Friday, August 13, 2010

ರಂಗಾನುಭವ ~`ಅಣೇಕಟ್ಟು' ~

ಕಾಲೇಜು ದಿನಮಾನದಲ್ಲಿ ಯುವಜನ ಮೇಳಕ್ಕಾಗಿ ನಾವು ಬರೆದು, ನಟಿಸಿ, ಪ್ರಶಸ್ತಿಗಳಿಸಿದ `ಅಣೆಕಟ್ಟು' ಎಂಬ ನಾಟಕದ ಕುರಿತು ನಮ್ಮ ಅನುಭವಗಳನ್ನು ಈ ಲೇಖನದ ಮೂಲಕ ಹಂಚಿಕೊಳ್ಳುತ್ತಿದ್ದೇನೆ. ಸೀಮಿತ ಸಮಯದಲ್ಲಿ ಪ್ರಸ್ತುತ ಜಗತ್ತಿನ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಕಥಾ ವಸ್ತುವನ್ನು ಒಳಗೊಂಡಿದ್ದ ನಮ್ಮ ನಾಟಕ ಬಹಳ ಪ್ರಸಿದ್ಧಿ ಪಡೆಯಿತು. `ಅಣೆಕಟ್ಟು' ನಾಟಕದ ಹಿಂದಿನ ನಮ್ಮ ಕಾರ್ಯ, ಕೆಲಸ, ಅನುಭವ ಇಂತಿದೆ.
---------------------------------------
ಕೇವಲ ಅರ್ಧಗಂಟೆಯ ಅವಧಿಯಲ್ಲಿ ಪ್ರಸ್ತುತ ದಿನಮಾನದ ಸಮಸ್ಯೆಯನ್ನು ನಾಟಕದ ವಿಷಯವನ್ನಾಗಿಸಿಕೊಂಡು ನಾಟಕ ಮಾಡಬೇಕು ಎಂಬ ನಿಯಮದ ಹಿನ್ನೆಲೆಯಲ್ಲಿ ನಾವು `ಅಣೆಕಟ್ಟು' ನಾಟಕ ನಡೆಸಲು ಮುಂದಾದೆವು. ಕರ್ನಾಟಕ ವಿಶ್ವವಿದ್ಯಾಲಯದ ಯುವಜನ ಮೇಳದಲ್ಲಿ ಅಂತರಕಾಲೇಜು ಮಟ್ಟದಲ್ಲಿ ನಾಟಕ ಸ್ಪರ್ಧೆಯಲ್ಲಿ ನಮ್ಮ ಈ ನಾಟಕವನ್ನು ಅಭಿನಯಿಸಿ ತೋರಿಸಬೇಕಿತ್ತು. ಶಿರಸಿ ಕಾಲೇಜಿನ ಸಹಯೋಗದೊಂದಿಗೆ ನಮ್ಮ ಗೆಳೆಯರು ನಾಟಕವನ್ನು ನಡೆಸಲು ಬಲು ಉತ್ಸಾಹದಿಂದಲೇ ಮುಂದಾದರು.
ನಾನು ಬರೆದಿದ್ದ `ಅಣೆಕಟ್ಟು' ಎಂಬ ಸಣ್ಣ ಕಥೆಯನ್ನು ನಾಟಕದ ಕಥಾವಸ್ತುವನ್ನಾಗಿ ನಾವು ಆಯ್ಕೆ ಮಾಡಿಕೊಂಡಿದ್ದೆವು. ಅಣೆಕಟ್ಟು ಕಥೆಯನ್ನೇ ಕೊಂಚ ಬದಲಾಯಿಸಿ ನಾಟಕರೂಪಕ್ಕೆ ಇಳಿಸಿದ್ದೆವು. ಗೆಳೆಯ ರಾಘವ ಹೆಗಡೆ ನಾಟಕದ ನಿದರ್ೇಶನದ ಜವಾಬ್ದಾರಿಯನ್ನು ಹೊತ್ತಿದ್ದ. ಗಣೇಶ್ ಹೆಗಡೆ ಪಾಲಿಕೆ ಕಥಾನಾಯಕ ಬಸವರಾಜುವಿನ ಪಾತ್ರ ಸಿಕ್ಕಿತ್ತು.
ಜೊತೆಗೆ ನಾನು ಗೂಂಡಾ ರಾಜಕಾರಣಿ ರಾಮಪ್ಪನ ಪಾತ್ರ ಮಾಡಿದ್ದೆ. ರಾಘವ ಹೆಗಡೆ ರಾಜಕಾರಣಿಯಾಗಿ ನಟಿಸಿದ್ದರೆ, ವಿನಾಯಕ ಹಾಗೂ ಗಣೇಶ್ ವಾನಳ್ಳಿ ಊರಿನ ಗ್ರಾಮಸ್ಥರ ಪಾತ್ರ ಮಾಡಿದ್ದರು. ನಾಗರಾಜ್ ಹೆಗಡೆ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದ. ಮೃತ್ಯುಂಜಯ ಕೆ. ಎಂ. ಪೊಲೀಸ್ ಪೇದೆಯಾಗಿ ಜೊತೆಗೆ ಸೌಮ್ಯಾ, ವಂದನಾ ಜೋಶಿ ಊರಿನ ಮಹಿಳೆಯರ ಪಾತ್ರದಲ್ಲಿ ಅಭಿನಯಿಸಿದ್ದರು.

ಕಥಾವಸ್ತು
ನಿಸರ್ಗದ ನಡುವಿನ, ನದಿ ದಡದ ಊರಿನಲ್ಲಿ ಅಣೆಕಟ್ಟು ನಿಮರ್ಾಣವಾಗುವ ಸುದ್ದಿ ಊರಿನ ಅನಕ್ಷರಸ್ಥ ಜನರಲ್ಲಿ ವಿವಿಧ ಅಭಿಪ್ರಾಯ ಬದಲಾವಣೆಗೆ ಕಾರಣವಾಗುತ್ತದೆ. ಕೆಲವರು ಅಣೆಕಟ್ಟೆಯ ಪರ ಮಾತನಾಡಿದರೆ ಮತ್ತೆ ಕೆಲವರು ಅಣೆಕಟ್ಟೆಯ ವಿರುದ್ಧ ದನಿ ಎತ್ತುತ್ತಾರೆ. ಈ ಊರಿನ ಅಕ್ಷರಸ್ಥ ಯುವಕ ಬಸವರಾಜು ಅಣೆಕಟ್ಟೆ ನಿಮರ್ಾಣವನ್ನು ವಿರೋಧಿಸುತ್ತಾನೆ. ಅಣೆಕಟ್ಟೆ ನಿರಮಾಣದಿಂದ ಉಂಟಾಗುವ ತೊಂದರೆಗಳನ್ನು ಊರಿನ ಜನರಿಗೆ ವಿವರಿಸಿ ಹೇಳಿ ಅಣೆಕಟ್ಟೆಯ ವಿರುದ್ಧ ಹೋರಾಟಕ್ಕೆ ಮುಂದಾಗುತ್ತಾನೆ.
ಅಣೆಕಟ್ಟೆಯ ವಿರುದ್ಧ ಬಸವರಾಜು ಮುಂದಾಳತ್ವದಲ್ಲಿ ಹೋರಾಟ ಜೋರಾದಾಗ ಆ ಕ್ಷೇತ್ರದ ಶಾಸಕನ ರಂಗಪ್ರವೇಶವಾಗುತ್ತದೆ. ಹೋರಾಟಕ್ಕೆ ಕಾರಣಗಳನ್ನು ತಿಳಿದ ರಾಜಕಾರಣಿ ಹೋರಾಟಗಾರರ ಪರವಾಗಿ ನಿಲ್ಲುತ್ತಾನೆ. ವಿದ್ಯಾವಂತ ಅನಾಥ ಯುವಕ ಬಸವರಾಜು ರಾಜಕಾರಣಿಯ ಮನಗೆಲ್ಲುತ್ತಾನೆ. ಬಸವರಾಜುವಿನ ಹೋರಾಟಕ್ಕೆ, ಜನಪರ ನಿಲುವಿಗೆ ಮನಸೋತ ರಾಜಕಾರಣಿ ಬಸವರಾಜುನನ್ನು ತನ್ನ ಮಗನನ್ನಾಗಿ ದತ್ತು ತೆಗೆದುಕೊಳ್ಳುತ್ತಾನೆ.
ಕೆಲ ಕಾಲದ ನಂತರ ರಾಜಕಾರಣಿ ಬಸವರಾಜುನ ಮದುವೆಗೆ ಮುಂದಾಗುತ್ತಾನೆ. ಪರಿಚಿತ ರಾಜಕಾರಣಿಯ ಮಗಳನ್ನು ಆತನಿಗೆ ಮದುವೆ ಮಾಡಿಸಲು ಪ್ರಯತ್ನಿಸುತ್ತಾನೆ. ಮದುವೆಗೆ ಒಪ್ಪದ ಬಸವರಾಜುನನ್ನು ಮದುವೆಗೆ ಒಪ್ಪಿಸುತ್ತಾನೆ.
ಅದೇ ಪ್ರದೇಶದ ಮತ್ತೊಬ್ಬ ರಾಜಕಾರಣಿ ರಾಮಪ್ಪ ಬಸವರಾಜುಗೆ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಲು ಒಪ್ಪುತ್ತಾನೆ. ಮದುವೆಯ ಬಗ್ಗೆ ಮಾತುಕತೆಯೂ ನಡೆಯುತ್ತದೆ. ರಾಮಪ್ಪ ಬಸವರಾಜುವಿಗೆ ವರದಕ್ಷಿಣೆ ರೂಪದಲ್ಲಿ ಎರಡು ಲಕ್ಷ ರೂಪಾಯಿಗಳನ್ನು ನೀಡಲು ಮುಂದಾಗುತ್ತಾನೆ. ಆದರೆ ಬಸವರಾಜು ಇದಕ್ಕೊಪ್ಪುವುದಿಲ್ಲ. ಕೊನೆಗೆ ಅನಾಥ ಬಸವರಾಜು ಮದುವೆ  ಸಮಾರಂಭದ ಅಗತ್ಯ ಪೂರೈಸುವ ಸಲುವಾಗಿ ಆ ಹಣವನ್ನು ಸ್ವೀಕರಿಸಬೇಕು ಎಂದು ರಾಮಪ್ಪ ಒತ್ತಾಯಿಸುತ್ತಾನೆ. ಬಸವರಾಜು ಇದಕ್ಕೆ ಅನಿವಾರ್ಯವಾಗಿ ಒಪ್ಪಿ ಹಣ ಸ್ವೀಕರಿಸುತ್ತಾನೆ.
ಆದರೆ ಮರುದಿನ ರಾಮಪ್ಪ ತನ್ನ ಎರಡು ಲಕ್ಷ ರೂಪಾಯಿ ಕಳ್ಳತನವಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡುತ್ತಾನೆ. ಪೊಲೀಸರು ಹುಡುಕಿದಾಗ ಬಸವರಾಜುನ ಮನೆಯಲ್ಲಿ ಎರಡು ಲಕ್ಷ ರೂಪಾಯಿ ಸಿಗುತ್ತದೆ. ಬಸವರಾಜು ಮೇಲೆ ಕಳ್ಳತನದ ಆರೋಪ ಬರುತ್ತದೆ. ಪೊಲೀಸರು ಬಸವರಾಜುನನ್ನು ಬಂಧಿಸಲು ಮುಂದಾಗುತ್ತಾರೆ. ಬಸವರಾಜು ಎಷ್ಟು ಸಮಜಾಯಿಶಿ ನೀಡಿದರೂ ಪೊಲೀಸರು ಹಾಗೂ ಜನರು ಅದನ್ನು ನಂಬುವುದಿಲ್ಲ. ಶಾಸಕನಿಗೆ ಸುದ್ದಿ ತಿಳಿದು ಬಸವರಾಜುನನ್ನು ವಿಚಾರಿಸುತ್ತಾನೆ. ಆದರೆ ಕೊನೆಗೆ ಶಾಸಕನೂ ಬಸವರಾಜುವಿನ ಮಾತನ್ನು ನಂಬದಾದಾಗ ಊರಿನ ಗ್ರಾಮಸ್ಥರು ಬಸವರಾಜುವಿನ ವಿರುದ್ಧ ತಿರುಗಿ ಬೀಳುತ್ತಾರೆ. ಆತನ ಮೇಲೆ ಹಲ್ಲೆಗೂ ಮುಂದಾಗುತ್ತಾರೆ. ಆಗ ನಡೆಯುವ ಗಲಾಟೆಯಲ್ಲಿ ರೌಡಿಗಳು ಬಸವರಾಜುನ ಹತ್ಯೆ ಮಾಡುತ್ತಾರೆ.
ಹತ್ಯೆಯ ಆರೋಪ ಊರಿನ ನಾಗರಿಕರ ಮೇಲೆ ಬರುತ್ತದೆ. ರಾಜಕಾರಣಿ ಊರಿನ ನಾಗರಿಕರ ಪರವಾಗಿ ನಿಂತು ಪೊಲೀಸರನ್ನು ವಿರೋಧಿಸುತ್ತಾನೆ. ಗ್ರಾಮಸ್ಥರ ಪರವಾಗಿ ವಾದಿಸಿ ಅವರನ್ನು ಪೊಲೀಸರು ಬಿಟ್ಟುಬಿಡುವಂತೆ ಮಾಡುತ್ತಾನೆ. ಈ ಮೂಲಕ ಜನಬೆಂಬಲ ಗಳಿಸುತ್ತಾನೆ. ಅಣೆಕಟ್ಟೆಯ ಹೋರಾಟ ನಿಧಾನವಾಗಿ ತಣ್ಣಗಾಗುತ್ತದೆ.
ಕೊನೆಯಲ್ಲಿ ತಿಳಿದುಬರುವ ಅಂಶವೆಂದರೆ ಶಾಸಕನ ಕುತಂತ್ರದಿಂದ ನಾಯಕ ಬಸವರಾಜು ಮೇಲೆ ಕಳ್ಳತನದ ಆರೋಪ ಬರುತ್ತದೆ. ಅಷ್ಟೆ ಅಲ್ಲದೆ ಜನರು ಗಲಾಟೆ ಪ್ರಾರಂಭಿಸಿದಾಗ ಶಾಸಕನ ಕಡೆಯ ಜನರೇ ಬಸವರಾಜುನ ಹತ್ಯೆಯನ್ನೂ ಮಾಡುತ್ತಾರೆ. ಆದರೆ ಮಂತ್ರಿಯ ದೆಸೆಯಿಂದ ಇದು ತಿಳಿಯುವುದೇ ಇಲ್ಲ. ಇದು ನಾಟಕದ ಕಥಾವಸ್ತು.

