Thursday, May 22, 2014

ಬೆಂಗಾಲಿ ಸುಂದರಿ-12

(ಗಲಭೆಯ ಸಾಂದರ್ಭಿಕ ಚಿತ್ರ)
                            ನಸುಕಿನಲ್ಲೆದ್ದು ವಿನಯಚಂದ್ರ ಜಾಧವರೊಡಗೂಡಿ ಹೊರಡಲು ತಯಾರಾದ. ಮಧುಮಿತಾ ಜೊತೆಯಲ್ಲಿ ಬಂದಳು. ರಾತ್ರಿಯಿಡೀ ನಿದ್ದೆ ಮಾಡಿಲ್ಲವೇನೋ ಅನ್ನುವಂತಿತ್ತು ಅವಳ ಮುಖ. ಅತ್ತಿದ್ದಳಿರಬೇಕು. ಕಣ್ಣು ಕೆಂಪಗಾಗಿತ್ತು. ಮುಖ ಬಾಡಿತ್ತು. ವಿನಯಚಂದ್ರ ಸಮಾಧಾನ ಮಾಡಿದ. ಮಧುಮಿತಾಳೇ ತನ್ನೂರಿಗೆ ಹೋಗಲು ಯಾವುದೋ ಕಾರನ್ನು ಸಿದ್ದ ಮಾಡಿದ್ದಳು. ತಕ್ಷಣ ಅದನ್ನು ಏರಿ ಹೊರಟರು.
ಹೊರಟಲ್ಲಿಂದ ಮಧುಮಿತಾ ಬಿಕ್ಕುತ್ತಳೇ ಇದ್ದಳು. ಪಕ್ಕದಲ್ಲಿ ಕುಳಿತಿದ್ದ ವಿನಯಚಂದ್ರ ಅವಳನ್ನು ಸಮಾಧಾನ ಮಾಡುತ್ತಲೇ ಇದ್ದ. ಡ್ರೈವರ್ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಜಾಧವ್ ಅವರು ವಿನಯಚಂದ್ರ ಹಾಗೂ ಮಧುಮಿತಾಳ ನಡುವಿನ ಆಪ್ತತೆಯನ್ನು ನೋಡಿ ಅಚ್ಚರಿಪಟ್ಟಿದ್ದರು. ಬಾಂಗ್ಲಾದೇಶಕ್ಕೆ ಬಂದು ಇನ್ನೂ ಒಂದು ವಾರ ಕಳೆದಿಲ್ಲ. ಇವರು ಬಹಳ ಆಪ್ತರಾಗಿದ್ದಾರೆ ಎಂದುಕೊಂಡರು ಜಾಧವ್ ಸರ್. ಏನಿದು ಹೀಗೆ ಎಂದುಕೊಂಡಿದ್ದರು.
                               ವಿನಯಚಂದ್ರ ಮಧುಮಿತಾಳನ್ನು ಸಮಾಧಾನ ಪಡಿಸಲು ಯತ್ನಿಸುತ್ತಿದ್ದಂತೆಲ್ಲ ಮಧುಮಿತಾಳ ಬಿಕ್ಕುವಿಕೆ ಹೆಚ್ಚುತ್ತಲೇ ಇತ್ತು. ಜಾಧವ್ ಹಾಗೂ ವಿನಯಚಂದ್ರ ಇಬ್ಬರಿಗೂ ಮೊದಲ ಬಾರಿಗೆ ಬಾಂಗ್ಲಾದೇಶದ ಇನ್ನೊಂದು ಮುಖದ ಪರಿಚಯವಾಗುತ್ತಿದೆಯೇನೋ ಅನ್ನಿಸತೊಡಗಿತ್ತು, ಮೇಲ್ನೋಟಕ್ಕೆ ಎಲ್ಲವೂ ಸಹಜವಾಗಿ, ಸರಿಯಾಗಿತ್ತಾದರೂ ಒಳಗೊಳಗೆ ಬಾಂಗ್ಲಾದೇಶ ಹುಳುಕಾಗಿ ನಾರುತ್ತಿದೆಯೇನೋ ಅನ್ನಿಸಹತ್ತಿತ್ತು. ಬಾಂಗ್ಲಾದೇಶಿ ಹಿಂದುಗಳು ಪದೇ ಪದೆ ಹಿಂಸೆಗೆ ಒಳಗಾಗುತ್ತಿದ್ದಾರೆನ್ನುವುದು ಬಾಂಗ್ಲಾಕ್ಕೆ ಬಂದು ಒಂದು ವಾರ ಕಳೆಯುವುದರೊಳಗಾಗಿ ಅರ್ಥವಾಗತೊಡಗಿತ್ತು.
