Wednesday, February 19, 2014

ಮನದ ತುಂಬ ಕನಸು ಕಟ್ಟಿ ನಲಿದ ಗೆಳೆಯ ಗಾಂಜಾವಾಲನಾಗಿ ಹೋದ ಪರಿ..

(ಗೋಜಲು ಬದುಕಿಗೊಂದು ಸಾಂದರ್ಭಿಕ ಚಿತ್ರ)
              ಅವನ ಬದುಕೇ ಒಂದು ದೊಡ್ಡ ಟ್ರಾಜಿಡಿ ಎಂದರೂ ತಪ್ಪಾಗಲಿಕ್ಕಿಲ್ಲ. ಅವನು ಏನೆಲ್ಲಾ ಮಾಡ್ಬೇಕು ಅಂದ್ಕೊಂಡು ಪ್ರತಿ ಕೆಲಸಕ್ಕೆ ಕೈ ಹಾಕಿದ್ರೂ ಅದೆಲ್ಲಾ ಫೇಲ್ ಆಗಿಬಿಡುತ್ತೆ. ಆತ ಮತ್ಯಾರು ಅಲ್ಲ. ನನಗೆ ಹೈಸ್ಕೂಲಿನಲ್ಲಿ ಸಿಕ್ಕ  ಒಬ್ಬ  ಆತ್ಮೀಯ ಗೆಳೆಯ. ದೀಪಕ.  ಆತ ಮನಸ್ಸಿನಲ್ಲಿ ಏನೇನೋ ಇಟ್ಗೊಂಡಿರ್ತಾನಾದ್ರೂ ತಾನು ಅದನ್ನು ತಲುಪಲು ಆಗೋದೇ ಇಲ್ಲ.
              ಮೂಲತಃ ಅವನೊಬ್ಬ ಮುಂಗೋಪಿ. ಪೂರ್ ಫೆಲ್ಲೋ. ಎಂಟರಿಂದ ಹತ್ತನೇ ಕ್ಲಾಸಿನ ವರೆಗೆ ಆತ ನನಗೆ ಸಹಪಾಠಿಯಾಗಿ ಸಿಕ್ಕಿದಾಗಲೇ ಆತ ಹೇಗೆ, ಏನು, ಎತ್ತ  ಎಂಬುದು ನನಗೆ ಸಂಪೂರ್ಣ ಪರಿಚಯವಾಗಿದ್ದು. ಒಬ್ಬ ವ್ಯಕ್ತಿಯನ್ನು ನಂಬಿದ  ಎಂದಾದರೆ ಮುಗೀತು. ತನ್ನೊಳಗಿನ ಸಕಲ ಗುಟ್ಟನ್ನೂ ಆತನ ಬಳಿ ಒದರಿಬಿಡುವ ಗುಣವನ್ನು ದೀಪಕ ಹೊಂದಿದ್ದ.
              ನಾನು ಎಂಟನೇ ತರಗತಿಯಲ್ಲಿ ಓದ್ಲಿಕ್ಕೆ ಅಂತ ಸಾಗರದ ಕಾನ್ಲೆ ಹೈಸ್ಕೂಲನ್ನು ಸೇರಿದ ದಿನವೇ ಆತ ನನ್ನ ಪ್ರಾಣಮಿತ್ರನಾಗಿಬಿಟ್ಟಿದ್ದ. ಅವನಿಗೆ ನನ್ನ ಗೆಳೆತನ ಮಾಡಲೇಬೇಕೆಂಬ ದರ್ದೂ ಇತ್ತೆಂದು ಕಾಣುತ್ತದೆ. ಏಕೆಂದರೆ ಹೈಸ್ಕೂಲಿನಲ್ಲಿ ಆಗ ಇದ್ದ ಬ್ರಾಹ್ಮಣ ಹುಡುಗರೆಂದರೆ ಮೂರೂ ನಾಲ್ಕೋ ಅಷ್ಟೆ. ಅವರಲ್ಲಿ ನಾನೂ ಒಬ್ಬ-ಅವನೂ ಒಬ್ಬ.  ಹುಡುಗಿಯರಲ್ಲೂ ಒಂದಿಬ್ಬರು ಇದ್ದರು. ಜೊತೆಗೆ ಹೈಸ್ಕೂಲಿಗೆ ಸೇರಿದ ಹೊಸತರಲ್ಲಿ ಮಾಸ್ತರ್ರು ಕೇಳಿದ ಎಲ್ಲ ಪ್ರಶ್ನೆಗಳಿಗೂ ನಾನು ಸರಿಯುತ್ತರಗಳನ್ನು ಕೊಟ್ಟು ಕೊಟ್ಟು ಸ್ವಲ್ಪ ಬುದ್ಧಿವಂತ ಹುಡುಗ ಎನ್ನುವ ಹವಾ ಸೃಷ್ಟಿ ಮಾಡಿಕೊಂಡಿದ್ದೆ. ಓದಿನಲ್ಲಿ ಹಿಂದಿದ್ದರೂ ಮಾತಿನಲ್ಲಿ ಜೋರಾಗಿದ್ದ  ಆತ ಈ ಕಾರಣದಿಂದಲೇ ನನ್ನ ಜೊತೆಗೆ ಬಂದು ಮಿತೃತ್ವ ಪಡೆದುಕೊಂಡನೇನೋ ಅನ್ನಿಸುತ್ತದೆ.
