ಇಬ್ಬರು ತುಂಬು ಗರ್ಭಿಣಿಯರು. ಅವರ ಜತೆಯಲ್ಲಿ ಸೇನಾಪತಿಗಳು, ಕಾಲಾಳುಗಳಂತೆ ನಾಲ್ಕೈದು ಹೆಂಗಳೆಯರು, ಹರೆಯಕ್ಕೆ ಬಂದ ಹುಡುಗಿಯರು.
ಮನೆಯ ಹಿಂಭಾಗದಿಂದಲೇ ಆರಂಭವಾಗುವ ದಟ್ಟ ಕಾಡು. ಸೂರ್ಯ ಕಷ್ಟಪಟ್ಟು ಪ್ರಯತ್ನಿಸಿದರೂ ತನ್ನ ಕಿರಣಗಳನ್ನು ಭೂಮಿಗೆ ಸೋಕಲು ಕಷ್ಟಪಡುವತಹ ಕಾಡು. ಬರಿ ಕಾಡಾದರೆ ಹೇಗೋ ಸರಿ, ದೊಡ್ಡ ಧರೆ.. ಮಧ್ಯದಲ್ಲೊಂದು ಕಚ್ಚಾ ಮಣ್ಣು ರಸ್ತೆ.
ಈ ಗರ್ಭಿಣಿಯರು ಹಾಗೂ ಹೆಂಗಳೆಯರ ಪಡೆ ಮಬ್ಬು ಬೆಳಕಿನಲ್ಲಿ ಲಾಟೀನು ಹಿಡಿದು ಈ ಮನೆಯ ಹಿಂಭಾಗದ ರಸ್ತೆಯನ್ನು ದಾಟಿ ರಸ್ತೆಯಿಂದ ಬೆಟ್ಟ ಏರಲು ಏನಿಲ್ಲವೆಂದರೂ ೧೦-೧೫ ನಿಮಿಷ ಬೇಕೇಬೇಕು. ರಸ್ತೆಯನ್ನು ಸುಲಭವಾಗಿ ದಾಟಬಹುದಿತ್ತಾದರೂ ಹಿಂದಿನ ಬೆಟ್ಟವನ್ನು ಏರುವುದು ಸುಲಭವಿರಲಿಲ್ಲ ಬಿಡಿ. ಅನಾಮತ್ತು ೩೦-೩೫ ಅಡಿಯ ದಿಬ್ಬ ಏರಲೇಬೇಕು. ಹರೆಯದ ಹೆಂಗಳೆಯರು ಸುಲಭವಾಗಿ ಏರಬಲ್ಲರು ಆದರೆ ಗರ್ಭಿಣಿಯರು, ಅದಾಗಲೆ ದಿನ ತುಂಬಿ ಮಗುವನ್ನು ಹೆರಲು ದಿನ ನೋಡುತ್ತಿದ್ದವರು ಹೇಗೆ ತಾನೇ ಆ ದಿಬ್ಬವನ್ನು ಏರಿಯಾರು?
ಕೈಯಲ್ಲೊಂದು ನೀರಿನ ಚೊಂಬು ಹಿಡಿದು, ಇನ್ನೊಂದು ಕೈಯನ್ನು ಆಗಾಗ ಸೊಂಟಕ್ಕೆ ಒತ್ತಿಕೊಂಡೋ ಅಥವಾ ಪಕ್ಕದ ದಿಬ್ಬವನ್ನು ಆಸರೆಯಾಗಿ ಹಿಡಿದುಕೊಂಡೋ ಏದುಸಿರು ಬಿಡುತ್ತ ಹತ್ತುವಷ್ಟರಲ್ಲಿ ಜೀವ ಹೈರಾಣಾಗುತ್ತಿತ್ತು. ಅಬ್ಬಾ ಬೆಟ್ಟವನ್ನು ಹತ್ತಿದೆವಲ್ಲ ಎಂದು ಸಮಾಧಾನಪಡುವಂತಿಲ್ಲ. ಅಕ್ಕ ಪಕ್ಕದಲ್ಲಿದ್ದ ಗುರಿಗೆ ಮಟ್ಟಿಯನ್ನೋ, ಅಥವಾ ಇನ್ಯಾವುದೋ ಮಟ್ಟಿಯನ್ನೋ ಹುಡುಕಬೇಕಿತ್ತು. ಇಷ್ಟೆಲ್ಲ ಸಾಹಸ ಪಡಬೇಕಿದ್ದುದು ಬೇರೇನಕ್ಕೂ ಅಲ್ಲ.. ಅನಿವಾರ್ಯ ಶೌಚಕ್ಕಾಗಿ.
