Tuesday, June 29, 2010

ಹೆಣ್ಣಿನ ಮಾನಸಿಕ ತುಮುಲದ ಅನಾವರಣ ಶರಪಂಜರ

 ಚಿತ್ರ ಬಿಡುಗಡೆ : ೧೯೭೧ 
ನಿರ್ದೇಶಕ : ಪುಟ್ಟಣ್ಣ ಕಣಗಾಲ್
ಚಿತ್ರಕಥೆ : ಪುಟ್ಟಣ್ಣ ಕಣಗಾಲ್
ಕಥೆ : ತ್ರಿವೇಣಿ
ನಿರ್ಮಾಪಕ : ಸಿ. ಎಸ್. ರಾಜಾ
ಸಂಗೀತ : ವಿಜಯಭಾಸ್ಕರ್
ಛಾಯಾಗ್ರಹಣ : ಡಿ. ವಿ. ರಾಜಾರಾಮ್
ತಾರಾಗಣದಲ್ಲಿ : ಕಲ್ಪನಾ, ಗಂಗಾಧರ್, ಶಿವರಾಮ್, ಲೀಲಾವತಿ ಮುಂತಾದವರು


ಪುಟ್ಟಣ್ಣನವರ ಮೇರು ನಿರ್ದೇಶನದಲ್ಲಿ ಮೂಡಿಬಂದ ಚಿತ್ರ ಶರಪಂಜರ. ಕಾದಂಬರಿಗಾರ್ತಿ  ತ್ರಿವೇಣಿ ಅವರ ಕಾದಂಬರಿ ಆಧಾರಿತ ಕಥೆಯೇ ಶರಪಂಜರ. ಕಥಾನಾಯಕ ಸತೀಶ್ (ಗಂಗಾಧರ್) ಹಾಗೂ ನಾಯಕಿ ಕಾವೇರಿ (ಕಲ್ಪನಾ) ದಂಪತಿಗಳ ಸುತ್ತ ಹೆಣೆಯಲ್ಪಟ್ಟ ಕಥೆಯೇ ಶರಪಂಜರ. ಪ್ರೇಮ ವಿವಾಹದ ನಂತರ ಕಾವೇರಿ ಬದುಕು ಯಾವ ರೀತಿಯ ತಿರುವುಗಳನ್ನು ಪಡೆಯುತ್ತದೆ ಎಂಬುದು ಕಥಾವಸ್ತು. ಮದುವೆಯ ನಂತರ ಎಲ್ಲರೀತಿಯ ಸುಖಗಳನ್ನೂ ಅನುಭವಿಸುತ್ತಿರುವ ಹೊತ್ತಿನಲ್ಲಿ ಮದುವೆಗೆ ಮುನ್ನ ನಡೆದ ಘಟನೆಯ ಕಾರಣದಿಂದ ಕಾವೇರಿ ತನ್ನ ಎರಡನೇ ಹೆರಿಗೆಯ ವೇಳೆ ಮಾನಸಿಕವಾಗಿ ಅಸ್ವಸ್ಥಳಾಗುತ್ತಾಳೆ. ಮಾನಸಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖಳಾಗಿ ಮನೆಗೆ ಮರಳುತ್ತಾಳೆ. ಆ ನಂತರ ಮನೆ, ಮಗ, ಸಮಾಜ ಆಕೆಯನ್ನು ಯಾವ ರೀತಿ ಕಾಣುತ್ತದೆ, ಆಕೆಯ ಜೊತೆ ಹೇಗೆ ನಡೆದುಕೊಳ್ಳುತ್ತದೆ ಎಂಬುದೇ ಕಥಾ ಹಂದರ. ಗಂಡ ಹಾಗೂ ಮನೆಯ ಸದಸ್ಯರ ಅಸಡ್ಡೆ, ಹಳೆಯ ಘಟನೆ ನೀಡುವ ಮಾನಸಿಕ ತುಮುಲ ಕಾವೇರಿಯನ್ನು ಕಾಡುತ್ತವೆ. ಕೊನೆಯಲ್ಲಿ ಆಕೆ ಈ ಎಲ್ಲ ತೊಂದರೆಗಳಿಂದ ಬಿಡುಗಡೆ ಹೊಂದುತ್ತಾಳೆಯೆ? ಅಸಡ್ಡೆಯಿಂದ ಕಾಣುವ ಗಂಡ ಆಕೆಯನ್ನು ಮತ್ತೆ ಒಪ್ಪಿಕೊಳ್ಳುತ್ತಾನೆಯೆ ಎಂಬುದು ಚಿತ್ರದ ಕ್ಲೈಮ್ಯಾಕ್ಸ್.
