Friday, August 13, 2010

ರಂಗಾನುಭವ ~`ಅಣೇಕಟ್ಟು' ~

ಕಾಲೇಜು ದಿನಮಾನದಲ್ಲಿ ಯುವಜನ ಮೇಳಕ್ಕಾಗಿ ನಾವು ಬರೆದು, ನಟಿಸಿ, ಪ್ರಶಸ್ತಿಗಳಿಸಿದ `ಅಣೆಕಟ್ಟು' ಎಂಬ ನಾಟಕದ ಕುರಿತು ನಮ್ಮ ಅನುಭವಗಳನ್ನು ಈ ಲೇಖನದ ಮೂಲಕ ಹಂಚಿಕೊಳ್ಳುತ್ತಿದ್ದೇನೆ. ಸೀಮಿತ ಸಮಯದಲ್ಲಿ ಪ್ರಸ್ತುತ ಜಗತ್ತಿನ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಕಥಾ ವಸ್ತುವನ್ನು ಒಳಗೊಂಡಿದ್ದ ನಮ್ಮ ನಾಟಕ ಬಹಳ ಪ್ರಸಿದ್ಧಿ ಪಡೆಯಿತು. `ಅಣೆಕಟ್ಟು' ನಾಟಕದ ಹಿಂದಿನ ನಮ್ಮ ಕಾರ್ಯ, ಕೆಲಸ, ಅನುಭವ ಇಂತಿದೆ.
---------------------------------------
ಕೇವಲ ಅರ್ಧಗಂಟೆಯ ಅವಧಿಯಲ್ಲಿ ಪ್ರಸ್ತುತ ದಿನಮಾನದ ಸಮಸ್ಯೆಯನ್ನು ನಾಟಕದ ವಿಷಯವನ್ನಾಗಿಸಿಕೊಂಡು ನಾಟಕ ಮಾಡಬೇಕು ಎಂಬ ನಿಯಮದ ಹಿನ್ನೆಲೆಯಲ್ಲಿ ನಾವು `ಅಣೆಕಟ್ಟು' ನಾಟಕ ನಡೆಸಲು ಮುಂದಾದೆವು. ಕರ್ನಾಟಕ ವಿಶ್ವವಿದ್ಯಾಲಯದ ಯುವಜನ ಮೇಳದಲ್ಲಿ ಅಂತರಕಾಲೇಜು ಮಟ್ಟದಲ್ಲಿ ನಾಟಕ ಸ್ಪರ್ಧೆಯಲ್ಲಿ ನಮ್ಮ ಈ ನಾಟಕವನ್ನು ಅಭಿನಯಿಸಿ ತೋರಿಸಬೇಕಿತ್ತು. ಶಿರಸಿ ಕಾಲೇಜಿನ ಸಹಯೋಗದೊಂದಿಗೆ ನಮ್ಮ ಗೆಳೆಯರು ನಾಟಕವನ್ನು ನಡೆಸಲು ಬಲು ಉತ್ಸಾಹದಿಂದಲೇ ಮುಂದಾದರು.
ನಾನು ಬರೆದಿದ್ದ `ಅಣೆಕಟ್ಟು' ಎಂಬ ಸಣ್ಣ ಕಥೆಯನ್ನು ನಾಟಕದ ಕಥಾವಸ್ತುವನ್ನಾಗಿ ನಾವು ಆಯ್ಕೆ ಮಾಡಿಕೊಂಡಿದ್ದೆವು. ಅಣೆಕಟ್ಟು ಕಥೆಯನ್ನೇ ಕೊಂಚ ಬದಲಾಯಿಸಿ ನಾಟಕರೂಪಕ್ಕೆ ಇಳಿಸಿದ್ದೆವು. ಗೆಳೆಯ ರಾಘವ ಹೆಗಡೆ ನಾಟಕದ ನಿದರ್ೇಶನದ ಜವಾಬ್ದಾರಿಯನ್ನು ಹೊತ್ತಿದ್ದ. ಗಣೇಶ್ ಹೆಗಡೆ ಪಾಲಿಕೆ ಕಥಾನಾಯಕ ಬಸವರಾಜುವಿನ ಪಾತ್ರ ಸಿಕ್ಕಿತ್ತು.
