Tuesday, August 21, 2018

ನನ್ನ ನೆರಳಂತಿದ್ದವಳು... ನನಗೆ ನೆರಳಾದಳು..!!


ಪ್ರತಿಯೊಬ್ಬರೂ ಅಕ್ಕರೆಯಿಂದ, ಪ್ರೀತಿಯಿಂದ ಬಯಸುವ ಒಂದೇ ಶಬ್ದ ತಂಗಿ. ಹಲವರ ಪಾಲಿಗೆ ತಂಗಿ ಎಂಬುದು ಅದೃಷ್ಟ. ಅಕ್ಕಂದಿರನ್ನು ಹೊಂದಿರುವವರೂ ತಮಗೊಬ್ಬ ತಂಗಿ ಇರಬೇಕಿತ್ತು ಎಂದುಕೊಳ್ಳುತ್ತಾರೆ. ತಂಗಿ ಹಲವರ ಪಾಲಿಗೆ ಸರ್ವಸ್ವ.
ನನಗೂ ಅಷ್ಟೇ, ತಂಗಿ ನನ್ನ ಪಾಲಿಗೆ ಒಲವಿನ ಖನಿಯೇ. ನನಗಿಂತ ನಾಲ್ಕೈದು ವರ್ಷ ಚಿಕ್ಕವಳು. ಪ್ರೀತಿಯಲ್ಲಿ, ಜವಾಬ್ದಾರಿಯಲ್ಲಿ ನನಗಿಂತ ಹತ್ತಾರು ವರ್ಷ ದೊಡ್ಡವಳು.
ನನಗೆ ನಾಲ್ಕೈದು ವರ್ಷವಾಗಿದ್ದಾಗ ಶಿರಸಿಯ ಜಿ. ಎಂ. ಹೆಗಡೆ ಆಸ್ಪತ್ರೆಯಲ್ಲಿ ಅಮ್ಮನ ಮಗ್ಗುಲಲ್ಲಿ ಪಿಳಿ ಪಿಳಿ ಕಣ್ಣು ಬಿಡುತ್ತಿದ್ದ ಚಿಕ್ಕ ತಂಗಿಯನ್ನು ಮೊಟ್ಟಮೊದಲ ಬಾರಿ ನೋಡಿ ಸುಮ್ಮನೆ ನಕ್ಕಿದ್ದೆ. ಮೃದು ಮೈ ಮುಟ್ಟಿ ಹೆದರಿದ್ದೆ. ನಂತರ ಆ ದಿನವೇ ಹೆರಿಗೆ ವಾರ್ಡಿನ ಚೇರುಗಳ ಅಡಿಯಲ್ಲಿ ರಾತ್ರಿ ಮಲಗಿ ನಿದ್ರಿಸಿದ್ದೆ. ರಾತ್ರಿ ದೊಡ್ಡದಾಗಿ ತಂಗಿ ಅತ್ತಾಗ ಬೆದರಿ ಎಚ್ಚರಾಗಿದ್ದೆ. ಇದು ತಂಗಿಯ ಕುರಿತು ನನ್ನ ಮೊದಲ ನೆನಪು.
ಬಾಲ್ಯದಲ್ಲಿ ನನಗೂ ತಂಗಿಯ ನಡುವೆಯೂ ಅದೆಷ್ಟೋ ಭಾವನೆಗಳು. ಆಕೆ ಚಿಕ್ಕಂದಿನಲ್ಲಿ ಸಿಕ್ಕಾಪಟ್ಟೆ ದಪ್ಪ ಇದ್ದಳು. ನಾನು ಇಂದಿನಂತೆಯೇ ಅಂದೂ ಬಡಕಲು. ಆಕೆಯನ್ನು ಎತ್ತಿಕೊಳ್ಳಲು ಹೋಗಿ, ಒಜ್ಜೆಯಾಗಿ ಕೈಬಿಟ್ಟುಬಿಡುವಂತಾಗುತ್ತಿತ್ತು. `ತಮಾ ನಿನ್ನತ್ರ ಆಗ್ತಿಲ್ಯೋ...' ಎಂದು ಅಮ್ಮ ಆಗಾಗ ಗದರಿದ್ದು ಇನ್ನೂ ಕಿವಿಯಲ್ಲಿ ಗುಂಯೆನ್ನುತ್ತಲೇ ಇದೆ.
