Sunday, May 16, 2010

ನೋವು-ನೆರವು ದಾಖಲಾದಾಗ....

ಕಳೆದ ವರ್ಷ ಉತ್ತರ ಕರ್ನಾಟಕ ಹಲವು ಪ್ರದೇಶಗಳಲ್ಲಿ ಸುರಿದ ಭಾರಿ ಮಳೆ-ನೆರೆಯ ಭೀಕರತೆ ಈಗ ಇತಿಹಾಸ. ಆದರೆ ಸಂಕಷ್ಟಕ್ಕೀಡಾಗಿ ಜೀವನದ ಹಳಿ ತಪ್ಪಿದವರ ಬದಕು-ಬವಣೆ, ಸಮಯದಲ್ಲಿ ಸ್ಪಂದಿಸಿದವರ ಕಾರ್ಯವನ್ನು ದಾಖಲು ಮಾಡುವ ಅಪರೂಪದ ಕೆಲಸ  ರಾಜಧಾನಿಯ ಚ್ರೈತ್ರ ರಶ್ಮಿ ಪ್ರಕಾಶನದಿಂದ ನಡೆದಿದೆ.
ಈ ಪ್ರಕಾಶನ ಸಂಸ್ಥೆ ಹೊರತಂದ `ನೆರೆಯ ನೋವಿಗೆ ಸ್ಪಂದನ' ಪುಸ್ತಕ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಬಸವನಗುಡಿಯ ಸೃಷ್ಟಿ ವೆಂಚರ್ಸ್ ನ ಪುಳಿಯೋಗರೆ ಪಾಯಿಂಟ್ ಕಟ್ಟಡದಲ್ಲಿ ನಡೆದಾಗ, ನೋವಿನ ನೆನಪು ಸಭಿಕರ ಹೃದಯವನ್ನು ಆವರಿಸಿಕೊಂಡಿತೆಂದರೆ ಅತಿಶಯೋಕ್ತಿಯಲ್ಲ. ಇದಕ್ಕೆ ಈ ಮೂರು ಘಟನಾವಳಿಗಳೇ ತುಣುಕುಗಳೇ ಸಹೃದಯರ ಎದೆತುಂಬಿಬರಲು ಸಾಕಾಗಿತ್ತು.


`ನಮ್ಮ ಹಣಿಬಾರ ಛಂದ ಇಲ್ಲ ಬಿಡ್ರಿ. ತುಸು ಕಾಳು ಪಾಳ ನಿತ್ಯದ ಗಂಜಿಗೆ ಇಟಕೊಂಡಿದ್ವಿ. ಅದೂ ಹೋತು. ಜೀವ ಇದ್ದೂ ಇಲ್ಲದಂಗಾಗೇದ. ನಾವೂ ಹೊಳೆ ನೀರಿನಾಗ ಕೊಚ್ಚಿಕೊಂಡು ಹೋಗಿದ್ರ ಭೇಷಿತ್ತು'.
-----
`ಕುಡಿಯಾಕ ಬೇರೆ ನೀರೇ ಇಲ್ರಿ. ಈ ಪ್ರವಾಹದ ರಾಡಿ ನೀರಲ್ಲೇ ಅನ್ನ-ಸಾರು ಮಾಡ್ತಾರ್ರಿ. ಎಷ್ಟು ದಿನ ಬದುಕ್ತೀವಿ ಅನ್ನಾದು ಆ ದೇವ್ರಿಗೆ ಗೊತ್ತದ...'
----
`ಮಳೀ ಸಂಜೀಕ ಅಥವಾ ರಾತ್ರೀಗ ನಿಲ್ಲಬಹ್ದು ಅಂತಾ ಅಂದ್ಕೊಂಡಿದ್ವಿ. ರಾತ್ರಿ ಮಲಗಿದ ಮ್ಯಾಗ ಮಳಿ ಆರ್ಭಟ ಮತ್ತೂ ಜೋರಾತು. ಡೋಣಿ ಊರೊಳಗ ನುಗ್ತಾ ಐತಿ ಅಂತ ಗೊತ್ತಾತು. ಮನಿಗಳೆಲ್ಲಾ ಕುಸಿಯಾಕ ಹತ್ತಿದ್ವು. ತುಂಬಿದ ಮನಿ ಬಿಟ್ಟು ಹೋಗೋದು ಹ್ಯಾಂಗ ಅಂತ ಚಿಂತಿ ಆತು. ಆದ್ರ ಮೊದಲು ಜೀಂವಾ ಉಳೀಲಿ. ನಂತ್ರ ಮನೀ ಅಂತ ಇದ್ದ ಬದ್ದ ಆಹಾರ, ಅಕ್ಕಿ-ಬ್ಯಾಳಿ ಎಲ್ಲ ಗಂಟು ಕಟಗೊಂಡ ಮನಿಯಿಂದ ಹೊರಗ ಓಡಿದ್ವಿ. ಹತ್ತೇ ನಿಮಿಷಕ್ಕ ಮನೀ ಕೊಚಿಗಂಡು ಹೋತು...'
-------
ಎಸ್. ಎಂ. ಜಾಮದಾರ ಹಾಗೂ ಸಾವಯವ ಕೃಷಿ ಮಿಷನ್ ಅಧ್ಯಕ್ಷ ಆ. ಶ್ರೀ. ಆನಂದ್ ನೆರೆಯ ಸಮಯದಲ್ಲಿ ತಾವು ಕೈಗೊಂಡ ಕ್ರಮಗಳನ್ನು ಸಭೆಗೆ ತಿಳಿಸಿದರು. ನೊಂದವರಿಗೆ ಸಹಾಯ ಮಾಡಿದ ಸಾವಯವ ಕೃಷಿ ಮಿಷನ್ನಿನ ಕಾರ್ಯಗಳನ್ನು ವಿವರಿಸಲಾಯಿತು.
ಉತ್ತರ ಕರ್ನಾಟಕದ ಮಂದಿಯ ಆಹಾರ, ಉತ್ಪಾದನೆ, ಬೇಳೆ ಕಾಳು ಬೆಳೆಯುವಿಕೆ, ರೈತಾಪಿ ಕೆಲಸಗಳ ಬಗ್ಗೆ ಆನಂದ್ ಸಾಕಷ್ಟು ಮಾಹಿತಿ ನೀಡಿದರು.
ನೆರೆ ಹಾವಳಿಯಲ್ಲಿ ಸಿಲುಕಿ ಹಲವು ಜನರನ್ನು ರಕ್ಷಿಸಿದ ಬಯಲು ನಾಡಿನ ತಿಮ್ಮಣ್ಣ ಹುಳಸದ್ ಉಪಸ್ಥಿತರಿದ್ದರು. ಪ್ರವಾಹ ಬಂದಾಗ ತಮ್ಮ ಹೊಲ ಹಾಳಾಗುವುದನ್ನೂ ಲೆಕ್ಕಿಸದೇ ಕೆರೆಯ ಕೋಡಿ ಒಡೆದು ಊರನ್ನು ಉಳಿಸಿದ ನೆರೆ ಸಂತ್ರಸ್ಥ ಭೀಮನಗೌಡ ಪಾಟೀಲರು ದೂರದ ಬಾಗಲಕೋಟೆಯಿಂದ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿ, ನೆರೆಯ ಸಂದರ್ಭದಲ್ಲಿ ತಾವು ಹಾಗೂ ಉತ್ತರ ಕರ್ನಾಟಕದ ಜನರು ಅನುಭವಿಸಿದ ನೋವನ್ನು ಹಂಚಿಕೊಂಡರು.
ಪ್ರಾಸ್ತಾವಿಕವಾಗಿ ಮಾತನಾಡಿದ `ನೆರೆಯ ನೋವಿಗೆ ಸ್ಪಂದನ' ಪುಸ್ತಕದ ಸಂಪಾದಕ ರಾಮಚಂದ್ರ ಹೆಗಡೆ ಸಿ ಎಸ್ ತಾವು ಉತ್ತರ ಕರ್ನಾಟಕಕ್ಕೆ ನೆರೆ ಸಂತ್ರಸ್ಥರ ಜೊತೆ ಮಾತನಾಡಲು ಹೋದಾಗ ಆದ ಅನುಭವವನ್ನು ಸಭೆಯ ಮುಂದಿಟ್ಟರು.

