Friday, January 31, 2014

ಚಿಪಗಿ ದ್ಯಾಮವ್ವ ಸನ್ನಿಧಿಯಲ್ಲಿ ವನಭೋಜನ

ವನಭೋಜನ ಎಂಬ ವಿಶಿಷ್ಟ ಸಂಪ್ರದಾಯ ಮರೆಯಾಗುತ್ತಿರುವ ಸಂದರ್ಭದಲ್ಲಿ ತಾಲೂಕಿನ ಚಿಪಗಿಯಲ್ಲಿ ವನಭೋಜನವನ್ನು ಹಮ್ಮಿಕೊಳ್ಳಲಾಗಿತ್ತು. ಗ್ರಾಮದ ದ್ಯಾಮವ್ವ ದೇವಾಲಯದ ಆವರಣದಲ್ಲಿ ನಡೆದ ವನಭೋಜನ ಯಶಸ್ವಿಯಾಯಿತು.

ಗ್ರಾಮಸ್ಥರೆಲ್ಲ ಸೇರಿ ತಮ್ಮೂರಿನ ಸನಿಹದ ಅರಣ್ಯಕ್ಕೆ ತೆರಳಿ ಒಂದು ದಿನ ಅಲ್ಲಿ ಊಟ ಮಾಡಿ, ಸಂತಸ ಪಡುವ ವಿಶಿಷ್ಟ ಹಾಗೂ ಉತ್ತಮ ಪರಂಪರೆಯೇ ವನಭೋಜನ. ಇದರಲ್ಲಿ ಭಾಗಿಯಾಗಿವ ಪ್ರತಿಯೊಬ್ಬ ಗ್ರಾಮಸ್ಥನೂ ವನಭೋಜನಕ್ಕಾಗಿ ತನ್ನ ಕೈಲಾದ ಸಹಾಯವನ್ನು ಮಾಡುತ್ತಾನೆ. 

ಗ್ರಾಮಸ್ಥರ ಒಗ್ಗೂಡುವಿಕೆ: 

ಒಬ್ಬರು ಅಕ್ಕಿ ತಂದರೆ ಇನ್ನೊಬ್ಬರು ಬೆಲ್ಲ, ಮತ್ತೊಬ್ಬರು ತೆಂಗಿನಕಾಯಿ, ಮಗದೊಬ್ಬರು ಹಾಲು, ಹೀಗೆ ಒಬ್ಬೊಬ್ಬ ವ್ಯಕ್ತಿಯೂ ಒಂದೊಂದು ವಸ್ತುಗಳನ್ನು ತರುವ ಮೂಲಕ ವನಭೋಜನದ ಯಶಸ್ವಿಗೆ ಕಾರಣನಾಗುತ್ತಾನೆ. ಗ್ರಾಮಸ್ಥರೆಲ್ಲರ ಸೇರುವಿಕೆಯಿಂದ ವನಭೋಜನವೂ ಅತ್ಯುತ್ತಮವಾಗಿ ಜರುಗುತ್ತದೆ. 

ವನಭೋಜನ ಇಡೀ ಗ್ರಾಮದ ಒಗ್ಗಟ್ಟಿನ ಪ್ರತೀಕ. ಗ್ರಾಮಸ್ಥರು ಒಂದುಗೂಡಿ ಮಾಡುವ ಈ ಕಾರ್ಯಕ್ರಮ ಏಕತೆಗೆ ಸಾಕ್ಷಿಯಾಗುವಂತದ್ದಾಗಿದೆ. ವರ್ಷಕ್ಕೊಮ್ಮೆಯೋ ಎರಡು ಸಾರಿಯೋ ತಮ್ಮೂರಿನ ಫಾಸಲೆಯಲ್ಲಿ ಅರಣ್ಯದಲ್ಲಿಯೋ, ನದಿ ದಂಡೆಯಲ್ಲಿಯೋ ಸೇರಿ ಅಡುಗೆ ಮಾಡಿ, ವನಭೋಜನ, ಹೊಳೆಯೂಟ ಕಾರ್ಯಕ್ರಮ ಪ್ರಾಚೀನ ಕಾಲದಲ್ಲಿ ಬಹಳಷ್ಟು ಸಾರಿ ನಡೆದ ಉದಾಹರಣೆಗಳು ಸಿಗುತ್ತವೆ.

ಹರಕೆ: 

ಚಿಪಗಿ ಊರಿನ ಗ್ರಾಮಸ್ಥರು ದ್ಯಾಮವ್ವ ದೇವಿಯ ಸನ್ನಿಧಿಯಲ್ಲಿ ವನಭೋಜನದ ಹರಕೆಯನ್ನು ಹೊತ್ತುಕೊಳ್ಳುತ್ತಾರೆ. ಊರಿನ ಯಾವುದೇ ವ್ಯಕ್ತಿ ಅಥವಾ ಮನೆಯವರು ವನಭೋಜನದ ಹರಕೆಯನ್ನು ಹೊತ್ತುಕೊಂಡರೂ ಇಡೀ ಊರಿನವರು ಇದರಲ್ಲಿ ಪಾಲ್ಗೊಳ್ಳುವುದು ಇಲ್ಲಿನ ವಿಶೇಷವಾಗಿದೆ. ಊರಿನವರಷ್ಟೇ ಅಲ್ಲದೇ ಹೊರ ಊರಿನ ಜನರೂ, ಸಂಬಂಧಿಕರೂ ಈ ವನಭೋಜನದಲ್ಲಿ ಪಾಲ್ಗೊಳ್ಳುತ್ತಾರೆ.ಮಳೆಗಾಲ ಕಳೆದ ನಂತರ ಆರಂಭಗೊಳ್ಳುವ ಚಿಪಗಿ ವನಭೋಜನ ಜಾತ್ರೆಯ ವರ್ಷವಾದರೆ ಜಾತ್ರೆಯ ವರೆಗೆ ನಡೆಯುತ್ತದೆ. ಅದಿಲ್ಲವಾದರೆ ಮಾರ್ಚ್ ತಿಂಗಳಿನ ವರೆಗೂ ನಡೆಯುತ್ತದೆ.  

ಶಿರಸಿ ಜಾತ್ರೆಯ ಮುನ್ನ ನಡೆಯುವ ಹೊರಬೀಡು ಕಾರ್ಯಕ್ರಮಕ್ಕೆ ಮೊದಲು ಇಲ್ಲಿ ವನಭೋಜನವನ್ನು ಹಮ್ಮಿಕೊಳ್ಳಲಾಗುತ್ತದೆ. ಶಿರಸಿ ಮಾರಿಕಾಂಬಾ ದೇವಿ ಜಾತ್ರೆಯ ನಂತರ ಚಿಪಗಿ ದ್ಯಾಮವ್ವನ ಸನ್ನಿಧಿಯಲ್ಲಿ ವನಭೋಜನವನ್ನು ಹಮ್ಮಿಕೊಳ್ಳುವುದಿಲ್ಲ. ವರ್ಷಕ್ಕೆ ಎಂಟಕ್ಕೂ ಹೆಚ್ಚಿನ ವನಭೋಜನಗಳು ನಡೆದ ದಾಖಲೆಗಳೂ ಇವೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ಬೆಳಗಿನ ಹಾಲು ಪಾಯಸಕ್ಕೆ ಮೀಸಲು ಊರಿನಲ್ಲಿ ವನಭೋಜನ ನಡೆಯುವ ದಿನದಂದು ಇಡೀ ಊರಿನವರು ತಮ್ಮ ತಮ್ಮ ಮನೆಗಳ ಬೆಳಗಿನ ಹೊತ್ತಿನ ಹಾಲನ್ನು ವನಭೋಜನಕ್ಕೆ ಬಳಕೆ ಮಾಡುತ್ತಾರೆ. ಅಂದಿನ ಹಾಲು ವನಭೋಜನದಲ್ಲಿ ಮಾಡಲಾಗುವ ಪಾಯಸಕ್ಕಾಗಿ ಬಳಸುತ್ತಾರೆ. ವನಭೋಜನಕ್ಕಾಗಿ ಸ್ಥಳೀಯರಿಗಿಂತ ಹೆಚ್ಚು ಹೊರ ಊರುಗಳಲ್ಲಿರುವವರೇ ಹರಕೆ ಹೊತ್ತುಕೊಳ್ಳುತ್ತಾರೆ ಎನ್ನುವುದೂ ವಿಶೇಷ ಸಂಗತಿಯಾಗಿದೆ. 

ದ್ಯಾಮವ್ವ ದೇವಸ್ಥಾನದಲ್ಲಿ ಪೂಜೆ ಮಾಡಲಾಗುತ್ತದೆ. ನಂತರ ವನಭೋಜನಕ್ಕಾಗಿ ಊರಿನವರೇ ಅಡುಗೆ ಮಾಡುತ್ತಾರೆ. ಊಟವನ್ನು ಬಡಿಸುವವರೂ ಅವರೇ. ಆದರೆ ಕಾರಣಾಂತರಗಳಿಂದ ಈಗ ಕೆಲವು ವರ್ಷಗಳಿಂದ ಅಡುಗೆ ಮಾಡುವವರನ್ನು ಕರೆಸಲಾಗುತ್ತಿದೆ. ಹಸಿರು ಮರಗಳ ನೆರಳಿನಲ್ಲಿ ಊಟಕ್ಕಾಗಿ ಬಾಳೆ ಎಲೆಗಳನ್ನು ಹಾಕಲಾಗುತ್ತದೆ. ಊಟದ ನಂತರ ಈ ಬಾಳೆಗಳನ್ನು ತೆಗೆದು ಎಸೆಯುವುದಿಲ್ಲ. ಬದಲಾಗಿ ಅವುಗಳನ್ನು ಹಾಗೆಯೇ ನೆಲದ ಮೇಲೆ ಬಿಡಲಾಗುತ್ತದೆ. ಈ ಬಾಳೆಗಳನ್ನು ದನಗಳು ಬಂದು ತಿನ್ನಬೇಕು. ವನಭೋಜನದಲ್ಲಿ ಮನುಷ್ಯನ ಜೊತೆಗೆ ಎಲ್ಲ ಪ್ರಾಣಿಗಳೂ ಸೇರ್ಪಡೆಯಾಗಬೇಕು ಎನ್ನುವ ಕಾರಣಕ್ಕಾಗಿ ಇಂತಹ ಸಂಪ್ರದಾಯವನ್ನು ತಂದಿರಬಹುದೆಂದು ಸ್ಥಳೀಯರಾದ ಆರ್.ವಿ. ಹೆಗಡೆ ಹೇಳುತ್ತಾರೆ.

ಆಧುನಿಕ ಸಮಾಜದ ಯಾಂತ್ರಿಕ ಜೀವನದ ಭರಾಟೆಯಲ್ಲಿ ಇಂತಹ ವಿಶಿಷ್ಟ ಕಾರ್ಯಕ್ರಮಗಳು ಸಮಾಜದಿಂದ ಮರೆಯಾಗದಂತೆ ನೋಡಿಕೊಳ್ಳಬೇಕಾದ ಅಗತ್ಯವೂ ಇದೆ.

 

(ಕನ್ನಡಪ್ರಭದಲ್ಲಿ ಜ.28ರಂದು ಬರೆದಿದ್ದ ಲೇಖನ)

Thursday, January 30, 2014

ಸವಿ ನೆನಪುಗಳ ನಡುವೆ (ಪ್ರೇಮಪತ್ರ-10)

ಪ್ರೀತಿಯ ಪ್ರೀತಿ..,


ಬಾರ ಬಾರ್ ಆತೀ ಹೈ ಮುಝಕೋ
ಮಧುರ ಯಾದ್ ಬಚಪನ್ ತೇರಿ...|
                 ಓ ಬಾಲ್ಯ ನೀನೆಲ್ಲಿರುವೆ? ಕಳೆದ ನಿನ್ನ ಸಮಯ ಮತ್ತೆ ನನಗ್ಯಾಕೆ ಸಿಗುತ್ತಿಲ್ಲ?  ಈ ಹರೆಯದಲ್ಲಂತೂ ನಿನ್ನ ಸಮಯ ಬಹಳ ನನ್ನ ಕಾಡ್ತಿದೆ. ಓ ಬಾಲ್ಯ.. ನೀನು ಸುಂದರ ಸವಿ ನೆನಪಾಗಿ ಕಾಡ್ತಾ ಇರೋದು ಗ್ರೇಟ್.. ಜೊತೆಗೆ ಅದಕ್ಕೆ thanks..

ಸವಿ ಸವಿ ನೆನಪು
ಸಾವಿರ ನೆನಪು
ಸಾವಿರ ಕಾಲಕು
ಸವೆಯದ ನೆನಪು
               ನಿಂಗೆ ಈ ಬಾಲ್ಯ, ಬಾಲ್ಯದ ಆಟ-ಹುಡುಗಾಟ-ಮೆರೆದಾಟ-ನಲಿದಾಟ-ಕುಣಿದಾಟ ಎಷ್ಟೊಂದು ಗ್ರೇಟ್ ಅನ್ನಿಸೋಲ್ವಾ? ಅದಕ್ಕಾಗಿಯೇ ನಾನು ಈ ಸಲದ ಪತ್ರದ ವಿಷಯವನ್ನು ಬಾಲ್ಯದೆಡೆಗೆ ಹೊರಳಿಸಿದ್ದು.
               ನಿಜವಾಗ್ಲೂ ಈ ಬಾಲ್ಯ ಅನ್ನೋ  great boat ನಂಗೆ  ಎಷ್ಟೆಷ್ಟೋ ಮರೆಯಲಾಗದೇ ಇರುವಂತಹ ಅನುಭವಗಳನ್ನು ನೀಡಿದೆ. ಜೊತೆಗೆ ಅದಕ್ಕಿಂತ ಹೆಚ್ಚಾಗಿ ಖುಷಿ ಕೊಟ್ಟಿದೆ. ಎಲ್ಲಕ್ಕಿಂತ ಹೆಚ್ಚಾಗಿ ಗೆದ್ದಾಗ ಬೀಳಿಸಿ, ಬಿದ್ದಾಗ ಸಂತೈಸಿ, ಕಿಚ್ಚು, ಮೆಚ್ಚು, ಪ್ರೀತಿ, ಕರುಣೆಗಳ ಸೇರಿಸಿದೆ. ಸ್ವಾಭಿಮಾನದಿಂದ ಬದುಕುವುದನ್ನು ಕಲಿಸಿದೆ.
               ಇಂತಹ ಬಾಲ್ಯ ನನ್ನ ಬದುಕಿನಲ್ಲಿ ಅದೊಂದು ಸುಸಮೃದ್ಧೋತ್ತಮ ನೆನಪಿನ ಗಣಿ, ಸುಂದರ ಖಜಾನೆ. ಓ.. ನಿನಗೆ ನನ್ನ ಬಾಲ್ಯದ ಸವಿ ನೆನಪ ಸನ್ನಿವೇಶಗಳನ್ನು ಹೇಳ್ಲೇ ಇಲ್ಲ. ತಾಳು ಹೇಳ್ತೀನಿ. ನನಗೆ ನೆನಪಿದ್ದಂತೆ ಕಂಡಕ್ಟರಿನೆ ಕಾಣದಂತೆ ಬಸ್ಸಿನ ಸೀಟಿ ಸ್ಪಂಜು ಹರಿದಿದ್ದೇ ಬಾಲ್ಯದ ಮೊದಲ ನೆನಪು ಹಾಗೂ ಮೊದಲ ಕಿತಾಪತಿಯೇನೋ..? ಮತ್ತೊಮ್ಮೆ, ಶಾಲೆಗೆ ಹೋಗಿ ಆಟಗಳಲ್ಲಿ ಭಾಗವಹಿಸದೇ ಇದ್ದರೂ ಕೂಡ ಸಮಾಧಾನಕರ ಬಹುಮಾನ ಪಡೆದಿದ್ದು, ಗೆಳತಿಯೊಬ್ಬಳ ಬ್ಯಾಗಿನಿಂದ ಗೆರೆಪಟ್ಟಿ ಕದ್ದಿದ್ದು, ಜಂಬುನೇರಳೆ ಮರದಿಂದ ತಲೆಕೆಳಗಾಗಿ ಬಿದ್ದಿದ್ದು, ತಲೆ ಧಿಮ್ಮೆನ್ನುವಾಗ ವಾಲಾಡುತ್ತ ಓಡಿ ಬಂದಿದ್ದು, ಯಾರೋ ಮಾಡಿದ ಕಾರ್ಯಕ್ಕೆ ನಾನು ಬಲಿಯಾದೆ ಎಂಬಂತೆ ಊರ ಬ್ಯಾಣಕ್ಕೆ ಬೆಂಕಿ ಇಟ್ಟ ಎಂಬ ಅಪವಾದ ಹೊತ್ತಿದ್ದು.. ಓಹ್..! ಇನ್ನೆಷ್ಟೆಷ್ಟೋ ಮಜವಾದ, ವಿಸ್ಮಯವಾದ ಸನ್ನಿವೇಶಗಳು. ಇಂತಹ ಪ್ರತಿಯೊಂದು ಸನ್ನಿವೇಶಗಳೂ ಹೊಸ ಹೊಸ ವಿಷಯವನ್ನೂ, ಪಾಠವನ್ನೂ, ಜ್ಞಾನವನ್ನೂ ಜೊತೆಗೆ ಅನುಭವವನ್ನೂ ನೀಡಿದೆ.
ಚಿಕ್ಕ ಚಿಕ್ಕ ಮನಸು
ಮನದ ತುಂಬಾ ಕನಸು
ಕನಸಿನೊಡನೆ ಆಟ
ಆಟದ ಜೊತೆಗೆ ಪಾಠ
                 ಇದೇ ಆಗಿನ ನಮ್ಮ ದೈನಂದಿನ ಕಾರ್ಯವಾಗಿತ್ತು. ಚಿಕ್ಕ, ಅರಳುತ್ತಿರುವ ಮನಸುಗಳು ಸುಂದರ ಕನಸುಗಳೋಡನೆ ಆಡಿ, ಪಾಡಿ ನಲಿಯುತ್ತಿದ್ದವು. ಮುಂದೊಮ್ಮೆ ಅವು ಸುಂದರವಾಗಿ ಅರಳುತ್ತಿದ್ದವು.
                 ನಿಂಗೆ ಇನ್ನೂ ಮಜಾ ಸುದ್ದಿ ಹೇಳ್ಬೇಕಂದ್ರೆ ಬಾಲ್ಯದಲ್ಲಿ ನಾನು ಬಹಳ ಕಿಲಾಡಿಯ, ತಂಟೆಕೋರ ಹುಡುಗನಾಗಿದ್ದೆ. ಹೀಗಾಗಿ ನಂಗೆ ಶಾಲೆಯಲ್ಲೂ, ಮನೆಯಲ್ಲೂ ಹೊಡೆತಗಳು ಬೀಳದೇ ಇದ್ದ ದಿನವೇ ಇರಲಿಲ್ಲ ಎನ್ನಬಹುದು. ಅಷ್ಟೇ ಅಲ್ಲ ಆಗ ನಮ್ಮ ಕುಟುಂಬ ಅವಿಭಕ್ತ ಕುಟುಂಬ. ಮನೆಯ ಹಿರಿಯ ಮಗನ ಮಗನಾದರೂ ನನ್ನೆಡೆಗೆ ಉಳಿದವರಿಗೆ ಅದೇಕೋ ತಾತ್ಸಾರ, ಸಿಟ್ಟು. ಜೊತೆಗೆ ನಮ್ಮ ಮನೆಯಲ್ಲಿ ಮಕ್ಕಳ ಸಂಖ್ಯೆಯೂ ಹೆಚ್ಚಿತ್ತು. ಅವರಲ್ಲಿ ಯಾರೇ ತಪ್ಪು ಮಾಡಿದ್ರೂ ಕೂಡ ಲತ್ತೆ ಮಾತ್ರ ನನಗೆ ಆಗಿತ್ತು. ಇಂಥ ಸನ್ನಿವೇಶಗಳ ನೆನಪು ಮಾಡಿಕೊಂಡ್ರೆ ಕಂಗಳಲ್ಲಿ ನೀರಾಡುತ್ತವೆ.
                ಆಗ ಕಲಿತ ಈಜು, ಕಲಿತ ಪಾಠ, ನಡೆ-ನುಡಿ, ಸಂಸ್ಕಾರ ಇವನ್ನೆಲ್ಲಾ ಎಂದಿಗೂ ಮರೆಯಲಾಗೋಲ್ಲ. ಮಳೆಯ ನೀರಿನಲ್ಲಿ ಕಾಗದದ ದೋಣಿ ಮಾಡಿ ತೇಲಿ ಬಿಟ್ಟಿದ್ದು, ಮಳೆ ನೀರಿನಲ್ಲಿ ಜಾರಿ ಬಿದ್ದಿದ್ದು, ಉಕ್ಕೇರಿ ಹರಿಯುತ್ತಿದ್ದ ತಾಯಿ ಅಘನಾಶಿನಿಯನ್ನು ನೋಡಿ ಭಯಗೊಂಡಿದ್ದು, ಅಮ್ಮನೊಡನೆ ಪ್ರತಿ ಮಳೆಗಾಲದ ಹೊಳೆ ಉಕ್ಕೇರುವಿಕೆಗೆ `ಭಾಗಿನ' ಕೊಡಲು ಹೋಗುತ್ತಿದ್ದುದು, ಶಾಲೆಗೆ ಹೋಗುವಾಗ ಮಳೆಯಿಂದ ಬರುತ್ತಿದ್ದ ಗಾಳಿಗೆ ಹಿಡಿದ ಛತ್ರಿ ಉಲ್ಟಾ ಆಗಿ `ಚಪ್ಪರ' ಆದಾಗ ಖುಷಿ ಪಟ್ಟಿದ್ದು, ಕುಣಿದು ಕೇಕೆ ಹಾಕಿದ್ದು, ಮಳೆಯ ನಡುವೆಯೂ ಶಾಲೆಯ ಕ್ರಿಕೆಟ್ ಪಂದ್ಯದಲ್ಲಿ ಮೊಟ್ಟ ಮೊದಲ ಅರ್ಧಶತಕ (ಕೊಟ್ಟ ಕೊನೆಯದೂ ಕೂಡ) ಗಳಿಸಿದ್ದು ಇಂಥದ್ದನ್ನೆಲ್ಲಾ ಜೀವವಿರೋ ತನಕ ಮರೆಯಲು ಸಾಧ್ಯವಿಲ್ಲ.
ಸಣ್ಣಾಕಿನಾ ನಾ ಸಣ್ಣಾಕಿನಾ
ಪುಟಾಣಿ ಬೆಲ್ಲನಾ ತಿನ್ನಾಕಿನಾ
                  ಓಹ್ ! ನನಗೇನಾದ್ರೂ ಮಾಟ-ಮಂತ್ರ-ವರ-ಶಾಪ ಇತ್ಯಾದಿಗಳ ಶಕ್ತಿ ಇದ್ದಿದ್ರೆ, ನಾನು ಯಾವಾಗಲೂ ಚಿಕ್ಕವನಾಗಿ ಇರಲಿಕ್ಕೆ ಇಷ್ಟಪಡ್ತಿದ್ದೆ. ಕಳೆದ ಬಾಲ್ಯದ ಸಂತಸವನ್ನು ಮತ್ತೆ ಮತ್ತೆ ಸವಿಯುತ್ತಿದ್ದೆ. ಹೀಗೆ ಆಗಲು ಸಾಧ್ಯವಿಲ್ಲವೆಂದು ಗೊತ್ತು. ಆಗೆಲ್ಲಾ ನಾನು ಮಕ್ಕಳ ಕೇಕೆ, ನಗುವನ್ನೂ, ಆಟ-ಪಾಟವನ್ನೂ ನೋಡಿಯಾದರೂ ಕಳೆದು ಹೋದ ಬಾಲ್ಯವನ್ನು ಮೆಲುಕು ಹಾಕಲು ಯತ್ನಿಸುತ್ತೇನೆ. ವ್ಯರ್ಥವೆಂದು ಗೊತ್ತಿದ್ದರೂ ನಾನು ಹಾಗೆ ಮಾಡುತ್ತೇನೆ. ಬಾಲ್ಯದ ಸಂತಸವೇ ನನ್ನನ್ನು ಹೀಗೆ ಮಾಡಲು ಪ್ರೇರೇಪಿಸುತ್ತಿದೆಯಾ? ಗೊತ್ತಿಲ್ಲ.
ಬಾಲ್ಯದ ಆಟ, ಆ ಹುಡುಗಾಟ
ಇನ್ನೂ ಮಾಸಿಲ್ಲ.....

                  ನಿಜ..! ನಾವು ಎಷ್ಟೇ ದೊಡ್ಡವರಾದ್ರೂ ಈ ಬಾಲ್ಯವ ಮರೆಯೋಕೆ ಆಗೋಲ್ವಲ್ಲ. ಹಾಗೆಯೇ ಅಂದಿನ ಅಂದಿನ ಹುಡುಗಾಟವನ್ನೂ ಕೂಡ. ಇಂತಹ ನೆನಪುಗಳೇ ನನಗೆ time and tide wait for none ಅಂದ್ರೆ ಕಳೆದ ಸಮಯ, ಕಡಲ ಅಲೆಯ ಮತ್ತೆ ಪಡೆಯಲು ಸಾಧ್ಯವಿಲ್ಲ ಎಂಬುದನ್ನು ತಿಳಿಸಿತು. ಇನ್ನೇನಿದ್ದರೂ ನಾವು ಸವಿ ನೆನಪುಗಳ ತಳಹದಿಯ ಮೇಲೆ ಕಾಣದ ಭವಿಷ್ಯವನ್ನು ಕನಸಲ್ಲಿ ಕಟ್ಟುತ್ತಾ ಜೀವನ ನಡೆಸಬೇಕು.
                  ಕೊನೆಯದಾಗಿ, ನನ್ನ ಮೊದಲ ಓಲೆಗೆ ನೀನು ಚನ್ನಾಗಿ ಪ್ರತಿಕ್ರಿಸಿದ್ದೀಯಾ. ನನ್ನಿಂದಾಗಿ ನಿನ್ನ ಮನವೂ ಕೂಡ ಭಾವನೆಯ ಬೆನ್ನೇರಿದ್ದಕ್ಕೆ ಸಂತಸವಾಗುತ್ತಿದೆ. ಮತ್ತೊಮ್ಮೆ ಮುಂದೆ ಹೊಸ ವಿಷಯಗಳೊಂದಿಗೆ, ತಾಜಾತನದೊಂದಿಗೆ ಪತ್ರಿಸುತ್ತೇನೆ. ಅಲ್ಲಿಯತನಕ ಸವಿ ನೆನಪುಗಳ ನಡುವೆ ಒಮ್ಮೆಯಾದರೂ ನುಸುಳಿಬಾ. ಅದರಿಂದುಂಟಾಗುವ ಖುಷಿಯನ್ನು ತಿಳಿಸು.
                   ತಿಳಿಸ್ತೀಯಲ್ಲಾ..?

ಇಂತಿ ನಿನ್ನೊಲವಿನ
ವಿನು

(ಈ ಬರಹ ಬರೆದಿದ್ದು ಜೂನ್ 2006ರಂದು ದಂಟಕಲ್ಲಿನಲ್ಲಿ.)
(ಶಿರಸಿಯ ಕದಂಬವಾಣಿ ಪತ್ರಿಕೆಯಲ್ಲಿ ಈ ಬರಹ ಪ್ರಕಟಗೊಂಡಿತ್ತು.)

Wednesday, January 29, 2014

ನಿನ್ನ ನಗು

(ರೂಪದರ್ಶಿ : ಅನೂಷಾ ಹೆಗಡೆ)
ನಿಂತು ಒಮ್ಮೆ ನನ್ನ ಬಳಿಗೆ
ನಕ್ಕು ಹೋಗು ಹುಡುಗಿ
ಸಿಟ್ಟು ಬೇಡ, ಸೆಡವು ಬೇಡ
ನಲಿದು ಹೋಗು ಬೆಡಗಿ ||

ನಿನ್ನ ನಗುವೆ ನನ್ನ ಬದುಕು
ಮಾತು ಹಸಿರು-ಜೀವನ,
ಒಮ್ಮೆ ನಕ್ಕು ಹಾಗೆ ಸಾಗು
ಬಾಳು ಎಂದೂ ನಂದನ ||

ನಿನ್ನ ನಗುವು ಏಕೋ ಕಾಣೆ
ನನ್ನುಸಿರಿಗೆ ಅಮೃತ
ಅದುವೆ ಜೀವ ನನ್ನೊಳಾಣೆ
ಎದೆ ಬಡಿತಕೆ ಮಾರುತ ||

ನಿನ್ನ ನಗುವು ಮಾಸದಿರಲಿ
ನನ್ನದೆಂದೂ ಪಾಲಿದೆ
ದುಃಖ ದಾಳಿ ಇಡದೆ ಇರಲಿ
ನಗುವು ದೂರ ಓಡದೆ  ||

(ಈ ಕವಿತೆಯನ್ನು ಶಿರಸಿಯಲ್ಲಿ 15.03.2007ರಂದು ಬರೆದಿದ್ದೇನೆ)
(ಮೊಟ್ಟಮೊದಲನೆ ಬಾರಿಗೆ ಮುತ್ಮೂರ್ಡ್ ಮಾದತ್ತೆ ಈ ಕವಿತೆಗೆ ರಾಗ ಹಾಕಿ ಹಾಡಿದ್ದಳು.. ನಂತರ ತಂಗಿ ಸುಪರ್ಣ ಹಾಗೂ ಪೂರ್ಣಿಮಾ ಅವರುಗಳು ಇದನ್ನು ಹಾಡಿದ್ದಾರೆ.)
(ಕವಿತೆಗೆ ಚಿತ್ರ ಬಳಕೆ ಮಾಡಿಕೊಳ್ಳಲು ಅನುಮತಿ ನೀಡಿದ ಅನೂಷಾ ಹೆಗಡೆ ಗೆ ಧನ್ಯವಾದಗಳು)

Tuesday, January 28, 2014

ಬೆಂಗಾಲಿ ಸುಂದರಿ-4

                ವಿನಯಚಂದ್ರ ಹೊರಡುವ ಸಲುವಾಗಿ ತಯಾರಾಗಿ ನಿಂತಿದ್ದ ಹೊತ್ತಿಗೆ ಅವನ ರೂಮಿಗೆ ಏದುಸಿರು ಬಿಡುತ್ತ ಹತ್ತಿಬಂದ ಸುಶೀಲಮ್ಮ `ಇದೇ ಈ ಹಲಸಿನ ಕಾಯಿ ಚಿಪ್ಸ್ ತಗಂಡು ಹೋಗಾ.. ದಾರಿ ಮದ್ಯ ತಿಂಬಲೆ ಆಕ್ತು..' ಎಂದು ಹೇಳುತ್ತಿದ್ದಂತೆ ವಿನಯಚಂದ್ರನಿಗೆ ರೇಗಿಹೋಯಿತು.
                  `ಥೋ ಸುಮ್ಮಂಗಿರೆ ಮಾರಾಯ್ತಿ.. ಹಂಗಿದ್ದೆಲ್ಲಾ ಕೊಟ್ಟು ಕಳಸಡಾ.. ಮೊದಲೇ ಈ ರೀತಿ ಮಣಭಾರ ಲಗೇಜಿದ್ದು.. ಇದರ ಜೊತಿಗೆ ಅಂತವನ್ನೂ ಕೊಡಡಾ...' ಎಂದು ಹೇಳಿದ್ದನ್ನು ಕೇಳಿ ಮನಸ್ಸನ್ನು ಮುದುಡಿದಂತೆ ಮಾಡಿಕೊಂಡು ಸುಶೀಲಮ್ಮ ಹಿಂದಕ್ಕೆ ಮರಳಿದರು.
               ಹೊರಡಲು ಜೀಪಿನ ಬಳಿಗೆ ಬಂದಾಗ ಶಿವರಾಮ ಹೆಗಡೆಯವರು ಬಾಂಗ್ಲಾದೇಶಕ್ಕೆ ಸಂಬಂಧಪಡುವಂತಹ ಒಂದಿಷ್ಟು ಮ್ಯಾಪುಗಳು, ಚಿಕ್ಕ ಪುಟ್ಟ ಪುಸ್ತಕಗಳನ್ನು ವಿನಯಚಂದ್ರನ ಕೈಯಲ್ಲಿ ಇರಿಸಿದರು. ಅಪರೂಪಕ್ಕೆ ತನ್ನ ಅಪ್ಪನ ಮುಂದಾಲೋಚನೆ ನೋಡಿ ವಿನಯಚಂದ್ರ ವಿಸ್ಮಯಗೊಂಡಿದ್ದ. ಅದನ್ನು ಕೈಯಲ್ಲಿ ಹಿಡಿದು ತನ್ನ ಬ್ಯಾಗಿನೊಳಗೆ ತುರುಕಿ ಜೀಪಿನ ಹಿಂಭಾಗದಲ್ಲಿ ಇಟ್ಟ. ತಾನು ಅಪ್ಪನ ಪಕ್ಕದಲ್ಲಿ ಕುಳಿತ. ಶಿವರಾಮ ಹೆಗಡೇರು ಡ್ರೈವಿಂಗ್ ಸೀಟಿನಲ್ಲಿ ಕುಳಿತಿದ್ದರು. ತಂಗಿ ಅಂಜಲಿ ತಾನೂ ಬರುವುದಾಗಿ ಹೇಳಿದ್ದ ಕಾರಣ ಮೊದಲೇ ಜೀಪಿನಲ್ಲಿ ಆಸೀನಳಾಗಿದ್ದಳು.
           ಅಷ್ಟರಲ್ಲಿ ಅಲ್ಲಿಯೇ ಇದ್ದ ಆಳು ರಾಮ `ಹೋಯ್ ಸಣ್ ಹೆಗ್ಡೇರು... ದೊಡ್ ಸುದ್ದಿ ಮಾಡ್ಕಂಡು ಬನ್ನಿ.. ಪೇಪರ್ನಾಗೆ ಪೋಟೋ ಬರ್ತೈತಿ ಅಲ್ಲನ್ರಾ..? ನಾ ಆವಗ ನೋಡ್ತೇನಿ..' ಎಂದ.
             `ಆಗ್ಲೋ ರಾಮಾ.. ಹಂಗೆ ಆಗ್ಲಿ...' ಎಂದು ಜೀಪನ್ನೇರಿದ್ದ ವಿನಯಚಂದ್ರ. ವಿನಯಚಂದ್ರ ಹೊರಡುವುದನ್ನು ಊರಲ್ಲಿದ್ದನ ನಾಲ್ಕೈದು ಮನೆಗಳ ಜನರು ವಿಶೇಷ ಕುತೂಹಲದಿಂದ ನೋಡುತ್ತಿದ್ದರು.
               `ತಮಾ... ಬಾಂಗ್ಲಾದೇಶದಲ್ಲಿ ಸ್ವಲ್ಪ ಹುಷಾರಾಗಿರೋ.. ಅಲ್ಲಿ ಗಲಭೆ ಶುರುವಾಜಡಾ ಮಾರಾಯಾ.. ಅವರವರ ನಡುವೆ ಅದೆಂತದ್ದೋ ಗಲಾಟೆನಡಾ.. ದೇಶದ ತುಂಬಾ ಹಿಂಸಾಚಾರ ತುಂಬಿದ್ದಡಾ.. ಯಾವದಕ್ಕೂ ಸೇಪ್ಟಿ ನೋಡ್ಕ್ಯ..' ಎಂದು ಮತ್ತೆ ಮತ್ತೆ ಹೆಗಡೇರು ಮಗನಿಗೆ ಹೇಳಿದ್ದರು.
                 `ಅಣಾ.. ಬಾಂಗ್ಲಾದೇಶದಲ್ಲಿ ಬೆಂಗಾಲಿ ಸುಂದರಿಯರು ಭಾರಿ ಚೊಲೋ ಇರ್ತ ಹೇಳಿ ಕೇಳಿದ್ದಿ.. ಹುಷಾರೋ..ಯಾರಾದ್ರೂ ನಿನ್ ಪಟಾಯ್ಸಿದ್ರೆ ಹುಷಾರು.. ಅವರನ್ನ ನೋಡ್ಕತ್ತ ಅಲ್ಲೇ ಉಳ್ಕಂಡು ಬಿಡಡಾ.. ' ಎಂದು ಅಂಜಲಿ ಛೇಡಿಸಿದಾಗ ವಿನಯಚಂದ್ರ ಒಮ್ಮೆ ಸಣ್ಣದಾಗಿ ನಕ್ಕ.. `ಅರ್ರೆ .. ಬಾಂಗ್ಲಾದೇಶಕ್ಕೆ ಹೋಗುತ್ತಿರುವವನು ನಾನು.. ಆದರೆ ನನಗಿಂತ ಹೆಚ್ಚು ಇವರು ಹೋಂ ವರ್ಕ್ ಮಾಡಿಕೊಂಡಿದ್ದಾರಲ್ಲ..' ಎನ್ನಿಸಿತ್ತು..
                  ತಮ್ಮೂರಿನ ತಗ್ಗು ದಿಣ್ಣೆಗಳ ರಸ್ತೆಯನ್ನು ಹಾದು ಶಿರಸಿಯನ್ನು ತಲುಪುವ ವೇಳೆಗೆ ಜೀಪಿನಲ್ಲಿ ಕುಳಿತಿದ್ದ ವಿನಯಚಂದ್ರ ಹಣ್ಣಾಗಿದ್ದ. ಹಿಂದಿನ ಸೀಟಿನಲ್ಲಿ ಕುಳಿತಿದ್ದ ಅಂಜಲಿ ಲಟ್ಟು ಜೀಪಿನ ಬಗ್ಗೆ ಸಾಕಷ್ಟು ಸಾರಿ ಮಂತ್ರಾಕ್ಷತೆ ಮಾಡಿದ್ದಳು.. `ಈ ಹಾಳ್ ಜೀಪನ್ ಮಾರಾಟಾ ಮಾಡಿ ಮಾರುತಿ ಕಾರ್ ತಗ ಹೇಳಿ ಅಪ್ಪಯ್ಯಂಗೆ ಆವತ್ತೇ ಹೇಳಿದ್ದಿ.. ಕೇಳಿದ್ನಿಲ್ಲೆ.. ಈ ಹೊಂಡದ ರಸ್ತೆಲ್ಲಿ ಬರತನಕ ಯನ್ ಸ್ವಂಟೆಲ್ಲ ನೊಯಲೆ ಹಿಡದೋತು.. ಮಾರಾಯ್ನೆ.. ಈ ಜೀಪ್ ಕೊಟ್ ಬೇರೆ ಯಾವುದಾದ್ರೂ ತಗಳಾ...' ಎಂದು ಅಂಜಲಿ ಮಾರ್ಗಮಧ್ಯದಲ್ಲಿ ಅದೆಷ್ಟು ಸಾರಿ ಹೇಳಿದ್ದಳೋ.  ಶಿವರಾಮ ಹೆಗಡೆಯವರು ನಕ್ಕು ನಕ್ಕು ಸುಮ್ಮನಾಗಿದ್ದರು. `ಕೂಸಿನ ಸೊಕ್ಕು ಇವತ್ತು ಅರ್ಧಮರ್ಧ ಕಮ್ಮಿ ಆತು ನೋಡು...' ಎಂದು ನಕ್ಕಿದ್ದರು ಹೆಗಡೆಯವರು.
                 ಶಿರಸಿಯಲ್ಲಿ ಊಟ ಮುಗಿಸಿ ಬೆಂಗಳೂರು ಬಸ್ಸನ್ನೇರುವ ವೇಳೆಗೆ ಸರಿಸುಮಾರು ರಾತ್ರಿಯಾಗಿತ್ತು. ಮಗನಿಗೆ ಮತ್ತೆ ಮತ್ತೆ ಸಲಹೆಗಳನ್ನು ಹೇಳಿದ ಶಿವರಾಮ ಹೆಗಡೇರು ಅಂಜಲಿಯ ಜೊತೆಗೆ ಮನೆಗೆ ಮರಳಿದ್ದರು. ಹೀಗೆ ಮರಳುವಾಗ ಬಹುಶಃ ಅವರಿಗೂ ಗೊತ್ತಿರಲಿಕ್ಕಿಲ್ಲ.. ವಿನಯಚಂದ್ರ ಬಾಂಗ್ಲಾದೇಶಕ್ಕೆ ಹೋದವನು ಸಧ್ಯದಲ್ಲಿ ತಮ್ಮೂರಿಗೆ ಮರಳುವುದಿಲ್ಲ ಎನ್ನುವುದು.. ಬಾಂಗ್ಲಾ ನಾಡಿನಲ್ಲಿ ವಿನಯಚಂದ್ರ ಅದೆಷ್ಟು ಬವಣೆಗಳನ್ನು ಅನುಭವಿಸುತ್ತಾನೆ ಎನ್ನುವುದು ಗೊತ್ತಿದ್ದಿದ್ದರೆ ಮೊದಲೇ ತಡೆದುಬಿಡುತ್ತಿದ್ದರೇನೋ. ವಿನಯಚಂದ್ರ ಬಸ್ಸನ್ನೇರಿ, ಮೊದಲೆ ಬುಕ್ಕಿಂಗ್ ಮಾಡಿದ್ದ ಸೀಟಿನಲ್ಲಿ ಕುಳಿತ ತಕ್ಷಣ ಗಾಢ ನಿದ್ದೆ.. ಸಿಹಿ ಕನಸು. ಕನಸಿನ ತುಂಬೆಲ್ಲ ಬಾಂಗ್ಲಾದೇಶ ಹಾಗೂ ಅಲ್ಲಿನ ಕಬ್ಬಡ್ಡಿ ಪಂದ್ಯವೇ ಮತ್ತೆ ಮತ್ತೆ ಕಾಣುತ್ತಿತ್ತು.

