Monday, June 16, 2014

ಪ್ಯಾರಾ ಮಂಜಿಲ್-1 (ಕಥೆ)

              ಬಿಸಿನೆಸ್ ಹಾಗೂ ಮನೆ ಎರಡೂ ಉಪಯೋಗಕ್ಕಾಗುತ್ತದೆ ಎನ್ನುವ ಕಾರಣಕ್ಕಾಗಿ ಪ್ರಶಾಂತ ಅಶ್ವಿನಿ ಸರ್ಕಲ್ಲಿನ ಆ ಹಳೆಯ ಮನೆಯನ್ನು ಹುಡುಕಿದ್ದ. ಅದೃಷ್ಟಕ್ಕೆ ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಕ್ಕಿತ್ತು. ನಗರದ ನಡುಮಧ್ಯದಲ್ಲಿ ಸಾವಿರ ರು. ಚಿಲ್ಲರೆಗೆ ಆ ಮನೆ ಸಿಕ್ಕಿದ್ದು ಅದೃಷ್ಟವಲ್ಲದೇ ಮತ್ತೇನಿಲ್ಲ ಎಂದುಕೊಂಡು ತನ್ನ ಉದ್ಯಮದ ಸರಂಜಾಮುಗಳನ್ನು ಆ ಮನೆಯತ್ತ ಸಾಗಿಸಿದ್ದ. ಮನೆಯ ಮುಂಭಾಗದಲ್ಲಿ ಆಫೀಸು, ಹಿಂಭಾಗ ಹಾಗೂ ಮೇಲ್ಮಹಡಿಯಲ್ಲಿ ಉಳಿದುಕೊಳ್ಳುವ ಕೋಣೆಯನ್ನಾಗಿ ಪರಿವರ್ತನೆ ಮಾಡಿದ್ದ.
              ಅದು ನನ್ನ ಕಾಲೇಜು ದಿನಗಳಾದ್ದರಿಂದ, ಮನೆಯಿಂದ ಕಾಲೇಜಿಗೆ ಬಹುದೂರವಾದ ಕಾರಣ ಪ್ರಶಾಂತ ತನ್ನ ಆ ಮನೆಯಲ್ಲಿ ಉಳಿದುಕೊಂಡು ಹೋಗು ಎಂದೂ ಹೇಳಿದ್ದ. ನನಗೂ ಅದೇ ಬೇಕಿತ್ತಾದ್ದರಿಂದ ಅಲ್ಲಿಂದ ಕಾಲೇಜಿಗೆ ಹೋಗಲು ನಿರ್ಧರಿಸಿದ್ದೆ.
              ಹಳೆಯ ಮನೆ. ಆರು ಅಡಿ ದಪ್ಪದ ಮಣ್ಣುಗೋಡೆಗಳು. ಉದ್ದನೆಯ ಮನೆಗೆ ಆರು ರೂಮುಗಳಿದ್ದವು. ಪ್ರಾರಂಭದ ದಿನಗಳಲ್ಲಿ ಈ ಮನೆಯಲ್ಲಿ ನಾನು, ಪ್ರಶಾಂತ ಹಾಗೂ ರಾಘವ ಉಳಿದುಕೊಂಡಿದ್ದೆವು. ಮೊದಲ ದಿನ ರಾಘವ ಈ ಮನೆಯನ್ನು ನೋಡಿದವನೇ `ಈ ಮನೆ ಒಂಥರಾ ವಿಚಿತ್ರವಾಗಿದೆ.. ಏನೋ ಅವ್ಯಕ್ತ ಭಯ ಕಾಡ್ತದಲ್ಲ ಮಾರಾಯಾ..' ಎಂದಿದ್ದ. ಅಷ್ಟೇ ಅಲ್ಲದೇ ಈ ಮನೆಯಲ್ಲೊಂದು ಕೋಣೆಯಿತ್ತು. ಕತ್ತಲೆಯ ಕರಿಗೂಡಿನಂತಿದ್ದ ಈ ಕೋಣೆಯನ್ನು ನೋಡಿದ ರಾಘವ ಅದಕ್ಕೆ `ನಾಗವಲ್ಲಿ ಕೋಣೆ' ಎಂದು ಹೆಸರಿಟ್ಟಿದ್ದ. ರಾಘವನಿಗೆ ಅದ್ಯಾಕೆ ಹಾಗೆ ಅನ್ನಿಸಿತೋ ಏನೋ. ನಾಗವಲ್ಲಿ ಯಾವ ಕಾರಣಕ್ಕೆ ನೆನಪಾದಳೋ. ಕತ್ತಲೆಯ ಕೂಪದಂತಿದ್ದ ಆ ರೂಮಿನಲ್ಲಿ ನಾವ್ಯಾರೂ ಉಳಿದಕೊಳ್ಳಲು ಯತ್ನಿಸಲಿಲ್ಲ. ಬದಲಾಗಿ ನಾವೆಲ್ಲ ಮಹಡಿಯಲ್ಲಿ ಠಿಕಾಣಿ ಹೂಡಿದೆವು.
