(ಚಿತ್ರ ಕೃಪೆ : ವಿನಾಯಕ ಹೆಗಡೆ) |
ಗೆಳೆಯಾ...,
ಅದೆಷ್ಟೆಲ್ಲಾ ದಿನವಾಗಿ ಬಿಡ್ತು ಅಲ್ವೇನೋ ನನ್ನ-ನಿನ್ನ ಪತ್ರದ ಮಾತು-ಕಥೆಗೆ.. ಪೂರ್ತಿ ಆರು ತಿಂಗಳಾಯ್ತು ಅಲ್ಲವಾ ನಿನ್ನಿಂದ ಪತ್ರ ಬಂದು.. ತಪ್ಪು ನಂದು, ಸಾರಿ ಕಣೋ, ನಾನು ಇಲ್ಲಂತೂ ಬಹಳ busy ಆಗಿಬಿಟ್ಟಿದ್ದೆ. ಅದು ಸಾಲದೆಂಬಂತೆ `ಅವಳ ಪ್ರಸಂಗ-ಸಂಗ ಬೇರೆ ನನ್ನ ಬೇರಾವುದೇ ಇಕ್ಕೆಲಗಳಿಗೆ ಚಿಂತಿ ಮಾಡ್ಲಿಕ್ಕೆ ಕೊಡಲೇ ಇಲ್ವೋ..
ಇದೇನು ಹೀಗೆಲ್ಲಾ ಚಿತ್ರ ವಿಚಿತ್ರವಾಗಿ ಇವನು ಬರೀತಿದ್ದಾನೆ ಅಂದ್ಕೊಂಡ್ಯಾ? ಇದು ನೀ ಬರೆದಿದ್ಯಲ್ಲಾ ಆ last letterನ ನಂತರದ ಕಥೆ.
ಭಾವದ ಅಣೆಕಟ್ಟು ತುಂಬಿದ ನಂತರ ಒಂದಲ್ಲಾ ಒಂದಿನ ಒಡೆದು ಭಾವದ ಹನಿಗಳೆಲ್ಲ ತಳಕಾಣುವಂತೆ ಬಸಿದು ಹೋಗ್ತಾವಲ್ಲಾ, ಆಗ ಮನಸ್ಸಿಗೆ ಅದೆಷ್ಟೋ ಹಿತ-ಸಮಾಧಾನ-ಸಂತಸ ಅಲ್ವಾ..? ಅದೇ ಕಾರಣಕ್ಕಾಗಿಯೇ ನಾನು ಈ ಆರು ತಿಂಗಳುಗಳ ನಡುವೆ ಅದೇನೆಲ್ಲಾ ಘಟಿಸಿಬಿಡ್ತು ಅಂತ ಹೇಳಿಬಿಡ್ತೀನಿ.. ಆಗೆ ನಂಗೆ ಏನೋ ಒಂಥರಾ ಹಿತ. ಜೊತೆಗೆ ನನ್ನೊಳಗಿದ್ದ ಭಾವನೆಗಳನ್ನು ಇನ್ನೊಬ್ಬರ ಜೊತೆಗೆ ಹಂಚಿಕೊಂಡ್ನಲ್ಲಾ ಅಂತ ಸಮಾಧಾನ..
