Sunday, June 16, 2019

ಯೋಜನೆ ರೂಪಿಸುವವರ ಅರೆಬೆಂದ ಚಿಂತನೆಗೆ ರಾಜ್ಯದ ನದಿಗಳು ಬಲಿ

ರಾಜ್ಯದ ಇನ್ನಷ್ಟು ನದಿಗಳ ಮೇಲೆ ಜನಪ್ರತಿನಿಧಿಗಳ ಹಾಗೂ ಉದ್ಯಮಿಗಳ ಕಣ್ಣು ಬಿದ್ದಿದೆ. ಎತ್ತಿನಹೊಳೆ ತಿರುವು ಎಂಬ ವಿಲ ಯೋಜನೆ ಕಣ್ಣ ಮುಂದಿದೆ. ಹೀಗಿದ್ದಾಗಲೇ ಇನ್ನೆರಡು ನದಿಗಳನ್ನು ತಿರುಗಿಸುವ ಕುರಿತು ಧ್ವನಿ ಎದ್ದಿದೆ.

ಚಿಕ್ಕಬಳ್ಳಾಪುರ ಜಿಲ್ಲೆ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಿಗೆ ಕುಡಿಯುವ ನೀರನ್ನು ನೀಡುತ್ತೇವೆ ಎಂದು ಹೇಳುವ ಮೂಲಕ ಕೆಲವು ವರ್ಷಗಳ ಹಿಂದೆ ಎತ್ತಿನ ಹೊಳೆ ಯೋಜನೆಯನ್ನು ರಾಜ್ಯ ಸರ್ಕಾರ ಕೈಗೆತ್ತಿಕೊಂಡಿತು. ಪ್ರತಿ ವರ್ಷ ಈ ಯೋಜನೆಗೆ ಕೋಟಿ ಕೋಟಿ ರೂಪಾಯಿಗಳನ್ನು ನೀಡುತ್ತಲೇ ಹೋಗುತ್ತಿದೆ. ಆದರೆ ಯೋಜನೆ ಮಾತ್ರ ಆಮೆ ಗತಿಯಲ್ಲಿ ಸಾಗುತ್ತಿದೆ. ಈ ಯೋಜನೆ ಪೂರ್ಣಗೊಳ್ಳುವ ಹಂತದಲ್ಲಿ ನದಿ ಪಾತ್ರ ಸಂಪೂರ್ಣ ಬಯಲಾಗಿ ಮತ್ತೆ ಕುಡಿಯುವ ನೀರಿಗೆ ತತ್ವಾರ ಎನ್ನಿಸುವ ಹಂತ ಬಂದರೂ ಅಚ್ಚರಿ ಪಡಬೇಕಿಲ್ಲಘಿ. ಈ ಯೋಜನೆ ವಿಲತೆಯ ಹಾದಿಯಲ್ಲಿ ಮುಖ ಮಾಡುತ್ತಿರುವ ಸಂದರ್ಭದಲ್ಲಿಯೇ ರಾಜ್ಯ ಸರ್ಕಾರ ಇನ್ನಷ್ಟು ನದಿಗಳನ್ನು ತಿರುಗಿಸುವ ಮಾತನಾಡುತ್ತಿರುವುದು ಮಾತ್ರ ದುರಂತದ ಸಂಗತಿ.

