Saturday, February 22, 2014

ಬೆಂಗಾಲಿ ಸುಂದರಿ-8

                   ಭಾರತ ಕಬ್ಬಡ್ಡಿ ತಂಡದವರನ್ನು ಹೊತ್ತ ಬಸ್ಸು ಢಾಕಾದ ಹೊಟೆಲಿನಿಂದ ನಿಧಾನವಾಗಿ ಕಾಂತಾಜಿ ದೇವಸ್ಥಾನದ ಕಡೆಗೆ ಹೊರಟಿತು. ಗಂಗಾನದಿಯ ಕಿನಾರೆಯಲ್ಲಿ ಬಸ್ಸು ಬಳುಕುತ್ತಾ ಹೋಗುತ್ತಿದ್ದರೆ ವಿನಯಚಂದ್ರನ ಮನಸ್ಸಿನಲ್ಲಿ ತೆರೆಗಳೇಳುತ್ತಿದ್ದವು. ಮಧುಮಿತಾಳ ಮಾತು, ನಡೆ, ನುಡಿ, ಹಾವ-ಭಾವ ವಿನಯಚಂದ್ರನ ಮನಸ್ಸನ್ನು ಕಲಕಿಬಿಟ್ಟಿದ್ದವು. ಬಸ್ಸಿನ ಕೊನೆಯ ಸೀಟಿಗಿಂತ ಒಂದು ಸೀಟು ಮುಂಚೆ ಕುಳಿತಿದ್ದ ವಿನಯಚಂದ್ರ ಚಟಪಡಿಕೆಯಿಂದ ಎದ್ದು ಬಂದ. ಎಲ್ಲರೂ ವಿಷ್ಮಯದಿಂದ ನೋಡಲಾರಂಭಿಸಿದ್ದರು.
                  ಸೂರ್ಯನ್ ಅಂತೂ ಹೋ.. ಎಂದ. ಬಂದವನೇ ಮಧುಮಿತಾಳ ಬಳಿ ಬಂದ. ಎದ್ದು ಬಂದುಬಿಟ್ಟವನಿಗೆ ಮಧುಮಿತಾಳ ಬಳಿ ಏನು ಮಾತನಾಡಬೇಕು ಎಂದು ತಿಳಿಯಲಿಲ್ಲ. `ಅದು.. ಅದು..' ಎನ್ನತೊಡಗಿದ.. ಕೊನೆಗೆ ಮಧುಮಿತಾಳ ಸೀಟಿನ ಬಳಿಯಿದ್ದ ನೀರಿನ ಬಾಟಲಿ ಕಂಡು `ವಾಟರ್..' ಎಂದ.. ಕೊಟ್ಟಳು.
                  ಕೊಡುವಾಗ ಅವಳ ಕೈ ಹಿತವಾಗಿ ತಾಗಿ ವಿನಯಚಂದ್ರ ಮತ್ತೊಮ್ಮೆ ಭ್ರಮಿತನಾದ. ಮೈ ಝುಂ ಎಂದಿತು. ವಾಪಾಸು ಹೋಗುವಾಗ ಸಿಕ್ಕ ಸೂರ್ಯನ್  `ಏನಲ್ಲಾ.. ಯಾವಾಗ್ಲೂ ಇಲ್ಲದ ಬಾಯಾರಿಕೆ ಇವತ್ತು ಜಾಸ್ತಿಯಾಗ್ತಾ ಇದೆಯಾ..? ಒಂದೇ ಬಾಟಲ್ ನೀರು ಸಾಕಾ ಅಥವಾ ಇನ್ನೂ ಜಾಸ್ತಿ... ಬೇಕಾಗಬಹುದಾ..? ಯಾಕೋ ಗಾಡಿ ಎಲ್ಲೆಲ್ಲೋ ಹೋಗ್ತಾ ಇದೆಯಲ್ಲ.. ನಾನು ನಿನಗೆ ಕಾಂಪಿಟೇಶನ್ ಕೊಡೋದಿಕ್ಕೆ ಬರಲಾ..?' ಎಂದ.
                 ವಿನಯಚಂದ್ರನಿಗೆ ಸಿಟ್ಟು ಬಂದಂತಾದರೂ ತೋರಿಸಿಕೊಳ್ಳದೇ ಸುಮ್ಮನೇ ತನ್ನ ಸೀಟಿಗೆ ಹೋಗಿ ಕುಳಿತ. ಕುಳಿತಿದ್ದನಾದರೂ ಮನಸ್ಸಿನ ತಳಮಳ ಮೇರೆ ಮೀರಿತ್ತು. ಬಸ್ಸಿನ ಕಿಟಕಿಯಲ್ಲಿ ಹೊರ ಜಗತ್ತಿನ ಕಡೆಗೆ ಕಣ್ಣು ಹಾಯಿಸಿದ. ಬಸ್ಸು ಗಂಗಾ ನದಿಯ ದಡದಲ್ಲಿ ಸುತ್ತು ಬಳಸುತ್ತಾ ಹೋಗುತ್ತಿತ್ತು. ಮಧುಮಿತಾಳ ನೆನಪಿನ ನಡುವೆಯೂ ನದಿಯ ಅಗಾಧತೆ ಕಂಡು ವಿಸ್ಮಿತನಾದ. ಭಾರತದಲ್ಲಿ ಗಂಗಾ ನದಿ ದೈತ್ಯವಾಗಿದ್ದರೂ ಬಾಂಗ್ಲಾದೇಶದಲ್ಲಿ ಅದರ ಅಗಾಧತೆ ಇನ್ನೂ ಹೆಚ್ಚು. ತನ್ನ ತೆಕ್ಕೆಗೆ ಇನ್ನೂ ನಾಲ್ಕೈದು ನದಿಗಳನ್ನು ತೆಗೆದುಕೊಂಡು ಹರಿಯುವ ಗಂಗೆ ಇಲ್ಲಿ ದೈತ್ಯೆಯಾಗಿ ಕಾಣುತ್ತಾಳೆ.  ಅಬ್ಬರಿಸುತ್ತಾಳೆ. ಸಮುದ್ರವನ್ನು ಸೇರುವ ತವಕದಲ್ಲಿ ಜೋರಾಗಿ ಹರಿಯುತ್ತಾಳೆ. ಯಾಕೋ ಈ ನದಿಯ ದಡದಲ್ಲಿ ಒಮ್ಮೆ ಇಳಿದು ನಡೆಯುತ್ತಾ ಹೋಗಬೇಕೆನ್ನಿಸಿತು ವಿನಯಚಂದ್ರನಿಗೆ.
