Monday, December 17, 2012

ನಿಗೂಢ ದೇವರಕಾನಿನ ಜಾಡಿನಲ್ಲಿ...

ನಿಗೂಢ ದೇವರಕಾನಿನ ಜಾಡಿನಲ್ಲಿ... 

ದೇವರ ಕಾನು.. ಹಾಗೊಂದು ಹೆಸರಿನ ಚಿಕ್ಕ ಪ್ರದೇಶ ನಮ್ಮೂರಿನ ಫಾಸಲೆಯಲ್ಲಿದೆ. ನಮ್ಮೂರು ಹಾಗೂ ಹಿತ್ತಲಕೈ ನಡುವೆ ಇರುವ ಚಿಕ್ಕ ಕಾಡಿನಂತಹ ಸ್ಥಳ ಇದು. ಅಘನಾಶಿನಿ ನದಿಯ ದಡದ ಮೇಲೆ ಇದು ಇದೆ. ನಮ್ಮೂರಿನಿಂದ ದೇವರಕಾನಿಗೆ ಹೋಗಬೇಕೆಂದಾದಲ್ಲಿ ಅಘನಾಶಿನಿಯನ್ನು ದಾಟಿ, ವಾಟೆ ಮಟ್ಟಿಯ ಸಾಲನ್ನು ಹಾದು ಹೋಗಬೇಕು.
     ಮೇಲ್ನೋಟಕ್ಕೆ ಅಲ್ಲಿ ಏನೂ ಕಾಣುವುದಿಲ್ಲ. ಏಕೆಂದರೆ ಬೇಸಿಗೆಯ ದರಕು, ಕಾಡು ಬಳ್ಳಿಗಳು, ಗಣಪೆಕಾಯಿಯ ದೊಡ್ಡ ಬಳ್ಳಿಯ ಸಾಲುಗಳು ಅಲ್ಲಿ ಏನನ್ನೂ ಕಾಣದಂತೆ ಮಾಡಿಬಿಟ್ಟಿವೆ. ಆದರೆ ಸ್ವಪಲ್ಪ ಸೂಕ್ಷ್ಮವಾಗಿ, ಕೂಲಂಕಷವಾಗಿ ವೀಕ್ಷಿಸಿದರೋ ಗತಕಾಲದ ಪಳೆಯುಳಿಕೆಗಳ ಅನಾವರಣ ನೋಡುಗರಿಗೆ ಆಗುತ್ತದೆ.
    ಹೌದು ಅಲ್ಲಿ ಯಾವುದೋ ಕಾಲದ ಪ್ರಾಚೀನ ಗೊಂಬೆಗಳು, ಮಣ್ಣಿನ ಮಡಿಕೆಗಳು, ಮೃತ್ತಿಕೆಯಿಂದ ಮಾಡಿದ ಒಡೆದು ಹೋಗಿರುವ ಗೊಂಎಬಗಳು ಕಾಣಬಲ್ಲವು. ಹೂಕುಂಡ, ಸ್ತೀ, ವೇಷಧಾರಿ, ಆಭರಣಗಳು, ಈ ಮುಂತಾದವುಗಳು ಅಲ್ಲಿವೆ. ಪ್ರತಿಯೊಂದು ಮಡಿಕೆಗಳ ತುಂಡಿನ ಮೇಲೂ ಸೂಕ್ಷ್ಮ ಚಿತ್ತಾರಗಳು. ಕಷ್ಟಪಟ್ಟು ಕಣ್ಣಲ್ಲಿ ಕಣ್ಣಿಟ್ಟು ತಯಾರಿಸಿದ ಪರಿಶ್ರಮ ಎದ್ದು ಕಾಣುತ್ತದೆ.
    ಈ ಗೊಂಬೆಗಳನ್ನು ಅದ್ಯಾವ ಗತಶತಮಾನದಲ್ಲಿ ತಯಾರು ಮಾಡಲಾಗಿದೆಯೋ. ಅದ್ಯಾಕೆ ಅಲ್ಲಿ ತಂದಿಟ್ಟರೋ ಒಂದೂ ಗೊತ್ತಿಲ್ಲ. ಇದನ್ನು ಮುಟ್ಟಬಾರದು ಎಂಬ ವಿಚಿತ್ರ ನಿಗೂಢ ನಂಬಿಕೆ ನಮ್ಮೂರು ಸೇರಿದಂತೆ ಸುತ್ತಮುತ್ತಲ ಊರುಗಳಲ್ಲಿವೆ. ಆ ಕಾರಣದಿಂದಲೇ ದೇವರಕಾನಿನ ಪ್ರದೇಶ ಈಗಲೂ ನಮ್ಮೂರಿಗರಲ್ಲಿ ವಿಚಿತ್ರ ಹಾಗೂ ಭಯಭರಿತ ಪ್ರದೇಶವಾಗಿ ಉಳಿದುಬಿಟ್ಟಿದೆ.
