(ನಾನು ತೆಗೆದ ಪೋಟೋ ಬ್ಲರ್ರಾದ ಕಾರಣ ಸಾಂದರ್ಭಿಕ ಚಿತ್ರ ಹಾಕಿದ್ದೇನೆ.) |
ನಿನ್ನೆ ರಾತ್ರಿ ಮನೆಯ ಕಡೆಗೆ ಹೊರಟಿದ್ದೆ.
ನಮ್ಮೂರ ದಾರಿ ಅಂಕುಡೊಂಕು.. ಗುಡ್ಡ ಹತ್ತಿಳಿದು ಸಾಗಬೇಕು..
ಮನೆಯಿನ್ನೇನು ಒಂದು ಕಿ.ಮಿ ದೂರವಿದೆ ಎನ್ನುವಾಗ ರಸ್ತೆಯಲ್ಲಿ ಒಂದಿಷ್ಟು ದನಗಳು ನಿಂತಿವೆ.
ಮೂರ್ನಾಲ್ಕು ರಸ್ತೆಯ ಪಾರ್ಶ್ವದಲ್ಲಿ ಮೇಯುತ್ತ ನಿಂತಿದ್ದವು.
ಹತ್ತಿರ ಹತ್ತಿರ ನಮ್ಮ ಮನೆಯ ಜೆರ್ಸಿ ದನದಷ್ಟು ದೊಡ್ಡವು.
ದನಗಳು ಕಳ್ ಮೇಯಲು ಬರುವುದು ಸಾಮಾನ್ಯ ಎಂದುಕೊಂಡು ಮುಂದಕ್ಕೆ ಹೋಗಲು ಅನುವಾದೆ.
ರಸ್ತೆಯ ಪಕ್ಕದ ಮಟ್ಟಿಯಲ್ಲಿ ಅದೆಲ್ಲಿತ್ತೋ.. ಒಂದು ದೈತ್ಯ ಕಾಡುಕೋಣ ಸರಕ್ಕನೆ ರಸ್ತೆಯ ಮೇಲೆ ಬಂದು ನಿಂತುಕೊಂಡಿತು..
ಬೈಕಿಗೆ ಸರಕ್ಕನೆ ಬ್ರೇಕ್ ಹಾಕಿದೆ.
ದನಗಳು ಹಾಗೂ ಕಾಡುಕೋಣ ಇದೆಂತಾ ನಮೂನಿ ಅಂದುಕೊಂಡೆ.
ಸರಿಯಾಗಿ ದಿಟ್ಟಿಸಿದಾ ಅವು ದನಗಳಲ್ಲ.. ಕಾಡೆಮ್ಮೆಕರುಗಳು..
ಐದಾರಿದ್ದವೇನೋ.. ಚಿಕ್ಕವು..
ಅವುಗಳಿಗೆ ಡಾನ್ ಎಂಬಂತೆ ಅನಾಮತ್ತು 10 ಅಡಿ ಎತ್ತರದ ದೈತ್ಯ ಕಾಡುಕೋಣ ರಸ್ತೆಯ ನಡುಮಧ್ಯದಲ್ಲಿ ನಿಂತುಕೊಂಡಿತ್ತು.
ನನಗೆ ಒಮ್ಮೆ ಕೈಕಾಲು ನಡುಕ ಆರಂಭವಾಯಿತಾದರೂ ಕಾಡೆಮ್ಮೆ ಎಂತದ್ದೂ ಮಾಡುವುದಿಲ್ಲ ಎನ್ನುವ ಹುಂಭ ಧೈರ್ಯ.
ಕಾಡುಕೋಣದ ಕೊಬ್ಬಿನ ಚರ್ಮದ ವಾಸನೆ ಮೂಗಿಗೆ ಅಡರುವಷ್ಟು ಹತ್ತಿರದಲ್ಲಿ ನಾನಿದ್ದೇನೆ.
ಒಂದಿಪ್ಪತ್ತು ಮೀಟರ್ ಇರಬಹುದು.