ಕೊಲ್ಲೂರಿನಲ್ಲಿ ತಣ್ಣಗೆ, ಶಾಂತವಾಗಿ ಹರಿಯುತ್ತಿರುವ ನದಿಯ ನೆನಪಿಗೆ ನನ್ನ ತಂಗಿಗೆ ಅಮ್ಮ-ಅಪ್ಪ ಸೌಪರ್ಣಿಕಾ ಎಂದು ಹೆಸರನ್ನಿಟ್ಟರೂ, ಉಳಿದವರ ಬಾಯಿ ತಿರುಗದೇ ನಂತರದಲ್ಲಿ ಅದು ಸುಪರ್ಣ ಆದರೂ ಚಿಕ್ಕಂದಿನಲ್ಲಿ ನಾನು ವಿಜಯಾ ಎಂದು ಹೆಸರಿಟ್ಟಿದ್ದೆ. ನನ್ನ ಹೆಸರು ವಿನಯ, ತಂಗಿಯ ಹೆಸರು ವಿಜಯ.. ಒಳ್ಳೆಯ ಪ್ರಾಸ ಎಂದುಕೊಂಡಿದ್ದೆ. ಚಿಕ್ಕಂದಿನಲ್ಲಿ ಆಟದ ರೀತಿಯಲ್ಲಿ ಆ ಹೆಸರನ್ನು ಕರೆದಿದ್ದೆ. ಆದರೆ ದೊಡ್ಡವನಾದ ನಂತರ ಯಾವತ್ತಿಗೂ ಆಕೆಯನ್ನು ವಿಜಯ ಎಂದು ಕರೆದಿಲ್ಲ. ವಿಜಯ ಎಂದರೂ ಆಕೆಗೆ ಅದು ತನ್ನ ಹೆಸರು ಎನ್ನುವುದೂ ಗೊತ್ತಿಲ್ಲವೇನೋ ಬಿಡಿ.

ಚಿಕ್ಕಂದಿನಲ್ಲೆಲ್ಲ ನನಗೆ ಅದೆಷ್ಟೋ ಸಂಗತಿಗಳಲ್ಲಿ ತಂಗಿ ಕಾಂಪಿಟೇಟರ್. ನಾನು ಯಾವುದೇ ಕೆಲಸ ಮಾಡಲಿ, ಕಿಲಾಡಿಯಲ್ಲಿ ತೊಡಗಲಿ ಅಲ್ಲೆಲ್ಲ ತಂಗಿ ಇರುತ್ತಿದ್ದಳು. ಕೆಲವೊಮ್ಮೆ ನನಗಿಂತ ಹೆಚ್ಚಿನ ಕಿಲಾಡಿಗಳನ್ನು ಅವಳೇ ಮಾಡುವ ಮೂಲಕ ನನ್ನ ಕ್ರೆಡಿಟ್ ಗಳನ್ನೆಲ್ಲ ಅವಳೇ ತೆಗೆದುಕೊಳ್ಳುತ್ತಿದ್ದಳು. ಆಗೆಲ್ಲ ನನಗೆ ಭಯಂಕರ ಸಿಟ್ಟು ಬರುತ್ತಿತ್ತು ಬಿಡಿ.