ಜೊತೆಗೆ ನಾನು ಗೂಂಡಾ ರಾಜಕಾರಣಿ ರಾಮಪ್ಪನ ಪಾತ್ರ ಮಾಡಿದ್ದೆ. ರಾಘವ ಹೆಗಡೆ ರಾಜಕಾರಣಿಯಾಗಿ ನಟಿಸಿದ್ದರೆ, ವಿನಾಯಕ ಹಾಗೂ ಗಣೇಶ್ ವಾನಳ್ಳಿ ಊರಿನ ಗ್ರಾಮಸ್ಥರ ಪಾತ್ರ ಮಾಡಿದ್ದರು. ನಾಗರಾಜ್ ಹೆಗಡೆ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದ. ಮೃತ್ಯುಂಜಯ ಕೆ. ಎಂ. ಪೊಲೀಸ್ ಪೇದೆಯಾಗಿ ಜೊತೆಗೆ ಸೌಮ್ಯಾ, ವಂದನಾ ಜೋಶಿ ಊರಿನ ಮಹಿಳೆಯರ ಪಾತ್ರದಲ್ಲಿ ಅಭಿನಯಿಸಿದ್ದರು.

ಕಥಾವಸ್ತು
ನಿಸರ್ಗದ ನಡುವಿನ, ನದಿ ದಡದ ಊರಿನಲ್ಲಿ ಅಣೆಕಟ್ಟು ನಿಮರ್ಾಣವಾಗುವ ಸುದ್ದಿ ಊರಿನ ಅನಕ್ಷರಸ್ಥ ಜನರಲ್ಲಿ ವಿವಿಧ ಅಭಿಪ್ರಾಯ ಬದಲಾವಣೆಗೆ ಕಾರಣವಾಗುತ್ತದೆ. ಕೆಲವರು ಅಣೆಕಟ್ಟೆಯ ಪರ ಮಾತನಾಡಿದರೆ ಮತ್ತೆ ಕೆಲವರು ಅಣೆಕಟ್ಟೆಯ ವಿರುದ್ಧ ದನಿ ಎತ್ತುತ್ತಾರೆ. ಈ ಊರಿನ ಅಕ್ಷರಸ್ಥ ಯುವಕ ಬಸವರಾಜು ಅಣೆಕಟ್ಟೆ ನಿಮರ್ಾಣವನ್ನು ವಿರೋಧಿಸುತ್ತಾನೆ. ಅಣೆಕಟ್ಟೆ ನಿರಮಾಣದಿಂದ ಉಂಟಾಗುವ ತೊಂದರೆಗಳನ್ನು ಊರಿನ ಜನರಿಗೆ ವಿವರಿಸಿ ಹೇಳಿ ಅಣೆಕಟ್ಟೆಯ ವಿರುದ್ಧ ಹೋರಾಟಕ್ಕೆ ಮುಂದಾಗುತ್ತಾನೆ.
ಅಣೆಕಟ್ಟೆಯ ವಿರುದ್ಧ ಬಸವರಾಜು ಮುಂದಾಳತ್ವದಲ್ಲಿ ಹೋರಾಟ ಜೋರಾದಾಗ ಆ ಕ್ಷೇತ್ರದ ಶಾಸಕನ ರಂಗಪ್ರವೇಶವಾಗುತ್ತದೆ. ಹೋರಾಟಕ್ಕೆ ಕಾರಣಗಳನ್ನು ತಿಳಿದ ರಾಜಕಾರಣಿ ಹೋರಾಟಗಾರರ ಪರವಾಗಿ ನಿಲ್ಲುತ್ತಾನೆ. ವಿದ್ಯಾವಂತ ಅನಾಥ ಯುವಕ ಬಸವರಾಜು ರಾಜಕಾರಣಿಯ ಮನಗೆಲ್ಲುತ್ತಾನೆ. ಬಸವರಾಜುವಿನ ಹೋರಾಟಕ್ಕೆ, ಜನಪರ ನಿಲುವಿಗೆ ಮನಸೋತ ರಾಜಕಾರಣಿ ಬಸವರಾಜುನನ್ನು ತನ್ನ ಮಗನನ್ನಾಗಿ ದತ್ತು ತೆಗೆದುಕೊಳ್ಳುತ್ತಾನೆ.