                 ಅದೇ ಸಂದರ್ಭದಲ್ಲಿ ಬಸ್ಸಿನೊಳಗೆ ಕುಳಿತಿದ್ದ ಸೂರ್ಯನ್ ಸೀದಾ ಎದ್ದು ಹೋದವನೇ ಮಧುಮಿತಾಳ ಬಳಿ ತೆರಳಿ ಏನೋ ಹೇಳಿದ. ವಿನಯಚಂದ್ರನಿಗೆ ಕಂಡಿತಾದರೂ ಸೂರ್ಯನ್ ಏನು ಮಾತನಾಡಿದ ಎನ್ನುವುದು ತಿಳಿಯಲಿಲ್ಲ. ವಿನಯಚಂದ್ರ ಒಮ್ಮೆ ಉರಿದುಬಿದ್ದನಾದರೂ ಹೊರಗೆ ತೋರಿಸಿಕೊಳ್ಳಲಿಲ್ಲ. ಹಾಗೆಯೇ ಸ್ವಲ್ಪ ಸಮಯ ಕಳೆದ ನಂತರ ಆತನಿಗೆ ನಿದ್ದೆ ಬಂದಂತಾಯಿತು. ಕಣ್ಮುಚ್ಚಿ ನಿದ್ರಿಸಲು ಹವಣಿಸಿದ. ಇದ್ದಕ್ಕಿದ್ದಂತೆ ಒಂದು ಧ್ವನಿ `ಹಲೋ..' ಎಂದಿತು.. ಕಣ್ಣು ಬಿಟ್ಟು ನೋಡಿದರೆ ಎದುರಿಗೆ ಮಧುಮಿತಾ.. ವಿನಯಚಂದ್ರ ಒಮ್ಮೆ ಕಕ್ಕಾಬಿಕ್ಕಿ. ವಿನಯಚಂದ್ರನ ಪಕ್ಕದ ಖಾಲಿ ಸೀಟನ್ನು ನೋಡಿ `ನಾನಿಲ್ಲಿ ಕೂರಬಹುದಾ..' ಎಂದಳು. ಬಸ್ಸಿನಲ್ಲಿ ಸಾಕಷ್ಟು ಖಾಲಿ ಸೀಟಿದ್ದರೂ ಈ ಸೀಟಿಗೆ ಬಂದು ಕೂರುತ್ತಿದ್ದಾಳೆ ಎಂದುಕೊಂಡರೂ ವಿನಯಚಂದ್ರನಿಗೆ ಒಳಗೊಳಗೆ ಖುಷಿಯಾಯಿತು. `ಖಂಡಿತ..' ಎಂಬಂತೆ ಸನ್ನೆ ಮಾಡಿದ.
               ಕುಳಿತವಳೇ ಮಧುಮಿತಾ ವಿನಯಚಂದ್ರನ ಬಳಿ `ಅರಾಮಾಗಿದ್ದೀರಾ..? ಈಗ ಆರೋಗ್ಯ ಹೇಗಿದೆ..?' ಎಂದು ಕೇಳಿದಳು.
                  ವಿನಯಚಂದ್ರ  ಇದ್ದಕ್ಕಿದ್ದಂತೆ ಬೆಚ್ಚಿಬಿದ್ದು `ನನಗಾ..? ಆರೋಗ್ಯವಾ..? ನನಗೇನಾಗಿದೆ..?..' ಎಂದ.
                  `ಹಾಂ.. ನಿಮಗೆ ಆರೋಗ್ಯ ಸರಿಯಿಲ್ಲ.. ಜ್ವರ ಬಂದಿದೆ.. ಎಂದರಲ್ಲ ಅವರು..' ಎಂದು ಮಧುಮಿತಾ ಸೂರ್ಯನ್ ಕಡೆಗೆ ಕೈತೋರಿಸಿದಾಗ ಆತ ಬಿದ್ದು ಬಿದ್ದು ನಗಲಾರಂಭಿಸಿದ್ದ.
                 ಸೂರ್ಯನ್ ಏನೋ ಪ್ಲಾನ್ ಮಾಡಿದ್ದಾನೆ ಎಂದು ಅರಿತ ವಿನಯಚಂದ್ರ `ಹೌದು ನನಗೆ ಸ್ವಲ್ಪ ಹುಷಾರಿರಲಿಲ್ಲ. ಈಗ ಪರವಾಗಿಲ್ಲ. ರಾತ್ರಿ ಸ್ವಲ್ಪ ಜ್ವರ ಇತ್ತು.  ಬೆಳಿಗ್ಗೆ ಪ್ರಾಕ್ಟೀಸ್ ಮಾಡುತ್ತ ಮಾಡುತ್ತ ಸರಿಯಾಯಿತು..' ಎಂದ. ಆಕೆ ಬಂಗಾಳದಲ್ಲಿ ಜ್ವರದ ಬಗ್ಗೆ ಸ್ವಲ್ಪ ಹುಷಾರಾಗಿರಬೇಕೆಂದು ಚಿಕ್ಕದಾಗಿ ಹೇಳಿದಳು. ಸರಿಯೆಂದು ತಲೆಯಾಡಿಸಿದ.
