Sunday, February 9, 2014

ಬ್ರಹ್ಮಚಾರಿಯ ಮಗಳು (ಕಥೆ)ಭಾಗ-2

                 ಅವಳು ನನ್ನನ್ನು ಸೀದಾ ತಮ್ಮ ಮನೆಗೆ ಕರೆದುಕೊಂಡು ಬಂದಳು. ಕಣ್ಣು ಕೆಂಪಾಗಿತ್ತಾದರೂ ಅದು ದುಃಖದಿಂದಲೋ ಅಥವಾ ಸಿಟ್ಟಿನಿಂದಲೋ ಎನ್ನುವುದು ನನ್ನ ಯೋಚನೆಗೆ ನಿಲುಕಲಿಲ್ಲ. ನಾನು ಮೌನದಿಂದ ಜೊತೆಗೆ ಬಂದಿದ್ದೆ. ಮನೆಗೆ ಬಂದವಳೇ ಮನೆಯ ಜಗುಲಿಯ ಮೇಲೆ ತನ್ನನ್ನು ಕುಕ್ಕರು ಬಡಿ ಎಂಬಂತೆ ಕುಳ್ಳಿರಿಸಿ ಒಳಹೋದಳು. ಒಂದರೆಘಳಿಗೆ ಪತ್ತೆಯಿರಲಿಲ್ಲ. ನನಗೆ ಆ ಸಮಯದಲ್ಲಿ ಉಂಟಾದ ನೀರವತೆ, ಮೌನವನ್ನು ಸಹಿಸಲು ಸಾಧ್ಯವಾಗಲಿಲ್ಲ. ಅವಳು ನನ್ನನ್ನು ಕುಳ್ಳಿರಿಸಿದ್ದ ಜಾಗದಲ್ಲಿಯೂ ಕುಳಿತುಕೊಳ್ಳಲು ಸಾಧ್ಯವಾಗಲಿಲ್ಲ. ಎದ್ದು ಜಗುಲಿಯಲ್ಲಿ ಓಡಾಡತೊಡಗಿದೆ.
                  ಜಗುಲಿಯ ಮೇಲೆ ಗೋಡೆಗೆ ವಿವಿಧ ಪೋಟೋಗಳನ್ನು ನೇತು ಹಾಕಲಾಗಿತ್ತು. ಹಳೆಯ ಕಾಲದಲ್ಲಿ ವರ್ಣಚಿತ್ರದಲ್ಲಿ ರಚಿಸಿದ್ದ ಹಿರಿಯರ ಚಿತ್ರಗಳು, ನಡುವಲ್ಲಿದ್ದ ಮುಂಡಿಗೆ ಕಂಭವೊಂದಕ್ಕೆ ಹಾಕಿದ್ದ ಕಟ್ಟಿನ ಸರ್ದಾರ್ ವಲ್ಲಭ ಭಾಯ್ ಪಟೇಲರದ್ದೊಂದು ಪೋಟೋ ಹಾಗೂ ನೇತಾಜಿಯವರ ಮಿಲಿಟರಿ ಉಡುಗೆಯ ಪೋಟೋಗಳು ಒಮ್ಮೆಗೆ ಸೆಳೆದಂತಾಯಿತು. ಅಂಬಿಕಾಳ ಅಪ್ಪನಿಗೆ ತೀರಾ ವಯಸ್ಸಾಗಿಲ್ಲ. ತೀರಾ ಸ್ವಾತಂತ್ರ್ಯ ಹೋರಾಟದ ಕಾಲದವರೂ ಅಲ್ಲ.  ಭಾರತ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಸ್ವಾತಂತ್ರ್ಯ ಪಡೆದ ನಂತರ ಒಂದು ದಶಕದೀಚೆಗೆ ಹುಟ್ಟಿದವರಿರಬೇಕು ಅವರು. ಹಳೆ ಮನೆಯಲ್ಲಿ ಅವರು ಈ ಪೋಟೋ ಖಂಡಿತ ಹಾಕಿರಲು ಸಾಧ್ಯವಿಲ್ಲ. ಅಂಬಿಕಾಳ ತಂದೆಯ ಹಿರಿಯರ್ಯಾರೋ ಹಾಕಿದ್ದನ್ನು ಜೋಪಾನವಾಗಿ ಕಾಯ್ದಿಟ್ಟುಕೊಂಡು ಬಂದಿರಬೇಕು ಎಂದು ತರ್ಕಿಸಿದೆ.
