Friday, December 13, 2013

ಚದುರಂಗದ ಕುದುರೆಯ ಬೆನ್ನೇರಿ -ಭಾಗ 9

ಬಾಗೇವಾಡಿಯಿಂದ ಕೂಡಲಕ್ಕೆ
ಬಸವನ ಬಾಗೇವಾಡಿಯಲ್ಲಿ ನಮ್ಮ ತಂಡ : ನಮ್ಮ ತಂಡವನ್ನು ಗುರುತಿಸಿ

ಈ ಮದ್ಯಾಹ್ನವೇ ನಾವು ವಾಪಾಸು ಹೊರಡಬೇಕೆಂದು ಎನ್. ಎಚ್. ಗೌಡರು ಫರ್ಮಾನು ಹೊರಡಿಸಿಬಿಟ್ಟರು. ಇಲ್ಲಿಯವರೆಗೆ ಬಂದದ್ದಾಗಿದೆ ಒಂದೋ ಗುಂಬಜ್ ನಗರ ಬಿಜಾಪುರವನ್ನು ನೋಡಿ ಸಾಗೋಣ ಇಲ್ಲವೇ ಬಸವಣ್ಣ ಲಿಂಗೈಕ್ಯನಾದ ಕೂಡಲಕ್ಕೆ ಸಾಗುವಾ ಎನ್ನುವ ಚರ್ಚೆ ನಮ್ಮಲ್ಲಿ ನಡೆದು ಮೊದಲು ಕೂಡಲಕ್ಕೆ ಹೋಗೋಣ ಎಂಬ ನಿರ್ಣಯಕ್ಕೆ ಬಂದು ಗೌಡರಲ್ಲಿ ಹೇಳಿದಾಗ ಅಪರೂಪಕ್ಕೆಂಬಂತೆ ಅವರು `ಯೆಸ್' ಎಂದರು.
ಈ ಸಹಸ್ರಮಾನದ ಮಹಾನ್ ದಾಸೋಹಿ, ಲಿಂಗತತ್ವದ ಪ್ರತಿಪಾದಕ ಬಸವಣ್ಣನ ಜನುಮ ಸ್ಥಳವಾದ ಬಾಗೇವಾಡಿ ಮೊದಲು ನೋಡಬೇಕಲ್ಲ.. ಅತ್ತ ಸಾಗಿದೆವು.
ದಾರಿಯಲ್ಲಿ ನಮಗೆ ಕಂಡಿದ್ದೇ ನಮ್ಮ ಮೆಚ್ಚಿನ ದುರ್ಗಾ ಕ್ಯಾಂಟೀನು. ಕಿಟ್ಟು ಹಾಗೂ ನನಗೆ ಅವರಲ್ಲಿಗೆ ಹೋಗಿ `ಹೋಗಿ ಬರ್ತೀವಿ..' ಎಂದು ಹೇಳುವ ಮನಸ್ಸಾಯಿತು. ಲೇಡೀಸ್ ಟೀಮು ಹಾಗೂ ಗೌಡರು ಎಲ್ಲರನ್ನೂ ನಾವು ಅಲ್ಲಿಗೆ ಕರೆದೊಯ್ದೆವು. ಹೀಗ್ಹೀಗೆ ಅಂತ್ಹೇಳಿ, ಗೌಡರನ್ನು ಅವರಿಗೆ ಪರಿಚಯಿಸಿ ನಾವು ಊರಿಗೆ ಹೋಗ್ತಿದ್ದೀವಿ ಅಂದೆವು.
ಹೋದ ಒಂದೇ ವಾರದಲ್ಲಿ ನಮ್ಮ ಹಾಗೂ ಆ ಹೊಟೇಲಿನ ನಡುವೆ ಅದೆಷ್ಟು ಬಂಧ ಬೆಳೆದಿತ್ತು..!! ಆ ಹೊಟೇಲಿನ ಸಪ್ಲೈಯರ್ ನಿಂದ ಹಿಡಿದು, ಅಡುಗೆ ಭಟ್ಟರಾದಿಯಾಗಿ, ಓನರ್ ತನಕ ಎಲ್ಲರೂ ಬೇಸರ ಪಟ್ಟುಕೊಂಡರು. ಘಟ್ಟದ ಜನ ಎಷ್ಟು ಮುಗ್ಧರೋ ಅಷ್ಟೇ ಬಂಧವನ್ನು ಬೆಳೆಸಿಕೊಳ್ಳುವಂತವರು ಎಂಬ ಮಾತು ನಿಜವಾಯಿತು.
