Saturday, June 29, 2019

ರಾಜ್ಯದ ಜನತೆಗೆ ಮಂಕುಬೂದಿ ಎರಚುವ ಯತ್ನ ಏಕೆ? 1980ರ ಯೋಜನೆ 2019ಕ್ಕೆ ಸಾಧುವೇ?

ಮಾನ್ಯ ಜಯಚಂದ್ರ ಅವರೇ,

ಅಘನಾಶಿನಿ ನದಿಯಿಂದ ತುಮಕೂರಿಗೆ ಹಾಗೂ ಬೆಂಗಳೂರಿಗೆ ನೀರು ಹರಿಸಬೇಕೆಂಬ ನಿಮ್ಮ ಮನವಿ ಸಂಪೂರ್ಣ ಹಾಸ್ಯಾಸ್ಪದ ಎನ್ನಿಸುತ್ತಿದೆ. ಗುರುತ್ವಾಕರ್ಷಣ ಬಲಕ್ಕೆ ಸೆಡ್ಡು ಹೊಡೆಯುವಂತಹ ನಿಮ್ಮ ಚಿಂತನೆ ವಿಜ್ಞಾನಿಗಳನ್ನೂ ದಂಗು ಪಡಿಸಿದರೆ ಅಚ್ಚರಿ ಪಡಬೇಕಿಲ್ಲಘಿ.
ಎತ್ತಣ ಅಘನಾಶಿನಿ, ಎತ್ತಣ ತುಮಕೂರು, ಎತ್ತಣಂದೆತ್ತಣ ಸಂಬಂ‘ವಯ್ಯಾ? ಬಹುತೇಕ 420 ಕಿಲೋಮೀಟರ್ ದೂರದಲ್ಲಿನ ನದಿಯನ್ನು ಮೂರು ಸಾರಿ ಪಂಪ್ ಮೂಲಕ ಎತ್ತಿ, ಅದನ್ನು ಪೈಪ್ ಮೂಲಕ ತುಮಕೂರಿಗೆ ಹರಿಸುವಂತಹ ವಿಫಲ ಯೋಜನೆಯನ್ನು ಜಯಚಂದ್ರರೇ ಅದ್ಯಾವ ವೈಜ್ಞಾನಿಕ ಆಧಾರದ ಮೇಲೆ ಬೆಂಬಲಿಸಿದಿರಿ ಎನ್ನುವುದು ಅರ್ಥವಾಗುತ್ತಿಲ್ಲ.
ನಿಮ್ಮ ಮನವಿಯಲ್ಲಿ, 1980ರ ಜಲಸಂಬಂ ದೂರಗಾಮಿ ಯೋಜನೆ ಅನ್ವಯ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ ನೀಡಿದ ನದಿ ಜೋಡಣಾ ವಿವರಗಳನ್ನು ನೀಡಿದ್ದೀರಿ. ಆದರೆ ನದಿ ಜೋಡಣೆಗೆ ಆದ್ಯತೆ ನೀಡುವ ನೀವು ಅಘನಾಶಿನಿ ನದಿ ಪಾತ್ರದ ವಾಸ್ತವಾಂಶಗಳನ್ನು ಮರೆಮಾಚಿದ್ದೀರಿ. ಅಘನಾಶಿನಿ ನದಿಯಲ್ಲಿ ಮಳೆಗಾಲದಲ್ಲಿ 100 ರಿಂದ 120 ಟಿಎಂಸಿಯಷ್ಟು ನೀರಿನ ಲಭ್ಯತೆ  ಇದೆ ಎಂದು ನಿಮ್ಮ ಮನವಿಯಲ್ಲಿ ಉಲ್ಲೇಖಿಸಿದ್ದೀರಿ. ಆದರೆ ಅದೇ ನದಿಯ ಇನ್ನೊಂದು ಮುಖವನ್ನು ಗಮನಿಸಿದ್ದೀರಾ?
