Tuesday, January 2, 2018

ಕೆಚ್ಚಲು ಬಾವಿಗೆ ಇಲ್ಲಿದೆ ಮದ್ದು

       ಕೆಚ್ಚಲು ಬಾವು ಅಥವಾ ರಾಸುಗಳ ಕೆಚ್ಚಲಿನಲ್ಲಿ ಗಡ್ಡೆಗಳು ಉಂಟಾಗುವುದು ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯ ಎಂಬಂತಾಗಿದೆ.  ಎಲ್ಲಾ ಋತುಗಳ ಪ್ರಾರಂಭದಲ್ಲಿಯೂ ಕಾಣಿಸಿಕೊಳ್ಳುವ ಕೆಚ್ಚಲುಬಾವು ಹಸುಗಳು, ಎಮ್ಮೆಗಳನ್ನು ಬಾಧಿಸುತ್ತವೆ. ಇಂತಹ ಕೆಚ್ಚಲು ಬಾವಿಗೆ ಪರಿಣಾಮಕಾರಿಯಾಗಿ ಔಷಧಿ ನೀಡುವವರೊಬ್ಬರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿದ್ದಾರೆ. ನಾಟಿ ಔಷಧಿ ಮೂಲಕ ಕೆಚ್ಚಲು ಬಾವನ್ನು ಸಂಪೂರ್ಣವಾಗಿ ಗುಣಪಡಿಸುತ್ತಾರೆ.

ಏನಿದು ಕೆಚ್ಚಲು ಬಾವು ?
ವಾತಾವರಣದ ವೈಪರಿತ್ಯ ಹಾಗೂ ಆಹಾರದ ಬದಲಾವಣೆಯಿಂದಾಗಿ ಸಾಮಾನ್ಯವಾಗಿ ಕೆಚ್ಚಲುಬಾವು ಉಂಟಾಗುತ್ತದೆ. ಬ್ಯಾಕ್ಟೀರಿಯಾದ ಸೋಂಕಿನಿಂದಲೂ ಇದು ಉಂಟಾಗುತ್ತದೆ ಎನ್ನಲಾಗುತ್ತದೆ. ಹಾಲು ನೀಡುವ ರಾಸುಗಳ ಕೆಚ್ಚಲಿನಲ್ಲಿ ಬಾವು ಉಂಟಾಗುತ್ತದೆ. ಒಂದೆರಡು ದಿನಗಳಲ್ಲಿಯೇ ಇದು ಗಡ್ಡೆಗಟ್ಟುತ್ತದೆ. ತೀರಾ ವಿಳಂಬ ಮಾಡಿದರೆ ಕೆಲವೊಮ್ಮೆ ಕೆಚ್ಚಲುಗಳು ಕೆಂಪು ಬಣ್ಣಕ್ಕೆ ತಿರುಗುವುದೂ ಇದೆ. ಸಾಮಾನ್ಯವಾಗಿ ಕೆಚ್ಚಲುಬಾವಿಗೆ ಪರಿಣಾಮಕಾರಿಯಾಗಿ ಮದ್ದು ಮಾಡದೇ ಇದ್ದಲ್ಲಿ ರಾಸುಗಳು ಹಾಲು ಕೊಡುವುದನ್ನೇ ನಿಲ್ಲಿಸಬಹುದು.
ಇಂತಹ ಕೆಚ್ಚಲುಬಾವಿಗೆ ಆಂಗ್ಲ ವೈದ್ಯ ಪದ್ಧತಿಯಲ್ಲಿ ಕೆಲವು ಮಾತ್ರೆಗಳೂ ಇವೆ. ಪಶುವೈದ್ಯರು ಮೊಲೆಗಳ ರಂಧ್ರಕ್ಕೆ ಟ್ಯೂಬನ್ನು ಏರಿಸಿ ಕೆಚ್ಚಲು ಬಾವಿನಿಂದ ಹಾಲು ನಿಲ್ಲುವ ಸಮಸ್ಯೆಗೆ ಪರಿಹಾರ ಮಾಡುತ್ತಾರೆ. ಆದರೆ ಈ ಪದ್ಧತಿ ಕೂಡ ಪರಿಣಾಮಕಾರಿಯಲ್ಲ ಎನ್ನುವ ಭಾವನೆಗಳಿವೆ. ಅಲ್ಲದೇ ಟ್ಯೂಬ್ ಏರಿಸಿದ ನಂತರದಲ್ಲಿ ರಾಸುಗಳ ಕೆಚ್ಚಲಿನಿಂದ ಹಾಲು ಸುರಿಯುವುದು ನಿಲ್ಲುವುದೇ ಇಲ್ಲ ಎಂದೋ ಅಥವಾ ಮೊಲೆಗಳ ರಂಧ್ರ ದೊಡ್ಡದಾಗಿ ಸಮಸ್ಯೆಗಳು ಉಂಟಾದ ಸಂದರ್ಭಗಳಿವೆ.
ಹೋಮಿಯೋಪತಿ ವೈದ್ಯಪದ್ಧತಿಯಲ್ಲಿಯೂ ಕೂಡ ಕೆಚ್ಚಲುಬಾವಿಗೆ ಔಷಧ ಇದೆಯಾದರೂ ಕೆಚ್ಚಲಿನಲ್ಲಿ ಉಂಟಾಗಿರುವ ಗಡ್ಡೆಗಳು ಕರಗುವುದೇ ಇಲ್ಲ ಎನ್ನುವ ಮಾತುಗಳು ಹಲವರಿಂದ ಕೇಳಿ ಬಂದಿವೆ. ಕೆಚ್ಚಲುಬಾವಿಗೆ ಇತ್ತೀಚಿನ ದಿನಗಳಲ್ಲಿ ಔಷಧಿ ಕಂಡು ಹಿಡಿಯುವ ಪ್ರಯತ್ನಗಳು ನಡೆಯುತ್ತಿವೆಯಾದರೂ ಸಂಪೂರ್ಣವಾಗಿ ಅವು ಫಲಪ್ರದವಾಗಿಲ್ಲ.