ಮಧುಮಿತಾಳ ತಂದೆ ತಾಯಿ-ಕುಟುಂಬದವರು ಇದ್ದ ಊರಿಗೆ ಅನಾಮತ್ತು ನಾಲ್ಕೈದು ಗಂಟೆಗಳ ಪಯಣ. ಗೋಮತಿ ಹಾಗೂ ಬ್ರಹ್ಮಪುತ್ರಾ ನದಿಗಳ ಕಿನಾರೆಯಲ್ಲಿ ಹಾದು ಹೋಗಬೇಕು. ಹೋಗುವ ವೇಳೆಗೆ ಊರು ಸ್ಮಶಾನಮೌನದಲ್ಲಿತ್ತು. ದೂರದಲ್ಲೆಲ್ಲೋ ಟೈರುಗಳಿಗೆ ಬೆಂಕಿ ಹಚ್ಚಿದ್ದರಿರಬೇಕು ಹೊಗೆಯ ಕಮರು ಎಲ್ಲೆಡೆ ಪಸರಿಸಿತ್ತು. ಊರಲ್ಲಿ ಯಾರೊಬ್ಬರೂ ರಸ್ತೆಯಲ್ಲಿ ಓಡಾಡುತ್ತಿರಲಿಲ್ಲ. ಇವರ ಟ್ಯಾಕ್ಸಿಯೊಂದೆ ಇತ್ತು. ಇವರ ಟ್ಯಾಕ್ಸಿಯನ್ನು ಪ್ರತಿಯೊಬ್ಬರೂ ಅನುಮಾನದಿಂದಲೇ ನೋಡುತ್ತಿದ್ದರು. ರಸ್ತೆ ಹಾಗೂ ಅಲ್ಲಲ್ಲಿ ಬಾಂಗ್ಲಾ ಪೊಲೀಸರು ನಿಂತುಕೊಂಡು ಪಹರೆ ಮಾಡುತ್ತಿದ್ದಂತೆ ಕಾಣಿಸುತ್ತಿತ್ತು. ಕೆಲವೆಡೆಗಳಲ್ಲಿ ಬ್ಯಾರಿಕೇಡ್ ಕೂಡ ಇತ್ತು.
                                ಒಂದೆರಡು ಕಡೆಗಳಲ್ಲಿ ಪೊಲೀಸರು ಟ್ಯಾಕ್ಸಿಯನ್ನು ನಿಲ್ಲಿಸಿದರು. ಮಧುಮಿತಾ ತನ್ನ ಬಳಿಯಿದ್ದ ಬಾಂಗ್ಲಾದೇಶದ ಸರ್ಕಾರ ಕೊಟ್ಟ ಕಾರ್ಡನ್ನು ತೋರಿಸಿದ ನಂತರ ಮುಂದಕ್ಕೆ ಹೋಗಲು ಬಿಟ್ಟರು. ಮೂರ್ನಾಲ್ಕು ಓಣಿಗಳನ್ನು ದಾಟಿ ಹಳೆಯದೊಂದು ಮನೆಯ ಎದುರು ನಿಂತಾಗ ಮತ್ತೆ ಮತ್ತೆ ಕಾಡಿದ ಮೌನ. ವಿನಯಚಂದ್ರ ಹಾಗೂ ಜಾಧವ್ ಅವರು ಕಾರಿನಿಂದ ಕೆಳಗಿಳಿಯಲೋ ಬೇಡವೋ ಎಂದು ಅನುಮಾನಿಸುತ್ತಿದ್ದಾಗಲೇ ಮಧುಮಿತಾ ಇಳಿದು ಮನೆಯ ಬಾಗಿಲಿಗೆ ಹೋಗಿ ಬಡಿದಳು. ಜಾಧವ್ ಹಾಗೂ ವಿನಯಚಂದ್ರ ಮಧುಮಿತಾಳನ್ನು ಹಿಂಬಾಲಿಸಿ ಅವಳ ಜೊತೆ ಹೋಗಿ ನಿಂತರು. ಮನೆಯ ಬಾಗಿಲು ತೆರೆಯದೇ ಒಳಗಿನಿಂದಲೇ `ಯಾರು..?' ಎಂದು ವಿಚಾರಿಸಿದಂತಾಯಿತು. ಮಧುಮಿತಾ ಹೇಳಿದ ನಂತರ ನಿಧಾನವಾಗಿ ಬಾಗಿಲು ತೆಗೆದರು.