ಆಗಾಗ ನಾವು ಯುದ್ಧ ಮಾಡಿಕೊಳ್ಳುತ್ತಿದ್ದೆವು. ಅಡುಗೆ ಮನೆಗೆ ಹೋಗಿ ಎರಡು ದೊಡ್ಡ ದೊಡ್ಡ ಸೌಟುಗಳನ್ನು ತೆಗೆದುಕೊಂಡು ಕಟಾರಿ ವೀರರಂತೆ ಕಾದಾಟ ಮಾಡುತ್ತಿದ್ದೆವು. ಈ ಕಾಳಗ ಎಷ್ಟು ಬೀಕರವಾಗಿರುತ್ತಿತ್ತೆಂದರೆ, ಯಾವುದಾದರೂ ಒಂದು ಸೌಟು ಮುರಿಯುವುದರೊಂದಿಗೆ ಮುಕ್ತಾಯವಾಗುತ್ತಿತ್ತು. ಹೀಗೆ ಸೌಟು ಮುರಿದವರು ಸೋಲುತ್ತಿದ್ದರು. ಈಗಲೂ ಆಗೀಗ ನಾಆವು ಮುರಿದ ಸೌಟುಗಳು ಕಾಣಸಿಗುತ್ತಿರುತ್ತವೆ ಬಿಡಿ. ಇದನ್ನು ನೋಡಿದ ನಮ್ಮೂರಿಗರು ಆಗ ನಮ್ಮ ಬಳಿ `ಅಣ್ಣ ತಂಗಿ ಹೆಂಗಿರಬೇಕು.. ಕಚ್ಚೋ ಕುನ್ನಿಯ ಹಂಗಿರಬೇಕು' ಎಂದು ಛೇಡಿಸುತ್ತಿದ್ದುದು ಕಣ್ಣಿಗೆ ಕಟ್ಟಿದಂತಿದೆ.
ಬಾಲ್ಯದಿಂದಲೇ ಆಕೆ ನನಗೆ ನೆರಳಂತೆ ಬೆಳೆದಳು. ಹಲವು ಸಾರಿ ನನಗೂ ನೆರಳಾದಳು. ನನಗೆ ಹೋಲಿಕೆ ಮಾಡಿದರೆ ಆಕೆ ಸ್ಪಲ್ಪ ಫಾಸ್ಟು. ಎದುರಿನಲ್ಲಿ ನಾವು ಬೈದುಕೊಂಡು, ಹೊಡೆದಾಡಿಕೊಂಡು ಮಾಡುತ್ತಿದ್ದರೂ ನಮ್ಮೊಳಗಿನ ಬಂಧ, ಒಲವು ಯಾವತ್ತೂ ಕಡಿಮೆಯಾಗಲಿಲ್ಲ. ಅಮ್ಮನ ಬಳಿ ಪುಕಾರು ಹೇಳುತ್ತಿದ್ದೆವಾದರೂ ಕೊನೆಯಲ್ಲಿ ನಾವಿಬ್ಬರೂ ಯಾವಾಗಲೋ ಒಂದಾಗಿಬಿಡುತ್ತಿದ್ದೆವು. ನಾನು ಆಕೆಗೆ ಕಲ್ಲು ಹೊಡೆದು ಆಕೆ ಎಚ್ಚರು ತಪ್ಪಿ ಬಿದ್ದಿದ್ದು, ಆ ನಂತರ ಸಿಕ್ಕಾಪಟ್ಟೆ ನನ್ನನ್ನು ದ್ವೇಷ ಮಾಡಿದ್ದು, ಕಣ್ಣಾ ಮುಚ್ಚಾಲೆ ಆಡುವಾಗ ನಾನು ಮೊಣಕಾಲನ್ನು ಕಿತ್ತುಕೊಂಡು ಬಂದಾಗ ರಕ್ತ ನಿಲ್ಲಲಿ ಎಂದು ಕೆಜಿಗಟ್ಟಲೆ ಸಕ್ಕರೆಯನ್ನು ಬಾಯಿಗೆ ಹಾಕಿದ್ದು, ದೋಸೆ ಎರೆಯುತ್ತಿದ್ದ ತಂಗಿ ಯಾವುದೋ ಕಾರಣಕ್ಕೆ ಬಿಸಿಯಾಗಿದ್ದ ಕಾವಲಿ ಸೌಟನ್ನು ತಂದು ನನ್ನ ಕಾಲಮೇಲೆ ಇಟ್ಟಿದ್ದು, ನಾನು ಉರಿಯಿಂದ ಕೂಗ್ಯಾಡಿದಾಗ ಆಕೆಯೇ ನಂತರ ಔಷಧಿ ಹಚ್ಚಿದ್ದು.. ಇದ್ಯಾವುದೂ ಮರೆಯುವುದಿಲ್ಲ ಬಿಡಿ. ಹಲವು ಸಂದರ್ಭಗಳು ನಗು ತಂದರೆ ಇನ್ನು ಹಲವು ಘಟನೆಗಳು ನೆನಪಾದಾಗ ನಮಗರಿವಿಲ್ಲದಂತೆಯೇ ಕಣ್ಣಂಚಿನಲ್ಲಿ ನೀರನ್ನು ತಂದುಬಿಡುತ್ತವೆ.