ನಾನು ನಿಂಗೆ ಕೊನೆಯ letter ಬರೆದಿದ್ನಲ್ಲಾ ಆಗಲೇ ನಮಗೆ ಕಾಲೇಜು ಶುರುವಾಗಿದ್ದು, ಸರಿ ಹೊಸ ಹುರುಪು, ಉಲ್ಲಾಸ-ಉತ್ಸಾಹ ಕಾಲೇಜಿಗೆ ಭರ್ಜರಿಯಾಗಿಯೇ ಹೋಗಿಬಿಟ್ಟೆ..ಕಾಲೇಜು ವಾತಾವರಣ ನಂಗೆ ಹೊಸದೋ ಹೊಸದು. ಜೊತೆಗೆ ಪ್ರೊಫೆಸರ್ರು, ಹುಡುಗ್ರು, ಹಿಡ್ಗೀರು ಎಲ್ಲಾ ಹೊಸ ಮುಖ. ಹೊಸ ಪರಿಚಯ. ಯಾರದ್ದೂ ಪರಿಚಯವಿರಲೇ ಇಲ್ಲ. ಕ್ರಮೇಣ ದಿನಕಳೆದಂತೆ ಹೊಸ ಹೊಸಬರ ಪರಿಚಯವಾಯಿತು. ನಮ್ಮ ನಮ್ಮಲ್ಲೇ ಹೊಸದೊಂದು ಮಿತ್ರವೃಂದ ಹುಟ್ಟಿಕೊಂಡಿತು. ಕಾಲೇಜಿನ ಅದ್ಯಾವುದೋ ಒಂದೆರಡು ಮರಗಳ ಅಡಿಯಲ್ಲಿನ ತಂಪು ಪ್ರದೇಶವೇ ನಮ್ಮ ಮಿತ್ರವೃಂದಕ್ಕೆ ಹರಟೆಕಟ್ಟೆಯಾಯಿತು. ಕ್ರಮೇಣ ಕಾಲೇಜು ಅಂದರೆ ಅದೇನೋ ಖುಷಿ, ಸಂತೋಷ, ಹೊಸ ಹುರುಪು, ಆನಂದ.. ದೇವರು ಈ ಬದುಕನ್ನು ನಮಗಾಗಿಯೇ ಸೃಷ್ಟಿ ಮಾಡಿದ್ದಾನೋ ಎನ್ನುವಷ್ಟು ನವೋಲ್ಲಾಸ. ಆಗ ನಮಗೆಲ್ಲಾ collage life is golden life ಅಂತಾರಲ್ಲಾ, ಆ ಮಾತು ನಿವೇನೋ ಅನ್ನಿಸತೊಡಗಿತ್ತು.
ಅಂತಹ ಹೊತ್ತಿನಲ್ಲಿಯೇ ನನಗೆ ಪರಿಚಯವಾದವಳು ಸ್ವಪ್ನ. ಒಳ್ಳೆಯ ಹಾಲು ಬೆಳದಿಂಗಳಿನಂತಹ ಹುಡುಗಿ. ಅವಳ ಪರಿಚಯ ಉಳಿದೆಲ್ಲ ಮಿತ್ರರ ಪರಿಚಯವಾದಂತೆ ಆಗಲಿಲ್ಲ. ಸ್ವಲ್ಪ ಬೇರೆಯ ತೆರನಾಗಿ ಪರಿಚಯವಾದಳು ಸ್ವಪ್ನ. ಅದೇನೆಂದ್ರೆ ನನ್ನ ಕಾಲೇಜಿನ ಪ್ರಾರಂಭದ ದಿನಗಳಲ್ಲಿ ನನ್ನ ಬಗ್ಗೆ ನಾನು ಹೇಳಿಕೊಳ್ಳುವುದು ಹೆಚ್ಚಿತ್ತಲ್ಲ.. ಹಾಗೆಯೇ ಇಲ್ಲೂ ಕೂಡ ನಾನು ಅದೆಂತಹುದೇ `ಚಾಲೆಂಜ್' ಅನ್ನೂ ಗೆಲ್ಲುತ್ತೇನೆ ಎಂದು ಎಲ್ಲರೆದುರೂ ಕೊಚ್ಚಿಕೊಂಡುಬಿಟ್ಟಿದ್ದೆ. ಅದನ್ನು ಕೇಳಿದ ಹೊಸ ದೋಸ್ತರು ಒಂದೆರಡು ಜನ ಕಾಲೇಜಿನ ಸೈಕಲ್ ಸ್ಟಾಂಡ್ ಬಳಿ ನಿಂತಿದ್ದ ಒಂದು ಕೈನಿಯ ಗಾಳಿ ತೆಗೆಯಲು ಹೇಳಿಬಿಟ್ಟರು. ಇದೆಂತಾ ಸಿಂಪಲ್ ಚಾಲೇಂಜು ಎಂದುಕೊಂಡು ಹಿಂದಿ ಸಿನೆಮಾ ಹೀರೋನ ಸ್ಟೈಲಿನಲ್ಲಿ ಹೋಗಿ ಆ ಕೈನಿಯ ಗಾಳಿ ತೆಗೆಯುತ್ತಿದ್ದಾಗ ಬಿರುಗಾಳಿಯಂತೆ ಬಂದ ಆ ಕೈನಿಯ ಹುಡುಗಿ ನನ್ನ ಜೊತೆ ಗಲಾಟೆ ಮಾಡಿ, ಜಗಳ ಕಾಯ್ದಳು. ಹಾಗೆಯೇ ಕಾಲೇಜಿನ ಪ್ರಿನ್ಸಿಪಾಲರ ಬಳಿ ಹೊರಟುನಿಂತಳು.