                               ವಯಸ್ಸಾಗಿದ್ದ ಬೆಂಗಾಲಿ ಬ್ರಾಹ್ಮಣ ಮಧುಮಿತಾಳ ಅಪ್ಪ. ಅಜಮಾಸು ಅರವತ್ತು-ಅರವತ್ತೈದು ವಸಂತಗಳಾಗಿರಬಹುದು ಅವರಿಗೆ. ವಯೋಸಹಜ ನೆರಿಗೆಗಳು, ಸುಕ್ಕುಗಳು, ತಲೆಯ ಮೇಲೆ, ಗಡ್ಡದ ನಡುವೆ ಅಲ್ಲಲ್ಲಿ ಬಿಳಿಯ ಬಣ್ಣದ ಕೂದಲುಗಳು ಇಣುಕಿ ತಮ್ಮ ಇರುವಿಕೆಯನ್ನು  ಸಾರುತ್ತಿದ್ದವು. ವಯಸ್ಸನ್ನು ಜಗತ್ತಿಗೆ ಸಾರುತ್ತಿದ್ದವು. ಕಣ್ಣಲ್ಲಿ ಭೀತಿ ತುಂಬಿ ತುಳುಕುತ್ತಿತ್ತು. ಮಧುಮಿತಾಳನ್ನು ಒಳಗೆ ಕರೆದ ಅವರು  ಜೊತೆಯಲ್ಲಿದ್ದ ಜಾಧವ್ ಹಾಗೂ ವಿನಯಚಂದ್ರರನ್ನು ಪ್ರಶ್ನಾರ್ಥಕವಾಗಿ ನೋಡಿದರು. ಮಧುಮಿತಾ ಪರಿಚಯಿಸಿದ ನಂತರ ಪರಿಚಿತ ನಗೆ ಬೀರಿದರು. ವಿನಯ ಚಂದ್ರನ ಬಳಿ ಬಂದು `ಓಹೋ.. ಭಾರತದಿಂದ ಬಂದವರು ನೀವೇನಾ..? ಕಬ್ಬಡ್ಡಿ ಆಟಗಾರರು..?' ಎಂದು ಕೇಳಿದಾಗ ವಿನಯಚಂದ್ರ `ನಾನು ಕಬ್ಬಡ್ಡಿ ಆಡುತ್ತೇನೆ.. ಇವರು ನಮ್ಮ ಕೋಚ್' ಎಂದು ಹೇಳಿದ.
                             ಅಷ್ಟರಲ್ಲಿ ಮನೆಯೊಳಗಿನಿಂದ ಮಧುಮಿತಾಳ ತಾಯಿ ಕುತೂಹಲದಿಂದ ನೋಡತೊಡಗಿದರು. ಅವರ ಪರಿಚಯವೂ ಆಯಿತು. ಉಭಯಕುಶಲೋಪರಿ ಸಾಂಪ್ರತ ಕಾರ್ಯಕ್ರಮ ಸಾಂಗವಾಗಿ ನೆರವೇರಿತು. ಮನೆಯೊಳಗೆ ಎಲ್ಲ ಬಂದ ತಕ್ಷಣ ಮಧುಮಿತಾಳ ತಂದೆ ದಡಕ್ಕನೆ ಬಾಗಿಲನ್ನು ಹಾಕಿದರು. ಕೊಂಚ ಸಮಯದ ನಂತರ ಅವರೇ ಮಾತಿಗೆ ಶುರುವಿಟ್ಟುಕೊಂಡರು.
                          `ಬಾಂಗ್ಲಾದಲ್ಲಿ ಎಲ್ಲ ಕಡೆ ಹಿಂದೂ ಮನೆಗಳನ್ನು ಹುಡುಕಿ ಹುಡುಕಿ ಬೆಂಕಿ ಹಚ್ಚಲಾಗಿದೆ. ಕಳೆದೊಂದು ವರ್ಷದ ಈಚೆಗೆ ಈ ಕಾರ್ಯ ಇನ್ನೂ ಮುಂದುವರಿದಿದೆ.  ಎಲ್ಲ ಕಡೆ ಹಿಂದೂಗಳ ಮನೆಯನ್ನು ಸುಟ್ಟು, ದೌರ್ಜನ್ಯ ಮಾಡುತ್ತಿದ್ದರೂ ನಮ್ಮೂರು ಶಾಂತವಾಗಿತ್ತು. ಆದರೆ ನಿನ್ನೆ ಇದ್ದಕ್ಕಿದ್ದಂತೆ ನಮ್ಮೂರಲ್ಲೂ ಪುಂಡಾಟಿಕೆ ಶುರುವಾಯಿತು. ಹಲವು ಜನ ನೋಡ ನೋಡುತ್ತಿದ್ದಂತೆ ನಮ್ಮ ಪಕ್ಕದ ಮನೆಗೆ ಬೆಂಕಿ ಹಚ್ಚಿದರು. ಅವರ ಮನೆಯಲ್ಲಿದ್ದ ವ್ಯಕ್ತಿಗಳನ್ನು ಮನೆಯಿಂದ ಹೊರಗೆಳೆದು ತಂದು ಹೊಡೆದರು. ಗಂಡಸರು. ಹೆಂಗಸರು, ಮಕ್ಕಳು