ಇಷ್ಟಾದರೂ ಆಕೆ ತನ್ನ ಪಕ್ಕದ ಸೀಟಿನಿಂದ ಎದ್ದು ಹೋಗಲಿಲ್ಲ. ತನ್ನ ಮನಸ್ಸಿನಲ್ಲಿ ತಳಮಳವನ್ನೆಬ್ಬಿಸಿದ ಹುಡುಗಿ ಉಸಿರು ತಾಕುವಷ್ಟು ಸನಿಹ ಕುಳಿತಿದ್ದಾಳೆ. ಒಮ್ಮೆ ಬಾಚಿ ತಬ್ಬಿಕೊಳ್ಳಲೇ ಎಂದುಕೊಂಡ. ಮನಸ್ಸು ಹಿಂಜರಿಯಿತು.
                ಸುಮ್ಮನೆ ಹೊತ್ತು ಹೋಗಲಿಲ್ಲ. ವಿನಯಚಂದ್ರನೇ ಮಾತನಾಡಬೇಕು ಎಂದುಕೊಂಡನಾದರೂ ಮಾತು ಮುಂದುವರಿಯಲಿಲ್ಲ. ಕೊನೆಗೆ ಮಧುಮಿತಾಳೇ ವಿನಯಚಂದ್ರನ ಬಳಿ ತನ್ನ ಪರಿಚಯ ಹೇಳಿಕೊಳ್ಳಲಾರಂಭಿಸಿದಳು. ಆಕೆ ಮಾತನಾಡುತ್ತಿದ್ದುದನ್ನು ಕೇಳುತ್ತ ಕುಳಿತ. ಕೊನೆಗೆ ತಾನೂ ಏನಾದರೂ ಮಾತನಾಡಬೇಕೆಂದುಕೊಂಡು ತನ್ನ ಪರಿಚಯವನ್ನು ಹೇಳಿಕೊಂಡ. ತನ್ನೂರು, ತನ್ನ ಮನೆ, ಮನೆತನ, ತಾನು ಕಬ್ಬಡ್ಡಿ ಆಟಗಾರನಾಗಿದ್ದು, ಮನೆಯಲ್ಲಿ ಬೆಳೆದ ಪರಿಸರ ಇತ್ಯಾದಿಗಳ ಬಗ್ಗೆ ಮಾತಾಡಿದ. ಮಾತನಾಡುತ್ತಲೇ ಇದ್ದ. ಮಧುಮಿತಾ ಕುತೂಹಲದಿಂದ ಕೇಳುತ್ತಿದ್ದಳು. ಮಾತಿನ ಭರದಲ್ಲಿ ಬಸ್ಸು ಸಾಗಿದ ಅರಿವಾಗಲಿಲ್ಲ.
                 ಅವರಿದ್ದ ಬಸ್ಸು ಅಲ್ಲೆಲ್ಲೋ ಬ್ರಹ್ಮಪುತ್ರ ನದಿಯನ್ನೂ ದಾಟಿತು. ಭಾರತದಲ್ಲಿರುವ ಕೆಲವೇ ಕೆಲವು ಗಂಡು ಹೆಸರಿನ ನದಿಗಳಲ್ಲಿ ಬ್ರಹ್ಮಪುತ್ರವೂ ಒಂದು. ಅತಿದೊಡ್ಡ ನದಿಯೂ ಹೌದು. ಟಿಬೆಟಿನ ಯಾವುದೋ ಹಿಮವತ್ಪರ್ವತದ ತಪ್ಪಲಿನಲ್ಲಿ ಹುಟ್ಟಿ ದೂರ ದೂರಕ್ಕೆ ಹರಿದು ಇದ್ದಕ್ಕಿದ್ದಂತೆ ದೊಡ್ಡದೊಂದು ತಿರುವು ಪಡೆದು ಅರುಣಾಚಲದ ಮೂಲಕ ಭಾರತ ಪ್ರವೇಶ ಮಾಡುವ ಬ್ರಹ್ಮಪುತ್ರ ಮುಂದೆ ಬಾಂಗ್ಲಾದೇಶಕ್ಕೆ ಬಂದು ಗಂಗೆಯ ಒಡಲನ್ನು ಸೇರುವಲ್ಲಿಗೆ ಎರಡು ಸಹಸ್ರ ಕಿಲೋಮೀಟರ್ ದೂರ ಕ್ರಮಿಸುತ್ತದೆ.
               ಬಾಂಗ್ಲಾದೇಶದಲ್ಲಿ ಬ್ರಹ್ಮಪುತ್ರ ನದಿಗೆ ಸೇತುವೆ ನಿರ್ಮಾಣ ಮಾಡಿರದ ಕಾರಣ ಶಿವಾಲಯ ಎಂಬ ಸ್ಥಳದಲ್ಲಿ ಲಾಂಚಿನ ಮೂಲಕ ಬಸ್ಸನ್ನು ದಾಟಿಲಾಯಿತು. ತಂಡದ ಆಟಗಾರರು ಬಸ್ಸಿನಿಂದ ಕೆಳಗಿಳಿದು ಬ್ರಹ್ಮಪುತ್ರ ನದಿಯನ್ನು ನೋಡಲು ಲಾಂಚಿನ ಮೇಲೆ ಬಂದರು. ವಿನಯಚಂದ್ರನಿಗೂ ಹೋಗಬೇಕೆನ್ನಿಸಿತ್ತಾದರೂ ಪಕ್ಕದಲ್ಲಿ ಮಧುಮಿತಾ ಕುಳಿತಿದ್ದಳಲ್ಲ. ಹಾಗಾಗಿ ಏಳಲು ಮನಸ್ಸಾಗಲಿಲ್ಲ. ಬಸ್ಸಿನ ಕಿಡಕಿಯಿಂದಲೇ ನೋಡುತ್ತ ಕುಳಿತ. ಬ್ರಹ್ಮಪುತ್ರಾ ನದಿಯ ಮೇಲಿನಿಂದ ಹಾರಿ ಬಂದ ಗಾಳಿ ವಿನಯಚಂದ್ರನನ್ನು ಹಾದು ಮಧುಮಿತಾಳ ಮುಂಗುರಳನ್ನು ಹಾರಿಸುತ್ತಾ ಹೋದದ್ದನ್ನು ಬೆಪ್ಪಾಗಿ ನೋಡುತ್ತ ಕುಳಿತ ವಿನಯಚಂದ್ರ. ಯಾಕೋ ಮತ್ತೊಮ್ಮೆ ಆತನ ಮನಸ್ಸು ನದಿಯಂತಾಗಿತ್ತು. ಹೃದಯ ಹಾಡಲಾರಂಭಿಸಿತ್ತು. ಮತ್ತೆ ಮತ್ತೆ ಕಲರವ ಎದ್ದಿತ್ತು.
                  ಅಲ್ಲಿಂದ ಮುಂದೆ ಸಾಗಿದ ಅವರ ವಾಹನ ಸೀದಾ ಕಾಶೀನಾಥಪುರಕ್ಕೆ ಬಂದಿತು. ಹೆಸರನ್ನೆಲ್ಲ ನೋಡುತ್ತಿದ್ದ ವಿನಯಚಂದ್ರ ಬಾಂಗ್ಲಾದೇಶವೂ ಭಾರತದಲ್ಲೇ ಇದ್ದಿದ್ದರೆ ಎಷ್ಟು ಚನ್ನಾಗಿತ್ತಲ್ಲ ಎಂದುಕೊಂಡ. ಕಾಶೀನಾಥಪುರದಲ್ಲಿ ತಿಂಡಿಗಾಗಿ ಬಸ್ಸನ್ನು ನಿಲ್ಲಿಸಲಾಯಿತು. ಆಟಗಾರರೇ ಒತ್ತಾಯ ಮಾಡಿ ಯಾವುದೋ ಢಾಬಾ ಬಳಿ ಬಸ್ಸು ನಿಲ್ಲಿಸಲು ಹೇಳಿದ ಕಾರಣ ರಸ್ತೆ ಪಕ್ಕದಲ್ಲಿ ಬಸ್ಸನ್ನು ಹಾಕಲಾಗಿತ್ತು. ಇಳಿಯುವ ಮುನ್ನ ಮಧುಮಿತಾ ಮತ್ತೆ ಎಂದಿನ ರೂಲ್ಸುಗಳನ್ನು ಮತ್ತೆ ಮತ್ತೆ ಹೇಳಿದಳು. ಆಟಗಾರರೆಲ್ಲ ಕೇಳಿದಂತೆ ಮಾಡಿದರು. ಕಾಶೀನಾಥಪುರದ ಸರಹದ್ದಿನಲ್ಲಿ ಈ ಬಸ್ಸನ್ನು ನಿಲ್ಲಿಸಲಾಗಿತ್ತು. ಸಾಕಷ್ಟು ಜನರಿದ್ದರೂ ಯಾರೊಬ್ಬರೂ ಇವರನ್ನು ಗುರುತಿಸಲಿಲ್ಲ. ಗುರುತಿಸಲು ಇವರೇನು ಕ್ರಿಕೆಟ್ ಆಟಗಾರರೇ ಅಥವಾ ಬಾಲಿವುಡ್ ನಟರೇ. ಕಬ್ಬಡ್ಡಿ ಆಟಗಾರರು. ಯಾರೋ ಸೀದಾ ಸಾದಾ ಜನರಿರಬೇಕು ಎಂದುಕೊಂಡರು. ಆದರೆ ಇವರನ್ನು ಕರೆತಂದಿದ್ದ ಹೈಟೆಕ್ ಬಸ್ಸು ಮಾತ್ರ ಕಾಶೀನಾಥಪುರದ ಜನರನ್ನು ಸೆಳೆಯಿತು. ಬಂದವರ್ಯಾರೋ ದೊಡ್ಡ ಜನವೇ ಇರಬೇಕು ಎಂದುಕೊಂಡರು.
                 ಎಲ್ಲ ಆಟಗಾರರೂ ಬಸ್ಸಿನಿಂದ ಇಳಿದಿದ್ದರಾದರೂ ಸೂರ್ಯನ್ ಹಾಗೂ ವಿನಯಚಂದ್ರ  ಇಳಿದಿರಲಿಲ್ಲ. ಸೂರ್ಯನ್ ವಿನಯಚಂದ್ರನ ಬಳಿ ಬಂದು `ದೋಸ್ತ್.. ನಿನ್ ಪಾಡು ನನಗೆ ನೋಡ್ಲಿಕ್ಕೆ ಆಗಲಿಲ್ಲ ಮಾರಾಯಾ.. ಅದಕ್ಕೆ ನಿಂಗೆ ಹುಷಾರಿಲ್ಲ ಅಂದೆ.. ಅವಳ ಬಳಿ ಹೇಳಿ ನಿನ್ನನ್ನು ಮಾತನಾಡಿಸುವಂತೆ ಮಾಡಿದೆ.. ಸಾರಿ ಯಾ..' ಎಂದ.
                `ನೀನು ನನಗೆ ಹುಷಾರಿಲ್ಲ  ಎಂದು ಅವಳ ಬಳಿ ಹೇಳಿದೆ ಎಂದ ಕೂಡಲೇ ಏನೋ ನಾಟಕ ಮಾಡ್ತಿದ್ದಾನೆ ಎಂದುಕೊಂಡೆ. ಮೊದಲಿಗೆ ಒಂದು ಸಾರಿ ತಲೆಬುಡ ಗೊತ್ತಾಗಲಿಲ್ಲ. ಆದರೆ ಕೊನೆಗೆ  ನಾನು ನಿನ್ನ ಮಾತಿಗೆ ಪೂರಕವಾಗಿ ನಡೆದುಕೊಂಡೆ.. ಥ್ಯಾಂಕ್ಸ್ ದೋಸ್ತಾ.. ಅವಳ ಒಡನಾಟ ಕಲ್ಪಿಸಿಕೊಟ್ಟಿದ್ದಕ್ಕೆ..' ಎಂದ ವಿನಯಚಂದ್ರ.