**

                   ಬೆಳಗಾಗುವ ವೇಳೆಗೆ ಬೆಂಗಳೂರು ನಗರಿ ಕಣ್ಣೆದುರು ನಿಂತಿತ್ತು. ಬಸ್ಸಿಳಿದ ವಿನಯಚಂದ್ರ ಆಟೋ ಹಿಡಿದು ಸೀದಾ ತನ್ನ ಕಬ್ಬಡ್ಡಿಯ ಅಕಾಡೆಮಿಯತ್ತ ತೆರಳಿದ. ಅಕಾಡೆಮಿಗೆ ಬಂದು ತನ್ನ ಲಗೇಜನ್ನು ತನ್ನ ಎಂದಿನ ಕೊಠಡಿಯಲ್ಲಿ ಇಟ್ಟು ತಿಂಡಿ ತಿಂದು ವಾಪಸಾಗುವುದರೊಳಗಾಗಿ ಅದೇ ಅಕಾಡೆಮಿಯ ಅವನ ಅನೇಕ ಜನ ಜೊತೆಗಾರರು ಅಲ್ಲಿಗೆ ಬಂದಿದ್ದರು. ವಿನಯಚಂದ್ರನನ್ನು ಕಂಡವರೇ ಎಲ್ಲರೂ ಶುಭಾಷಯಗಳನ್ನು ತಿಳಿಸುವವರೇ ಆಗಿದ್ದರು. ತಮ್ಮ ಜೊತೆಗೆ ತರಬೇತಿ ಪಡೆಯುತ್ತಿದ್ದವನು ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿ ವಿಶ್ವಕಪ್ಪಿಗೆ ತೆರಳುತ್ತಿದ್ದುದರ ಬಗ್ಗೆ ಎಲ್ಲರಿಗೂ ಸಂತೋಷವಾಗಿತ್ತು. ಮನಃಪೂರ್ವಕವಾಗಿ ವಿನಯಚಂದ್ರನನ್ನು ಹಾರೈಸಿದರು.
                 ಮದ್ಯಾಹ್ನದ ವೇಳೆಗೆ ರಾಷ್ಟ್ರೀಯ ತಂಡದಲ್ಲಿ ಆಡುತ್ತಿದ್ದ ತಮಿಳುನಾಡಿನ ಇಬ್ಬರು ಆಟಗಾರರು, ಕೇರಳದ ಒಬ್ಬಾತ ಬೆಂಗಳೂರಿನ ಆ ಅಕಾಡೆಮಿಗೆ ಬರುವವರಿದ್ದರು. ಅವರು ಬಂದ ನಂತರ ವಿಮಾನದ ಮೂಲಕ ನವದೆಹಲಿ ತೆರಳುವುದು, ಅಲ್ಲಿ ಉಳಿದ ಆಟಗಾರರ ಜೊತೆಗೆ ಸೇರಿ ಒಂದು ವಾರಗಳ ಕಾಲ ತಾಲೀಮು ನಡೆಸಿ ನಂತರ ಬಾಂಗ್ಲಾದೇಶದತ್ತ ಪ್ರಯಾಣ ಮಾಡುವುದು ಎಂಬ ಯೋಜನೆ ಮಾಡಲಾಗಿತ್ತು. ವಿನಯಚಂದ್ರ ಅವರಿಗಾಗಿ ಕಾಯುತ್ತ ನಿಂತ.
                ಮದ್ಯಾಹ್ನದ ವೇಳೆಗೆ ತಮಿಳುನಾಡಿನ ವೀರಮಣಿ, ಸೂರ್ಯನ್ ಬಂದರು. ಸ್ವಲ್ಪ ಹೊತ್ತಿನಲ್ಲಿಯೇ ಕೇರಳದಿಂದ ರೈಲಿನ ಮೂಲಕ ಕೃಷ್ಣಾ ನಾಯರ್ ಕೂಡ ಬಂದು ತಲುಪಿದ. ಈ ಮೂವರ ಪೈಕಿ ವಿನಯಚಂದ್ರನಿಗೆ ಸೂರ್ಯನ್ ನ ಪರಿಚಯವಿತ್ತು. ಉಳಿದಿಬ್ಬರ ಬಗ್ಗೆ ಕೇವಲ ಕೇಳಿ ತಿಳಿದಿದ್ದ ಅಷ್ಟೇ. ರಾಷ್ಟ್ರೀಯ ತಂಡದಲ್ಲಿ ಆಡಿದ ಇಬ್ಬರೂ ದೇಶದ ಅತ್ಯುತ್ತಮ ಕಬ್ಬಡ್ಡಿ ಆಟಗಾರರು ಎನ್ನುವುದನ್ನು ಕೇಳಿದ್ದ. ಪತ್ರಿಕೆಗಳಲ್ಲೂ ನೋಡಿದ್ದ. ವಿನಯಚಂದ್ರನಿಗೆ ಭಾರತದ ಕಬ್ಬಡ್ಡಿ `ಎ' ತಂಡದಲ್ಲಿ ಆಡುವಾಗ ಸೂರ್ಯನ್ ಪರಿಚಯವಾಗಿತ್ತು. ಉಳಿದಿಬ್ಬರೂ ಸೀನಿಯರ್ ಪ್ಲೇಯರ್ ಆಗಿದ್ದರಿಂದ ಅವರ ಬಗ್ಗೆ ತಿಳಿದಿದ್ದ ಅಷ್ಟೇ. ಮಾತಾಡಿರಲಿಲ್ಲ.
                 ಇವರ ಪೈಕಿ ವಿನಯಚಂದ್ರ ಹಾಗೂ ಸೂರ್ಯನ್ ಗೆ ನಿಧಾನವಾಗಿ ದೋಸ್ತಿ ಬೆಳೆಯಲಾರಂಭವಾಯಿತು. ತಮಿಳುನಾಡಿನ ಮಧುರೈ ಬಳಿಯವನು ಆತ. ತಮಿಳುನಾಡಿನವನು ಎಂಬುದು ಆತನ ಬಣ್ಣ ನೋಡಿದರೇ ಗೊತ್ತಾಗುತ್ತಿತ್ತು. ಕಪ್ಪಗಿದ್ದ. ದೃಢಕಾಯನಾಗಿದ್ದ. ಆದರೆ ಅಸಾಮಾನ್ಯ ವೇಗ ಆತನಲ್ಲಿತ್ತು. ಬೆಂಗಳೂರಿನ ಅಕಾಡೆಮಿಯಲ್ಲಿ ವಿನಯಚಂದ್ರ ಹಾಗೂ ಸೂರ್ಯನ್ ಇಬ್ಬರೇ ಹಲವಾರು ಸಾರಿ ಪ್ರಾಕ್ಟೀಸ್ ಮಾಡಿದರು. ಆಗಲೇ ವಿನಯಚಂದ್ರನಿಗೆ ಸೂರ್ಯನ್ ನಲ್ಲಿದ್ದ ಅಸಾಧಾರಣ ಆಟದ ವೈಖರಿ ಪರಿಚಯವಾಗಿದ್ದು. ಬಲವಾದ ರೈಡಿಂಗ್ ಸೂರ್ಯನ್ನನ ತಾಕತ್ತಾಗಿತ್ತು. ತನ್ನದು ಕ್ಯಾಚಿಂಗ್ ಕೆಲಸವಾಗಿದ್ದ ಕಾರಣ ತರಬೇತಿ ಮಾಡುತ್ತಿದ್ದ ಸಂದರ್ಭದಲ್ಲಿ ಇಬ್ಬರಿಗೂ ಅನೇಕ ಸಾರಿ ಜಿದ್ದಾ ಜಿದ್ದಿನ ಪೈಪೋಟಿ ಬೀಳುತ್ತಿತ್ತು. ಇಬ್ಬರೂ ಸೋಲೋಪ್ಪಿಕೊಳ್ಳಲು ಇಷ್ಟಪಡದ ಕಾರಣ ಸಾಕಷ್ಟು ರೋಚಕತೆಗೆ ಕಾರಣವಾಗುತ್ತಿದ್ದರು.
                 ವೀರಮಣಿ ಹಾಗೂ ಕೃಷ್ಣ ನಾಯರ್ ಇಬ್ಬರೂ ಪರಸ್ಪರ ಪರಿಚಿತರೇ ಆಗಿದ್ದರು. ಹಲವಾರು ಪಂದ್ಯಗಳಲ್ಲಿ ಒಟ್ಟಾಗಿ ಆಡಿದ್ದರು. ಸೂರ್ಯನ್ ಹಾಗೂ ವಿನಯಚಂದ್ರನಿಗೆ ಇವರಿಬ್ಬರೂ ಸೀನಿಯರ್ ಆದ ಕಾರಣ ತಮ್ಮ ಅನುಭವಗಳನ್ನು ಅವರೆದುರು ತೆರೆದಿಟ್ಟರು. ಈ ಇಬ್ಬರು ಸೀನಿಯರ್ ಆಟಗಾರರ ಜೊತೆಗೆ ಕೆಲ ಪಂದ್ಯಗಳನ್ನೂ ಆಡಿ ಅನುಭವ ಪಡೆದುಕೊಂಡರು.
           ವಿಮಾನ ಹೊರಡಲು ಅರ್ಧಗಂಟೆಯಿದ್ದಾಗ ವಿನಯಚಂದ್ರನ ಕೋಚ್ ಚಿದಂಬರ್ ಅವರಿಂದ ದೂರವಾಣಿ ಕರೆ ಬಂದಿತು. `ಹಲೋ..' ಎಂದ.
              `ಹ್ಯಾಪ್ಪಿ ಜರ್ನಿ.. ಚೊಲೋ ಆಟವಾಡು .. ನಿನ್ನ ಮೇಲೆ ಬಹಳಷ್ಟು ಹೋಪ್ಸ್ ಇದ್ದು.. ನಂಬಿಗೆ ಹುಸಿ ಮಾಡಡಾ.. ನಮ್ಮೆಲ್ಲರ ಕನಸಿನ ಪೊಟ್ಟಣ ನೀನು. ಆ ಪೊಟ್ಟಣ ಹಾಳಾಗದಿರಲಿ. ಅದರಲ್ಲಿ ಸುಂದರ ಫಲ ಸಿಗಲಿ' ಎಂದು ಹೇಳಿದ ಚಿದಂಬರ್ ಅವರು ಮತ್ತಷ್ಟು ಸಲಹೆ ನೀಡಿ `ದೆಹಲಿ ತಲುಪಿದ ನಂತರ ಪೋನ್ ಮಾಡು..'  ಎಂದು ಹೇಳಿ ಪೋನಿಟ್ಟರು.
               ವಿನಯಚಂದ್ರ ನಿರಾಳನಾದ. ಅಷ್ಟರಲ್ಲಿ ವಿಮಾನದ ಬಳಿ ತೆರಳಲು ಸಜ್ಜಾಗುವಂತೆ ಏರ್ ಪೋರ್ಟಿನಲ್ಲಿ ಧ್ವನಿ ಮೊಳಗಿತು. ತನ್ನ ಮೂವರು ಒಡನಾಡಿಗಳೊಂದಿಗೆ ವಿನಯಚಂದ್ರ ಅತ್ತಹೊರಟ.
               ಚೆಕ್ಕಿಂಗು, ಅದೂ ಇದೂ ಕೆಲಸಗಳು ಮುಗಿದು ವಿಮಾನ ಏರಿ ತನ್ನ ಸೀಟಿನಲ್ಲಿ  ಕುಳಿತ ವಿನಯಚಂದ್ರನ ಪಕ್ಕದ ಸೀಟಿನಲ್ಲಿ ಯಾರೋ ಅಪರಿಚಿತರು ಕುಳಿತಿದ್ದರು. ಕೊನೆಗೆ ಸೂರ್ಯನ್ ಬಳಿ ತನ್ನ ಪಕ್ಕದ ಸೀಟಿಗೆ ಬರುವಂತೆ ಹೇಳಿ ತನ್ನ ಪಕ್ಕದ ಅಪರಿಚಿತರನ್ನು ಕನ್ವಿನ್ಸ್ ಮಾಡಿದ. ಅವರು ಒಪ್ಪಿಕೊಂಡರು. ವಿಮಾನ ನಭಕ್ಕೆ ಜಿಗಿಯುವ ವೇಳೆಗೆ ಇವರು ಹಲವಾರು ಸುದ್ದಿಗಳನ್ನು ಹಲುಬಿದ್ದರು. ಬಾಂಗ್ಲಾದೇಶದ ಬಗ್ಗೆಯೂ ಮಾತುಕತೆಗಳು ನಡೆದಿದ್ದವು.
               ಮಧುರೈನ ಗಲ್ಲಿಗಳಲ್ಲಿ ಕಬ್ಬಡ್ಡಿ ಆಡುತ್ತ ಬೆಳೆದ ಸೂರ್ಯನ್ ತಾನು, ತಂದೆ, ತಾಯಿ ಹಾಗೂ ಇಬ್ಬರು ತಂಗಿಯರ ಜೊತೆ ಇರುವ ವಿವರ ಹೇಳಿದ. ತಮಿಳುನಾಡಿನ ಟಿಪಿಕಲ್ ಹಳ್ಳಿಯನ್ನು ತೆರೆದಿಟ್ಟ. ಸುಮ್ಮನೆ ಕೇಳುತ್ತ ಹೋದ ವಿನಯಚಂದ್ರ. ಜೊತೆಗೆ ತನ್ನ ಕುಟುಂಬದ ವಿವರಗಳನ್ನೂ ತಿಳಿಸಿದ. ತಾನು ಬೆಳೆದ ಉತ್ತರ ಕನ್ನಡದ ಹಳ್ಳಿಯ ಬಗ್ಗೆ ಹೇಳುತ್ತ ಹೇಳುತ್ತ ರೋಮಾಂಚನಗೊಂಡ. ಸುಮಾರು ಹೊತ್ತು ಮಾತಾಡಿದ ನಂತರ ಇಬ್ಬರಿಗೂ ಸಾಕೆನ್ನಿಸಿತು. ಮೌನವಾದರು. ವಿನಯಚಂದ್ರ ಕನಸಿನ ಲೋಕಕ್ಕೆ ಜಿಗಿಯಲು ಕಣ್ಣುಮುಚ್ಚಿದ. ಕಣ್ಮುಂದೆ ಚಿದಂಬರ್ ಅವರ ವ್ಯಕ್ತಿಚಿತ್ರಣ ಮೂಡಿಬಂದಿತು.
                 ಕುರುಚಲು ಗಡ್ಡ, ಮಧ್ಯಮ ಗಾತ್ರದ ಚಿದಂಬರ ಮಾಸ್ತರ್ರನ್ನು ತಾನು ಮೊದಲನೇ ಬಾರಿಗೆ ನೋಡಿದ್ದು ಹೈಸ್ಕೂಲಿನಲ್ಲಿ. ಹೈಸ್ಕೂಲಿನ ದೈಹಿಕ ಶಿಕ್ಷಕರ ಬಳಿ ತಾನು ಕಬ್ಬಡ್ಡಿ ಆಡುತ್ತೇನೆ ಎಂದು ಹೇಳಿದಾಗ ಅವರು ವಿಚಿತ್ರವಾಗಿ ನಕ್ಕಿದ್ದರು. ಬ್ರಾಹ್ಮಣ ಹುಡುಗನಾಗಿ ಅಪ್ಪಟ ಸಸ್ಯಾಹಾರಿಯಾಗಿ ಇವನೆಂತ ಕಬ್ಬಡ್ಡಿ ಆಡುತ್ತಾನೆಂದು ವ್ಯಂಗ್ಯವಾಗಿ ನಕ್ಕಿದ್ದು, ಆ ನಂತರದ ದಿನಗಳಲ್ಲಿ ಹೈಸ್ಕೂಲು ಟೀಮಿನಲ್ಲಿ ಕಬ್ಬಡ್ಡಿಯನ್ನು ಆಡಿ ಗೆಲುವನ್ನು ಕಾಣಲು ಹಿಡಿದಾಗಲೇ ದೈಹಿಕ ಶಿಕ್ಷಕರು ತನ್ನ ಕಡೆಗಿದ್ದ ವ್ಯಂಗ್ಯದ ಮನೋಭಾವವನ್ನು ತೊರೆದಿದ್ದು ವಿನಯಚಂದ್ರನಿಗೆ ನನಪಾಯಿತು. ಇಂತಹ ದಿನಗಳಲ್ಲೇ ಅವರು ವಿನಯಚಂದ್ರನಿಗೆ ಚಿದಂಬರ್ ಅವರನ್ನು ಪರಿಚಯ ಮಾಡಿಕೊಟ್ಟಿದ್ದರು.
                 `ನೋಡ್ರೀ ಚಿದಂಬರ್.. ಇಂವನೂ ನಿಮ್ಮ ಹಾಗೇ.. ಬ್ರಾಮರವನು... ಕಬ್ಬಡ್ಡಿ ಆಡ್ತಾನ್ರೀ.. ಆಟ ಚನ್ನಾಗೈತಿ..ಇವನಿಗೊಂದು ಸ್ವಲ್ಪ ತರಬೇತಿ ಕೊಟ್ಟರೆ ಒಳ್ಳೆ ತಯಾರಾಗಬಲ್ಲ ನೋಡ್ರಿ.. ' ಎಂದು ಹೇಳಿದಾಗ ಚಿದಂಬರ್ ಅವರು ಅಚ್ಚರಿಯಿಂದ ನೋಡಿದ್ದರು. ಕೊನೆಗೆ `ದಿನಾ ಚಿದಂಬರ್ ಅವರ ಬಳಿ ಪ್ರಾಕ್ಟೀಸ್ ಮಾಡು.. ಅವರು ನಿನ್ನಂತೆ ಹಲವು ಜನರಿಗೆ ಕಬ್ಬಡ್ಡಿ ಹೇಳಿಕೊಡ್ತಾರೆ..' ಎಂದಿದ್ದ ನೆನಪು ಆತನ ಮನಸ್ಸಿನಲ್ಲಿನ್ನೂ ಹಸಿಯಾಗಿಯೇ ಇತ್ತು.
                 ಮೊದಲ ದಿನ ಕಬ್ಬಡ್ಡಿ ಆಡಲು ಹೋಗಿದ್ದಾಗ ತುಸು ಅಂಜಿಕೆಯಿಂದ ಆಡಿದ್ದ ವಿನಯಚಂದ್ರ. ನಂತರದ ದಿನಗಳಲ್ಲಿ ಆತ ನಿಧಾನವಾಗಿ ಪಳಗಿದ್ದ. ಕೊನೆಗೆ ಒಂದು ದಿನ ಚಿದಂಬರ್ ಅವರಿಗೆ ಏನನ್ನಿಸಿತೋ ಏನೋ ವಿನಯಚಂದ್ರನಿಗೆ ಆತನ ಅಂಗಿಯನ್ನು ಬಿಚ್ಚಿ ನಂತರ ಕಬ್ಬಡ್ಡಿ ಆಡೆಂದಿದ್ದರು. ಆತ ನಾಚಿಕೊಂಡಿದ್ದ. ಕೊನೆಗೆ ಸಿಕ್ಕಾಪಟ್ಟೆ ಬೈದು ಆತನನ್ನು ಆಟಕ್ಕೆ ಒಪ್ಪಿಸಿದ್ದರು.
                ವಿನಯಚಂದ್ರ ಅಂಜಿಕೆಯಿಂದ ಆಡಿದ. ಮೊದಲನೇ ಸಾರಿ ರೈಡಿಂಗಿಗೆ ಹೋದಾಗಲೇ ಸೋತು ಹೊರ ಬಿದ್ದು ಬಿಟ್ಟಿದ್ದ. ಕೊನೆಗೆ ಚಿದಂಬರ ಅವರು ಪರೀಕ್ಷೆ ಮಾಡಿದಾಗ ವಿನಯಚಂದ್ರನ ಜನಿವಾರ ಆತನ ಆಟಕ್ಕೆ ತೊಡಕನ್ನು ತಂದಿತ್ತು, ಆಡುವ ಭರದಲ್ಲಿ ಅದು ಫಟ್ಟೆಂದು ಹರಿದುಹೋಗಿತ್ತೆಂಬುದು ಗಮನಕ್ಕೆ ಬಂದಿತು. ಇದೇ ಕಾರಣಕ್ಕೆ ಮುಜುಗರಪಟ್ಟಿದ್ದ. ತೀರಾ ಶಾಸ್ತ್ರೀಯವಾಗಿ ಬ್ರಾಹ್ಮಣಿಕೆಯಲ್ಲಿ ತೊಡಗಿಕೊಂಡಿರದಿದ್ದರೂ ಜನಿವಾರ ಹರಿದುಹೋಯಿತು ಎಂದಾಗ ವಿನಯಚಂದ್ರ ನರ್ವಸ್ ಆಗಿದ್ದ. ಅದೇ ಭಾವನೆಯಲ್ಲಿಯೇ ಆಟದಲ್ಲಿ ಸೋತಿದ್ದ.
               ಹಾಗೆಂದ ಮಾತ್ರಕ್ಕೆ ಸಂದ್ಯಾವಂದನೆ ಸೇರಿದಂತೆ ಇತರೆ ಯಾವುದೇ ಧಾರ್ಮಿಕ ಕಾರ್ಯಗಳಲ್ಲಿ ಆತ ತೊಡಗಿಕೊಳ್ಳುತ್ತಾನೆಂದುಕೊಳ್ಳಬಾರದು. `ಸರ್.. ಜನೀವಾರ ಹರಿದುಹೋಯ್ತು.. ಎಂತಾ ಆಕ್ತೋ.. ಗೊತ್ತಾಗ್ತಾ ಇಲ್ಲೆ.. ಎಂತಾ ಮಾಡಕಾತು.. ಯಂಗೆ ಬಹಳ ಹೆದರಿಕೆ ಆಕ್ತಾ ಇದ್ದು..' ಎಂದು ತನ್ನ ಮನದಾಳದ ತುಮುಲವನ್ನು ತೋಡಿಕೊಂಡಿದ್ದ.
               `ಓಹೋ ಇದಾ ನಿನ್ ಸಮಸ್ಯೆ.. ಜಕನಿವಾರ ಹರಿದು ಹೋದ್ರೆ ಇನ್ನೊಂದು ಹಾಕ್ಯಂಡ್ರಾತಾ ಮಾರಾಯಾ.. ಆದರೆ ಮುಂದಿನ ಸಾರಿ ಆಡೋವಾಗ ಅಥವಾ ಆಡಲೆ ಬಂದಾಗ ಜನಿವಾರವನ್ನು ಸೊಂಟಕ್ಕೆ ಸಿಕ್ಕಿಸ್ಕ್ಯ..' ಎಂದು ಸಲಹೆ ನೀಡಿದ್ದರು ಚಿದಂಬರ್ ಅವರು.
                 `ಹಂಗೆ ಮಾಡಲೆ ಅಡ್ಡಿಲ್ಯಾ..? ಎಂತಾ ತೊಂದರೆ ಇಲ್ಯಾ?' ಎಂದು ಬೆಪ್ಪನಾಗಿ ಕೇಳಿದ್ದ ವಿನಯಚಂದ್ರ.
                 `ಹುಂ. ನಮ್ಮಲ್ಲಿ ಬಹುತೇಕ ಹಿರಿಯರು ತೋಟಕ್ಕೆ ಇಳಿದು ಕೆಲಸ ಮಾಡ್ತ. ಒಜೆ ಕೆಲಸ ಅಥವಾ ಬೇರೆ ರೀತಿ ಗಟ್ಟಿ ಕೆಲಸ ಮಾಡುವಾಗ ಜನಿವಾರ ಸೊಂಟಕ್ಕೆ ಸುತ್ತಿಕೊಳ್ತ. ಅನಿವಾರ್ಯ ಸಂದರ್ಭದಲ್ಲಿ ಅಡ್ಡಿಲ್ಲೆ.. ಹಿಂಗ್ ಸೊಂಟಕ್ಕೆ ಸುತ್ತಿಕ್ಯಂಡ್ರೆ ಜನಿವಾರ ಹರಿತು ಅನ್ನೋ ಭಯನೂ ಇರ್ತಿಲ್ಲೆ.. ನಿಂಗೆ ಅದರ ಬಗ್ಗೆ ಅಷ್ಟಾಗಿ ಗಮನ ಹರಿಸೋ ಅಗತ್ಯವೂ ಇರ್ತಿಲ್ಲೆ.. ಸೊಂಟಕ್ಕೆ ಜನಿವಾರ ಸುತ್ತಿಕೊಳ್ಳುವುದು ತಪ್ಪಲ್ಲ. ಯಂಗವ್ವೆಲ್ಲಾ ಹಂಗೇ ಮಾಡ್ತಾ ಇದ್ದಿದ್ದು ಮಾರಾಯಾ.. ನಿನ್ ಅಪ್ಪಯ್ಯ ಗದ್ದೆ ಅಥವಾ ತೋಟಕ್ಕೆ ಹೋಗಿ ಕೆಲಸ ಮಾಡ್ತಾ ಹೇಳಾದ್ರೆ ಅವನ ಹತ್ರಾನೇ ಸರಿಯಾಗಿ ಕೇಳ್ಕ್ಯ' ಎಂದು ಹೇಳಿದ್ದರಲ್ಲದೇ ಇಂದಿನ ಜಮಾನಾದಲ್ಲಿ ಹಲವು ಬ್ರಾಹ್ಮಣ ಹುಡುಗರು ಜನಿವಾರ ಕಿತ್ತೆಸೆದಿದ್ದನ್ನೂ ಮಾಡುವ ಆಚಾರ ವಿಚಾರ ಸುಳ್ಳೆಂದು ವಾದ ಮಾಡುವುದನ್ನೂ ಪ್ರತಿದಿನ ನಾನ್ ವೆಜ್ ತಿನ್ನುವುದನ್ನೂ ಹೇಳಿದಾಗಲೇ ವಿನಯಚಂದ್ರ  ಸ್ವಲ್ಪ ಬೇರೆಯ ತರಹ ಆಲೋಚನೆ ಮಾಡಿದ್ದು. ಸುತ್ತಮುತ್ತಲ ಊರುಗಳಿಗೆ ಹೆಗಡೇರು ಎಂದು ಕರೆಸಿಕೊಳ್ಳುತ್ತಿದ್ದ ತನ್ನ ಅಪ್ಪ ಶಿವರಾಮ ಹೆಗಡೆಯವರು ಅನೇಕ ಸಾರಿ ತೋಟದ ಕೆಲಸಕ್ಕೋ, ಮರ ಹತ್ತುವ ಕಾರ್ಯದಲ್ಲೋ ತೊಡಗಿಕೊಂಡಿದ್ದಾಗ ಜನಿವಾರವನ್ನು ಸೊಂಟಕ್ಕೆ ಸುತ್ತಿಕೊಳ್ಳುತ್ತಿದ್ದುದನ್ನು ವಿನಯಚಂದ್ರ ಗಮನಿಸಿದ್ದ. ಅದು ಮತ್ತೊಮ್ಮೆ ನೆನಪಿಗೆ ಬಂದಿತು.
                 ಹೈಸ್ಕೂಲು ಮುಗಿದ ನಂತರ ಚಿದಂಬರ್ ಅವರೇ ವಿನಯಚಂದ್ರನನ್ನು ಹುಬ್ಬಳ್ಳಿಯಲ್ಲಿ ಕಾಲೇಜಿಗೆ ಪಿಯುಸಿಗೆ ಸೇರಿಸಿದ್ದರು. ಅಲ್ಲಿ ಕಬ್ಬಡ್ಡಿಯ ಬಗ್ಗೆ ತರಬೇತಿಯ ಜೊತೆಗೆ ಬೇರೆ ಬೇರೆ ವಿಭಾಗದ ಕಬ್ಬಡ್ಡಿ ಪಂದ್ಯಾವಳಿಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದರು. ಬಹುಶಃ ಆಗಲೇ ಇರಬೇಕು ವಿನಯಚಂದ್ರ ತನ್ನ ಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ ಎಗ್ ರೈಸ್ ತಿಂದಿದ್ದು. ಮೊದಲ ಸಾರಿ ತಿನ್ನುವಾಗ ಮನಸ್ಸೊಂಥರಾ ಆಗಿತ್ತು. ಆದರೆ ಚಿದಂಬರ್ ಅವರು ಆತನಿಗೆ ಮತ್ತೆ ಸಲಹೆಗಳ ಸುರಿಮಳೆಯನ್ನು ಸುರಿಸಿದ್ದರು. ಅವರ ಸಲಹೆಯ ಮೇರೆ ಎಗ್ ರೈಸ್ ತಿನ್ನಲು ಆರಂಭಿಸಿದ್ದ.
                  `ಕಬ್ಬಡ್ಡಿ ಆಟಗಾರನಾದವನು ಎಗ್ ರೈಸ್ ಆದರೂ ತಿನ್ನಲೇಬೇಕು.. ಇಲ್ಲವಾದರೆ ಕಷ್ಟವಾಗ್ತು ಮಾರಾಯಾ.. ನಿನ್ನ ಊಟದಲ್ಲಿ ಆಟಕ್ಕೆ ಬೇಕಾದ ತಾಕತ್ತು ಸಿಗಬೇಕು ಅಂದರೆ ಹೇಗೆ ಸಾಧ್ಯ ಹೇಳು. ಎಗ್ ರೈಸ್ ದೇಹಕ್ಕೆ ಸಾಕಷ್ಟು ತಾಕತ್ತನ್ನು ನೀಡ್ತು.. ಅದು ಹಾಲಿನ ಹಂಗೇಯಾ ಮಾರಾಯಾ.. ಹಾಲಿನಷ್ಟೇ ಪೌಷ್ಟಿಕ. ಹಾಲು+ಮೊಟ್ಟೆ ಎರಡೂ ಸೇರಿದರೆ ದೇಹಕ್ಕೆ ಬಹಳ ಶಕ್ತಿದಾಯಕ ' ಎಂದೂ ಹೇಳಿಬಿಟ್ಟಿದ್ದರು. ಈಗ ಸಲೀಸಾಗಿ ತಿನ್ನಲು ತೊಡಗಿದ್ದ. ನಂತರದ ದಿನಗಳಲ್ಲಿ ಎಗ್ ರೈಸ್ ವಿನಯಚಂದ್ರನ ಬದುಕಿನ ಭಾಗವಾಗಿ ಹೋಗಿತ್ತಾದರೂ ಆತನ ಮನೆಯಲ್ಲಿ ಈ ಕುರಿತು ಗೊತ್ತಿರಲಿಲ್ಲ.
                    ಹುಬ್ಬಳ್ಳಿ, ಬೆಳಗಾವಿ ವಲಯ, ರಾಜ್ಯ ತಂಡ, ದಕ್ಷಿಣ ಭಾರತ ವಲಯ ಸೇರಿದಂತೆ ಹಲವಾರು ವಲಯಗಳಲ್ಲಿ ವಿನಯಚಂದ್ರ ಮುಂದಿನ ದಿನಗಳಲ್ಲಿ ಆಡುತ್ತ ಹೋದ. ಚಿದಂಬರ್ ಆತನ ಬೆನ್ನಿಗೆ ನಿಂತಿದ್ದರು. ತಮ್ಮ ಆಟವನ್ನು ವಿನಯಚಂದ್ರನಿಗೆ ಧಾರೆಯೆರೆದು ಕೊಟ್ಟಿದ್ದರು. ತಾನು ಕಬ್ಬಡ್ಡಿ ಆಟಗಾರನಾಗಿ ಸಾಧಿಸಲು ಸಾಧ್ಯವಾಗದ್ದನ್ನೆಲ್ಲ ವಿನಯಚಂದ್ರ ಮಾಡಬೇಕು ಎನ್ನುವುದು ಚಿದಂಬರ ಸರ್ ಅವರ ಒತ್ತಾಸೆಯಾಗಿತ್ತು. ಆತ ಮೇಲ್ಮೇಲಿನ ಮಟ್ಟಕ್ಕೆ ಹೋದಂತೆಲ್ಲ ಅವರ ತರಬೇತಿ ಕಠಿಣವಾಗುತ್ತಿತ್ತು. ಅವರ ಒತ್ತಾಸೆಯನ್ನು ತಾನು ನಿರಾಸೆ ಮಾಡಿರಲಿಲ್ಲ. ಕಬ್ಬಡ್ಡಿಯಲ್ಲಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿ ವಿಶ್ವಕಪ್ ಆಡಲು ಹೊರಟಿದ್ದ. ಬಹುಶಃ ತನಗಿಂತಲೂ ಚಿದಂಬರ ಸರ್ ಹೆಚ್ಚು ಸಂತಸ ಪಟ್ಟಿರುತ್ತಾರೆ ಎಂದುಕೊಂಡ ವಿನಯಚಂದ್ರ. ಅವರ ಖುಷಿಗೆ ಪಾರವಿರಲಿಲ್ಲ ಎನ್ನುವುದು ಅವರ ಮಾರಿನಲ್ಲೇ ಸ್ಪಷ್ಟವಾಗುತ್ತಿತ್ತು. ಕಬ್ಬಡ್ಡಿಯನ್ನು ಶಾಸ್ತ್ರೋಕ್ತವಾಗಿ ಕಲಿಸಿದವರಿಗೆ ನಿರಾಸೆ ಮಾಡಲಿಲ್ಲವಲ್ಲ.. ಎಂದು ನಿಟ್ಟುಸಿರು ಬಿಟ್ಟ. ಹೀಗೆ ಚಿದಂಬರ ಸರ್  ನೆನಪುಮಾಡಿಕೊಂಡ ವಿನಯಚಂದ್ರ ಕಣ್ಣು ತೆರೆಯುವ ವೇಳೆಗಾಗಲೇ ವಿಮಾನ ನವದೆಹಲಿಯಲ್ಲಿ ಇಳಿಯಲು ಸಜ್ಜಾಗುತ್ತಿತ್ತು. ಪಕ್ಕದಲ್ಲಿದ್ದ ಸೂರ್ಯನ್ ಹಿತವಾಗಿ ಭುಜವನ್ನು ಅಲುಗಾಡಿಸಿ.. `ಅರೇ.. ಉಠೋ ಭಾಯ್...' ಎನ್ನುತ್ತಿದ್ದ. ನಸುನಕ್ಕು ವಿನಯಚಂದ್ರ ಇಳಿಯಲು ಸಜ್ಜಾಗಿದ್ದ.