ರಾಜ್ಯ ಸರ್ಕಾರ ಇದೀಗ ಪ್ರಮುಖವಾಗಿ ಮೂರು ಯೋಜನೆಗಳ ಅನುಷ್ಟಾನಕ್ಕೆ ಚಿಂತನೆ ನಡೆಸುತ್ತಿದೆ. ಅಘನಾಶಿನಿ ಹಾಗೂ ಶರಾವತಿ ನದಿ ನೀರನ್ನು ಬೆಂಗಳೂರಿಗೆ ತರುವುದು ಒಂದು ಯೋಜನೆಯಾದರೆ, ತುಂಗಭದ್ರಾ ನದಿ ನೀರನ್ನು ರಾಜ್ಯ ರಾಜಧಾನಿ ತರುವುದು ಇನ್ನೊಂದು ಯೋಜನೆ. ಉತ್ತರ ಕನ್ನಡ ಜಿಲ್ಲೆಯ ಕಾಳಿ ನದಿ ನೀರನ್ನು ಘಟಪ್ರಭಾ ಹಾಗೂ ಮಲಪ್ರಭಾ ನದಿಗೆ ಜೋಡಿಸುವುದು ರಾಜ್ಯ ಸರ್ಕಾರದ ಮುಂದಿರುವ ಇನ್ನೊಂದು ಯೋಜನೆ. ಈ ಮೂರು ಯೋಜನೆಗಳ ಮೂಲಕ ಮತ್ತೊಮ್ಮೆ ಪರಿಸರದ ಮಾರಣಹೋಮ ನಡೆಸುವ ಹುನ್ನಾರ ಉದ್ಯಮಿಗಳು ಹಾಗೂ ರಾಜಕಾರಣಿಗಳದ್ದು.

ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ನದಿಯಾಗಿರುವ ಅಘನಾಶಿನಿಯ ಮೇಲೆ ಈಗಾಗಲೇ ರಾಜ್ಯ ನಾಯಕರ ಕಣ್ಣು ಬಿದ್ದಿದೆ. ಈ ನದಿಗೆ ಯಾವುದೂ ಯೋಜನೆಗಳಿಲ್ಲವಲ್ಲ ಎನ್ನುವ ಚಿಂತನೆ ಯಾರದ್ದೋ ತಲೆಯಲ್ಲಿ ಹೊಳೆದಿದ್ದೇ ತಡ, ಈ ನದಿಯನ್ನು ತಿರುಗಿಸುವ ಆಲೋಚನೆಗೆ ರಾಜ್ಯ ಸರ್ಕಾರ ಮುಂದಿಟ್ಟುಕೊಂಡಿದೆ. ಅಘನಾಶಿನಿ ನದಿಗೆ ಅಣೆಕಟ್ಟನ್ನು ಕಟ್ಟಿಘಿ, ಅಲ್ಲಿಂದ ಸುರಂಗ ಮಾರ್ಗದ ಮೂಲಕ 30 ಕಿಲೋಮೀಟರ್ ದೂರದ ಶರಾವತಿ ನದಿಗೆ ನಿರ್ಮಿಸಲಾಗಿರುವ ಲಿಂಗನಮಕ್ಕಿ ಅಣೆಕಟ್ಟಿಗೆ ಆ ನೀರನ್ನು ಸರಬರಾಜು ಮಾಡುವುದು ಯೋಜನೆಯ ಮೊದಲ ಹಂತ. ನಂತರ ಲಿಂಗನಮಕ್ಕಿಯಲ್ಲಿನ ನೀರನ್ನು ಪಂಪ್ ಮಾಡಿ ಎತ್ತಿ ಅದನ್ನು 400 ಕಿಲೋಮೀಟರ್ ದೂರದ ಬೆಂಗಳೂರು ನಗರಿಗೆ ತರುವುದು ಹಲವರ ಹುನ್ನಾರ. ಈ ಕುರಿತು ಹಲವು ತಜ್ಞರು ಯೋಜನಾ ವರದಿಯನ್ನು ಮಂಡಿಸಿದ್ದಾರೆ. ತನ್ಮೂಲಕ ಎರಡು ನದಿಗಳ ಹತ್ಯೆಗೆ ಅಂಕಿತವನ್ನೂ ಹಾಕಲಾಗಿದೆ.