ಆ ದಿನ ನಮಗೆ ಆ ಹೊಟೇಲಿನಲ್ಲಿ ತಿಂಡಿ, ಕಾಫಿಯನ್ನು ಫ್ರೀಯಾಗಿ ಕೊಟ್ಟು ಕಳಿಸಿದರು. ನಮ್ಮ ಕಿಟ್ಟು ದುಡ್ಡು ಕೊಡಲು ಮುಂದಾದ. ಅದನ್ನು ನೋಡಿದ ಅಡುಗೆ ಭಟ್ಟರು ಹಾಗೂ ಓನರ್ರು ನಮ್ಮ ಕೈಹಿಡಿದು `ಬ್ಯಾಡ್ರೀ.. ನಮಗೆ ಕೊಡೋನು ಕೊಡ್ತಾನೆ ಆ ದ್ಯಾವ್ರು. ಇಷ್ಟು ಪ್ರೀತಿಯಿಂದ, ನಂಬಿಕೆಯಿಂದ ಕೆಲವೇ ದಿನ ತಿಂಡಿ ತಿಂದಿದ್ದಕ್ಕೆ, ನಾವು ಹೋಗಿ ಬರ್ತೀವಿ ಅಂತ ಹೇಳಲಿಕ್ಕೆ ಬಂದಿದ್ದೀರಲ್ಲ.. ಇಂತಹ ಪ್ರೀತಿ ಸಾಕು.. ಊಹೂಂ ನೀವು ದುಡ್ಡು ಕೊಡೋದೇ ಬೇಡ.. ನೀವು ಕೊಟ್ಟಿದ್ದನ್ನು ನಾವು ತೆಗೆದುಕೊಳ್ಳೋದಿಲ್ಲ..' ಎಂದು ಪಟ್ಟಾಗಿ ಕುಳಿತುಬಿಟ್ಟರು. ನಾವು ಎಷ್ಟು ಒತ್ತಾಯಿಸಿದರೂ ದುಡ್ಡು ತೆಗೆದುಕೊಳ್ಳಲೇ ಇಲ್ಲ. ಹೋಗುವ ಮುನ್ನ ತಬ್ಬಿ ಹಾರೈಸಿದರು. ಯಾಕೋ.. ಕಿಟ್ಟುವಿಗೆ ಹಾಗೂ ನನಗೆ ಕಣ್ಣು ಹನಿಗೂಡಿದಂತಾಯಿತು. ಅವರ ಆದರ, ಪ್ರೀತಿ, ನಂಬಿಕೆ ಇವೆಲ್ಲ ಕಂಡು ಹೃದಯ ತುಂಬಿ ಬಂದಿತು..
ಅಲ್ಲಿಂದ ನಾವು ಬಾಗೇವಾಡಿಯ ಸರ್ಕಲ್ ದಾಟಿ ಬಸವೇಶ್ವರನ ಜನ್ಮ ಸ್ಥಳದತ್ತ ಸಾಗಿದೆವು. ಅಲ್ಲೊಂದು ಶಿವ ದೇವಾಲಯ. ಆ ದೇಗುಲ, ನಂದಿ ಇವೆಲ್ಲವುಗಳನ್ನೂ ಮನದಣಿಯೆ ನೋಡಿ ಮನಸಾರೆ ಮಣಿದೆವು. ಆ ಭವ್ಯ ದೇಗುಲ, ಅಲ್ಲಿನ ಸುಂದರ ಕಲೆಯ ಬಲೆ, ಇವೆಲ್ಲ ನಮ್ಮನ್ನು ಬಹಳ ಸೆಳೆಯಿತು. ಅಲ್ಲಿ ಆ ದಿನ ಬಹಳ ಜನರೂ ಇದ್ದರು. ಅಲ್ಲಿಯೇ ನಮ್ಮ ಫೋಟೋ ಪ್ರೋಗ್ರಾಂ ಕೂಡ ಮುಗಿಸಿ ಬಂದೆವು. ಕೊಳ್ಳುವವರೆಲ್ಲ ನೆನಪಿಗೆಂದು ಹಲವು ಹತ್ತು ವಸ್ತುಗಳನ್ನು ಕೊಂಡರು. ನಾನು ಏನನ್ನೂ ಕೊಳ್ಳಲಿಲ್ಲ. ಹೀಗೆ ಹತ್ತು ಹಲವು ಸಂಗತಿಗಳು ಮುಗಿದ ನಂತರ ನಾವು ಕೂಡಲಕ್ಕೆ ಹೋಗಬೇಕು ಎಂದು ಬಸ್ ಹಿಡಿಯಲು ಬಸ್ ನಿಲ್ದಾಣದ ಕಡೆಗೆ ಹೊರಟೆವು.