ಕಳೆದ ನಾಲ್ಕು ವರ್ಷಗಳಲ್ಲಿ ಅಘನಾಶಿನಿ ನದಿ ಎರಡು ಸಾರಿ ಸಂಪೂಣ ಬತ್ತಿ ಹೋಗಿದೆ. ಅಷ್ಟೇ ಏಕೆ ಅಘನಾಶಿನಿ ನದಿ ಕಣಿವೆಯ ಪಾತ್ರದಲ್ಲಿ ಕಳೆದ 10 ವರ್ಷಗಳಿಂದ ಅಸಮರ್ಪಕವಾಗಿ ಮಳೆಯಾಗುತ್ತಿದೆ. ವಾರ್ಷಿಕವಾಗಿ ಬೀಳುತ್ತಿದ್ದ ಮಳೆಯಲ್ಲಿ ಶೆ.20ಕ್ಕೂ ಅಕ ಕೊರತೆ ಕಂಡು ಬಂದಿದೆ. ಅಘನಾಶಿನಿ ನದಿಯಲ್ಲೇ ನೀರಿಲ್ಲ. ಇಲ್ಲದ ನೀರನ್ನು ಬೆಂಗಳೂರಿಗೆ, ತುಮಕೂರಿಗೆ ಹರಿಸುತ್ತೇವೆ ಎನ್ನುತ್ತೀರಲ್ಲ. ನಿಮ್ಮ ತಲೆಯಲ್ಲಿ ಏನಿದೆ ಎನ್ನುವುದೇ ಅರ್ಥವಾಗುತ್ತಿಲ್ಲ.
ನೀವೇ ಹೇಳಿದಂತೆ ಅಘನಾಶಿನಿ ನದಿ 1895 ಚದರ ಕಿಲೋಮೀಟರ್ ವಿಸ್ತೀರ್ಣ ಹೊಂದಿದೆ. 117 ಕಿಲೋಮೀಟರ್ ದೂರ ಹರಿದು ಸಮುದ್ರವನ್ನು ಸೇರುತ್ತದೆ. ಈ ಅಘನಾಶಿನಿ ನದಿಯ ನೀರನ್ನೇ ಶಿರಸಿ, ಕುಮಟಾ ಹಾಗೂ ಹೊನ್ನಾವರ ಪ್ರದೇಶಗಳ ಜನಸಾಮಾನ್ಯರು ನೆಚ್ಚಿಕೊಂಡಿದ್ದಾರೆ. ಸಿದ್ದಾಪುರ ತಾಲೂಕಿನ ಅದೆಷ್ಟೋ ಸಹಸ್ರ ಸಹಸ್ರ ಕುಟುಂಬಗಳು ಕುಡಿಯುವ ನೀರಿಗೆ, ಜಮೀನುಗಳಿಗೆ, ಬೆಳೆ ಬೆಳೆಯಲು ಬಳಸುತ್ತಿದ್ದಾರೆ. ಅಘನಾಶಿನಿ ನದಿಯನ್ನು ತಿರುವು ಮಾಡಿದರೆ ಈ ಪ್ರದೇಶದಲ್ಲಿ ಉಂಟಾಗುವ ಕ್ಷೋಭೆಗೆ ಏನು ಪರಿಹಾರ ಹುಡುಕುತ್ತೀರಿ?
ಭೌಗೋಳಿಕವಾಗಿ ಅಘನಾಶಿನಿ ನದಿ ಹರಿಯುವ ಸ್ಥಳ ಬೆಂಗಳೂರಿಗಿಂತ 450 ಮೀಟರ್‌ಗಳಷ್ಟು ಕೆಳಗಿದೆ. ಇಷ್ಟು ಮೇಲೆ ನೀರನ್ನೆತ್ತುವುದು ಸುಲಭದ ಮಾತಲ್ಲ. ಹೀಗೆ ನೀರು ಹರಿಸುವ ಮಾರ್ಗ ಮಧ್ಯದಲ್ಲಿ  ಅಘನಾಶಿನಿ ಸಂರಕ್ಷಿತ ಅರಣ್ಯ ಪ್ರದೇಶ, ಶರಾವತಿ ಸಂರಕ್ಷಿತ ಅರಣ್ಯ ಪ್ರದೇಶಗಳು ಬರುತ್ತವೆ. ಅದಲ್ಲದೇ ಸಾಲು ಸಾಲು ಹೊಲಗಳು, ಅರಣ್ಯ ಪ್ರದೇಶಗಳಿವೆ. ಅದೆಲ್ಲದರ ಮಾರಣಹೋಮ ನಿಶ್ಚಿತ.
ಜಯಚಂದ್ರರೇ,

