Sunday, October 20, 2013

ಗೆಳತಿ, ಮತ್ತೆ ನಿನ್ನ ನೆನಪಾಗುತ್ತಿದೆ


ಗೆಳತಿ,
ಅತ್ತು ಅತ್ತು ಬತ್ತಿದ
ಕಣ್ಣೆವೆಯಲ್ಲಿ ಮತ್ತೆ
ನೀರು ಜಿನುಗುತ್ತಿದೆ ||

ಮನದ ಬಣ್ಣಗೆಟ್ಟ ಕ್ಯಾನವಾಸಿನಲ್ಲಿ
ಸರ್ವಬಣ್ಣದ
ಕಾಮನಬಿಲ್ಲು ಮೂಡುತ್ತಿದೆ ||

ಮರೆತೇ ಹೋದಂತಿದ್ದ
ಹಳೆಯದೊಂದು ಹಾಡು
ಮತ್ತೆ ಗುನುಗುತ್ತಿದೆ ||

ನಿದ್ದೆಗೆಡುವ ನಿರಭ್ರ ರಾತ್ರಿಗಳು
ಸರಿದು, ತರತರದ
ಕನಸು ಬೀಳುತ್ತಿದೆ ||

ಬೋಳು, ಬರಲೆದ್ದ
ಒಂಟಿ ಮರ ಚಿಗುರಿ
ಹಸಿಹಸಿರಾಗುತ್ತಿದೆ ||

ನೀನೆದ್ದು, ಒದ್ದು ಹೋದ
ಎದೆಯ ಗಾಯ
ನಿಧಾನವಾಗಿ ಮಾಯುತ್ತಿದೆ ||

ನೀ ಬಿಟ್ಟುಹೋದ
ಕಾಲುಗೆಜ್ಜೆ ನನ್ನ ಬಳಿ
ಮತ್ತೆ ಕಿಣಿಕಿಣಿಸುತ್ತಿದೆ ||

ಸುರಿವ ಮಂಜಿನ ಧಾರೆ
ನಡು ನಡುವಲ್ಲೊಂದು
ಸೂರ್ಯಕಿರಣ ಹಾಯುತ್ತಿದೆ ||

ಗೆಳತಿ
ಮನದ ಪಟಲದೊಳಗೆ
ಮತ್ತೆ ನಿನ್ನ ಬಿಂಬ
ಮೂಡುತ್ತಿದೆ||

ಹಾಗೇ
ಮತ್ತೆ ನಿನ್ನ ನೆನಪಾಗುತ್ತಿದೆ ||

ಈ ಕವಿತೆಯನ್ನು ಆಕಾಶವಾಣಿ ಕಾರವಾರದಲ್ಲಿ 23-01-2008ರಂದು ವಾಚಿಸಲಾಗಿದೆ
2008ರ ಫೆಬ್ರವರಿ 16ರಂದು ಬೆಳಲೆಯಲ್ಲಿ ನಡೆದ ಎಂ.ಎಂ ಕಲಾ ಮತ್ತು ವಿಜ್ಞಾನ ಮತ್ತು ಕಲಾ ಕಾಲೇಜಿನ ಎನ್ನೆಸ್ಸೆಸ್ ಕ್ಯಾಂಪಿನಲ್ಲಿ ವಾಚಿಸಲಾಗಿದೆ.
ಜುಲೈ 12, 2009ರ ಕರ್ಮವೀರ ವಾರಪತ್ರಿಕೆಯ ಯುವ ಲಹರಿಯಲ್ಲಿ ಪ್ರಕಟವಾಗಿದೆ

No comments:

Post a Comment