                 ಅಷ್ಟರಲ್ಲಿ ಅಂಬಿಕಾ ತನ್ನ ತಂದೆಯೊಡನೆ ಬಂದಳು. ಬಂದವರೆ.. `ತಮಾ.. ಏನು ನಿನ್ನ ಕಥೆ..?..' ಎಂದರು. ನಾನು ಮಾತನಾಡುವುದರೊಳಗಾಗಿ `ಇದು ಹೀಗೇ ಆಗುತ್ತದೆ ಎಂದು ಗೊತ್ತಿತ್ತು.. ನೀನು ಆವತ್ತು ನಮ್ಮ ಮನೆಗೆ ಬಂದಿದ್ದಾಗಲೇ ಈ ವಿಷಯದ ಕುರಿತು ನಾನು ಸ್ಪಷ್ಟಪಡಿಸಬೇಕಿತ್ತು.. ಆದರೆ ನಾನು ಹಾಗೆ ಮಾಡಲಿಲ್ಲ ನೋಡು.. ಅದಕ್ಕೇ ಈಗ ನಿನ್ನಲ್ಲಿ ಅನುಮಾನ ಮೂಡಿದೆ..' ಎಂದು ನೇರವಾಗಿ ವಿಷಯವನ್ನು ನನ್ನ ಬಳಿ ಹೇಳಿದ್ದರು.
                ನಾನು ಅವರ ಮುಖವನ್ನೊಮ್ಮೆ ಅಂಬಿಕಾಳ ಮುಖವನ್ನೊಮ್ಮೆ ನೋಡಿದೆ. ಅವಳು ಬೇರೆಲ್ಲೋ ದೃಷ್ಟಿಯನ್ನು ಹಾಯಿಸಿದ್ದಳು. ಮೊಟ್ಟ ಮೊದಲ ಬಾರಿಗೆ ನಾನು ಕೇಳಬಾರದ್ದನ್ನು ಕೇಳಿದೆನೇ ಎನ್ನಿಸಿತು. `ಅದು.. ಅದು.. ನನ್ನ ಪ್ರಶ್ನೆ ಅದಲ್ಲ..' ಎಂದು ನನ್ನೊಳಗಿದ್ದ ವಿಷಯವನ್ನು ಸ್ಪಷ್ಟಪಡಿಸಲು ಯತ್ನಿಸಿದೆ.
               `ನಿನ್ನ ವಿಷಯ ನನಗೆ ಅರ್ಥವಾಗುತ್ತದೆ. ನಿನ್ನೊಳಗಿನ ಗೊಂದಲವೂ ನನಗೆ ಗೊತ್ತಾಗುತ್ತದೆ.. ನೀನು ಮತ್ತಷ್ಟು ಸಮಸ್ಯೆಗೆ ಒಳಗಾಗಿ ತೊಳಲುವ ಮೊದಲು ನಾನೇ ಹೇಳಿಬಿಡ್ತೆನೇ..' ಎಂದವರೇ ಬ್ರಹ್ಮಚಾರಿಯ ಮಗಳು ಎಂದು ಅಂಬಿಕಾಳನ್ನು ಕರೆಯುತ್ತಿದ್ದುದರ ಹಿಂದಿನ ಗುಟ್ಟನ್ನು ನನ್ನ ಬಳಿ ಹೇಳಲು ಮುಂದಾದರು.