ಎಂದು ನೋಡಲಿಲ್ಲ. ಎಲ್ಲರೂ ಹೊಡೆತ ತಿಂದರು. ಈಗ ಪಕ್ಕದ ಮನೆಯಲ್ಲಿ ಯಾರು ಬದುಕಿದ್ದಾರೆ, ಯಾರು ಸತ್ತಿದ್ದಾರೆ ಎನ್ನುವುದೇ ಗೊತ್ತಾಗುತ್ತಿಲ್ಲ. ನಿನ್ನೆ ನಡೆದ ಪುಂಡಾಟಿಕೆಯಲ್ಲಿ ಕನಿಷ್ಟ ಒಬ್ಬಿಬ್ಬರಾದರೂ ಸತ್ತುಹೋಗಿರಬೇಕು. ನಮಗೆ ಸಹಾಯಕ್ಕೆ ಹೋಗೋಣ ಎನ್ನಿಸಿತ್ತು. ಆದರೆ ಜೀವಭಯ. ಕಣ್ಣೆದುರು ಮನೆ ಉರಿದು ಹೋಗುತ್ತಿದ್ದರೂ ಜೀವ ಹನನವಾಗುತ್ತಿದ್ದರೂ ಮನೆಯೊಳಗೇ ಕುಳಿತುಬಿಟ್ಟಿದ್ದೆವು. ಆಕ್ರಂದನಗಳು ಕೇಳುತ್ತಿದ್ದರೂ ಏನೂ ಮಾಡಲಾಗದೇ ಅಸಹಾಯಕರಾಗಿ ಇದ್ದುಬಿಟ್ಟೆವು.. ಛೇ' ಎಂದು ನಿಟ್ಟುಸಿರು, ಭಯ ಮಿಶ್ರಿತ ಧ್ವನಿಯಲ್ಲಿ ಮಧುಮಿತಾಳ ತಂದೆ ಹೇಳಿದರು.
                         `ಹಿಂದುಗಳ ಮೇಲೆ ದೌರ್ಜನ್ಯಕ್ಕೆ ಕಾರಣ ಏನು..? ಯಾಕ್ ಈ ಥರ ಆಗ್ತಾ ಇದೆ?' ವಿನಯಚಂದ್ರ ಕೇಳಿದ್ದ.
                         `ಇಂತದ್ದೇ ಆಗಬೇಕು ಎಂದಿಲ್ಲ. ಧರ್ಮ ಕಾರಣ ಮುಖ್ಯ. ಇಲ್ಲಿ ಎರಡು ಪ್ರಮುಖ ಪಕ್ಷಗಳಿವೆ. ಎರಡೂ ಪಕ್ಷಗಳ ಮುಖ್ಯಸ್ಥರು ಮಹಿಳೆಯರೇ. ಇಬ್ಬರ ನಡುವೆ ಯಾವಾಗಲೂ ಹೊತ್ತಿ ಉರಿಯುವ ದ್ವೇಷ. ಕೊಚ್ಚಿ ಕೊಲ್ಲುವಷ್ಟು ಸಿಟ್ಟು. ಭಾರತದಲ್ಲಿ ಹೇಗೆ ಮುಸ್ಲಿಂ ಮತಗಳು ಚುನಾವಣೆಯಲ್ಲಿ ನಿರ್ಣಾಯಕ ಎಂದು ನೀವು ಹೇಳುತ್ತೀರೋ ಹಾಗೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮತಗಳು ನಿರ್ಣಾಯಕವಾಗುತ್ತವೆ. ಆದರೆ ಭಾರತದಲ್ಲಿ ಮತಕ್ಕಾಗಿ ಇಲ್ಲ ಸಲ್ಲದ ಆಸೆ, ಆಮಿಷಗಳನ್ನು ನೀಡಲಾಗುತ್ತದೆ. ಆದರೆ ಬಾಂಗ್ಲಾದೇಶದಲ್ಲಿ ಮಾತ್ರ ಬೆದರಿಕೆ ಹಾಕಲಾಗುತ್ತದೆ. ವಿರೋಧಿಸಿದವರನ್ನು ಕೊಂದು ಹಾಕಲೂ ಹಿಂದೆ ಬರುವಂತವರಲ್ಲ.. ಈ ಸಾರಿ ಚುನಾವಣೆಯಲ್ಲಿ ಹಿಂದುಗಳೆಲ್ಲ ಆಡಳಿತ ಪಕ್ಷವನ್ನು ಬೆಂಬಲಿಸಿದರು. ಇದೇ ಕಾರಣಕ್ಕಾಗಿ ವಿರೋಧ ಪಕ್ಷದ ಪುಡಾರಿಗಳು, ಬೆಂಬಲಿಗರು, ರೌಡಿಗಳು ಹಿಂದೂಗಳ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ಹಲ್ಲೆಯನ್ನೂ ಮಾಡಿ, ಹತ್ಯೆಯನ್ನೂ ಕೈಗೊಳ್ಳುತ್ತಿದ್ದಾರೆ..' ಎಂದು ಅವರು ಹೇಳಿದರು.
