ಅಲ್ಲಲ್ಲಿ ಮೂತ್ರದ ವಾಸನೆ, ಎಲ್ಲೆಂದರಲ್ಲಿ ಬಿದ್ದುಕೊಂಡಿರುವ ಭಿಕ್ಷುಕರು, ಸುಕ್ಕು ಗಟ್ಟಿದ ಮುಖ. ಹರಡಿಕೊಂಡ ತಲೆಕೂದಲು, ಆ ಕೂದಲುಗಳಿಗೆ ಎಣ್ಣೆಯಿಲ್ಲ, ದೇಹಕ್ಕೆ ಸ್ನಾನವಿಲ್ಲ. ಎತ್ತ ನೋಡಿದರತ್ತ ಕೊಳಕು, ಅಸಹ್ಯ ವಾತಾವರಣ, ಕೆಲವರು ಕಾಯಿಲೆಯಿಂದ ನರಳುತ್ತಿರುವವರು. ಇಂತಹವರನ್ನು ಸರಿಯಾಗಿ ನೋಡುವವರಿಲ್ಲ. ಸ್ನಾನ ಮಾಡಿಸುವವರಿಲ್ಲ. ದನದ ಕೊಟ್ಟಿಗೆಯಂತೆ ಕಾಣುವ ಕೊಠಡಿಗಳು. ಇದು ಬೆಂಗಳೂರು ಮಹಾನಗರಿಯ ನಿರಾಶ್ರಿತರ ಕೇಂದ್ರದಲ್ಲಿ ಕಂಡುಬಂದ ಸ್ಥಿತಿ-ಗತಿ. ಇದೇ ಸುಮನಹಳ್ಳಿಯಲ್ಲಿರುವ ನಿರಾಶ್ರಿತರ ಕೇಂದ್ರದ ಪರಿಸ್ಥಿತಿ.
ಬೀದಿ ಬದಿಯಲ್ಲಿ ಭಿಕ್ಷೆ ಬೇಡುವ ಭಿಕ್ಷುಕರಿಗೆ ಪುನರ್ವಸತಿ ನೀಡಬೇಕೆಂದು ಸ್ಥಾಪಿಸಲಾಗಿರುವ ಈ ಕೇಂದ್ರದಲ್ಲಿನ ಸರಣಿ ಸಾವು ಮತ್ತು ಅದರ ದುಸ್ಥಿತಿಯಿಂದಾಗಿ ಈಗ ಸುದ್ದಿ ಮಾಡಿದೆ.
ಈ ಭಿಕ್ಷುಕರ ಪುನರ್ವಸತಿ ಕೇಂದ್ರದ ಒಳಗೆ ಕಾಲಿಟ್ಟರೆ ಸಾಕು ಅಸಹ್ಯಕರ ವಾತಾವರಣ. ಆರೋಗ್ಯವಂತರು, ಅನಾರೋಗ್ಯಕ್ಕೊಳಗಾದವರು, ಬಡಕಲು ಶರೀರದವರು ಹೀಗೆ ವಿವಿಧ ರೀತಿಯ ನಿರಾಶ್ರಿತರು, ಭಿಕ್ಷುಕರ ಕಣ್ಣುಗಳಲ್ಲಿನ ಯಾಚನೆ, ಅಸಹಾಯಕ ನೋಟ ಎಂತಹವರಲ್ಲಾದರೂ ಮರುಕ ಹುಟ್ಟಿಸುತ್ತದೆ.
