Saturday, June 14, 2014

ಹಲಸೆಂಬ ಕಲ್ಪವೃಕ್ಷ

ಹಸಿದು ಹಲಸು ಉಂಡು ಮಾವು ತಿನ್ನಬೇಕು ಎನ್ನುವ ನಾಣ್ಣುಡಿ ಚಾಲ್ತಿಯಲ್ಲಿದೆ. ಅರ್ಥಾತ್ ಹಸಿವಾಗಿದ್ದಾಗ ಹಲಸಿನ ಹಣ್ಣನ್ನು ತಿನ್ನಬೇಕು, ಊಟವಾದ ನಂತರ ಮಾವಿನ ಹಣ್ಣನ್ನು ತಿನ್ನಬೇಕು ಎನ್ನುವ ಹಿರಿಯರ ನಾಣ್ಣುಡಿ ಅರ್ಥಪೂರ್ಣವಾಗಿದೆ.
ತೆಂಗಿನ ಮರವನ್ನು ಕಲ್ಪವೃಕ್ಷ ಎನ್ನುತ್ತಾರೆ. ತೆಂಗಿನ ಮರದ ಪ್ರತಿಯೊಂದು ಭಾಗವೂ ಒಂದಿಲ್ಲೊಂದು ಉಪಯೋಗಕ್ಕೆ ಬರುತ್ತದೆ. ಅದೇ ರೀತಿ ಕಲ್ಪವೃಕ್ಷದ ಸಾಲಿನಲ್ಲಿ ನಿಲ್ಲುವ ಇನ್ನೊಂದು ವೃಕ್ಷವೆಂದರೆ ಅದು ಹಲಸು. ಬೇರಿನಿಂದ ಹಿಡಿದು ಎಲೆಯ ತುದಿಯವರೆಗೂ ಹಲಸು ಮನುಷ್ಯನಿಗೆ ಬಳಕೆಗೆ ಬೇಕೇ ಬೇಕು. ಹಲಸಿನ ಚಿಕ್ಕ ಮಿಡಿಯಿಂದ ಹಣ್ಣಿನವರೆಗೂ ವಿವಿಧ ಖಾದ್ಯಗಳಿಗಾಗಿ ಬಳಕೆ ಮಾಡಲಾಗುತ್ತದೆ. ಖಾದ್ಯಕ್ಕೆ ಬಳಕೆಯಾಗಿ, ಆದಾಯದ ಮೂಲಕ್ಕೂ ಕಾರಣವಾಗಬಲ್ಲ ಹಲಸು ಇಂದಿನ ಕಾಲದಲ್ಲಿ ಕಲ್ಪವೃಕ್ಷ ಎಂದು ಕರೆಯಬಹುದಾಗಿದೆ.
ಹಲವು ಬಹು ಉಪಯೋಗಿ. ಆದರೆ ಹಲಸಿನ ಉಪಯೋಗದ ಕುರಿತು ಹೆಚ್ಚಿನವರಿಗೆ ಸರಿಯಾದ ಮಾಹಿತಿಯೇ ಇಲ್ಲ. ಗ್ರಾಮೀಣ ಭಾಗದವರಿಗಂತೂ ಹಲಸಿನ ಮೌಲ್ಯವರ್ಧನೆ ಹಾಗೂ ಆದಾಯದ ಮೂಲವಾಗಿ ಹಲಸನ್ನು ಬಳಕೆ ಮಾಡುವುದರ ಕುರಿತು ತಿಳುವಳಿಕೆ ಕಡಿಮೆಯಿದೆ ಎಂದರೂ ತಪ್ಪಾಗಲಿಕ್ಕಿಲ್ಲ. ನಗರ ಪ್ರದೇಶದಲ್ಲಿ ಹಲಸಿನ ಹಣ್ಣಿನ ಬಳಕೆ ಮಾಡುವುದಕ್ಕೆ ಹೋಲಿಸಿದರೆ ಗ್ರಾಮೀಣ ಪ್ರದೇಶಗಳಲ್ಲಿ ಅದನ್ನು ಹಾಳು ಮಾಡುವುದೇ ಅಧಿಕ ಎನ್ನಬಹುದು. ನಗರ ಪ್ರದೇಶಗಳಲ್ಲಿ ಹಲಸಿನ ಹಣ್ಣು ಹಾಳಾಗದಂತೆ ಬಳಕೆ ಮಾಡಲು ಎಲ್ಲ ರೀತಿಯಿಂದಲೂ ಪ್ರಯತ್ನ ನಡೆಸಲಾಗುತ್ತದೆ. ಆದರೆ ಗ್ರಾಮೀಣ ಭಾಗದಲ್ಲಿ ಒಂದು ಹಾಳಾದರೆ ಇನ್ನೊಂದು ಎನ್ನುವ ಭಾವನೆಯಿಂದ ಹಲಸು ಹಾಳಾಗುವುದೇ ಹೆಚ್ಚು. ಮಲೆನಾಡಿನಲ್ಲಿ ಹಲಸಿನ ಬಳಕೆಯನ್ನು ಹಲವು ವಿಧಗಳಲ್ಲಿ ಮಾಡುತ್ತಾರೆ. ಹಲಸನ್ನು ಬಹು ಉಪಯೋಗಿಯಾಗಿ ಬಳಕೆ ಮಾಡುವುದರಲ್ಲಿ ಕೇರಳಿಗರು ನಿಸ್ಸೀಮರು. ಹೊಸ ಹೊಸ ರುಚಿಯ ತಿನಿಸುಗಳು, ಖಾದ್ಯಗಳನ್ನು ತಯಾರು ಮಾಡುವ ಕೇರಳಿಗರ ಎದುರು ನಮ್ಮ ಮಲೆನಾಡಿಗರ ಜ್ಞಾನ ಕಡಿಮೆಯೇ ಎನ್ನಬಹುದು.
ಹಲಸು ಬಹುಉಪಯೋಗಿ. ಹಲಸಿನ ತೊಗಟೆಗಳು ಯಜ್ಞ ಯಾಗಾದಿಗಳಲ್ಲಿ ಬಳಕೆಯಾದರೆ ಹಲಸಿನ ಎಲೆಗಳನ್ನು ಸಮಿತ್ತುಗಳಾಗಿ ಬಳಕೆ ಮಾಡಲಾಗುತ್ತದೆ. ಮರವನ್ನು ಮನೆಗಳಲ್ಲಿ ಹೊಸ್ತಿಲಿಗೆ ಬಳಕೆ ಮಾಡುವುದರ ಜೊತೆಗೆ ಪೀಠೋಪಕರಣಗಳಿಗೆ ಉಪಯೋಗಿಸಲಾಗುತ್ತದೆ. ಹಲಸು ಮರಗಳ ಜಾತಿಯಲ್ಲೇ ಶ್ರೇಷ್ಟವಾದುದು ಎನ್ನುವ ಕಾರಣದಿಂದಾಗಿ ಪೀಠೋಪಕರಣಗಳಲ್ಲಿ ಹಲಸಿನಿಂದ ಮಾಡಿರುವುದಕ್ಕೆ ಬೆಲೆಯೂ ಹೆಚ್ಚು ಬೇಡಿಕೆಯೂ ಜಾಸ್ತಿ ಎನ್ನಬಹುದು. ಹಲಸಿನ ಹಣ್ಣು ರುಚಿಕರ. ಹಲಸಿನ ಮಿಡಿಯನ್ನು ತರಕಾರಿಯ ರೂಪದಲ್ಲಿ ಬಳಕೆ ಮಾಡಲಾಗುತ್ತದೆ. ಹಲಸಿನ ಕಾಯಿಯನ್ನು ಚಿಪ್ಸ್, ಚಾಟ್ಸ್ ಸೇರಿದಂತೆ ಹಲವಾರು ಖಾದ್ಯಗಳ ಬಳೆಕೆಗೆ ಉಪಯೋಗಿಸಲಾಗುತ್ತದೆ. ಹಣ್ಣುಗಳ ಉಪಯೋಗ ಬಹುತೇಕರಿಗೆ ತಿಳಿದೇ ಇದೆ. ಹಲಸಿನ ಬೀಜಗಳನ್ನು ಉಪ್ಪು ಹಾಕಿ ಹುರಿದು ಹುರಿಗಡಲೆಯಂತೆ ತಿನ್ನುವ ಪರಿಪಾಠ ಇತ್ತೀಚಿನ ದಿನಗಳಲ್ಲಿ ಬಳಕೆಗೆ ಬಂದಿದೆ.