ಅಪ್ಪನಿಗೆ ತಂಗಿ ಎಂದರೆ ಸಿಕ್ಕಾಪಟ್ಟೆ ಪ್ರೀತಿ ಇತ್ತು. ಇದು ನನಗೆ ತಂಗಿಯ ಮೇಲೆ ಬಹಳ ಹೊಟ್ಟೆಕಿಚ್ಚು ತರಲು ಕಾರಣವಾಗಿತ್ತು. ಶಾಲೆಯಲ್ಲಿ ಮಾರ್ಕ್ಸ್ ಕಾರ್ಡ್ ತಂದಾಗಲೆಲ್ಲ ನನಗೆ ಹತ್ತಾರು ಹೊಡೆತಗಳನ್ನು ಹೊಡೆಯುತ್ತಿದ್ದ ಅಪ್ಪ ಫಸ್ಟ್ ರ್ಯಾಂಕ್ ಬಾ ಎನ್ನುತ್ತಿದ್ದ. ಆದರೆ ತಂಗಿಯ ಬಳಿ ಮಾತ್ರ ಏನನ್ನೂ ಹೇಳದೇ ಸಹಿ ಹಾಕಿ ಕಳುಹಿಸುತ್ತಿದ್ದ. ನಾನು ಏನೇ ಇಂಡೆಂಟ್ ಹಾಕಿದರೂ ಅದು ಬರುತ್ತಿರಲಿಲ್ಲ. ತಂಗಿ ಏನೇ ಬೇಕು ಎಂದರೂ ಅದು ಬರುತ್ತಿತ್ತು. ಇದು ಆ ದಿನಗಳಲ್ಲಿ ನನಗೆ ಸಾಕಷ್ಟು ಬೇಜಾರಿಗೂ ಕಾರಣವಾಗಿತ್ತು. ಮೊನ್ನೆ ಮೊನ್ನೆ ಇದೇ ವಿಷಯ ಮಾತನಾಡಿದಾಗ ತಂಗಿಯೇ ನನ್ನ ಬಳಿ `ಅಣಾ.. ನೀನು ಆ ದಿನಗಳಲ್ಲಿ ಫಸ್ಟ್ ಬರುವ ಸಾಮರ್ಥ್ಯ ಹೊಂದಿದ್ದೆ. ಹಂಗಾಗಿ ಅಪ್ಪನಿಂಗೆ ಹೊಡೆದು ಫಸ್ಟ್ ಬಾ ಎನ್ನುತ್ತಿದ್ದ. ನಾನು ಏನೇ ಜಪ್ಪಯ್ಯ ಅಂದರೂ ಫಸ್ಟು ಬರುವುದಿಲ್ಲ ಅಂತ ಗೊತ್ತಿತ್ತು.. ಹಂಗಾಗಿ ನನಗೆ ಮಾಫಿ ಸಿಗುತ್ತಿತ್ತು..' ಎಂದಿದ್ದಳು. ನಂತರ ಇಬ್ಬರೂ ನಕ್ಕಿದ್ದೆವು.
