Monday, December 3, 2012

ಆಡುವ ವಯಸ್ಸಿನಲ್ಲಿ ಕಾಡಿದ ಕ್ಯಾನ್ಸರ್...

ಆಡುವ ವಯಸ್ಸಿನಲ್ಲಿ ಕಾಡಿದ ಕ್ಯಾನ್ಸರ್...

ಇವನಿಗೆ ನೀವು ಸಹಾಯ ಮಾಡ್ತೀರಾ...??

ಆತನಿಗಿನ್ನೂ ಹದಿನಾಲ್ಕು ವರ್ಷ. ಶಾಲೆಗೆ ಹೋಗುತ್ತಾ, ಆಟವಾಡುತ್ತ ಬದುಕಬೇಕಿದ್ದ ವಯಸ್ಸು. ಆದರೆ ಆಡುವ ವಯಸ್ಸಿನಲ್ಲಿ ಕಾಡಿದ ಕ್ಯಾನ್ಸರ್ ಭೂತ ಆತನ ಜೀವನವನ್ನೆ ತಿಂದು ಹಾಕುತ್ತಿದೆ.
    ಶಿರಸಿ ತಾಲೂಕಿನ ದಾಸನಕೊಪ್ಪ ಗ್ರಾ.ಪಂ ವ್ಯಾಪ್ತಿಯ ಧನಗನಹಳ್ಳಿಯ ನಿವಾಸಿಯಾದ ಹಜರತ್ ಅಲಿಯ ಪುತ್ರ ನೌಶಾದ್ ಅಲಿ ಎಂಬ ಬಾಲಕನಿಗೆ ಕ್ಯಾನ್ಸರ್ ಕಾಯಿಲೆ ಬಂದಿದ್ದು, ಜೀವನವನ್ನೇ ಮಂಕಾಗಿಸಿದೆ. ಕಾಯಿಲೆಯಿಂದಾಗಿ ಶಾಲೆಗೆ ಹೋಗಲಾಗದೇ, ಇತರ ಮಕ್ಕಳ ಜೊತೆ ಆಡಲಾಗದೇ ದಿನಗಳನ್ನು ಕಳೆಯುವಂತಹ ಪರಿಉಸ್ಥಿತಿ ಎದುರಾಗಿದೆ.
    ಕ್ಯಾನ್ಸರ್ ಪೀಡಿತ ಬಾಲಕ ಶಾಲೆಗೆ ಹೋಗುತ್ತಿದ್ದರೆ ಇಷ್ಟರ ವೇಳೆಗೆ 9ನೇ ತರಗತಿಯಲ್ಲಿ ಓದುತ್ತಿದ್ದ. ಆದರೆ ವಿಧಿಯಾಟದ ಪರಿಣಾಮ ಆತ ಶಾಲೆಗೆ ಹೋಗುವುದನ್ನು ಮೊಟಕುಗೊಳಿಸಿದೆ. ಮನೆಯಲ್ಲಿ ಕಡುಬಡತನದ ಕಾರಣ ತಂದೆ ಹಜರತ್ ಅಲಿ ಮಗನಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ಹಣ ಹೊಂದಿಕೆ ಮಾಡಲಾಗದೇ ಕಷ್ಟಪಡುತ್ತಿದ್ದಾರೆ.
    ಕಳೆದ ಒಂದು ವರ್ಷದ ಹಿಂದೆ ಆಟವಾಡುತ್ತಿದ್ದ ನೌಶಾದ್ ಇದ್ದಕ್ಕಿದ್ದಂತೆ ಜಾರಿಬಿದ್ದ. ಬಿದ್ದ ಪರಿಣಾಮ ಆತನ ಎದೆಯ ಭಾಗಕ್ಕೆ ಬಲವಾದ ಹೊಡೆತ ಬಿದ್ದು ಅಲ್ಲೊಂದು ದೊಡ್ಡ ಗಡ್ಡೆಯಾಯಿತು. ಅದಕ್ಕೆ ಪ್ರಾಥಮಿಕ ಚಿಕಿತ್ಸೆಯನ್ನೂ ಕೊಡಿಸಲಾಯಿತು. ಪ್ರಾರಂಭದಲ್ಲಿ ಚಿಕ್ಕದಾಗಿದ್ದ ಗಡ್ಡೆ ಒಂದೆರಡು ದಿನಗಳಲ್ಲಿಯೇ ದೊಡ್ಡದಾಗಲು ಪ್ರಾರಂಭಿಸಿತು. ಜೊತೆಗೆ ಜ್ವರವೂ ಬಂದ ಪರಿಣಾಮ ನೌಶಾದ್ ಅಲಿಯನ್ನು ತಂದೆ ತಾಯಿಯರು ಶಿರಸಿಯ ಒಂದೆರಡು ಆಸ್ಪತ್ರೆಗೆ ಕರೆದುಕೊಂಡು ಹೋದರು.
