Sunday, December 2, 2018

ಮಕ್ಕಳೆಂಬ ಆಸ್ತಿ ಜೋಪಾನ ಮಾಡುವುದು ಹೇಗೆ?


ಮಕ್ಕಳು ಮನೆಯ ಆಸ್ತಿ. ದೇಶದ ಸಂಪತ್ತು. ಮಕ್ಕಳಿರಲವ್ವ ಮನೆತುಂಬ ಎಂಬುದು ಹಿರಿಯರ ಆಡುನುಡಿ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬುದು ನಮ್ಮ ನಾಡನ್ನಾಳಿದ ನಾಯಕರುಗಳ ಉದ್ಘೋಷ. ಈಗೀಗ ಮನೆಗಳಲ್ಲಿ ಒಂದೆರಡೇ ಮಕ್ಕಳು. ಮುದ್ದು, ಬೇಕು ಬೇಕೆನ್ನಿಸಿದ್ದನ್ನು ಕೊಡಿಸುವುದು ಸೇರಿದಂತೆ ಹಲವು ಕಾರಣಗಳಿಂದ ಮಕ್ಕಳು ಹಾಳಾಗುತ್ತಿದ್ದಾರೆ.
ಮೊಬೈಲ್ ಮೇನಿಯಾ ಜಗತ್ತು ಮಕ್ಕಳ ಪಾಲಿಗೆ ಮಾರಕವಾಗುತ್ತಿದೆ. ಮಕ್ಕಳ ಕ್ರಿಯಾಶೀಲತೆಯನ್ನು, ಚೈತನ್ಯವನ್ನು ಕೊಂದು ಹಾಕುವ ಕೆಲಸ ಮಾಡುತ್ತಿದೆ. ಮೊಬೈಲ್ ಹಿಡಿದು ಕೂರುತ್ತಿರುವ ಮಕ್ಕಳು ಮನೆಗುಬ್ಬಿಯಾಗುತ್ತಿದ್ದಾರೆ. ಬುದ್ಧಿವಂತರ ವಸ್ತು, ಬುದ್ಧಿವಂತಿಕೆಯ ಸಾಧನವಾದ ಮೊಬೈಲ್ ಮಕ್ಕಳನ್ನು ಬುದ್ದುಗಳನ್ನಾಗಿ ಮಾಡುತ್ತಿದೆ. ಮೊಬೈಲ್ ನಲ್ಲಿಯೇ ಸಿಗುವ ಹಲವಾರು ಆಪ್ ಗಳು, ವೆಬ್ ಸೈಟ್ ಗಳಿಂದಾಗಿ ಮಕ್ಕಳು ಬಹುಬೇಗ ಅಡ್ಡದಾರಿಯನ್ನು ಹಿಡಿಯುತ್ತಿದ್ದಾರೆ. ಬ್ಲೂ ವೇಲ್ ನಂತಹ ಮಾರಕ ಮೊಬೈಲ್ ಗೇಮ್ ಗಳಿಗೆ ಬಲಿಯಾಗಿ ಜೀವ-ಜೀವನ ಎರಡನ್ನೂ ಕಳೆದುಕೊಂಡವರ ನಿದರ್ಶನ ಸಾಕಷ್ಟಿದೆ. ಮೊಬೈಲ್ ಗೇಮ್ ಗಳು ಮಕ್ಕಳ ಬುದ್ಧಿಶಕ್ತಿಯನ್ನು ತಿಂದು ಹಾಕುತ್ತಿದೆ. ಮೊಬೈಲ್ ಇಲ್ಲದೇ ಮಕ್ಕಳ ಜಗತ್ತೇ ಇಲ್ಲ ಎನ್ನುವ ಹಂತ ತಲುಪಿದ್ದೇವೆ. ಹಲವು ತಂದೆ-ತಾಯಿಯರು ಮಕ್ಕಳನ್ನು ಬೆಳೆಸುವಲ್ಲಿ ಎಡವುತ್ತಿದ್ದಾರೆ. ಮಕ್ಕಳ ಕಡೆಗೆ ಗಮನ ಹರಿಸದೇ ಮಕ್ಕಳ ಬದುಕು ಹಾಳಾಗಲು ಕಾರಣರಾಗುತ್ತಿದ್ದಾರೆ. ಮೊಬೈಲ್ ಹೊರತಾದ ಜಗತ್ತು ಇತ್ತು, ಇದೆ ಹಾಗೂ ಮುಂದೆಯೂ ಕೂಡ ಇದ್ದೇ ಇರುತ್ತದೆ ಎನ್ನುವುದನ್ನು ಅರ್ಥ ಮಾಡಿಸುವಲ್ಲಿ ವಿಫಲರಾಗುತ್ತಿದ್ದಾರೆ. ತಂದೆ-ತಾಯಿಗಳೇ ಬದಲಾಗಿ. ಮೊಬೈಲ್ ಬದಿಗಿಟ್ಟು ಮಕ್ಕಳಿಗೆ ಹೊಸ ಲೋಕ ತೋರಿಸಿ.