ಆಕೆಯೇ ಈ ಸ್ವಪ್ನ.. ಆಕೆಯನ್ನು ಆವಾಗ ಪ್ರಿನ್ಸಿಯ ಬಳಿ ಹೋಗದಿರುವಂತೆ ಮಾಡಲು ಅದ್ಯಾವ ಪರಿಯಾಗಿ ದಮ್ಮಯ್ಯ ಗುಡ್ಡೆ ಹಾಕಿದ್ದೆನೋ.. ನೆನೆಪು ಮಾಡಿಕೊಂಡ್ರೆ ಈಗಲೂ ಎದೆ ನೋಯುವಷ್ಟು ನಗು ಬರ್ತದೆ. ಆನಂತರ ಾಕೆ ನಂಗೆ `ಪಂಚರ್' ಅಂತಲೇ ಹೆಸರು ಇಟ್ಟುಬಿಟ್ಟಳು. ಇದಾಗಿ ಕೆಲವು ದಿನಗಳ ನಂತರವೇ ನನ್ನ ಜೀವನ ಎಂಬ ಗಾಳಿ ತುಂಬಿದ ಗಾಲಿಗೆ ಆಕೆ ಎಂಬ ಸೂಜಿ ಚುಚ್ಚಿ ನಾನು ಬದುಕಿನಲ್ಲಿ ಪಂಚರ್ ಆದದ್ದು.!
ಓಹ್..| ಗೆಳೆಯಾ ನಾನು ಅವಳ ಬಗ್ಗೆ ಹೇಳೋದನ್ನು ಅರ್ಧಕ್ಕೆ ನಿಲ್ಲಿಸಿಬಿಟ್ಟೆ ಅಲ್ಲವಾ? ತಾಳು ಹೇಳ್ತೀನಿ. ಅವಳು ಬೆಳ್ಳಗಿದ್ಲು ನಿಜ.. ಆದರೆ ಅವಳೇನೂ ಕಾಲೇಜಿನ ಬ್ಯೂಟಿಕ್ವೀನ್ ಆಗಿರಲಿಲ್ಲ. ಆದರೆ ಒಂದೇ ನೋಟದಲ್ಲಿ ಸೆಳೆಯುವಂತಹ ಲಕ್ಷಣ. ತಂಪು ಕಣ್ಗಳು. ಹಾಳು style ಇಲ್ಲದಿರುವ ಬದುಕು ಇವಿಷ್ಟೇ ಅವಳ ಕಡೆಗೆ ಕುತೂಹಲ ಹುಟ್ಟಿ ಆಕರ್ಷಿಸಲು ಅನುವಾಗುವಂತಹ ಗುಣಗಳಾಗಿದ್ದವು. ಬಹುಶಃ ಇವುಗಳೇ ನನ್ನನ್ನು ಸೆಳೆದಿದ್ದಿರಬೇಕು.
ಆದರೆ ಒಂದು ವಿಷಯ ಹೇಳ್ಲಾ.. ಆಕೆ ಭರ್ಜರಿ ಶ್ರೀಮಂತೆ. ನಾನು ಪಕ್ಕಾ ಭಿಕ್ಷುಕನಂತಹ ಬಡವ. ಆದ್ರೂ ನಮ್ಮ ನಡುವೆ ಪ್ರೇಮ ಹುಟ್ಟಿತು. ಕೊನೆಗೆ ಈ gap ಇಂದಲೇ ಒಡೆದು ಚೂರು ಚೂರಾಗಿಬಿಡ್ತು. ಹುಂ..!! ಗೆಳೆಯಾ.. ನೀನು ಅದೆಷ್ಟು ಬಾರಿ ನನ್ನ ಬಳಿ ಹೇಳಿದ್ಯೋ.. ಈ ಹುಡ್ಗೀರನ್ನು ನಂಬಬೇಡ ಅಂತ. ಜೊತೆಗೆಕಾಲೇಜು ಜೀವನದಲ್ಲಿ ಲವ್ ಮಾಡಬೇಡ ಅಂತ. ನೀನು ಹೇಳಿದ್ದು ನಂಗೆ ತಮಾಷೆಯಾಗಿ ಕಂಡಿತ್ತು. ಆದ್ರೆ ಅದೇ ನಿಜ ಅನ್ನೋದು ನನಗೀಗ ಅರಿವಾಗ್ತಿದೆ ಮಾರಾಯಾ..
