ನಮ್ಮ ಹಿರಿಯರ ತ್ಯಾಗ, ಬಲಿದಾನ, ಶ್ರಮದ ಪ್ರತಿಫಲವಾಗಿ ಭಾರತಕ್ಕೆ 1947ರಲ್ಲೇ ಸ್ವಾತಂತ್ರ್ಯ ಸಿಕ್ಕಿದೆ. ನಮಗೆ ಸಿಕ್ಕ ಸ್ವಾತಂತ್ರ್ಯ ಸಂಭ್ರಮಕ್ಕೆ 72 ವಸಂತಗಳೇ ಕಳೆದಿವೆ. ಸ್ವಾತಂತ್ರ್ಯವೇನೋ ಸಿಕ್ಕಾಯಿತು. ಆದರೆ ಇಂದಿನ ಯುವ ಶಕ್ತಿ ಅದನ್ನು ಸಂಪೂರ್ಣ ಬಳಕೆ ಮಾಡಿಕೊಳ್ಳುತ್ತಿದೆಯಾ? ಹಿರಿಯರ ತ್ಯಾಗ, ಬಲಿದಾನ, ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಯುವ ಜನತೆ ನೀಡುತ್ತಿದೆಯಾ? ನೂರಾರು ವರ್ಷಗಳ ಹೋರಾಟದಿಂದಾಗಿ ಸಿಕ್ಕ ಸ್ವಾತಂತ್ರ್ಯ ದಿನಂಪ್ರತಿ ಕಳೆದು ಹೋಗುತ್ತಿದೆಯಾ? ಹೌದು. ದೈನಂದಿನ ಹಲವು ಅನಗತ್ಯ ಕಾರ್ಯಗಳಿಂದಲೇ ಸಿಕ್ಕ ಸ್ವಾತಂತ್ರ್ಯ ಕಳೆದು ಹೋಗುತ್ತಿದೆ. ಸ್ವಾತಂತ್ರ್ಯದ ಶ್ರಮವನ್ನು ಯುವ ಜನತೆ ಹೇಗೆಲ್ಲ ಹಾಳು ಮಾಡುತ್ತಿದೆ? ಆಧುನಿಕ ಸ್ವಾತಂತ್ರ ಹರಣದ ಐದು ಅಂಶಗಳು ಇಲ್ಲಿದೆ ನೋಡಿ
೧) ಇಂದಿನ ಯುವ ಜನತೆ ಮೊಬೈಲ್ ದಾಸರಾಗಿ ಬಿಟ್ಟಿದ್ದಾಾರೆ. ಒಂದೇ ಒಂದು ಕ್ಷಣವೂ ಕೂಡ ಮೊಬೈಲ್ ಬಿಟ್ಟಿರಲಾರರು ಎನ್ನುವಂತಹ ಸಮಯ ಬಂದಿದೆ. ಸಾಮಾಜಿಕ ಜಾಲತಾಣಗಳು ಯುವಕರ ಸ್ವಾತಂತ್ರ್ಯವನ್ನು ಬಲಿ ತೆಗೆದುಕೊಂಡಿದೆ. ಯಾವಾಗ, ಯಾರ ಕೈಲಿ ನೋಡಿದರೂ ಮೊಬೈಲ್ ಮಾತ್ರ ಎನ್ನುವಂತಾಗಿದೆ. ಅಂಗೈಲಿ ಅರಮನೆಯಂತಿರುವ ಮೊಬೈಲ್ ಸದ್ದಿಲ್ಲದೇ ಸ್ವಾತಂತ್ರವನ್ನು ಕಿತ್ತುಕೊಂಡಿದೆ.
೨) ಹಣವಿಲ್ಲದೇ ಯಾವುದೂ ಇಲ್ಲ. ಬದುಕಿಗೆ ಹಣವೇ ಮುಖ್ಯ ಎನ್ನುವಂತಹ ವಾತಾವರಣ ನಿರ್ಮಾಣವಾಗಿದೆ. ಹಣಕ್ಕಾಗಿ ಏನು ಬೇಕಾದರೂ ಮಾಡುತ್ತೇವೆ ಎನ್ನುವಂತಹ ಸಂದರ್ಭ ಎದುರಾಗಿದೆ. ಹಣ ಸಿಗುತ್ತದೆ ಎಂದಾದರೆ ಎಲ್ಲವನ್ನೂ ಕಳೆದುಕೊಳ್ಳಲು ಸಿದ್ಧ ಎನ್ನುವಂತಾಗಿದೆ. ಹಣವೂ ಸ್ವಾತಂತ್ರಹರಣ ಮಾಡಿದೆ.