ಆಗ ಅದೇನಾಯ್ತೋ.. ಅದೆಲ್ಲಿದ್ದರೋ.. ನಮ್ಮ ಕೈಯಲ್ಲಿದ್ದ ದೊಡ್ಡ ದೊಡ್ಡ ಲಗೇಜುಗಳನ್ನು ಕಂಡು ಬಹಳಷ್ಟು ಹುಡುಗರು ನಮ್ಮ ಕೈಯಲ್ಲಿದ್ದ ದೊಡ್ಡ ದೊಡ್ಡ ಬ್ಯಾಗುಗಳನ್ನು ಕಂಡು ನಾವ್ಯಾರೋ tourist ಗಳೆಂದು ನಮ್ಮನ್ನು ಎಳೆದೆಳೆದು ಭಿಕ್ಷೆ ಬೇಡಲಾರಂಭಿಸಿದರು. 4-6-8-10 ವರ್ಷದ ಬಾಲಕ ಬಾಲಕಿಯರು. ಪಾಪ ಎಂದು ಒಂದೆರಡು ರು. ಚಿಲ್ಲರೆಗಳನ್ನು ಹಾಕಿದರೆ ಅವರೆಲ್ಲಿ ಕೇಳ್ತಾರೆ..? ನಮಗೆ ನಿಲ್ಲಲು ಬಿಡಲಿಲ್ಲ.. ಉಸಿರೆಳೆದುಕೊಳ್ಳಲೂ ಬಿಡಲಿಲ್ಲ.. ಕಾಡಿದರು.. ಕಾಡಿದರು.. ಕಾಡಿಯೇ ಕಾಡಿದರು. ದುಡ್ಡಿಗಾಗಿ ಪೀಡಿಸಿ ಪೀಡಿಸಿ ನಮ್ಮಲ್ಲಿ ಸಿಟ್ಟು ಬರಲೂ ಕಾರಣರಾದರು. ನಾನು ಹಾಗೂ ಪೂರ್ಣಿಮಾ ಹೆಗಡೆ ಸಿಟ್ಟಿನಿಂದ ಇನ್ನೇನು ಅವರ ಮೇಲೆ ಕೈ ಮಾಡಬೇಕು ಎನ್ನುವಷ್ಟರಲ್ಲಿ ಬಸ್ ನಿಲ್ದಾಣ ಹತ್ತಿರಕ್ಕೆ ಬಂದಿತು. ಬಸ್ ನಿಲ್ದಾಣ ಸಮೀಪ ಬಂದಂತೆಲ್ಲ ಆ ಭಿಕ್ಷುಕ ಬಾಲಕರು ಮಾಯವಾದರು.
ನಾವು ಬಸ್ ನಿಲ್ದಾಣಕ್ಕೆ ಹೋಗಿ ಕೂಡಲದ ಬಸ್ ಹುಡುಕಿದೆವು. ಕೂಡಲಕ್ಕೆ ಡೈರೆಕ್ಟ್ ಬಸ್ ಯಾವುದೂ ಇರದಿದ್ದ ಕಾರಣ ಕಟ್ ರೂಟ್ ಮಾಡಿ ಎಂದು ಯಾರೋ ಸಲಹೆ ಕೊಟ್ಟರು. ಸರಿಯೆಂದು ಹೊರಟೆವು. `ನಿಡಗುಂದಿ' ಬಸ್ ರೆಡಿ ಇತ್ತು. ಹತ್ತಿದೆವು. 10-12 ಕಿ.ಮಿ ದೂರದಲ್ಲಿ ನಿಡಗುಂದಿ ಸಿಕ್ಕಿತು. ಅಲ್ಲಿ  ಬಸ್ಸು ಬದಲಾಯಿಸಿದೆವು. ಬಸ್ಸು ಬಹು ಜೋರಾಗಿಯೇ ಸಾಗುತ್ತಿತ್ತು. ಕೆಲಹೊತ್ತಿನಲ್ಲಿ ಆಲಮಟ್ಟಿಯೆಂಬ ಊರೂ ಆ ಊರಿನಲ್ಲಿ ನಿರ್ಮಾಣ ಮಾಡಲಾಗಿದ್ದ ಬಹುದೊಡ್ಡ ಅಣೆಕಟ್ಟು ಕಂಡಿತು. ಅಣೆಕಟ್ಟಿನ ಅಗಾಧತೆ ವಿಸ್ಮಯ ಮೂಡಿಸಿದರೂ ಅದೆಷ್ಟು ಮನೆಗಳನ್ನು ಮುಳುಗಿಸಿರಬೇಕು ಎಂಬ ಮನದಾಳದ ನೋವಿನ ದನಿ ಬೇಸರವನ್ನು ಉಂಟು ಮಾಡಿತು. ಅಲ್ಲೊಂದು ಹತ್ತು ನಿಮಿಷ ನಿಂತ ಬಸ್ಸು ಕೂಡಲ ಕ್ರಾಸಿನ ಬಳಿ ನಮ್ಮನ್ನು ಇಳಿಸಿ ಮುಂದಕ್ಕೆ ಸಾಗಿತು.

