Friday, January 31, 2014

ಚಿಪಗಿ ದ್ಯಾಮವ್ವ ಸನ್ನಿಧಿಯಲ್ಲಿ ವನಭೋಜನ

ವನಭೋಜನ ಎಂಬ ವಿಶಿಷ್ಟ ಸಂಪ್ರದಾಯ ಮರೆಯಾಗುತ್ತಿರುವ ಸಂದರ್ಭದಲ್ಲಿ ತಾಲೂಕಿನ ಚಿಪಗಿಯಲ್ಲಿ ವನಭೋಜನವನ್ನು ಹಮ್ಮಿಕೊಳ್ಳಲಾಗಿತ್ತು. ಗ್ರಾಮದ ದ್ಯಾಮವ್ವ ದೇವಾಲಯದ ಆವರಣದಲ್ಲಿ ನಡೆದ ವನಭೋಜನ ಯಶಸ್ವಿಯಾಯಿತು.

ಗ್ರಾಮಸ್ಥರೆಲ್ಲ ಸೇರಿ ತಮ್ಮೂರಿನ ಸನಿಹದ ಅರಣ್ಯಕ್ಕೆ ತೆರಳಿ ಒಂದು ದಿನ ಅಲ್ಲಿ ಊಟ ಮಾಡಿ, ಸಂತಸ ಪಡುವ ವಿಶಿಷ್ಟ ಹಾಗೂ ಉತ್ತಮ ಪರಂಪರೆಯೇ ವನಭೋಜನ. ಇದರಲ್ಲಿ ಭಾಗಿಯಾಗಿವ ಪ್ರತಿಯೊಬ್ಬ ಗ್ರಾಮಸ್ಥನೂ ವನಭೋಜನಕ್ಕಾಗಿ ತನ್ನ ಕೈಲಾದ ಸಹಾಯವನ್ನು ಮಾಡುತ್ತಾನೆ. 

ಗ್ರಾಮಸ್ಥರ ಒಗ್ಗೂಡುವಿಕೆ: 

ಒಬ್ಬರು ಅಕ್ಕಿ ತಂದರೆ ಇನ್ನೊಬ್ಬರು ಬೆಲ್ಲ, ಮತ್ತೊಬ್ಬರು ತೆಂಗಿನಕಾಯಿ, ಮಗದೊಬ್ಬರು ಹಾಲು, ಹೀಗೆ ಒಬ್ಬೊಬ್ಬ ವ್ಯಕ್ತಿಯೂ ಒಂದೊಂದು ವಸ್ತುಗಳನ್ನು ತರುವ ಮೂಲಕ ವನಭೋಜನದ ಯಶಸ್ವಿಗೆ ಕಾರಣನಾಗುತ್ತಾನೆ. ಗ್ರಾಮಸ್ಥರೆಲ್ಲರ ಸೇರುವಿಕೆಯಿಂದ ವನಭೋಜನವೂ ಅತ್ಯುತ್ತಮವಾಗಿ ಜರುಗುತ್ತದೆ. 

ವನಭೋಜನ ಇಡೀ ಗ್ರಾಮದ ಒಗ್ಗಟ್ಟಿನ ಪ್ರತೀಕ. ಗ್ರಾಮಸ್ಥರು ಒಂದುಗೂಡಿ ಮಾಡುವ ಈ ಕಾರ್ಯಕ್ರಮ ಏಕತೆಗೆ ಸಾಕ್ಷಿಯಾಗುವಂತದ್ದಾಗಿದೆ. ವರ್ಷಕ್ಕೊಮ್ಮೆಯೋ ಎರಡು ಸಾರಿಯೋ ತಮ್ಮೂರಿನ ಫಾಸಲೆಯಲ್ಲಿ ಅರಣ್ಯದಲ್ಲಿಯೋ, ನದಿ ದಂಡೆಯಲ್ಲಿಯೋ ಸೇರಿ ಅಡುಗೆ ಮಾಡಿ, ವನಭೋಜನ, ಹೊಳೆಯೂಟ ಕಾರ್ಯಕ್ರಮ ಪ್ರಾಚೀನ ಕಾಲದಲ್ಲಿ ಬಹಳಷ್ಟು ಸಾರಿ ನಡೆದ ಉದಾಹರಣೆಗಳು ಸಿಗುತ್ತವೆ.

ಹರಕೆ: 

ಚಿಪಗಿ ಊರಿನ ಗ್ರಾಮಸ್ಥರು ದ್ಯಾಮವ್ವ ದೇವಿಯ ಸನ್ನಿಧಿಯಲ್ಲಿ ವನಭೋಜನದ ಹರಕೆಯನ್ನು ಹೊತ್ತುಕೊಳ್ಳುತ್ತಾರೆ. ಊರಿನ ಯಾವುದೇ ವ್ಯಕ್ತಿ ಅಥವಾ ಮನೆಯವರು ವನಭೋಜನದ ಹರಕೆಯನ್ನು ಹೊತ್ತುಕೊಂಡರೂ ಇಡೀ ಊರಿನವರು ಇದರಲ್ಲಿ ಪಾಲ್ಗೊಳ್ಳುವುದು ಇಲ್ಲಿನ ವಿಶೇಷವಾಗಿದೆ. ಊರಿನವರಷ್ಟೇ ಅಲ್ಲದೇ ಹೊರ ಊರಿನ ಜನರೂ, ಸಂಬಂಧಿಕರೂ ಈ ವನಭೋಜನದಲ್ಲಿ ಪಾಲ್ಗೊಳ್ಳುತ್ತಾರೆ.ಮಳೆಗಾಲ ಕಳೆದ ನಂತರ ಆರಂಭಗೊಳ್ಳುವ ಚಿಪಗಿ ವನಭೋಜನ ಜಾತ್ರೆಯ ವರ್ಷವಾದರೆ ಜಾತ್ರೆಯ ವರೆಗೆ ನಡೆಯುತ್ತದೆ. ಅದಿಲ್ಲವಾದರೆ ಮಾರ್ಚ್ ತಿಂಗಳಿನ ವರೆಗೂ ನಡೆಯುತ್ತದೆ.  