              `ವಿಚಿತ್ರ ಕನಸು ಮಾರಾಯಾ.. ಯಾಕೋ ಸರಿಯಾಗಿ ನಿದ್ದೆಯೇ ಬರೋದಿಲ್ಲ.. ಸ್ವಪ್ನದಲ್ಲಿ ಏನೇನೋ ವಿಚಿತ್ರ ಘಟನೆಗಳು ಜರುಗುತ್ತವೆ..' ಎಂದು ಪ್ರಶಾಂತ ಒಮ್ಮೆ ಅಂದಾಗ ಮೊದಲ ಬಾರಿಗೆ ನನಗೆ ಈ ಮನೆ ಯಾಕೋ ನಾವು ಅಂದುಕೊಂಡಂತಿಲ್ಲ. ಏನೋ ಬೇರೆ ರೀತಿಯದ್ದಾಗಿದೆ ಅನ್ನಿಸಿತು.
               ಸುಮ್ಮನೆ ಸ್ವಪ್ನ ಬೀಳುತ್ತದೆ ಎನ್ನುವ ಕಾರಣಕ್ಕೆ ಮನೆ ಸರಿಯಿಲ್ಲ.. ಹಾಗೆ ಹೀಗೆ ಎನ್ನಲು ನನಗೆ ಸಾಧ್ಯವಾಗಲಿಲ್ಲ. ಎಲ್ಲ ಕಡೆಯೂ ಸ್ವಪ್ನ ಬೀಳುತ್ತದೆ. ಇಲ್ಲಿಯೂ ಬೀಳುತ್ತದೆ. ಅದರಲ್ಲೇನು ವಿಶೇಷ ಎಂದುಕೊಂಡಿದ್ದೆ. ಹೀಗಿದ್ದಾಗ ಗೆಳೆಯ ನಾಗರಾಜ ನಮ್ಮ ಒಡನಾಡಿಯಾಗಿ ಈ ರೂಮಿನಲ್ಲಿ ಉಳಿಯಲು ಬಂದಿದ್ದ. ಮತ್ತು ಅದೇ ದಿನಗಳಲ್ಲಿ ರಾಘವ ಬೇರೆಯ ರೂಮಿಗೆ ತೆರಳಿದ್ದ. ನಿಜಕ್ಕೂ ವಿಚಿತ್ರ ಮನೋಭಾವದವನು ನಾಗರಾಜ. ಮಧ್ಯರಾತ್ರಿಯ ಸ್ವಪ್ನಗಳಿಗೆ ಗೌರವ ಕೊಡುತ್ತಾನಾದರೂ ಶುದ್ಧ ಬೋಗಸ್ ಎನ್ನುವ ಮನಸ್ಥಿತಿಯವನು. ಮಧ್ಯರಾತ್ರಿಯಲ್ಲೆದ್ದು ಬರವಣಿಗೆಯಲ್ಲಿ ತೊಡಗಿಕೊಳ್ಳುವ ನಾಗರಾಜ ಅಪರಾತ್ರಿಯಲ್ಲಿ ಓಡಾಡುವ ದೆವ್ವಗಳಿಗೂ ತಲೆಬೇನೆಯಾಗುವಂತವನು. ಅಂತಹ ನಾಗರಾಜನಿಗೂ ಈ ಮನೆಯಲ್ಲಿ ಸ್ವಪ್ನದ ಅನುಭವಾಗತೊಡಗಿ, ಅದನ್ನು ಎಲ್ಲರ ಬಳಿಯೂ ಹೇಳಿಕೊಂಡಾಗ ನಾನು ಈ ಮನೆಯ ಬಗ್ಗೆ ಗಂಭೀರ ಆಲೋಚನೆಗೆ ತೊಡಗಿದೆ.