ಕೆಲ ಕಾಲದ ನಂತರ ರಾಜಕಾರಣಿ ಬಸವರಾಜುನ ಮದುವೆಗೆ ಮುಂದಾಗುತ್ತಾನೆ. ಪರಿಚಿತ ರಾಜಕಾರಣಿಯ ಮಗಳನ್ನು ಆತನಿಗೆ ಮದುವೆ ಮಾಡಿಸಲು ಪ್ರಯತ್ನಿಸುತ್ತಾನೆ. ಮದುವೆಗೆ ಒಪ್ಪದ ಬಸವರಾಜುನನ್ನು ಮದುವೆಗೆ ಒಪ್ಪಿಸುತ್ತಾನೆ.
ಅದೇ ಪ್ರದೇಶದ ಮತ್ತೊಬ್ಬ ರಾಜಕಾರಣಿ ರಾಮಪ್ಪ ಬಸವರಾಜುಗೆ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಲು ಒಪ್ಪುತ್ತಾನೆ. ಮದುವೆಯ ಬಗ್ಗೆ ಮಾತುಕತೆಯೂ ನಡೆಯುತ್ತದೆ. ರಾಮಪ್ಪ ಬಸವರಾಜುವಿಗೆ ವರದಕ್ಷಿಣೆ ರೂಪದಲ್ಲಿ ಎರಡು ಲಕ್ಷ ರೂಪಾಯಿಗಳನ್ನು ನೀಡಲು ಮುಂದಾಗುತ್ತಾನೆ. ಆದರೆ ಬಸವರಾಜು ಇದಕ್ಕೊಪ್ಪುವುದಿಲ್ಲ. ಕೊನೆಗೆ ಅನಾಥ ಬಸವರಾಜು ಮದುವೆ  ಸಮಾರಂಭದ ಅಗತ್ಯ ಪೂರೈಸುವ ಸಲುವಾಗಿ ಆ ಹಣವನ್ನು ಸ್ವೀಕರಿಸಬೇಕು ಎಂದು ರಾಮಪ್ಪ ಒತ್ತಾಯಿಸುತ್ತಾನೆ. ಬಸವರಾಜು ಇದಕ್ಕೆ ಅನಿವಾರ್ಯವಾಗಿ ಒಪ್ಪಿ ಹಣ ಸ್ವೀಕರಿಸುತ್ತಾನೆ.
ಆದರೆ ಮರುದಿನ ರಾಮಪ್ಪ ತನ್ನ ಎರಡು ಲಕ್ಷ ರೂಪಾಯಿ ಕಳ್ಳತನವಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡುತ್ತಾನೆ. ಪೊಲೀಸರು ಹುಡುಕಿದಾಗ ಬಸವರಾಜುನ ಮನೆಯಲ್ಲಿ ಎರಡು ಲಕ್ಷ ರೂಪಾಯಿ ಸಿಗುತ್ತದೆ. ಬಸವರಾಜು ಮೇಲೆ ಕಳ್ಳತನದ ಆರೋಪ ಬರುತ್ತದೆ. ಪೊಲೀಸರು ಬಸವರಾಜುನನ್ನು ಬಂಧಿಸಲು ಮುಂದಾಗುತ್ತಾರೆ. ಬಸವರಾಜು ಎಷ್ಟು ಸಮಜಾಯಿಶಿ ನೀಡಿದರೂ ಪೊಲೀಸರು ಹಾಗೂ ಜನರು ಅದನ್ನು ನಂಬುವುದಿಲ್ಲ. ಶಾಸಕನಿಗೆ ಸುದ್ದಿ ತಿಳಿದು ಬಸವರಾಜುನನ್ನು ವಿಚಾರಿಸುತ್ತಾನೆ. ಆದರೆ ಕೊನೆಗೆ ಶಾಸಕನೂ ಬಸವರಾಜುವಿನ ಮಾತನ್ನು ನಂಬದಾದಾಗ ಊರಿನ ಗ್ರಾಮಸ್ಥರು ಬಸವರಾಜುವಿನ ವಿರುದ್ಧ ತಿರುಗಿ ಬೀಳುತ್ತಾರೆ. ಆತನ ಮೇಲೆ ಹಲ್ಲೆಗೂ ಮುಂದಾಗುತ್ತಾರೆ. ಆಗ ನಡೆಯುವ ಗಲಾಟೆಯಲ್ಲಿ ರೌಡಿಗಳು ಬಸವರಾಜುನ ಹತ್ಯೆ ಮಾಡುತ್ತಾರೆ.