ಗಿಮಿಕ್...
ನಾಟಕ ಯಶಸ್ವಿಯಾಗಬೇಕೆಂದರೆ ಗಿಮಿಕ್ಗಳು ಇರಬೇಕು. ಇದು ಆಧುನಿಕ ನಾಟಕರಂಗದಲ್ಲಿ ಅತ್ಯಂತ ಅವಶ್ಯಕ. ನಾವೂ ಇದಕ್ಕೆ ತಕ್ಕಂತೆ ನಾಟಕದಲ್ಲಿ ಹಲವು ಗಿಮಿಕ್ಗಳನ್ನು ಅಳವಡಿಸಿದ್ದೆವು.
ಅಣೆಕಟ್ಟು ನಾಟಕ ಪ್ರಾರಂಭವಾಗುವುದೇ ವ್ಯಕ್ತಿಯೋಬ್ಬನ ಶವದ ಮೆರವಣಿಗೆಯಿಂದ. ಜನರಲ್ಲಿ ಕುತೂಹಲ ಹುಟ್ಟಿಸಲಿ ಎಂಬ ಉದ್ದೇಶದಿಂದ ಇದನ್ನು ನಾವು ಅಳವಡಿಸಿದ್ದೆವು. ಇದು ಬಹಳ ಯಶಸ್ವಿಯೂ ಆಯಿತು.
ಇಂದಿನ ಜಮಾನಾದಲ್ಲಿ ಹಲವು ಸಿನಿಮಾಗಳಲ್ಲಿ ನಿರೂಪಕನ ಪಾತ್ರ ಬರುತ್ತದೆ. ಯಾರೋ ಒಬ್ಬಾತ ಕಥೆಯನ್ನು ಕೇಳುತ್ತಾ ಹೋಗುತ್ತಾನೆ. ನಾವೂ ಈ ನಿರೂಪಣೆಯ ತಂತ್ರವನ್ನು ಬಳಸಿದ್ದೆವು. ಆದರೆ ನಮ್ಮ ನಾಟಕದಲ್ಲಿ ನಿರೂಪಕ ತೆರೆಯ ಮೇಲೆ ಬರದೆ ತೆರೆಯ ಹಿಂದಿನಿಂದಲೇ ಕಥೆಯನ್ನು ಹೇಳುವಂತೆ ಮಾಡಿದ್ದೆವು. ಈ ಕಥೆಯನ್ನು ಹಾಡಿನ ಮೂಲಕ ಹೇಳಿದೆವು. ಈ ತಂತ್ರವೂ ಸಾಕಷ್ಟು ಯಶಸ್ವಿಯಾಯಿತು.
ನಾಟಕದ ಕೊನೆಯ ಭಾಗದಲ್ಲಿ ಇನ್ನೊಂದು ತಂತ್ರವನ್ನು ಬಳಸಿದೆವು. ಹಾಡೊಂದನ್ನು ಬಳಕೆ ಮಾಡಿಕೊಂಡು ಆ ಹಾಡಿನಲ್ಲಿ ಪ್ರಸ್ತುತ ರಾಜಕಾರಣಿಗಳ, ಖಾಕಿಯ ಇತರ ಸಮಾಜದ ವಿವಿಧ ವ್ಯಕ್ತಿಗಳು ಜನಸಾಮಾನ್ಯರನ್ನು ಶೋಷಿಸುವ ರೀತಿಯನ್ನು ಅಭಿನಯಿಸಿದೆವು. ಸಮಾಜದಲ್ಲಿ ದುಡ್ಡು ಯಾವ ರೀತಿ ಜನರನ್ನು ಬದಲಾಯಿಸುತ್ತದೆ ಎಂಬುದನ್ನು ಅಭಿನಯಿಸಿದೆವು. ಈ ತಂತ್ರವೂ ಯಶಸ್ವಿಯಾಯಿತು.
ಈ ನಾಟಕದಲ್ಲಿ ನಾಯಕ ಸಾಯುತ್ತಾನೆ. ಖಳನಾಯಕ ವಿಜ್ರಂಭಿಸುತ್ತಾನೆ. ಪ್ರಸ್ತುತ ಜಗತ್ತಿನ ಕುತಂತ್ರಿ ರಾಜಕಾರಣಿಗಳನ್ನು ನಾಟಕ ತೋರಿಸುತ್ತದೆ. ಈ ರಾಜಕಾರಣಿಗಳು ಜನರ ನಡುವೆಯೆ ಇದ್ದು, ಪರಿಸ್ಥಿತಿಯನ್ನು ಹೇಗೆ ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಾರೆ ಎಂಬುದನ್ನು ಈ ನಾಟಕ ವಿವರಿಸಿದ್ದರಿಂದ ಬಹಳ ಪ್ರಸಿದ್ಧಿಯನ್ನು ಪಡೆಯಿತು.
ಈ ಗಿಮಿಕ್ಗೆ ಅಗತ್ಯವಿದ್ದ ಅಮೋಘ ಅಭಿನಯವನ್ನು ರಾಘವ್, ಗಣೇಶ್, ನಾಗರಾಜ್ ಹಾಗೂ ಇತರರು ನೀಡಿದ್ದರಿಂದ ನಾಟಕ ಸುಂದರವಾಗಿ ಮೂಡಿ ಬಂದಿತು.
`ಅಣೆಕಟ್ಟು' ಇದೊಂದು ಏಕಾಂಕ ನಾಟಕ. ಈ ನಾಟಕಕ್ಕೆ ನಾಗರಾಜ್ ವಿಶೇಷವಾದ ಬಿದಿರಿನ ಮನೆಯೊಂದನ್ನು ತಯಾರಿಸಿದ್ದ. ಸುಪ್ರಿತಾ ಶಿರೂರ್ ಅವರ ಕೈಚಳಕದಲ್ಲಿ ರಂಗದ ಮೇಲಿನ ವಸ್ತುಗಳಿಗೆ ಜೀವಕಳೆ ಬಂದಿತ್ತು. ಅವರ ಕೈಚಳಕದಲ್ಲಿ ತಯಾರಾಗಿದ್ದ ಮರದ ಕಲಾಕೃತಿಗಳು ಪ್ರೇಕ್ಷಕರನ್ನು ವಿಶೇಷವಾಗಿ ಸೆಳೆದವು.

ಹಾಡು-ಸಂಗೀತ
ನಾಟಕಕ್ಕೆ ನಾಗರಾಜ್ ಜೋಗಿ ಸುಂದರ ಸಂಗೀತವನ್ನು ನೀಡಿದ್ದರು. ನಾಟಕದಲ್ಲಿ ಮೂರು ಹಾಡುಗಳನ್ನು ಬಳಸಲಾಗಿತ್ತು. ಹಸಿರು ಗ್ರಾಮವೊಂದರ ಎಲ್ಲ ಗುಣಗಳನ್ನು ಸಾರುವ ನಾಲ್ಕು ಸಾಲಿನ ಚಿಕ್ಕ ಪದ್ಯ, ಅಣೆಕಟ್ಟಿನ ಬಗ್ಗೆ ಜನರು ತಮ್ಮ ತಮ್ಮಲ್ಲಿಯೇ ಹಾಡಿಕೊಳ್ಳುವ ಚಿಕ್ಕ ಹಾಡನ್ನು ಮೊದಲು ಬಳಸಿದ್ದೆವು. ನಾಟಕದ ಕೊನೆಯಲ್ಲಿ ಸಮಾಜದ ವಿವಿಧ ಕ್ರೂರತೆಯನ್ನು ಸಾರುವ ರೂಪಕ ಅಂಶಗಳನ್ನು ಹೊಂದಿರುವ `ಸಾವು...' ಎಂಬ ಹಾಡನ್ನೂ ಬಳಸಿಕೊಂಡಿದ್ದೆವು.
ಸಾವು, ಸಾವು.. ಭೃಷ್ಟಾಚಾರಕ್ಕೆ ಬಂದಂತ ಗೆಲುವು
ಆಸೆಯ ಕನಸಿನ ಸಾವು...
ಎಂಬ ಸಾಲನ್ನು ಹೊಂದಿದ್ದ ಈ ಹಾಡು ಅತ್ಯಂತ ಪರಿಣಾಮಕಾರಿಯಾಯಿತು ಅಲ್ಲದೆ ಜನಮನ ಸೂರೆಗೊಂಡಿತು.

ಪ್ರಶಸ್ತಿ
ಈ ನಾಟಕಕ್ಕೆ ಜಿಲ್ಲಾಮಟ್ಟದಲ್ಲಿ ಮೊದಲ ಪ್ರಶಸ್ತಿ ದೊರಕಿತು. ಅಲ್ಲದೆ ಕನರ್ಾಟಕ ವಿಶ್ವವಿದ್ಯಾಲಯದಲ್ಲಿ ನಡೆದ ಯುವಜನ ಮೇಳದಲ್ಲಿ ಮೂರನೆ ಸ್ಥಾನ ಗಳಿಸಿತು. ನಾಯಕನ ಸಾವು, ಖಳನಾಯಕನ ಜಯವನ್ನು ಬಿಂಬಿಸಿದ ಅಣೆಕಟ್ಟು ನಾಟಕ ಜನಮನ ಸೂರೆಗೊಂಡಿತು.

ವಿನಯ್ ದಂಟಕಲ್

Tuesday, August 3, 2010

ಬೀದಿ ಬದಿ ಸೃಷ್ಟಿಯಾಗುವ ಕಲಾಕೃತಿಗಳು


ಅವರು ರಸ್ತೆ ಬದಿಯ ಕಲಾಕಾರರು. ಬೆಂಗಳೂರಿನ ಹಲವು ಪ್ರದೇಶಗಳ ಬೀದಿ ಬದಿಗಳಲ್ಲಿ ಟೆಂಟು ಕಟ್ಟಿಕೊಂಡು ತಾವು ತಯಾರಿಸಿದ ಅಚ್ಚಿನ ಸುಂದರ ಮೂತರ್ಿಗಳನ್ನು, ಕಲಾಕೃತಿಗಳನ್ನು ಮಾರಾಟ ಮಾಡುತ್ತಾ ಜೀವನ ಸಾಗಿಸುತ್ತಿರುವ ಉತ್ತರ ಭಾರತೀಯ ಮೂಲದ ಈ ವ್ಯಕ್ತಿಗಳ ಕೈಯಲ್ಲಿ ಮಣ್ಣುಗಳು ಒಂದು ರೂಪ ತಳೆಯುತ್ತವೆ, ಭಾವವನ್ನು ಹೊರಸೂಸುತ್ತವೆ.  
ಈ ಬೀದಿ ಬದಿಯ ವಿಶಿಷ್ಟ ಕಲಾವಿದರ ಕೈಯಲ್ಲರಳಿದ ಕಲಾಕೃತಿಗಳನ್ನು ಬಳಸಿ ಮನೆಯನ್ನು ಸುಂದರಗೊಳಿಸಿಕೊಂಡಿರುವವರು ಹಲವರು. ಹೊಸ ಮನೆ ಕಟ್ಟಿಸುವವರು, ಮನೆ ಅಲಂಕಾರ ಮಾಡುವವರು, ಮನೆಯೊಳಗಿನ ಶೋಕೇಸ್ನ್ನು ಅಂದಗೊಳಿಸುವವರು, ಗಾರ್ಡನಿಂಗ್ನಲ್ಲಿ ಆಸಕ್ತಿ ಇರೋರು ಹೀಗೆ ಕಲಾರಸಿಕರು ಈ ಬೀದಿ ಬದಿಯ ಕಲಾಕಾರರು ತಯಾರಿಸುವ ಮೂತರ್ಿಗಳನ್ನು ತೆಗೆದುಕೊಂಡು ಹೋಗಿ ಮನೆಯನ್ನು ಅಂದ-ಚಂದಗೊಳಿಸಿಕೊಳ್ಳುತ್ತಾರೆ.
ಬೀದಿ ಬದಿಯಲ್ಲಿ ದೊರೆಯುವ ಮಣ್ಣಿನ ಕಲಾಕೃತಿಗಳು ತುಂಬ ಆಕರ್ಷಕ ಹಾಗೂ ಸುಂದರವಾದವುಗಳು. ನಿಮರ್ಾಣಗೊಳ್ಳುತ್ತಿರುವ ಮನೆಗೆ ದೃಷ್ಟಿ ಬೀಳಬಾರದೆಂದು ಕಟ್ಟುವ ದೃಷ್ಟಿ ಬೊಂಬೆಯಿಂದ ಹಿಡಿದು ವಿವಿಧ ರೀತಿಯ ಮನಸೆಳೆಯುವ ವಸ್ತುಗಳು ಅಂದರೆ ಹೂದಾನಿಗಳು, ಬೊಂಬೆಗಳು, ಸಾಯಿಬಾಬಾ, ರಾಧಾಕೃಷ್ಣ ಮುಂತಾದ ದೇವರ ಮೂತರ್ಿಗಳು, ಮನೆಯ ಸಿಂಗಾರಕ್ಕೆ ಬಳಸುವ ನವಿಲು, ಗಿಳಿ ಇತ್ಯಾದಿ ಪಕ್ಷಿಗಳ ಮಾದರಿಗಳು, ಗೋಡೆಗಳ ಸಿಂಗಾರಕ್ಕೆ ಬಳಸುವಂತವುಗಳು ಹೀಗೆ ವಿವಿಧ ರೀತಿಯ ಮೋಹಕ ವಸ್ತುಗಳು  ಅಲ್ಲಿ ಮೈದಳೆಯುತ್ತವೆ, ಮಾರಾಟವಾಗುತ್ತವೆ.
ಇಲ್ಲಿನ ಕಲಾಕೃತಿಗಳಿಗೆ ಕೊಡಲಾಗುವ ಬಣ್ಣಗಳೂ ತುಂಬ ವಿಶಿಷ್ಟವಾದದ್ದು. ಈ ಬೀದಿ ಬದಿಯ ಕಲಾಕಾರರು ಬಣ್ಣವನ್ನು ಮಿಶ್ರಣ ಮಾಡಿ ಈ ಮಣ್ಣಿನ ಕಲಾಕೃತಿಗಳಿಗೆ ಲೇಪಿಸಿದರೆ ಅವುಗಳನ್ನು ನೋಡಲು ಸುಂದರ ಅನುಭವವಾಗುತ್ತದೆ. ಅವರ ಕೈಚಳಕದಲ್ಲಿ ಆಕೃತಿ ಪಡೆದ ಬಣ್ಣವನ್ನು ಧರಿಸಿ ಹೊರಬರುವ ವಿಶಿಷ್ಟ ಕಲಾಕೃತಿಗಳು ನೋಡುಗರನ್ನು ಥಟ್ಟನೆ ಸೆಳೆಯುತ್ತವೆ.
ತಮ್ಮ ಕಲಾ ಸೊಬಗನ್ನು ಪ್ರದಶರ್ಿಸುವ ಈ ಬೀದಿ ಬದಿಯ ಕಲಾಕಾರರು ಉತ್ತರ ಭಾರತದವರಾದರು ಇವರಲ್ಲಿ ಅನೇಕರು ರಾಜಾಸ್ತಾನಕ್ಕೆ ಸೇರಿದವರು. ಸಾಮಾನ್ಯವಾಗಿ  ಹತ್ತಕ್ಕಿಂತ ಹೆಚ್ಚಿನ ಸಂಖ್ಯೆಯ ಸದಸ್ಯರಿರುವ ಇವರ ಕುಟುಂಬದಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ ಪ್ರತಿಯೊಬ್ಬರೂ ವಿವಿಧ ರೀತಿಯ ಕರುಕುಶಲ ವಸ್ತುಗಳನ್ನು ತಯಾರಿಸುತ್ತಾರೆ. ರಾಜಧಾನಿಯ ಸುಂಕದಕಟ್ಟೆ, ಕೊಟ್ಟಿಗೆಪಾಳ್ಯ, ಕೆ.ಆರ್. ಪುರಂ, ಬಾಣಸವಾಡಿ, ಯಶವಂತಪುರ ಮುಂತಾದ ಕಡೆಗಳಲ್ಲಿ ಬೀದಿ ಬದಿಯಲ್ಲಿ ಟೆಂಟು ಕಟ್ಟಿಕೊಂಡು ತಾವು ತಯಾರಿಸುವ ಮಣ್ಣಿನ ವಿಶಿಷ್ಟ ಕಲಾಕೃತಿಗಳನ್ನು ಮಾರಾಟ ಮಾಡುತ್ತಾರೆ. 50 ರೂ.ಗಳಿಂದ 500 ರೂಪಾಯಿಗಳವರೆಗೆ ಬೆಲೆ ಇದೆ. ಚೆಂದದ ಮೂತರ್ಿಗಳನ್ನು ಕೆಲವರು ಕೊಂಡುಕೊಂಡರೂ ಹಲವರು ಅದನ್ನು ನೋಡಿ ರೇಟು ಕೇಳಿ ಚೌಕಾಸಿ ಮಾಡಿ ಖರೀದಿಸುವವರೂ ಇದ್ದರೆ, ಮತ್ತೆ ಕೆಲವರು ವಸ್ತುಗಳ ವೀಕ್ಷಣೆ ಮಾಡಿ, ಏನೂ ಖರೀದಿಸದೆ ಹೋಗುತ್ತಾರೆ.
ಮಣ್ಣಿನಿಂದ ತಮ್ಮ ಬದುಕನ್ನು ಕಟ್ಟಿಕೊಂಡು ಜೀವನ ನಡೆಸುತ್ತಿರುವ ಈ ಬಡ ಕಲಾಕಾರರು ಎದುರಿಸುವ ಸಮಸ್ಯೆಗಳು ಹಲವಾರು. ಗೊತ್ತಿರುವ ಕಲೆಯೊಂದಿಗೆ ಗೊತ್ತಿರದ ಪ್ರದೇಶಕ್ಕೆ ಧೈರ್ಯಮಾಡಿ ಬಂದಿರುವ ಈ ಮಂದಿಗೆ ಈ ವೃತ್ತಿ ಹೆಚ್ಚಿನ ಲಾಭ ತರದಿದ್ದರೂ ಜೀವನ ನಿರ್ವಹಣೆಯಾದರೆ ಸಾಕು ಎಂಬ ಭಾವನೆಯೂ ಇಟ್ಟುಕೊಂಡೇ ದಿನ ನೂಕುತ್ತಿದ್ದಾರೆ. ತಾವು ತಯಾರಿಸಿದ ವಸ್ತುಗಳು ಮಾರಾಟವಾದರೆ ಆದೀತು, ಇಲ್ಲದಿದ್ದರೆ ಇಲ್ಲ. ಇಂತಹ ಮಣ್ಣಿನ ಮೂತರ್ಿ, ಇತರ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡಿ ಬದುಕು ನಿರ್ವಹಣೆ ಮಾಡುತ್ತಿರುವ ರಾಜಸ್ತಾನ ಮೂಲದ ವ್ಯಕ್ತಿ ಸುಂಕದಕಟ್ಟೆಯಲ್ಲಿ ಮಾತಿಗೆ ಸಿಕ್ಕಾಗ ಹೇಳಿದ್ದು: `ದೊಡ್ಡ ದೊಡ್ಡ ಮಾಲ್ಗಳಲ್ಲಿ ಕೇಳಿದ ಬೆಲೆಗೆ ಖರೀದಿಸುವ ಗ್ರಾಹಕರು ನಮ್ಮ ವಸ್ತುಗಳಿಗೆ ಬಹಳ ಚೌಕಾಸಿ ಮಾಡುತ್ತಾರೆ. ಅವರು ಹೇಳುವ ರೇಟು ನಮಗೆ ಹೊಂದುವುದಿಲ್ಲ. ಈ ವೃತ್ತಿ ಲಾಭದಾಯಕ ಅಲ್ಲ. ಈ ಮೂತರ್ಿಗಳ ಮಾರಾಟದಿಂದ ನಮ್ಮ ಜೀವನ ನಡೆಯಬೇಕು. ತಂತ್ರಜ್ಞಾನ ಮುಂದುವರಿದಂತೆ ನಮ್ಮ ಬದುಕು ದುಸ್ತರವಾಗುತ್ತಿದೆಯೇನೋ ಎಂಬ ಶಂಕೆಯೂ ಬರುತ್ತದೆ'.
ಮನೆಯ ಅಂದಕ್ಕೆ ತಮ್ಮದೇ ಆದ ಹೊಳಪು ನೀಡುವ ಈ ಕಲಾಕೃತಿಗಳು ಅದರ ತಯಾರಕರ ಬದುಕನ್ನೂ ಕಟ್ಟಿಕೊಡುವ ಕಾರ್ಯ ಮಾಡುತ್ತವೆ. ಈ ಬೀದಿಬದಿಯ ಕಲಾಕಾರರ ಭಾವನೆಗೆ ಸೂಕ್ತ ಬೆಲೆ ದೊರೆತರೆ ಇವರ ಕಾರ್ಯಕ್ಕೆ ಅದು ಒತ್ತಾಸೆಯಾದಂತೆ.
ವಿನಯ್ ದಂಟಕಲ್

Friday, July 9, 2010

ನೀನು

ಎದೆಯ ಬೃಂದಾವನದ
ಹಸಿರು ಹೂಗಿಡ ನೀನು,
ನನ್ನೊಳಗೆ ನೀನಿರಲು
ಬಾಳಿಗದು ಶೋಭೆ ||


ನನ್ನ ಬಯಕೆಯ ಮನದ
ಕಣ್ಣರೆಪ್ಪೆಯು ನೀನು,
ನನ್ನುಳಿಸೆ ನೀನಿರಲು
ಬಾಳಿಗದು ರಕ್ಷೆ ||


ನನ್ನ ಅಕ್ಷಿ ಆಳದೊಳು
ಕಿಡಿ ಕಾಂತಿ ನೀನು,
ಬದುಕೊಳಗೆ ನೀನಿರಲು
ಕಡೆಗೋಲು ಛಲ ||

ಒಡಲ ತಿಳಿ ನೀರಿನಲಿ
ಹಸಿರು ಹಾವಸೆ ನೀನು,
ನೀರೊಳಗೆ ನೀನಿರಲು
ಅಲ್ಲಹುದು ಸೃಷ್ಟಿ ||


-ವಿನಯ್ ದಂಟಕಲ್

Monday, July 5, 2010

ಕನ್ನಡದ ಕ್ಲಾಸಿಕ್ `ಭೂತಯ್ಯನ ಮಗ ಅಯ್ಯು'

ನಿರ್ದೆಶಕ : ಸಿದ್ಧಲಿಂಗಯ್ಯ
ಕಥೆ : ಗೋರೂರು ರಾಮಸ್ವಾಮಿ ಅಯ್ಯಂಗಾರ್

ನಿರ್ಮಾಪಕ : ಜೈನ್ ಕಂಬೈನ್ಸ್
ಛಾಯಾಗ್ರಹಣ : ಡಿ. ವಿ. ರಾಜಾರಾಂ
ಚಿತ್ರ ಬಿಡುಗಡೆ : 1974
ಸಂಗೀತ : ಜಿ. ಕೆ. ವೆಂಕಟೇಶ್
ತಾರಾಗಣದಲ್ಲಿ : ವಿಷ್ಣುವರ್ಧನ್, ಲೋಕೇಶ್, ಎಂ. ಪಿ. ಶಂಕರ್, ಬಾಲಕೃಷ್ಣ, ಲೋಕನಾಥ್ ಮುಂತಾದವರು.