ನೀವು ತುಮಕೂರಿನ ಶಿರಾ ಕ್ಷೇತ್ರದಲ್ಲಿ 6 ಅವಗೆ ಶಾಸಕರಾಗಿ ಆಯ್ಕೆಯಾಗಿದ್ದೀರಿ, ಮಂತ್ರಿಗಳಾಗಿಯೂ ಕಾರ್ಯ ನಿರ್ವಹಿಸಿದ್ದೀರಿ. ಆ ಸಂದರ್ಭದಲ್ಲಿ  ತುಮಕೂರು ಜಿಲ್ಲೆಗಳಲ್ಲಿ ಕೆರೆಗಳನ್ನು ಹೂಳೆತ್ತಬಹುದಿತ್ತು. ಜಲ ಮೂಲಗಳ ಪುನಶ್ಚೇತನ ಮಾಡಬಹುದಿತ್ತು. ಆ ಸಂದರ್ಭದಲ್ಲಿ ಕುಂಭಕರ್ಣನ ನಿದ್ದೆ ಮಾಡಿದ್ದ ನಿಮಗೆ ಈಗ ಥಟ್ಟನೆ ಎಚ್ಚರವಾಯಿತೇ? ಮಲೆನಾಡಿನ ದಿನಗಳ ನೀರನ್ನು ತಿರುಗಿಸಿ ತಂದಾಗ ಮಾತ್ರ ಅನುಕೂಲ ಎಂದುಕೊಂಡಿರೇ? ನಿಮ್ಮಲ್ಲಿಯೇ ಇರುವ ಜಲಮೂಲಗಳ ಸಂರಕ್ಷಣೆಯ ಮಾರ್ಗಗಳನ್ನು ಬಿಟ್ಟು ದೂರದ ನದಿಯ ಮೇಲೇಕೆ ನಿಮ್ಮ ಕಣ್ಣು? ಅದ್ಯಾವ ಗುತ್ತಿಗೆದಾರನಿಗೆ ಅನುಕೂಲ ಮಾಡಿಕೊಡಬೇಕೆಂದು ಅಘನಾಶಿನಿ ನದಿ ತಿರುವನ್ನು ಬೆಂಬಲಿಸುತ್ತೀರಿ?
ಅಘನಾಶಿನಿ ಇರಲಿ, ಶರಾವತಿ ಇರಲಿ, ಅಲ್ಲಿನ ಪರಿಸ್ಥಿತಿ ಯಾರಿಗೂ ಬೇಡ ಎನ್ನುವಂತಾಗಿದೆ. ಶರಾವತಿ ನದಿಗೆ ನಿರ್ಮಿಸಿರುವ ಲಿಂಗನಮಕ್ಕಿಯಲ್ಲಿ ಪ್ರತಿ ವರ್ಷ ನೀರಿನ ಸ್ಟೋರೇಜ್ ಪ್ರಮಾಣ ಇಳಿಕೆಯಾಗುತ್ತಲೇ ಇದೆ. ರಾಜ್ಯಕ್ಕೆ ಅಗತ್ಯವಿರುವ ವಿದ್ಯುತ್ ಪ್ರಮಾಣದಲ್ಲಿ ಬಹುಪಾಲನ್ನು ಉತ್ಪಾದಿಸುವ ಲಿಂಗನಮಕ್ಕಿಯ ಅಣೆಕಟ್ಟೆಯಿಂದ ನೀರು ತಂದರೆ ರಾಜ್ಯದಲ್ಲಿ ವಿದ್ಯುತ್ ಅಭಾವ ಹೆಚ್ಚಾಗುವುದಿಲ್ಲವೇ?
ಪ್ರವಾಸೋದ್ಯಮಕ್ಕೂ ಹೊಡೆತ