ತುರ್ತಾಗಿ ಮನೆ ಸೇರಿಕೊಳ್ಳುವ ಅವಸರ ನನಗಿತ್ತು..
ನಾನು ಮನೆಗೆ ಹೋಗೋಣ ಎಂದುಕೊಂಡರೆ ಕಾಡುಕೊಣ ದಾರಿಬಿಟ್ಟು ಇಳಿಯಲಿಲ್ಲ..
ನನ್ನನ್ನೇ ನೋಡಲಾರಂಭ ಮಾಡಿತ್ತು..
ತನ್ನ ಮರಿಗಳಿಗೆ ಇಂವ ಇನಾದರೂ ಮಾಡಿಬಿಟ್ಟಾನು ಎನ್ನುವ ಭಯವಿತ್ತೇನೋ.
ಮುಂದಿನ ಕಾಲಿನಿಂದ ನೆಲವನ್ನು ಕೆರೆಯಲಾರಂಭಿಸಿತು..
`ಅಯ್ಯೋ ದೇವ್ರೆ.. ಗ್ಯಾರಂಟಿ ಸತ್ತೆ..ಹ್ಯಾಂಗಂದ್ರೂ ಕಾಡುಕೋಣ ನನ್ನ ಮೇಲೆ ದಾಳಿ ಮಾಡುತ್ತದೆ..'
`ಕಾಡುಕೋಣದ ದಾಳಿಗೆ ಪತ್ರಕರ್ತ ಬಲಿ' ಎಂಬ ಸುದ್ದಿ ನಾಳೆ ಬರುತ್ತದೆಯೇ ಎಂಬ ದಿಗಿಲೂ ಆಯಿತು..
ನನ್ನ ದುರಾದೃಷ್ಟಕ್ಕೆ ನಮ್ಮೂರಿನಿಂದ ಆರೆಂಟು ಕಿಲೋಮೀಟರ್ ಫಾಸಲೆಯಲ್ಲಿರುವ ಒಂದು ಊರಿನಲ್ಲಿ ಎರಡು ಮೂರು ದಿನಗಳ ಹಿಂದೆ ತೋಟಕ್ಕೆ ಹೋಗಿದ್ದ ಗೌಡರೊಬ್ಬರ ಮೇಲೆ ಕಾಡುಕೋಣ ಏಕಾಏಕಿ ದಾಳಿ ಮಾಡಿ ಗಾಯಗೊಳಿಸಿದ್ದ ವಿಷಯ ನೆನಪಾಯಿತು. ಆ ಸುದ್ದಿಯನ್ನು ನಾನೇ ಬರೆದಿದ್ದರಿಂದ ಮತ್ತಷ್ಟು ಭೀತಿ ಹೆಚ್ಚಾಯಿತು.
ಸ್ವಲ್ಪ ಹೊತ್ತು ಬಿಟ್ಟರೆ ಪಕ್ಕಕ್ಕೆ ಹೋಗಬಹುದು ಎಂದು ಕಾದೆ.
ಊಹೂಂ ಪಕ್ಕಕ್ಕೆ ಹೋಗಲಿಲ್ಲ..
ಬೈಕಿನ ಹೆಡ್ ಲೈಟನ್ನು ಡಿಪ್-ಡಿಮ್ ಮಾಡಿದೆ..
ಬುಸ್ ಎಂದು ಶ್ವಾಸ ಬಿಟ್ಟಿತು ಕಾಡುಕೋಣ..
ಸುತ್ತಮುತ್ತ ನೋಡಿ ಗಾಡಿಯನ್ನು ಹಿಂದಕ್ಕೆ ತಿರುಗಿಸೋಣ ಎಂದುಕೊಂಡು ನೋಡಿದೆ..
ಯಾಕೋ ಮತ್ತೆ ಧೈರ್ಯ ಸಾಲಲಿಲ್ಲ.