               ಅದೊಂದು ದಿನ ಪ್ರಶಾಂತ, ನಾಗರಾಜ ಈ ಇಬ್ಬರೂ ರಾತ್ರಿ ಮನೆಯಲ್ಲಿ ಉಳಿಯಲಿಲ್ಲ. ನಾನೊಬ್ಬನೇ ಇದ್ದೆ. ರಾತ್ರಿ ಊಟ ಮಾಡಿ ಮಲಗಿದವನಿಗೆ ಗಾಢ ನಿದ್ದೆ. ಮಧ್ಯರಾತ್ರಿಯಲ್ಲಿ ಇದ್ದಕ್ಕಿದ್ದಂತೆ ಎಚ್ಚರಾಯಿತು. ದೊಡ್ಡ ಸದ್ದು. ಮನೆಯ ಹಿಂದೆ ಯಾರೋ ಒಬ್ಬರು ಇನ್ನೊಬ್ಬರಿಗೆ ಬಡಿಯುತ್ತಿದ್ದಾರೆ. ಹೊಡೆಸಿಕೊಳ್ಳುತ್ತಿದ್ದ ವ್ಯಕ್ತಿ ಜೋರಾಗಿ ಕೂಗುತ್ತಿದ್ದಾನೆ. ನಾನು ಮೊದಲಿಗೆ ಬೆಚ್ಚಿದೆ. ಆದರೆ ಸ್ವಲ್ಪ ಹೊತ್ತಿನ ನಂತರ ಭಯವನ್ನು ಬಿಟ್ಟು ಶಬ್ದ ಬಂದ ಕಡೆಗೆ ಆಲಿಸತೊಡಗಿದೆ. ಗಮನವಿಟ್ಟು ಹೇಳಿದಾಗ ಹೊಡೆಯುತ್ತಿದ್ದ ಶಬ್ದ ಅಸ್ಪಷ್ಟವಾಗಿತ್ತಾದರೂ ಅಳುವ ಶಬ್ದ ಜೋರಾಗಿ ಕೇಳುತ್ತಿತ್ತು. `ದಮ್ಮಯ್ಯ.. ನಮ್ಮನ್ನು ಬಿಟ್ಟುಬಿಡಿ... ಮಾಫ್ ಕರೋ..' ಎಂಬ ಮಾತು ಕೇಳಿಸಿತು. ಈ ಮಾತು ಕೇಳಿ ಮನಸ್ಸು ತರ್ಕಿಸಿತು. ನಮ್ಮನ್ನು ಬಿಟ್ಟುಬಿಡಿ ಎಂಬ ಶಬ್ದ ಬರುತ್ತಿದೆ ಎಂದಾದರೆ ಖಂಡಿತ ಹೊಡೆತ ತಿನ್ನುತ್ತಿರುವುದು ಒಬ್ಬರಲ್ಲ. ಒಬ್ಬರಿಗಿಂತ ಹೆಚ್ಚು. ಅಂದರೆ ಇಬ್ಬರೋ ಮೂವರೋ..