                 `ಹಾಕ್ತೀನಿ ನೋಡು ಬುರುಡೆಗೆ.. ಥ್ಯಾಂಕ್ಸ್ ಹೇಳ್ತಾನಂತೆ.. ದೋಸ್ತನಿಗೆ ಇಷ್ಟಾದರೂ ನಾನು ಮಾಡಬಾರದೇ..' ಎಂದು ಕಣ್ಣು ಮಿಟುಕಿಸಿದ ಸೂರ್ಯನ್.. `ಬಾ ತಿಂಡಿ ತಿಂದು ಬರೋಣ..' ಎಂದು ಕರೆದ.
                  ವಿನಯಚಂದ್ರನಿಗೆ ಯಾಕೋ ಹೋಗಲು ಮನಸ್ಸಾಗಲಿಲ್ಲ. ಬೇಡ ಎಂದ. ಆದರೆ ಸೂರ್ಯನ್ ಕೇಳಲಿಲ್ಲ. ಎಳೆದುಕೊಂಡು ಹೋದ. ಇವರಿಬ್ಬರೂ ಕೊನೆಯವರಾಗಿ ಬಸ್ಸಿಳಿದಿದ್ದನ್ನು ಮಧಮಿತಾ ಗಮನಿಸಿದ್ದಳು. ಢಾಬಾದಲ್ಲಿ ಒಂದು ಟೇಬಲ್ ಹಿಡಿದು ಇವರಿಬ್ಬರಿಗಾಗಿ ಕಾಯುತ್ತಿದ್ದಳು. ಮತ್ತೊಮ್ಮೆ ಸೂರ್ಯನ್ ವಿನಯಚಂದ್ರನಿಗೆ ಹುಷಾರಿಲ್ಲ  ಎಂದು ಹೇಳಿದ್ದು ಇಲ್ಲಿ ಸಹಾಯ ಮಾಡಿತ್ತು. ಸೂರ್ಯನ್, ವಿನಯಚಂದ್ರ ಟೇಬಲ್ಲಿಗೆ ಹೋಗಿ ಕುಳಿತರು.
                ಎಗ್ ರೈಸ್ ತಿನ್ನುವ ವಿನಯಚಂದ್ರ ಸುತ್ತಮುತ್ತ ನೋಡಿದ. ಉಳಿದ  ಆಟಗಾರರೆಲ್ಲ ನಾನ್ ವೆಜ್ ಮೆಲ್ಲಲು ಆಗಲೇ ಆರಂಭಿಸಿದ್ದರು. ವಿನಯಚಂದ್ರ  ಅತ್ತ ಇತ್ತ ನೋಡಲಾರಂಭಿಸಿದಾಗಲೇ ಮಧುಮಿತಾ `ಏನಾಯ್ತು..' ಎಂದಿದ್ದಳು.
ಆಗ ನಡುವೆ ತಲೆಹಾಕಿದ ಸೂರ್ಯನ್ `ವಿನಯಚಂದ್ರ ವೆಜ್..' ಎಂದ.
                 ಅಚ್ಚರಿಗೊಂಡ ಮಧುಮಿತಾ `ನಿಜ್ಜಾನಾ? ನಿಮಗೆ ಇಲ್ಲಿ ತಿಂಡಿ ತಿನ್ನಿಸೋದು ಕಷ್ಟ ಇದೆ. ಏನ್ ಮಾಡೋದು..' ಎಂದು ಹೇಳಿದಳು.
                `ನಿನಗೆ ನೀರೇ ಗತಿ.. ತಗೋ..' ಎಂದು ಸೂರ್ಯನ್ ನೀರಿನ ಬಾಟಲಿಯನ್ನು ವಿನಯಚಂದ್ರನ ಮುಂದೆ ಇಟ್ಟ.
ಹೆ ಹೆ ಎಂದು ವಿನಯಚಂದ್ರ ಹಲ್ಲುಕಿರಿದ. ಕೊನೆಗೆ ಮಧುಮಿತಾಳ ಬಳಿ `ಎಗ್ ರೈಸ್ ಸಿಗುತ್ತಾ ಕೇಳಿ..' ಎಂದ.  `ಒಂದ್ ನಿಮಿಷ..' ಎಂದವಳೆ ಎದ್ದು ಹೋದಳು. ಸೂರ್ಯನ್ ವಿನಯಚಂದ್ರನ ಬಳಿ `ಪರವಾಗಿಲ್ಲ ಕಣೋ ನೀನು.. ನಿನ್ನ ಟೇಸ್ಟು ಚನ್ನಾಗಿದೆ. ಹುಡುಗಿ ಒಳ್ಳೆಯವಳಂತೆ ಕಾಣುತ್ತಾಳೆ. ಆದರೆ ದೇಶ ಮಾತ್ರ ಬೇರೆಯದಲ್ಲ.. ನಿನಗೂ ಇವಳಿಗೂ ಆಗಿಬರುವುದಿಲ್ಲ..' ಎಂದ.
                 `ಥೂ ನಿನ್ನ.. ಏನಯ್ಯಾ ನೀನು.. ಅಂಥದ್ದೇನಿಲ್ಲ ಮಾರಾಯಾ.. ಜಸ್ಟ್ ಇಸ್ಟ ಆದಳು ಅಷ್ಟೆ..' ಎಂದ ವಿನಯಚಂದ್ರ.
                  `ಇದೆಲ್ಲಾ ಬೇಡಪ್ಪಾ.. ನನಗೆ ಗೊತ್ತಾಗುತ್ತೆ.. ನಿನ್ನ ಮನಸ್ಸಿನ ತಳಮಳ...ನಿಂಗೆ ಅವಳು ಅಂದ್ರೆ ಬಹಳ ಇಷ್ಟ. ಆದರೆ ಹೇಳಿಕೊಳ್ಳೋದು ಕಷ್ಟ ಅಲ್ವಾ..' ಎಂದ ಸೂರ್ಯನ್..
                  ವಿನಯಚಂದ್ರ ಬೆಪ್ಪಾಗಿ ಅವನನ್ನೇ ನೋಡುತ್ತಿದ್ದಂತೆ ಮಧುಮಿತಾ ಬಂದವಳೇ `ಎಗ್ ರೈಸ್ ಸಿಗುತ್ತೆ.. ತೊಂದ್ರೆ ಇಲ್ಲ..' ಎಂದಳು. ವಿನಯಚಂದ್ರ ಉಸಿರಾಡಿದ. ಉಪವಾಸ ತಪ್ಪಿತು ಎಂದುಕೊಂಡ.
