂದಾಗ ತಮ್ಮ ಹೊಲ ಹಾಳಾಗುವುದನ್ನೂ ಲೆಕ್ಕಿಸದೇ ಕೆರೆಯ ಕೋಡಿ ಒಡೆದು ಊರನ್ನು ಉಳಿಸಿದ ನೆರೆ ಸಂತ್ರಸ್ಥ ಭೀಮನಗೌಡ ಪಾಟೀಲರು ದೂರದ ಬಾಗಲಕೋಟೆಯಿಂದ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿ, ನೆರೆಯ ಸಂದರ್ಭದಲ್ಲಿ ತಾವು ಹಾಗೂ ಉತ್ತರ ಕರ್ನಾಟಕದ ಜನರು ಅನುಭವಿಸಿದ ನೋವನ್ನು ಹಂಚಿಕೊಂಡರು.
ಪ್ರಾಸ್ತಾವಿಕವಾಗಿ ಮಾತನಾಡಿದ `ನೆರೆಯ ನೋವಿಗೆ ಸ್ಪಂದನ' ಪುಸ್ತಕದ ಸಂಪಾದಕ ರಾಮಚಂದ್ರ ಹೆಗಡೆ ಸಿ ಎಸ್ ತಾವು ಉತ್ತರ ಕರ್ನಾಟಕಕ್ಕೆ ನೆರೆ ಸಂತ್ರಸ್ಥರ ಜೊತೆ ಮಾತನಾಡಲು ಹೋದಾಗ ಆದ ಅನುಭವವನ್ನು ಸಭೆಯ ಮುಂದಿಟ್ಟರು.

ಪುಸ್ತಕದ ಬಗ್ಗೆ
`ನೆರೆ ನೋವಿಗೆ ಸ್ಪಂದನ' ಪುಸ್ತಕ ಸಂಪೂರ್ಣವಾಗಿ ನೆರೆ ಸಂತ್ರಸ್ತರ ಜೀವನ ಹಾಗೂ ನೆರೆ ಹಾವಳಿಯ ಭೀಕರತೆಯನ್ನು ತೆರೆದಿಡುತ್ತದೆ. ನೆರೆ ಪೀಡಿತ ಪ್ರದೇಶಗಳಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿನ ಜನರನ್ನು ಮಾತನಾಡಿಸಿ ಅವರ ಅನುಭವಗಳನ್ನು ದಾಖಲಿಸಿದ ರಾಮಚಂದ್ರ ಹೆಗಡೆ ಹಾಗೂ ಅವರ ಬಳಗದ ಕಾರ್ಯ ಮಚ್ಚುವಂತಹದ್ದು. ದಾಖಲಾಗದ ಹಲವು ನೆರೆ ಸಂಗತಿಗಳನ್ನು, ನೆರೆಯ ನೋವಿಗೆ ತಕ್ಷಣವೇ ಸ್ಪಂದಿಸಿದವರ ಮತ್ತು ನೆರೆಯಲ್ಲಿ ಸಿಲುಕಿದ ಜನರನ್ನು ಉಳಿಸಿದ ವ್ಯಕ್ತಿಗಳ ಕಾರ್ಯವನ್ನು ಈ ಪುಸ್ತಕ ವಿವರಿಸುತ್ತದೆ.
ರಾಮಚಂದ್ರ ಹೆಗಡೆ, ಎನ್ವೀ ವೈದ್ಯ ಹೆಗ್ಗಾರ ಅವರ ಲೇಖನ, ಸಂಜಯ ಭಟ್ಟ ಬೆಣ್ಣೆಗದ್ದೆ, ಅರ್ಪಿತಾ ಭಟ್ಟ, ನವೀನ ಗಂಗೋತ್ರಿ, ಪ್ರಿಯಾ ಕಲ್ಲಬ್ಬೆ ಅವರ ಕವನಗಳು ಓದುಗರ ಮನಸ್ಸಿಗೆ ನಾಟುವ ಈ ಪುಸ್ತಕದ ಬೆಲೆ 20ರೂ. ಮಾನವೀಯ ಉದ್ದೇಶವೇ ಪ್ರಧಾನವಾಗಿಟ್ಟುಕೊಂಡು ಪ್ರಕಟವಾಗಿರುವ ಪುಸ್ತಕ ಇದಾಗಿದೆ ಎನ್ನುವುದು ಪ್ರಕಾಶಕರ ನುಡಿ.

 -----------------------------------------------
ವಿ.ಸೂ ..
ಇದು ನೆರೆ ನೋವಿನಲ್ಲಿ ನೊಂದವರ ಕಥೆ..
ನೆರೆಯಲ್ಲಿ ಬಸವಳಿದವರಿಗೆ ಸಮಾಧಾನ ಹೇಳಿದವರ ಕಥೆ..
ಇಂತಹ ಹಲವು ಸಂಗತಿಗಳನ್ನು ಸಂಗ್ರಹಿಸಿದ್ದಾರೆ ರಾಚಮ್ ಅಣ್ಣ..
ಅವರಿಗೆ ಧನ್ಯವಾದ.. 
ಪುಸ್ತಕ ನೆರೆ ನೋವಿಗೆ ಸಿಕ್ಕ ಜನರಿಗೆ ಸಮಾಧಾನ ಹೇಳುತ್ತದೆ..
ಈ ಪುಸ್ತಕದ ಬೆಲೆ ಕೇವಲ ೨೦ ರೂಪಾಯಿಗಳು..
ಇದನ್ನು ಕೊಂಡು ಓದಿರಿ...

-ವಿನಯ ದಂಟಕಲ್