ಏಕಾದಶೀ ಗುಡ್ಡದ ಮೇಲಿನ ಸೂರ್ಯೋದಯ |
ವಿನಯಚಂದ್ರನಿಗೆ ಉತ್ತರ ಕನ್ನಡದ ಚಳಿಯ ಪರಿಚಯವಿತ್ತು. ಕೆಲದಿನಗಳು ಮಾತ್ರ ಹಲ್ಲು ಕಟೆಯುವಂತಹ ಚಳಿಯದು. ಆದರೆ ಉತ್ತರ ಕನ್ನಡಕ್ಕಿಂತ ಹೆಚ್ಚಿನ ಚಳಿ ಇಲ್ಲಿತ್ತು. ಕೆಲವೇ ಕ್ಷಣಗಳಲ್ಲಿ ಇಬ್ಬನಿ ಮಾಲೆ ಮಾಲೆಯಾಗಿ ಇಳಿಯಲಾರಂಭಿಸಿತು. ಐದು ಮೀಟರ್ ದೂರದಲ್ಲಿ ಏನಿದೆ ಎನ್ನುವುದೂ ಕಾಣಿಸದಷ್ಟು ದಟ್ಟವಾಗಿ ಮಂಜು ಬೀಳಲು ಆರಂಭಗೊಂಡಿತು. ವಿನಯಚಂದ್ರ ಮಂಜು ಮುಸುಕುವುದನ್ನು ನೋಡಿದ್ದ. ಖುಷಿಯಿಂದ ಆಸ್ವಾದಿಸಿದ್ದ. ಮಂಜಿನ ಅಡಿಯಲ್ಲಿ ನಿಂತು ಶೀತ ಮಾಡಿಕೊಂಡಿದ್ದ. ತನ್ನ ಧ್ವನಿಯನ್ನೂ ಕೂರಿಸಿಕೊಂಡಿದ್ದ. ನಂತರ ಕಷ್ಟದಿಂದ ಮಾತನಾಡಿದ್ದ. ನಕ್ಕಿದ್ದ. ಬವಣೆಯನ್ನು ಅನುಭವಿಸಿದ್ದ. ಬೆಳಗು ಮುಂಜಾವಿನಲ್ಲಿ ಜೇಡ ಕಟ್ಟಿದ ಬಲೆಯ ಮೇಲೆ ಮಂಜು ಬಿದ್ದು ಬೆಳ್ಳಗೆ ಹೊಳೆಯುವ ಗೂಡನ್ನು ಕಾಲಿನಿಂದ ಒತ್ತಿ ಏನೋ ಖುಷಿಯನ್ನು ಅನುಭವಿಸಿದ್ದ. ಯಾಕೋ ಮತ್ತೆ ಮನಸ್ಸು ಪ್ರಫುಲ್ಲಗೊಂಡಂತಾಗಿತ್ತು.
