Sunday, November 17, 2013

ಬೊಂಬಾಯ್ ಕಮಲಿ ಹಾಗೂ ಚಂದ್ರಕಾಂತನ ಬೆಳಕು

 ಕಮಲಿಯ ಬಾಯಿಗೆ ಬಿದ್ದರೆ ಮುಗಿಯಿತು..
ಹಾಗೊಂದು ಅಘೋಷಿತ ಮಾತು ನಮ್ಮ ಕಡೆ ಚಾಲ್ತಿಯಲ್ಲಿದೆ...
ಚಂದ್ರಕಾಂತ ಮಾಸ್ತರ್ರು ಅದ್ಹೇಗೆ ಕಮಲಿಯ ಬಾಯಿಗೆ ಬಿದ್ದರೋ ಎಂಬುದು ತರ್ಕಕ್ಕೆ ನಿಲುದಂತಹ ಪ್ರಶ್ನೆ..
ಚಂದ್ರಕಾಂತ ಮಾಸ್ತರ್ರು ಹಾಗೂ ಕಮಲಿ ಇಬ್ಬರೂ ನನಗೆ ಪರಿಚಯದವರೇ.. ಇವರ ಪೈಕಿ ಚಂದ್ರಕಾಂತ ಮಾಸ್ತರ್ರು ನನಗೆ ಪ್ರಾಥಮಿಕ ಶಿಕ್ಷಣವನ್ನು ಒಂದೆರಡು ವರ್ಷ ಕಲಿಸಿದರೆ ಕಮಲಿ ಪರಿಚಯದಾಕೆ.. ನನಗಿಂತ ಕನಿಷ್ಟವೆಂದರೂ 50 ವರ್ಷಕ್ಕೆ ದೊಡ್ಡವಳು.. ಆದಕಾರಣ ಕಮಲಿಯನ್ನು ಕಮಲಜ್ಜಿ ಎನ್ನಬಹುದು.. ಆದರೆ ಕಮಲಿಯನ್ನು ಕಮಲಜ್ಜಿ ಎಂದು ಕರೆದರೆ ಅದರ ಸ್ವಾರಸ್ಯ ಹೊರಟುಹೋಗುತ್ತದೆ.. ಆದ್ದರಿಂದ ಕಮಲಿಯನ್ನು ಕಮಲಿ ಎಂದೇ ಕರೆಯುತ್ತೇನೆ..
ಇಂತಹ ಕಮಲಿಯ ಬಾಯಿಗೆ ಚಂದ್ರಕಾಂತ ಮಾಸ್ತರ್ರು ಬಿದ್ದಿದ್ದು ಅದ್ಹೇಗೋ ಗೊತ್ತಿಲ್ಲ.. ಆದರೆ ಅದರಿಂದ ಮಾಸ್ತರ್ರು ಅನುಭವಿಸಿದ ಬವಣೆಯಂತೂ ಹೇಳತೀರದು ಬಿಡಿ.
**
`ಥೋ... ನಿಂಗೆ 21 ಮಾರ್ಕ್ಸು ಕೊಟ್ನನಾ... ತಡಿಯಾ..  21 ಮಾರ್ಕ್ಸು ತಗಳುವಷ್ಟು ಬುದ್ಧಿವಂತ ನೀ ಅಲ್ಲ.. ಅದು 15 ಆಗಬೇಕು..' ಎಂದು ಚಂದ್ರಕಾಂತ ಮಾಸ್ತರ್ರು ಉತ್ತರ ಪತ್ರಿಕೆ ವಾಪಾಸು ಪಡೆದು ಎರಡೆರಡರಂತೆ ಮೂರು ಪ್ರಶ್ನೆಗಳಿಗೆ ಕಡಿಮೆ ಮಾರ್ಕ್ಸ್ ಕೊಡುತ್ತಿದ್ದರೆ ಖುಷಿಯಲ್ಲಿ ತೇಲಾಡುತ್ತಿದ್ದ ನಾನು ಒಮ್ಮೆಲ್ಲೇ ದಿಗ್ಭ್ರಾಂತಿಯಿಂದ ಧರೆಗಿಳಿದು ಹೋಗಿದ್ದೆ...
ಇಂತಹ ಕ್ಯಾಲ್ಕ್ಯುಲೇಶನ್ನಿನ ಚಂದ್ರಕಾಂತ ಮಾಸ್ತರ್ರು ಅಡ್ಕಳ್ಳಿ ಶಾಲೆಗೆ ಹೊಸದಾಗಿ ಬಂದಾಗ ನಾನು ನಾಲ್ಕನೇ ಕ್ಲಾಸಿನಲ್ಲಿದ್ದೆ. ಹೊಸ ಅಪಾಯಿಂಟ್ ಮೆಂಟ್ ಆದ ಕಾರಣ ನೋಡಲು ಯಂಗಾಗಿದ್ದ ಚಂದ್ರಕಾಂತ ಮಾಸ್ತರ್ರು ಹೊಸಬೆಳಕಿನಂತೆ ಕಾಣುತ್ತಿದ್ದದ್ದಂತೂ ಸುಳ್ಳಲ್ಲ.