ಎಲ್ಲ ಲವ್ ಗಳೂ ಅಸಾಧ್ಯ ಎನ್ನುವಲ್ಲಿ ಹುಟ್ಟುತ್ತವೆ.. ಸಾಧ್ಯ ಎನ್ನುವಾಗ ಸತ್ತುಹೋಗುತ್ತವೆ. ಅಂತಹ ಪ್ರೇಮವನ್ನು ನಾವೇ ಸೊಕಾ ಸುಮ್ಮನೆ ಅಸಾಧ್ಯವನ್ನಾಗಿ ಮಾಡಿಕೊಳ್ಳುತ್ತೇವೆ. ನನ್ನ ಪ್ರೇಮಪರಿಣಯವೂ ಕೂಡ ಅಸಾಧ್ಯ ಎನ್ನುವಂತೆಯೇ ಆರಮಭವಾಯಿತು. ಆದರೆ ಅದನ್ನು ಸಾಧ್ಯ ಮಾಡಿಕೊಳ್ಳಲು ಎಷ್ಟೆಲ್ಲಾ ಅವಕಾಶವಿತ್ತು. ಆದರೆ ಕಂಡ ಕನಸುಗಳೆಲ್ಲ ನನಸಾಗುವಂತಿದ್ದರೆ ಬದುಕು ಹೀಗಿರ್ತಿರಲಿಲ್ಲ ಅಲ್ಲವಾ.. ನನ್ನ ಪ್ರೇಮದ ಆರಂಭ ಅವಳಿಂದಲೇ ಆದದ್ದು ಎನ್ನುವುದನ್ನು ನೀನು ನಂಬಲೇಬೇಕು ದೋಸ್ತಾ.. ನಾನೂ ಆಕೆಯನ್ನು ಮನಸ್ಸಿನಲ್ಲೇ ಪ್ರೀತಿಸುತ್ತಿದೆ. ಪೂಜಿಸುತ್ತಿದೆ. ಭಕ್ತಿಯಿಂದ ಆರಾಧಿಸುತ್ತಿದ್ದೆ. ಅವಳದ್ದೂ ಹಾಗೆಯೇ.. ಅದೊಂದು ದಿನ ನನ್ನ ಬಳಿ ಬಂದು ನೇರವಾಗಿ `ನಾನಿನ್ನ ಪ್ರೀತಿಸ್ತಾ ಇದ್ದೀನಿ ಕಣೋ..' ಎಂದುಬಿಟ್ಟಿದ್ದಳು. ದೂಸರಾ ಮಾತಿಲ್ಲದೇ ನಾನು ಒಪ್ಪಿಕೊಂಡು ಬಿಟ್ಟಿದ್ದೆ.
ಅದ್ಯಾಕೋ ಗೊತ್ತಿಲ್ಲ.. ನಾನು ಬಡತನದ ಬೇಗೆಯಲ್ಲಿ ನರಳ್ತಾ ಇದ್ದರೂ ನನ್ನನ್ನವಳು ಇಷ್ಟಪಟ್ಟುಬಿಟ್ಟಿದ್ದಳು. ದಿನಾ ಬೆಳಗಾಯ್ತು ಅಂದ್ರೆ ಸಾಕು ನಾವಿಬ್ಬರೂ ಒಬ್ಬರನ್ನೊಬ್ಬರು ನೋಡಲು, ಭೇಟಿಮಾಡಿ ಮಾತನಾಡಲು ಪರಿತಪಿಸುತ್ತಿದ್ದೆವು. ನಮ್ಮ ಅಂತರಾಳದಲ್ಲಿ ಅರಳಿದ ಪ್ರೀತಿ ನಮ್ಮಿಬ್ಬರನ್ನು ಬಿಟ್ಟರೆ ಮೂರನೆ ಮಂದಿಗೆ ಗೊತ್ತಾಗದಂತೇ ಕಾಪಾಡಿಕೊಂಡಿದ್ವಿ. ಅಪ್ಪಿತಪ್ಪಿಯೂ ನಾವಿಬ್ಬರು ಪ್ರೀತಿಸುತ್ತಿದ್ದೀವಿ ಎನ್ನೋ ವಿಷಯ ಖಾಸಾ ಗೆಳೆಯರ ಬಳಗಕ್ಕೂ ತಿಳಿಯಲಿಲ್ಲ.