ವಿನಯಚಂದ್ರ ಫೈರ್ ಕ್ಯಾಂಪಿನ ಸೌಲಭ್ಯ ಇದೆಯೇ ಎಂದು ಕೇಳುವುದನ್ನು ಇತರರೂ ಕಾಯುತ್ತಿದ್ದರೋ ಎಂಬಂತೆ ತವಕಿಸಿದರು. ಅದ್ಯಾರೋ ಫೈರ್ ಕ್ಯಾಂಪಿಗೆ ಬೇಕಾಗುವ ವಸ್ತುಗಳನ್ನು ತಂದರು. ಹೊಟೆಲಿನ ಬಯಲಿನ ಚಿಕ್ಕದೊಂದು ಮೂಲಕೆಯಲ್ಲಿ ಫೈರ್ ಕ್ಯಾಂಪ್ ಹೊತ್ತಿಸಿಯೇ ಬಿಟ್ಟರು. ಸಮಯ ಕಳೆಯಲು ಏನಾದರೂ ಮಾಡಬೇಕಲ್ಲ, ಆಟಗಾರರೆಲ್ಲ ಭಾರತದ ಹಲವಾರು ರಾಜ್ಯಗಳಿಂದ ಬಂದವರು. ತಮ್ಮ ತಮ್ಮ ರಾಜ್ಯದ ವಿಶೇಷತೆಗಳ ಬಗ್ಗೆ ಹೇಳಿ ಎಂದರು. ಪಂಜಾಬಿಗರು ತಮ್ಮೂರಿನ ಬಗ್ಗೆ, ವಿಶೇಷತೆ, ವಿಶಿಷ್ಟತೆಗಳ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡರು. ತಮ್ಮೂರಿಗರು ಯಾವ ರೀತಿ ಖಡಕ್ ಎಂಬುದನ್ನೂ, ತಮ್ಮ ಆಹಾರ ಶೈಲಿ, ತಮ್ಮೂರ ಹುಡುಗಿಯರ ಬಗ್ಗೆಯೆಲ್ಲ ಹೇಳಿದರು. ತಮಿಳ್ನಾಡಿನ ಸೂರ್ಯನ್ ತಮ್ಮ ನಾಡಿನ ಬಗ್ಗೆ ಹೇಳಿದ. ಯಾವಾಗಲೂ ತಮಾಷೆಯಿಂದ ಕಾಲೆಳೆಯುತ್ತ ಮಾತಾಡುತ್ತಿದ್ದ ಸೂರ್ಯನ್ ತಮ್ಮೂರಿನ ಬಗ್ಗೆ ಹೇಳುವಾಗ ತುಸು ಗಂಭೀರನಾಗಿ ಹೇಳಿದ್ದು ವಿನಯಚಂದ್ರನಿಗೆ ಅಚ್ಚರಿಯಾಯಿತು. ತಮ್ಮೂರಿನ ಬಗ್ಗೆ ಆತನಿಗೆ ಇರುವ ಅಭಿಮಾನದ ಬಗ್ಗೆಯೂ ಹೆಮ್ಮೆ ಮೂಡಿತು. ಎಷ್ಟೇ ತಮಾಷೆ ಮಾಡಿದ್ದರೂ ತಮ್ಮೂರಿನ ಬಗ್ಗೆ ಮಾತ್ರ ಗಂಭೀರವಾಗಿ ಮಾತನಾಡಿದ್ದು ವಿಶೇಷವಾಗಿತ್ತು. ಮಹಾರಾಷ್ಟ್ರದವರು, ಉತ್ತರಪ್ರದೇಶದವರೆಲ್ಲ ತಮ್ಮ ತಮ್ಮ ನಾಡಿನ ಬಗ್ಗೆ ಹೇಳಿದರು.
ನಂತರ ಬಂದಿದ್ದು ವಿನಯಚಂದ್ರನ ಸರದಿ. ಮಾತಾಡಲು ಆರಂಭಿಸಿದವನಿಗೆ ಏನು ಹೇಳಬೇಕೆಂಬುದೇ ಗೊತ್ತಾಗಲಿಲ್ಲ. ಮಾತನಾಡುವ ಮುನ್ನ ಹಾಗೆ ಹೇಳಬೇಕು, ಹೀಗೆ ಹೇಳಬೇಕು ಎಂದುಕೊಂಡವನಿಗೆ ತನ್ನ ಸರದಿ ಬಂದಾಗ ಎದೆಯೊಳಗೆ ನಡುಕ ಶುರುವಾದಂತಾಯಿತು. ಅಳುಕಿನಿಂದಲೇ ತನ್ನೂರಿನ ಬಗ್ಗೆ ಶುರು ಮಾಡಿದ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ತನ್ನ ಮನೆ, ಅಪ್ಪನ ಹಳೆಯ ಮಹೀಂದ್ರಾ ಕಾರು, ಹವ್ಯಕ ಸಂಪ್ರದಾಯದ ಹಳ್ಳಿ ಹಾಡುಗಳು, ತೊಡದೇವು, ವಿಶೇಷವಾದ ಹವ್ಯಕ ನುಡಿ, ಅಡಿಕೆ, ಅಘನಾಶಿನಿ ನದಿಗಳ ಬಗ್ಗೆಯೆಲ್ಲ ಹೇಳಿದ. ಆರಂಭದಲ್ಲಿ ಅಳುಕಿದರೂ ನಂತರ ಆತನ ಮಾತು ಸ್ಫುಟವಾಗಿತ್ತು. ತಾಸುಗಳ ಕಾಲ ಮಾತನಾಡಿದ. ಕಬ್ಬಡ್ಡಿ ತಂಡದ ಪಾಲಿಗೆ ಹೊಸ ಆಟಗಾರನಾಗಿ ಸೇರಿದ್ದ ವಿನಯಚಂದ್ರ ತನ್ನ ಮಾತಿನಿಂದ ಹಲವು ಆಟಗಾರರನ್ನು ಸೆಳೆದುಕೊಳ್ಳುವಲ್ಲಿ ಸಫಲನಾಗಿದ್ದ. ತಂಡದಲ್ಲಾಗಲೇ ಇದ್ದ ಹಿರಿಯ ಆಟಗಾರರಿಗೆ ಈತನ ಮಾತು ಬಹಳ ಹಿಡಿಸಿತ್ತು. ಒಮ್ಮೆಯಾದರೂ ಕರ್ನಾಟಕದ ಕಾಶ್ಮೀರ ಉತ್ತರ ಕನ್ನಡವನ್ನು ನೋಡಬೇಕು. ಅದರಲ್ಲಿಯೂ ವಿನಯಚಂದ್ರನ ಊರನ್ನು ನೋಡಬೇಕು ಎಂಬಂತಹ ಇಂಗಿತವನ್ನು ವ್ಯಕ್ತಪಡಿಸಿದರು. ತನ್ನೂರಿಗೆ ಖಂಡಿತವಾಗಿಯೂ ಕರೆದೊಯ್ಯುತ್ತೇನೆ ಎಂಬ ಭರವಸೆಯನ್ನು ವಿನಯಚಂದ್ರ ನೀಡಿದ. ಹಲವರಿಗೆ ಉತ್ತರ ಕನ್ನಡದ ಪ್ರಸಿದ್ಧ ಯಾತ್ರಾ ಸ್ಥಳವಾದ ಯಾಣದ ಬಗ್ಗೆ ತಿಳಿದಿತ್ತು. ಒಂದಿಬ್ಬರು ಯಾಣದ ವಿಷಯದ ಬಗ್ಗೆ ಕೇಳಿದರು. ವಿನಯಚಂದ್ರ ಯಾಣಕ್ಕೆ ಎಲ್ಲರನ್ನೂ ಕರೆದೊಯ್ಯುವ ಭರವಸೆಯನ್ನು ನೀಡಿದ.
ಎಲ್ಲರ ಮಾತು ಮುಗಿಯುವ ವೇಳೆಗೆ ಸಮಯ ಹನ್ನೆರಡನ್ನೂ ಮೀರಿತ್ತು. ಉತ್ತರದಿಂದ ಬೀಸಿ ಬರುವ ಚಳಿಗಾಳಿ ಮತ್ತಷ್ಟು ಜೋರಾಗಿತ್ತು. ಕೊರೆಯುವ ಚಳಿಗೆ ಹಾಕಿದ್ದ ಫೈರ್ ಕ್ಯಾಂಪಿನಲ್ಲಿ ಬಿದ್ದು ಬಿಡಬೇಕು ಎನ್ನಿಸುತ್ತಿತ್ತು. ಚಳಿಯ ಭಯಕ್ಕೆ ಒಬ್ಬೊಬ್ಬರಾಗಿ ಫೈರ್ ಕ್ಯಾಂಪಿನಿಂದ ರೂಮಿಗೆ ಮರಳಿದರು. ಕೊನೆಯಲ್ಲಿ ಉಳಿದವರು ವಿನಯಚಂದ್ರ ಹಾಗೂ ಮಧುಮಿತಾ ಇಬ್ಬರೆ.