    ಶಿರಸಿ ಪಟವರ್ಧನ್ ಆಸ್ಪತ್ರೆಯಲ್ಲಿ ಮೊದಲು ಪರೀಕ್ಷೆ ಮಾಡಲಾಯಿತು. ನಂತರ ಬಳಗಂಡಿ ವೈದ್ಯರನ್ನು ಸಂಪಕರ್ಿಸಿದರೂ ಪರಿಣಾಮ ಕಾಣಲಿಲ್ಲ. ಕೊನೆಗೆ ಡಾ. ದಿನೇಶ್ ಶೆಟ್ಟಿ ಅವರ ಬಳಿಯೂ ಚಿಕಿತ್ಸೆ ಕೊಡಿಸಲಾಯಿತು. ಈ ಆಸ್ಪತ್ರೆಗಳಲ್ಲಿ ಗಡ್ಡೆಯ ನೀರನ್ನು ತೆಗೆದು ಕಳಿಸಿದರಾದರೂ ಮತ್ತೆ ಕೆಲವು ದಿನಗಳಲ್ಲಿ ಗಡ್ಡೆ ಊದಿಕೊಂಡಿತು. ಇದರಿಂದ ಪರೀಕ್ಷೆ ಮಾಡಿದ ವೈದ್ಯರು ನೌಶಾದ್ನನ್ನು ಉನ್ನತ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕೆಎಂಸಿಗೆ ಕರೆದೊಯ್ಯುವಂತೆ ತಿಳಿಸಿದರು. ಅಲ್ಲಿ ಪರೀಕ್ಷೆ ಮಾಡಿಸಿದಾಗ ಆಡುವ ಹುಡುಗ ನೌಶಾದ್ಗೆ ಕ್ಯಾನ್ಸರ್ ಮಾರಿ ಇರುವುದು ತಪಾಸಣೆಯಲ್ಲಿ ಪತ್ತೆಯಾಯಿತು.
   ಇಲ್ಲಿಯವರೆಗೂ ಎಲ್ಲ ಮಕ್ಕಳಂತೆ ಆಟವಾಡಿ, ಓದಿಕೊಂಡು ನಲಿಯುತ್ತಿದ್ದ ನೌಶಾದ್ ಬಾಳಿನಲ್ಲಿ ಕತ್ತಲೆಯ ಪುಟಗಳು ಆರಂಭವಾದವು. ಹುಬ್ಬಳ್ಳಿಯಲ್ಲಿ ನೂರಾರು ತರಹೇವಾರಿ ಪರೀಕ್ಷೆಗಳು, ಚಿಕಿತ್ಸೆಗಳನ್ನು ಮಾಡಲಾಯಿತು. ಅದೆಷ್ಟೋ ಬಗೆಯ ಇಂಜೆಕ್ಷನ್ಗಳನ್ನು ಕೊಡಲಾಯಿತು. ಕೊನೆಗೊಮ್ಮೆ ಹುಬ್ಬಳ್ಳಿಯ ವೈದ್ಯರು ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಸೂಚಿಸಿದರು. ಬಾಲಕ ನೌಶಾದ್ ಅಲಿ ಈಗ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
    ಇದುವರೆಗೂ ನೌಶಾದ್ನನ್ನು ಕನಿಷ್ಟ ಏಳು ಬಾರಿ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ಕರೆದಿಕೊಂಡು ಹೋಗಿ ಬರಲಾಗಿದೆ. ಏಳು ಸಾರಿಯೂ ಭಾರಿ ಬೆಲೆಯ ಇಂಜೆಕ್ಷನ್ಗಳನ್ನು ನೀಡಲಾಗಿದೆ. ಒಂದೊಂದು ಚುಚ್ಚುಮದ್ದಿಗೂ 3 ರಿಂದ 5 ಸಾವಿರ ರು. ಖಚರ್ಾಗುತ್ತದೆ. ಒಮ್ಮೆ ಬೆಂಗಳೂರಿಗೆ ಹೋಗಿಬಂದರೆ ಕನಿಷ್ಟ 15 ಸಾವಿರ ರು. ಖಚರ್ಾಗಿರುತ್ತದೆ. ಮಗನ ಚಿಕಿತ್ಸೆಯ ಸಲುವಾಗಿಯೇ ಮನೆಯಲ್ಲಿದ್ದ ಕುರಿಮಂದೆಯನ್ನು ಮಾರಾಟ ಮಾಡಲಾಗಿದೆ. ಜೊತೆಗೆ ಕುಟುಂಬವನ್ನು ಸಾಕಬೇಕಾಗಿದ್ದ ಬಾಡಿಗೆ ಆಟೋವನ್ನೂ ಇದೀಗ ಮಾರಾಟ ಮಾಡಿ ನೌಶಾದ್ಗೆ ಅವರ ತಂದೆ ಹಜರತ್ ಅಲಿ ಚಿಕಿತ್ಸೆ ಕೊಡಿಸಿದ್ದಾರೆ.

    ನೌಶಾದ್ಗೆ ಈಗಾಗಲೇ ಕಿಮೋಥೆರಪಿಯನ್ನು ಮಾಡಲಾಗಿದೆ. ಅಲ್ಲದೇ 5 ಸಾವಿರ ರು.ಗಳ 5 ಚುಚ್ಚುಮದ್ದನ್ನು ನೀಡಲಾಗಿದೆ. ನೌಶಾದ್ಗೆ ಈಗ ಆಪರೇಶನ್ ಮಾಡುವ ಅಗತ್ಯವಿದೆ. ಅದಕ್ಕೆ 1.5 ಲಕ್ಷ ರು. ಮೊತ್ತದ ಅವಶ್ಯಕತೆಯಿದೆ. ಅದನ್ನು ಕಟ್ಟಿದರೆ ಶಸ್ತ್ರಚಿಕಿತ್ಸೆ ಮಾಡುವುದಾಗಿ ಕಿದ್ವಾಯಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಇದರಿಂದಾಗಿ ನೌಶಾದ್ನ ತಂದೆ ಹಜರತ್ ಅಲಿ ತಲೆಯ ಮೇಲೆ ಕೈಹೊತ್ತು ಕುಳಿತಿದ್ದಾರೆ.
    ಹಜರತ್ ಅಲಿ ಮಗನ ಶಸ್ತ್ರ ಚಿಕಿತ್ಸೆಗಾಗಿ ಅಗತ್ಯವಿರುವ ಹಣಕ್ಕಾಗಿ ಹಲವು ಜನರ ಬಳಿ ಅಂಗಲಾಚಿದ್ದಾರೆ. ಅಷ್ಟೇ ಅಲ್ಲದೆ ರಾಜಕಾರಣಿಗಳ ಮನೆಯ ಬಾಗಿಲನ್ನೂ ತಟ್ಟಿ ಬಂದಿದ್ದಾರೆ. ಆದರೆ ಯಾರಿಂದಲೂ ಸಹಾಯವಾಗಿಲ್ಲ. ಮಾಜಿ ಸಚಿವ ಆರ್. ವಿ. ದೇಶಪಾಂಡೆ ಅವರು 25 ಸಾವಿರ ರು.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹಣವನ್ನು ಕೊಡಿಸಿದ್ದಾರೆ (ಈ ಹಣವನ್ನು ಕೊಡಿಸಲು ಮೂರು-ನಾಲ್ಕು ತಿಂಗಳು ಸತಾಯಿಸಲಾಗಿದೆ ಎಂಬುದು ಹಜರತ್ ಅಲಿಯ ಹೇಳಿಕೆ..!!). ಇನ್ನೂ ಕೆಲವು ಸಂಸ್ಥೆಗಳು ಹಣವನ್ನು ಕೊಡುತ್ತೇವೆ ಎಂದು ಹೇಳಿದ್ದಾರಾದರೂ ಹಣವನ್ನು ನೀಡಲು ಮುಂದಾಗಿಲ್ಲ. ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ಹಜರತ್ ಅಲಿ ಕುಟುಂಬ ನೌಶಾದ್ ಅಲಿಗೆ ಚಿಕಿತ್ಸೆ ನೀಡುವುದು ಹೇಗೆ ಎನ್ನುವ ಚಿಂತೆಯಲ್ಲಿ ತೊಡಗಿದೆ.
