Thursday, May 28, 2015

ಮಾಸ್ತರ್ ಮಂದಿ-2

ಗಂಗಾ ನಾಯ್ಕ :
           ನಾನು ಒಂದು ಹಾಗೂ ಎರಡನೇ ಕ್ಲಾಸ್ ಓದುತ್ತಿದ್ದ ಸಂದರ್ಭದಲ್ಲಿಯೇ ನಮ್ಮ ಶಾಲೆಗೆ ಶಿಕ್ಷಕಿಯಾಗಿ ಬಂದವರು ಗಂಗಾ ನಾಯ್ಕ ಅವರು. ಗಂಗಾ ನಾಯ್ಕ ಅವರು ನಮ್ಮ ಶಾಲೆಗೆ ಬರುವ ವೇಳೆಗೆ ಕುಳ್ಳೀಶ್ವರ ನಾಯ್ಕ ಅವರು ಶಾಲೆಯಿಂದ ವರ್ಗಾವಣೆಯಾಗಿ ಹೋಗಿದ್ದರೆಂದೇ ಹೇಳಬಹುದು. ಒಂದು ಅಥವಾ ಎರಡು ವರ್ಷ ಇವರು ನಮ್ಮ ಶಾಲೆಯಲ್ಲಿದ್ದರು. ನಾನು 2ನೇ ಕ್ಲಾಸಿನಲ್ಲಿದ್ದಾಗ ನನಗೆ ಕಲಿಸಿದ ನೆನಪು. 
                  ಇವರು ಶಿಕ್ಷಕರಾಗಿದ್ದ ಸಂದರ್ಭದಲ್ಲಿ ಒಂದು ಘಟನೆ ಇನ್ನೂ ನೆನಪಿದೆ. ಆಗ ನಮ್ಮೂರಿನಲ್ಲಿ ಆಲೆಮನೆಯ ಸಂಭ್ರಮ. ನಮ್ಮ ಮನೆಯದ್ದೇ ಆಲೆಮನೆ ನಡೆಯುತ್ತಿತ್ತು ಎನ್ನಬಹುದು. ನಮ್ಮೂರಿನಿಂದ ಐದಾರು ಜನರು ಶಾಲೆಗೆ ಬರುತ್ತಿದ್ದೆವು. ನಮಗೆಲ್ಲರಿಗೂ ಆಲೆಮನೆಗೆ ಹೋಗುವ ಆಸೆ. ಆದರೆ ಆಲೆಮನೆಗೆ ಹೋಗಬೇಕು ಎಂದು ಹೇಳಿದರೆ ಶಾಲೆಗೆ ರಜಾ ಕೊಡುತ್ತಿರಲಿಲ್ಲ. ಈ ಕಾರಣದಿಂದಲೇ ನಾವೆಲ್ಲ ಸೇರಿ ಐಡಿಯಾ ಮಾಡಿದ್ದೆವು. ನಮ್ಮೂರಿನ ಎಲ್ಲರೂ ಒಂದಲ್ಲ ಒಂದು ನೆಪ ಹೂಡಿ ರಜಾ ಕೇಳಲು ಹೊರಟೆವು. ಇದ್ದವರಲ್ಲಿಯೇ ನಾನು ಚಿಕ್ಕವನು. ನಾನೇ ಮೊದಲು ರಜಾ ಕೇಳಲು ಹೋದೆ. ನಮ್ಮ ಮನೆಯಲ್ಲಿ ಅದೇನೋ ಪೂಜೆ ಇದೆ. ಹಾಗಾಗಿ ಶಾಲೆಯಿಂದ ಸ್ವಲ್ಪ ಬೇಗನೆ ಕಳಿಸಿಕೊಡಿ ಎಂದು ಗಂಗಕ್ಕೋರ ಹತ್ತಿರ ಕೇಳಿಕೊಂಡೆ. ನಾನು ಪುಟ್ಟ ಪುಟ್ಟಗೆ, ಕುಳ್ಳಗಿದ್ದೆನಲ್ಲ. ಅದೇನೆನ್ನಿಸಿತೋ ಏನೋ. ಕಳಿಸಿಕೊಡಲು ಒಪ್ಪಿದರು. ನಾನು ಖುಷಿಯಿಂದ ಹೋಗಲು ತಯಾರಾದೆ. ಆದರೆ ದುರದೃಷ್ಟಕ್ಕೆ ನಮ್ಮೂರಿನ ಉಳಿದ ಯಾರಿಗೂ ರಜಾವನ್ನೇ ಕೊಡಲಿಲ್ಲ. ಅವರ್ಯಾರೂ ಬರಲಿಲ್ಲ-ನಾನೊಬ್ಬನೇ ಯಾಕೆ ಮನೆಗೆ ಹೋಗುವುದು ಎಂದುಕೊಂಡೆ. ಜೊತೆಗೆ ನಮ್ಮೂರಿಗೆ ಹೋಗುವ ದಾರಿ ಕಾಡಿನ ದಾರಿ. ನನಗೆ ಆಗ ಸಿಕ್ಕಾಪಟ್ಟೆ ಹೆದರಿಕೆ ಬೇರೆ. ಹಾಗಾಗಿ ಹೋಗದೇ ಉಳಿದಕೊಂಡು ಬಿಟ್ಟೆ.
               ನಾನು ಮನೆಗೆ ಹೋಗದೇ ಶಾಲೆಯಲ್ಲಿ ಉಳಿದುಕೊಂಡಿದ್ದು ಹಾಗೂ ಮನೆಗೆ ಹೋಗಲು ಸುಳ್ಳು ಹೇಳಿದ ವಿಚಾರ ಅದ್ಹೇಗೆ ಗೊತ್ತಾಯಿತೇನೋ. ಅಥವಾ ನನ್ನ ಹಾಗೆ ಮನೆಗೆ ಬರಲು ರಜಾ ಸಿಗದ ನಮ್ಮೂರಿನ ಹುಡುಗರೇ ಹೇಳಿಬಿಟ್ಟಿದ್ದರೇನೋ ಗೊತ್ತಿಲ್ಲ. ಕ್ಲಾಸ್ ರೂಮಿಗೆ ಬಂದವರೇ `ವಿನಯ ಮನೆಗೆ ಹೋದನಾ?' ಎಂದು ಕೇಳಿದರು. ನಾನು ಹೋಗದೇ ಇರುವ ವಿಚಾರವನ್ನು ಉಳಿದ ಹುಡುಗರು ಹೇಳಿದರು. ಆಗ ಕೊಟ್ಟರು ನೋಡಿ ಏಟನ್ನಾ.. ಯಪ್ಪಾ ಯಪ್ಪಾ.. ದಡಾ ಬಡಾ ಹೊಡೆದರು. `ಸುಳ್ ಹೇಳ್ತಿಯೇನೋ.. ಇನ್ನೊಂದ್ ಸಾರಿ ಹಿಂಗೆ ಮಾಡು. ನಿನ್ ಚರ್ಮ ಸುಲಿದು ಬಿಡ್ತೇನೆ..' ಎಂದು ಬೈದರು. ನಾನು ಅತ್ತು ಅತ್ತು ಬಾಡಿದ್ದು ಇನ್ನೂ ನೆನಪಿನಲ್ಲಿದೆ. ಗಂಗಕ್ಕೋರು ಎಂದರೆ ನನಗೆ ನೆನಪಿದ್ದಿದ್ದು ಇಷ್ಟೇ ನೋಡಿ.
             ಇನ್ನೊಬ್ಬರು ಅಕ್ಕೋರಿದ್ದರು. ಅವರ ಹೆಸರು ಬಹುಶಃ ಸುಮಿತ್ರಕ್ಕೋರು ಇರಬೇಕು. ಕೊಂಕಣಿಗರು. ಮೂರು ತಿಂಗಳೋ ನಾಲ್ಕು ತಿಂಗಳೋ ಕಳಿಸಲು ಬಂದಿದ್ದರು. ಅವರ ಬಗ್ಗೆ ಹೆಚ್ಚಿಗೆ ಏನೂ ವಿಶೇಷವಿಲ್ಲ. ಕಲಿಸಲು ಬಂದವರಿಗೆ ಮದುವೆಯಾಯಿತು. ನಮ್ಮೂರಿನ ಬಳಿಯೇ ಈಗಲೂ ಇದ್ದಾರೆ ಅವರು. ಇಂವ ನನ್ನ ಸ್ಟೂಡೆಂಟ್ ಆಗಿದ್ದ ಎಂದು ಈಗಲೂ ನೆನಪು ಮಾಡಿಕೊಳ್ಳುತ್ತಾರೆ. ಆದರೆ ಅವರ ಬಳಿ ಹೆಸರು ಕೇಳಲು ಮುಜುಗರವಾಗಿ ಸುಮ್ಮನೇ ಇದ್ದೇನೆ.

