Monday, June 14, 2010

ಬಡ ಕವಿಯ ಭಾವಗೀತೆ ಪ್ಯಾಸಾ

ನಿರದೆಶಕ : ಗುರುದತ್
ನಿರಮಾಪಕ : ಗುರುದತ್
ಕಥೆ : ಅಬ್ರಾರ್ ಅಲ್ವಿ
ಛಾಯಾಗ್ರಹಣ : ವಿ.ಕೆ. ಮೂರ್ತಿ 
ಸಂಗೀತ : ಎಸ್. ಡಿ. ಬರ್ಮನ್
ಚಿತ್ರ ಬಿಡುಗಡೆ : ಫೆಬ್ರವರಿ 19, 1957
ತಾರಾಗಣದಲ್ಲಿ : ಗುರುದತ್, ವಹೀದಾ ರೆಹಮಾನ್, ಮಾಲಾ ಸಿನ್ಹ, ಜಾನಿ ವಾಕರ್, ರೆಹಮಾನ್ ಮುಂತಾದವರು.

ಬಡ ಕವಿಯೊಬ್ಬನ ವಿಫಲ ಪ್ರೇಮ, ಪ್ರೇಮವನ್ನು ಪಡೆಯಲು ಆ ಕವಿ ತೊಳಲಾಡುವುದು, ಪ್ರೇಯಸಿಯ ಮೋಸ ಈ ಮುಂತಾದ ಕಥಾ ಹಂದರವನ್ನಿಟ್ಟುಕೊಂಡು ಸುಂದರ ಚಿತ್ರವನ್ನು ತಯಾರಿಸಿದ್ದಾರೆ ಗುರುದತ್. ಬದುಕಿನಲ್ಲಿ ನೆಲೆ ನಿಲ್ಲಲಾಗದೇ, ಬರೆದ ಕವಿತೆಗಳನ್ನು ಪ್ರಕಟಿಸಲು ಹಣವಿಲ್ಲದೆ ಪರಿತಪಿಸುವ ಕವಿ ವಿಜಯ್ನ ಪಾತ್ರದಲ್ಲಿ ಮೋಹಕ ಅಭಿನಯ ನೀಡಿದ್ದು ಗುರುದತ್. ಈ ಕವಿಯ ಕಾಲೇಜು ದಿನಗಳ ಪ್ರೇಯಸಿಯಾಗಿ ಗುರುದತ್ಗೆ ಮೋಸಮಾಡುವ ಪಾತ್ರ ನಿರ್ವಹಿಸಿದ್ದು ಮಾಲಾ ಸಿನ್ಹಾ. ಈಕೆ ಮಾಡುವ ಮೋಸ ನೋಡುಗರ ಕಣ್ಣಿನಲ್ಲಿ ನೀರು ತರಿಸುತ್ತದೆ.
ಈ ಚಿತ್ರದ ಮುಖ್ಯ ಆಕರ್ಷಣೆ ವಹೀದಾ ರೆಹಮಾನ್. ಈ ಚಿತ್ರ ವಹೀದಾಗೆ ಪಾದಾರ್ಪಣೆಯ ಚಿತ್ರ. ತನ್ನ ಮನೋಜ್ಞ ಅಭಿನಯದಿಂದ ಎಲ್ಲರ ಮನಸ್ಸನ್ನು ಸೂರೆಗೊಳ್ಳುವ ಈಕೆ ಚಿತ್ರ ರಸಿಕರ ಹೃದಯದಲ್ಲಿ ಶಾಶ್ವತ ಸ್ಥಾನ ಗಳಿಸಿಕೊಂಡುಬಿಡುತ್ತಾಳೆ. ಚಿತ್ರದಲ್ಲಿ ಈಕೆಯದು ಗುಲಾಬೂ ಎಂಬ ವೇಶ್ಯೆಯ ಪಾತ್ರ. ವೇಶ್ಯೆಯಾದರೂ ಈಕೆಗೆ ವಿಜಯ್ನ ಕವನಗಳನ್ನು ಕೇಳುವ ಆಸೆ. ಆತನ ಕವನಗಳನ್ನು ಆಲಿಸುತ್ತಲೇ ವಿಜಯ್ನ ಪ್ರೇಮದಲ್ಲಿ ಬೀಳುತ್ತಾಳೆ. ಆತನ ಕವನಗಳನ್ನು ಪ್ರಕಟಿಸುತ್ತಾಳೆ. ಈ ಸಂದರ್ಭದಲ್ಲಿ ಆತನ ಬದುಕು ವಿಚಿತ್ರ ತಿರುವುಗಳನ್ನು ಪಡೆಯುತ್ತದೆ. ಶ್ರೀಮಂತ ಉದ್ಯಮಿ (ಮಾಲಾ ಸಿನ್ಹಾಳ ಪತಿ) ವಿಜಯ್ನ ಕೊಲೆಗೆ ಪ್ರಯತ್ನಿಸುತ್ತಾನೆ. ಈ ನಡುವೆ ವಿಜಯ್ ಬದುಕಿರುವಂತೆಯೇ ಸತ್ತುಹೋಗಿದ್ದಾನೆಂದು ಘೋಷಿಸಲ್ಪಡುತ್ತಾನೆ. ಇದು ಚಿತ್ರದ ಸಾರಾಂಶ. ಚಿತ್ರದ ಕ್ಲೈಮ್ಯಾಕ್ಸ್ ಅತ್ಯುತ್ತಮವಾಗಿ ಮೂಡಿಬಂದಿದೆ.
ಚಿತ್ರದಲ್ಲಿ ಗುರುದತ್ರದ್ದು ಅಮೋಘ ನಟನೆ. ವಿಜಯ್ ಪಾತ್ರವನ್ನು ನಿರ್ವಹಿಸಲು ಇನ್ಯಾರಿಂದಲೂ ಸಾಧ್ಯವಿಲ್ಲ ಎಂಬಂತಹ ನಟನೆ ಅವರದ್ದು. ವಹೀದಾ ರೆಹಮಾನ್ ನೋಡುಗರನ್ನು ಸೆಳೆಯುತ್ತಾರೆ. ಗುರುದತ್ನ ಮಿತ್ರನ ಪಾತ್ರದಲ್ಲಿ ನಟಿಸಿರುವ ಜಾನಿವಾಕರ್ ತಮ್ಮ ಕಾಮಿಡಿಯಿಂದ ನಗೆ ಉಕ್ಕಿಸುತ್ತಾರೆ.
`ಜಾನೆ ಕ್ಯಾ ತೂನೆ ಕಹಿ ಭಿ',`ಹಮ್ ಆಪ್ ಕಿ ಆಂಖೋ ಮೇ',`ಜಾನೆ ವೋ ಕೈಸೆ ಲೋಗ್' ಮುಂತಾದ ಹಾಡುಗಳು ಮತ್ತೆ ಮತ್ತೆ ಕೇಳುವಂತಿದೆ. ಚಿತ್ರಕ್ಕೆ ಸಂಗೀತ ನೀಡಿದ್ದು ಎಸ್. ಡಿ. ಬರ್ಮನ್. ಮೊಹಮ್ಮದ್ ರಫಿ ಹಾಗೂ ಗುರುದತ್ ಅವರಿಂದ ಒಳ್ಳೊಳ್ಳೆಯ ಹಾಡುಗಳನ್ನು ಹಾಡಿಸಿದ ಖ್ಯಾತಿ ಬರ್ಮನ್ಗೆ ಸಲ್ಲುತ್ತದೆ.
ಬಾಲಿವುಡ್ನ ಎಂದೂ ಮರೆಯದ ಚಿತ್ರ ಪ್ಯಾಸಾ. ಎಲ್ಲ ಕಾಲದ ಜನರನ್ನು ಇದು ಸೆಳೆಯುತ್ತದೆ.
 

No comments:

Post a Comment