Sunday, January 12, 2014

ಎಣ್ಣೆ ಸುಬ್ಬಣ್ಣ ಮಿಲಿಯನೇರಾದದ್ದು..

ಎಣ್ಣೆ ಸುಬ್ಬಣ್ಣ...
                ಇಂತದ್ದೊಂದು ಹೆಸರಿನ ವ್ಯಕ್ತಿಯನ್ನು ಮೊನ್ನೆ ಮೊನ್ನೆಯವರೆಗೂ ಅಸಲಿ ಹೆಸರಿನಿಂದ ಕರೆದವರು ಕಡಿಮೆಯೇ.        ಈಗೊಂದು ದಶಕದ ಹಿಂದಿನಿಂದ ಈ ಹೆಸರು ನಮ್ಮ ಭಾಗದಲ್ಲಿ ಬಹಳ ಹೆಸರುಮಾತನ್ನು ಪಡೆದುಕೊಂಡಿತ್ತು. ಯಾರ ಬಾಯಲ್ಲಿ ಕೇಳಿದರೂ ಎಣ್ಣೆ ಸುಬ್ಬಣ್ಣ ಎಂದರೆ ಆತನ ಚಹರೆ ಕಣ್ಣಮುಂದೆ ಬರುತ್ತಿತ್ತು. `ಓ ಅವ್ನಾ.. ಯಂಗೊತ್ತಿದ್ದು... ಮಾರಾಯಾ ಆವತ್ತು ಹಿಂಗಾಗಿತ್ತು ಅವ್ನ ಕಥೆ.. ' ಎಂದು ಹೇಳುವಷ್ಟು ಚಿರಪರಿಚಿತನಾಗಿದ್ದ ಎಣ್ಣೆ ಸುಬ್ಬಣ್ಣ..
                ಎಣ್ಣೆ ಸುಬ್ಬಣ್ಣ ಎಂಬ ಹೆಸರೇ ಆತನ ವಿಶೇಷ ಗುಣಕ್ಕೆ ಕಾರಣವಾದ್ದರಿಂದ ಈ ಬರಹದ ಕೊನೆಯವರೆಗೂ ಆತನನ್ನು ಇದೇ ಹೆಸರಿನಿಂದ ಕರೆಯುತ್ತೇನೆ. ಬೇಸರಿಸಬೇಡಿ. ಎಣ್ಣೆ ಸುಬ್ಬಣ್ಣ ನಮ್ಮ ನಿಮ್ಮತೆಯೇ ಕಾಮನ್ ಮ್ಯಾನ್. ಬಹುಶಃ ಎಣ್ಣೆ ಎಂಬ ಹೆಸರು ಹಾಗೂ ಎಣ್ಣೆಯೇ ಆತನ ಬದುಕು ಬದಲಾಗಲು ಕಾರಣವಾಯಿತು ಎಂಬುದು ಜೋಕಲ್ಲ.
                 ನಮ್ಮ ಸರ್ವೆ ನಂಬರಿನಲ್ಲಿ ಸುಬ್ಬಣ್ಣ ಎಂದರೆ ಯಾರಿಗೂ ಗೊತ್ತಾಗುವುದಿಲ್ಲ. ಸುಬ್ಬಣ್ಣನ ನಿಜ ನಾಮಧೃಯವಾದ ಸುಬ್ರಮಣ್ಯ ಹೆಗಡೆ ಎಂದರೂ ಹಲವರು ಯಾರಿರಬಹುದು ಎಂದು ತಲೆ ಕೆರೆದುಕೊಳ್ಳುತ್ತಾರೆ. ಆದರೆ ಎಣ್ಣೆ ಸುಬ್ಬಣ್ಣ ಎಂದರೆ ಸಾಕು ಎಲ್ಲರೂ ಹೌದು ಹೌದು ಎಂದು ಹೇಳಿ ಗುರುತು ಹಿಡಿದು ಹೇಳುತ್ತಾರೆ. ಇಂತಹ ಸುಬ್ಬಣ್ಣನ ಈಗಿನ ಚಹರೆಯನ್ನು ಹೇಳುವ ಮೊದಲು ದಶಕದ ಹಿಂದೆ ಹೇಗಿದ್ದ ಎಂಬುದನ್ನು ಹೇಳಿಕೊಂಡು ಮುಂದೆ ಹೋಗುತ್ತೇನೆ.