ಶಿರಸಿ ಜಾತ್ರೆಯ ಮುನ್ನ ನಡೆಯುವ ಹೊರಬೀಡು ಕಾರ್ಯಕ್ರಮಕ್ಕೆ ಮೊದಲು ಇಲ್ಲಿ ವನಭೋಜನವನ್ನು ಹಮ್ಮಿಕೊಳ್ಳಲಾಗುತ್ತದೆ. ಶಿರಸಿ ಮಾರಿಕಾಂಬಾ ದೇವಿ ಜಾತ್ರೆಯ ನಂತರ ಚಿಪಗಿ ದ್ಯಾಮವ್ವನ ಸನ್ನಿಧಿಯಲ್ಲಿ ವನಭೋಜನವನ್ನು ಹಮ್ಮಿಕೊಳ್ಳುವುದಿಲ್ಲ. ವರ್ಷಕ್ಕೆ ಎಂಟಕ್ಕೂ ಹೆಚ್ಚಿನ ವನಭೋಜನಗಳು ನಡೆದ ದಾಖಲೆಗಳೂ ಇವೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ಬೆಳಗಿನ ಹಾಲು ಪಾಯಸಕ್ಕೆ ಮೀಸಲು ಊರಿನಲ್ಲಿ ವನಭೋಜನ ನಡೆಯುವ ದಿನದಂದು ಇಡೀ ಊರಿನವರು ತಮ್ಮ ತಮ್ಮ ಮನೆಗಳ ಬೆಳಗಿನ ಹೊತ್ತಿನ ಹಾಲನ್ನು ವನಭೋಜನಕ್ಕೆ ಬಳಕೆ ಮಾಡುತ್ತಾರೆ. ಅಂದಿನ ಹಾಲು ವನಭೋಜನದಲ್ಲಿ ಮಾಡಲಾಗುವ ಪಾಯಸಕ್ಕಾಗಿ ಬಳಸುತ್ತಾರೆ. ವನಭೋಜನಕ್ಕಾಗಿ ಸ್ಥಳೀಯರಿಗಿಂತ ಹೆಚ್ಚು ಹೊರ ಊರುಗಳಲ್ಲಿರುವವರೇ ಹರಕೆ ಹೊತ್ತುಕೊಳ್ಳುತ್ತಾರೆ ಎನ್ನುವುದೂ ವಿಶೇಷ ಸಂಗತಿಯಾಗಿದೆ. 

ದ್ಯಾಮವ್ವ ದೇವಸ್ಥಾನದಲ್ಲಿ ಪೂಜೆ ಮಾಡಲಾಗುತ್ತದೆ. ನಂತರ ವನಭೋಜನಕ್ಕಾಗಿ ಊರಿನವರೇ ಅಡುಗೆ ಮಾಡುತ್ತಾರೆ. ಊಟವನ್ನು ಬಡಿಸುವವರೂ ಅವರೇ. ಆದರೆ ಕಾರಣಾಂತರಗಳಿಂದ ಈಗ ಕೆಲವು ವರ್ಷಗಳಿಂದ ಅಡುಗೆ ಮಾಡುವವರನ್ನು ಕರೆಸಲಾಗುತ್ತಿದೆ. ಹಸಿರು ಮರಗಳ ನೆರಳಿನಲ್ಲಿ ಊಟಕ್ಕಾಗಿ ಬಾಳೆ ಎಲೆಗಳನ್ನು ಹಾಕಲಾಗುತ್ತದೆ. ಊಟದ ನಂತರ ಈ ಬಾಳೆಗಳನ್ನು ತೆಗೆದು ಎಸೆಯುವುದಿಲ್ಲ. ಬದಲಾಗಿ ಅವುಗಳನ್ನು ಹಾಗೆಯೇ ನೆಲದ ಮೇಲೆ ಬಿಡಲಾಗುತ್ತದೆ. ಈ ಬಾಳೆಗಳನ್ನು ದನಗಳು ಬಂದು ತಿನ್ನಬೇಕು. ವನಭೋಜನದಲ್ಲಿ ಮನುಷ್ಯನ ಜೊತೆಗೆ ಎಲ್ಲ ಪ್ರಾಣಿಗಳೂ ಸೇರ್ಪಡೆಯಾಗಬೇಕು ಎನ್ನುವ ಕಾರಣಕ್ಕಾಗಿ ಇಂತಹ ಸಂಪ್ರದಾಯವನ್ನು ತಂದಿರಬಹುದೆಂದು ಸ್ಥಳೀಯರಾದ ಆರ್.ವಿ. ಹೆಗಡೆ ಹೇಳುತ್ತಾರೆ.

ಆಧುನಿಕ ಸಮಾಜದ ಯಾಂತ್ರಿಕ ಜೀವನದ ಭರಾಟೆಯಲ್ಲಿ ಇಂತಹ ವಿಶಿಷ್ಟ ಕಾರ್ಯಕ್ರಮಗಳು ಸಮಾಜದಿಂದ ಮರೆಯಾಗದಂತೆ ನೋಡಿಕೊಳ್ಳಬೇಕಾದ ಅಗತ್ಯವೂ ಇದೆ.

 

(ಕನ್ನಡಪ್ರಭದಲ್ಲಿ ಜ.28ರಂದು ಬರೆದಿದ್ದ ಲೇಖನ)

No comments:

Post a Comment