                ಇದು ಕನಸಾ..? ನನಸಾ.. ಎನ್ನುವ ಗೊಂದಲ. ನನ್ನ ಕೈಯನ್ನು ಚಿವುಟಿಕೊಂಡು ನೋಡಿದೆ. ಮತ್ತೆ ಮತ್ತೆ ಆ ಧ್ವನಿಗಳು ಕೇಳಿಸಿದವು. ಧ್ವನಿ ಕೇಳಿಸಿದ ಕಾರಣಕ್ಕೆ ಅದರ ಮೂಲವನ್ನು ಹುಡುಕಿ, ತಮ್ಮನ್ನು ಬಿಟ್ಟುಬಿಡಿ ಎಂದು ಅರಚುತ್ತಿರುವವರ ಸಹಾಯಕ್ಕೆ ಹೋಗಲು ನನಗೆ ಧೈರ್ಯ ಸಾಕಾಗಲಿಲ್ಲ. ಈ ಕುರಿತು ಮರುದಿನ ವಿಚಾರಿಸಿದರಾಯಿತು. ಆದರೆ ಈಗ ಏನೇನು ನಡೆಯುತ್ತದೆ ನೋಡೋಣ ಎಂದು ಹಾಗೆಯೇ ಉಳಿದಿದ್ದೆ. ಮತ್ತೆ ಮತ್ತೆ ಆಲಿಸುತ್ತಿದ್ದಾಗ ಇಬ್ಬರು ಅರಚುತ್ತಿರುವ ಧ್ವನಿ ಕೇಳಿಸಿತು. ಒಂದು ಗಂಡಸಿನ ಧ್ವನಿ. ಇನ್ನೊಂದು ಹೆಂಗಸಿನದು. ಆದರೆ ಅವರಿಬ್ಬರಲ್ಲಿ ಗಂಡಸಿನ ಧ್ವನಿ ಅಚ್ಚಕನ್ನಡದಲ್ಲಿದ್ದರೆ ಹೆಂಗಸಿನ ಧ್ವನಿ ಮಾತ್ರ ಬೇರೆ ತರವಾಗಿ ಕೇಳಿಸಿತು. ಹಿಂದಿ ಮಿಶ್ರಿತ ಧ್ವನಿಯಂತೆ ಅನ್ನಿಸಿತು. ನನಗೆ ಭಯದ ಬದಲು ಕುತೂಹಲವಾಗತೊಡಗಿತು. ಆ ದಿನ ಅದೇ ಕುತೂಹಲದಲ್ಲಿ ರಾತ್ರಿಯಿಡಿ ನಿದ್ದೆ ಹತ್ತಲಿಲ್ಲ. ಮರುದಿನ ಬೆಳಗಿನ ವೇಳೆಗೆ ಜಾಗರಣೆಯ ಪರಿಣಾಮ ಕಣ್ಣು ಕೆಂಪಡರಿತ್ತು.
              ಬೆಳಗಾಗೆದ್ದವನೇ ರಾತ್ರಿ ಕಂಡ ಹಾಗೂ ಕೇಳಿದ ಸಂಗತಿಯ ಬಗ್ಗೆ ಒಂದು ತೀರ್ಮಾನಕ್ಕೆ ಬರಬೇಕು. ಮನೆಯ ಆಸುಪಾಸಿನಲ್ಲಿ ಏನಾದರೂ ಆಗಿದೆಯಾ ನೋಡಬೇಕು ಎಂದು ಹೊರಟೆ. ನಾವು ಉಳಿದಕೊಂಡಿದ್ದ ಆ ಮನೆಯಲ್ಲಿ ರಾತ್ರಿ ಅನುಭವಕ್ಕೆ ಬರುವ ವಿಚಿತ್ರ ಘಟನೆಯ ಬಗ್ಗೆ ಅಕ್ಕಪಕ್ಕದವರಲ್ಲಿ ಕೇಳಿದೆ. ಆದರೆ ಅವರು ಏನೊಂದನ್ನೂ ಬಾಯಿ ಬಿಡಲಿಲ್ಲ. ನನಗೆ ಮತ್ತಷ್ಟು ಕುತೂಹಲವನ್ನು ಹುಟ್ಟುಹಾಕಿತು. ರಾತ್ರಿ ಮನೆಯ ಹಿಂದುಗಡೆಯಿಂದ ಶಬ್ದ ಬಂದಿತ್ತು. ಮನೆಯ ಹಿಂದೆ ಇರುವ ಇನ್ನೊಂದು ಮನೆಯಲ್ಲಿ ಹೋಗಿ ಈ ಕುರಿತು ಕೇಳಿದೆ. ಅದಕ್ಕೆ ಉತ್ತರ ನೀಡಿದ ಅವರು ತಮ್ಮ ಮನೆಯಲ್ಲಿ ಏನೂ ನಡೆದಿಲ್ಲ. ಬಹುಶಃ ನಿಮ್ಮ ಮನೆಯಲ್ಲೇ ಏನೋ ನಡೆದಿರಬೇಕು ನೋಡಿ. ನಾವೆಲ್ಲ ಚನ್ನಾಗಿಯೇ ಇದ್ದೇವೆ ಎಂದು ಮನೆಯೊಳಗೆಲ್ಲ ಕರೆದೊಯ್ದು ತೋರಿಸಿದರು. ಖಂಡಿತವಾಗಿಯೂ ಅವರ ಮನೆಯಲ್ಲಿ ಏನೂ ಆಗಿರಲಿಲ್ಲ. ವಾಪಾಸಾದೆ.