               ಪ್ರತಿಸಾರಿ ಹೈಸ್ಕೂಲು ಚುನಾವಣೆ ಬಂದರೂ ಆತ ನಿಲ್ಲುತ್ತಿದ್ದ. ನಿಂತು ಸೋಲುತ್ತಿದ್ದ. ಚುನಾವಣೆಗೆ ನಿಂತಾಗಲೆಲ್ಲ ನೋಡಬೇಕು ದೀಪಕನ ಅಬ್ಬರ. ಥೇಟು ರಾಜಕಾರಣಿಗಳಂತೆ ಉದ್ದದ್ದ ಭಾಷಣವನ್ನು ಬಿಗಿಯುತ್ತಿದ್ದ. ಇತರ ಹುಡುಗರು ಆತನ ಮಾತನ್ನು ಭಕ್ತಿಯಿಂದ ಕೇಳುತ್ತಿದ್ದರು. ಪ್ರತಿ ಸಾರಿ ಚುನಾವಣೆಗಳಲ್ಲಿ ನಡೆಯುತ್ತಿದ್ದಂತೆ ಭಾಷಣ ಕೇಳಿದ ನಂತರ ಆತನನ್ನು ಮರೆತುಬಿಟ್ಟು ಬೇರೆಯವರಿಗೆ ಮತ ಹಾಕಿ ಬಿಡುತ್ತಿದ್ದರು.
               ಹೀಗಿದ್ದ ದೀಪಕನಿಗೆ ಮಾಸ್ಟ್ರಿಂದ ಪ್ರತಿ ದಿನ ಹೊಡೆತ ಬಿದ್ದೇ ಬೀಳುತ್ತಿತ್ತು. ನಾವು ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ರಾಮಪ್ಪ  ಉರುಫ್ ಆರ್ಬಿಎನ್ ಎಂಬ ಮಾಸ್ಟ್ರರೊಬ್ಬರಿದ್ದರು.  ಹೊಡೆತಕ್ಕೆ ಹೆಸರುವಾಸಿ ಮಾಸ್ಟರ್ ಅವರು. ಅವರಂತೂ ಪ್ರತಿದಿನ ಇವನ ಬಳಿಯೇ ಹೊಡೆತದ ಕೋಲು ತರಲು ಹೇಳುತ್ತಿದ್ದರು. ಅವರು ಹೇಳಿದಾಗಲೆಲ್ಲಾ ಖುಷಿಯಿಂದ ಗಾಳಿ ಶೆಳಕೆಯನ್ನೋ, ಅಕೇಸಿಯಾ ಕೋಲನ್ನೋ ಮುರಿದು ತರುತ್ತಿದ್ದವನಿಗೆ ಸಿಗುತ್ತಿದ್ದುದು ಬೋನಸ್ಸು ಹಾಗೂ ಬೋಣಿ ಎಂಬಂತೆ ಅದೇ ಕೋಲಿನಿಂದ ಹೊಡೆತ. ಪಿಬಿಎನ್ ಹೊಡೆತಕ್ಕೆ ಪ್ರತಿಯಾಗಿ `ಅಯ್ಯಪ್ಪಾ... ಸಾ.. ನಾ ಸತ್ತೆ ಸತ್ತೆ..' ಎಂದು ಕೂಗುತ್ತಿದ್ದ ದೀಪಕನ ಧ್ವನಿಯಿನ್ನೂ ನನಗೆ ಹಸಿ ಹಸಿಯಾಗಿಯೇ ಇದೆ.
