Tuesday, December 11, 2012

ಎಲ್ಲ ಮರೆತಿರುವಾಗ (ಕಥೆ ಭಾಗ -7)

ಎಲ್ಲ ಮರೆತಿರುವಾಗ


ಭಾಗ -7

(ಇಲ್ಲಿಯವರೆಗೆ : ಮೆಂಟಲ್ ಆಗಿದ್ದ ಜೀವನ್ ರಚನಾ ಕೈಗೆ ಸಿಕ್ಕಿ ಸರಿಯಾದ.. ಅಂದುಕೊಂಡಂತೆ ಹಾಡುಗಾರನಾದ.. ನೀಯಾಕೆ ಹೀಗಾಗಿದ್ದೆ ಗೆಳೆಯಾ ಎಂದು ಕೇಳಿದ ರಚನಾಗೆ ತನ್ನ ಕಥೆಯನ್ನು ಹೇಳಲು ಪ್ರಾರಂಭ ಮಾಡಿದ್ದ ಆತ..ಮುಂದೆ.. ಓದಿ..)
-----------------
ನಮ್ಮೂರು ಮಲೆನಾಡಿನ ಪುಟ್ಟ ಹಳ್ಳಿ. ನಿಂಗೆ ಗೊತ್ತಲ್ಲ ರಚನಾ ನಿಮ್ಮೂರಿನ ತರಹವೇ. ಹಸಿರು ಗಿರಿ, ಗುಡ್ಡ, ಬೆಟ್ಟ, ಅಡಿಕೆ ತೋಟ, ಕರಡದ ಬ್ಯಾಣ.. ಇವೆಲ್ಲ ನಮ್ಮೂರಿನ ವಿಶೇಷ ಗುಣಲಕ್ಷಣಗಳು. ಅಪ್ಪ-ಅಮ್ಮ ಟಿಪಿಕಲ್ ಶಿರಸಿ ಭಾಗದ ಹವಿಗರು. ನಮ್ಮೂರಿನಲ್ಲಿ 8-10 ಮನೆಗಳಿವೆ. ನಮ್ಮೂರಿನಿಂದ ಮುಖ್ಯ ಪಟ್ಟಣ ಶಿರಸಿಗೆ ಬರಬೇಕೆಂದರೆ ಅನಾಮತ್ತು 6-8 ಕಿ.ಮಿ ನಡೆದು, ಬಸವಳಿದು ಬರುವ ಬಸ್ಸಿಗೆ ಕಾದು ಕಾದು ಸುಸ್ತಾಗಿ ಬರಬೇಕು. ಅಂತಹ ಹಳ್ಳಿ.
ನಮ್ಮೂರಿನ ಸುತ್ತ ಮುತ್ತೆಲ್ಲ ಕಗ್ಗಾಡು. ಕಗ್ಗಾಡೆಂದರೆ ಅಲ್ಲಿ ಕಡವೆ, ಕಾಡೆಮ್ಮೆ, ಕಪ್ಪು ಹುಲಿ, ಚಿರತೆ, ಹಂದಿ ಇವೆಲ್ಲ ಕಾಮನ್ನುಗಳು. ನಾನು ಪ್ರೈಮರಿ ಓದಿದ್ದೆಲ್ಲ ನಮ್ಮೂರು ಬಳಿಯ ಹಿ.ಪ್ರಾ. ಶಾಲೆಯಲ್ಲಿ. ಆಮೇಲೆ ನೆಂಟರ ಮನೆಯಲ್ಲಿ ಉಳಿದು ಹೈಸ್ಕೂಲು, ಪಿಯುಸಿಯನ್ನೂ ಮುಗಿಸಿದೆ. ಸರಿ, ಮುಂದೆ ಓದಬೇಕೋ ಬೇಡವೋ ಎಂಬ ಗೊಡವೆಯಲ್ಲಿದ್ದಾಗ ಹಲವರು ಡಿಗ್ರಿ ಮಾಡು ಅಂದರು. ಮನೆಯಲ್ಲಿ ಹರಪೆ ಬಿದ್ದು ಡಿಗ್ರಿಗೆ ಜಾಯಿನಾದೆ. ಅಲ್ಲಿಂದ ಬದಲಾಯಿತು ನನ್ನ ಬದುಕು. 