ಭೌಗೋಳಿಕವಾಗಿ ನೋಡಿದಾಗ ಈ ಯೋಜನೆ ಅತ್ಯಂತ ಕಷ್ಟಕರವಾದುದು. ಉತ್ತರ ಕನ್ನಡ ಜಿಲ್ಲೆಯ ಅಘನಾಶಿನಿ ನದಿ ಇರುವ ಭೌಗೋಳಿಕ ಪ್ರದೇಶಕ್ಕಿಂತ ಶರಾವತಿ ನದಿಯ ಲಿಂಗನಮಕ್ಕಿ ಪ್ರದೇಶ ಎತ್ತರದಲ್ಲಿದೆ. ಈ ಲಿಂಗನಮಕ್ಕಿ ಅಣೆಕಟ್ಟಿಗಿಂತಲೂ ಕನಿಷ್ಟ 500ಮೀಟರ್‌ನಷ್ಟು ಎತ್ತರದಲ್ಲಿ ಬೆಂಗಳೂರು ನಗರಿಯಿದೆ. ಹೀಗಿದ್ದಾಗ ಕೆಳಗಿನ ಪ್ರದೇಶದಿಂದ ಮೇಲ್ಮಟ್ಟದಲ್ಲಿರುವ ಪ್ರದೇಶಕ್ಕೆ ನೀರನ್ನು ಹರಿಸುವುದು ಹೇಗೆ ಸಾಧ್ಯ ಎನ್ನುವುದು ಪರಿಸರವಾದಿಗಳ ಪ್ರಶ್ನೆ. ಇದಕ್ಕೆ ಪಂಪ್ ಮೂಲಕ, ಏತ ವ್ಯವಸ್ಥೆ ಮೂಲಕ ಕ್ರಮ ಕೈಗೊಳ್ಳಲಾಗುತ್ತದೆ ಎನ್ನುವುದು ಯೋಜನೆಯನ್ನು ರೂಪಿಸಿದವರ ಉತ್ತರ. 420 ಕಿಲೋಮೀಟರ್ ದೂರದಿಂದ, ಭೌಗೋಳಿಕ ಸವಾಲುಗಳನ್ನು ಎದುರಿಸಿ ನೀರು ತರುವ ಯೋಜನೆಗೆ ಏನಿಲ್ಲವೆಂದರೂ ಕನಿಷ್ಟ 1000-1500 ಕೋಟಿ ರೂಪಾಯಿಗಳು ಬೇಕೇ ಬೇಕು.

 ನೀರು ಹರಿಸಲು ಹಾಕುವ ಪೈಪ್‌ಗಳ ಬಳಕೆ, ಅದಕ್ಕಾಗಿ ದೊಡ್ಡ ದೊಡ್ಡ ಯಂತ್ರಗಳ ಅವಲಂಬನೆ, ನೀರು ಪೈಪ್ ಮಾರ್ಗ ಮಧ್ಯದಲ್ಲಿನ ಅರಣ್ಯಗಳ ನಾಶ, ರೈತರ ಜಮೀನು ವಶಪಡಿಸಿಕೊಳ್ಳುವಿಕೆ ಹೀಗೆ ಹಲವು ಸವಾಲುಗಳನ್ನು ಎದುರಿಸುವುದು ಅನಿವಾರ್ಯ. ಇದೆಲ್ಲವನ್ನೂ ಮೀರಿ ಬೆಂಗಳೂರಿಗೆ ನೀರು ತರುತ್ತೇನೆ ಎಂದು ನಿಂತರೆ ಅದರಿಂದ ಲಾಭವಾಗುವುದು ಯೋಜನೆಯ ಗುತ್ತಿಗೆ ಹಿಡಿದ ಉದ್ಯಮಿಗೆ ಮಾತ್ರ.