10 ನಿಮಿಷ ಕಳೆದರೂ ಕಾಡೆಮ್ಮೆ ರಸ್ತೆ ಮಧ್ಯವೇ ಇತ್ತು..
ನಾನು ಕ್ಯಾಮರಾ ತೆಗೆಯಲೋ ಬೇಡವೋ ಎಂಬ ದ್ವಂದ್ವದಲ್ಲಿ ಬಿದ್ದೆ..
ರಾತ್ರಿಯಾಗಿದೆ.. ಕ್ಯಾಮರಾ ಫ್ಲಾಷ್ ಲೈಟ್ ಬಿದ್ದು ಎಲ್ಲಿ ಸಿಟ್ಟಿನಿಂದ ಕಾಡುಕೊಣ ನನ್ನ ಮೇಲೆ ಮುಗಿ ಬೀಳಬಹುದೋ ಎಂಬ ಭಯವಾಯಿತು.
ಕ್ಯಾಮರಾ ಕೈಯಲ್ಲಿ ಹಿಡಿದೆನಾದರೂ ಕ್ಲಿಕ್ಕಿಸಲಿಲ್ಲ..
ಅಷ್ಟರಲ್ಲಿ ಕೊಂಚ ಧೈರ್ಯ ಬಂದಂಗಾಯ್ತು..
ಕ್ಯಾಮರಾದ ಫ್ಲಾಷ್ ಆಫ್ ಮಾಡಿ ಕಾಡುಕೋಣದ ಪೋಟೋ ಕ್ಲಿಕ್ಕಿಸಿದೆ..
ಕಾಡುಕೋಣ `ಎಸ್ಟ್ ಪೋಟೋ ಬೇಕಾದ್ರೂ ಹೊಡ್ಕೋ..' ಎಂದು ನನ್ನ ಕ್ಯಾಮರಾಕ್ಕೆ ಪೋಸು ಕೊಟ್ಟಂತೆ ಅನ್ನಿಸಿತು.
ನನಗೆ ಒಮ್ಮೆ ಅಪ್ಪನ ನೆನಪಾಯಿತು.
ರಾತ್ರಿಯ ವೇಳೆ ಪೇಟೆ ಕೆಲಸ ಮುಗಿಸಿ ಬರುವ ಆತನಿಗೆ ನಮ್ಮೂರ ಫಾಸಲೆಯಲ್ಲಿ ಕಾಡೆಮ್ಮೆ ಸಿಗುವುದು ಸರ್ವೇ ಸಾಮಾನ್ಯ..
ಆಗೆಲ್ಲ ಅವುಗಳ ಜೊತೆಗೆ ಮಶ್ಕಿರಿ ಮಾಡುವ ಸ್ವಭಾವ ಆತನದ್ದು. ಕಾಡೆಮ್ಮೆ ಹಿಂಡಿನ ಬಳಿ ಹೋಗಿ ಎಮ್ಮೆಯಂತೆ `ವಾಂಯ್..' ಗುಡುವುದು ಆತನ ಹುಚ್ಚಾಟ.. ಒಂದೆರಡು ಸಾರಿ ಆತ ಹೀಗೆ ಕೂಗಿದ್ದಕ್ಕೆ ಆತನ ಹಿಂದೆಯೇ ನಮ್ಮ ಮನೆಯ ಹತ್ತಿರಕ್ಕೂ ಬಂದಿದ್ದವಂತೆ ಕಾಡುಕೋಣಗಳು..
ನಾನೂ ಸುಮ್ಮನೆ ಅವರ ಬಳಿ `ವಾಂಯ್..' ಅನ್ನಲೇ..? ಎಂದುಕೊಂಡೆ..
`ಯಾರಿಗೆ ಬೇಕು ಉಸಾಬರಿ..' ಎಂದಿತು ಮನಸ್ಸು.. ನಾಲಿಗೆಯಿಂದ ಶಬ್ದ ಹೊರಬರಲಿಲ್ಲ..
