Wednesday, December 12, 2012

ವಿಸ್ಮಯಗಳ ಗೂಡು ಈ ಮಲೆನಾಡು : ಭಾಗ-1

ವಿಸ್ಮಯಗಳ ಗೂಡು ಈ ಮಲೆನಾಡು 

ಭಾಗ-1

ಈ ಮಲೆನಾಡು ವಿಸ್ಮಯಗಳ ಆಗರ. ವೈಶಿಷ್ಟ್ಯತೆಗಳ ಸಾಗರ. ಈ ಪ್ರದೇಶವೇ ವಿಶಿಷ್ಟ, ವಿಚಿತ್ರ.. ಮಲೆನಾಡಿನಲ್ಲಿ ಅದರದೇ ಆದ ಬೆರಗಿನ ಲೋಕವಿದೆ. ಅದಕ್ಕೆ ಅದರದೇ ಆದ ಸೊಬಗಿದೆ. ಪ್ರಾಣಿ ಸಮುದಾಯ, ಪಕ್ಷಿ ಲೋಕ, ಚಿಟ್ಟೆ, ಜಂತು, ಕೀಟಗಳ ಸಾಗರವೇ ಇಲ್ಲಿದೆ. ಇತರ ಕಡೆಗಳಿಗಿಂತ ಇವು ಭಿನ್ನ. ಎಲ್ಲಕ್ಕಿಂತ ಮಿಗಿಲಾಗಿ ಇಲ್ಲಿನ ಮಣ್ಣು ಹಾಗೂ ಮಣ್ಣಿನ ಗುಣಗಳೇ ಭಿನ್ನ. ಇಲ್ಲಿ ನಿಮ್ಮೆದುರು ನಾನು ಮಲೆನಾಡಿನ ಕೆಲವು ವಿಶಿಷ್ಟತೆಗಳ ಪಟ್ಟಿಮಾಡಿ ಇಡುತ್ತಿದ್ದೇನೆ ನೋಡಿ..,

ವಿಶಿಷ್ಟ ಹಣ್ಣುಗಳು;

    ಮಲೆನಾಡಿನ ಬೆಟ್ಟಗುಡ್ಡಗಳು ಸದಾಕಾಲ ಒಂದಲ್ಲ ಒಂದು ಹಣ್ಣುಗಳಿಂದ ತುಂಬಿಯೇ ಇರುತ್ತದೆ. ಬಿರು ಬೇಸಿಗೆಯಿರಲಿ, ಜೊರಗುಡುವ, ಜಿಟ ಜಿಟಿಯ ಮಳೆಗಾಲವಿರಲಿ ಅಥವಾ ಕೊರೆವ ಚಳಿಗಾಲವಿರಲಿ ಮಲೆನಾಡಿನ ಗುಡ್ಡಗಳಲ್ಲಿ ಒಂದಲ್ಲ ಒಂದು ಜಾತಿಯ ಗಿಡಗಳು ಹಣ್ಣನ್ನು ಬಿಟ್ಟೇ ಬಿಡುತ್ತವೆ. ಸುಮ್ಮನೆ ಗುಡ್ಡದ ಗುಂಟ ನೀವು ಅಲೆದಾಟ ನಡೆಸಿದರೆ ಸಾಕು ಅಲ್ಲೆಲ್ಲ ಒಂದೆಷ್ಟು ಬಗೆ, ರುಚಿಯಾದ, ಸವಿಯ ಹಣ್ಣುಗಳು ಬೊಗಸೆ ತುಂಬಾ ಸಿಗಬಲ್ಲವು. ಇಂತಹ ಹಣ್ಣುಗಳಲ್ಲಿ ಮುಖ್ಯವಾದವುಗಳೆಂದರೆ
    ಬಿಕ್ಕೆ ಹಣ್ಣು(ಬುಕ್ಕೆ ಹಣ್ಣು), ನೇರಲೆ ಹಣ್ಣು, ಕುಂಟ ನೇರಲೆ ಹಣ್ಣು, ಗುಂಡು ನೇರಲೆ ಹಣ್ಣು, ಸಳ್ಳೆ ಹಣ್ಣು, ಇವುಗಳು ಮಳೆಗಾಲಕ್ಕೆ ಮೆರಗುಕೊಟ್ಟರೆ, ಬಿಳಿ ಮುಳ್ಳೆ ಹಣ್ಣು, ಕರಿ ಮುಳ್ಳೆ ಹಣ್ಣು (ಪರಗೆ), ಪೆಟ್ಲ ಹಣ್ಣು, ಜಂಬೆ ಹಣ್ಣು ಇವುಗಳು ಚಳಿಗಾಲವನ್ನು ಸುಂದರವಾಗಿಸುತ್ತವೆ. ಗುಡ್ಡೇ ಗೇರು, ಕವಳೀ, ಬಿಳಿ ಮುಳ್ಳಣ್ಣು, ಹೂಡ್ಲು ಹಣ್ಣು, ದಾಸಾಳ, ಹಲಿಗೆ, ಸಂಪಿಗೆ ಇತ್ಯಾದಿ ಹಣ್ಣುಗಳು ಬೇಸಿಗೆಯ ಬೆಡಗನ್ನು ಹೆಚ್ಚಿಸುತ್ತವೆ. ಆಗೆಲ್ಲ ಮಲೆನಾಡು ಅದರದೇ ವಿಸ್ಮತೆಯನ್ನು ಹೊಂದಿ ಸುತ್ತೆಲ್ಲ ಹರಡುತ್ತದೆ.