                ನಾಟಕಗಳಲ್ಲಿ ನಟನೆ ಮಾಡುವುದು ದೀಪಕನ ಹವ್ಯಾಸಗಳಲ್ಲಿ ಪ್ರಮುಖವಾದುದು. ಜೊತೆಗೆ ಆತ ಹಲವಾರು ಡ್ಯಾನ್ಸುಗಳಿಗೂ ಸ್ಟೆಪ್ ಹಾಕಿದ್ದಾನೆ. ನನ್ನ ಹಾಗೂ ಅವನ ನಡುವೆ ಅನೇಕ ಸಾರಿ ತಪ್ಪು ತಿಳುವಳಿಕೆ, ಇತರೆ ದೋಸ್ತರ ಫಿಟ್ಟಿಂಗ್ ಇತ್ಯಾದಿ ಕಾರಣಗಳಿಂದಾಗಿ ಮನಸ್ತಾಪ ಬಂದು ಮಾತು ಬಿಟ್ಟಿದ್ದೂ ಇದ್ದವು. ಕಾರಣಗಳು ಏನೇನಿದ್ದವೋ, ಏನೋ.. ಕೆಲವು ಕಾರಣಗಳು ಸಿಲ್ಲಿಯಾಗಿಯೂ ಇದ್ದವೆನ್ನಿ. ಚುನಾವಣೆಯ ಸಂದರ್ಭದಲ್ಲಿ ಮಾತ್ರ ನನಗೂ ಅವನಿಗೂ ಜಗಳಗಳಾಗುತ್ತಿದ್ದುದು ಮಾಮೂಲು. ಪರಿಣಾಮವಾಗಿ ಆತ ನನ್ನ ಜೊತೆ ಅಥವಾ ನಾನು ಅವನ ಜೊತೆ ಮಾತನ್ನು ಬಿಡುತ್ತಿದ್ದೆ. ಇದರ ಪರಿಣಾಮ ಎಂಬಂತೆ ಆತ ಚುನಾವಣೆಯಲ್ಲಿ ಸೋಲುತ್ತಿದ್ದ. ಯಾಕಂದರೆ ಆ ದಿನಗಳಲ್ಲಿ ನಾನು ಚನ್ನಾಗಿ ಓದುತ್ತೇನೆ ಎನ್ನುವ ಹವಾ ಇದ್ದ ಕಾರಣ ನಾಲ್ಕೈದು ಮಿತ್ರರ ಗುಂಪು ಇರುತ್ತಿತ್ತು. ಅವರೆಲ್ಲ ನಾನು ಹೇಳಿದಂತೆ ಮಾಡುತ್ತಿದ್ದರು ಎನ್ನುವುದು ಆಗ ನನಗಿದ್ದ ಕೋಡಾಗಿತ್ತು. ನಾನು ಹೇಳಿದವರಿಗೆ ಓಟು ಹಾಕುತ್ತಿದ್ದರು. ನಾನು ಬೇಡ  ಎಂದರೆ ಓಟು ಹಾಕುತ್ತಿರಲಿಲ್ಲ. ಹೀಗೆ ದೀಪಕನೂ ಸೋತು ಹೋಗುತ್ತಿದ್ದ. ಆದರೆ ಒಂದು ಮಾತ್ರ ವಿಚಿತ್ರ ಹೇಳಲೇ ಬೇಕು. ಆತ ಹೀಗೆ ಮಾತು ಬಿಟ್ಟಾಗ ನಡೆದ ಚುನಾವಣೆಯಲ್ಲಿ ನಾನು ನನ್ನ ಮಿತ್ರರ ಬಳಿ ಅವನಿಗೆ ಓಟು ಹಾಕಬೇಡಿ ಎಂದು ಹೇಳಿ ಇತರರಿಗೆ ಮತ ಹಾಕಿಸಿದ್ದರೂ ನಾನು ಮಾತ್ರ ದೀಪಕನಿಗೆ ಹಾಕಿ ಮುಗುಮ್ಮಾಗಿ ಇದ್ದುಬಿಡುತ್ತಿದ್ದೆ. ನನ್ನೊಬ್ಬನ ಓಟು ಬಿದ್ದರೆ ಆತ ಗೆಲ್ಲುತ್ತಾನೆಯೇ ಬಿಡಿ.. ಈಗ ಅದನ್ನೆಲ್ಲ ನೆನಸಿಕೊಂಡ್ರೆ ಮನದ ತುಂಬಾ ಬೇಜಾರಿನ ಮೂಟೆ ತುಂಬಿಬಿಡುತ್ತದೆ.
                 ಎಲ್ಲಕ್ಕಿಂತ ಮುಖ್ಯವಾಗಿ ನಾನು, ದೀಪಕ ಹಾಗೂ ಹೈಸ್ಕೂಲಿನ ಇನ್ನೊಬ್ಬ ಗೆಳೆಯ ಸುರೇಂದ್ರ ಸೇರಿಕೊಂಡು ಮಾಡದ ಪುಂಡರಪೂಟೇ ಇಲ್ಲ  ಎನ್ನಬಹುದು. ಹೈಸ್ಕೂಲಿನ ಮಾಮೂಲಿ ಹೊಡೆದಾಟ, ಚರ್ಚೆ, ವಾದಗಳಲ್ಲೆಲ್ಲಾ ನಮ್ಮದು ಒಂದು ಕೈ ಜೋರೇ ಇರುತ್ತಿತ್ತು. ದೀಪಕನಂತೂ ಕೆಲವು ಸಾರಿ ಮಾಸ್ಟರುಗಳ ಜೊತೆಗೆ ವಾದಕ್ಕೆ ಇಳಿದಿದ್ದೂ ಇದೆ.