ಯಲ್ಲಾಪುರದ ಕೆಲವು ಭಾಗಗಳಲ್ಲಿ ವರ್ಷವೊಂದರಲ್ಲಿ ಎಂಟು ತಿಂಗಳುಗಳ ಕಾಲ ಹಲಸಿನ ಬಳಕೆ ಮಾಡುತ್ತಾರೆ. ಮಿಳ್ಳೆಯಿಂದ ಹಿಡಿದು ಹಣ್ಣಾಗಿ ಉದುರಿ ಹೋಗುವವರೆಗೂ ಪ್ರತಿದಿನ ಹಲಸಿನಿಂದ ಮಾಡಿದ ವಿವಿಧ ತಿಂಡಿಗಳನ್ನು ಈ ಭಾಗದಲ್ಲಿ ಬಳಕೆ ಮಾಡುತ್ತಾರೆ. ಶಿರಸಿ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಹಲಸಿನ ಮೌಲ್ಯ ವರ್ಧನೆಗೆ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದೆ. ಕೆಲವರು ಹಲಸಿನ ಹಣ್ಣಿನ ತ್ಯಾಜ್ಯಗಳಿಂದ ಪಶು ಆಹಾರ ತಯಾರಿಕೆಯ ಪ್ರಯತ್ನಗಳನ್ನು ನಡೆಸಿದ್ದಾರೆ. ಹಲಸಿನ ಉಪ್ಪಿನಕಾಯಿ, ಹಲಸಿನ ಜ್ಯಾಂ, ಟೆಟ್ರಾ ಪ್ಯಾಕುಗಳಲ್ಲಿ ಹಲಸಿನ ಕಡುಬುಗಳನ್ನು ತುಂಬಿ ವಿದೇಶಗಳಿಗೆ ಕಳಿಸುವುದು, ವಿವಿಧ ರುಚಿಯ ಹಲಸಿನ ಕಾಯಿಯ ಚಿಪ್ಸ್, ಹಲಸಿನ ಉಪ್ಪಿಟ್ಟುಹೀಗೆ ಹಲಸನ್ನು ಎಲ್ಲ ರೀತಿಯಿಂದ ಬಳಕೆ ಮಾಡಲು ಮುಂದಾಗುತ್ತಿದ್ದಾರೆ.
ಹಾಳಾಗುವ ಹಲಸನ್ನು ಮೌಲ್ಯವರ್ಧನೆ ಮಾಡಿ ಆದಾಯದ ಮೂಲವನ್ನಾಗಿ ಮಾಡಲು ವಿಪುಲ ಅವಕಾಶವಿದೆ. ತ್ಯಾಜ್ಯವಾಗುವ ಹಲಸು ಕಾಸನ್ನು ತಂದುಕೊಡಬಲ್ಲದು. ಉಪ ಉತ್ಪನ್ನಗಳನ್ನು ತಯಾರಿಸಿ ಈ ಮೂಲಕ ಹಣಗಳಿಸಬಹುದಾಗಿದೆ. ಪ್ಯಾಕಿಂಗ್ ಮಾಡುವ ಮೂಲಕ ಮಾರುಕಟ್ಟೆಗೆ ಕಳಿಸಿದರೆ ಹಾಳಾಗುವ ಹಲಸು ಆದಾಯದ ಮೂಲವಾಗಬಲ್ಲದು. ಹಲಸಿನ ಕಾಯಿ ಅಥವಾ ಹಣ್ಣನ್ನು ಹಾಳು ಮಾಡುವ ಬದಲು ಅದರ ಉಪ ಉತ್ಪನ್ನಗಳನ್ನು ತಯಾರಿಸಿದರೆ ಹಣವನ್ನು ತಂದುಕೊಡಲು ಸಾಧ್ಯವಿದೆ. ನಗರದಲ್ಲಿ ಹಲಸಿನ ಮೇಳದ ಮೂಲಕ ಹಲಸಿನ ಮೌಲ್ಯವರ್ಧನೆಯ ಸಾಧ್ಯತೆಗಳು ಅನಾವರಣಗೊಳ್ಳುತ್ತಿವೆ. ಗ್ರಾಮೀಣ ಭಾಗದ ಜನರು ಹಲಸಿನ ಮೂಲಕ ಆದಾಯ ಗಳಿಸಿಕೊಳ್ಳುವಂತಾದರೆ ಹಲಸು ಕಲ್ಪವೃಕ್ಷವಾಗುವ ದಿನಗಳು ದೂರವಿಲ್ಲ.

**
(ಈ ಬರಹ 14-06-2014ರ ಕನ್ನಡಪ್ರಭದಲ್ಲಿ ಪ್ರಕಟಗೊಂಡಿದೆ)

No comments:

Post a Comment