ಪರಿಣಾಮಕಾರಿ ಔಷಧಿ ನೀಡುವ ಸುಬ್ಬಣ್ಣ
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಾನಸೂರು ಬಳಿಯ ದಂಟಕಲ್ಲಿನ ಸುಬ್ರಾಯ ಹೆಗಡೆ ಅವರು ಕೆಚ್ಚಲು ಬಾವಿಗೆ ಪರಿಣಾಮಕಾರಿಯಾದ ಔಷಧಿಯನ್ನು ನೀಡುತ್ತಾರೆ. ನಾಟಿ ಪದ್ಧತಿಯ ಮೂಲಕ ಔಷಧಿಯನ್ನು ನೀಡುವ ಇವರು ಅದಕ್ಕೆ ಪ್ರತಿಯಾಗಿ ಕೇವಲ ಒಂದು ಅಥವಾ ಎರಡು ತೆಂಗಿನಕಾಯಿಗಳನ್ನು ಪ್ರತಿಫಲದ ರೂಪದಲ್ಲಿ ಪಡೆಯುತ್ತಾರೆ. ಸುಬ್ರಾಯ ಹೆಗಡೆ ಅವರು ನೀಡುವ ಔಷಧದಿಂದ ಇದುವರೆಗೂ ಕೆಚ್ಚಲು ಬಾವು ಕಡಿಮೆಯಾಗಿಲ್ಲ ಎನ್ನುವ ಆರೋಪಗಳು ಬಂದೇ ಇಲ್ಲ. ಸಹಸ್ರ ಸಹಸ್ರ ಸಂಖ್ಯೆಯ ಜನರು ಬಂದು ತಮ್ಮ ಮನೆಯ ರಾಸುಗಳಿಗೆ ಔಷಧಿ ತೆಗೆದುಕೊಂಡು ಹೋಗಿದ್ದಾರೆ. ಕೆಚ್ಚಲು ಬಾವು ಸಮಸ್ಯೆ ಪರಿಹಾರಕ್ಕಾಗಿ ಸಾವಿರ ಸಾವಿರ ರೂಪಾಯಿಗಳನ್ನು ಖರ್ಚು ಮಾಡಿದವರೂ ಕೂಡ ದಂಟಕಲ್ಲಿಗೆ ಆಗಮಿಸಿ ಔಷಧಿ ಪಡೆದು ಹೋಗಿದ್ದಾರೆ. ಎಲ್ಲ ವೈದ್ಯ ಪದ್ಧತಿ ಪ್ರಯೋಗ ಮಾಡಿಯೂ, ಇನ್ನೇನೂ ಸಾಧ್ಯವಿಲ್ಲ ಎನ್ನುವಂತವರು ಕೂಡ ಬಂದು ಔಷಧಿ ಪಡೆದು ಹೋಗಿದ್ದಾರೆ. ಈ ಔಷಧಿಯಿಂದ ಕೆಚ್ಚಲು ಬಾವು ಸಂಪೂರ್ಣವಾಗಿ ಕಡಿಮೆಯಾದಾಗ ಮತ್ತೊಮ್ಮೆ ಬಂದು ಸಂತಸವನ್ನು ಹಂಚಿಕೊಂಡು ಹೋಗಿದ್ದಾರೆ.
ಶಿರಸಿ, ಸಿದ್ದಾಪುರ, ಯಲ್ಲಾಪುರ, ಸಾಗರ ಈ ಮುಂತಾದ ತಾಲೂಕುಗಳ ಜನರು ಇಂದಿಗೂ ಸುಬ್ರಾಯ ಹೆಗಡೆಯವರ ಬಳಿ ಬರುತ್ತಾರೆ. ಶಿರಸಿ, ಸಿದ್ದಾಪುರ ಸೇರಿದಂತೆ ಕೆಲವು ಕಡೆಗಳ ಪಶು ವೈದ್ಯರೂ ಕೂಡ ಸುಬ್ರಾಯ ಹೆಗಡೆ ಅವರು ನೀಡುವ ಔಷಧಿಯ ಕುರಿತು ಪಶುಪಾಲಕರಿಗೆ ತಿಳಿ ಹೇಳಿ ಔಷಧಿಗಾಗಿ ಕಳುಹಿಸಿದ ನಿದರ್ಶನಗಳಿವೆ. ಇತ್ತೀಚೆಗಷ್ಟೇ ಹೆಸರಾಂತ ವೈದ್ಯರೋರ್ವರು ಔಷಧಿಯ ಬಗ್ಗೆ ಕೇಳಿ, ದಂಟಕಲ್ಲಿಗೆ ಆಗಮಿಸಿ, ವನಸ್ಪತಿ ಸೊಪ್ಪುಗಳನ್ನು ಪಡೆದು, ಅಧ್ಯಯನಕ್ಕಾಗಿ ತೆರಳಿದ್ದಾರೆ ಎಂಬುದು ಸುಬ್ರಾಯ ಹೆಗಡೆ ಅವರ ಮಾತು.
ಸುಬ್ರಾಯ ಹೆಗಡೆಯವರು ವನಸ್ಪತಿ ಔಷಧಿಗೆ ಯಾವುದೇ ಛಾರ್ಜು ಮಾಡುವುದಿಲ್ಲ. ಅಲ್ಲದೇ ಇದು ಯಾವುದೇ ಅಡ್ಡ ಪರಿಣಾಮಗಳನ್ನೂ ಬೀರುವುದಿಲ್ಲ. ಹಾಲೂ ಕೂಡ ಅಲ್ಪ ಪ್ರಮಾಣದಲ್ಲಿ ಹೆಚ್ಚುತ್ತದೆ. ಕೆಚ್ಚಲು ಬಾವಿನ ಗಡ್ಡೆಗಳು ಸಂಪೂರ್ಣ ಕರಗುವುದರ ಜೊತೆಗೆ ಮೊಲೆಗಳು ಹಾಳಾಗುವುದಿಲ್ಲ ಎನ್ನುವುದು ಔಷಧಿ ಬಳಕೆ ಮಾಡಿದವರ ಅಂಬೋಣ.