`ಮಾತು ತುಂಬ ಚನ್ನಾಗಿತ್ತು' ಎಂದಳು ಮಧುಮಿತಾ.
`ಹುಂ.'
`ನೀವು ಓದಿದ್ದು ಏನು..?'
`ಡಿಗ್ರಿ..'
`ಬಹಳ ಚನ್ನಾಗಿ ಮಾತನಾಡುತ್ತೀರಾ..'
`ಹೇ.. ಹಾಗೇನಿಲ್ಲ.. ಸುಮ್ಮನೆ ಮಾತನಾಡುತ್ತ ಹೋದೆ.. ಅಷ್ಟೇ..' ಎಂದ.
`ನಿಮ್ಮೂರಿನ ಬಗ್ಗೆ ನನಗೆ ಬಹಳ ಕುತೂಹಲ ಆಗ್ತಾ ಇದೆ. ನಿಮ್ಮೂರನ್ನು ನೋಡಬೇಕು ಎನ್ನಿಸುತ್ತಿದೆ.'
`ಪಾಸ್ ಪೋರ್ಟ್ ಆಗಿದ್ದರೆ ಹೇಳು. ಖಂಡಿತ ಕರೆದೊಯ್ಯುತ್ತೇನೆ. ನಮ್ಮೂರನ್ನು ನೋಡಲೇಬೇಕು ನೀನು.'
`ಹುಂ. ಭಾರತಕ್ಕೆ ಬರುವ ಆಸೆಯಿಂದ ಪಾಸ್ ಪೋರ್ಟ್ ಮಾಡಿಸಿದ್ದೆ. ಮುಂದೆಂದಾದರೂ ಬಾಂಗ್ಲಾದೇಶ ನಮ್ಮನ್ನು ಹೊರ ಹಾಕಿದರೆ ಭಾರತದಲ್ಲಿ ನಮಗೆ ಅವಕಾಶ ಸಿಗಬಹುದು ಎನ್ನುವ ಕಾರಣಕ್ಕೆ ನಮ್ಮ ಮನೆಯಲ್ಲಿ ಎಲ್ಲರೂ ಪಾಸ್ ಪೋರ್ಟ್ ಮಾಡಿಟ್ಟುಕೊಂಡಿದ್ದಾರೆ. ನನ್ನನ್ನು ನಿಮ್ಮೂರಿಗೆ ಕರೆದೊಯ್ಯುತ್ತೀಯಾ?' ಎಂದಳು ಮಧುಮಿತಾ. ವಿನಯಚಂದ್ರ ತಲೆ ಅಲ್ಲಾಡಿಸಿದ.
ವಿನಯಚಂದ್ರನಿಗೆ ಮತ್ತೆ ಬಾಂಗ್ಲಾದೇಶ ವಿಚಿತ್ರವೆನ್ನಿಸಿತು. ಬಾಯ್ಬಿಟ್ಟು ಕೇಳಲಿಲ್ಲ.
ಮಧುಮಿತಾಳೇ ಮುಂದುವರಿದಳು `ಅದೇನೋ ಹೇಳಿದ್ಯಲ್ಲ ಹವ್ಯಕ ಹಳ್ಳಿ ಹಾಡು ಅಂದ್ಯಲ್ಲ.. ಅದೇನು? ಏನದು? ಹವ್ಯಕರು ಎಂದರೆ ? ಅದೇನದು ತೊಡದೇವು?' ಪ್ರಶ್ನೆಗಳನ್ನು ಸುರಿಸಿದಳು.
