Friday, November 29, 2013

ಚದುರಂಗದ ಕುದುರೆಯ ಬೆನ್ನೇರಿ -ಭಾಗ 7

ಬಾಗೇವಾಡಿಯ ಬಸವೇಶ್ವರ ಕಾಲೇಜು ಮೈದಾನದಿಂದ ಕಂಡಂತೆ
ಮದ್ಯಾಹ್ನದ ವೇಳೆಗೆ ಪ್ರಶಸ್ತಿ ಪ್ರದಾನ ಮಾಡುವ ಸಮಾರಂಭ ಶುರುವಾಯಿತು. ಗೋಗಟೆಯ ಕಾಲೇಜು ಪ್ರಥಮ, ನಮ್ಮ ಕಾಲೇಜು ದ್ವಿತೀಯ ಹಾಗೂ ಆರ್.ಪಿ.ಡಿ ಕಾಲೇಜು ತೃತೀಯ ಸ್ಥಾನವನ್ನು ಗಳಿಸಿಕೊಂಡಿತು. ನಮ್ಮ ಕಾಲೇಜಿನ ಹುಡುಗಿಯರ ತಂಡ ಮೊದಲನೇ ಸ್ಥಾನವನ್ನು ತಮ್ಮದಾಗಿಸಿಕೊಂಡು ಬೀಗಿತು.
ನಮ್ಮ ತಂಡದಿಂದ ಒಂದೇ ಒಂದು ಮ್ಯಾಚನ್ನೂ ಸೋಲದ ಕಿಟ್ಟು ಪ್ಲೇಯರ್ ಆಫ್ ದಿ ಟೂರ್ನಿಮೆಂಟ್ ಪ್ರಶಸ್ತಿ ಪಡೆದ. ಕೊನೆಗೆ ನಮ್ಮ ಎನ್. ಎಚ್. ಗೌಡರಿಗೆ ಸ್ವಲ್ಪ ಗಾಳಿ ಹೊಡೆದು ಕುಮಟಾದ ಬಾಳಿಗಾ ಕಾಲೇಜಿನ ನಮ್ಮ ಮಿತ್ರ ಕಿಟ್ಟುವಿಗೂ ಪ್ಲೇಯರ್ ಆಫ್ ದಿ ಟೂರ್ನಿಮೆಂಟ್ ಪ್ರಶಸ್ತಿ ಸಿಗುವಂತೆ ಮಾಡಿದೆವು. ಅಫ್ ಕೋರ್ಸ್ ಆತ ಕೂಡ ಒಂದೇ ಒಂದು ಮ್ಯಾಚನ್ನೂ ಸೋತಿರಲಿಲ್ಲ.. ಆದರೆ ಈ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆರ್.ಪಿ.ಡಿ. ಕಾಲೇಜಿನ ಹುಡುಗರು ಬರಲೇ ಇಲ್ಲ..!! ಬಹುಶಃ ಅವಮಾನ ಆಗಿರಬೇಕು ..!!
ಸಂಜೆ ಎಲ್ಲರೂ ಖುಷಿಯಲ್ಲಿದ್ದರು. ನವೀನ ಪಾವಸ್ಕರ ಫುಟಬಾಲ್ ಮ್ಯಾಚ್ ಆಡಲು ಹೋಗಿದ್ದ.. ಸ್ಥಳೀಯ ಕಾಲೇಜಿನ ಹಾಗೂ ನಮ್ಮಂತೆ ಬಾಗೇವಾಡಿಗೆ ಚಸ್ಸಾಡಲು ಬಂದಿದ್ದ ಇತರ ಕಾಲೇಜಿನ ಹುಡುಗರು ಆತನಿಗೆ ಜೊತೆಗಾರರಾಗಿ ಸಿಕ್ಕಿದ್ದರು. ಕಿಟ್ಟುವಂತೂ ಎಂದಿನಂತೆ ಹುಡುಗಿಯರ ಜೊತೆಗೆ ಮಾತಿಗಿಳಿದಿದ್ದ. ನನಗೆ ಹಾಗೂ ಆನಂದನಿಗೆ ಮಾಡಲು ಬೇರೇನೂ ಕೆಲಸ ಕಾಣಲಿಲ್ಲ.. ಕಾಲೇಜಿನ ಕಾರಿಡಾರಿನಲ್ಲಿ ಅಡ್ಡಾಡಿದೆವು.. ನನಗೆ ಮಾತಿನ ಹುಕಿಯಿದ್ದರೂ ಆನಂದ ಮೌನಿ.. ಆನಂದನಂತಹ ಮೂಕ ಹಕ್ಕಿಯ ಜೊತೆಗೆ ಕಾಲೇಜಿನ ಕಾರೀಡಾರಿನಲ್ಲಿ ಅಡ್ಡಾಡಿದರೆ ಮುಗಿದೇ ಹೋಯ್ತು.. ಮಾತಿಲ್ಲ.. ಕಥೆಯಿಲ್ಲ ಬರೀ ರೋಮಾಂಚನ..