             ಮಧುಮಿತಾಳಿಗೆ ವಿನಯಚಂದ್ರ ಯಾಕೋ ಕುತೂಹಲವನ್ನು ಹುಟ್ಟುಹಾಕಿದ್ದ. ಸಾಮಾನ್ಯವಾಗಿ ಕಬ್ಬಡ್ಡಿ ಆಟಗಾರರೆಂದರೆ ನಾನ್ ವೆಜ್ ತಿನ್ನುತ್ತಿರುತ್ತಾರೆ ಎಂದುಕೊಂಡಿದ್ದಳಾಕೆ. ಆದರೆ ಎಗ್ ರೈಸ್ ಹೊರತು ಪಡಿಸಿ ಬೇರೆ ಯಾವುದೇ ನಾನ್ ವೆಜ್ ತಿನ್ನದ ವಿನಯಚಂದ್ರನ ಬಗ್ಗೆ ಏನೋ ಒಂದು ಭಾವನೆ. ತಾನೂ ನಾನ್ ವೆಜ್ ತಿನ್ನೋದಿಲ್ಲ  ಎನ್ನುವುದನ್ನು ಯಾರಿಗೂ ಹೇಳಲಿಲ್ಲ. ಆದರೆ ಸಪ್ಲಾಯರ್ ಎರಡು ಪ್ಲೇಟ್ ಎಗ್ ರೈಸ್ ತಂದಿಟ್ಟಾಗ ಮಾತ್ರ ವಿನಯಚಂದ್ರ ಹಾಗೂ ಸೂರ್ಯನ್ ಇಬ್ಬರೂ ವಿಭಿನ್ನ ಆಲೋಚನೆಗಳನ್ನು ಮಾಡಿದ್ದರು.
                 ವಿನಯಚಂದ್ರನಿಗೆ ಬೇಜಾರಾಗುತ್ತದೆ ಎನ್ನುವ ಕಾರಣಕ್ಕಾಗಿ ಇವಳು ಎಗ್ ರೈಸ್ ಆರ್ಡರ್ ಮಾಡಿದ್ದಾಳೆ. ಅಥವಾ ವಿನಯಚಂದ್ರನ ಎದುರು ನಾನ್ ವೆಜ್ ತಿನ್ನುವುದು ಸರಿಯಲ್ಲ ಎನ್ನುವ ಕಾರಣಕ್ಕಾಗಿ ಇವಳೂ ಎಗ್ ರೈಸ್ ತಿನ್ನುತ್ತಿದ್ದಾಳೆ. ಅಂತೂ ವಿನಯಚಂದ್ರನ ಬಗ್ಗೆ ಇವಳಿಗೆ ಒಳ್ಳೆಯದೇ ಭಾವನೆ ಇದೆ ಎಂದುಕೊಂಡ ಸೂರ್ಯನ್. ಬಾಂಗ್ಲಾದೇಶದಲ್ಲಿದ್ದುಕೊಂಡು ಎಗ್ ರೈಸ್ ತಿನ್ನುವ ಮಧುಮಿತಾಳೂ ವೆಜಿಟೇರಿಯನ್ನಿರಬಹುದೇ ಎಂದುಕೊಂಡವನು ವಿನಯಚಂದ್ರ. ಆದರೆ ಯಾರೂ ಬಾಯಿಬಿಟ್ಟು ಕೇಳಲಿಲ್ಲ. ಮಧುಮಿತಾಳೂ ಹೇಳಲಿಲ್ಲ.
                  ಬಾಂಗ್ಲಾದೇಶದ ವಿಶಿಷ್ಟ ಬಗೆಯ ತಿಂಡಿಯೊಂದನ್ನು ಕೊನೆಯಲ್ಲಿ ತಂದಿಟ್ಟರು. ಅದನ್ನು ತಿನ್ನುತ್ತಿದ್ದಂತೆ ವಿನಯಚಂದ್ರನಿಗೆ ಮಲೆನಾಡಿನಲ್ಲಿ ಆಲೆಮನೆಯ ಸಂದರ್ಭದಲ್ಲಿ ಮಾಡುವ ತೊಡೆದೇವು ನೆನಪಿಗೆ ಬಂದಿತು. ತಕ್ಷಣವೇ ಸೂರ್ಯನ್ ಹಾಗೂ ಮಧುಮಿತಾಳ ಬಳಿ ಇದೇ ರೀತಿಯ `ತೊಡೆದೇವು' ಎನ್ನುವ ತಿಂಡಿಯನ್ನು ತಮ್ಮೂರ ಭಾಗದಲ್ಲಿ ಮಾಡುತ್ತಾರೆಂದೂ ಬಹಳ ಚನ್ನಾಗಿರುತ್ತದೆಂದೂ ತಿಳಿಸಿದ.
                  ಅದಕ್ಕೆ ಪ್ರತಿಯಾಗಿ ಸೂರ್ಯನ್ `ನೀನು ಎಲ್ಲಿ ಹೋದರೂ ನಿಮ್ಮೂರಿಗೆ ಹೋಲಿಕೆ ಮಾಡೋದನ್ನು ಬಿಡಬೇಡ.. ಯಾವಾಗ ನೋಡದ್ರೂ ನಮ್ಮೂರಲ್ಲಿ ಹಂಗೆ.. ನಮ್ಮೂರಲ್ಲಿ ಹಿಂಗೆ ಅಂತಾನೇ ಹೇಳ್ತಾ ಇರು..' ಎಂದ.