ನಾನು ಡಿಗ್ರಿಗೆ ಬರುವ ವೇಳೆಗೆ ಜಗತ್ತೆಂದರೆ ಹಾಗೆ, ಹೀಗೆ ಅಂತೆಲ್ಲ ಕನಸು ಕಂಡಿದ್ದೆ. ಡಿಗ್ರಿಯ ನಂತರವೇ ಜಗತ್ತಿನ ಬವಣೆ ಅರ್ಥವಾಗಿದ್ದು ನನಗೆ. ನಾನಂದುಕೊಂಡಂತಿಲ್ಲ ಜಗತ್ತು. ಅದು ಸಮ್ ಥಿಂಗ್ .. ಬೇರೆಯ ಥರಾ ಅಂದುಕೊಂಡೆ.. ನಿಧಾನವಾಗಿ ಬದಲಾಯಿತು ಬದುಕು.
ಇಷ್ಟರ ಜೊತೆಗೆ ಇನ್ನೊಂದೆರಡು ವಿಷಯ ಹೇಳಲೇ ಬೇಕು ನಿನಗೆ. ನಮ್ಮ ಮನೆಯ ಕುರಿತು ಒಂದು ವಿಷಯ ಆದರೆ ನಮ್ಮೂರಿನ ಕುರಿತು ಇನ್ನೊಂದು.  ನಮ್ಮ ಮನೆ.. ಎಲ್ಲ ಹವ್ಯಕರ ಮನೆಗಳಂತೆಯೇ ಮಧ್ಯಮವರ್ಗದ ಜನ. ಆರಕ್ಕೆ ಏರುವ ಕನಸು, ಮೂರಕ್ಕಿಳಿಯದಂತೆ ಜೀವನ ನಡೆಸುವ ಸರ್ಕಸ್ಸು.. ಮನೆಯ ಸದಸ್ಯರಿಗೆ ತಂದು ಹಾಕಲು ಒದ್ದಾಡುವ ಅಪ್ಪ. ಇದ್ದಿದ್ದರಲ್ಲೇ ಮೃಷ್ಟಾನ್ನ ಭೋಜನ ತಯಾರಿಸುವ ಅಮ್ಮ. ಹೈಸ್ಕೂಲು ಓದಲು 6-8 ಕಿ.ಮಿ ನಡೆಯುವ ತಂಗಿ. ಇದು ನಮ್ಮ ಆಗಿನ ಬದುಕು ಅಂದರೆ ನೀನು ನಂಬ್ತೀಯಾ ರಚನಾ?
ನಾನಂತೂ ಬಿಡು ಹುಡುಗ. ನನ್ನ ತಂಗಿಯ ಪಾಡು ಬಹಳ ಕೆಟ್ಟದಾಗಿತ್ತು. ಜೀವನ ಆ ಸಂದರ್ಭದಲ್ಲಿ ಅದೆಷ್ಟು ಕಷ್ಟವನ್ನು ನೀಡಿತೋ. ಪ್ರೈಮರಿ ಸ್ಕೂಲು ಓದಿದ ನಂತರ ಹೈಸ್ಕೂಲು ಓದಬೇಕಲ್ಲ. ಹೇಗೆ ಓದಿಸಲಿ ಅಂತ ತಿಳಿಯದೆ ಅಸಹಾಯಕನಾಗಿ ಕೈಚೆಲ್ಲಿದ್ದ ಅಪ್ಪ.  ಇಲ್ಲ ಓದಿಸೋಕೆ ಸಾಧ್ಯವೇ ಇಲ್ಲ ಅಂತ ಖಂಡತುಂಡವಾಗಿ ಹೇಳಿಯೂಬಿಟ್ಟಿದ್ದ. ಪಾಪ ತಂಗಿ. ಓದಬೇಕು ಅಂತ ಅಮ್ಮನ ಬಳಿ ಕಾಡಿ ಬೇಡಿದಳು. ಅಮ್ಮ ಅದ್ಯಾವ ಸಾಮಾನು ಡಬ್ಬದಲ್ಲಿ ಯಾವತ್ತು ಹುದುಗಿಸಿ ಇಟ್ಟಿದ್ದಳೋ, ಾ ಹಣವನ್ನು ಕೊಟ್ಟು ಹೈಸ್ಕೂಲಿಗೆ ಸೇರಿಸಿದ್ದಳು.