ಕಲ್ಪನಾ ಅಭಿನಯದ ಸರ್ವಶ್ರೇಷ್ಠ ಪ್ರದರ್ಶನವನ್ನು ಚಿತ್ರದಲ್ಲಿ ಕಾಣಬಹುದು. ಮಾನಸಿಕ ವೇದನೆಯನ್ನು ಕಲ್ಪನಾ ಎಂದೂ ಮರೆಯಲು ಸಾಧ್ಯವೇ ಇಲ್ಲದಂತೆ ಕಟ್ಟಿಕೊಡುತ್ತಾಳೆ. ಚಿತ್ರದಲ್ಲಿ ಆಕೆಯ ನಟನೆ ಎಲ್ಲರ ಕಣ್ಣಿನಲ್ಲಿಯೂ ನೀರು ತರಿಸುವಂತಿದೆ. ಮತ್ತೆ ಮತ್ತೆ ಈಕೆ ಬಿಡದೇ ಕಾಡುತ್ತಾಳೆ. ಇಂತಹ ಶ್ರೇಷ್ಠ ಅಭಿನಯ ಆಕೆಗೆ ರಾಜ್ಯ ಪ್ರಶಸ್ತಿಯನ್ನೂ ತಂದುಕೊಟ್ಟಿದೆ. ಸತೀಶನ ಪಾತ್ರದಾರಿ ಗಂಗಾಧರ್, ಅಡುಗೆ ಭಟ್ಟ ಶಿವರಾಂ ಸಹ ಚಿತ್ರದಲ್ಲಿ ಅತ್ಯುತ್ತಮವಾಗಿ ಅಭಿನಯಿಸಿದ್ದಾರೆ.
ಚಿತ್ರದ ಹಾಡುಗಳೂ ಅಷ್ಟೆ ಮಧುರವಾದವುಗಳು. ವಿಜಯ್ ಭಾಸ್ಕರ್ ಸಂಗೀತದಲ್ಲಿ ಅತ್ಯುತ್ತಮವಾಗಿ ಮೂಡಿಬಂದಿವೆ. `ಕೊಡಗಿನ ಕಾವೇರಿ', `ಹದಿನಾಲ್ಕು ವರ್ಷ ವನವಾಸದಿಂದ..', `ಬಿಳಿಗಿರಿ ರಂಗಯ್ಯ..' `ಸಂದೇಶ ಮೇಘ ಸಂದೇಶ..' ವರಕವಿ ಬೇಂದ್ರೆ ವಿರಚಿತ `ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ...' ಈ ಹಾಡುಗಳು ಮತ್ತೆ ಮತ್ತೆ ಕೇಳಬೇಕೆನಿಸುತ್ತವೆ. ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತವೆ.
ಈ ಚಿತ್ರದ ನಂತರ ನಟಿ ಕಲ್ಪನಾ ಕನ್ನಡದಲ್ಲಿ ಬಿಡುವಿಲ್ಲದ ನಟಿಯಾದರೆ ನಿದರ್ೇಶಕ ಪುಟ್ಟಣ್ಣ ಕಣಗಾಲ್ ಅತ್ಯುತ್ತಮ ನಿದರ್ೇಶಕ ರಾಜ್ಯ ಪ್ರಶಸ್ತಿ ಲಭಿಸಿತು. ಇಂದಿನ ನಟಿಯರೂ ತಾವು ಶರಪಂಜರದ ಕಲ್ಪನಾರಂತೆ ನಟಿಸಬೇಕು ಎಂದು ಬಯಸುವುದು ಈ ಚಿತ್ರದಲ್ಲಿ ಅವರ ನಟನೆಗೆ ನಿದರ್ಶನ. ಈ ಚಿತ್ರದ ನಂತರ ಕನ್ನಡದಲ್ಲಿ ಅದೆಷ್ಟೋ ಮಾನಸಿಕ ತುಮುಲಗಳನ್ನು ಬಿಂಬಿಸುವ ಚಿತ್ರಗಳು ಬಂದವು. ಆದರೆ ಅವ್ಯಾವವೂ ಈ ಚಿತ್ರದಷ್ಟು ಯಶಸ್ವಿಯಾಗಲಿಲ್ಲ.
ಪುಟ್ಟಣ್ಣ, ಕಲ್ಪನಾ, ವಿಜಯ್ ಭಾಸ್ಕರ್ ಮುಂತಾದ ಮೇರು ಕಲಾವಿದರು, ತಂತ್ರಜ್ಞರ ಶ್ರಮದ ಪರಿಣಾಮ ಶರಪಂಜರ ಮೂರು ದಶಕಗಳ ನಂತರವೂ ಕ್ಲಾಸಿಕ್ ಚಿತ್ರಗಳ, ಕನ್ನಡದ ಅತ್ಯುತ್ತಮ ಚಿತ್ರಗಳ ಸಾಲಿನಲ್ಲಿ ಒಂದೆನಿಸಿಕೊಂಡಿದೆ.

2 comments:

  1. sir klpana citragala bage abimana toresidakke danyavadagalu

    ReplyDelete
  2. ಓಕೆ.. ಯಾವತ್ತೋ.. ಸಂಯುಕ್ತ ಕರ್ನಾಟಕದಲ್ಲಿ ಬರೆದಿದ್ದ ಬರಹ ಇದು ಅಷ್ಟೆ...

    ReplyDelete