Friday, June 14, 2019

ಅಘನಾಶಿನಿ ಕಣಿವೆಯಲ್ಲಿ -34



ಮರುದಿನ ಬಾಬುವಿನ ಮನೆಯ ಬಳಿ ಹೋದವರಿಗೆ ಬಹುದೊಡ್ಡ ಆಘಾತವಾಗಿತ್ತು. ಬಾಬುನನ್ನು ಕರೆದುಕೊಂಡು ಹೋಗಿ ಗಂಧ ಚೋರರು ಹಾಗೂ ಅಕ್ರಮ ದಂಧೆ ಮಾಡುವವರನ್ನು ಹುಡಕಬೇಕು ಎಂದುಕೊಂಡಿದ್ದ ಪ್ರದೀಪ, ವಿಕ್ರಮ ಹಾಗೂ ವಿನಾಯಕರು ತಬ್ಬಿಬ್ಬಾಗಿದ್ದರು.
ಬಾಬುವಿನ ಮನೆಯ ಮುಂದೆ ಬಹಳಷ್ಟು ಜನರು ಸೇರಿದ್ದರು. ಯಾರೋ ಒಬ್ಬರು ಮುಂಜಾನೆ ಬಾಬುವಿನ ಮನೆಗೆ ಬಂದು ಬಾಗಿಲು ಬಡಿದಿದ್ದರೆಂತೆ. ಎಷ್ಟು ಹೊತ್ತಾದರೂ ಬಾಗಿಲು ತೆಗೆಯದೇ ಇದ್ದಿದ್ದನ್ನು ನೋಡಿ ಅನುಮಾನಗೊಂಡು, ಅವರೇ ಮನೆಯ ಬಾಗಿಲು ಒಡೆದು ಒಳಹೋಗಿ ನೋಡಿದ್ದರಂತೆ. ಮನೆಯಲ್ಲಿ ಬಾಬು ಹಾಗೂ ಆತನ ಕುಟುಂಬ ನೇಣು ಹಾಕಿದ ಸ್ಥಿತಿಯಲ್ಲಿ ಕಾಣಿಸಿತ್ತು. ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಎನ್ನಿಸಿತ್ತು.
ಪೊಲೀಸರು ಆಗಲೇ ಬಂದು ಮಹಜರು ಮಾಡಲು ಆರಂಭಿಸಿದ್ದರು. ಪೊಲೀಸರು ಇದನ್ನು ಆತ್ಮಹತ್ಯೆ ಪ್ರಕರಣ ಎಂದು ಹೇಳಿ, ಸಾಲಬಾಧೆ ಇರಬೇಕೆಂಬ ಶಂಕೆಯನ್ನೂ ವ್ಯಕ್ತಪಡಿಸಿ ಅದೇ ರೀತಿಯಲ್ಲಿ ವರದಿ ತಯಾರಿಸಲೂ ಮುಂದಾಗಿತ್ತು. ಆದರೆ ಪ್ರದೀಪ ಹಾಗೂ ಆತನ ಬಳಗಕ್ಕೆ ಖಂಡಿತವಾಗಿಯೂ ಇದು ಆತ್ಮಹತ್ಯೆಯಲ್ಲ ಕೊಲೆ ಎಂಬ ಶಂಕೆ ಮೂಡಿತ್ತು. ಹಿಂದಿನ ದಿನ ತಾವು ಬಾಬುವನ್ನು ಬಡಿದು ವಿಚಾರಣೆ ನಡೆಸಿದ್ದ ಕಾರಣಕ್ಕೇ ಬಾಬುವನ್ನು ಹತ್ಯೆ ಮಾಡಿ, ನೇಣು ಹಾಕಲಾಗಿದೆ ಎಂದು ಪ್ರದೀಪ ಹಾಗೂ ಬಳಗ ತರ್ಕಿಸಿದ್ದರು. ಅದು ನಿಜವಾಗಿತ್ತೂ ಕೂಡ.
ಯಾವುದೋ ಒಂದು ಕೊಂಡಿಯನ್ನು ಹಿಡಿದು ನಿಘೂಡ ಜಗತ್ತಿನ ಬಾಗಿಲನ್ನು ತೆರೆದು ಹೋಗುತ್ತಿದ್ದೇವೆ ಎಂದುಕೊಳ್ಳುವಷ್ಟರಲ್ಲಿ ಕಾಣದ ಕೈ ಆ ಬಾಗಿಲನ್ನು ಮುಚ್ಚಿ ಹಾಕುತ್ತಿತ್ತು. ಎಷ್ಟೇ ಪ್ರಯತ್ನ ಪಟ್ಟೂ ನಿಘೂಡ ಜಗತ್ತಿನ ಒಳಗೆ ಹೋಗಲು ಸಾಧ್ಯವೇ ಆಗುತ್ತಿಲ್ಲವಲ್ಲ ಎಂಬ ಹತಾಶೆ ವಿಕ್ರಮ ಹಾಗೂ ಪ್ರದೀಪನಿಗಾಯಿತು. ಇದಕ್ಕೆ ಏನಾದರೂ ಮಾಡಲೇಬೇಕಲ್ಲ ಎಂದು ಅವರು ಅಲವತ್ತುಕೊಂಡರು. ಬೇಗ ಬೇಗನೆ ಇದಕ್ಕೊಂದು ಅಂತ್ಯ ಕಾಣಿಸದೇ ಇದ್ದಲ್ಲಿ ಇನ್ನೆಷ್ಟು ತಿರುವುಗಳು ಎದುರಾಗಲಿದೆಯೋ ಎಂದುಕೊಂಡರು ಅವರು.
ಬಾಬುವಿನ ಕೊಲೆಯನ್ನು ತಾವು ಹುಡುಕ ಹೊರಟಿರುವ ತಂಡವೇ ಮಾಡಿರುವುದು ಖಚಿತವಾಗಿತ್ತು. ಆ ಗುಂಪನ್ನು ಹುಡುಕಬಹುದಾಗಿದ್ದ ದೊಡ್ಡ ಬಾಗಿಲು ಮುಚ್ಚಿ ಹೋಗಿತ್ತು. ಮತ್ತೆ ಎಲ್ಲವನ್ನೂ ಹೊಸದಾಗಿ ಆರಂಭಿಸಬೇಕಲ್ಲ ಎಂಬ ಹತಾಶೆ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು. ಅಸಹನೆಯಿಂದ ಅವರು ತಲೆ ಕೊಡವಿಕೊಳ್ಳುತ್ತಿದ್ದರು.