                 ಇನ್ನು ಪ್ರತಿ ಪರೀಕ್ಷೆಯಲ್ಲೂ ನಾನು-ದೀಪಕ ಹಾಗೂ ಸುರೇಂದ್ರ ಅವರ ಪಾಲಿಗೆ ದೇವರಂತಾಗಿಬಿಡುತ್ತಿದ್ದೆ. ಮಾಸ್ಟ್ರುಗಳು ಹೇಗೇ ಕೂರಿಸಲಿ ಇವರಿಬ್ಬರೂ ಅದು ಹ್ಯಾಗೋ ನನ್ನ ಅಕ್ಕಪಕ್ಕದ, ಹತ್ತಿರದಲ್ಲಿಯೇ ಕುಳಿತುಬಿಡುತ್ತಿದ್ದರು. ಅವರಿಗೆ ನಾನು ಉತ್ತರ ಹೇಳಿಕೊಡುತ್ತಿದ್ದೆ. ಪಾಸಾಗುತ್ತಿದ್ದರು. ಕೊನೆ ಕೊನೆಗೆ ನಮ್ಮ ಟೀಚರ್ರುಗಳಿಗೆ ಈ ಕುರಿತು ತಿಳಿದು ನಮ್ಮನ್ನು ಬೇರೆ ಕಡೆಗೆ ಕುಳ್ಳಿರಿಸಿದ್ದೂ ಇದೆ ಎನ್ನಿ.
                 ದೀಪಕ ಕುರಿತು ಇನ್ನೊಂದು ವಿಶೇಷ ಸಂಗತಿ ಖಂಡಿತ ಹೇಳಲೇಬೇಕು. ಅದೆಂದರೆ ಆತನ ಪ್ರೇಮಪುರಾಣ. ಆತ ನಮ್ಮದೇ ಕ್ಲಾಸಿನಲ್ಲಿ ಓದುತ್ತಿದ್ದ ಹುಡುಗಿಯೊಬ್ಬಳನ್ನು ಬಹಳ ಇಷ್ಟಪಡುತ್ತಿದ್ದ. ಅವನಿ ಅಥವಾ ಅನಿತಾ ಎಂದೇನೋ ಇರಬೇಕು ಅವಳ ಹೆಸರು.(ಕರೇಯೋಕೆ ಒಂದು ಹೆಸರು ಬೇಕಾದ ಕಾರಣ ಹಾಗೂ ಹೆಸರು ಸಮಸ್ಯೆಯಾಗದಿರಲಿ ಎನ್ನುವ ಕಾರಣಕ್ಕಾಗಿ ಅವಳ ಹೆಸರನ್ನು ಅನಿತಾ ಎಂದೇ ಮುಂದೆ ಕರೆಯುತ್ತೇನೆ. ) ಅದೆಷ್ಟೋ ಸಾರಿ ದೀಪಕ್ ನನ್ನ ಬಳಿ ಬಂದು `ಲೇ ವಿನೂ.. ನನ್ನ ಲವ್ ಸಕ್ಸಸ್ ಆಗ್ತದೇನಲೇ..' ಎಂದು ಕೇಳುತ್ತಿದ್ದವನಿಗೆ ಏನೇನೋ ಉತ್ತರಗಳನ್ನು ಕೊಟ್ಟು ಸಾಗ ಹಾಕುವಷ್ಟರಲ್ಲಿ ನನಗೆ ಸುಮಾರು ಸರ್ಕಸ್ಸುಗಳನ್ನು ಮಾಡಬೇಕಾಗುತ್ತಿತ್ತು.  ಆಗಾಗ ಅವನ ಮನಸ್ಸಿನಲ್ಲಿ ಮೂಡುತ್ತಿದ್ದ ಅನುಮಾನ ಹಾಗೂ ಭಯವೆಂದರೆ ನಾನೆಲ್ಲಾದರೂ ಆಕೆಯನ್ನು ಇಷ್ಟಪಟ್ಟುಬಿಡುತ್ತೇನೋ ಎನ್ನುವುದಾಗಿತ್ತು. ಹೀಗೆ ಅನುಮಾನ ಮೂಡಲು ಹಲವು ಕಾರಣಗಳೂ ಇತ್ತೆನ್ನಿ. ನಮ್ಮದೇ ಕ್ಲಾಸಿನ ಕೆಲವು ಹುಡುಗರು ನನಗೂ ಆ ಹುಡುಗಿಯ ಹೆಸರನ್ನೂ ಸೇರಿಸಿ ತಮಾಷೆ ಮಾಡುತ್ತಿದ್ದರು. ನಮ್ಮಿಬ್ಬರ ಜೋಡಿ ಮಸ್ತಾಗುತ್ತದೆಂದು ಕಾಡುತ್ತಿದ್ದರು. ಅವರು ಹೀಗೆ ಹೇಳಿದಾಗಲೆಲ್ಲ ದೀಪಕ  ಉರಿದುಹೋಗುತ್ತಿದ್ದ. ಒಂದೆರಡು ಸಾರಿ ಈ ಕಾರಣದಿಂದ ಕ್ಲಾಸಿನಲ್ಲಿ ದೀಪು ಗಲಾಟೆ ಮಾಡಿದ್ದೂ ಇದೆ. ಆದರೆ ಅದೇನು ಕಾರಣವೋ ಗೊತ್ತಿಲ್ಲ ಹೈಸ್ಕೂಲಿನ ಸಂದರ್ಭದಲ್ಲಿ ಆತನಿಗೆ ತನ್ನ ಪ್ರೇಮವನ್ನು ಆಕೆಯ ಬಳಿ ನಿವೇದನೆ ಮಾಡಲು ಸಾಧ್ಯವಾಗಲೇ ಇಲ್ಲ.