ಸುಬ್ರಾಯ ಹೆಗಡೆಯವರನ್ನು 08389-295430, 9901343504 ಈ ದೂರವಾಣಿಯ ಮೂಲಕ ಸಂಪರ್ಕಿಸಬಹುದಾಗಿದೆ. ಇಲ್ಲವಾದಲ್ಲಿ ಶಿರಸಿಯಿಂದ ಸಿದ್ದಾಪುರ ರಸ್ತೆಯಲ್ಲಿ 14 ಕಿಮಿ ದೂರವಿರುವ ದಂಟಕಲ್ ಗೆ ತೆರಳಿ ಖುದ್ದಾಗಿ ಭೇಟಿ ಮಾಡಬಹುದಾಗಿದೆ. ವಾರದಲ್ಲಿ ಯಾವುದೇ ದಿನ ಹಾಗೂ ದಿನದ ಯಾವುದೇ ಸಮಯದಲ್ಲಿಯೂ ವನಸ್ಪತಿಗಳನ್ನು ಪಡೆದುಕೊಳ್ಳಬಹುದು. (ಭೇಟಿ ಮಾಡುವವರು ಮೊದಲೇ ದೂರವಾಣಿಯ ಮೂಲಕ ತಿಳಿಸಿದ್ದರೆ ಉತ್ತಮ.)