ಕಾಡುಕೋಣವನ್ನು ಬಿಟ್ಟು ಅದರ ಜೊತೆಗಿದ್ದ ಮರಿಗಳನ್ನು ನೋಡಿದೆ..
ಐದಾರಿದ್ದವು ಎಂದಿದ್ದೆನಲ್ಲ.. ಹೌದು.. ಮರಿಗಳೇ ನಮ್ಮ ಮನೆಯ ಜರ್ಸಿ ದನದಷ್ಟು ದೊಡ್ಡವಿದ್ದವು..
ಸಾಮಾನ್ಯವಾಗಿ ಇವನ್ನು ಮರಿ ಎನ್ನುವುದು ಕಷ್ಟ. ಆದರೆ ಚಿಕ್ಕ ಚಿಕ್ಕ ಮೊಳಕೆ ಕೋಡಿನ ಕಾರಣದಿಂದ ಅವನ್ನು ಮರಿಗಳು ಎನ್ನಬಹುದು..
ಮನೆಯಲ್ಲಿ ಸಾಕಿದರೆ ಕಾಣುವಂತಹ ಎಲುಬಿನ ಹಂದರವಲ್ಲ. ದಷ್ಟಪುಷ್ಟವಾಗಿದ್ದವು.
`ವಾವ್..' ಎನ್ನೋಣ ಎಂದರೂ ಶಬ್ದ ಹೊರಬರುತ್ತಿಲ್ಲ..
ಅದರಲ್ಲೊಂದು ಪುಟ್ಟ ಮರಿ.. ಹುಟ್ಟಿ ಆರೇಳು ದಿನಗಳಿರಬಹುದು..
ಬೆಳ್ಳಿಯಂತೆ ಬೆಳ್ಳಗಿತ್ತು..
ಪಾ..ಪ... ಕುಂಟುತ್ತಿತ್ತು..
ಏನಾಗಿರಬಹುದು ಎಂದುಕೊಂಡೆ..
ಬಿದ್ರಕಾನಿನಲ್ಲಿ ಕಾಲು ಒಡೆ ಬಾಯಿ ಒಡೆ ರೋಗಕ್ಕೆ ಯುವ ಕಾಡುಕೋಣವೊಂದು ಸಾವನ್ನಪ್ಪಿರುವ ಸುದ್ದಿ ಬಂದಿತ್ತು ಇದಕ್ಕೂ ಹಂಗೆ ಆಗಿರಬಹುದಾ..? ಎಂದುಕೊಂಡೆ..
ಮರಿಗಳು.. ಓಡುವ ಆಡುವ ಭರದಲ್ಲಿ ಬಿದ್ದು ಪೆಟ್ಟು ಮಾಡಿಕೊಂಡಿರಬಹುದು ಎನ್ನಿಸಿತು..
ಇಷ್ಟು ಹೊತ್ತು ಕಾಡುಕೋಣ ಎಂದರೂ ಅದು ಗಂಡೋ ಹೆಣ್ಣೋ ಗೊತ್ತಾಗಲಿಲ್ಲ ನೋಡಿ..
ಮರಿಗಳಿವೆಯಾದ್ದರಿಂದ ತಾಯಿಯೇ ಇರಬೇಕು ಎಂದುಕೊಂಡೆ..
ಸ್ವಲ್ಪ ಹೊತ್ತಾದ ಮೇಲೆ ಆ ದೈತ್ಯ ಕಾಡೆಮ್ಮೆ/ಕೋಣಕ್ಕೆ ನನ್ನ ಪೆಚ್ಚು ಪೆಚ್ಚು ಮುಖ, ಬೆದರಿದ ರೀತಿ ಕಂಡು ಬೇಜಾರು ಬಂದಿರಬಹುದು ಅಥವಾ ನನ್ನಿಂದ ಯಾವುದೇ ತೊಂದರೆಯೂ ಆಗುವುದಿಲ್ಲ ಎಂಬ ಭರವಸೆಯಿಂದಲೇನೋ ಹಗೂರಕ್ಕೆ ದಾರಿಯಿಂದ ನನ್ನ ಹತ್ತಿರಕ್ಕೆ ಬಂದಿತು. ನನ್ನೆದೆಯಲ್ಲಿ ಮತ್ತೆ ಢವ ಢವ..