                 ಗಿಡ್ಡ ಬೆಲ್ ಬಾಟಮ್ ಪ್ಯಾಂಟು, ಬಿಳಿ ಬಣ್ಣದ ಮಾಸಲು ಅಂಗಿ ಮೇಲ್ನೋಟಕ್ಕೆ ಅಂದಿನ ಎಣ್ಣೆ ಸುಬ್ಬಣ್ಣನ ಚಹರೆ. ಪ್ಯಾಂಟಿನ ಮುಂಭಾಗದ ತುದಿ ಪಾದಕ್ಕಿಂತ ತುಸು ಜಾಸ್ತಿ ಮೇಲ್ಭಾಗದಲ್ಲಿಯೇ ಇದ್ದರೆ ಹಿಂಭಾಗ ಮಾತ್ರ ಕಾಲಿಗೆ ಹಾಕಿದ್ದ ಕ್ಯಾನವಾಸ್ ಬೂಟಿನ ಅಡಿಗೆ ಸಿಕ್ಕಿ ಮಣ್ಣು ಮಣ್ಣು. ಅಂದಹಾಗೆ ಹಾಕಿದ ಪ್ಯಾಂಟು ಒಂದಾನೊಂದು ಕಾಲದಲ್ಲಿ ಕಪ್ಪಾಗಿದ್ದು ನಂತರದ ದಿನಗಳಲ್ಲಿ ಅದು ಹಲವು ವರ್ಣಗಳ ಮಿಶ್ರಣವಾಗಿದ್ದೂ ಇದೆ. ಕ್ಯಾನವಾಸ್ ಬೂಟಿನ ಕಥೆಯೂ ಅದೇ. ತನ್ನ ಅಸಲಿ ಬಣ್ಣವಾದ ನೀಲಿಯನ್ನು ಅದು ಯಾವತ್ತೋ ಕಳೆದುಕೊಂಡಿದೆ. ಪರಿಣಾಮವಾಗಿ ಅದು ಧೂಳಿನ ಬಣ್ಣಕ್ಕೆ ತಿರುಗಿ ಸಮಾನತೆಯ ತತ್ವವನ್ನು ಸಾರುತ್ತಿದೆ. ಸುಬ್ಬಣ್ಣ ಎಂದೂ ಸಲೀಸಾಗಿ ನಡೆದವನಲ್ಲ. ತೆಪರು ತೆಪರಾಗಿ ಹೆಜ್ಜೆ ಹಾಕುತ್ತ ಕೈಯಲ್ಲೊಂದು ಅರ್ಧ ಹರಿದ ಚೀಲವನ್ನು ಹಿಡಿದುಕೊಂಡು ಎತ್ತ ಕಡೆಯಾದರೂ ಹೊರಟರೆ ಆತನಿಗೆ ತೃಪ್ತಿ. ಇನ್ನು ಸುಬ್ಬಣ್ಣ ಮಾತನಾಡಲು ಹಿಡಿದ ಎಂದರೆ ಹೆಚ್ಚಿನವರಿಗೆ ಅದು ಅರ್ಥವಾಗುವುದಿಲ್ಲ. ಅಷ್ಟು ವಿಚಿತ್ರ. `ಯೇ ಇವ್ನೆ.. ಯಂಗೆ ಇಲ್ಲಿಗೆ ಹೋಗಕಾಗಿತ್ತು.. ಇದಕ್ಕೆ ಎಂತಾ ಮಾಡವು..' `ಇವರ ಪರಿಚಯ ಆಜಿಲ್ಲೆ ಕಾಣ್ತು ಅಲ್ಲದಾ.. ಇವ್ರು.. ಅಂದ್ರೆ ಅದೇ ಅವ್ರಾ.. ಇದರ ಗಂಡ ಆಗಬೇಕು ಅವರು..' ಎಂದು ಹೇಳಿದರೆ ನಿಮ್ಮಲ್ಲಿ ಹೆಚ್ಚಿನವರಿಗೆ ತಲೆಬುಡ ಅರ್ಥವಾಗಲಿಲ್ಲ ಅಲ್ಲವೇ.. ಸುಬ್ಬಣ್ಣನ ಮಾತಿನ ವೈಖರಿಯೇ ಹಾಗಿತ್ತು. ಇದು, ಅದು ಎಂದು ಹೇಳದಿದ್ದರೆ ಆತನಿಗೆ ಮಾತೇ ಹೊರಳುತ್ತಿರಲಿಲ್ಲ.. ಇಂವನನಾ.. ಇಂವ ಅಂವನಾ.. ಎಂದು ಆತನ ಮೇಲೆ ತಮಾಷೆ ಮಾಡುವವರೂ ಹಲವಿದ್ದರು.