**
               ನಾನು ಹೇಳುವುದು ಹೆಚ್ಚೂ ಕಡಿಮೆ 1980ರ ದಶಕದಲ್ಲಿ ನಡೆದಿದ್ದು ಎಂದರೆ ನಿನ್ನ ಅರಿವಿಗೆ ನಿಲುಕುವುದಿಲ್ಲ ಬಿಡು. ನಾನು ಆಗ ನಿನ್ನಂತೆ ಹೈದ. ಈಗಿನಂತೆ ವಯಸ್ಸಾದ ಕುರುಹನ್ನು, ನೆರಿಗೆಗಟ್ಟಿದ ಮುಖವನ್ನೂ ಗುಳಿಬಿದ್ದ ಕಣ್ಣನ್ನೂ ನೀನು ಕಲ್ಪಿಸಿಕೊಳ್ಳಲೂ ಸಾಧ್ಯವೇ ಇಲ್ಲ ಬಿಡು. ನಾನು ಆಗಿನ ಕಾಲದಲ್ಲಿಯೇ ಕಾಲೇಜು ಮೆಟ್ಟಿಲನ್ನು ಹತ್ತಿದವನು. ನೀವು ಹೋಗುತ್ತಿದ್ದೀರಲ್ಲಾ.. ಅದೇ ಕಾಲೇಜು ನನ್ನದು. ಆದರೆ ಈಗಿನ ಹಾಗೆ ಆಧುನಿಕತೆಯ ಕುರುಹು ಇರಲಿಲ್ಲವಾಗಿದ್ದರೂ ಆಗಿನ ಝಲಕು ಬೇರೆಯ ರೀತಿಯೇ ಇತ್ತು. ನಮ್ಮ ಜಮಾನಾದ ಕಾಲೇಜನ್ನು ನೆನಪು ಮಾಡಿಕೊಂಡರೆ ನಿಮ್ಮದೆಲ್ಲ ಏನಿಲ್ಲ ಬಿಡು.
               ನಾನು ಕಾಲೇಜಿನ ಎರಡನೇ ವರ್ಷದ ಡಿಗ್ರಿಯಲ್ಲಿ ಓದುತ್ತಿದ್ದಾಗ ನನ್ನ ಕಣ್ಣಿಗೆ ಬಿದ್ದಾಕೆಯೇ ಅವಳು. ಆಗಿನ ಕಾಲದಲ್ಲಿ ನಮ್ಮ ಕಾಲೇಜಿನಲ್ಲಿ ಹಲವರು ರೂಪಸಿಯರಿದ್ದರು. ಇವಳೂ ಅವಳ ಸಾಲಿಗೆ ಸೇರಬಹುದಾಗಿತ್ತು. ಅವಳನ್ನು ನಾನು ನೋಡಲು ಒಂದೆರಡು ತಿಂಗಳುಗಳೇ ಬೇಕಾಗಿತ್ತು. ಗೆಳೆಯರೆಲ್ಲ ಇವಳನ್ನು ಉದ್ದ ಜಡೆಯ ಸುಂದರಿ ಎಂದು ಹೇಳುತ್ತಿದ್ದರು. ನಾನು ಅವಳನ್ನು ನೋಡಿದಾಗಲೆಲ್ಲ ಅವಳ ಉದ್ದ ಜಡೆ ಮಾತ್ರ ನನ್ನ ಕಣ್ಣಿಗೆ ಬೀಳುತ್ತಿತ್ತು. ಅದೆಷ್ಟೋ ಸಾರಿ ನಾನು ಅವಳ ಮುಖವನ್ನು ನೋಡಬೇಕು ಎಂದುಕೊಂಡಿದ್ದೆ. ಆಗೆಲ್ಲ ಅದು ಯಾವ್ಯಾವುದೋ ಕಾರಣಗಳಿಂದಾಗಿ ಸಾಧ್ಯವಾಗುತ್ತಲೇ ಇರಲಿಲ್ಲ. ಕೊನೆಗೊಮ್ಮೆ ಸಿಕ್ಕಳು. ಅವಳ ಸಿಕ್ಕ ದಿನ ಇಂತದ್ದೇ ವಿಶೇಷ ಘಟನೆ ಜರುಗಿತು ಎನ್ನಲಾರೆ. ನನಗೆ ಅವಳ ಮುಖ ಕಂಡಿತು ಎನ್ನುವುದೇ ವಿಶೇಷ ಸಂಗತಿ. ಅಪರೂಪಕ್ಕೆ ಎದೆಯಲ್ಲಿ ರೋಮಾಂಚನ. ಉದ್ದ ಜಡೆಯ ಸುಂದರಿ ನಿಜಕ್ಕೂ ಚನ್ನಾಗಿದ್ದಳು. ಬೆಳ್ಳಗಿದ್ದಳು. ಮನಮೋಹಕವಾಗಿದ್ದಳು.