(ಮುಂದುವರಿಯುವುದು)

Saturday, January 25, 2014

ಊಂಚಾಯಿ (ಕಥೆ)

ಪ್ರೀತಿಯ ಗೆಳತಿ,
        ಇಲ್ಲೀಗ ಅಲ್ಲಿಯಂತೆಯೇ ಸಂಜೆ ಆರು ಗಂಟೆ.. ಆದರೆ ಅಲ್ಲಿ ಹಿತ-ಮಿತವಾದ ಬೆಚ್ಚಗಿನ ವಾತಾವರಣ. ಇಲ್ಲಿ ಚುಮುಗುಡುವ ಅಲ್ಲಲ್ಲ.. ಕೊರೆ ಕೊರೆಯುವ ಚಳಿ..
         ಹುಡ್ಗೀ.. ನಿನ್ನನ್ನು ಬೀಳ್ಕೊಟ್ಟು ಬಂದು ಹತ್ತಿರ ಹತ್ತಿರ ಒಂದೂವರೆ ತಿಂಗಳಾಗುತ್ತ ಬಂದವು. ಪೋಸ್ಟಿಂಗು, ಅದು ಇದು ಎನ್ನುತ್ತ ಸಮಯವೇ ಸಿಕ್ಕಿರಲಿಲ್ಲ ನೋಡು. ಇದೋ ನಾನೀಗ ತಲೆಯಾನಿಸಿ ನಿನಗೆ ಪತ್ರ ಬರೆಯುತ್ತಿರುವ ಊರು ಪಾಕಿಸ್ತಾನ ಆಕ್ರಮಣ ಮಾಡಿಕೊಂಡಿರುವ ಕಾಶ್ಮೀರ ಸರಹದ್ದಿನಿಂದ ಕೇವಲ 6 ಕಿಲೋಮೀಟರಿನಲ್ಲಿದೆ. ಬಂಡೀಪೋರಾ. ನಾನು ಈಗ ನಿನಗೆ ಪತ್ರ ಬರೆಯುತ್ತಿರುವುದು ಇದೇ ಊರಿನಿಂದ. ಈ ಊರಿನ ಹೆಸರನ್ನು ಕೇಳಿದರೆ ನಿನಗೆ ತಟ್ಟನೆ ಬಂಡಿಪುರದ ನೆನಪಾಗಬಹುದಲ್ವಾ..? ಮೊದಲ ಸಾರಿ ಕೇಳಿದಾಗ ನನಗೂ ಹಾಗೇ ಅನ್ನಿಸಿತ್ತು.
          ನಾನು ಈಲ್ಲಿಗೆ ಬರಲು ಹೊರಟಾಗ ನೀನು ನನ್ನನ್ನು ಕಳಿಸಿಕೊಡ್ಬೇಕಂತ ಆ ದಿನ ಬಸ್ ಸ್ಟಾಂಡಿಗೆ ಬಂದಿದ್ಯಲ್ಲಾ ಆಮೇಲೆ ನಾನು ಸೀದಾ ಹುಬ್ಳಿಗೆ ಬಂದೆ. ಅಲ್ಲಿ ರೈಲು ಹತ್ತಿ ಮೂರು ದಿನ ಹಗಲು-ರಾತ್ರಿ ಪ್ರಯಾಣ ಮಾಡಿ ನಮ್ಮ ಡೆಲ್ಲಿ ಕ್ಯಾಂಪಿಗೆ ಬಂದೆ.  ಏನ್ಮಾಡ್ಲಿ ಹೇಳು? ಡೆಲ್ಲಿಗೆ ಹೋದರೂ, ಮಿಲಿಟರಿ ಪೆರೇಡ್ ನಲ್ಲಿ ಭಾಗವಹಿಸಿದರೂ ನಂಗೆ ನಿನ್ನದೇ ನೆನಪು. ಮನದ ತುಂಬ ನಿಂದೇ ಕಾಲುಗೆಜ್ಜೆಯ ರಿಂಗಣ. ಅಲ್ಲಿ ನಾಲ್ಕು ದಿನ ಇದ್ವಿ. ಆ ನಂತ್ರ ಸುಮಾರು 80 ಜನರ ನಮ್ಮ ತುಕಡಿ ಸಿಮ್ಲಾ, ಉಧಾಂಪುರ ಮಾರ್ಗದ ಮೂಲಕ ಮಿಲಿಟರಿ ಗಾಡಿಯಲ್ಲಿ ಮೂರಿ ದಿನಕ್ಕೆ ಇದೋ ಈ ಬಂಡಿಪೋರಾ ಎಂಬ ಹಿಮಚಾದರದ ನಾಡಿಗೆ ನಮ್ಮನ್ನು ಕರೆದುಕೊಂಡು ಬರಲಾಯಿತು.
            ನಿಂಗೊತ್ತಲ್ಲ.. ನಂಗೆ ಹಿಮ ಅದೆದ್ರೆ ಅದೆಷ್ಟು ಇಷ್ಟ ಅಂತ.. ನಂಗೆ ಇಲ್ಲಿಗೆ ಬಂದಾಗ ಒಂದ್ಸಲ ಮರಗಟ್ಟುವ ಆ ಚಳಿಯಲ್ಲೂ ಬಿಳಿ ಹಿಮ ರಾಶಿಯಲ್ಲಿ ಚಿಕ್ಕ ಮಗುವಿನಂತೆ ಹೊರಳಾಡಬೇಕು, ಬೊಗಸೆಯಲ್ಲಿ ಎತ್ತಿಕೊಂಡು ಪಕ್ಕದಲ್ಲಿದ್ದವರ ಮೈಮೇಲೆ ಎಸೆಯಬೇಕು ಅನ್ನಿಸಿತ್ತು... ಕಷ್ಟಪಟ್ಟು.. ನಾನೊಬ್ಬ ಮಿಲಿಟರಿಯ ಸೈನಿಕ ಅನ್ನೋದನ್ನು ನೆನಪಿಗೆ ತಂದ್ಕೊಂಡು ಅಂಥಾ ಆಸೆನ ಹತ್ತಿಕ್ಕಿಕೊಂಡೆ..
           ಇಲ್ಲಿಗೆ ಬಂದು ಆಗಲೇ ತಿಂಗಳಾಗುತ್ತ ಬಂತು ನೋಡು. ನಿನ್ನನ್ನು ಬಿಟ್ಟು ಬಂದು ಹತ್ತಿರ ಹತ್ತಿರ ನಲವತ್ತು ದಿನಗಳ ಮೇಲೆ ಐದೋ ಆರೋ ಹೆಚ್ಚಾಗಿದೆ. ಇಲ್ಲಿಗೆ ಬಂದು ತಲುಪಿದ ಎರಡೇ ದಿನಕ್ಕೆ ನಂಗೆ ರೌಂಡಿಂಗ್ಸ್ ಇತ್ತು. ಅಂದ್ರೆ ಬಂಡಿಪೋರಾದ ಸುತ್ತೆಲ್ಲ ಸುತ್ಹಾಕೋ ಕೆಲಸ. ಆಗಾಗ ಪಾಕಿಸ್ತಾನದ ಗಡಿಯಲ್ಲಿ ನಿಂತು ಗಡಿಯಾಚೆಗಿಂದ ಯಾರಾದರೂ ಇತ್ತಕಡೆ ನುಸುಳುತ್ತಾರಾ ಎಂದು ಮಂಜುಗಟ್ಟಿದ ವಾತಾವರಣದಲ್ಲಿ ನೋಡುವ ಕಾರ್ಯವೂ ನಮ್ಮಪಾಲಿಗಿತ್ತು. ಹೋಗೋವಾಗ ಏನು ಹುಮ್ಮಸ್ಸು ಅಂತೀಯಾ.. ಇಂತದ್ದೊಂದು ಅದ್ಭುತ ತಾಣದಲ್ಲಿ ಕೆಲಸ ಮಾಡಿದ್ರೆ ಹುಮ್ಮಸ್ಸು ತಂತಾನೆ ಬರ್ತಾ ಹೋಗ್ತದಂತಲ್ಲಾ.. ಏನೆಲ್ಲಾ ಸುಂದರ ಪ್ರದೇಶ ನೋಡಬಹುದು, ಮಂಜಿನ-ಹಿಮದ ಪದರು-ಪದರಿನಲ್ಲಿ ಲಗಾಮು ಕಿತ್ತುಕೊಂಡ ಕುದುರೆಯಂತೆ  ಓಡಿಯಾಡಬಹುದು ಅಂತೆಲ್ಲ ಕನಸು ಕಂಡೆ.. ಆ ದಿನ ನಾವು ಹತ್ತು ಜನರದ್ದೊಂದು ಪುಟ್ಟ ಭಾಗ, ಬಂಡಿಪೋರಾದ ರೌಂಡಿಂಗ್ಸ್ ಗೆ ಹೊಂಟಿತ್ತು.
            ಗೋವಾದ ಮಧು ಮಹಾಲೆ ಹಾಗೂ ಆಂಧ್ರದ ಶ್ರೀನಿವಾಸ ನಾಯ್ಡು ನಂಗೆ ಇಲ್ಲಿ ಮಿತ್ರರಾಗಿ ಸಿಕ್ಕಿದ್ದಾರೆ. ನಾವು ಮೂವರೂ ದಕ್ಷಿಣ ಭಾರತದವರಲ್ವಾ.. ಬೇಗ್ನೇ ಮಿತ್ರರಾದ್ವಿ. ಹಾಂ.. ಗೋವಾದವನಿಗೆ ಮದುವೆಯಾಗಿಲ್ಲ. ಆಂಧ್ರದವನಿಗೆ  ಮನೆಯಲ್ಲಿ ಮದುವೆ ತಯಾರಿ ನಡೆಯುತ್ತಿದೆಯಂತೆ. ವಿಚಿತ್ರವೋ ಎಂತದ್ದೋ ಗೊತ್ತಿಲ್ಲ. ನಾನು ಆ ದಿನ ರೈಲು ಹತ್ತಿದಾಗ ಅಕ್ಕ ಪಕ್ಕದ ಬರ್ತ್ ನಲ್ಲಿದ್ದ ಇವರು ಹಾಗೆ ಸುಮ್ಮನೆ ಪರಿಚಯವಾದರು. ಪರಿಚಯ ಮಾತುಕತೆಯಾಗಿ ಮುಂದುವರಿದಾಗ ಅವರೂ ಮಿಲಿಟರಿ ಮೇಂಬರ್ಸ್, ಅದರ ಜೊತೆಗೆ ನನ್ನದೇ ರೆಜಿಮೆಂಟಿನವರು ಅಂತ. ಆ ಮಧು ಇದ್ದಾನಲ್ಲ ಅಂವ ಅದ್ಯಾವ ಥರಾ ಮಾತಾಡ್ತಾನೆ ಗೊತ್ತಾ.. ಊಹೂಂ.. ಒಂದು ನಿಮಿಷವೂ ಸುಮ್ನೆ ಕೂರೋನಲ್ಲ. ಸಖತ್ ಕ್ರಿಯೆಟಿವ್ ಮನುಷ್ಯ. ಕೀಟಲೆಯ ಖಯಾಲಿಯಿದೆ.. ಥೇಟು ನಿನ್ನ ಥರಾನೆ..!
              ಆ ಬಂಡಿಪೋರಾ.. ಅದರ ಸ್ನಿಗ್ಧ ಸೌಂದರ್ಯಕ್ಕೆ ಸಾಟಿ ಯಾವುದೂ ಇಲ್ಲ. ಒಂದಕ್ಕಿಂತ ಒಂದು ಎತ್ತರ ಎನ್ನಿಸುವಂತಹ ಪರ್ವತಗಳು ಮನಸ್ಸಿನಲ್ಲಿ ಅಟಲ್ ಬಿಹಾರಿ ವಾಜಪೇಯಿಯವರ `ಊಂಚಾಯಿ' ಕವಿತೆಗಳನ್ನು ನೆನಪಿಗೆ ತರ್ತವೆ. ಪರ್ವತಗಳ ಬುಡದಲ್ಲಿ ಹಸಿರು ಅಲ್ಲಲ್ಲಿ ಕಾಣಸಿಕ್ಕರೂ ಪರ್ವತದ ತುದಿ ಮಾತ್ರ ಬೆಳ್ಳಗೆ ಬೆರಗು ಮೂಡಿಸುತ್ತದೆ. ಬಂಡಿಪೋರಾ ಹೇಳಲಿಕ್ಕೆ ಅಂತಹ ದೊಡ್ಡದೇನೂ ಅಲ್ಲ. ಹತ್ತಿರ ಹತ್ತಿರ ನಮ್ಮ ಕಾನಸೂರಿನ ಎರಡೋ ಮೂರೋ ಪಟ್ಟು ದೊಡ್ಡದಿರಬಹುದು. ಇಡೀ ಊರಿಗೆ ನಮ್ಮ ಮಿಲಿಟರಿ ಕ್ಯಾಂಪೆ ಬಹುದೊಡ್ಡ ಕಟ್ಟಡ ಎಂದರೂ ತಪ್ಪಾಗಲಿಕ್ಕಿಲ್ಲ. ಇಂತಹ ಊರನ್ನು ಸುತ್ಹಾಕೋದು ಏನು ಮಹಾ ಅಂದ್ಕೊಂಡೆ. ಹಾಗೇ ನಾವು ಸುತ್ತಲಾರಂಭ ಮಾಡಿದ್ವಿ ಕೂಡ.
               ಗೀಲ್ಗಿಟ್ಟು ನಮ್ಮ ಭಾರತ ಹಾಗೂ ನೆರೆಯ ಪಾಕಿಸ್ತಾನಕ್ಕೂ ನಡುವಣ ಸೀಮಾರೇಖೆಯಾಗಿರೋ ಎಲ್.ಒ.ಸಿ.ಯ ಹತ್ತಿರದಲ್ಲಿದೆ. ಅಂದರೆ ಕೇವಲ ಆರು ಕಿ.ಮಿ ದೂರದಲ್ಲಿ ಇರುವ ಕಾರಣ ಸದಾ ಒತ್ತಡದ ವಾತಾವರಣ ಇದ್ದೇ ಇರುತ್ತದೆ. ಹತ್ತಿರದಲ್ಲೇ ಪಾಕ್ ಆಕ್ರಮಣ ಮಾಡಿಕೊಂಡ ನೆಲದ ಗಡಿ, ನುಸುಳಿ ಬರುವ ಭಯೋತ್ಪಾದಕರು, ಹಾಗೆ ಅವರು ಬರುವ ನಂತರ ನಡೆಸುವ ದಾಂಧಲೆ, ಇವೆಲ್ಲಕ್ಕೂ ಮೂಲ ತಡೆ ಹಾಕಬೇಕೆಂದೇ ನಮ್ಮನ್ನು ಅಲ್ಲಿಗೆ ನಿಯೋಜನೆ ಮಾಡಿದ್ದರು.
              ಪುಟ್ಟಿ.., ನಿಂಗೆ ಗೊತ್ತಿದೆ.. ನಮ್ಮ ದೇಶಕ್ಕೂ, ನೆರೆಯ ಪಾಕಿಸ್ತಾನಕ್ಕೂ ತೊಂಭತ್ತೊಂಭತ್ತರಲ್ಲಿ ಯುದ್ಧ ಆಗಿತ್ತು. ನಾವು ಗೆದ್ದಿದ್ವಿ ಅಂತ. ಆಮೇಲೆ ಶಾಂತಿ ಒಪ್ಪಂದ ಎಲ್ಲಾ ಆಗಿ ಪರಿಸ್ಥಿತಿ ಶಾಂತವಾಗಿತ್ತು. ಪ್ರಸ್ತುತ ಈಗಲೂ ಆಗೊಮ್ಮೆ-ಈಗೊಮ್ಮೆ  ಭಯೋತ್ಪಾದಕರು ಗಡಿಯ ಒಳಗೆ ನುಸುಳಿ ಬರ್ತಿರ್ತಾರೆ. ಅವರ ಜೊತೆಗೆ ಆಗೀಗ ಅಷ್ಟಿಷ್ಟು ಗುಂಡಿನ ಕಾಳಗ ಆಗ್ತದೆ ಅನ್ನೋದು ಬಿಟ್ಟರೆ ಉಳಿದಂತೆ ಶಾಂತಿಯೇ. ಆದರೆ ಹೀಗೆ ಶಾಂತಿಯಿದೆ ಅಂತ ದೇಶ ಕಾಯದೇ ಹೋದ್ರೆ..? ಸರಿಯಲ್ಲ.. ಆ ಕಾರಣಕ್ಕೆ ನಮ್ಮನ್ನ ರೌಂಡಿಂಗ್ಸ್ ಗೆ ಕಳಿಸ್ತಿದ್ದುದ್ದು.
               ನಮ್ಮ ರೌಂಡಿಂಗ್ಸ್ ನಲ್ಲೂ ಎಂತಾ ಶಿಸ್ತಿದೆ ಗೊತ್ತಾ.. ನಾವು ಬೇಕಾಬಿಟ್ಟಿ, ಎಲ್ಲೆಂದರಲ್ಲಿ ಹೋಗೋ ಹಾಗೇ ಇಲ್ಲ. ನಮ್ಮ ಮೇಲಿನವರು ಹೇಳಿದ ಹಾಗೇ ಮಾಡಬೇಕು-ಹೇಳಿದಲ್ಲೇ ನಡೀಬೇಕು. ಸ್ವಲ್ಪ ತಪ್ಪಿದ್ರೂ ತುಂಬಾ ಶಿಕ್ಷೆ. ಮಿಲಿಟರಿಯ ಕಟ್ಟುನಿಟ್ಟು. ಆದರೆ ಮನಸ್ಸು ಕನಸು ಕಾಣೋದಕ್ಕೆ ಮಿಲಿಟರಿಯಿಂದ ತಡೆ ಹಾಕಲು ಸಾಧ್ಯವಿಲ್ಲವಲ್ಲಾ..
               ನಾನು ರೌಂಡಿಂಗ್ಸ್ ತುಂಬಾ ನಿನ್ನದೇ ನೆನಪಲ್ಲಿ ಇದ್ದೆ. ಒಂದ್ಸಲ ನಿನ್ನ ಈ ಬಂಡಿಪೋರಾಕ್ಕೆ ಕರೆದುಕೊಂಡು ಬರಬೇಕು.. ಇಲ್ಲಿನ ಬೀದಿಯಲ್ಲಿ ನಿನ್ನನ್ನು ಅಡ್ಡಾಡಿಸಬೇಕು. ಇಬ್ಬರೂ ಕೈ-ಕೈ ಹಿಡಿದುಕೊಂಡು ಬೆಳದಿಂಗಳಿನಿರುಳಲ್ಲಿ ನಡೆಯುತ್ತಾ ಹಿಮವತ್ಪರ್ವತದ ತುಂಬೆಲ್ಲಾ ಸುತ್ತಾಡಬೇಕು ಅಂದುಕೊಂಡೆ. ನಿನ್ನ ನೆನಪಿನಲ್ಲೇ ಇದ್ದ ನಾನು ಒಂದೆರಡು ಸಾರಿ ಶಿಸ್ತು ತಪ್ಪಿದ್ದೆ. ಇದನ್ನು ಅರಿತ ಮಧು ನಂಗೆ ಆಗೊಮ್ಮೆ ಗದರಿದ್ದ.. ನಾನು ನಕ್ಕುಬಿಟ್ಟಿದ್ದೆ. ಈಗಲೂ ನಂಗೆ ಅವಕಾಶ ಸಿಕ್ಕರೆ ಈ ಹಿಮವತ್ತಾದ ನಾಡಲ್ಲೇ ಜಮೀನು ಕೊಂಡು ಮನೆ ಮಾಡಿ ಇಲ್ಲೇ ವಾಸಮಾಡಿ ಬದುಕಬೇಕೆಂಬ ಆಸೆ.. ಏನಾಗುತ್ತೋ..?
              ಬಂಡೀಪೋರಾದ ತುತ್ತ ತುದಿಯಲ್ಲಿ ಕೆರೆಯೊಂದಿದೆ. ಕೆರೆಯೆಂದರೆ ಕೆರೆಯಲ್ಲ. ಸಮುದ್ರದಂತೆ ದೊಡ್ಡದು. ವರ್ಷದ ಆರು ತಿಂಗಳುಗಳ ಕಾಲ ಅದು ಐಸಾಗಿರುತ್ತದೆ. ಉಳಿದ ಸಮಯ ನೀರು ಕಾಣಿಸುತ್ತದೆ. ಸ್ಥಳೀಯ ಭಾಷೆಯಲ್ಲಿ ಅದೇನೇನೋ ಕರೆಯುತ್ತಾರೆ. ನನಗೆ ಅದನ್ನು ಹೇಳಲಿಕ್ಕೆ ಕಷ್ಟವಾಗುತ್ತಿದೆ. ಇಲ್ಲೇ ಕೆಳಗೆ ಕಣಿವೆಯೊಂದಿದೆ. ಕಣಿವೆಯಲ್ಲೊಂದು ಪುಟ್ಟ ನದಿ. ಅದರ ಹೆಸರೇನೋ ಗೊತ್ತಿಲ್ಲ. ಇಲ್ಲಿನ ಭಾಷೆ ವಿಚಿತ್ರವಾದುದು. ನಾನು ಆ ನದಿಯ ಹೆಸರನ್ನು ಬಿಡಿಸಿ ಬಿಡಿಸಿ ಕೇಳಿದಾಗ ಅದು ಚಂಪಾ ಎಂಬ ಅರ್ಥವನ್ನು ನೀಡುತ್ತದೆ. ನಾನು ಅದನ್ನು ಚಂಪಾ ಎಂದೇ ಕರೆಯುತ್ತಿದ್ದೇನೆ. ಅದೆಂತಾ ಓಘವಿದೆ ಅಂತೀಯಾ ಆ ನದಿಗೆ.. ಒಮ್ಮೆ ಜುಳು ಜುಳು, ಮತ್ತೊಮ್ಮೆ ನಿಧಾನ-ನಿನಾದ. ನೀನು ಇಲ್ಲಿದ್ದರೆ ಇಷ್ಟು ಹೊತ್ತಿಗೆಲ್ಲಾ ಆ ಚಂಪಾ ನದಿಯ ದಡದಲ್ಲಿ ನಡೆಯುತ್ತಾ ಹೋಗಿಬಿಡುತ್ತಿದ್ದೆ.
               ನಾ ನಿಂಗೆ ಆಗ್ಲೇ ಮಧು ಗದರಿದ್ದ ಸುದ್ದಿ ಹೇಳ್ದೆ ಅಲ್ವಾ.. ಆಗ್ಲೇ ಒಂದು ಮಜಾ ಸಂಗತಿ ನಡೀತು. ಆತ ನನ್ನ ಬಳಿ ಕೀಟಲೆ ಮಾಡುತ್ತಾ `ಏನ್ ದೋಸ್ತ್, ಯಾರದ್ದೋ ಕನಸು ಕಾಣ್ತಿದ್ದೀಯಾ..?' ಅಂದ. ನಾನು ಹೇಳಲಿಲ್ಲ. ಕೊನೆಗೆ ತುಂಬಾ ಒತ್ತಾಯ ಮಾಡಿದ ನಂತರ ನಿನ್ನ ಪೋಟೋ ತೋರಿಸಿದೆ. ಅಂದೊಮ್ಮೆ, ನಾನೇ ಬಂದು ಪ್ರೀತಿಸ್ತಿದ್ದೀನಿ ಅಂತಂದ ಎರಡನೇ ದಿನಕ್ಕೆ ನೀನು ಒಪ್ಪಿದ ನಂತರ ಒತ್ತಾಯ ಮಾಡಿ ನಿನ್ನಿಂದ ಇಸ್ಕೊಂಡಿದ್ದ ಪೋಟೋ ಅದು. ನೋಡಿದವನೇ ಆತ `ದೋಸ್ತ್..ತುಂಬಾ ಚನ್ನಾಗಿದ್ದಾಳೆ. ಭಾಳ ಲಕ್ಷಣವಂತೆಯಂತೆ ಕಾಣಿಸ್ತಾಳೆ. ನೀನೇನೂ ಅಂದ್ಕೊಳ್ಳೋದಿಲ್ಲ ಅಂದ್ರೆ ಒಂದ್ಮಾತು. ನಂಗೀ ಇಂಥದ್ದೇ, ಲಕ್ಷಣವಂತೆಯಾದ ಹುಡುಗಿ ಸಿಗಬೇಕು ಅಂದ್ಕೊಂಡಿದ್ದೀನಿ.. ನೀನೇ ಹುಡುಕಿ ಕೊಡಬೇಕು.. ದೋಸ್ತ್.. ಏನಂತೀಯಾ..?' ಅಂದ. `ಸಿಗದೇ ಏನು..ಸಿಕ್ಕೇ ಸಿಕ್ತಾಳೆ ಬಿಡು.. ಕೋತಿ ಹಾಗಿರೋಳು..' ಅಂತ ಛೇಡಿಸಿ ನಕ್ಕಿದ್ದೆ..
                ಹೌದೇ.., ನೀನು ತುಂಬಾ ಲಕ್ಷಣವಂತೆ. ಅದಕ್ಕೇ ಅಲ್ವಾ ನಾನಿನ್ನ ಇಷ್ಟಪಟ್ಟಿದ್ದು.. ಕಾಡಿ ಬೇಡಿ ಬೆನ್ನುಬಿದ್ದು ಪ್ರೀತ್ಸಿದ್ದು. ಯಾರಿಗೂ ಸಿಗದಂತಹ ನಿರ್ಮಲ ಪ್ರೀತಿ ನಂಗೆ ಸಿಕ್ಕಿದೆ ಅಂದ್ಕೊಂಡಿದ್ದು.., ಅಲ್ದೇ ಆ ಪ್ರೀತಿಗೆ ನಿಷ್ಟನಾಗಿ ಬದುಕಿದ್ದು.
                ನಿಂಗೆ ಗೊತ್ತಿಲ್ಲ, ನಾನು ನನ್ನಮ್ಮನ ಬಳಿ ನಿನ್ನ ಸುದ್ಧಿ ಹೇಳಿದಾಗೆಲ್ಲಾ `ಒಂದ್ಸಾರಿ ಆಕೇನ ಮನೆಗೆ ಕರ್ಕೊಂಡು ಬಾರೋ, ನಾನು ಆಕೆಯ ಬಳಿ ಮಾತಾಡಬೇಕು. ಆಕೆ ಹೇಗೆ ಎಂದು ನೋಡಬೇಕು..' ಅಂದಿದ್ದಳು. ಆಗ ನಾನು `ಡೋಂಟ್ ವರಿ ಅಮ್ಮ.. ಒಂದಿನ ಅವಳ್ನ ಮದುವೆಯಾಗಿಯೇ ಕರ್ಕೊಂಡು ಬರ್ತೀನಿ..' ಅಂದುಬಿಟ್ಟಿದ್ದೆ. ಈ ಬಂಡೀಪೋರಾದ ಹಿಮದ ಮೆಟ್ಟಿಲ ಮೇಲೆ ಕುಳಿತು ಇದನ್ನೆಲ್ಲ ನೆನಪು ಮಾಡ್ಕೊಂಡ್ರೆ ಮನಸ್ಸೆಷ್ಟು ರೋಮಾಂಚನ ಹೊಂದುತ್ತೆ ಗೊತ್ತಾ..? ಹುಂ. ನನ್ನ ಬದುಕಿನ ಆಳವನ್ನು ಹುಡುಕಿದ್ರೆ ಅಲ್ಲಿ ಕಾಣೋದು ಮೂರೇ ಮೂರು ನೀನು, ನನ್ನ ಕುಟುಂಬ ಹಾಗೂ ಈ ಹಿಮ.
               `ಲೋ.. ಮಿಲಿಟರಿಗೆ ಸೇರ್ತಿದ್ದೀಯಾ.. ಹುಷಾರು ಕಣೋ.. ಟೇಕ್ ಕೇರ್. ಕತ್ತಿ ಅಲುಗಿನ ಮೇಲಿನ ಬದುಕು ಅದು. ಎಂದಿಗೂ ತೀರಾ ಮೈಮರೀಬೇಡ.. ಮೈಯೆಲ್ಲ ಕಣ್ಣಾಗಿರು ಡಿಯರ್..' ಅಂತ ನಾನು ಹೊರಡೋ ಮುನ್ನ ನೀನು ಹೇಳಿದ ಮಾತುಗಳಿನ್ನೂ ನನ್ನ ಕಿವಿಯಲ್ಲಿನ್ನೂ ಗುಣಗುಣಿಸುತ್ತಾ ಇದೆ.
               ಎಲ್ಲಾ ಹೇಳಿದೆ, ನಿಂಗೆ ಇನ್ನೊಂದು ಮುಖ್ಯ ವಿಷಯ ಹೇಳೋದನ್ನು ಮರೆತೇ ಬಿಟ್ಟಿದ್ದೆ ನೋಡು. ಮನದ ತುಂಬಾ ನಿನ್ನದೇ ಬಿಂಬ ಇಟ್ಗೊಂಡು ಆ ದಿನ ಬಂಡಿಪೋರಾದ ರೌಂಡಿಂಗ್ಸ್ ಗೆ ಹೋದೆ. ಜೊತೆಯಲ್ಲಿ ಮಧು, ನಾಯ್ಡು ಇದ್ದರು. ಹಲವು ದಿನಗಳಿಂದ ಶಾಂತವಾಗಿದ್ದ ಬಂಡಿಪೋರಾ ಆವತ್ತು ಕೊಂಚ ಬದಲಾಯ್ತು. ಆ ದಿನ ಎಂದಿನ ಹಾಗೇ ಇರಲೇ ಇಲ್ಲ. ಅದೆಲ್ಲಿದ್ದರೋ ಏನೋ, ಒಮ್ಮೆಲೆ ಐದಾರು ಜನ ಮುಸುಕುಧಾರೀ ಭಯೋತ್ಪಾದಕರು ಗಡಿಯೊಳಗೆ ನುಸುಳಿ ಬಂದು ಬಿಟ್ಟಿದ್ದರು. ಬಂದವರೇ ದಾಂಧಲೆ ಶುರುಹಚ್ಚಿಕೊಂಡರು.
               ಆ ಹೊತ್ತಿನಲ್ಲಿ ನಾವು ಬಂಡೀಪೋರಾದ ಫಾಸಲೆಯಲ್ಲೇ ಇರುವ ನೋ ಮ್ಯಾನ್ಸ್ ಲ್ಯಾಂಡ್ ಬಳಿ ಇದ್ದೆವು. ತಕ್ಷಣ ನಮಗೆ ಸುದ್ದಿ ತಿಳಿಯಿತು. ನಮ್ಮ ಗ್ರೂಪ್ ಅಲ್ಲಿ ಅವರು ದಾಂಧಲೆ ಮಾಡುತ್ತಿದ್ದೆಡೆಗೆ ತೆರಳಿತು. ನಾವು ಅಲ್ಲಿಗೆ ಹೋಗುವ ವೇಳೆಗಾಗಲೇ ಎರಡು ಜನ ಬಂಡೀಪೋರಾ ನಿವಾಸಿಗಳನ್ನು ಕೊಂದು ಅವರು ಅಲ್ಲೆಲ್ಲೋ ಅಡಗಿ ಕುಳಿತಿದ್ದರು.
              ಬಂಡಿಪೋರಾ ಒಂಥರಾ ವಿಚಿತ್ರ ಊರು. ಊರು ವಿಚಿತ್ರವಾದುದಾದರೂ ಓಣಿ ಓಣಿಯಂತಹ ಮನೆಗಳು ನಮ್ಮನ್ನು ಕಾಡುತ್ತವೆ. ಮಣ್ಣಿನ ಗೂಡಿನಂತಹ ಮನೆಗಳು. ಬಹುತೇಕ ಮನೆಗಳಿಗೆ ಕಿಟಕಿಗಳೇ ಇಲ್ಲ. ತೀರಾ ಓದಿಕೊಂಡ ಕೆಲವೊಂದು ಮನೆಗಳಲ್ಲಿ ಮಾತ್ರ ಕಿಡಕಿಗಳನ್ನು ಇರಿಸಲಾಗಿದೆ. ವರ್ಷದ ಬಹುಕಾಲ ಹಿಮಪಾತವಾಗುವ ಕಾರಣ ಮನೆಯ ಮುಂದೆಲ್ಲ ಬಿಳಿ ಬಿಳಿ ಐಸ್ ಹುಡಿಗಳು. ಮನೆಯೊಳಗೆ ಚಳಿ ಕಾಸಲು ಅಗ್ಗಷ್ಟಿಕೆ. ನಮ್ಮ ಭಾಗದಲ್ಲಿ ಹೊಡ್ಸಲು ಅನ್ನುತ್ತಾರಲ್ಲ ಹಾಗೆ. ಅದರ ಎತ್ತರದ ಚಿಮಣಿ ನಮಗೆ ದೂರದಿಂದಲೇ ಕಾಣಿಸುತ್ತವೆ. ಊರಿನ ತುಂಬೆಲ್ಲ ವಿದ್ಯುತ್ ತಂತಿಗಳು ಹಾದುಹೋಗಿವೆ. ಆದರೆ ಹೆಚ್ಚಿನ ಮನೆಗಳಿಗೆ ವಿದ್ಯುತ್ ಸಂಪರ್ಕವಿದ್ದರೂ ಯಾರೂ ಹೆಚ್ಚಿಗೆ ಅದನ್ನು ಬಳಕೆ ಮಾಡುವುದಿಲ್ಲ. ಬಂಡಿಪೋರಾದ ಊರುಗಳಲ್ಲಿ ಹೆಚ್ಚಿನ ಮನೆಗಳಲ್ಲಿ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳನ್ನು ಕಾಣುವುದು ಅಪರೂಪ. ನಮ್ಮಲ್ಲಿಯಂತೆ ಅಡಿಗೆಗೆ ಮಿಕ್ಸರ್, ಗ್ರೈಂಡರ್, ಮಜ್ಜಿಗೆ ಕಡೆಯುವ ನವನೀತ ಮಿಷನ್, ಮನರಂಜನೆಗೆ ಟೀವಿ, ಟೇಪ್ ರೆಕಾರ್ಡರ್, ಸೌಂಡ್ ಸಿಸ್ಟಮ್, ಕಂಪ್ಯೂಟರ್, ಬಟ್ಟೆ ತೊಳೆಯುವ ವಾಷಿಂಗ್ ಮೆಷಿನ್ ಊಹೂಂ.. ಏನೆಂದರೆ ಏನೂ ಇಲ್ಲ. ಹೆಚ್ಚಿನ ಮನೆಗಳಲ್ಲಿ ಸಂಜೆ 8ಗಂಟೆಯ ನಂತರ ಕರೆಂಟ್ ದೀಪವನ್ನೂ ಹಾಕೋದಿಲ್ಲ. ಭಯೋತ್ಪಾದಕರ ಬಗ್ಗೆ ಭಯವಾ..? ಆಧುನಿಕ ಯಂತ್ರಗಳ ಬಳಕೆಯ ಕುರಿತು ಏನಾದರೂ ಮೂಢನಂಬಿಕೆಯಾ..? ಅಥವಾ ಇನ್ಯಾವುದೇ ಸಮಸ್ಯೆಗಳಿವೆಯಾ.? ಊಹೂಂ. ಏನೋಂದೂ ಗೊತ್ತಿಲ್ಲ. ನಾನೂ ಅದನ್ನು ಕೇಳಲು ಯತ್ನಿಸಿಲ್ಲ.
                ಆ ಬಂಡಿಪೋರಾದ ಬೀದಿಗಳಲ್ಲಿ ಭಯೋತ್ಪಾದಕರನ್ನು ಹುಡುಕೋಕೆ ಅದೆಷ್ಟು ಕಷ್ಟ ಪಟ್ವಿ ಗೊತ್ತಾ. ಕೊನೆಗೆ ಅದೊಂದು ಓಣಿಯಲ್ಲಿ ಎರಡು ಜನ ಕಂಡರು. ಗುಂಡಿನ ಚಕಮಕಿ ಶುರುವಾಗಿಯೇ ಬಿಟ್ಟಿತು. ಆ ಉಗ್ರಗಾಮಿಗಳು ಒಳ್ಳೆಯ ಆಯಕಟ್ಟಿನ ಸ್ಥಳದಲ್ಲಿದ್ದರು. ನಮಗೆ ಅಂತಹ ಸ್ಥಳ ಸಿಕ್ಕಿರಲಿಲ್ಲ. ಅವರು ಸಲೀಸಾಗಿಯೇ ನಮ್ಮ ಮೇಲೆ ಫೈರಿಂಗ್ ಮಾಡುತ್ತಿದ್ದರು. ನಾವು ಹಾಗೆ ಮಾಡಿದರೆ ಅವರು ಮರೆಯಾಗುತ್ತಿದ್ದರು. ಬಂಡಿಪೋರಾದ ಓಣಿ, ಹಾಗೂ ವಿಚಿತ್ರ ಇಕ್ಕಟ್ಟಾದ ಮನೆಗಳು ಮಧ್ಯ ಮಧ್ಯ ಹಿಮದ ಪದರದ ಗುಡ್ಡೆ ಇವೇ ಭಯೋತ್ಪಾದಕರಿಗೆ ಶ್ರೀರಕ್ಷೆಯಾಗಿತ್ತು. ನಾನು, ಮಧು, ನಾಯ್ಡು ಆ ಇಬ್ಬರು ಭಯೋತ್ಪಾದಕರನ್ನು ಕಷ್ಟಪಟ್ಟಾದರೂ ಬೆನ್ನಟ್ಟಿದ್ವಿ. ಆದರೆ ಅದೃಷ್ಟ ನಮ್ಮ ಕಡೆಗಿರಲಿಲ್ಲ. ನಾನು ಹಾಗೂ ಮಧುಗಿಂತ ಸ್ವಲ್ಪ ಮುಂದಿದ್ದ ನಾಯ್ಡುವಿನ ಎದೆಗೆ ಒಂದು ಗುಂಡು ಹೊಕ್ಕಿತು. ಅಲ್ಲೇ ಆತ ಕುಸಿಯತೊಡಗಿದ. ತಕ್ಷಣವೇ ನಾನು ಅಲರ್ಟ್ ಆಗಿ ಗುಂಡು ಹೊಡೆದೆ. ಒಬ್ಬ ಭಯೋತ್ಪಾದಕನಿಗೆ ತಾಗಿರಬೇಕು. ನಾನು ಅದನ್ನು ಗಮನಿಸಲೂ ಇಲ್ಲ. ಸೀದಾ ನಾಯ್ಡುವಿನ ಹತ್ತಿರಕ್ಕೆ ಹೋದೆ.
                ಆತನ ಉಸಿರು ಅಡಗುತ್ತಿತ್ತು. ದೇಹವೆಲ್ಲ ರಕ್ತದಲ್ಲಿ ಅದ್ದು ತೆಗೆದಂತಾಗಿತ್ತು. ಬಿಳಿ ಹಿಮವೆಲ್ಲ ಕೆಂಪು ಕೆಂಪಾಗಿತ್ತು. ಗುಂಡು ತಾಗಿದ ಜಾಗದಿಂದ ರಕ್ತ ಒರತೆಯಂತೆ ಉಕ್ಕುತ್ತಿತ್ತು. ನನ್ನಂತಹ ಸಮಚಿತ್ತದ ವ್ಯಕ್ತಿಗೇ ಆ ದೃಶ್ಯ ಒಮ್ಮೆ ಎದೆ ಹಿಂಡಿದಂತಾಯ್ತು. ನಾ ಚಿಕ್ಕದಾಗಿ ಕಂಪಿಸಿದೆ. `ನನ್ನ ಮನೇವ್ರನ್ನ ಚನ್ನಾಗಿ ನೋಡ್ಕೋ..' ಅಂದವನಿಗೆ ನಾನು ಮಾತುಕೊಡುವ ಹೊತ್ತಿಗೆ ನಾಯ್ಡು ಎಚ್ಚರ ತಪ್ಪಿದ.
               ಆ ನಂತರವೂ ಕಾಳಗ ಮುಂದುವರಿಯಿತು. ನಂಗೆ ತುಂಬಾ ಸಿಟ್ಟು ಬಂದಿತ್ತು. ನಾಯ್ಡುಗೆ ಗುಂಡು ಹೊಡೆದವರ ಮೇಲೆ ಸೇಡು ತೀರಿಸಿಕೊಳ್ಳಬೇಕೆಂದು ಮುನ್ನುಗ್ಗಿ, ಇದ್ದೊಬ್ಬ ಭಯೋತ್ಪಾದಕನೆಡೆಗೆ ಓಡಿದೆ. ಇದೇ ನಾ ಮಾಡಿದ ತಪ್ಪಾಗಿತ್ತು.  ಓಡುತ್ತಿದ್ದ ನನಗೆ ಅದೆಲ್ಲಿಂದಲೋ ಬಂದ ಗುಂಡೊಂದು ನನ್ನ ತೊಡೆಗೆ ನಾಟಿತು. ನಾನು ಎಚ್ಚೆತ್ತುಕೊಳ್ಳುವುಷ್ಟರಲ್ಲಿ ಮತ್ತೊಂದು ಗುಂಡು ಹೊಟ್ಟೆಗೆ ಬಡಿಯಿತು. ನಾನೂ ಕೂಡ ಕುಸಿಯತೊಡಗಿದೆ. ಅಷ್ಟರಲ್ಲಿ ಮಧು ಆ ಭಯೋತ್ಪಾದಕನನ್ನು ಕೊಂದು ಹಾಕಿದ. ಆ ನಂತರ ಅಂವ ನನ್ನ ಬಳಿ ಓಡಿ ಬರತೊಡಗಿದ. ಊಹೂಂ.. ಪೂರ್ತಿ ಹತ್ತಿರ ಬರಲಿಲ್ಲ. ಅಷ್ಟರಲ್ಲೇ ನನಗೆ ಎಚ್ಚರ ತಪ್ಪಿತು. ಮನಸ್ಸು ಕತ್ತಲಾಯಿತು.