                  ನಮ್ಮಿಬ್ಬರಿಗೂ ಆಪ್ತರೆನ್ನಿಸಿದ ಬಿ. ಆರ್. ನಾರಾಯಣ ಉರುಫ್ ಬಿ.ಆರ್.ಎನ್. ಅವರಿಗಂತೂ ನಾವಿಬ್ಬರು ಯಡಗಣ್ಣು ಹಾಗೂ ಬಲಗಣ್ಣು ಎಂಬಂತಿದ್ದೆವು. ನಮ್ಮ, ಇಂಗ್ಲೀಷ್ ಸರ್ ಆಗಿದ್ದ ಅವರನ್ನು ನಾವು ಅದೆಷ್ಟು ಸಾರಿ ತಮಾಷೆ ಮಾಡಿದ್ದರೂ ಕೂಡ ಆಪ್ತರಾಗಿದ್ದರು. ಇಷ್ಟವಾಗಿದ್ದರು. ಇವರ ಹಳೆಯ ಚೆಸ್ಪಾ ಬೈಕಿನ ಕಿಕ್ ಹೊಡೆಯುವುದರಲ್ಲಿ ನನಗೂ ದೀಪುವಿಗೂ ಅನೇಕ ಸಾರಿ ಸ್ಪರ್ದೇ ಏರ್ಪಟ್ಟಿದ್ದೂ ಇದೆ. ಭಾರತ ತಂಡದ ಕ್ರಿಕೆಟ್ ಮ್ಯಾಚುಗಳು ನಡೆದಾಗಲೆಲ್ಲ ೀ ಬಿ.ಆರ್.ಎಲ್. ಅವರು ತರುತ್ತಿದ್ದ ಹ್ಯಾಡ್ ರೇಡಿಯೋಕ್ಕೆ ಕಿವಿಗೊಟ್ಟು ಸ್ಕೋರನ್ನು ಕೇಳಿ ಹೈಸ್ಕೂಲಿಗೆ ಹಂಚುವ ಘನಕಾರ್ಯವನ್ನು ನಾವೇ ಮಾಡುತ್ತಿದ್ದೆವು. ಹೀಗೆಲ್ಲಾ ನಡೆಯುತ್ತಿದ್ದಾಗ ನನ್ನ ಹಾಗೂ ಆತನ ಬದುಕು ಚನ್ನಾಗಿಯೇ ಇತ್ತು.
                 ಅಂತವನ ಬದುಕಿನಲ್ಲಿ ಒಂದು ವಿಲಕ್ಷಣ ಘಟನೆ ನಡೆದುಹೋಯಿತು. ಬಹುಶಃ ಆವತ್ತು ಎಸ್ಸೆಎಸ್ಸೆಲ್ಸಿಯ ಗಣಿತ ಪಬ್ಲಿಕ್ ಪರೀಕ್ಷೆಯಿರಬೇಕು. ಆವತ್ತು ಬಂದವನೇ ದೀಪಕ ನನ್ನ ಬಳಿ `ಲೋ ವಿನೂ.. ಇವತ್ತು ನನ್ನ ಅಪ್ಪಂದು ಎರಡನೇ ಮದುವೆ ಕಣೋ.. ನಾನೇನ್ಮಾಡ್ಲೋ.. ನನ್ನ ಕಣ್ಣೆದುರು ಇನ್ನೊಬ್ಬಾಕೆಯ ಬದುಕು ಹಾಳಾಗ್ತಾ ಇದೆ.. ಆ ಅಪ್ಪ  ಎಂಬ ಬಡ್ಡೀಮಗ ನನ್ನ ಅಮ್ಮನಿಗೆ ಮೋಸ ಮಾಡಿ ನನ್ನನ್ನು ಹಾಗೂ ತಂಗಿಯನ್ನು ಅನಾಥರನ್ನಾಗಿ ಮಾಡಿದ್ದೂ ಅಲ್ದೆ ಈಗ ಇನ್ನೊಬ್ಬಾಕೆಯ ಲೈಫು ಹಾಳ್ಮಾಡ್ತಾ ಇದ್ದಾನೋ.. ನಂಗೆ ಈ ಗಣಿತ  ಎಕ್ಸಾಂ ಇಲ್ದಿದ್ರೆ ಅವನನ್ನ ಬಡಿದಾದ್ರೂ ಬುದ್ಧಿ ಕಲಿಸ್ತಿದ್ದೆ..' ಎಂದು ಹೇಳಿದ್ದ.
