Friday, February 14, 2014

ಮಳೆಗಾಲದ ಮಡಿಲಿನಿಂದ (ಪ್ರೇಮಪತ್ರ-11)

ಪ್ರೀತಿಯ ಪ್ರೀತಿ
             ನಿಂಗೊತ್ತಲ್ಲ.. ಮಳೆ, ಮಳೆಯ ಬೀಳುವಿಕೆ, ಅದರ ರೌದ್ರತೆ, ಜಿಟಿ ಜಿಟಿ, ಸ್ನಿಗ್ಧತೆ. ಆ ವರ್ಷಧಾರೆಯಲ್ಲಿ ಒದ್ದೆಯಾಗಿ, ಆಡಿ, ಕುಣಿದು, ನಲಿದಿದ್ದನ್ನು ಮರೆತಿಲ್ಲ ತಾನೆ. ಮರೆತರೆ ಮತ್ತೊಮ್ಮೆ ನೆನಪು ಮಾಡಿಕೋ..
             ಈ ವರ್ಷವಂತೂ ಭರಪೂರ ಮಳೆಯಾಗಿದೆ. ಆರಂಭದಲ್ಲಿ ಮಳೆಗಾಲ ಇಲ್ಲ ಎಂದುಕೊಂಡವರು ಹಲವರಿದ್ದರು. ಆದರೆ ಶುರುವಾದ ಮಳೆ ನಿಲ್ಲಲೇ ಇಲ್ಲ. ಮುರು ತಿಂಗಳು ಭರ್ಜರಿ ಸುರಿಯಿತು. ಈ ವರ್ಷದ ಮಳೆಗಾಲ ನನಗೆ ಖಂಡಿತವಾಗಿಯೂ ಬಾಲ್ಯದಲ್ಲಿ ಬೀಳುತ್ತಿದ್ದ ಅಬ್ಬರದ ಮಳೆಗಾಲವನ್ನು ನೆನಪು ಮಾಡಿಕೊಟ್ಟಿತು. ನಿನಗೆ ನೆನಪಿರಬಹುದು. ಕಳೆದ ೊಂದೆರಡು ಮಳೆಗಾಲ. ಪ್ರಾರಂಭದಲ್ಲಿ ಗುಡುಗು, ಮಿಂಚು, ಸಿಡಿಲುಗಳ ಜೊತೆಗೆ ಚಿತ್ತಾಕರ್ಷಕ ಕೋಲ್ಮಿಂಚಿನ ಸಮ್ಮುಖದಲ್ಲಿ ಮಳೆರಾಯ ಬರುತ್ತಿದ್ದ. ಮದುವೆಯ ದಿಬ್ಬಣ ಗರ್ನಾಲು, ಕಜನಿ, ಆಟಂಬಾಂಬುಗಳ ಜೊತೆಯಲ್ಲಿ ಬರುವಂತೆ. ಆಗ ನಾವೆಲ್ಲರೂ ಅತ್ಯುತ್ಸಾಹ ಆನಂದದಿಂದ
`ಮಳೆ ಬಂತೋ ಮಳೆರಾಯ..
ಕೊಡೆ ಸೂಡಸೋ ಸುಬ್ರಾಯ..'
ಎಂದು ಕೂಗುತ್ತಾ ಮಳೆರಾಯನ ಆಗಮನವನ್ನು ಎದುರುಗೊಳ್ಳುತ್ತಿದ್ದುದನ್ನು ನೀನು ಮರೆತಿಲ್ಲ ಎಂದುಕೊಳ್ಳುತ್ತೇನೆ. ಆದರೆ ವಿಚಿತ್ರ ನೋಡು ಈ ಸಾರಿಯ ಮಳೆಗಾಲ ಹಾಗೆ ಬರಲೇ ಇಲ್ಲ. ಸದ್ದಿಲ್ಲದೇ, ಯಾವುದೇ ಆವಾಜು ಮಾಡದೇ ಬಂದ. ಆದರೆ ಬಂದ ಮಳೆರಾಯ ಸಾಕಷ್ಟು ಹಾವಳಿಯನ್ನು ಮಾಡಿದ್ದು ಮಾತ್ರ ಖರೆ ಹೌದು. ವೀಕ್ಲಿ ರಜಾ ಕೊಡು ಮಾರಾಯಾ.. ಎಂದರೂ ಮಳೆರಾಯ ಕೇಳಿರಲೇ ಇಲ್ಲ.