ಬೈಕ್ ಸ್ಟಾಂಡ್ ಹಾಕಿ ಓಡಲು ಟ್ರೈಮಾಡುತ್ತಿದ್ದಂತೆ ಕಾಡುಕೋಣ ನಿಧಾನವಾಗಿ ರಸ್ತೆಯಿಂದ ಪಕ್ಕಕ್ಕೆ ಸಾಗಿತು..
ಅದರ ಮರಿಗಳ ಪಂಗಡವೂ ನಿಧಾನಕ್ಕೆ ಸಾಗಿತು..
ಪಕ್ಕಕ್ಕೆ ಹೋದ ಕಾಡೆಮ್ಮೆ ಒಮ್ಮೆ ತಿರುಗಿ ನೋಡಿತು..
ಬಹುಶಃ ನಾನು ಹೋದ್ನಾ ಇಲ್ವಾ ನೋಡಿತೇನೋ..
ಅಥವಾ ಅದರ ಹಿಂದೆ ಬರುತ್ತಿರುವ ಮರಿಗಳೆಗ ತೊಂದರೆ ಕೊಟ್ಟೆನಾ ಎಂದು ನೋಡಿರಲೂಬಹುದು..
ನಾನೊಮ್ಮೆ ನಿರಾಳ..
ಇಷ್ಟು ಮಾಡಿದ್ದೇ ತಡ.. ಬೈಕಿಗೆ ಮತ್ತಷ್ಟು ಎಕ್ಸಲರೇಟ್ ಕೊಟ್ಟು ರೊಂಯ್ ಅನ್ನಿಸಿ ಓಡಿಸಿದೆ..
ಮುಂದಕ್ಕೆ ಹೊದಂತೆ ಹಿಂದಕ್ಕೆಲ್ಲ ಚರಕ್ ಪರಕ್ ಸದ್ದು..
ನನ್ನ ಬೆನ್ನತ್ತಿದೆ ಕಾಡೆಮ್ಮೆ ಎಂದುಕೊಂಡು ರೊಯ್ಯನೆ ಮುಂದಕ್ಕೆ ಹೋದೆ..
ಹಿಂದಕ್ಕೆ ತಿರುಗಿ ನೋಡುವ ಸಾಹಸವನ್ನೂ ಮಾಡಲಿಲ್ಲ..
ಸುಮಾರು ದೂರ ಬಂದಮೇಲೆ ಇಲ್ಲ.. ಕಾಡೆಮ್ಮೆ ಬೆನ್ನತ್ತಿಲ್ಲ ಎನ್ನಿಸಿತು..
**
ಮನೆಗೆ ಬಂದವನೇ ಮನೆಯಲ್ಲಿ ಅಪ್ಪ-ಅಮ್ಮನ ಬಳಿ ಈ ಸಂಗತಿ ಹೇಳಿದೆ..
ಅಮ್ಮ ಗಾಬರಿಯಾದರು..
ಅಪ್ಪ ಮತ್ತದೇ ಹುಚ್ಚಾಟ.. `ತಮಾ.. ಕಾಡೆಮ್ಮೆ ಎಂತಾ ಮಾಡ್ತಿಲ್ಯಾ..' ಎಂದ..
ನನ್ನ ಪಡಿಪಾಟಲನ್ನು ಹೇಳಿದೆ..
`ಮೊನ್ನೆ ಯಂಗೆ ಕಾನಬೈಕ್ಲು ಹತ್ರ ಸಿಕ್ಕಿತ್ತಾ.. ಒಂದ್ ದೊಡ್ಡದು ಉಳಿದವು ಸಣ್ಣವು.. ಅಲ್ದನಾ..' ಎಂದ..