ಭೇಟಿಗೆ ಹೋಗುವ ಬಗೆ : ಶಿರಸಿ-ಸಿದ್ದಾಪುರ ಮಾರ್ಗದಲ್ಲಿ 12 ಕಿಮಿ ಪ್ರಯಾಣ ಮಾಡಿ-ಅಡಕಳ್ಳಿ ಕ್ರಾಸ್ ಬಳಿ ಬಲಕ್ಕೆ ತಿರುಗಿ 2 ಕಿಮಿ ಪ್ರಯಾಣಿಸಿ ಅಡಕಳ್ಳಿ ಶಾಲೆಯಿಂದ ಎಡಕ್ಕೆ ಹೊರಳಿ ದಂಟಕಲ್ ತಲುಪಬಹುದು. ಸಿದ್ದಾಪುರದಿಂದ ಬರುವವರು ಕಾನಸೂರಿನ ನಂತರ ಅಡಕಳ್ಳಿ ಕ್ರಾಸ್ ತಲುಪಿ ಅಲ್ಲಿಂದ ಸೀದಾ ಬರಬಹುದು.

5 comments:

  1. 9611687974, 9880190642, 9164318804
    Alternative no.

    ReplyDelete
  2. Sir ನಿಮ್ಮ ನಂಬರ ಕೊಡಿ pleas

    ReplyDelete
  3. ನಾನೂ ಈ ಓಷಧಿಯನ್ನ ನಮ್ಮ ಮನೆಯ ಆಕಳಿಗೆ ತಂದಿದ್ದೇನೆ ಒಳ್ಳೆಯ ಔಷಧಿ,, ಪರಿಣಾಮ ಉತ್ತಮವಾಗಿದೆ ಅಲ್ಲದೆ ಇವರು ಆಕಳ ಫುಡ್ ಕೂಡ ಒದಗಿಸುತ್ತಾರೆ, ಅದೂ ಪರಿಣಾಮಕಾರಿಯಾಗಿದೆ

    ReplyDelete