***

               ಅಷ್ಟರ ನಂತರ ಎಷ್ಟು ದಿನ ಮಲಗಿದ್ದೆನೋ. ಈಗೊಂದೆರಡು ದಿನಗಳ ಹಿಂದೆ ನನಗೆ ಎಚ್ಚರಾಯಿತು. ನನಗೆ ಗುಂಡು ಬಿದ್ದ ದಿನ ಮಧು ನನ್ನ ಕಾಪಾಡಿದ್ನಂತೆ. ಪಾ..ಪ.. ನಾಯ್ಡು ಮರುದಿನ ಸತ್ತು ಹೋದ್ನಂತೆ. ನಿಂಗೆ ನಾನೀಗ ಒಂದು ಸಂಗತಿ ಹೇಳಬೇಕು.
               ಇತ್ತೀವರೆಗೆ ನೀನು ನನ್ನ ಚಂದಾಗಿ ಪ್ರೀತಿಸಿದೆ. ಕನಸಾದೆ.. ಬದುಕಾಗಿದ್ದೆ.. ಉಸಿರಾಗಿದ್ದೆ.. ಆದರೆ ಇನ್ನು ಮುಂದೆ ನೀನು ನನ್ನನ್ನು ಮರೆತುಬಿಡಬೇಕು. ಯಾಕೆ ಗೊತ್ತಾ, ನಂಗೀಗ ನಡೆಯೋಕೆ ಕಾಲಿಲ್ಲ. ಗುಂಡು ತಾಗಿದ ನಂತರ ಅದು ಕೆಲಸ ಮಾಡುವುದನ್ನು ನಿಲ್ಲಿಸಿದೆ. ಇನ್ನೂ ಒಂದು ಸಂಗತಿ ಹೇಳಲಾ..? ಆ ದಿನ ನನ್ನ ಹೊಟ್ಟೆಗೆ ಗುಂಡು ಬರಿದಿತ್ತಲ್ಲಾ, ಅದು ನನ್ನ ಜಠರಕ್ಕೆ ಹಾಗೂ ಪಿತ್ತಜನಕಾಂಗಕ್ಕೆ ತುಂಬಾ ಪೆಟ್ಟು ಮಾಡಿದೆಯಂತೆ. ಸರಿಪಡಿಸಲು ಸಾಧ್ಯವೇ ಇಲ್ಲದಷ್ಟು. ಮಿಲಿಟರಿ ವೈದ್ಯರು ನಾನು ಇನ್ನೆಷ್ಟು ದಿನ ಬದುಕಿರುತ್ತೇನೋ ಗೊತ್ತಿಲ್ಲ ಎಂದು ಬಿಟ್ಟಿದ್ದಾರೆ. ಅದಕ್ಕೇ ನಾ ಹೇಳಿದ್ದು ನೀ ನನ್ನ ಮರೆತುಬಿಡು ಅಂತ.
               ಹುಂ... ನಿಂಗಾಗಿ ಒಬ್ಬ ಹುಡುಗನನ್ನು ನಾನು ನೋಡಿಟ್ಟಿದ್ದೀನಿ.. ಅಂವನೇ ಮಧು. ಆತ ನನ್ನ ಕುಟುಂಬವನ್ನೂ, ನಿನ್ನನ್ನೂ ಚನ್ನಾಗಿ ನೋಡ್ಕೋತೀನಿ ಅಂತ ನನಗೆ ಮಾತು ನೀಡಿದ್ದಾನೆ. ನಿಂಗೂ ಬೆಳಕಾಗಿ ಜೊತೆಯಲ್ಲೇ ಇರುತ್ತಾನೆ. ಅವನ ಇಷ್ಟದ ಲಕ್ಷಣವಂತೆ ಹುಡುಗಿ ನೀನಾಗಿರು.. ಒಳ್ಳೆ ಹುಡುಗನನ್ನು ಮಿಸ್ ಮಾಡ್ಕೊಳ್ಳಬೇಡ.
               ನೀನು ನಂಗೆ ಕೆಲ ಕಾಲದಲ್ಲೇ ಒಳ್ಳೆಯ ಅನುಭೂತಿ ಕೊಟ್ಟಿದ್ದೀಯಾ.. ಅದನ್ನು ಮರೆಯೋಲ್ಲ.. ಮುಂದೆ ಬರೋ ಜನ್ಮದಲ್ಲಿ ನಿಂಗೇ ನಾನು ಸಿಗ್ಲಿಕ್ಕೆ ಪ್ರಯತ್ನಿಸ್ತೀನಿ.. ನಂಗೀಗ ಎದ್ದು ನಿಲ್ಲಲೂ ಆಗ್ತಿಲ್ಲ ನಿಜ.. ಈ ಮಿಲಿಟರಿ ಆಸ್ಪತ್ರೆಯಲ್ಲಿ ಮಲಗಿ ನಿಂಗೆ ಪತ್ರವನ್ನು ಬರೆಯುತ್ತಿದ್ದೇನೆ. ಜೊತೆಯಲ್ಲೇ ಮಧು ಇದ್ದಾನೆ. ಅವನ ಬಳಿ ನಿನ್ನನ್ನು ಮದುವೆಯಾಗಬೇಕು ಎಂದು ಹೇಳಿ ಮಾತು ತೆಗೆದುಕೊಂಡಿದ್ದಾನೆ. ನೀನು ಅವನನ್ನು ಮದುವೆ ಆಗಲೇ ಬೇಕು. ನನ್ನನ್ನು ನೀನು ಮರೀಲೇ ಬೇಕು. ಮರೀತಿಯಾ ಅಂದ್ಕೊಂಡಿದ್ದೀನಿ. ನಿಂಗಾಗಿ ಮಧು ಇದ್ದಾನೆ. ಇರ್ತಾನೆ.
               ಅಂದಹಾಗೆ ನನಗೆ ಅಟಲ್ ಜಿಯ ಊಂಚಾಯಿ ಕವಿತೆಗಳು ಮತ್ತೆ ಮತ್ತೆ ಸೆಳೆಯುತ್ತಿವೆ. ನೀ ನನ್ನ ಮರೆತರೆ ಮಾತ್ರ ಯಾಕೋ ನಾನು ಧನ್ಯನಾದಂತೆ ಅನ್ನಿಸುತ್ತಿದೆ. ಇನ್ನು ಹೆಚ್ಚು ಬರೆಯಲು ನನ್ನಲ್ಲಿ ತ್ರಾಣವಿಲ್ಲ. ಇದೋ ನಾನು ಈ ಪತ್ರಕ್ಕೊಂದು ಕೊನೆಯ ಬಿಂದು ಇಡುತ್ತಿದ್ದೇನೆ. ಮತ್ತೊಮ್ಮೆ ನೀನು ನನ್ನನ್ನು ಮರೆಯಲೇ ಬೇಕು. ಮರೀತಿಯಾ ಎನ್ನುವ ಆಶಯದೊಂದಿಗೆ
ಜೈಹಿಂದ್

ಅಂದೊಮ್ಮೆ ನಿನ್ನವನು
ವಿನು


***
(ಈ ಕಥೆ ಬರೆದಿದ್ದು 19-06-2008ರಂದು ದಂಟಕಲ್ಲಿನಲ್ಲಿ)

Friday, January 24, 2014

ಮುತ್ತಿಗೆ

ಮುತ್ತೇ...
ಅಂದೊಮ್ಮೆ ನೀ
ನನ್ನ ಸ್ವತ್ತೆಂದು
ನಾ ತಿಳಿದಿದ್ದೆ |
ನಿನ್ನೆಡೆಯಲ್ಲಿ ನಾ
ಕನಸು ಕಟ್ಟಿದ್ದೆ |
ಪಡೆಯಬಯಸಿದ್ದೆ |

ಆದರೆ ಇಂದು
ಅರಿವಾಗಿದೆ ನೀ
ಪರರ ಸ್ವತ್ತೆಂದು |
ಹಾಗೇ ನನ್ನ ಪಾಲಿಗೆ
ನೀ ಆಪತ್ತೆಂದು, ಹಾಗೇ
ಒಡಲಿಗೆ ಕುತ್ತೆಂದು |

ಇರಲಿ ಬಿಡು ಮುತ್ತೇ...
ಸಾಗರದ ಗರ್ಭದೊಳೆಲ್ಲೋ
ಅಡಗಿ ಮುಳುಗಿದ್ದ ನಿನ್ನ,
ಕಪ್ಪೆ ಚಿಪ್ಪಿನ ಆ
ಬಾಯೊಳಗಿಂದ ಹೆಕ್ಕಿ
ತಂದ ಸವಿಯಷ್ಟೇ
ನನಗೆ ಸಾಕು |

ಮುತ್ತೇ...
ಇಂದಿನಾ ಜನ್ಮದಲ್ಲಿ
ಮುಗಿಯಿತು.
ಮುಂದೆಯಾದರೂ ನೀ
ನನ್ನ ಸ್ವತ್ತಾಗು |
ಕುತ್ತಾಗದೇ ನೀ
ಬಯಕೆಗೆ ತಂಪಾಗು |

ಹೆಕ್ಕಿ ತಂದ ನಾ, ಎಂಬ
ಸಾಹಸಿಗಷ್ಟು ನೀ
ವರವಾಗು-ಸೆರೆಯಾಗು |

ಮುತ್ತೇ..
ವರ್ತಮಾನದ ಈ
ಬದುಕಿನೊಳು ನೀ,
ಬದುಕನ್ನು ನೀಡಿದ
ಇತಿಹಾಸವ ಮರೆಯಬೇಡ |
ನಿನ್ನ ಹೆಕ್ಕಿ ತಂದ
ಸಾಹಸಿಗನ ನೆನಪಿಡು |

ಮುತ್ತು..
ಒಡೆದರೆ-ಕೊಟ್ಟರೆ
ಮುಗಿಯಿತು. ಮೂಲರೂಪ
ಮರಳುವುದು ಹೇಗೆ ?


(ಈ ಕವಿತೆಯನ್ನು ಬರೆದಿದ್ದು 28.01.2007ರಂದು, ದಂಟಕಲ್ಲಿನಲ್ಲಿ)

Wednesday, January 22, 2014

ಸೃಷ್ಠಿ

ಒಂದು ಜೀವ ಎರಡಾಗುವ ಹೊತ್ತು
ಹೊಸತೊಂದು ಜೀವಸೃಷ್ಟಿ |
ಜೊತೆಗೆ ಪ್ರೀತಿ-ಕನಸಿನ ಆಗಮ
ಹೊಸ ಜೀವಿಯಿಂದ ಆನಂದಾಗಮನ ||

ಒಂಭತ್ತು ತಿಂಗಳು ಹೊತ್ತಂದಿನಿಂದ
ಪ್ರಸವದ ತನಕ ನೂರೆಂಟು ಕನಸು |
ಹೊಸ ಸೃಷ್ಟಿಯಲ್ಲೇನೋ ಆಸೆ, ತವಕ
ಹೊಸ ಕನಸ ಸಾಕಾರದ ಪುಳಕ ||

ಪ್ರಸವ ವೇದನೆಯೊಳಗೆ ಆನಂದ
ಸೃಷ್ಟಿಯಾಗಮಕ್ಕೆ ಕಾರಣವಾದ ನಿಟ್ಟುಸಿರು |
ಹೊಸ ಜೀವಿಯೊಂದರ ನಲಿವಿನಲ್ಲಿ
ಕೈಗೂಡಿದ ತಾಯ್ತನದ ಹೆಬ್ಬಯಕೆ ||

ಹೊಸ ಸೃಷ್ಟಿ ನೀಡಿದ ಪುಳಕ
ಹೊಸತೊಂದು ಆತ್ಮಾನಂದಾನುಭವ |
ೆದೆ ಹಾಲ ಮಗು ಹೀರಿ ಕುಡಿಯಾಗಲೋ
ಜಗತ್ತ ಮರೆವೆನೆಂಬ ಸಂತಸ ||

ಸೃಷ್ಟಿ ಮಹಿಮೆಯೇ ಇಷ್ಟು
ಹೊಸಲು ಸೃಷ್ಟಿಯ ಮೊದಲು ನೋವು |
ಅನಂತರ ನಲಿವ ಹೊನಲು
ಸೃಷ್ಟಿಯಾನಭವವೇ ಇಷ್ಟಲ್ಲವೇ ||?

(ಈ ಕವಿತೆಯನ್ನು ಬರೆದಿದ್ದು 6-10-2006ರಂದು ದಂಟಕಲ್ಲಿನಲ್ಲಿ)

Monday, January 20, 2014

ಬೆಂಗಾಲಿ ಸುಂದರಿ -3


               ವಿನಯಚಂದ್ರ ಶಿವರಾಮ ಹೆಗಡೆ-ಸುಶೀಲಮ್ಮ ದಂಪತಿಯ ಹಿರಿಯ ಮಗ. ಅಂಜಲಿ ಇವರ ಪುತ್ರಿ, ವಿನಯಚಂದ್ರನ ತಂಗಿ. ಪಿಯುಸಿಯಲ್ಲಿ ಓದುತ್ತಿರುವ ಈಕೆಗೆ ಅಣ್ಣನೇ ವೀಕಿಪೀಡಿಯಾ, ಗೂಗಲ್ ಸರ್ಚ್, ಸ್ಪೋರ್ಟ್ಸ್ ಡಾಟ್ಕಾಮ್ ಎಲ್ಲಾ. ಅಣ್ಣನೆಂಬ ವ್ಯಕ್ತಿಯನ್ನು ಬಿಟ್ಟರೆ ಮತ್ತಿನ್ಯಾರೂ ಅಷ್ಟು ಜೋರಿಲ್ಲ. ಅವನೊಬ್ಬನೇ ಗ್ರೇಟು ಎನ್ನುವ ಆರಾಧನಾ ಮನೋಭಾವ. ವಿನಯಚಂದ್ರ ಬಾಂಗ್ಲಾದೇಶಕ್ಕೆ ಹೋಗುವುದನ್ನು ಚಿಳಿದು ಓಡಿಬಂದು ಒಂದು ಗುದ್ದನ್ನು ಕೊಟ್ಟಿದ್ದ ಈಕೆ ನಂತರ ತಾನು ಕೊಟ್ಟಿದ್ದು ಶಹಭಾಸ್ ಗಿರಿ ಎಂದು ಹೇಳುವಷ್ಟು ಅಚ್ಚುಮೆಚ್ಚು.
               ಪ್ರತಿದಿನ ಜ್ಯೂನಿಯರ್ ಕಾಲೇಜಿಗೆ ಬರುತ್ತಾಳಾದಳೂ ವಾರಕ್ಕೊಮ್ಮೆ ಶಿರಸಿಗೆ ಬಂದು ತನ್ನಿಷ್ಟದ ಸಿತಾರ್ ಕ್ಲಾಸಿಗೆ ಬಂದು ಅದನ್ನು ಕಲಿಯುವ ಸಾಹಸವನ್ನು ಮಾಡುತ್ತಿದ್ದಾಳೆ. ಆರಂಭದಲ್ಲಿ ಆಕೆ ಸಿತಾರದಲ್ಲಿ ಯದ್ದೋಡಿ ರಾಗದ ಪ್ರಯೋಗ ಮಾಡಿದ್ದಾಳಾದರೂ ಈಗೀಗ ಆಕೆಯ ಸಿತಾರ್ ವಾದನ ಅಲ್ಪಸ್ವಲ್ಪ ಕೇಳೋಣ ಎನ್ನಿಸುವಂತಾಗಿರುವುದು ಅಂಜಲಿ ಬರೀ ಸಿತಾರ್ ಕ್ಲಾಸಿಗೆ ಬರುತ್ತಿಲ್ಲ ಬದಲಾಗಿ ಕಲಿಯುವ ಪ್ರಯತ್ನವನ್ನೂ ಮಾಡುತ್ತಿದ್ದಾಳೆ ಎನ್ನುವುದಕ್ಕೆ ನಿದರ್ಶನವಾಗಿದೆ.
ಮನೆಯಲ್ಲಿಯೂ ಆಗಾಗ ಆಕೆ ಸಿತಾರ್ ಪ್ರಾಕ್ಟೀಸ್ ಮಾಡಲು ಶುರುವಿಟ್ಟುಕೊಳ್ಳುತ್ತಾಳೆ. ಟಿ.ವಿಯಲ್ಲಿ ಡಿಸ್ಕವರಿ ಚಾನಲ್ಲೋ, ಎಚ್.ಬಿ.ಒ ಚ್ಯಾನಲ್ಲೋ ಇತ್ಯಾದಿ ಯಾವುದೋ ಚಾನಲ್ಲಿನಲ್ಲಿ ಸಿನೆಮಾ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನೋಡುತ್ತ ಕೂತಿರುತ್ತಿದ್ದ ವಿನಯಚಂದ್ರ ಆಕೆಯ ಸಿತಾರ್ ಪ್ರಾಕ್ಟಿಸ್ ಶುರುವಾದ ತಕ್ಷಣ ಸದ್ದಿಲ್ಲದೇ ಮೆತ್ತಿಯನ್ನು ಹತ್ತಿತ್ತಾನೆ. ಆಕೆಯ ಪ್ರಾಕ್ಟೀಸಿಗೆ ಡಿಸ್ಟರ್ಬ್ ಮಾಡಬಾರದು ಎನ್ನುವ ಸದ್ಗುಣ ಅವನದಲ್ಲ ಬಿಡಿ. ಆಕೆಯ ಸಿತಾರ್ ವಾದನ ಕೇಳಲಿಕ್ಕಾಗುವುದಿಲ್ಲ ಎಂಬ ಮುಖ್ಯಾಂಶವೇ ಆತ ಮೆತ್ತಿಯನ್ನು ಹತ್ತಲು ಕಾರಣವಾಗುತ್ತದೆ.
               `ಯೇ ಆಯಿ.. ನೋಡೆ ಇಂವನಾ.. ಆನು ಸಿತಾರ್ ಕಲ್ತಕಳವು ಹೇಳಿ ಹಣಕಿದಾಗೆಲ್ಲಾ ಇಂವ ಮೆತ್ತಿ ಹತ್ ಕುತ್ಗತ್ತ ನೋಡೆ.. ಯಂಗೆ ಒಂಥರಾ ಆಕ್ತು.. ಅಂವಂಗೆ ಹೇಳು..ಎಸ್ಟ್ ಕಿಂಡಲ್ ಮಾಡ್ತಾ ನೋಡು..' ಎಂದು ಆಗಾಗ ಆಕೆ ಅಮ್ಮನ ಬಳಿ ಪುಕಾರು ಹೇಳುವುದೂ ಉಂಟು. ಅದಕ್ಕೆ ಪ್ರತಿಯಾಗಿ ಸುಶೀಲಮ್ಮ `ಯಂತದಾ ತಮಾ.. ನಿ ಹಿಂಗ್ ಮಾಡದು ಸರಿಯನಾ.. ಅದು ಚೊಲೋನೆ ಬಾರಿಸ್ತಲಾ.. ಕೇಳಾ..' ಎಂದು ಮಗಳ ಪರವಾಗಿ ಆಗಾಗ ಮಾತನಾಡುವುದೂ ಇದೆ.
               `ಚೊಲೋ ಬಾರಸ್ತು ಹೇಳಾದ್ರೆ ನೀನೆ ಕೇಳೆ.. ಯಂಗೆ ಒತ್ತಾಯ ಮಾಡಡಾ..' ಎಂದು ವಿನಯಚಂದ್ರನೂ ಹೇಳಿ ಮೆತ್ತಿ ಹತ್ತಿ ತನ್ನ ರೂಮಿನ ಬಾಗಿಲನ್ನು ದಢಾರನೆ ಹಾಕಿದನೆಂದರೆ ಸಕಲ ಜಂಜಡಗಳಿಂದ ದೂರನಾದೆ ಎಂಬ ಭಾವ ಆತನನ್ನು ಕಾಡುತ್ತಿದ್ದುದು ಸುಳ್ಳಲ್ಲ. ಮಗಳ ಪರ ವಹಿಸಿ ಮಾತನಾಡುವ ತಾಯಿಯಾದರೂ ಮಗಳ ಸಿತಾರ್ ಸ್ವರ ಕೇಳುತ್ತಾಳಾ ಎಂದರೆ ಇಲ್ಲ ಬಿಡಿ. ಮಗಳ ಸಿತಾರ್ ಶುರುವಾದ ತಕ್ಷಣ ಅವರಿಗೆ ಅಡುಗೆ ಮನೆಯಲ್ಲಿ ಒಲೆಯ ಮೇಲೆ ಇಟ್ಟ ಒಗ್ಗರಣೆಯೋ, ಉಕ್ಕುತ್ತಿರುವ ಹಾಲೋ ನೆನಪಾಗುತ್ತದೆ. `ತಡಿ ತಂಗಿ.. ಆನು ಈಗ ಬಂದಿ...' ಎಂದವರೇ ಅಡುಗೆ ಮನೆಯೊಳಕ್ಕೆ ಹೋಗು ಕಾಣೆಯಾಗುತ್ತಾರೆ.
               ವಿನಯಚಂದ್ರನಿಗೆ ಕಬ್ಬಡ್ಡಿ ಎಷ್ಟು ಇಷ್ಟವೋ ಆತನ ರೂಮೂ ಅಷ್ಟೇ ಇಷ್ಟ. ಅದು ಆತನ ಪಾಲಿನ ಸ್ವರ್ಗ ಎಂದೇ ಹೇಳಬಹುದು. ಆತನಿಗೆ ಬೇಕಾದ ಎಲ್ಲ ವಸ್ತುಗಳನ್ನೂ ತನ್ನ ರೂಮಿನಲ್ಲಿ ಗುಡ್ಡೆ ಹಾಕಿಕೊಂಡಿದ್ದ. `ರೂಮನೆ' ಎಂಬುದು ರೂಮಿಗೆ ಆತ ಇಟ್ಟುಕೊಂಡ ಹೆಸರು. ರೂಮು + ಮನೆ = ರೂಮನೆ ಎಂಬುದು ಅದನ್ನು ಬಿಡಿಸಿ ಹೇಳಿದಾಗಲೇ ಆರ್ಥವಾಗುತ್ತದೆ.
ಚಿಕ್ಕಂದಿನಲ್ಲಿ ಗೆಳೆಯನ ಕಂಪಾಸು ಬಾಕ್ಸಿನಿಂದ ಕದ್ದು ಇಟ್ಟುಕೊಂಡ ಬಿಳಿಯ ಪಾಟಿಕಡ್ಡಿಯಿಂದ ಹಿಡಿದು ಕಾಲೇಜಿನ ಗೆಳತಿಯೊಬ್ಬಳು ಕೊಟ್ಟಿದ್ದ ಪುಟ್ಟ ನವಿಲುಗರಿಯ ವರೆಗೆ ಹತ್ತು ಹಲವು ಚಿಕ್ಕ ದೊಡ್ಡ ವಸ್ತುಗಳು ಅಲ್ಲಿವೆ. ತನ್ನ ರೂಮಿನ ಒಂದು ಪಾರ್ಶ್ವದ ಗೋಡೆಯನ್ನು ಖಾಲಿ ಖಾಲಿಯಾಗಿ ಆತ ಬಿಟ್ಟುಕೊಂಡಿದ್ದಾನೆ. ರೂಮಿನ ಎಲ್ಲಾ ಗೋಡೆಗಳೂ ತರಹೇವಾರಿ ಚಿತ್ರಗಳೋ ಅಂಥವಾ ಇನ್ಯಾವುದೋ ವಸ್ತುಗಳಿಂದ ಅಲಂಕೃತವಾಗಿದ್ದರೆ ಒಂದು ಗೋಡೆ ಮಾತ್ರ ಖಾಲಿ ಖಾಲಿ ಬಿಡಲಾಗಿತ್ತು. ಬಿಳಿ ಬಣ್ಣ ಬಡಿದ ಆ ಗೋಡೆ ಥಟ್ಟನೆ ನೋಡಿದರೆ ಅಮೃತ ವರ್ಷಿಣಿ ಸಿನೆಮಾವನ್ನು ನೆನಪಿಗೆ ತರುತ್ತಿತ್ತು. ಇತ್ತೀಚೆಗೆ ಆ ರೂಮಿನ ಆಸುಪಾಸಿನಲ್ಲಿ ಮೊಬೈಲ್ ಸಿಗ್ನಲ್ ಸುಗುತ್ತಿದೆಯಾದ ಕಾರಣ ರೂಮನೆ ವಿಶ್ವಕ್ಕೆ ತೆರೆದುಕೊಂಡ ಅನುಭವ ವಿನಯಚಂದ್ರನಿಗಾಗುತ್ತಿದೆ.
                ಬೇಜಾರಾದಾಗ, ಖುಷಿಯಾದಾಗ, ಲಹರಿಯಲ್ಲಿದ್ದಾಗ, ಸಿಟ್ಟು ಬಂದಾಗ, ಏನನ್ನೋ ಕಳೆದುಕೊಂಡಾಗ ಇತ್ಯಾದಿ ಇತ್ಯಾದಿ ಭಾವಗಳು ಮನಸ್ಸನ್ನು ಎಡಬಿಡದೇ ಕಾಡಿದಾಗಲೆಲ್ಲ ವಿನಯಚಂದ್ರ ತನ್ನ ರೂಮಿನ ಅಗುಳಿ ಹಾಕಿಕೊಂಡು ಈ ಬಿಳಿ ಗೋಡೆಗೆ  ಎದುರಾಗಿ ಅದನ್ನೇ ನೋಡುತ್ತ ಅಲ್ಲಾಡದಂತೆ ಕುಳಿತುಬಿಡುತ್ತಿದ್ದ. ತನ್ನ ಆಪ್ತನಿವೇದನೆಯ ತಾಣವಾಗಿ ಗೋಡೆಯನ್ನು ಬದಲಾಯಿಸಿಕೊಂಡಿದ್ದ. ತಾನು ರಾಷ್ಟ್ರೀಯ ತಂಡಕ್ಕೆ ಸೆಲೆಕ್ಟ್ ಆದ ಖುಷಿಯನ್ನು ಹಂಚಿಕೊಂಡಿದ್ದೂ ಸಹ ಈ ಗೋಡೆಯ ಜೊತೆಗೆ ಎಂದರೂ ತಪ್ಪಿಲ್ಲ ನೋಡಿ. ಈ ಗೋಡೆಯ ಎದುರು ಬಂದಾಗಲೆಲ್ಲ ವಿನಯಚಂದ್ರನ ಮನಸಿನ ಪ್ರೊಜೆಕ್ಟರ್ ಬಿಚ್ಚಿಕೊಂಡು ಗೋಡೆಯ ಮೇಲೆ ಸಿನೆಮಾದಂತೆ ಪ್ರದರ್ಶನವಾಗುತ್ತಿತ್ತು ಎಂದರೆ ತಪ್ಪಾಗಲಿಕ್ಕಿಲ್ಲ ಬಿಡಿ.
                 ತನ್ನ ತಂಗಿಯನ್ನು ವಿನಯಚಂದ್ರ ಯಾವಾಗಲೂ ಗೋಳು ಹೊಯ್ದುಕೊಳ್ಳುತ್ತಾನೆ ಎಂದು ಅಂದುಕೊಳ್ಳುವಂತಿಲ್ಲ. ಆಕೆಯೆಂದರೆ ಆತನಿಗೆ ಅಚ್ಚು ಮೆಚ್ಚಿನ ಹುಚ್ಚು ಇದ್ದಿದ್ದು ಸುಳ್ಳಲ್ಲ. ಸದಾ ಜಗಳ ಕಾಯುತ್ತಾನಾದರೂ ಹಾಗೆ ಮಾಡದಿದ್ದರೆ ಏನೋ ಕಳೆದುಕೊಂಡ ಭಾವ. ಆಕೆಯೂ ವಿನಯಚಂದ್ರನ ಜೊತೆಗೆ ಆತನ ಸರಿಸಮನಾಗಿ ಜಗಳ ಕಾಯುತ್ತಾಳೆ ಎನ್ನುವುದು ಗಮನಿಸಬೇಕಾದ ಅಂಶ. ಇಬ್ಬರ ಜಗಳವನ್ನು ತಂದೆ-ತಾಯಿ ಅನೇಕ ಸಾರಿ ಪರಿಹರಿಸಿಯೂ ಇದ್ದಾರೆ. ಆದರೆ ಇವೆಲ್ಲ ಹುಚ್ಚಾಟಗಳು ಎಂಬುದು ಗೊತ್ತಾದಾಗ ಜಗಳ ಮಾಡಿಕೊಳ್ಳಲಿ ಬಿಡಿ.. ಮತ್ತಷ್ಟು ಆಪ್ತರಾಗುತ್ತಾರೆ ಎಂದು ಸುಮ್ಮನಾಗಿದ್ದರು. ಆದರೆ ವಿನಯಚಂದ್ರ ಬಾಂಗ್ಲಾದೇಶಕ್ಕೆ ಹೋಗುತ್ತಾನೆಂಬ ವಿಷಯಕ್ಕೆ ಮಾತ್ರ ಅಂಜಲಿ ಜಗಳ ಕಾಯದೇ ತನ್ನ ಮನದಾಳದ ಆತಂಕ ಹೊರಹಾಕಿದ್ದಳು..
                `ಅಲ್ದಾ. ಅಣಾ.. ನಿಂಗಳ ಆ ಕಬ್ಬಡ್ಡಿ ಮ್ಯಾನೇಜ್ ಮೆಂಟಿನ್ವಕೆ ತಲೆ ಇಲ್ಯಾ.. ಹೋಗಿ ಹೋಗಿ ಬಾಂಗ್ಲಾ ದೇಶದಲ್ಲಿ ಕಬ್ಬಡ್ಡಿ ಇಟ್ ಸತ್ತಿದ್ವಲಾ.. ಬ್ಯಾರೆ ಯಾವ ದೇಶವೂ ಕಂಡಿದ್ದಿಲ್ಯನಾ..?' ಎಂದು ಕೇಳಿದ್ದಳು.
                `ಸುಮ್ನಿರೆ ಮಾರಾಯ್ತಿ.. ಗೊತ್ತಿಲ್ದೆ ಹೋದ್ರೆ ಮಾತಾಡಲೆ ಹೋಗಡಾ.. ಪ್ರತಿ ವರ್ಷ ಒಂದ್ ಸಾರಿ ಕಬ್ಬಡ್ಡಿ ವಿಶ್ವಕಪ್ ನೆಡಿತು. ಕಳೆದ ಸಾರಿ ಭಾರತದಲ್ಲಿ ಆಗಿತ್ತು. ಕ್ರಿಕೆಟ್ ನಲ್ಲಿ ಹೆಂಗೆ ಕ್ರಿಕೆಟ್ ಆಡುವ ಖಾಯಂ ರಾಷ್ಟ್ರಗಳಲ್ಲಿ ವಿಶ್ವಕಪ್ ಪಂದ್ಯಾವಳಿಗಳನ್ನು ಪ್ರತಿ ಸಾರಿ ಬೇರೆ ಬೇರೆ ದೇಶಗಳಲ್ಲಿ ನಡಸ್ತ್ವೋ ಹಂಗೆ ಕಬ್ಬಡ್ಡಿಯನ್ನೂವಾ.. ಭಾರತ ಬಿಟ್ಟರೆ ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ರಾಷ್ಟ್ರಗಳು ಕಬ್ಬಡ್ಡಿಯಲ್ಲಿ ಜೋರಾಗಿರುವ ತಂಡಗಳು. ಅಲ್ಲೆಲ್ಲ ನಡೆಸವು ಅಂತ ಇತ್ತೀಚಗೆ ನಿಯಮಗಳು ಬಂಜು. ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ರಶಿಯಾ, ಇಂಗ್ಲೆಂಡ್, ಅಪಘಾನಿಸ್ತಾನ, ಶ್ರೀಲಂಕಾ, ಜಪಾನ್, ನೇಪಾಳ, ಚೈನೀಸ್ ತೈಪೆ, ಇರಾನ್, ಕೆನಡಾ ಈ ಮುಂತಾದ ರಾಷ್ಟ್ರಗಳೂ ಕಬ್ಬಡ್ಡಿ ಆಡ್ತ. ಪ್ರಮುಖ ರಾಷ್ಟ್ರಗಳಲ್ಲಿ ವಿಶ್ವಕಪ್ ನೆಡಿತು. ತಮಿಳುನಾಡು, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಜನ್ಮ ತಳೆದ ಕಬ್ಬಡ್ಡಿ ಬಾಂಗ್ಲಾದೇಶದ ರಾಷ್ಟ್ರೀಯ ಕ್ರೀಡೆ ಕಬ್ಬಡ್ಡಿ. ಸಧ್ಯ ವಿಶ್ವದ 2ನೇ ರಾಂಕ್ ನಲ್ ಇದ್ದು ಆ ದೇಶ. ಕಬ್ಬಡ್ಡಿಯನ್ನು ಬಾಂಗ್ಲಾದಲ್ಲಿ ನೆಡಸವು ಹೇಳದು ಅಂತರಾಷ್ಟ್ರೀಯ ಕಬ್ಬಡ್ಡಿ ಫೆಡರೇಷನ್ನು ನಿರ್ಣಯ ಮಾಡ್ತು. ಮೊದ ಮೊದಲು ಮೂರು ವರ್ಷಕ್ಕೆ ಒಂದ್ ಸಾರಿ ಕಬ್ಬಡ್ಡಿ ವಿಶ್ವಕಪ್ ಆಗ್ತಿತ್ತು. ಈಗ ಪ್ರತಿವರ್ಷ ನಡೀತಾ ಇದ್ದು. ಇಲ್ಲಿವರೆಗೂ ನಡೆದ ಎಲ್ಲಾ ವಿಶ್ವಕಪ್ಪುಗಳಲ್ಲಿ ಭಾರತವೇ ಚಾಂಪಿಯನ್ ಆಜು.. ಈ ಸಾರಿ ಬಾಂಗ್ಲಾದೇಶದಲ್ಲಿ ನಡೆಯುವ ವಿಶ್ವಕಪ್ಪಲ್ಲೂ ಆಗವು ಹೇಳದು ಎಲ್ಲರ ಆಸೆ. ನಂದೂವಾ..' ಎಂದು ತಂಗಿಯ ಬಳಿ ಲೆಕ್ಚರ್ ಬಿಗಿದಿದ್ದ ವಿನಯಚಂದ್ರ.
                 ಆತನ ಉತ್ತರ ಕೇಳಿ ವಿಸ್ಮಯ ಹೊಂದಿದ್ದ ಅಂಜಲಿ ಅಪರೂಪಕ್ಕೆ ಕಬ್ಬಡ್ಡಿಯ ಬಗ್ಗೆಯೂ ಆಸಕ್ತಿಯನ್ನು ಹೊಂದಿದಂತೆ ಅನ್ನಿಸುತ್ತಿತ್ತು. ಒಂದಾನೊಂದು ಕಾಲದಲ್ಲಿ ನಮ್ಮದೇ ದೇಶದ ಒಂದು ಭಾಗವಾಗಿದ್ದ ಬಾಂಗ್ಲಾದೇಶದ ಕುರಿತು ಅವಳಿಗೆ ಅಪರೂಪಕ್ಕೆ ಇನ್ನಷ್ಟು ತಿಳಿದುಕೊಳ್ಳಬೇಕು ಎಂದೆನ್ನಿಸಿದ್ದೇ ಆವಾಗ. `ಅಣಾ.. ಬಾಂಗ್ಲಾದೇಶದ ಬಗ್ಗೆ ನೀ ಎಷ್ಟೆಲ್ಲಾ ತಿಳಕಂಜ್ಯಲಾ.. ಹೇಳಾ...' ಎಂದು ಆವತ್ತೇ ಅವನ ಬಳಿ ಭಿಡೆ ಬಿಟ್ಟು ಕೇಳಿದ್ದಳು.
                  ಇದೇ ಸಮಯವನ್ನು ಕಾಯ್ತಿದ್ದೆ ಎನ್ನುವಂತೆ ವಿನಯಚಂದ್ರ `ಹಿಂಗ್ ಕೇಳು.. ಕೇಳಿದ್ರೆ ಇಲ್ಲೆ ಹೇಳಿ ಹೇಳ್ತ್ನಿಲ್ಲೆ.. ಒಂದ್ ಕಡಿಗೆ ಬಂಗಾಲಕೊಲ್ಲಿ, ಮೂರು ಕಡೆಗಳಲ್ಲಿ ಭಾರತ ದೇಶ ಕೊನೆಯಲ್ಲೊಂದು ಚೂರು ಬರ್ಮಾ ದೇಶ ಬಾಂಗ್ಲಾದ ಸುತ್ತಮುತ್ತ ಇದ್ದು. ಜಗತ್ತಿನ ಬಡದೇಶಗಳಲ್ಲಿ ಒಂದು ಹೇಳುವ ಕುಖ್ಯಾತಿಯೂ ಇದ್ದು. ಹೆಚ್ಚಿನ ಭಾಗ ಗುಡ್ಡಗಾಡು. ಭಾರತದಿಂದ ಹರಿದುಕೊಂಡು ಹೋಗುವ ಗಂಗಾ, ಬ್ರಹ್ಮಪುತ್ರ ನದಿಗಳು ಸಂಗಮವಾಗಿ ಸಮುದ್ರ ಸೇರದು ಬಾಂಗ್ಲಾದೇಶದಲ್ಲೇಯಾ. ಇಲ್ಲೇ ಸುಂದರಬನ್ಸ್ ಹೇಳೋ ಸ್ಥಳ ಇದ್ದಿದ್ದು. ದಿ ಗ್ರೇಟ್ ಬೆಂಗಾಲ್ ಟೈಗರ್ ಇರುವ ಕೆಲವೇ ಕೆಲವು ಜಾಗಗಳಲ್ಲಿ ಒಂದು. 85%ಕ್ಕಿಂತ ಹೆಚ್ಚು ಮುಸ್ಲಿಮರಿದ್ದ. 12-13% ಹಿಂದುಗಳೂ ಇದ್ದ. ಉಳಿದ ಧರ್ಮಗಳವರೂ ಅಲ್ಪಸ್ವಲ್ಪ ಸಂಖ್ಯೆಯಲ್ಲಿದ್ದ. ಚಿತ್ತಗಾಂಗ್ ಹೇಳದು ಇಲ್ಲಿರೋ ಅತ್ಯಂತ ಸುಂದರ ಗುಡ್ಡಗಾಡು ಸ್ಥಳ. ಬಾಂಗ್ಲಾದೇಶದಲ್ಲಿ ಕಬ್ಬಡ್ಡಿಯನ್ನು ಹಡುಡು ಹೇಳಿ ಕರಿತ. ಹಡುಡು ಹೇಳಿ ಕರೆಯುವ ಈ ಕಬ್ಬಡ್ಡಿಯನ್ನು ಬಾಂಗ್ಲಾದೇಶದಲ್ಲಿ 1985ರ ನಂತರ ರಾಷ್ಟ್ರೀಯ ಕ್ರೀಡೆಯನ್ನಾಗಿ ಮಾಡಿದ್ದ. ಭಾರತಕ್ಕೆ ಹೆಂಗೆ ಹಾಕಿ ರಾಷ್ಟ್ರೀಯ ಕ್ರೀಡೆಯೋ ಬಾಂಗ್ಲಾದೇಶಕ್ಕೆ ಹಡುಡು. ಕಳೆದ ವರ್ಷ ನಡೆದಿದ್ದ ಮಹಿಳಾ ಕಬ್ಬಡ್ಡಿ ವಿಶ್ವಕಪ್ಪಿಗೆ ಭಾರತದ ತಂಡಕ್ಕೆ ನಮ್ಮ ದಕ್ಷಿಣ ಕನ್ನಡದ ಮಮತಾ ಪೂಜಾರಿ ನಾಯಕಿಯಾಗಿತ್ತು. ಅವರ ವಿಶೇಷ ಪ್ರಯತ್ನದಿಂದಾನೇ ಕಬ್ಬಡ್ಡಿಯಲ್ಲಿ ಚಾಂಪಿಯನ್ ಆಪಲೆ ಸಾಧ್ಯವಾಗಿತ್ತು. ಈ ವರ್ಷ ಹುಡುಗರ ತಂಡಕ್ಕೆ ನಾನು ಸೆಲೆಕ್ಟ್ ಆಜಿ. ಈ ವರ್ಷವೂ ನಂಗವ್ವೇ ಗೆಲ್ಲವು ಎನ್ನೋದು ಎಲ್ಲರ ಆಸೆ. ವರ್ಡ್ ಚಾಂಪಿಯನ್ ಶಿಪ್ ಬಿಟ್ಕೊಡಲಿಲ್ಲೆ ಹೇಳಿ ಅಂದ್ಕತ್ತಾ ಇದ್ಯ..' ಎಂದ.
           `ನಾನು ಅದನ್ನೇ ಬೇಡ್ಕ್ಯತ್ನಾ ಅಣಾ..' ಎಂದಳು. ಅಪರೂಪಕ್ಕೆ ಅವಳ ಬೆನ್ನನ್ನು ನೇವರಿಸಿದ್ದ ವಿನಯಚಂದ್ರ. ಅಂಜಲಿ ಸಂತಸದಿಂದ ಉಬ್ಬಿ ಹೋಗಿದ್ದಳು.