    ಬಹುಶಃ ಈ ಕಾರಣದಿಂದಲೇ ಆ ಗೊಂಬೆಗಳು ಉಳಿದುಕೊಂಡಿದೆಯೇನೋ. ಇಲ್ಲವಾದಲ್ಲಿ ಆ ಗೊಂಬೆಗಳು ಅದೆಷ್ಟು ಮನೆಯ ಶೋಕೆಸುಗಳಲ್ಲಿ ಉಳಿದುಬಿಡುತ್ತಿದ್ದವೋ. ಅದೆಷ್ಟು ಮನೆಯ ಹೂವುಗಳನ್ನು ಇಡುವ ಕುಂಡಗಳಾಗಿಬಿಡುತ್ತಿದ್ದವೋ. ಸೋದೆಯ ಅರಸರ ಕಾಲದ್ದೋ ಅಥವಾ ಕೋಡಸಿಂಗೆಯ, ಕರೂರಿನ ಗೌಡರದ್ದೂ ಅಥವಾ ಬಾಳೂರು ಗೌಡರ ಕಾಲಕ್ಕೆ ಸೇರಿರ ಬಹುದಾದ ಈ ದೇವರ ಕಾನಿನ ಪಳೆಯುಳಿಕೆಗಳ ಕುರಿತು ನಮ್ಮೂರಿನ ಹಿರಿಯರಿಗೂ ಹೆಚ್ಚು ಗೊತ್ತಿಲ್ಲ. ಆ ಬಗ್ಗೆ ಹೇಳಿ ಅಂದರೆ ಅದು ದೇವರ ಕಾಡು. ಅಲ್ಲಿಗೆ ಹೋಗಬೇಡಿ ಎಂದು ಹೇಳಿ ಸುಮ್ಮನಾಗುತ್ತಾರೆ.
    ಅದೇನು ಸ್ಮಶಾನವೋ, ಅಥವಾ ಹೆಸರೇ ಹೇಳಿದಂತೆ ದೇವರಿಗೆ ಸೇರಿದ ತಾಣವೋ, ಚೌಡಿ, ಮಾಸ್ತಿಯ ಸ್ಥಳವೋ, ಅಥವಾ ಒಂದಾನೊಂದು ಕಾಲದಲ್ಲಿ ನಾಗರಬನ ಆಗಿತ್ತೋ ಯಾರಿಗೂ ಗೊತ್ತಿಲ್ಲ. ಮುಂಚೆ ಯಾವಾಗಲೂ ನಾವು ಅಲ್ಲಿಗೆ ಹೋಗಿ ಬಂದು ಮಾಡುತ್ತಿದ್ದೆವು. ಕೊನೆ ಕೊನೆಗೆ ಆ ದೇವರ ಕಾನಿನ ಸುತ್ತ ಕಿತ್ತಲಕೈ ಊರಿನವರ್ಯಾರದ್ದೂ ಬೇಲಿಯೂ ಎದ್ದು ನಿಂತಿದೆ. ಸೂರ್ಯನ ಕಿರಣಗಳು ನೆಲವನ್ನು ಏನು ಮಾಡಿದರೂ ಮುಟ್ಟದಂತಿರುವ ಈ ಸ್ಥಳದಲ್ಲಿ ಅದೇನೋ ಒಂದು ರೀತಿಯ ನೀರವ, ಭೀತಿಯುಕ್ತ ವಾತಾವರಣ ನೆಲೆಸಿರುವುದು ವಿಚಿತ್ರವೂ ವಿಶಿಷ್ಟವೂ ಹೌದು.
    ಈ ಕುರಿತು ಹೆಚ್ಚು ತಿಳಿದವರಿಲ್ಲ. ಈ ಸ್ಥಳವನ್ನು ಉತ್ಖನನ ಮಾಡಿದರೆ ಇನ್ನಷ್ಟು ಮಾಹಿತಿ ಸಿಗಬಹುದು. ಅಗೆದರೆ ಅಲ್ಲಿ ನಿಧಿ ಇದೆ, ಅದನ್ನು ಕಾಳಸರ್ಪವೊಂದು ಕಾಯುತ್ತಿದೆ, ಅಲ್ಲೇ ಜೊತೆಯಲ್ಲಿ ಹುತ್ತವೂ ಇದೆ ಎಂದು ವಾಡಿಕೆಯ ಮಾತುಗಳಿವೆ. ನನ್ನ ಕಣ್ಣಿಗೆ ಹುತ್ತ ಕಾಣಿಸಿದೆ. ಅಲ್ಲದೆ ಮಂಟಪದಂತಹ ಸ್ಥಳವೂ ಕಂಡಿದೆ. ನಿಧಿ ಇದೆಯೋ ಇಲ್ಲವೋ ಗೊತ್ತಿಲ್ಲ. ಒಮ್ಮೆ ಶಿರಸಿಯ ನಮ್ಮ ಇತಿಹಾಸ ಪ್ರಾದ್ಯಾಪಕರೂ, ಪ್ರಾಚೀನ ವಸ್ತುವನ್ನು ಸಂಗ್ರಹಿಸಿ ಶಿರಸಿಯಲ್ಲಿ ಮ್ಯೂಸಿಯಂ ಮಾಡುತ್ತಿರುವ ಟಿ. ಎಸ್. ಹಳೆಮನೆ ಅವರನ್ನು ಕರೆದುಕೊಂಡು ಹೋಗಿದ್ದೆ. ಆಗೆಲ್ಲ ನಮ್ಮೂರಿಗರು ಹಾಗೂ ಸುತ್ತಮುತ್ತಲ ಭಾಗದವರು ನನ್ನನ್ನು ವಿಚಿತ್ರವಾಗಿ, ಅನುಮಾನದಿಂದ ನೋಡಿದ್ದಿದೆ. ಜೊತೆಗೆ ಅಲ್ಲಿ ಮಣ್ಣಿನಲ್ಲಿ ಬಿದ್ದು ಕಾಲನ ಹೊಡೆತಕ್ಕೆ ಸಿಕ್ಕು ಹಾಳಾಗಿ ಹೋಗುತ್ತಿದ್ದ ಗೊಂಬೆಗಳನ್ನು ತಂದು ಮ್ಯೂಸಿಯಂನಲ್ಲಿ ಇಡುತ್ತೇನೆ ಎಂಬ ಹಳೆಮನೆ ಸರ್ ಪ್ರಸ್ತಾಪವನ್ನು ತೀವ್ರವಾಗಿ ವಿರೋಧಿಸಿದ್ದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ.
    ಹಾಗಿದ್ದರೆ ಅದೇನಿರಬಹುದು? ನಮ್ಮೂರಿನಲ್ಲೆ, ನಾನು ಓಡಾಡುವ ಜಾಗದಲ್ಲಿಯೇ ಇಂತಹ ಸ್ಥಳ ಇದ್ದರೂ ಅದರ ಹಿನ್ನೆಲೆ ಗೊತ್ತಿಲ್ಲವಲ್ಲಾ.. ಅದನ್ನು ಉಳಿಸೋಣ ಎಂದುಕೊಂಡು ಮಾಡಿದ ಕೆಲಸಗಳೆಲ್ಲ ವ್ಯರ್ಥವಾಗಿದೆಯಲ್ಲ ಎಂಬ ಬೇಸರವಿದೆ. ಮಳೆ, ಗಾಳಿ, ಕಾಡಿನ ಪ್ರಾಣಿಗಳ ಹಾವಳಿಗಳಿಂದ ಮಣ್ಣಾಗುತ್ತಿರುವ ಈ ಗೊಂಬೆಗಳನ್ನು ಕಾಪಾಡಲು ಆಗುತ್ತಿಲ್ಲವೆನ್ನುವ ವ್ಯಥೆಯೂ ಇದೆ. ಮೂಢನಂಬಿಕೆಯಿಂದಲೋ ಅಥವಾ ಇನ್ಯಾವ ಕಾರಣವೋ.. ನಮ್ಮ ಪ್ರಯತ್ನವನ್ನು ವಿರೋಧಿಸಿದ ಈ ಕುರಿತು ಕುತೂಹಲವೂ ಇದೆ. ಇತಿಹಾಸ ಅರಿಯುವ ಅವಕಾಶವಿದ್ದರೂ ಆಗುತ್ತಿಲ್ಲವೆನ್ನುವ ಅಸಹಾಯಕತೆ.
    ಇವೆಲ್ಲದರ ಜೊತೆಗೆ ಹಾಗೆಯೇ ಬಿದ್ದುಕೊಂಡಿರುವ ಆ ನಿಗೂಢ ಗೊಂಬೆಗಳು ಅಲ್ಲೇ ಕಣ್ಮರೆಯಾಗ್ತವಾ? ನಮ್ಮೂರಿನ ದೇವರಕಾನು, ದೇವರ ಹೆಸರಿನ ಮೂಲಕ ಕಾನು ಉಳಿದುಕೊಂಡಿದ್ದೆಲ್ಲ ಮರೆಯಾಗುತ್ತದಾ ಎಂಬ ಆಲೋಚನೆಯಲ್ಲಿದ್ದೇನೆ.

No comments:

Post a Comment