ಯಾವುದೋ ಮಟ್ಟಿ ಸಿಕ್ಕು ಅಲ್ಲಿ ಸೀರೆಯನ್ನೆತ್ತಿ ಆರಾಮವಾಗಿ ಕುಳಿತುಕೊಳ್ಳುವ ಹಾಗೆ ಇರಲಿಲ್ಲ ಬಿಡಿ. ಆ ಮಟ್ಟಿಯಲ್ಲಿ ಹಸಿರು ಹಾವೋ, ಕೇರೆ ಹಾವೋ ಅಥವಾ ಹಪ್ರೆ, ಕೊಳಕುಮಂಡಲ, ಕುದುರಬೆಳ್ಳನಂತಹ ಕೆಟ್ಟ ವಿಷಕಾರಿ ಹಾವೋ ತಕ್ಷಣ ಇಣುಕಿ ಹೌಹಾರುವಂತೆ ಮಾಡುತ್ತಿದ್ದವು. ಆಗ ಮಾಡುತ್ತಿದ್ದ ಅನಿವಾರ್ಯ ಕೆಲಸವನ್ನು ಅರ್ಧಕ್ಕೆ ಬಿಟ್ಟು ಓಡಿದ್ದ ದಿನಗಳೂ ಇದ್ದವು.
ಇನ್ನು ಮಳೆಗಾಲವಾದರಂತೂ ಜೀವ ಮತ್ತಷ್ಟು ಹೈರಾಣಾಗುತ್ತಿತ್ತು. ನಮ್ಮೂರಲ್ಲಿ ಈಗಲೂ ಉಂಬಳಗಳ ಕಾಟ ಜಾಸ್ತಿ. ಇನ್ನು ಆಗ ಕೇಳಬೇಕೆ. ಯಾವುದೋ ಮಾಆಯದಲ್ಲಿ ಯಾರಿಗೂ ತಿಳಿಯದಂತೇ ನಮ್ಮ ಅಂಗಾಂಗಗಳಿಗೆ ಅಂಟಿಕೊಂಡು ರಕ್ತ ಹೀರಿ ಡೊಣೆಯನಂತಾಗುತ್ತಿದ್ದ ಉಂಬಳಗಳು ಆ ದಿನಗಳಲ್ಲಿ ಆ ಹೆಂಗಳೆಯರಿಗೆ, ಗಭಿಣಿಯರಿಗೆ ಕೊಟ್ಟ ಕಾಟ ಅಷ್ಟಿಷ್ಟಲ್ಲ. ಕೈಕಾಲಿಗೆ ಕಚ್ಚಿದರೆ ಹೇಗೋ ತಡೆದುಕೊಳ್ಳಬಹುದು. ಆದರೆ ಬೇರೆ ಕಡೆಗಳಲ್ಲಿ ಕಚ್ಚಿದರೆ ಏನು ಗತಿ? ಆ ಹೆಂಗಳೆಯರು ಯಾವಾಗ ಎಲ್ಲಿ ಉಂಬಳಗಳು ಕಚ್ಚುತ್ತವೋ ಎನ್ನುವ ಆತಂಕದಲ್ಲಿಯೇ ತಮ್ಮ ದೈನಂದಿನ ಕಾರ್ಯಗಳನ್ನು ಮುಗಿಸುತ್ತಿದ್ದರು. ಇಷ್ಟರ ಜೊತೆ ಎಲ್ಲ ಕಾಡುಗಳಲ್ಲಿ ಇರುವಂತೆ ಆ ಕಾಡಿನಲ್ಲೂ ಅಸಂಖ್ಯಾತ ಸೊಳ್ಳೆಗಳ ಪಡೆ ರಕ್ತ ಹೀರಲು ಕಾಯುತ್ತಲೇ ಇತ್ತು ಬಿಡಿ.