ಎಲ್ಲೋ ಭಿಕ್ಷೆ ಬೇಡುತ್ತಿದ್ದ ಭಿಕ್ಷುಕರನ್ನು ಹಿಡಿದು ತಂದು ಈ ನಿರಾಶ್ರಿತರ ಶಿಬಿರದಲ್ಲಿಡಲಾಗಿದೆ. ಈ ಭಿಕ್ಷುಕರ ದುಸ್ಥಿತಿ ಹೇಳತೀರದು. ಸರಿಯಾದ ಆಹಾರವಿಲ್ಲದೆ, ದಿನನಿತ್ಯ ಸ್ನಾನವಿಲ್ಲ, ರೋಗಬಂದರೆ ಸೂಕ್ತ ಚಿಕಿತ್ಸೆಯಿಲ್ಲ, ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ ಈ ಭಿಕ್ಷುಕರದ್ದು ನಾಯಿಪಾಡು ಎಂದರೂ ತಪ್ಪಾಗಲಾರದು.
ಈ ಜನರ ಪಾಲಿಗೆ ಯಾವುದಾದರೂ ಸರ್ಕಾರಿ ಕಾರ್ಯಕ್ರಮಗಳು ಬಂತೆಂದರೆ ಹಬ್ಬ. ಸ್ವಾತಂತ್ರ್ಯ ದಿನಾಚರಣೆ, ಗಾಂಧಿ ಜಯಂತಿ ಮುಂತಾದ ಸಕರ್ಾರಿ ಕಾರ್ಯಕ್ರಮಗಳಂದು ಇವರಿಗೆ ಸಿಹಿ ತಿಂಡಿ ಹಾಗೂ ವಿಶೇಷ ಊಟಗಳು ಲಭ್ಯ. ಇಲ್ಲದಿದ್ದರೆ ಹಳಸಲನ್ನವೇ ಗತಿ.
ಈ ಪುನರ್ವಸತಿ ಕೇಂದ್ರದಲ್ಲಿ ಅಲ್ಲಲ್ಲಿ ಅಡ್ಡಾಡುತ್ತಿರುವ ಭಿಕ್ಷುಕರು ಒಂದೆಡೆಯಾದರೆ, ಲೋಕದ ಪರಿವೆಯೆ ಇಲ್ಲದಂತೆಮಲಗಿಕೊಂಡಿರುವವರು ಮತ್ತೊಂದೆಡೆ. ಇನ್ನು ಈ ಕೇಂದ್ರದಲ್ಲಿರುವ ಹಲವು ಭಿಕ್ಷುಕರು ಬುದ್ದಿಮಾಂದ್ಯರು. ಇವರನ್ನು ಇಲ್ಲಿ ಯಾರೂ ಕೇಳುವವರೇ ಇಲ್ಲ.
ಇವರನ್ನು ನೋಡಿಕೊಳ್ಳುತ್ತಿರುವ ಸಿಬ್ಬಂದಿಗಳು ತಮಗೆ ಬೇಕಾದ ಎಲ್ಲ ಕೆಲಸಗಳನ್ನು ಈ ಭಿಕ್ಷುಕರ ಕೈಯಲ್ಲಿ ಮಾಡಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಗಾಯಾಳುಗಳಿಗೆ ಸೂಕ್ತ ಔಷಧ ನೀಡದ ಪರಿಣಾಮ ಗಾಯದಿಂದ ಕೀವು ಸೋರುತ್ತಿದ್ದ ದೃಶ್ಯವೂ ಕಾಣಬಹುದಾಗಿತ್ತು.
ಈ ವಸತಿಗೃಹವೂ ಅಷ್ಟೇ. ಅದರ ಒಳಗೆ ಕಾಲಿಟ್ಟರೆ ಸಾಕು ಗಬ್ಬು ವಾಸನೆ. ರೋಗಗಳಿಂದ ಹಾಸಿಗೆ ಹಿಡಿದ ಭಿಕ್ಷುಕರು ಅಲ್ಲೆ ಮಲ, ಮೂತ್ರ ವಿಸರ್ಜನೆ ಮಾಡಿಕೊಂಡಿದ್ದರಿಂದ ಒಳಗಡೆ ಗಬ್ಬು ವಾಸನೆ. ಇಂತಹ ವಾತಾವರಣದಲ್ಲೇ ಅವರು ಮಲಗಿ ನಿದ್ರಿಸಬೇಕಾಗುತ್ತದೆ. ಇವರು ಊಟ ಮಾಡುವ ಕೋಣೆಯ ಪರಿಸ್ಥಿತಿಯೂ ಭಿನ್ನವಾಗೇನೂ ಇಲ್ಲ. ಶುಚಿತ್ವ ಇಲ್ಲದ ಈ ಕೋಣೆಯಲ್ಲಿಯೇ ಊಟ ನೀಡಲಾಗುತ್ತಿದೆ.