                 ಇವನ ಅಪ್ಪ ಭಾರಿ ಕುಡಿತಗಾರ. ದೀಪಕನ ತಾಯಿಯ ಜೊತೆಗೆ ಬಂದಿದ್ದ ಅಪಾರ ವರದಕ್ಷಿಣೆಯನ್ನು ನುಂಗಿ ನೀರ್ಕುಡಿದು ಮೋಸ ಮಾಡಿ ಓಡಿ ಹೋದ ಪರಿಣಾಮ ದೀಪಕನ ಜವಾಬ್ದಾರಿಯೆಲ್ಲ ಆತನ ತಾಯಿ ಹಾಗೂ ಸಂಬಂಧಿಕರ ಮೇಲೆ ಬಿದ್ದಿತ್ತು. ಕೊನೆಗೆ ತನ್ನ ಪರಿಚಯದವರೊಬ್ಬರ ಮನೆಯಲ್ಲಿ ಉಳಿದುಕೊಂಡು ಹೈಸ್ಕೂಲಿಗೆ ಬರುತ್ತಿದ್ದ ಆತ.  ಸಂಬಂಧಿಕರ ಮನೆಯಲ್ಲಿ ಅದೂ ಇದೂ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದ  ಈತನ ಕುರಿತು ಹೈಸ್ಕೂಲಿನ ಮಿತ್ರರೆಲ್ಲ ಅಪ್ಪನ ಹೆಸರು ಹೇಳಿ ಚಾಳಿಸಿದ್ದೂ ಇದೆ. ಮೊದ ಮೊದಲೆಲ್ಲ ದೋಸ್ತರ ಜೊತೆಗೆ ಸೇರಿಕೊಂಡು ನಾನೂ ಚಾಳಿಸಿದ್ದೆ. ಆದರೆ ಕೊನೆಗೆ ಮಾತ್ರ ಸತ್ಯ ಗೊತ್ತಾಗಿತ್ತು. ಚಾಳಿಸುವುದನ್ನು ಬಿಟ್ಟು ಬಿಟ್ಟಿದ್ದೆ. ತದನಂತರ ನಾವು ಪಾಸಾಗಿ ಪಿಯುಸಿಯ ಮೆಟ್ಟಿಲು ಹತ್ತಿದ್ದೆವು. ಹೈಸ್ಕೂಲೆಂಬ ನದಿಯನ್ನು ದಾಟಿದ ನಾವು ಪಿಯುಸಿಯೆಂಬ ಕಡಲಿನಲ್ಲಿ ಈಜಲಿಕ್ಕಿಳಿದಾಗಲೇ ನಮಗೆ ನಿಜವಾದ ಬದುಕಿನ ಅರಿವಾಗಿದ್ದು. ಆ ನಂತರವೇ ದೀಪಕನೆಂಬ ದುರದೃಷ್ಟವಂತನ, ಕ್ರಿಯೇಟಿವ್ ಹುಡುಗನ ಟ್ರಾಜಿಡಿ ಲೈಫು ಶುರುವಾಗಿದ್ದು ಎನ್ನಬಹುದು. ಈ ನಂತರದ ಅವನ ಜೊತೆಗೆ ನನ್ನ ಒಡನಾಟ ಕಡಿಮೆಯಾಯಿತಾದರೂ ಆಗೊಮ್ಮೆ ಈಗೊಮ್ಮೆ ಆತನ ಬದುಕಿನ ಕುರಿತು ಹಲವು ಸಂಗತಿಗಳು ನನ್ನ ಕಿವಿಗೆ ಬೀಳುತ್ತಿದ್ದವು.
                 ನಾನು ಆ ನಂತರ ನಾಣಿಕಟ್ಟಾ ಕಾಲೇಜನ್ನು ಸೇರಿದೆ. ಆತ ಅವನ ಊರಿನ ಬಳಿಯಲ್ಲಿಯೇ ಇದ್ದ ಯಾವುದೋ ಪಿಯು ಕಾಲೇಜನ್ನೂ ಸೇರಿದ. ಅಲ್ಲಿಂದಲೇ ಇರಬೇಕು ಆತನ ಬದುಕು ಮೂರಾಬಟ್ಟೆಯಾಗಲು ಶುರುವಾದದ್ದು. ಒಳ್ಳೆಯ ಹುಡುಗನಾಗಿದ್ದ  ಆತನಿಗೆ ನಂತರ ಸಿಕ್ಕವರೆಲ್ಲ ಪುಂಡ ಪೋಕರಿ ಹುಡುಗರೇ ಆದ ಕಾರಣ  ಆತ ಮತ್ತಷ್ಟು ಬೇಗ ನೈತಿಕವಾಗಿ ಅದಃಪತನಕ್ಕೆ ಇಳಿದ ಎಂದರೆ ತಪ್ಪಾಗಲಿಕ್ಕಿಲ್ಲ. ಅವನ ಪಿಯು ಬದುಕಿನಲ್ಲಿ ಅವನಿಗೆ ಅವನಂತೆಯೇ ಕೆಲವು ಮುಂಗೋಪಿ ಹುಡುಗರು, ಸ್ಥಳೀಯ ಮಟ್ಟದಲ್ಲಿ ಚಿಕ್ಕಪುಟ್ಟ ರೌಡಿಸಂ ಮಾಡುತ್ತಿದ್ದ ಹುಡುಗರ ಪರಿಚಯವಾದವು. ಅಂತವರ ಜೊತೆ ಅಂತವರಂತೆಯೇ ಬೆಳೆದ ದೀಪಕ.