                        ` ವಿನಯಚಂದ್ರ.. ಭಾರತದಲ್ಲಿ ಯಾವಾಗಲಾದರೂ ಇಂತಹುದ್ದನ್ನು ನೀನು ಚಿಂತನೆ ಮಾಡಿದ್ದೀಯಾ..? ತಮನೆ ಮತ ಹಾಕಿಲ್ಲ ಎನ್ನುವ ಕಾರಣಕ್ಕಾಗಿ ಹಲ್ಲೆ ಮಾಡುವುದು, ಗಲಾಟೆ ಮಾಡುವ ಮಟ್ಟಕ್ಕೆ ಇನ್ನೂ ನಮ್ಮ ದೇಶ ಇಳಿದಿಲ್ಲವಲ್ಲ.. ಓಹ್.. ಸಾಕು.. ಭಗವಂತಾ ಹಾಗಾಗದಿರಲಿ..' ಎಂದು ಜಾಧವ್ ಹೇಳಿದಾಗ ವಿನಯಚಂದ್ರನ ಮನಸ್ಸಿನಲ್ಲಿ ಮುಂದಿನ ಭವಿಷ್ಯ ನೆನೆದು ತಲೆ ಕೊಡವಿದ.
                        ವಿನಯಚಂದ್ರ ಹಾಗೂ ಜಾಧವ್ ಅವರು ಮಧುಮಿತಾಳ ಕುಟುಂಬವನ್ನು ಸಮಾಧಾನ ಮಾಡಲು ಯತ್ನಿಸಿದರು. ಢಾಕಾಕ್ಕೆ ಬಂದು ಮಧುಮಿತಾ ಉಳಿದುಕೊಂಡಿದ್ದ ಅಪಾರ್ಟ್ ಮೆಂಟಿನಲ್ಲಿಯೇ ಉಳಿಯುವಂತೆ ಸಲಹೆ ನೀಡಿದರು. ಹಲವು ಸಾರಿ ಒತ್ತಾಯ ಮಾಡಿದರ ನಂತರ ಢಾಕಾಕ್ಕೆ ಬರಲು ಒಪ್ಪಿಕೊಂಡರು. ತಕ್ಷಣವೇ ಢಾಕಾಕ್ಕೆ ತೆರಳಲು ಎಲ್ಲ ಏರ್ಪಾಡುಗಳನ್ನೂ ಕೈಗೊಳ್ಳಲಾಯಿತು.
                      ಹೊರಟ ಸಂದರ್ಭದಲ್ಲಿಯೇ ಮನೆಯಿಂದ ಹೊರ ಬಂದ ವಿನಯಚಂದ್ರ ಅಕ್ಕ ಪಕ್ಕ ನೋಡಿದ. ಪಕ್ಕದ ಮನೆ ಸುಟ್ಟು ಕರಕಲಾಗಿ ನಿಂತಿತ್ತು. ಗಲಭೆಯ ಅಟ್ಟಹಾಸಕ್ಕೆ ಮನೆಯ ಮೇಲ್ಛಾವಣಿ ಬಾಯ್ದೆರೆದು ನಿಂತಿತ್ತು. ದೋರದಲ್ಲೆಲ್ಲೋ ಪೊಲೀಸರು ತಪಾಸಣೆಯನ್ನು ನಡೆಸುತ್ತಿದ್ದರು. ಪಕ್ಕದ ಮನೆಯಿಂದ ಸುಟ್ಟ ವಾಸನೆ ಮೂಗಿಗೆ ಬರುತ್ತಲೇ ಇತ್ತು.
                      ಯಾವ ಶತಮಾನದಲ್ಲಿ ಯಾವ ಮಹಾನುಭಾವ ಕಟ್ಟಿದ್ದನೋ ಈ ಮನೆಯನ್ನು. ಅದೆಷ್ಟು ತಲೆಮಾರಿಗೆ ಜೀವ-ಜೀವನ ನೀಡಿತ್ತೋ.  ಇದೀಗ ಜೀವವನ್ನು ಕಳೆಯುತ್ತಿದೆ. ಹಳೆಯ ಮರದಿಂದ ಕಟ್ಟಿದ ಮನೆ ಹಚ್ಚಿದ್ದ ಬೆಂಕಿಗೆ ಬುರ್ರನೆ ಉರಿದುಹೋಗಿರಬೇಕು. ಯಾಕೋ ತಮ್ಮೂರಿನ ಭವಂತಿ ಮನೆ ನೆನಪಾಗುತ್ತಿದೆ ಎಂದುಕೊಂಡ ವಿನಯಚಂದ್ರ.