**
              ನಾಲ್ಕೈದು ದಿನಗಳು ಕ್ಷಣಗಳಂತೆ ಉರುಳಿದವು.
                ನೋಡ ನೋಡುತ್ತಿದ್ದಂತೆ ವಿನಯಚಂದ್ರ ನವದೆಹಲಿಗೆ ತೆರಳಬೇಕಾದ ದಿನ ಬಂದೇ ಬಿಟ್ಟಿತು. ಬಾಂಗ್ಲಾದೇಶಕ್ಕೆ ತೆರಳುವ ಮುನ್ನ ನವದೆಹಲಿಯಲ್ಲಿ ಕಬ್ಬಡ್ಡಿ ತಂಡ ವಾರಗಳಿಗೂ ಹೆಚ್ಚಿನ ಕಾಲ ತರಬೇತಿಯನ್ನು ಪಡೆಯಬೇಕಿತ್ತು. ವಿನಯಚಂದ್ರ ನವದೆಹಲಿಗೆ ಹೊರಡಲು ತಯಾರಾದ.
               ಶಿರಸಿಯಿಂದ ಬೆಂಗಳೂರು, ಬೆಂಗಳೂರಿನಿಂದ ವಿಮಾನದ ಮೂಲಕ ನವದೆಹಲಿ ತಲುಪುವ ವ್ಯವಸ್ಥೆಯನ್ನು ಮಾಡಲಾಗಿತ್ತು. ಹೊರಡುವ ಮುನ್ನ ತನ್ನ ಇಷ್ಟ ದೈವ ಗುಡ್ಡೇ ತೋಟದ ಗಣಪನ ಪೂಜೆ ಮಾಡುವುದು ವಿನಯಚಂದ್ರನ ಗುಣ. ಗಣಪನಿಗೆ ವಂದಿಸಬೇಕೆಂಬ ಕಾರಣಕ್ಕಾಗಿ ತನ್ನಿಷ್ಟದ ಗುಡ್ಡೇತೋಟದ ಕೋಟೆವಿನಾಯಕನ ಸನ್ನಿಧಿಗೆ ತೆರಳಿ ದೇವರಿಗೆ ಅಡ್ಡಬಿದ್ದು, ತನ್ನ ಮನದಾಸೆಯನ್ನು ಅಂದುಕೊಂಡು ಹಣ್ಣು-ಕಾಯಿ ಮಾಡಿಸಿಕೊಂಡು ಬಂದ. ದೇವಸ್ಥಾನಕ್ಕೆ ಹೋಗಿ ಬಂದ ನಂತರ ವಿನಯಚಂದ್ರ ಮತ್ತಷ್ಟು ಉಲ್ಲಸಿತನಾದ. ಪ್ರಕೃತಿಯ ರಮ್ಯತಾಣವಾದ ಗುಡ್ಡೇತೋಟ ತನ್ನ ನಿಸರ್ಗ ಸೊಬಗಿನ ಕಾರಣದಿಂದ ಆತನ ಮನಸ್ಸನ್ನು ತಣಿಸಿತು.
                   ಹೊರಡುವ ದಿನ ಬಂದೇ ಬಿಟ್ಟಿತು. ಯಾವಾಗಲೂ ಮಗ ಕಬ್ಬಡ್ಡಿಯ ಕಾರಣಕ್ಕೆ ಮನೆಯಿಂದ ಹೊರಟಾಗಲೂ ಆತನನ್ನು ಬೀಳ್ಕೊಡಲು ಬರದ ಶಿವರಾಮ ಹೆಗಡೆ ಅಂದು ಮಾತ್ರ ತಾವೇ ಬರುತ್ತೇನೆ ಎಂದು ತಮ್ಮ ಹಳೆಯ ಮಹೀಂದ್ರಾ ಗಾಡಿಯನ್ನು ಹೊರತೆಗೆದೇ ಬಿಟ್ಟರು.
                   `ಥೋ.. ಅಪ್ಪಯ್ಯಾ.. ಈ ಗಾಡಿಯಲ್ಲಿ ಹೋದ್ರೆ ಆನು ನಾಳೆ ಬೆಂಗಳೂರು ಮುಟ್ಟತ್ನನಾ ಮಾರಾಯಾ..' ಎಂದು ಗೊಣಗಿಕೊಂಡರೂ ಅಪ್ಪನ ಬಳಿ ಬೇಡ ಎನ್ನಲು ಮನಸ್ಸಾಗಲಿಲ್ಲ. 1990ರ ದಶಕದ ಮಹಿಂದ್ರಾ ಜೀಪನ್ನು ಪ್ರಸ್ಟೀಜ್ ಪ್ರಶ್ನೆಗೆ ಬಲಿಯಾಗಿ 90ರ ದಶಕದಲ್ಲೇ ಹೆಗಡೇರು ಕೊಂಡುಕೊಂಡಿದ್ದರು. `ಥೋ ಶಿವರಾಮಾ.. ಮಾರುತಿ ಕಾರು ತಗಳದು ಬಿಟ್ಟಿಕ್ಕೆ.. ಈ ಮಹಿಂದ್ರಾ ಜೀಪು ಎಂತಕ್ಕೆ ತಗಂಡ್ಯಾ...' ಎಂದು ಅನೇಕರು ಅಪದ್ಧ ಮಾತನಾಡಿದ್ದರೂ ಬಿಡದೇ ಈ ಜೀಪನ್ನು ಕೊಂಡಿದ್ದರು. ಕೊಂಡ ನಂತರ ಅನೇಕ ವರ್ಷಗಳ ವರೆಗೆ ಮಹಿಂದ್ರಾ ಜೀಪು ಸುರಳೀತ ಹಾಗೂ ಸುಲಲಿತವಾಗಿ ಕೆಲಸ ಮಾಡಿತ್ತು. ಆದರೆ 2 ದಶಕ ಕಳೆದು ಹೋಯ್ತಲ್ಲ ನೋಡಿ. ಈಗ ಜೀಪಿಗೂ ಹೆಗಡೇರಂತೆ ವಯಸ್ಸಾಗಿದೆ. ಮೊದಲಿನ ಹುಮ್ಮಸ್ಸಿಲ್ಲ. ಯಾವಾಗ ಬೇಕಂದರೆ ಆವಾಗ ಕೆಲಸಕ್ಕೆ ಚಕ್ಕರ್ ಹಾಕುವ ಗುಣವನ್ನು ಬೆಳೆಸಿಕೊಂಡುಬಿಟ್ಟಿದೆ. ಈ ಜೀಪಿನಲ್ಲಿಯೇ ಮಗನನ್ನು ಬೆಂಗಳೂರಿನ ಬಸ್ಸು ಹತ್ತಿಸಲು ಹೆಡೆಯವರು ಹೊರತೆಗೆದಿದ್ದರು.

(ಮುಂದುವರಿಯುತ್ತದೆ)

Saturday, January 18, 2014

ನಿನ್ನ ಸನಿಹ

ನಿನ್ನ ಸನಿಹವೆನ್ನ ಮನದ
ದುಗುಡ ದೂರ ಮಾಡಿದೆ |
ನಿನ್ನ ಪ್ರೀತಿಯೆನ್ನ ಎದೆಯ
ಬಯಕೆ ನೂರು ಎಂದಿದೆ ||


ನೀನು ಜೊತೆಗೆ ನಿಂತರಾಯ್ತು
ಮನದ ಹರುಷ ರಿಂಗಣ |
ನಿನ್ನ ಪ್ರೀತಿಯಿಂದಲೆನ್ನ
ಮನದಿ ಅರ್ಥ ಸಿಂಚನ ||


ಮನದ ಬಯಕೆ ನಿನ್ನ ಬಯಸಿ
ಪ್ರೀತಿ ಸೊಗಕೆ ಕಾದಿದೆ|
ನೀನು ನನ್ನ ಜೀವ ಬಿಂದು
ಹಗಲಿರುಳು ನಿನ್ನ ನೆನೆದಿದೆ ||

(ಇದನ್ನು ಬರೆದಿದ್ದು ದಂಟಕಲ್ಲಿನಲ್ಲಿ 23-12-2006ರಲ್ಲಿ)

Friday, January 17, 2014

ಬೆಂಗಾಲಿ ಸುಂದರಿ-2

              ವಿನಯಚಂದ್ರನ ಅಪ್ಪ ಶಿವರಾಮ ಹೆಗಡೆ ಸಣ್ಣ ಸಾಮಾನ್ಯ ಮನುಷ್ಯನಲ್ಲ. ಪಿರ್ತಾರ್ಜಿತವಾಗಿ ಬಂದ 8 ಎಕರೆ ತೋಟ ತೋಟಕ್ಕೆ ಎಕರೆಗೆ 9 ಎಕರೆಯಂತೆ ಬೆಟ್ಟ, ವರ್ಷಕ್ಕೆ ಎರಡು ಬೆಳೆ ಬೆಳೆಯುವ ಮೂರೆಕರೆ ಗದ್ದೆಯಿತ್ತು. ಇಷ್ಟೆಲ್ಲ ಇದೆ ಎಂದಾದ ಮೇಲೆ ಶಿವರಾಮ ಹೆಗಡೆ ಸಣ್ಣ ಹಿಡುವಳಿದಾರ ಎಂದು ಕರೆದರೆ ತಪ್ಪಾಗುತ್ತದೆ. ಸುತ್ತಮುತ್ತಲ ಊರುಗಳಲ್ಲಿ ಅವರನ್ನು ದೊಡ್ಡ ಹಿಡುವಳಿದಾರ ಎಂದು ಕರೆಯುವ ಬದಲು ಶಿವರಾಮ ಹೆಗಡೇರು ಎಂದೇ ಕರೆಯಲಾಗುತ್ತದೆ. ಜಮೀನ್ದಾರ ಎಂದ ಮೇಲೆ ಅದಕ್ಕೆ ತಕ್ಕಂತೆ ಗತ್ತು ಗಾಂಭೀರ್ಯವನ್ನು ತೋರಿಸದೇ ಇರಲಾದೀತೆ? ಹೆಗಡೇರು ಎನ್ನಿಸಿಕೊಂಡ ಕಾರಣಕ್ಕೆ ತಮ್ಮ ಭಾಗದಲ್ಲಿ ಹಲವು ಮೊದಲುಗಳನ್ನು ಶುರುಮಾಡಿದ ಕೀರ್ತಿಯೂ ಶಿವರಾಮ ಹೆಗಡೆಯವರದ್ದೇ ಎಂದರೆ ತಪ್ಪಲ್ಲ ಬಿಡಿ.
               ತಮ್ಮೂರ ಫಾಸಲೆಯಲ್ಲಿ ಮೊಟ್ಟಮೊದಲು ಎಸ್ಸೆಎಎಲ್ಸಿಯ ನಂತರದ ತರಗತಿಯಲ್ಲಿ ಓದಿದ್ದೆಂದರೆ ಅದು ಶಿವರಾಮ ಹೆಗಡೇರೇ ಸೈ. ಊರಿನವರಿಗೆ ಹಾಗೂ ಸುತ್ತಮುತ್ತಲ ಮಂದಿಗೆ ಅದೇ ಕಾರಣಕ್ಕೆ ಶಿವರಾಮ ಹೆಗಡೆಯವರೆಂದರೆ ಆ ದಿನಗಳಿಂದಲೇ ಭಯ, ಗೌರವ ಹಾಗೂ ಕುತೂಹಲ. ತಮ್ಮೂರು ಮುಖ್ಯ ಹೆದ್ದಾರಿಯಿಂದ ನಾಲ್ಕೈದು ಕಿ.ಮಿ ದೂರವಿದ್ದರೂ ಪ್ರತಿದಿನ ಮನೆಗೆ ಎರಡಾದರೂ ಪೇಪರ್ ಬರುತ್ತಿತ್ತು. ಬೆಳಿಗ್ಗೆಯೇ ಮೇನ್ ರೋಡಿನಲ್ಲಿರುವ ಏಜೆಂಟನ ಕೈಯಿಂದ ಹೊರಡುವ ಪತ್ರಿಕೆ ಹೆಗಡೆಯವರ ಮನೆಗೆ ಮದ್ಯಾಹ್ನ ತಲುಪುವ ವೇಳೆಗೆ ದಾರಿ ಮಧ್ಯದಲ್ಲಿ ಕನಿಷ್ಟ ಐದು ಜನರ ಕೈದಾಟಿ ಬರುತ್ತಿದ್ದುದು ವಿಶೇಷ. ಪೇಪರ್ ಏಜೆಂಟ ವಿಷ್ಣುರಾವ್ ನಿಂದ ಸ್ಥಳೀಯ ಶಾಲೆಗೆ ಬರುವ ಭಂಡಾರ್ಕರ್ ಮಾಸ್ತರ್ರು, ಅಲ್ಲಿಂದ ಹತ್ತಿರದ ಮನೆಗೆ ಬರುವ ನಾಗವೇಣಿ ಅವಳ ಕೈದಾಟಿ ತಿಮ್ಮ ಹಾಗೂ ಕೊನೆಯದಾಗಿ ಶಿವರಾಮ ಹೆಗಡೆಯವರ ಮನೆಯ ಕೆಲಸದ ಆಳು ರಾಮನ ಮೂಲಕ ಹೆಗಡೆಯವರ ಮನೆಗೆ ಬರುತ್ತಿತ್ತು. ಮಾಸ್ತರ್ರು ಪೇಪರ್ ಓದುತ್ತಿದ್ದರಾದರೂ ಉಳಿದವರು ಅಕ್ಷರ ಕಲಿತಿದ್ದು ಅಷ್ಟಕ್ಕಷ್ಟೆ. ಆ ಕಾರಣದಿಂದ ಮದ್ಯಾಹ್ನ ಸಮಯಕ್ಕಾದರೂ ಪೇಪರ್ ಮನೆಗೆ ಬರುತ್ತಿತ್ತು. ಎಲ್ಲರೂ ಓದಲು ಕಲಿತಿದ್ದರೆ ಬಹುಶಃ ಪತ್ರಿಕೆ ಮರುದಿನ ಬಂದು ಮುಟ್ಟುತ್ತಿತ್ತೋ ಏನೋ ಎಂದು ಆಗಾಗ ಹೆಗಡೆಯವರು ಹೇಳುತ್ತಿದ್ದ ಮಾತು ಸುಳ್ಳಲ್ಲ ಬಿಡಿ.
                ಬೆಳಿಗ್ಗೆ ಮುಂಚೆ ಹೆಗಡೆಯವರ ಮನೆಗೆ ಕೆಲಸಕ್ಕೆ ಬರುತ್ತಿದ್ದ ರಾಮ ಮಧ್ಯದಲ್ಲಿ ಕೆಲಸವನ್ನು ಬಿಟ್ಟು ಪೇಪರ್ ತರಲಿಕ್ಕೆಂದೇ ತಿಮ್ಮನ ಮನೆಯ ಬಳಿ ಹೋಗುತ್ತಿದ್ದುದು ಪ್ರತಿದಿನದ ವಿಶೇಷ ಕಾಯಕ. ಪೇಪರ್ ಮನೆಗೆ ಬಂದ ತಕ್ಷಣ ಮನೆಯಲ್ಲಿದ್ದಾಗಲೆಲ್ಲ ಮೊಟ್ಟ ಮೊದಲು ಓದುತ್ತಿದ್ದುದು ವಿನಯಚಂದ್ರನೇ. ಆಮೇಲೆ ಉಳಿದವರಿಗೆ ಸಿಗುತ್ತಿತ್ತು.
               `ಯಲ್ಲಾ ಬಿಟ್ಟು ಮಗ ಭಂಗಿ ನೆಟ್ಟ ಹೇಳವಾಂಗೆ ಆಗ್ತಾ ಹೆಂಗೆ ನೀ ಕಬ್ಬಡ್ಡಿ ಆಡದು..?' ಎಂದು ಆಗಾಗ ಮಗನನ್ನು ಬಯ್ಯದಿದ್ದರೆ ಶಿವರಾಮ ಹೆಗಡೆಯವರಿಗೆ ಏನನ್ನೋ ಕಳೆದುಕೊಂಡಂತಹ ಅನುಭವ. ಕೊನೆ ಕೊನೆಗಂತೂ ಮಗನ ಕಬ್ಬಡ್ಡಿ ಗೀಳಿನಿಂದ ಸುಬ್ಬುಲಕ್ಷ್ಮಿಯವರ ಬೆಳಗಿನ ಸುಪ್ರಭಾತವಾದರೂ ತಪ್ಪುತ್ತದೆ, ಶಿವರಾಮ ಹೆಗಡೆಯವರು ಮಗನನ್ನು ಬಯ್ಯುವುದು ತಪ್ಪುವುದಿಲ್ಲ ಎನ್ನುವಂತಾಗಿತ್ತು.
              ಮನೆಗೆ ಬರುತ್ತಿದ್ದ ಆಳುಮಕ್ಕಳು `ಸಣ್ ಹೆಗ್ಡೇರೆ.. ಇವತ್ ನೆಲೆಮಾಂವಿನಾಗೆ ಕಬ್ಬಡ್ಡಿ ಟೂರ್ನಮೆಂಟೈತಿ.. ನಿಮಗೆ ಸುದ್ದಿ ಗೊತ್ತಾಗ್ಲನ್ರಾ?' ಎಂದೋ ಅಥವಾ ಇನ್ನೆಲ್ಲೋ ಕಬ್ಬಡ್ಡಿ ಪಂದ್ಯಾವಳಿ ನಡೆಯುತ್ತಿದ್ದ ಸುದ್ದಿ ಹೇಳಿದರೋ ಮುಗಿದೇ ಹೋಯಿತು. ಆ ದಿನವಿಡಿ ಶಿವರಾಮ ಹೆಗಡೆಯವರ ಸಹಸ್ರನಾಮಾರ್ಚನೆ ಕಟ್ಟಿಟ್ಟದ್ದೇ ಎನ್ನಬಹುದು. ಈ ಕಾರಣದಿಂದಲೇ ವಿನಯಚಂದ್ರ ಕಬ್ಬಡ್ಡಿ ಪಂದ್ಯಾವಳಿಯ ಸುದ್ದಿಯಿದ್ದರೆ ತನ್ನೊಬ್ಬನ ಎದುರಿಗೆ ಹೇಳಬೇಕು ಎಂದು ತಾಕೀತು ಮಾಡಿಬಿಟ್ಟಿದ್ದ.
             `ಈಗ ಹಿಂಗೆಳ್ತೆ ನೀನು.. ಆನೂ ಒಂದಿನ ವರ್ಡ್ ಫೇಮಸ್ ಆಗ್ತಿ.. ಆವಾಗ ಆನು ಮಾತಾಡ್ತ್ನಾ...' ಎಂದು ತಂದೆಯ ಬೈಗುಳಕ್ಕೆ ಉತ್ತರ ನೀಡುವ ಮಗ. ಮಗನ ಉತ್ತರ ಬರುವುದರೊಳಗಾಗಿ ಶಿವರಾಮ ಹೆಗಡೆ `ನೀ ಕಬ್ಬಡ್ಡಿ ಆಡದೇ ಚೊಲೋದೋ ಮಾರಾಯಾ.. ಎಲ್ಲಾ ಹುಡುಗರ ಹಾಂಗೆ ಕ್ರಿಕೆಟ್ ಆಡ್ತಿಲ್ಯಲಾ.. ಸಾಕು ಬಿಡು..' ಎಂದಾಗ ಮಾತ್ರ ವಿನಯಚಂದ್ರ ಮುಗುಳುನಕ್ಕು ಸುಮ್ಮನಾಗುತ್ತಿದ್ದ. ಕಬ್ಬಡ್ಡಿ ಆಟ ಕ್ರಿಕೆಟಿಗಿಂತ ಒಳ್ಳೆಯದು ಎನ್ನುವ ಭಾವನೆ ತಂದೆಯ ಮನಸ್ಸಿನಲ್ಲಿದೆಯಲ್ಲ ಭಗವಂತಾ.. ಅಷ್ಟು ಸಾಕು ಎಂದುಕೊಳ್ಳುತ್ತಿದ್ದ ವಿನಯಚಂದ್ರ.
               ಮಗ ಇಂತದ್ದೇ ಓದಲಿ, ಇಂತದ್ದನ್ನೇ ಮಾಡಲಿ ಎಂದು ಯಾವತ್ತೂ ಶಿವರಾಮ ಹೆಗಡೆಯವರು ಒತ್ತಾಯ ಮಾಡಿಲ್ಲ, ಒತ್ತಡವನ್ನೂ ಹೇರಿಲ್ಲ. ಮಗ ಏನು ಮಾಡಿದರೂ ಒಳ್ಳೆಯದನ್ನೇ ಮಾಡುತ್ತಾನೆ. ಆತನಿಗೆ ಉತ್ತಮ ದಾರಿಯಲ್ಲಿ ಹೋಗುವ ಸಂಸ್ಕಾರವನ್ನೇ ಧಾರೆಯೆರೆದು ನೀಡಿದ್ದೇನೆ ಎನ್ನುವ ಆತ್ಮವಿಶ್ವಾಸದ ಕಾರಣ ಶಿವರಾಮ ಹೆಗಡೆಯವರು ಆತನ ಓದಿನ ಕುರಿತು ಅಥವಾ ಕಬ್ಬಡ್ಡಿ ಕೋಚಿಂಗಿನ ಕುರಿತು ಅಥವಾ ಕಬ್ಬಡ್ಡಿಗಾಗಿ ಬೇರೆ ಬೇರೆ ರಾಜ್ಯಗಳಿಗೆ ತೆರಳುವ ಕುರಿತು ಯಾವುದೇ ತಡೆಯೊಡ್ಡಿಲ್ಲ. ಅಪ್ಪಯ್ಯ ಸಿಕ್ಕಾಪಟ್ಟೆ ಸ್ವಾತಂತ್ರ್ಯ ಕೊಟ್ಟಿದ್ದ ಹೇಳಿ ವಿನಯಚಂದ್ರನೂ ಅಂಕೆ ಮೀರಿಲ್ಲ. ಓದಿನಲ್ಲೂ ಹಿಂದೆ ಬಿಳಲಿಲ್ಲ. ಎಲ್ಲ ತಂದೆ-ತಾಯಿಗಳೂ ಮಕ್ಕಳು ಮೊದಲ ರಾಂಕೇ ಬರಬೇಕು, ಶೆ.95ರ ಮೇಲೆ ಅಂಕಗಳು ಬರಲೇಬೇಕು ಎಂದು ಹೇಳಿದ್ದರೆ ವಿನಯಚಂದ್ರನ ಪಾಡು ಇಷ್ಟು ಹೊತ್ತಿಗೆ ಏನಾಗಿಬಿಡುತ್ತಿತ್ತೋ. ಶಿವರಾಮ ಹೆಗಡೆಯವರು ಅಂತಹ ತಪ್ಪನ್ನು ಮಾಡಿರಲಿಲ್ಲ. ವಿನಯಚಂದ್ರ ಕೂಡ ಓದಿನಲ್ಲಿ ಟಠಡಢಣ ಆಗಲಿಲ್ಲ.
                ಮಗನ ಎದುರು ಆತ ಕಬ್ಬಡ್ಡಿ ಆಟ ಆಡುವುದನ್ನು ವಿರೋಧ ಮಾಡಿದಂತೆ ಮಾತನಾಡುವ ಶಿವರಾಮ ಹೆಗಡೆಯವರು ಆತ ಕಬ್ಬಡ್ಡಿಯಿಂದಲೇ ಒಂದೊಂದೇ ಮೆಟ್ಟಿಲು ಹತ್ತಿ ಗೆಲುವನ್ನು ಸಾಧಿಸುತ್ತ ಹೋದುದನ್ನು ಕಂಡು ಒಳಗೊಳಗೆ ಖುಷಿಪಟ್ಟರೂ ಹೊರಗೆ ತೋರಿಸಿಕೊಡಲಿಲ್ಲ. ಇಂತಹ ಶಿವರಾಮ ಹೆಗಡೆಯವರು ಮಗ ನ್ಯಾಷನಲ್ ಟೀಮಿಗೆ ಆಯ್ಕೆಯಾಗಿದ್ದಾನೆ. ವಿಶ್ವಕಪ್ಪಿನಲ್ಲಿ ಆಡುತ್ತಾನೆ ಎಂದಾಗ ಒಂದು ಸಾರಿ ಖುಷಿಯಿಂದ ತುಂಡುಗುಪ್ಪಳ ಹೊಡೆದಿದ್ದರು. ಆದರೆ ವಿಶ್ವಕಪ್ ಪಂದ್ಯಾವಳಿ ಬಾಂಗ್ಲಾದೇಶದಲ್ಲಿ ನಡೆಯುತ್ತಿದೆ ಎಂದಾಗ ಮಾತ್ರ ಕಸಿವಿಸಿಯನ್ನು ಅನುಭವಿಸಿದ್ದರು.
              `ಅಲ್ದಾ ತಮಾ.. ನೀ ವಿಶ್ವಕಪ್ಪಿಗೆ ಆಯ್ಕೆಯಾಗಿದ್ದು ಖುಷಿನೇಯಾ.. ಆದರೆ ಬಾಂಗ್ಲಾದೇಶದಲ್ಲಿ ವಿಶ್ವಕಪ್ ಆಕ್ತಡಾ ಮಾರಾಯಾ.. ಅಲ್ಲಿಗೆ ಹೋಗಿ ಹೆಂಗೆ ಆಡತ್ಯಾ..?' ಎಂದು ಮಗನ ಎದುರು ಹೇಳಿಯೂ ಹೇಳಿದ್ದರು. ಆಗ ಮಾತ್ರ ವಿನಯಚಂದ್ರ ಅಪ್ಪನ ಮಾತಿಗೆ ಬೆರಗಾಗಿದ್ದ.
             `ಅಲ್ದಾ ಅಪ್ಪಯ್ಯಾ.. ಆನು ಕಬ್ಬಡ್ಡಿಗೆ ಹೇಳಿ ಸುಮಾರ್ ಸಾರಿ ಮನಿಂದ ಬೇರೆ ಬೇರೆ ಕಡಿಗೆ ಹೋಜಿ. ಈಗ ಮೂರು ವರ್ಷದಿಂದ ರಾಜ್ಯದ ತಂಡದ ಪರವಾಗಿ ಆಡ್ತಾ ಇದ್ದಿ. ಮೊದಲನೇ ವರ್ಷ ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ಆಮೇಲೆ ಭೋಪಾಲಕ್ಕೆ ಈ ವರ್ಷ ಓರಿಸ್ಸಾದ ಕಟಕ್ ಗೆ ಹೋಗಿ ಬಂಜನಿಲ್ಯನಾ.. ಈಗ್ಲೂ ಹಂಗೇಯಾ.. ಬಾಂಗ್ಲಾದೇಶಕ್ಕೆ ಹೋಗಿ ಬಂದರಾತು..' ಎಂದು ಉತ್ತರಿಸಿದ.
           ಹೇಳುವುದಕ್ಕೇನೋ ಹೇಳಿದ ವಿನಯಚಂದ್ರ. ಅಸಲಿಗೆ ಅಲ್ಲಿಗೆ ಹೋದರೆ ಹೇಗೋ ಏನೋ ಎನ್ನುವ ಭಾವನೆ ಕಾಡದೇ ಇರಲಿಲ್ಲ.
             `ತಮಾ.. ಇಲ್ಲೀವರೆಗೆ ಭಾರತದ್ದೇ ಬೇರೆ ಬೇರೆ ರಾಜ್ಯಗಳಿಗೆ ನೀನು ಹೋಗಿದ್ದೆ ಹಂಗಾಗಿ ಎಂತಾ ಸಮಸ್ಯೆ ಆಜಿಲ್ಯಾ.. ಆದರೆ ಇದು ಬಾಂಗ್ಲಾದೇಶ.. ಹೆಸರು ಚೊಲೋ ಇದ್ದು. ಆದರೆ ಈಗಿತ್ಲಾಗಿ ಸಿಕ್ಕಾಪಟ್ಟೆ ಗಲಾಟೆ ನಡೀತಾ ಇದ್ದಡಾ ಹೇಳಿ ಸುದ್ದಿ.. ಎಂತಾದ್ರೂ ಹೆಚ್ಚೂಕಡಿಮೆ ಆದರೆ ಯಂತಾ ಮಾಡವಾ..?' ಎಂದು ತಮ್ಮ ಮನದಾಳದ ಭೀತಿಯನ್ನು ಮಗನ ಮುಂದಿಟ್ಟರು.
             `ಅಯ್ಯೋ ಮಾರಾಯಾ.. ಅಂತಾ ನಕ್ಸಲೈಟ್ ಹಾವಳಿ ಏರಿಯಾ ಓರಿಸ್ಸಾ, ಛತ್ತೀಸಗಢಕ್ಕೇ ಹೋಗಿ ಬಂಜಿ.. ಇದೆಂತದಾ.. ಎಂತದ್ದೂ ಆಕ್ತಿಲ್ಲೆ.. ನೀ ತಲೆಬಿಸಿ ಮಾಡ್ಕ್ಯಳಡಾ' ಎಂದು ತಂದೆಯ ಮಾತನ್ನು ಹಾರಿಸಿದ್ದ ವಿನಯಚಂದ್ರ.
              ಮಗ ಹೀಗೆಂದಿದ್ದರೂ ಮನದಾಳದಲ್ಲಿ ಭೀತಿಯನ್ನು ಹೊಂದಿದ್ದ ಶಿವರಾಮ ಹೆಗಡೆಯವರು ತಮ್ಮ ಬಳಗದಲ್ಲೆಲ್ಲ ಬಾಂಗ್ಲಾದೇಶದ ಕುರಿತು, ಈಗ ಅಲ್ಲಿನ ಪರಿಸ್ಥತಿಯ ಬಗ್ಗೆ ಮಾಹಿತಿ ಕಲೆಹಾಕತೊಡಗಿದ್ದರು. ಮಗ ಬಾಂಗ್ಲಾದೇಶಕ್ಕೆ ಹೊರಡುವ ಮುನ್ನ ಸಾಧ್ಯವಾದಷ್ಟು ತಾನು ಮಾಹಿತಿ ನೀಡಬಹುದು ಎನ್ನುವ ಆಲೋಚನೆ ಅವರದ್ದು. ಶಿವರಾಮ ಹೆಗಡೆಯವರ ಮಿತ್ರಮಂಡಳಿಗೂ ಬಾಂಗ್ಲಾದೇಶದ ಬಗ್ಗೆ ಗೊತ್ತಿದ್ದುದು ಅಷ್ಟಕ್ಕಷ್ಟೇ ಆಗಿತ್ತು. ಹಿಂದೊಮ್ಮೆ ಭಾರತದ್ದೇ ಆದ ರಾಷ್ಟ್ರ. ಭಾರತದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಬ್ರಿಟೀಷರ ವಿರುದ್ಧ ಸೋತ ರಾಜ ಬಾಂಗ್ಲಾದವನು. ಬ್ರಿಟೀಷರ ಆಳ್ವಿಕೆಗೆ ಮೊದಲ ಬಾರಿಗೆ ಒಳಪಟ್ಟ ಪ್ರದೇಶ. ಸುಭಾಷಚಂದ್ರಭೋಸರು ಓಡಾಡಿದ ಸ್ಥಳ. ಸ್ವಾತಂತ್ರ್ಯ ಹೋರಾಟಕ್ಕೆ ಉಗ್ರರೂಪದ ಕೆಚ್ಚು ಹಾಗೂ ಕಿಚ್ಚನ್ನು ನೀಡಿದ ದೇಶ, ಎಲ್ಲಕ್ಕಿಂತ ಹೆಚ್ಚಾಗಿ ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯವರೆಗೂ ನಿರಂತರವಾಗಿ ಬಾಂಗ್ಲಾ ನಿರಾಶ್ರಿತರೆಂಬ ಸಮಸ್ಯೆಯನ್ನು ಭಾರತದೊಳಗೆ ತಳ್ಳುತ್ತಿರುವ ರಾಷ್ಟ್ರ ಇತ್ಯಾದಿ ಇತ್ಯಾದಿ ಮಾಹಿತಿಗಳು ಶಿವರಾಮ ಹೆಗಡೆಯವರಿಗೆ ಲಭ್ಯವಾದವು.
                ಮುಸ್ಲಿಂ ರಾಷ್ಟ್ರವಾಗಿದ್ದರೂ ಸಾಕಷ್ಟು ಸಂಖ್ಯೆಯಲ್ಲಿ ಹಿಂದುಗಳಿದ್ದಾರೆ. ಬೆಂಗಾಲಿ ಬಾಬುಗಳಿದ್ದಾರೆ. ಬಿಳಿ ಸೀರೆಯ ಬೆಂಗಾಲಿ ಹೆಂಗಸರಿದ್ದಾರೆ. ಬ್ರಾಹ್ಮಣರೂ ಇದ್ದಾರೆ. ದೇಶವನ್ನು ಆಳುತ್ತಿರುವುದು ಓರ್ವ ಮಹಿಳೆ. ಮಹಿಳೆಯ ವಿರುದ್ಧ ಹೋರಾಡುತ್ತಿರುವಾಕೆಯೂ ಇನ್ನೊಬ್ಬ ಮಹಿಳೆ ಇತ್ಯಾದಿ ಕೌತುಕಭರಿತ ವಿಷಯಗಳೂ ಶಿವರಾಮ ಹೆಗಡೆಯವರ ಬಳಿ ಸಂಗ್ರಹವಾದವು. ಮಗ ಹೊರಡುವ ಮುನ್ನ ಈ ಎಲ್ಲ ವಿಷಯಗಳನ್ನೂ ತಿಳಿಸಬೇಕು ಎನ್ನುವುದು ಅವರ ಬಯಕೆ. ಅದಕ್ಕೆ ಸಾಧ್ಯವಾದ ಮಟ್ಟಿಗೆ ಎಲ್ಲ ವಿವರಗಳನ್ನೂ ಸಂಗ್ರಹಣೆ ಮಾಡತೊಡಗಿದ್ದರು. ಟಿಪ್ಪಣಿಯ ಮೂಲಕ ಬರೆದಿಡಲು ಆರಂಭಿಸಿದ್ದರು.

**
               
                `ಹೋಯ್.. ಏನೂಂದ್ರೆ... ಇಲ್ ಕೇಳಚ.. ವಿನಯಂಗೆ ಸ್ವಲ್ಪ ಹೇಳಿ.. ಆ ಬಾಂಗ್ಲಾದೇಶಕ್ಕೆಲ್ಲಾ ಹೋಪದು ಬ್ಯಾಡಾ ಹೇಳಿ.. ಎಂತಕ್ಕೆ ಬೇಕು ಹೊರ ದೇಶದ ಉಸಾಬರಿ.. ಒಂಚೂರು ಬುದ್ದಿ ಹೇಳಲಾಗ್ತಿಲ್ಯಾ..?' ಎಂಬ ಮಾತು ಕೇಳಿತೆಂದರೆ ಅದು ಶಿವರಾಮ ಹೆಗಡೆಯವರ ಏಕಮಾತ್ರ ಧರ್ಮಪತ್ನಿ ಸುಶೀಲಾ ಎಂದೇ ಹೇಳಬಹುದು.
               ಟಿಪಿಕಲ್ ಹಳ್ಳಿ ಹೆಂಗಸು. ಆಟಿವಿ, ಈಟಿವಿ, ಊಟಿವಿ ಸೇರಿದಂತೆ ಎಲ್ಲಾ ಕನ್ನಡ ಚಾನಲ್ಲುಗಳಲ್ಲಿ ಬರುವ ಒಂದರಿಂದ ಹತ್ತರವರೆಗಿನ ಬಾಗಿಲುಗಳ ಹೆಸರಿನ ಧಾರಾವಾಹಿಗಳ ಪರಮ ಭಕ್ತೆ. ಲಲಿತಾ ಸಹಸ್ರನಾಮ, ಗಣಪತಿ ಉಪನಿಷತ್ತಿನ ಕನ್ನಡ ಅನುವಾದ,  ಸೇರಿದಂತೆ ಹಲವಾರು ಮಂತ್ರಗಳನ್ನು ಪಠಣ ಮಾಡುವ ಮೂಲಕ ದೇವರು ದಿಂಡರನ್ನೂ ಒಲಿಸಿಕೊಂಡಿದ್ದಾಳೆ. ಮಗನೆಂದರೆ ಅಚ್ಚುಮೆಚ್ಚು. ಆಗಾಗ ಮಗನನ್ನು ಗದರಿಸುತ್ತಾಳಾದರೂ ಅದು ಪ್ರೀತಿಯಿಂದಲೇ ಹೊರತು ಮತ್ತಿನ್ಯಾವ ಭಾವದಿಂದಲ್ಲ.
              ಕಬ್ಬಡ್ಡಿ ಆಟದ ಕಡೆಗೆ ವಿನಯಚಂದ್ರ ಹೊರಳಿದಾಗ ಶಿವರಾಮ ಹೆಗಡೆಯವರು ಅದರ ವಿರುದ್ಧ ಮಾತನಾಡಿದರೂ ಸುಶೀಲಾ ಹೆಗಡೆ ಮಾತ್ರ ಆತನ ಬೆನ್ನಿಗೆ ನಿಂತಿದ್ದಳು. `ಕಬ್ಬಡ್ಡಿ ಆಡು ತಮಾ.. ಅವ್ವುಕೆ ಆನು ಹೇಳ್ತಿ..' ಎಂದು ಗ್ರೀನ್ ಸಿಗ್ನಲ್ ನೀಡಿದ್ದೇ ಸುಶೀಲಾ. ಮಗ ಯಾಕೋ ಉದ್ಧಾರವಾಗುವ ಲಕ್ಷಣಗಳು ಕಾಣುತ್ತಿಲ್ಲ ಎಂದು ಶಿವರಾಮ ಹೆಗಡೆಯವರು ಮನಸ್ಸಿನಲ್ಲಿ ಅಂದುಕೊಳ್ಳುತ್ತಿದ್ದ ಹೊತ್ತಿನಲ್ಲಿ ಮಗನ ಗುಣಗಾನ ಮಾಡಿ ಶಿವರಾಮ ಹೆಗಡೆಯವರ ಮನಸ್ಸನ್ನು ಬದಲಾಯಿಸಿದ ಶ್ರೇಯಸ್ಸು ಇವರಿಗೇ ದಕ್ಕಬೇಕು. `ಮಗ ಎಂತಾದ್ರೂ ಆಗಿ ಬದುಕು ಹಾಳ್ ಮಾಡ್ಕ್ಯಂದ್ರೆ ಅದ್ಕೆ ನಿಂದೇ ಜವಾಬ್ದಾರಿ... ನೀ ಇದ್ದೆ ನಿನ್ ಮಗ ಇದ್ದಾ..' ಎಂದು ಹೆಗಡೆಯವರು ಆಗಾಗ ಹೆಂಡತಿಯನ್ನು ಬಯ್ಯುವುದೂ ಇತ್ತು.
               ಮಗ ಬಾಂಗ್ಲಾದೇಶಕ್ಕೆ ಹೋಗುತ್ತಾನೆ ಎಂಬುದು ಸುಶೀಲಾ ಅವರ ಮನಸ್ಸಿನಲ್ಲಿ ಭಯಕ್ಕೆ ಕಾರಣವಾಗಿತ್ತು. ಸದಾ ಒಂದಿಲ್ಲೊಂದು ಅರಾಜಕತೆಯ ಕಾರಣದಿಂದ ಸುದ್ದಿ ಮಾಡುತ್ತಿರುವ ಬಾಂಗ್ಲಾ ದೇಶದ ಬಗ್ಗೆ ಸುಶೀಲಾ ಹೆಗಡೆಯವರಿಗೆ ಅದ್ಯಾರು ಹೇಳಿದ್ದರೂ ಅಥವಾ ಅದ್ಯಾವುದೋ ಕ್ರೈಂ, ಡೈರಿಯ ಸ್ಟೋರಿ ತಿಳಿಸಿತ್ತೋ ಏನೋ.. ಬಾಂಗ್ಲಾದೇಶಕ್ಕೆ ಮಗ ಹೋಗುವುದನ್ನು ವಿರೋಧ ಮಾಡಲಾರಂಭಿಸಿದ್ದರು. ಮಗನ ಬಳಿ ಹಲವಾರು ಬಾರಿ `ತಮಾ.. ಹೋಪದೆ ಇಪ್ಪಲೆ ಆಕ್ತಿಲ್ಯನಾ.. ಅಲ್ಲಿ ಪರಿಸ್ಥಿತಿ ಸರಿ ಇಲ್ಯಡಾ ಮಾರಾಯಾ.. ಎಂತಾದ್ರೂ ಹೆಚ್ಚೂ ಕಮ್ಮಿ ಆದ್ರೆ ಎಂತಾ ಮಾಡವಾ..' ಎಂದು ಅಲವತ್ತುಕೊಂಡಿದ್ದರೂ ಮಗ ಅದನ್ನು ಕಿವಿಗೆ ಹಾಕಿಕೊಂಡಿರಲಿಲ್ಲ. ಅದಕ್ಕೆಂದೇ ತಮ್ಮ ಯಜಮಾನರ ಬಳಿ ಕೊಟ್ಟ ಕೊನೆಯದಾಗಿ ಬುದ್ಧಿ ಹೇಳಬೇಕೆಂದು ದುಂಬಾಲುಬಿದ್ದಿದರು.
                ಆದರೆ ಪ್ರತಿ ಸಾರಿ ಮಗ ಕಬ್ಬಡ್ಡಿ ಆಡುವುದರ ವಿರುದ್ಧ ಕೊಂಕು ಮಾತನಾಡುತ್ತಿದ್ದ ಶಿವರಾಮ ಹೆಗಡೆಯವರು ಈ ಸಾರಿ ಮಗನನ್ನು ಖುಷಿಯಿಂದ ಕಳಿಸಿಕೊಡಲು ಮುಂದಾಗಿದ್ದನ್ನು ನೋಡಿ ಸುಶೀಲಮ್ಮ ಅಚ್ಚರಿಯನ್ನು ಪಟ್ಟಿದ್ದರು.