               ಇಂತಹ ಎಣ್ಣೆ ಸುಬ್ಬಣ್ಣ ಹೆಸರಿಗೆ ಬಿಳಿ ಬಣ್ಣದ ಅಂಗಿ ಹಾಕುತ್ತಾನಾದರೂ ಅದು ಬಿಳಿಯ ಬಣ್ಣವೇ ಎಂದು ಹೇಳುವುದು ಕಷ್ಟ. ಏಕೆಂದರೆ ಆತ ಹಾಕಿದ್ದ ಅಂಗಿ ಬಿಳಿಯದ್ದೇ ಆಗಿತ್ತು ಎನ್ನುವುದಕ್ಕೆ ಅನುಮಾನವಾಗುವಷ್ಟು ಬಣ್ಣ ಬದಲಾಗಿದೆ. ಅಂಗಿಯ ಮೇಲ್ಭಾಗದಲ್ಲಿ ಅರ್ಧ ಬಾಯಿಗೆ ಹಾಕಿದ್ದ ಕವಳದ ಕೆಂಪಿನ ಬಣ್ಣವಾದರೆ ಕೆಳ ಅರ್ಧ ಭಾಗ ಹಾರುವ ಧೂಳಿನ ಬಣ್ಣ ಸೇರಿದೆ. ಎಣ್ಣೆ ಸುಬ್ಬಣ್ಣ ತಾನು ಹೋದ ಕಡೆಯಲ್ಲೆಲ್ಲ ಗೋಡೆಗೆ ಅಥವಾ ಇನ್ಯಾವುದೇ ಬೋರ್ಡಿಗೆ ಸಾದಿಕೊಂಡು ನಿಲ್ಲುವುದರಿಂದ ಆತನ ಅಂಗಿಯ ಬಣ್ಣ ಬದಲಾಗಿದೆ ಎನ್ನುವುದು ಎಲ್ಲರೂ ಹೇಳುವ ಮಾತು. ಅದು ಹೌದೂ ಅನ್ನಿ. ಎಣ್ಣೆ ಸುಬ್ಬಣ್ಣ ಆ ದಿನಗಳಲ್ಲಿ ಪಕ್ಕಾ ಅಡಿಕೆ ಬೆಳೆಗಾರ. ಹೆಸರಿಗೆ ಸಾಕ್ಷಿ ಎಂಬಂತೆ ಕವಳ ಹಾಕಿ ಕೆಂಪಡಿರುವ ಹಲ್ಲುಗಳು ಆತನ ವೃತ್ತಿಯನ್ನು ಸಾರಿ ಹೇಳುತ್ತಿದ್ದವು.