ಕನ್ನಡದ ಕ್ಲಾಸಿಕ್ ಚಿತ್ರಗಳ ಬಗ್ಗೆ ಕಣ್ಣಾಡಿಸಿದಾಗ ಎಲ್ಲಕ್ಕಿಂತ ಮೊದಲು ಕಂಡುಬರುವ ಚಿತ್ರ `ಭೂತಯ್ಯನ ಮಗ ಅಯ್ಯು'. ಸಾಹಿತ್ಯ ಆಕಾಡಮಿ ಪ್ರಶಸ್ತಿ ವಿಜೇತ ಗೋರೂರು ರಾಮಸ್ವಾಮಿ ಅಯ್ಯಂಗಾರರ ಕಾದಂಬರಿ ಆಧಾರಿತ ಭೂತಯ್ಯನ ಮಗ ಅಯ್ಯು, ಚಿತ್ರರಂಗದಲ್ಲಿ ವಿಷ್ಣುವರ್ಧನ್ಗೆ ಭದ್ರವಾದ ನೆಲೆ ನೀಡಿದ ಚಿತ್ರ.
ಜಮೀನ್ದಾರ ಭೂತಯ್ಯ(ಎಂ.ಪಿ. ಶಂಕರ್) ಭಾರಿ ಜುಗ್ಗ. ಇನ್ನೊಬ್ಬರ ತಲೆಒಡೆದು ದುಡ್ಡುಮಾಡುವ ವ್ಯಕ್ತಿ. ಸುಳ್ಳು ದಾಖಲೆಗಳ ಮೂಲಕ ಇನ್ನೊಬ್ಬರ ಜಮೀನು ಕಬಳಿಸುವಾತ. ಊರಿನ ಜನರಿಗೆ ಆತನೆಂದರೆ ತಿರಸ್ಕಾರ. ಆತನ ಹಾದಿಯಲ್ಲೇ ಸಾಗುವ ಮಗ ಅಯ್ಯು(ಲೋಕೇಶ್). ಊರ ಮಂದಿಗೆ ಮೋಸ ಮಾಡಿ ತನ್ನ ಬದುಕು ಕಟ್ಟಿಕೊಳ್ಳುವ ಭೂತಯ್ಯ ಮೋಸ ಮಾಡುತ್ತಲೆ ಜೀವ ಬಿಡುತ್ತಾನೆ. ಆತನ ನಂತರ ಮಗ ಅಯ್ಯು ಸಹ ಅದೇ ರೀತಿ ನಡವಳಿಕೆ ಪ್ರದರ್ಶಿಸುತ್ತಾನೆ. ನಡುವೆ ಊರಿನ ವ್ಯಕ್ತಿಯೊಬ್ಬನ ಮಗ ಗುಳ್ಳ (ವಿಷ್ಣುವರ್ಧನ್)ನೊಂದಿಗೆ ಹಗೆ ಬೆಳೆಯುತ್ತದೆ. ಅಯ್ಯುವಿನ ವಿರುದ್ಧ ಗುಳ್ಳ ತಿರುಗಿ ಬೀಳುತ್ತಾನೆ. ಇಬ್ಬರ ನಡುವೆ ಆಸ್ತಿ ಪತ್ರಕ್ಕಾಗಿ ಗಲಾಟೆ ಆಗುತ್ತದೆ. ಇಬ್ಬರೂ ಕೋರ್ಟ್  ಮೆಟ್ಟಿಲನ್ನು ಏರುತ್ತಾರೆ. ಅಲ್ಲಿ ಗುಳ್ಳ ಸೋಲುತ್ತಾನೆ. ಆ ನಂತರ ಚಿತ್ರ ಅನೇಕ ತಿರುವುಗಳನ್ನು ಕಾಣುತ್ತದೆ.
ಪರಸ್ಪರ ವಿರೋಧಿಗಳಾದ ಅಯ್ಯು ಹಾಗೂ ಗುಳ್ಳ ಕೊನೆಯಲ್ಲಿ ಮಿತ್ರರಾಗುತ್ತಾರೆ. ತಂದೆ ಭೂತಯ್ಯನಂತೆ ದುರ್ಗುಣವನ್ನು ಪ್ರದರ್ಶಿಸುತ್ತಿದ್ದ ಅಯ್ಯು ಒಳ್ಳೆಯವನಾಗುತ್ತಾನೆ ಇದು ಚಿತ್ರದ ತಿರುಳು. ಸಂಪೂರ್ಣ ಚಿತ್ರ ಚಿಕ್ಕಮಂಗಳೂರಿನ ಕಳಸಾಪುರದಲ್ಲಿ ಚಿತ್ರೀಕರಣಗೊಂಡಿದೆ.
ಚಿತ್ರದಲ್ಲಿ ವಿಷ್ಣು, ಲೋಕೇಶ್, ಎಂ. ಪಿ ಶಂಕರ್, ಬಾಲಕೃಷ್ಣ, ಲೋಕೇಶ್, ದಿನೇಶ್ ಸೇರಿದಂತೆ ಹಲವರು ಅಮೋಘ ಅಭಿನಯ ನೀಡಿದ್ದಾರೆ. ಚಿತ್ರಕ್ಕೆ ಸಂಗೀತ ನೀಡಿದ್ದು ಜಿ. ಕೆ. ವೆಂಕಟೇಶ್. ಪಿ. ಬಿ ಶ್ರೀನಿವಾಸ್ ಹಾಗೂ ಎಸ್. ಜಾನಕಿ ಅವರ ಸ್ವರಗಳಲ್ಲಿ ಮೂಡಿಬಂದ `ಮಲೆನಾಡ ಹೆಣ್ಣ ಮೈಬಣ್ಣ' ಹಾಡನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.
ಚಿತ್ರದಲ್ಲಿ ಅನೇಕ ಮರೆಯಲಾರದ ಸನ್ನಿವೇಶಗಳಿವೆ. ಕೋರ್ಟ್ ಪ್ರಕರಣ ಮುಗಿಸಿ ವಾಪಸ್ ಬರುವ ಗುಳ್ಳನ ಮಿತ್ರರು ಹೊಟೆಲಲ್ಲಿ ಊಟ ಮಾಡುವುದು, ಲೋಕನಾಥ್ ಉಪ್ಪಿನಕಾಯಿಗಾಗಿ ಹಾತೊರೆಯುವುದು, ಭೂತಯ್ಯ ಸಿದ್ದಿಯ ಎತ್ತುಗಳನ್ನು ಕದ್ದು ಮಾರಾಟ ಮಾಡುವುದು, ಮಾವ ಬಾಲಕೃಷ್ಣ ಅಯ್ಯುವಿಗೆ ಬುದ್ಧಿಕಲಿಸಲು ಪ್ರಯತ್ನಿಸುವುದು, ಮಳೆಯಿಂದ ಅಣೆಕಟ್ಟು ಒಡೆದು ಅಯ್ಯುವಿನ ಮನೆ ಮುಳುಗುವುದು, ಗುಳ್ಳ ಅಯ್ಯುವಿನ ಹೆಂಡತಿ ಮಕ್ಕಳನ್ನು ಕಾಪುಡುವ ಸನ್ನಿವೇಶಗಳನ್ನು ಎಂದಿಗೂ ಮರೆಯುವಂತಿಲ್ಲ.
ಭೂತಯ್ಯನ ಮಗ ಅಯ್ಯು ಪಕ್ಕಾ ಗ್ರಾಮೀಣ ಸೊಗಡಿನ ಚಿತ್ರ. ಸಮಾಜಕ್ಕೆ ಉತ್ತಮ ಅಂಶಗಳನ್ನು ತಿಳಿಸುವ ಚಿತ್ರ ಕನ್ನಡದ ಅತ್ಯುತ್ತಮ ಚಿತ್ರಗಳಲ್ಲೊಂದು. ಕನ್ನಡ ನಾಡಿನ ಎಲ್ಲ ಉತ್ತಮ ಅಂಶಗಳನ್ನು ಸಾರುವ ಚಿತ್ರ ಇದು. ಮಲೆನಾಡು, ಬಯಲು ಸೀಮೆ ಮುಂತಾದ ವಿವಿಧ ಭಾಗಗಳ ಜನಜೀವನವನ್ನು ಸೂಕ್ಷ್ಮವಾಗಿ ವಿವರಿಸುತ್ತದೆ. ಎಲ್ಲ ವಯೋಮಾನದವರೂ ನೋಡಲೇ ಬೇಕಾದ ಚಿತ್ರ ಇದು.

ವಿನಯ್ ದಂಟಕಲ್

Tuesday, June 29, 2010

ಹೆಣ್ಣಿನ ಮಾನಸಿಕ ತುಮುಲದ ಅನಾವರಣ ಶರಪಂಜರ

 ಚಿತ್ರ ಬಿಡುಗಡೆ : ೧೯೭೧ 
ನಿರ್ದೇಶಕ : ಪುಟ್ಟಣ್ಣ ಕಣಗಾಲ್
ಚಿತ್ರಕಥೆ : ಪುಟ್ಟಣ್ಣ ಕಣಗಾಲ್
ಕಥೆ : ತ್ರಿವೇಣಿ
ನಿರ್ಮಾಪಕ : ಸಿ. ಎಸ್. ರಾಜಾ
ಸಂಗೀತ : ವಿಜಯಭಾಸ್ಕರ್
ಛಾಯಾಗ್ರಹಣ : ಡಿ. ವಿ. ರಾಜಾರಾಮ್
ತಾರಾಗಣದಲ್ಲಿ : ಕಲ್ಪನಾ, ಗಂಗಾಧರ್, ಶಿವರಾಮ್, ಲೀಲಾವತಿ ಮುಂತಾದವರು