(ಮುಂದುವರಿಯುತ್ತದೆ..)

Thursday, January 16, 2014

ಬೆಂಗಾಲಿ ಸುಂದರಿ-1


ಹೃದಯವೆ ಬಯಸಿದೆ ನಿನ್ನನೆ..
ತೆರೆಯುತ ಕನಸಿನ ಕಣ್ಣನೇ...
ಮೊಬೈಲ್ ರಿಂಗಣಿಸತೊಡಗಿತು. ಎಂತಕ್ಕಾದ್ರೂ ಬಂತೋ ಪೋನು ಎಂದುಕೊಂಡೇ ತುಸು ಆಲಸ್ಯದಿಂದ ಪೋನೆತ್ತಿಕೊಂಡ ವಿನಯಚಂದ್ರ.
             `ಗುಡ್ ನ್ಯೂಸ್ ವಿನು... ಕೊನೆಗೂ ನೀನು ಕಬ್ಬಡ್ಡಿ ವಿಶ್ವ ಕಪ್ ನ್ಯಾಷನಲ್ ಟೀಮಿಗೆ ಸೆಲೆಕ್ಟಾದೆ.. ಕಂಗ್ರಾಟ್ಸ್ ದೋಸ್ತಾ..ನಂಗಂತೂ ಬಹಳ ಖುಷಿ ಆಗ್ತಾ ಇದೆ' ಎಂದು ಮಿತ್ರ ಸಂಜಯ ಪೋನ್ ಮಾಡಿದ ತಕ್ಷಣ ವಿನಯಚಂದ್ರಂಗೆ ಒಂದ್ ಸಾರಿ ಕಾಲು ನೆಲದ್ಮೇಲೆ ನಿಲ್ಲಲಿಲ್ಲ. ರಾಶಿ ದಿನದ ಕನಸು ನನಸಾದ ಹಾಗೆ ಮನಸ್ಸಿನಲ್ಲಿ ಹೊಯ್ದಾಟ.
             `ಹೇಯ್ ವಿನು.. ಎಲ್ಲೋದ್ಯಾ..? ಅಲ್ಲೇ ಇದ್ಯನಾ.. ಮಾತಾಡಾ..ಈ ಸಾರಿ ವಿಶ್ವ ಕಪ್ ಬಾಂಗ್ಲಾ ದೇಶದಲ್ಲಿದ್ದು.. ಅದಾರು ಗೊತ್ತಿದ್ದಾ ಇಲ್ಯಾ ನಿಂಗೆ? ಮುಂದಿನವಾರ ಅಲ್ಲಿಗೆ ಹೊರಡವು. ತಯಾರಾಗು ಬೇಗ.. ಕನಸು ಕಂಡಿದ್ದು ಸಾಕು..' ಎಂದು ಸಂಜಯ ಮತ್ತೊಂದ್ ಸಾರಿ ಅಂದಾಗ್ಲೇ ವಿನಯಚಂದ್ರ ಕನಸಿನಲೋಕದಿಂದ ವಾಸ್ತವಕ್ಕೆ ಬಂದಿದ್ದು.. ಮತ್ತೊಮ್ಮೆ ತನ್ನನ್ನು ತಾನೇ ಚಿವುಟಿಕೊಂಡು ಇದು ಕನಸಲ್ಲ ಎನ್ನುವುದನ್ನು ಖಚಿತಪಡಿಸಿಕೊಂಡ. ಮನಸ್ಸಿನಲ್ಲಿ ಸಂತೋಷದ ಅಲೆ ಉಕ್ಕುಕ್ಕಿ ಬರುತ್ತಿತ್ತು.
            `ಥ್ಯಾಂಕ್ಸಲೆ ದೋಸ್ತಾ..' ಎಂದ ವಿನಯಚಂದ್ರ. ಮನಸ್ಸಿಗೆ ರೆಕ್ಕೆ ಬಂದಿತ್ತು.
             ಹಾಳಾದ ಟಿ.ವಿ ಮಾಧ್ಯಮದವರು ಯಾವಾಗ ನೋಡಿದ್ರೂ ಕ್ರಿಕೆಟ್ ಕ್ರಿಕೆಟ್.. ಅದನ್ನು ಬಿಟ್ರೆ ಟೆನ್ನಿಸ್ಸು ಫುಟ್ ಬಾಲ್.. ಅಪರೂಪಕ್ಕೆ  ಹಾಕಿ.. ಅವರಿಗೆಂತಕ್ಕೆ ನಮ್ಮ ದೇಸಿಯ ಕ್ರೀಡೆ ಕಬ್ಬಡ್ಡಿ ಕಾಣತಿಲ್ಯೋ..ನಮ್ಮದೇ ನಾಡಿನ, ಕ್ರಿಕೆಟ್ಟಿಗಿಂತಲೂ ರೋಚಕತೆಯನ್ನು ತಂದುಕೊಡುವ ಕಬ್ಬಡ್ಡಿ ಕುರಿತು ಒಂದೇ ಒಂದು ಸುದ್ದಿನೂ ಹಾಕ್ಕತ್ವಿಲ್ಲೆ.. ಎಂದು ಮಾಧ್ಯಮದವರಿಗೆ ಬೈದುಕೊಂಡ ವಿನಯಚಂದ್ರ. ತಾನು ಕಬ್ಬಡ್ಡಿಯ ವಿಶ್ವಕಪ್ ಟೀಮಿಗೆ ರಾಷ್ಟ್ರೀಯ ತಂಡಕ್ಕೆ ಸೆಲೆಕ್ಟ್ ಆಗಿದ್ದನ್ನೂ ಯಾರೋ ದೋಸ್ತರಿಂದ ತಿಳಕಳ ಹಂಗಾತು ಅನ್ನೋದು ಮುಜುಗರ ತಂದಿತು. ಅದೇ ಆತನ ಸಿಟ್ಟಿಗೆ ಸ್ವಲ್ಪ ಜಾಸ್ತಿ ಉಪ್ಪು-ಖಾರವನ್ನು ಹಾಕಚು ಹೇಳಲಕ್ಕು. `ತಥ್...' ಎಂದುಕೊಂಡ ಮನಸ್ಸಿನಲ್ಲಿಯೇ.
             `ಸಂಜೂ.. ನಿಂಗೆ ಯಾರ್ ಹೇಳಿದ್ವಾ ಮಾರಾಯಾ.. ಆನಂತೂ ಬೆಳಗಿಂದ ಟಿ.ವಿ ಮುಂದೆ ಕುತ್ಗಂಡಿದ್ದಿ.. ಒಂದೇ ಒಂದ್ ಸುದ್ದಿನೂ ಗೊತ್ತಾಜಿಲ್ಲೆ.. ಯಾವಾಗ್ಲೂ ಪೋನ್ ಮಾಡತಾ ಇದ್ದಿದ್ ಚಿದಂಬರ ಸರ್ರೂ ಪೋನ್ ಮಾಡಿದ್ವಿಲ್ಯಲಾ ಇನ್ನೂವಾ.. ಸುಳ್ ಹೇಳಡದಾ.. ಸೀರಿಯಸ್ಸಾಗಿ ಹೇಳಾ ಮಾರಾಯಾ..ಖರೆ ಹೌದನಾ.. ತಮಾಷೆ ಅಲ್ಲ ಹದಾ' ಎಂದ ವಿನಯಚಂದ್ರ. ಗೆಳೆಯ ಹೇಳಿದ ಮಾತನ್ನು ನಂಬಲು ಇನ್ನೂ ಅಳುಕಿತ್ತು ಮನದ ಮೂಲೆಯಲ್ಲಿ.
             `ಥೋ.. ಇಲ್ಲೆಲ್ಲಾ ಎಂತಾ ಜೋಕಾ.. ನಿಜ ಮಾರಾಯಾ.. ಪಕ್ಕಾ ಸುದ್ದಿನೇಯಾ..ನೀನು ಕಬ್ಬಡ್ಡಿ ಟೀಮಿಗೆ ಆಯ್ಕೆಯಾಜೆ. ಹೀಗೆ ಕಬ್ಬಡ್ಡಿ ತಂಡಕ್ಕೆ ಆಯ್ಕೆಯಾದ ಮೊಟ್ಟ ಮೊದಲ ಹವ್ಯಕರವನು ನೀನು.. ಈ ಕಾರಣಕ್ಕೆ ನಮಗೆ ಬಹಳ ಹೆಮ್ಮೆ ಆಗ್ತಾ ಇದ್ದೋ' ಎಂದ ಸಂಜಯ.
             ದೊಡ್ಡ ಚ್ಯಾನಲ್ ರಿಪೋರ್ಟರ್ ಸಂಜಯ. ಅಂವಂಗೆ ಬೇಗ್ನೆ ಸುದ್ದಿ ಗೊತ್ತಾಜಕ್ಕು.. ಅದು ಸತ್ಯನೂ ಆಗಿಕ್ಕು ಅಂದುಕೊಂಡ. `ಮಾರಾಯಾ.. ಎಂತಾದ್ರೂ ಡೀಟೇಲ್ಸ್ ಗೊತ್ತಾದ್ರೆ ಹೇಳಾ..' ಎಂದ..
              `ಯಂಗೆ ಗೊತ್ತಾಗಿದ್ದು ಇಷ್ಟೇಯಾ ನೋಡು.. ಇನ್ 15 ದಿನಕ್ಕೆ ಬಾಂಗ್ಲಾದೇಶದಲ್ಲಿ ಕಬ್ಬಡ್ಡಿ ವಿಶ್ವಕಪ್ಪು. 18 ಟೀಂ ಬತ್ತಾ ಇದ್ದು. ವರ್ಡ್ ಚಾಂಪಿಯನ್ ನಮ್ಮ ಟೀಮಿನ ಸೆಲೆಕ್ಷನ್ನು ಆಜು. ಅದರಲ್ಲಿ ನೀನು ಒಬ್ಬಂವ ಸೆಲೆಕ್ಟ್ ಆದಂವ.. ಹೋಯ್ ಕರ್ನಾಟಕದಿಂದ ಸೆಲೆಕ್ಟ್ ಆದಂವ ನೀನೊಬ್ನೆಯಾ ಮಾರಾಯಾ.. ನಮ್ ಹವ್ಯಕರಲ್ಲಿ ನೀನೆ ಮೊದಲ್ನೇಯವ್ವಾ ನೋಡು.. ಅಂತೂ ವರ್ಡ್ ಕಪ್ಪಿಗೆ ನ್ಯಾಶನಲ್ ಟೀಮಿಗೆ ಸೆಲೆಕ್ಟ್ ಆಗೋ ಮೂಲಕ ಭಾರತದ ಪರ ಆಡವ್ವು ಹೇಳೋ ನಿನ್ ಕನಸು ನನಸು ಮಾಡ್ಕ್ಯತ್ತಾ ಇದ್ದೆ.. ಯಂಗಂತೂ ರಾಶಿ ಖುಷಿ ಆಗ್ತಾ ಇದ್ದು ಮಾರಾಯಾ.. ಆನಂತೂ ನಿನ್ ಬಗ್ಗೆ.. ನಿನ್ ಸಾಧನೆ ಬಗ್ಗೆ ದೊಡ್ ಸುದ್ದಿ ಬರೆಯವ್ವು ಹೇಳಿ ಮಾಡ್ಕತ್ತಾ ಇದ್ದಿ ಡಿಟೇಲ್ಸ್ ಕೊಡಾ..' ಎಂದ ಸಂಜಯ.
               `ಡೀಟೇಲ್ಸನಾ.. ನಿಂಗೊತ್ತಿಲ್ದೆ ಇದ್ದಿದ್ದು ಯಂತಿದ್ದಾ.. ಮಣ್ಣಾಂಗಟ್ಟಿ.. ನೀನೆ ಬರಕಳಾ' ಎಂದ ವಿನಯಚಂದ್ರ
                `ಥೋ ಹಂಗಲ್ದಾ ಮಾರಾಯಾ.. ಆನು ನೀನು ದೋಸ್ತ ಇದ್ದಿಕ್ಕು. ನಿನ್ ಬಗ್ಗೆ ಹೆಚ್ಚು ಕಡಿಮೆ ಎಲ್ಲಾ ವಿಷಯವೂ ಗೊತ್ತಿದ್ದು.. ಗೊತ್ತಿದ್ದು ಹೇಳಿ ಆ ಬರದ್ದಿ ಅಂದ್ಕ.. ನಿನ್ ಬಾಯಿಂದ ಕೇಳದಾಂಗೆ ಆಕ್ತನಾ.. ಹೇಳಾ..ನೀನು ಯಂಗೆ ಪರಿಚಯ ಇದ್ದ ಕಾಲದ್ದೆಲ್ಲಾ ಗೊತ್ತಿದ್ದು. ಆದರೂ ವಿಶೇಷತೆಗಳು ಅಂತ ಇನ್ನೇನಾದ್ರೂ ಇದ್ದಿಕ್ಕಲಾ' ಎಂದ..
               ಅಷ್ಟರಲ್ಲಿ ಡ್ಯೂಯೆಲ್ ಸಿಮ್ಮಿನ ವಿನಯಚಂದ್ರನ ಪೋನು ಕಿರಿ ಕಿರಿ ಮಾಡಲೆ ಹಣಕಚು. ಯಾರೋ ಪೋನ್ ಮಾಡಿದ್ದ ಅಂದಕಂಡ ವಿನಯಚಂದ್ರ..
               `ದೋಸ್ತಾ.. ಇನ್ನೊಂದು ಪೋನು ಬತ್ತಾ ಇದ್ದಲೆ.. ಆನು ಯೆಲ್ಲಾ ರೆಡಿ ಮಾಡಿಟ್ಕಂಡು ನಿಂಗೆ ಪೋನ್ ಮಾಡ್ತ್ನಾ..' ಎಂದು ಪೋನ್ ಇಡ್ತಾ ಇದ್ದಾಂಗೆ ವಿನಯಚಂದ್ರನ ಮೊಬೈಲು ಮತ್ತೊಮ್ಮೆ ರಿಂಗಣ. ನೋಡಿದ್ರೆ ಚಿದಂಬರ ಸರ್ ಮಾಡಿದ್ದರು. ಅವರ ಪೋನ್ ಎತ್ಕಂಡು ಮಾತಾಡಲು ಹಿಡದ್ರೆ ಅವರೂ ಇದೇ ವಿಷಯ ಹೇಳಲೆ ಹಣಕಿದ್ರು. ಸಂಜಯ ಹೇಳಿದ್ ವಿಷಯಾನೇ ಅವರೂ ಹೇಳಿದ್ರು. ಅದನ್ನು ಕೇಳಿದ ವಿನಯ ಚಂದ್ರ `ಯಂಗೆ ವಿಷಯ ಗೊತ್ತಾಜು.. ಸಂಜಯ ಹೇಳಿದ್ದ ಹಿಂಗಿಂಗೆ ಅಂದ.. ಖುಷಿಯಾದ ಚಿದಂಬರ ಮಾಸ್ತರ್ರು `ವಿನಯಾ.. ಅಂತೂ ನಿನ್ ಶ್ರಮಕ್ಕೆ ಬೆಲೆ ಬಂತಲೆ.. ಒಳ್ಳೇ ರೀತಿ ಹೆಸರು ಮಾಡವ್ವು....ನಿನ್ನ ಮೇಲೆ ಬಹಳ ನಿರೀಕ್ಷೆ ಇದೆ. ಅದನ್ನು ಹುಸಿ ಮಾಡಬೇಡ ಮಾರಾಯಾ' ಅಂದರು.
              `ಸರ್ ನೀವು ನಂಗೆ ಕೋಚಿಂಗ್ ಕೊಟ್ಟಿದ್ದು.. ಅದನ್ನು ಮರಿತ್ನಿಲ್ಲೆ ಸರ್.. ನಿಮ್ಮಿಂದ್ಲೆ ಈ ಹಂತಕ್ಕೆ ಬಂದಿದ್ದು.. ಯನ್ನ ಈ ಸಾಧನೆ ಹಿಂದೆ ಕಾಂಬದು ನಿಮ್ಮ ಬೆವರು..ನೀವಿಲ್ಲದಿದ್ರೆ ನಾನು ಈ ಮಟ್ಟಕ್ಕೆ ಏರುತ್ತಿರಲಿಲ್ಲವೇನೋ.. ನಿಮಗೆ ನಾನೆಷ್ಟು ಧನ್ಯವಾದ ಹೇಳಿದ್ರೂ ಕಮ್ಮಿನೇಯಾ' ಎಂದ. ಕೋಚ್ ಚಿದಂಬರ ಅವ್ರು ಒಂದು ಸಾರಿ ಸುಮ್ಮಗಾದ್ರು. ನಿಡಿದಾದ ಉಸಿರು ಬಿಟ್ಟ ಶಬ್ದ ಮೊಬೈಲಿನಲ್ಲಿ ಕೇಳಚು. ಮನದಾಳದ ಭಾವವೊಂದು ನಿಟ್ಟುಸಿರಿನ ಮೂಲಕ ಹೊರಬಂದ ಹಾಗಿತ್ತು.
            `ಸರ್.. ಇಲ್ಲೀತನಕ ಆನು ರಾಜ್ಯದ ಟೀಮಲ್ಲಿ ಆಡಿದಿದ್ದಿ.. ಈಗ ಬಹಳ ಟೆನ್ಶನ್ ಆಗ್ತಾ ಇದ್ದು..ಹೆಂಗೋ ಏನೋ.. ಎಕ್ ದಮ್ ನ್ಯಾಷನಲ್ ಟೀಮಿಗೆ ಸೆಲೆಕ್ಷನ್ನಾಗಿದ್ದು, ಅದೂ ವಿಶ್ವಕಪ್ಪಿಗೆ...ಮನದಲ್ಲಿ ಒಂಥಡಾ ಢಕ ಢುಕಿ..' ಎಂದ ವಿನಯಚಂದ್ರ..
             `ಥೋ.. ನಿಂಗೆ ಹಂಗೆಂತಕ್ಕೆ ಆಗವಾ..? ಇಲ್ಲೀವರೆಗೆ ಹೆಂಗೆ ಆಡಿದ್ಯಾ ಮುಂದೂ ಹಂಗೆ ಆಡು.. ಯಶಸ್ಸು ನಿನ್ ಜೊತೆಗೆ ಬತ್ತು. ತಲೆಬಿಸಿ ಮಾಡ್ಕ್ಯಳಡಾ ಮಾರಾಯಾ.. ಏನೇ ಆದರೂ ನಿನ್ನ ಮೇಲಿನ ನಂಬಿಕೆ ನೀನು ಕಳಕಳಡ. ನಮ್ಮ ನಮ್ಮ ಮೇಲೆ ನಮಗಿರುವ ನಂಬಿಕೆಯೇ ನಮ್ಮನ್ನು ಸದಾ ಕಾಪಾಡ್ತು. ನೀನೂ ನಂಬಿಕೆಯನ್ನು ಎಂದಿಗೂ ಕಳೆದುಕೊಳ್ಳದೇ ಮುನ್ನುಗ್ಗು. ಅಷ್ಟಾದರೆ ಗೆಲುವು ಸದಾ ನಿನ್ನ ಬೆನ್ನಿಗೆ ಬರ್ತು' ಎಂದ ಚಿದಂಬರ್ ಅವರು `ನೋಡಾ.. ಟೀಂ ಇಂಡಿಯಾಕ್ಕೆ ಪ್ರಕಾಶ ಜಾಧವ್ ಅಂತ ಕೋಚ್ ಇದ್ರು. ಯನ್ನ ದೋಸ್ತನೂ ಹೌದು.. ಅಗ್ ದಿ ಒಳ್ಳೆ ಮನುಷ್ಯಾ.. ಆನು ಅಂವ ಒಟ್ಟಿಗೆ ರೈಲ್ವೇಸ್ ಪರ ಕಬ್ಬಡ್ಡಿ ಆಡಿದಿದ್ಯ.. ಅಂವನ ಹತ್ರ ನಿನ್ ಬಗ್ಗೆ ಹೇಳಿರ್ತಿ.. ಅಂವ ಎಲ್ಲಾ ನೋಡ್ಕತ್ತಾ.. ನಿಂಗೆ ಎಂತಾ ಸಮಸ್ಯೆ ಆಕ್ತಿಲ್ಯಾ.. ನಿಂಗೆ ತರಬೇತಿಗೆ ಸಮಸ್ಯೆ ಆಗ್ತಿಲ್ಲೆ. ಚೊಲೋ ಆಡು..' ಎಂದು ಪೋನಿಟ್ಟರು.
              ವಿನಯಚಂದ್ರನ ಮನಸ್ಸಿನಲ್ಲಿ ಖುಷಿಯ ಉಬ್ಬರ ಕಾಣ್ತಾ ಇತ್ತು. ಚಿದಂಬರ ಸರ್ ಪೋನ್ ಇಡ್ತಾ ಇದ್ದಾಂಗೆ ಸುಮಾರಸ್ಟ್ ಪೋನ್ ಬಪ್ಪಲೆ ಹಿಡತ್ತು ವಿನಯ ಚಂದ್ರಂಗೆ.. ಎಲ್ಲಾವ್ಕೂ ಉತ್ತರ ಕೊಡುವಷ್ಟರಲ್ಲಿ ವಿನಯಚಂದ್ರಂಗೆ ಬೆವರು ಇಳಿಯಲೆ ಹತ್ತಿತ್ತು. ಆದರೂ ನ್ಯಾಷನಲ್ ಟೀಮಿಗೆ ಸೆಲೆಕ್ಟ್ ಆಗಿದ್ ಖುಷಿ ಬೆವರನ್ನು ಮರೆಸಿ ಹಾಕಿತ್ತು. ಲೆಕ್ಖವಿಲ್ಲದಷ್ಟು ಕರೆಗಳು, ನೂರಾರು ಮೆಸೇಜುಗಳು.. ಒಟ್ನಲ್ಲಿ ವಿನಯಚಂದ್ರ ಪುಲ್ ಹ್ಯಾಪಿ.
                  ವಿನಯ ಚಂದ್ರ ನ್ಯಾಷನಲ್ ಟೀಮಿಗೆ ಸೆಲೆಕ್ಟ್ ಆಗುವ ಮುನ್ನ ನಡೆದ ಹಾದಿ ಇದ್ದಲಿ ಅದು ಬಹಳ ಶ್ರಮದಿಂದ ಕೂಡಿದ್ದು. ಉತ್ತರ ಕನ್ನಡದ ಮಲೆನಾಡಿನ ಹಳ್ಳಿ ಮೂಲೆಯೊಂದರ ಹುಡುಗ ವಿನಯಚಂದ್ರ. ಮನೆಲ್ಲಿ ಸಿಕ್ಕಾಪಟ್ಟೆ ಅನುಕೂಲಸ್ತರಾಗಿರುವ ಕಾರಣ ದುಡ್ಡು ಕಾಸಿಗೆ ತೊಂದರೆ ಇರಲಿಲ್ಲ. ಹಾಗಂತ ವಿನಯಚಂದ್ರ ಕೇಳಿದ್ದು, ಬಯಸಿದ್ದೆಲ್ಲವೂ ಸುಲಭಕ್ಕೆ ಸಿಗುತ್ತಲೂ ಇರಲಿಲ್ಲ. ವಿನಯಚಂದ್ರನೂ ಸಣ್ಣಕ್ಕಿದ್ದಾಗಿನಿಂದಲೂ ಚೂಟಿಯ ಹುಡುಗ. ಅವನ ಓರಗೆ ಹುಡುಗರು ಕ್ರಿಕೆಟ್ ಆಡಕತ್ತ ಬೆಳದಾಂಗೆ ಇಂವ ಕಬ್ಬಡ್ಡಿ ಆಡಕತ್ತ ಬೆಳೆದಿದ್ದ. ಹವ್ಯಕರ ಹುಡುಗ ಆಗಿದ್ರಿಂದ ಅವನ ವಯಸ್ಸಿನ ಹವ್ಯಕ ಹುಡುಗರೆಲ್ಲ `ಅಲ್ದಾ ವಿನಯಾ.. ನೀ ಹವ್ಯಕ ಆಕ್ಯಂಡು ಅದೆಂತದಾ ಇತರೇರು ಆಡೋ ಆಟ ಆಡ್ತೆ.. ಕ್ರಿಕೆಟ್ಟಾಡಲೆ ಬಾರಾ..' ಎಂದು ಛೇಡಿಸುತ್ತಿದ್ದರು.
                `ಯಾರು ಹೇಳಿದ್ದು ಕಬ್ಬಡ್ಡಿ ನಾವ್ ಆಡದಲ್ಲ ಹೇಳಿ..? ಇಂತವ್ವೇ ಆಡದು ಹೇಳಿ ಎಲ್ಲಾದ್ರೂ ಬರಕಂಡು ಇದ್ದಾ.. ಯಂಗೆ ಕಬ್ಬಡ್ಡಿ ಇಷ್ಟ.. ನಿಂಗಕ್ಕಿಗೆ ಕ್ರಿಕೆಟ್ ಆಗಿಕ್ಕು.. ಯಂಗೆ ಕ್ರಿಕೆಟ್ ಆಡಲೆ ಬನ್ನಿ ಹೇಳಿ ನಿಂಗವ್ವು ಒತ್ತಾಯ ಮಾಡಡಿ..' ಹೇಳಿ ಕೂಗಿ ಅವರನ್ನೆಲ್ಲ ಸುಮ್ಮನಿರಿಸಿದ್ದ ವಿನಯಚಂದ್ರ. ದೇಹದಲ್ಲಿ ದಾಢಸಿಯಿದ್ದ ಕಾರಣ ಆತನ ಮಾತಿಗೆ ಯಾರೂ ಎದುರು ಆಡುತ್ತಿರಲಿಲ್ಲ. ವಿನಯಚಂದ್ರ ಎದುರಿಗೆ ಇರದಿದ್ದಾಗ ಮಾತ್ರ ಎಲ್ಲರೂ ನಕ್ಕವರೇ.
                 ವಿನಯಚಂದ್ರ ಕಬ್ಬಡ್ಡಿಯಲ್ಲೇ ಮುಂದುವರಿದ. ಅವನ ಜೊತೆಗೆ ಬೆಳೆದ ಹುಡುಗರು ಕ್ರಿಕೆಟ್ ಆಡುತ್ತ ಬೆಳೆದರು. ಕಬ್ಬಡ್ಡಿ ಮನಸ್ಥಿತಿಯ ವಿನಯಚಂದ್ರ ಓದೋದ್ರಲ್ಲಿ ಹಿಂದೆಬಿದ್ದ ಅಂದ್ಕಂಬಲೆ ಬತ್ತಿಲ್ಲೆ.. ಓದೋದ್ರಲ್ಲೂ ಆತ ಚೂಟಿ. ಎಲ್ಲರ ಹಾಂಗೆ ತೀರಾ ಮುವತ್ಮೂರ್ ಮೂರಲೆ ಮಾರ್ಕಸ್ ತಗಳದೇ ಇದ್ರೂ 80-85ಕ್ಕಂತೂ ಕಡಿಮೆ ಆಕ್ತಿತ್ತಿಲ್ಲೆ..
                  ಇವನ ವಾರಗೆ ಹುಡುಗರು ಕ್ರಿಕೆಟ್ ಟೀಮಿಗೆ ಸೆಲೆಕ್ಟ್ ಆಪಲೆ ಪಡಿಪಾಟಲು ಪಡ್ತಿದ್ರೆ ಇವರ ಶಾಲೆ ಕಬ್ಬಡ್ಡಿ ಟೀಮಿಗೆ ಇವನೇ ಕ್ಯಾಪ್ಟನ್ನು. ತಾನೇ ಕೋಚ್ ಕೂಡ. ತನ್ನದೇ ಟೀಮ್ ಕಟ್ಟಿಕೊಂಡು ಶಾಲಾ ಕ್ರೀಡಾಕುಟಗಳಲ್ಲಿ ಜಯಭೇರಿ ಭಾರಿಸಿಕೊಂಡು ಬರುತ್ತಿದ್ದ. ಕ್ರಿಕೆಟ್ ಬೆನ್ನೇರಿ ಅತ್ತ ದೊಡ್ಡ ಆಟಗಾರರೂ ಆಗದೇ ಇತ್ತ ಕ್ರಿಕೆಟ್ ಬಿಡಲೂ ಆಗದೇ ಒದ್ದಾಡುತ್ತಿದ್ದರು ವಿನಯಚಂದ್ರನ ಗೆಳೆಯರು. ಆದರೆ ವಿನಯಚಂದ್ರ ಮಾತ್ರ ಕಬ್ಬಡ್ಡಿಯನ್ನು ಜೀವಕ್ಕಿಂತ ಹೆಚ್ಚಾಗಿ ಇಷ್ಟಪಟ್ಟ. ಕಬ್ಬಡ್ಡಿಯ ಕೈಹಿಡಿದಿದ್ದ ವಿನಯಚಂದ್ರನನ್ನು ಕಬ್ಬಡ್ಡಿ ಕೈಬಿಡಲಿಲ್ಲ.
                  ತಮ್ಮೂರ ಫಾಸಲೆಯಲ್ಲಿ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿಗಳು ನಡೆಯುತ್ತಿದ್ದಾಗಲೆಲ್ಲ ಬೆಳಗಿನವರೆಗೂ ಮೊದಲನೆ ಸಾಲಲ್ಲಿ ಕುಂತ್ಗಂಡು ಎದ್ದು ಬತ್ತಿದ್ದ ವಿನಯಚಂದ್ರ. ಅವಂಗೆ ಅದ್ಯಾವ ಮಾಯೆಯಲ್ಲಿ ಕಬ್ಬಡ್ಡಿ ಚಟ ಅಂಟಿಕೊಂಡಿತ್ತೋ ಏನೋ. ಕಬ್ಬಡ್ಡಿ, ಭಾವಗೀತೆ, ಕುಂಗ್ ಫೂ, ಪುಸ್ತಕ ಓದೋದು, ಹಳೆಯ ಹಾಡುಗಳನ್ನು ಅದರಲ್ಲೂ ಹೆಚ್ಚಾಗಿ ಹಿಂದಿಯ ಮುಖೇಶ್, ರಫಿ, ಮನ್ನಾಡೆ, ಕನ್ನಡದಲ್ಲಿ ಘಂಟಸಾಲ, ಪಿಬಿಶ್ರೀ ಅಂದರೆ ಜೀವ ಬಿಡುವಷ್ಟು ಇಷ್ಟ. ಇವೆಲ್ಲ ಒಂಥರಾ ವಿಚಿತ್ರ ಕಾಂಬಿನೇಷನ್ನಾದರೂ ಚಿಕ್ಕಂದಿನಿಂದ ಹಾಗೆಯೇ ಬೆಳೆದವನು ವಿನಯಚಂದ್ರ. ಅವನ ವಾರಗೆಯ ಹುಡುಗರಲ್ಲಿ ವಿನಯಚಂದ್ರನೆಂದರೆ ವಿಚಿತ್ರ ಜೀವಿ ಎನ್ನುವಂತೆ ಬೆಳೆದಿದ್ದ.
                   ಶಾಲಾಮಟ್ಟದಲ್ಲಿ ಶಾಸ್ತ್ರೀಯವಾಗಿ ಕಬ್ಬಡ್ಡಿ ಆಡಲು ಬರದಿದ್ದರೂ ಇತರರು ಇವನಷ್ಟು ಒಳ್ಳೆಯದಾಗಿ ಆಡದಿದ್ದ ಕಾರಣ ಆ ಮಟ್ಟದಲ್ಲಿ ಇವನದ್ದೇ ಸಾಮ್ರಾಜ್ಯ ಎನ್ನಬಹುದಿತ್ತು. ಆದರೆ ಹೈಸ್ಕೂಲು ಓದಲಿಕ್ಕೆಂದು ವಿನಯಚಂದ್ರನನ್ನು ಆತನ ತಂದೆ ಶಿವರಾಮ ಹೆಗಡೆ ಶಿರಸಿಗೆ ಕಳಿಸಿದಾಗ ತನ್ನ ಜೀವನದ ದಿಕ್ಕು ಬದಲಾಗುತ್ತದೆ ಎಂದು ವಿನಯಚಂದ್ರನಿಗೂ ಗೊತ್ತಿರಲಿಲ್ಲವೇನೋ. ಎಂಟನೇ ಕ್ಲಾಸಿನಲ್ಲಿ ಪೀ ಪಿರಿಯಡ್ಡಿನಲ್ಲಿ ಯಾರ್ಯಾರು ಏನೇನ್ ಆಟ ಆಟ ಆಡ್ತೀರಿ ಎಂದಾಗ ಎದ್ದುನಿಂತು `ಕಬ್ಬಡ್ಡಿ..' ಎಂದಿದ್ದ. ತಕ್ಷಣ ಅಲ್ಲಿದ್ದ ದೈಹಿಕ ಶಿಕ್ಷಕರು ಈತನ ಹೆಸರು ಕೇಳಿದ್ದರು. ಅದಕ್ಕವನು `ವಿನಯಚಂದ್ರ ಶಿವರಾಮ ಹೆಗಡೆ' ಎಂದು ಉತ್ತರಿಸಿದ್ದ. ಹೆಸರು ಕೇಳಿ ಶಿಕ್ಷಕರು ಒಮ್ಮೆ ವಿಸ್ಮಯರಾಗಿದ್ದರೂ `ಲೇ ಪುಳಿಚಾರು.. ನೀ ಏನ್ ಕಬ್ಬಡ್ಡಿ ಆಡ್ತೀಯೋ..' ಎಂದು ವ್ಯಂಗ್ಯವಾಡಿದ್ದರು. ವಿನಯಚಂದ್ರ ನಾಚಿಕೆಯಿಂದ ಸುಮ್ಮನುಳಿದಿದ್ದ.
                 ನಂತರದ ದಿನಗಳಲ್ಲಿ ಯಾವ ಯಾವ ವಿದ್ಯಾರ್ಥಿ ಹೇಗೆ ಆಡುತ್ತಾನೆಂದು ಗಮನಿಸಿದ್ ಹೈಸ್ಕೂಲಿನ ದೈಹಿಕ ಶಿಕ್ಷಕರು ವಿನಯಚಂದ್ರ ನಿಜಕ್ಕೂ ಚನ್ನಾಗಿ ಆಡುತ್ತಾನೆ ಆದರೆ ಇನ್ನಷ್ಟು ಪಳಗಬೇಕಾದ ಅಗತ್ಯವಿದೆ ಎಂಬುದನ್ನು ಮನಗಂಡಿದ್ದರು. ಅದಕ್ಕೆ ತಕ್ಕಂತೆ ತರಬೇತಿ ನೀಡಲು ಮುಂದಾಗಿದ್ದರು. ಒಬ್ಬ ಹೈಗರ ಹುಡುಗ ಕಬ್ಬಡ್ಡಿ ಆಡುತ್ತಾನೆ ಎಂಬುದು ಅವರಿಗೆ ವಿಶೇಷ ಎನ್ನಿಸಿದ್ದರೂ ಆತ ಚನ್ನಾಗಿ ಆಡುತ್ತಿದ್ದ ಕಾರಣ ಪ್ರೋತ್ಸಾಹ ನೀಡಲು ಮುಂದಾಗಿದ್ದರು.  ಹೈಸ್ಕೂಲಿನ ಈ ಶಿಕ್ಷಕರೇ ವಿನಯಚಂದ್ರನನ್ನು ಚಿದಂಬರ್ ಅವರಿಗೆ ಪರಿಚಯ ಮಾಡಿಸಿದ್ದು. ಚಿದಂಬರ ಅವರ ಪರಿಚಯವಾದ ನಂತರ ವಿನಯಚಂದ್ರ ಇಂದಿನವರೆಗೂ ಮುನ್ನಡೆಯುತ್ತಲೇ ಇದ್ದಾನೆ ಎಂದರೂ ತಪ್ಪಾಗಲಿಕ್ಕಿಲ್ಲ.