ಹೈಸ್ಕೂಲಿಗೆ ಹೋದರೆ ಮುಗಿಯಿತಾ? ಯುನಿಫಾರ್ಮ್ ಬೇಡವಾ, ಪಟ್ಟಿ, ಪುಸ್ತಕಗಳು ಬೇಡವಾ..? ಶುರುವಾಯಿತಲ್ಲ ಸಮಸ್ಯೆಗಳ ಸರಮಾಲೆ.. ಆಕೆ ನಮ್ಮೂರಿನಲ್ಲೇ ಇದ್ದ ಅವಳಿಗಿಂತ ಒಂದೆರಡು ವರ್ಷದ ದೊಡ್ಡ ವಾರಿಗೆಯಲ್ಲಿ ಅಕ್ಕನಾಗಬೇಕಾದ ಹುಡುಗಿಯಿಂದ ಹಳೆಯ ಪುಸ್ತಕಗಳನ್ನು ಪಡೆದಿದ್ದೂ ಆಗಿದೆ. ಜೊತೆಗೆ ಆಕೆಯೇ ಬಳಸಿ ಬಿಟ್ಟ ಯುನಿಫಾರ್ಮನ್ನೂ ಕೂಡ. ವಿಷಿತ್ರವೆಂದರೆ ಆ ಯುನಿಫಾರ್ಮ್ ಕೊಡುವಾಗಲೂ ಸಾಕಷ್ಟು ಬಯ್ದು ಕೊಟ್ಟಿದ್ದಳಂತೆ. 
ಯುನಿಫಾರ್ಮು ಡ್ರೆಸ್ಸು, ಹಳೆಯದು ಹೇಗಿತ್ತು ಅಂತೀಯಾ.. ಬಿಳಿಯ ಅಂಗಿ, ನೀಲಿ ಸ್ಕರ್ಟು. ಆ ಸ್ಕರ್ಟು ಕೂಡ ಸೊಂಟದ ಬಳಿ ಹರಿದುಹೋಗಿತ್ತು. ಹಾಕಿಕೊಂಡರೆ ಹಾಗೆಯೇ ಬಿದ್ದು ಬಿಡುತ್ತದೆಯೇನೋ ಎನ್ನಿಸುತ್ತಿತ್ತು. ಅದಕ್ಕೆ ಪಿಟ್ಟಾಗಿ ಪಿನ್ನನ್ನು ಸಿಕ್ಕಿಸಿಕೊಂಡು ಹೋಗುತ್ತಿದ್ದಳು ನನ್ನ ತಂಗಿ.
ಬಿಡು ಬವಣೆಯ ಕಾಲ ಅದು. ಆದರೂ ಸ್ಪೋರ್ಟ್ಸ್ ಅಂದರೆ ಆಗೆ ಎಂದೂ ಮುಂದು. ಓಡೋಕೆ ಬರ್ತಿರಲಿಲ್ಲ. ಆಡೋಕೆ ಬರ್ತಿರಲಿಲ್ಲ. ಮನೆಯಲ್ಲಿ ಪ್ರತಿದಿನ ಬೆಳಗಿನ ತಿಂಡಿ ಲೇಟಾಗುತ್ತಿತ್ತು. ಹೈಸ್ಕೂಲಿನ ಟೈಮಿಗೆ ಹೋಗಿ ತಲುಪಬೇಕಲ್ಲ. ಗಬಗಬನೆ ತಿಂಡಿ ತಿಂದು ವೇಗವಾಗಿ ನಡೆಯುತ್ತಿದ್ದಳು ನನ್ನ ತಂಗಿ. ಆಕೆ ನಡೆಯುವ ವೇಗ ಹೇಗಿತ್ತು ಅಂದ್ರೆ ಸಾಮಾನ್ಯರು ಅವಳ ಸರಿಸಮಕ್ಕೆ ನಡೆಯಬೇಕೆಂದರೆ ತುಸು ಓಡಲೇಬೇಕಿತ್ತು. ಅದನ್ನೇ ಅವಳ ಶಿಕ್ಷಕರೊಬ್ಬರು ಗುರುತಿಸಿ, ಪ್ರೋತ್ಸಾಹವನ್ನೂ ನಿಡಿದರು. ಅದಕ್ಕೆ ತಕ್ಕಂತೆ ಆಕೆ ಸ್ಥಳೀಯ,ಹೋಬಳಿ, ಜಿಲ್ಲಾಮಟ್ಟ, ವಲಯಮಟ್ಟಗಳಲ್ಲೂ ಗೆದ್ದು ರಾಜ್ಯಮಟ್ಟದವರೆಗೆ ಹೋಗಿಬಂದಿದ್ದಳು ಎಂಬುದನ್ನು ನಂಬುತ್ತೀಯಾ? ಆದರೂ ಚನ್ನಾಗಿ ಓದಿಯೂ ಎಸ್ಸೆಸ್ಸೆಲ್ಸಿಯಲ್ಲಿ ಒಂದು ಸಬ್ಜೆಕ್ಟಿನಲ್ಲಿ ಫೇಲಾದಳು.