ನೆರೆಯ ದಾರಿಯಲ್ಲಿ ಕಣ್ಣೀರ ಧಾರೆ
ಕರಿ ಮೋಡದ ಹಿನ್ನೆಲೆಯಲ್ಲಿ ಕೂಡಲ ಸಂಗಮ

ಅಷ್ಟರಲ್ಲಿ ಸೂರ್ಯನೂ ಪಶ್ಚಿಮದತ್ತ ಮುಖ ಮಾಡಿದ್ದ. ಉರಿಕಾರುವ ಆತನ ಮುಖ ಬಾಡಿತ್ತಾದರೂ ಬಿಸಿಲು ಕಡಿಮೆಯಾಗಿರಲಿಲ್ಲ. ಕೂಡಲ ಕ್ರಾಸಿನಲ್ಲಿ ನಮ್ಮನ್ನು ಬಿಟ್ಟರೆ ನಾಲ್ಕೋ-ಐದೋ ಜನ ಮಾತ್ರ ಇದ್ದರು. ಹೆಚ್ಚು ಜನರಿರಲಿಲ್ಲ. ಬಸ್ಸೂ ಇಲ್ಲ ಎನ್ನುವ ಮಾಹಿತಿ ಲಭ್ಯವಾಯಿತು. ಕೊನೆಗೆ ಯಾವುದೋ ಒಂದು ಪ್ಯಾಸೆಂಜರ್ ಆಟೋ ಹಿಡಿದೆವು.
ಅಲ್ಲಿಯ ಆಟೋಗಳು ಶಿರಸಿಯವುಗಳೆದುರು ಭಾರಿ ದೊಣೆಯನಂತವುಗಳು. ಶಿರಸಿಯವು ನನ್ನಂತೆ ಸಣ್ಣವು, ಬಡಕಲು. ಅಲ್ಲಿಯವು ಪಾವಸ್ಕರನಂತೆ ದೊಡ್ಡವು.. ದೈತ್ಯವು. ಶಿರಸಿಯ ಆಟೋಗಳಲ್ಲಿ  ಮ್ಯಾಕ್ಸಿಮಮ್ 6 ಜನರನ್ನು ಹಿಡಿಸಬಹುದಾಗಿದ್ದರೆ ಆ ಭಾಗದಲ್ಲಿದ್ದ ಆಟೋಗಳಲ್ಲಿ ಅನಾಮತ್ತು ಹನ್ನೆರಡು ಜನರನ್ನು ಹಿಡಿಸಬಹುದಿತ್ತು.
`ಇದೇನು.. ಈ ರೀತಿ ನೀರು ತುಂಬ್ಕೋಂಡಿದೆ.. ರಾಡಿ ರಾಡಿ.. ಕೆಂಪು .. ಕೆಂಪು.. ರಸ್ತೆನೇ ಕಾಣೋದಿಲ್ವಲ್ರಿ.. ಯಾಕೆ ಏನಾಗಿದೆ..?' ಎಂದ ಕಿಟ್ಟು. ಕೂಡಲ ಕ್ರಾಸಿನಿಂದ ಕೂಡಲಕ್ಕೆ ಹೋಗುವ ದಾರಿಯ ತುಂಬೆಲ್ಲಾ ಕೆಂಪು ಕೆಂಪು ನೀರು.. ಕಣ್ಣೆವೆಯಿಕ್ಕುವ ವರೆಗೂ ಬರೀ ನೀರೇ ತುಂಬಿತ್ತು. ಅಲ್ಲಲ್ಲಿ ರಸ್ತೆಯೂ ಕಟ್ಟಾಗಿತ್ತು.
`ಅಯ್ಯೋ.. ಏನ್ ಹೇಳ್ರೂದ್ರಿ.. ನಿನ್ನೆ ರಾತ್ರಿಯಿಡೀ ಮಳೆ ಸುರಿದಿದೆ. ಮೊನ್ನೆನೂ ಬಂದಿತ್ತು. ಅದಕ್ಕೆ ಮಲಪ್ರಭೆಗೆ ಪ್ರವಾಹ ಬಂದಿದೆ..' ಎಂದ ಆಟೋ ಡ್ರೈವರ್..
ಆಟೋದಲ್ಲಿ ಹಿಂದಿನ ಎರಡು ಸೀಟುಗಳಲ್ಲಿ ಉಳಿದವರು ಡ್ರೈವರ್ ನ ಎರಡೂ ಪಕ್ಕದಲ್ಲಿ ನಾನು ಹಾಗೂ ಕಿಟ್ಟು ಕುಳಿತಿದ್ದೆವು. ಹರಿಯುತ್ತಿರುವ ನೀರು ಓಡುತ್ತಿರುವ ಆಟೋದ ಗಾಲಿಗೆ ಭರ್ರನೆ ಹಾರಿ ಕಾಲನ್ನು ತೋಯಿಸುತ್ತಿತ್ತು. ಎಲ್ಲಿ ನೋಡಿದರಲ್ಲಿ ಕೆಂಬಣ್ಣದ ನೀರು ತುಂಬಿತ್ತು. ಗೋಧಿ, ಜೋಳ, ರಾಗಿ, ಭತ್ತ, ಸೂರ್ಯಕಾಂತಿ, ನೆಲಗಡಲೆ ಸೇರಿದಂತೆ ನೆಡಲಾಗಿದ್ದ ಎಲ್ಲ ಬೆಳೆಗಳೂ ಮಳೆಯ ನೀರಿನಲ್ಲಿ ನಡುಗುತ್ತ ಕುತ್ತಿಗೆ ಮಟ್ಟ ಮುಳುಗಿ ನಿಂತಿದ್ದವು.