ಬಾಲ್ಯದ ಜಗಳಗಳು, ಹೊಡೆದಾಟಗಳು, ಮುನಿಸು, ಪುಕಾರು, ಕೋಪ, ಚಾಡಿಗಳೆಲ್ಲ ಬೆಳೆ ಬೆಳೆದಂತೆಲ್ಲ ಕಾಣೆಯಾಗತೊಡಗಿ ಯಾವುದೋ ಮಾಯೆಯಲ್ಲಿ ನಮ್ಮ ನಡುವಿನ ಬಂಧಗಳು ಗಟ್ಟಿಗೊಳ್ಳತೊಡಗಿದ್ದವು. ಈಕೆ ನನ್ನ ತಂಗಿ, ಇಂವ ನನ್ನ ಅಣ್ಣ ಎನ್ನುವ ಭಾವನೆ ಯಾವಾಗ ಗಟ್ಟಿಯಾಗಿ ಸೆಲೆಯೊಡೆಯಿತೋ ಗೊತ್ತಿಲ್ಲ. ಹೈಸ್ಕೂಲಿಗೆ ನಾನು ನನ್ನ ದೊಡ್ಡಪ್ಪನ ಮನೆಗೆ ಹೋದೆ. ಆ ನಂತರದಲ್ಲಿ ಆಕೆ ನನ್ನನ್ನು ಎಷ್ಟು ಮಿಸ್ ಮಾಡಿಕೊಂಡಳೋ, ನಾನೂ ಆಕೆಯನ್ನುಸಾಕಷ್ಟು ಮಿಸ್ ಮಾಡಿಕೊಂಡೆ ಬಿಡಿ.
ಹೈಸ್ಕೂಲು ಹಾಗೂ ಪಿಯುಸಿಯ ದಿನಗಳು ನನಗೆ ಹಾಗೂ ತಂಗಿಗೆ ಕಷ್ಟದ ದಿನಗಳು. ಈ ಎರಡೂ ಸಂದರ್ಭಗಳಲ್ಲಿ ನಾಆನು ಬೇರೆಯವರ ಮನೆಯಲ್ಲಿ ಉಳಿದುಕೊಂಡೇ ಓದಿದ ಕಾರಣ ಮನೆಯ ಕಷ್ಟಗಳು ನನಗೆ ಅರಿವಾಗಲೇ ಇಲ್ಲ. ಅದೇ ತಂಗಿ ಮನೆಯಲ್ಲಿಯೇ ಇದ್ದ ಕಾರಣ ಎಲ್ಲವೂ ಆಕೆಗೆ ಗೊತ್ತಿತ್ತು. ಹೈಸ್ಕೂಲಿನ ಮೂರೂ ವರ್ಷ ಅಪ್ಪ ನನ್ನನ್ನು ಶಾಲಾ ಪ್ರವಾಸಕ್ಕೆ ಕಳಿಸಲಿಲ್ಲ ಎಂದು ಮುನಿಸಿಕೊಂಡಿದ್ದೆ. ಆದರೆ ಅಪ್ಪನ ಕೈಲಿ ದುಡ್ಡಿರಲಿಲ್ಲ, ಅಷ್ಟೇಕೆ ಮನೆಯಲ್ಲಿ ಅಕ್ಕಿಯನ್ನು ತರಲಿಕ್ಕೂ ದುಡ್ಡಿರಲಿಲ್ಲ ಎನ್ನುವ ಸಂಗತಿ ಅಪ್ಪ ಅಮ್ಮನ ಬಿಟ್ಟರೆ ತಂಗಿಗೆ ಮಾತ್ರ ಗೊತ್ತಿದ್ದಿದ್ದು. ಆಕೆಯನ್ನು ಅಪ್ಪ ಹೈಸ್ಕೂಲು ಓದಿಸಲೂ ಕಳಿಸಲಾರೆ ಎಂದು ಹೇಳುತ್ತಿದ್ದ. ಅಮ್ಮ ಅದ್ಹೇಗೋ ದುಡ್ಡು ಹೊಂದಿಸಿ ತಂದಿದ್ದಳು. ಹೈಸ್ಕೂಲಿಗೇನೋ ಅಡ್ಮಿಷನ್ ಆಗಿತ್ತು. ಆದರೆ ಹಾಕಿಕೊಂಡು ಹೋಗಲು ಶಾಲಾ ಬಟ್ಟೆಗಳೇ ಇರಲಿಲ್ಲ. ಕೊನೆಗೆ ನನ್ನದೇ ಓರಿಗೆಯ ನಮ್ಮೂರಿನ ಇನ್ನೊಬ್ಬಳಿಂದ ಎರಡು ಜತೆ ಆಕೆ ಹಾಕಿ ಬಿಟ್ಟ ಯುನಿಫಾರ್ಮನ್ನು ತಂದುಕೊಂಡು ಅದನ್ನೇ ಶಾಲೆಗೆ ಹಾಕಿಕೊಂಡು ಹೋಗಿದ್ದಳು. ಆ ಯುನಿಫಾರ್ಮು ಹರಿದ್ದು ನಮ್ಮ ಗಮನಕ್ಕೆ ಬಂದಿರಲಿಲ್ಲ. ಪಾಪ.. ತಂಗಿಯೆ ಅದಕ್ಕೆ ಪಿನ್ ಚುಚ್ಚಿಕೊಂಡು ಹೋಗಿದ್ದು, ಅದೆಷ್ಟೋ ದಿನಗಳ ನಂತರ ನಮ್ಮ ಗಮನಕ್ಕೆ ಬಂದಿತ್ತು.
ತಂಗಿ ಎಸ್ಸೆಸ್ಸೆಲ್ಸಿಯಲ್ಲಿ ಫೇಲಾಗಿದ್ದಳು. ಆಗ ಅಪ್ಪನೂ, ನಾನೂ ಸಿಕ್ಕಾಪಟ್ಟೆ ಬೈದಿದ್ದೆವು. ಮರು ಪರೀಕ್ಷೆಯಲ್ಲಿ ಪಾಸು ಮಾಡಿದ್ದ ಆಕೆಗೆ ಪಿಯುಸಿಗೆ ಹೋಗಲು ಸಾಧ್ಯವೇ ಆಗಿರಲಿಲ್ಲ. ಕೊನೆಗೆ ಎಕ್ಸಟರ್ನಲ್ ಆಗಿ ಕಟ್ಟಿ ಒಂದೇ ವರ್ಷಕ್ಕೆ ಪಿಯು ಪಾಸು ಮಾಡಿದ್ದ ತಂಗಿ, ಎಸ್ಸೆಲ್ಸಿಯಲ್ಲಿ ಫೇಲಾದರೇನಂತೆ, ಪಿಯುಸಿಯಲ್ಲಿ ಒಂದೇ ವರ್ಷಕ್ಕೆ ಪಾಸು ಮಾಡಿದ್ದೇನೆ ನೋಡಿ ಎಂದು ಬೀಗಿದ್ದಳು. ನಂತರ ಆಕೆ ಕೂಡ ನನ್ನಂತೆ ಇಂಗ್ಲೀಷ್ ಮೇಜರ್, ಜರ್ನಲಿಸಂ ಮಾಡಿದಳು. ಯಾಕೆ ಇದನ್ನೇ ಆಯ್ಕೆ ಮಾಡಿಕೊಂಡೆ ಎಂದರೆ, ಅಣ್ಣ ಮಾಡಿದ್ದ. ಅಂವ ಮಾಡಿದ್ದು ಚೊಲೋ ಇರ್ತು ಅಂತ.. ಹಂಗಾಗಿ ನಾನೂ ಮಾಡಿದ್ದು.. ಎಂದಿದ್ದಳು.