ಜಿ. ಎಸ್. ಭಟ್ಟ್:
             ಗಣೇಶ ಭಟ್ಟರು ಎಂಬ ಹೆಸರಿನ ಈ ಮಾಸ್ತರ್ರಂತೂ ಯಾವತ್ತಿಗೂ ಮರೆಯೋಕಾಗೋದಿಲ್ಲ ಬಿಡಿ. ಜಿ. ಎಸ್. ಭಟ್ರು ಎನ್ನುವ ಹೆಸರನ್ನು ಕೇಳಿದ ತಕ್ಷಣ ನಾವೆಲ್ಲ ಭಯಂಕರ ಹೆದರುತ್ತಿದ್ದ ಕಾಲವೊಂದಿತ್ತು. ಅವರ ಹೊಡೆತ, ಅವರ ಸಿಟ್ಟು ಅಯ್ಯಪ್ಪಾ ಯಾರಿಗೂ ಬೇಡ. ಜಿ. ಎಸ್. ಭಟ್ಟರು ಶಾಲೆಗೆ ಬರುವಾಗ ಒಂದು ಡಜನ್ ಕೋಲುಗಳನ್ನು ಹೊಡೆತಕ್ಕಾಗಿಯೇ ತರುತ್ತಾರೆ ಎನ್ನುವ ಮಾತುಗಳೂ ಇದ್ದವು. ಡಜನ್ ಕೋಲುಗಳು ಖಾಲಿಯಾಗಿ ಶಾಲೆಯ ಆವರಣದಲ್ಲಿದ್ದ ಗಾಳಿ ಶೆಳಕೆ, ಹುಳಸೇ ಬರಲುಗಳನ್ನೆಲ್ಲ ಮತ್ತಷ್ಟು ಮುರಿದು ತರಲು ಆಜ್ಞಾಪಿಸುತ್ತಿದ್ದರು. ಅವರ ಸಿಟ್ಟಿಗೆ ಬಲಿ ಬೀಳದವರು ಯಾರೂ ಇರಲಿಲ್ಲ ನೋಡಿ. ನಾನು ಅವರ ಬಳಿ ಅದೆಷ್ಟೋ ಹೊಡೆತ ತಿಂದಿದ್ದೇನೆ. ಮೂ, ಕೈ, ಕಾಲುಗಳ ಮೇಲೆಲ್ಲ ಬಾಸುಂಡೆ ಬಂದಿದ್ದಿದೆ.
               ನನಗಿಂತ ಎರಡು ತರಗತಿಗಳ ಮೇಲೆ ಒಬ್ಬ ಹುಡುಗನಿದ್ದ. ಆತನ ಬ್ಯಾಚಿನಲ್ಲಿದ್ದ ಹುಡುಗರೆಲ್ಲ ಭಯಂಕರ ಪುಂಡು ಪೋಕರಿಗಳು. ಗಣಪತಿ ಎಂಬ ಹೆಸರಿನ ಆ ಹುಡುಗ ದೂರದಿಂದ ನನಗೆ ಸಂಬಂಧಿಕನೂ ಆಗಬೇಕು. ಆ ದಿನಗಳಲ್ಲಿ ಆತ ಸಿಕ್ಕಾಪಟ್ಟೆ ತಂಟೆ ಮಾಡುತ್ತಿದ್ದ. ಗಲಾಟೆಯಲ್ಲಿ ಎತ್ತಿದ ಕೈ ಆಗಿತ್ತು. ಭಾನಗಡಿಗೆ ಹೆಸರುವಾಸಿಯೂ ಆಗಿದ್ದ. ಸದಾ ಸುಮ್ಮನಿರಲು ಆಗದ ಆತ ಏನಾದರೂ ಒಂದು ಕಿತಾಪತಿ ಮಾಡುತ್ತಲೇ ಇರುತ್ತಿದ್ದ. ಶಾಲೆಗೆ ಕಳ್ಳ ಬೀಳುವುದು, ಮಾರ್ಕ್ಸ್ ಕಾರ್ಡಿನ ಮೇಲೆ ನಕಲಿ ಸಹಿ ಝಾಡಿಸುವುದು, ಸುಳ್ಳಿನ ಸರಮಾಲೆಗಳನ್ನು ಪೋಣಿಸುವುದು ಇತ್ಯಾದಿಗಳೆಲ್ಲ ಆತನಿಗೆ ನೀರು ಕುಡಿದಷ್ಟು ಸುಲಭವಾಗಿತ್ತು. ಇಂತಹ ಗಣಪತಿಗೆ ಜಿ. ಎಸ್. ಭಟ್ಟರು ಸಿಂಹಸ್ವಪ್ನವಾಗಿದ್ದರು.
               ನಮ್ಮೂರಿನಲ್ಲೇ ಇನ್ನೊಬ್ಬ ಹುಡುಗನಿದ್ದ. ನನಗಿಂತ ಮೂರ್ನಾಲ್ಕು ವರ್ಷ ದೊಡ್ಡವನು. ನಮ್ಮೂರಿನ ಒಬ್ಬರ ಮನೆಯಲ್ಲಿ ಉಳಿದುಕೊಂಡು ಶಾಲೆಗೆ ಹೋಗುತ್ತಿದ್ದ. ಆತ ಓದಿನಲ್ಲಿ ಅಷ್ಟು ಚುರುಕಾಗಿರಲಿಲ್ಲ. ಆದರೆ ತಂಟೆ ಮಾಡುವುದರಲ್ಲಿ ಎತ್ತಿದ ಕೈ. ಅವನಿಗೂ ಕೂಡ ಜಿ. ಎಸ್. ಭಟ್ಟರೆಂದರೆ ಭಯಂಕರ ಭಯ. ಶ್ರೀಪಾದ ಎನ್ನುವುದು ಆತನ ಹೆಸರು. ಗಣಪತಿ ಹಾಗೂ ಶ್ರೀಪಾದನ ಪಾಲಿಗೆ ಗಣೇಶ ಭಟ್ಟರು ವಿಲನ್ನು. ಈ ಜಿ. ಎಸ್. ಭಟ್ಟರು ಹೇಗಾದರೂ ಸತ್ತು ಹೋದರೆ ಚನ್ನಾಗಿತ್ತು ಎಂದು ಬೈದುಕೊಂಡು ಶಾಪ ಹೊಡೆಯುವಷ್ಟು ಭಟ್ಟರ ಮೇಲೆ ಸಿಟ್ಟಿತ್ತು.
               ಹೀಗಿದ್ದಾಗಲೇ ಗಣೇಶ ಭಟ್ಟರು ಹೊಸದೊಂದು ಬೈಕನ್ನು ಕೊಂಡಿದ್ದರು. ಬೈಕ್ ಪೂಜೆ ಮಾಡಿಸಬೇಕಲ್ಲ. ಹಿರಿಯ ಪ್ರಾಥಮಿಕ ಶಾಲೆ ಅಡ್ಕಳ್ಳಿ-ಕೋಡ್ಸಿಂಗೆಯ ಎದುರಿಗೆ ದೊಡ್ಡದೊಂದು ಭೂತಪ್ಪನ ಕಟ್ಟೆಯಿದೆ. ಹೊಸ ವಸ್ತುಗಳು, ಹೊಸ ವಾಹನ ಹೀಗೆ ಏನೆ ಇದ್ದರೂ ಅಲ್ಲಿ ಪೂಜೆ ಮಾಡಿಸುವುದು ವಾಡಿಕೆ. ಜಿ. ಎಸ್. ಭಟ್ಟರೂ ಕೂಡ ಹೊಸ ಬೈಕನ್ನು ಅಲ್ಲಿ ಪೂಜೆ ಮಾಡಿಸಿದ್ದರು. ಬೈಕ್ ಪೂಜೆ ಮಾಡಿದ್ದವನು ಅವರಿಂದ ಸಿಕ್ಕಾಪಟ್ಟೆ ಹೊಡೆತ ತಿನ್ನುವ ಗಣಪತಿ. ಭಟ್ಟರ ದುರಾದೃಷ್ಟವೋ ಗೊತ್ತಿಲ್ಲ ಪೂಜೆ ಮಾಡಿಸುವ ಸಂದರ್ಭದಲ್ಲಿ ಕಾಯಿ ಒಡೆಯಲಾಯಿತು. ಒಡೆದ ಕಾಯಿಯಲ್ಲಿ ಒಂದು ಕಾಯಿ ಕೊಳೆತು ಹೋಗಿತ್ತು. ಅದೆಂತಹ ಅಪಶಕುನವೋ ಗೊತ್ತಿಲ್ಲ. ಭಟ್ಟರು ಬೇರೆ ಕಾಯಿ ತಂದು ಒಡೆಸಿದ್ದರು.
                ಅದಾದ ನಂತರ ನಾವು ಶಾಲೆಯಲ್ಲಿ ಪ್ರಾರ್ಥನೆಗೆ ನಿಂತಾಗಲೆಲ್ಲ ಜಿ. ಎಸ್. ಭಟ್ಟರ ಬೈಕಿನ ಸದ್ದಾಗುತ್ತದೆಯೋ ಎಂದು ಆಲಿಸುತ್ತಿದ್ದೆವು. ಪ್ರಾರ್ಥನೆ ಮುಗಿಯುವ ವೇಳೆಗೆ ಬೈಕಿನ ಸದ್ದಾಗದಿದ್ದರೆ ಅವರು ಬಂದಿಲ್ಲ ಎಂದು ನಿಟ್ಟುಸಿರು ಬಿಡುತ್ತಿದ್ದೆವು. ಬೈಕು ಬಂತೋ ನಮ್ಮ ಜೀವ ಕೈಗೆ ಬರುತ್ತಿತ್ತು. ದೇವರೇ ಇವತ್ತು ಜಿ. ಎಸ್. ಭಟ್ಟರು ಶಾಲೆಗೆ ಬರದಿದ್ದರೆ ಸಾಕಪ್ಪಾ ಎಂದು ಬೇಡಿಕೊಳ್ಳುತ್ತಿದ್ದುದೂ ಇದೆ. ಭಟ್ಟರದ್ದು ಅದೆಂತಹ ಸಿದ್ಧಾಂತವಾಗಿತ್ತೋ ಏನೋ. ಪಾಠವನ್ನು ಮಾತ್ರ ಬಹಳ ಚನ್ನಾಗಿ ಕಲಿಸುತ್ತಿದ್ದರು. ಆದರೆ ನನಗೆ ಮಾತ್ರ ಅವರು ಪಾಠಕ್ಕಿಂತ ಹೆಚ್ಚಿಗೆ ಹೊಡೆತವನ್ನೇ ನೀಡಿದ್ದಾರೆ ಎಂದರೆ ತಪ್ಪಿಲ್ಲ. ಅವರು ನನಗೆ ಹೊಡೆದಾಗಲೂ ನಾನು ಹೆದರಿರಲಿಲ್ಲ. ಆದರೆ ನನ್ನ ಜೊತೆಗೆ ಬರುತ್ತಿದ್ದ ಗಣಪತಿ ಹಾಗೂ ಶ್ರೀಪಾದನ ಮೈಮೇಲಿನ ಬಾಸುಂಡೆಗಳು, ರಕ್ತ ಜಿನುಗುವ ಹೊಡೆತದ ಗಾಯಗಳನ್ನು ನೋಡಿದಾಗಲೆಲ್ಲ ಸಿಕ್ಕಾಪಟ್ಟೆ ಹೆದರಿದ್ದೂ ಇದೆ.
             ಹೊಡೆತ ತಪ್ಪಿಸಿಕೊಳ್ಳಬೇಕು ಎನ್ನುವ ಕಾರಣಕ್ಕಾಗಿ ಗಣಪತಿ ಅನೇಕ ಸಾರಿ ಶಾಲೆ ತಪ್ಪಿಸುತ್ತಿದ್ದ. ಆದರೆ ಮರುದಿನ ಮಾತ್ರ ಸಿಕ್ಕಾಪಟ್ಟೆ ಹೊಡೆತ ಬೀಳುತ್ತಿತ್ತು. ಮನೆಯಲ್ಲಿ ಶಾಲೆಗೆ ಹೋಗುತ್ತೇನೆ ಎಂದು ಹೇಳುತ್ತಿದ್ದ ಗಣಪತಿ (ನಾವೆಲ್ಲ ಅವನನ್ನು ಗಪ್ಪತಿ ಎನ್ನುತ್ತಿದ್ದೆವು. ಮುಂದೆ ಅವನ ಬಗ್ಗೆ ಬಹಳ ಬರೆಯಲಿಕ್ಕಿದೆ. ಬೇರೆ ಕಂತಿನಲ್ಲಿ ಬರೆಯುತ್ತೇನೆ) ನಮ್ಮ ಜೊತೆಗೆ ಅರ್ಧ ದಾರಿಯ ವರೆಗೆ ಬರುತ್ತಿದ್ದ. ನಮ್ಮೂರಿನಿಂದ ಶಾಲೆಗೆ ಹೋಗುವ ದಾರಿಯಲ್ಲಿ ದೊಡ್ಡದೊಂದು ಕಾಡು ಸಿಗುತ್ತದೆ. ಗಪ್ಪತಿ ಆ ಕಾಡಿನ ಜಾಗ ಬಂದ ತಕ್ಷಣ ಕಾನೊಳಗೆ ನುಸುಳಿ ಬಿಡುತ್ತಿದ್ದ. ಶಾಲೆಗೆ ಕಳ್ಳ ಬೀಳುತ್ತಿದ್ದ ಆತ ನಮ್ಮ ಬಳಿ ಮಾತ್ರ ಮನೆಯಲ್ಲಿ ಹೇಳಬೇಡ ಎಂದು ಹೇಳುತ್ತಿದ್ದ. ಶಾಲೆಯಲ್ಲಿ ಹಾಗೂ ಮನೆಯಲ್ಲಿ ಆತ ಕಳ್ಳಬೀಳುತ್ತಿದ್ದ ವಿಷಯವನ್ನು ಯಾರಿಗೂ ತಿಳಿಸದಂತೆ ಮ್ಯಾನೇಜ್ ಮಾಡಬೇಕಿತ್ತು ನಾವು. ಶಾಲೆಯಿಂದ ಮರಳುವ ವೇಳೆಗೆ ಆ ಕಾಡಿನ ಜಾಗಕ್ಕೆ ಬಂದ ನಾವು ಆತನ ಹೆಸರು ಹೇಳಿ ದೊಡ್ಡದಾಗಿ ಕೂಗು ಹಾಕಿದಾಗ ಕಾಡಿನೊಳಗಿಂದ ಓಡಿ ಬರುತ್ತಿದ್ದ. `ಗಪ್ಪತಿ ಎಂತಾ ಮಾಡ್ತದ್ಯಲೇ ಕಾಡೊಳಗೆ..' ಎಂದು ನಾವು ಕೇಳಿದರೆ ನಿದ್ದೆ ಮಾಡ್ತಿದ್ದೆ ಮಾರಾಯಾ ಎನ್ನುತ್ತಿದ್ದ.