**
            ಮನೆ ದಿನದಿಂದ ದಿನಕ್ಕೆ ನಿಗೂಢವಾಗತೊಡಗಿತು. ವಿಚಿತ್ರ ಅನುಭವಗಳು. ಹೇಳಿಕೊಳ್ಳಲು ಅಸಾಧ್ಯವಾದದು ಎಂಬಂತೆ ಜರುಗತೊಡಗಿತು. ಮನೆಯ ಬಗ್ಗೆ ಮಾಹಿತಿ ಕಲೆ ಹಾಕೋಣ ಎಂದುಕೊಂಡರೆ ಮನೆಯ ಕುರಿತು ಯಾರೂ ಮಾಹಿತಿ ನೀಡಲಿಲ್ಲ. ನಮ್ಮೂರ ಬಳಿಯಲ್ಲಿಯೇ ಒಬ್ಬರು ಹಿರಿಯರು ಮಾತಿಗೆ ಸಿಕ್ಕಿದ್ದರು. ಅವರ ಬಳಿ ಹೀಗೇ ಮಾತನಾಡುತ್ತಿದ್ದಾಗ ನಾನು ಮನೆಯ ವಿಷಯವನ್ನು ಹೇಳಿದೆ. ತಕ್ಷಣವೇ ಈ ಮನೆಯ ಬಗ್ಗೆ ಮಾಹಿತಿ ನೀಡಬಹುದಾದ ವ್ಯಕ್ತಿಯೊಬ್ಬರ ಬಗ್ಗೆ ನನಗೆ ಹೇಳಿದರು. ಹಿರಿಯರು ಹೇಳಿದ ವ್ಯಕ್ತಿ ಯಾರಿರಬಹುದು ಎಂದುಕೊಂಡರೆ ಮನೆಯ ಮಾಲೀಕರು ಎಂದು ತಿಳಿದುಬಂದಿತು. ನಾನು ಸೀದಾ ಅವರನ್ನು ಹುಡುಕಿ ಹೊರಟೆ.
            ಅಬ್ದುಲ್ ಸಲೀಂ. ಮನೆಯ ಯಜಮಾನರು. ನಗರದ ಅದ್ಯಾವುದೋ ಮೂಲೆಯಲ್ಲಿ ಅವರ ಮನೆಯಿತ್ತು. ಸುತ್ತಿ ಬಳಸಿ ಹುಡುಕಿದ ನಂತರ ಅವರ ಮನೆ ಸಿಕ್ಕಿತು. ನಾನು ಅವರ ಬಳಿ ಅದೂ ಇದೂ ಮಾತನಾಡಿ ನಂತರ ನಿಧಾನವಾಗಿ ಮನೆಯ ವಿಷಯದ ಬಗ್ಗೆ ತಿಳಿಸಿದೆ. ರಾತ್ರಿ ನನಗಾಗುತ್ತಿದ್ದ ವಿಚಿತ್ರ ಅನುಭವದ ಬಗ್ಗೆ ಹೇಳಿದೆ. ಅಬ್ದುಲ್ ಸಲೀಂ ಏನನ್ನೂ ಹೇಳಲಿಲ್ಲ. `ಮಾಲೂಮ್ ನಹಿ..' ಎಂದು ನನ್ನನ್ನು ಸಾಗ ಹಾಕಲು ಪ್ರಯತ್ನಿಸಿದರು. ನಾನು ಪಟ್ಟು ಬಿಡಲು ಸಿದ್ಧನಿರಲಿಲ್ಲ. ಮತ್ತೆ ಮತ್ತೆ ಕೇಳಿದೆ. ಪದೇ ಪದೆ ಕಾಡಿದೆ. ಕೊನೆಗೊಮ್ಮೆ ನನ್ನ ಹಪಹಪಿಯಿಂದ ತಪ್ಪಿಸಿಕೊಂಡರೆ ಸಾಕು ಎಂಬಂತೆ `ಮನೆಯ ಒಡೆಯ ನಾನು. ಆದರೆ ನನಗೆ ಮನೆಯ ಹಿನ್ನೆಲೆಯ ಬಗ್ಗೆ ಹೆಚ್ಚಿಗೆ ಏನೂ ಗೊತ್ತಿಲ್ಲ. ಆದರೆ ಮನೆಯಲ್ಲಿ ಇಂತಹ ವಿಚಿತ್ರಗಳು ಜರುಗುತ್ತವೆ ಎನ್ನುವುದು ನನಗೆ ಗೊತ್ತಿತ್ತು. ಈ ಹಿಂದೆ ಮನೆಯ ಬಾಡಿಗೆಗಿದ್ದ ಹಲವರು ಹೇಳಿದ್ದರು. ಒಂದಿಬ್ಬರು ಇದರಿಂದ ಹೆದರಿ ಆಸ್ಪತ್ರೆಯನ್ನೂ ಸೇರಿದ್ದರು.  ಆದರೆ ಮನೆಯ ಕುರಿತು ಪಟ್ಟಾಗಿ ಕೇಳಲು ಬಂದಿದ್ದು ನೀವು ಮಾತ್ರ..' ಎಂದರು. ನಾನು ಹೂಂ ಅಂದೆ.