ಪುಟ್ಟಣ್ಣನವರ ಮೇರು ನಿರ್ದೇಶನದಲ್ಲಿ ಮೂಡಿಬಂದ ಚಿತ್ರ ಶರಪಂಜರ. ಕಾದಂಬರಿಗಾರ್ತಿ  ತ್ರಿವೇಣಿ ಅವರ ಕಾದಂಬರಿ ಆಧಾರಿತ ಕಥೆಯೇ ಶರಪಂಜರ. ಕಥಾನಾಯಕ ಸತೀಶ್ (ಗಂಗಾಧರ್) ಹಾಗೂ ನಾಯಕಿ ಕಾವೇರಿ (ಕಲ್ಪನಾ) ದಂಪತಿಗಳ ಸುತ್ತ ಹೆಣೆಯಲ್ಪಟ್ಟ ಕಥೆಯೇ ಶರಪಂಜರ. ಪ್ರೇಮ ವಿವಾಹದ ನಂತರ ಕಾವೇರಿ ಬದುಕು ಯಾವ ರೀತಿಯ ತಿರುವುಗಳನ್ನು ಪಡೆಯುತ್ತದೆ ಎಂಬುದು ಕಥಾವಸ್ತು. ಮದುವೆಯ ನಂತರ ಎಲ್ಲರೀತಿಯ ಸುಖಗಳನ್ನೂ ಅನುಭವಿಸುತ್ತಿರುವ ಹೊತ್ತಿನಲ್ಲಿ ಮದುವೆಗೆ ಮುನ್ನ ನಡೆದ ಘಟನೆಯ ಕಾರಣದಿಂದ ಕಾವೇರಿ ತನ್ನ ಎರಡನೇ ಹೆರಿಗೆಯ ವೇಳೆ ಮಾನಸಿಕವಾಗಿ ಅಸ್ವಸ್ಥಳಾಗುತ್ತಾಳೆ. ಮಾನಸಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖಳಾಗಿ ಮನೆಗೆ ಮರಳುತ್ತಾಳೆ. ಆ ನಂತರ ಮನೆ, ಮಗ, ಸಮಾಜ ಆಕೆಯನ್ನು ಯಾವ ರೀತಿ ಕಾಣುತ್ತದೆ, ಆಕೆಯ ಜೊತೆ ಹೇಗೆ ನಡೆದುಕೊಳ್ಳುತ್ತದೆ ಎಂಬುದೇ ಕಥಾ ಹಂದರ. ಗಂಡ ಹಾಗೂ ಮನೆಯ ಸದಸ್ಯರ ಅಸಡ್ಡೆ, ಹಳೆಯ ಘಟನೆ ನೀಡುವ ಮಾನಸಿಕ ತುಮುಲ ಕಾವೇರಿಯನ್ನು ಕಾಡುತ್ತವೆ. ಕೊನೆಯಲ್ಲಿ ಆಕೆ ಈ ಎಲ್ಲ ತೊಂದರೆಗಳಿಂದ ಬಿಡುಗಡೆ ಹೊಂದುತ್ತಾಳೆಯೆ? ಅಸಡ್ಡೆಯಿಂದ ಕಾಣುವ ಗಂಡ ಆಕೆಯನ್ನು ಮತ್ತೆ ಒಪ್ಪಿಕೊಳ್ಳುತ್ತಾನೆಯೆ ಎಂಬುದು ಚಿತ್ರದ ಕ್ಲೈಮ್ಯಾಕ್ಸ್.
ಕಲ್ಪನಾ ಅಭಿನಯದ ಸರ್ವಶ್ರೇಷ್ಠ ಪ್ರದರ್ಶನವನ್ನು ಚಿತ್ರದಲ್ಲಿ ಕಾಣಬಹುದು. ಮಾನಸಿಕ ವೇದನೆಯನ್ನು ಕಲ್ಪನಾ ಎಂದೂ ಮರೆಯಲು ಸಾಧ್ಯವೇ ಇಲ್ಲದಂತೆ ಕಟ್ಟಿಕೊಡುತ್ತಾಳೆ. ಚಿತ್ರದಲ್ಲಿ ಆಕೆಯ ನಟನೆ ಎಲ್ಲರ ಕಣ್ಣಿನಲ್ಲಿಯೂ ನೀರು ತರಿಸುವಂತಿದೆ. ಮತ್ತೆ ಮತ್ತೆ ಈಕೆ ಬಿಡದೇ ಕಾಡುತ್ತಾಳೆ. ಇಂತಹ ಶ್ರೇಷ್ಠ ಅಭಿನಯ ಆಕೆಗೆ ರಾಜ್ಯ ಪ್ರಶಸ್ತಿಯನ್ನೂ ತಂದುಕೊಟ್ಟಿದೆ. ಸತೀಶನ ಪಾತ್ರದಾರಿ ಗಂಗಾಧರ್, ಅಡುಗೆ ಭಟ್ಟ ಶಿವರಾಂ ಸಹ ಚಿತ್ರದಲ್ಲಿ ಅತ್ಯುತ್ತಮವಾಗಿ ಅಭಿನಯಿಸಿದ್ದಾರೆ.
ಚಿತ್ರದ ಹಾಡುಗಳೂ ಅಷ್ಟೆ ಮಧುರವಾದವುಗಳು. ವಿಜಯ್ ಭಾಸ್ಕರ್ ಸಂಗೀತದಲ್ಲಿ ಅತ್ಯುತ್ತಮವಾಗಿ ಮೂಡಿಬಂದಿವೆ. `ಕೊಡಗಿನ ಕಾವೇರಿ', `ಹದಿನಾಲ್ಕು ವರ್ಷ ವನವಾಸದಿಂದ..', `ಬಿಳಿಗಿರಿ ರಂಗಯ್ಯ..' `ಸಂದೇಶ ಮೇಘ ಸಂದೇಶ..' ವರಕವಿ ಬೇಂದ್ರೆ ವಿರಚಿತ `ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ...' ಈ ಹಾಡುಗಳು ಮತ್ತೆ ಮತ್ತೆ ಕೇಳಬೇಕೆನಿಸುತ್ತವೆ. ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತವೆ.
ಈ ಚಿತ್ರದ ನಂತರ ನಟಿ ಕಲ್ಪನಾ ಕನ್ನಡದಲ್ಲಿ ಬಿಡುವಿಲ್ಲದ ನಟಿಯಾದರೆ ನಿದರ್ೇಶಕ ಪುಟ್ಟಣ್ಣ ಕಣಗಾಲ್ ಅತ್ಯುತ್ತಮ ನಿದರ್ೇಶಕ ರಾಜ್ಯ ಪ್ರಶಸ್ತಿ ಲಭಿಸಿತು. ಇಂದಿನ ನಟಿಯರೂ ತಾವು ಶರಪಂಜರದ ಕಲ್ಪನಾರಂತೆ ನಟಿಸಬೇಕು ಎಂದು ಬಯಸುವುದು ಈ ಚಿತ್ರದಲ್ಲಿ ಅವರ ನಟನೆಗೆ ನಿದರ್ಶನ. ಈ ಚಿತ್ರದ ನಂತರ ಕನ್ನಡದಲ್ಲಿ ಅದೆಷ್ಟೋ ಮಾನಸಿಕ ತುಮುಲಗಳನ್ನು ಬಿಂಬಿಸುವ ಚಿತ್ರಗಳು ಬಂದವು. ಆದರೆ ಅವ್ಯಾವವೂ ಈ ಚಿತ್ರದಷ್ಟು ಯಶಸ್ವಿಯಾಗಲಿಲ್ಲ.
ಪುಟ್ಟಣ್ಣ, ಕಲ್ಪನಾ, ವಿಜಯ್ ಭಾಸ್ಕರ್ ಮುಂತಾದ ಮೇರು ಕಲಾವಿದರು, ತಂತ್ರಜ್ಞರ ಶ್ರಮದ ಪರಿಣಾಮ ಶರಪಂಜರ ಮೂರು ದಶಕಗಳ ನಂತರವೂ ಕ್ಲಾಸಿಕ್ ಚಿತ್ರಗಳ, ಕನ್ನಡದ ಅತ್ಯುತ್ತಮ ಚಿತ್ರಗಳ ಸಾಲಿನಲ್ಲಿ ಒಂದೆನಿಸಿಕೊಂಡಿದೆ.

Monday, June 21, 2010

ಸಕಲಕಾಲಕ್ಕೂ ಸಲ್ಲುವ `ಕಸ್ತೂರಿ ನಿವಾಸ'


ನಿರದೆಶಕರು : ದೊರೈ-ಭಗವಾನ್
ಸಂಗೀತ : ಜಿ. ಕೆ. ವೆಂಕಟೇಶ್
ಚಿತ್ರ ಬಿಡುಗಡೆ : 1971
ಚಿತ್ರಕಥೆ, ಸಂಭಾಷಣೆ : ಚಿ. ಉದಯ್ಶಂಕರ್
ಮೂಲ ಕಥೆ : ಜಿ. ಬಾಲಸುಬ್ರಮಣ್ಯಂ (ತಮಿಳು)
ತಾರಾಗಣದಲ್ಲಿ : ಡಾ. ರಾಜ್ಕುಮಾರ್, ಜಯಂತಿ, ಕೆ. ಎಸ್. ಅಶ್ವಥ್, ಆರತಿ ಮುಂತಾದವರು.

ಕಸ್ತೂರಿ ನಿವಾಸ ಕನ್ನಡ ಚಿತ್ರರಂಗದ ಎಂದೂ ಮರೆಯದ ಚಿತ್ರ. ಹಲವು ವಿಶಿಷ್ಟ ಕಾರಣಗಳಿಂದ ಇದು ಸೆಳೆಯಲ್ಪಡುತ್ತದೆ. ತಮಿಳಿನಲ್ಲಿ ಶಿವಾಜಿ ಗಣೇಶನ್ ಗಾಗಿ ರಚನೆಯಾದ ಕಥೆಯನ್ನು ಅಲ್ಪಸ್ವಲ್ಪ ಮಾರ್ಪಡಿಸಿ ಕನ್ನಡದಲ್ಲಿ ಚಿತ್ರ ನಿರ್ಮಿಸಲಾಗಿದೆ. ಬೆಂಕಿಪೊಟ್ಟಣ ನಿರ್ಮಾಣದ ಕಾರಖಾನೆಯ ಉದ್ಯಮಿಯ ವಿಫಲ ಪ್ರೇಮಕಥೆಯೇ ಕಸ್ತೂರಿ ನಿವಾಸ. ಈ ಕಥೆಗೆ ಶಿವಾಜಿ ಗಣೇಶನ್ ಒಪ್ಪಿಗೆ ನೀಡದ ಕಾರಣ ಕನ್ನಡದಲ್ಲಿ ಕ್ಲಾಸಿಕ್ ಚಿತ್ರವಾಗಿ ಮೂಡಿ ಬಂದಿತು. ಈ ಚಿತ್ರ ಕನ್ನಡದಲ್ಲಿ ತಯಾರಾಗಲು ಚಿತ್ರ ಸಂಭಾಷಣಕಾರ ಚಿ. ಉದಯ್ ಶಂಕರ್, ದೊರೈ ಭಗವಾನ್ ಹಾಗೂ ಡಾ. ರಾಜ್ ಅವರ ಪಾತ್ರ ಬಹಳ ದೊಡ್ಡದು.
ಕಥಾನಾಯಕ ರವಿ ಅಮೆರಿಕಾದಲ್ಲಿ ಬ್ಯುಸಿನೆಸ್ ಕೋರ್ಸ್  ಮುಗಿಸಿ ಭಾರತಕ್ಕೆ ಮರಳುವ ಉದ್ಯಮಿ. ಭಾರತದಲ್ಲಿ ಆತ ಬೆಂಕಿಪೊಟ್ಟಣ ಕಾರಖಾನೆ ಪ್ರಾರಂಭಿಸುತ್ತಾನೆ. ನಡುವೆಯೇ ತನ್ನ ಕಾರ್ಯದರಷಿ  ಲೀಲಾ(ಜಯಂತಿ)ಳ ಪ್ರೇಮಪಾಶದಲ್ಲಿ ಬೀಳುತ್ತಾನೆ. ಆದರೆ ಆಕೆ ರವಿಯ ಮಿತ್ರ ಚಂದ್ರೂನನ್ನು ಕಾರಣಾಂತರಗಳಿಂದ ಮದುವೆಯಾಗುತ್ತಾಳೆ. ರವಿ ಸಹ ಬೇರೊಬ್ಬಳನ್ನು ಮದುವೆಯಾಗುತ್ತಾನೆ. ಅಲ್ಲದೆ ಅಪಘಾತವೊಂದರಲ್ಲಿ ಹೆಂಡತಿ ಹಾಗೂ ತನ್ನ ಮಗಳನ್ನು ಕಳೆದುಕೊಳ್ಳುತ್ತಾನೆ. ಈ ನಡುವೆ ಲಾಭದ ಹಾದಿಯಲ್ಲಿದ್ದ ಆತನ ಕಾಖರ್ಾನೆ ನಷ್ಟದೆಡೆಗೆ ಮುಖಮಾಡುತ್ತದೆ. ಅದಕ್ಕೆ ಮಿತ್ರ ಚಂದ್ರು ಸಹ ಕಾರಣನಾಗಿರುತ್ತಾನೆ. ಈ ಹಂತದಲ್ಲಿ ಲೀಲಾ ಮತ್ತೊಮ್ಮೆ ಆತನ ಬದುಕಿನಲ್ಲಿ ಬರುತ್ತಾಳೆ. ಲೀಲಾಳ ಮಗಳನ್ನು ರವಿ ಹಚ್ಚಿಕೊಳ್ಳುತ್ತಾನೆ. ಹೀಗೆ ಏರಿಳಿತದ ಬದುಕನ್ನು ಕಾಣುವ ರವಿ ಕೊನೆಯಲ್ಲಿ ಏನಾಗುತ್ತಾನೆ ಎಂಬುದು ಚಿತ್ರದ ಕಥಾ ಹಂದರ.
ರವಿ ಪಾತ್ರಧಾರಿ ರಾಜ್ಕುಮಾರ್ ಮನೋಜ್ಞವಾಗಿ ನಟಿಸಿ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುತ್ತಾರೆ. ಮನೆಯ ಕೆಲಸಗಾರನ ಪಾತ್ರದಲ್ಲಿ ನಟಿಸಿರುವ ಅಶ್ವಥ್ರಂತೂ ಪರಕಾಯ ಪ್ರವೇಶ ಮಾಡಿದಂತೆ ನಟಿಸಿದ್ದಾರೆ. ಜಯಂತಿ, ಆರತಿ ತಕ್ಕಮಟ್ಟಿಗೆ ನಟಿಸಿದ್ದಾರೆ.
ಚಿತ್ರದಲ್ಲಿನ ಎಲ್ಲಾ ಹಾಡುಗಳೂ ಅತ್ಯಂತ ಸುಂದರವಾಗಿವೆ. ಮತ್ತೆ ಮತ್ತೆ ಕೇಳಬೇಕೆನಿಸುವ ಈ ಹಾಡುಗಳು ಜೀವನ ತತ್ವವನ್ನು ಸಾರುವಂತವುಗಳು. ಚಿತ್ರಕ್ಕೆ ಸಂಗೀತ ನೀಡಿದ್ದು ಜಿ. ಕೆ. ವೆಂಕಟೇಶ್. `ಆಡಿಸಿ ನೋಡು ಬೀಳಿಸಿನೋಡು',`ಆಡಿಸಿದಾತಾ ಬೇಸರಮೂಡಿ', `ಎಲ್ಲೇ ಇರು ಹೇಗೇ ಇರು', `ಆಡೋಣ ನೀನು ನಾನು', `ನೀ ಬಂದು ನಿಂತಾಗ' ಮುಂತಾದ ಹಾಡುಗಳು ಮತ್ತೆ ಮತ್ತೆ ಕೇಳುವಂತಿವೆ. `ಆಡಿಸಿ ನೋಡು ಬೀಳಿಸಿ ನೋಡು' ಹಾಗೂ `ಆಡಿಸಿದಾತಾ ಬೇಸರ ಮೂಡಿ' ಈ ಗೀತೆಗಳು ಜೀವನ ತತ್ವವನ್ನು ಸಾರುತ್ತವೆ.
ಕನ್ನಡದ ಎವರ್ಗ್ರೀನ್ ಚಿತ್ರ ಕಸ್ತೂರಿ ನಿವಾಸವನ್ನು ನೋಡದಿದ್ದರೆ ಏನನ್ನೋ ಕಳೆದುಕೊಂಡಂತಹ ಅನುಭವ. ಎರಡೂ ಮುಕ್ಕಾಲು ತಾಸುಗಳ ಈ ಚಿತ್ರ ವೀಕ್ಷಿಸಿದವರಿಗೆ ನೀಡುವ ಅನುಭವವೇ ಬೇರೆ. `ಕಸ್ತೂರಿ ನಿವಾಸ' ಕನ್ನಡದ ಕಂಪನ್ನು ಕಸ್ತೂರಿಯಂತೆ ಬೀರಿದ ಚಿತ್ರ.