ಹೀಗಿರಲು ಕಾರಿಡಾರಿನಲ್ಲಿ ನಮ್ಮ ನಾಗಭೂಷಣ ಗೌಡರು ಸಿಕ್ಕರು. ಅವರ ಜೊತೆಗೆ ಗೋಗಟೆ ಕಾಲೇಜಿನ ಮ್ಯಾನೇಜರ್ ಕಂ ಲೆಕ್ಚರ್ ಕಂ ಕೋಚ್ ಕಂ ಅಂಪಾಯರ್ರಾಗಿದ್ದವರೂ ಇದ್ದರು.. ಅವರವರಲ್ಲೇ ಉಭಯಕುಶಲೋಪರಿ ಸಾಂಪ್ರತವೂ ನಡೆದಿತ್ತು.. ಆ ಲೆಕ್ಚರ್ರೋ ನೋಡಲು ಕುಳ್ಳರು. ಪರವಾಗಿರಲಿಲ್ಲ.. ಒಂದು ಕಾಲು ಬಹಳ ಕುಂಟುತ್ತಿದ್ದರು. ಪರಿಣಾಮವಾಗಿ ಕೈಯಲ್ಲೊಂದು ವಾಕಿಂಗ್ ಸ್ಟಿಕ್ಕಿತ್ತು.. ನಾನು ಹಾಗೂ ಆನಂದ ಅವರ ಬಳಿ ಹೋದೆವು.. ಹಾಗೂ ಹೀಗೂ ಮಾತಿಗೆ ನಿಂತೆವು.. `ನೀವು ಬರೋಬರ್ ಆಡಿದ್ರೀ.. ಭೇಷ್ ಆಟಾನ್ರೀ..' ಎಂದು ನನ್ನನ್ನು ಹೊಗಳಿ ಅಟ್ಟಕ್ಕೇರಿಸಲು ಯತ್ನಿಸಿದರು ಅವರು.. ನಾನೂ ಸ್ವಲ್ಪ ಖುಷಿಗೊಂಡೆ ಅನ್ನಿ.. ಅದೇ ಸಮಯದಲ್ಲಿ ನನಗೇನನ್ನಿಸಿತೋ ಏನೋ ಇದ್ದಕ್ಕಿದ್ದಂತೆ ಅವರ ಬಳಿ `ಸರ್.. ಚಾಲೇಂಜಿಗೆ ಬರ್ತೀರಾ..? ನಿಮ್ಮ ಟೀಮಿನ 3ನೇ ಬೋರ್ಡ್ ಪ್ಲೇಯರನ್ನು ಸೋಲಿಸ್ತೀನಿ.. ಎರಡನೇ ಬೋರ್ಡ್ ಪ್ಲೇಯರ್ ವಿರುದ್ಧ ಮೋಸ ಮಾಡಿದ್ರಿ.. ಆಗ್ಲಿ.. ಮೂರನೇ ಬೋರ್ಡ್ ಪ್ಲೇಯರ್ ನಾ ಸೋಲಿಸ್ತೀನಿ.. ಆತ ರೇಟೆಡ್ ಪ್ಲೇಯರ್ರಂತೆ.. ಓ.ಕೆ.ನಾ..?' ಎಂದು ಬಿಟ್ಟೆ.. ಅವರು ಮಾತನಾಡಲಿಲ್ಲ.. ನಗುತ್ತಾ ನಿಂತರು..
