Thursday, June 5, 2014

ಒಲವ ಲತೆಗೆ ನೀರನೆರೆದ... -ಭಾಗ-2

(ಬುರುಡೆ ಜಲಪಾತ)
              ನೀರು ಮಂಜಿನಂತೆ ತಣ್ಣಗೆ ಕೊರೆಯುತ್ತಿತ್ತು. ನೀರಿಗಿಳಿದವರೆಲ್ಲ ಒಮ್ಮೆ `ಆಹಾಹ...ಓಹೋಹೋ..' ಎಂದು ಕೇಕೆ ಹೊಡೆದರು. ಅರ್ಧಗಂಟೆಯ ಕಾಲ ಅಘನಾಶಿನಿಯಲ್ಲಿ ಈಜಾಡಿ ಹಿತಾನುಭವವನ್ನು ಅನುಭವಿಸಿದರು. ತಂಡದ ನಾಯಕತ್ವದ ಹೊಣೆಗಾರಿಕೆ ಹೊತ್ತುಕೊಂಡಿದ್ದ ದಿಗಂತ ಕರಾರುವಾಕ್ಕಾಗಿ ಅರ್ಧಗಂಟೆಗೆ ತಂಡವನ್ನು ನೀರಿನಿಂದ ಎಬ್ಬಿಸಿದ್ದ. ನಂತರ ಪಯಣ ಮುಂದೆ ಸಾಗಿತ್ತು. ನದಿಯ ಅಕ್ಕಪಕ್ಕದ ಸೌಂದರ್ಯದ ಖನಿಯನ್ನು ಆಸ್ವಾದಿಸುತ್ತ, ನಿಸರ್ಗ ಸೌಂದರ್ಯವನ್ನು ಮನಸ್ಸಿನಲ್ಲಿ  ಅನುಭವಿಸುತ್ತ ಚಾರಣಿಗರ ತಂಡ ಮುಂದಡಿಯಿಟ್ಟಿತು.
              ನೆಲದ ಮೇಲೆ ನಡೆಯುವುದು ಸುಲಭ. ಆದರೆ ನದಿ ದಡದ ಮೇಲೆ ಅದರಲ್ಲಿಯೂ ನದಿ ಕಣಿವೆಯಲ್ಲಿ ನಡೆಯುವುದು ಬಹಳ ಸವಾಲಿನ ಕೆಲಸ. ಮತ್ತೊಮ್ಮೆ ಚಾರಣಿಗರ ತಂಡಕ್ಕೆ ಅದು ಅನುಭವಕ್ಕೆ ಬಂದಿತು. ಉಂಚಳ್ಳಿಯಲ್ಲಿ ಜಲಪಾತವನ್ನಿಳಿಯುವ ಅಘನಾಶಿನಿಯ ಪಾತ್ರ ಘಟ್ಟದ ಕೆಳಗೆ ತೀವ್ರ ಅಗಲವಾಗುತ್ತದೆ. ಇಲ್ಲಿ ನಡೆಯುವುದು ವಿಶಿಷ್ಟವೂ, ವಿಭಿನ್ನವೂ ಆಗಿರುತ್ತದೆ.  ನಾಲ್ಕೈದು ಕಿ.ಮಿ ದೂರ ಸಾಗಿದ ನಂತರ ಸಿದ್ದಾಪುರದ ಬೀಳಗಿ ಭಾಗದಿಂದ ಹರಿದು ಬರುವ ಅಘನಾಶಿನಿಯ ಒಡಲೊಳಗೆ ಐಕ್ಯವಾಗುವ ಉಪನದಿ ಸಿಗುತ್ತದೆ. ಅಲ್ಲಿಯತನಕ ಬಿಡುವಿಲ್ಲದೇ ನಡೆದರು. ಇಷ್ಟರಲ್ಲಾಗಲೇ ಒಂದೆರಡು ತಾಸುಗಳು ಸರಿದುಹೋಗಿದ್ದವು. ವಿಶ್ರಾಂತಿಗಾಗಿ ದಿಗಂತ ಸೂಚಿಸಿದ ತಕ್ಷಣ ತಂಡ ಥಟ್ಟನೆ ನೆಲಕ್ಕೆ ಕುಳಿತಿತ್ತು. ಸಂಪ್ರಾಣಿಸಿಕೊಂಡು ಹೊರಟ ತಂಡ ಉಪನದಿ ಧುಮ್ಮಿಕ್ಕುವ ಬುರುಡೆ ಜಲಪಾತ ಅಥವಾ ಇಳಿಮನೆ ಜಲಪಾತದ ಕಾಲಬುಡವನ್ನು ತಲುಪುವ ವೇಳೆಗೆ ಸೂರ್ಯ ನೆತ್ತಿಯನ್ನು ಸುಡಲಾರಂಭಿಸಿದ್ದ. ಚಾರಣಿಗರ ತಂಡದ ಹೊಟ್ಟೆಯೂ ತಾಳ ಹಾಕುತ್ತಿತ್ತು.