ಭಿಕ್ಷುಕರಲ್ಲಿ ಹಲವರು ಸಾಂಕ್ರಾಮಿಕ ರೋಗಗಳಿಂದ ನರಳುತ್ತಿದ್ದಾರೆ. ಆದರೆ ಇವರನ್ನು ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡುವ ಕೆಲಸ ನಡೆದಿಲ್ಲ. ಇವರನ್ನೂ ಆರೋಗ್ಯವಂತ ವ್ಯಕ್ತಿಗಳ ಜೊತೆ ಇರಿಸಲಾಗುತ್ತಿದೆ. ಇದರಿಂದ ಆರೋಗ್ಯವಂತರೂ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಜೊತೆಗೆ ಬುದ್ಧಿಮಾಂದ್ಯರ ಜೊತೆಗೆ ಆರೋಗ್ಯವಂತ ಭಿಕ್ಷುಕರನ್ನು ಇಡಲಾಗುತ್ತಿದೆ. ಇದು ಆರೋಗ್ಯವಂತ ಭಿಕ್ಷುಕರ ಮೇಲೆ ತೀವ್ರವಾದ ಪರಿಣಾಮ ಉಂಟು ಮಾಡುತ್ತಿದೆ.
ಈ ನರಕದ ಸಹವಾಸ ಸಾಕು ಎಂದೇ ಹಲವು ಭಿಕ್ಷುಕರು ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ ಎಂಬ ಮಾತು ಕೇಳಿಬಂದಿದೆ. ಕೆಲವರು ತಪ್ಪಿಸಿಕೊಳ್ಳಲು ಪ್ರಯತ್ನಿಸಿ ವಿಫಲರಾಗಿದ್ದಾರೆ.
ಈ ಕೇಂದ್ರದಲ್ಲಿ ಈಗಾಗಲೆ 286 ಜನರು ಸಾವನ್ನಪ್ಪಿದ್ದಾರೆ. ಇವರ ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ಒಟ್ಟಿನಲ್ಲಿ ಬೆಂಕಿಯಿಂದ ಬಾಣಲೆಗೆ ಹಾಕಿದಂತಾಗಿದೆ ಈ ಭಿಕ್ಷುಕರ ಸ್ಥಿತಿ. ಕಳೆದ ಶನಿವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯರೂಪ್ಪ ಅವರು ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಸ್ಥಿತಿಯನ್ನು ಅರಿತಿದ್ದು, ಈ ನಿರಾಶ್ರಿತರ ಕೇಂದ್ರವನ್ನು ಮಾದರಿ ಕೇಂದ್ರವನ್ನಾಗಿ ಮಾಡುವ ಆಶ್ವಾಸನೆ ನೀಡಿದ್ದಾರೆ. ಇದು ಕಾರ್ಯರೂಪಕ್ಕೆ ಆದಷ್ಟು ಬೇಗ ಬಂದು, ನಿರಾಶ್ರಿತರಿಗೆ `ಆಸರೆ' ನೀಡುತ್ತಿರುವ ಕೇಂದ್ರವು ಅಲ್ಲಿರುವವರಿಗೆ ಸಖ್ಯವಾಗುವಂತಾದರೆ ಸ್ಥಾಪನೆಯ ಉದ್ದೇಶವೂ ಸಾರ್ಥಕವಾಗುತ್ತದೆ.
No comments:
Post a Comment