Thursday, August 19, 2010
ಇವರಿಗೆ ವಯಸ್ಸೇ ಆಗೋಲ್ವಾ?
ಭಾರತದ ವಿವಿಎಸ್ ಲಕ್ಷ್ಮಣ್, ಸಚಿನ್ ತೆಂಡೂಲ್ಕರ್, ಶ್ರೀಲಂಕಾದ ಸನತ್ ಜಯಸೂರ್ಯ, ವೆಸ್ಟ್ ಇಂದಿಸ ನ ಶಿವನಾರಾಯಣ್ ಚಂದ್ರಪಾಲ್, ದಕ್ಷಿಣ ಆಫ್ರಿಕಾದ ಜಾಕ್ ಕಾಲಿಸ್ ಈ ಮುಂತಾದ ಕ್ರಿಕೆಟ್ ಆಟಗಾರರ ಉತ್ಸಾಹವನ್ನು, ಆಟದ ವೈಖರಿಯನ್ನು ಗಮನಿಸಿದರೆ ಇವರಿಗೆ ವಯಸ್ಸೇ ಆಗುವುದಿಲ್ಲವೇ ಎಂಬ ಪ್ರಶ್ನೆ ಹಲವರ ಮನಸ್ಸಿನಲ್ಲಿ ಮೂಡುತ್ತದೆ.
ಈ ಎಲ್ಲ ಆಟಗಾರರಿಗೆ 35ರ ಆಜುಬಾಜು ವಯಸ್ಸು. ಆದರೆ ಇವರ ಕಲಾತ್ಮಕ ಆಟಗಳು ಮಾತ್ರ ಯುವ ಹೊಡೆಬಡಿ ಆಟಗಾರರನ್ನು ಮೀರಿಸುವಂತಿದೆ. ಯುವ ಆಟಗಾರರು ಕ್ರೀಸಿನಲ್ಲಿ ನೆಲೆನಿಂತು ಬಾಲನ್ನು ಎದುರಿಸಲು ಪರದಾಡುವ ಸಮಯದಲ್ಲಿಯೇ ಇವರು ಆಟದ ಮರ್ಮ ಅರಿತು ಸಮಯಕ್ಕೆ ತಕ್ಕಂತೆ ಆಟವಾಡುತ್ತಾರೆ.
ಈ ಆಟಗಾರರದ್ದು ಎಲ್ಲ ರೀತಿಯ ಕ್ರೀಡೆಗೆ ಹೇಳಿಮಾಡಿಸಿದಂತಹ ಆಟ. ಅದು ಟೆಸ್ಟ್ ಇರಲಿ. ಒಂದು ದಿನದ ಪಂದ್ಯಗಳೇ ಇರಲಿ ಅಥವಾ ಇಂದಿನ ಜಮಾನಾದ ಟಿ20 ಪಂದ್ಯಗಳೇ ಇರಲಿ ಅಗತ್ಯಕ್ಕೆ ತಕ್ಕ ಆಟ ಇವರಿಂದ ಸಾಧ್ಯ. ಯುವ ಆಟಗಾರರು ಪ್ರತಿ ಪಂದ್ಯಗಳಲ್ಲಿ ಒಂದೇ ರೀತಿಯ ಆಟವನ್ನು ಪ್ರದರ್ಶಿಸಲು ವಿಫಲರಾಗುತ್ತಾರೆ. ಆದರೆ ಇವರು ಹಾಗಲ್ಲ. ಯಾವಾಗಲೂ ಉತ್ತಮ ಕ್ರಿಕೆಟ್ ಇವರಿಂದ ಸಾಧ್ಯ. ಈ ಆಟಗಾರರು ಆಡುವ ಕ್ರಿಕೆಟ್ ಸಹ ಅಷ್ಟೇ ಕಾವ್ಯಾತ್ಮಕ. ಪುಟ್ ವರ್ಕ್ ಗಳು, ಕವರ್ ಡ್ರೈವಳು, ಬ್ಯಾಕಪುಟ್ ಆಟಗಳು, ಹುಕ್ ಶಾಟ್ಗಳು ಪ್ರತಿಯೊಂದೂ ಬಹಳ ಸುಂದರ.
ಈ ಆಟಗಾರರ ಆಟದ ವೈಖರಿಯೆ ಬದಲಾದುದು. ಇವರು ಮೇಲ್ನೋಟಕ್ಕೆ ನಿಧಾನವಾದ ಆಟವನ್ನು ಆಡಿದರೂ ಉತ್ತಮ ಸರಾಸರಿಯನ್ನೇ ಹೊಂಡಿರುತ್ತಾರೆ. ಇವರ ಇನ್ನೊಂದು ಮುಖ್ಯ ಲಕ್ಷಣಗಳೆಂದರೆ ಇವರು ಸಿಕ್ಸರ್ ಬಾರಿಸಲು ಹೆಚ್ಚು ಮುಂದಾಗುವುದಿಲ್ಲ. ಆದರೆ ಬೌಂಡರಿಗಳನ್ನು ಒಂದರ ಹಿಂದೆ ಒಂದರಂತೆ ಬಾರಿಸುತ್ತಾರೆ. ಬೌಲರ್ಗಳ ಸಹನೆಯನ್ನು ಪರೀಕ್ಷಿಸಿ ಬೆವರಿಳಿಸುತ್ತಾರೆ.