                 ಪ್ರತಿವರ್ಷ ಏನು ಅಂದ್ರೆ, ಮಳೆಗಾಲ ಪ್ರಾರಂಭವಾಗಿ ಒಂದು ವಾರದ ಒಳಗೆ ನಮ್ಮೂರ ಬಳಿ ಹರಿಯುವ ಅಘನಾಶಿನಿ ನದಿ ರೌದ್ರಾಕಾರ ತಾಳಿ ಮೈದುಂಬಿ, ಉಕ್ಕೇರಿ ಅಕ್ಕಪಕ್ಕದ ತೋಟ, ಗದ್ದೆಗಳನ್ನೆಲ್ಲಾ ಆಕ್ರಮಿಸಿ ಬಿಡುತ್ತಿತ್ತು. ಅದಕ್ಕಿಂತಲೂ ಮುಖ್ಯವಾಗಿ ಬೇಸಿಗೆ ಬಂದಾಗ ನಮ್ಮೂರಲ್ಲಿ ಅಡಿಕೆ ಮುಂಡಿ, ಹಗರು ದಬ್ಬೆ (ಅಡಿಕೆ ದಬ್ಬೆ)ಗಳಿಂದ ಸಂಕ ಮಾಡಿ ಹಾಕುತ್ತಾರೆ. ಅದನ್ನು ನದಿ ತೇಲಿಸಿಕೊಂಡು ಹೋಗುತ್ತಿತ್ತು. ಇದು ಪ್ರತಿ ವರ್ಷದ ವಾಡಿಕೆ. ಆದರೆ ಈ ವರ್ಷದ ಮಳೆ ಒಂದೆರಡು ದಿನಗಳಲ್ಲಿಯೇ ಕಾಲುಸಂಕವನ್ನು ಕೊಚ್ಚಿಕೊಮಡು ಹೋಯಿತು. ಅಬ್ಬಾ ಮಳೆಯೇ ಎಂದುಕೊಂಡಿದ್ದೆ.

                          ಅದು ಹೋಗಲಿ ಬಿಡು.. ಈ ಮಳೆರಾಯ ಅಡಿಕೆ ಬೆಳೆಗಾರನ ಮೇಲೆ ಮುನಿದುಕೊಳ್ಳುವುದು ಜಾಸ್ತಿ ನೋಡು. ಕಳೆದ ಒಂದೆರಡು ವರ್ಷ ಅನಿಯಮಿತವಾಗಿ ಮಳೆ ಸುರಿದ ಪರಿಣಾಮ ಅಡಿಕೆಗೆ ಕೊಳೆ ಬಂದಿತ್ತು. ಆದರೆ ಈ ವರ್ಷ ಎಡಬಿಡದೇ ಮಳೆ ಸುರಿದ ಕಾರಣ ಕೊಳೆ ರೋಗದ ಜೊತೆಗೆ ಸುಳಿ ಕೊಳೆಯುವ ರೋಗವೂ ಕಾಡಿ ಮರಗಳೆಲ್ಲ ತಲೆಗಳಚಿಕೊಂಡು ಉದುರಲಾರಂಭಿಸಿವೆ. ಅಡಿಕೆ ಬೆಳೆಯ ಮೂಲ ಹಿಂಗಾರ ಕೊಳೆತುಹೋದ ಕಾರಣ ಮುಂದಿನ ಫಸಲು ಹೇಗೋ ಏನೋ ಎನ್ನುವ ಚಿಂತೆಯಲ್ಲಿ ಅಡಿಕೆ ಬೆಳೆಗಾರನಿದ್ದಾನೆ. ಇದು ಹಾಗಿರಲಿ, ಮಳೆಯ ಅಬ್ಬರ ಎಲ್ಲ ಕಡೆಯೂ ಇತ್ತೆಂದು ಹೇಳಲಿಕ್ಕೆ ಆಗುವುದಿಲ್ಲ ನೋಡು. ನಮ್ಮಲ್ಲಿ ಈ ರೀತಿಯ ಅಬ್ಬರಿಸಿ ಬೊಬ್ಬಿರಿದ ಮಳೆರಾಯ ಬಯಲುಸೀಮೆಯಲ್ಲೂ ಅಬ್ಬರಿಸಿದ ಎಂದರೆ ತಪ್ಪಾಗುತ್ತದೆ. ಬಯಲನಾಡಿನಲ್ಲಿ ಆತನ ಪತ್ತೆಯೇ ಇಲ್ಲದ ಕಾರಣ ಅಲ್ಲಿನ ನಿವಾಸಿಗಳು ನೀರಿಗೆ ತತ್ವಾರ ಎನ್ನುವಂತಹ ಪಾಡು ಎದುರಾಗಿದೆ. ಈ ಮಳೆಗಾಲದಲ್ಲಿಯೂ ಆತ ಓಡುವ ಮೋಡಗಳ ಬಳಿ
ಎಲ್ಲಿ ಓಡುವಿರಿ ನಿಲ್ಲಿ ಮೋಡಗಳೆ
ನಾಲ್ಕು ಹನಿಯ ಚೆಲ್ಲಿ...