ಬಹುಶಃ ನಾನು ಮಾಡಿದ ಬಹುದೊಡ್ಡ ತಪ್ಪು ಇದಾಗಿತ್ತು. ಹೀಗೆ ಚಾಲೆಂಜ್ ಮಾಡಬಾರದಿತ್ತು ಅಂತ ಈಗ ಅನ್ನಿಸ್ತಿದೆ.. ಹೀಗೆ ಚಾಲೆಂಜ್ ಮಾಡಿದ್ದಕ್ಕೋ ಏನೋ ಕೊನೆಯವರೆಗೂ ಮೂರನೇ ಬೋರ್ಡ್ ಆಟಗಾರ ಸಮೀರ್ ಘೋಟ್ನೆಯನ್ನು ನನ್ನ ವಿರುದ್ಧ ಆಡಲಿಕ್ಕೆ ಬರದಂತೆ ನೋಡಿಕೊಂಡುಬಿಟ್ಟರು ಅವರು! ಕೊನೆಗೆ ಮಾತು ಹೊರಳಿತು.. ನಮ್ಮ ಕಿಟ್ಟುವಿನ ಆಟವನ್ನು ಹೊಗಳುತ್ತ ನಿಂತೆವು..
ಇಳಿ ಸಂಜೆಯ ವೇಳೆಯಲ್ಲಿ ಮಾಡಲಿಕ್ಕೆ ಏನೂ ಕೆಲಸ ಕಾಣಲಿಲ್ಲ.. ನಾನು, ಕಿಟ್ಟು ಕಾಲೇಜಿನ ಆವರಣದಲ್ಲಿ ಅಡ್ಡಾಡಲು ಆರಂಭಿಸಿದ್ದೆವು. ನಮ್ಮ ಜೊತೆಗೆ ತೃಪ್ತಿಯೂ ಸೇರಿಕೊಂಡಳು.. ಮಾತಿನಮಲ್ಲಿ ತೃಪ್ತಿ ಹಾಗೂ ಮಾತಿನಮಲ್ಲ ಕಿಟ್ಟು.. ನಡುವೆ ನಾನು ಸಿಕ್ಕಿ ಮೌನಿಯಾಗಿಬಿಟ್ಟೆ.. ಇಬ್ಬರೂ ಸಿಕ್ಕಾಪಟ್ಟೆ ಮಾತುಗಾರರು.. ಡೈಲಾಗ್ ರಾಜ-ರಾಣಿಯರು. ಮಾತಾಡಿ ನಾನು ಮಳ್ಳಾಗುವುದಕ್ಕಿಂತ ಸುಮ್ಮನಿರುವುದೇ ಲೇಸೆಂದು ತಂಡಾದೆ.. ನಾವು ಅಡ್ಡಾಡುತ್ತ ಅಡ್ಡಾಡುತ್ತ ಕಾಲೇಜು ಹೊರಗೆ ಹಾದುಹೋಗಿದ್ದ ರಸ್ತೆಯಲ್ಲಿ ನಡೆಯತೊಡಗಿದೆವು.. ರಸ್ತೆಯ ಇಕ್ಕೆಲಗಳಲ್ಲಿ ದೈತ್ಯ ಹುಣಸೇ ಮರಗಳು.. ರಸ್ತೆಯನ್ನು ತಂಪು ಮಾಡಿದ್ದವು.. ಮರದ ತುಂಬ ಹುಣಸೆ ಹಣ್ಣುಗಳು, ನಮ್ಮ ಪ್ರೀತಿಯ ಹುಣಸೆ ಬೊಟ್ಟುಗಳು.. ನಾವು ಮೂವರಿಗೂ ಆಸೆಯ ಚೌಳುನೀರು.. ಮರಕ್ಕೆ ಅದೆಷ್ಟು ಅಡ್ಡಬಡ್ತಿಗೆ ಹೊಡೆದೆವೂ.. ನಮ್ಮ ಬಡ್ತಿಗೆ ಹುಸಿಹೋಗಲಿಲ್ಲ.. ಹಲವು ಹುಣಸೆಬೊಟ್ಟುಗಳು ಸಿಕ್ಕವು.. ಬಿದ್ದ ಹುಣಸೆಬೊಟ್ಟನ್ನು ಬಾಯಿಗಿಟ್ಟರೆ ಹುಳಿ ಹುಳಿಯಾಗಿ ಒಂದು ಕಣ್ಣು ನಮ್ಮರಿವಿಗಿಲ್ಲದಂತೆ ಮುಚ್ಚಿ ಹೋಗಿ.. ಆಹಾ.. ಕೆಲವು ಹಣ್ಣುಗಳೂ ಸಿಕ್ಕವು ಅನ್ನಿ..