ಚಳಿಗಾಲದ ಸಂದರ್ಭದಲ್ಲಿ ಇನ್ನೂ ಬಹುದೊಡ್ಡ ಆತಂಕಗಳು ಹೀಗೆ ಶೌಚಕ್ಕೆ ಹೋಗುವವರನ್ನು ಕಾಡುತ್ತಿದ್ದವು. ಚಳಿಗಾಲದ ಸಂದರ್ಭದಲ್ಲಿ, ಆಗ ತಾನೆ ಎಳೆಯ ಹುಲ್ಲುಗಳು ಎರಡೆಲೆ ಮೂಡಿಸಿ ತಮ್ಮ ಗಾತ್ರ ಹಿಗ್ಗಿಸುವ ಸಮಯದಲ್ಲಿ ಅವನ್ನು ಮೆಲ್ಲುವುದಕ್ಕಾಗಿ ಕಾಡೆಮ್ಮೆಗಳು, ಜಿಂಕೆಗಳು, ಕಡವೆಗಳ ಹಿಂಡು ದಟ್ಟ ಕಾಡಿನಿಂದಿಳಿದು ಬಯಲ ಕಡೆಗೋ, ನಮ್ಮ ಊರು ಕಾಣುವಷ್ಟು ಹತ್ತಿರಕ್ಕೋ ಆಗಮಿಸುತ್ತಿದ್ದವು. ಅವನ್ನು ಬೇಟೆಯಾಡಿ ಹೊಟ್ಟೆ ತುಂಬಿಸಿಕೊಳ್ಳುವ ಸಲುವಾಗಿ ಈ ವನ್ಯ ಮೃಗಗಳ ಬೆನ್ನು ಬೆನ್ನಿಗೆ ಹುಲಿಗಳೋ, ಸೀಳು ನಾಯಿಗಳೋ, ಗುರ್ಕೆಗಳೋ ಆಗಮಿಸುತ್ತಿದ್ದವು. ಕಾಡಿಗೆ ಶೌಚಕ್ಕಾಗಿ ಹೋದವರು ಯಾವಾಗ ಹುಲಿ ಬರುತ್ತದೋ, ಯಾವಾಗ ಬೆನ್ನ ಹಿಂದೆ ಸೀಳು ನಾಯಿ ನಿಂತು ಊಳಿಡುತ್ತದೋ, ಮತ್ಯಾವಾಗ ಮೈಮೇಲೆ ಕಾಡೆಮ್ಮೆಗಳೋ, ಜಿಂಕೆಗಳೋ ಜಿಗಿದು ಓಡುತ್ತವೆಯೋ ಎನ್ನುವ ದುಗುಡದಲ್ಲೇ ತಮ್ಮ ನಿತ್ಯಕಾರ್ಯವನ್ನು ಮುಗಿಸಬೇಕಿತ್ತು.