ಮಲೆನಾಡು ಬರಗಾಲದಿಂದ ತತ್ತರಿಸುತ್ತಿದೆ. ಕಳೆದ ಕೆಲವು ವರ್ಷಗಳ ಅವಧಿಯಲ್ಲಿ ಅಘನಾಶಿನಿ ಹಾಗೂ ಶರಾವತಿ ನದಿಗಳಲ್ಲಿ ನೀರು ತೀರಾ ಕಡಿಮೆಯಾಗಿದೆ. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಅಘನಾಶಿನಿ ನದಿ ಎರಡು ಸಾರಿ ಹರಿವು ನಿಲ್ಲಿಸಿದೆ. ಶರಾವತಿ ನದಿಗೆ ನಿರ್ಮಿಸಲಾಗಿರುವ ಲಿಂಗನಮಕ್ಕಿ ಅಣೆಕಟ್ಟೆಯಲ್ಲಿಯೂ ನೀರು ಸಾಕಷ್ಟಿಲ್ಲ ಎನ್ನುವ ಮಾತುಗಳು ಆಗೀಗ ಕೇಳಿ ಬಂದಿದೆ. ಸಾವಿರಾರು ಕೋಟಿ ಖರ್ಚು ಮಾಡಿದ ನಂತರವಾದರೂ ಬತ್ತಿದ ನದಿಗಳಿಂದ ಬೆಂಗಳೂರಿಗೆ ನೀರು ತಲುಪುತ್ತದೆ ಎನ್ನುವುದಕ್ಕೆ ಯಾವ ಗ್ಯಾರಂಟಿ?

ಇತ್ತೀಚೆಗಷ್ಟೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತುಂಗಭದ್ರಾ ನದಿಯ ನೀರನ್ನು ಬೆಂಗಳೂರಿಗೆ ತರುವುದಾಗಿ ಹೇಳಿದ್ದಾರೆ. ತುಂಗಭದ್ರಾ ನದಿಯ ನೀರನ್ನು ಬೆಂಗಳೂರಿಗೆ ತಂದರೆ, ಸಿಲಿಕಾನ್ ಸಿಟಿಯ ಜಲದಾಹ ತೀರಲಿದೆ ಎಂದು ಹೇಳಿದ್ದಾರೆ. ಎತ್ತಣ ತುಂಗಭದ್ರಾ ನದಿ, ಎತ್ತಣ ಬೆಂಗಳೂರು? ಬಕಾಸುರ ನಗರಿ ಬೆಂಗಳೂರಿನ ಜಲದಾಹ ತೀರಿಸಲು 400-500 ಕಿಲೋಮೀಟರ್ ದೂರದ ತುಂಗಭದ್ರಾ ನದಿಯಿಂದ ನೀರು ತರುವ ಯೋಜನೆ ಸಾಧ್ಯವೇ? ಜನಸಾಮಾನ್ಯನೂ ಕೂಡ ಈ ಕುರಿತು ನಕ್ಕುಬಿಡಬಹುದು. ಆದರೆ ರಾಜ್ಯ ಸರ್ಕಾರದ ಕಿವಿಗೆ ಇಂತಹ ಯೋಜನೆಯನ್ನು ತುಂಬುವ, ತನ್ಮೂಲಕ ಉದ್ಯಮಿಗಳ ಕಿಸೆ ಭರ್ತಿ ಮಾಡುವಂತಹ ಕಾರ್ಯಗಳಿಗೆ ಸಲಹೆ ನೀಡುವ ಯೋಜನಾಧಿಕಾರಿಗಳು ಇಂತಹ ಯೋಜನೆಗಳು ಸಾಧ್ಯ ಎನ್ನುತ್ತಾರೆ.