ಕೆಲವು ವೈಶಿಷ್ಟ್ಯತೆಗಳು

    ಮಲೆನಾಡಿನ ಹೆಸರಿನಲ್ಲೇ ವೈಶಿಷ್ಟ್ಯತೆಗಳು ಅಡಗಿವೆ. ಇಲ್ಲಿನ ಪ್ರತಿಯೊಂದು ನದಿ-ಗಿರಿ-ಕಾನು-ವಿಷಯ-ವಸ್ತು-ಮೃಗ-ಖಗ-ಸಸ್ಯ-ಸೊಬಗು ಇವೆಲ್ಲವುಗಳಿಗೂ ಅದರದೇ ಆದ ವೈಶಿಷ್ಟ್ಯ ಹಾಗೂ ಸೊಬಗನ್ನು ಹೊಂದಿವೆ.
    ಮಳೆಗಾಲದಲ್ಲಿಯೇ ಕಾಣ ಸಿಗುವ ಸೀತಾದಂಡೆ, ದ್ರೌಪದಿ ದಂಡೆ ಎಂಬ ಎರಡು ಬಗೆಯ ಪರಾವಲಂಬಿ ಸಸ್ಯಗಳ ಹೂಗೊಂಚಲು ಮಲೆನಾಡಿನ ಮಳೆಗಾಲಕ್ಕೆ ದೃಷ್ಟಯಕಾವ್ಯವನ್ನು ಕಟ್ಟುತ್ತವೆ. ಯಾವುದೋ ಮರಗಳಿಗೆ ಅಂಟಿಕೊಂಡು ಬೆಳೆಯುವ ಈ ಸಸ್ಯಗಳು ಪರಾವಲಭಿಯಾಗಿದ್ದರೂ ಸುಂದರ ಹೂಗಳನ್ನು ಅರಳಿಸಿಕೊಂಡು ಮಳೆಗಾಲವನ್ನು ಅದರಲ್ಲೂ ಹೆಚ್ಚಾಗಿ ಜಿಟಿ ಜಿಟಿ ಮಳೆಯನ್ನು ಸ್ವಾಗತಿಸುತ್ತ ನಿಂತಿರುತ್ತವೆ. ಈ ಹೂಗಳ ಬಣ್ಣವೂ ಅಷ್ಟೆ ಸುಂದರ. ಬಿಳಿ-ತಿಳಿ ಗುಲಾಬಿ ಬಣ್ಣಗಳ ಈ ಚಿಕ್ಕ ಚಿಕ್ಕ ಹೂ ಪಕಳೆಗಳು ದಂಡೆಗಳಂತಿರುವ ಪೋಣಿಸಿ ಮಾಲೆಯನ್ನಾಗಿ ಮಾಡಿ ಇಟ್ಟಂತಿರುವ ಹೂಗೊಂಚಲಿನ ಬುಡದ ಹೂಗಳು ಅರಳಿದ್ದರೆ ತುದಿಯ ಹೂಗಳು ಇನ್ನೂ ಮೊಗ್ಗಾಗಿ ಅರಳಲು ಕಾಯುತ್ತ ಕುಳಿತಿರುವ ದೃಶ್ಯ ನೋಡುಗರಿಗಂತೂ ಹಬ್ಬವನ್ನೇ ಉಂಟುಮಾಡುತ್ತವೆ.