                 ಇಂದಿನ ಜಮಾನಾದ ನೀವಾದರೆ `ಲವ್ ಎಟ್ ಫಸ್ಟ್ ಸೈಟ್..' ಎನ್ನುತ್ತೀರಲ್ಲ. ಅದೇ ರೀತಿ. ನನಗೂ ಹಾಗೆಯೇ ಆಯಿತು. ನಾನು ಒಂದೇ ನೋಟದಲ್ಲಿ ಮೆಚ್ಚಿದೆ. ಎದೆಯೊಳಗೆ ಪುಕ ಪುಕವಾದರೂ ಹೋಗಿ ಮಾತನಾಡಿಸಿದೆ. ಅವಳೂ ಮಾತನಾಡಿದಳು. ನೆಪಕ್ಕೆ ನಮ್ಮ ಪರಿಚಯವಾದಂತಾಯಿತು. ನಂತರ ನಾವು ಆತ್ಮೀಯರಾದೆವು. ನಾವು ಆತ್ಮೀಯರಾಗಲು ಇಂತಹ ಕಾರಣಗಳೆಂಬುದಿರಲಿಲ್ಲ. ಆಕೆ ನನ್ನ ಬಳಿ ಆತ್ಮೀಯಳಾಗಿದ್ದನ್ನು ಕಂಡು ಹೊಟ್ಟೆಉರಿ ಪಟ್ಟುಕೊಂಡರು. ಆದರೆ ಅವರ ಹೊಟ್ಟೆಯುರಿ ನಮ್ಮ ಆತ್ಮೀಯತೆಗೆ ಭಂಗ ತರಲಿಲ್ಲ. ಹೀಗೆ ಒಂದು ಸಂದರ್ಭದಲ್ಲಿ ನನಗೆ ಆಕೆಯ ಮೇಲೆ ಪ್ರೀತಿ ಬೆಳೆಯಿತು. ಆದರೆ ಹೇಳಿಕೊಳ್ಳಲು ಸಾಧ್ಯವಾಗಲಿಲ್ಲ. ನಾನು ಅವಳನ್ನು ಪ್ರೀತಿಸುತ್ತಿದ್ದ ಸಂಗತಿ ನನ್ನ ತಂಗಿಗೆ ಗೊತ್ತಿತ್ತು. ಒಂದಿನ ಆಕೆ ಹೋಗಿ ಅವಳ ಬಳಿ ಹೇಳಿದಳು. ಇದರಿಂದ ಆಕೆ ಮೊದಲು ರೇಗಾಡಿದಳಂತೆ. ಆದರೆ ನಂತರ ಒಪ್ಪಿಕೊಂಡಳು. ನಿರಂತರ ಮೂರ್ನಾಲ್ಕು ವರ್ಷ ನಾವು ಪ್ರೀತಿಸಿದ್ದೆವು.
                 ಆ ದಿನಗಳಲ್ಲಿ ನಾನು ಬಹಳ ಕಷ್ಟಕ್ಕೆ ಸಿಲುಕಿಕೊಂಡಿದ್ದೆ. ಜೀವನ ನಿರ್ವಹಣೆ ತೊಂದರೆಯಲ್ಲಿತ್ತು. ನನ್ನ ಬಳಿ ಅವಳು ತನ್ನನ್ನು ಮದುವೆಯಾಗುತ್ತೀಯಾ ಎಂದು ಕೇಳಿದಳು. ನಾನು ನನ್ನ ಪರಿಸ್ಥಿತಿಯನ್ನು ಅವಳಿಗೆ ತಿಳಿಸಿ ಈಗ ಕಷ್ಟ. ಇನ್ನೊಂದು ವರ್ಷ ಕಾಯೋಣ ಅಂದೆ.
ಅದಕ್ಕವಳು ಇಲ್ಲ ಕಣೋ.. ನಮ್ಮ ಮನೆಯಲ್ಲಿ ನನಗೆ ಗಂಡು ಹುಡುಕುತ್ತಿದ್ದಾರೆ ಎಂದಳು.