 ಎಂದು ಆರ್ತನಾಗಿ ಬೇಡುತ್ತಿದ್ದಾನೆ. ಆತನಿಗೆ ಒಂಚೂರಾದ್ರೂ ಕರುಣೆ ಬೇಕಿತ್ತಲ್ವಾ?
                            ಹೀಗಿದ್ರೂ ಮಳೆರಾಯನನ್ನು ಕಂಡ್ರೆ ನನ್ನ, ನಿನ್ನಂತವರಿಗೆ ಬಲು ಇಷ್ಟ. ಯಾಕಂದ್ರೆ ಮಳೆ ಬೀಳುವಾಗ, ತನ್ನ ಆರ್ಭಟ ತೋರಿಸುತ್ತಿರುವಾಗ ಮನೆಯಲ್ಲಿ ಹಾಕುವ ಹೊಡ್ಸಲಿನಲ್ಲಿ, ಸಂಗ್ರಹಿಸಿದ ಗೇರು ಬೀಜ, ಮಾಡಿಟ್ಟ ಹಲಸಿನ ಹಪ್ಪಳವನ್ನು ಸುಟ್ಟು ಅದನ್ನು ತಿನ್ನುತ್ತಾ ಯಾವುದಾದ್ರೂ ಪುಸ್ತಕ ಲೋಕದಲ್ಲಿ ವಿಹಾರ ಮಾಡುವುದೋ ಅಥವಾ ನಮಗಿಷ್ಟವಾದ ಹಾಡುಗಳನ್ನು ಮೊಬೈಲಿನಲ್ಲಿ ತುರುಕಿಕೊಂಡು ಕಿವಿಗೆ ಇಯರ್ ಪೋನ್ ಹಚ್ಚಿಕೊಂಡು ಕೇಳುವುದೋ ಎಷ್ಟೆಲ್ಲ ಖುಷಿ ಕೊಡುತ್ತವೆ ಅಲ್ಲವಾ..? ಅದರಲ್ಲೂ ಸಂಜೆ ನಾಲ್ಕೈದು ಗಂಟೆಯಾಗಿರಬೇಕು, ಹೊರಹೋಗಲು ಆಗದಂತೆ ಜಿಟಿ ಜಿಟಿ ಮಳೆ ಸುರಿಯುತ್ತಿರಬೇಕು, ಸುತ್ತಮುತ್ತಲೂ ಮಳೆ ಜಿರಲೆಗಳು ವಾಟರ್ ವಾಟರ್ ಎಂದು ಅರಚುತ್ತಿರಬೇಕು.. ಆಹಾ.. ಓಹೋ.. ಏನು ಆನಂದವೋ..