    ಅಷ್ಟೇ ಅಲ್ಲ. ಮಲೆನಾಡಿನ ಹೆಜ್ಜೆ ಹೆಜ್ಜೆಗಳಲ್ಲಿ ಕೌತುಕತೆ ಕಾಲಿಗೆ ತೊಡರುತ್ತದೆ. ಪದೆ ಪದೆ ತೊಡಕುತ್ತದೆ. ನೋಡುಗ ಸ್ವಲ್ಪ ಭಾವನಾ ಜೀವಿಯಾಗಿದ್ದರೂ ಸಾಕು ಎಂತಹವನೆ ಆದರೂ ಕವಿಯಾಬಲ್ಲ, ಕವಿತೆ ಕಟ್ಟಬಲ್ಲ. ಮತ್ತೆ ಮತ್ತೆ ಭಾವಲೋಕವನ್ನು ಕವಿತೆಗಳ ಮೂಲಕ ತೆರೆದಿಡಬಲ್ಲ. ಇನ್ನು ಹಾಡುವ ಖಯಾಲಿಯಿದ್ದರಂತೂ ಜಗತ್ತಿನ ಪರಿವೆಯೇ ಇಲ್ಲದಂತೆ ಸುಂದರ ಹಾಡುಗಳಿಗೆ ದನಿಯಾಗಬಲ್ಲ. ಅಂತಹ ಸಾಮರ್ಥ್ಯ ಮಲೆನಾಡಿಗಿದೆ.
    ಮಲೆನಾಡು ಅದೆಷ್ಟೇ ವಿಸ್ಮಿತವಾದರೂ ನೋಡುಗರ ದೃಷ್ಟಿಯೂ ಅಗತ್ಯ. ನೋಡುಗನ ಮನಸ್ಥಿತಿಯಲ್ಲಿ ಪ್ರದೇಶಗಳ ವಿಶೇಷತೆಯೂ ಇರುತ್ತದೆ. ಕೆಲವರಿಗೆ ಯಾವುದೇ ಸ್ಥಳಗಳೂ ಬೆರಗು ಮೂಡಿಸಬಲ್ಲದು. ಮತ್ತೆ ಕೆಲವರಿಗೆ ಊಹೂಂ ಅವರನ್ನು ಜೋಗದ ಒಡಲಿಗೆ ಕರೆದೊಯ್ದರೂ ಇಷ್ಟೇನಾ.. ನೀರು ಮೇಲಿಂದ ಕೆಳಕ್ಕೆ ಬೀಳ್ತದೆ.. ನಾವು ಮೂತ್ರ ಮಾಡಿದರೆ ಬೀಳಲ್ಲವಾ.. ಅನ್ನುವ ಮಾತುಗಳನ್ನು ಆಡುತ್ತಾರೆ.
    ಮಲೆನಾಡೂ ಅಷ್ಟೆ ನಮ್ಮೊಳಗಿನ ವಿಸ್ಮಯದ ಕಣ್ಣನು ತೆರೆದು ನೋಡಿದರೆ ಬಹಳ ಸುಂದರ. ಆಗ ಮಾತ್ರ ಸುತ್ತಲ ಸುಂದರ ವೈಭೋಗಗಳು ಮನದಣಿಸುತ್ತವೆ ಅಲ್ಲವೇ..

No comments:

Post a Comment