Wednesday, April 20, 2016

ಬೇಸರ ಮರೆತು ಒಂದಾದ ಯಕ್ಷ ದಿಗ್ಗಜರು

ದಿಗ್ಗಜರ ಒಗ್ಗೂಡುವಕೆಗೆ ಸಾಕ್ಷಿಯಾದ ಸಂಪಖಂಡ


           ಐದು ದಶಕಗಳ ಬೇಸರವನ್ನು ಮರೆತು ಒಂದಾದರು ದಿಗ್ಗಜರು. ಒಬ್ಬ ಯಕ್ಷ ದಿಗ್ಗಜರ ಹಾಡಿಗೆ ಇನ್ನೊಬ್ಬ ಯಕ್ಷ ದಿಗ್ಗಜರು ಯಕ್ಷನರ್ತನ ಮಾಡಿದರು. ಅಭಿಮಾನಿಗಳು ಪುಳಕಗೊಂಡರು. ಇಂತಹ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದು ಶಿರಸಿ ತಾಲೂಕಿನ ಸಂಪಖಂಡದ ಗಜಾನನ ಪ್ರೌಢಶಾಲೆಯ ಆವರಣ.
           ನೆಬ್ಬೂರು ನಾರಾಯಣ ಭಾಗವತರು ಯಕ್ಷಗಾನದಲ್ಲಿ ದಿಗ್ಗಜ ಭಾಗವತರು. ಅದೇ ರೀತಿ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರೂ ಕೂಡ ಯಕ್ಷಗಾನದ ಮೇರು ನಟ. ಇಬ್ಬರಿಗೂ ಅವರದೇ ಆದ ಅಭಿಮಾನಿಗಳಿದ್ದಾರೆ. ನೆಬ್ಬೂರರ ಹಾಡಿಗೆ, ಚಿಟ್ಟಾಣಿಯವರ ನರ್ತನಕ್ಕೆ ಮೆಚ್ಚಿ ತಲೆದೂಗಿದವರು ಸಹಸ್ರ ಸಹಸ್ರ ಸಂಖ್ಯೆಯ ಅಭಿಮಾನಿಗಳು. ಆದರೆ ಅನೇಕ ಅಭಿಮಾನಿಗಳಲ್ಲಿದ್ದ ಒಂದೇ ಒಂದು ಆಸೆಯೆಂದರೆ ಅದು ನೆಬ್ಬೂರು ನಾರಾಯಣ ಭಾಗವತರ ಹಾಡಿಗೆ ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ಪಾತ್ರ ಮಾಡಬೇಕು ಎನ್ನುವುದು. ಆದರೆ ಈ ಇಬ್ಬರು ಮಹಾನ್ ಯಕ್ಷಪಟುಗಳ ನಡುವಿನ ಬೇಜಾರಿನಿಂದಾಗಿ ಅದು ಸಾಧ್ಯವೇ ಆಗಿರಲಿಲ್ಲ. ಸರಿ ಸುಮಾರು ಐದು ದಶಕಗಳಿಂದ ಯಕ್ಷಪ್ರೇಮಿಗಳು ಇಂತದ್ದೊಂದು ಸವಿಘಳಿಗೆಗೆ ಕಾಯುತ್ತಲೇ ಇದ್ದರು. ಸಂಪಖಂಡದಲ್ಲಿ ನಡೆದ ನೆಬ್ಬೂರು ನಾರಾಯಣ ಭಾಗವತ ಪ್ರತಿಷ್ಟಾನದ ವಾಷರ್ಿಕೋತ್ಸವ ಸಮಾರಂಭದಲ್ಲಿ ಈ ಇಬ್ಬರು ಯಕ್ಷ ದಿಗ್ಗಜರು ಬೇಸರ ಮರೆತು ಒಂದಾದರು.