              ಒಮ್ಮೆ ಹೀಗಾಯಿತು. ನಾಲ್ಕಾರು ದಿನ ಕಳ್ಳಬಿದ್ದಿದ್ದ ಗಪ್ಪತಿ. ಜಿ. ಎಸ್. ಭಟ್ಟರು ಪ್ರತಿದಿನ ನಮ್ಮ ಬಳಿ ಗಪ್ಪತಿ ಶಾಲೆಗೆ ಬರಲಿಲ್ಲವಾ ಎಂದು ಕೇಳುತ್ತಿದ್ದರು. ನಾವು ಅದೇನೋ ನೆಪ ಹೇಳುತ್ತಿದ್ದೆವು. ಅದೊಂದು ದಿನ ಭಟ್ಟರಿಗೆ ಅನುಮಾನ ಬಂದಿತು. ನನ್ನ ಹಿಡಿದು ದನಕ್ಕೆ ಬಡಿಯುವ ಹಾಗೆ ಬಡಿಯಲು ಆರಂಭಿಸಿದರು. ನಾನು ಹೊಡೆತದ ಉರಿಯನ್ನು ತಾಳಲಾರದೇ ಗಪ್ಪತಿ ಕಾಡಿನಲ್ಲಿ ಕದ್ದು ಕೂರುವ ವಿಚಾರವನ್ನು ಬಾಯಿ ಬಿಟ್ಟಿದ್ದೆ. ಸಿಟ್ಟಿನಿಂದ ಮತ್ತಷ್ಟು ಬಡಿದ ಜಿ. ಎಸ್. ಭಟ್ಟರು ನನ್ನನ್ನು ಸೀದಾ ಎಳೆದುಕೊಂಡು ಹೋದರು. ಅದೇ ಕಾಡಿನ ಬಳಿ ಹತ್ತಿರ ಬಂದ ತಕ್ಷಣ ಗಪ್ಪತಿಯ ಹೆಸರನ್ನು ದೊಡ್ಡದಾಗಿ ಕೂಗು ಎಂದರು. ನಾನು ಕೂಗಿದೆ. ಗಪ್ಪತಿ ಕಾಡಿನಿಂದ ಹೊರಗೆ ಬಂದ. ಬಂತ ತಕ್ಷಣವೇ ಜಿ. ಎಸ್. ಭಟ್ಟರ ಕೈಗೆ ಸಿಕ್ಕಿಬಿದ್ದ. ಅಲ್ಲಿಂದ ಗಪ್ಪತಿಗೆ ಹೊಡೆಯಲು ಆರಂಭಿಸಿದ ಜಿ. ಎಸ್. ಭಟ್ಟರು ಶಾಲೆಯ ವರೆಗೂ ಹೊಡೆಯುತ್ತಲೇ ಹೋಗಿದ್ದರು. ಆಮೇಲಿಂದ ಗಪ್ಪತಿ ಕಾಡಿನಲ್ಲಿ ಕದ್ದು ಕೂರುವುದು ಬಂದಾಗಿತ್ತು. ಕೆಲ ದಿನಗಳ ವರೆಗೆ ಗಪ್ಪತಿ ನನ್ನ ಬಳಿ ಮಾತಾಡುವುದನ್ನೂ ಬಿಟ್ಟು ಬಿಟ್ಟಿದ್ದ.
             ಹೀಗಿದ್ದಾಗ ಒಂದು ದಿನ ನಮಗೆ ಸುದ್ದಿ ಬಂದಿತ್ತು. ಶಿರಸಿ-ಕುಮಟಾ ರಸ್ತೆಯ ಹನುಮಂತಿ ಬಳಿ ಎಕ್ಸಿಡೆಂಟ್ ಆಯ್ತಂತೆ. ಜಿ. ಎಸ್. ಭಟ್ಟರಿಂದ ಬೈಕಿಗೆ ಹಿಂದಿನಿಂದ ಬಂದ ಬಸ್ಸೊಂದು ಡಿಕ್ಕಿ ಹೊಡೆಯಿತಂತೆ. ಡಿಕ್ಕಿ ಹೊಡೆದ ರಭಸಕ್ಕೆ ಜಿ. ಎಸ್. ಭಟ್ಟರು ಸ್ಥಳದಲ್ಲೇ ಸತ್ತು ಹೋದರಂತೆ ಎಂಬ ಸುದ್ದಿ ಬಂದಿತು. ಶಾಲೆಗೆ ನಾನು ಬರುವ ವೇಳೆಗೆ ಎಲ್ಲರೂ ಹೊರಗೆ ಕುಂತಿದ್ದರು. ಒಂದೆರಡು ಶಿಕ್ಷಕಿಯರು ಆಗಲೇ ಅಳುತ್ತಿದ್ದರು. ಕೊನೆಗೆ ಪೂರ್ತಿಯಾಗಿ ಗೊತ್ತಾಗಿದ್ದೇನೆಂದರೆ ಬ್ರೇಕ್ ಫೈಲ್ ಆದ ಕೆಎಸ್ಸಾರ್ಟಿಸಿ ಬಸ್ಸೊಂದು ಜಿ. ಎಸ್. ಭಟ್ಟರ ಬೈಕಿಗೆ ಹಿಂದಿನಿಂದ ಢಿಕ್ಕಿ ಹೊಡೆದಿತ್ತು. ಮಧುವೆ ಮಾಡಿಕೊಳ್ಳಬೇಕು ಎಂದು ಹೆಣ್ಣು ನೋಡಲು ಹೊರಟಿದ್ದ ಜಿ. ಎಸ್. ಭಟ್ಟರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಢಿಕ್ಕಿಯಾದ ರಭಸಕ್ಕೆ ಬೈಕಿನಿಂದ ಚಿಮ್ಮಿ ಬಿದ್ದಿದ್ದ ಜಿ. ಎಸ್. ಭಟ್ಟರ ಎದೆಯ ಮೇಲೆ ಬಸ್ಸಿನ ಹಿಂದಿನ ಚಕ್ರ ಹತ್ತಿ ಹೋದ ಪರಿಣಾಮ ಭಟ್ಟರು ಅಪ್ಪಚ್ಚಿಯಾಗಿ ಬಿಟ್ಟಿದ್ದರು. ಭಟ್ಟರ ಜೊತೆಗೆ ಹೋಗುತ್ತಿದ್ದ ಅಡಕಳ್ಳಿಯ ವಿ. ಆರ್. ಹೆಗಡೆ ಎನ್ನುವವರು ಕೂದಲೆಳೆಯ ಅಂತರದಲ್ಲಿ ಬಚಾವಾಗಿದ್ದರು. ಆದರೂ ಅವರಿಗೆ ಅನೇಕ ಕಡೆಗಳಲ್ಲಿ ಮೂಳೆ ಮುರಿತ ಉಂಟಾಗಿತ್ತು. ಆದಿನ ನನಗೆ ಅದೇಕೋ ಸಿಕ್ಕಾಪಟ್ಟೆ ಅಳು ಬಂದಿತ್ತು.
          ಮೌನ ಆಚರಿಸಿದ್ದರು. ಶಾಲೆಗೆ ರಜಾ ಕೊಟ್ಟಿದ್ದರು. ನಾನು ಬೇಜಾರಿನಲ್ಲಿಯೇ ವಾಪಾಸ್ ಬರುತ್ತಿದ್ದ ವೇಳೆ ಜೊತೆಯಲ್ಲಿದ್ದ ಶ್ರೀಪಾದ ಹಾಗೂ ಗಪ್ಪತಿ ಮಾತ್ರ ಕುಣಿದು ಕುಪ್ಪಳಿಸಿದ್ದರು. ಜಿ. ಎಸ್. ಭಟ್ಟರು ಗೋತಾ ಜೊ. ಎಸ್. ಭಟ್ಟರು ಗೋತಾ ಎಂದು ಕುಣಿಯುತ್ತ ಹೋಗುತ್ತಿದ್ದುದು ಇನ್ನೂ ನನ್ನ ಕಣ್ಣೆದುರಿಗಿದೆ. ಆ ದಿನಗಳಲ್ಲಿಯೇ ಕೆಲವು ಸುದ್ದಿಗಳೂ ನನ್ನ ಕಿವಿಗೆ ಬಿದ್ದಿದ್ದವು. ಎಷ್ಟು ಸತ್ಯವೋ, ಅದೆಷ್ಟು ಸುಳ್ಳೋ ಗೊತ್ತಿಲ್ಲ. ಭಟ್ಟರು ಹೊಸ ಬೈಕ್ ತೆಗೆದುಕೊಂಡಾಗ ಭೂತಪ್ಪನ ಕಟ್ಟೆಗೆ ಕಾಯಿ ಒಡೆಸಿದ್ದರು ಎಂದಿದ್ದೆನಲ್ಲ. ಅದು ಕೊಳೆತು ಹೋಗಿತ್ತು ಎಂದೂ ಹೇಳಿದ್ದೆನಲ್ಲ. ಆ ಕಾರಣಕ್ಕಾಗಿಯೇ ಬೈಕ್ ಎಕ್ಸಿಡೆಂಟ್ ಆಗಿತ್ತು ಎಂದು ಅನೇಕರು ಮಾತನಾಡಿಕೊಂಡರು. ಅನೇಕರು ಗಪ್ಪತಿಯ ಬಗ್ಗೆಯೂ ಮಾತನಾಡಿಕೊಂಡು. ಪ್ರತಿ ದಿನ ಭೂತಪ್ಪನ ಕಟ್ಟೆಯಲ್ಲಿ ಜಿ. ಎಸ್. ಭಟ್ಟರು ಸತ್ತು ಹೋಗಲಿ ಎಂದು ಬೇಡಿಕೊಳ್ಳುತ್ತಿದ್ದ, ಹೂವನ್ನು ತಂದು ಭೂತಪ್ಪನಿಗೆ ಹಾಕುತ್ತಿದ್ದ. ಅದೇ ಕಾರಣಕ್ಕೆ ಜಿ. ಎಸ್. ಭಟ್ಟರು ಎಕ್ಸಿಡೆಂಟ್ ನಲ್ಲಿ ಸತ್ತುಹೋದರು ಎಂದು ಅನೇಕ ಜನ ಮಾತನಾಡಿಕೊಂಡರು. ಅನೇಕ ದಿನಗಳ ಕಾಲ ಈ ಸುದ್ದಿ ಅನೇಕರ ಬಾಯಲ್ಲಿಯೂ ಹರಿದಾಡುತ್ತಿತ್ತು. ಆದರೆ ನಿಧಾನವಾಗಿ ಜಿ. ಎಸ್. ಭಟ್ಟರೂ ಮರೆತು ಹೋದರು. ಗಪ್ಪತಿ ಬಗ್ಗೆ ಇದ್ದ ಗಾಸಿಪ್ ಕೂಡ ಮರೆತು ಹೋಗಿತ್ತು. ಆದರೆ ನನಗೆ ಕಲಿಸಿದ ಮಾಸ್ತರ್ ಮಂದಿಯ ನೆನಪು ಮಾಡಿಕೊಳ್ಳುವ ಸಂದರ್ಭದಲ್ಲಿ ಮಾತ್ರ ಈ ಎಲ್ಲ ಘಟನೆಗಳೂ ನನ್ನ ನೆನಪಿನ ಖಜಾನೆಯಲ್ಲಿ ಅಚ್ಚಳಿಯದೇ ಉಳಿದುಕೊಂಡು ಬಿಟ್ಟಿವೆ.

