Monday, June 21, 2010

ಸಕಲಕಾಲಕ್ಕೂ ಸಲ್ಲುವ `ಕಸ್ತೂರಿ ನಿವಾಸ'


ನಿರದೆಶಕರು : ದೊರೈ-ಭಗವಾನ್
ಸಂಗೀತ : ಜಿ. ಕೆ. ವೆಂಕಟೇಶ್
ಚಿತ್ರ ಬಿಡುಗಡೆ : 1971
ಚಿತ್ರಕಥೆ, ಸಂಭಾಷಣೆ : ಚಿ. ಉದಯ್ಶಂಕರ್
ಮೂಲ ಕಥೆ : ಜಿ. ಬಾಲಸುಬ್ರಮಣ್ಯಂ (ತಮಿಳು)
ತಾರಾಗಣದಲ್ಲಿ : ಡಾ. ರಾಜ್ಕುಮಾರ್, ಜಯಂತಿ, ಕೆ. ಎಸ್. ಅಶ್ವಥ್, ಆರತಿ ಮುಂತಾದವರು.

ಕಸ್ತೂರಿ ನಿವಾಸ ಕನ್ನಡ ಚಿತ್ರರಂಗದ ಎಂದೂ ಮರೆಯದ ಚಿತ್ರ. ಹಲವು ವಿಶಿಷ್ಟ ಕಾರಣಗಳಿಂದ ಇದು ಸೆಳೆಯಲ್ಪಡುತ್ತದೆ. ತಮಿಳಿನಲ್ಲಿ ಶಿವಾಜಿ ಗಣೇಶನ್ ಗಾಗಿ ರಚನೆಯಾದ ಕಥೆಯನ್ನು ಅಲ್ಪಸ್ವಲ್ಪ ಮಾರ್ಪಡಿಸಿ ಕನ್ನಡದಲ್ಲಿ ಚಿತ್ರ ನಿರ್ಮಿಸಲಾಗಿದೆ. ಬೆಂಕಿಪೊಟ್ಟಣ ನಿರ್ಮಾಣದ ಕಾರಖಾನೆಯ ಉದ್ಯಮಿಯ ವಿಫಲ ಪ್ರೇಮಕಥೆಯೇ ಕಸ್ತೂರಿ ನಿವಾಸ. ಈ ಕಥೆಗೆ ಶಿವಾಜಿ ಗಣೇಶನ್ ಒಪ್ಪಿಗೆ ನೀಡದ ಕಾರಣ ಕನ್ನಡದಲ್ಲಿ ಕ್ಲಾಸಿಕ್ ಚಿತ್ರವಾಗಿ ಮೂಡಿ ಬಂದಿತು. ಈ ಚಿತ್ರ ಕನ್ನಡದಲ್ಲಿ ತಯಾರಾಗಲು ಚಿತ್ರ ಸಂಭಾಷಣಕಾರ ಚಿ. ಉದಯ್ ಶಂಕರ್, ದೊರೈ ಭಗವಾನ್ ಹಾಗೂ ಡಾ. ರಾಜ್ ಅವರ ಪಾತ್ರ ಬಹಳ ದೊಡ್ಡದು.
ಕಥಾನಾಯಕ ರವಿ ಅಮೆರಿಕಾದಲ್ಲಿ ಬ್ಯುಸಿನೆಸ್ ಕೋರ್ಸ್  ಮುಗಿಸಿ ಭಾರತಕ್ಕೆ ಮರಳುವ ಉದ್ಯಮಿ. ಭಾರತದಲ್ಲಿ ಆತ ಬೆಂಕಿಪೊಟ್ಟಣ ಕಾರಖಾನೆ ಪ್ರಾರಂಭಿಸುತ್ತಾನೆ. ನಡುವೆಯೇ ತನ್ನ ಕಾರ್ಯದರಷಿ  ಲೀಲಾ(ಜಯಂತಿ)ಳ ಪ್ರೇಮಪಾಶದಲ್ಲಿ ಬೀಳುತ್ತಾನೆ. ಆದರೆ ಆಕೆ ರವಿಯ ಮಿತ್ರ ಚಂದ್ರೂನನ್ನು ಕಾರಣಾಂತರಗಳಿಂದ ಮದುವೆಯಾಗುತ್ತಾಳೆ. ರವಿ ಸಹ ಬೇರೊಬ್ಬಳನ್ನು ಮದುವೆಯಾಗುತ್ತಾನೆ. ಅಲ್ಲದೆ ಅಪಘಾತವೊಂದರಲ್ಲಿ ಹೆಂಡತಿ ಹಾಗೂ ತನ್ನ ಮಗಳನ್ನು ಕಳೆದುಕೊಳ್ಳುತ್ತಾನೆ. ಈ ನಡುವೆ ಲಾಭದ ಹಾದಿಯಲ್ಲಿದ್ದ ಆತನ ಕಾಖರ್ಾನೆ ನಷ್ಟದೆಡೆಗೆ ಮುಖಮಾಡುತ್ತದೆ. ಅದಕ್ಕೆ ಮಿತ್ರ ಚಂದ್ರು ಸಹ ಕಾರಣನಾಗಿರುತ್ತಾನೆ. ಈ ಹಂತದಲ್ಲಿ ಲೀಲಾ ಮತ್ತೊಮ್ಮೆ ಆತನ ಬದುಕಿನಲ್ಲಿ ಬರುತ್ತಾಳೆ. ಲೀಲಾಳ ಮಗಳನ್ನು ರವಿ ಹಚ್ಚಿಕೊಳ್ಳುತ್ತಾನೆ. ಹೀಗೆ ಏರಿಳಿತದ ಬದುಕನ್ನು ಕಾಣುವ ರವಿ ಕೊನೆಯಲ್ಲಿ ಏನಾಗುತ್ತಾನೆ ಎಂಬುದು ಚಿತ್ರದ ಕಥಾ ಹಂದರ.
ರವಿ ಪಾತ್ರಧಾರಿ ರಾಜ್ಕುಮಾರ್ ಮನೋಜ್ಞವಾಗಿ ನಟಿಸಿ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುತ್ತಾರೆ. ಮನೆಯ ಕೆಲಸಗಾರನ ಪಾತ್ರದಲ್ಲಿ ನಟಿಸಿರುವ ಅಶ್ವಥ್ರಂತೂ ಪರಕಾಯ ಪ್ರವೇಶ ಮಾಡಿದಂತೆ ನಟಿಸಿದ್ದಾರೆ. ಜಯಂತಿ, ಆರತಿ ತಕ್ಕಮಟ್ಟಿಗೆ ನಟಿಸಿದ್ದಾರೆ.
ಚಿತ್ರದಲ್ಲಿನ ಎಲ್ಲಾ ಹಾಡುಗಳೂ ಅತ್ಯಂತ ಸುಂದರವಾಗಿವೆ. ಮತ್ತೆ ಮತ್ತೆ ಕೇಳಬೇಕೆನಿಸುವ ಈ ಹಾಡುಗಳು ಜೀವನ ತತ್ವವನ್ನು ಸಾರುವಂತವುಗಳು. ಚಿತ್ರಕ್ಕೆ ಸಂಗೀತ ನೀಡಿದ್ದು ಜಿ. ಕೆ. ವೆಂಕಟೇಶ್. `ಆಡಿಸಿ ನೋಡು ಬೀಳಿಸಿನೋಡು',`ಆಡಿಸಿದಾತಾ ಬೇಸರಮೂಡಿ', `ಎಲ್ಲೇ ಇರು ಹೇಗೇ ಇರು', `ಆಡೋಣ ನೀನು ನಾನು', `ನೀ ಬಂದು ನಿಂತಾಗ' ಮುಂತಾದ ಹಾಡುಗಳು ಮತ್ತೆ ಮತ್ತೆ ಕೇಳುವಂತಿವೆ. `ಆಡಿಸಿ ನೋಡು ಬೀಳಿಸಿ ನೋಡು' ಹಾಗೂ `ಆಡಿಸಿದಾತಾ ಬೇಸರ ಮೂಡಿ' ಈ ಗೀತೆಗಳು ಜೀವನ ತತ್ವವನ್ನು ಸಾರುತ್ತವೆ.
ಕನ್ನಡದ ಎವರ್ಗ್ರೀನ್ ಚಿತ್ರ ಕಸ್ತೂರಿ ನಿವಾಸವನ್ನು ನೋಡದಿದ್ದರೆ ಏನನ್ನೋ ಕಳೆದುಕೊಂಡಂತಹ ಅನುಭವ. ಎರಡೂ ಮುಕ್ಕಾಲು ತಾಸುಗಳ ಈ ಚಿತ್ರ ವೀಕ್ಷಿಸಿದವರಿಗೆ ನೀಡುವ ಅನುಭವವೇ ಬೇರೆ. `ಕಸ್ತೂರಿ ನಿವಾಸ' ಕನ್ನಡದ ಕಂಪನ್ನು ಕಸ್ತೂರಿಯಂತೆ ಬೀರಿದ ಚಿತ್ರ.

No comments:

Post a Comment