Saturday, May 22, 2010

ಕ್ಲಾಸಿಕ್ ಸಿನೆಮಾ

ನಗಿಸುತ್ತಲೇ ಅಳಿಸುವ
ಮೇರಾ ನಾಮ್ ಜೋಕರ್

ನಿರದೆಶಕ : ರಾಜ್ ಕಪೂರ್
ನಿರಮಾಪಕ : ರಾಜ್ ಕಪೂರ್
ಕಥೆ : ಕೆ. ಏ. ಅಬ್ಬಾಸ್
ಸಂಗೀತ : ಶಂಕರ್ ಜೈಕಿಷನ್
ಸಂಕಲನ : ರಾಜ್ ಕಪೂರ್
ಚಿತ್ರ ಬಿಡುಗಡೆ : 18 ಡಿಸೆಂಬರ್ 1970

ಮೇರಾ ನಾಮ್ ಜೋಕರ್ ಹಿಂದಿ ಚಿತ್ರರಂಗದ ಪ್ರಸಿದ್ದ ಚಲನಚಿತ್ರಗಳಲ್ಲೊಂದು. ರಾಜ್ ಕಪೂರ್ ಎಂಬ ವಿಶಿಷ್ಟ, ವಿಚಿತ್ರ ಹಾಗೂ ವಿಲಕ್ಷಣ ಪ್ರತಿಭೆಯನ್ನು ಜಗತ್ತಿಗೆ ಪರಿಚಯಿಸಿದ ಚಿತ್ರ ಮೇರಾ ನಾಮ್ ಜೋಕರ್. 
ಮೂರು ಭಾಗಗಳಲ್ಲಿರುವ ಈ ಚಿತ್ರ ರಾಜು ಎಂಬ ಜೋಕರ್ ಬದುಕಿನ ಮೂರು ಕಾಲಘಟ್ಟಗಳನ್ನು ವಿವರಿಸುತ್ತದೆ. ಮೊದಲ ಭಾಗದಲ್ಲಿ ಯುವ ರಾಜೂ (ರಿಷಿ ಕಪೂರ್) ತನ್ನ ಶಿಕ್ಷಕಿ ಮೇರಿ (ಸಿಮಿ ಅಗರವಾಲ್)ಯ ಆಕರ್ಷಣೆಗೆ ಒಳಗಾದರೆ ಎರಡನೇ ಭಾಗದಲ್ಲಿ ರಾಜೂ (ರಾಜ್ ಕಪೂರ್) ಜೆಮಿನಿ ಸರ್ಕಸ್ನ ಪಾತ್ರಧಾರಿ ರಷ್ಯಾದ ಮರೀನಾ (ಕ್ಷೇನಿಯಾ ರ್ಯಾರಬೆಂಕಿನಾ)ಳನ್ನು ಪ್ರೀತಿಸುತ್ತಾನೆ. ಈ ಭಾಗ ಹೆಚ್ಚು ತಮಾಷೆಯಿಂದ ಕೂಡಿದ್ದು ನೋಡುಗರ ಹೊಟ್ಟೆ ಹುಣ್ಣಾಗಿಸುತ್ತದೆ. ಮೂರನೇ ಭಾಗದಲ್ಲಿ ರಾಜೂ, ಮೀನಾ(ಪದ್ಮಿನಿ)ಳ ಪ್ರೇಮಪಾಶದಲ್ಲಿ ಬೀಳುತ್ತಾನೆ. ಆದರೆ ಚಿತ್ರನಟಿಯಾಗುವ ಕನಸನ್ನು ಹೊಂದಿದ ಆಕೆ ತನ್ನ ಆಸೆ ಈಡೇರಿಸಿಕೊಳ್ಳಲು ರಾಜುವನ್ನು ಬಳಸಿಕೊಂಡು ನಂತರ ಆತನನ್ನು ಮರೆತು ಬಿಡುತ್ತಾಳೆ. ಕೊನೆಯಲ್ಲಿ ರಾಜು ಏನಾಗುತ್ತಾನೆ ಎಂಬುದು ಚಿತ್ರದ ಕಥೆ. ರಿಷಿ ಕಪೂರ್ಗೆ ಇದು ಪಾದಾರ್ಪಣೆಯ ಚಿತ್ರ. ಚಿತ್ರದಲ್ಲಿ ಹಲವು ಅಂಶಗಳು ನೋಡುಗರನ್ನು ಸೆಳೆಯುತ್ತವೆ.