                        ಕಾರ್ಯಕ್ರಮ ಉದ್ಘಾಟನೆ ಮಾಡಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರು ಮಾತನಾಡುತ್ತಾ ಐದು ದಶಕಗಳ ಹಿಂದೆ ನೆಬ್ಬೂರು ನಾರಾಯಣ ಭಾಗವತರು ಹಾಗೂ ತಾವು ಅಮೃತೇಶ್ವರಿ ಮೇಳದಲ್ಲಿ ಒಡನಾಡಿಗಳಾಗಿದ್ದವರು. ನಂತರದ ದಿನಗಳಲ್ಲಿ ಜನರಿಂದಾಗಿ ನಮಗೆ ಬೇಸರ ಉಂಟಾಯಿತು.ಆ ಸಂದರ್ಭದಲ್ಲಿಯೇ ನಾನು ಮೇಳವನ್ನು ಬದಲಾಯಿಸಿದೆ. ಐದು ದಶಕಗಳ ವರೆಗೂ ಆ ಬೇಸರ ಮುಂದುವರಿಯಿತು. ಆದರೆ ನನಗೆ ಒಂದು ಆಸೆಯಿದೆ. ನೆಬ್ಬೂರು ನಾರಾಯಣ ಭಾಗವತರ ಹಾಡುಗಾರಿಕೆಯಲ್ಲಿ ಪಾತ್ರ ಮಾಡಬೇಕು ಎನ್ನುವುದು ನನ್ನ ದೊಡ್ಡ ಆಸೆ. ಆದರೆ ಅನಾರೋಗ್ಯದ ಕಾರಣದಿಂದಾಗಿ ನೆಬ್ಬೂರರಿಗೆ ಹಾಡಲು ಸಾಧ್ಯವಾಗುತ್ತಿಲ್ಲ. ದೇವರ ಕೃಪೆಯಿದ್ದರೆ ನನ್ನ ಆಸೆ ಪೂರೈಸುತ್ತದೆ. ದೇವರ ದಯೆಯಿಮದ ನೆಬ್ಬೂರರು ಕೂಡಲೇ ಗುಣಮುಖರಾಗಿ ಮತ್ತೆ ರಂಗದಲ್ಲಿ ಹಾಡುತ್ತಾರೆ. ಆಗ ನಾನು ಪಾತ್ರ ಮಾಡುತ್ತೇನೆ ಎಂದರು. ಅಷ್ಟೇ ಅಲ್ಲದೇ ನೆಬ್ಬೂರು ನಾರಾಯಣ ಭಾಗವತರಿಗೆ ಅನಾರೋಗ್ಯವಾಗಿ ಹಾಸಿಗೆ ಹಿಡಿದಿದ್ದ ಸಂದರ್ಭದಲ್ಲಿ ನಾನು ಅವರನ್ನು ಭೇಟಿ ಮಾಡಿದ್ದೆ. ಆ ಸಂದರ್ಭದಲ್ಲಿ ನಮ್ಮಲ್ಲಿನ ಬೇಜಾರು ದೂರವಾಯಿತು. ನೆಬ್ಬೂರರ ಹಾಸ್ಯಪ್ರಜ್ಞೆಯಿಂದ ನನ್ನ ಮನಸ್ಸು ನಿರಾಳವಾಯಿತು ಎಂದರು.
                    ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ಮಾತನಾಡಿದ ನಂತರ ನೆಬ್ಬೂರರು ಮಾತನಾಡಲು ಆಗಮಿಸಿದರು. ನೆಬ್ಬೂರು ನಾರಾಯಣ ಭಾಗವತರು ಮಾತನಾಡಿ ಅಮೃತೇಶ್ವರಿ ಮೇಳದಲ್ಲಿ 5 ದಶಕಗಳ ಹಿಂದೆ ನಾವು ಒಡನಾಡಿದವರು. ಕಾರಣಾಂತರಗಳಿಂದ ದೂರವಾಗಿದ್ದವರು ನಾವು. ಈಗ ಒಂದಾಗಬೇಕೆಂಬ ಮನಸ್ಸಿದೆ. ವಯೋಮಾನ ಹೆಚ್ಚಾದ ಕಾರಣ ರಂಗದಲ್ಲಿ ನಾವು ಒಂದಾಗಲು ಸಾಧ್ಯವಿಲ್ಲ. ಆದರೆ ಮಾನಸಿಕವಾಗಿ ನಾವಿಬ್ಬರೂ ಒಂದೇ. ಚಿಟ್ಟಾಣಿಯವರು ಈಗಲೂ ರಂಗದಲ್ಲಿ ಪಾತ್ರವಹಿಸುತ್ತಿದ್ದಾರೆ. ಆದರೆ ನನಗೆ ವಯೋಸಹಜ, ಅನಾರೋಗ್ಯದ ಕಾರಣ ರಂಗದ ಮೇಲೆ ಬರಲಾಗುತ್ತಿಲ್ಲ. ಚಿಟ್ಟಾಣಿಯವರಿಗೆ ಚಂಡೆ, ಮದ್ದಲೆಗಳೇ ಔಷಧವಾಗಿ ಪರಿಣಮಿಸಿದೆ. ಹಿರಿಯರು ಆಗಾಗ ಪ್ರತಿಷ್ಟಾನಕ್ಕೆ ಆಗಮಿಸಿ ಸಲಹೆ ಸೂಚನೆಗಳನ್ನು ನೀಡಬೇಕು. ಮುಂದಿನ ಪೀಳಿಗೆಗೆ ಮಾರ್ಗದರ್ಶನ ನೀಡಬೇಕಾದ ಅಗತ್ಯವಿದೆ ಎಂದರು.