ಒಂದು ಚಣದ ಸಂಜೆ ಮಳೆ
ಬೀಳಲಿಂದು ತೋಯಲಿಳೆ
ಏನು ಆನಂದವೋ ಏನು ಆನಂದವೋ..||

ಆ ಸಂದರ್ಭಗಳಲ್ಲಿಯೇ ಎಂತಹ ವ್ಯಕ್ತಿಯಾದರೂ ಆಗ ಕವಿಯಾಗುತ್ತಾನೆ. ಕವನ ಕಟ್ಟುತ್ತಾನೆ. ತಾನು ಕೇಳಿದ ಭ್ರಮಾಭರಿತ ಸುಂದರ ಹಾಡನ್ನು ಗುನುಗುತ್ತಾನೆ. ನಮ್ಮನ್ನು ಹೀಗೆ ಮಾಡಿಸಬಲ್ಲ ಸುಂದರ ಶಕ್ತಿ ಮಳೆಗಿದೆ. ಹನಿಗಿದೆ.
                               ನಿಂಗೆ ನೆನಪಿರಬಹುದು. ನಾನು, ನೀನು ಶಾಲೆಗೆ ಹೋಗುವಾಗ ಭರ್ಜರಿ ಮಳೆ ಬಂತೆಂದರೆ ಶಾಲೆಗೆ ರಜಾ ಕೊಡುತ್ತಿದ್ದರು. ಅದನ್ನೆಲ್ಲಾ ಮರೆಯಲಾದೀತೆ.? ನಾನಂತೂ ನನ್ನೂರಿನಿಂದ 2-3 ಕಿ.ಮಿ ದೂರವಿರುವ ಕೋಡಶಿಂಗೆ ಶಾಲೆಗೆ ಹೋಗುವಾಗ ದಾರಿಯಲ್ಲೆಲ್ಲಾ ಕಾಣುವ ಒರತೆಗಳನ್ನು ನೋಡಿ ಅದಕ್ಕೆ ಬಾಯಿ ಹಾಕಿ ನೀರನ್ನು ತುಂಬಿಕೊಂಡು ಪುರ್ರೆಂದು ತೂರುತ್ತಾ ಹೋಗುತ್ತಿದ್ದೆ. ಅದು ನಿನಗೆ ಮರೆತಿಲ್ಲವಲ್ಲ. ಇದರ ಜೊತೆಗೆ ಮಳೆಗಾಲದ ಸ್ಪೆಷಲ್ ಎನ್ನಿಸಿರುವ `ಬಿಕ್ಕೆ'ಯ ಹಣ್ಣನ್ನು ಹೇಗೆ ತಿನ್ನುತ್ತಿದ್ದೆವಲ್ಲ. ಇಂತಹ ಮಳೆಗಾಲ ಯಾರಿಗೆ ತಾನೆ ಇಷ್ಟವಾಗುವುದಿಲ್ಲ ಹೇಳು..
                                   ಈ ಪತ್ರವನ್ನು ಬರೆಯುತ್ತಿರುವ ಸಂದರ್ಭದಲ್ಲೇ ನಮ್ಮೂರಿನ ಗುಡ್ಡದ ಮೂಲೆಯಲ್ಲೆಲ್ಲೋ ಕುಳಿತು ತನ್ನ ಮಂಜುಳ ದಣಿಯಿಂದ `ಯಾಂಹೋ...' ಎಂದು ದನಿಗರೆಯುತ್ತಿರುವ ನವಿಲಿನ ಕೂಗು ಕಿವಿಯನ್ನು ತಣಿಸುತ್ತಿದೆ. ಮಳೆಗಾಲವನ್ನು ಕೂಗಿ ಕರೆಯುವ ಮಯೂರಗಳು ಮಾಡುವ ನರ್ತನ ನೋಡಲಂತೂ ಕಣ್ಣೇ ಸಾಲದು ಎನ್ನಿಸಿಬಿಟ್ಟಿದೆ.