             ಬುರುಡೆ ಜಲಪಾತದ ಒಡಲಿನಲ್ಲಿ ಎಲ್ಲರೂ ಕುಳಿತು ತಂದಿದ್ದ ತಿಂಡಿಯನ್ನು ಹೊಟ್ಟೆಗೆ ಹಾಕಿಕೊಳ್ಳುವ ವೇಳೆಗೆ ಮನಸ್ಸು ಒಂದಷ್ಟು ತಿಳಿಯಾಯಿತು. ಸಿಂಧು ತಾನು ತಂದಿದ್ದ ತಿಂಡಿಯನ್ನು ದಿಗಂತನಿಗೆ ಕೊಟ್ಟಿದ್ದಳು. ದಿಗಂತ ಖುಷಿಯಿಂದ ತಿಂದಿದ್ದ. ತಿಂಡಿ ತಿಂದ ಬಳಿಕ ಅರೆಘಳಿಗೆ ಸಮಯದ ನಂತರ ದಿಗಂತ ಮಾತಿಗೆ ನಿಂತ
`ಬುರುಡೆ ಜಲತಾ ಅಥವಾ ಇಳಿಮನೆ ಜಲಪಾತದ ಕಾಲ ಬುಡದಲ್ಲಿ ನಾವಿದ್ದೇವೆ. ಈ ಜಲಪಾತದ ಮೇಲ್ಭಾಗದಿಂದ ಬಂದರೆ ಮೂರು ಹಂತಗಳನ್ನು ಕಾಣಬಹುದು. ಆದರೆ ನಾಲ್ಕನೆಯ ಹಂತವನ್ನು ಕಾಣಬೇಕೆಂದರೆ ಈಗ ನಾವು ನಿಂತಿದ್ದೇವಲ್ಲ ಇಲ್ಲಿಂದ ಮಾತ್ರ ಸಾಧ್ಯ. ನೀವು ಪೋಟೋ ತೆಗೆದುಕೊಳ್ಳಬಹುದು.  ಮುಂದೆ ನಾವು ಇಲ್ಲಿಂದ ಗುಡ್ಡವನ್ನು ಹತ್ತಿ ಮೇಲಕ್ಕೆ ಹೋಗಬೇಕು. ಇಲ್ಲಿವರೆಗೆ ನಿಮಗೆ ಆದ ಅನುಭವಗಳೇ ಬೇರೆ. ಇನ್ನುಮುಂದಿನ ಅನುಭವವೇ ಬೇರೆ. ಸುಲಭಕ್ಕೆ ಈ ಗುಡ್ಡ ಹತ್ತುವುದು ಸಾಧ್ಯವಿಲ್ಲ. ಹತ್ತಿದವರು ಕೆಲವೇ ಕೆಲವು ಮಂದಿ. ಕಳೆದ ವರ್ಷ ನಾನು ಇಲ್ಲಿಗೆ ಬಂದಾಗ ಹತ್ತಿದ್ದೆ. ಬಹಳ ಅಪಾಯದ ಜಾಗ. ಕಡಿದಾಗಿದೆ. ನಾವು ಎಷ್ಟು ಹುಷಾರಾಗಿದ್ರೂ ಸಾಲದು. ನಮ್ಮಲ್ಲಿನ ಸಲಕರಣೆಗಳು ಇದ್ದಷ್ಟೂ ಕಡಿಮೆಯೇ. ಸುಮಾರು ಇನ್ನೂರೈವತ್ತು ಅಡಿ ಹತ್ತಿದ ನಂತರ ನಾವು ಮೂರನೆ ಹಂತದ ಪ್ರದೇಶದಲ್ಲಿ ಇರುತ್ತೇವೆ. ಇಲ್ಲಿ ಸ್ವಲ್ಪ ವಿಶ್ರಾಂತಿ ಪಡೆದು ಮತ್ತೆ ಮೇಲಕ್ಕೆ ಹತ್ತಬೇಕು. ನಿಮ್ಮ ನಿಮ್ಮೊಳಗಿನ ನಿಜವಾದ ಧೈರ್ಯವನ್ನು ಪರೀಕ್ಷೆ ಮಾಡುವ ಸಮಯ ಇದು..' ಎಂದವನೇ ಮೇಲಕ್ಕೆ ಹತ್ತುವ ಜಾಗ ತೋರಿಸಿದ.