                      ನೆಬ್ಬೂರರು ಮಾತನಾಡುತ್ತಿದ್ದ ಸಂದರ್ಭದಲ್ಲಿಯೇ ವೇದಿಕೆಯ ಮೇಲೆ ಕುಳಿತಿದ್ದ ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ಎದ್ದು ಬಂದರು. ನೆಬ್ಬೂರರ ಬಳಿ ಬಂದು `ಒಂದು ಹಾಡು ಹಾಡಾ..' ಎಂದರು. ಅದಕ್ಕೆ ಹಸನ್ಮುಖದಿಂದಲೇ ನೆಬ್ಬೂರರು ಬೇಡ ಎಂದರು. ಚಿಟ್ಟಾಣಿಯವರು ಪಟ್ಟು ಬಿಡಲಿಲ್ಲ. ಕೊನೆಗೆ ನೆಬ್ಬೂರು ನಾರಾಯಣ ಭಾಗವತರು ಹಾಡಿಯೇ ಬಿಟ್ಟರು. ನೆಬ್ಬೂರರ ಸಿರಿಕಂಠದಲ್ಲಿ `ಕಂಡನು ಭಸ್ಮಾಸುರನು ಮೋಹಿನಿಯ ರೂಪವ' ಎಂಬ ಹಾಡು ಹೊರಹೊಮ್ಮಿದಂತೆಯೇ ಚಿಟ್ಟಾಣಿಯವರು ಅಭಿನಯವನ್ನು ಆರಂಭಿಸಿದರು. ವೇದಿಕೆಯ ಮೇಲೆ ಕುಣಿದ ಚಿಟ್ಟಾಣಿ ಬಹುಕಾಲದ ತಮ್ಮ ಮನಸ್ಸಿನ ಬಯಕೆಯನ್ನು ಪೂರೈಸಿಕೊಂಡರು. ಈ ಘಟನೆಗೆ ಸಾಕ್ಷಿಯಾದ ನೂರಾರು ಜನರು ಪುಳಕಗೊಂಡರು. ಸಂಘಟಕರ ಕಣ್ಣಾಲಿಗಳು ತುಂಬಿಬಂದವು.
                 ಕಲಾವಿದರುಗಳಲ್ಲಿ ಬೆಸರಗಳು ಸಹಜ. ಆದರೆ ಇಂತಹ ಅಪರೂಪದ ಕಾರ್ಯಕ್ರಮಗಳಲ್ಲಿ, ಸಂದರ್ಭಗಳಲ್ಲಿ ದಿಗ್ಗಜರು ಒಂದಾಗುತ್ತಾರೆ. ಯಕ್ಷಗಾನದ ಇಬ್ಬರು ದಿಗ್ಗಜರು ಒಂದಾಗುವಲ್ಲಿ ಸಂಪಖಂಡದ ಗಜಾನನ ಪ್ರೌಢಶಾಲೆಯ ಆವರಣ ಸಾಕ್ಷಿಯಾಯಿತು. ತನ್ಮೂಲಕ ಸಂಪಖಂಡ ಹಾಗೂ ನೆಬ್ಬೂರು ನಾರಾಯಣ ಭಾಗವತ ಪ್ರತಿಷ್ಟಾನದ ವಾಷರ್ಿಕೋತ್ಸವ ಕಾರ್ಯಕ್ರಮ ಇತಿಹಾಸದ ಪುಟಗಳಲ್ಲಿ ಚಿರಸ್ಥಾಯಿಯಾಯಿಗಿ ಉಳಿದುಕೊಂಡಿತು.
 

1 comment:

  1. nebburaru idagunji melada mooru talemarige bhagavatige madidavaru. chittaniyavaru ella bhagavatara haadigu kunidavaru. yakshaganada meru kalavidara besaragalu dooravaddu tumba kushi tandide.
    ade reethi yaaji mattu kondadakuliyavara virasa dooravaagiddu kooda santasa tandide

    ReplyDelete