ರಾತ್ರಿ ನಮ್ಮ ಪಾಳಯದಲ್ಲಿ ಯುದ್ಧ ಗೆದ್ದ ಸಂಭ್ರಮ.. ಖುಷಿಯೋ ಖುಷಿ.. ನಮ್ಮ ಕಾಲೇಜಿಗೆ ಕುಮಟಾದ ಬಾಳಿಗಾ ಕಾಲೇಜಿನ ಹುಡುಗರು ಬಂದಿದ್ದರು. ಮಾತು-ಕಥೆ.. ಹರಟೆ ನಡೆಯಿತು.. ಪಾವಸ್ಕರ ಮತ್ತೆ ಯಥಾ ಪ್ರಕಾರ ಅವರಿಗೆ ದುಡ್ಡುಕೊಡಲು ನೋಡಿದ. ಅದಕ್ಕವರು `ನಾವು ಪ್ರೆಂಡ್ ಷಿಪ್ ಗಾಗಿ ಬಿಟ್ಟುಕೊಟ್ವಿ.. ದುಡ್ಡಿಗಾಗಿ ಅಲ್ಲ.. ಎಲ್ಲಕ್ಕಿಂತ ಹೆಚ್ಚಾಗಿ ನಾವಂತೂ ಯಾವುದೇ ಬಹುಮಾನ ಪಡೆಯಲು ಸಾಧ್ಯವಿರಲಿಲ್ಲ.. ನೀವು ನಮ್ಮ ಉತ್ತರ ಕನ್ನಡದವರು.. ನೀವು 2nd ಬಂದರೆ ನಮಗೆ ಅದೇ ಖುಷಿ.. ಅದಕ್ಕಾಗಿ ಇಷ್ಟೂ ಮಾಡದಿದ್ದರೆ ಹೆಂಗೆ..?' ಎಂದರು. ನಾನು ನವೀನನನ್ನು ಗದರಿಸಿ ಸುಮ್ಮನಿರಿಸಿದೆ.
ಊಟ ಮುಗಿಸಿದ ನಂತರ ಮತ್ತೆ ನಮ್ಮ ಪ್ರಾಕ್ಟೀಸ್ ಮ್ಯಾಚುಗಳು ಆರಂಭವಾದವು.. ಬಹುಶಃ ಇಲ್ಲಿಗೆ ನಮ್ಮ ಬ್ಯಾಟರಿಗಳು ಫುಲ್ಲಾಗಿದ್ದವು.ಅದಕ್ಕಾಗಿಯೇ ಇವತ್ತು ನಾನು ಹಾಗೂ ಕಿಟ್ಟು ನವೀನ ಹಾಗೂ ಆನಂದರ ವಿರುದ್ಧ ಮ್ಯಾಚುಗಳ ಮೇಲೆ ಮ್ಯಾಚುಗಳು ಎಂಬಂತೆ ಗೆಲ್ಲಲಾರಂಭಿಸಿದೆವು.. ಇಷ್ಟುದಿನ ಸೋತಿದ್ದೇ ಸುಳ್ಳು ಎನ್ನುವಂತೆ ಗೆದ್ದೆವು... ಗೆದ್ದ ಅಬ್ಬರ ಹೇಗಿತ್ತೆಂದರೆ ಇಷ್ಟು ದಿನ ಚಾಲೆಂಜಿನಲ್ಲಿ ಕಳೆದುಕೊಂಡಿದ್ದ ಹಣವೆಲ್ಲ ಮರಳಿ ಬಂದಿತ್ತು.. ಯಾವತ್ತೂ ಕಾಮೆಂಟ್ ಮಾಡದ ಆನಂದ `ಅರೇರೇ..ನವೀನ ಇದೆಂತ ಮಾರಾಯ ಇವ್ರು ಹಿಂಗೆ ಗೆಲ್ತಿದ್ದಾರೆ.. ಇವತ್ತಿನ ಮ್ಯಾಚಿನ ಎಫೆಕ್ಟಾ..? ಸಿಕ್ಕಾಪಟ್ಟೆ ಆಯ್ತು ಮಾರಾಯಾ..' ಎಂದ... ನನಗೂ ಹೌದೆನೋ ಅನ್ನಿಸಿತು.. ಈ ದಿನ ಖುಷಿಯಲ್ಲೇ ಎಲ್ಲರೂ ಮಲಗಿದೆವು..