ಹತ್ಯೆಯ ಆರೋಪ ಊರಿನ ನಾಗರಿಕರ ಮೇಲೆ ಬರುತ್ತದೆ. ರಾಜಕಾರಣಿ ಊರಿನ ನಾಗರಿಕರ ಪರವಾಗಿ ನಿಂತು ಪೊಲೀಸರನ್ನು ವಿರೋಧಿಸುತ್ತಾನೆ. ಗ್ರಾಮಸ್ಥರ ಪರವಾಗಿ ವಾದಿಸಿ ಅವರನ್ನು ಪೊಲೀಸರು ಬಿಟ್ಟುಬಿಡುವಂತೆ ಮಾಡುತ್ತಾನೆ. ಈ ಮೂಲಕ ಜನಬೆಂಬಲ ಗಳಿಸುತ್ತಾನೆ. ಅಣೆಕಟ್ಟೆಯ ಹೋರಾಟ ನಿಧಾನವಾಗಿ ತಣ್ಣಗಾಗುತ್ತದೆ.
ಕೊನೆಯಲ್ಲಿ ತಿಳಿದುಬರುವ ಅಂಶವೆಂದರೆ ಶಾಸಕನ ಕುತಂತ್ರದಿಂದ ನಾಯಕ ಬಸವರಾಜು ಮೇಲೆ ಕಳ್ಳತನದ ಆರೋಪ ಬರುತ್ತದೆ. ಅಷ್ಟೆ ಅಲ್ಲದೆ ಜನರು ಗಲಾಟೆ ಪ್ರಾರಂಭಿಸಿದಾಗ ಶಾಸಕನ ಕಡೆಯ ಜನರೇ ಬಸವರಾಜುನ ಹತ್ಯೆಯನ್ನೂ ಮಾಡುತ್ತಾರೆ. ಆದರೆ ಮಂತ್ರಿಯ ದೆಸೆಯಿಂದ ಇದು ತಿಳಿಯುವುದೇ ಇಲ್ಲ. ಇದು ನಾಟಕದ ಕಥಾವಸ್ತು.

ಗಿಮಿಕ್...
ನಾಟಕ ಯಶಸ್ವಿಯಾಗಬೇಕೆಂದರೆ ಗಿಮಿಕ್ಗಳು ಇರಬೇಕು. ಇದು ಆಧುನಿಕ ನಾಟಕರಂಗದಲ್ಲಿ ಅತ್ಯಂತ ಅವಶ್ಯಕ. ನಾವೂ ಇದಕ್ಕೆ ತಕ್ಕಂತೆ ನಾಟಕದಲ್ಲಿ ಹಲವು ಗಿಮಿಕ್ಗಳನ್ನು ಅಳವಡಿಸಿದ್ದೆವು.
ಅಣೆಕಟ್ಟು ನಾಟಕ ಪ್ರಾರಂಭವಾಗುವುದೇ ವ್ಯಕ್ತಿಯೋಬ್ಬನ ಶವದ ಮೆರವಣಿಗೆಯಿಂದ. ಜನರಲ್ಲಿ ಕುತೂಹಲ ಹುಟ್ಟಿಸಲಿ ಎಂಬ ಉದ್ದೇಶದಿಂದ ಇದನ್ನು ನಾವು ಅಳವಡಿಸಿದ್ದೆವು. ಇದು ಬಹಳ ಯಶಸ್ವಿಯೂ ಆಯಿತು.