                    `ಬಟ್ಟೆ, ವಸ್ತುಗಳು.. ಎಲ್ಲವನ್ನೂ ತೆಗೆದುಕೊಳ್ಳಿ.. ಮತ್ತೆ ಇಲ್ಲಿ ಬರುವ ಸಾಧ್ಯತೆಗಳು ಇದೆಯೋ ಇಲ್ಲವೋ ಗೊತ್ತಿಲ್ಲ..' ಎಂದು ಮಧುಮಿತಾಳ ಕುಟುಂಬಕ್ಕೆ ಹೇಳಬೇಕೆನ್ನಿಸಿತು ವಿನಯಚಂದ್ರನಿಗೆ. ಆದರೆ ಹೇಳಲಿಕ್ಕಾಗಲೇ ಇಲ್ಲ. ಸುಮ್ಮನೆ ಉಳಿದುಬಿಟ್ಟ. ಕೆಲ ಹೊತ್ತಿನಲ್ಲಿಯೇ ಅಲ್ಲಿಂದ ಹೊರಟರು.
                 `ದಾರಿಯ ನಡುವೆ ಅನೇಕ ವಾಹನಗಳು ಹೊತ್ತಿ ಉರಿಯುತ್ತಿದ್ದುದು ಕಣ್ಣಿಗೆ ಬಿತ್ತು. ಮನೆ ಮನೆಗಳಿಗೆ ಕಲ್ಲು ತೂರಲಾಗಿತ್ತು. ರಸ್ತೆಗಳ ಮೇಲೆಲ್ಲ ಕಲ್ಲುಗಳು, ಇಟ್ಟಂಗಿಗಳ ರಾಶಿ ರಾಶಿ. ನಡು ನಡುವೆ ಪೊಲೀಸ್ ಸೈರನ್ ಸದ್ದು. ವಿನಯಚಂದ್ರನಿಗೆ ಒಮ್ಮೆ ಬಾಂಬೆ ಸಿನೆಮಾ ನೆನಪಾಯಿತು. ಕಣ್ಣಂಚಿನಲ್ಲಿ ನೀರು ಜಿನುಗಲು ಆರಂಭಿಸಿತ್ತು. ಕಾಲೇಜು ಓದುತ್ತಿದ್ದ ಸಮಯದಲ್ಲಿ ತಮ್ಮೂರಿನಲ್ಲಿ ಕೋಮುಗಲಭೆ ಭುಗಿಲೆದ್ದಿದ್ದು ವಿನಯಚಂದ್ರನಿಗೆ ನೆನಪಾಯಿತು.

**

                      ಮರಳಿ ಢಾಕಾವನ್ನು ತಲುಪುವ ವೇಳೆಗೆ ಬಾನಂಚಿನಲ್ಲಿ ಸೂರ್ಯ ಜಾರುತ್ತಿದ್ದ. ಮಧುಮಿತಾಳ ಕುಟುಂಬವನ್ನು ಅಪಾರ್ಟ್ ಮೆಂಟ್ ಬಳಿ ಇಳಿಸಿ ಜಾಧವ್ ಹಾಗೂ ವಿನಯಚಂದ್ರ ತಮ್ಮ ಹೊಟೆಲಿಗೆ ಮರಳುವ ವೇಳೆಗೆ ಏನೋ ಒಳ್ಳೆಯದ್ದನ್ನು ಸಾಧಿಸಿದ ಸಾರ್ಥಕತೆ ಇಬ್ಬರನ್ನೂ ಕಾಡಿತು. ಮನಸ್ಸು ಖುಷಿಯಾದ ಅನುಭವ. ವಿನಯಚಂದ್ರ ರೂಮಿಗೆ ಬರುವ ವೇಳೆಗೆ ಸೂರ್ಯನ್ ಕಾಯುತ್ತಿದ್ದ.
                  `ಎಲ್ಲಿಗೆ ಹೋಗಿತ್ತು ಸವಾರಿ..?' ಪ್ರಶ್ನೆಗಳೊಂದಿಗೆ ಮಾತು ಶುರುಮಾಡಿದ.
                   ವಿನಯಚಂದ್ರ ಮುಚ್ಚಿಡಲು ಹೋಗಲಿಲ್ಲ. ಎಲ್ಲ ವಿಷಯವನ್ನೂ ತಿಳಿಸಿದ ನಂತರ ಸೂರ್ಯನ್ `ಒಳ್ಳೆಯ ಕೆಲಸ ಮಾಡಿದೆ ವಿನು. ನನಗೆ ನಿನ್ನ ಮೇಲೆ ಬಹಳ ಹೆಮ್ಮೆ ಆಗುತ್ತಿದೆ..' ಎಂದ.
                   `ನನ್ನದೆಂತ ಇಲ್ಲ ಮಾರಾಯಾ.. ಎಲ್ಲ ಜಾಧವ್ ಸರ್ ಕೃಪೆ..' ಎಂದ.