ಚಂದ್ರಕಾಂತ ಮಾಸ್ತರ್ರು ನಾನು ಓದುತ್ತಿದ್ದ ಶಾಲೆಗೆ ಬರುವ ಮುನ್ನ ಅನೇಕ ಮಾಸ್ತರ್ರು ಕಲಿಸಿ ಹೋಗಿದ್ದರು. ಬಿನ್ನೇತಿ ಹಾಗೂ ವನ್ನೇತಿಯಲ್ಲಿ ಕಲಿಸಿದ್ದ ಸತೀಶ ಮಾಸ್ತರ್ರು, ಅವರು ತಮ್ಮ ನೆನಪಿಗಾಗಿ ಎಲ್ಲಾ ಮಕ್ಕಳಿಗೆ ಕೊಟ್ಟ ಚೂಪ ಮುಕಳಿ ಲೋಟ ಎಲ್ಲವೂ ಇನ್ನೂ ನೆನಪಿದೆ. ಅದಾದ ನಂತರ ಜಿ. ಎಸ್. ಭಟ್ಟರು ಬಂದವರೇ ನಮ್ಮಲ್ಲಿ ಭೀತಿಯನ್ನು ಹುಟ್ಟು ಹಾಕಿದ್ದರು. ದಿನಕ್ಕೆ ಕನಿಷ್ಟವೆಂದರೂ 10-12 ಗಾಳಿ ಶೆಳಕೆಯನ್ನು ಚಪ್ಪುಗರೆಯುತ್ತಿದ್ದ ಜಿ. ಎಸ್. ಭಟ್ಟರು ನನ್ನಂತಹ ಹುಡುಗರಿಗಂತೂ ಹುಲಿಯೇ ಹೌದು. ಆದರೆ ನಾನು ಜಿ. ಎಸ್. ಭಟ್ಟರಿಂದ ಹೊಡೆತ ತಿಂದಿದ್ದು ಕಮ್ಮಿಯೇ ಬಿಡಿ.. ನನ್ನ ಸೀನಿಯರ್ ಹುಡುಗನೊಬ್ಬನಿದ್ದ ಗಪ್ಪತಿ. ಜಿ.ಎಸ್. ಭಟ್ಟರಿಂದ ಆತನಿಗೆ ದಿನಾ ಬೋನಸ್ ಹೊಡೆತಗಳು ಕಾಯ್ದಿರಿಸಲ್ಪಟ್ಟಿದ್ದವು. ದಿನಾ ಶಾಲೆ ಮುಗಿಸಿ ಬಂದ ನಂತರ ಕಾಲು, ಕೈ, ಬೆನ್ನಮೇಲೆಲ್ಲಾ ಕೆಂಪಡರಿ ರಕ್ತಗಟ್ಟಿದ್ದ ಬಾಸುಂಡೆಗಳನ್ನು ತೋರಿಸಿದಾಗ ಅದನ್ನು ನೆನೆಸಿಕೊಂಡೇ ನನ್ನ ಕಾಲು, ತೊಡೆಗಳು ಪಥರಗುಡುತ್ತಿದ್ದವು. ಇಂತಹ ಜಿ. ಎಸ್. ಭಟ್ಟರು ಇದ್ದಕ್ಕಿದ್ದಂತೆ ರಸ್ತೆ ಅಪಘಾತದಲ್ಲಿ ಮೃತಪಟ್ಟಾಗ ಅವರ ಕುರಿತು ಅನೇಕ ಗಾಳಿ ಸುದ್ದಿಗಳು ನಮ್ಮ ಶಾಲೆಯ ಸುತ್ತಮುತ್ತ ಹಾರಿಬಂದು ಕಿವಿಯ ಮೇಲೆ ಬಿದ್ದು ಹೋಗಿದ್ದವು. ಅದಕ್ಕಿಂತ ಹೆಚ್ಚಾಗಿ ನಮ್ಮ ನಿಟ್ಟುಸಿರಿನ ಗಾಳಿಯ ಬಲವೇ ಜಾಸ್ತಿಯಾಗಿ ಗಾಳಿಮಾತಿನ ಬಲವನ್ನು ದೂರಕ್ಕೆ ಅಟ್ಟಿತ್ತು.