20-09-2007, ಗುರುವಾರ
ನಾವು ಚೆಸ್ ಪಂದ್ಯಾವಳಿಗಳನ್ನು ಆಡಿದ ಸ್ಥಳ
ಇವತ್ತಿನಿಂದ  ಯೂನಿವರ್ಸಿಟಿ ಬ್ಲೂ ಸೆಲೆಕ್ಷನ್ ಮ್ಯಾಚುಗಳು ಆರಂಭ. ಅಂದರೆ ಇಲ್ಲಿಯವರೆಗೆ ಟೀಂ ಮ್ಯಾಚುಗಳಿದ್ದವು.. ಇನ್ನುಮುಂದೆ ನಮಗೆ ನಾವೇ.. ಗೋಡೆಗೆ ಮಣ್ಣೇ.. ಎನ್ನುವಂತಾಗಿದ್ದವು.. ತಲಾ 8 ಮ್ಯಾಚುಗಳ ಸೀರೀಸ್.. ಅತ್ಯಂತ ಹೆಚ್ಚು ಗೆದ್ದ 6 ಜನ ಯೂನಿವರ್ಸಿಟಿ ಬ್ಲೂಗಳಾಗುತ್ತಿದ್ದರು. ಅಂದರೆ ಈ 6 ಜನ ನಮ್ಮ ಕರ್ನಾಟಕ ಯುನಿವರ್ಸಿಟಿಯನ್ನು ಪ್ರತಿನಿಧಿಸಿ ಆಡುತ್ತಿದ್ದರು. ಉಳಿದಂತೆ 3 ಜನರನ್ನು ಕಾಯ್ದಿರಿಸಿದ ಆಟಗಾರನಾಗಿ ಆಯ್ಕೆಮಾಡುತ್ತಿದ್ದರು.. ಉಳಿದ ಯುನಿವರ್ಸಿಟಿಗಳಲ್ಲಿ ಕಾಯ್ದಿರಿಸಿದ ಆಟಗಾರರನ್ನು ಯೂನಿವರ್ಸಿಟಿ ಮ್ಯಾಚಿಗೆ ಕಳಿಸಿದ್ದರೂ ನಮ್ಮ ಯುನಿವರ್ಸಿಟಿಯಲ್ಲಿ ದುಡ್ಡು ಉಳಿಸುವ ಘನ ಕಾರ್ಯ ಇರುವುದರಿಂದ 6 ಜನಕ್ಕಿಂತ ಹೆಚ್ಚಿಗೆ ಜನರನ್ನು ಕಳಿಸುವುದಿಲ್ಲ ಬಿಡಿ.. ಈ ಸಾರಿಯ ನಮ್ಮ ಯೂನಿವರ್ಸಿಟಿ ಪಂಡ್ಯಾವಳಿಗಳು ಕಾನ್ಪುರದಲ್ಲಿ ನಡೆಯಲಿದ್ದವು.. ಅಲ್ಲಿಗೆ ಹೋಗಲು ತಯಾರಾಗಬೇಕು.. ಅದಕ್ಕೆ ತಕ್ಕಂತೆ ಆಡಬೇಕು ಎಂದು ನಾನು ಚಿಂತಿಸಿ ಆಡಲು ಯತ್ನಿಸಿದೆ..
ಏನಾಗುತ್ತೋ ಎಂಬ ಟೆನ್ಶನ್ ನಿಂದಲೇ ಆಟಕ್ಕೆ ಬಂದೆವು. ನನಗೆ ಪ್ರಾರಂಭದಲ್ಲಿಯೇ ದಿಲೀಪ್ ಹೆಗಡೆ ಎಂಬ ಕುಮಟಾ ಕಾಲೇಜಿನ ಹುಡುಗನೊಬ್ಬ ಎದುರಾಳಿಯಾಗಿ ಬಂದ. 10 ನಿಮಿಷದೊಳಗೆ ಅಂದರೆ 15 step (13)ನೊಳಗೆ ಆತನನ್ನು ಸೋಲಿಸಿ ಅತ್ಯಮೂಲ್ಯ ಎನ್ನಿಸಿದ 1 ಪಾಯಿಂಟು ಗಳಿಸಿದೆ. ಇಲ್ಲಿ ನಮ್ಮ ಕಾಲೇಜಿನ ಇತರ ಆಟಗಾರರು ಯಾರ್ಯಾರು ಗೆದ್ದರೋ, ಯಾರ್ಯಾರು ಸೋತರೋ ಒಂದೂ ಗೊತ್ತಾಗಲಿಲ್ಲ. ಹುಡುಗಿಯರೂ ಬ್ಲೂ ಸೆಲೆಕ್ಷನ್ನಿಗೆ ಆಡುತ್ತಿದ್ದರು. ಅವರಲ್ಲಿಯೂ ಒಂದಿಬ್ಬರು ಗೆದ್ದರು.