ಈ ನಿತ್ಯಕರ್ಮಕ್ಕೂ ಸಮಯಮಿತಿ ಇತ್ತು. ಇನ್ನೂ ಬೆಳಕು ಮೂಡದಿದ್ದ ಹೊತ್ತು ಅಂದರೆ ನಸುಕಿನಲ್ಲೇ ಹೋಗಬೇಕು. ನಸುಕಿನಲ್ಲೇ ತಮ್ಮ ಕಾರ್ಯ ಮುಗಿಸಬೇಕು. ನಸುಕಿನಲ್ಲಿ ಕಾರ್ಯ ಮಾಡದಿದ್ದರೆ ಸಂಜೆಯಾಗುವುದನ್ನೇ ಕಾಯಬೇಕಿತ್ತು. ನಮ್ಮೂರಿನಲ್ಲಿ ಆಗೆಲ್ಲ ಸೊಪ್ಪಿನ ಹೊರೆಯನ್ನು ತರುವ ರೂಢಿ. ಮುಂಜಾನೆ ನಾಲ್ಕಕ್ಕೆಲ್ಲ ನಮ್ಮೂರಿನ ಹೈದರು ಎದ್ದು ಕಾಡಿಗೆ ಹೋಗಿ ಯಾವುದೋ ದೈತ್ಯ ಮರವನ್ನು ಕಡಿದು, ಸೊಪ್ಪನ್ನು ಹೊರೆಯಾಗಿ ಕಟ್ಟಿಕೊಂಡು ಬಂದು ಕೊಟ್ಟಿಗೆಗೆ ತಂದು ಹಾಸುತ್ತಿದ್ದರು. ಶೌಚಕ್ಕಾಗಿ ಹೋದವರು ಮೊದಲು ಮಟ್ಟಿಯನ್ನು ನೋಡುತ್ತಿದ್ದಷ್ಟೇ ಪ್ರಮುಖವಾಗಿ ಮರಗಳ ತಲೆಯನ್ನೂ ನೋಡುತ್ತಿದ್ದರು. ಯಾವ ಮರದ ಮೇಲೆ ಯಾರು ಹತ್ತಿಕೊಂಡು ಸೊಪ್ಪು ಕಡಿಯುತ್ತಿದ್ದಾರೋ ಎಂದು ನೋಡಿಕೊಂಡು, ಅವರು ಹತ್ತಿರದಲ್ಲೇ ಇದ್ದರೆ ಅವರ ಕಣ್ಣಿಗೆ ಕಾಣಿಸದಂತೆ ದೂರ ಮರೆಯಲ್ಲಿ ತಮ್ಮ ನಿತ್ಯ ಕರ್ಮಕ್ಕಾಗಿ ಕುಳಿತುಕೊಳ್ಳುತ್ತಿದ್ದರು. ಭಯ, ಆತಂಕ, ಅವಮಾನ, ನಾಚಿಕೆ, ದುಗುಡಗಳ ಮಧ್ಯ ಈ ನಿತ್ಯಕಾರ್ಯ ನಡೆಯುತ್ತಿತ್ತು. ಇನ್ನು ಯಾರಿಗಾದರೂ ಅನಾರೋಗ್ಯವಾದ ಸಂದರ್ಭದಲ್ಲಿ ಬೇಧಿ ಶುರುವಾಯಿತೋ ಅವರ ಪಾಡು ಯಾರಿಗೂ ಬೇಡ.
ಈ ಶೌಚ ಕಾರ್ಯದ ಸಂದರ್ಭದಲ್ಲಿ ದಿನ ನಿತ್ಯದ ಆಗು ಹೋಗುಗಳು, ಅತ್ತೆ-ಸೊಸೆ ಮುನಿಸು, ಚಿನ್ನದ ದರ, ಕಾಸಿನ ಸರದ ವಿಷಯಗಳು, ತಮ್ಮ-ಮಗನಿಗೋ ಮಗಳಿಗೋ ಕಾಡಿದ ಚಿಕ್ಕ ಪುಟ್ಟ ಕಾಯಿಲೆ ಹೀಗೆ ಅಸಂಖ್ಯಾತ ಹೆಂಗಳೆಯರ ಸುದ್ದಿಗಳು ವಿನಿಮಯವಾಗುತ್ತಿದ್ದವು. ನಿತ್ಯ ಕರ್ಮದ ಸಮಯ ಸುದ್ದಿ ಪ್ರಸಾರದ ಸಂದರ್ಭವಾಗಿ ಬದಲಾಗುತ್ತಿದ್ದುದೂ ಇದೆ. ಆ ದಿನಗಳಲ್ಲಿ ನಮ್ಮ ಮನೆಗಳಿಂದ ಬೆಟ್ಟದ ಕಡೆಗೆ ನೋಡಿದರೆ ಬೆಟ್ಟದ ಕಾನನದ ನಡುವೆ ಸಾಲಾಗಿ ಲಾಟೀನು ಬೆಳಗುವುದು ಕಾಣುತ್ತಿತ್ತಂತೆ.