    ಕುಟುಂಬದ ಪಾಲಿಗೆ ರೇಷನ್ ಕಾರ್ಡಿದ್ದರೂ ನಾಟ್ ವ್ಯಾಲಿಡ್ ಎಂದು ತೋರಿಸುತ್ತಿರುವುದರಿಂದ ಬೇಳಗಾವಿಯಲ್ಲಿ ವಾಜಪೇಯಿ ಆರೋಗ್ಯ ಶ್ರೀ ಯೋಜನೆಯ ಅಡಿಯಲ್ಲಿ ನಡೆಸಬೇಕಿದ್ದ ಚಿಕಿತ್ಸೆಯನ್ನು ಕ್ಯಾನ್ಸಲ್ ಮಾಡಲಾಗಿದೆ. ಶಿರಸಿಯ ತಹಶೀಲ್ದಾರರು ಈ ಕುರಿತು ರೇಶನ್ಕಾರ್ಡ್ ವ್ಯಾಲಿಡ್ ಆಗಿದೆ ಎಂದು ಬರವಣಿಗೆಯ ಮೂಲಕ ಬರೆದುಕೊಟ್ಟಿದ್ದರೂ ವೈದ್ಯರು ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ. ಹಣವಿಲ್ಲದೇ ಚಿಕಿತ್ಸೆ ಹೇಗೆ ಕೊಡಿಸುವುದೋ ತಿಳಿಯದಾಗಿದ್ದು, ಬಾಲಕನ ಬದುಕು ಬರ್ಭರವಾಗಿದೆ.
    ಸಮಾಜಮುಖಿ ವ್ಯಕ್ತಿಗಳು, ಸಹೃದಯಿಗಳು ನೌಶಾದ್ ಅಲಿಯ ಚಿಕಿತ್ಸೆಗಾಗಿ ಧನಸಹಾಯ ಮಾಡಬೇಕೆಂದು ತಂದೆ ಹಜರತ್ ಅಲಿ ಕೇಳಿಕೊಂಡಿದ್ದಾರೆ. ಬಾಲಕನಿಗೆ ಸಹಾಯ ಮಾಡಲು ಇಚ್ಛಿಸುವವರು ಇಂಡಿಯನ್ ಓವರ್ಸಿಸ್ ಬ್ಯಾಂಕ್ನ ದಾಸನಕೊಪ್ಪ ಶಾಖೆಯಲ್ಲಿ ತೆರೆಯಲಾಗಿರುವ ನೌಶಾದ್ ಅಲಿಯ ಸೇವಿಂಗ್ಸ್ ಖಾತೆ ನಂ. 029501000008062 ಈ ನಂಬರಿಗೆ ಹಣವನ್ನು ನೀಡಬಹುದಾಗಿದೆ. ಈ ಕುರಿತು ನೌಶಾದ್ ಅಲಿಯ ತಂದೆ ಹಜರತ್ ಅಲಿಯನ್ನು 9741579371 ಈ ದೂರವಾಣಿ ಸಂಖ್ಯೆಯ ಮೂಲಕ ಸಂಪಕರ್ಿಸಬಹುದಾಗಿದೆ.
ನೌಶಾದ್ ನ ಸ್ವಗತ...