(ಮುಂದುವರಿಯುತ್ತದೆ)

ಶಕ್ತಿವಂತ

ಓ ಮನುಜ
ಈ ಜೀವಕ್ಕುಂಟು ಕೊನೆ
ಜೀವನವಲ್ಲ ಎಂದಿಗೂ ಶಾಶ್ವತ |

ಓ ಮನುಜ ತಿಳಿದಿರುವೆ ನೀನು
ಈ ಭೂಮಿಯಲ್ಲಿ ತಾನೇ ಶಕ್ತಿವಂತನೆಂದು
ಆದರೆ ನೀನು ಮುಂದೆ
ಆಗುವುದನ್ನು ಅರಿಯಬಲ್ಲೆಯಾ?

ಎಲ್ಲೋ ಒಂದೆರಡು ಸಂಶೋಧನೆ ಮಾಡಿ
ಹೊಸದನ್ನು ಹುಡುಕಿದ ಮಾತ್ರಕ್ಕೆ
ನೀನಾಗುವೆಯಾ ಬುದ್ಧಿವಂತ, ಶಕ್ತಿವಂತ?

ನೆನಪಿರಲಿ ಕೇಳು ಮನುಜ
ನನಗಿಂತ, ನಿನಗಿಂತ, ಎಲ್ಲರಿಗಿಂತ
ದೊಡ್ಡವನು, ಶಕ್ತಿವಂತ ಇರುವನು
ಈ ಜಗದೊಳಗೆ.
ಅವನು ಮುನಿದರೆ ಸುಖವಿಲ್ಲ
ಬದುಕಿಲ್ಲ ತಿಳಿ ಮನುಜ
ಅದ ಮರೆತು ನೀನು
ಎಂದೂ ಹೇಳಬೇಡ
ತಾನೇ

ಶಕ್ತಿವಂತನೆಂದು
ಗಟ್ಟಿಗನೆಂದು
ಶಕ್ತಿವಂತನೆಂದು
ಸೃಷ್ಟಿಕರ್ತ ಬ್ರಹ್ಮನೆಂದು..|||

***

(ಈ ಕವಿತೆಯನ್ನು ಬರೆದಿರುವುದು 19-05-2004ರಂದು ಕಾನಲೆಯಲ್ಲಿ)

Monday, May 25, 2015

ಕೋಗಿಲೆಯ ಕೂಗು

ಅದೆಲ್ಲೋ ದೂರದಿ
ವನಸಿರಿಯ ಮಧ್ಯದಿ
ಕೂಗುತಿಹುದು ಕೋಗಿಲೆ ||

ವಸಂತದ ಚೈತ್ರದಿ
ಸುಂದರ ಮಾಮರದಿ
ಉಲಿಯುತಿಹುದು ಕೋಗಿಲೆ ||

ಕುಹೂ ಕುಹೂ ನಾದದಿ
ನನ್ನ ಈ ಹೃದಯದ
ಮಿಡಿತವನ್ನು ಕೇಳೆಲೆ ||

ಮಾಮರದ ಮಧ್ಯದಿ
ಚಿಗುರೆಲೆಯ ಪಕ್ಕದಿ
ಹಾಡುತಿಹುದು ಕೋಗಿಲೆ ||

ಮಾವು ಚಿಗುರಿ ಹೂಬಿಡುವ
ಸುಂದರ ಚಣದಲಿ
ಉಲಿಯುತಿಹುದು ಕೋಗಿಲೆ ||

ಕೋಗಿಲೆಯ ಕೂಗಿನಿಂ
ಹೃದಯ ವೀಣೆ ಮಿಡಿಯಲಿ
ಜೀವ ಪುಳಕವಾಗಲಿ ||

**********

(ಈ ಕವಿತೆಯನ್ನು ಬರೆದಿರುವುದು 09-09-2004ರಂದು ದಂಟಕಲ್ಲಿನಲ್ಲಿ)