ಹೀಗೆ ಶೌಚಾಲಯಕ್ಕಾಗಿ ಕಷ್ಟಪಟ್ಟು ಕಾಡಿನಿಂದೊಡಗೂಡಿದ ಗುಡ್ಡವನ್ನು ಏರುತ್ತಿದ್ದ ಇಬ್ಬರು ಗರ್ಭಿಣಿ ಹೆಗಸರಲ್ಲಿ ಒಬ್ಬಾಕೆ ನನ್ನ ಅಮ್ಮ. ಇನ್ನೊಬ್ಬಾಕೆ ನನ್ನ ಚಿಕ್ಕಮ್ಮ. ಇದು ೧೯೯೦ರ ದಶಕದ ಪೂವಾರ್ಧದಲ್ಲಿ ನಡೆದಿದ್ದ ಇಂತಹದ್ದೊಂದು ಸಂಗತಿಯನ್ನು ಅಮ್ಮ ಆಗೊಮ್ಮೆ ಈಗೊಮ್ಮೆ ಹೇಳುತ್ತಲೇ ಇದ್ದಳಾದರೂ ನಾನು ಈ ಕುರಿತು ಹೆಚ್ಚಿಗೆ ತಲೆ ಕೆಡಿಸಿಕೊಂಡಿರಲಿಲ್ಲ. ಚಿಕ್ಕಂದಿನಲ್ಲಿ ಅಂದರೆ ನನಗೆ ಮೂರೋ ನಾಲ್ಕೋ ವರ್ಷ ವಯಸ್ಸಾದ ಸಂದರ್ಭದಲ್ಲಿ ನಾನೂ ಹೀಗೆ ಶೌಚಕ್ಕಾಗಿ ಗುಡ್ಡ ಹತ್ತಿದವನೇ. ಒಂದೆರಡು ಸಾರಿ ನನಗೆ ಬೇಧಿ ಶುರುವಾದಾಗೆಲ್ಲ ಅಪ್ಪನನ್ನೋ, ಅಮ್ಮನನ್ನೋ ಕರೆದುಕೊಂಡು ಗುಡ್ಡದ ಕಡೆಗೆ ಓಡಿದ್ದೆಲ್ಲ ಅಸ್ಪಷ್ಟವಾಗಿ ನೆನಪಿದೆ. ನಡು ನಡುವೆ ಜಾರಿ ಬಿದ್ದಿದ್ದೂ ಕೂಡ ಚಿತ್ತ ಭಿತ್ತಿಯ ಮೇಲೆ ಅಚ್ಚಳಿಯದೇ ಉಳಿದಿದೆ. ಆಗೀಗ ಅವೆಲ್ಲ ನೆನಪಗೆ ಬರುತ್ತಲೇ ಇರುತ್ತವೆ.
ನಮ್ಮೂರಿನಲ್ಲಿ ಗಂಡಸರು ಆ ದಿನಗಳಲ್ಲಿ ಅಘನಾಶಿನಿ ನದಿ ತೀರವನ್ನೋ ಅಥವಾ ಇನ್ಯಾವುದೋ ನದಿಯ ಮೂಲಗಳನ್ನೋ ಹುಡುಕಿ ಹೋಗುತ್ತಿದ್ದರು. ಗಂಡಸರಿಗೆ ಶೌಚಕ್ಕೆ ಇಂತದ್ದೇ ಮಯ ಬೇಕು ಎಂಬುದು ಇರಲಿಲ್ಲವಲ್ಲ. ಹಾಗಾಗಿ ದಿನದ ಯಾವುದೇ ಸಮಯದಲ್ಲಿಯೂ ಅವರು ಎಲ್ಲಿ ಬೇಕಾದರೂ ಹೋಗಿ ತಮ್ಮ ನಿತ್ಯಕರ್ಮ ಮುಗಿಸಿ ಬರುತ್ತಿದ್ದರು. ಆದರೆ ಹೆಂಗಳೆಯರ ಪಾಡು ಯಾರಿಗೆ ಗೊತ್ತಾಗಬೇಕು ಹೇಳಿ.
