Thursday, January 24, 2019

ಅಣುರಣನ-೧

ಆತ್ಮೀಯ ಓದುಗ ಬಳಗಕ್ಕೆ 
ಪ್ರೀತಿಯ ವಂದನೆಗಳು..

ಯಾವುದೇ ಒಂದು ಮುಕ್ತಾಯ ಇನ್ನೊಂದು ಆರಂಭಕ್ಕೆ ಕಾರಣ ಎಂದು ಹೇಳುತ್ತಾರೆ. ನಾನು ಬರೆದ ಬೆಂಗಾಲಿ ಸುಂದರಿ ಇದೀಗ ಪುಸ್ತಕ ರೂಪದಲ್ಲಿ ನಿಮ್ಮ ಮುಂದಿದೆ. ಆ ಹೊಸ್ತಿಲಿನಲ್ಲಿಯೇ ನನ್ನ ಮೂರನೇ ಕಾದಂಬರಿ ಅಣುರಣನವನ್ನು ಆರಂಭಿಸುತ್ತಿದ್ದೇನೆ. ಈ ಹಿಂದೆ ಅಘನಾಶಿನಿ ಅಂಗಳದಲ್ಲಿಯೇ ನನ್ನ ಮೊದಲ ಕಾದಂಬರಿ ಅಘನಾಶಿನಿ ಕಣಿವೆಯಲ್ಲಿ ಹಾಗೂ ಎರಡನೇ ಕಾದಂಬರಿಯಾದ ಬೆಂಗಾಲಿ ಸುಂದರಿಯನ್ನು ನಿಮ್ಮ ಓದಿಗೆ ಬಿಟ್ಟಿದ್ದೆ. ಅವುಗಳನ್ನು ನೀವು ಪ್ರೀತಿಯಿಮದ ಆದರಿಸಿದ್ದರಿ. ಅಷ್ಟೇ ಕುತೂಹಲದಿಂದ ಕಾದಿದ್ದೀರಿ. ಮುಂದೇನು ಎಂದು ಪ್ರಶ್ನಿಸಿದ್ದಿರಿ. ಯಾವಾಗ ಮುಂದಿನ ಭಾಗವನ್ನು ಹಾಕುತ್ತೀರಾ ಎಂದು ಹಿತವಾಗಿ ಬೈದಿದ್ದೀರಿ. ಆ ಕಾದಂಬರಿಗಳ ಪೈಕಿ ಬೆಂಗಾಲಿಯನ್ನು ಮುಗಿಸಿ ಪುಸ್ತಕ ರುಪದಲ್ಲಿ ನಿಮ್ಮೆದುರು ಇಟ್ಟಿದ್ದೇವೆ. ಅದೀಗ ಮಾರುಕಟ್ಟೆಯಲ್ಲಿ ಲಭ್ಯ. (ಫೆ.೩ಕ್ಕೆ ಬಿಡುಗಡೆಯಾಗುತ್ತಿದೆ). 
ಅಘನಾಶಿನಿ ಕಣಿವೆಯಲ್ಲಿ ಕಾದಂಬರಿ ಇನ್ನೂ ಮುಗಿದಿಲ್ಲ. ಶೀಘ್ರದಲ್ಲಿಯೇ ಅದನ್ನು ಮುಕ್ತಾಯ ಮಾಡುವ ಭರವಸೆ ನೀಡುತ್ತಿದ್ದೇನೆ.

ಅಂದಹಾಗೆ ನನ್ನ ಈ ಕಾದಂಬರಿಯ ಕುರಿತು ಕೆಲವು ಮಾತುಗಳನ್ನು ಹೇಳಲೇ ಬೇಕು. ಈ ಕಾದಂಬರಿಯ ಒನ್ ಲೈನ್ ಕಳೆದ ೨ ವರ್ಷಗಳಿಂದ ನನ್ನ ಮನಸ್ಸಿನಲ್ಲಿ ಕೊರೆಯುತ್ತಲೇ ಇತ್ತು. ಅದಕ್ಕೀಗ ಅಕ್ಷರ ರೂಪವನ್ನು ಕೊಡುತ್ತಿದ್ದೇನೆ. ನಾನು ಶಿರಸಿಯಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾಗ ಕಂಡಂತಹ ಪ್ರತ್ಯಕ್ಷ ಘಟನೆಗಳು, ಸನ್ನಿವೇಶಗಳು ಈ ಕಾದಂಬರಿಯಲ್ಲಿದೆ. ಒಂದು ನದಿ, ಅದರ ಸುತ್ತಲ ಘಟನೆಗಳು, ಒಮದು ಅಣು ಸ್ಥಾವರ, ಅದರ ಸುತ್ತಲಿನ ಹಲವು ಸಂಗತಿಗಳು, ಮಾನವೀಯ ನೆಲೆಗಳು, ಭಾವನೆಗಳು, ಸಂಬಂಧಗಳ ಇತ್ಯಾದಿಗಳನ್ನಜ ಒಳಗೊಂಡ ಕಾದಂಬರಿ ಇದು. ಪ್ರತ್ಯಕ್ಷ ಭೇಟಿ ಕೊಟ್ಟು, ಹಲವು ಮಾಹಿತಿಗಳನ್ನು ಸಂಗ್ರಹಿಸಿ, ಪತ್ರಿಕೆಗಳಲ್ಲಿ ಬಂದಂತಹ ಮಾಹಿತಿಗಳನ್ನು ಆಧಾರವಾಗಿ ಇಟ್ಟುಕೊಂಡು ಬರೆಯುತ್ತಿರುವ ಕಾದಂಬರಿ ಇದು. ಈ ಕಾದಂಬರಿಯನ್ನೂ ನನ್ನ ಹಿಂದಿನ ಕಾದಂಬರಿಗಳಂತೆಯೇ ನೀವು ಪ್ರೀತಿಯಿಮದ ಆದರಿಸಿಕೊಳ್ಳುತ್ತೀರಿ ಎನ್ನುವ ಭಾವನೆ ನನ್ನದು.