ಇಂತಹ ಜಿ. ಎಸ್. ಭಟ್ಟರು ದುರಂತ ಅಂತ್ಯವಾದ ಒಂದು ವರ್ಷದ ತರುವಾಯ ಬಂದವರೇ ಚಂದ್ರಕಾಂತ ಮಾಸ್ತರ್ರು. ಅವರು ಶಾಲೆಗೆ ಬರುವಾಗ ಆಗಲೇ ತಾರಕ್ಕೋರು, ಗಂಗಕ್ಕೋರು, ಗಡಕರ್ ಮಾಸ್ತರ್ರು ಕಲಿಸುತ್ತಿದ್ದರು. ಇವರ ಪೈಕಿ ಗಡಕರ್ ಮಾಸ್ತರ್ರು ಹೆಡ್ಮಾಸ್ತರ್ರಾಗಿದ್ದರೆ ಉಳಿದವರು ಸಹಶಿಕ್ಷಕರಾಗಿದ್ದರು. ಇವರ ನಡುವೆಯೇ ಕುಳ್ಳೀಶ್ವರ ನಾಯ್ಕ ಮಾಸ್ತರ್ರು, ರಮೇಶ ನಾಯ್ಕರು, ಹರೀಶ ಮಾಸ್ತರ್ರೂ ಕಲಿಸಿದ್ದು ನೆನಪಿದೆ.
ಯುವಕ ಚಂದ್ರಕಾಂತ ಮಾಸ್ತರ್ರು ಬಂದ ಹೊಸತರಲ್ಲಿ ಬಹಳ ಮೃದುವಂತೆ ಕಂಡರು. ಎಲ್ಲ ಮಕ್ಕಳನ್ನೂ ಮಾತನಾಡಿಸಿದಾಗ ನಮಗೆ ಹೊಸ ಹುರುಪು.. ಅಷ್ಟೇ ಅಲ್ಲದೇ ನಾವು ಕ್ರಿಕೆಟ್ಟಾಡಲು ಹೋದಾಗ ತಾವೂ ಬಂದು ಕ್ರಿಕೆಟ್ ಆಟಕ್ಕೆ ನಿಂತಾಗ ನಮಗೆ ಅಪಾರ ಖುಷಿಯಾಗುತ್ತಿತ್ತು. ಆದರೆ ಎಷ್ಟೇ ಸಾರಿ ನಾವು ಅವರನ್ನು ಔಟ್ ಮಾಡಿದಾಗಲೂ ನಾಟೌಟ್ ಎಂದು ಹೇಳಿ ಮತ್ತಷ್ಟು ಬಾಲ್ ಮಾಡುವಂತೆ ಹೇಳಿದಾಗ ಮಾತ್ರ ಮನಸ್ಸಲ್ಲಿ ಹಿಡಿಶಾಪ.
ಹೊಸ ಮಾಸ್ತರ್ರು ಎಂಬ ಕಾರಣಕ್ಕೆ ಸುತ್ತ ಮುತ್ತಲ ಊರುಗಳಲ್ಲಿ  ಅವರ ಕಡೆಗೆ ಸಾಪ್ಟ್ ಕಾರ್ನರ್ ಕೂಡ ಜಾಸ್ತಿಯಿತ್ತು. ಹೊಸ ಮಾಸ್ತರ್ರು, ಬ್ಯಾಚುಲರ್ರಂತೆ ಎಂಬುದೂ ಆಗಿನ ಕಾಲಕ್ಕೆ ದೊಡ್ಡ ಸುದ್ದಿ.
ಅವರು ಬಂದವರೇ ನಮಗೆಲ್ಲ ಮೊಟ್ಟಮೊದಲು ಮಾಡಿದ ಪಾಠವೇ ಬೆಳಕಿನ ಕುರಿತಾದದ್ದು.. ಆದ್ದರಿಂದಲೇ ಅವರಿಗೆ ಚಂದ್ರಕಾಂತನ ಬೆಳಕು ಎಂಬ ಅಡ್ಡ ಹೆ ಸರು ಅದೆಲ್ಲಿಂದಲೋ ಹುಟ್ಟಿಕೊಂಡಿತ್ತು.