ಒಂದೆರಡು ಕಡೆಗಳಲ್ಲಂತೂ ಸೇತುವೆಯ ತುಂಬೆಲ್ಲ ನೀರು..ಇದರಿಂದಾಗಿ ನಾವು ನಡೆದು ಸೇತುವೆ ದಾಟಬೇಕಾಯಿತು. ನೆಲಕ್ಕೆ ಕಾಲಿಟ್ಟರೆ ಮೊಣಕಾಲ ಮಟ್ಟ ನೀರು.. ರಾಡಿ.. ಓ ದೇವರೆ ಅಂದುಕೊಂಡೆವು.
`ಅಲ್ರಿ.. ಈ ರೀತಿ ನೀರು ತುಂಬಿಕೊಂಡಿದೆ.. ನದಿ ತೀರದಲ್ಲಿ ಹಳ್ಳಿಗಳಿಲ್ಲವೇ..? ಭಾರಿ ಲುಕ್ಸಾನು ಆಗಿರಬೇಕಲ್ಲ.. ' ಅಂದ ಕಿಟ್ಟು ಆಟೋ ಡ್ರೈವರ್ ಬಳಿ.
ಆಗ ಡ್ರೈವರ್ ಹೇಳಿದ ` ಏನಂತಾ ಹೇಳೂದ್ರಿ.. ಸುಮಾರ್ 85 ಹಳ್ಳಿಗಳು ನೀನ್ಯಾಗ ಮುಳಿಗ್ಯಾವ್ರಿ.. ನನ್ ಜಮೀನೂ ನೀರಿನ್ಯಾಗ ಆಗಿ ಎರಡ್ ದಿನಾ ಆತ್ರಿ. ಇವತ್ತೂ ಮಳಿ ಬರಂಗ ಆಗ್ತಾ ಐತಿ.. ಮಳಿ ಬಂದ್ರ ಆಲಮಟ್ಟಿಯಾಗಿಂದ್ ನೀರ್ ಬಿಡ್ತಾರು.. ಆಗ ನಮ್ ಪಾಡು ಇನ್ನ ಖರಾಬ್ ಆಕೈತ್ರಿ.. '
`ಏನು..? ಅಲ್ಲಾ.. ನೀವು ಈಗ ಏನ್ ಮಾಡ್ತಾ ಇದ್ದೀರಿ..? ಹೊಟ್ಟೆಗೆ..? ಬದುಕಿಗೆ..?' ಎಂದು ಕೇಳಿದೆವು ನಾವು.
`ನೋಡ್ರಿ ಹಿಂಗ್ ಮಾಡಾಕ ಹತ್ತೇನಿ.. ಹೆಂಗುಸ್ರು, ಮಕ್ಕಳು ಶಾಲೆತಾವ ಅದಾರ್ರಿ.. ಸಾಲಿಮಟ ಎಲ್ಲರಿಗೂ ಕೂರಾಕ ಹೇಳ್ಯಾರ.. ಅಲ್ಲಿ ಕೂಡ್ರಿಸಿ ಬಂದೀನಿ.. ನಮ್ ಬದುಕು ಹೆಂಗ ಕೇಳ್ತೀರಿ ಬುಡ್ರಿ..' ಎಂದ..
ನಮಗೆ ಪಾಪ ಅನ್ನಿಸಿತು. ಹೀಗೆ ನಮ್ಮ ಮಾತುಕತೆ ಮುಂದುವರಿಯಿತು.. ತನ್ನ ಬದುಕು, ಮಲಪ್ರಭೆ, ಆಕೆ ಉಕ್ಕೇರಿದ್ದು, ಎಲ್ಲಾ ಬಿಟ್ಟು ಓಡಿಬಂದಿದ್ದು ಇವೆಲ್ಲವನ್ನೂ ಹೇಳಿದ. ಮತ್ತೆ ನಮ್ಮ ಕಣ್ಣಂಚು ತೇವ ತೇವ.. ಕೆದರಿದ ಕೂಡಲು, ಮುಖ ದಷ್ಟಪಷ್ಟವಾಗಿದ್ದರೂ ಒಳ ಸೇರಿದ ಕಣ್ಣುಗಳು, ಕಪ್ಪು ಕೂದಲಿನ ನಡುವೆ ಅಲ್ಲಲ್ಲಿ ಇಣುಕುತ್ತಿದ್ದ ಬಿಳಿಯ ರೋಮಗಳು, ಶೇವಿಂಗ್ ಮಾಡದ ಕಪ್ಪು ಹಾಗೂ ಬಿಳಿ ಮಿಶ್ರಿತ ಗಡ್ಡ, ಆಕಸ್ಮಿಕ ಅಘಾತದಿಂದ ಕಪ್ಪಗಿದ್ದ ಮುಖಚಹರೆ ಮತ್ತಷ್ಟು ಕಪ್ಪಗಾಗಿತ್ತು. (ಇದೇ ನೆರೆಯ ಪರಿಣಾಮವನ್ನು ಅಲ್ಲಿಯ ಜನ ಇಂದಿಗೂ ಅನುಭವಿಸುತ್ತಿದ್ದಾರೆ. ಆಗ ಉರುಳಿದ ಮನೆಗಳು, ಕಳೆದು ಹೋದ ಬೆಳೆ ಇಂದಿಗೂ ಅಲ್ಲಿನ ಜನರನ್ನು ಬಾಧಿಸುತ್ತಲೇ ಇದೆ. ಆಳುವ ಸರ್ಕಾರ ಬಸ್ಸು ಹೋಗುವ ಜಾಗದಲ್ಲಿ ರೈಲು ಬಿಡುತ್ತ ಮಾತಿನಲ್ಲೇ ಮನೆ ಕಟ್ಟುತ್ತಿವೆ.. ಬಹುಶಃ ಯಾರಾದರೂ ಈಗಲೂ ಅಲ್ಲಿಗೆ ಹೋದರೆ ನಮಗೆ ಕಥೆ ಹೇಳಿದ ವ್ಯಕ್ತಿ ಆಟೋ ಬಾಡಿಗೆ ಮಾಡುತ್ತ ಸಿಕ್ಕರೂ ಸಿಕ್ಕಾನು. ಈ ಘಟನೆ ನಡೆದು 5 ವರ್ಷಗಳಾಗುತ್ತ ಬಂದಿವೆ. ಆದರೂ ಆತ ಅಚ್ಚಳಿಯದೇ ನೆನಪಿನಲ್ಲಿದ್ದಾನೆ. )
ಹೀಗೆ ಮಾತಾಡುತ್ತ ಬರುತ್ತಿದ್ದಂತೆ ಬಸವಣ್ಣ ಶಿವ ಸಾಯುಜ್ಯ ಹೊಂದಿದ ಸ್ಥಳ ಕೂಡಲ ಬಂದಿತ್ತು.
ಎಂಥ ನಿರ್ಮಲ, ಶಾಂತ ಸ್ಥಳವದು. ಒಂದೆಡೆ ದೈತ್ಯ ಕೃಷ್ಣೆ. ಮತ್ತೊಂದೆಡೆ ಮಲಪ್ರಭೆ ನಿಶ್ಚಲೆ. ಮಂದಗಮನೆ.. ಇವೆರಡರ ಐಕ್ಯ ಸ್ಥಳವೇ ಕೂಡಲ ಸಂಗಮ. ಇಲ್ಲಿನ ಅಧಿದೇವತೆ ಕೂಡಲ ಸಂಗಮೇಶ್ವರ. ಬಸವಣ್ಣನ ಅಂಕಿತವಾದ ಕೂಡಲಸಂಗಮದೇವ. ಇಲ್ಲಿಯೇ ಬಸವಣ್ಣ ಲಿಂಗೈಕ್ಯನಾದುದು. ಭವ್ಯ ದೇಗುಲ. ಅಲ್ಲೊಬ್ಬ, ಇಲ್ಲೊಬ್ಬ ಭಕ್ತ ಯಾತ್ರಿಕರು. ವಾತಾವರಣ ನಿಶ್ಚಲ, ನಿರ್ಮಲ. ಆಕಾಶದ ಒಂದು ಭಾಗ ಮೋಡಕಟ್ಟಿದ ಕಾರಣ ಕರ್ರಗಾಗಿದ್ದು ಅಲ್ಲಿನ ವಾತಾವರಣಕ್ಕೆ ಭೀಖರತೆಯನ್ನು ತಂದಿದ್ದು ಸುಳ್ಳಲ್ಲ. ಯಾಕೋ ಅಲ್ಲಿ ಎಷ್ಟು ಹೊತ್ತು ನಿಂತಿದ್ದರೂ ಬೇಸರವೇ ಬರೋದಿಲ್ಲ ಅನ್ನಿಸಿತು.
ಅದೆಂತಹ ಸುಂದರ ತಾಣ. ಗೌಜಿಯಿಲ್ಲ. ಗಲಾಟೆಯಿಲ್ಲ. ನಗರದ ಕೆಲಸದ ಧಾವಂತವಿಲ್ಲ. ಅಕ್ಕಪಕ್ಕದಲ್ಲಿ ದೈತ್ಯ ನದಿಗಳಿದ್ದರೂ ಸದ್ದು ಮಾಡುವುದಿಲ್ಲ. ನಿಶ್ಚಲ.. ನಿರ್ಮಲ.. ನಾವು ಮೊದಲು ಸಂಗಮೇಶ್ವರನನ್ನು ನೋಡಿದೆವು. ನಮ್ಮ ಅದೃಷ್ಟವೋ ಗೊತ್ತಿಲ್ಲ.. ಪೂಜೆ ನಡೆಯುತ್ತಿತ್ತು. ದೇವರಿಗೆ ನಮಿಸಿ ಆರತಿಯನ್ನು ಸ್ವೀಕರಿಸಿದೆವು. ಆ ನಂತರ ಈ ಸಹಸ್ರಮಾನದ ಸಿದ್ಧಪುರುಷ ಬಸವಣ್ಣ ಲಿಂಗೈಕ್ಯನಾದ ಸ್ಥಳದ ಕಡೆಗೆ ಹೊರಟೆವು.