ಹೌದು ಅಂದೆ
ಹದಾ.. ಇತ್ಲಾಬದಿಗೆ ಇದ್ದ ಹೇಳಾತು..
`ಕಾಡುಕೋಣ ಪಾಪದವ್ವಾ ತಮಾ.. ನಾವೆಂತಾದ್ರೂ ಮಾಡಿದ್ರೆ ಮಾತ್ರ ಅವ್ವು ಮೈಮೇಲೆ ಬರ್ತಾ..
ಮರಿ ಇದ್ದಿದ್ದಕ್ಕೆ ಅದು ರಸ್ತೆಯಲ್ಲಿ ನಿನ್ನ ಅಡ್ಡಗಟ್ಟಿದ್ದು ಕಾಣ್ತು..' ಎಂದು ತನಗೆ ಗೊತ್ತಿದ್ದನ್ನು ಹೇಳಿದ..
`ಆ ಮರಿ ಕಾಲು ಕುಂಟಾಕ್ತಿತ್ತು..' ಎಂದೆ..
`ಕಾಲು-ಬಾಯಿ ರೋಗ ಬಂದಿಕ್ಕಾ.. ಎಂದವನು `ಹುಲಿ ಹಿಡಿದಿಕ್ಕಾ..' ಎಂದ
`ಹುಲಿ..!? ನಮ್ ಬದಿಗೆ ಹುಲಿ ಎಲ್ಲಿದ್ದಾ' ಎಂದೆ..
`ಚಳಿಗಾಲವಲಾ.. ಹುಲಿ ಬತ್ವಾ.. ಕಾಡೆಮ್ಮೆ ಗ್ವಾಲೆ ಇದ್ದು ಹೇಳಾದ್ರೆ ಅದರ ಹಿಂದೆ ಹುಲಿಯೂ ಬರ್ತಾ.. ಹುಲಿಗೂ ಆಹಾರ ಬ್ಯಾಡದಾ.. ಮರಿ ಕಂಡು ಹಿಡಿಯಲೆ ನೋಡಿಕ್ಕು..'ಎಂದ..
ನನಗೆ ಡಿಸ್ಕವರಿ ಚಾನಲ್ ನೆನಪಾಯಿತು..
`ಚಳಿಗಾಲದಲ್ಲಿ ನಮ್ಮೂರ್ ಬದಿಗೆ ಕಾಡುಕೋಣ-ಹುಲಿ ಇರ್ತ್ವಾ.. ನಮ್ಮೂರ ಬ್ಯಾಣದಲ್ಲಿ ಹುಲ್ ಮೆಂದಕಂಡು ಮುತ್ಮುರ್ಡು ಶಾಲೆ ಹತ್ರ ಇಳದು ಗದ್ದೆ ಬೈಲಿಗೆ ಹೋಗಿ ಅಲ್ಲಿ ಹೊಳೆಯ ನೀರು ಕುಡಿತ.. ನಿಂಗೆ ಸಿಕ್ಕಿದ್ದ ಮೇಲೆ ಏಕಾದಶಿ ಗುಡ್ಡ ಹತ್ತಿ ಅಲ್ಲಿಗೇ ಹೋಗ್ತ ನೋಡು..' ಎಂದು ಅಪ್ಪ ಕಾಡುಕೋಣಗಳ ರೊಟೀನು ಕಾರ್ಯಗಳನ್ನು ಹೇಳಿದ.