**

                     ಕೋಚ್ ಚಿದಂಬರ  ಅವರೂ ಕೂಡ ವಿನಯಚಂದ್ರನಂತೆಯೇ ಮಲೆನಾಡಿನವರು. ಮಲೆನಾಡಿನಲ್ಲಿ ಜನಿಸಿ ಹುಬ್ಬಳ್ಳಿಗೆ ಹೋಗಿ ನೆಲೆಸಿದ್ದರು ಚಿದಂಬರ್ ಅವರು. ತಮ್ಮ ಕಾಲದಲ್ಲಿ ಜಿಲ್ಲಾಮಟ್ಟ, ವಲಯಮಟ್ಟ, ರಾಜ್ಯ ಹಾಗೂ ದಕ್ಷಿಣ ಭಾರತ ಮಟ್ಟಗಳಲ್ಲಿ ಆಡಿ ಅನೇಕ ಸಾರಿ ರಾಷ್ಟ್ರೀಯ ತಂಡದ ಬಾಗಿಲು ಬಡಿದಿದ್ದರೂ ಕ್ರೀಡಾಲೋಕದ ರಾಜಕೀಯದ ಕಾರಣ ಇವರಿಗೆ  ಅವಕಾಶ ಲಭ್ಯವಾಗಿರಲಿಲ್ಲ. ಈ ಕೊರಗು ಮರೆಯಬೇಕೆಂಬ ಕಾರಣಕ್ಕಾಗಿಯೇ ಕಬ್ಬಡ್ಡಿ ಕೋಚಿಂಗ್ ಕೊಡುವ ಕಾರ್ಯವನ್ನು ಮಾಡುತ್ತಿದ್ದರು. ಆದರೆ  ವಿನಯಚಂದ್ರ ಸಿಗುವವರೆಗೂ ಅವರ ಕೋಚಿಂಗ್ ಗೆ ತಕ್ಕ ವಿದ್ಯಾರ್ಥಿ ಸಿಕ್ಕೇ ಇರಲಿಲ್ಲ. ವಿನಯಚಂದ್ರ ಸಿಕ್ಕ ನಂತರ ಆತನಿಗೆ ಕಬ್ಬಡ್ಡಿಯ ಎಲ್ಲ ಪಟ್ಟುಗಳನ್ನೂ ಕಲಿಸಿಕೊಟ್ಟಿದ್ದರು. ಅವರ ತರಬೇತಿಯ ಪರಿಣಾಮ ಆತ ಎಲ್ಲ ಕಡೆಗಳಲ್ಲಿಯೂ ಮುನ್ನಡೆದ. ಇದೀಗ ಬಾಂಗ್ಲಾದೇಶಕ್ಕೂ ಹೊರಟಿದ್ದಾನೆ.
                  ಬಾಂಗ್ಲಾದೇಶದಲ್ಲಿ ವಿನಯಚಂದ್ರನಿಗೆ ಹೊಸದೊಂದು ಲೋಕ ಅನಾವರಣಗೊಂಡು ಬದುಕಿನ ಇನ್ನೊಂದು ಮಜಲು ತೆರೆಯಲಿತ್ತು. ಬಾಂಗ್ಲಾದಲ್ಲಿ ನಡೆಯುವ ಕಬ್ಬಡ್ಡಿ ವಿಶ್ವಕಪ್ಪಿಗೆ ತೆರಳಲು ವಿನಯಚಂದ್ರ ತಯಾರಾಗತೊಡಗಿದ್ದ. ಹೊಸ ಕನಸುಗಳು ಆತನಲ್ಲಿ ತುಂಬಿದ್ದವು. ಬಾಂಗ್ಲಾದೇಶ, ಬೆಂಗಾಲಿ ನಾಡು ಆತನನ್ನು ಕೈಬೀಸಿ ಕರೆಯುತ್ತಿತ್ತು.

(ಮುಂದುವರಿಯುತ್ತದೆ..)

Wednesday, January 15, 2014

ತಾಯಿ-ತುತ್ತು

ಅಮ್ಮಾ ನಿನ್ನ ಕೈತುತ್ತು
ನನ್ನ ಮನಕೆ ಸ್ವಾತಿಮುತ್ತು ||

ಹಲವೆಂಟು ಕಷ್ಟಗಳನ್ಹೊತ್ತು
ನೀ ನೀಡಿದ ಸಿಹಿ ತುತ್ತು
ನನ್ನೊಲವ ಜೀವಧಾರೆಗೆ
ಸಿಹಿಮುತ್ತು| ಅದಿರ್ಮುತ್ತು ||

ಒಂಭತ್ತು ತಿಂಗಳು ಹೊತ್ತು
ಮಡಿಲ ನೋವುಂಡು ಹೆತ್ತು
ನೀಡಿರೆ ಕೆನ್ನೆಗೆ ಮುತ್ತು
ಕೈತುತ್ತು| ಪ್ರೀತಿಯಿತ್ತು ||


ಈ ಜೀವ ನಿನ್ನ ಸ್ವತ್ತು
ಜೊತೆಗೆ ನೆತ್ತರ ತರ್ಪಣವಿಟ್ಟು
ನಿನ್ನೆಯ ಋಣ ತೀರಿಸಿರೆ
ಬಾಳಿಗೊಂದು ಸಾರ್ಥಕವಿತ್ತು ||

(ಈ ಕವಿತೆಯನ್ನು 24-01-2006ರಲ್ಲಿ ದಂಟಕಲ್ಲಿನಲ್ಲಿ ಬರೆದಿದ್ದೇನೆ)


Monday, January 13, 2014

ಕಾಡುಕೋಣದೊಡನೆ ಮುಖಾಮುಖಿ

(ನಾನು ತೆಗೆದ ಪೋಟೋ ಬ್ಲರ್ರಾದ ಕಾರಣ ಸಾಂದರ್ಭಿಕ ಚಿತ್ರ ಹಾಕಿದ್ದೇನೆ.)
ಉಫ್....

ನಿನ್ನೆ ರಾತ್ರಿ ಮನೆಯ ಕಡೆಗೆ ಹೊರಟಿದ್ದೆ.
ನಮ್ಮೂರ ದಾರಿ ಅಂಕುಡೊಂಕು.. ಗುಡ್ಡ ಹತ್ತಿಳಿದು ಸಾಗಬೇಕು..
ಮನೆಯಿನ್ನೇನು ಒಂದು ಕಿ.ಮಿ ದೂರವಿದೆ ಎನ್ನುವಾಗ ರಸ್ತೆಯಲ್ಲಿ ಒಂದಿಷ್ಟು ದನಗಳು ನಿಂತಿವೆ.
ಮೂರ್ನಾಲ್ಕು ರಸ್ತೆಯ ಪಾರ್ಶ್ವದಲ್ಲಿ ಮೇಯುತ್ತ ನಿಂತಿದ್ದವು.
ಹತ್ತಿರ ಹತ್ತಿರ ನಮ್ಮ ಮನೆಯ ಜೆರ್ಸಿ ದನದಷ್ಟು ದೊಡ್ಡವು.
ದನಗಳು ಕಳ್ ಮೇಯಲು ಬರುವುದು ಸಾಮಾನ್ಯ ಎಂದುಕೊಂಡು ಮುಂದಕ್ಕೆ ಹೋಗಲು ಅನುವಾದೆ.
ರಸ್ತೆಯ ಪಕ್ಕದ ಮಟ್ಟಿಯಲ್ಲಿ ಅದೆಲ್ಲಿತ್ತೋ.. ಒಂದು ದೈತ್ಯ ಕಾಡುಕೋಣ ಸರಕ್ಕನೆ ರಸ್ತೆಯ ಮೇಲೆ ಬಂದು ನಿಂತುಕೊಂಡಿತು..
ಬೈಕಿಗೆ ಸರಕ್ಕನೆ ಬ್ರೇಕ್ ಹಾಕಿದೆ.
ದನಗಳು ಹಾಗೂ ಕಾಡುಕೋಣ ಇದೆಂತಾ ನಮೂನಿ ಅಂದುಕೊಂಡೆ.
ಸರಿಯಾಗಿ ದಿಟ್ಟಿಸಿದಾ ಅವು ದನಗಳಲ್ಲ.. ಕಾಡೆಮ್ಮೆಕರುಗಳು..
ಐದಾರಿದ್ದವೇನೋ.. ಚಿಕ್ಕವು..

ಅವುಗಳಿಗೆ ಡಾನ್ ಎಂಬಂತೆ ಅನಾಮತ್ತು 10 ಅಡಿ ಎತ್ತರದ ದೈತ್ಯ ಕಾಡುಕೋಣ ರಸ್ತೆಯ ನಡುಮಧ್ಯದಲ್ಲಿ ನಿಂತುಕೊಂಡಿತ್ತು.
ನನಗೆ ಒಮ್ಮೆ ಕೈಕಾಲು ನಡುಕ ಆರಂಭವಾಯಿತಾದರೂ ಕಾಡೆಮ್ಮೆ ಎಂತದ್ದೂ ಮಾಡುವುದಿಲ್ಲ ಎನ್ನುವ ಹುಂಭ ಧೈರ್ಯ.
ಕಾಡುಕೋಣದ ಕೊಬ್ಬಿನ ಚರ್ಮದ ವಾಸನೆ ಮೂಗಿಗೆ ಅಡರುವಷ್ಟು ಹತ್ತಿರದಲ್ಲಿ ನಾನಿದ್ದೇನೆ.
ಒಂದಿಪ್ಪತ್ತು ಮೀಟರ್ ಇರಬಹುದು.
ತುರ್ತಾಗಿ ಮನೆ ಸೇರಿಕೊಳ್ಳುವ ಅವಸರ ನನಗಿತ್ತು.. 
ನಾನು ಮನೆಗೆ ಹೋಗೋಣ ಎಂದುಕೊಂಡರೆ ಕಾಡುಕೊಣ ದಾರಿಬಿಟ್ಟು ಇಳಿಯಲಿಲ್ಲ..
ನನ್ನನ್ನೇ ನೋಡಲಾರಂಭ ಮಾಡಿತ್ತು..
ತನ್ನ ಮರಿಗಳಿಗೆ ಇಂವ ಇನಾದರೂ ಮಾಡಿಬಿಟ್ಟಾನು ಎನ್ನುವ ಭಯವಿತ್ತೇನೋ.
ಮುಂದಿನ ಕಾಲಿನಿಂದ ನೆಲವನ್ನು ಕೆರೆಯಲಾರಂಭಿಸಿತು..
`ಅಯ್ಯೋ ದೇವ್ರೆ.. ಗ್ಯಾರಂಟಿ ಸತ್ತೆ..ಹ್ಯಾಂಗಂದ್ರೂ ಕಾಡುಕೋಣ ನನ್ನ ಮೇಲೆ ದಾಳಿ ಮಾಡುತ್ತದೆ..'
 `ಕಾಡುಕೋಣದ ದಾಳಿಗೆ ಪತ್ರಕರ್ತ ಬಲಿ' ಎಂಬ ಸುದ್ದಿ ನಾಳೆ ಬರುತ್ತದೆಯೇ ಎಂಬ ದಿಗಿಲೂ ಆಯಿತು..
ನನ್ನ ದುರಾದೃಷ್ಟಕ್ಕೆ ನಮ್ಮೂರಿನಿಂದ ಆರೆಂಟು ಕಿಲೋಮೀಟರ್ ಫಾಸಲೆಯಲ್ಲಿರುವ  ಒಂದು ಊರಿನಲ್ಲಿ ಎರಡು ಮೂರು ದಿನಗಳ ಹಿಂದೆ ತೋಟಕ್ಕೆ ಹೋಗಿದ್ದ ಗೌಡರೊಬ್ಬರ ಮೇಲೆ ಕಾಡುಕೋಣ ಏಕಾಏಕಿ ದಾಳಿ ಮಾಡಿ ಗಾಯಗೊಳಿಸಿದ್ದ ವಿಷಯ ನೆನಪಾಯಿತು. ಆ ಸುದ್ದಿಯನ್ನು ನಾನೇ ಬರೆದಿದ್ದರಿಂದ ಮತ್ತಷ್ಟು ಭೀತಿ ಹೆಚ್ಚಾಯಿತು.
ಸ್ವಲ್ಪ ಹೊತ್ತು ಬಿಟ್ಟರೆ ಪಕ್ಕಕ್ಕೆ ಹೋಗಬಹುದು ಎಂದು ಕಾದೆ.
ಊಹೂಂ ಪಕ್ಕಕ್ಕೆ ಹೋಗಲಿಲ್ಲ..
ಬೈಕಿನ ಹೆಡ್ ಲೈಟನ್ನು ಡಿಪ್-ಡಿಮ್ ಮಾಡಿದೆ..
ಬುಸ್ ಎಂದು ಶ್ವಾಸ ಬಿಟ್ಟಿತು ಕಾಡುಕೋಣ..
ಸುತ್ತಮುತ್ತ ನೋಡಿ ಗಾಡಿಯನ್ನು ಹಿಂದಕ್ಕೆ ತಿರುಗಿಸೋಣ ಎಂದುಕೊಂಡು ನೋಡಿದೆ..
ಯಾಕೋ ಮತ್ತೆ ಧೈರ್ಯ ಸಾಲಲಿಲ್ಲ.
10 ನಿಮಿಷ ಕಳೆದರೂ ಕಾಡೆಮ್ಮೆ ರಸ್ತೆ ಮಧ್ಯವೇ ಇತ್ತು..
ನಾನು ಕ್ಯಾಮರಾ ತೆಗೆಯಲೋ ಬೇಡವೋ ಎಂಬ ದ್ವಂದ್ವದಲ್ಲಿ ಬಿದ್ದೆ..
ರಾತ್ರಿಯಾಗಿದೆ.. ಕ್ಯಾಮರಾ ಫ್ಲಾಷ್ ಲೈಟ್ ಬಿದ್ದು ಎಲ್ಲಿ ಸಿಟ್ಟಿನಿಂದ ಕಾಡುಕೊಣ ನನ್ನ ಮೇಲೆ ಮುಗಿ ಬೀಳಬಹುದೋ ಎಂಬ ಭಯವಾಯಿತು.
ಕ್ಯಾಮರಾ ಕೈಯಲ್ಲಿ ಹಿಡಿದೆನಾದರೂ ಕ್ಲಿಕ್ಕಿಸಲಿಲ್ಲ..
ಅಷ್ಟರಲ್ಲಿ ಕೊಂಚ ಧೈರ್ಯ ಬಂದಂಗಾಯ್ತು..
ಕ್ಯಾಮರಾದ ಫ್ಲಾಷ್ ಆಫ್ ಮಾಡಿ ಕಾಡುಕೋಣದ ಪೋಟೋ ಕ್ಲಿಕ್ಕಿಸಿದೆ..
ಕಾಡುಕೋಣ `ಎಸ್ಟ್ ಪೋಟೋ ಬೇಕಾದ್ರೂ ಹೊಡ್ಕೋ..' ಎಂದು ನನ್ನ ಕ್ಯಾಮರಾಕ್ಕೆ ಪೋಸು ಕೊಟ್ಟಂತೆ ಅನ್ನಿಸಿತು.
ನನಗೆ ಒಮ್ಮೆ ಅಪ್ಪನ ನೆನಪಾಯಿತು.
ರಾತ್ರಿಯ ವೇಳೆ ಪೇಟೆ ಕೆಲಸ ಮುಗಿಸಿ ಬರುವ ಆತನಿಗೆ ನಮ್ಮೂರ ಫಾಸಲೆಯಲ್ಲಿ ಕಾಡೆಮ್ಮೆ ಸಿಗುವುದು ಸರ್ವೇ ಸಾಮಾನ್ಯ..
ಆಗೆಲ್ಲ ಅವುಗಳ ಜೊತೆಗೆ ಮಶ್ಕಿರಿ ಮಾಡುವ ಸ್ವಭಾವ ಆತನದ್ದು. ಕಾಡೆಮ್ಮೆ ಹಿಂಡಿನ ಬಳಿ ಹೋಗಿ ಎಮ್ಮೆಯಂತೆ `ವಾಂಯ್..' ಗುಡುವುದು ಆತನ ಹುಚ್ಚಾಟ.. ಒಂದೆರಡು ಸಾರಿ ಆತ ಹೀಗೆ ಕೂಗಿದ್ದಕ್ಕೆ ಆತನ ಹಿಂದೆಯೇ ನಮ್ಮ ಮನೆಯ ಹತ್ತಿರಕ್ಕೂ ಬಂದಿದ್ದವಂತೆ ಕಾಡುಕೋಣಗಳು..
ನಾನೂ ಸುಮ್ಮನೆ ಅವರ ಬಳಿ `ವಾಂಯ್..' ಅನ್ನಲೇ..? ಎಂದುಕೊಂಡೆ..
`ಯಾರಿಗೆ ಬೇಕು ಉಸಾಬರಿ..' ಎಂದಿತು ಮನಸ್ಸು.. ನಾಲಿಗೆಯಿಂದ ಶಬ್ದ ಹೊರಬರಲಿಲ್ಲ..
ಕಾಡುಕೋಣವನ್ನು ಬಿಟ್ಟು ಅದರ ಜೊತೆಗಿದ್ದ ಮರಿಗಳನ್ನು ನೋಡಿದೆ..
ಐದಾರಿದ್ದವು ಎಂದಿದ್ದೆನಲ್ಲ.. ಹೌದು.. ಮರಿಗಳೇ ನಮ್ಮ ಮನೆಯ ಜರ್ಸಿ ದನದಷ್ಟು ದೊಡ್ಡವಿದ್ದವು..
ಸಾಮಾನ್ಯವಾಗಿ ಇವನ್ನು ಮರಿ ಎನ್ನುವುದು ಕಷ್ಟ. ಆದರೆ ಚಿಕ್ಕ ಚಿಕ್ಕ ಮೊಳಕೆ ಕೋಡಿನ ಕಾರಣದಿಂದ ಅವನ್ನು ಮರಿಗಳು ಎನ್ನಬಹುದು..
ಮನೆಯಲ್ಲಿ ಸಾಕಿದರೆ ಕಾಣುವಂತಹ ಎಲುಬಿನ ಹಂದರವಲ್ಲ. ದಷ್ಟಪುಷ್ಟವಾಗಿದ್ದವು.
`ವಾವ್..' ಎನ್ನೋಣ ಎಂದರೂ ಶಬ್ದ ಹೊರಬರುತ್ತಿಲ್ಲ..
 ಅದರಲ್ಲೊಂದು ಪುಟ್ಟ ಮರಿ.. ಹುಟ್ಟಿ ಆರೇಳು ದಿನಗಳಿರಬಹುದು..
ಬೆಳ್ಳಿಯಂತೆ ಬೆಳ್ಳಗಿತ್ತು..
ಪಾ..ಪ... ಕುಂಟುತ್ತಿತ್ತು..
ಏನಾಗಿರಬಹುದು ಎಂದುಕೊಂಡೆ..
ಬಿದ್ರಕಾನಿನಲ್ಲಿ ಕಾಲು ಒಡೆ ಬಾಯಿ ಒಡೆ ರೋಗಕ್ಕೆ ಯುವ ಕಾಡುಕೋಣವೊಂದು ಸಾವನ್ನಪ್ಪಿರುವ ಸುದ್ದಿ ಬಂದಿತ್ತು ಇದಕ್ಕೂ ಹಂಗೆ ಆಗಿರಬಹುದಾ..? ಎಂದುಕೊಂಡೆ..
ಮರಿಗಳು.. ಓಡುವ ಆಡುವ ಭರದಲ್ಲಿ ಬಿದ್ದು ಪೆಟ್ಟು ಮಾಡಿಕೊಂಡಿರಬಹುದು ಎನ್ನಿಸಿತು..
ಇಷ್ಟು ಹೊತ್ತು ಕಾಡುಕೋಣ ಎಂದರೂ ಅದು ಗಂಡೋ ಹೆಣ್ಣೋ ಗೊತ್ತಾಗಲಿಲ್ಲ ನೋಡಿ..
ಮರಿಗಳಿವೆಯಾದ್ದರಿಂದ ತಾಯಿಯೇ ಇರಬೇಕು ಎಂದುಕೊಂಡೆ..

ಸ್ವಲ್ಪ ಹೊತ್ತಾದ ಮೇಲೆ ಆ ದೈತ್ಯ ಕಾಡೆಮ್ಮೆ/ಕೋಣಕ್ಕೆ ನನ್ನ ಪೆಚ್ಚು ಪೆಚ್ಚು ಮುಖ, ಬೆದರಿದ ರೀತಿ ಕಂಡು ಬೇಜಾರು ಬಂದಿರಬಹುದು ಅಥವಾ ನನ್ನಿಂದ ಯಾವುದೇ ತೊಂದರೆಯೂ ಆಗುವುದಿಲ್ಲ ಎಂಬ ಭರವಸೆಯಿಂದಲೇನೋ ಹಗೂರಕ್ಕೆ ದಾರಿಯಿಂದ ನನ್ನ ಹತ್ತಿರಕ್ಕೆ ಬಂದಿತು. ನನ್ನೆದೆಯಲ್ಲಿ ಮತ್ತೆ ಢವ ಢವ..
ಬೈಕ್ ಸ್ಟಾಂಡ್ ಹಾಕಿ ಓಡಲು ಟ್ರೈಮಾಡುತ್ತಿದ್ದಂತೆ ಕಾಡುಕೋಣ ನಿಧಾನವಾಗಿ ರಸ್ತೆಯಿಂದ ಪಕ್ಕಕ್ಕೆ ಸಾಗಿತು..
ಅದರ ಮರಿಗಳ ಪಂಗಡವೂ ನಿಧಾನಕ್ಕೆ ಸಾಗಿತು..
ಪಕ್ಕಕ್ಕೆ ಹೋದ ಕಾಡೆಮ್ಮೆ ಒಮ್ಮೆ ತಿರುಗಿ ನೋಡಿತು..
ಬಹುಶಃ ನಾನು ಹೋದ್ನಾ ಇಲ್ವಾ ನೋಡಿತೇನೋ..
ಅಥವಾ ಅದರ ಹಿಂದೆ ಬರುತ್ತಿರುವ ಮರಿಗಳೆಗ ತೊಂದರೆ ಕೊಟ್ಟೆನಾ ಎಂದು ನೋಡಿರಲೂಬಹುದು..

ನಾನೊಮ್ಮೆ ನಿರಾಳ..
ಇಷ್ಟು ಮಾಡಿದ್ದೇ ತಡ.. ಬೈಕಿಗೆ ಮತ್ತಷ್ಟು ಎಕ್ಸಲರೇಟ್ ಕೊಟ್ಟು ರೊಂಯ್ ಅನ್ನಿಸಿ ಓಡಿಸಿದೆ..
ಮುಂದಕ್ಕೆ ಹೊದಂತೆ ಹಿಂದಕ್ಕೆಲ್ಲ ಚರಕ್ ಪರಕ್ ಸದ್ದು..
ನನ್ನ ಬೆನ್ನತ್ತಿದೆ ಕಾಡೆಮ್ಮೆ  ಎಂದುಕೊಂಡು ರೊಯ್ಯನೆ ಮುಂದಕ್ಕೆ ಹೋದೆ..
ಹಿಂದಕ್ಕೆ ತಿರುಗಿ ನೋಡುವ ಸಾಹಸವನ್ನೂ ಮಾಡಲಿಲ್ಲ..
ಸುಮಾರು ದೂರ ಬಂದಮೇಲೆ ಇಲ್ಲ.. ಕಾಡೆಮ್ಮೆ ಬೆನ್ನತ್ತಿಲ್ಲ ಎನ್ನಿಸಿತು..
**

ಮನೆಗೆ ಬಂದವನೇ ಮನೆಯಲ್ಲಿ ಅಪ್ಪ-ಅಮ್ಮನ ಬಳಿ ಈ ಸಂಗತಿ ಹೇಳಿದೆ..
ಅಮ್ಮ ಗಾಬರಿಯಾದರು..
ಅಪ್ಪ ಮತ್ತದೇ ಹುಚ್ಚಾಟ.. `ತಮಾ.. ಕಾಡೆಮ್ಮೆ ಎಂತಾ ಮಾಡ್ತಿಲ್ಯಾ..' ಎಂದ..
ನನ್ನ ಪಡಿಪಾಟಲನ್ನು ಹೇಳಿದೆ..
`ಮೊನ್ನೆ ಯಂಗೆ ಕಾನಬೈಕ್ಲು ಹತ್ರ ಸಿಕ್ಕಿತ್ತಾ.. ಒಂದ್ ದೊಡ್ಡದು ಉಳಿದವು ಸಣ್ಣವು.. ಅಲ್ದನಾ..' ಎಂದ..
ಹೌದು ಅಂದೆ
ಹದಾ.. ಇತ್ಲಾಬದಿಗೆ ಇದ್ದ ಹೇಳಾತು..
`ಕಾಡುಕೋಣ ಪಾಪದವ್ವಾ ತಮಾ.. ನಾವೆಂತಾದ್ರೂ ಮಾಡಿದ್ರೆ ಮಾತ್ರ ಅವ್ವು ಮೈಮೇಲೆ ಬರ್ತಾ..
ಮರಿ ಇದ್ದಿದ್ದಕ್ಕೆ ಅದು ರಸ್ತೆಯಲ್ಲಿ ನಿನ್ನ ಅಡ್ಡಗಟ್ಟಿದ್ದು ಕಾಣ್ತು..' ಎಂದು ತನಗೆ ಗೊತ್ತಿದ್ದನ್ನು ಹೇಳಿದ..
`ಆ ಮರಿ ಕಾಲು ಕುಂಟಾಕ್ತಿತ್ತು..' ಎಂದೆ..
`ಕಾಲು-ಬಾಯಿ ರೋಗ ಬಂದಿಕ್ಕಾ.. ಎಂದವನು `ಹುಲಿ ಹಿಡಿದಿಕ್ಕಾ..' ಎಂದ
`ಹುಲಿ..!? ನಮ್ ಬದಿಗೆ ಹುಲಿ ಎಲ್ಲಿದ್ದಾ' ಎಂದೆ..
`ಚಳಿಗಾಲವಲಾ.. ಹುಲಿ ಬತ್ವಾ.. ಕಾಡೆಮ್ಮೆ ಗ್ವಾಲೆ ಇದ್ದು ಹೇಳಾದ್ರೆ ಅದರ ಹಿಂದೆ ಹುಲಿಯೂ ಬರ್ತಾ.. ಹುಲಿಗೂ ಆಹಾರ ಬ್ಯಾಡದಾ.. ಮರಿ ಕಂಡು ಹಿಡಿಯಲೆ ನೋಡಿಕ್ಕು..'ಎಂದ..
ನನಗೆ ಡಿಸ್ಕವರಿ ಚಾನಲ್ ನೆನಪಾಯಿತು..
`ಚಳಿಗಾಲದಲ್ಲಿ ನಮ್ಮೂರ್ ಬದಿಗೆ ಕಾಡುಕೋಣ-ಹುಲಿ ಇರ್ತ್ವಾ.. ನಮ್ಮೂರ ಬ್ಯಾಣದಲ್ಲಿ ಹುಲ್ ಮೆಂದಕಂಡು ಮುತ್ಮುರ್ಡು ಶಾಲೆ ಹತ್ರ ಇಳದು ಗದ್ದೆ ಬೈಲಿಗೆ ಹೋಗಿ ಅಲ್ಲಿ ಹೊಳೆಯ ನೀರು ಕುಡಿತ.. ನಿಂಗೆ ಸಿಕ್ಕಿದ್ದ ಮೇಲೆ ಏಕಾದಶಿ ಗುಡ್ಡ ಹತ್ತಿ ಅಲ್ಲಿಗೇ ಹೋಗ್ತ ನೋಡು..' ಎಂದು ಅಪ್ಪ ಕಾಡುಕೋಣಗಳ ರೊಟೀನು ಕಾರ್ಯಗಳನ್ನು ಹೇಳಿದ.
**

ನನಗೆ ಕಾಡುಕೋಣ ಹೊಸದಲ್ಲ.. ಈ ಹಿಂದೆ ಶಾಲೆಗೆ ಹೋಗುವಾಗಲೆಲ್ಲ.. ಕಾಡುಕೋಣಗಳ ದರ್ಶನವಾಗುತ್ತಿತ್ತು.. ಚುಮು ಚುಮು ಚಳಿಯ ಮಂಜಿನ ಮುಂಜಾನೆಯಲ್ಲಿ ನಮ್ಮೂರಿನ ಪರಮಯ್ಯನ ಬ್ಯಾಣದಲ್ಲಿ ಗಮಯನ ಗ್ವಾಲೆ ಮೇಯುತ್ತಿದ್ದರೆ ನಾನು ಅರ್ಧ ಭಯ ಹಾಗೂ ಅರ್ಧ ಕುತೂಹಲದಿಂದ ನೋಡಿದ್ದೆ. ಅವೂ ಆ ಸಂದರ್ಭದಲ್ಲಿ ಮೇಯುವುದನ್ನು ಬಿಟ್ಟು ನನ್ನನ್ನು ತಲೆಯೆತ್ತಿಕೊಂಡು ನೋಡುತ್ತಿದ್ದವು.. ಗ್ವಾಲೆಯಲ್ಲಿನ ಒಂದೆರಡು ಪುಕ್ಕಲುಗಳು ನನ್ನನ್ನು ಕಂಡಿದ್ದೆ ದಡಕ್ಕನೆ ಓಡಲು ಯತ್ನಿಸುತ್ತಿದ್ದವು.. ಅವನ್ನು ಉಳಿದವುಗಳು ಹಿಂಬಾಲಿಸುತ್ತಿದ್ದವು.
ಆ ನಂತರ ನಾನು ಕಾಲೇಜಿಗೆ ಹೋಗುವಾಗ ಹೊಸದಾಗಿ ಬೈಕು ಕಲಿತಿದ್ದೆ. ದಣಿ ದಣಿ ಡಬ್ಬಲ್ ರೈಡಿಂಗ್ ಮಾಡುವುದು ರೂಢಿಯಾಗಿತ್ತು.. ಒಂದು ಚುನಾವಣೆಯ ಸಂದರ್ಭ ಅಮ್ಮನನ್ನು ಕರೆದುಕೊಂಡು ಚುನಾವಣೆಯಲ್ಲಿ ಮತಹಾಕಿ ವಾಪಾಸಾಗುತ್ತಿದ್ದೆವು.. ನಡುಮದ್ಯಾಹ್ನ.. ಕಾಡೆಮ್ಮೆಗಳ ಹಿಂಡು ನಮಗೆದುರಾಗಿತ್ತು.. ಸರಕ್ಕನೆ ಕಾಣಿಸಿಕೊಂಡ ಕಾಡೆಮ್ಮೆಯಿಂದಾಗಿ ನಮಗರಿವಿಲ್ಲದಂತೆ ಕೂಗು ಹೊರಬಿದ್ದಿತ್ತು.. ನಮ್ಮ ಕೂಗನ್ನು ಕೇಳಿ ಗಮಿಯನ ಗ್ವಾಲೆ ದಿಕ್ಕಾಪಾಲಾಗಿ ಓಡಿ ಹೋಗಿದ್ದವು.. ಆ ಗಡಬಡೆಯಲ್ಲಿ ನಾನು ಬೈಕನ್ನು ಕೈಬಿಟ್ಟು ದಬ್ಬಾಕದಿದ್ದುದೇ ಪುಣ್ಯ..
ಆ ನಂತರದ ದಿನಗಳಲ್ಲಿ ಕಾಡುಕೋಣಗಳನ್ನು ಕಂಡಿದ್ದೆನಾದರೂ ಇಷ್ಟು ಹತ್ತಿರದಲ್ಲಿ ಮುಖಾಮುಖಿಯಾಗಿರಲಿಲ್ಲ. ಕಾಡುಕೋಣದ ಮೈಯ ಕಂಪು ಮೂಗಿಗೆ ತಾಗುವಷ್ಟು ಸನಿಹ..
`ಹ್ವಾ.. ಅದು ಹೊತ್ತಿದ್ರೆ ಯಂತಾ ಮಾಡಕಾಗಿತ್ತಾ..' ಅಪ್ಪನನ್ನು ಕೇಳಿದೆ..
`ತಮಾ.. ಕಾಡೆಮ್ಮೆಯಾಗಲಿ ಅಥವಾ ಇನ್ಯಾವುದೇ ಕಾಡು ಪ್ರಾಣಿಯಾಗಲಿ ಸುಮ್ಮ ಸುಮ್ಮನೆ ದಾಳಿ ಮಾಡುವುದಿಲ್ಲ.. ಅವಕ್ಕೆಂತಾದ್ರೂ ತೊಂದರೆಯಾದರೆ ಅಥವಾ ನಾವು ತೊಂದರೆ ಮಾಡಿದರೆ ಮಾತ್ರ ಅದು ದಾಳಿ ಮಾಡ್ತು.. ಸುಮ್ ಸುಮ್ನೆ ಜಗಳ ಮಾಡವು, ಮೈಮೇಲೆ ಏರಿ ಬರದು ಅಂದ್ರೆ ಮನುಷ್ಟು ಒಬ್ನೇಯಾ ನೋಡು, ಎಂದ ಅಪ್ಪ..
`ನನಗೂ ಹೌದೆನ್ನಿಸಿತು..'
`ಮತ್ತೆ ಸಿಕ್ಕರೆ ಕಾಡೆಮ್ಮೆಯನ್ನು ಮುದ್ದು ಮಾಡಬೇಕು ಎನ್ನಿಸುತ್ತಿದೆ..' ಎಂದೆ..
 ಅಂತ ಹುಚ್ಚಾಟ ಬಿಟ್ ಬಿಡು ಎಂದು ಮನೆಯಲ್ಲಿ ವಾರ್ನಿಂಗ್ ಬೆಲ್ ಬಾರಿಸಿತು..
ಮೊದ ಮೊದಲು ಕಾಣುತ್ತಿದ್ದಂತಹ 10-15 ಕಾಡುಕೋಣಗಳ ಹಿಂಡು ಈಗಿಲ್ಲ.. ಬದಲಾಗಿ 6-7ಕ್ಕೆ ಇಳಿದಿದೆ..
ನಮ್ಮೂರು ಕಡೆಗಳಲ್ಲಿ ಹೇರೂರು, ಹೆಗಡೆಕಟ್ಟಾ, ರೇವಣಕಟ್ಟಾ ಕಡೆಯವರು ಆಗಾಗ ಬೇಟೆ ಬರುವವರುಂಟು.. ಹೀಗೆ ಬರುವವರು ಕಾಡೆಮ್ಮೆ ಹೊಡೆಯುತ್ತಾರೆ ಎಂದು ಕೇಳಿದ್ದೆ.. ಅದಕ್ಕೆ ಅವುಗಳ ಸಂಖ್ಯೆ ಕಡಿಮೆಯಾಗಿದೆ ಎಂದೂ ಕೇಳಿದ್ದೆ..
ಇನ್ನು ಮುಂದೆ ನಮ್ಮ ಭಾಗದಲ್ಲಿ ಬೇಟೆಗೆ ಯಾರಾದರೂ ಬಂದರೆ ಅವರಿಗೆ ತಡೆಯೊಡ್ಡಬೇಕು ಎಂದುಕೊಂಡಿದ್ದೇನೆ..
ಕಾಡೆಮ್ಮೆಯ ಬೇಟೆಯನ್ನು ತಡೆಯಬೇಕು ಎಂಬ ನಿರ್ಧಾರ ನನ್ನದು..
ಆದರೂ ಇನ್ನೊಮ್ಮೆ ಕಾಡುಕೋಣದ ಗ್ವಾಲೆ ಸಿಕ್ಕಾಗ ಅವುಗಳೆದುರು ನಿಂತು `ವಾಂಯ್..' ಅನ್ನಬೇಕು ಎನ್ನಿಸುತ್ತಿದೆ..
ಅದಕ್ಕಾಗಿ ಕಾಯುತ್ತಿದ್ದೇನೆ..!!



Sunday, January 12, 2014

ಎಣ್ಣೆ ಸುಬ್ಬಣ್ಣ ಮಿಲಿಯನೇರಾದದ್ದು..