               ಸುಬ್ಬಣ್ಣ ಎಂಬ ಆಮ್ ಆದ್ಮಿ ಎಣ್ಣೆ ಸುಬ್ಬಣ್ಣ ಎಂದು ಹೆಸರು ಗಳಿಸಿಕೊಳ್ಳಲು ಕಾರಣವಿದೆ.  ಸುಮ್ ಸುಮ್ನೆ ಹೆಸರಿನ ಮುಂದೆ ಇನ್ನೊಂದು ಶಬ್ದ ಇಟ್ಟುಕೊಳ್ಳಲು ಆತನೇನು ಕನ್ನಡ ಸಿನಿಮಾದ ಹೊಸ ನಟರಲ್ಲೊಬ್ಬನೇ? ಸೊಖಾ ಸುಮ್ಮನೆ ಈ ಹೆಸರು ಬಂದಿಲ್ಲ ನೋಡಿ. ಸುಬ್ಬಣ್ಣ ಹುಟ್ಟಿದ್ದು ಅವಿಭಕ್ತ ಕುಟುಂಬದಲ್ಲಾದರೂ ಮಧ್ಯವಯಸ್ಸಿಗೆ ಬರುವ ವೇಳೆಗೆ ಮನೆಯಲ್ಲಿ ಹಿಸ್ಸೆ ನಡೆದ ಕಾರಣ ಆತನಿಗೆ ಚಿಕ್ಕ ಹಿಡುವಳಿದಾರ ಎನ್ನುವ ಬಿರುದು ಲಭ್ಯವಾಗಿತ್ತು. ಹಿಸ್ಸೆಗೆ ಮುಂಚೆ ಮನೆಯ ಯಜಮಾನನಾಗಿ ಉರಾಉರಿ ಮಾಡಿದ್ದರೂ ಹಿಸ್ಸೆಯಾದ ನಂತರ ಬದುಕು ನಡೆಸುವುದು ಕಷ್ಟ ಎನ್ನಿಸುವಂತಹ ಸನ್ನಿವೇಶಕ್ಕೆ ಆತ ತಳ್ಳಲ್ಪಟ್ಟಿದ್ದ. ಅಜ್ಜ, ಅಪ್ಪಂದಿರಾದಿಯಾಗಿ ಹಿರಿಯರು ಮಾಡಿದ್ದ ಸಾಲದಲ್ಲಿ ಹೆಚ್ಚಿನ ಪಾಲು ಸುಬ್ಬಣ್ಣನ ತಾಬಾ ಬಂದ ಕಾರಣ ಆತನಿಗೆ ಆ ದಿನಗಳಲ್ಲಿ ತಾನು ಯಾಕಾದರೂ ಹಿಸ್ಸೆಯಾದೆನೋ ಅನ್ನಿಸಿದ್ದಂತೂ ಸುಳ್ಳಲ್ಲ. ಹೀಗಿರುವಾಗ ಆತನ ಕೈ ಹಿಡಿದಿದ್ದು ಎಣ್ಣೆ.
              ಕನ್ನಡ ಪದಕ್ಕೆ ಹನ್ನೆರಡು ಅರ್ಥವಿರುವ ಕಾರಣ ಎಣ್ಣೆಯೆಂದರೆ ತಪ್ಪು ತಿಳಿದುಕೊಳ್ಳುವವರೇ ಅಧಿಕ. ಈ ಎಣ್ಣೆ ನೀವಂದುಕೊಂಡಂತೆ ಆ ಎಣ್ಣೆಯಲ್ಲ. ಈ ಎಣ್ಣೆಯೇ ಬೇರೆ. ನೀವು ಈ ಎಣ್ಣೆಯನ್ನು ಲಿಕ್ಕರ್ ಅಂದುಕೊಂಡಿರಿ ಎಂದರೆ ನಿಮ್ಮ ಊಹೆ ಖಂಡಿತ ತಪ್ಪು. ಇದು ಲಿಕ್ಕರ್ ಅಲ್ಲ. ಇದು ತೈಲ ಮಾರಾಯ್ರೆ.. ಮನೆಯಲ್ಲಿ ತೀವ್ರ ಆರ್ಥಿಕ ತೊಂದರೆಯುಂಟಾದ ಪರಿಣಾಮ ಮನೆಯೊಡತಿ ತಯಾರು ಮಾಡಿದ ವಿವಿಧ ಬಗೆಯ ತೈಲವೇ ಎಣ್ಣೆ ಸುಬ್ಬಣ್ಣನ ಖ್ಯಾತಿಗೆ ಕಾರಣವಾದದ್ದು.  ಮನೆಯೊಡತಿ ಮನೆಯಲ್ಲಿ ಎಣ್ಣೆ ಉರುಫ್ ತೈಲವನ್ನು ತಯಾರು ಮಾಡಿದರೆ ಸುಬ್ಬಣ್ಣನದು ಅದನ್ನು ಮಾರಾಟ ಮಾಡುವ ಜವಾಬ್ದಾರಿ. ಮೊಟ್ಟ ಮೊದಲ ದಿನ ಸುಬ್ಬಣ್ಣನ ಮನೆಯೊಡತಿ ಈ ಎಣ್ಣೆಯನ್ನು ತಯಾರು ಮಾಡಿದಾಗ ಸುಬ್ಬಣ್ಣನೇ ನಕ್ಕಿದ್ದ. ಆದರೆ ಖಾಲಿಯಾದ ಕಿಸೆ ಅನಿವಾರ್ಯವಾಗಿ ಸುಬ್ಬಣ್ಣನನ್ನು ಮಾರಾಟರಂಗಕ್ಕೆ ದೂಡಿತ್ತು.