                 ಬಹುಶಃ ಆ ದಿನಗಳಲ್ಲಿಯೇ ಇರಬೇಕು ಆತ ತನ್ನ ದೋಸ್ತರ ಮಾತು ಕಟ್ಟಿಕೊಂಡು ಹೈಸ್ಕೂಲು ಲವ್ವರ್ ಗೆ ಒಂದು ಪ್ರೇಮಪತ್ರ ಬರೆದೇಬಿಟ್ಟ. ಆ ಲವ್ ಲೆಟರ್  ಸೀದಾ ಆ ಹುಡುಗಿಯ ಅಪ್ಪನಿಗೆ ಸಿಕ್ಕಿತು. ಆತ ಪೊಲೀಸ್ ಕಂಪ್ಲೇಟ್ ಕೊಟ್ಟ. ಪೊಲೀಸರು ಆತನನ್ನು ಹಿಡಿದು ನಾಲ್ಕೇಟು ಬಿಗಿದು ನಾಲ್ಕೈದು ದಿನ ಜೈಲಿನಲ್ಲೂ ಇಟ್ಟರು. ಅಲ್ಲಿಂದ ವಾಪಾಸು ಬಂದವನಿಗೆ ಬೇರೆಯದೇ ತೆರನಾದ ಅನುಭವವಾಯಿತು. ಸೆರೆಮನೆಯಲ್ಲಿದ್ದಾಗಲೇ ದೋಸ್ತನಾಗಿದ್ದನೋ ಏನೋ.. ಒಬ್ಬ ಹೆಸರುಮಾತಿನ ರೌಡಿಯ ಪರಿಚಯವೂ ಆಯಿತು. ಆತನ ಸಹವಾಸದಿಂದ ಕುಡಿಯುವುದನ್ನೂ ಕಲಿತ. ಎಸ್ಸೆಲ್ಸಿಯಲ್ಲಿ ಫಸ್ಟ್ ಕ್ಲಾಸಿನಲ್ಲಿ ಪಾಸಾದ ಹುಡುಗ ಪಿಯು ಪಾಸಾಗಲು ನಾಲ್ಕೈದು ವರ್ಷಗಳು ಬೇಕಾದವು. ಆಗ ಸ್ವಲ್ಪ ಗಟ್ಟಿ ವ್ಯಕ್ತಿತ್ವದ ಹುಡುಗನಾಗಿದ್ದ ದೀಪಕ ಕೊನೆ ಕೊನೆಗಂತೂ ಬಾಯಿ ಬಿಟ್ಟರೆ ರೈಲು ಹತ್ತಿಸುವ, ದೊಡ್ಡ ದೊಡ್ಡ ಮಾತಾಡುವ , ಬಡಾಯಿ ಕೊಚ್ಚಿಕೊಳ್ಳುವ, ಊರಲ್ಲೆಲ್ಲ ಏನೇ ದೊಡ್ಡ ಘಟನೆಗಳು ಜರುಗಿದರೂ ಅದನ್ನೆಲ್ಲಾ ತಾನೆ ಮಾಡಿದ್ದೆನ್ನುವ ಮಾತುಗಳು ಆತನ ಬಾಯಿಂದ ಬರತೊಡಗಿದವು. ಜೊತೆ ಜೊತೆಯಲ್ಲಿಯೇ ಸಿನೆಮಾಗಳ ಪ್ರಭಾವವೋ ಎಂಬಂತೆ ಮಾತಿಗೊಮ್ಮೆ `ಏಯ್ ನಿನ್ನಕ್ಕನ್.. ನಿನಯ್ಯನ್.. ಮಚ್ಚು ತೆಗೆದ ಅಂದ್ರೆ..' ಎಂಬಂತಹ ಶಬ್ದಗಳೇ ಬರತೊಡಗಿದವು. ಹೈಸ್ಕೂಲಿನ ಸಂದರ್ಭದಲ್ಲಿಯೇ ಯಾವುದೋ ಚಾಲೇಂಜಿಗೆ ಪ್ರತಿಯಾಗಿ ಸಿಗರೇಟಿನ ದಮ್ಮು ಎಳೆದಿದ್ದ ದೀಪಕ  ಇದೀಗ ಕೇವಲ ಕುಡಿತಕ್ಕಷ್ಟೇ ಸೀಮಿತವಾಗದೇ ಗಾಂಜಾ ಸೇವನೆಯಲ್ಲೂ ತೊಡಗಿಕೊಂಡಿದ್ದಾನೆಂಬ ಸುದ್ದಿ ನನಗೆ ಸಿಕ್ಕಿದೆ. ಜೊತೆ ಜೊತೆಯಲ್ಲಿ ಆತ ಅದರ ಕಳ್ಳ ಸಾಗಾಣಿಕೆ ಮಾಡುತ್ತಾನೆ ಎನ್ನುವ ಮಾತುಗಳೂ ಕೇಳಿಬಂದಿದ್ದು ನನಗೆ ಬಹಳ ಬೇಸರವನ್ನು ಮೂಡಿಸಿತ್ತು.