            `ಈ ಮನೆಯ ಕುರಿತು ನನಗೆ ಮಾಹಿತಿ ಕಡಿಮೆ. ನನ್ನ ಹಿರಿಯರಿಂದ ಈ ಮನೆ ನನಗೆ ಬಂದಿದೆ. ಬಾಡಿಗೆ ಕೊಡುತ್ತಿದ್ದೇನಷ್ಟೆ. ನಮ್ಮ ಮನೆಯಲ್ಲಿ ಒಬ್ಬರು ಹಿರಿಯ ಮಹಿಳೆಯಿದ್ದಾರೆ. ಫಾತಿಮಾ ಜಿ ಅಂತ. ಹತ್ತಿರ ಹತ್ತಿರ ನೂರು ವರ್ಷ ವಯಸ್ಸಾಗಿದೆ. ಅವರು ನಿಮಗೆ ಖಂಡಿತ ಮಾಹಿತಿ ನೀಡಬಲ್ಲರು.. ' ಎಂದು ತಿಳಿಸಿದ ಅಬ್ದುಲ್  ಫಾತಿಮಾ ಅವರಿದ್ದ ಜಾಗಕ್ಕೆ ನನ್ನನ್ನು ಕರೆದೊಯ್ದರು. ಮತ್ತೆ ಯಥಾಪ್ರಕಾರ ಗಲ್ಲಿ ಗಲ್ಲಿಗಳನ್ನು ದಾಟಿ, ಸುತ್ತಿ ಬಳಸಿ ಎಲ್ಲೋ ಒಂದು ಕಡೆ ಹಳೆಯ ಮನೆಗೆ ಕರೆದೊಯ್ದರು. ಅಲ್ಲೊಬ್ಬ ವಯಸ್ಸಾದ ಮಹಿಳೆಯ ಬಳಿಯಲ್ಲಿ ಅಬ್ದುಲ್ ಸಲೀಂ ಅವರು ಉರ್ದುವಿನಲ್ಲಿ ಮಾತನಾಡಿದರು. ಆರಂಭದಲ್ಲಿ ಆ ಮಹಿಳೆ ಒಪ್ಪಿದಂತೆ ಕಾಣಲಿಲ್ಲ. ಅಬ್ದುಲ್ ಅವರು ಏನೋ ವಾದ ಮಾಡಿದಂತೆ ಕಾಣಿಸಿತ್ತು. ನನಗೆ ಅರ್ಥವಾಗಲಿಲ್ಲ. ಸರಿ ಸುಮಾರು ಹೊತ್ತಿನ ನಂತರ ಫಾತಿಮಾ ನನ್ನ ಬಳಿ ಮಾತಿಗೆ ನಿಂತರು.