ಬೇಸಿಗೆಯೆಂಬ ಬರಡನು ಓಡಿಸಿ
ಭೂಮಿಗೆ ತಂಪಿನ ಧಾರೆಯ ಸುರಿಸಿ
ರೈತರ ಮನವನು ತಣಿಯಿಸಿ ಹರ್ಷಿಸಿ
ಇಳಿವುದು ಭೂಮಿಗೆ ನೀರ ಮಳೆ ||
                              ನಿಜ.. ಬರಡು ಬೇಸಿಗೆಯ ಗರ್ಭದೊಳಗೆ ಹೂತು ಹೋಗಿರುವ ಹಸಿರು ಕಾಂತಿಯ ತೃಣವ ಹುಡುಕಿ ಅದಕ್ಕೆ ತಂಪಿನ ಜೀವಧಾರೆಯ ಸುರಿಸಿ ಅದರಿಂದ ಜೀವಜನನಕ್ಕೆ ಕಾರಣವಾಗುವ ಮಳೆಯೇ ನೀನು ರಿಯಲೀ ಗ್ರೇಟ್..|
                                ಇಂತಹ ಮಳೆಯ ಮಧ್ಯದಲ್ಲೇ ನಡೆಯುವ, ಬರುವ ಆರಿದ್ರಾ ಮಳೆಯ ಹಬ್ಬ, ನಾಗರ ಪಂಚಮಿ, ಚೌತಿ ಹಬ್ಬ, ಕೊಡೆ ಅಮಾವಾಸ್ಯೆ, ನೂಲ ಹುಣ್ಣೀಮೆ, ಕೃಷ್ಣಾಷ್ಟಮಿ ಜೊತೆಗೆ ಮಳೆಗಾಲದ ಅಂಚಿನಲ್ಲಿ ಬರುವ ನವರಾತ್ರಿ ಮುಂತಾದ ಹಬ್ಬಗಳು ಮಳೆಯ ಕಾರಣದಿಂದಲೇ ರಂಗೇರುತ್ತವೆ.
                                ಇಂತಹ ಮಳೆಯೇ ನಮ್ಮ ಜೀವದಾತವಾದ ಭತ್ತ, ರಾಗಿ, ಜೋಳ, ಗೋಧಿ ಮುಂತಾದವುಗಳಿಗೆ, ಅವುಗಳ ಬೆಳೆಗಳಿಗೆ, ಬೆಳವಣಿಗೆಗಳಿಗೆ, ಬದುಕಿಗೆ ಕಾರಣವಾಗುತ್ತವೆ. ಇಷ್ಟೆಲ್ಲ ಮಾಡುವ ಮಳೆ ಹವ್ಯಕರ ಹಣದ ಥೈಲಿಯಾದ ಅಡಿಕೆಗೂ ಕೊಳೆ ರೋಗವನ್ನು ತಂದುಬಿಡುತ್ತದೆ. ಜೊತೆಗೆ ಜಿಗಣೆಗಳು, ಉಂಬಳಗಳು ವರ್ಷವೊಂದರ ದೀರ್ಘ ನಿದ್ರೆಗೆ ಶರಣು ಹೊಡೆದು, ಹನಿಮಳೆಯಿಂದ ಜೀವತಳೆದು ಪ್ರಾಣಿಗಳ ರಕ್ತವನ್ನು ಹೀರಲು ಕಾತರಿಸಿ ಕಾಯುತ್ತವೆ. ಈ ಮಳೆಯ ಮಧ್ಯದಲ್ಲಿಯೇ ಅಮ್ಮನಿಗೆ ಸೌತೆಕಾಯಿ ಸಸಿಯನ್ನು, ಅಂಗೀಕಸೆ ಬೀಜವನ್ನೂ `ಪೋಲಿ ಜಾನಿ'ಯ ಬಳಿ ಎರವಲು ಪಡೆದು ನೆಟ್ಟಾಗಿರುತ್ತದೆ. ಅಪ್ಪನೂ `ಲೇ ಇವ್ಳೇ.. ಇವತ್ತು ಕಳಲೆ ಹುಳಿ ಮಾಡೆ..' ಎಂದು ಹೇಳಿ ಕಳಲೆಯನ್ನು ತಂದಾಗಿರುತ್ತದೆ. ತಂಗಿಗೂ ಅಷ್ಟೆ ಅದ್ಯಾರದ್ದೋ ಮನೆಯಲ್ಲಿ ಕಂಡ ಹೊಸ ಜಾತಿಯ ಜರ್ಬರಾ ಹೂವಿನ ಗಿಡವನ್ನೋ, ಸೋಣೆಯ ಹೂವಿನ ಸಸಿಯನ್ನೋ, ಡೇರೆ ಹಿಳ್ಳನ್ನೋ ನೆಡುವ ನೆಪದಲ್ಲಿ ಮಣ್ಣು ಕಲೆಯಲು ಆರಂಭಿಸಿಯಾಗಿರುತ್ತದೆ. ಮಳೆ ಎಲ್ಲರ ಮನಸ್ಸನ್ನು ಹಸನು ಮಾಡುತ್ತದೆ ಎನ್ನುವುದು ಇದಕ್ಕೇ ಅಲ್ಲವಾ ಹೇಳೋದು..?