Sunday, May 24, 2015

ಮಾಸ್ತರ್ ಮಂದಿ-1

              ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಶಿಕ್ಷಕರು ಬಹುಮುಖ್ಯ ಪಾತ್ರವನ್ನು ವಹಿಸುತ್ತಾರೆ. ವ್ಯಕ್ತಿಯ ಬದುಕನ್ನು ರೂಪಿಸುವವರು ಶಿಕ್ಷಕರು ಎಂದರೆ ತಪ್ಪಾಗಲಿಕ್ಕಿಲ್ಲ. ನನ್ನ ಬದುಕಿನಲ್ಲಿ ಅದೆಷ್ಟೋ ಶಿಕ್ಷಕರು ಬಂದು ಹೋಗಿದ್ದಾರೆ. ಬಿನ್ನೆತ್ತಿಯಿಂದ ಹಿಡಿದು ಕಾಲೇಜು ಕೊನೆಯ ವರ್ಷದ ವರೆಗೆ 50ಕ್ಕೂ ಹೆಚ್ಚು ಜನ ನನ್ನ ಬದುಕನ್ನು ರೂಪಿಸಿದವರು. ಅವರ ಬಗ್ಗೆ ಒಂದಿಷ್ಟು ಮಾತು ನಾನು ಹೇಳಿಕೊಳ್ಳಲೇಬೇಕು. ನನಗೆ ನೆನಪಿರುವಷ್ಟು ಶಿಕ್ಷಕರ ಬಗ್ಗೆ ಹೇಳುತ್ತೇನೆ. ಈ ಶಿಕ್ಷಕರು ನನ್ನ ಪಾಲಿಗೆ ಸಿಹಿಯೂ ಆಗಿದ್ದಾರೆ, ಕಹಿಯೂ ಆಗಿದ್ದಾರೆ. ಅಂತವರ ಬಗ್ಗೆ ನೆನಪು ಮಾಡಿಕೊಳ್ಳುವ ಲೇಖನ ಇದು. ಬರೆಯುತ್ತ ಸಾಗುತ್ತೇನೆ. ಕಂತುಗಳ ಲೆಕ್ಕವಾದರೂ ಆದೀತು.