೩) ಅವಕಾಶಗಳು ಯಾರಿಗೆ ಬೇಕಿಲ್ಲ ಹೇಳೀ? ಸುಂದರ ಬದುಕು ಕಟ್ಟಿಕೊಳ್ಳಲು ಅವಕಾಶ ಬಹು ಅತ್ಯಗತ್ಯ. ಅವಕಾಶ ತಾನಾಗಿಯೇ ಬರಲಿ ಎಂದು ಯಾರೊಬ್ಬರೂ ಕಾದು ಕುಳಿತುಕೊಳ್ಳಲು ಸಿದ್ಧವಿಲ್ಲ. ಅವಕಾಶಕ್ಕಾಗಿ ತಮ್ಮ ಸ್ವಾಭಿಮಾನವನ್ನೇ ಅಡವಿಟ್ಟು ಬದುಕುವಂತಹ ಪ್ರಸಂಗ ಎದುರಾಗಿದೆ. ಅವಕಾಶ ಸಿಗುತ್ತದೆ ಎಂದಾದರೆ ಸ್ವಾಭಿಮಾನ ಹಾಳಾಗಲಿ ಬಿಡಿ ಎನ್ನುವವರು ಹೆಚ್ಚುತ್ತಿದ್ದಾಾರೆ. ಸ್ವಾಾಭಿಮಾನ ಕಳೆದುಕೊಂಡರೆ ಸ್ವಾತಂತ್ರ ಕಳೆದುಕೊಂಡಂತೇ.
೪) ಬದುಕುವುದಕ್ಕಾಾಗಿ ಉದ್ಯೋಗ ಬೇಕೇಬೇಕು. ಉದ್ಯೋಗ ಮಾಡುವ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳ ಮರ್ಜಿಗೆ ಸಿಲುಕಲೇಬೇಕು ಎನ್ನುವಂತಾಗಿದೆ. ಸ್ವತಂತ್ರನಡೆಗೆ ಅವಕಾಶವೇ ಇಲ್ಲ ಎನ್ನುವಂತಾಗಿದೆ. ಹಿರಿಯ ಅಧಿಕಾರಿಗಳು ಹೇಳಿದಂತೆ ಮಾಡಬೇಕು, ಹೇಳಿದಂತೆ ಕೇಳಬೇಕು. ಅವರು ಹೇಳಿದ್ದು ಬಿಟ್ಟು ಸ್ವತಂತ್ರ ಆಲೋಚನೆ ಕೈಗೊಂಡರೆ ವೃತ್ತಿಗೆ ಧಕ್ಕೆ ಬರಬಹುದು. ಈ ಮೂಲಕ ಸ್ವಾತಂತ್ರ ಸದ್ದಿಲ್ಲದೇ ಕಳೆದುಹೋಗುತ್ತಿದೆ.
೫) ಸಾಮಾಜಿಕ ಜಾಲತಾಣಗಳ ಪರಿಣಾಮದಿಂದ ಹೋರಾಟದ ಮನೋಭಾವವನ್ನೇ ಯುವ ಜನತೆ ಕಳೆದುಕೊಳ್ಳುತ್ತಿದೆ. ಯಾವುದೇ ಹೋರಾಟ ಕೈಗೊಳ್ಳಬೇಕಾದಲ್ಲಿ ಅದು ಸಾಮಾಜಿಕ ಜಾಲತಾಣಗಳಿಗೆ ಮಾತ್ರ ಸೀಮಿತ ಎಂಬಂತಾಗಿದೆ. ಲೈಕ್ ಒತ್ತಿ, ಶೇರ್ ಮಾಡುವ ಮೂಲಕ ಹೋರಾಟಕ್ಕೆ, ಹರತಾಳಕ್ಕೆ ತಮ್ಮ ಕೊಡುಗೆ ಮುಗಿಯಿತು ಎಂಬಂತೆ ವರ್ತಿಸುತ್ತಿದ್ದೇವೆ. ಸಾಮಾಜಿಕ ಜಾಲತಾಣಗಳ ಮೂಲಕ ನಮ್ಮ ಸ್ವಾತಂತ್ರವನ್ನು ಇನ್ನೊಮ್ಮೆ ನಾವು ವಿದೇಶಗಳ ಕೈಗೆ ಕೊಟ್ಟು ಬಿಟ್ಟಿದ್ದೇವೆ. ಅದರಿಂದ ಹೊರಬರಲು ಸಾಧ್ಯವಾಗದೇ ಒದ್ದಾಡುತ್ತಿದ್ದೇವೆ.
No comments:
Post a Comment