`ಹವ್ಯಕರೆಂದರೆ ಬ್ರಾಹ್ಮಣರೇ. ಹವಿಸ್ಸನ್ನು ಅರ್ಪಿಸುವವರು ಎನ್ನುವ ಅರ್ಥವಿದೆಯಂತೆ. ನನಗೆ ಪೂರ್ತಿಯಾಗಿ ಗೊತ್ತಿಲ್ಲ. ಹವ್ಯಕರಲ್ಲಿ ಭಟ್ಟರು, ಹೆಗಡೆ, ಜೋಶಿ, ಗಾಂವ್ಕಾರ, ಶಾಸ್ತ್ರಿ, ದೀಕ್ಷಿತ ಹೀಗೆ ಹಲವು ಉಪನಾಮಗಳೂ ಇವೆ. ಉತ್ತರ ಭಾರತದಿಂದ ವಲಸೆ ಬಂದವರೆಂದು ಹೇಳಲಾಗುತ್ತದೆ. ಇತಿಹಾಸ ನನಗೆ ಗೊತ್ತಿಲ್ಲ. ಬಹಳ ಬುದ್ಧಿವಂತರು ಹೌದು.. ಎಲ್ಲರೂ ಸಿಕ್ಕಾಪಟ್ಟೆ ಓದಿಕೊಂಡವರು. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಓದಿಕೊಂಡು ಸಮುದಾಯದವರು ಎನ್ನುವ ಖ್ಯಾತಿ ಹವ್ಯಕರದ್ದು..' ಎಂದ ವಿನಯಚಂದ್ರ.
ಮುಂದುವರೆದು `ಮದುವೆ, ಮುಂಜಿ ಸೇರಿದಂತೆ ಹಲವಾರು ಮಂಗಲ ಕಾರ್ಯಗಳಲ್ಲಿ ಹವ್ಯಕರದ್ದೇ ಆದ ವಿಶಿಷ್ಟ ಶೈಲಿಯಲ್ಲಿ ಹಾಡನ್ನು ಹಾಡುತ್ತಾರೆ. ಅದನ್ನು ಹವ್ಯಕರ ಹಳ್ಳಿ ಹಾಡು ಎನ್ನಬಹುದು..' ಎಂದ ವಿನಯಚಂದ್ರ.
`ಚಂದ್ರಗೆ ಮುನಿದು ನಿಂದು ಶಾಪವನಿತ್ತು
ತಂದು ಸುತ್ತಿದ ಕಿರು ಡೊಳ್ಳಿಗೆ ಉರುಗನ
ಸುಂಡಿಲ ಗಣಪತಿಗೆ ಶರಣೆಂದು...'
ಆಕೆಗೆ ಅರ್ಥವಾಗಲಿ ಎಂಬಂತೆ ಒಂದು ಹಾಡನ್ನೂ ಹಾಡಿ ತೋರಿಸಿದ. ಆಕೆಗೆಷ್ಟು ಅರ್ಥವಾಯಿತೋ ಗೊತ್ತಾಗಲಿಲ್ಲ. ಆದರೆ ಮುಖವರಳಿಸಿ ಚಪ್ಪಾಳೆ ತಡ್ಡಿ ವಾವ್ ಸೂಪರ್ ಎಂದು ಹೇಳಿದ್ದು ವಿನಯಚಂದ್ರನಿಗೆ ಖುಷಿಯನ್ನು ತಂದಿತು. ಕೊನೆಗೆ ತೊಡದೇವು ಮಾಡುವ ಬಗೆಯನ್ನೂ ಹೇಳಿದ. ಮಧುಮಿತಾಳಿಗೆ ವಿನಯಚಂದ್ರ ವಿವರಿಸಿ ಹೇಳುತ್ತಿದ್ದ ಬಗೆ ವಿಶೇಷ ಅನುಭವವನ್ನು ನೀಡಿತು. ಈತನಿಗೆ ಏನೆಲ್ಲ ಗೊತ್ತಿದೆಯಲ್ಲ ಎಂದೂ ಅನ್ನಿಸಿತು. ರಾತ್ರಿ ಮತ್ತಷ್ಟು ಆಗುವ ವೇಳೆಗೆ ಇಬ್ಬರೂ ತಮ್ಮ ತಮ್ಮ ರೂಮನ್ನು ಸೇರಿದ್ದರು.