Monday, June 14, 2010

ಬಡ ಕವಿಯ ಭಾವಗೀತೆ ಪ್ಯಾಸಾ

ನಿರದೆಶಕ : ಗುರುದತ್
ನಿರಮಾಪಕ : ಗುರುದತ್
ಕಥೆ : ಅಬ್ರಾರ್ ಅಲ್ವಿ
ಛಾಯಾಗ್ರಹಣ : ವಿ.ಕೆ. ಮೂರ್ತಿ 
ಸಂಗೀತ : ಎಸ್. ಡಿ. ಬರ್ಮನ್
ಚಿತ್ರ ಬಿಡುಗಡೆ : ಫೆಬ್ರವರಿ 19, 1957
ತಾರಾಗಣದಲ್ಲಿ : ಗುರುದತ್, ವಹೀದಾ ರೆಹಮಾನ್, ಮಾಲಾ ಸಿನ್ಹ, ಜಾನಿ ವಾಕರ್, ರೆಹಮಾನ್ ಮುಂತಾದವರು.

ಬಡ ಕವಿಯೊಬ್ಬನ ವಿಫಲ ಪ್ರೇಮ, ಪ್ರೇಮವನ್ನು ಪಡೆಯಲು ಆ ಕವಿ ತೊಳಲಾಡುವುದು, ಪ್ರೇಯಸಿಯ ಮೋಸ ಈ ಮುಂತಾದ ಕಥಾ ಹಂದರವನ್ನಿಟ್ಟುಕೊಂಡು ಸುಂದರ ಚಿತ್ರವನ್ನು ತಯಾರಿಸಿದ್ದಾರೆ ಗುರುದತ್. ಬದುಕಿನಲ್ಲಿ ನೆಲೆ ನಿಲ್ಲಲಾಗದೇ, ಬರೆದ ಕವಿತೆಗಳನ್ನು ಪ್ರಕಟಿಸಲು ಹಣವಿಲ್ಲದೆ ಪರಿತಪಿಸುವ ಕವಿ ವಿಜಯ್ನ ಪಾತ್ರದಲ್ಲಿ ಮೋಹಕ ಅಭಿನಯ ನೀಡಿದ್ದು ಗುರುದತ್. ಈ ಕವಿಯ ಕಾಲೇಜು ದಿನಗಳ ಪ್ರೇಯಸಿಯಾಗಿ ಗುರುದತ್ಗೆ ಮೋಸಮಾಡುವ ಪಾತ್ರ ನಿರ್ವಹಿಸಿದ್ದು ಮಾಲಾ ಸಿನ್ಹಾ. ಈಕೆ ಮಾಡುವ ಮೋಸ ನೋಡುಗರ ಕಣ್ಣಿನಲ್ಲಿ ನೀರು ತರಿಸುತ್ತದೆ.
ಈ ಚಿತ್ರದ ಮುಖ್ಯ ಆಕರ್ಷಣೆ ವಹೀದಾ ರೆಹಮಾನ್. ಈ ಚಿತ್ರ ವಹೀದಾಗೆ ಪಾದಾರ್ಪಣೆಯ ಚಿತ್ರ. ತನ್ನ ಮನೋಜ್ಞ ಅಭಿನಯದಿಂದ ಎಲ್ಲರ ಮನಸ್ಸನ್ನು ಸೂರೆಗೊಳ್ಳುವ ಈಕೆ ಚಿತ್ರ ರಸಿಕರ ಹೃದಯದಲ್ಲಿ ಶಾಶ್ವತ ಸ್ಥಾನ ಗಳಿಸಿಕೊಂಡುಬಿಡುತ್ತಾಳೆ. ಚಿತ್ರದಲ್ಲಿ ಈಕೆಯದು ಗುಲಾಬೂ ಎಂಬ ವೇಶ್ಯೆಯ ಪಾತ್ರ. ವೇಶ್ಯೆಯಾದರೂ ಈಕೆಗೆ ವಿಜಯ್ನ ಕವನಗಳನ್ನು ಕೇಳುವ ಆಸೆ. ಆತನ ಕವನಗಳನ್ನು ಆಲಿಸುತ್ತಲೇ ವಿಜಯ್ನ ಪ್ರೇಮದಲ್ಲಿ ಬೀಳುತ್ತಾಳೆ. ಆತನ ಕವನಗಳನ್ನು ಪ್ರಕಟಿಸುತ್ತಾಳೆ. ಈ ಸಂದರ್ಭದಲ್ಲಿ ಆತನ ಬದುಕು ವಿಚಿತ್ರ ತಿರುವುಗಳನ್ನು ಪಡೆಯುತ್ತದೆ. ಶ್ರೀಮಂತ ಉದ್ಯಮಿ (ಮಾಲಾ ಸಿನ್ಹಾಳ ಪತಿ) ವಿಜಯ್ನ ಕೊಲೆಗೆ ಪ್ರಯತ್ನಿಸುತ್ತಾನೆ. ಈ ನಡುವೆ ವಿಜಯ್ ಬದುಕಿರುವಂತೆಯೇ ಸತ್ತುಹೋಗಿದ್ದಾನೆಂದು ಘೋಷಿಸಲ್ಪಡುತ್ತಾನೆ. ಇದು ಚಿತ್ರದ ಸಾರಾಂಶ. ಚಿತ್ರದ ಕ್ಲೈಮ್ಯಾಕ್ಸ್ ಅತ್ಯುತ್ತಮವಾಗಿ ಮೂಡಿಬಂದಿದೆ.
ಚಿತ್ರದಲ್ಲಿ ಗುರುದತ್ರದ್ದು ಅಮೋಘ ನಟನೆ. ವಿಜಯ್ ಪಾತ್ರವನ್ನು ನಿರ್ವಹಿಸಲು ಇನ್ಯಾರಿಂದಲೂ ಸಾಧ್ಯವಿಲ್ಲ ಎಂಬಂತಹ ನಟನೆ ಅವರದ್ದು. ವಹೀದಾ ರೆಹಮಾನ್ ನೋಡುಗರನ್ನು ಸೆಳೆಯುತ್ತಾರೆ. ಗುರುದತ್ನ ಮಿತ್ರನ ಪಾತ್ರದಲ್ಲಿ ನಟಿಸಿರುವ ಜಾನಿವಾಕರ್ ತಮ್ಮ ಕಾಮಿಡಿಯಿಂದ ನಗೆ ಉಕ್ಕಿಸುತ್ತಾರೆ.
`ಜಾನೆ ಕ್ಯಾ ತೂನೆ ಕಹಿ ಭಿ',`ಹಮ್ ಆಪ್ ಕಿ ಆಂಖೋ ಮೇ',`ಜಾನೆ ವೋ ಕೈಸೆ ಲೋಗ್' ಮುಂತಾದ ಹಾಡುಗಳು ಮತ್ತೆ ಮತ್ತೆ ಕೇಳುವಂತಿದೆ. ಚಿತ್ರಕ್ಕೆ ಸಂಗೀತ ನೀಡಿದ್ದು ಎಸ್. ಡಿ. ಬರ್ಮನ್. ಮೊಹಮ್ಮದ್ ರಫಿ ಹಾಗೂ ಗುರುದತ್ ಅವರಿಂದ ಒಳ್ಳೊಳ್ಳೆಯ ಹಾಡುಗಳನ್ನು ಹಾಡಿಸಿದ ಖ್ಯಾತಿ ಬರ್ಮನ್ಗೆ ಸಲ್ಲುತ್ತದೆ.
ಬಾಲಿವುಡ್ನ ಎಂದೂ ಮರೆಯದ ಚಿತ್ರ ಪ್ಯಾಸಾ. ಎಲ್ಲ ಕಾಲದ ಜನರನ್ನು ಇದು ಸೆಳೆಯುತ್ತದೆ.
 