ಸತೀಶ ಮಾಸ್ತರ್ರು :
                     ನನಗೆ ನೆನಪಿರುವಂತೆ ಸತೀಶ ಮಾಸ್ತರ್ರು ನನ್ನ ಶಾಲಾ ಜೀವನದ ಮೊಟ್ಟ ಮೊದಲ ಮಾಸ್ತರ್ರು. ಬಿನ್ನೆತ್ತಿಯಿಂದ ಹಿಡಿದು ಒಂದನೇ ಕ್ಲಾಸಿನಲ್ಲಿ ಕಲಿಸಿದ ಈ ಮಾಸ್ತರ್ರ ನೆನಪು ಅಸ್ಪಷ್ಟವಾಗಿದೆ. 4ನೇ ವರ್ಷದಿಂದ ಬಿನ್ನೆತ್ತಿಗೆ ಹೋಗಲು ಶುರು ಮಾಡಿದ್ದ ನಾನು 6ನೇ ವರ್ಷದ ವರೆಗೂ ಬಿನ್ನೆತ್ತಿಯಲ್ಲೇ ಉಳಿದುಕೊಳ್ಳಲು ಈ ಮಾಸ್ತರ್ರೇ ಪ್ರಮುಖ ಕಾರಣ. ಎಲ್ಲ ಹುಡುಗರಿಗಿಂತ ಕುಳ್ಳಗೆ ಕಾಣುತ್ತಿದ್ದ ನಾನು 6 ವರ್ಷವಾದರೂ 4 ವರ್ಷದ ಹುಡುಗರಂತೆ ಕುಳ್ಳಗೇ ಇದ್ದೆ. ಪ್ರತಿವರ್ಷ ಅವರು ನನ್ನನ್ನು ತಲೆಯ ಮೇಲಿನಿಂದ ಕೈಯನ್ನು ಉದ್ದ ಹಿಡಿದು ಕಿವಿಯನ್ನು ಮುಟ್ಟು ಎನ್ನುತ್ತಿದ್ದರು. ಆದರೆ ನನ್ನ ಕೈ ಕಿವಿಗೆ ತಲುಪುತ್ತಿರಲಿಲ್ಲ. ಇನ್ನೂ ಸಮಾ ವರ್ಷವಾಗಿಲ್ಲ ಎಂದು ಹೇಳಿ ನನ್ನನ್ನು 1ನೇ ಕ್ಲಾಸಿಗೆ ಸೇರಿಸಿಕೊಳ್ಳಲು ಹಿಂದೇಟು ಹಾಕಿದವರು ಈ ಮಾಸ್ತರ್ರು.
                    ಈ ಮಾಸ್ತರ್ರು ನಾನು ಕಲಿಯುತ್ತಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಡ್ಕಳ್ಳ-ಕೋಡ್ಸಿಂಗೆಯಿಂದ ರಸ್ತೆ ಮಾರ್ಗದ ಮೂಲಕ ಅನಾಮತ್ತು 6 ಕಿಮಿ ದೂರದ ಕೋಡ್ಸರದಲ್ಲಿ ಉಳಿದುಕೊಳ್ಳುತ್ತಿದ್ದರು. ಒಳ ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ 3 ಕಿ.ಮಿ ನಡೆದು ಪ್ರತಿದಿನ ಶಾಲೆಗೆ ಬರುತ್ತಿದ್ದ ಸತೀಶ ಮಾಸ್ತರ್ರು ಕಪ್ಪಗಿದ್ದರು. ಥಟ್ಟನೆ ನೋಡಿದರೆ ಸಿನಿಮಾ ನಟ, ಹಿರಿಯ ಐಎಎಸ್ ಅಧಿಕಾರಿ ಕೆ. ಶಿವರಾಮು ಅವರನ್ನು ನೆನಪಿಸುವಂತಿದ್ದರು ಅವರು. ಮೂರ್ನಾಲ್ಕು ವರ್ಷ ನಮ್ಮೂರ ಶಾಲೆಯಲ್ಲಿ ಕಲಿಸಿದ್ದರೇನೋ. ಆದರೆ ನಾನು 1ನೇ ಕ್ಲಾಸಿಗೆ ಬರುವ ವೇಳೆಗೆ ಅವರು ವರ್ಗವಾಗಿ ಹೋಗಿದ್ದರು.
                   ಸತೀಶ ಮಾಸ್ತರ್ರು ನಮ್ಮೂರ ಶಾಲೆಗೆ ಕಲಿಸಲು ಬರುವ ವೇಳೆಗೆ ಇಡೀ ಶಾಲೆಯಲ್ಲಿ 120ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರು. ಒಬ್ಬರೇ ಶಿಕ್ಷಕರಿದ್ದರು. ಆಗ ನಮ್ಮೂರಿನಲ್ಲಿ ಎಸ್ಎಸ್ಎಲ್ಸಿ ಓದಿ ಮುಗಿಸಿದ್ದ ನನ್ನ ಅತ್ತೆಯಂದಿರು ಇಬ್ಬರನ್ನು ಪಾರ್ಟ್ ಟೈಮಿಗೆ ಕಲಿಸಲು ಬರುವಂತೆ ಹೇಳಿದ್ದು ಇನ್ನೂ ನೆನಪಿದೆ. ಬಿನ್ನೆತ್ತಿ ಓದಲು ಬರುತ್ತಿದ್ದ ನನಗೆ ನನ್ನ ಅತ್ತೆಯಂದಿರು ಶಿಕ್ಷಕಿಯರಾಗಿ ಕಲಿಸುತ್ತಿದ್ದರು. ಸುಧತ್ತೆ ಹಾಗೂ ಶಾಂತಲತ್ತೆ ಎಂಬ ಹೆಸರಿನ ಅವರನ್ನು ನಾನು ಶಾಲೆಯಲ್ಲಿಯೂ ಸುಧತ್ತೆ ಹಾಗೂ ಶಾಂತಲತ್ತೇ ಎಂದೇ ಕರೆಯುತ್ತಿದ್ದೆ. ಒಂದಿನ ಈ ಅತ್ತೆಯರು ನನ್ನನ್ನು ಕರೆದು `ಶಾಲೆಯಲ್ಲಿ ಅತ್ತೆ ಅನ್ನಬೇಡ. ಟೀಚರ್ ಎಂದು ಕರಿ. ನೆಂಟಸ್ತನ ಏನಿದ್ದರೂ ಮನೆಯಲ್ಲಿ ನೋಡಿಕೊ..' ಎಂದು ಹೇಳಿದ್ದಿನ್ನೂ ನನ್ನ ನೆನಪಿನಲ್ಲಿ ಸ್ಪಷ್ಟವಾಗಿಯೇ ಇದೆ. ಬಹುಶಃ ಅತ್ತೆಯರು ಹೀಗೆ ಹೇಳಿದ ನಂತರವೇ ನಮ್ಮ ನೆಂಟರು ಯಾರಾದರೂ ಮಾಸ್ಟರಾಗಿ ನನಗೆ ಕಲಿಸಲು ಬಂದರೆ ಶಾಲೆಯಲ್ಲಿ ಅವರನ್ನು ಸರ್ ಎಂದು ಸಂಬೋಧನೆ ಮಾಡಬೇಕು, ಮನೆಯಲ್ಲಿ ಮಾತ್ರ ನೆಂಟರಾಗಿ ಕಾಣಬೇಕು ಎಂಬುದು ಅರಿವಾದದ್ದು. ಇಂತಹ ಅತ್ತೆಯರಿಗೆ ಸರಿಯಾಗಿ ಸಂಬಳ ಕೊಡಲಿಲ್ಲ ಎಂದು ಅತ್ತೆಯರ ಅಪ್ಪ ಸತೀಶ ಮಾಸ್ತರ್ರ ಬಳಿ ಜಗಳ ಕಾಯ್ದಿದ್ದು ಇನ್ನೂ ನನ್ನ ನೆನಪಿನಲ್ಲಿ ಉಳಿದುಕೊಂಡಿದೆ.
                  ಇಂತಹ ಮಾಸ್ತರ್ರು ನಮ್ಮೂರ ಶಾಲೆಯಿಂದ ಟ್ರಾನ್ಸಫರ್ ಆಗುವ ವೇಳೆಗೆ ಕುಳ್ಳೀಶ್ವರ ಮಾಸ್ತರ್ರು ಶಿಕ್ಷಕರಾಗಿ ಬಂದಿದ್ದರು. ಅವರಲ್ಲದೇ ಅನಸೂಯಕ್ಕೋರು, ಗಣೇಶ ಭಟ್ಟರು ಮಾಸ್ತರ್ರಾಗಿ ಬಂದಿದ್ದು ನನಗಿನ್ನೂ ನೆನಪಿದೆ. ಆ ಸಂದರ್ಭದಲ್ಲಿಯೇ ತಾರಕ್ಕೋರು ಕೂಡ ನಮ್ಮ ಶಾಲೆಗೆ ಅಕ್ಕೋರಾಗಿ ಬಂದಿದ್ದರು.
                  ಸತೀಶ ಮಾಸ್ತರ್ರ ಕಾಲದಲ್ಲೇ ನನ್ನ ಬದುಕಿನಲ್ಲೊಂದು ಮಜವಾದ ಸಂಗತಿ ಜರುಗಿತ್ತು. ಅದಿನ್ನೂ ನನ್ನ ನೆನಪಿನಲ್ಲಿ ಹಸಿಯಾಗಿದೆ. ನಾನು ಆವತ್ತೊಂದಿನ ಅದೇನೋ ನೆಪವನ್ನು ಹೂಡಿ ಶಾಲೆಗೆ ಹೋಗಿರಲಿಲ್ಲ. ನನ್ನ ಗ್ರಹಚಾರಕ್ಕೆ ಆ ದಿನವೇ ಶಾಲೆಯಲ್ಲಿ ಕ್ರೀಡಾಕೂಟವನ್ನು ಮಾಡಿಬಿಟ್ಟಿದ್ದರು. ನಾನು ಭಾಗವಹಿಸುವ ಹುಮ್ಮಸ್ಸಿನಲ್ಲಿದ್ದೆನಾದರೂ ಕಳ್ಳಬಿದ್ದ ಕಾರಣ ಭಾಗವಹಿಸವುದು ತಪ್ಪಿ ಹೋಗಿತ್ತು. ಆಮೇಲೆ ನಾನು ನನ್ನನ್ನು ಹಳಿದುಕೊಂಡು ಸುಮ್ಮನಾಗಿದ್ದೆ ಮರೆತೂ ಹೋಗಿತ್ತು. ಕೊನೆಗೊಂದು ದಿನ ಶಾಲಾ ವಾರ್ಷಿಕೋತ್ಸವ ಬಂದಿತ್ತು. ಆಗ ಇದ್ದಕ್ಕಿದ್ದಂತೆ ಮೈಕಿನಲ್ಲಿ ನನ್ನ ಹೆಸರನ್ನು ಕರೆದಾಗ ಮಾತ್ರ ನಾನು ಬೆಚ್ಚಿ ಬಿದ್ದಿದ್ದೆ. ಕ್ರೀಡಾಕೂಟದಲ್ಲಿ ನನಗೂ ಒಂದು ಬಹುಮಾನ ಬಂದಿತ್ತು. ಆಟದಲ್ಲಿ ಭಾಗವಹಿಸಿದ್ದಕ್ಕಾಗಿ ಸಮಾಧಾನಕರ ಬಹುಮಾನ ನನಗೆ ಪ್ರಾಪ್ತವಾಗಿತ್ತು. ಅರ್ರೇ ಶಾಲೆಗೆ ಹೋಗದ ನಾನು ಬಹುಮಾನ ಪಡೆದುಕೊಂಡಿದ್ದೆ ಎನ್ನುವುದು ಮಾತ್ರ ಬಹಳ ತಮಾಷೆಯ ವಿಷಯವಾಗಿತ್ತು. ಕೊನೆಗೆ ಗೊತ್ತಾಗಿದ್ದೇನೆಂದರೆ ಶಾಲೆಯ ಪ್ರತಿಯೊಂದು ವಿದ್ಯಾರ್ಥಿಗಳಿಗೂ ಕೂಡ ಆಟದಲ್ಲಿ ಭಾಗವಹಿಸಲಿ, ಭಾಗವಹಿಸದೇ ಇರಲಿ, ಯಾವುದೇ ತಾರತಮ್ಯ ಮಾಡದೇ ಪ್ರಶಸ್ತಿ ಪತ್ರ ನೀಡಬೇಕು ಎಂದು ಸತೀಶ ಮಾಸ್ತರ್ರು ಆಲೋಚಿಸಿದ್ದರಂತೆ. ಅದಕ್ಕೆ ತಕ್ಕಂತೆ ಅವರು ನಡೆದುಕೊಂಡಿದ್ದರು. ನನಗೆ ಪ್ರಶಸ್ತಿ ಬಂದಿತ್ತು.
               ಇಂತಹ ಸತೀಶ ಮಾಸ್ತರ್ರು ಶಾಲೆಯಲ್ಲಿ ಕಲಿಸುತ್ತಿದ್ದ ಸಂದರ್ಭದಲ್ಲಿ ಶಾಲಾ ವಾರ್ಷಿಕೋತ್ಸವ ಬಹಳ ಅದ್ಧೂರಿಯಾಗಿ ನಡೆಯುತ್ತಿತ್ತು. ರಾತ್ರಿಯಿಂದ ಬೆಳಗಿನವರೆಗೂ ವಾರ್ಷಿಕೋತ್ಸವದ ನಿಮಿತ್ತ ಕಾರ್ಯಕ್ರಮಗಳು ನಡೆಯುತ್ತಿದ್ದವು. ಒಂದು ಸಾರಿ ಘಾಟಿ ಮುದುಕಿ ಎನ್ನುವ ನಾಟಕವೂ ನಡೆದಿತ್ತು. ಅದರಲ್ಲಿ ಮಾಸ್ತರ್ರು ಪಾತ್ರ ಮಾಡಿದ್ದರು. ಅವರ ಮನೋಜ್ಞ ನಟನೆಗೆ ಬಹಳಷ್ಟ ಬಹುಮಾನಗಳು ಬಂದಿದ್ದು ನೆನಪಿನಲ್ಲಿದೆ. ಆಗಲೇ ಸ್ಟೇಜ್ ಹತ್ತಿದ್ದ ನಾನು ನಾಲ್ಕೈದು ಡ್ಯಾನ್ಸುಗಳನ್ನೂ ಮಾಡಿದ್ದೆ. ನಮ್ಮೂರಿನ, ನನ್ನದೇ ವಾರಗೆಯ ಕೂಸು ರಂಜನಾ `ಭಾಳ ಒಳ್ಳೇಯೋರ್ ನಮ್ಮಿಸ್ಸು,, ಏನ್ ಕೇಳಿದ್ರೂ ಯೆಸ್ ಯೆಸ್ಸು..' ಎನ್ನುವ ಹಾಡಿಗೆ ಸ್ಟೇಜಿನ ಮೇಲೆ ಹೋಗಿ ಪಕ್ಕದಲ್ಲಿ ನಿಂತಿದ್ದ ಶಿಕ್ಷಕರನ್ನು ನೋಡಿ ಡ್ಯಾನ್ಸ್ ಮಾಡಿದ್ದಿನ್ನೂ ನನ್ನ ನೆನಪಿನಲ್ಲಿ ಉಳಿದುಕೊಂಡಿದೆ.
               ಆ ವಾರ್ಷಿಕೋತ್ಸವದ ದಿನವೇ ನಾನು ಮೊಟ್ಟ ಮೊದಲ ಬಾರಿಗೆ ಉಲ್ಕಾಪಾತವನ್ನು ನೋಡಿದ್ದು. ತಾರಕೆಯೊಂದು ಆಗಸದಲ್ಲಿ ಸೊಯ್ಯನೆ ಹಾರಿ ಹೋಗಿ ಉರಿದು ಭಸ್ಮವಾಗಿತ್ತು. ಅದನ್ನು ನೋಡುತ್ತಿದ್ದ ನನ್ನ ಮಿತ್ರ ಮಹೇಶ ಎಂಬಾತ, ನೋಡು ಈಶ್ವರ ತನ್ನ ಮೂರನೇ ಕಣ್ಣನ್ನು ಬಿಟ್ಟಿದ್ದಾನೆ. ಯಾರನ್ನೋ ಸುಟ್ಟು ಹಾಕಿದ್ದ ನೋಡು ಎಂದು ಹೇಳಿದ್ದು ಇನ್ನೂ ನೆನಪಿನಲ್ಲಿಯೇ ಇದೆ.
                 ಸತೀಶ ಮಾಸ್ತರ್ರಿದ್ದಾಗಲೇ ನಮ್ಮೂರ ಶಾಲೆ ಮೊಟ್ಟ ಮೊದಲ ಬಾರಿಗೆ ಕಾನಸೂರು ಕೇಂದ್ರ ಶಾಲಾ ಮಟ್ಟದಲ್ಲಿ ವೀರಾಗ್ರಣಿ ಪ್ರಶಸ್ತಿ ಬಾಚಿಕೊಂಡಿತ್ತು. ಅಷ್ಟಲ್ಲದೇ ಹೆಗ್ಗರಣಿಯಲ್ಲಿ ನಡೆಯುತ್ತಿದ್ದ ವಲಯ ಮಟ್ಟದಲ್ಲೂ ವೀರಾಗ್ರಣಿಯಾಗಿ ಸಿದ್ದಾಪುರ ತಾಲೂಕಾ ಮಟ್ಟದಲ್ಲೂ ಭಾಗವಹಿಸಿತ್ತು. ಅವರಿದ್ದಾಗಲೇ ಆರಡಿ ಎತ್ತರದ ರವಿ ಹಾಗೂ ಆತನ ತಮ್ಮ ಹರೀಶ ಎಂಬಿಬ್ಬರು 100 ಮೀಟರ್, 200 ಮೀಟರ್, 500 ಮೀಟರ್ ಸೇರಿದಂತೆ ಓಟದ ಎಲ್ಲಾ ವಿಭಾಗದಲ್ಲಿ ಪ್ರಶಸ್ತಿಯನ್ನು ಬಾಚಿಕೊಂಡು ಬಂದಿದ್ದರು. ನನಗೆ ಇವರು ಆಗ ಬಹಳ ವಿಸ್ಮಯದ ವ್ಯಕ್ತಿಗಳಾಗಿ ಕಂಡಿದ್ದರು. ಶಾಲೆಗೆ ಪ್ರಶಸ್ತಿ ತಂದುಕೊಟ್ಟ ಇವರ ಮೇಲೆ ಭಯಂಕರ ಹೆಮ್ಮೆ ಮೂಡಿತ್ತು. ಇಂತಹ ಪ್ರಶಸ್ತಿ ಬಾಚಿಕೊಂಡು ಬಂದಿದ್ದ ಈ ಸಹೋದರರು ಕೊನೆಗೊಂದು ದಿನ ಸತೀಶ ಮಾಸ್ತರ್ರ ಕೈಯಲ್ಲಿ ಕಳ್ಳ ಎನ್ನುವ ಬಿರುದನ್ನೂ ಪಡೆದುಕೊಂಡಿದ್ದು ಮಾತ್ರ ಅಚ್ಚರಿಗೆ ಕಾರಣವಾಗಿತ್ತು.
             ಶಾಲೆಯಲ್ಲಿ ಏನೋ ಒಂದು ಕಳುವಾಗಿತ್ತಂತೆ. ಅದಕ್ಕೆ ಸರಿಯಾಗಿ ಎಲ್ಲರನ್ನೂ ಪ್ರಶ್ನಿಸಿದ್ದರು ಸತೀಶ ಮಾಸ್ತರ್ರು. ಆದರೆ ಹರೀಶ ಹಾಗೂ ರವಿ ಮಾತ್ರ ಸರಿಯಾಗಿ ಉತ್ತರ ಹೇಳಿರಲಿಲ್ಲ. ಅದಕ್ಕೆ ಪ್ರತಿಯಾಗಿ ಸತೀಶ ಮಾಸ್ತರ್ರು ಸಿಕ್ಕಾಪಟ್ಟೆ ಹೊಡೆದು ಹಾಕಿದ್ದರು. ನನಗಿನ್ನೂ ಸತೀಶ ಮಾಸ್ತರ್ರು ಆರು ಅಡಿ ಎತ್ತರದ ರವಿಯನ್ನು ಹೊಡೆಯುತ್ತಿದ್ದುದು ಹಾಗೂ ಆತ ದಿನವಿಡೀ ಅಳುತ್ತಿದ್ದುದು ನೆನಪಿನಲ್ಲಿದೆ.
               ಹೀಗಿದ್ದಾಗ ಒಂದು ದಿನ ನಮ್ಮ ಶಾಲೆಯಲ್ಲೊಂದು ಗಲಾಟೆ ನಡೆದು ಹೋಗಿತ್ತು. 7ನೇ ತರಗತಿ ವಿದ್ಯಾರ್ಥಿಗಳಿಗೆ ಸತೀಶ ಮಾಸ್ತರ್ರು ಸ್ಪೆಷಲ್ ಕ್ಲಾಸ್ ತೆಗೆದುಕೊಳ್ಳುತ್ತಿದ್ದರು. ಅದೊಂದು ದಿನ ಅವರು ಶಾಲೆಗೆ ಬರಲು ಲೇಟಾಗಿತ್ತು. ಅದೇ ಸಂದರ್ಭದಲ್ಲಿ ಒಬ್ಬ ಹುಡುಗ ಹುಡುಗಿಯೊಬ್ಬಳಿಗೆ ಪ್ರಪೋಸ್ ಮಾಡಿಬಿಟ್ಟಿದ್ದ. 7ನೇ ತರಗತಿಯಲ್ಲೇ ಲವ್ ನಡೆದಿತ್ತು. ಆ ಹುಡುಗಿ ಅದೇನು ಹೇಳಿದಳೋ. ಬಹುಶಃ ಯೆಸ್ ಅಂದಿರಬೇಕು. ಹುಡುಗ ನಾಯ್ಕರ ಪೈಕಿ. ಹುಡುಗಿ ಬ್ರಾಹ್ಮಣರವಳು. 7ನೇ ತರಗತಿಯ ಲವ್ ಗಲಾಟೆಗೆ ಕಾರಣವಾಗಿತ್ತು. ಅದ್ಹೇಗೆ ಸತೀಶ ಮಾಸ್ತರ್ರಿಗೆ ಗೊತ್ತಾಯಿತೋ. ಶಾಲೆಗೆ ಬಂದವರೇ ಹುಡುಗ, ಹುಡುಗಿ, ಅವರ ಲವ್ವಿಗೆ ಸಹಾಯ ಮಾಡಿದವರು, ಅವರ ಕ್ಲಾಸಿನವರು ಎಲ್ಲರನ್ನೂ ನಿಲ್ಲಿಸಿ ಹೊಡೆತದ ಮೇಲೆ ಹೊಡೆತ ಕೊಟ್ಟಿದ್ದರು. ಸತತ ಮೂರು ದಿನ ಹೊಡೆದಿದ್ದು ನೆನಪಿದೆ. ಶಾಲೆಯಲ್ಲಿ ಸಿಕ್ಕಾಪಟ್ಟೆ ಕಿಲಾಡಿ ಎನ್ನುವ ಬಿರುದನ್ನು ಗಳಿಸಿಕೊಂಡಿದ್ದ ನನಗೆ ಮೂರು ದಿನಗಳ ಸತೀಶ ಮಾಸ್ತರ್ರ ಪ್ರತಾಪ ನೊಡಿ 15 ದಿನ ಪುಂಗಿ ಬಂದಾಗಿತ್ತು.
                ಕೊನೆಗೊಂದು ದಿನ ಸತೀಶ ಮಾಸ್ತರ್ರ ವರ್ಗಾವಣೆಯಾಗಿತ್ತು. ಅವರು ಅದೆಷ್ಟೇ ರುದ್ರ ಪ್ರತಾಪ ತೋರಿಸಲಿ, ಸಿಟ್ಟು ಮಾಡಲಿ, ಪ್ರೀತಿಯನ್ನು ತೋರಿಸಲಿ, ನಮ್ಮಲ್ಲಿ ಅದೇನೋ ಬಂಧ ಬೆಳೆದು ಬಿಟ್ಟಿತ್ತು. ಶಾಲೆ ಬಿಟ್ಟು ಹೋಗುವಾಗ ಮಾತ್ರ ಪ್ರತಿಯೊಬ್ಬರಿಗೂ ಒಂದೊಂದು ಲೋಟವನ್ನು ಕೊಡುಗೆಯಾಗಿ ಕೊಟ್ಟು ಹೋಗಿದ್ದರು. ಪ್ರೀತಿಯ ವಿದ್ಯಾರ್ಥಿಗಳಿಗೆ ಸತೀಶ ಮಾಸ್ತರ್ರ ನೆನಪಿನ ಕಾಣಿಕೆ ಎಂದು ಬರೆದ ಚೂಪಿ ಮುಕುಳಿಯ ಸ್ಟೀಲ್ ಲೋಟ ಮೊನ್ನೆ ಮೊನ್ನೆ ಮೊನ್ನೆಯ ವರೆಗೂ ನನ್ನ ಬಳಿ ಇತ್ತು. ಇಂತಹ ಸತೀಶ ಮಾಸ್ತರ್ರು ಈಗ ಎಲ್ಲಿದ್ದಾರೋ? ಏನು ಮಾಡುತ್ತಿದ್ದಾರೋ ಗೊತ್ತಿಲ್ಲ. ಮೊದಲ ಶಿಕ್ಷಕರು ಸದಾ ನೆನಪಿನಲ್ಲಿದ್ದಾರೆ.