ಮೊದಲು ಆ ಸ್ಥಳ ನದಿಯ ದಡದ ಮೇಲೆ ಇತ್ತಂತೆ. ಕ್ರಮೇಣ ಮಾನವನ ಪಾಪ ಹೆಚ್ಚಾದಂತೆಲ್ಲ ಅಲ್ಲಿ ನೀರು ಆವರಿಸಿತು. ಕೊನೆಗೆ ವಿಜ್ಞಾನ ಮುಂದುವರಿದಂತೆಲ್ಲ ಆ ನದಿಯೊಳಗೆ ಬಾವಿ ಮಾಡಿ ಕಾಂಕ್ರೀಟಿನ ದೈತ್ಯ ಗೋಡೆಯನ್ನೆಬ್ಬಿಸಿ ಬಸವನ ನಿಶ್ಚಲ ದೇಹ ಸಮಾಧಿಯನ್ನು ನೋಡಲು ಅನುವು ಮಾಡಿಕೊಡಲಾಗಿದೆ. ಸರಿಸುಮಾರು 250 ಮೆಟ್ಟಿಲುಗಳು ಆ ಬಾವಿಗೆ.
ನಿಲ್ಲಿ.. ಒಂದು ಚೂರು ಹಳಿ ತಪ್ಪಿತು ಇಲ್ಲಿ. ಆ ಬಾವಿ ಕೂಡಲ ಸಂಗಮನಾಥನ ನೇರ ಎದುರಿಗೆ ಅಜಮಾಸು 100 ಮೀಟರ್ ದೂರದಲ್ಲಿದೆ. ಅಲ್ಲಿಗೆ ಹೋಗಲು 250 ಅಡಿಯ ಸೇತುವೆಯೂ ಇದೆ.
ಸಂಗಮನಾಥ ದೇವಾಲಯದ ಎದುರು ಸುಮಾರು 50 ಮೆಟ್ಟಿಲುಗಳನ್ನೇರಿ, ಸೇತುವೆಯಲ್ಲಿ ಸಾಗಿ ಆ ನಂತರ ಕೆಳಕ್ಕಿಳಿಯಬೇಕು. ಕೆಳಕ್ಕಿಳಿದಂತೆ ಅದ್ಯಾವುದೋ ಅವ್ಯಕ್ತ ಭಯ ಹಾಗೂ ಭಾವನೆ ನಮ್ಮ ಮನದಲ್ಲಿ ಮೂಡುತ್ತವೆ. ಅಷ್ಟೇ ಭಕ್ತಿಯೂ..
ಕೆಳಕ್ಕೆ ಇಳಿದದ್ದೇ ಬಸವಣ್ಣನವರ ಲಿಂಗೈಕ್ಯ ಗದ್ದುಗೆ ಕಾಣಿಸುತ್ತದೆ. ಎಂತಾ ಸ್ಥಳವದು. ತಂಪು ತಂಪು. ಕೆಳಗೆ ಬಾವಿಯಲ್ಲಿ ಗೋಡೆಯಲ್ಲಿ ನೀರು ಜಿನುಗಿದ ಅನುಭವ.. ಅಲ್ಲಿರುವ ಒಬ್ಬಾತ ಹೇಳಿದ ಪ್ರಕಾರ ನಾವು ನೆಲಮಟ್ಟಕ್ಕಿಂತ ಹೆಚ್ಚೂ ಕಡಿಮೆ 35 ಅಡಿ ಕೆಳಗೊದ್ದೇವೆ. ನೀರಿನ ನಡುವೆ ನಿಂತಿದ್ದೇವೆ. ಎಂದು ಸಲ ಮೈ ಜುಮ್ಮೆಂದಿತು.
ಬಳಿಯಲ್ಲಿದ್ದ ಕಿಟ್ಟು ` ವಿನು.. ಒಂದ್ಸಾರಿ ಎಲ್ಲಾದ್ರೂ ಈ ಬಾವಿಗೆ ಸಣ್ಣ hole ಆತು ಅಂದ್ರೆ ಎಂತಾ ಆಗ್ತಿಕ್ಕು.. image ಮಾಡ್ಕ್ಯ..' ಎಂದ.. ಅದು ನನ್ನ ಕಲ್ಪನೆಗೆ ನಿಲುಕಲಿಲ್ಲ.