                 `ಹೌದಪ್ಪಾ.. ಹೌದು.. ನಮ್ಮೂರೇ ನಮಗೆ ಸವಿಬೆಲ್ಲ.. ನಮ್ಮೂರು ಅಂದರೆ ಸ್ವರ್ಗ.. ಅದಕ್ಕೆ ನಾನು ನಮ್ಮೂರಿನ ಬಗ್ಗೆ, ನಮ್ಮೂರಿನ ವಿಶೇಷತೆಗಳ ಬಗ್ಗೆ ಆಗಾಗ ಹೇಳ್ತಾ ಇರುತ್ತೇನೆ..' ಎಂದ ವಿನಯಚಂದ್ರ.
                  ಮಧುಮಿತಾಳಿಗೆ ತೊಡದೇವು ಕುತೂಹಲ ಹುಟ್ಟಿಸಿತು. ತೊಡದೇವಿನ ಕುರಿತು ವಿನಯಚಂದ್ರಬಳಿ ಕೇಳಿ ತಿಳಿದುಕೊಂಡಳು. ಮಾಡುವ ಬಗೆ, ಅದರ ರುಚಿ ಇತ್ಯಾದಿಗಳ ಬಗ್ಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದುಕೊಂಡಳು. ಸೂರ್ಯನ್ ಗೆ ಇದು ಬೋರೆನ್ನಿಸಿದ್ದರೂ ಅಪರೂಪಕ್ಕೆಂಬಂತೆ ಸುಮ್ಮನೆ ಉಳಿದಿದ್ದ. ಬಾಂಗ್ಲಾದೇಶದ ಹಿಂದೂ ದೇವಾಲಯದ ಟ್ರಿಪ್ಪು, ಅನಾರೋಗ್ಯದ ನಾಟಕ ಹಾಗೂ ಡಾಭಾಗಳು ವಿನಯಚಂದ್ರ ಹಾಗೂ ಮಧುಮಿತಾಳಲ್ಲಿ ಆತ್ಮೀಯತೆಯನ್ನು ಹುಟ್ಟುಹಾಕಿದ್ದವು. ಅವರಿಬ್ಬರೂ ಗೆಳೆತನದ ಪರೀಧಿಯೊಳಗೆ ಸೇರಿದ್ದರು. ಸೂರ್ಯನ್ ಇವರಿಬ್ಬರನ್ನೂ ಪರಿಚಯಿಸಿ ಆತ್ಮೀಯವಾಗಿಸಿದ್ದರೆ ವಿನಯಚಂದ್ರನ ಮನಸ್ಸು ಮಧುಮಿತಾಳ ಕಡೆಗೆ ವಾಲುತ್ತಿತ್ತು. ಮಧುಮಿತಾಳ ಮನಸ್ಸಿನಲ್ಲಿ ಏನಿದೆಯೋ ಎನ್ನುವ ಕುತೂಹಲ ಕಾಡುತ್ತಿತ್ತು.

**

                   ಮತ್ತೆ ಬಸ್ಸನ್ನೇರಿದಾಗ ಮಧುಮಿತಾಳೇ ಉದ್ದೇಶಪೂರ್ವಕವಾಗಿ ವಿನಯಚಂದ್ರನ ಪಕ್ಕ ಬಂದು ಕುಳಿತಳು. ವಿನಯಚಂದ್ರ ಅರಳಿದ ಹೂವಿನಂತಾಗಿದ್ದ. ಪಕ್ಕ ಕುಳಿತ ಮಧುಮಿತಾಳಿಗೆ ವಿನಯಚಂದ್ರ ಆಪ್ತನಾಗಿದ್ದ. ಅಷ್ಟೇ ಅಲ್ಲದೇ ಆತ ತನ್ನ ಒಂದೆರಡು ನಡೆ ನುಡಿಗಳ ಮೂಲಕ ಕುತೂಹಲವನ್ನೂ ಹುಟ್ಟುಹಾಕಿದ್ದ.
                  ವಿನಯಚಂದ್ರ ಹಾಗೂ ಮಧುಮಿತಾ ಒಟ್ಟಾಗಿ ಕುಳಿತು ಬರುತ್ತಿರುವುದು ಭಾರತದ ಕಬ್ಬಡ್ಡಿ ತಂಡದ ಆಟಗಾರರಿಗೆ ಅಚ್ಚರಿಯನ್ನು ಹುಟ್ಟುಹಾಕಿದ್ದು ಸುಳ್ಳಲ್ಲ. ಒಂದಿಬ್ಬರಿಗಂತೂ ಇಲ್ಲೇನೋ ನಡೆಯುತ್ತಿದೆ ಎನ್ನುವಂತೆ ಇವರಿಬ್ಬರ ಕಡೆಗೆ ಇಣುಕಿ ನೋಡುತ್ತಿದ್ದರು, ಕದ್ದು ನೋಡುತ್ತಿದ್ದರು. ಮಧುಮಿತಾ ಹಾಗೂ ವಿನಯಚಂದ್ರನಿಗೆ ಇದು ಇರಿಸುಮುರುಸು ಉಂಟು ಮಾಡಿದ್ದಂತೂ ನಿಜ. ಆದರೆ ಆ ಕುರಿತು ಹೆಚ್ಚು ತಲೆ ಕೆಡಿಸಿಕೊಳ್ಳಲು ಹೋಗಲಿಲ್ಲ. ಭಾರತ ತಂಡದ ಅನೇಕ ಆಟಗಾರರೂ ಮಧುಮಿತಾಳ ಸಾನ್ನಿಧ್ಯಕ್ಕೆ ಹಾತೊರೆದಿದ್ದರು. ಈ ಕಾರಣದಿಂದಾಗಿ ಮಧುಮಿತಾ ವಿನಯಚಂದ್ರನ ಬಳಿ ಕುಳಿತಿದ್ದು ಅನೇಕರ ಮನಸ್ಸಿನಲ್ಲಿ ಕಿಚ್ಚನ್ನೂ ಹಚ್ಚಿಸಿತ್ತು. ಆದರೆ ಯಾರೂ ಅದನ್ನು ತೋರ್ಪಡಿಸಿಕೊಳ್ಳಲಿಲ್ಲ ಅಷ್ಟೇ. ಆದರೂ ವಿನಯಚಂದ್ರನ ಪಕ್ಕ ಆಕೆ ಕುಳಿತಿದ್ದ ಕಾರಣ ಕುತೂಹಲದಿಂದ ನೋಡಿದ್ದು ಸಹಜವಾಗಿತ್ತು.