`ಸುಬ್ರಾಹ ಹೆಗಡೇರೆ.. ಇವರು ನಮ್ಮ ಶಾಲೆಯ ಹೊಸ ಮಾಸ್ತರ್ರು.. ಇವರಿಗೆ ಮದ್ಯಾಹ್ನದ ಊಟಕ್ಕೆ ವ್ಯವಸ್ಥೆಯಾಗಬೇಕಿತ್ತಲ್ಲ..' ಎಂದು ಗಡಕರ್ ಮಾಸ್ತರ್ರು ಹೇಳಿದ ತಕ್ಷಣ ಅಪ್ಪಯ್ಯ `ಥೋ.. ಮಾಸ್ತರ್ರೇ.. ಅದಕ್ಕೆಂತಾ ಕೇಳ್ತಿ.. ನಮ್ಮನೆಗೆ ಬರ್ಲಿ.. ಮದ್ಯಾಹ್ನದ ಒಂದು ಹೊತ್ತಿನ ಊಟ ಸೈಯಲ್ರಾ.. ಖಂಡಿತ ಯಮ್ಮನೆಲಿ ವ್ಯವಸ್ಥೆ ಮಾಡ್ತ್ಯ.. ಆದ್ರೆ ಶಾಲೆಯಿಂದ ಯಮ್ಮನೆ 2.5 ಕಿಲೋಮೀಟರ್ ಆಗ್ತಲ್ರಾ.. ಅದು ತೊಂದ್ರಿಲ್ಲೆ ಹೇಳಾದ್ರೆ ಹೇಳಿ..' ಎಂದಾಗ ಚಂದ್ರಕಾಂತ ಮಾಸ್ತರ್ರು ದೂರಾದರೆ ಏನು ಮದ್ಯಾಹ್ನದ ಊಟವಾದರೆ ಸಾಕು ಎಂದು ಒಪ್ಪಿಕೊಂಡಿದ್ದರು. ಅಲ್ಲಿಂದ ಸರಿಸುಮಾರು 2 ವರ್ಷಗಳ ಪರ್ಯಂತ ನಮ್ಮ ಮನೆಯಲ್ಲಿ ಮಧ್ಯಾಹ್ನದ ಸಂದರ್ಭದಲ್ಲಿ ನಮ್ಮ ಕುಟುಂಬದ ಸದಸ್ಯರಾಗಿದ್ದರು..
ಹೀಗಿದ್ದ ಚಂದ್ರಕಾಂತ ಮಾಸ್ತರ್ರಿಗೆ ನನ್ನ ಮೇಲೆ ಸಾಪ್ಟ್ ಕಾರ್ನರ್ ಇರಲೇಬೇಕಿತ್ತು.. ಆದರೆ ಅದ್ಯಾಕೆ ನನ್ನ ಮೇಲೆ ವಿಪರೀತ ಸಿಟ್ಟಿತ್ತೋ ಆಗ ಗೊತ್ತೆ ಆಗಿರಲಿಲ್ಲ.. ಕಾರಣವಿಲ್ಲದೇ ಹೊಡೆಯುವುದು, ಶಿಕ್ಷೆ ಕೊಡುವುದು, ಮಾರ್ಕುಗಳನ್ನು ಕಟ್ ಮಾಡುವುದು ಅವರಿಂದ ನಡೆದಿತ್ತು.. ಇಂತಹ ನಡೆಗಳಿಂದಾಗಿ ನಾನು ಅವರನ್ನು ಅನೇಕ ಸಾರಿ ಶಪಿಸಿದ್ದೆ.. ನನ್ನ ಶಾಪ ಅವರಿಗೆ ಯಾವತ್ತೂ ತಾಗಿರಲೇ ಇಲ್ಲ.. ನಾನು ಶಾಪ ಕೊಟ್ಟರೆ ಯಾಕೆ ತಾಗೋದಿಲ್ಲ ಎಂದು ಅನೇಕ ಸಾರಿ ಆಲೋಚಿಸಿದ್ದೆ.. ಉತ್ತರ ಸಿಗದೇ ಹತಾಶೆಯನ್ನೂ ಹೊಂದಿದ್ದೆ..
ಹೀಗಿರುವ ಚಂದ್ರಕಾಂತ ಮಾಸ್ತರ್ರು ತಾವು ಮಾತನಾಡುವಾಗ ಒಂದು ರೀತಿಯ ಕೊಸ ಕೊಸ ಅನ್ನುವ ಶಬ್ದವನ್ನು ಹೊರಡಿಸುತ್ತಿದ್ದರು..  ಅವರ ಮೂಗಿನಲ್ಲಿ ಅದೇನು ಸಮಸ್ಯೆಯಿತ್ತೋ.. ಒಟ್ಟಿನಲ್ಲಿ ಪ್ರಯತ್ನ ಪೂರ್ವಕವಾಗಿಯೋ ಅಥವಾ ಅಪ್ರಯತ್ನದಿಂದಲೋ ಅವರ ಮೂಗಿನಿಂದ ಕೊಸ ಕೊಸ ಎಂಬ ಶಬ್ದ ಬರುತ್ತಿತ್ತು... ಅದಕ್ಕಾಗಿಯೆ ಅವರು ಭಾರಿ ಬೆಲೆ ತೆತ್ತಿದ್ದು ಇತಿಹಾಸ.. ಕೊಸ ಕೊಸ ಚಂದ್ರಕಾಂತ ಎಂದೇ ನಮ್ಮ ಸುತ್ತಮುತ್ತಲ ಬಳಗದಲ್ಲಿ ಹೆಸರು ಗಳಿಸಿಕೊಳ್ಳುವಷ್ಟು ಪರಿಣಾಮವನ್ನು ಉಂಟು ಮಾಡಿತ್ತು..