ಸ್ವಪ್ನ. ಅದೆಷ್ಟು ಸಾರಿ ಕನಸಲ್ಲಿ ಬಂದು ಕಾಡಿದ್ಲು.. ಮನಸಲ್ಲಿ ಮನೆಮಾಡಿದ್ಲು.. ನಾ ಬೇಜಾರು ಪಟ್ಕೊಂಡಿದ್ದಾಗಲೆಲ್ಲ ನನ್ನ ಬೇಸರ ಓಡಿಸ್ತಿದ್ಲು.. ಕೆಲವೊಂದು ಸಲ ನಿರಾಸೆಯಿಂದ ಕೈಚೆಲ್ಲಿ ಕುಳಿತಿದ್ದಾಗ ಬದುಕಿನ್ನೂ ಬೆಟ್ಟದ ತುದಿಯಷ್ಟಿದೆ. ಆ ಬೆಟ್ಟದ ಬುಡದಲ್ಲೇ ನೀನು ಸೋತು ಕುಳಿತರೆ ಹೆಂಗೆ ಮಾರಾಯಾ.. ನನ್ನವ ನೀನು ಬೆಟ್ಟದ ತುದಿಯನ್ನೇ ಮುಟ್ಟಿ ಗೆಲ್ಲಬೇಕು. ನಿನ್ನ ರಟ್ಟೆಯಲ್ಲಿ ಅಂತಹ ಬಲವಿದೆ ಮಾರಾಯಾ.. ಬದುಕಿನ ತುಂಬಾ ಛಲವಿದೆ. ಏಳು ಅಂತ ನನ್ನನ್ನು ಜೀವನದ ಸ್ಪರ್ಧೆಯ ಅಂಗಣಕ್ಕೆ ಚೈತನ್ಯಯುಕ್ತವಾಗಿ ತಂದು ನಿಲ್ಲಿಸಿ ಬಿಡ್ತಿದ್ಲು.. ಚೆಂದದ ನವಿಲುಗರಿ, ಅಘನಾಶಿನಿಯ ಆಳಕ್ಕೆ ಒಂದು ಮುಳುಕು ಹೊಡೆದು ಆಳದಲ್ಲೆಲ್ಲೋ ಅಡಗಿ ಕುಳಿತಿರುತ್ತಿದ್ದ ಕಲ್ಲನ್ನು ಹೆಕ್ಕಿ ತಂದುಕೊಡುವುದು, ಹೊಚ್ಚ ಹೊಸದಾಗಿ ಬರೆದ ಕವನ ಇಂತವುಗಳೇ ಅವಳಿಗೆ ಇಷ್ಟವಾಗುವ ನನ್ನ ಗಿಪ್ಟುಗಳಾಗಿದ್ದವು.
ಆಕೆಗೆ ನನ್ನ ಬರವಣಿಗೆಯ ಮೇಲೆ ಪ್ರೀತಿಯಿತ್ತು. ಆರಾಧನೆಯಿತ್ತು. ಅಭಿಮಾನವಿತ್ತು. ಹಾಗೆಯೇ ಯಾವಾಗಲಾದರೂ ನನ್ನ ಸುಂದರ ಕವಿತೆಗಳು, ಬರಹಗಳು ಯಾವುದಾದರೂ ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು ಅಂತಾದ್ರೆ ನನಗಿಂತ ಹೆಚ್ಚು ಖುಷಿಪಟ್ಟುಬಿಡುತ್ತಿದ್ದಳು. ಗೆಳೆಯಾ, ನಮ್ಮ ಪ್ರೀತಿ ಹೀಗಿದ್ದರೂ ಅದರಲ್ಲಿ ಕಾಮವಿರಲಿಲ್ಲ. ನಮ್ಮಲ್ಲಿ ಮನಸಿಗೆ ಬೆಲೆ ಕೊಡುವ ಗುಣವಿತ್ತಾದ್ದರಿಂದ ದೈಹಿಕ ಆಸೆಗಳು ನಗಣ್ಯ ಎನ್ನಿಸಿದ್ದವು.
