Saturday, December 8, 2012

ಉ.ಕ ರೋಧನ : ಭಾಗ-3

ಉ.ಕ ರೋಧನ ಭಾಗ-3

ಉತ್ತರಕನ್ನಡದ ಕುರಿತು ಬರೆದ ಮತ್ತಷ್ಟು ಚೌಪದಿಗಳು


ಗೂಡಿನ ವ್ಯಥೆ

ನನ್ನ ಉ,ಕವೊಂದು ಬೆಚ್ಚನೆಯ ಗೂಡು
ಈಗೀಗ ಆಗುತ್ತಿದೆ ಕಸದ ಬೀಡು|
ಒಡಲೊಳಗೆ ಕುದಿಯುತ್ತಿದೆ ಕೈಗಾ
ನಾಶಮಾಡಲು ಸಿದ್ಧವಾಗುತ್ತಿದೆ ಬೇಗ||

ಗುಬ್ಬಿಯ ಮೇಲೆ

ನನ್ನ ಉ.ಕವೊಂದು ಹಕ್ಕಿಮರಿ ಗುಬ್ಬಿ
ಯಾರೂ ಆದರಿಸಿಲ್ಲ ಬಾಚಿ ಹಿಡಿದು ತಬ್ಬಿ|
ತ್ಯಾಗಿಯಿದು, ಎಂದೆಂದೂ ಹಿಡಿದಿಲ್ಲ ಶಸ್ತ್ರ
ತೂಗುತಿದೆ ಇದರ ಮೇಲೆ ಯೋಜನೆಗಳ ಬ್ರಹ್ಮಾಸ್ತ್ರ||

ಪ್ರಾಣ-ಹರಣ

ನನ್ನ ಉ.ಕವೊಂದು ಯುಗಪುರುಷರ ನಾಡು
ಜೊತೆಗೆ ಉಂಟಲ್ಲ ಗಮ್ಯತೆಯ ಕಾಡು|
ಹಲವು ಮೃಗಜಂತುಗಳೇ ಇದರ ಮಾನ
ಎಲ್ಲವೂ ಕಳೆದುಕೊಳ್ಳುತ್ತಿವೆ ಈಗ ಪ್ರಾಣ||

ಪುಸ್ತಕದ ಕಥೆ

ನನ್ನ ಉ.ಕವೊಂದು ಹಳೇ ಪುಸ್ತಕ
ಓದಿದರೆ ಜ್ಞಾನ ತುಂಬುವುದು ಮಸ್ತಕ|
ತಿಂದುಬಿಟ್ಟಿದೆ ಅಲ್ಲಲ್ಲಿ ಹುಳವಿದರ ಪೇಜು
ಕಣ್ಣೆತ್ತಿ ನೋಡುವವರಿಲ್ಲ ಇದರ ಗೋಜು||

ಮೂರ್ತಿಯ ಕಥೆ

ಉತ್ತರಕನ್ನಡವೊಂದು ಸುಂದರ ಮೂರ್ತಿ
ಇದುವೇ ನನ್ನ ಕವನಕ್ಕೆ ಸ್ಫೂರ್ತಿ|
ಸುತ್ತೆಲ್ಲ ಹಬ್ಬಿಹುಸು ಭವ್ಯ ಮಲೆನಾಡು
ಇಂಚಿಂಚೂ ಸೂರೆಹೋಗುತ್ತಿದೆ ಇಲ್ಲಿಯ ಕಾಡು||

ಸಂಗೀತ-ರೋಗ

ನನ್ನ ಉ.ಕವೊಂದು ಸಂಗೀತದ ರಾಗ
ಆದರೆ ಅದಕ್ಕೆ ಹಿಡಿದಿದೆ ಹೊಸದೊಂದು ರೋಗ|
ಆಲಾಪನೆ ಮಾಡಿದರೆ ಬಾಯಲ್ಲಿ ಕೆಮ್ಮು
ಎದೆಯೊಳಗೆ ಕಟ್ಟಿದೆ ನೋವೆಂಬ ದಮ್ಮು||

 (ಉತ್ತರಕನ್ನಡದ ಬಗ್ಗೆ ಎಷ್ಟು ಬರೆದರೂ ಕಡಿಮೆ ನೋಡಿ... ಅದೊಂಥರಾ ಗಣಿ.. ಬಗೆದಷ್ಟೂ ಕಾಲಿಯಾಗುವುದಿಲ್ಲ.. ಆದರೆ ಯೋಜನೆಗಳ ಬಲಾತ್ಕಾರಕ್ಕೆ ಬಲಿಯಾಗುತ್ತಿರುವ ನನ್ನ ಜಿಲ್ಲೆಯ ಕುರಿತು ಇನ್ನೊಂದಷ್ಟು ಹನಿಗಳು...)

No comments:

Post a Comment