              ಚಾರಣಿಗರ ತಂಡ ಹಾಗೇ ಮೇಲಕ್ಕೆ ಕತ್ತೆತ್ತಿ ನೋಡಿತು. ಹತ್ತುವ ಜಾಗದ ತುದಿ ಕಾಣಿಸಲಿಲ್ಲ. ಮರಗಳು ಆವರಿಸಿದ್ದವು. ಅಕ್ಕಪಕ್ಕ ಅಪಾಯಕಾರಿಯಾಗಿ ಚಾಚಿಕೊಂಡ ಬಂಡೆಗಳು. ಇದನ್ನು ಹೇಗಪ್ಪಾ ಹತ್ತುವುದು ಎಂದುಕೊಂಡರು ಎಲ್ಲರೂ. ಸುಲಭಕ್ಕೆ ಹತ್ತುವುದು ಅಸಾಧ್ಯ ಎಂಬುದು ಎಲ್ಲರಿಗೂ ಮೊದಲ ನೋಟಕ್ಕೆ ಅನ್ನಿಸಿತು. ದಿಗಂತನೇ ಮೊದಲು ಹತ್ತಿ ಅರ್ಧ ಸಾಗಿ ಎಲ್ಲೆಲ್ಲೋ ಒಂದು ರೆಂಬೆಗೆ ಹಗ್ಗ ಕಟ್ಟಿ ಬಂದ. ಉಳಿದವರು ನೋಡುತ್ತ ನಿಂತಿದ್ದರು. ಮತ್ತೆ ಕೆಳಗಿಳಿದು ಬಂದವನೇ ಈಗ ಹತ್ತಿ ಎಂದು ಹೇಳಿದ ತಕ್ಷಣ ಉಳಿದವರು ಹತ್ತಲು ಆರಂಭಿಸಿದರು. ಚಾರಣವೆಂದರೆ ಬರಿ ಜಲಪಾತ ನೋಡುವುದು, ಬರುವುದು, ಗುಡ್ಡ ಹತ್ತಿಳಿದ ಶಾಸ್ತ್ರ ಮಾಡುವುದು ಎಂದು ಒಂದಿಬ್ಬರು ಅಂದುಕೊಂಡಿದ್ದರು. ಅಂತವರಿಗೆ ಚಾರಣವೆಂದರೆ ಸುಲಭದ್ದಲ್ಲ ಎನ್ನಿಸತೊಡಗಿತು. ಬೆನ್ನ ಮೇಲೆ ಮಣ ಭಾರದ ಚೀಲ, ಒಂದು ಕೈಯಲ್ಲಿ ಹಗ್ಗವನ್ನು ಹಿಡಿದು ಹತ್ತ ಬೇಕು. ಸುಡುವ ಸೂರ್ಯ, ಕಿತ್ತುಕೊಂಡು ಬರುವ ಬೆವರು, ಸ್ವಲ್ಪ ಯಾಮಾರಿದರೂ ಅಘನಾಶಿನಿ ತನ್ನ ತೆಕ್ಕೆಯೊಳಗೆಳೆದುಕೊಳ್ಳಲು ಸಿದ್ಧವಾಗಿದ್ದಾಳೇನೋ ಎನ್ನಿಸುವಂತಹ ವಾತಾವರಣವಿತ್ತು. ಮರಗಳ ಎಲೆಗಳು, ಮರದ ಮೇಲೆ ಗೂಡು ಕಟ್ಟಿದ್ದ ಸವಳಿಗಳು, ಮುಳ್ಳು, ಬಳ್ಳಿಗಳು, ನಾಗರ ಬೆತ್ತದ ಮುಳ್ಳುಗಳು ಪದೇ ಪದೆ ಕಾಡಿದವು. ದಿಗಂತ ಅದ್ಯಾವ ಮಾಯೆಯಲ್ಲಿ ಮೇಲಕ್ಕೆ ಯಾವ ಆಧಾರವಿಲ್ಲದೇ ಹತ್ತಿ ಹಗ್ಗವನ್ನು ಕಟ್ಟಿ ಬಂದನೋ ಎಂದುಕೊಂಡರು.