ಜೊಕರ್ ರೀತಿಯ ಗೊಂಬೆ, ಅದರ ಜೊತೆ ರಾಜೂ ಮಾತನಾಡುವುದು, ಸರ್ಕಸ್ ನೋಡುತ್ತಿದ್ದಾಗಲೇ ರಾಜೂನ ತಾಯಿ ಸಾಯುವುದು, ಆಕೆ ಸತ್ತಾಗ ರಾಜೂ ಕಪ್ಪು ಕನ್ನಡಕ ಧರಿಸಿ ಅಳುವುದು, ನಂತರ ದುಃಖದ ನಡುವೆಯೂ ಎಲ್ಲರನ್ನೂ ನಗಿಸುವುದು, ಹಿಂದಿ ಭಾಷೆ ಬರದ ಮರೀನಾಗೆ ತನ್ನ ಪ್ರೇಮ ನಿವೇದನೆ ಮಾಡುವುದು, ಆಕೆ ಹರುಕು ಮುರುಕು ಹಿಂದಿಯಲ್ಲಿ ರಾಜೂನ ತಾಯಿಯ ಜೊತೆ ಮಾತನಾಡುವುದು ಈ ಮುಂತಾದ ದೃಷ್ಯಗಳು ಅತ್ಯಂತ ಸುಂದರವಾಗಿ ಮೂಡಿಬಂದಿದೆ.
ಹಾಡುಗಳು ಈ ಚಿತ್ರದ ಪ್ಲಸ್ ಪಾಯಿಂಟ್. ಚಿತ್ರದಲ್ಲಿನ ಎಲ್ಲಾ ಹಾಡುಗಳೂ ಒಂದಕ್ಕಿಂತ ಇನ್ನೊಂದು ಉತ್ತಮವಾಗಿ ಮೂಡಿ ಬಂದಿವೆ. ಮುಖೇಶ್ ಸಿರಿಕಂಠದಲ್ಲಿ ಒಡಮೂಡಿದ `ಜಾನೇ ಕಹಾಂ ಗಯೇ ವೋ ದಿನ್', `ಜೀನಾ ಯಹಾಂ ಮರ್ನಾ ಯಹಾಂ', `ಕಾಟೇ ನಾ ಕಾಟೆ ರೈನಾ', `ಕೆಹ್ತಾ ಹೈ ಜೋಕರ್', ಲತಾ ಮಂಗೇಶ್ಕರ್ ಹಾಡಿದ `ಅಂಗ್ ಲಗ್ ಜಾ ಬಲ್ಮಾ', ಮನ್ನಾ ಡೇ ಹಾಡಿದ ಕಾಮಿಡಿ ಗೀತೆ `ಏ ಭಾಯ್ ಜರಾ ದೇಖೆ ಚಲೋ' ಈ ಮುಂತಾದ ಹಾಡುಗಳು ಜನಮಾನಸದಲ್ಲಿ ಅಚ್ಚಳಿಯದೇ ಉಳಿದುಬಿಟ್ಟಿವೆ.
ಚಿತ್ರದಲ್ಲಿ ಧರಮೇಂದ್ರ, ಮನೋಜ್ ಕುಮಾರ್, ಧಾರಾ ಸಿಂಗ್, ಅಚಲಾ ಸಚ್ದೇವ್ ಮುಂತಾದವರೂ ನಟಿಸಿದ್ದಾರೆ. 255 ನಿಮಿಷದ ಜಿತ್ರ ನೀಡುಗರಿಗೆ ಬಹಳ ಖುಷಿ ಕೊಡುವ ಚಿತ್ರ. ಸುಮಾರು ನಾಲ್ಕು ತಾಸು ಅರಾಮವಾಗಿ ನೋಡಬಹುದಾದ ಚಿತ್ರ. ಹಿಂದಿ ಚಿತ್ರರಂಗದ ಕ್ಲಾಸಿಕ್ ಸಿನೆಮಾಗಳಲ್ಲಿ ಒಂದೆಂದು ಹೆಸರಾಗಿದೆ.

ವಿನಯ್ ದಂಟಕಲ್

No comments:

Post a Comment