ಅನಸೂಯಕ್ಕೋರು :
             ಅನಸೂಯಕ್ಕೋರಿಗೆ ನಾವು ಯಾವತ್ತೂ ಅನಸೂಯಕ್ಕೋರು ಎಂದು ಕರೆದಿದ್ದೇ ಇಲ್ಲ. ಹೆಡ್ಡಕ್ಕೋರು ಎಂದು ಅಡ್ಡ ಹೆಸರಿನಲ್ಲಿ ಕರೆದೇ ರೂಢಿ. ನಾನು ಬಿನ್ನೆತ್ತಿಯಲ್ಲಿದ್ದಾಗ ಅನಸೂಯಕ್ಕೋರು ನನಗೆ ಕಲಿಸಲು ಬಂದಿದ್ದರು. ಇವರ ಬಗ್ಗೆ ಹೆಚ್ಚೇನೂ ನನಗೆ ಗೊತ್ತಿಲ್ಲ ಬಿಡಿ. ಬಿನ್ನೆತ್ತಿಯಾಗಿದ್ದ ಕಾರಣ ನಾನು ಬಹಳ ಶಾಲೆಗೆ ಕಳ್ ಬೀಳುತ್ತಿದ್ದೆ. ಆವಾಗೆಲ್ಲಾ ಜೊತೆಯಲ್ಲಿದ್ದ ಹುಡುಗರು ಹೆಡ್ಡಕ್ಕೋರು ಹೊಡಿತ್ರು ತಡಿ ಎಂದು ಹೇಳುತ್ತಿದ್ದುದು ನೆನಪಿನಲ್ಲಿರುತ್ತಿತ್ತು. ಆದರೆ ಬಿನ್ನೆತ್ತಿಯಾದ ಕಾರಣ ಅವರು ಮಾಫಿ ಮಾಡುತ್ತಿದ್ದರು.
                  ಇಂತಹ ಸಂದರ್ಭದಲ್ಲಿಯೇ ಬಯಲು ಸೀಮೆಯ ಒಬ್ಬ ಹುಡುಗ ನನ್ನ ಗೆಳೆಯನಾಗಿ ಸಿಕ್ಕಿದ್ದ. ಅವನ ಹೆಸರೂ ವಿನಯನೇ.  ಹಳೆಯ ಶಾಲೆಯಲ್ಲಿ ಇದ್ದಿದ್ದು 2 ರೂಮುಗಳಾಗಿದ್ದವು. ಜೊತೆಗೆ ಹಾಲು ಡೇರಿ ಎಂದು ಕರೆಯುವ ಒಂದು ಔಟ್ ಹೌಸ್ ಶಾಲೆಯಿಂದ ಸ್ವಲ್ಪ ದೂರದಲ್ಲಿತ್ತು. ಬಿನ್ನೆತ್ತಿ, ಒಂದನೇ ಕ್ಲಾಸ್ ಹಾಗೂ 2ನೇ ಕ್ಲಾಸಿನ ಮಕ್ಕಳು ಈ ಔಟ್ ಹೌಸಿನಲ್ಲಿ ಉಳಿದುಕೊಳ್ಳಬೇಕಿತ್ತು. ಸರಿ ಸುಮಾರು 40 ಜನರಿದ್ದೆವೇನೋ. ಒಂದು ದಿನ ನಾನು ಹಾಗೂ ದೋಸ್ತ ವಿನಯ, ಅಡಕಳ್ಳಿಯ ವಿಜಯ ಔಟ್ ಹೌಸ್ ಶಾಲೆಯಲ್ಲಿ ಕುಳಿತಿದ್ದೆವು. ಎಲ್ಲರೂ ಪಾಠ ಕೇಳುತ್ತಿದ್ದರೆ ನಾವು ಮಾತ್ರ ಸುತ್ತ ಮುತ್ತ ಇದ್ದ ಮರ, ಬೆಟ್ಟ ಗುಡ್ಡ ನೋಡುತ್ತಿದ್ದೆವು. ಆಗಲೇ ಶಾಲೆಗೆ ಹೊಂದಿಕೊಂಡಂತೆ ಇದ್ದ ಮರವೊಂದರ ಮೇಲೆ ದೊಡ್ಡದೊಂದು ಹಾವಿರುವುದು ನಮ್ಮ ಕಣ್ಣಿಗೆ ಬಿದ್ದು ಬಿಟ್ಟಿತ್ತು. ದೊಡ್ಡದಾಗಿ ಗಲಾಟೆ ಎಬ್ಬಿಸಿದೆವು. ಗಲಾಟೆಯಿಂದಾಗಿ ಒಮ್ಮೆಲೆ ಎಲ್ಲರಿಗೆ ದಿಗ್ಭ್ರಮೆ. ಕೊನೆಗೆ ಸತೀಶ ಮಾಸ್ತರ್ರು ಯಾರನ್ನೋ ಕರೆಸಿ ಆ ಹಾವನ್ನು ಕೊಲ್ಲಿಸಿದ್ದು ನೆನಪಿನಲ್ಲಿದೆ. ಈ ಘಟನೆಯ ನಂತರ ಔಟ್ ಹೌಸಿನಲ್ಲಿ ಎಲ್ಲರಿಗೂ ಕಲಿಸುವ ಕಾರ್ಯಕ್ಕೆ ಪುಲ್ ಸ್ಟಾಪ್ ಬಿದ್ದಿತ್ತು. ನಾವೆಲ್ಲ ಕಿಕ್ಕಿರಿದು ತುಂಬಿದ್ದ ಶಾಲೆಯ ಮುಖ್ಯ ಕೊಠಡಿಗೆ ವಾಪಾಸಾಗಿದ್ದೆವು.