`ನಾನು ಹೇಗಾದರೂ ಮಾಡಿ ಮನೆಯಲ್ಲಿ ಕೇಳು..' ಅಂದೆ
`ಹುಲಿಯಂತ ನಮ್ಮಪ್ಪ.. ಭಯವಾಗುತ್ತೆ..'
`ನಾನು ಬಂದು ಕೆಳಲಾ..?'
`ಬೇಡ.. ಬಾರಾಯಾ.. ಆ ಕೆಲಸವನ್ನು ಮಾಡಿಬಿಡಬೇಡ.. ಸ್ವಲ್ಪ ದಿನ ಹೇಗೋ ಕಾಲತಳ್ತೀನಿ.. ಒಂದ್ನಾಲ್ಕು ತಿಂಗಳು ಮುಂದೂಡಬಹುದು.. ಆದರೆ ನೀನು ಬೇಗ ನಿನ್ನ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬೇಕು..'
`ಅಷ್ಟಾದರೂ ಸಮಯ ಕೊಟ್ಯಲ್ಲಾ ಮಾರಾಯ್ತಿ.. ಥ್ಯಾಂಕ್ಯೂ..'
                 ಇಷ್ಟಾದ ಮೇಲೆ ಒಂದೆರಡು ತಿಂಗಳು ನನ್ನ ಜೀವನದ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳುವಲ್ಲಿಯೇ ಕಳೆದುಹೋಯಿತು. ಆ ಸಂದರ್ಭದಲ್ಲಿ ಅವಳನ್ನು ಮಾತನಾಡಿಸಲೂ ಸಮಯ ಸಿಗಲಿಲ್ಲ. ನನಗೂ ಅವಳಿಗೂ ಭೇಟಿಯೇ ಆಗುತ್ತಿರಲಿಲ್ಲ. ಅಷ್ಟು ಒತ್ತಡದಲ್ಲಿ ಕಳೆದುಹೋಗಿದ್ದೆ.  ಬದುಕಿನ ಅರಲು ಗದ್ದೆಯಲ್ಲಿ ಕಾಲು ಹೂತು ಬೀಳುತ್ತಿದ್ದಾಗ ಕಷ್ಟಪಟ್ಟು ಎತ್ತಿ ಎತ್ತಿ ಹೆಜ್ಜೆ ಹಾಕಲು ಯತ್ನಿಸುತ್ತಿದ್ದೆ. ಹೀಗಿದ್ದಾಗ ಒಂದಿನ ಯಾರೋ ಅಂದರು `ನೀನು ಪ್ರೀತಿಸ್ತಾ ಇದ್ದೆಯಲ್ಲ ಹುಡುಗಿ ಅವಳಿಗೆ ಮದುವೆ ಆಯ್ತು..' ಅಂತ..
                ನನಗೆ ದಿಘ್ಭ್ರಮೆ, ಭಯ, ಆತಂಕ ಎಲ್ಲ ಒಟ್ಟೊಟ್ಟಿಗೆ ಆಯಿತು. ಮನಸ್ಸು ಕಸಿವಿಸಿಗೊಂಡಿತು. ಏನೂ ಮಾಡಲಾರೆ.. ಏನೋ ಹೇಳಲಾರೆ.. ಮನಸ್ಸು ಕತ್ತಲು ಕತ್ತಲಂತೆ ಭಾಸವಾಯಿತು. ಅವಳ ಮನೆಗೆ ಹೋಗಿ ಕೂಗಾಡಿ, ರೇಗಾಡಿ ಬರುವ ಅನ್ನಿಸಿತು. ಹೇಗೋ ತಡೆದುಕೊಂಡೆ. ಆಕೆ ನನ್ನ ಮನಸ್ಸಿನಲ್ಲಿ ಆರದ ಗಾಯವನ್ನು ಮಾಡಿ ಹೋಗಿದ್ದಳು. ಇನ್ನೊಂದು ಸ್ವಲ್ಪ ಸಮಯವಿದೆ ಎಂದ ಅವಳು ಕಾರಣವನ್ನು