ದಿನಗಳೆದಂತೆ ನಾನು ಆಕೆಯ ಒಡನಾಟಕ್ಕೆ, ನಗುವಿಗೆ, ಮಾತು ಕತೆಗೆ ಪರಿತಪಿಸುತ್ತಿದ್ದೆ. ಸದಾ ಅವಳ ಇರವನ್ನೇ ಬಯಸುತ್ತಿದ್ದೆ. ವಿಚಿತ್ರ ನೋಡು.. ನಮ್ಮ ಪ್ರೀತಿ ಎನ್ನುವುದು ನನ್ನ ಮನೆಯಲ್ಲೂ, ಆಕೆಯ ಮನೆಯಲ್ಲೂ ಗೊತ್ತಿತ್ತು. ನಮ್ಮ ಪ್ರೇಮಕ್ಕೆ ಒಪ್ಪಿಗೆಯಿತ್ತು. ಸ್ವಪ್ನಳ ತಂದೆ ತಾಯಿಗಳು ಚಿನ್ನದ ತೊಟ್ಟಿಲಿನವರಾದರೂ ಅವರಿಗೆ ನಾನೆಂದರೆ ಅದೆಂತಹ ಪ್ರೀತಿ, ಮಮತೆ, ಅಕ್ಕರೆ, ಖುಷಿ, ನಂಬಿಕೆ ಗೊತ್ತಾ. ತಮ್ಮ ಮನೆಯ ಸದಸ್ಯರಲ್ಲಿ ನಾನೂ ಒಬ್ಬನೇನೋ ಎನ್ನುವಂತೆ ಕಾಣುತ್ತಿದ್ದರು.
ಆ ದಿನಗಳಲ್ಲಿ ಹುಂಬ ಧೈರ್ಯವೇ ನನ್ನ ಆಸ್ತಿ. ಅದನ್ನು ಬಿಟ್ಟರೆ ಬೇರೆ ನಾಸ್ತಿ ಎಂಬಂತಹ ಕಾಲ. ನಾನು ತನಿಖಾ ವರದಿ ಅದೂ ಇದೂ ಹಾಳು-ಮೂಳು ಅಂತ ಹೋಗುವ ಹುಚ್ಚನ್ನು ಬೆಳೆಸಿಕೊಂಡವನು. ನಾನು ಅದೆಲ್ಲಿಗೇ ತನಿಖಾ ವರದಿಗೆ ಅಂತ ಹೊರಟುಬಿಟ್ಟರೆ ನನ್ನ ಜೊತೆಗೆ ಸ್ವಪ್ನ ಬಂದೇ ಬಿಡುತ್ತಿದ್ದಳು. ಅದೆಷ್ಟೇ ರಿಸ್ಕಿಯಾಗಿದ್ದರೂ ಸ್ವಪ್ನ ಕೂಡ ನನ್ನ ಜೊತೆಗೆ ಹಾಜರ್. ಹೀಗಾಗಿಐಎ ನಾನು ನಮ್ಮ ಪ್ರದೇಶದ ಅದೆಷ್ಟೋ ನಿಘೂಡ ರಹಸ್ಯಗಳನ್ನು ಅವಳ ಸಾನ್ನಿಧ್ಯದೊಡನೆಯೇ ಹೊರ ಜಗತ್ತಿಗೆ ಕಾಣುವಂತೆ ಮಾಡಿದ್ದೆ. ಇಷ್ಟೇ ಅಲ್ಲ ಕಣೋ, ನಾನು ಅದೆಷ್ಟು ಒಳ್ಳೊಳ್ಳೆಯ ಸ್ಥಳಗಳಿಗೆ ಹೋಗಿಬಂದಿದ್ದೀನಿ ಅವಳ ಜೊತೆ ಗೊತ್ತಾ. ನಮ್ಮ ಕಾಲೇಜಿನ ನಮ್ಮ ಬಳಗ ಪಿಕ್ನಿಕ್ಕಿಗೆ ಅಂತ ಹೋದಾಗ್ಲೆಲ್ಲಾ ನಾವೂ ಹೋಗಿ ಬಂದಿದ್ವಿ. ಉಂಚಳ್ಳಿ ಜಲಪಾತ, ಸಾತೊಡ್ಡಿ ಜಲಪಾತ, ಗಿರ್ ಗಿರ್ ಪಾಥರ್, ಮರಿಯಾಣ, ಜೋಗಿಕಲ್ಲು... ಓಹ್ ಉತ್ತರ ಕನ್ನಡದ ಒಡಲಿನ ಅದೆಷ್ಟೋ ತಾಣಗಳನ್ನು ನೋಡಿದ್ದೀವೋ ಲೆಕ್ಖವಿಲ್ಲ.
ಗೆಳೆಯಾ.. ಇದುವರೆಗೂ ನನ್ನ ಪ್ರೇಮದ ಖುಷಿಯ ಸಂಗತಿಗಳನ್ನು ನಿನ್ನ ಮುಂದಿಟ್ಟೆ. ಇನ್ನು ಮುಂದಿನದೆಲ್ಲಾ ದುರಂತಮಯವಾದುದು. ಭಗ್ನ ಪ್ರೇಮದ ಸ್ನಿಗ್ಧ ಭಾವಗಳು. ಇದನ್ನು ನೀನು ಇಂಟರ್ವಲ್ ನಂತರದ ಸಿನಿಮಾ ಎಂದುಕೊಂಡರೂ ತಪ್ಪಾಗುವುದಿಲ್ಲ.
ಈ ನಮ್ಮ ಪ್ರೇಮಕ್ಕೆ ಎಲ್ಲರಿಂದಲೂ ಒಪ್ಪಿಗೆಯಿತ್ತು. ಆದರೂ ಅದ್ಯಾಕೆ ಮುರಿದುಬಿತ್ತು ಎನ್ನುವುದೇ ಭೀಖರ ಸತ್ಯ. ಆರು ತಿಂಗಳಿನ ಅವಧಿಯಲ್ಲಿ ಕಾಮವೊಂದನ್ನು ಬಿಟ್ಟು ಉಳಿದೆಲ್ಲ ಪ್ರೀತಿಯ ಪರಿಭಾಷೆಯನ್ನೂ ಪಡೆದುಬಿಟ್ಟಿದ್ದೆವಲ್ಲಾ.. ನಿಧಾನವಾಗಿ ಮುಚ್ಚಿಟ್ಟಿದ್ದ ನಮ್ಮ ಪ್ರೇಮದ ಸಂಗತಿ ಕಾಲೇಜಿನಲ್ಲಿ ಹರಿದಾಡತೊಡಗಿತ್ತು. ಹಲವರು ನನ್ನ ಬಳಿ ಹಾಗೂ ಸ್ವಪ್ನಳ ಬಳಿಯೂ ಪ್ರೇಮದ ಕುರಿತು ವಿಚಾರಿಸಿದರು. ನಾವು ವಿಷಯವನ್ನು ಸಾಗ ಹಾಕಲು ಯತ್ನಿಸಿದರೂ ಪ್ರೇಮವಾದ್ದರಿಂದ ತಣ್ಣಗಾಗಲಿಲ್ಲ. ಇಲ್ಲಿಯವರೆಗೆ ಎಲ್ಲವೂ ಚನ್ನಾಗಿತ್ತು ಕಣೋ ಗೆಳೆಯಾ.. ಬಹುಶಃ ಕಾಲೇಜಿನಲ್ಲಿ ನಮ್ಮ ಪ್ರೇಮದ ವಿಷಯ ಜಗಜ್ಜಾಹಿರಾಗಿದ್ದೇ ನಮ್ಮ ನಡುವೆ ಬಿರುಕು ಮೂಡಲು ಕಾರಣವಾಯಿತೇನೋ ಅನ್ನಿಸುತ್ತದೆ ನೋಡು.
ಯಾಕೋ ಆಕೆಗೆ ನಾನು ಬೆಡವಾದೆ. ಕ್ರಮೇಣ ನನ್ನ ಸಾನ್ನಿಧ್ಯ, ಒಡನಾಟವನ್ನು ಬೇಕಂತಲೇ ಆಕೆ ತಪ್ಪಿಸಿಕೊಳ್ಳಲಾರಂಭಿಸಿದಳು. ಅವಕಾಶ ಸಿಕ್ಕಾಗಲೆಲ್ಲ ನನ್ನಿಂದ ದೂರವಾಗಲು ಯತ್ನಿಸಿಬಿಟ್ಟಳು. ಹುಡುಗಿಯರಿಗೆ ಪ್ರೀತಿಸಲೂ ಕಾರಣ ಬೇಕಿಲ್ಲ. ಅದೇ ರೀತಿ ತಿರಸ್ಕರಿಸಲೂ ಕೂಡ. ಅದೊಂದು ದಿನ ಆಕೆ ನನ್ನಿಂದ ದೂರವಾಗೇ ಬಿಟ್ಟಳು.