ಮತ್ತೊಮ್ಮೆ ಪ್ರೀತಿಯಿಂದ
ವಿನಯ್ ದಂಟಕಲ್
೯೮೮೦೧೯೦೬೪೨

----------------------

`ನಮ್ಮ ಹೊಸ ಪತ್ರಿಕೆಯಲ್ಲಿ ಉತ್ಸಾಹಿ ವರದಿಗಾರರು ಬೇಕಾಗಿದ್ದಾರೆ.`
ಹೀಗೊಂದು ಜಾಹೀರಾತು ಕಣ್ಣಿಗೆ ಬೀಳುವ ವೇಳೆಗೆ ವಿಜಯ್ ಗುಂಟಕಲ್ಲು ಸಾಕಷ್ಟು ಹೈರಾಣಾಗಿದ್ದ. ಹತ್ತಾರು ಕಡೆಗಳಲ್ಲಿ ಉದ್ಯೋಗಕ್ಕಾಗಿ ಅಲೆದಾಡಿ ಒದ್ದಾಟ ನಡೆಸಿದ್ದ. ಹಲವು ಕಡೆಗಳಲ್ಲಿ ಸಂದರ್ಶನಗಳಲ್ಲಿ ಪಾಲ್ಗೊಂಡು, ನೀವು ಬೇಡ ಎನ್ನಿಸಿಕೊಂಡಿದ್ದ.
`ಇನ್ನು ನಿನಗೆ ಕೆಲಸ ಸಿಗೋದಿಲ್ಲ ಸುಮ್ಮನೆ ಮನೆಯಲ್ಲಿ ಕೆಲಸ ಮಾಡ್ಕೊಂಡು ಇರು. ಇರೋ ಎರಡು ಎಕರೆ ಜಮೀನನ್ನು ಚನ್ನಾಗಿ ದುಡಿಸಿ, ಒಳ್ಳೆ ಬೆಳೆ ತೆಗೆದು ಯಶಸ್ವಿ ಕೃಷಿಕ ಎನ್ನಿಸಕೊ` ಎಂಬ ತಂದೆಯ ಮಾತಿಗೆ ಓಗೊಟ್ಟು ಕೃಷಿಯತ್ತ ಮುಖ ಮಾಡಿದ್ದ.
ವಿಜಯ್ ಗುಂಟಕಲ್ಲು ಓದಿದ್ದು ಕಡಿಮೆಯೇನಲ್ಲ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಉತ್ತಮ ಅಂಕಗಳೊಂದಿಗೆ ಪಾಸು ಮಾಡಿದ್ದ. ಆದರೆ ಅವನ ಅದೃಷ್ಟಕ್ಕೆ ಆತನಿಗೆ ಬೇಕಾದಂತಹ ಉದ್ಯೋಗ ಸಿಕ್ಕಿರಲಿಲ್ಲ. ಯಾವುದೆ ಕ್ಷೇತ್ರವಾದರೂ ಆರಂಭದ ದಿನಗಳಲ್ಲಿ ಸುಲಭವಾಗಿ ಸಿಗುವುದಿಲ್ಲವಲ್ಲ. ಹಾಗಾಗಿತ್ತು ವಿಜಯ್ನ ಪಾಡು.
ಸ್ನಾತಕೋತ್ತರ ಪದವಿಯ ಪರೀಕ್ಷೆಯನ್ನು ಮುಗಿಸಿದ ನಂತರ ಅದರ ಫಲಿತಾಂಶ ಬರುವ ಮೊದಲೇ ಸಾಕಷ್ಟು ಪತ್ರಿಕಾ ಕಚೇರಿಗಳಿಗೂ, ವಾರ್ತಾ ವಾಹಿನಿಗಳಿಗೂ ತನ್ನ ಸ್ವ ವಿವರಗಳನ್ನು ಮಿಂಚಂಚೆಯಯ ಮೂಲಕ ಕಳಿಸಿದ್ದ. ಅಲ್ಲದೇ ತಾನೂ ಬೆಂಗಳೂರಿಗೆ ಹೋಗಿ ಪತ್ರಿಕಾ ಹಾಗೂ ವಾರ್ತಾ ವಾಆಹಿನಿಗಳ ಕಚೇರಿಗೆ ಎಡತಾಕಿ ಬಂದಿದ್ದ, ನಾಳೆ ಬನ್ನಿ, ನಾಡಿದ್ದು ಬನ್ನಿ, ಮುಂದಿನ ವಾರ ಬನ್ನಿ ಎಂಬ ಮಾತುಗಳನ್ನು ಕೇಳಿಸಕೊಂಡು ವಾಪಾಸಾಗಿದ್ದ.