ಬೆಳೆದು ದೊಡ್ಡವರಾದ ನಮ್ಮ ಭಾವನೆಗಳೂ ಬಲಿತವು. ತಂಗಿ ಯಾವುದೋ ಮಾಯೆಯಲ್ಲಿ ಜವಾಬ್ದಾರಿಯುತ ಅಕ್ಕನಂತೆ ವವರ್ತನೆಗೆ ತೊಡಗಿದ್ದಳು. ನನ್ನ ಚಿಕ್ಕ ಚಿಕ್ಕ ತಪ್ಪುಗಳಿಗೆ ಅಪ್ಪ-ಅಮ್ಮ ಬಯ್ಯದೇ ಇದ್ದರೂ ತಂಗಿಯಂತೂ ಬಯ್ಯುತ್ತಿದ್ದಳು. ಮಗ ಎಂಬ ಕಾರಣಕ್ಕೆ ನನ್ನ ತಪ್ಪುಗಳನ್ನು ಅಪ್ಪ-ಅಮ್ಮ ಖಂಡಿಸದಿದ್ದರೂ, ನೇರವಾಗಿ ಹೇಳಿ ಅದನ್ನು ಖಂಡಿಸುತ್ತಿದ್ದ ಸಂದರ್ಭದಲ್ಲೆಲ್ಲ, ನಾನು ಚಿಕ್ಕಂದಿನಿಂದ ನೋಡಿದ ತಂಗಿ ಇವಳೇನಾ ಎನ್ನುವ ಅನುಮಾನವೂ ಬರುತ್ತಿತ್ತು. ನನ್ನ ಮೊದಲ ಕವಿತೆ ತರಂಗದಲ್ಲಿ ಪ್ರಕಟಗೊಂಡಾಗ ನನಗಿಂತ ಹೆಚ್ಚು ಸಂಭ್ರಮಿಸಿದ್ದು ಆಕೆಯೇ. ಆ ಸಂದರ್ಭಗಳಲ್ಲೆಲ್ಲ ಆಕೆ ತನ್ನ ಸಂಗತಿಗಳನ್ನೆಲ್ಲ ಹೇಳಿಕೊಳ್ಳುತ್ತಿದ್ದುದು ನನ್ನ ಬಳಿ ಮಾತ್ರವೇ.
ಯಾರೋ ಒಬ್ಬಾತ ಆಕೆಗೆ ಹೈಸ್ಕೂಲು, ಕಾಲೇಜಿಗೆ ಹೋಗುವಾಗ ತ್ರಾಸು ಕೊಡ್ತಾನೆ ಎಂದಿದ್ದು, ಒಂದಿನ ಅಡ್ಡ ಹಾಕಿ ಆತನ ಬಳಿ ನಾನು ಗಲಾಟೆ ಮಾಡಿದ್ದು, ಆಕೆಯ ಬಳಿ ಯಾರೋ ಒಬ್ಬ ಪ್ರೇಮ ನಿವೇದನೆ ಮಾಡಿಕೊಂಡಿದ್ದು ಎಲ್ಲವನ್ನೂ ಹೇಳಿದ್ದಳು. ಕೊನೆಗೆ ಆಕೆ ಕೂಡ ಲವ್ ಮಾಡಿದಾಗ ಅದನ್ನೂ ನನ್ನ ಬಳಿ ಹೇಳಿದ್ದಲ್ಲದೇ, ಆತನನ್ನು ನನಗೆ ಪರಿಚಯಿಸಿದ್ದಳು. ನಾನು ಆತನ ಬಳಿ ಎರಡು ತಾಸು ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿದ್ದೆ.