                   `ಅಲ್ಲ ಮಾರಾಯಾ.. ಬಾಂಗ್ಲಾದೇಶದಲ್ಲಿ ಹಿಂದೂಗಳಿಗೆ ನೆಲೆಯಿಲ್ಲ ಅಂತಾಗಿದೆ. ಮಧುಮಿತಾಳ ಕುಟುಂಬವನ್ನೇನೋ ನೀನು ಢಾಕಾಕ್ಕೆ ಕರೆಸಿ ಮಧುಮಿತಾಳ ರೂಮಿನಲ್ಲಿ ಉಳಿಸಿದ್ದೀಯಾ. ನಾವು ಕಬ್ಬಡ್ಡಿ ವಿಶ್ವಕಪ್ ಟೈಮ್ ನಲ್ಲಿ ಮಾತ್ರ ಇಲ್ಲಿರುತ್ತೇವೆ. ಇನ್ನೊಂದು ಹದಿನೈದು ದಿನ. ನಾವು ಮರಳಿ ಭಾರತಕ್ಕೆ ಹೋಗಲೇಬೇಕು. ಢಾಕಾದಲ್ಲಿ ಮಧುಮಿತಾಳ ಕುಟುಂಬಕ್ಕೆ ಮುಂದೆ ಇಂತದ್ದೇ ಸಮಸ್ಯೆ ಬಂದರೆ ಏನು ಮಾಡುವುದು ಎಂಬುದನ್ನು ಆಲೋಚನೆ ಮಾಡಿದ್ದೀಯಾ..?' ಸೂರ್ಯನ್ ಗಂಭೀರವಾಗಿ ಕೇಳಿದ್ದ.
                   `ನಾನೂ ಅದನ್ನೇ ಆಲೋಚನೆ ಮಾಡುತ್ತಿದ್ದೆ. ನಾವಿರುವಷ್ಟು ದಿನ ಹೇಗೋ ನಡೆಯುತ್ತದೆ. ಬೇರೆ ಬೇರೆ ದೇಶಗಳಿಂದ ಆಟಗಾರರು ಬಂದಿದ್ದಾರೆ ಎನ್ನುವ ಕಾರಣಕ್ಕಾಗಿಯಾದರೂ, ಬಾಂಗ್ಲಾದೇಶ ವಿಶ್ವದ ಎದುರು ತನ್ನ ಮಾನ ಹರಾಜಾಗಬಾರದು ಎಂದಾದರೂ ಸ್ವಲ್ಪ ದಿನಗಳ ಮಟ್ಟಿಗೆ ಸುಮ್ಮನಿರಬಹುದು. ಗ್ರಾಮೀಣ ಅಥವಾ ಬಾಂಗ್ಲಾದೇಶದ ಇತರ ಭಾಗಗಳನ್ನು ಹೊರತು ಪಡಿಸಿ ಢಾಕಾ ದಲ್ಲಿ ಹಿಂದೂಗಳ ಮೇಲೆ ಹಲ್ಲೆ ನಡೆಯದಂತೆ ತಡೆಯಬಹುದು. ಆದರೆ ನಾವು ಹೋದ ನಂತರ ಖಂಡಿತ ಹಲ್ಲೆಗಳು, ಹಿಂದುಗಳ ಮೇಲೆ ದೌರ್ಜನ್ಯ ನಡೆದೇ ನಡೆಯುತ್ತದೆ.. ಆಗ ಮಧುಮಿತಾ ಸೇರಿದಂತೆ ಅವಳ ಕುಟುಂಬ ಸಮಸ್ಯೆಯ ಸುಳಿಯಲ್ಲಿ ಸಿಕ್ಕೇ ಸಿಲುಕುತ್ತದೆ. ನನಗೂ ಏನು ಮಾಡಬೇಕೆಂಬುದು ತೋಚುತ್ತಿಲ್ಲ..' ಎಂದ ವಿನಯಚಂದ್ರ.
                  `ಒಂದು ಕೆಲಸ ಮಾಡಬಹುದು. ಮಧುಮಿತಾ ಹಾಗೂ ಅವಳ ಕುಟುಂಬವನ್ನು ಭಾರತಕ್ಕೆ ಕರೆದೊಯ್ದರೆ ಹೇಗೆ? ಭಾರತದಲ್ಲಿಯೇ ಉಳಿದುಕೊಂಡು ಅಲ್ಲಿಯ ಪೌರತ್ವ ಪಡೆಯುವಂತೆ ಮಾಡಬಹುದಲ್ಲ..' ಎಂದ ಸೂರ್ಯನ್.
                  ವಿನಯಚಂದ್ರನ ಕಣ್ಣಲ್ಲಿ ಒಮ್ಮೆ ಹೊಳಪು. `ಹೌದು.. ಹಾಗೆ ಮಾಡಬಹುದು. ಆದರೆ ಯಾಕೋ ಇದು ಬಹಳ ರಿಸ್ಕಾಗುತ್ತಾ..? ಅನ್ನಿಸುತ್ತಿದೆ..'
