(ಚಿತ್ರ- ಗೋಪಿ ಜಾಲಿ) |
ಹರಿವು ನಿಲ್ಲಿಸಿದ ಪಾಪನಾಶಿನಿ ನದಿ/ಜೀವ ಜಗತ್ತಿಗೆ ಆತಂಕ
ಎರಡು ವರ್ಷಗಳ ಹಿಂದೆ ಮೊಟ್ಟ ಮೊದಲ ಬಾರಿಗೆ ಹರಿವು ನಿಲ್ಲಿಸಿದ್ದ ಅಘನಾಶಿನಿ ಮತ್ತೊಮ್ಮೆ ಬತ್ತಿ ಹೋಗಿದೆ. ಉತ್ತರ ಕನ್ನಡದ ಜೀವದಾಯಿ ನದಿಗಳಲ್ಲಿ ಒಂದಾಗಿರುವ ಅಘನಾಶಿನಿ ನದಿ ಬತ್ತಿರುವುದರಿಂದ ನದಿ ಪಾತ್ರದ ಜೀವ ಸಂಕುಲಗಳು ಆತಂಕಕ್ಕೆ ಈಡಾಗಿವೆ.
ಶಿರಸಿಯ ಶಂಕರಹೊಂಡ ಹಾಗೂ ಶಿರಸಿ ತಾಲೂಕಿನ ಶ್ರೀಕ್ಷೇತ್ರ ಮಂಜುಗುಣಿಯಲ್ಲಿ ಹುಟ್ಟುವ ಅಘನಾಶಿನಿ ನದಿಯ ಕವಲು ಒಂದುಗೂಡಿ 98 ಕಿಲೋಮೀಟರ್ ದೂರ ಹರಿದು ಕುಮಟಾ ತಾಲೂಕಿನಲ್ಲಿ ಅರಬಿ ಸಮುದ್ರವನ್ನು ಸೇರುತ್ತದೆ. ಈ ಅವಧಿಯಲ್ಲಿ ಸಹಸ್ರಾರು ಕುಟುಂಬಗಳು, ಸಹಸ್ರಾರು ಎಕರೆ ಪ್ರದೇಶಗಳು ಅಘನಾಶಿನಿ ನದಿಯನ್ನೇ ಅವಲಂಭಿಸಿವೆ.
2017ರಲ್ಲಿ ಪ್ರಕೃತಿಯ ಮುನಿಸು ಹಾಗೂ ಮನುಷ್ಯನ ದುರಾಸೆಯ ಕಾರಣದಿಂದ ಬತ್ತಿ ಹೋಗಿದ್ದ ಅಘನಾಶಿನಿ ನದಿ ಇದೀಗ ಮತ್ತೊಮ್ಮೆ ಬತ್ತಿದೆ. ಅಘನಾಶಿನಿ ನದಿ ತೀರದಲ್ಲಿ ಈಗ ಕಲರವವಿಲ್ಲಘಿ. ಪರಿಣಾಮವಾಗಿ ಅಘನಾಶಿನಿ ಕಣಿಯ ರೈತರು, ಅಡಿಕೆ ಬೆಳೆಗಾರರು, ಅಘನಾಶಿನಿ ನದಿಯ ನೀರನ್ನೇ ನೆಚ್ಚಿಕೊಂಡಿದ್ದ ಜನಸಾಮಾನ್ಯರು ಹೈರಾಣಾಗಿದ್ದಾರೆ. ನದಿ ತೀರದದಲ್ಲಿದ್ದ ಅಡಿಕೆ ತೋಟಗಳು ಒಣಗಿ ಹೋಗಿವೆ. ಅಪ್ಪೆಮರಗಳು ನೀರಿಲ್ಲದೇ ಸೊರಗಿದೆ. ಅಬ್ಬರದಿಂದ ಧುಮ್ಮಿಕ್ಕುತ್ತಿದ್ದ ಉಂಚಳ್ಳಿ ಜಲಪಾತ ಜೀವ ಕಳೆದುಕೊಂಡಿದೆ. ಅಘನಾಶಿನಿ ನದಿ ನೀರನ್ನೇ ಅವಲಂಬಿಸಿದ್ದ ಅಪರೂಪ ಸಿಂಗಳೀಕಗಳು, ಕಾಡೆಮ್ಮೆಗಳಿಗೂ ಕುಡಿಯಲು ನೀರಿಲ್ಲ ಎನ್ನುವಂತಾಗಿದೆ. ಅಘನಾಶಿನಿಯ ತಟದಲ್ಲಿ ಜೀವನ ಸಾಗಿಸುತ್ತಿದ್ದ ಅಪರೂಪದ ನೀರುನಾಯಿಗಳೂ ಕೂಡ ಬದುಕಿಗಾಗಿ ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾರ್ನಬಿಲ್, ಕೆಂಪು ಅಳಿಲು ಸೇರಿದಂತೆ ಅಳಿವಿನಂಚಿನಲ್ಲಿರುವ ಹಲವು ಜೀವಿಗಳು ಒದ್ದಾಡುತ್ತಿವೆ.