ಕಾಲೇಜು ದಿನಗಳಲ್ಲಿ ನನಗೆ ಯಾರಾದರೂ ಹುಡುಗಿ ಇಷ್ಟವಾದರೆ ಅದನ್ನು ಮೊದಲು ತಂಗಿಯ ಬಳಿಯೇ ಹೇಳುತ್ತಿದ್ದೆ ಬಿಡಿ. ಕಾಲೇಜು ಬದುಕು ಮುಗಿದ ನಂತರ ನಾನು ಉದ್ಯೋಗದ ನಿಮಿತ್ತ ಬೆಂಗಳೂರಿಗೆ ಬಂದೆ. ಎರಡೋ-ಮೂರೋ ವರ್ಷದ ನಂತರ ಅನಾರೋಗ್ಯದಿಂದಾಗಿ ಬೆಂಗಳೂರು ಬಿಟ್ಟು ಬಂದಾಗ ನನ್ನನ್ನು ಅಕ್ಕರೆಯಿಂದ ಕಂಡಿದ್ದು ತಂಗಿಯೇ. ಅದೆಷ್ಟೋ ಸಂದರ್ಭಗಳಲ್ಲಿ ನಾನು ಡಿಪ್ರೆಷನ್ ನಿಂದ ಬಳಲಿ, ಬದುಕಿನ ಕುರಿತು ಆಸೆಯನ್ನೇ ಬಿಟ್ಟು ಮಲಗಿದ್ದಾಗ ಅಮ್ಮ-ತಂಗಿಯೇ ನನ್ನಲ್ಲಿ ಕಳೆದು ಹೋಗಿದ್ದ ಆತ್ಮವಿಶ್ವಾಸವನ್ನು ಮರಳಿ ತುಂಬಿಕೊಟ್ಟಿದ್ದು.
ತದನಂತರದಲ್ಲಿ ಆಕೆಯ ಮದುವೆ ಆಯಿತು. ಇದೀಗ ಆಕೆಗೆ ಇಬ್ಬರು ಮುದ್ದಾದ ಮಕ್ಕಳು. ಇದಾದ ಮೇಲೂ ನಮ್ಮ ನಡುವಿನ ಪ್ರೀತಿ, ನಂಬಿಕೆಗಳು ಬದಲಾಗಿಲ್ಲ ಬಿಡಿ. ಈಗಲೂ ಆಗಿಗ ನಾವು ಸಣ್ಣ ಪುಟ್ಟ ಕಾರಣಕ್ಕೆ ಬೈದುಕೊಳ್ಳುತ್ತೇವೆ. ಜಗಳ ಮಾಡಿಕೊಳ್ಳುತ್ತೇವೆ. ಅದಾದ ಅರೆಘಳಿಗೆಯಲ್ಲೇ ಪ್ರೀತಿಯಿಂದ ಇರುತ್ತೇವೆ. ಇದ್ಯಾವುದೂ ಮರೆಯುವುದು ಅಸಾಧ್ಯ ಬಿಡಿ.
ಇಂತಹ ತಂಗಿ... ಮುಂದಿನ ಜನ್ಮ ಜನ್ಮಾಂತರಗಳಿಗೂ ನನಗೇ ಸಿಗಲಿ.. ಆಕೆಯ ಒಲವಿನ ಋಣ ಭಾರ ನನ್ನ ಮೇಲಿದೆ.

ಎನಿ ವೇ.. ಮತ್ತೊಮ್ಮೆ ರಕ್ಷಾ ಬಂಧನ ಬಂದಿದೆ...
ರಕ್ಷಾ ಬಂಧನದ ಶುಭಾಷಯಗಳು...

ತಂಗಿ... ಮಿಸ್ ಯೂ..

2 comments:

  1. ಬರವಣಿಗೆ ಚೆನ್ನಾಗಿದೆ.ಓದಿಸಿಕೊಂಡು ಹೋಗುವ ಗುಣವಿದೆ.

    ReplyDelete