**
ಮಂಜಿನ ಪಂಜರದೊಳಗೆ ಏಕಾದಶಿ ಗುಡ್ಡ ಹಾಗೂ ಅಘನಾಶಿನಿ ಕಣಿವೆ |
ಯಾಕೋ ಈ ಊರು ನಮ್ಮ ಮಲೆನಾಡಿನಂತಿದೆಯಲ್ಲ ಎಂದುಕೊಂಡ ವಿನಯಚಂದ್ರನಿಗೆ ಕಂಡಿದ್ದು ಗುಡ್ಡ ಬೆಟ್ಟಗಳ ಸಾಲು.
ಅಲ್ಲೆಲ್ಲೋ ದೂರದಲ್ಲಿ ಗಂಗೆಯ ಹಾಗೂ ಬ್ರಹ್ಮಪುತ್ರಾ ನದಿಗಳ ಬಯಲು ಅಸ್ಪಷ್ಟವಾಗಿ ಕಾಣಿಸಿದಂತಾಯಿತು. ಸೂರ್ಯ ಮೂಡಲು ತವಕಿಸುತ್ತಿದ್ದ. ಭಾರತದಲ್ಲಿ ಹುಟ್ಟುವ ಸೂರ್ಯ ನಮ್ಮದೇ ಅರುಣಾಚಲ, ತ್ರಿಪುರಾ, ಮಣಿಪುರಗಳನ್ನು ಮೀಜೋರಾಮ್ ಗಳನ್ನು ಹಾದು ಬಂದು ಬಾಂಗ್ಲಾದೊಳಕ್ಕೆ ತೂರುತ್ತದೆ. ಮತ್ತೆ ಭಾರತಕ್ಕೆ ಕಾಲಿಡುತ್ತದೆಯಲ್ಲ ಎಂತ ಮಜವಾಗಿದೆಯಲ್ಲ ಎಂದುಕೊಂಡ. ತಮ್ಮೂರ ಫಾಸಲೆಯಲ್ಲಿದ್ದ ಏಕಾದಶಿ ಗುಡ್ಡ ವಿನಯಚಂದ್ರನಿಗೆ ನೆನಪಾಯಿತು. ಚಿಕ್ಕಂದಿನಲ್ಲಿ ಸೂರ್ಯೋದಯವನ್ನು ನೋಡಬೇಕೆಂಬ ಕಾರಣಕ್ಕೆ ಒಂದೇ ಗುಕ್ಕಿಗೆ ಏಕಾದಶಿ ಗುಡ್ಡವನ್ನು ಓಡಿ ಹತ್ತುತ್ತಿದ್ದ ವಿನಯಚಂದ್ರ ತನ್ನೂರನ್ನು ಇಬ್ಬನಿ ತಬ್ಬಿ ನಿಂತಿದ್ದ ಬಗೆಯನ್ನೆಲ್ಲ ನೋಡಿ ಆಸ್ವಾದಿಸುತ್ತಿದ್ದ. ದೂರದಲ್ಲೆಲ್ಲೋ ಹುಟ್ಟುವ ಸೂರ್ಯ ಮಂಜಿನ ಮುಸುಕನ್ನು ಸೀಳಿ ತನ್ನತ್ತ ನೋಡಿದಾಗಲೆಲ್ಲ ಅನಿರ್ವಚನೀಯ ಆನಂದವನ್ನು ಆತ ಅನುಭವಿಸುತ್ತಿದ್ದ. ಅಂತಹದೇ ಅನುಭವ ಮತ್ತೊಮ್ಮೆ ಆತನಿಗಾಯಿತು. ಪಕ್ಕದಲ್ಲಿಯೇ ಮಧುಮಿತಾ ನಿಂತಿದ್ದಳು. ಇಂತಹ ಸಡಗರದಲ್ಲಿ ಇಂತಹ ಒಳ್ಳೆಯ ದೃಶ್ಯವನ್ನು ಎಷ್ಟೋ ವರ್ಷಗಳ ನಂತರ ಮತ್ತೆ ತನಗೆ ನೀಡಿದಳಲ್ಲ ಈಕೆ.. ಒಮ್ಮೆ ಹೋಗಿ ತಬ್ಬಿಕೊಳ್ಳಲಾ ಎನ್ನಿಸಿತು. ಮನಸ್ಸನ್ನು ಕಷ್ಟಪಟ್ಟು ನಿಯಂತ್ರಿಸಿಕೊಂಡ.