             ಎಲ್ಲ ಕಂಪನಿಗಳೂ ಆರಂಭದ ದಿನಗಳಲ್ಲಿ ಚಿತ್ರ ವಿಚಿತ್ರವಾಗಿಯೇ ಕಾರ್ಯ ನಿರ್ವಹಣೆ ಮಾಡುತ್ತವೆ ಎನ್ನುವ ಮಾತಿನಂತೆ ಎಣ್ಣೆ ಸುಬ್ಬಣ್ಣನದ್ದೂ ಆಗಿತ್ತು. ಅಲ್ಲೆಲ್ಲೋ ಬಿದ್ದ ಕಂತ್ರಿ ಸಾರಾಯಿಯ ಕ್ವಾರ್ಟರ್ ಬಾಟಲಿಯನ್ನುಹೆಕ್ಕಿ ತಂದು ಅದನ್ನು ಶುದ್ಧಮಾಡಿ ಅದರಲ್ಲಿ ಮನೆಯೊಡತಿ ತಯಾರಿಸಿದ ಎಣ್ಣೆ ತುಂಬಿ ಅದಕ್ಕೆ ಸುಂದರ ರೂಪಕೊಟ್ಟು ಲೇಬಲ್ ಹಚ್ಚಿ ಮಾರಾಟಕ್ಕೆ ಒಯ್ಯುವಷ್ಟರಲ್ಲಿ ಉಫ್... ಆಗಾಗ ಕ್ವಾರ್ಟರ್ ಬಾಡಲಿ ಸಿಗದಿದ್ದಾಗ ಯಾವುದೋ ಹಳೆಯ ಟಾನಿಕ್ ಬಾಟಲಿಯಾದರೂ ನಡೆಯುತ್ತದೆ.. ಆರಂಭದ ದಿನಗಳಲ್ಲಿ ಸುಬ್ಬಣ್ಣ ಸುತ್ತಮುತ್ತಲ ಮನೆ ಮನೆಗೆ ಹೋಗಿ ತನ್ನ ಎಣ್ಣೆಯನ್ನು ಮಾರಾಟ ಮಾಡುತ್ತಿದ್ದ ಕಾರಣದಿಂದಲೇ ಈತ ಎಣ್ಣೆ ಸುಬ್ಬಣ್ಣ ಎಂದು ಹೆಸರಾದದ್ದು.
             ನಂತರದ ದಿನಗಳಲ್ಲಿ ಸುಬ್ಬಣ್ಣನ ಕಡೆಗೆ ಸುತ್ತಮುತ್ತಲ ಜನರು ಎಣ್ಣೆಯ ಕುರಿತು ಮಾತನಾಡಲಾರಂಭಿಸುತ್ತಿದ್ದ ಹೊತ್ತಿನಲ್ಲಿಯೇ ಆತನಿಗೆ ಮಾರ್ಕೇಟಿಂಗಿನ ಲಿಂಕು ಎಲ್ಲೋ ಸಿಕ್ಕಿದ ಪರಿಣಾಮ ತನ್ನ ಎಣ್ಣೆಗೆ ಕ್ವಾರ್ಟರ್ ಬಾಟಲಿ ಬಳಕೆ ನಿಲ್ಲಿಸಿ ಅದಕ್ಕೆ ಬಣ್ಣ ಬೆಗಡೆ ಮಾಡಿ ಮಾರುಕಟ್ಟೆ ಲೋಕಕ್ಕೆ ಬಿಟ್ಟ. ಅದ್ಯಾವುದೋ  ಪುಣ್ಯಾತ್ಮ ತನಗೆ ಗೊತ್ತಿದ್ದನ್ನು ಸುಬ್ಬಣ್ಣನಿಗೆ ಹೇಳಿದ. ಪಕ್ಕಾ ಹಳ್ಳಿ ಹೈದ ಸುಬ್ಬಣ್ಣ ಆತ ಹೇಳಿದ್ದನ್ನು ಚಾಚೂ ತಪ್ಪದೆ ಮಾಡಿದ. ಪರಿಣಾಮ ಆತನ ದಿಕ್ಕೇ ಬದಲಾಗಿದೆ.