**
ನನಗೆ ಕಾಡುಕೋಣ ಹೊಸದಲ್ಲ.. ಈ ಹಿಂದೆ ಶಾಲೆಗೆ ಹೋಗುವಾಗಲೆಲ್ಲ.. ಕಾಡುಕೋಣಗಳ ದರ್ಶನವಾಗುತ್ತಿತ್ತು.. ಚುಮು ಚುಮು ಚಳಿಯ ಮಂಜಿನ ಮುಂಜಾನೆಯಲ್ಲಿ ನಮ್ಮೂರಿನ ಪರಮಯ್ಯನ ಬ್ಯಾಣದಲ್ಲಿ ಗಮಯನ ಗ್ವಾಲೆ ಮೇಯುತ್ತಿದ್ದರೆ ನಾನು ಅರ್ಧ ಭಯ ಹಾಗೂ ಅರ್ಧ ಕುತೂಹಲದಿಂದ ನೋಡಿದ್ದೆ. ಅವೂ ಆ ಸಂದರ್ಭದಲ್ಲಿ ಮೇಯುವುದನ್ನು ಬಿಟ್ಟು ನನ್ನನ್ನು ತಲೆಯೆತ್ತಿಕೊಂಡು ನೋಡುತ್ತಿದ್ದವು.. ಗ್ವಾಲೆಯಲ್ಲಿನ ಒಂದೆರಡು ಪುಕ್ಕಲುಗಳು ನನ್ನನ್ನು ಕಂಡಿದ್ದೆ ದಡಕ್ಕನೆ ಓಡಲು ಯತ್ನಿಸುತ್ತಿದ್ದವು.. ಅವನ್ನು ಉಳಿದವುಗಳು ಹಿಂಬಾಲಿಸುತ್ತಿದ್ದವು.
ಆ ನಂತರ ನಾನು ಕಾಲೇಜಿಗೆ ಹೋಗುವಾಗ ಹೊಸದಾಗಿ ಬೈಕು ಕಲಿತಿದ್ದೆ. ದಣಿ ದಣಿ ಡಬ್ಬಲ್ ರೈಡಿಂಗ್ ಮಾಡುವುದು ರೂಢಿಯಾಗಿತ್ತು.. ಒಂದು ಚುನಾವಣೆಯ ಸಂದರ್ಭ ಅಮ್ಮನನ್ನು ಕರೆದುಕೊಂಡು ಚುನಾವಣೆಯಲ್ಲಿ ಮತಹಾಕಿ ವಾಪಾಸಾಗುತ್ತಿದ್ದೆವು.. ನಡುಮದ್ಯಾಹ್ನ.. ಕಾಡೆಮ್ಮೆಗಳ ಹಿಂಡು ನಮಗೆದುರಾಗಿತ್ತು.. ಸರಕ್ಕನೆ ಕಾಣಿಸಿಕೊಂಡ ಕಾಡೆಮ್ಮೆಯಿಂದಾಗಿ ನಮಗರಿವಿಲ್ಲದಂತೆ ಕೂಗು ಹೊರಬಿದ್ದಿತ್ತು.. ನಮ್ಮ ಕೂಗನ್ನು ಕೇಳಿ ಗಮಿಯನ ಗ್ವಾಲೆ ದಿಕ್ಕಾಪಾಲಾಗಿ ಓಡಿ ಹೋಗಿದ್ದವು.. ಆ ಗಡಬಡೆಯಲ್ಲಿ ನಾನು ಬೈಕನ್ನು ಕೈಬಿಟ್ಟು ದಬ್ಬಾಕದಿದ್ದುದೇ ಪುಣ್ಯ..
ಆ ನಂತರದ ದಿನಗಳಲ್ಲಿ ಕಾಡುಕೋಣಗಳನ್ನು ಕಂಡಿದ್ದೆನಾದರೂ ಇಷ್ಟು ಹತ್ತಿರದಲ್ಲಿ ಮುಖಾಮುಖಿಯಾಗಿರಲಿಲ್ಲ. ಕಾಡುಕೋಣದ ಮೈಯ ಕಂಪು ಮೂಗಿಗೆ ತಾಗುವಷ್ಟು ಸನಿಹ..
`ಹ್ವಾ.. ಅದು ಹೊತ್ತಿದ್ರೆ ಯಂತಾ ಮಾಡಕಾಗಿತ್ತಾ..' ಅಪ್ಪನನ್ನು ಕೇಳಿದೆ..