                ಇಂತಹ ದೋಸ್ತ ಮೊನ್ನೆ ತೀರಾ ಅಚಾನಕ್ಕಾಗಿ ನನಗೆ ಸಿಕ್ಕಿದ್ದ. ಒಮ್ಮೆ ನೋಡಿದಾಗ ಒಂದು ಸಾರಿ ಗುರುತು ಸಿಕ್ಕಿರಲಿಲ್ಲ.. ಕೊನೆಗೆ ನಾನು ಹೌದೋ ಅಲ್ಲವೋ ಎನ್ನುತ್ತಲೇ ಮಾತನಾಡಿಸಿ ನಾನು ಹೀಗ್ಹೀಗೆ ಪತ್ರಿಕೆಯೊಂದರಲ್ಲಿ ಕೆಲವ ಮಾಡುತ್ತಿದ್ದೇನೆ ಎಂದು ಹೇಳಿದ್ದೆ. ಅದಕ್ಕೆ ಪ್ರತಿಯಾಗಿ ಆತ `ನೀವು ಪತ್ರಕರ್ತರೆಂದರೆ ಸಭ್ಯ  ಇರುವ ಬಡ್ಡಿಮಕ್ಕಳಲ್ಲ. ನೀವು ಅವರಿವರೇ ಬರೆದಿದ್ದನ್ನೆಲ್ಲ ಕದ್ದು ಬರೆದು ಮುಂದೆ ಬರ್ತೀರಿ..' ಎಂದೆಲ್ಲಾ ಹಲುಬಿದ್ದ.  ಆತನ ಬಾಯಿಯಿಂದ ಪರಮಾತ್ಮ ವಾಸನೆಯ ರೂಪದಲ್ಲಿ ಹೊರಬಿದ್ದಿದ್ದನ್ನು ಕಂಡು ನಾನು ಹೆಚ್ಚು ಮಾತು ಬೆಳೆಸದೇ ಹೋಗಿದ್ದೆ. ಈತ ಹೇಗಾದರೂ ಹಾಳಾಗಿ ಸಾಯಿಲಿ ಎಂದು ಶಪಿಸಿ ಅಲ್ಲಿಂದ ಬಂದಿದ್ದೆನಾದರೂ ಆತನ ತಾಯಿಯ ಚಿತ್ರಣ ನನ್ನ ಮನಸ್ಸಿನಲ್ಲಿ ಮೂಡಿ ಒಂಥರಾ ಆಗಿತ್ತು.
                ಹೇಗಿದ್ದ ವ್ಯಕ್ತಿ ಹೇಗಾಗಿಬಿಟ್ಟನಲ್ಲ. ಮನದ ತುಂಬ ಕನಸು ಕಟ್ಟಿ ನಲಿದ ಗೆಳೆಯ ಗಾಂಜಾವಾಲನಾಗಿಬಿಟ್ಟನಲ್ಲ. ಮುಂದೆಂದಾದರೂ ಆತ ಮೊದಲಿನ ಹಾಗೇ ಗನಾ ವ್ಯಕ್ತಿಯಾಗಬಲ್ಲನಾ..? ಈಗಿನ ರೌಡಿಯಿಸಂ, ಧೂಮ, ಪಾನಗಳ ಪರದೆಯನ್ನು ಕಳಚಿ ಹೊರಬರುತ್ತಾನಾ? ಅವನು ಈ ರೀತಿಯಾಗುವಂತೆ ಮಾಡಿದ ವ್ಯಕ್ತಿಗಳು  ಆತ ಮೊದಲಿನಂತಾಗುತ್ತಾನೆ ಎಂದರೆ ಸುಮ್ಮನೆ ಬಿಡುತ್ತಾರೆಯೇ? ಅದಕ್ಕಿಂತ ಮಿಗಿಲಾಗಿ ಆತನ ತಾಯಿಯ ಜೀವ ನಗುವಂತಾಗುತ್ತದೆಯೇ? ಮುಂದೆ ಹಲವು ಪ್ರಶ್ನೆಗಳು ಮೂಡಿದವು. ಎಲ್ಲವೂ ನಿಗೂಢ ಅನ್ನಿಸಿ ತಲೆಕೊಡವಿ ಅಲ್ಲಿಂದ ಬಂದಿದ್ದೆ.

**

(ಇದನ್ನು ಖಂಡಿತ ಬರೆದಿದ್ದು ಮೂರ್ನಾಲ್ಕು ವರ್ಷಗಳ ಹಿಂದೆ..)
(ಶಿರಸಿಯ ಉಳುಮೆ ಮಾಸಪತ್ರಿಕೆಯಲ್ಲಿ ಇದು ಪ್ರಕಟಗೊಂಡಿದೆ)
(ಈಗ ದೀಪಕ್ ಯಾವ ರೀತಿ ಇದ್ದಾನೆ ಎಂಬುದನ್ನು ಶೀಘ್ರವಾಗಿಯೇ ಬರೆಯಲಾಗುತ್ತದೆ..)

1 comment:

  1. eega deepaka hengayda.. olleyavanaydna... ????

    ReplyDelete