ಬಿಡು ಛಲದಂಕಮಲ್ಲಿ ಆಕೆ. ಮತ್ತೆ ಪಾಸಾಗಿ, ಎಕ್ಸಟರ್ನಲ್ ಆಗಿ ಪಿಯು ಪಾಸು ಮಾಡಿ, ನಂತರ ಡಿಗ್ರಿಯನ್ನೂ ಮುಗಿಸಿ ಬಯಸಿದವನನ್ನೇ ಮದುವೆಯಾಗಿ ಈಗ ಆರಾಮಾಗಿದ್ದಾಳೆ. ಯಾಕೆ ಈ ವಿಷಯ ಹೇಳಿದೆ ಅಂದರೆ ನನ್ನ ಮನೆಯ ಹಾಗೂ ನನ್ನ ತಂಗಿಯ ವಿಷಯಗಳನ್ನು ಹೇಳಿದ ಹೊರತು ನನ್ನ ಬಗ್ಗೆ ಹೇಳಿದರೆ ಸರಿಯಾಗಿ ಅರ್ಥವಾಗೋಲ್ಲ.
ಇನ್ನು ನನ್ನ ವಿಷಯಕ್ಕೆ ಬರ್ತೀನಿ. ನಾನು ಕಾಲೇಜು ಸೇರಿದ ಸಮಯದಲ್ಲಿ ನಮ್ಮೂರಿನ ಪರಿಸ್ಥಿತಿ ಹೇಗಿತ್ತೆಂದರೆ ನಮ್ಮೂರಿನಿಂದ ನಾನೊಬ್ಬನೆ ಪ್ರತಿದಿನ ಶಿರಸಿಗೆ ಹೋಗಿ ಬರುತ್ತಿದ್ದೆ. ಆದ್ದರಿಂದ ಇಡೀಯ ನಮ್ಮೂರಿಗರು ತುರ್ತಾಗಿ ಏನಾದರೂ ತರಬೇಕಿದ್ದಲ್ಲಿ ನನ್ನನ್ನು ಸಂಪರ್ಕ ಮಾಡುತ್ತಿದ್ದರು. ಬೆಳಿಗ್ಗೆ ಎಷ್ಟೇ ಬೇಗನೆ ಎದ್ದು ತಯಾರಾದರೂ 6-8 ಕಿಮಿ ನಡೆದು ಕಾಲೇಜು ತಲುಪುವ ವೇಳೆಗೆ ಗಂಟೆ 11 ಆಗುತ್ತಿತ್ತು. ಗೆಳೆಯರೆಲ್ಲ ರೇಗಿಸುತ್ತಿದ್ದರು. ನಿನ್ನ ಮನೆಯಲ್ಲಿ ಸೂರ್ಯ 11ಕ್ಕೆ ಬರ್ತಾನಾ ಅಂತ.
ವಿಚಿತ್ರ ನೋಡಿ ಸುತ್ತ ದಶ ದಿಕ್ಕುಗಳೂ ಕಾಡು ಹಾಗೂ ಗುಡ್ಡಗಳಿಂದ ಆವೃತವಾಗಿದ್ದ ನಮ್ಮೂರಿಗೆ ಸೂರ್ಯನ ಮೊದಲ ಕಿರಣಗಳು ಬೀಳುತ್ತಿದ್ದುದು ಗಂಟೆ 11ಕ್ಕೆ. ಅಲ್ಲಿಯವರೆಗೂ ನಮ್ಮೂರನ್ನು ಇಬ್ಬನಿ ತಬ್ಬಿ ಆಳುತ್ತದೆ. ಆಗಲೂ.. ಈಗಲೂ.