ಮಕ್ಕಳನ್ನು ಕಾಡು ಸುತ್ತಿಸಿ:
ಕಾಡೆಂಬುದು ಬೆರಗಿನ, ಬೆಡಗಿನ ಲೋಕ. ಕಾಡೆಂಬುದು ಕುತೂಹಲದ ಜಗತ್ತು. ಇಂತಹ ಕಾಡನ್ನು ಸುತ್ತಿಸುವ ಅಗತ್ಯ ತ್ವರಿತವಾಗಿ ಆಗಬೇಕಿದೆ. ಮಕ್ಕಳನ್ನು ಕಾಡಿನಲ್ಲಿ ಸುತ್ತಿಸಿ, ಕಾಡಿನಲ್ಲಿನ ಚಿಕ್ಕ ಕೀಟದಿಂದ ಹಿಡಿದು, ದೊಡ್ಡ ಮರಗಳ ವರೆಗೆ, ಮೃಗ, ಖಗ, ಖೇಚರ ಸಂಪತ್ತನ್ನು ಅನಾವರಣಗೊಳಿಸುವ ಅಗತ್ಯವಿದೆ. ಕಾಡಿನ ಕಡೆಗೆ ಇರುವ ಭಯ ಹೋಗಲಾಡಿಸಿ ಕುತೂಹಲವನ್ನು ಹುಟ್ಟು ಹಾಕುವ ತ್ವರಿತ ಕಾರ್ಯ ಆಗಬೇಕಾಗಿದೆ. ಕಾಡು ರಕ್ಷಿಸುವ ಕುರಿತು ಮಕ್ಕಳಿಗೆ ಪಾಟ ಮಾಡಬೇಕಾಗಿದೆ. ಮಕ್ಕಳನ್ನು ಯಾವುದೋ ಸ್ವಿಮ್ಮಿಂಗ್ ಫೂಲ್ ಗಳಲ್ಲಿ ಈಜಲು ಬಿಡದೇ, ನದಿ, ಹಳ್ಳ, ತೊರೆ, ಕೆರೆಗಳಲ್ಲಿ ಈಜಲು ಬಿಡಬೇಕು. ಸರಿಯಾಗಿ ಈಜು ಕಲಿಯುವ ವರೆಗೂ ಮಾರ್ಗದರ್ಶನ ಮಾಡಬೇಕು. ಯಾವುದೇ ಪ್ರವಾಹಕ್ಕೂ ಹೆದರದೇ ಈಜಿ ದಡ ಸೇರುವ ದೃಢತೆಯನ್ನು ಮಕ್ಕಳ ಮನಸ್ಸಿನಲ್ಲಿ ಹುಟ್ಟು ಹಾಕಬೇಕಿದೆ.
ಯಾವುದೋ ಸುಂದರ ಜಲಪಾತವನ್ನೋ, ಬೆಟ್ಟವನ್ನೋ ಹತ್ತಿಸಿ, ಪ್ರಕೃತಿಯ ಕಡೆಗೆ ಒಲವು ಮೂಡಿಸುವ ಕಾರ್ಯವನ್ನು ತಂದದೆ-ತಾಯಿಗಳಲ್ಲದೇ ಬೇರೆಯವರು ಮಾಡುವುದು ಅಸಾಧ್ಯ. ಯಾವುದೋ ಹಣ್ಣಿನ ಮರವನ್ನು ಹತ್ತಿಸಿ, ಮಕ್ಕಳಿಂದಲೆ ಅದರ ಹಣ್ಣುಗಳನ್ನು ಕೊಯ್ಯಿಸಿದರೆ ಆಗ ಮಕ್ಕಳಿಗೆ ಸಿಗುವ ಆನಂದವಿದೆಯಲ್ಲ ಅದನ್ನು ಬಣ್ಣಿಸುವುದು ಅಸಾಧ್ಯ.

ಮೊಬೈಲ್ ತ್ಯಜಿಸಿ, ಆಟ ಆಡಿಸಿ
ಮಕ್ಕಳ ಕೈಯಿಂದ ಮೊಬೈಲ್ ಕೆಳಗಿರಿಸಿ ಬೇರೆ ಬೇರೆ ಆಟವನ್ನು ಆಡಿಸುವ ಅಗತ್ಯವಿದೆ. ಇದರಿಂದಾಗಿ ದೈಹಿಕವಾಗಿ ವ್ಯಾಯಾಮ ಸಸಿಗುತ್ತದೆ. ಮನಸ್ಸಿಗೆ ಚೈತನ್ಯವೂ ಸಿಗಬಹುದಾಗಿದೆ. ಕ್ರಿಕೆಟ್ ಇರಲಿ ಅಥವಾ ಇನ್ಯಾವುದೇ ದೈಹಿಕ ಕ್ರೀಡೆಗಳಿರಲಿ, ಮಕ್ಕಳು ಆಡಲಿ, ಇತರ ಮಕ್ಕಳ ಜತೆ ಸೇರಿ ಬೆರೆಯಲಿ. ತಂಡೆ ಮಾಡಲಿ. ಮಕ್ಕಳನ್ನು ಗದರ ಬೇಡಿ. ಬಯ್ಯಲು ಮುಂದಾಗಬೇಡಿ. ಮಕ್ಕಳ ಬಗ್ಗೆ ಸುಮ್ಮನೇ ಸಿಟ್ಟಾಗಬೇಡಿ. ಅವರನ್ನು ಆಟದ ಅಂಗಳದಲ್ಲಿ ಅವರ ಪಾಡಿಗೆ ಬಿಡಿ.