(ನೌಶಾದ್ ಅಲಿಯನ್ನು ಮಾತನಾಡಿಸುವ ಸಲುವಾಗಿ ಅವನ ಮನೆಗೆ ಹೋದಾಗ ಆತ ಹೇಳಿದ್ದು..)



    ಒಂದು ವರ್ಷದ ಹಿಂದೆ ಶಾಲೆಗೆ ರಜಾ ಇದ್ದಾಗ ಕುರಿ ಕಾಯಲು ಹೋಗಿದ್ದೆ. ಆಗ ಜಾರಿ ಬಿದ್ದೆ. ಆಮೇಲೆ ಪರೀಕ್ಷೆ ಮಾಡಿದಾಗ ನನಗೆ ಕ್ಯಾನ್ಸರ್ ಇದೆ ಎಂದು ಗೊತ್ತಾಯ್ತು. ಈಗ ಪ್ರತಿ ತಿಂಗಳು ಕಿಮೋಥೆರಪಿಗಾಗಿ ಬೆಂಗಳೂರಿಗೆ ಹೋಗಿ ಬರುತ್ತಿದ್ದೇನೆ. ಪ್ರತಿ ಸಾರಿ ಹೋದಾಗಲೂ 15 ದಿನ ಆಸ್ಪತ್ರೆಯಲ್ಲಿರಬೇಕು. ಚುಚ್ಚುಮದ್ದುಗಳನ್ನು ಕೊಡುತ್ತಾರೆ. ಅದನ್ನು ಕೊಟ್ಟಾಗ ಆಗುವ ಯಾತನೆಯನ್ನು ಹೇಳಲು ಆಗುವುದಿಲ್ಲ. ಆ ಚುಚ್ಚುಮದ್ದು ಕೊಟ್ಟ ನಂತರ 1 ತಿಂಗಳವರೆಗೆ ತೊಂದರೆಯಿಲ್ಲ. ಆಮೇಲೆ ಮತ್ತೆ ದೇಹದಲ್ಲಿ ತೊಂದರೆಗಳು ಕಾಣಿಸಲು ಶುರುವಾಗುತ್ತವೆ. ಮತ್ತೆ ಚಿಕಿತ್ಸೆಗೆ ಓಡಬೇಕು. ಒಂದು ಸಾರಿ ಆಸ್ಪತ್ರೆಗೆ ಹೋದಾಗಲೂ 10 ಸಾವಿರಕ್ಕಿಂತ ಹೆಚ್ಚು ಖಚರ್ಾಗುತ್ತದೆ ಎಂದು ನಮ್ಮ ಅಬ್ಬಾ ಹೇಳುತ್ತಾರೆ. ನನಗಾಗಿ ನನ್ನ ಅಬ್ಬಾ ಕುರಿಮಂದೆಯನ್ನು ಮಾರಿದರು. ನಮಗೆಲ್ಲ ಜೀವನಾಧಾರವಾಗಿದ್ದ ಬಾಡಿಗೆ ರಿಕ್ಷಾವನ್ನೂ ಮಾರಿದ್ದಾರೆ. ಆದರೆ ನನ್ನ ಚಿಕಿತ್ಸೆಗೆ ಇನ್ನೂ ಬಹಳ ಹಣಬೇಕಾಗುತ್ತದಂತೆ. ಯಾರಾದ್ರೂ ಸಹಾಯ ಮಾಡಬಹುದಲ್ವಾ? ಆಪರೇಶನ್ ಆಗಿ ಮತ್ತೆ ಎಲ್ಲ ಮಕ್ಕಳ ಜೊತೆ ಓಡಿ, ಆಡಿ ಖುಷಿಯಿಂದ ಇರಬಹುದಲ್ವಾ. ಯಾರಾದ್ರೂ ನನಗೆ ಸಹಾಯ ಮಾಡ್ತಾರಲ್ವಾ? 
--
ಈ ಬರಹದಲ್ಲಿ  ನೌಶಾದ್ ಅಲಿಯ ಅಕೌಂಟ್  ನಂಬರ್ ನೀಡಿದ್ದೇನೆ.. ಯಾರಾದ್ರೂ ಸಹಾಯ ಮಾಡುವ ಮನಸ್ಸು ಉಳ್ಳವರು ಮಾಡಬಹುದು... ಹಜರತ್ ಅಲಿಯ ದೂರವಾಣಿ ಸಂಖ್ಯೆಯೂ ಇದೆ ಸಂಪರ್ಕ ಮಾಡಬಹುದು...

No comments:

Post a Comment