`ನಾನು ಅದೆಷ್ಟೋ ಸಾರಿ ಈ ಊರಿಗೆ ಬಂದಿದ್ದೇನೆ. ಬಾಂಗ್ಲಾ ಸರ್ಕಾರ ನೀಡಿದ ಕೆಲಸ ವರ್ಷಕ್ಕೆ ಕನಿಷ್ಟ 25ಕ್ಕೂ ಅಧಿಕ ಸಾರಿ ನಾನು ಇಲ್ಲಿಗೆ ಬರಬೇಕಾಗುತ್ತದೆ. ಬಂದಾಗಲೆಲ್ಲ ಬೆಳಿಗ್ಗೆ ಮುಂಚೆ ಇಲ್ಲಿಗೆ ಬಂದುಬಿಡುತ್ತೇನೆ. ಎಷ್ಟೇ ಒತ್ತಡವಿರಲಿ, ಬೇಜಾರು, ಸುಸ್ತಾಗಿರಲಿ ಇಲ್ಲಿ ಬಂದಾಗ ಮನಸ್ಸು ಪ್ರಫುಲ್ಲ. ಹಾಯಾಗುತ್ತದೆ. ಕಳೆದುಕೊಂಡ ಚೈತನ್ಯವನ್ನು ಮರಳಿ ಪಡೆದುಕೊಂಡಂತಾಗುತ್ತದೆ. ಏನೋ ಒಂದು ಸೆಳೆತವಿದೆ ಇಲ್ಲಿ..' ಎಂದಳು ಮಧುಮಿತಾ.
`ನನಗೆ ನಮ್ಮೂರು ನೆನಪಾಯಿತು.. ನಮ್ಮೂರ ಏಕಾದಶಿ ಗುಡ್ಡ ನೆನಪಾಯಿತು..' ಎಂದ ವಿನಯಚಂದ್ರ ಅದರ ಬಗ್ಗೆ ಹೇಳಿದ.
`ನಿಮ್ಮೂರಲ್ಲಿ ಏನಿಲ್ಲ ಹೇಳು ಮಾರಾಯಾ.. ಎಲ್ಲಾ ಇದೆಯಲ್ಲೋ..' ಎಂದಳು ಮಧುಮಿತಾ.
`ಹೂಂ..' ಅಂದ ವಿನಯಚಂದ್ರ.
ಮತ್ತೊಂದು ಅರ್ಧಗಂಟೆಯಲ್ಲಿ ಸೂರ್ಯನ ಕಿರಣಗಳು ಆ ಗುಡ್ಡವನ್ನು ಸ್ಪರ್ಷಿಸಿದ್ದವು. ಮಂಜಿನ ಹನಿಗಳ ಮೇಲೆ ಬಿದ್ದ ಸೂರ್ಯರಶ್ಮಿ ಫಳ್ಳನೆ ಹೊಳೆಯುತ್ತಿತ್ತು. ಎಷ್ಟು ನೋಡಿದರೂ ಮನಸ್ಸು ತಣಿಯುವುದಿಲ್ಲ. ನೋಡಿದಷ್ಟೂ ನೋಡಬೇಕೆನ್ನಿಸಿತು. ಮತ್ತೊಂದು ಸ್ವಲ್ಪ ಹೊತ್ತು ಅಲ್ಲಿದ್ದು ಇಬ್ಬರೂ ವಾಪಸಾದರು.