ಅಘನಾಶಿನಿ-ಶರಾವತಿ ನದಿಯಿಂದ ಬೆಂಗಳೂರಿಗೆ ನೀರು ತರುವಲ್ಲಿ ಎದುರಾಗುವಂತಹ ಭೌಗೋಳಿಕ ಸಮಸ್ಯೆಗಳೇ, ತುಂಗಭದ್ರಾ ನದಿಯಿಂದ ಬೆಂಗಳೂರಿಗೆ ನೀರು ತರುವಂತಹ ಯೋಜನೆಗೂ ಎದುರಾಗುತ್ತವೆ. ಅಲ್ಲದೇ ಮಾರ್ಗ ಮಧ್ಯದಲ್ಲಿ ಲವತ್ತಾದ ಗದ್ದೆಗಳು, ತೋಟಗಳು ಈ ಯೋಜನೆಗೆ ತಲೆಗೊಡಬೇಕಾಗುತ್ತದೆ. ಈ ಯೋಜನೆ ಕೂಡ ಭೌಗೋಳಿಕ ಕಾರಣಗಳಿಂದ ವಿಲವಾಗುವ ಸಾಧ್ಯತೆಗಳೇ ಹೆಚ್ಚು.

ಉತ್ತರ ಕನ್ನಡ ಜಿಲ್ಲೆಯ ಇನ್ನೊಂದು ಪ್ರಮುಖ ನದಿ ಕಾಳಿ. ಜೋಯಿಡಾದಲ್ಲಿ ಹುಟ್ಟಿ ಕಾರವಾರದ ಬಳಿ ಸಮುದ್ರ ಸೇರುವ ಪ್ರಮುಖ ನದಿ. ಐದಕ್ಕೂ ಅಧಿಕ ಅಣೆಕಟ್ಟುಗಳನ್ನು ಹೊಂದಿರುವ, ಕೈಗಾ ಅಣುಸ್ಥಾವರಕ್ಕೆ ಪ್ರತಿ ಕ್ಷಣ ನೀರು ಉಣ್ಣಿಸುತ್ತಿರುವ ನದಿ. ಈ ನದಿಯ ನೀರನ್ನು ಅಮೃತಧಾರಾ ಎಂಬ ಯೋಜನೆಯ ಹೆಸರಿನಲ್ಲಿ ಘಟಪ್ರಭಾ-ಮಲ್ರಭಾ ನದಿಗೆ ಜೋಡಿಸುವುದು ಸರ್ಕಾರದ ಇನ್ನೊಂದು ಯೋಜನೆ.

ಬೆಳಗಾವಿ, ಬಾಗಲಕೋಟೆ, ಧಾರವಾಡ ಹಾಗೂ ಗದಗ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ 5400 ಕೋಟಿ ರೂಪಾಯಿಗಳ ವೆಚ್ಚದ ಯೋಜನೆ ಇದು. ಕಾಳಿ ನದಿಯಲ್ಲಿ ಹರಿಯುವ 10-20 ಟಿಎಂಸಿ ನೀರನ್ನು ಬಳಸಿಕೊಳ್ಳುವ ಚಿಂತನೆ ಈ ಯೋಜನೆಯದ್ದುಘಿ. ಅಂದಹಾಗೆ ಈ ಯೋಜನೆಗೆ ವರದಿ ಸಲ್ಲಿಸುತ್ತಿರುವುದು ಉದ್ಯಮಿ ಸಂಗಮೇಶ ನಿರಾಣಿಯವರು.

ಬಯಲು ಸೀಮೆಯ ಈ ಪ್ರದೇಶಗಳಿಗೆ ಕುಡಿಯುವ ನೀರು ಹಾಗೂ ಕೆರೆ ತುಂಬಲು 10-20 ಟಿಎಂಸಿ ನೀರು ಬಳಸುವುದರಿಂದ ಕಾಳಿ ನದಿ ಬರಿದಾಗುವುದಿಲ್ಲ. ಪಶ್ಚಿಮ ಘಟ್ಟಗಳಲ್ಲಿ ಕರ್ನಾಟಕದಲ್ಲಿ ಪ್ರತಿ ವರ್ಷ ಬೀಳುವ ಮಳೆಯಿಂದ ವಾರ್ಷಿಕ 3,600 ಟಿಎಂಸಿ ನೀರು ದೊರೆಯುತ್ತದೆ. ಅದರಲ್ಲಿ 1,600 ಟಿಎಂಸಿ ನೀರನ್ನು ಮಾತ್ರ ಕೃಷಿ ಕುಡಿವ ನೀರು, ಕೆಗಾರಿಕೆ ನೀರಾವರಿ ಯೋಜನೆ ಗಳಿಗೆ ಬಳಸಿ 2,000 ಟಿಎಂಸಿ ನೀರು ಸಮುದ್ರ ಸೇರುತ್ತದೆ ಎನ್ನುವುದು ನಿರಾಣಿಯವರು ನೀಡುವ ಉತ್ತರ. ಆದರೆ, ನದಿ ತಿರುವಿನಿಂದ ಆಗುವ ಅಡ್ಡ ಪರಿಣಾಮಗಳ ಕುರಿತು ಅವರು ಎಂದಿಗೂ ಮಾತನಾಡುವುದಿಲ್ಲಘಿ.