ನಂತರ ನನ್ನ ವಿರುದ್ಧ ಆಟಕ್ಕೆ ಅದ್ಯಾರೋ ಒಬ್ಬ ಪುಣ್ಯಾತ್ಮ ಬಿದ್ದಿದ್ದ. ಹೆಸರು ಸರಿಯಾಗಿ ನೆನಪಾಗುತ್ತಿಲ್ಲ. ಆಟಕ್ಕೂಮೊದಲು ನನಗೆ ಅದೇನೋ ನಿರಾಸಕ್ತಿ.. ಆಲಸ್ಯ.. ಜಾಢ್ಯ.. ಒಲ್ಲದ ಮನಸ್ಸಿನಿಂದ ಆಡಿದೆ. ಆ ಪುಣ್ಯಾತ್ಮ ಆಡಿದ... ಆಡಿದ.. ಆಡಿದ.. ಆಡಿಯೇ ಆಡಿದ.. ಅಬಾಬಾಬಾಬಾ.. 2 ತಾಸು ಕೂರಿಸಿಬಿಟ್ಟ. ನನ್ನ ಜಾಢ್ಯವೆಲ್ಲ ಕಳಚಿಬೀಳುವಂತೆ ಆಡಿದ.. ಆಡಿದ ಸ್ಟೆಪ್ಪುಗಳನ್ನೇ ಹಿಂದೆ ಮುಂದೆ.. ತಲೆಸಿಡಿದು ಹೋಗುವಂತೆ ಆಡಿದ.. ನನ್ನ ಬಲ ಜಾಸ್ತಿ ಉಳಿಯುವ ಹಂತ ಬಂದರೂ ಆಡುತ್ತಲೇ ಇದ್ದ.. ಕೊನೆಗೆ `ಕ್ಲಾಕ್' ಇಟ್ಟರು. ಕ್ಲಾಕ್ ನಲ್ಲಿ ನಾನು ಗೆದ್ದೆ.. ಮತ್ತೊಂದು ಪಾಯಿಂಟು ನನಗೆ ಸಿಕ್ಕು ನನ್ನ ಗಳಿಕೆ 2ಕ್ಕೆ ಏರಿತು.

ರಾಜೇಂದ್ರ ಬಾಬೂ
ಇದು ನನ್ನ 3ನೇ ಮ್ಯಾಚು. ಈ ರಾಜೇಂದ್ರ ಬಾಬು ಕಳೆದ ವರ್ಷ ಯುನಿವರ್ಸಿಟಿ ಬ್ಲೂ ಆದ ವ್ಯಕ್ತಿ. ಕಳೆದ ವರ್ಷ ರೇಟೆಡ್ ಪ್ಲೇಯರ್ ಎಂಬ ಬಿರುದನ್ನೂ ಪಡೆದುಕೊಂಡು ಬಂದಿದ್ದ. ಹಾಗಾಗಿ ಈ ವರ್ಷವೂ ಅದೇ ಭಯದೊಂದಿಗೆ ಆಡಲು ಕುಳಿತೆ. ಮ್ಯಾಚು ನಿಧಾನವಾಗಿ ರಂಗೇರಿತು. ಇಬ್ಬರೂ ಸಮಾನವಾಗಿ ಆಡಿದೆವು. ಕೊನೆಗೆ ಸುಮಾರು 2 ಗಂಟೆಗಳು ಕಳೆದವು.. ನಾನು ಡ್ರಾ ಮಾಡಿಕೊಳ್ಳೋಣ ಎಂದೆ.. ಆತ ಅದಕ್ಕೆ ಒಪ್ಪಲಿಲ್ಲ. ಕೊನೆಗೆ ಮತ್ತರ್ಧ ತಾಸಿನ ನಂತರ ಆತನೇ ಡ್ರಾ ಕೇಳಿದ. ನಾನು ಒಪ್ಪಿಕೊಂಡೆ. ನನ್ನ ಪಾಯಿಂಟು ಇಲ್ಲಿಗೆ 2.5 ಆಯಿತು. ಮುಂದೆ ಯಾರು ಬೀಳ್ತಾರಪ್ಪಾ ಎನ್ನುವ ಕುತೂಹಲಭರಿತ ಭಯದೊಂದಿಗೆ ಮುಂದಿನ match ಗೆ ಅನುವಾದೆ.