ಅಘನಾಶಿನಿ ನದಿ ಉಂಚಳ್ಳಿ ಜಲಪಾತಕ್ಕೆ ಕಾರಣವಾಗಿದೆ. ಈ ಉಂಚಳ್ಳಿ ಜಲಪಾತಕ್ಕೆ ಪ್ರತಿವರ್ಷ ಲಕ್ಷಾಂತರ ಜನರು ‘ೇಟಿ ನೀಡುತ್ತಾರೆ. ಲೂಷಿಂಗ್ಟನ್ ಫಾಲ್ಸ್ ವಿದೇಶಗಳ ಮಟ್ಟದಲ್ಲಿಯೂ ಹೆಸರಾಗಿರುವ ಪ್ರಮುಖ ಜಲಪಾತಗಳಲ್ಲಿ ಒಂದು. ಅಘನಾಶಿನಿ ನದಿ ತಿರುವು ಮಾಡದರೆ ಉಂಚಳ್ಳಿ ಜಲಪಾತಕ್ಕೆ ನೀರಿನ ಬರ ಉಂಟಾಗಲಿದೆ. ಇದರಿಂದ ರಾಜ್ಯ ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ಬೀಳಲಿದೆ. ಇದು ಟಿ. ಬಿ. ಜಯಚಂದ್ರರ ತಲೆಗೆ ಹೋಗಿಲ್ಲವೇ?
ಅಘನಾಶಿನಿ ನದಿ ತಿರುವು ಯೋಜನೆ ಸಮರ್ಪಕ ಎನ್ನುವಂತಹ ಉದ್ಯಮಿ ಸ್ನೇಹಿ ಆಲೋಚನೆಗಳನ್ನು ಬಿಟ್ಟುಘಿ, ತುಮಕೂರಿಗೆ ಹಾಗೂ ಬೆಂಗಳೂರಿಗೆ ನೀರು ಒದಗಿಸಲು ಪರ್ಯಾಯ ಕ್ರಮಗಳನ್ನು ಕೈಗೊಳ್ಳುವ ಕಡೆಗೆ ಚಿಂತನೆ ಮಾಡುವುದು ಅಗತ್ಯವಿದೆ. ಜಲಮೂಲಗಳಾದ ಕೆರೆ, ಕುಂಟೆಗಳ ಹೂಳೆತ್ತುವುದರ ಜತೆಗೆ ಕೆರೆಗಳನ್ನು ಅತಿಕ್ರಮಣ ಮಾಡಿ, ಬಿಲ್ಡಿಂಗ್‌ಗಳನ್ನು ಎಬ್ಬಿಸುವವರನ್ನು ತಡೆದು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಜರೂರತ್ತಿದೆ. ನೀರು ಇಂಗಿಸುವ ಮೂಲಕ ಅಂತರ್ಜಲ ಹೆಚ್ಚಿಸುವ ಹೊಣೆಗಾರಿಕೆ ಇದೆ. ಅರಣ್ಯೀಕರಣಕ್ಕೆ ಆದ್ಯತೆ ನೀಡಬೇಕಾಗಿದೆ. ಟಿ. ಬಿ. ಜಯಚಂದ್ರರು ಇಂತಹ ನೀರಿಂಗಿಸುವ ಯೋಜನೆಗಳ ಕುರಿತು ಆಲೋಚನೆ ಮಾಡಬೇಕೇ ಹೊರತು ಪರಿಸರದ ಕತ್ತು ಹಿಸುಕುವಂತಹ ಯೋಜನೆಗಳ ಕುರಿತಲ್ಲಘಿ.

ಇಂತಿ
ಯೋಜನೆಗಳ ಭಾರದಲ್ಲಿ ನಲುಗಿರುವ ಮಲೆನಾಡಿಗ




No comments:

Post a Comment