                                ಇಷ್ಟು ಸಾಕಲ್ಲವೇ ಗೆಳತಿ ಮಳೆಗಾಲದ ಸವಿಯನ್ನು ಸವಿಯಲಿಕ್ಕೆ. ನೀನು ಓದುವ ಹೊತ್ತಿಗೆ ಖಂಡಿತ ಮಳೆ ತನ್ನ ಇನ್ನೊಂದು ಆಯಾಮಕ್ಕೆ ಹೋಗಿರುತ್ತದೆ. ಸವಿ ನೆನಪಿನಿಂದ ಬರೆದ ಪತ್ರವನ್ನು ಸವಿ ನೆನಪಿನಿಂದಲೇ ಓದಿದಂತೆ ಮಳೆಗಾಲದ ಮಡಿಲಿನಿಂದ ಬರೆಯುವ ಪತ್ರವನ್ನು ಅಷ್ಟೇ ಸಂತಸದಿಂದ ಓದು. ಆ ಮಳೆಗಾಲದ ಭಾವನೆಗಳು ನಿನ್ನ ಬೆನ್ನೇರಿ ಬಂದರೆ ಪ್ರೀತಿಯ ಓಲೆ ಬರೆದಿದ್ದಕ್ಕೂ ಸಾರ್ಥಕ. ಆದರೂ ಹೇಳಬೇಕು ಕಣೆ ಗೆಳತಿ ಇಂತಹ ಮಳೆ ಸುರಿಯುವ ಮಲೆನಾಡನ್ನೂ, ನನ್ನನ್ನೂ ಬಿಟ್ಟು ನೀನು ಮಳೆಯ ಲವಲೇಶವೂ ಇಲ್ಲದ ಜೋರ್ಡಾನ್ ಎಂಬ ದೇಶಕ್ಕೆ ಹೋಗಬಾರದಿತ್ತು ನೀನು.. ಯಾಕೋ ಮಳೆ, ಹನಿ, ನಾನು, ನೀನು, ಕೈಹಿಡಿದು ನಡೆದ ಜಾರುವ ರಸ್ತೆ, ಉಕ್ಕೇರಿ ಹರಿಯುವ ನದಿಯ ದಡದಲ್ಲಿ ತಲೆಯ ಮೇಲೆ ಕೈಹೊತ್ತು ಕುಳಿತದ್ದು, ರಸ್ತೆಯಲ್ಲಿ ಹರಿಯುವ ನೀರನ್ನು ಪಚಾ ಪಚಾ ಹಾರಿಸಿದ್ದು, ಊಹೂಂ ಇವೆಲ್ಲವನ್ನೂ ನೀನು ಮಿಸ್ ಮಾಡ್ಕೋತಿದ್ದೀಯಾ ಅಂತ ನನಗೆ ಖಂಡಿತ ಗೊತ್ತಿದೆ. ಭಾವನೆಗಳು ಬಿಸಿಲಿಗೆ ಒಣಗಿ ಹೋಗಿರುವ ಆ ದೇಶದಿಂದ ಯಾವಾಗ ಮರಳುತ್ತೀಯೋ ಎಂದು ನಾನು ಕಾಯುತ್ತಿದ್ದೇನೆ.
                                  ಎಂತಾ ವಿಚಿತ್ರ ನೋಡು.. ಯಾವಾಗಲೋ ಬರೆದ ಈ ಪತ್ರಕ್ಕೆ ಈಗ ಈಮೇಲ್  ಸೌಭಾಗ್ಯವೂ ಸಿಕ್ಕಿದೆ. ಅಕ್ಷರಗಳು ಎಷ್ಟು ಅದೃಷ್ಟ ಮಾಡಿರುತ್ತವೆ ಮಾರಾಯ್ತಿ. ಹೆಚ್ಚಿನ ಸಮಯ ಅಕ್ಷರಕ್ಕೆ ಒಳ್ಳೆಯದೇ ಭಾಗ್ಯ ದೊರಕುತ್ತದೆ. ನಾನೇ ಬರೆದ ಅಕ್ಷರಗಳು ನಿನ್ನ ಉಸಿರು ಸೋಕುವಷ್ಟು ಹತ್ತಿರಕ್ಕೆ ಬಂದು ನಿಲ್ಲುತ್ತವೆ. ನನಗೆ ಅಕ್ಷರದ ಮೇಲೆಯೇ ಹೊಟ್ಟೆಕಿಚ್ಚಾಗುತ್ತಿದೆ ಗೆಳತಿ.
                                   ಉಫ್.. ಸಾಕು.. ಸಿಕ್ಕಾಪಟ್ಟೆ ಹೆಚ್ಚಾಯಿತಲ್ಲ ಬರೆದ ಪತ್ರ.. ಕೊನೆ ಮಾಡುತ್ತೇನೆ.. ನಿನೀರುವ ನಾಡಿನಲ್ಲಿ ಮಳೆಯೇ ಬರುವುದಿಲ್ಲ. ಗ್ರಾಚಾರ ಕೆಟ್ಟು ಎಲ್ಲಾದರೂ ಬರುವ ಮಳೆ ಖಂಡಿತ ಇಷ್ಟು ಖುಷಿಯನ್ನು ಕೊಡುವುದಿಲ್ಲ ಎಂದು ನನಗೆ ಗೊತ್ತಿದೆ. ಈ ಪತ್ರದ ಮೂಲಕವಾದರೂ ಮಳೆಯನ್ನು ಎಂಜಾಯ್ ಮಾಡು.. ನಿನ್ನ ಉತ್ತರಕ್ಕಾಗಿ ನವಿಲಿನಂತೆ ಕಾಯುತ್ತಿರುತ್ತೇನೆ.

ಇಂತಿ ನಿನ್ನೊಲವಿನ
ವಿನು


**
(ಖಂಡಿತ ಈ ಪತ್ರ ಬರೆದಿದ್ದು ಈಗಲ್ಲ. ಮಳೆಗಾಲ ಕಳೆದ ತಿಂಗಳೊಪ್ಪತ್ತಿನಲ್ಲಿ ಬರೆದಿದ್ದು. ಬರೆದು ಹಾಕಲು ಸಮಯ ಸಿಕ್ಕಿರಲಿಲ್ಲ. ಈ ವ್ಯಾಲಂಟೈನ್ಸ್ ಡೇ ಗೆ ಏನಾದರೂ ಬರೆಯೋಣ ಅಂದುಕೊಂಡವನಿಗೆ ಹಳೆಯ ಬರಹಗಳ ಗುಚ್ಛ ಸಿಕ್ಕಿತು. ಅದರಲ್ಲೊಂದು ಈ ಪ್ರೇಮಪತ್ರ. ಅದು ನಿಮ್ಮ ಮುಂದಿದೆ. ಬೇಸಿಗೆಯಲ್ಲಿ ಮಳೆಗಾಲವನ್ನು ಒಂಚೂರು ಮೆಲುಕು ಹಾಕೋಣ)
(ಈ ಪ್ರೇಮಪತ್ರ ಪ್ರಕಟಿಸಿ ಕದಂಬವಾಣಿಯ ಅಂದಿನ ಸಂಪಾದಕ ದಿ.ಸುಬ್ಬಣ್ಣಂಗೆ ಧನ್ಯವಾದಗಳನ್ನು ಎಷ್ಟು ಹೇಳಿದರೂ ಸಾಕಾಗುವುದಿಲ್ಲ. ಅಂದಹಾಗೆ ಇದನ್ನು ಬರೆದಿದ್ದು ಆಗಸ್ಟ್ 2006ರಲ್ಲಿ)

No comments:

Post a Comment