             ಹಳ್ಳಿಗಾಡಿನ ಶ್ರಾದ್ಧ, ಮದುವೆ, ಮುಂಜಿಗಳಲ್ಲಿ ಮಂಡಲ ಪಂಚಾಯತಿ ನಡೆದಾಗಲೆಲ್ಲ ತಪ್ಪದೇ ಹಾಜರಾಗಿ ಅದರಲ್ಲಿ ತಾನೂ ಪಾಲ್ಗೊಳ್ಳುತ್ತಿದ್ದ ಸುಬ್ಬಣ್ಣ ಅಷ್ಟಕ್ಕೆ ನಿಲ್ಲದೇ ಓಸಿಯಂತಹ ಹಲವಾರು ಚಟಗಳೂ ಆತನಲ್ಲಿ ಇದ್ದವು. ಆದರೆ ಅದ್ಯಾವಾಗ ಆತನಿಗೆ ಜ್ಞಾನೋದಯವಾಯಿತೋ ಗೊತ್ತಿಲ್ಲ. ಇದ್ದಕ್ಕಿದ್ದಂತೆ ಅವುಗಳನ್ನೆಲ್ಲ ಬಿಟ್ಟು ಬಿಟ್ಟಿದ್ದ. ಈ ದುರ್ಗುಣಗಳಿಗೆ ಆತ ತಿಲಾಂಜಲಿ ನೀಡಿದ ಮೇಲೆಯೇ ಸುಬ್ಬಣ್ಣನ ಮನೆಯೊಡತಿ ಆತನ ಮೇಲೆ ಸುರಿಸುವ ಬೈಗುಳಗಳು ಕಡಿಮೆಯಾದದ್ದು ಎಂದರೂ ತಪ್ಪಾಗಲಿಕ್ಕಿಲ್ಲ.
             ಹುಶ್... ಈಗ ಎಣ್ಣೆ ಸುಬ್ಬಣ್ಣ ಎಂದು ಕರೆಯುವ ಮುನ್ನ ಒಮ್ಮೆ ಆಲೋಚಿಸಿ ಮಾರಾಯ್ರೆ. ಇತ್ತೀಚಿನ ದಿನಗಳಲ್ಲಿ ಸುಬ್ಬಣ್ಣನ ಖದರು ಬೇರೆಯಾಗಿದೆ. ಆದ್ದರಿಂದ ಮೊದಲೆಲ್ಲ ಕರೆದಂತೆ ಎಣ್ಣೆ ಸುಬ್ಬಣ್ಣ ಎಂದು ಕರೆಯುವ ಹಾಗಿಲ್ಲ. ಎಣ್ಣೆ ಸುಬ್ಬಣ್ಣ ಎಂದು ಕರೆಯಬೇಡಿ ಎಂದು ಸುಬ್ಬಣ್ಣನೇನೂ ಹೇಳಿಲ್ಲ. ಬದಲಾಗಿ ಆತನ ತನ್ನ ಎಣ್ಣೆ ಮಾರಾಟ ಮಾಡಿ ಬದುಕಿನಲ್ಲಿ ಒಂದೊಂದೆ  ಮೆಟ್ಟಿಲು ಮೇಲೇರಿದಂತೆಲ್ಲ ಜನಸಾಮಾನ್ಯರು ತನ್ನಿಂದ ತಾನೆ ಎಣ್ಣೆ ಸುಬ್ಬಣ್ಣ ಎಂದು ಕರೆಯುವುದನ್ನು ಬಿಟ್ಟಿದ್ದಾರೆ. ಪ್ರಾರಂಭದಲ್ಲಿ ಎಣ್ಣೆ ಸುಬ್ಬಣ್ಣ ಎಂದು ವ್ಯಂಗ್ಯವಾಡಿದವರೆಲ್ಲ ನಂತರದ ದಿನಗಳಲ್ಲಿ ಆತನನ್ನು ಆಯಿಲ್ ಕಿಂಗ್ ಎಂತಲೂ, ಆಮೇಲೆ ಎಣ್ಣೆ ಪ್ರಾಡಕ್ಟ್ ಸುಬ್ರಹ್ಮಣ್ಯ ಎಂತಲೂ ತದನಂತರ ಸುಬ್ರಹ್ಮಣ್ಯ ಹೆಗಡೆ ಎಂದೂ ಅಷ್ಟರ ನಂತರ ಹೆಗಡೇರೆ ಎಂದೂ ಕರೆದರು. ಅಷ್ಟಕ್ಕೆ ನಿಲ್ಲದೇ ಎಣ್ಣೆ ಸುಬ್ಬಣ್ಣ ಮುಂದಿನ ದಿನಗಳಲ್ಲಿ ಸುಬ್ರಹ್ಮಣ್ಯ ಸಾವುಕಾರನಾಗಿಯೂ ಬೆಳೆದುಬಿಟ್ಟಿದ್ದಾನೆ. ಹೆಚ್ಚಿನವರಿಗೆ ಎಣ್ಣೆ ಸುಬ್ಬಣ್ಣ ಹೆಸರು ಮರೆತೇ ಹೋಗಿ ಸುಬ್ರಹ್ಮಣ್ಯ ಸಾವುಕಾರ ಎನ್ನುವ ಹೆಸರೇ ತಟ್ಟನೆ ನೆನಪಾಗಿ ಬಿಡುತ್ತದೆ.