ಹೇಳದೇ ಹೊರಟು ಹೋಗಿದ್ದಳು. ಅವಳ ತಪ್ಪಾ, ಅವಳ ಅಪ್ಪನ ಬಲವಂತಾ..? ತೋಚಲಿಲ್ಲ. ಅವಳು ಹೇಳದೇ ಹೋಗಿದ್ದಳು. ಕಾರಣ ಹೇಳಿ ಹೋಗಿದ್ದರೂ ಇಷ್ಟು ಬೇಜಾರಾಗುತ್ತಿರಲಿಲ್ಲವೇನೋ.. ನಾಲ್ಕೈದು ತಿಂಗಳುಗಳೇ ಬೇಕಾದವು ಅವಳ ಧೋಖಾವನ್ನು ನಾನು ಮೆಟ್ಟಿ ನಿಲ್ಲಲು. ಅವಳಿಗಿಂತ ಹೊರತಾದ ಬದುಕು ಇದೆ ಎಂದು ಅನ್ನಿಸಲಾರಂಭವಾಗಿತ್ತು. ಅವಳೆದುರು ನಾನೂ ಯಾಕೆ ಅವಳಿಗಿಂತ ಚನ್ನಾಗಿ, ಆದರ್ಶವಾಗಿ ಬದುಕಬಾರದು ಎಂದುಕೊಂಡೆ. ನಾನಾಗಲೇ ನಿರ್ಧಾರ ಮಾಡಿದೆ. ಅವಳೆದುರು ಅವಳಿಗಿಂತ ಚನ್ನಾಗಿ ಬದುಕ ಬೇಕೆಂದು. ಅದಕ್ಕೇ ಆ ಕ್ಷಣವೇ ನಾನು ಜೀವನದಲ್ಲಿ ಮದುವೆಯಾಗಬಾರದು ಎಂಬ ನಿರ್ಧಾರಕ್ಕೆ ಬಂದೆ. ಇದುವರೆಗೂ ನನ್ನ ಬದುಕಿನಲ್ಲಿ ಇನ್ನೊಬ್ಬಳನ್ನು ನನ್ನ ಪ್ರೇಮಿಯಾಗಿ ಕಂಡಿಲ್ಲ. ನನ್ನ ಪಾವಿತ್ರ್ಯತೆಯನ್ನು ಹಾಳುಮಾಡಿಕೊಂಡಿಲ್ಲ. ಜನರು ನನ್ನ ಬಗ್ಗೆ ನಾನಾ ರೀತಿ ಹೇಳುತ್ತಾರಾದರೂ ನಾನು ತಲೆಕೆಡಿಸಿಕೊಳ್ಳಲಿಲ್ಲ. ಇಂವನೇನೋ ಹುಚ್ಚು ಆದರ್ಶದ ಹಾದಿ ಹಿಡಿದು ಹೋದ. ಪಿರ್ಕಿಯಿರಬೇಕು ಎಂದುಕೊಂಡರು.  ಆದರೆ ನಾನು ಅದಕ್ಕೆ ಸೊಪ್ಪು ಹಾಕಲಿಲ್ಲ. ಕೊನೆಗೆ ಅನಾಥಾಶ್ರಮದಿಂದ ಹೋಗಿ ಒಂದು ಹೆಣ್ಣು ಮಗುವನ್ನು ದತ್ತು ತೆಗೆದುಕೊಂಡು ಬಂದೆ. ಅವಳಿಗೆ ನನ್ನನ್ನು ಬಿಟ್ಟುಹೋದ ಹುಡುಗಿಯ ನೆನಪಿಗಾಗಿ ಅಂಬಿಕಾ ಎಂಬ ಹೆಸರನ್ನಿಟ್ಟೆ. ಅಂದಹಾಗೆ ನಾನು ಪ್ರಿತಿಸಿದ್ದ ಹುಡುಗಿಯ ಹೆಸರು ನಿಂಗೆ ಹೇಳಲಿಲ್ಲ ಅಲ್ವಾ.. ಹೌದು.. ಅವಳ ಹೆಸರು ಅಂಬಿಕಾ ಅಂತಲೇ ಆಗಿತ್ತು. ಅಂಬಿಕಾಳ ನೆನಪಿಗಾಗಿಯೇ ಈ ನನ್ನ ಮಗಳಿಗೂ ಆ ಹೆಸರನ್ನೇ ಇಟ್ಟಿದ್ದೇನೆ. ಅವಳೇ ಈ ಹುಡುಗಿ ಎಂದು ಅಂಬಿಕಾಳನ್ನು ತೋರಿಸಿದ ಅವಳಪ್ಪ.