ಕಾಳಿ ನದಿಯಿಂದ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ನದಿಯನ್ನು ತಿರುಗಿಸುವುದರಿಂದ ವಿದ್ಯುತ್ ಉತ್ಪಾದನೆಗೆ ನೀರಿನ ಕೊರತೆ ಎದುರಾಗುತ್ತದೆ. ಕಾಳಿ ನದಿಯ ನೀರನ್ನೇ ಬಳಸುವ ದಾಂಡೇಲಿಯ ಕಾಗದ ಕಾರ್ಖಾನೆಗೆ ಸಮಸ್ಯೆ ಆಗಬಹುದು. ಹಳಿಯಾಳ, ದಾಂಡೇಲಿ ನಗರಗಳ ಕುಡಿಯುವ ನೀರಿಗೆ ಸಮಸ್ಯೆ ಆಗಬಹುದು. ಅಷ್ಟೇ ಏಕೆ, ಕೈಗಾ ಅಣುಸ್ಥಾವರಕ್ಕೆ ನೀರಿನ ಕೊರತೆಯೂ ಆಗಬಹುದು. ಕೈಗಾ ಅಣುಸ್ಥಾವರಕ್ಕೆ ನೀರಿನ ಸರಬರಾಜು ನಿಂತರೆ ಆಗುವ ಪರಿಣಾಮವನ್ನು ಸಂಗಮೇಶ ನಿರಾಣಿಯವರು ಊಹಿಸಿದ್ದಾರೆಯೇ ಎನ್ನುವುದು ಪರಿಸರವಾದಿಗಳ ಪ್ರಶ್ನೆ.

ಭೌಗೋಳಿಕವಾಗಿ ನೋಡಿದಾಗ ಕಾಳಿ ನದಿಗಿಂತ ಘಟಪ್ರಭಾ ಹಾಗೂ ಮಲಪ್ರಭಾ ನದಿಗಳು ಮೇಲ್ಮಟ್ಟದಲ್ಲಿದೆ. ಕಾಳಿ ನದಿಯಿಂದ ಏತ ನೀರಾವರಿಯೋ ಅಥವಾ ಇನ್ಯಾವುದೇ ತಾಂತ್ರಿಕ ವಿಧಾನಗಳ ಮೂಲಕ ನೀರನ್ನು ಎತ್ತುವುದು ಅನಿವಾರ್ಯ. ನಿರಾಣಿಯವರು ಹೇಳಿರುವುದನ್ನೇ ಗಣನೆಗೆ ತೆಗೆದುಕೊಂಡರೆ, ಹೀಗೆ ನೀರೆತ್ತುವ ಪ್ರದೇಶ ಕಾಳಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಬರುತ್ತದೆ. ಸಂರಕ್ಷಿತ ಅರಣ್ಯ ವಲಯದಲ್ಲಿ ಇಂತಹದ್ದೊಂದು ಯೋಜನೆಯನ್ನು ಅನುಷ್ಠಾನಕ್ಕೆ ತಂದರೆ ಅದರಿಂದ ಉಂಟಾಗುವ ಘೋರ ಪರಿಣಾಮವನ್ನು ಅವರು ಆಲೋಚಿಸಿದ್ದಾರೆಯೇ? ಹೀಗಿದ್ದೂ ಇಂತಹ ಯೋಜನೆಗಳನ್ನು ರೂಪಿಸುತ್ತಿರುವುದು ಏಕೆ ಎನ್ನುವುದು ಪರಿಸರವಾದಿಗಳ ಪ್ರಶ್ನೆಘಿ.