ಸಚಿನ್ ಸುಲ್ತಾನ್ ಪುರೆ
ಗೋಗಟೇ ಕಾಲೇಜಿನ ಯಾವುದಾದರೂ ಒಬ್ಬಾತ ನನ್ನ ವಿರುದ್ಧ ಬಿದ್ದೇ ಬೀಳುತ್ತಾರೆ ಎನ್ನುವ ನನ್ನ ಊಹೆ ನಿಜವಾಯಿತು. ನನ್ನ ವಿರುದ್ಧ ಬಿದ್ದವರು ಪಾವಸೆ ಅಲ್ಲ. ಚಿಂಚೋಳಿಮಠನೂ ಅಲ್ಲ.. ನಾನು ಚಾಲೇಂಜ್ ಮಾಡಿದ್ದ ಸಮೀರ ಘೋಟ್ನೆಯೂ ಅಲ್ಲ.. ಬದಲಾಗಿ ಬಿದ್ದವನು ಸಚಿನ್ ಸುಲ್ತಾನ್ ಪುರೆ.. ಕಿಟ್ಟುವಿನ ವಿರುದ್ಧ ಸೋತಿದ್ದ 4th board player.. ಕಿಟ್ಟು ಇವನನ್ನು ಸೋಲಿಸಿದ್ದ ಕಾರಣ ನಾನು ಇವನನ್ನು ಸೋಲಿಸಬಹುದೇನೋ ಅಂದುಕೊಂಡೆ. ಚನ್ನಾಗಿಯೇ ಆಡಿದ. ಅವನೊಂದಿಗೆ ನಾನೂ ಅಷ್ಟೇ ಸರಿಸಮನಾಗಿ ಆಡಿದೆ. ಆಟ ಯಥಾಪ್ರಕಾರ ಡ್ರಾ ಕಡೆಗೆ ಸಾಗುತ್ತಿತ್ತು.
ಆದರೆ ಆಟದಲ್ಲಿ ಇದ್ದಕ್ಕಿದ್ದಂತೆ ಒಂದು ತಿರುವು ಬಂದುಬಿಟ್ಟಿತು. ಅಂತಿಂತ ತಿರುವಲ್ಲ ಅದು ಅಬ್ಬರದ ತಿರುವು.. touch and move ಅನ್ನುವ ನಿಯಮವಿರುವ ನಮ್ಮ ಆಟದಲ್ಲಿ ಆತ ಕುದುರೆಯೊಂದನ್ನು move ಮಾಡಿದ. ಥಟ್ಟನೆ ಇಟ್ಟ. ಇಟ್ಟ ತಕ್ಷಣ ಅದನ್ನು ವಾಪಾಸು ಇಟ್ಟ. ನಾನು ಹಳೆಯ ಸಿಟ್ಟನ್ನೆಲ್ಲ ನೆನಪು ಮಾಡಿಕೊಂಡು ಗಲಾಟೆ ತೆಗೆದೆ. ಆಗ ಆಗ ಆಗ ಆತ ` ಇದು ಕೈತಪ್ಪಿ ಬಿದ್ದು ಹೋಯಿತು.. ಹಾಗೆ.. ಹೀಗೆ ' ಎಂದ.. ನಾನು ಪಟ್ಟು ಬಿಡಲಿಲ್ಲ. ಹೀಗೆ ಪಟ್ಟು ಹಿಡಿಯಲು ಕಾರಣವೂ ಇತ್ತೆನ್ನಿ.. ಬೇರೆ ಯಾವುದೇ ಕಾಲೇಜಿನ ಹುಡುಗರು ಹೀಗೆ ತಪ್ಪು move ಮಾಡಿದರೆ ಅವರನ್ನು ಸೋತರು ಎಂದು ಪರಿಗಣಿಸಲಾಗುತ್ತಿತ್ತು. ಗೋಗಟೆ ಕಾಲೇಜಿನವರು ಇದೇ ತಂತ್ರ ಅನುಸರಿಸಿ ಅನೇಕರನ್ನು ಸೋಲಿಸಿಯೂ ಇದ್ದರು. ಅಲ್ಲದೇ ಅವರ ಕಾಲೇಜಿನ ಲೆಕ್ಚರ್ರೇ ನಿರ್ಣಾಯಕರು ನೋಡಿ. ಅದೇ ಕಾರಣಕ್ಕೆ ನಾನು ಪಟ್ಟು ಹಿಡಿದೆ.. ಅವರು ಏನು ತೀರ್ಪು ನೀಡುತ್ತಾರೋ ಅದನ್ನು ನೋಡಬೇಕಿತ್ತು. ಎಲ್ಲದರ ಜೊತೆಗೆ ನನಗೆ ಆ ಗೋಗಟೆ ಕಾಲೇಜಿನ ಹುಡುಗರ ವಿರುದ್ಧ ಸೇಡನ್ನು ತೀರಿಕೊಳ್ಳಬೇಕಿತ್ತು. ಅವಮಾನ ಮಾಡಬೇಕಿತ್ತು. ತಪ್ಪನ್ನು ನೀವೂ ಮಾಡ್ತೀರಿ ಕಣ್ರೋ.. ಎಂದು ಹೇಳಬೇಕಿತ್ತು. ಇದರ ಜೊತೆಗೆ ಉಳಿದ ಎಲ್ಲಾ ಕಾಲೇಜಿನ ಹುಡುಗರ ಒಲವು ನನ್ನ ಕಡೆಗಿತ್ತು. ನಾನೂ ತಿರುಗಿ ಬೀಳುತ್ತೇನೆ. ಅದು ಗೋಗಟೆ ಕಾಲೇಜಾದರೂ ಸೈ ಎಂದು ತೋರಿಸಿಕೊಡಬೇಕಿತ್ತು.