ವಾಪಾಸು ತಾವುಳಿದಿದ್ದ ರೂಮಿನ ಬಳಿಗೆ ಬರುವ ವೇಳೆಗೆ ಕೆಲವರು ಎದ್ದಿದ್ದರು. ಇನ್ನೂ ಹಲವರು ಹಾಸಿಗೆಯಲ್ಲಿಯೇ ಇದ್ದರು. ಅವರ್ಯಾರಿಗೂ ಇವರು ಮಲಗಿದ್ದು, ಮುಂಜಾನೆದ್ದು ಗುಡ್ಡವನ್ನು ಹತ್ತಿದ್ದು ಗೊತ್ತೇ ಇರಲಿಲ್ಲ. ಎತ್ಲಾಗೆ ಹೋಗಿದ್ದಿರಿ? ರಾತ್ರಿಯಿಡಿ ನಿದ್ದೆಯನ್ನೇ ಮಾಡಿಲ್ಲವಾ..? ಎಂಬಂತೆ ನೋಡಿದರು. ಹಾಗೆಯೇ ಕೇಳಿದರೂ ಕೂಡ. ಅವರಿಗೆಲ್ಲ ಮುಗುಳ್ನಗುವಿನ ಉತ್ತರವನಿತ್ತು, ತಿಂಡಿ ತಿಂದು ಮತ್ತೊಮ್ಮೆ ಕಾಂತಾಜಿ ದೇವಾಲಯಕ್ಕೆ ತೆರಳಿದರು.
ದೇಗುಲದಲ್ಲಿ ಬೆಳಗಿನ ಪೂಜೆ ನಡೆಯುತ್ತಿತ್ತು. ದೇವರಿಗೆ ನಮಿಸಿ, ವಿಶ್ವಕಪ್ ತಮಗೆ ಸಿಗಲಿ ಎಂಬ ಬೇಡಿಕೆಯನ್ನು ದೇವರ ಬಳಿಯಿತ್ತು, ಆಶೀರ್ವಾದ ಪಡೆಯುವ ವೇಳೆಗೆ ಸೂರ್ಯ ಬಾನಿನಲ್ಲಿ ಆಗಲೆ ಸೈಕಲ್ ಹೊಡೆಯಲಾರಂಭಿಸಿದ್ದ.
ಮತ್ತೆ ಬಸ್ಸನ್ನು ಹತ್ತಿ ಢಾಕಾದ ಕಡೆಗೆ ಹೊರಳುವ ವೇಳೆಗೆ ಮಧುಮಿತಾ ಹಾಗೂ ವಿನಯಚಂದ್ರ ಇಬ್ಬರಲ್ಲೂ ಸ್ನೇಹಕ್ಕಿಂತ ಮಿಗಿಲಾದ ಭಾವ ಬೆಳೆದಿತ್ತು. ಅದು ಪ್ರೀತಿಯ ಕಡೆಗೆ ಹೊರಳುತ್ತಿತ್ತು. ವಿಷಯ ಅರಿತಿದ್ದ ಸೂರ್ಯನ್ ನಗುತ್ತಿದ್ದ. ಬಸ್ಸಿನಲ್ಲಿ ಒಂದೆರಡು ಸಾರಿ ಕೀಟಲೆಯನ್ನೂ ಮಾಡಿದ್ದ. ಆಗ ಇಬ್ಬರೂ ನಾಚಿದ್ದರು.
(ಮುಂದುವರಿಯುತ್ತದೆ..)
No comments:
Post a Comment