                  ಮಧುಮಿತಾಳಿಗೆ ವಿನಯಚಂದ್ರನ ಊರಿನ ಕುರಿತು ಕುತೂಹಲ ಮೂಡಿತ್ತು. ಅದೇ ರೀತಿ ವಿನಯಚಂದ್ರನಿಗೂ ಮಧುಮಿತಾಳ ಬಗೆಗೆ ಹಾಗೂ ಅವಳ ಕುಟುಂಬ, ಬಾಂಗ್ಲಾದಲ್ಲಿ ಅವಳಿರುವ ಜಾಗ, ಬಾಂಗ್ಲಾದೇಶದಲ್ಲಿರುವ ಹಿಂದುಗಳು, ಇಲ್ಲಿ ಅವರ ಪರಿಸ್ಥಿತಿ ಇತ್ಯಾದಿಗಳ ಬಗ್ಗೆ ಕೇಳಬೇಕೆಂದುಕೊಂಡಿದ್ದ. ಆದರೆ ಹೇಗೆ ಕೇಳುವುದು ಎಂದುಕೊಂಡ.
                    ಬಸ್ಸು ಮುಂದಕ್ಕೆ ಚಲಿಸುತ್ತಿತ್ತು. ಬಸ್ಸು ಸಾಗುತ್ತಿದ್ದ ದಾರಿಯಲ್ಲಿ ಸಿಗುತ್ತಿದ್ದ ಊರುಗಳೆಲ್ಲ ಹಿಂದೂ ಹೆಸರಿನವುಗಳೇ ಆಗಿದ್ದವು. `ಚನ್ನಾಗಿದೆ..ಹಿಂದೂ ಹೆಸರುಗಳು..' ಎಂದ ಮಧುಮಿತಾಳ ಬಳಿ ವಿನಯಚಂದ್ರ.
                    `ಒಂದಾನೊಂದು ಕಾಲದಲ್ಲಿ ಭಾರತದ್ದೇ ಭಾಗವಾಗಿತ್ತು. ಆಮೇಲೆ ಪಾಕಿಸ್ತಾನದ ಭಾಗವಾಗಿ ಈಗ ಬಾಂಗ್ಲಾದೇಶ ಎಂಬ ಹೆಸರನ್ನು ಪಡೆದುಕೊಂಡಿದ್ದರೂ ತನ್ನ ಹೆಸರನ್ನು ಬದಲು ಮಾಡಿಕೊಂಡಿಲ್ಲ. ಮಿರಪುರ, ಕಾಶೀನಾಥಪುರ, ಶಿವಾಲಯ, ಅಷ್ಟೇ ಏಕೆ ಢಾಕಾ ಎಂಬ ಹೆಸರೂ ತನ್ನ ಮೂಲ ಹೆಸರನ್ನೇ ಉಳಿಸಿಕೊಂಡಿವೆ. ಢಾಕಾ ಎಂದರೆ ಢಾಕಿಣಿ ದೇವಿಯ ಅಪಭ್ರಂಶವಾಗುತ್ತದೆ.  ಬಾಂಗ್ಲಾದೇಶದಲ್ಲಿ ಮುಸ್ಲಿಮರು ಹೆಚ್ಚಿರಬಹುದು. ಆದರೆ ಅಲ್ಲಲ್ಲಿ ಅಪ್ಪಟ ಹಿಂದೂ ಸಂಸ್ಕೃತಿ ಎದ್ದು ಕಾಣುತ್ತದೆ. ಆದರೆ ಇತ್ತೀಚೆಗೆ ಮಾತ್ರ ಪರಿಸ್ಥಿತಿ ಬದಲಾಗುತ್ತಿದೆ. ಬಾಂಗ್ಲಾದೇಶ ಅರಾಜಕತೆಯ ಬೀಡಾಗುತ್ತಿದೆ..' ಎಂದು ಹೇಳಿದಳು.
                     ಬಾಂಗ್ಲಾದೇಶದಲ್ಲಿ ಎಲ್ಲವೂ ಸರಿಯಿಲ್ಲ. ಏನೋ ನಡೆಯುತ್ತಿದೆ. ಆದರೆ ಮೇಲ್ನೋಟಕ್ಕೆ ಮಾತ್ರ  ಎಲ್ಲವೂ ಸರಿಯಿದ್ದಂತೆ ಬಿಂಬಿಸಿಕೊಳ್ಳಲಾಗುತ್ತಿದೆ. ಯಾರದ್ದೋ ಕಣ್ಣುಕಟ್ಟಲು, ಯಾರನ್ನೋ ಮೆಚ್ಚಿಸಲು ಸರ್ಕಸ್ ಮಾಡುತ್ತಿದ್ದಂತೆ ವಿನಯಚಂದ್ರನಿಗೆ ಅನ್ನಿಸಿತು. ನಿಜಕ್ಕೂ ಬಂಗಾಲದ ನಾಡು ಸುಂದರಿಯಾಗಿಯೇ ಇದ್ದಾಳಾ ಅನ್ನಿಸಿತು. ಬಂಗಾಲದ ದೇಶ ಮೇಲ್ನೋಟಕ್ಕೆ ಚನ್ನಾಗಿದೆ. ಆದರೆ ಒಳಗೊಳಗೆ ಹುಣ್ಣಾಗಿದೆಯೇನೋ ಅನ್ನಿಸಿತು. ತಾನೇ ಸೃಷ್ಟಿಸಿಕೊಂಡ ಗೊಂದಲದ ಗೂಡಿನಲ್ಲಿ ಸಿಲುಕಿ ಒದ್ದಾಡುತ್ತಿದ್ದಂತೆ ಅನ್ನಿಸಿತು.

(ಮುಂದುವರಿಯುತ್ತದೆ..)

No comments:

Post a Comment