ಇಂದಿನ ಜಮಾನಾದಲ್ಲಿ ಹಲವು ಸಿನಿಮಾಗಳಲ್ಲಿ ನಿರೂಪಕನ ಪಾತ್ರ ಬರುತ್ತದೆ. ಯಾರೋ ಒಬ್ಬಾತ ಕಥೆಯನ್ನು ಕೇಳುತ್ತಾ ಹೋಗುತ್ತಾನೆ. ನಾವೂ ಈ ನಿರೂಪಣೆಯ ತಂತ್ರವನ್ನು ಬಳಸಿದ್ದೆವು. ಆದರೆ ನಮ್ಮ ನಾಟಕದಲ್ಲಿ ನಿರೂಪಕ ತೆರೆಯ ಮೇಲೆ ಬರದೆ ತೆರೆಯ ಹಿಂದಿನಿಂದಲೇ ಕಥೆಯನ್ನು ಹೇಳುವಂತೆ ಮಾಡಿದ್ದೆವು. ಈ ಕಥೆಯನ್ನು ಹಾಡಿನ ಮೂಲಕ ಹೇಳಿದೆವು. ಈ ತಂತ್ರವೂ ಸಾಕಷ್ಟು ಯಶಸ್ವಿಯಾಯಿತು.
ನಾಟಕದ ಕೊನೆಯ ಭಾಗದಲ್ಲಿ ಇನ್ನೊಂದು ತಂತ್ರವನ್ನು ಬಳಸಿದೆವು. ಹಾಡೊಂದನ್ನು ಬಳಕೆ ಮಾಡಿಕೊಂಡು ಆ ಹಾಡಿನಲ್ಲಿ ಪ್ರಸ್ತುತ ರಾಜಕಾರಣಿಗಳ, ಖಾಕಿಯ ಇತರ ಸಮಾಜದ ವಿವಿಧ ವ್ಯಕ್ತಿಗಳು ಜನಸಾಮಾನ್ಯರನ್ನು ಶೋಷಿಸುವ ರೀತಿಯನ್ನು ಅಭಿನಯಿಸಿದೆವು. ಸಮಾಜದಲ್ಲಿ ದುಡ್ಡು ಯಾವ ರೀತಿ ಜನರನ್ನು ಬದಲಾಯಿಸುತ್ತದೆ ಎಂಬುದನ್ನು ಅಭಿನಯಿಸಿದೆವು. ಈ ತಂತ್ರವೂ ಯಶಸ್ವಿಯಾಯಿತು.
ಈ ನಾಟಕದಲ್ಲಿ ನಾಯಕ ಸಾಯುತ್ತಾನೆ. ಖಳನಾಯಕ ವಿಜ್ರಂಭಿಸುತ್ತಾನೆ. ಪ್ರಸ್ತುತ ಜಗತ್ತಿನ ಕುತಂತ್ರಿ ರಾಜಕಾರಣಿಗಳನ್ನು ನಾಟಕ ತೋರಿಸುತ್ತದೆ. ಈ ರಾಜಕಾರಣಿಗಳು ಜನರ ನಡುವೆಯೆ ಇದ್ದು, ಪರಿಸ್ಥಿತಿಯನ್ನು ಹೇಗೆ ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಾರೆ ಎಂಬುದನ್ನು ಈ ನಾಟಕ ವಿವರಿಸಿದ್ದರಿಂದ ಬಹಳ ಪ್ರಸಿದ್ಧಿಯನ್ನು ಪಡೆಯಿತು.
ಈ ಗಿಮಿಕ್ಗೆ ಅಗತ್ಯವಿದ್ದ ಅಮೋಘ ಅಭಿನಯವನ್ನು ರಾಘವ್, ಗಣೇಶ್, ನಾಗರಾಜ್ ಹಾಗೂ ಇತರರು ನೀಡಿದ್ದರಿಂದ ನಾಟಕ ಸುಂದರವಾಗಿ ಮೂಡಿ ಬಂದಿತು.