ಕಾಡಣ ಹುಡುಕಿದೆ. ನಮ್ಮ ಪ್ರೀತಿಯ ಹಾಲಿಗೆ ಅದ್ಯಾರೋ ಹುಳಿ ಹಿಂಡಿಬಿಟ್ಟಿದ್ದರು. ಅಂದ ಹಾಗೇ ಈ ಪ್ರಸಂಗದಲ್ಲಿ ನನ್ನದು ಎಳ್ಳಷ್ಟೂ ತಪ್ಪಿಲ್ಲ. ಹಾಗಂತ ಅವಳದ್ದು ತಪ್ಪಿದೆಯಾ ಎಂದು ಕೇಳಿದರೆ ಇಲ್ಲ ಎಂತಲೇ ಹೇಳಬೇಕಾಗುತ್ತದೆ. ನಮ್ಮ ನಡುವಿನಲ್ಲಿರುವುದು ಅಲ್ಪವೋ ಸ್ವಲ್ಪವೋ ಅಥವಾ ಅದಕ್ಕಿಂತ ಹೆಚ್ಚೋ ಮಿಸ್ ಅಂಡರ್ಸ್ಟಾಂಡಿಂಗ್ ಅಷ್ಟೇ. ನೀನು ಬಯ್ಯುತ್ತಿರಬಹುದು. ಆದರೆ ಒಂದಲ್ಲಾ ಒಂದು ದಿನ ನಮ್ಮ ಪ್ರೇಮ ಮತ್ತೆ ಮೊದಲಿನಂತಾಗುತ್ತದೆ, ನಮ್ಮ ಬದುಕಿನಲ್ಲಿ ತಪ್ಪಿಹೋದ ಹಳಿ ಬತ್ತೆ ಸರಿದಾರಿಗೆ ಕುಡುತ್ತೆ ಎನ್ನುವ ಆಶಾವಾದದಲ್ಲಿ ಬದುಕುತ್ತಿದ್ದೇನೆ ದೋಸ್ತಾ. ನಿರೀಕ್ಷಗಳಲ್ಲಿಯೇ ಬದುಕಿನ ಸಾರವಿದೆ, ಸರ್ವಸ್ವವಿದೆ ಅಲ್ಲವೇ ಗೆಳೆಯಾ..
ಮುಂದೆ ಏನಾಗುತ್ತೆ ಅಂತ ಗೊತ್ತಿಲ್ಲ ಗೆಳೆಯಾ.. ನೋಡಬೇಕು. ನಾನಾಗಿಯೇ ಆಕೆಯ ಬಳಿ ಪ್ರೀತಿಸುತ್ತೇನೆ ಅಂತ ಹೇಳಿರಲಿಲ್ಲ. ಪ್ರೀತಿಸುತ್ತೇನೆ ಅಂದವಳೂ ಅವಳೇ, ಈಗ ಐ ಹೇಟ್ ಯೂ ಅನ್ನುತ್ತಿರುವವಳೂ ಅವಳೇ.. ಬದುಕಿನಲ್ಲಿ ಅರ್ಥವಾಗದ ಸಂಗತಿಗಳು ಇನ್ನೂ ಹಲವಿದೆ ದೋಸ್ತಾ... ನಾನು ಈ ಪ್ರೇಮ ಪ್ರಸಂಗದಲ್ಲಿ ಒಂದು ಪಾತ್ರವಾಗಿಬಿಟ್ಟೆನೇನೋ.. ಆಕೆಯ ಪ್ರೇಮದ ಏಕಪಾತ್ರಾಭಿನಯದಲ್ಲಿ ನಾನು ಹೆಸರಾಗಿ ಉಳಿದುಬಿಟ್ಟೆನೇನೋ ಅನ್ನಿಸುತ್ತಿದೆ.. ಆದರೂ ಕಾಯುತ್ತಿದ್ದೇನೆ ದೋಸ್ತಾ.. ಮುಂದೇನಾಗ್ತದೋ.. ಗೊತ್ತಿಲ್ಲ..
ಏನಾಯ್ತು ಅನ್ನೋದನ್ನು ಮುಂದೆ ಯಾವಾಗ್ಲಾದ್ರೂ ತಿಳಿಸ್ತೀನಿ ದೋಸ್ತಾ.. ನಿನ್ನ ಪತ್ರದ ನಿರೀಕ್ಷೆಯಲ್ಲಿದ್ದೇನೆ ಗೆಳೆಯಾ.. ಬರೀತಿಯಲ್ಲಾ..?
ಇಂತಿ ನಿನ್ನ ಗೆಳೆಯ
ಅಖಿಲ್
***
(ಪತ್ರ ಬರೆದಿದ್ದು 06-05-2007ರಂದು ದಂಟಕಲ್ಲಿನಲ್ಲಿ...)
No comments:
Post a Comment