ಇವರು ಪಂದ್ಯಗಳಲ್ಲಿ ಪಕ್ಕಾ ಆಪತ್ಭಾಂದವರು. ಸೋಲಿನ ಸುಳಿಯಲ್ಲಿ ತಂಡವಿದ್ದರೆ ಅದನ್ನು ಬದಲಾಯಿಸುವ ಛಾತಿಯನ್ನು ಹೊಂದಿರುವವರು. ಇವರ ಕಲಾತ್ಮಕ ಆಟಗಳು ನೋಡುಗರ ಕಣ್ಮನ ಸೆಳೆಯುತ್ತವೆ. ಗಾಯಗಳಾದರೂ ಇವರು ಅದಕ್ಕೆ ಜಗ್ಗವುದಿಲ್ಲ. ಗಾಯಕ್ಕಿಂತ ತಂಡ, ದೇಶ, ಗೆಲುವು ಮುಖ್ಯ ಎಂಬುದು ಇವರ ಗುಣ.
ಹಿರಿಯರ ಆಟಕ್ಕೆ ಅವರೆ ಸಾಕ್ಷಿ. ಯುವಕರ ಪಡೆ ಸಾಲು ಸಾಲು ಸೋಲನ್ನು ಅನುಭವಿಸುತ್ತಿರುವುದರಿಂದಲೆ ಪಾಕ್ ತಂಡ ನಿವೃತ್ತಿ ಹೊಂದಿದ್ದ ಮೊಹಮ್ಮದ್ ಯುಸುಫ್ರನ್ನು ಮತ್ತೆ ತಂಡಕ್ಕೆ ಆಯ್ಕೆ ಮಾಡಿದ್ದು. ಅನುಭವ, ಉತ್ತಮ ಆಟವೇ ಇವರ ಆಸ್ತಿ. ಯುವ ಆಟಗಾರರು ನೂರು ರನ್ನುಗಳನ್ನು ಹೊಡೆಯಲು ಇವರು ಕಷ್ಟಪಟ್ಟರೆ, ಹಿರಿಯ ಆಟಗಾರರಿಗೆ ಅದು ಸಲೀಸು. ಶತಕ, ದ್ವಿಶತಕ ಇವರಿಗೆ ಸುಲಭ. ಯುವಕರು ಫಿಟ್ನೆಸ್ ಇಲ್ಲದೆ ಬಳಲಿ, ಸೋತು, ರನ್ನರ್ ಸಹಾಯದಿಂದ ಹಾಗೂ ಹೀಗೂ ರನ್ ಹೊಡೆದರೆ, ಇವರು ಯುವಕರನ್ನೇ ನಾಚಿಸುವಂತೆ ಆಡುತ್ತಾರೆ. ಎರಡು ಮೂರು ರನ್ನುಗಳನ್ನು ಸುಲಭವಾಗಿ ತೆಗೆಯುತ್ತಾರೆ.
ವೆಸ್ಟ್ ಇಂಡೀಸ್ನ ತಂಡವನ್ನೇ ತೆಗೆದುಕೊಳ್ಳಿ, ಆ ತಂಡದಲ್ಲಿ ಎಷ್ಟೇ ಹೊಸ, ಹೊಡೆ ಬಡಿ ಆಟಗಾರರು ಬಂದರೂ ತಂಡದ ಪಾಲಿಗೆ ಆಪದ್ಭಾಂದವನಂತೆ ಇರುವುದು ಚಂದ್ರಪಾಲ್ ಮಾತ್ರ. ಅದೇ ರೀತಿ ದಕ್ಷಿಣ ಆಫ್ರಿಕಾ ತಂಡದ ಜೀವಾಳ ಜಾಕ್ ಕಾಲಿಸ್ ಎಂದರೂ ತಪ್ಪಿಲ್ಲ. ಅದೆ ಆಸ್ಟ್ರೇಲಿಯಾ ತಂಡವನ್ನು ಗಮನಿಸಿ ಅಲ್ಲಿ ಸ್ಟೀವ್ ವಾ, ಹೇಡನ್ ಅಂತಹ ಆಟಗಾರರು ಇದ್ದಾಗ ಸಾಲು ಸಾಲು ಗೆಲುವನ್ನು ಅದು ಕಂಡಿದ್ದು ಇತಿಹಾಸ. ಆದರೆ ಅಂತಹ ಆಟಗಾರರು ಇಗ ಇಲ್ಲವೇ ಇಲ್ಲ. ಪರಿಣಾಮ ಅದಕ್ಕೆ ಸೋಲಿನ ರುಚಿ ಗೊತ್ತಾಗತೊಡಗಿದೆ.
ಶ್ರೀಲಂಕಾದ ಅರವಿಂದ್ ಡಿಸಿಲ್ವಾ ಅಂತೂ ತನ್ನ 40ನೇ ವರ್ಷದ ವರೆಗೆ ಕ್ರಿಕೆಟ್ ಆಡಿದ್ದ. ಈಗ ಸನತ್ ಜಯಸೂರ್ಯ ಸಹ ಹಾಗೆಯೇ ಆಡುತ್ತಿದ್ದಾನೆ. ಅಷ್ಟು ವಯಸ್ಸಾಗಿದ್ದರೂ ಅವರ ಆಟಕ್ಕೆ ಯಾವುದೆ ಕುಂದು ಉಂಟಾಗಿಲ್ಲ. ಮೊದಲಿಗಿಂತ ಉತ್ತಮವಾಗಿಯೆ ಆಡುತ್ತಿದ್ದಾರೆ. ಹುಣಸೆ ಮರ ಮುಪ್ಪಾದರೂ ಹುಳಿ ಮುಪ್ಪಲ್ಲ ಎನ್ನುವುದು ಇದಕ್ಕೇ ಇರಬೇಕು.
ತಂಡದ ಪಾಲಿನ ಆಪದ್ಭಾಂಧವ ಆಟಗಾರರಾದ ಇವರಿಗೆ ಹ್ಯಾಟ್ಸಾಪ್...
Subscribe to:
Post Comments (Atom)
No comments:
Post a Comment