`ಅಣೆಕಟ್ಟು' ಇದೊಂದು ಏಕಾಂಕ ನಾಟಕ. ಈ ನಾಟಕಕ್ಕೆ ನಾಗರಾಜ್ ವಿಶೇಷವಾದ ಬಿದಿರಿನ ಮನೆಯೊಂದನ್ನು ತಯಾರಿಸಿದ್ದ. ಸುಪ್ರಿತಾ ಶಿರೂರ್ ಅವರ ಕೈಚಳಕದಲ್ಲಿ ರಂಗದ ಮೇಲಿನ ವಸ್ತುಗಳಿಗೆ ಜೀವಕಳೆ ಬಂದಿತ್ತು. ಅವರ ಕೈಚಳಕದಲ್ಲಿ ತಯಾರಾಗಿದ್ದ ಮರದ ಕಲಾಕೃತಿಗಳು ಪ್ರೇಕ್ಷಕರನ್ನು ವಿಶೇಷವಾಗಿ ಸೆಳೆದವು.

ಹಾಡು-ಸಂಗೀತ
ನಾಟಕಕ್ಕೆ ನಾಗರಾಜ್ ಜೋಗಿ ಸುಂದರ ಸಂಗೀತವನ್ನು ನೀಡಿದ್ದರು. ನಾಟಕದಲ್ಲಿ ಮೂರು ಹಾಡುಗಳನ್ನು ಬಳಸಲಾಗಿತ್ತು. ಹಸಿರು ಗ್ರಾಮವೊಂದರ ಎಲ್ಲ ಗುಣಗಳನ್ನು ಸಾರುವ ನಾಲ್ಕು ಸಾಲಿನ ಚಿಕ್ಕ ಪದ್ಯ, ಅಣೆಕಟ್ಟಿನ ಬಗ್ಗೆ ಜನರು ತಮ್ಮ ತಮ್ಮಲ್ಲಿಯೇ ಹಾಡಿಕೊಳ್ಳುವ ಚಿಕ್ಕ ಹಾಡನ್ನು ಮೊದಲು ಬಳಸಿದ್ದೆವು. ನಾಟಕದ ಕೊನೆಯಲ್ಲಿ ಸಮಾಜದ ವಿವಿಧ ಕ್ರೂರತೆಯನ್ನು ಸಾರುವ ರೂಪಕ ಅಂಶಗಳನ್ನು ಹೊಂದಿರುವ `ಸಾವು...' ಎಂಬ ಹಾಡನ್ನೂ ಬಳಸಿಕೊಂಡಿದ್ದೆವು.
ಸಾವು, ಸಾವು.. ಭೃಷ್ಟಾಚಾರಕ್ಕೆ ಬಂದಂತ ಗೆಲುವು
ಆಸೆಯ ಕನಸಿನ ಸಾವು...
ಎಂಬ ಸಾಲನ್ನು ಹೊಂದಿದ್ದ ಈ ಹಾಡು ಅತ್ಯಂತ ಪರಿಣಾಮಕಾರಿಯಾಯಿತು ಅಲ್ಲದೆ ಜನಮನ ಸೂರೆಗೊಂಡಿತು.

ಪ್ರಶಸ್ತಿ
ಈ ನಾಟಕಕ್ಕೆ ಜಿಲ್ಲಾಮಟ್ಟದಲ್ಲಿ ಮೊದಲ ಪ್ರಶಸ್ತಿ ದೊರಕಿತು. ಅಲ್ಲದೆ ಕನರ್ಾಟಕ ವಿಶ್ವವಿದ್ಯಾಲಯದಲ್ಲಿ ನಡೆದ ಯುವಜನ ಮೇಳದಲ್ಲಿ ಮೂರನೆ ಸ್ಥಾನ ಗಳಿಸಿತು. ನಾಯಕನ ಸಾವು, ಖಳನಾಯಕನ ಜಯವನ್ನು ಬಿಂಬಿಸಿದ ಅಣೆಕಟ್ಟು ನಾಟಕ ಜನಮನ ಸೂರೆಗೊಂಡಿತು.

ವಿನಯ್ ದಂಟಕಲ್

No comments:

Post a Comment