**
ಕಮಲಿಯ ಬಾಯಿಗೆ ಬಲಿಯಾಗದವರು ಇಲ್ಲವೇ ಇಲ್ಲ ಎಂದು ಮೊದಲೇ ಹೇಳಿದ್ದೆನಲ್ಲ.. ಹೌದು.. ಆಕೆಯ ಬಾಯಿ ಬೊಂಬಾಯಿಯೂ ಹೌದು.. ಜೊತೆಗೆ ಆಕೆ ಸುದ್ದಿಯನ್ನು ಹಬ್ಬಿಸುವವಳೂ ಹೌದು.. ಆದ್ದರಿಂದಲೇ ನಮ್ಮ ಸುತ್ತಮುತ್ತ ಯಾರಾದರೂ ದೊಡ್ಡದಾಗಿ ಕೂಗಿದರೆ `ಎಂತಾ.. ಕಮಲಿಯ ಬಾಯಿ ಮಾಡ್ಕಂಡು ಕೂಗ್ತೆ..' ಎಂದು ಕೇಳುವ ಮಾತು ರೂಢಿಯಾಗಿದೆ.. ಇನ್ನೂ ಹಲವರು ಬೊಂಬಾಯ್ ಕಮಲಿ ಎಂದೂ ಕರೆಯುತ್ತಾರೆ..
ನಾನೂ ಬಾಲ್ಯದಲ್ಲಿ ಕಮಲಿಯ ಬಾಯಿಗೆ ಬಿದ್ದಿದ್ದೆ... ನಮ್ಮ ಬಾಲ್ಯದ ಕಿಲಾಡಿತನಗಳು ಸಾಕಷ್ಟು ಸುಣ್ಣ ಬಣ್ಣ ಕಂಡಿದ್ದರೆ ಅದಕ್ಕೆ ಕಮಲಿಯ ಕೊಡುಗೆ ಸಾಕಷ್ಟಿದೆ.. ಬಹುಶಃ ನನ್ನ ಹರೆಯ ಅಥವಾ post-ಹರೆಯದಲ್ಲಿ ಆಕೆಯ ಬಾಯಿಗೆ ಬೀಳದಿದ್ದುದು ನನ್ನ ಪುಣ್ಯವೇ ಇರಬೇಕು.. ಇದಕ್ಕೆ ಕಾರಣ ಹುಡುಕಿದ್ದೆ.. ಆ-ಈ ಸಂದರ್ಭಗಳಲ್ಲಿ ಆಕೆಯ ಬಾಯಿಗೆ ಬೀಳಲು ಹಲವಾರು ಸಂಗತಿಗಳಿದ್ದವು.. ಆದ್ದರಿಂದ ನಾನು ಬಚಾವಾಗಿದ್ದೆ.. ಇಲ್ಲವಾದರೆ ನನ್ನ ಕುರಿತು ಇನ್ನೂ ಅನೇಕ ಗಾಸಿಪ್ಪುಗಳು ಹಬ್ಬಬಹುದಾಗಿದ್ದವು.. ಅದಿರ್ಲಿ ಬಿಡಿ..
ಚಂದ್ರಕಾಂತ ತನ್ನ ಬೆಳಕನ್ನು ಬೀರುತ್ತಾ ಶಾಲೆಯಿಂದ ನಡೆದು ನಮ್ಮ ಮನೆಯ ಕಡೆ ಬರುತ್ತಿರುವಾಗ ಒಮ್ಮೆ ದಾರಿಮಧ್ಯ ಕಮಲಿ ಸಿಕ್ಕಿದಳು.. ಏರು ಜವ್ವನ ನೋಡಿ.. ತೆಗೆದ ಮಾತಿಗೆ `ಏನಜ್ಜಿ.. ಅರಾಮಾ.. ಈ ಬಿಸಿಲಲ್ಲಿ ಎತ್ತ ಕಡೆ..?' ಎಂದು ಕೇಳಿದ ಸಂದರ್ಭದಲ್ಲಿ ನಾಲ್ಕೈದು ಸಾರಿ ಮೂಗಿನಿಂದ ಕೊಸ ಕೊಸ ಸದ್ದು ಬಂದಿತ್ತು..