ಕಥೆ ಹೇಳಿ, ಸಂಸ್ಕೃತಿ ಕಲಿಸಿ
ಹಿಂದೆ ಅಜ್ಜ-ಅಜ್ಜಿಯರು ಕತೆ ಹೇಳುತ್ತಿದ್ದರೆ ಮಕ್ಕಳು ಕುತೂಹಲದಿಂದ, ಬಿಟ್ಟ ಕಣ್ಣು ಬಿಟ್ಟಂತೆ ಕೇಳುತ್ತಿದ್ದರು. ಕ್ರಮೇಣ ತಂದೆ ತಾಯಿಯರು ಮಕ್ಕಳನ್ನು ಅಜ್ಜ ಅಜ್ಜಿಯರಿಂದ ದೂರ ಮಾಡಿದರು. ಮಕ್ಕಳಿಗೆ ಕಥಾ ಲೋಕದ ಕೊಂಡಿಯೂ ಕಳಚಿತು. ಮಕ್ಕಳಿಗೆ ತ್ತೊಮ್ಮೆ ಕಥೆ ಹೇಳುವ ಅಗತ್ಯವಿದೆ. ಅಜ್ಜ-ಅಜ್ಜಿಯರ ಜತೆ ಮಕ್ಕಳನ್ನು ಬಿಟ್ಟು, ಅವರು ಹೇಳುವ ಪಂಚತಂತ್ರದ, ಕಾಕಣ್ಣ-ಗುಬ್ಬಣ್ಣನ, ಪುಣ್ಯಕೋಟಿಯ ಕಥೆಗಳನ್ನು ಕೇಳುವಂತೆ ಮಾಡುವ ಅಗತ್ಯವಿದೆ. ಹೀಗೆ ಮಾಡಿದಾಗ ಮಾತ್ರ ಮಕ್ಕಳು ಸಂಸ್ಕೃತಯ ಕಡೆಗೆ ಪ್ರೀತಿ ಬೆಳೆಸಿಕೊಳ್ಳುತ್ತಾರೆ. ಪುಣ್ಯಕೋಟಿಯಂತಹ ಕಥೆಗಳನ್ನು ಮನಮುಟ್ಟುವಂತೆ ಮಕ್ಕಳಿಗೆ ಹೇಳಿದರೆ ಅದನ್ನು ಕೇಳುವ ಮಕ್ಕಳು ಮುಂದೆ ದೊಡ್ಡವರಾದ ಮೇಲೆ ಸಮಾಜಘಾತಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಾರ. ಅಲ್ಲದೇ ಒಳ್ಳೆಯ ರೂಪದಲ್ಲಿ ತನ್ನ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುತ್ತಾನೆ. ತದೇಕಚಿತ್ತದಿಂದ ಕತೆ ಕೇಳುವ ಮಕ್ಕಳು ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸುತ್ತಾರೆ. ಏಕಾಗ್ರತೆಯನ್ನುಸಾಧಿಸುತ್ತಾರೆ.

ಪಾಲಕರೇ, ಎಚ್ಚೆತ್ತುಕೊಳ್ಳಿ. ನಿಮ್ಮ ಹಲವು ಧಾವಂತ, ಹಳವಂಡದ ನಡುವೆಯೂ ಮಕ್ಕಳಿಗಾಗಿ ಸಮಯ ಮೀಸಲಿಡಿ. ಅವರಿ ಪ್ರಕೃತಿಯನ್ನು ಪರಿಚಯಿಸಿ, ಕಥೆ ಹೇಳಿ, ಹೊರ ಜಗತ್ತಿನಲ್ಲಿ ಬೆರೆಯುವಂತೆ ಮಾಡಿ. ಸಮಾಜದ ಪರಿಚಯವನ್ನು ಮಾಡಿಕೊಡಿ. ಮೊಬೈಲ್ ಲೋಕದ ಹೊರತಾಗಿ ಬೇರೆಯ ವಿಸ್ಮಯ ಜಗತ್ತಿದೆ ಎನ್ನುವುದನ್ನು ತಿಳಿ ಹೇಳಿ. ಇದೆಲ್ಲವನ್ನು ಅರಿತುಕೊಳ್ಳುವ ಮಕ್ಕಳು ಸಮಾಜದಲ್ಲಿ ಉತ್ತಮ ಸಾಧನೆ ಮಾಡಬಲ್ಲ. ಮೊಬೈಲ್ ಜಗತ್ತಿನಲ್ಲಿ ಬದುಕು ಹಾಳುಮಾಡಿಕೊಳ್ಳುವ ಮಕ್ಕಳಿಗೆ ತಂದೆ-ತಾಯಿಯರು ದಾರಿ ದೀಪವಾಗಲಿ.