            ಆರು ಜನ ಮೇಲಕ್ಕೆ ಹತ್ತಿದ ನಂತರ ಏಳನೆಯವಳಾಗಿ ಸಿಂಧು ಹಾಗೂ ಕೊನೆಯಲ್ಲಿ ದಿಗಂತ ಹತ್ತಲಾರಂಭಿಸಿದ್ದ. ಸಿಂಧುವೂ ಕೂಡ ಚಾರಣಕ್ಕೆ ಹೊಸಬಳೇ. ಕೇಳಿ ಗೊತ್ತಿತ್ತಷ್ಟೇ. ನಿಜವಾದ ಅನುಭವವಾಗತೊಡಗಿತ್ತು. ಮೇಲೆ ಒಂದು ಹೆಜ್ಜೆ ಹತ್ತಿದರೆ ಅರ್ಧ ಹೆಜ್ಜೆ ಕೆಳಕ್ಕಿಳಿದಂತಹ ಅನುಭವವಾಗುತ್ತಿತ್ತು. ಬುರುಡೆ ಜಲಪಾತದ ನಾಲ್ಕನೆ ಹಂತದ ಅರ್ಧಭಾಗವನ್ನೇರಲು ಗಂಟೆಗಟ್ಟಲೆ ಸಮಯವೇ ಬೇಕಾಯಿತು. ದಿಗಂತ ಮತ್ತೆ ಯಥಾಪ್ರಕಾರ ಮೊದಲಿನಂತೆ ಮಾಡಿದ. ತಾನು ಮೇಲಕ್ಕೆ ಹೋಗಿ ಹಗ್ಗವನ್ನು ಕಟ್ಟಿ ಬಂದ. ನಾಲ್ಕನೆ ಹಂತದ ಕೊನೆಯಲ್ಲಿ ಹಗ್ಗವನ್ನು ಕಟ್ಟಿ ಬಂದಿದ್ದ. ಎಲ್ಲರೂ ಹತ್ತಿ ಬಂದಿದ್ದರು. ಕೊನೆಯಲ್ಲಿ ಒಂದು ನೇರ ಮರವನ್ನು ಏರಿದರೆ ಮೂರನೆ ಹಂತವನ್ನು ಕಾಣಬಹುದಿತ್ತು. ಹುಡುಗರು ಸುಲಭವಾಗಿ ಮರವನ್ನು ಏರಬಲ್ಲವರಾಗಿದ್ದರು. ಆದರೆ ಹುಡುಗಿಯರು ಬಹಳ ಕಷ್ಟ ಪಡಬೇಕಾಗಿ ಬಂದಿತು. ಮೇಲಕ್ಕೆ ಹತ್ತಿದ ಹುಡುಗರು ಹಗ್ಗವನ್ನು ಹಿಡಿದುಕೊಳ್ಳುವುದು, ಅದರ ಸಹಾಯದಿಂದ ಹುಡುಗಿಯರು ಮೇಲಕ್ಕೆ ಹತ್ತುವುದು ಎಂಬ ಯೋಜನೆ ರೂಪಿಸಲಾಯಿತು. ದಿಗಂತ ಕೆಳಗೆ ಉಳಿದು ಹುಡುಗಿಯರು ಮೇಲೇರಲು ಸಹಾಯವಾಗುವಂತೆ ಸಲಹೆ, ಸೂಚನೆಗಳನ್ನು ಕೊಡುತ್ತಿದ್ದ. ಸಿಂಧು ಮತ್ತೆ ಯಥಾ ಪ್ರಕಾರ ಕೊನೆಯವಳಾಗಿ ಮರವೇರಲು ಅನುವಾದಳು. ಕಳಗಿನಿಂದ ಮೇಲಕ್ಕೇರಿದದ್ದ ಸುಸ್ತು, ಬೆವರು, ಮೈಕೈ ನೋವಿನ ಪರಿಣಾಮ ಆಕೆ ಏನು ಮಾಡಿದರೂ ಮರವನ್ನು ಹತ್ತಲು ಸಾಧ್ಯವಾಗಲಿಲ್ಲ. ನಾಲ್ಕು ಹೆಜ್ಜೆ ಏರುವುದು ಜರ್ರನೆ ಜಾರುವುದು ಮಾಡಲು ಆರಂಭಿಸಿದಳು. ಕೊನೆಗೊಮ್ಮೆ ದಿಗಂತನೇ ಅದ್ಹೇಗೋ ಕಷ್ಟಪಟ್ಟು ಆಕೆಯನ್ನು ಮೇಲಕ್ಕೆ ಕರೆತಂದಾಗ ಸಿಂಧುವಿನ ಕಣ್ಣಲ್ಲಿ ಕೃತಜ್ಞತೆಯ ಭಾವ ತುಂಬಿ ತುಳುಕುತ್ತಿತ್ತು.