ಎಣ್ಣೆ ಸುಬ್ಬಣ್ಣ...
                ಇಂತದ್ದೊಂದು ಹೆಸರಿನ ವ್ಯಕ್ತಿಯನ್ನು ಮೊನ್ನೆ ಮೊನ್ನೆಯವರೆಗೂ ಅಸಲಿ ಹೆಸರಿನಿಂದ ಕರೆದವರು ಕಡಿಮೆಯೇ.        ಈಗೊಂದು ದಶಕದ ಹಿಂದಿನಿಂದ ಈ ಹೆಸರು ನಮ್ಮ ಭಾಗದಲ್ಲಿ ಬಹಳ ಹೆಸರುಮಾತನ್ನು ಪಡೆದುಕೊಂಡಿತ್ತು. ಯಾರ ಬಾಯಲ್ಲಿ ಕೇಳಿದರೂ ಎಣ್ಣೆ ಸುಬ್ಬಣ್ಣ ಎಂದರೆ ಆತನ ಚಹರೆ ಕಣ್ಣಮುಂದೆ ಬರುತ್ತಿತ್ತು. `ಓ ಅವ್ನಾ.. ಯಂಗೊತ್ತಿದ್ದು... ಮಾರಾಯಾ ಆವತ್ತು ಹಿಂಗಾಗಿತ್ತು ಅವ್ನ ಕಥೆ.. ' ಎಂದು ಹೇಳುವಷ್ಟು ಚಿರಪರಿಚಿತನಾಗಿದ್ದ ಎಣ್ಣೆ ಸುಬ್ಬಣ್ಣ..
                ಎಣ್ಣೆ ಸುಬ್ಬಣ್ಣ ಎಂಬ ಹೆಸರೇ ಆತನ ವಿಶೇಷ ಗುಣಕ್ಕೆ ಕಾರಣವಾದ್ದರಿಂದ ಈ ಬರಹದ ಕೊನೆಯವರೆಗೂ ಆತನನ್ನು ಇದೇ ಹೆಸರಿನಿಂದ ಕರೆಯುತ್ತೇನೆ. ಬೇಸರಿಸಬೇಡಿ. ಎಣ್ಣೆ ಸುಬ್ಬಣ್ಣ ನಮ್ಮ ನಿಮ್ಮತೆಯೇ ಕಾಮನ್ ಮ್ಯಾನ್. ಬಹುಶಃ ಎಣ್ಣೆ ಎಂಬ ಹೆಸರು ಹಾಗೂ ಎಣ್ಣೆಯೇ ಆತನ ಬದುಕು ಬದಲಾಗಲು ಕಾರಣವಾಯಿತು ಎಂಬುದು ಜೋಕಲ್ಲ.
                 ನಮ್ಮ ಸರ್ವೆ ನಂಬರಿನಲ್ಲಿ ಸುಬ್ಬಣ್ಣ ಎಂದರೆ ಯಾರಿಗೂ ಗೊತ್ತಾಗುವುದಿಲ್ಲ. ಸುಬ್ಬಣ್ಣನ ನಿಜ ನಾಮಧೃಯವಾದ ಸುಬ್ರಮಣ್ಯ ಹೆಗಡೆ ಎಂದರೂ ಹಲವರು ಯಾರಿರಬಹುದು ಎಂದು ತಲೆ ಕೆರೆದುಕೊಳ್ಳುತ್ತಾರೆ. ಆದರೆ ಎಣ್ಣೆ ಸುಬ್ಬಣ್ಣ ಎಂದರೆ ಸಾಕು ಎಲ್ಲರೂ ಹೌದು ಹೌದು ಎಂದು ಹೇಳಿ ಗುರುತು ಹಿಡಿದು ಹೇಳುತ್ತಾರೆ. ಇಂತಹ ಸುಬ್ಬಣ್ಣನ ಈಗಿನ ಚಹರೆಯನ್ನು ಹೇಳುವ ಮೊದಲು ದಶಕದ ಹಿಂದೆ ಹೇಗಿದ್ದ ಎಂಬುದನ್ನು ಹೇಳಿಕೊಂಡು ಮುಂದೆ ಹೋಗುತ್ತೇನೆ.
                 ಗಿಡ್ಡ ಬೆಲ್ ಬಾಟಮ್ ಪ್ಯಾಂಟು, ಬಿಳಿ ಬಣ್ಣದ ಮಾಸಲು ಅಂಗಿ ಮೇಲ್ನೋಟಕ್ಕೆ ಅಂದಿನ ಎಣ್ಣೆ ಸುಬ್ಬಣ್ಣನ ಚಹರೆ. ಪ್ಯಾಂಟಿನ ಮುಂಭಾಗದ ತುದಿ ಪಾದಕ್ಕಿಂತ ತುಸು ಜಾಸ್ತಿ ಮೇಲ್ಭಾಗದಲ್ಲಿಯೇ ಇದ್ದರೆ ಹಿಂಭಾಗ ಮಾತ್ರ ಕಾಲಿಗೆ ಹಾಕಿದ್ದ ಕ್ಯಾನವಾಸ್ ಬೂಟಿನ ಅಡಿಗೆ ಸಿಕ್ಕಿ ಮಣ್ಣು ಮಣ್ಣು. ಅಂದಹಾಗೆ ಹಾಕಿದ ಪ್ಯಾಂಟು ಒಂದಾನೊಂದು ಕಾಲದಲ್ಲಿ ಕಪ್ಪಾಗಿದ್ದು ನಂತರದ ದಿನಗಳಲ್ಲಿ ಅದು ಹಲವು ವರ್ಣಗಳ ಮಿಶ್ರಣವಾಗಿದ್ದೂ ಇದೆ. ಕ್ಯಾನವಾಸ್ ಬೂಟಿನ ಕಥೆಯೂ ಅದೇ. ತನ್ನ ಅಸಲಿ ಬಣ್ಣವಾದ ನೀಲಿಯನ್ನು ಅದು ಯಾವತ್ತೋ ಕಳೆದುಕೊಂಡಿದೆ. ಪರಿಣಾಮವಾಗಿ ಅದು ಧೂಳಿನ ಬಣ್ಣಕ್ಕೆ ತಿರುಗಿ ಸಮಾನತೆಯ ತತ್ವವನ್ನು ಸಾರುತ್ತಿದೆ. ಸುಬ್ಬಣ್ಣ ಎಂದೂ ಸಲೀಸಾಗಿ ನಡೆದವನಲ್ಲ. ತೆಪರು ತೆಪರಾಗಿ ಹೆಜ್ಜೆ ಹಾಕುತ್ತ ಕೈಯಲ್ಲೊಂದು ಅರ್ಧ ಹರಿದ ಚೀಲವನ್ನು ಹಿಡಿದುಕೊಂಡು ಎತ್ತ ಕಡೆಯಾದರೂ ಹೊರಟರೆ ಆತನಿಗೆ ತೃಪ್ತಿ. ಇನ್ನು ಸುಬ್ಬಣ್ಣ ಮಾತನಾಡಲು ಹಿಡಿದ ಎಂದರೆ ಹೆಚ್ಚಿನವರಿಗೆ ಅದು ಅರ್ಥವಾಗುವುದಿಲ್ಲ. ಅಷ್ಟು ವಿಚಿತ್ರ. `ಯೇ ಇವ್ನೆ.. ಯಂಗೆ ಇಲ್ಲಿಗೆ ಹೋಗಕಾಗಿತ್ತು.. ಇದಕ್ಕೆ ಎಂತಾ ಮಾಡವು..' `ಇವರ ಪರಿಚಯ ಆಜಿಲ್ಲೆ ಕಾಣ್ತು ಅಲ್ಲದಾ.. ಇವ್ರು.. ಅಂದ್ರೆ ಅದೇ ಅವ್ರಾ.. ಇದರ ಗಂಡ ಆಗಬೇಕು ಅವರು..' ಎಂದು ಹೇಳಿದರೆ ನಿಮ್ಮಲ್ಲಿ ಹೆಚ್ಚಿನವರಿಗೆ ತಲೆಬುಡ ಅರ್ಥವಾಗಲಿಲ್ಲ ಅಲ್ಲವೇ.. ಸುಬ್ಬಣ್ಣನ ಮಾತಿನ ವೈಖರಿಯೇ ಹಾಗಿತ್ತು. ಇದು, ಅದು ಎಂದು ಹೇಳದಿದ್ದರೆ ಆತನಿಗೆ ಮಾತೇ ಹೊರಳುತ್ತಿರಲಿಲ್ಲ.. ಇಂವನನಾ.. ಇಂವ ಅಂವನಾ.. ಎಂದು ಆತನ ಮೇಲೆ ತಮಾಷೆ ಮಾಡುವವರೂ ಹಲವಿದ್ದರು.
               ಇಂತಹ ಎಣ್ಣೆ ಸುಬ್ಬಣ್ಣ ಹೆಸರಿಗೆ ಬಿಳಿ ಬಣ್ಣದ ಅಂಗಿ ಹಾಕುತ್ತಾನಾದರೂ ಅದು ಬಿಳಿಯ ಬಣ್ಣವೇ ಎಂದು ಹೇಳುವುದು ಕಷ್ಟ. ಏಕೆಂದರೆ ಆತ ಹಾಕಿದ್ದ ಅಂಗಿ ಬಿಳಿಯದ್ದೇ ಆಗಿತ್ತು ಎನ್ನುವುದಕ್ಕೆ ಅನುಮಾನವಾಗುವಷ್ಟು ಬಣ್ಣ ಬದಲಾಗಿದೆ. ಅಂಗಿಯ ಮೇಲ್ಭಾಗದಲ್ಲಿ ಅರ್ಧ ಬಾಯಿಗೆ ಹಾಕಿದ್ದ ಕವಳದ ಕೆಂಪಿನ ಬಣ್ಣವಾದರೆ ಕೆಳ ಅರ್ಧ ಭಾಗ ಹಾರುವ ಧೂಳಿನ ಬಣ್ಣ ಸೇರಿದೆ. ಎಣ್ಣೆ ಸುಬ್ಬಣ್ಣ ತಾನು ಹೋದ ಕಡೆಯಲ್ಲೆಲ್ಲ ಗೋಡೆಗೆ ಅಥವಾ ಇನ್ಯಾವುದೇ ಬೋರ್ಡಿಗೆ ಸಾದಿಕೊಂಡು ನಿಲ್ಲುವುದರಿಂದ ಆತನ ಅಂಗಿಯ ಬಣ್ಣ ಬದಲಾಗಿದೆ ಎನ್ನುವುದು ಎಲ್ಲರೂ ಹೇಳುವ ಮಾತು. ಅದು ಹೌದೂ ಅನ್ನಿ. ಎಣ್ಣೆ ಸುಬ್ಬಣ್ಣ ಆ ದಿನಗಳಲ್ಲಿ ಪಕ್ಕಾ ಅಡಿಕೆ ಬೆಳೆಗಾರ. ಹೆಸರಿಗೆ ಸಾಕ್ಷಿ ಎಂಬಂತೆ ಕವಳ ಹಾಕಿ ಕೆಂಪಡಿರುವ ಹಲ್ಲುಗಳು ಆತನ ವೃತ್ತಿಯನ್ನು ಸಾರಿ ಹೇಳುತ್ತಿದ್ದವು.
               ಸುಬ್ಬಣ್ಣ ಎಂಬ ಆಮ್ ಆದ್ಮಿ ಎಣ್ಣೆ ಸುಬ್ಬಣ್ಣ ಎಂದು ಹೆಸರು ಗಳಿಸಿಕೊಳ್ಳಲು ಕಾರಣವಿದೆ.  ಸುಮ್ ಸುಮ್ನೆ ಹೆಸರಿನ ಮುಂದೆ ಇನ್ನೊಂದು ಶಬ್ದ ಇಟ್ಟುಕೊಳ್ಳಲು ಆತನೇನು ಕನ್ನಡ ಸಿನಿಮಾದ ಹೊಸ ನಟರಲ್ಲೊಬ್ಬನೇ? ಸೊಖಾ ಸುಮ್ಮನೆ ಈ ಹೆಸರು ಬಂದಿಲ್ಲ ನೋಡಿ. ಸುಬ್ಬಣ್ಣ ಹುಟ್ಟಿದ್ದು ಅವಿಭಕ್ತ ಕುಟುಂಬದಲ್ಲಾದರೂ ಮಧ್ಯವಯಸ್ಸಿಗೆ ಬರುವ ವೇಳೆಗೆ ಮನೆಯಲ್ಲಿ ಹಿಸ್ಸೆ ನಡೆದ ಕಾರಣ ಆತನಿಗೆ ಚಿಕ್ಕ ಹಿಡುವಳಿದಾರ ಎನ್ನುವ ಬಿರುದು ಲಭ್ಯವಾಗಿತ್ತು. ಹಿಸ್ಸೆಗೆ ಮುಂಚೆ ಮನೆಯ ಯಜಮಾನನಾಗಿ ಉರಾಉರಿ ಮಾಡಿದ್ದರೂ ಹಿಸ್ಸೆಯಾದ ನಂತರ ಬದುಕು ನಡೆಸುವುದು ಕಷ್ಟ ಎನ್ನಿಸುವಂತಹ ಸನ್ನಿವೇಶಕ್ಕೆ ಆತ ತಳ್ಳಲ್ಪಟ್ಟಿದ್ದ. ಅಜ್ಜ, ಅಪ್ಪಂದಿರಾದಿಯಾಗಿ ಹಿರಿಯರು ಮಾಡಿದ್ದ ಸಾಲದಲ್ಲಿ ಹೆಚ್ಚಿನ ಪಾಲು ಸುಬ್ಬಣ್ಣನ ತಾಬಾ ಬಂದ ಕಾರಣ ಆತನಿಗೆ ಆ ದಿನಗಳಲ್ಲಿ ತಾನು ಯಾಕಾದರೂ ಹಿಸ್ಸೆಯಾದೆನೋ ಅನ್ನಿಸಿದ್ದಂತೂ ಸುಳ್ಳಲ್ಲ. ಹೀಗಿರುವಾಗ ಆತನ ಕೈ ಹಿಡಿದಿದ್ದು ಎಣ್ಣೆ.
              ಕನ್ನಡ ಪದಕ್ಕೆ ಹನ್ನೆರಡು ಅರ್ಥವಿರುವ ಕಾರಣ ಎಣ್ಣೆಯೆಂದರೆ ತಪ್ಪು ತಿಳಿದುಕೊಳ್ಳುವವರೇ ಅಧಿಕ. ಈ ಎಣ್ಣೆ ನೀವಂದುಕೊಂಡಂತೆ ಆ ಎಣ್ಣೆಯಲ್ಲ. ಈ ಎಣ್ಣೆಯೇ ಬೇರೆ. ನೀವು ಈ ಎಣ್ಣೆಯನ್ನು ಲಿಕ್ಕರ್ ಅಂದುಕೊಂಡಿರಿ ಎಂದರೆ ನಿಮ್ಮ ಊಹೆ ಖಂಡಿತ ತಪ್ಪು. ಇದು ಲಿಕ್ಕರ್ ಅಲ್ಲ. ಇದು ತೈಲ ಮಾರಾಯ್ರೆ.. ಮನೆಯಲ್ಲಿ ತೀವ್ರ ಆರ್ಥಿಕ ತೊಂದರೆಯುಂಟಾದ ಪರಿಣಾಮ ಮನೆಯೊಡತಿ ತಯಾರು ಮಾಡಿದ ವಿವಿಧ ಬಗೆಯ ತೈಲವೇ ಎಣ್ಣೆ ಸುಬ್ಬಣ್ಣನ ಖ್ಯಾತಿಗೆ ಕಾರಣವಾದದ್ದು.  ಮನೆಯೊಡತಿ ಮನೆಯಲ್ಲಿ ಎಣ್ಣೆ ಉರುಫ್ ತೈಲವನ್ನು ತಯಾರು ಮಾಡಿದರೆ ಸುಬ್ಬಣ್ಣನದು ಅದನ್ನು ಮಾರಾಟ ಮಾಡುವ ಜವಾಬ್ದಾರಿ. ಮೊಟ್ಟ ಮೊದಲ ದಿನ ಸುಬ್ಬಣ್ಣನ ಮನೆಯೊಡತಿ ಈ ಎಣ್ಣೆಯನ್ನು ತಯಾರು ಮಾಡಿದಾಗ ಸುಬ್ಬಣ್ಣನೇ ನಕ್ಕಿದ್ದ. ಆದರೆ ಖಾಲಿಯಾದ ಕಿಸೆ ಅನಿವಾರ್ಯವಾಗಿ ಸುಬ್ಬಣ್ಣನನ್ನು ಮಾರಾಟರಂಗಕ್ಕೆ ದೂಡಿತ್ತು.
             ಎಲ್ಲ ಕಂಪನಿಗಳೂ ಆರಂಭದ ದಿನಗಳಲ್ಲಿ ಚಿತ್ರ ವಿಚಿತ್ರವಾಗಿಯೇ ಕಾರ್ಯ ನಿರ್ವಹಣೆ ಮಾಡುತ್ತವೆ ಎನ್ನುವ ಮಾತಿನಂತೆ ಎಣ್ಣೆ ಸುಬ್ಬಣ್ಣನದ್ದೂ ಆಗಿತ್ತು. ಅಲ್ಲೆಲ್ಲೋ ಬಿದ್ದ ಕಂತ್ರಿ ಸಾರಾಯಿಯ ಕ್ವಾರ್ಟರ್ ಬಾಟಲಿಯನ್ನುಹೆಕ್ಕಿ ತಂದು ಅದನ್ನು ಶುದ್ಧಮಾಡಿ ಅದರಲ್ಲಿ ಮನೆಯೊಡತಿ ತಯಾರಿಸಿದ ಎಣ್ಣೆ ತುಂಬಿ ಅದಕ್ಕೆ ಸುಂದರ ರೂಪಕೊಟ್ಟು ಲೇಬಲ್ ಹಚ್ಚಿ ಮಾರಾಟಕ್ಕೆ ಒಯ್ಯುವಷ್ಟರಲ್ಲಿ ಉಫ್... ಆಗಾಗ ಕ್ವಾರ್ಟರ್ ಬಾಡಲಿ ಸಿಗದಿದ್ದಾಗ ಯಾವುದೋ ಹಳೆಯ ಟಾನಿಕ್ ಬಾಟಲಿಯಾದರೂ ನಡೆಯುತ್ತದೆ.. ಆರಂಭದ ದಿನಗಳಲ್ಲಿ ಸುಬ್ಬಣ್ಣ ಸುತ್ತಮುತ್ತಲ ಮನೆ ಮನೆಗೆ ಹೋಗಿ ತನ್ನ ಎಣ್ಣೆಯನ್ನು ಮಾರಾಟ ಮಾಡುತ್ತಿದ್ದ ಕಾರಣದಿಂದಲೇ ಈತ ಎಣ್ಣೆ ಸುಬ್ಬಣ್ಣ ಎಂದು ಹೆಸರಾದದ್ದು.
             ನಂತರದ ದಿನಗಳಲ್ಲಿ ಸುಬ್ಬಣ್ಣನ ಕಡೆಗೆ ಸುತ್ತಮುತ್ತಲ ಜನರು ಎಣ್ಣೆಯ ಕುರಿತು ಮಾತನಾಡಲಾರಂಭಿಸುತ್ತಿದ್ದ ಹೊತ್ತಿನಲ್ಲಿಯೇ ಆತನಿಗೆ ಮಾರ್ಕೇಟಿಂಗಿನ ಲಿಂಕು ಎಲ್ಲೋ ಸಿಕ್ಕಿದ ಪರಿಣಾಮ ತನ್ನ ಎಣ್ಣೆಗೆ ಕ್ವಾರ್ಟರ್ ಬಾಟಲಿ ಬಳಕೆ ನಿಲ್ಲಿಸಿ ಅದಕ್ಕೆ ಬಣ್ಣ ಬೆಗಡೆ ಮಾಡಿ ಮಾರುಕಟ್ಟೆ ಲೋಕಕ್ಕೆ ಬಿಟ್ಟ. ಅದ್ಯಾವುದೋ  ಪುಣ್ಯಾತ್ಮ ತನಗೆ ಗೊತ್ತಿದ್ದನ್ನು ಸುಬ್ಬಣ್ಣನಿಗೆ ಹೇಳಿದ. ಪಕ್ಕಾ ಹಳ್ಳಿ ಹೈದ ಸುಬ್ಬಣ್ಣ ಆತ ಹೇಳಿದ್ದನ್ನು ಚಾಚೂ ತಪ್ಪದೆ ಮಾಡಿದ. ಪರಿಣಾಮ ಆತನ ದಿಕ್ಕೇ ಬದಲಾಗಿದೆ.
             ಹಳ್ಳಿಗಾಡಿನ ಶ್ರಾದ್ಧ, ಮದುವೆ, ಮುಂಜಿಗಳಲ್ಲಿ ಮಂಡಲ ಪಂಚಾಯತಿ ನಡೆದಾಗಲೆಲ್ಲ ತಪ್ಪದೇ ಹಾಜರಾಗಿ ಅದರಲ್ಲಿ ತಾನೂ ಪಾಲ್ಗೊಳ್ಳುತ್ತಿದ್ದ ಸುಬ್ಬಣ್ಣ ಅಷ್ಟಕ್ಕೆ ನಿಲ್ಲದೇ ಓಸಿಯಂತಹ ಹಲವಾರು ಚಟಗಳೂ ಆತನಲ್ಲಿ ಇದ್ದವು. ಆದರೆ ಅದ್ಯಾವಾಗ ಆತನಿಗೆ ಜ್ಞಾನೋದಯವಾಯಿತೋ ಗೊತ್ತಿಲ್ಲ. ಇದ್ದಕ್ಕಿದ್ದಂತೆ ಅವುಗಳನ್ನೆಲ್ಲ ಬಿಟ್ಟು ಬಿಟ್ಟಿದ್ದ. ಈ ದುರ್ಗುಣಗಳಿಗೆ ಆತ ತಿಲಾಂಜಲಿ ನೀಡಿದ ಮೇಲೆಯೇ ಸುಬ್ಬಣ್ಣನ ಮನೆಯೊಡತಿ ಆತನ ಮೇಲೆ ಸುರಿಸುವ ಬೈಗುಳಗಳು ಕಡಿಮೆಯಾದದ್ದು ಎಂದರೂ ತಪ್ಪಾಗಲಿಕ್ಕಿಲ್ಲ.
             ಹುಶ್... ಈಗ ಎಣ್ಣೆ ಸುಬ್ಬಣ್ಣ ಎಂದು ಕರೆಯುವ ಮುನ್ನ ಒಮ್ಮೆ ಆಲೋಚಿಸಿ ಮಾರಾಯ್ರೆ. ಇತ್ತೀಚಿನ ದಿನಗಳಲ್ಲಿ ಸುಬ್ಬಣ್ಣನ ಖದರು ಬೇರೆಯಾಗಿದೆ. ಆದ್ದರಿಂದ ಮೊದಲೆಲ್ಲ ಕರೆದಂತೆ ಎಣ್ಣೆ ಸುಬ್ಬಣ್ಣ ಎಂದು ಕರೆಯುವ ಹಾಗಿಲ್ಲ. ಎಣ್ಣೆ ಸುಬ್ಬಣ್ಣ ಎಂದು ಕರೆಯಬೇಡಿ ಎಂದು ಸುಬ್ಬಣ್ಣನೇನೂ ಹೇಳಿಲ್ಲ. ಬದಲಾಗಿ ಆತನ ತನ್ನ ಎಣ್ಣೆ ಮಾರಾಟ ಮಾಡಿ ಬದುಕಿನಲ್ಲಿ ಒಂದೊಂದೆ  ಮೆಟ್ಟಿಲು ಮೇಲೇರಿದಂತೆಲ್ಲ ಜನಸಾಮಾನ್ಯರು ತನ್ನಿಂದ ತಾನೆ ಎಣ್ಣೆ ಸುಬ್ಬಣ್ಣ ಎಂದು ಕರೆಯುವುದನ್ನು ಬಿಟ್ಟಿದ್ದಾರೆ. ಪ್ರಾರಂಭದಲ್ಲಿ ಎಣ್ಣೆ ಸುಬ್ಬಣ್ಣ ಎಂದು ವ್ಯಂಗ್ಯವಾಡಿದವರೆಲ್ಲ ನಂತರದ ದಿನಗಳಲ್ಲಿ ಆತನನ್ನು ಆಯಿಲ್ ಕಿಂಗ್ ಎಂತಲೂ, ಆಮೇಲೆ ಎಣ್ಣೆ ಪ್ರಾಡಕ್ಟ್ ಸುಬ್ರಹ್ಮಣ್ಯ ಎಂತಲೂ ತದನಂತರ ಸುಬ್ರಹ್ಮಣ್ಯ ಹೆಗಡೆ ಎಂದೂ ಅಷ್ಟರ ನಂತರ ಹೆಗಡೇರೆ ಎಂದೂ ಕರೆದರು. ಅಷ್ಟಕ್ಕೆ ನಿಲ್ಲದೇ ಎಣ್ಣೆ ಸುಬ್ಬಣ್ಣ ಮುಂದಿನ ದಿನಗಳಲ್ಲಿ ಸುಬ್ರಹ್ಮಣ್ಯ ಸಾವುಕಾರನಾಗಿಯೂ ಬೆಳೆದುಬಿಟ್ಟಿದ್ದಾನೆ. ಹೆಚ್ಚಿನವರಿಗೆ ಎಣ್ಣೆ ಸುಬ್ಬಣ್ಣ ಹೆಸರು ಮರೆತೇ ಹೋಗಿ ಸುಬ್ರಹ್ಮಣ್ಯ ಸಾವುಕಾರ ಎನ್ನುವ ಹೆಸರೇ ತಟ್ಟನೆ ನೆನಪಾಗಿ ಬಿಡುತ್ತದೆ.
             ಸುಬ್ಬಣ್ಣ ತನ್ನ ಹೆಸರು ಬದಲಾದ ಹಾಗೆಯೇ ತನ್ನ ನಡೆ ನುಡಿಯನ್ನೂ ಬದಲಾಯಿಸಿಕೊಂಡಿದ್ದಾನೆ. ಮೊದ ಮೊದಲು ತನ್ನನ್ನು ಎಣ್ಣೆ ಸುಬ್ಬಣ್ಣ ಎಂದು ಕರೆಯುತ್ತಿದ್ದವರ ಕಡೆಗೆ ಕಿಡಿ ಕಾರಿ ಬೈಗುಳ ಸುರಿಸುತ್ತಿದ್ದ ಸುಬ್ಬಣ್ಣ ತನ್ನ ಕೈಯಲ್ಲಿ ದುಡ್ಡು ಆಡತೊಡಗಿದಂತೆಲ್ಲ ಅವರ ಕಡೆಗೆ ಸಿಟ್ಟನ್ನು ಬಿಟ್ಟು ಉದಾಸೀನ ಭಾವನೆ ತಾಳಿದ್ದ. ಮತ್ತೂ ಮೇಲ ಮೇಲಕ್ಕೆ ಏರಿದಂತೆಲ್ಲ ಅವರ ಪಾಡಿಗೆ ತಾನು ನಕ್ಕು ಸುಮ್ಮನಾಗಿದ್ದ. ಆಮೇಲಾಮೇಲೆ ಏನಾಯಿತೆಂದರೆ ಯಾರು ಆತನನ್ನು ಎಣ್ಣೆ ಸುಬ್ಬಣ್ಣ ಎಂದು ಕರೆದಿದ್ದರೋ ಅಂತವರ ಕಷ್ಟಕಾಲದಲ್ಲಿ ನಿಲ್ಲುವ ಮೂಲಕ ಆದರ್ಶವನ್ನೂ ಮೆರೆದಿದ್ದು ಆತನ ದೊಡ್ಡಗುಣ ಎಂದರೂ ತಪ್ಪಾಗಲಿಕ್ಕಿಲ್ಲ ನೋಡಿ. ಈಗಂತೂ ನಮ್ಮ ಸುತ್ತಮುತ್ತಲೆಲ್ಲ ಸುಬ್ಬಣ್ಣನನ್ನು ಗುಣಗಾನ ಮಾಡುವವರೇ. ಹಲವು ಕಾರ್ಯಕ್ರಮಗಳಿಗೆ ಆತನನ್ನು ಅತಿಥಿಯಾಗಿಯೋ ಅಥವಾ ಇನ್ಯಾವುದೋ ಪ್ರಮುಖ ವ್ಯಕ್ತಿಯಾಗಿಯೋ ಕರೆಯುತ್ತಾರೆ. ಸುಬ್ಬಣ್ಣ ಸುಮ್ಮನೆ ಹೋಗಿ ಕುಳಿತು ತನ್ನ ಮನಸ್ಸಿಗೆ ತೋಚಿದ್ದನ್ನು ಆಡಿ ಬರುತ್ತಾನೆ. ಸುಬ್ಬಣ್ಣ ಯಾವುದೇ ದೊಡ್ಡ ದೊಡ್ಡ ಗೃಂಥಗಳನ್ನು ಓದಿದವನಲ್ಲ. ಆದ್ದರಿಂದ ಆತ ಕಾರ್ಯಕ್ರಮಗಳಲ್ಲಿಯೂ ಅಂತಹ ಯಾವುದೇ ದೊಡ್ಡ ದೊಡ್ಡ ಮಾತುಗಳನ್ನೂ ಆಡುವುದಿಲ್ಲ. ಬದಲಾಗಿ ನಮ್ಮ ನಡುವಿನ ಚಿಕ್ಕ ಚಿಕ್ಕ ಸಂಗತಿಗಳನ್ನು ಕಟ್ಟಿಕೊಡುತ್ತಾನೆ. ಜೊತೆಗೆ ನಮ್ಮ ನಿಮ್ಮಂತವರೂ ಸಾಧನೆಗಳನ್ನು ಮಾಡಬಹುದು ಎನ್ನುವುದನ್ನು ಹೇಳುತ್ತಾನೆ. ತನ್ನದೇ ಗ್ರಾಮ್ಯ ಭಾಷೆಯಲ್ಲಿ ಹೇಳುವ ಕಾರಣ ಜನರಿಗೆ ಅದು ಆಪ್ತವೂ ಆಗುತ್ತಿದೆ. ಹೀಗಾಗಿ ಸುಬ್ಬಣ್ಣ ನಮ್ಮ ಭಾಗದಲ್ಲಿ ವರ್ಡ್ ಫೇಮಸ್ ಆಗಿದ್ದಾನೆಂದರೆ ತಪ್ಪಾಗಲಿಕ್ಕಿಲ್ಲ ನೋಡಿ.
              ಇದೀಗ ಯಾರಾದರೂ ಸುಬ್ಬಣ್ಣನ ಡ್ರೆಸ್ಸಿನ ಬಗ್ಗೆ ಮಾತನಾಡಲೂ ಹಿಂದೇಟು ಹಾಕುತ್ತಾರೆ. ಮೊದಲಿನ ಹಾಗೆ ಪರಮ ಗಲೀಜಾದ ವಸ್ತ್ರಗಳನ್ನು ಆತ ತೊಡುವುದಿಲ್ಲ. ವೈಟ್ ಎಂಡ್ ವೈಟ್ ಆಗಿ ಶಿಸ್ತಾಗಿರುತ್ತಾನೆ. ತೆಪರುಗಾಲನ್ನು ಹಾಕುತ್ತ ಊರೂರು ತಿರುಗುತ್ತಿದ್ದ ಸುಬ್ಬಣ್ಣ ಈಗ ಕಾರಿನಲ್ಲಿ ಓಡಾಡುತ್ತಾನೆ. ಆತನ ಈ ಬದಲಾವಣೆ ನೋಡಿದ ಅನೇಕರು `ಸುಬ್ಬಣ್ಣನಿಗೆ ಯಾವುದೋ ಯಕ್ಷೀಣಿ ಒಲಿದಿದ್ದಾಳೆ' ಎಂದು ಆಡಿಕೊಂಡೂ ಇದ್ದಾರೆ. `ಇಲ್ಲಾ ಮಾರಾಯಾ.. ಸುಬ್ಬಣ್ಣನಿಗೆ ಲಾಟರಿ ಹೊಡೆದಿದೆ..' ಎಂದು ಹೇಳಿದವರೂ ಇದ್ದಾರೆ.. ಒಟ್ಟಿನಲ್ಲಿ ಸುಬ್ಬಣ್ಣ ಮಿಲಿಯನೇರ್ ಆಗಿದ್ದಾನೆ.. ಜನರೆಲ್ಲ ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ. ಮತ್ತೆ ನಮ್ಮ ಭಾಗಕ್ಕೆ ಬಂದು ಯಾರಾದರೂ ಎಣ್ಣೆ ಸುಬ್ಬಣ್ಣ ಎಂದು ಹೇಳಿಬಿಟ್ಟೀರಾ ಹುಷಾರು..

**
(ಇದನ್ನು ಶಿರಸಿಯಲ್ಲಿ ಬರೆದಿದ್ದು, ಜ.9-10-11-12ರಂದು 2014ನೇ ಇಸ್ವಿ)

Tuesday, January 7, 2014

ಜಾಂಡೀಸಾಯ ನಮಃ

ನಗು ನಗು ಎನ್ನುತ್ತಲೇ ಬಂದ
ನನಗೆ ಆ ದಿನ ಹೊಟ್ಟೆಯಾಳದಲ್ಲೆಲ್ಲೋ
ಒತ್ತರಿಸಿ ಬಂದಿತ್ತು ನೋವು |
ಅಷ್ಟಕ್ಕೇ ನಿಲ್ಲಲಿಲ್ಲ, ಜ್ವರ ಮತ್ತು ಸುಸ್ತು|
ತಿನ್ನಹೊರಟರೆ ಹೊಟ್ಟೆಗೇನೂ ಸೇರದು
ತಿಂದರೆ ವಾಂತಿಯ ಜಬರದಸ್ತು||

ಕೂಡಲೆ ವೈದ್ಯರನ್ನು ಕಂಡದ್ದಾಯ್ತು
ಆಸ್ಪತ್ರೆಗೆ ಅಡ್ಮಿಟ್ಟು ಬೇರೆ |
ಆದರೆ ಅವರಿಗೆ ರೋಗ ಕಾಣಲಿಲ್ಲ||
ಡ್ರಿಪ್ಪೆಂದರು, ಟೆಸ್ಟೆಂದರು, ರೋಗದ ಕುರುಹಿಲ್ಲ
ಮೊದಲು ಡೆಂಗ್ಯೂ ಎಂದರು
ನಂತರ ಇಲಿಜ್ವರ |
ಕೊನೆಗೊಮ್ಮೆ ವೈರಲ್ ಫಿವರ್ರು ಎಂದರು!
ಟೆಸ್ಟಿಗಾಗಿ ರಕ್ತ ಹರಿಸಿದ್ದೇ ಬಂತು ||

ಮಧ್ಯ-ಮದ್ಯ ಆಸ್ಪತ್ರೆಯ ನರ್ಸುಗಳು
ಬಹು-ಬಹಳೇ ಕಾಡಿದರು, ಕಟುಕಿಯರು |
ಜೊತೆಗೆ ವೈದ್ಯರ ಬೈಗುಳ ಬೇರೆ,
`ನೀನು ಪತ್ರಕರ್ತ.. ಏನೇನೋ ಬರೀತಿಯಲ್ಲ
ಈಗ ಅನುಭವಿಸು' ಎಂದು ಮೂದಲಿಸಿದರು||

ತಾಸಿಗೊಂದು ಇಂಜೆಕ್ಷನ್ನು, ಮತ್ತೊಂದು ಟೆಸ್ಟು
ಸಾಕಪ್ಪಾ ಸಾಕು, ಜೀವ ಹೈರಾಣಾಯ್ತು ||
ನಡುವೆಯೇ ಎಲ್ಲೋ ಮುಖ
ಕಣ್ಣು, ಕೈ, ಕಾಲುಗಳೆಲ್ಲ ಹಳದಿಯಾಯ್ತು ||

ಮನೆಯಲ್ಲಿ ಅಮ್ಮನಿಗೆ ನಿದಿರೆಯಿಲ್ಲ
ಅಪ್ಪನಿಗೆ ಕೈಯಲ್ಲಿ ದುಡ್ಡಿಲ್ಲ,
ನಡುವೆಯೇ ಡಾಕ್ಟರ್ರು `ಅವನಿಗ
ಜಾಂಡೀಸೂ ಐತ್ರಿ..' ಎಂದರು ||

ಆಸ್ಪತ್ರೆಯಲ್ಲೇ ಅರಾಮಾಗಿರುವಾ ಎಂದರೆ
ಮತ್ತೆ ಮತ್ತೆ ಕಾಡುವ ಆ ನರ್ಸಿಗಳು,
ಅವರ ಕೈ ಕಬ್ಬಿಣವೇನೋ?
ಅಷ್ಟು ಗಟ್ಟು-ಮುಟ್ಟು!
ಇಂಜೆಕ್ಷನ್ ಕೊಟ್ಟರೆ ಯಮಯಾತನೆ||
ಕೊನೆಗೆ ಗೊತ್ತಾಗಿದ್ದೇನೆಂದರೆ ನಂಗೆ ಬಂದಿದ್ದು
ಬೇರೇನೂ ಅಲ್ಲ, ಬರೀ ಜಾಂಡೀಸು |
ಡಾಕ್ಟರರಿಗೋ ಬಹು ಕಾಸು ||

`ವಾರದಲ್ಲೇ ಜಬರದಸ್ತಾಗಿ, ಖದರು
ತೋರಿಸಿದೆಯಲ್ಲಾ ಜಾಮಡೀಸೇ ನಿನಗೆ
ಹಳ್ಳಿಗರೇ ತಕ್ಕ ಪಾಠ ಕಲಿಸ್ತಾರೆ ಬಾ'
ಅಂತ ಹಳ್ಳಿ ಔಷಧಿಗೆ ಮೊರೆ ಹೋದೆ ||

ಅಬ್ಬಾ ಹಳ್ಳಿ ಔಷಧಿಯೇ,
ಅದೆಷ್ಟು ದಿನ ನಿನ್ನ ಪಥ್ಯ?
ಊಟದಲ್ಲಿ ಉಪ್ಪಿಲ್ಲ, ಹುಳಿಯಿಲ್ಲ,
ರುಚಿಯಿಲ್ಲ, ಖಾರವಂತೂ ಮಾರು ದೂರ !
ಎಲ್ಲವೂ ಸಪ್ಪೆ ಸಪ್ಪೆ !
ಬರೀ ಅನ್ನ, ಹೆಸರು ಕಟ್ಟು |
ಯಾರೋ ಅಂದದ್ದು ನೆನಪಾಯ್ತು
ಅಧರಕ್ಕೆ ಕಹಿ, ಉಧರಕ್ಕೆ ಸಿಹಿ ||

ಅಂತೂ ಸುಸ್ತು-ವೀಕನೆಸ್ಸು-ಬಡಕಲು
ಶರೀರಗಳ ಪಳೆಯುಳಿಕೆಯುಳಿಸಿ
ಜಾಡೀಸು ಮರೆಯುತ್ತಿದೆ ||

ವಾರದಲ್ಲಿಯೇ ಪರಂಧಾಮವನ್ನು ಒಮ್ಮೆ
ತೋರಿಸಿದ ಜಾಂಡೀಸೇ
ನಿನಗೆ ನಮೋನ್ನಮಃ ||


(ನನಗೆ ಜಾಂಡೀಸು ಬಂದು ವಾರಗಟ್ಟಲೇ ಆಸ್ಪತ್ರೆಯ ಬೆಡ್ಡಿನ ಮೇಲೆ ಮಲಗಿದ್ದಾಗ ಬರೆದ ಒಂದು ಅನುಭವ ಕವಿತೆ. ರೋಗ ಗೊತ್ತಾಗದಿದ್ದರೂ ಆ ರೋಗ, ಈ ರೋಗ ಎಂದು ಟೆಸ್ಟ್ ಮಾಡುವ ಡಾಕ್ಟರು, ಇದ್ದ ಬದ್ದ ದುಡ್ಡೆಲ್ಲ ಖಾಲಿಯಾಗಿ ಅಸಹಾಯಕತೆಯ ಪರಮಾವಧಿಯನ್ನು ತಲುಪಿದ ಅಪ್ಪಯ್ಯ, ಎಲ್ಲಾ ಮುಗತ್ತು ದೇವರೇ ನೀನೇ ಕಾಪಾಡು ಎಂದು ಅಂತಿಮವಾಗಿ ದೇವರ ಪಾದಕ್ಕೆ ಶರಣೆನ್ನುವ ಅಮ್ಮ, ನಿಂಗೆಂತ ಆತಲೆ.. ಅರಾಮಾಗ್ತೆ ಬೇಗ .. ಬಾ ಮಾರಾಯಾ ಎಂದು ಆಗಾಗ ಬಂದು ಸಮಾಧಾನ ಮಾಡುತ್ತಿದ್ದ ಗೆಳೆಯರು.. ಅಯ್ಯೋ ಎಷ್ಟ್ ದಪ್ಪ ಇದ್ದಂವ ಹೆಂಗ್ ತೆಳ್ಳಗಾಗೋಜ್ಯಲಾ..ಎಂದ ಗೆಳತಿ, ಹಳ್ಳಿ ಔಷಧಿಯ ಕಹಿ, ವಾರದಲ್ಲಿ 7 ದಿನವೂ ಕುಡಿಯಲೇ ಬೇಕು ಕಬ್ಬಿನ ಹಾಲು ಎಂಬ ಹಳ್ಳಿ ಡಾಕ್ಟರ ಫರ್ಮಾನು, ಹುಷಾರಿಲ್ಲ ಎಂದಾಗಲೇ ಬಾಯಲ್ಲಿ ನೀರು ತರಿಸಿ ಕಾಡುವ ಪಾನೀಪುರಿ, ಸೇವ್ ಭಾಜಿ, ಮಿಸ್ಸಳ ಭಾಜಿ, ಸುರಭಿ ಹೋಟ್ಲ ಮಂಜಣ್ಣನ ಪಾವ್ ಭಾಜಿ.. ಥೋ.. ಅನುಭವಗಳಿಗೆ ಕೊನೆಯಿಲ್ಲ ಬಿಡಿ..ಅಂತಹ ಜಾಂಡೀಸಿನ ಕುರಿತು ಒಂದು ಕವಿತೆ ಇದು.. ಸುಮ್ಮನೆ ಓದಿ)
(ದಂಟಕಲ್ಲಿನಲ್ಲಿ ಈ ಕವಿತೆಯನ್ನು 6-09-2007ರಂದು ಬರೆದಿದ್ದೇನೆ)