                   `ರಿಸ್ಕ್ ಯಾಕೆ ದೋಸ್ತಾ..? ನನ್ನ ಸಂಬಂಧಿಯೊಬ್ಬರು ತಮಿಳುನಾಡು ಸರ್ಕಾರದಲ್ಲಿ ಮಂತ್ರಿಯಾಗಿದ್ದಾರೆ. ಈ ಕೆಲಸಕ್ಕೆ ನಾನು ಅವರ ಬಳಿ ಸಹಾಯ ಕೇಳೋಣ ಎಂದುಕೊಂಡಿದ್ದೇನೆ. ಅವರು ಆಗಾಗ ನನ್ನ ಬಳಿ ಏನಾದ್ರೂ ಸಹಾಯ ಬೇಕಿದ್ದರೆ ಕೇಳು ಎನ್ನುತ್ತಿದ್ದರು. ನಾನೂ ಕೇಳಿರಲಿಲ್ಲ. ರಾಜಕಾರಣಿಗಳ ಸಹವಾಸವೇ ಬೇಡ ಎಂದು ಸುಮ್ಮನಿದ್ದೆ. ಈಗ ನಮ್ಮ ಆಪ್ತರಿಗೆ ಒಳ್ಳೆಯದಾಗುತ್ತದೆ ಎಂದಾದರೆ ಯಾಕೆ ಬಿಡಬೇಕು..? ಒಮ್ಮೆ ಕೇಳಿ ನೋಡೋಣ.. ಸಹಾಯ ಸಿಕ್ಕರೆ ಒಳ್ಳೆಯದೇ ಆಗುತ್ತದೆ ಅಲ್ಲವೇ..' ಎಂದ ಸೂರ್ಯನ್.
                     `ಹುಂ.. ಆದರೆ ಇದರಿಂದ ನಿನಗೆ ಎನೂ ತೊಂದರೆ ಆಗೋದಿಲ್ಲ ಅಲ್ಲವಾ..'
                     `ಹೇಯ್ ನನಗೆಂತದ್ದೋ ತೊಂದರೆ.. ನನ್ನ ದೋಸ್ತನಿಗೆ ಒಳ್ಳೆಯದಾಗ್ತದೆ ಅಂತಾದ್ರೆ ಇಷ್ಟೋ ಮಾಡದಿದ್ದರೆ ಹೇಗೆ..? ಮಧುಮಿತಾ ಯಾರು? ನಿನಗೆ ಬೇಕಾದವಳಲ್ಲವಾ.. ಅದೆಲ್ಲ ಬಿಟ್ಹಾಕು.. ಅವರ ಮನೆಯಲ್ಲಿ ಹೇಗೆ..?'
                      `ಯಾರ ಮನೆಯಲ್ಲಿ..?'
                      `ಮಧುಮಿತಾಳ ಮನೆಯಲ್ಲಿ..'
                       `ಹೇಗೆ ಅಂದರೆ..?' ವಿನಯಚಂದ್ರನಿಗೆ ವಿಷಯ ಗೊತ್ತಿದ್ದೂ ಜಗ್ಗಾಡುತ್ತಿದ್ದ.
                       `ಗುಣ.. ವ್ಯಕ್ತಿಗಳು.. ಮಧುಮಿತಾಳ ಅಪ್ಪ-ಅಮ್ಮ'
                       `ಬಹಳ ಒಳ್ಳೆಯವರು. ನಮ್ಮ ಬಗ್ಗೆ ಗೌರವ ಇದೆ. ಗಲಭೆ ಪೀಡಿತ ಪ್ರದೇಶಕ್ಕೆ ಸಹಾಯಕ್ಕಾಗಿ ಬಂದಿದ್ದಾರೆ ಎನ್ನುವ ಕಾರಣಕ್ಕೆ ಬಹಳ ಖುಷಿ ಪಟ್ಟರು. ಅಭಿಮಾನದಿಂದ ನೋಡಿದರು. ನಾಳೆ ಅಥವಾ ನಾಡಿದ್ದು ಅವರನ್ನು ನಿನಗೆ ಪರಿಚಯ ಮಾಡಿಕೊಡ್ತೀನಿ.. ಅಪಾರ್ಟ್ ಮೆಂಟಿಗೆ ಹೋಗಿ ಬರೋಣ..' ಎಂದ ವಿನಯಚಂದ್ರ.
                        ಅಷ್ಟರಲ್ಲಿ ರೂಮ್ ಬಾಗಿಲು ಸದ್ದಾಯಿತು. ಸೂರ್ಯನ್ ಬಾಗಿಲ ಬಳಿ ಹೋದ. ವಿನಯಚಂದ್ರ ಪ್ರೆಶ್ಶಾಗಿ ಬರಲು ಬಾತ್ ರೂಮಿಗೆ ಹೋದ.

**
(ಮುಂದುವರಿಯುತ್ತದೆ)

No comments:

Post a Comment