ಸರಿ ನನ್ನ ಕಾಲೇಜು ಬದುಕಿನ ಕುರಿತು ಸ್ಪಲ್ಪವಾದರೂ ಹೇಳಬೇಕು. ಸ್ಪಲ್ಪವೇನು ಜಾಸ್ತಿಯೇ ಹೇಳಬೇಕು. ಯಾಕಂದರೆ ನನ್ನ ಬದುಕಿನಲ್ಲಿ ಔನ್ನತ್ಯ ಹಾಗೂ ಪಾತಾಳ ಎರಡನ್ನೂ ಕಾಣಿಸಿದ್ದು ಇದೇ ಕಾಲೇಜು ಬದುಕು ಎಂದರೆ ನೀನು ನಂಬಲೇ ಬೇಕು ರಚನಾ.
11 ಗಂಟೆಗೆ ಕಾಲೇಜಿಗೆ ಬರುತ್ತಿದ್ದೆನಾದ್ದರಿಂದ ಮೊದಲ ಎರಡು ಕ್ಲಾಸುಗಳು ಬಂಕಾಗಿರುತ್ತಿದ್ದವು. ಮತ್ತೆ ಮದ್ಯಾಹ್ನ 3ಅಥವಾ4ಕ್ಕೆ ಹೊರಡಲೇ ಬೇಕಿತ್ತು. ಇಲ್ಲವಾದಲ್ಲಿ ನಾನು ಕತ್ತಲೆಯಲ್ಲಿ ಕಾಡುಪಾಲಾಗುತ್ತಿದ್ದೆ. ಹೀಗಾಗಿ ಸಂಜೆಯೂ ಒಂದೆರಡು ಕ್ಲಾಸು ಬಂಕು. ನನ್ನ ಹಣೆಬರಹಕ್ಕೆ ನನಗೆ ದೋಸ್ತರ ದಂಡೂ ಬಹಳ ಇತ್ತು ನೋಡು.  ಆ ಕಾರಣಕ್ಕಾಗಿಯೇ ನಾನು ಅವರ ನಡುವೆ ಗೇಲಿಗೂ ತುತ್ತಾಗಿದ್ದೆ.
ಮೊದಲಿನಿಂದಲೂ ನಾನೊಂಥರಾ ಮೂಡಿ ಹುಡುಗ. ಎಲ್ಲೂ ತೆರೆದುಕೊಳ್ಳದ, ನನ್ನಷ್ಟಕ್ಕೆ ನಾನಿರುವ, ನನ್ನಲ್ಲೆ ನಾನು ಬಚ್ಚಿಟ್ಟುಕೊಳ್ಳುವ ಜಾಯಮಾನದವ. ಆ ಕಾರಣದಿಂದಲೇ ನನಗೆ ಗೊತ್ತಿಲ್ಲದ ನನ್ನೊಳಗಿನ ಅನೇಕ ವೈಶಿಷ್ಟಯಗಳು ಸುಪ್ತವಾಗಿದ್ದವು. ಈಗ ನನ್ನ ಕೈ ಹಿಡಿದಿರುವ ಸಂಗೀತವೂ ಅದರಲ್ಲಿ ಒಂದು.
ನಾನು ಹಾಡಬಲ್ಲೆ, ನಟನೆ ಮಾಡಬಲ್ಲೆ, ಅಪರೂಪಕ್ಕೆ ಬರೆಯಬಲ್ಲೆ ಎಂಬ ಯಾವ ಸಂಗತಿಗಳೂ ನನ್ನಿಂದ ಹೊರಬಂದಿರಲಿಲ್ಲ. ಆದರೆ ಕಾಲೇಜು ಲೈಫು ಅದಕ್ಕೊಂದು ವೇದಿಕೆಯಾಯಿತು.
ಈ ಸಂದರ್ಭದಲ್ಲೆ ನನ್ನ ಲೈಫಿನಲ್ಲಿ ಟರ್ನಿಂಗ್ ಪಾಯಿಂಟೂ ಬಂತು...

(ಮುಂದಿನದು.. ಇನ್ನೊಮ್ಮೆ...)

No comments:

Post a Comment