ಪುಸ್ತಕದ ಬಗ್ಗೆ
`ನೆರೆ ನೋವಿಗೆ ಸ್ಪಂದನ' ಪುಸ್ತಕ ಸಂಪೂರ್ಣವಾಗಿ ನೆರೆ ಸಂತ್ರಸ್ತರ ಜೀವನ ಹಾಗೂ ನೆರೆ ಹಾವಳಿಯ ಭೀಕರತೆಯನ್ನು ತೆರೆದಿಡುತ್ತದೆ. ನೆರೆ ಪೀಡಿತ ಪ್ರದೇಶಗಳಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿನ ಜನರನ್ನು ಮಾತನಾಡಿಸಿ ಅವರ ಅನುಭವಗಳನ್ನು ದಾಖಲಿಸಿದ ರಾಮಚಂದ್ರ ಹೆಗಡೆ ಹಾಗೂ ಅವರ ಬಳಗದ ಕಾರ್ಯ ಮಚ್ಚುವಂತಹದ್ದು. ದಾಖಲಾಗದ ಹಲವು ನೆರೆ ಸಂಗತಿಗಳನ್ನು, ನೆರೆಯ ನೋವಿಗೆ ತಕ್ಷಣವೇ ಸ್ಪಂದಿಸಿದವರ ಮತ್ತು ನೆರೆಯಲ್ಲಿ ಸಿಲುಕಿದ ಜನರನ್ನು ಉಳಿಸಿದ ವ್ಯಕ್ತಿಗಳ ಕಾರ್ಯವನ್ನು ಈ ಪುಸ್ತಕ ವಿವರಿಸುತ್ತದೆ.
ರಾಮಚಂದ್ರ ಹೆಗಡೆ, ಎನ್ವೀ ವೈದ್ಯ ಹೆಗ್ಗಾರ ಅವರ ಲೇಖನ, ಸಂಜಯ ಭಟ್ಟ ಬೆಣ್ಣೆಗದ್ದೆ, ಅರ್ಪಿತಾ ಭಟ್ಟ, ನವೀನ ಗಂಗೋತ್ರಿ, ಪ್ರಿಯಾ ಕಲ್ಲಬ್ಬೆ ಅವರ ಕವನಗಳು ಓದುಗರ ಮನಸ್ಸಿಗೆ ನಾಟುವ ಈ ಪುಸ್ತಕದ ಬೆಲೆ 20ರೂ. ಮಾನವೀಯ ಉದ್ದೇಶವೇ ಪ್ರಧಾನವಾಗಿಟ್ಟುಕೊಂಡು ಪ್ರಕಟವಾಗಿರುವ ಪುಸ್ತಕ ಇದಾಗಿದೆ ಎನ್ನುವುದು ಪ್ರಕಾಶಕರ ನುಡಿ.

 -----------------------------------------------
ವಿ.ಸೂ ..
ಇದು ನೆರೆ ನೋವಿನಲ್ಲಿ ನೊಂದವರ ಕಥೆ..
ನೆರೆಯಲ್ಲಿ ಬಸವಳಿದವರಿಗೆ ಸಮಾಧಾನ ಹೇಳಿದವರ ಕಥೆ..
ಇಂತಹ ಹಲವು ಸಂಗತಿಗಳನ್ನು ಸಂಗ್ರಹಿಸಿದ್ದಾರೆ ರಾಚಮ್ ಅಣ್ಣ..
ಅವರಿಗೆ ಧನ್ಯವಾದ.. 
ಪುಸ್ತಕ ನೆರೆ ನೋವಿಗೆ ಸಿಕ್ಕ ಜನರಿಗೆ ಸಮಾಧಾನ ಹೇಳುತ್ತದೆ..
ಈ ಪುಸ್ತಕದ ಬೆಲೆ ಕೇವಲ ೨೦ ರೂಪಾಯಿಗಳು..
ಇದನ್ನು ಕೊಂಡು ಓದಿರಿ...

-ವಿನಯ ದಂಟಕಲ್

No comments:

Post a Comment