                     `ನಾನು ಪ್ರೀತಿಸಿದ ಹುಡುಗಿಗೆ ದಕ್ಕಿದ ಪ್ರೀತಿಗಿಂತ ಹೆಚ್ಚು ಇವಳಿಗೆ ಸಿಕ್ಕಿದೆ. ನಾನು ಒಳ್ಳೆಯ ಪ್ರೇಮಿಯಾಗಲಿಲ್ಲವೇನೋ ಎಂಬ ಭಾವ ಕಾಡುತ್ತಿತ್ತು. ಆದರೆ ಇವಳನ್ನು ಸಾಕಿ ಒಳ್ಳೆಯ ಅಪ್ಪನಂತೂ ಆಗಿದ್ದೇನೆ. ಈಗ ಹೇಳು.. ಬ್ರಹ್ಮಚಾರಿಗೆ ಮಕ್ಕಳಿರಬಾರದಾ..? ಬ್ರಹ್ಮಚಾರಿಯ ಮಗಳು ಎಂದರೆ ಯಾಕೆ ತಪ್ಪಾಗಿಯೇ ನೋಡಬೇಕು..? ಎಲ್ಲರಂತೆ ನೀನೂ ಆಲೋಚನೆಯನ್ನೇಕೆ ಮಾಡಿಬಿಟ್ಟೆ..? ನೀನು ಎಲ್ಲರಂತಲ್ಲ.. ಏನೋ ಅಂದುಕೊಂಡಿದ್ದೆ. ಆದರೆ ಏನೂ ಇಲ್ಲವಲ್ಲ ನೀನು' ಎಂದು ಕೇಳಿದರು.
                  ಅವರ ಮಾತು ನನ್ನ ಮನಸ್ಸನ್ನು ಇರಿಯಲಾರಂಭಿಸಿತ್ತು. ನನಗೆ ಏನು ಮಾತಾಡಬೇಕೆಂಬುದು ತೋಚಲಿಲ್ಲ. ಸುಮ್ಮನುಳಿದೆ. ಅಂಬಿಕಾಳ ತಂದೆ ನನ್ನ ಮೌನವನ್ನು ಏನೆಂದುಕೊಂಡರೋ..? ಅರ್ಥವಾಗಲಿಲ್ಲ. ತಪ್ಪಿತಸ್ಥ ಭಾವನೆ ನನ್ನನ್ನು ಕಾಡುತ್ತಿತ್ತು. ಅವರು ನಿಟ್ಟುಸಿರು ಬಿಟ್ಟು ತಮ್ಮ ದೊಡ್ಡ ಮನೆಯ ಚಿಕ್ಕ ಬಾಗಿಲನ್ನು ದಾಟಿ ಒಳಹೋದರು. ಮತ್ತೊಮ್ಮೆ ನಾನೆಂತ ತಪ್ಪು ಮಾಡಿಬಿಟ್ಟೆನಲ್ಲಾ ಛೀ.. ಎಂದುಕೊಂಡೆ.. ಅಂಬಿಕಾಳ ಅಪ್ಪನ ಬಗ್ಗೆ ಹೆಮ್ಮೆಯೂ ಮೂಡಿತು.

**
              `ಅಂಬಿಕಾ.. ಪ್ಲೀಸ್.. ಕ್ಷಮಿಸು ಮಾರಾಯ್ತಿ.. ನಂಗೆ ಗೊತ್ತಾಗಲಿಲ್ಲ.. ಅನುಮಾನಿಸಿದೆ.. ನಿಜಕ್ಕೂ ಹೀಗಾಗಿರಬಹುದು ಎನ್ನುವ ಚಿಕ್ಕ ಸುಳಿವೂ ಸಿಗಲಿಲ್ಲ. ಈ ನಿಟ್ಟಿನಲ್ಲಿ ನಾನು ಆಲೋಚಿಸಲೂ ಇಲ್ಲ.. ಯಾರೋ ಏನೋ ಹೇಳಿದರು ಅಂತ ಅವರ ಮಾತನ್ನು ಕೇಳಿದೆ. ಇನ್ನು ಮುಂದೆ ಯಾವತ್ತೂ ನಿನ್ನನ್ನು ಅನುಮಾನಿಸೋದಿಲ್ಲ. ನಿನ್ನ ಮೇಲಾಣೆ...' ನಾನು ಅಂಬಿಕಾಳ ಬಳಿ ಗೋಗರೆದೆ.
