Thursday, October 24, 2013

ಎಂಟು ವಸಂತಗಳಾಚೆ




ಎಂಟು ವಸಂತಗಳಾಚೆ
ಮತ್ತೊಮ್ಮೆ ಅಲ್ಲಿಗೆ ಹೋಗಿದ್ದೆ |
ದ್ವಾರಕೆಯಂತಹ ನಾಡಿಗೆ
ಮುಳುಗಿ ಹೋದ ಊರಿಗೆ,
ನನ್ನ ಅಮ್ಮನ ತೌರಿಗೆ ||

ಹೋದೊಡನೆಯೇ ಕಂಡಿದ್ದೇನು?
ಕಣ್ಣ ಮುಂದಿಡೀ ನೀರು
ಕೊನೆಮೊದಲಿಲ್ಲದ ಜಲ |
ಅಲ್ಲಲ್ಲಿ ತಲೆಯುರುಳಿದ
ಅಡಿಕೆ ಮರಗಳ ಬೊಡ್ಡೆ,
ಲಡ್ಡಾದ ತೆಂಗು, ಬಯಲಾದ ಕಾಡು ||

ನಲಿ ನಲಿದು ಬಾಲ್ಯವ
ಕಳೆದಲ್ಲೀಗ ತುಂಬಿರುವುದು
ನೀರು, ನೀರು ಹಾಗೂ ಬರೀ ನೀರು |
ಅಳಿದುಳಿದಂತೆ ಕಾಣುವುದೋ
ಅಲ್ಲಲ್ಲಿ ದ್ವೀಪ, ನರಕದ ಕೂಪ ||

ಹೆಸರೇನೋ ಇತ್ತು ಬರಬಳ್ಳಿ
ಸುತ್ತಲೂ ವನರಾಶಿ ಗಿಡ, ಮರ ಬಳ್ಳಿ
ತುಂಬಿತ್ತು ಜನ, ಧನ
ನಲಿದಿತ್ತು ಮನೆ, ಮನ ||

ಒಂದೆಡೆ ನೇರ ನಿಂತ ಸಹ್ಯಾದ್ರಿ
ಮತ್ತೊಂದೆಡೆ ರೌದ್ರ ಕರಿಕಾಳಿ |
ನಟ್ಟನಡುವಲಿ ಊರಿತ್ತು ಅಲ್ಲಿ
ಮುಗ್ಧ ಜನ ಮನದಿ ನಲಿವಿತ್ತಲ್ಲಿ ||

ಈಗಲೋ ಉಳಿದಿದ್ದು ಮಾತ್ರ
ಕಳೆದ ಹಳೆ ನೆನಪು, ಕರಿ ನೀರು
ಸ್ಪೂರ್ತಿಯಿಲ್ಲದ ಬಾಳು
ಜೊತೆಗೆ ಕೊನೆಯಿಲ್ಲದ ನೀರು ||

ದಾರಿಯೊಳು ಸಿಗುವ `ಕಳಚೆ'
ಹೊಳಪ ಕಳಚಿತ್ತು |
ಪಕ್ಕದ ಕೊಡಸಳ್ಳಿಯೋ
ಎಲ್ಲರ ಪಾಲಿಗೆ ಆಗಿತ್ತೊಂದು
ಬೆಂಕಿಯ ಕೊಳ್ಳಿ ||

ಊರ ವಾಸಂತಿಕೆರೆ ಒಬ್ಬಂಟಿಯಾಗಿತ್ತು,
ಉಕ್ಕೇರಿದ ಕಾಳಿಯಲೆ ಊರ ನುಂಗಿತ್ತು |
ನನ್ನನ್ನುಳಿಸಲು ವೈದ್ಯರಿದ್ದರು
ಈ ಊರುಳಿಸಲು ವೈದ್ಯರಿಲ್ಲ
ಜೊತೆಗೆ ಯಾರೂ ಇಲ್ಲ ||

ಪಕ್ಕದ ಸಾತೋಡ್ಡಿ ಎಂದೋ ಓಡಿಹೋಯ್ತು
ಭಾಗಿನಕಟ್ಟಾಕ್ಕೆ ಭಾಗಿನಕೊಟ್ಟಾಯ್ತು |
ಯಾರದೋ ದಾಹಕ್ಕೆ, ಆಸೆ, ಆಮಿಷಕ್ಕೆ
ಮುಗ್ಧ ಮನಸ್ಸುಗಳು ಬಲಿಯಾಯ್ತು ||