ಅದನ್ನು ಕೇಳಿದ ಬೊಂಬಾಯ್ ಕಮಲಿ `ತಮಾ.. ಆ ಇನ್ನೂ ಅಜ್ಜಿ ಆಜ್ನಿಲ್ಯಾ.. ಯಂಗೆ ವಯಸ್ಸೇ ಆಜಿಲ್ಲೆ.. ಯನ್ನ ಈಗ್ಲೆ ಅಜ್ಜಿ ಮಾಡ್ತಾ ಇದ್ದೆ.. ಸೋಜಿದ್ಯನಾ... ಅದೆಂತಕ್ಕೆ ನೀ ಮಾತಾಡಕಿರೆ ಹಂಗೆ ಕೊಸ ಕೊಸ ಗುಡ್ತೆ.. ಎಂತಾ ರೋಗ್ವಾ.? ಬೆಳ್ಳೇಕೇರಿ ಡಾಕ್ಟರ್ ಹತ್ರಾನಾದ್ರೂ ತೋರಿಶ್ಗ್ಯಂಡ್ ಬರಕಾಗಿತ್ತಾ..' ಎಂದು ಕೂಗಾಡಲು ಹಿಡಿದಳು..
ಯಾಕಾದ್ರೂ ಮಾತನಾಡಿದೆನೋ ಅನ್ನುವ ಪರಿಸ್ಥಿತಿ ಚಂದ್ರಕಾಂತ ಮಾಸ್ತರ್ರಿಗೆ.. ಅವರ ಜೊತೆಯಲ್ಲಿ ನಡೆದು ಬರುತ್ತಿದ್ದ ನಾನೂ ಇದಕ್ಕೆ ಪ್ರತಿಯಾಗಿ `ಕಿಸಕ್ಕನೆ..' ನಕ್ಕಿದ್ದೆ.. ಬಹುಶಃ ಇದೇ ಕಾರಣವೇ ನನ್ನ ವಿರುದ್ಧ ಸಿಟ್ಟಿಗೆ ಕಾರಣ ಇರಬಹುದೇನೋ..
ಅದಾಗಿ ಒಂದೊಪ್ಪತ್ತು ಸರಿಯಾಘಿ ಕಳೆದಿರಲಿಲ್ಲ.. ನಮ್ಮೂರು ಹಾಗೂ ಸುತ್ತಮುತ್ತಲೆಲ್ಲ ಚಂದ್ರಕಾಂತಂಗೆ ಕೊಸ ಕೊಸ ರೋಗನಡಾ.. ಎನ್ನುವ ಸುದ್ದಿ ಸದ್ದಿಲ್ಲದೇ ಹಬ್ಬಿತ್ತು.. ಸುದ್ದಿಮೂಲ ಬೊಂಬಾಯ್ ಕಮಲಿ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲವಲ್ಲ..
ಪಾ..ಪ ಬ್ರಹ್ಮಚಾರಿ ಮಾಸ್ತರ್ರಿಗೆ ಹಿಂಗಾಗಕಾಗಿತ್ತಿಲ್ಲೆ.. ಎನ್ನುವ ಸಂತಾಪಸೂಚಕ ಮಾತುಗಳೂ ಕೆಲವರ ಬಾಯಿಂದ ಉದುರಿದ್ದು ಪರಿಸ್ಥಿತಿಯನ್ನು ಇನ್ನಷ್ಟು ಗಂಭೀರಕ್ಕೆ ತಂದಿತು..ಹೋದಲ್ಲಿ ಬಂದಲ್ಲಿ ಇದೇ ಸುದ್ದಿ.. ಯಾರೂ ಬಾಯಿಬಿಟ್ಟು ಚಂದ್ರಕಾಂತ ಮಾಸ್ತರ್ರ ಬಳಿ ಇದನ್ನು ಹೇಳದಿದ್ದರೂ ಬಾಡಿ ಲ್ಯಾಂಗ್ವೇಜಿನ ಮೂಲಕ ಅರ್ಥವಾಗುತ್ತಿತ್ತು.. ಕೊನೆಗೊಮ್ಮೆ ನನ್ನ ತಂಗಿ ಮಾತಿನ ಭರದಲ್ಲಿ ಚಂದ್ರಕಾಂತ ಮಾಸ್ತರ್ರ ಬಳಿ ಈ ವಿಷಯ ಕೇಳಿದಾಗ ಅವರ ಮುಖ ಹುಳ್ಳಗಾಗಿತ್ತು..