ಅಲ್ಲಿಯೂ ನಮ್ಮ photo programme  ನಡೆಯಿತು. ನಾವು ಹುಡುಗರೆಲ್ಲಾ ಸೇರಿ ಪೋಟೋ ಹೊಡೆಸಿಕೊಳ್ಳುತ್ತಿದ್ದರೆ ನಾಗಭೂಷಣ ಗೌಡರು ಕ್ಯಾಮರಾ ಮನ್ ಆಗಿದ್ದರು. ನನ್ನ ಬಳಿಯಿದ್ದ SLR ಕ್ಯಾಮರಾ ಕ್ಲಿಕ್ಕಾಗುತ್ತಿತ್ತು.. ಪವಿತ್ರಾಳದ್ದೂ.. ಆದರೆ ಕೆಲವೇ ಪೋಟೋ ತೆಗೆಯುವ ವೇಳೆಗೆ ನನ್ನ ಬಳಿಯಿದ್ದ SLR ಕೈಕೊಟ್ಟಿತು. ಯಾವುದಕ್ಕೂ ಇರಲಿ ಎಂದು KB10 ಒಯ್ದಿದ್ದೆ.. ಉಪಯೋಗಕ್ಕೆ ಬಂದಿತು. ಬಿಡಿ ಆಗ ಈಗಿನಷ್ಟು ಡಿಜಿಕ್ಯಾಮ್ ಗಳು ಬಂದಿರಲಿಲ್ಲ ನೋಡಿ.. ಬಂದರೂ ನಾವು ಕೊಳ್ಳಬೇಕಲ್ಲ... ಅಷ್ಟು ಶಕ್ತಿಯಿರಲಿಲ್ಲ ಅದನ್ನೂ ಬಿಡಿ..
ಬೇಗನೆ ಮೇಲೇರಿ ಬಂದೆವು. ಮೇಲೇರಿದಾಗ ಕಂಡ ದೃಶ್ಯ ಇನ್ನೂ ಅಮೋಘ. ಸುತ್ತೆಲ್ಲ ನೀರು.. ಒಂದೆಡೆ ಕೃಷ್ಣೆ.. ಮತ್ತೊಂದೆಡೆ ಮಲಪ್ರಭೆ. ಮಲಪ್ರಭೆ ಆದಿನ ಋತುಮತಿಯಾಗಿದ್ದಳೇನೋ ಎಂಬಂತೆ.. ಹುಚ್ಚೆದ್ದು ಕುಣಿದಿದ್ದಳು.. ಉಕ್ಕೇರಿದ್ದಳು.. ಅದಕ್ಕೆ ತಕ್ಕಂತೆ ಆರ್ಭಟ, ಸೊಕ್ಕು... ಕೆನ್ನೀರು.. ತಿಂಗಳ ಸಂಭ್ರಮದಂತೆ ಆವೇಶ.. ಆಕೆಯ ಅಬ್ಬರ ಎಷ್ಟಿತ್ತೆಂದರೆ ಕೃಷ್ಣೆಗೆ ಸಡ್ಡು ಹೊಡೆಯುವಷ್ಟು..
ಆ ತುದಿಯಲ್ಲಿ ನಿಂತಾಗ ತೃಪ್ತಿ ಕಿಟ್ಟುವಿನ ಬಳಿ `ನೋಡಾ ಕಿಟ್ಟಿ.. ಈ ಕೃಷ್ಣಾ ಅದ್ಯಾವ ರೀತಿ ಕಪ್ಪು ಹೇಳಿ.. ಹೊಲಸು ಹೊಸಲು.. ಈ ಕೃಷ್ಣ ಹೇಳೋ ಹೆಸರಿನವರೇ ಹಾಂಗೆ ಕಾಣ್ತು..' ಎಂದು ಛೇಡಿಸಿದಳು..
ಅದಕ್ಕೆ ಕಿಟ್ಟು `ಕೃಷ್ಣ ಹೇಳದು ಕಪ್ಪಿರಲಿ.. ಒಪ್ಪಿರಲಿ..ದಡದವ್ಕೆ, ರೈತರಿಗೆ ಅದು ಯಾವಾಗ್ಲೂ ತನ್ನಿಂತ ತೃಪ್ತಿಯನ್ನೇ ನೀಡ್ತು.. ಸಮಾಜ ಸೇವೆ.. ಉಳಿದವರ ಹಾಂಗೆ ಸ್ವಾರ್ಥಿಯಲ್ಲ.. ನೋಡಲು ಕಪ್ಪಿದ್ರೆಂತು.. ಗುಣ ಚೊಲೋ ಇದ್ರಾತು.. ಪಾ..ಪ ಕೃಷ್ಣ.. ಒಳ್ಳೆಯದು.. ನೋಡಿ ಕಲ್ತಕಳವು..' ಎಂದು ಮಾತಿನ ತಿರುಗುಬಾಣ ಬಿಟ್ಟ...
ಆಕೆ ಮಾತು ಬದಲಿಸಿದಳು..

(ಮುಂದುವರಿಯುತ್ತದೆ..)
(ಮುಂದಿನ ಭಾಗದಲ್ಲಿ ನಿರೀಕ್ಷಿಸಿ.. ಇಳಕಲ್ಲಿಗೆ ಆಟೋದಲ್ಲಿ... ಇಳಕಲ್ಲಿನಲ್ಲೊಂದು ಹಾಸ್ಯಸಂಜೆ ಹಾಗೂ ಮರಳಿ ಮಣ್ಣಿಗೆ)

No comments:

Post a Comment