----
ಇತ್ತ ಆ ನಿಘೂಡ ಮನೆಯಲ್ಲಿ ಆ ಯಜಮಾನ ತನ್ನ ಕೆಳಗಿನ ಆಳುಗಳ ಬಳಿ ಮಾತನಾಡುತ್ತಿದ್ದ. ಎಲ್ಲ ಕೆಲಸ ಸರಿಯಾಗಿದೆ ತಾನೇ.. ಎಂದು ಆತ ಕೇಳುತ್ತಿದ್ದಂತೆಯೇ ಉಳಿದವರು ನಡೆದ ಘಟನೆಯನ್ನೆಲ್ಲ ತಿಳಿಸಿ ಹೇಳಿದರು.
ಬಾಬುವನ್ನು ಹತ್ಯೆ ಮಾಡಿದ್ದು ಒಳ್ಳೇದೇ ಆಯ್ತು. ನಾವೇ ಮಾಡಿದ್ದೇವೆ ಎನ್ನುವ ಬಗ್ಗೆ ಯಾವುದಾದರೂ ಅಂಶ ಬಿಟ್ಟು ಬಂದಿದ್ದೀರಾ? ಗಡುಸಾಗಿ ಕೇಳಿದ್ದ.
ಇಲ್ಲ ಬಾಸ್ ಎಂದು ಮಾರುತ್ತರ ನೀಡಿದ್ದರು ಉಳಿದವರು.
ನಿಮ್ಮನ್ನು ಯಾರಾದರೂ ನೋಡಿದರಾ? ಅದರಲ್ಲೂ ವಿಶೇಷವಾಗಿ ಆ ಹೊಸ ಹುಡುಗರು ನೋಡಿದ್ದಾರಾ ಹೇಗೆ? ಮತ್ತೆ ಕೇಳಿದ್ದ ಆತ.
ಇಲ್ಲ. ಸದ್ದಿಲ್ಲದೇ ಕೆಲಸ ಮಾಡಿ ಬಂದಿದ್ದೇವೆ. ಪೊಲೀಸರೂ ಕೂಡ ಇದನ್ನು ಆತ್ಮಹತ್ಯೆ ಎಂದೇ ವರದಿಯಲ್ಲಿ ಬರೆದಿದ್ದಾರೆ. ಯಾವುದೇ ಆತಂಕ ಬೇಡ..’ ಎಂದು ಮರು ಉತ್ತರ ನೀಡಿದರು ಕೈಕೆಳಗಿನ ವ್ಯಕ್ತಿಗಳು.
ಸರಿ ಹಾಗಾದರೆ, ಒಳ್ಳೆಯದೇ ಆಯ್ತು. ನೀವೆಲ್ಲ ಅತ್ತ ತಲೆ ಹಾಕಬೇಡಿ.. ಯಾವುದೇ ರೀತಿಯ ಅನುಮಾನಕ್ಕೂ ಎಡೆ ಮಾಡಿಕೊಡಬೇಡಿ.. ಆ ಊರಿಗೆ ಬಂದಿರುವವರ ಮೇಲೆ ಮಾತ್ರ ಕಣ್ಣಿಡಿ ಸಾಕು.. ನೀವಿನ್ನು ಹೊರಡಿ.. ಎಂದ ಬಾಸ್
ಸರಿ ಎಂದು ಉಳಿದವರು ಹೋದರು.
ಬಾಸ್ ಮುಖದಲ್ಲಿ ಕಿರುನಗೆಮೂಡಿತು. ಅದೇನೋ ತಪ್ಪಿಸಿಕೊಂಡೆ, ನಿರಾಳನಾದೆ ಎನ್ನುವ ಭಾವ ಆತನ ಮುಖದಲ್ಲಿ ಕಾಣಿಸಿತ್ತು.


(ಮುಂದುವರಿಯುತ್ತದೆ)

No comments:

Post a Comment