ಅಮ್ಮ ಹಾಗೂ ಚಿಕ್ಕಮ್ಮ ಇಬ್ಬರೂ ದಿನ ತುಂಬಿದ ಬಸುರಿಯರು ಎಂದೆನಲ್ಲ.., ಇವರ ಪೈಕಿ ಅಮ್ಮನ ತವರಿನಲ್ಲಿ ಆಗ ಶೌಚಾಲಗಳಿರಲಿಲ್ಲ. ಅಲ್ಲಿಯೂ ಬಯಲನ್ನೇ ಆಶ್ರಯಿಸಿ ಇರಬೇಕಿತ್ತು. ಹಾಗಾಗಿ ಅಮ್ಮ ತನ್ನ ಗಂಡನ ಮನೆಯಲ್ಲಿ ಅಡ್ಜೆಸ್ಟ್ ಮಾಡಿಕೊಂಡಿರಬೇಕು ಬಿಡಿ. ಆದರೆ ಚಿಕ್ಕಮ್ಮ ಹಾಗಲ್ಲ, ಆ ದಿನಗಳಲ್ಲಿ ಮುಂದುವರಿದ ಊರುಗಳಲ್ಲೊಂದರಿಂದ ಬಂದಾಕೆ. ಆಕೆಗೆ ಹೊಂದಿಕೊಳ್ಳು ಕಷ್ಟವೇ ಆಗಿತ್ತಂತೆ. ಅದು ಬಿಡಿ. ಅಮ್ಮ ನಾಲ್ಕೈದು ವರ್ಷಗಳ ಕಾಲ ಬಯಲು ಶೌಚದ ಫಲಾನುಭವಿಯಾಗಿದ್ದರೆ, ಚಿಕ್ಕಮ್ಮನೂ ಬಹುತೇಕ ಒಂದೆರಡು ವರ್ಷ ಇದರ ಫಲಾನುಭವಿಯಾಗಿದ್ದಳು.
ಇಂತಹ ಬಯಲು ಶೌಚದ ವ್ಯವಸ್ಥೆಗೆ ಕೊನೆಗೂ ಒಂದು ದಿನ ನಮ್ಮೂರಲ್ಲಿ ಪೂರ್ಣವಿರಾಮ ಬಿದ್ದಿತ್ತು. ಅದ್ಯಾರು ಹೇಳಿದರೋ, ನನ್ನ ಪಕ್ಕದ ಮನೆಯ ಅಜ್ಜನಿಗೆ ಹೆಂಗಳೆಯರು ಪಡುತ್ತಿದ್ದ ಪಾಡು ಅರ್ಥವಾಗಿತ್ತು. ದಿನನಿತ್ಯ ಅವರು ಪಡುತ್ತಿದ್ದ ಬವಣೆ ಅರಿವಿಗೆ ಬಂದಿತ್ತು. ನನ್ನ ಪಕ್ಕದ ಮನೆಯ ಅಜ್ಜ, ನನ್ನ ಅಜ್ಜನ ಬಳಿ ಬಂದು ಶೌಚಾಲಯ ಕಟ್ಟಿಸುವ ಪ್ರಸ್ತಾಪವನ್ನು ಇಟ್ಟಿದ್ದ. ಮೊದ ಮೊದಲಿಗೆ ನನ್ನ ಅಜ್ಜ ಶೌಚಾಲಯ ನಿರ್ಮಾಣದ ಕುರಿತು ನಿರಾಸಕ್ತಿ ತೋರಿದ್ದರೂ ಕೊನೆಗೊಮ್ಮೆ ಒಪ್ಪಿಕೊಂಡಿದ್ದ. ಪಕ್ಕದ ಮನೆಯ ಅಜ್ಜ ತನ್ನದೇ ಜಾಗದಲ್ಲಿ ಎರಡು ಶೌಚಾಲಯ ನಿರ್ಮಾಣಕ್ಕೆ ಅಡಿಗಲ್ಲನ್ನೂ ಹಾಕಿದ್ದ. ಒಂದು ನಮ್ಮ ಮನೆಗೆ, ಇನ್ನೊಂದು ಆ ಅಜ್ಜನ ಮನೆಯ ಬಳಕೆಗೆ. ಕೊನೆಗೊಂದು ದಿನ ನಮ್ಮೂರಲ್ಲಿ ಶೌಚಾಲಯ ನಿರ್ಮಾಣಗೊಂಡು ಆಧುನಿಕತೆಗೆ ತೆರೆದುಕೊಂಡಿತ್ತು. ಬಯಲು ಶೌಚವೆಂಬುದು ಸಂಪೂರ್ಣವಾಗಿ ಕೊನೆಗೊಂಡಿತ್ತು. ನಮ್ಮೂರಿಗರ ಬವಣೆಗೆ ಅದರಲ್ಲೂ ಮುಖ್ಯವಾಗಿ ನಮ್ಮೂರ ಹೆಂಗಳೆಯರ ಪಡಿಪಾಟಲಿಗೆ ಪೂರ್ಣವಿರಾಮ ಬಿದ್ದಿತ್ತು.