ಹಸಿರು ಸ್ವರ್ಗ ದೇವಕಾರ
ದೇವರ ಪಾದ ಸೇರಿತ್ತು
ಹಸಿರು ಶಿವಪುರ ನರಕವಾಗಿತ್ತು..
ದೂರದ ಕೈಗಾ ಮತ್ತೆ ಮತ್ತೆ ಕಾಡಿತ್ತು ||

ಇಂದು ನನ್ನೆದುರು ನಿಂತಿದ್ದು
ಹಳೆ ನೆನಹುಗಳ ಬಿಂಬ
ಸಿಗದ ಕಾಲ, ಕಳೆದ ಕ್ಷಣ
ಎಲ್ಲವೂ ನೀರಿನಡಿ. ನಿರ್ನಾಮ.
ಮತ್ತೆ ಹುಡುಕಿದರೆ ಎದುರು ಬರೀ ನೀರು ||

ಎಂಟು ವಸಂತಗಳಾಚೆ
ಲೋಕವೇ ಬದಲು |
ನಲಿವಿದ್ದ ಜಾಗದಲಿ
ತುಂಬಿದೆಯೋ ನೋವು |
ಭುವಿಯಿದ್ದ ಜಾಗದಲ್ಲಿ ಪೂರ್ತಿ
ಕರಿಕಾಳಿ ನೀರು |
ಜನರಿಲ್ಲ, ಜೀವ ಕುರುಹಿಲ್ಲ
ಮಸಣವಾಗಿದೆ ಬದುಕು ||

ಅಂತೂ ಆಗಿದೆ ಮುಳುಗಡೆ
ಭುವಿಗೂ, ಭಾವನೆಗಳಿಗೂ
ಕಳೆದುಹೋಗಿದೆಯೆಲ್ಲವೂ
ನೀರಿನಡಿ, ನೆನಪು
ಮರಳುವುದಿಲ್ಲ ಬಾಳ್ವೆ
ಮರುಗುವುದೊಂದೆ, ಜೊತೆಗೆ ಮೆಲುಕು ||