Thursday, June 10, 2010

ಶಹಬ್ಬಾಸ್ ತಮನ್ನಾ


ಈಯಮ್ಮ ಪರದೆ ಮೇಲೆ ಬಂದರೆ ಸಾಕು ಪಡ್ಡೆ ಹುಡುಗರು ಹುಚ್ಚೆದ್ದು ಕುಣಿಯುತ್ತಾರೆ. ಈಕೆಯ ಸ್ನಿಗ್ಧ ಕಣ್ಣಿಗೆ ಮರುಳಾಗುತ್ತಾರೆ. ಈಕೆಯೂ ಅಷ್ಟೆ ಹುಡುಗರ ಹುಚ್ಚಿಗೆ ಮತ್ತಷ್ಟು ತುಪ್ಪ ಸುರಿದು ಹಾಯ್ ಹೇಳಿ ಹೊರಟು ಬಿಡುತ್ತಾಳೆ.
ಇವಳೇ ತಮನ್ನಾ. ತಮಿಳು, ತೆಲಗು ಮುಂತಾದ ದಕ್ಷಿಣ ಭಾರತದ ಎಲ್ಲಾ ಚಿತ್ರರಂಗಗಳೂ ಬಯಸುವ ಹುಡುಗಿ. ನಿಮರ್ಾಪಕರು ಈಕೆಯ ಮನೆಯ ಮುಂದೆ ಕಾಲ್ಶೀಟ್ಗಾಗಿ ಕಾದುಕುಳಿತು ಬಿಡುತ್ತಾರೆ. ಇಂತಹ ತಮನ್ನಾ ವಲಸೆ ಹುಡುಗಿ ಎಂದರೆ ನಂಬಲೇ ಬೇಕು.
ಅಹುದು, ತಮನ್ನಾ ಹುಟ್ಟಿದ್ದು ದೂರದ ಸಿಂಧ್ ಪ್ರಾಂತ್ಯದಲ್ಲಿ. ಈಕೆಯ ತಂದೆ ತಾಯಿಗಳು ಸಿಂಧಿಗಳು. ಹಾಗೆಯೇ ಈಕೆ ಬೆಳೆದಿದ್ದು, ಓದಿದ್ದು, ಅಕ್ಷರಾಭ್ಯಾಸ ಮಾಡಿದ್ದು ಮುಂಬಯಿಯಲ್ಲ. ಆದರೆ ಈಗ ಈಕೆಯ ಪಾಲಿಗೆ ಸಿನಿಮಾ ಜಗತ್ತಿನ ಬಾಗಿಲು ತೆರೆದಿದ್ದು ಹೈದರಾಬಾದ್ ಹಾಗೂ ಚೆನ್ನೈ.
ಸಿಂಧಿಯಾಗಿ, ಹಿಂದಿಯಾಗಿ ಬೆಳೆದ ತಮನ್ನಾ ಈಗ ಪಕ್ಕಾ ತಮಿಳರ ಪೊಣ್ಣು, ತೆಲುಗರ ಪಿಲ್ಲಾ ಆಗಿಬಿಟ್ಟಿದ್ದಾಳೆ. ತೆಲುಗಿನ ಹಾಲಿಡೇಸ್, ತಮಿಳಿನ ಆಯನ್ ಚಿತ್ರಗಳಲ್ಲಿ ನಟಿಸಿ ಭಾರಿ ಹೆಸರು ಮಾಡಿದ ಈಕೆ ಈಗ ತಮಿಳು, ತೆಲಗು ಚಿತ್ರರಂಗದಲ್ಲಿ ತುಂಬಾ ಬ್ಯೂಸಿ. ಆದರೆ ಈ ನಡುವೆ ಈಕೆ ತಮಿಳು ಭಾಷೆಯನ್ನು ಅದು ಹೆಂಗೋ ಕಲಿತು ಬಿಟ್ಟಿದ್ದಾಳೆ.
ಇದರಿಂದ ತಮಿಳು ಮಂದಿಗಳು ಬಹಳ ದಿಲ್ಖುಷ್ ಆಗಿಬಿಟ್ಟಿದ್ದಾರಂತೆ. ತಮನ್ನಾ ತಮಿಳು ಕಲಿತಿರುವುದು ಹಿರಿಯ ನಟಿ ಖುಷ್ಬೂಗಂತೂ ಬಹಳ ಖುಷಿ ಕೊಟ್ಟಿದೆಯಂತೆ. ಇದ್ದರೆ ತಮನ್ನಾ ಹಾಗೆ ಇರಬೇಕು ಎಂದು ಬೆನ್ನು ತಟ್ಟಿರುವ ಖುಷ್ಬೂ ತಮಿಳು ಕಲಿಯದ ಹೀರೊಯಿನ್ಗಳ ಬಗ್ಗೆ ಸಖತ್ ಸಿಟ್ಟಾಗಿದ್ದಾರಂತೆ.
ಇನ್ನೂ ಒಂದು ವಿಶೇಷ ಸುದ್ದಿ ಏನೆಂದರೆ ತಮನ್ನಾ ಇದೀಗ ತೆಲುಗು ಭಾಷೆಯನ್ನೂ ಕಲಿಯಲು ಪ್ರಾರಂಭಿಸಿದ್ದಾಳಂತೆ. ತಮ್ಮದೇ ನಾಡಿನಲ್ಲಿ ಜನಿಸಿ ಮಾತ್ರಭಾಷೆ ಬಂದರೂ ಅದನ್ನು ಮರೆತು ಟಸ್ ಪುಸ್ ಅಂತ ಇಂಗ್ಲೀಷ್ನಲ್ಲಿ ಹರಟೆಕೊಚ್ಚುವ ನಟಿಯರಿಗಿಂತ ಭಿನ್ನ ಈ ತಮನ್ನಾ. ಶಹಬ್ಬಾಸ್ ತಮನ್ನಾ.

Sunday, June 6, 2010

ಸತ್ಯದ ಸಾರ ಸಾರುವ ಸತ್ಯಹರಿಶ್ಚಂದ್ರ


ನಿರದೆಶನ : ಹುಣಸೂರು ಕೃಷ್ಣಮೂರ್ತಿ 
ನಿರಮಾಪಕರು : ವಿಜಯಾ ಪ್ರೊಡಕ್ಷನ್
ಸಂಗೀತ : ಪಿ. ಎಂ. ರಾವ್
ಚಿತ್ರ ಬಿಡುಗಡೆ : 1965
ತಾರಾಗಣದಲ್ಲಿ : ಡಾ. ರಾಜಕುಮಾರ್, ಫಂಡರೀಬಾಯಿ, ನರಸಿಂಹರಾಜೂ, ಎಂ. ಪಿ. ಶಂಕರ್ ಮುಂತಾದವರು

ಸತ್ಯ ಹರಿಶ್ಚಂದ್ರ ಕನ್ನಡದ ಉತ್ತಮ ಚಿತ್ರಗಳಲ್ಲಿ ಒಂದು. 1965ರಲ್ಲಿಯೇ ಭಾರೀ ವೆಚ್ಚದಲ್ಲಿ ನಿರಮಾಣವಾಗಿದ್ದ ಈ ಚಿತ್ರವನ್ನು ನೋಡದವರೆ ಇಲ್ಲ.
ಸತ್ಯವೇ ತಾಯಿ ತಂದೆ ಎಂಬ ನೀತಿಯನ್ನು ಮೈಗೂಡಿಸಿಕೊಂಡು ಅದಕ್ಕಾಗಿಯೇ ಬಾಳಿ ಬದುಕಿದ ರಾಜನೊಬ್ಬನ ಕಥೆ ಸತ್ಯಹರಿಶ್ಚಂದ್ರ. ಏನೇ ಕಷ್ಟ ಬಂದರೂ ಸತ್ಯವನ್ನು ಬಿಡಬಾರದು ಎಂಬ ಗುಣ ರಾಜನದ್ದು. ಅದಕ್ಕಾಗಿಯೇ ಆತ ಹಲವು ರೀತಿಯ ಕಷ್ಟದ ಕೋಟಲೆಯನ್ನೂ ಅನುಭವಿಸುತ್ತಾನೆ. ಮಹಾಮುನಿ ವಿಶ್ವಾಮಿತ್ರನ ಎಲ್ಲ ರೀತಿಯ ಪರೀಕ್ಷೆಗಳಲ್ಲಿ ಗೆಲ್ಲುವ ಕಥೆಯೇ ಸತ್ಯ ಹರಿಶ್ಚಂದ್ರ.
ರಾಜಾ ಹರಿಶ್ಚಂದ್ರನಾಗಿ ಡಾ. ರಾಜ್ಕುಮಾರ್ ಅವರದ್ದು ಚಿತ್ರದಲ್ಲಿ ಮೇರು ಅಭಿನಯ. ಹರಿಶ್ಚಂದ್ರನ ಮಡದಿಯಾಗಿ ಫಂಡರಿಬಾಯಿ ಮನೋಜ್ಞವಾಗಿ ನಟಿಸಿದ್ದಾರೆ. ವಿಶ್ವಾಮಿತ್ರನಾಗಿ ಉದಯ್ಕುಮಾರ್ ಸಿಟ್ಟಿನ ಪ್ರತಿರೂಪವಾಗಿಕಾಣುತ್ತಾರೆ. ರಾಜನನ್ನು ಕಾಡುವ ವಿಶ್ವಾಮಿತ್ರನ ಬಂಟ ನಕ್ಷತ್ರಿಕನ ಪಾತ್ರದಲ್ಲಿ ನಟಿಸಿದ್ದು ಕಾಮಿಡಿ ಕಿಂಗ್ ನರಸಿಂಹರಾಜೂ. ಚಿತ್ರದಲ್ಲಿ ಇವರು ಹಾಸ್ಯ, ಭಯ, ಸಿಟ್ಟು ಮುಂತಾದ ಎಲ್ಲ ರೀತಿಯ ಅಭಿನಯಗಳನ್ನೂ ಮಾಡಿ ನೋಡುಗರನ್ನು ಸೆಳೆಯುತ್ತಾರೆ. ವೀರಬಾಹುವಿನ ಪಾತ್ರ ನಿರ್ವಹಿಸಿರುವ ಎಂ. ಪಿ. ಶಂಕರ್ ತಮ್ಮ ವಿಶಿಷ್ಟ ಅಭಿನಯದಿಂದಾಗಿ ಆಕಷರ್ಿಸುತ್ತಾರೆ.
ಚಿತ್ರದ ಹಾಡುಗಳೂ ಅಷ್ಟೆ, ಮತ್ತೆ ಮತ್ತೆ ಕೇಳುವಂತಿದೆ. `ನಮೋ ಭೂತನಾಥ..', `ವಿಧಿ ವಿಪರೀತ...', `ಆನಂದ ಸದನ ಅರವಿಂದನಯನ..' ಹಾಡುಗಳು, ಜೊತೆಗೆ ಎಂ. ಪಿ. ಶಂಕರ್ ಅಭಿನಯಿಸಿದ `ಕುಲದಲ್ಲಿ ಮೇಲ್ಯಾವುದೋ ಹುಚ್ಚಪ್ಪ' ಹಾಗೂ `ನನ್ನ ನೀನು ನಿನ್ನ ನಾನು..' ಎಂಬ ಹಾಡುಗಳಂತೂ ಮತ್ತೆ ಮತ್ತೆ ಕೇಳಬೇಕೆನಿಸುತ್ತವೆ.
ನಾಲ್ಕು ದಶಕಗಳ ಹಿಂದೆಯೇ ಕಪ್ಪು ಬಿಳುಪು ಬಣ್ಣದಲ್ಲಿ ಅದ್ದೂರಿಯಾಗಿ ನಿರಮಾಣವಾಗಿದ್ದ ಈ ಚಿತ್ರವನ್ನು 2008ರಲ್ಲಿ ಬಹುವರ್ಣಗಳ ಮೂಲಕ ಮತ್ತೆ ಬಿಡುಗಡೆ ಮಾಡಲಾಯಿತು. 1965ರಲ್ಲಿ ಶತದಿನ ಆಚರಿಸಿದ್ದ ಚಿತ್ರ 2008ರಲ್ಲಿ ಬಾಕ್ಸಾಫೀಸ್ನಲ್ಲಿ ಸಂಪೂರ್ಣ ನೆಲಕಚ್ಚಿತು.
ಸತ್ಯದ ನೀತಿಯನ್ನು ಸಾರುವ ಆದರ್ಶಮಯ ಚಿತ್ರ ಎಲ್ಲ ಕಾಲದಲ್ಲಿಯೂ, ಎಲ್ಲರೂ ನೋಡಲೇಬೇಕಾದ ಚಿತ್ರ ಎಂದು ಹೆಸರಾಗಿದೆ.