`ತಮಾ.. ಕಾಡೆಮ್ಮೆಯಾಗಲಿ ಅಥವಾ ಇನ್ಯಾವುದೇ ಕಾಡು ಪ್ರಾಣಿಯಾಗಲಿ ಸುಮ್ಮ ಸುಮ್ಮನೆ ದಾಳಿ ಮಾಡುವುದಿಲ್ಲ.. ಅವಕ್ಕೆಂತಾದ್ರೂ ತೊಂದರೆಯಾದರೆ ಅಥವಾ ನಾವು ತೊಂದರೆ ಮಾಡಿದರೆ ಮಾತ್ರ ಅದು ದಾಳಿ ಮಾಡ್ತು.. ಸುಮ್ ಸುಮ್ನೆ ಜಗಳ ಮಾಡವು, ಮೈಮೇಲೆ ಏರಿ ಬರದು ಅಂದ್ರೆ ಮನುಷ್ಟು ಒಬ್ನೇಯಾ ನೋಡು, ಎಂದ ಅಪ್ಪ..
`ನನಗೂ ಹೌದೆನ್ನಿಸಿತು..'
`ಮತ್ತೆ ಸಿಕ್ಕರೆ ಕಾಡೆಮ್ಮೆಯನ್ನು ಮುದ್ದು ಮಾಡಬೇಕು ಎನ್ನಿಸುತ್ತಿದೆ..' ಎಂದೆ..
ಅಂತ ಹುಚ್ಚಾಟ ಬಿಟ್ ಬಿಡು ಎಂದು ಮನೆಯಲ್ಲಿ ವಾರ್ನಿಂಗ್ ಬೆಲ್ ಬಾರಿಸಿತು..
ಮೊದ ಮೊದಲು ಕಾಣುತ್ತಿದ್ದಂತಹ 10-15 ಕಾಡುಕೋಣಗಳ ಹಿಂಡು ಈಗಿಲ್ಲ.. ಬದಲಾಗಿ 6-7ಕ್ಕೆ ಇಳಿದಿದೆ..
ನಮ್ಮೂರು ಕಡೆಗಳಲ್ಲಿ ಹೇರೂರು, ಹೆಗಡೆಕಟ್ಟಾ, ರೇವಣಕಟ್ಟಾ ಕಡೆಯವರು ಆಗಾಗ ಬೇಟೆ ಬರುವವರುಂಟು.. ಹೀಗೆ ಬರುವವರು ಕಾಡೆಮ್ಮೆ ಹೊಡೆಯುತ್ತಾರೆ ಎಂದು ಕೇಳಿದ್ದೆ.. ಅದಕ್ಕೆ ಅವುಗಳ ಸಂಖ್ಯೆ ಕಡಿಮೆಯಾಗಿದೆ ಎಂದೂ ಕೇಳಿದ್ದೆ..
ಇನ್ನು ಮುಂದೆ ನಮ್ಮ ಭಾಗದಲ್ಲಿ ಬೇಟೆಗೆ ಯಾರಾದರೂ ಬಂದರೆ ಅವರಿಗೆ ತಡೆಯೊಡ್ಡಬೇಕು ಎಂದುಕೊಂಡಿದ್ದೇನೆ..
ಕಾಡೆಮ್ಮೆಯ ಬೇಟೆಯನ್ನು ತಡೆಯಬೇಕು ಎಂಬ ನಿರ್ಧಾರ ನನ್ನದು..
ಆದರೂ ಇನ್ನೊಮ್ಮೆ ಕಾಡುಕೋಣದ ಗ್ವಾಲೆ ಸಿಕ್ಕಾಗ ಅವುಗಳೆದುರು ನಿಂತು `ವಾಂಯ್..' ಅನ್ನಬೇಕು ಎನ್ನಿಸುತ್ತಿದೆ..
ಅದಕ್ಕಾಗಿ ಕಾಯುತ್ತಿದ್ದೇನೆ..!!
No comments:
Post a Comment