          ಮೂರನೆ ಹಂತದಲ್ಲಿ ಜಲಪಾತದ ಬುಡದಲ್ಲಿ ಸ್ನಾನವನ್ನು ಮಾಡಿದವರು ಒಮ್ಮೆ ಹತ್ತಿ ಬಂದ ಸುಸ್ತನ್ನು ಕಳೆದು ಹೋಗುವಷ್ಟು ಖುಷಿ ಪಟ್ಟರು. ಹೊಟ್ಟೆ ಮತ್ತೆ ತಾಳ ಹಾಕಲು ಆರಂಭಿಸಿತ್ತು. ಅಳಿದುಳಿದ ತಿಂಡಿಯನ್ನೂ ತಿಂದು ಮುಗಿಸಿದರು. ಈ ಹಂತವನ್ನು ಏರಿ 9 ಕಿ.ಮಿ ನಡೆದು ಬಸ್ಸನ್ನು ಏರಬೇಕಿತ್ತು. ಆಗಲೇ ಗಂಟೆ ನಾಲ್ಕನ್ನು ದಾಟಿದ್ದ ಕಾರಣ ದಿಗಂತ ಅವಸರಿಸಿದ. ಐದುಗಂಟೆಗೆಲ್ಲ ಜಲಪಾತದ ಒಡಲಿನಿಂದ ಮೇಲೇರಿ ಬಂದರು. ಕತ್ತಲಾವರಿಸುವ ವೇಳೆಗೆ 9 ಕಿ.ಮಿ ನಡೆದು ಹೋದರು. ಇಳಿಮನೆ ಬಸ್ ನಿಲ್ದಾಣದಲ್ಲಿ ಸುಸ್ತಾಗಿ ಬಸ್ಸಿಗೆ ಕಾಯುತ್ತ ನಿಂತಿದ್ದಾಗಲೇ ದಿಗಂತ ಸಿಂಧುವಿನ ಬಳಿ `ನನ್ನನ್ನು ಪ್ರೀತಿಸ್ತೀಯಾ..?' ಎಂದು ಕೇಳಿದ್ದ. ಜಲಪಾತದ ಕಣಿವೆಯಿಂದ ಬಂದು ಸುಸ್ತಾಗಿ ಕುಳಿತಿದ್ದವಳು ಬೆಚ್ಚಿ ಬಿದ್ದಿದ್ದಳು. ಆದರೆ ಏನೂ ಮಾತನಾಡಿರಲಿಲ್ಲ. ದಿಗಂತ ಉತ್ತರ ನಿರೀಕ್ಷಿಸುತ್ತಿದ್ದಾಗಲೇ ಬಸ್ಸು ಬಂದಿತ್ತು. ಸಿಂಧು ಮೌನವಾಗಿ ಬಸ್ಸನ್ನು ಏರಿ ಹೋಗಿದ್ದಳು. ಬಸ್ಸಿಳಿದು ಹೋಗುವಾಗಲೂ ಒಂದೇ ಒಂದು `ಹಾಯ್.. ಎಂದೋ ಸಿಗುತ್ತೇನೆ ಎಂದೋ..' ಒಂದೂ ಮಾತನ್ನು ಆಡಿಹೋಗಿರಲಿಲ್ಲ. ದಿಗಂತನಿಗೆ ತಪ್ಪು ಮಾಡಿದೆ ಎನ್ನುವ ಭಾವ ಕಾಡಲಾರಂಭಿಸಿದ್ದೇ ಆಗ. ಆದರೆ ಚಾರಣಕ್ಕೆ ಬಂದಿದ್ದ ಉಳಿದವರಿಗೆ ಈ ಸಂಗತಿ ಗೊತ್ತಾಗಿರಲಿಲ್ಲ.