***

ಕಮಲಿಯ ಬಾಯಿಂದ ಹರಿಬಿದ್ದ ಕಥೆಯನ್ನು ಚಂದ್ರಕಾಂತ ಮಾಸ್ತರ್ರು ಹಲಕೆಲವು ದಿನ ಅದ್ಹೇಗೋ ತಡೆದುಕೊಂಡರು.  ಗಾಸಿಪ್ಪಿನ ಸುದ್ದಿ ಕೇಳುವುದು ಹೆಚ್ಚಾದಂತೆಲ್ಲ ನಮಗೆ ಬೀಳುವ ಹೊಡೆತದ ಪ್ರಮಾನವೂ ಜಾಸ್ತಿಯಾಗುತ್ತಿತ್ತು. ನನ್ನ ಜೊತೆಗೆ ಕಲಿಯುತ್ತಿದ್ದ ಅನೇಕ ಸಹಪಾಠಿಗಳು ಚಂದ್ರಕಾಂತ ಮಾಸ್ತರ್ರು ಸೊಕಾ ಸುಮ್ಮನೆ ಹೊಡೆಯುತ್ತಾರೆ ಎನ್ನುವುದನ್ನು ಕಂಪ್ಲೇಂಟ್ ರೂಪದಲ್ಲಿ ಮನೆಯಲ್ಲಿ ಹೇಳುವವರೆಗೂ ಇದು ಮುಂದುವರಿಯಿತು.
ಈ ನಡುವೆ ನಮ್ಮ ಮನೆಯಲ್ಲಿ ಹಿಸೆ ಪಂಚಾಯತಿಗೆ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತ್ತು.. ನನ್ನ ಅಪ್ಪ ಒಂದು ಪಕ್ಷದವನಾಗಿದ್ದರೆ ಅಪ್ಪನ ತಮ್ಮಂದಿರೆಲ್ಲ ಇನ್ನೊಂದು ಕಡೆಗೆ. ಊಟಕ್ಕೆ ಬರುತ್ತಿದ್ದ ಚಂದ್ರಕಾಂತ ಮಾಸ್ತರರ ಬಳಿ ನನ್ನ ಚಿಕ್ಕಪ್ಪಂದಿರು ನನ್ನ ಬಗ್ಗೆ ಇಲ್ಲ ಸಲ್ಲದ್ದನ್ನು ಹೇಳಿ ಹಚ್ಚಿಕೊಟ್ಟಾಗ ನನಗೆ ಬೀಳುತ್ತಿದ್ದ ಹೊಡೆತದ ಸಂಖ್ಯೆ ಹೆಚ್ಚಾಗುತ್ತಲಿತ್ತು.. ನಾನು ಹೈರಾಣಾಗುತ್ತಿದ್ದೆ..
***

ಚಂದ್ರಕಾಂತ ಮಾಸ್ತರರ ಪಾಲಿಗೆ ಕಬ್ಬಿಣದ ಕಡಲೆಯಂತಾಗಿದ್ದ ಬೊಂಬಾಯ್ ಕಮಲಿಯ ಬಾಯಿ ನನಗಂತೂ ಬಹಳ ಸಂತಸವನ್ನು ತಂದಿತ್ತು.. ಬೊಂಬಾಯ್ ಕಮಲಿಯ ಬೊಂಬಾಯಿಯ ಎಫೆಕ್ಟು ನನ್ನ ತೊಂದರೆಯನ್ನು ತಪ್ಪಿಸುತ್ತಿತ್ತು.. ನಾಲ್ಕಾರು ತಿಂಗಳು ಕಳೆಯುವಷ್ಟರಲ್ಲಿ ಚಂದ್ರಕಾಂತ ಮಾಸ್ತರರ ಬೆಳಕು ಕಳೆದು ಬಸವಳಿದು ಹೋಗಿದ್ದರು.
ಬೊಂಬಾಯ್ ಕಾಟವನ್ನು ಹೇಗಾದರೂ ತಪ್ಪಿಸಿಕೊಂಡಿದ್ದರೆ ಸಾಕು ಎನ್ನುವಷ್ಟಾಗಿತ್ತು.. ಮಾಸ್ತರು ಎಲ್ಲೇ ಹೋದರೂ ಉಭಯಕುಶಲೋಪರಿ ಸಾಂಪ್ರತಕ್ಕಿಂತ ಹೆಚ್ಚಾಗಿ ಅವರ ಕೊಸ ಕೊಸ ಮಾತಿನ ಬಗ್ಗೆಯೇ ಚರ್ಚೆಯಾಗತೊಡಗಿದಾಗ ಮಾಸ್ತರರ ಮನದೊಳಗಿದ್ದ ಅಸಮಧಾನದ ಮೂಟೆ ಭುಗಿಲೆದ್ದು ರೇಗಾಡುತ್ತಿದ್ದರು. ಆದರೂ ಜನರು ಬಿಡಬೇಕಲ್ಲ..