ನಡು ನಡುವೆ ಮಿತ್ರರುಗಳ ಸಲಹೆಯಂತೆ ಸ್ಥಳೀಯವಾಗಿ ಡಾಟಾ ಎಂಟ್ರಿ, ಕಂಪ್ಯೂಟರ್ ಆಪರೇಟರ್, ಹೊಟೆಲ್ ರಿಸೆಪ್ಷನಿಷ್ಟ್ ಹೀಗೆ ಹಲವು ತಾತ್ಕಾಲಿಕ ಕೆಲಸಗಳಲ್ಲಿಯೂ ತನ್ನನ್ನು ತಾನು ತೊಡಗಿಸಿಕೊಂಡಿದ್ದ. ಈ ಎಲ್ಲ ಕಡೆಗಳಲ್ಲಿ ಕೊಡುತ್ತಿದ್ದ ಹಣವನ್ನು ಬಂಗಾರವೆಂಬಂತೆ ಕಾಪಾಡಿ ಉಳಿಸಿಕೊಳ್ಳಲು ಯತ್ನಿಸಿದ್ದ. ಮೊದ ಮೊದಲು ಸಣ್ಣ ಪುಟ್ಟ ಕೆಲಸ ಮಾಡಲು ಸ್ವಾಭಿಮಾನ ಅಡ್ಡ ಬಂದಿತ್ತಾದರೂ, ನಂತರದ ದಿನಗಳಲ್ಲಿ ಕೆಲಸ ಹಿಡಿಯಲೇಬೇಕು ಎಂಬ ಅನಿರ್ವಾತೆ ಆತನನ್ನು ಕಾಡಿತ್ತು. ಹೀಗಾಗಿ ಈ ಎಲ್ಲ ವೃತ್ತಿಗಳಲ್ಲಿಯೂ ತನ್ನನ್ನು ತಾನು ತೊಡಗಿಸಿಕೊಂಡಿದ್ದ. ಆದರೆ ತಾತ್ಕಾಲಿಕವಾಗಿದ್ದ ಈ ಎಲ್ಲ ಕೆಲಸಗಳೂ ಒಂದು ದಿನ ಮುಗಿದ ಮರುದಿನ ಮುಮದೇನು ಮಾಡುವುದು ಎಂಬ ಶೂನ್ಯ ಆತನನ್ನು ಆವರಿಸಿತ್ತು. ತದನಂತರದಲ್ಲಿಯೇ ಆತನ ತಂದೆ ವಿಜಯನ ಬಳಿ ಕೃಷಿ ಮಾಡು ಎನ್ನುವ ಸಲಹೆ ನೀಡಿದ್ದರು. ತಾನೂ ಅದರಲ್ಲಿ ತೊಡಗಿಸಿಕೊಂಡಿದ್ದ. ಇಂತಹ ಸಂದರ್ಭದಲ್ಲಿಯೇ ವಿಜಯ್ ನಿಗೆ ಆತನ ಮಿತ್ರ `ಉತ್ಸಾಹಿ ಯುವಕರು ಪತ್ರಿಕೆಗೆ ಬೇಕಾಗಿದ್ದಾರೆ' ಎನ್ನುವ ಜಾಹೀರಾತನನ್ನು ನೀಡಿದ್ದ. ಮತ್ತೊಮ್ಮೆ ಆತನ ಕಣ್ಣಲ್ಲಿ ಹೊಸ ಮಿಂಚೊಂದು ಮೂಡಿತ್ತು.
ಆ ದಿನ ಸಂಜೆಯೇ ಆತ ತನ್ನ ಸ್ವವಿವರವನ್ನು ಆ ಪತ್ರಿಕೆಗೆ ಕಳುಹಿಸಿ, ಅವರ ಉತ್ತರಕ್ಕಾಗಿ ಕಾಯತೊಡಗಿದ್ದ.

(ಮುಂದುವರಿಯುತ್ತದೆ)


No comments:

Post a Comment