ಯೋಜನೆ ರೂಪಿಸುವವರ ತಲೆಯಲ್ಲಿ ಅದ್ಯಾವ ಭೂತ ಹೊಕ್ಕಿದೆಯೋ? ಅಥವಾ ಅವರ ತಲೆಯಲ್ಲಿ ಮೆದುಳು ಇದೆಯೋ ಅಥವಾ ಬೇರೆ ಇನ್ನೇನೋ ಎನ್ನುವ ಅನುಮಾನ ಮೂಡದೇ ಇರುತ್ತದೆಯೇ? ಗುರುತ್ವಾಕರ್ಷಣ ಶಕ್ತಿಗೆ ಸೆಡ್ಡು ಹೊಡೆಯುವಂತಹ ಚಿಂತನೆಗಳು ಇಂತಹ ಅರೆಬೆಂದ ಯೋಜನಾಧಿಕಾರಿಗಳಿಂದ ಮಾತ್ರ ಸಾಧ್ಯಘಿ.

ಉದ್ಯಮಿಗಳಿಗೆ ಲಾಭ ಮಾಡಿಕೊಡುವಂತಹ ಇಂತಹ ಯೋಜನೆಗಳ ಅಗತ್ಯ ರಾಜ್ಯಕ್ಕಿದೆಯೇ? ಕುಡಿಯುವ ನೀರಿನ ಹೆಸರಿನಲ್ಲಿ ಉದ್ಯಮಿಗಳ ಕಿಸೆಯನ್ನೇಕೆ ಭರ್ತಿ ಮಾಡಬೇಕು? ಅದರ ಬದಲು ಜಲ ಮೂಲಗಳಾದ ಕೆರೆ, ಕುಂಟೆಗಳನ್ನು ಹೂಳೆತ್ತಬಹುದಲ್ಲಘಿ? ನೀರಿಂಗಿಸುವ ಯೋಜನೆಗಳನ್ನು ಕೈಗೊಳ್ಳಬಹುದಲ್ಲ. ಕೆರೆ ಒತ್ತುವರಿಯನ್ನು ತೆರವುಗೊಳಿಸಬಹುದಲ್ಲವಾ? ಇಂತಹ ಪರಿಣಾಮಕಾರಿ ಯೋಜನೆಗಳೇಕೆ ಸರ್ಕಾರಕ್ಕೆ ಕಾಣಿಸುತ್ತಿಲ್ಲ? ಇಂತಹ ಯೋಜನೆಗಳ ಮೂಲಕ ಸರ್ಕಾರ ಜನಸ್ನೇಹಿ ಹಾಗೂ ಪರಿಸರ ಸ್ನೇಹಿ ಆಗುವುದು ಯಾವಾಗ? ದೊಡ್ಡ ದೊಡ್ಡ ಯೋಜನೆಗಳ ಹೆಸರಿನಲ್ಲಿ ಜನಸಾಮಾನ್ಯರ ಕಣ್ಣುಕಟ್ಟುವ ಮೂಲಕ ಹಣವನ್ನು ಉದ್ಯಮಿಗಳ ಕಿಸೆಗೆ ಸುರಿಯುವುದನ್ನು ಸರ್ಕಾರ ನಿಲ್ಲಿಸಲಿ ಎನ್ನುವುದು ಜನಸಾಮಾನ್ಯರ ಆಶಯ. 

No comments:

Post a Comment