( ನನ್ನ ಅಜ್ಜನಮನೆಯಾದ ಯಲ್ಲಾಪುರ ತಾಲೂಕಿನ ಬರಬಳ್ಳಿ, ಅದು ಕಾಳಿ ನದಿಗೆ ಕಟ್ಟಲಾದ ಕೊಡಸಳ್ಳಿ ಅಣೆಕಟ್ಟಿನಲ್ಲಿ ಮುಳುಗಿ ಹೋಗಿ ಎಂಟು ವರ್ಷಗಳ ನಂತರ ನೋಡಿ ನೋವಿನೊಂದಿಗೆ ಬರೆದಿದ್ದು. ಆಗ ನನ್ನ ಮನಸ್ಸಿಗಾದ ಅನುಭವ. ನಿಮ್ಮ ಮುಂದೆ. ಕಳೆದ ಬಾಲ್ಯ, ಬಾಲ್ಯದ ಹುಡುಗಾಟ, ಒದ್ದಾಟ, ಬರಬಳ್ಳಿಯೆಂಬ ಜಗತ್ತು ಈಗಲೂ ಕಾಡುತ್ತಿದೆ. )
(ನಾನು, ಗಿರೀಶ್ ಕಲ್ಲಾರೆ, ಗುರುಪ್ರಸಾದ್, ಪ್ರಶಾಂತ ಭಟ್, ಅರುಣ ಭಟ್, ಯೋಗೀಶ್, ಶಶಿಧರ, ಗಣಪಣ್ಣ ಇತ್ಯಾದಿಗಳಿಗೆಲ್ಲ ಬರಬಳ್ಳಿಯೇ ಲೋಕವಾಗಿದ್ದ ಒಂದು ಕಾಲವಿತ್ತು. ನಾನು, ಗಿರೀಶ, ಗುರು ಇವರೆಲ್ಲ ರಜಾ ಸಿಕ್ಕಾಗ ಬರಬಳ್ಳಿಗೆ ಓಡಿಬರುತ್ತಿದ್ದೆವು. ಬೇಸಿಗೆ ರಜಾ ಬರಬಳ್ಳಿಯ ಉರಿಬಿಸಿಲು ಕಾಡುತ್ತಿತ್ತಾದರೂ ಬಹಳ ಇಷ್ಟವಾಗುತ್ತಿತ್ತು. ಈಜು ಕಲಿತ ವಾಸಂತಿಕೆರೆ, ರಕ್ತದ ಬೆಲೆ ತಿಳಿಸಿದ ಉದ್ದಬ್ಬಿಯ ಉಂಬಳಗಳು, ತಾಕತ್ತಿದ್ದರೆ ಒಂದೇ ಗುಟುಕಿಗೆ ಕುಡಿ ನೋಡೋಣ ಎಂದು ಸವಾಲು ಹಾಕುವಂತಿದ್ದ ಕಳಚೆಯ ಶೀಯಾಳಗಳು, ಸಕ್ಕರೆ, ಜೇನುತುಪ್ಪಕ್ಕಿಂತ ಸಿಹಿಯಾಗಿದ್ದ ಅಜ್ಜನಮನೆಯ ದೊಡ್ಡ ಮಾವಿನ ಹಣ್ಣುಗಳು, ಆರಿಸಿ ಆರಿಸಿ ತಿನ್ನುತ್ತಿದ್ದ ಗಿಳಿ ತಿಂದ ಪೇರಲೆಗಳು, ಬರಬಳ್ಳಿ ದೇವಸ್ತಾನದ ಬಳಿಯಲ್ಲಿದ್ದ ಗೃಂಥಾಲಯದಿಂದ ತಂದು ಓದಿದ್ದ ರಕ್ತರಾತ್ರಿ, ಕಂಬನಿಯ ಕುಯಿಲು, ಬರಬಳ್ಳಿಯ ಬಲಮುರಿ ಗಣಪನ ಕುರಿತಿದ್ದ ನಂಬಿಕೆ-ಮೂಢ ನಂಬಿಕೆಗಳು......ಇವೆಲ್ಲ ಬರಬಳ್ಳಿಯ ಕುರಿತಾದ ಒಂದು ನೆನಪಿನ ಹಂದರಗಳು..
ಅದೇ ರೀತಿ ಕೊಡಸಳ್ಳಿ ಡ್ಯಾಮಿಗಾಗಿ ನಡೆದ ಮರಗಳ ಮಾರಣಹೋಮ, ಮುಳುಗಿದ ಭೂಮಿ, ಅದೇ ಸಮಯದಲ್ಲಿ ನಾನು ಅಲ್ಲಿ ಮಂತ್ರ ಕಲಿಯುತ್ತಿದ್ದೆ. ದಣೀ ಉಪನಯನವಾಗಿತ್ತು. ಭಾವ ಗಣಪಣ್ಣ ಹುಳಸೇಬರಲಿನೊಂದಿಗೆ ಗಣಪತಿ ಉಪನಿಷತ್ತು, ಮುಂತಾದವುಗಳನ್ನು ಕಲಿಸುತ್ತಿದ್ದರೆ ಪಕ್ಕದ ಜಮೀನಿನಲ್ಲಿ ದೊಡ್ಡ ಮರಗಳನ್ನು ಕಡಿದುರುಳಿಸಿದ ಸದ್ದು ಎದೆಯನ್ನು ಝಲ್ಲೆನ್ನಿಸುತ್ತಿದ್ದವು.. ದೈತ್ಯ ಮರದ ದಿಮ್ಮಿಗಳನ್ನು ಎಳೆಯಲಾರದೇ ಘೀಳಿಡುತ್ತಿದ್ದ ಆನೆಗಳು.. ಬಾರುಕೋಲಿನ ಹೊಡೆತಕ್ಕೆ ಯಮಗಾತ್ರದ ಕೋಣಗಳು ಬೆದರುವ ಬಗೆಯೆಲ್ಲ ಮನದಲ್ಲಿ ಏನೇನೋ ಭಾವನೆಗಳನ್ನು ಮೂಡಿಸಿ ಕಣ್ಣೀರುಗರೆಯುತ್ತಿದ್ದವು.. ನಾನು ಮಂತ್ರ ಕಲಿತು ಅಲ್ಲಿಂದ ಹೊರಟು ಬಂದ ವಾರಕ್ಕೆಲ್ಲ ಸುದ್ದಿ ಬಂದಿತ್ತು ನೋಡಿ ಡ್ಯಾಂ ಬಾಗಿಲು ಹಾಕಿದರು ಬರಬಳ್ಳಿ ಮುಳುಗಿತು ಅಂತ.. ಕರುಳು ಕಲಸಿ ಬಂದಿತ್ತು.. ಅಂತಹ ಭಾವನಾತ್ಮಕ ಊರನ್ನು ಅದು ಮುಳುಗಿದ 8 ವರ್ಷಗಳ ನಂತರ ನೋಡಿ ಬಂದೆ.. ಆಗ ಆದ ಅನುಭವಕ್ಕೆ ಶಬ್ದಗಳು ಸಾಲುವುದಿಲ್ಲ..ಭಾವನೆಗಳು ಬಾಳುವುದಿಲ್ಲ.. )
(15-10-2006, ದಂಟಕಲ್ಲಿನಲ್ಲಿ)
 

No comments:

Post a Comment