            ಮರುದಿನ  ದಿಗಂತನನ್ನು ಕಾಲೇಜಿನಲ್ಲಿ ಹುಡುಕಿಕೊಂಡು ಬಂದು ಖಡಾಖಂಡಿತವಾಗಿ ಆತನ ಪ್ರೇಮ ನಿವೇದನೆಯನ್ನು ತಿರಸ್ಕರಿಸಿದ್ದಳು. ತಾನಿನ್ನೂ ಓದುತ್ತಿದ್ದೇನೆ. ಭವಿಷ್ಯದಲ್ಲಿ ಸಾಕಷ್ಟು ಕನಸನ್ನು ಇಟ್ಟುಕೊಂಡಿದ್ದೇನೆ. ಮಾಡೆಲ್ ಆಗಿ ಸಿನೆಮಾ ಜಗತ್ತಲ್ಲಿ ಮಿಂಚುವ ಆಸೆ ತನ್ನದು. ನಿನ್ನನ್ನು ಪ್ರೀತಿಸುವುದಿಲ್ಲ. ನನ್ನ ಕನಸು ಈಡೇರಿಸಿಕೊಳ್ಳಲೇ ಬೇಕು ಎಂದವಳನ್ನೇ ದಿಟ್ಟಿಸಿನೋಡಿದ್ದ ದಿಗಂತ. ಹುಡುಗಿಯರು ಎಷ್ಟು ನೇರವಾಗಿ, ಹೃದಯ ಚೂರಾಗುವಂತೆ ಉತ್ತರ ನೀಡಬಲ್ಲರು... ಎಂದುಕೊಂಡಿದ್ದ. ಮಾತಿಲ್ಲದೆ ಆತನೂ ಸುಮ್ಮನಾಗಿದ್ದ. ನಂತರದ ದಿನಗಳು ಹಾಗೆಯೇ ಸಾಗಿದ್ದವು. ದಿಗಂತ ಮಾತ್ರ ಮೌನದ ಕೋಟೆಯೊಳಗೆ ದಿನದಿಂದ ದಿನಕ್ಕೆ ಸಾಗಿದ್ದ. ಮೊದ ಮೊದಲು ಕ್ರಿಯಾಶೀಲವಾಗಿ, ಚಟಪಟನೆ ಮಾತನಾಡುತ್ತ ಎಲ್ಲರೊಂದಿಗೆ ಮಾತನಾಡುತ್ತ ಖುಷಿ ಖುಷಿಯಾಗಿ ಇದ್ದ ದಿಗಂತ ಕೊನೆ ಕೊನೆಗ ಯಾರೊಂದಿಗೂ ಬೆರೆಯಲಾರ, ಎಲ್ಲರಿಂದ ದೂರ ಉಳಿದು ಬಿಟ್ಟಿದ್ದ. ಸದಾ ಕಾಲ ಏನನ್ನೋ ಆಲೋಚನೆ ಮಾಡುತ್ತಿದ್ದಂತೆ ಅನ್ನಿಸಿತ್ತು. ಟ್ರೆಕ್ಕಿಂಗಿನ ಕಾರಣದಿಂದಾಗಿ ಕಾಲೇಜಿನಾದ್ಯಂತ ದಿಗಂತ ಹೀರೋ ಆಗಿದ್ದರೂ ದಿಗಂತ ಮಾತ್ರ ಅದರಿಂದ ವಿಮುಖನಾಗಿದ್ದಂತೆ ಕಂಡುಬಂದಿತ್ತು. ನಂತರದ ದಿನಗಳಲ್ಲಿ ಸಿಂಧು ಕಾಲೇಜನ್ನು ಮುಗಿಸಿ ಮಾಡೆಲ್ ಲೋಕಕ್ಕೆ ಕಾಲಿಟ್ಟು, ಆ ಮೂಲಕ ಚಿತ್ರರಂಗದಲ್ಲಿ ನಟಿಯಾಗಿ, ಹಲವಾರು ಪ್ರಶಸ್ತಿಗಳನ್ನೂ ತನ್ನದಾಗಿಸಿಕೊಂಡಿದ್ದಳು. ಅವಳಿಗೆ ಗೊತ್ತಿಲ್ಲದಂತೆ ದಿಗಂತ ಮರೆತು ಹೋಗಿದ್ದ. ಆದರೆ ಆತ ಮತ್ತೆ ಅವಳಿಗೆ ನೆನಪಾಗಿ ಕಾಡಿದ್ದು ಮಾತ್ರ ವಿಚಿತ್ರ ಘಟನೆಯಿಂದ.

(ಮುಂದುವರಿಯುತ್ತದೆ..)

No comments:

Post a Comment