              `ಸಾಕು.. ಸಾಕು... ಈಗ ನೀನು ಮಾಡಿದ್ದೆ ಸಾಕು ಮಾರಾಯಾ.. ನಾನೆಂತಾ ನಿಷ್ಕಲ್ಮಶವಾಗಿ ನಿನ್ನನ್ನು ಪ್ರೀತಿಸಿದ್ದೆ.. ಯಾರೋ ಬ್ರಹ್ಮಚಾರಿಯ ಮಗಳು ಅಂದರಂತೆ.. ನೀನು ಬಂದು ಕೇಳಿದೆಯಂತೆ.. ಎಂತಾವ್ಯಕ್ತಿತ್ವ ನಿಂದು..? ನಿನ್ನಿಂದ ನಾನು ಇಂತಹ ಮಾತುಗಳನ್ನು ಖಂಡಿತ ನಿರೀಕ್ಷೆ ಮಾಡಿರಲಿಲ್ಲ. ನಾನೆಲ್ಲಾದರೂ ನಿನ್ನ ಹಿನ್ನೆಲೆಯ ಬಗ್ಗೆ ಅಥವಾ ನಿನ್ನವರ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದ್ದೆನಾ..? ಆ ಬಗ್ಗೆ ಒಂದೇ ಒಂದಕ್ಷರ ಕೇಳಿರಲಿಲ್ಲ.  ಆದರೂ ನಿನ್ನಿಂದ ಇಂತಹ ಮಾತುಗಳು.. ನೀನು ನನ್ನನ್ನು ನಿಷ್ಕಲ್ಮಷವಾಗಿ ಪ್ರೀತಿಸಿದ್ದೆ ಅನ್ನುವುದನ್ನು ಹೇಗೆ ನಾನು ನಂಬಬೇಕು..? ಬೇಡ... ನನಗೆ ಇಂಥ ಪ್ರಿತಿ ಬೇಡವೇ ಬೇಡ. ನಾನು ನಿನ್ನನ್ನು ಇಷ್ಟು ದಿನ ಪ್ರೀತಿಸಿದ್ದಕ್ಕೆ ನನಗೆ ನಾಚಿಕೆಯಾಗುತ್ತಿದೆ. ಇಂತವನನ್ನು ಪ್ರೀತಿಸಿದೆನಾ ಎಂದೂ ಅನ್ನಿಸಲು ಆರಂಭಿಸಿದೆ. ಕೊನೆಯದಾಗಿ ಹೇಳುತ್ತಿದ್ದೇನೆ. ಇನ್ನು ಮುಂದೆ ನೀನು ನನಗೆ ಮುಖ ತೋರಿಸಬೇಡ. ಐ ಹೇಟ್ ಯೂ.. ಗುಡ್ ಬಾಯ್...' ಎಂದು ಹೇಳಿದ ಅವಳ ಮುಖ ಕೆಂಪಾಗಿ ದೇಹ ಥರಗುಡುತ್ತಿತ್ತು. ನಾನು ಮಾತಿಲ್ಲದೇ ಅವಳನ್ನು ಬೀಳ್ಕೊಟ್ಟಿದ್ದೆ.   ಬ್ರಹ್ಮಚಾರಿಯ ಮಗಳು ಗ್ರೇಟ್ ಅಷ್ಟೇ ಅಲ್ಲ ಮತ್ತಷ್ಟು ಒಗಟಾಗಿದ್ದಳು. ಅವಳೆಡೆಗೆ ನನ್ನ ಮನಸ್ಸು ಹೆಮ್ಮೆಯನ್ನು ಪಡುತ್ತಿತ್ತು.

**
(ಮುಗಿಯಿತು)

No comments:

Post a Comment