***

ಶಾಲೆಗೆ ಹೆಡ್ಮಾಸ್ತರ್ ಆಗಬೇಕು ಎಂಬುದು ಅವರ ಕನಸಾಗಿತ್ತು. ಆದರೆ ಅವರ ಕನಸಿಗೆ ಅಡ್ಡಗಾಲಾಗಿದ್ದು ಬೊಂಬಾಯ್ ಕಮಲಿ ಹಾಗೂ ಆಕೆಯ ಬೊಂಬಾಯ್ ಮಾತುಗಳು.. ಗಡಕರ್ ಮಾಸ್ತರ್ರು ಬೇರೆ ಶಾಲೆಗೆ ವರ್ಗವಾಗಿ ಹೋದ ನಂತರ ಆ ಸ್ಥಾನಗೆ ತನಗೇ ಸಿಗುತ್ತದೆ ಎಂದು ನಂಬಿಕೊಂಡಿದ್ದರು ಚಂದ್ರಕಾಂತ ಮಾಸ್ತರ್ರು. ಆದರೆ ಅದು ಈಡೇರಲೇ ಇಲ್ಲ. ಆಗ ಶಾಲೆಯಲ್ಲಿ ಸೀನಿಯರ್ ಟೀಚರ್ ಹಾಗೂ ವೃತ್ತಿಯಲ್ಲೂ ಸೀನಿಯರ್ ಆಗಿದ್ದ ತಾರಕ್ಕೋರು ಹೆಡ್ಮಿಸ್ ಆಗುವುದರೊಂದಿಗೆ ಚಂದ್ರಕಾಂತ ಮಾಸ್ತರ್ರ ಬೆಳಕು ಮತ್ತಷ್ಟು ಮಬ್ಬಾಗಿತ್ತು.. ಆದರೂ ತಾರಕ್ಕೋರು ರಜಾದ ಮೇಲಿದ್ದಾಗ ಪ್ರಭಾರಿ ಹೆಡ್ಮಾಸ್ತರ್ರಾಗಿ ಖುಷಿ ಪಟ್ಟು ಸಮಾಧಾನ ಮಾಡಿಕೊಳ್ಳುತ್ತಿದ್ದರು..
ಇಷ್ಟಾದರೂ ಬೊಂಬಾಯ್ ಕಮಲಿಯ ಬಾಯಿ ಅವರ ಪಾಲಿಗೆ ಕಪ್ಪು ಚುಕ್ಕೆಯಾಗಿಯೇ ಉಳಿದುಬಿಟ್ಟಿತು.

**
ಇಷ್ಟೆಲ್ಲ ಹೇಳಿ ಕ್ಲೈಮ್ಯಾಕ್ಸ್ ಹೇಳದಿದ್ದರೆ ಸಿನೇಮಾ ಖುಷಿ ಕೊಡೋದಿಲ್ಲ ನೋಡಿ.. ಬೊಂಬಾಯ್ ಕಮಲಿಯ ಮಾತು ಮತ್ತೂ ಜೋರಾದಾಗ ಹೆದರಿದ ಚಂದ್ರಕಾಂತ ಮಾಸ್ತರ್ರು ಕೊನೆಗೊಮ್ಮೆ ಟ್ರಾನ್ಸ್ ಫರ್ ಮಾಡಿಸಿಕೊಂಡು ಬೇರೆ ಶಾಲೆಗೆ ಹೋಗುವುದರೊಂದಿಗೆ ಶುಭಂ ಹೇಳಿಬಿಡುತ್ತೇನೆ..
ಅಲ್ಲಿಗೆ ನಮ್ಮ ಪರಿತಾಪವೂ ಕಳೆದಿತ್ತು.. ನನ್ನ ಪ್ರೈಮರಿ ಶಾಲಾ ಜೀವನವೂ ಮುಗಿದಿತ್ತು.. ಚಂದ್ರಕಾಂತ ಮಾಸ್ತರ್ರು ಹೊಸ ಶಾಲೆಯಲ್ಲಿ ಹೆಡ್ಮಾಸ್ತರ್ರಾದರಾ ಎಂಬುದು ಇಂದೂ ಗೊತ್ತಾಗಿಲ್ಲ ನೋಡಿ..

2 comments:

  1. ಹಾ ಹಾ.. ಕೊಸ ಕೊಸ ಮಾಸ್ತರರ ಕಿರಿ ಕಿರಿ ಕಥೆ ಹಾಸ್ಯಮಯವಾಗಿ ಮೂಡಿಬಂದಿದೆ.. ಅಭಿನಂದನೆಗಳು :)

    ReplyDelete