ವಿನಯ್ ದಂಟಕಲ್

Sunday, May 23, 2010

ಚಿತ್ರವಿಮರ್ಷೆ : ಶಂಕರ್ ಐಪಿಎಸ್

ವಿಜಯ್ ತಾಕತ್ತಿನ ಪ್ರದರ್ಶನ

ಶಂಕರ್ ಐಪಿಎಸ್ ಇದು ವಿಜಯನ  ದಾಢಸಿತನ ಅನಾವರಣ ಮಾಡುವ ಚಿತ್ರ. ಒಳ್ಳೆಯವರಿಗೆ ಒಳ್ಳೆಯವನಾಗಿ ಕೆಟ್ಟವರಿಗೆ ಕೆಟ್ಟವನಾಗಿ ಕಾಣಿಸಿಕೊಳ್ಳುವ ಶಂಕರ್ (ವಿಜಯ್)ಗೆ ಅಪರಾಧಿಗಳನ್ನು ಮಟ್ಟಹಾಕುವುದೇ ಕೆಲಸ. ಕಂಡಕಂಡಲ್ಲಿ ಅಪರಾಧಿಗಳನ್ನು, ರೌಡಿಗಳನ್ನು, ಅತ್ಯಾಚಾರಿಗಳನ್ನು ಹಿಗ್ಗಾ ಮುಗ್ಗಾ ಜಾಡಿಸಿ ಎನ್ಕೌಂಟರ್ ಹೆಸರಿನಲ್ಲಿ ಹತ್ಯೆ ಮಾಡುವ ಶಂಕರ್, ಮಿಸ್ ಇಂಡಿಯಾ ಆಗಬೇಕೆಂಬ ಕನಸನ್ನು ಹೊಂದಿರುವ ಹುಡುಗಿ(ಕ್ಯಾಥರೀನ್ ಥೆರೇಸಾ) ಗೆ ಸಹಾಯ ಮಾಡುತ್ತಾನೆ. ಆಕೆಗೆ ಮಿಸ್ ಇಂಡಿಯಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರ ಬಗ್ಗೆ ತರಬೇತಿ ಕೊಡಿಸುತ್ತಾನೆ. ಆದರೆ ಆಕೆಯ ಮೇಲೆ ಆಸಿಡ್ ದಾಳಿಯಾಗುತ್ತಾದೆ. ಹೆಸರಾಂತ ಉದ್ಯಮಿಯೊಬ್ಬನ ಮಗ ಆಕೆಯ ಮೇಲೆ ಆಸಿಡ್ ದಾಳಿ ಮಾಡುತ್ತಾನೆ. ಆಸಿಡ್ ದಾಳಿಗೆ ಒಳಗಾದ ಆಕೆಗೆ ನ್ಯಾಯವನ್ನು ಕೊಡಿಸಿ, ಸಮಾಜಕ್ಕೆ ಬುದ್ಧಿಹೇಳುವ ದಕ್ಷ ಅಧಿಕಾರಿಯಾಗಿ ವಿಜಯ್ ಚಿತ್ರದುದ್ದಕ್ಕೂ ಮಿಂಚಿದ್ದಾರೆ. ಮಾಡೆಲ್ ಟ್ರೈನಿಯಾಗಿ ಕೆಲಸ ಮಾಡುವ ನಾಯಕಿ (ರಾಗಿಣಿ) ವಿಜಯ್ಗೆ ಬೆಂಗಾವಲಾಗಿ ನಿಂತು ಅಪರಾಧಿಗಳ ಮಟ್ಟಹಾಕುವ ನಾಯಕನ ಕಾರ್ಯದಲ್ಲಿ ಸಹಾಯ ಮಾಡುತ್ತಾಳೆ.
ಹೆಸರಿಗೆ ತಕ್ಕಂತೆ ಇದು ಖಾಕಿ ಚಿತ್ರ. ಹಾಗಾಗಿ ಚಿತ್ರದುದ್ದಕ್ಕೂ ಚಾಲೆಂಜುಗಳು, ಧಮಕಿಗಳು, ಫೈಟ್ಗಳು ಇದ್ದೇ ಇವೆ. ಚಿತ್ರದಲ್ಲಿ ಖಾಕಿ ಹಾಗೂ ಕಪ್ಪುಕೋಟುಗಳು ಪರಸ್ಪದ ಎದುರಾಳಿಗಳಾಗುತ್ತವೆ. ಇವೆರಡೂ ಪರಸ್ಪರ ಮೇಲಾಟದಲ್ಲಿ ತೊಡಗುತ್ತವೆ. ಪೊಲೀಸ್ ಅಧಿಕಾರಿ ಶಂಕರ್ಗೆ ಎದುರಾಗಿ ನಿಂತು ಸವಾಲು ಹಾಕುವ ಪಾತ್ರದಲ್ಲಿ ರಂಗಾಯಣ ರಘು ಬೊಂಬಾಟಾಗಿ ನಟಿಸಿದ್ದಾರೆ.
ಚಿತ್ರದಲ್ಲಿ ಅವಿನಾಶ್ ಹಾಗೂ ಶೋಭರಾಜ್ ಅವರುಗಳಿಗೆ ಅಪರೂಪಕ್ಕೆ ಒಳ್ಳೆಯ ಪಾತ್ರಗಳು ದೊರಕಿವೆ. ಚಿತ್ರಗಳಲ್ಲಿ ಯಾವಾಗಲೂ ವಿಲನ್ ಪಾತ್ರಗಳನ್ನು ಮಾಡುತ್ತಿದ್ದ ಶೋಭರಾಜ್ ಹಾಗೂ ಅವಿನಾಶ್ ಈ ಚಿತ್ರದಲ್ಲಿ ಬೇರೆಯ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದುದ್ದಕ್ಕೂ ಕಾಣಿಸಿಕೊಂಡಿರುವ ವಿಜಯ್ ಎಲ್ಲ ರೀತಿಯ ಅಭಿನಯಗಳನ್ನೂ ಮಾಡಿದ್ದಾರೆ. ಈ ಚಿತ್ರದಲ್ಲಿ ಅವರೆ ಕಾಮಿಡಿಯನ್, ಅವರೇ ಆಕ್ಷನ್ ಕಿಂಗ್, ಅವರೇ ಚಾಲೇಂಜರ್ ಕೊನೆಗೆ ಅವರೇ ಐಟಂ ಸಾಂಗಿಗೂ ಹೆಜ್ಜೆ ಹಾಕುತ್ತಾರೆ. ಎಲ್ಲಾ ಸಂಭಾಷಣೆಯನ್ನು ನಿಧಾನವಾಗಿ ಸ್ಪಷ್ಟವಾಗಿ ಉಚ್ಛರಿಸಿ ಎಲ್ಲರ ಸಿಳ್ಳೆ ಗಿಟ್ಟಿಸಿಕೊಳ್ಳುತ್ತಾರೆ. ಸಂಭಾಷಣೆಗಳನ್ನು ವೇಗವಾಗಿ ಹೇಳಿದ್ದರೆ ವಿಜಯ್ನ್ನು ಮತ್ತೊಬ್ಬ `ಸಾಯಿಕುಮಾರ್' ಅನ್ನಬಹುದು. ಆದರೂ ಕೆಲವೊಮ್ಮೆ ಸಡನ್ನಾಗಿ ಸಿಟ್ಟಿಗೇಳುವುದು ನೋಡುಗರಿಗೆ ಕಿರಿಕಿರಿ ಉಂಟುಮಾಡುತ್ತದೆ. ಫೈಟುಗಳನ್ನು ಚೆನ್ನಾಗಿಯೇ ಮಾಡಿ ಪ್ರೇಕ್ಷಕರನ್ನು ಸೆಳೆಯುವ ವಿಜಯ್ ಚಿತ್ರದಲ್ಲಿ ಬೇಜಾನಾಗಿ ಬಟ್ಟೆ ಬಿಚ್ಚಿ ತಮ್ಮ ಸಿಕ್ಸ್ ಪ್ಯಾಕ್ ಶರೀರ ಪ್ರದಶರ್ಿಸುವ ಮೂಲಕ ತಾಕತ್ತು ತೋರಿಸಿದ್ದಾರೆ.
ಈ ಚಿತ್ರದಲ್ಲಿ ನಾಯಕಿಯರಿಗೆ ಕೊಂಚ ಸ್ಕೋಪ್ ಕಡಿಮೆ. ಮಾಡೆಲ್ ಆಗಿದ್ದ ಕ್ಯಾಥರೀನ್ಗೆ ಇದು ಕನ್ನಡದ ಮೊದಲ ಚಿತ್ರ. ಚಿತ್ರದಲ್ಲಿ ಅವರದ್ದು ಮಿಸ್ ಇಂಡಿಯಾ ಸ್ಪಧರ್ಿಯ ಪಾತ್ರ. ಆದರೂ ಅವರು ತಮಗೆ ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ರಂಗಾಯಣ ರಘು ಚಿತ್ರದ ಪ್ಲಸ್ ಪಾಯಿಂಟ್ಗಳಲ್ಲಿ ಒಂದು. ಚಿತ್ರದಲ್ಲಿ 5 ಹಾಡುಗಳಿವೆ. ಆದರೆ ಈ ಹಾಡುಗಳು ಮಾತ್ರ ಏನು ಮಾಡಿದರೂ ನೆನಪಲ್ಲಿ ಉಳಿಯಲಾರವು. ಇದಕ್ಕೆ ಸಂಗೀತ ನಿದರ್ೆಶಕರು ಕಾರಣವೋ ಗೀತೆಗಳನ್ನು ಬರೆದವರು ಕಾರಣವೋ ತಿಳಿಯುವುದಿಲ್ಲ. ವಿಜಯ್ ತೆರೆಯ ಮೇಲೆ ಇದ್ದಷ್ಟೂ ಹೊತ್ತು ಇತರ ಪಾತ್ರಗಳು ಮಾತೇ ಆಡದಿರುವುದು ಚಿತ್ರದ ಮೈನಸ್ ಪಾಯಿಂಟ್ಗಳಲ್ಲಿ ಒಂದು.
ಇನ್ನುಳಿದಂತೆ ದಾಸರಿ ಸೀನು ಅವರು ಕ್ಯಾಮರಾ ಮೂಲಕ ಉತ್ತಮ ದೃಷ್ಯಗಳನ್ನು ಸೆರೆಹಿಡಿಯಲು ಪ್ರಯತ್ನಿಸಿದ್ದಾರೆ. ಸಂಭಾಷಣೆಯಲ್ಲಿರುವ ಗಟ್ಟಿತನ ಸೆಳೆಯುತ್ತದೆ. ವಿಜಯ್ ವಿಜ್ರಂಭಣೆಗೆ ಬೇಕಾದ ಸಂಭಾಷಣೆಗಳನ್ನು ನಿದರ್ೇಶಕ ರಮೇಶ್ ಬಾಬೂ ಕೆತ್ತಿದ್ದಾರೆ. ಉತ್ತಮ ಸಂದೇಶವನ್ನು ಹೇಳಲು ಹೊರಟ ರಮೇಶ್ ಬಾಬೂ ಅದನ್ನು ಮಾಸ್ ಜನರ ಮನಸ್ಸಿಗೆ ಮುಟ್ಟಿಸುವಲ್ಲಿ ಕೆಲವೊಮ್ಮೆ ವಿಫಲರಾಗಿದ್ದಾರೆ. ಚಿತ್ರವನ್ನೂ ಇನ್ನೂ ಉತ್ತಮವಾಗಿ ಮಾಡಲು ರಮೇಶ್ ಬಾಬೂ ಪ್ರಯತ್ನಿಸಿದ್ದರೆ ಮಾಸ್ ಜೊತೆಗೆ ಕ್ಲಾಸ್ ಜನರನ್ನು ಸೆಳೆಯಬಹುದಿತ್ತು.
ಮಾಸ್ಗೆ ಬೇಕಾಗಿರುವ ಎಲ್ಲ ಮಸಾಲೆ ಅಂಶಗಳನ್ನೂ ಒಳಗಿರಿಸಿಕೊಂಡು, ಸಂಪೂರ್ಣ ವಿಜಯ್ ತಾಕತ್ ಹಾಗೂ ದಾಢಸಿತನದ ಮೇಲೆ ಹೊರಬಂದಿರುವ ಶಂಕರ್ ಐಪಿಎಸ್ ವಿಜಿ ಅಭಿಮಾನಿಗಳಿಗೆ ಹಬ್ಬದೂಟ ನೀಡುತ್ತದೆ.

ವಿನಯ್ ದಂಟಕಲ್