ಪಟ್ಟು ಗಟ್ಟಿ ಮಾಡಿದೆ. ಗೋಗಟೆ ಕಾಲೇಜಿನ ಉಳಿದ ಹುಡುಗರು ಆ ಪಾಪದ ಹುಡುಗನ ಸಪೋರ್ಟಿಗೆ ಬರಲೇ ಇಲ್ಲ..!! ಆದರೆ ನನಗೆ ಉಳಿದ ಎಲ್ಲಾ ಕಾಲೇಜುಗಳ ಹುಡುಗರೂ ಸಪೋರ್ಟಿಗೆ ನಿಂತುಬಿಟ್ಟಿದ್ದರು. ಕೊನೆಗೆ ನಿರ್ಣಾಯಕರಿಗೂ ಇದು ಪೇಚಿಗೆ ತಂದಿತಿರಬೇಕು. ನನಗೇ ಗೆಲುವನ್ನು ಘೋಷಿಸಿದರು. ನಾನು ಗೆದ್ದೆ.. ಆದರೆ ಈ ಗೆಲುವುದು ಖಂಡಿತ ನನಗೆ ಖುಷಿಯನ್ನು ನೀಡಲಿಲ್ಲ. ಇದಕ್ಕೆ ಕಾರಣಗಳು ಹಲವಿದ್ದವು. ಆಟ ಆಡುತ್ತ ಆಡುತ್ತಲೇ ಆ ಸಚಿನ್ ನನಗೆ ದೋಸ್ತನಾಗಿದ್ದ.. ಆತನಿಗೆ  ಸಮೀರ್ ಘೋಟ್ನೆಯಂತೆ, ಸಾಗರ್ ಚಿಂಚೋಳಿಮಠನಂತೆ, ಅನಿಕೇತನ್ ಪಾವಸೆಯಂತೆ ನಾನೇ great ಅನ್ನುವ ಹೆಮ್ಮೆಯಿರಲಿಲ್ಲ. ಆತ ಎಲ್ಲರ ಜೊತೆಗೂ ಬೆರೆಯುತ್ತಿದ್ದ. ಖುಷಿಯಿಂದ ಮಾತನ್ನು ಆಡುತ್ತಿದ್ದ.. ಜೊತೆಯಲ್ಲಿ ಆತ ಪಾಪದ ಪರದೇಶಿಯಾಗಿದ್ದ. ಹೀಗಾಗಿ ನನಗೆ ಖುಷಿಯ ಬದಲು ಬೇಸರವೇ ಆಯ್ತೆನ್ನಿ..
ಈ ಭೀಖರ ಗೆಲುವಿನಿಂದ ನನ್ನ ಪಾಯಿಂಟು 4 ಮ್ಯಾಚಿನಿಂದ 3.5 ಆಯಿತು. ಇದರ ಜೊತೆಗೆ ನಾಳೆ ಹೇಗೋ ಏನೋ ಎನ್ನುವ ಶೂನ್ಯಾಲೋಚನೆಯೂ ನನ್ನನ್ನು ಕಾಡಿತು.

(ಮುಂದುವರಿಯುವುದು..)
(ಮುಂದಿನ ಭಾಗದಲ್ಲಿ ನಿರೀಕ್ಷಿಸಿ.. ಭಯದ ನೆರಳಲ್ಲಿ ತೀರ್ಥಂಕರನ ಜೊತೆ, ಹಲ್ಕಟ್ ನಾಗರಾಜ..)

No comments:

Post a Comment