ಇಷ್ಟೆಲ್ಲ ಆದರೂ ಆ ದಿನಗಳು ನೆನಪಾಗುತ್ತಿರುತ್ತವೆ. ಶೌಚಕ್ಕೆ ಕುಳಿತ ಹೆಂಗಳೆಯರ ಮೇಲೆ ಹುಲಿ ದಾಳಿ ಮಾಡಿದ್ದರೆ? ಚಿರತೆ ಹೊತ್ತೊಯ್ದಿದ್ದರೆ? ಕಚ್ಚಬಾರದಂತಹ ಜಾಗಗಳಲ್ಲೆಲ್ಲ ಉಂಬಳಗಳು ಕಚ್ಚಿದ್ದರೆ? ಅಸಂಖ್ಯ ಸೊಳ್ಳೆಗಳ ಹಿಂಡಿನಿಂದಾಗಿ ಮಲೆರಿಯಾ, ಡೆಂಗ್ಯೂಗಳಂತಹ ಮಾರಕ ರೋಗಗಳು ಆವರಿಸಿದ್ದರೆ? ಯಾವುದೋ ವಿಷಕಾರಿ ಹಾವುಗಳು ಕಚ್ಚಿದ್ದರೆ? ಅದು ಹೋಗಲಿ, ಏನೋ ಅಪಾಯ ಕಂಡು ಬಂದು ಹೆದರಿದ ಬಸುರಿಯರು ಓಡಿ ಹೋಗಲು ಯತ್ನಿಸಿ ಜಾರಿ ಬಿದ್ದಿದ್ದರೆ? ಬೆಚ್ಚುವ ಬಸುರಿಯರಿಗೆ ಬಾಳಂತಿ ಸನ್ನಿಯೋ ಅಥವಾ ಇನ್ಯಾವುದೋ ಮಾನಸಿಕ ಕಾಯಿಲೆಗಳು, ಕಸಾಲೆಗಳು ಆವರಿಸಿದ್ದರೆ? ಅಬ್ಬ.. ಅಂತ ದಿನಗಳು ಈಗಿಲ್ಲವಲ್ಲ... ಅಮ್ಮ ಈಗಲೂ ನಿಟ್ಟುಸಿರು ಬಿಡುತ್ತಿರುತ್ತಾರೆ. ಅಂತದ್ದೊಂದು ದಿನಗಳನ್ನು ನೆನಪಿಸಿಕೊಳ್ಳಲೂ ಹೇಸಿಗೆ ಪಟ್ಟುಕೊಳ್ಳುತ್ತಾಳೆ. ಆದರೂ ನೆನಪಾದಾಗ ಶೌಚಾಲಯದ ಅಗತ್ಯತೆಯ ಬಗ್ಗೆ ಮಾತನಾಡುತ್ತಾಳೆ. ತಮ್ಮಂತೆ ಇನ್ಯಾರೂ ಕೂಡ ಬವಣೆ ಅನುಭವಿಸುವುದು ಬೇಡ ಎನ್ನುತ್ತಿರುತ್ತಾಳೆ.
ಅಂದಹಾಗೆ ಟಾಯ್ಲೆಟ್ ಏಕ್ ಪ್ರೇಮ ಕಥಾ ಚಿತ್ರವನ್ನು ನೋಡಿದೆ. ಮತ್ತೊಮ್ಮೆ ಈ ಎಲ್ಲ ಘಟನೆಗಳೂ ನೆನಪಿಗೆ ಬಂದವು.
No comments:
Post a Comment