(ಚಿತ್ರ- ಗೋಪಿ ಜಾಲಿ) |
ಕಡಿಮೆಯಾಗಿದೆ ನೀರು, ಸೊರಗಿದೆ ಉಪನದಿಗಳು
ಪ್ರತಿ ವರ್ಷ ಮೇ ತಿಂಗಳಿನಲ್ಲಿ ಅಘನಾಶಿನಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗುತ್ತಿತ್ತು. ಎಪ್ರಿಲ್ ಹಾಗೂ ಮೇ ತಿಂಗಳಿನ ಬಿರು ಬೇಸಿಗೆಗೆ ನದಿಯಲ್ಲಿ ನೀರು ಕಡಿಮೆಯಾದರೂ ಕೂಡ ಕೃಷಿಗೆ, ಕೃಷಿಪೂರಕ ಚಟುವಟಿಕೆಗಳಿಗೆ ಅಭಾವ ಉಂಟಾಗುತ್ತಿರಲಿಲ್ಲ. ಕಳೆದ ಕೆಲವು ವರ್ಷಗಳಿಂದ ಅಘನಾಶಿನಿ ನದಿಯಲ್ಲಿ ನೀರಿನ ಮಟ್ಟ ತೀವ್ರ ಇಳಿಕೆ ಕಂಡಿದೆ. ಕಳೆದ 3 ವರ್ಷಗಳ ಅವಧಿಯಲ್ಲಿ ನದಿ ಎರಡನೇ ಬಾರಿ ಬತ್ತಿರುವುದು ಆತಂಕಕ್ಕೆ ಕಾರಣವಾಗಿದೆ.ಅಘನಾಶಿನಿ ನದಿಯ ಉಪನದಿಗಳಲ್ಲಿಯೂ ಕೂಡ ನೀರಿಲ್ಲ. ಅಘನಾಶಿನಿ ನದಿ ಮೂಲದಲ್ಲಿಯೂ ನೀರಿಲ್ಲ. ಪ್ರಮುಖ ಉಪನದಿಯಾದ ಭತ್ತಗುತ್ತಿಗೆ ಹೊಳೆ ಬತ್ತಿದೆ. ಬೆಣ್ಣೆಹಳ್ಳ, ಬುರುಡೆ ಜಲಪಾತಕ್ಕೆ ಕಾರಣವಾದ ಬೀಳಗಿ ಹೊಳೆಯೂ ನೀರಿಲ್ಲದೇ ಸೊರಗಿದೆ. ಇದೆಲ್ಲದರ ಪರಿಣಾಮ ಕರಾವಳಿ ಪ್ರದೇಶದಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದೆ. ಅರಬ್ಬಿ ಸಮುದ್ರ ನೀರು ಅಘನಾಶಿನಿ ನದಿಯ ಒಳಗೆ ನುಗ್ಗಲು ಆರಂಭಿಸಿದೆ. ಅಘನಾಶಿನಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾದ ಕಾರಣ ಹಲವು ಕಿಲೋಮೀಟರ್ ಒಳಭಾಗದ ವರೆಗೆ ಉಪ್ಪುನೀರು ನುಗ್ಗುತ್ತಿದೆ.
ಕೆಲವು ದಿನಗಳ ಹಿಂದಷ್ಟೇ ಶಾಲ್ಮಲಾ ನದಿ ಬತ್ತಿ ಹೋಗಿತ್ತುಘಿ. ಯಲ್ಲಾಪುರ ಪಟ್ಟಣಕ್ಕೆ ನೀರನ್ನು ಒದಗಿಸುವ ಬೇಡ್ತಿ ನದಿ ಬತ್ತಿ ಹಲವು ದಿನಗಳೇ ಕಳೆದಿವೆ. ಈ ಸಂದರ್ಭದಲ್ಲಿ ಪರಿಸರ ಪ್ರೇಮಿಗಳು ಆತಂಕವನ್ನು ಹೊರಹಾಕಿದ್ದರು. ಇದೀಗ ಮಲೆನಾಡಿನ ಇನ್ನೊಂದು ನದಿ ಬತ್ತಿ ಹೋಗಿದೆ. ಇದರ ನೇರ ಪರಿಣಾಮ ಪರಿಸರದ ಮೇಲಾಗುತ್ತಿದೆ. ನದಿಯನ್ನೇ ನಂಬಿದ್ದ ಜೀವ ಜಗತ್ತುಘಿ, ಪಕ್ಷಿಘಿ, ಪ್ರಾಣಿ ಸಂಕುಲ ಉಸಿರು ಚೆಲ್ಲುತ್ತಿವೆ. 10-12 ದಿನಗಳ ಒಳಗಾಗಿ ಮಳೆಯಾಗದಿದ್ದಲ್ಲಿ ಮಲೆನಾಡಿನ ಪರಿಸ್ಥಿತಿ ಇನ್ನಷ್ಟು ಘೋರವಾಗಿರಲಿದೆ.
(ಚಿತ್ರ- ಗೋಪಿ ಜಾಲಿ) |
---------------------
ನದಿ ತೀರಗಳಲ್ಲಿ ಜನಸಂಖ್ಯೆ ಜಾಸ್ತಿಯಾಗಿದೆ. ನದಿಗಳ ಮೇಲಿನ ಅವಲಂಬನೆ ಕೂಡ ಹೆಚ್ಚಾಗಿದೆ. ಪಂಪ್ ಮೂಲಕ ಕೃಷಿಗೆ ನದಿ ನೀರನ್ನು ಬಳಸುವ ಸಂಖ್ಯೆಯೂ ಹೆಚ್ಚಿದೆ. ಹೀಗಾಗಿ ನದಿಗಳು ಬತ್ತುತ್ತಿವೆ. ಮಳೆ ನೀರು ಇಂಗಿಸಿದರೆ ಇಂತಹ ಸಮಸ್ಯೆಗೆ ಪರಿಹಾರ ಹುಡುಕಬಹುದು.
ಶಿವಾನಂದ ಕಳವೆ
ಪರಿಸರ ಬರಹಗಾರರು
Nija Idu Ella malena dina Nadi gala kathe. Development beku antha galate mado Naavu environmental care bagge yochanene madodilla...
ReplyDelete