             ಸುಬ್ಬಣ್ಣ ತನ್ನ ಹೆಸರು ಬದಲಾದ ಹಾಗೆಯೇ ತನ್ನ ನಡೆ ನುಡಿಯನ್ನೂ ಬದಲಾಯಿಸಿಕೊಂಡಿದ್ದಾನೆ. ಮೊದ ಮೊದಲು ತನ್ನನ್ನು ಎಣ್ಣೆ ಸುಬ್ಬಣ್ಣ ಎಂದು ಕರೆಯುತ್ತಿದ್ದವರ ಕಡೆಗೆ ಕಿಡಿ ಕಾರಿ ಬೈಗುಳ ಸುರಿಸುತ್ತಿದ್ದ ಸುಬ್ಬಣ್ಣ ತನ್ನ ಕೈಯಲ್ಲಿ ದುಡ್ಡು ಆಡತೊಡಗಿದಂತೆಲ್ಲ ಅವರ ಕಡೆಗೆ ಸಿಟ್ಟನ್ನು ಬಿಟ್ಟು ಉದಾಸೀನ ಭಾವನೆ ತಾಳಿದ್ದ. ಮತ್ತೂ ಮೇಲ ಮೇಲಕ್ಕೆ ಏರಿದಂತೆಲ್ಲ ಅವರ ಪಾಡಿಗೆ ತಾನು ನಕ್ಕು ಸುಮ್ಮನಾಗಿದ್ದ. ಆಮೇಲಾಮೇಲೆ ಏನಾಯಿತೆಂದರೆ ಯಾರು ಆತನನ್ನು ಎಣ್ಣೆ ಸುಬ್ಬಣ್ಣ ಎಂದು ಕರೆದಿದ್ದರೋ ಅಂತವರ ಕಷ್ಟಕಾಲದಲ್ಲಿ ನಿಲ್ಲುವ ಮೂಲಕ ಆದರ್ಶವನ್ನೂ ಮೆರೆದಿದ್ದು ಆತನ ದೊಡ್ಡಗುಣ ಎಂದರೂ ತಪ್ಪಾಗಲಿಕ್ಕಿಲ್ಲ ನೋಡಿ. ಈಗಂತೂ ನಮ್ಮ ಸುತ್ತಮುತ್ತಲೆಲ್ಲ ಸುಬ್ಬಣ್ಣನನ್ನು ಗುಣಗಾನ ಮಾಡುವವರೇ. ಹಲವು ಕಾರ್ಯಕ್ರಮಗಳಿಗೆ ಆತನನ್ನು ಅತಿಥಿಯಾಗಿಯೋ ಅಥವಾ ಇನ್ಯಾವುದೋ ಪ್ರಮುಖ ವ್ಯಕ್ತಿಯಾಗಿಯೋ ಕರೆಯುತ್ತಾರೆ. ಸುಬ್ಬಣ್ಣ ಸುಮ್ಮನೆ ಹೋಗಿ ಕುಳಿತು ತನ್ನ ಮನಸ್ಸಿಗೆ ತೋಚಿದ್ದನ್ನು ಆಡಿ ಬರುತ್ತಾನೆ. ಸುಬ್ಬಣ್ಣ ಯಾವುದೇ ದೊಡ್ಡ ದೊಡ್ಡ ಗೃಂಥಗಳನ್ನು ಓದಿದವನಲ್ಲ. ಆದ್ದರಿಂದ ಆತ ಕಾರ್ಯಕ್ರಮಗಳಲ್ಲಿಯೂ ಅಂತಹ ಯಾವುದೇ ದೊಡ್ಡ ದೊಡ್ಡ ಮಾತುಗಳನ್ನೂ ಆಡುವುದಿಲ್ಲ. ಬದಲಾಗಿ ನಮ್ಮ ನಡುವಿನ ಚಿಕ್ಕ ಚಿಕ್ಕ ಸಂಗತಿಗಳನ್ನು ಕಟ್ಟಿಕೊಡುತ್ತಾನೆ. ಜೊತೆಗೆ ನಮ್ಮ ನಿಮ್ಮಂತವರೂ ಸಾಧನೆಗಳನ್ನು ಮಾಡಬಹುದು ಎನ್ನುವುದನ್ನು ಹೇಳುತ್ತಾನೆ. ತನ್ನದೇ ಗ್ರಾಮ್ಯ ಭಾಷೆಯಲ್ಲಿ ಹೇಳುವ ಕಾರಣ ಜನರಿಗೆ ಅದು ಆಪ್ತವೂ ಆಗುತ್ತಿದೆ. ಹೀಗಾಗಿ ಸುಬ್ಬಣ್ಣ ನಮ್ಮ ಭಾಗದಲ್ಲಿ ವರ್ಡ್ ಫೇಮಸ್ ಆಗಿದ್ದಾನೆಂದರೆ ತಪ್ಪಾಗಲಿಕ್ಕಿಲ್ಲ ನೋಡಿ.
              ಇದೀಗ ಯಾರಾದರೂ ಸುಬ್ಬಣ್ಣನ ಡ್ರೆಸ್ಸಿನ ಬಗ್ಗೆ ಮಾತನಾಡಲೂ ಹಿಂದೇಟು ಹಾಕುತ್ತಾರೆ. ಮೊದಲಿನ ಹಾಗೆ ಪರಮ ಗಲೀಜಾದ ವಸ್ತ್ರಗಳನ್ನು ಆತ ತೊಡುವುದಿಲ್ಲ. ವೈಟ್ ಎಂಡ್ ವೈಟ್ ಆಗಿ ಶಿಸ್ತಾಗಿರುತ್ತಾನೆ. ತೆಪರುಗಾಲನ್ನು ಹಾಕುತ್ತ ಊರೂರು ತಿರುಗುತ್ತಿದ್ದ ಸುಬ್ಬಣ್ಣ ಈಗ ಕಾರಿನಲ್ಲಿ ಓಡಾಡುತ್ತಾನೆ. ಆತನ ಈ ಬದಲಾವಣೆ ನೋಡಿದ ಅನೇಕರು `ಸುಬ್ಬಣ್ಣನಿಗೆ ಯಾವುದೋ ಯಕ್ಷೀಣಿ ಒಲಿದಿದ್ದಾಳೆ' ಎಂದು ಆಡಿಕೊಂಡೂ ಇದ್ದಾರೆ. `ಇಲ್ಲಾ ಮಾರಾಯಾ.. ಸುಬ್ಬಣ್ಣನಿಗೆ ಲಾಟರಿ ಹೊಡೆದಿದೆ..' ಎಂದು ಹೇಳಿದವರೂ ಇದ್ದಾರೆ.. ಒಟ್ಟಿನಲ್ಲಿ ಸುಬ್ಬಣ್ಣ ಮಿಲಿಯನೇರ್ ಆಗಿದ್ದಾನೆ.. ಜನರೆಲ್ಲ ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ. ಮತ್ತೆ ನಮ್ಮ ಭಾಗಕ್ಕೆ ಬಂದು ಯಾರಾದರೂ ಎಣ್ಣೆ ಸುಬ್ಬಣ್ಣ ಎಂದು ಹೇಳಿಬಿಟ್ಟೀರಾ ಹುಷಾರು..

**
(ಇದನ್ನು ಶಿರಸಿಯಲ್ಲಿ ಬರೆದಿದ್ದು, ಜ.9-10-11-12ರಂದು 2014ನೇ ಇಸ್ವಿ)

No comments:

Post a Comment