             ಫಾತಿಮಾ ಅವರಿಗೆ ಖಂಡಿತವಾಗಿಯೂ ನೂರು ವರ್ಷಗಳಾಗಿದ್ದವು. ಸ್ವಾತಂತ್ರ್ಯ ಪೂರ್ವದಲ್ಲಿ ಎಂದೋ ಹುಟ್ಟಿದ್ದರಿರಬೇಕು. ನಾನು ಉಭಯ ಕುಶಲೋಪರಿಗೆಂಬಂತೆ ಅವರ ವಯಸ್ಸನ್ನು ಕೇಳಿದೆ. ನೂರು ಆಗಿರಬಹುದು ಎಂದರು. ಅವರಿಗೂ ಸರಿಯಾಗಿ ನೆನಪಿರಲಿಲ್ಲ. ಅವರು ಮಾತನಾಡುತ್ತಿದ್ದ ಭಾಷೆಯೂ ಸ್ಪಷ್ಟವಾಗಿರಲಿಲ್ಲ. ಹಲ್ಲಿಲ್ಲದ ಬಾಯಿಯಲ್ಲಿ ಉರ್ದು, ಅರ್ಯಾಬಿಕ್ ಮಿಶ್ರಿತ ಕನ್ನಡದಲ್ಲಿ ಅವರು ಮಾತನಾಡುತ್ತಿದ್ದರೆ ನಾನು ಅವನ್ನು ಅರ್ಥ ಮಾಡಿಕೊಳ್ಳಲು ಹೆಣಗಾಡುತ್ತಿದ್ದೆ. ಅವರು ಮಾತನಾಡಿದ್ದು ಹೀಗೆಯೇ ಇರಬೇಕು ಎನ್ನುವ ಊಹೆಯನ್ನೂ ಮಾಡಿಕೊಳ್ಳುತ್ತಿದ್ದೆ. ಹಾಗೇ ಸುಮ್ಮನೆ ಮಾತನಾಡಿದ ನಂತರ ನಾನು ಅಸಲಿ ವಿಷಯಕ್ಕೆ ಬಂದೆ.  ಅಬ್ದುಲ್ ಸಲೀಂ ಅವರಂತೆ ಆರಂಭದಲ್ಲಿ ಫಾತಿಮಾ ಅವರೂ ಕೂಡ ನನ್ನ ಕೋರಿಕೆಗೆ ಮಣಿಯಲಿಲ್ಲ. ನಾನು ಮನೆಯ ವಿಷಯವಾಗಿ ಕೇಳುತ್ತಲೇ ಇದ್ದೆ. ಅವರು ಮಾಹಿತಿಯನ್ನು ಬಿಟ್ಟುಕೊಡುತ್ತಲೇ ಇರಲಿಲ್ಲ. ಕೊನೆಗೆ ಅಬ್ದುಲ್ ಸಲೀಂ ಅವರ ಬಳಿ ಮಾಡಿದಂತೆ ಹರಪೆ ಬಿದ್ದೆ. ಕೊನೆಗೊಮ್ಮೆ ಅವರೂ ಕೂಡ ಮನೆಯ ಕುರಿತು ಹೇಳಲು ಒಪ್ಪಿಕೊಂಡರು. ಫಾತಿಮಜ್ಜಿ ಮನೆಯ ಕುರಿತು ವಿಸ್ತಾರವಾಗಿ ಹೇಳುತ್ತ ಸಾಗಿದಂತೆಲ್ಲ ನನ್ನ ಕಿವಿ ನೆಟ್ಟಗಾಯಿತು. ಮೈಮೇಲಿನ ಕೂದಲುಗಳೂ ನೇರವಾಗಿ ನಿಂತಿದ್ದವು. ತಲೆಯೆಲ್ಲ ಬಿಸಿಯಾದಂತೆ ಅನ್ನಿಸತೊಡಗಿತ್ತು. ಏನೋ ಕಳವಳ, ಯಾತನೆ, ತಳಮಳ. ಹೇಳಿಕೊಳ್ಳಲು ಅಸಾಧ್ಯ ಎನ್ನುವಂತಾಗಿದ್ದವು. ನಾನು ಉಳಿದುಕೊಂಡಿದ್ದ ಬಾಡಿಗೆ ಮನೆಯೊಳಗಣ ಇನ್ನೊಂದು ಬಾಗಿಲಿನ ಅನಾವರಣವಾಗುತ್ತಿದೆಯೇನೋ ಅನ್ನಿಸತೊಡಗಿತ್ತು.

***
(ಮುಂದುವರಿಯುತ್ತದೆ..)

No comments:

Post a Comment