ಈಶ್ವರ ನಾಯ್ಕರು :
            ಈಶ್ವರ ನಾಯ್ಕರು ಸತೀಶ ಮಾಸ್ತರು ಕಲಿಸುತ್ತಿದ್ದ ಸಂದರ್ಭದಲ್ಲಿಯೇ ಶಾಲೆಗೆ ಬಂದವರು. ಕೇವಲ 5 ಅಡಿ ಎತ್ತರ ಇದ್ದ ಈ ಮಾಸ್ತರ್ರನ್ನು ಎಲ್ಲರೂ ಕುಳ್ಳೀಶ್ವರ ಮಾಸ್ತರ್ರು ಎಂದೇ ಕರೆಯುತ್ತಿದ್ದರು. ಅವರಿಗೆ ಹೀಗೆ ಕರೆಯುವುದಕ್ಕೂ ಮಜವಾದ ಕಾರಣವಿದೆ. ಈಗಿನಂತೆ ಆಗಲೂ ಮಾಸ್ತರ್ರು ಮಕ್ಕಳ, ಜನರ ಗಣತಿ ಮಾಡಲೇಬೇಕಿತ್ತು. ದಂಟಕಲ್ಲಿಗೆ ಬಂದಿದ್ದ ಈ ಶ್ವರ ಮಾಸ್ತರ್ರನ್ನು ನೋಡಿ ನನ್ನ ಪಕ್ಕದ ಮನೆಯ ಅತ್ತೆಯರು ಸಿಕ್ಕಾಪಟ್ಟೆ ಗೋಳು ಹೊಯ್ದುಕೊಂಡಿದ್ದರು. ಆಗಷ್ಟೇ ಹೈಸ್ಕೂಲನ್ನು ಮುಗಿಸಿದ್ದ ಅತ್ತೆಯರು ಈಶ್ವರ ಮಾಸ್ತರ್ರು ಕುಳ್ಳಗಿದ್ದಾರೆ ಎಂಬುದನ್ನೇ ದೊಡ್ಡ ಜೋಕ್ ಮಾಡಿ ನಗಲು ಆರಂಭಿಸಿದ್ದರು. ಇದರಿಂದಾಗಿ ಅವಮಾನ ಪಟ್ಟುಕೊಂಡಿದ್ದ ಮಾಸ್ತರ್ರು ನೊಂದುಕೊಂಡು ವಾಪಸಾಗಿದ್ದರು. ಆ ದಿನದ ನಂತರ ಈಶ್ವರ ನಾಯ್ಕರ ಪ್ರಸ್ತಾಪ ಬಂದಾಗಲೆಲ್ಲ ಕುಳ್ಳೀಶ್ವರ ಮಾಸ್ತರ್ರು ಎಂದೇ ಕರೆಯುವುದು ರೂಢಿಯಾಗಿತ್ತು.
               ಈ ಈಶ್ವರ ಮಾಸ್ತರ್ರು ಇದ್ದ ಸಂರ್ಭದಲ್ಲಿಯೇ ಒಂದು ಘಟನೆ ನಡೆಯಿತು. ಶಾಲೆಯಲ್ಲಿ ಎಲ್ಲರೂ ಕ್ರಿಕೆಟ್ ಹುಚ್ಚಿಗೆ ಬಲಿಯಾಗಿದ್ದ ಸಂದರ್ಭದಲ್ಲಿ ಸತೀಶ ಮಾಸ್ತರ್ರು ನಮ್ಮಲ್ಲಿ ಪುಟ್ ಬಾಲ್ ಹುಚ್ಚನ್ನು ಬೆಳೆಸಲು ಮುಂದಾಗಿದ್ದರು. ಎಲ್ಲ ಹುಡುಗರನ್ನೂ ಎದುರಿಗೆ ನಿಲ್ಲಿಸಿ ಪುಟ್ ಬಾಲ್ ಕೊಟ್ಟು ಬಿಟ್ಟಿದ್ದರು. ಎಲ್ಲರ ಜೊತೆ ನಾನೂ ಹುರುಪಿನಿಂದ ಆಡಲು ಶುರು ಮಾಡಿದ್ದೆ. ಹೀಗಿದ್ದಾಗಲೇ ದತ್ತಾತ್ರೆಯ ಎಂಬ ದೈತ್ಯ ಹುಡುಗನೊಬ್ಬ ಜೋರಾಗಿ ಓಡಿಬಂದು ನನಗೆ ಢಿಕ್ಕಿ ಹೊಡೆದು ಬಿಟ್ಟಿದ್ದ. ಢಿಕ್ಕಿ ಹೊಡೆದ ರಭಸಕ್ಕೆ ನಾನು ಹಾರಿ ಹೋಗಿ ದೊಪ್ಪನೆ ಬಿದ್ದಿದ್ದೆ. ಬಿದ್ದ ಹೊಡೆತಕ್ಕೆ ಕಲ್ಲಿಗೆ ಜೋರಾಗಿ ನನ್ನ ತಲೆ ಬಡಿದು ಬಿಟ್ಟಿತ್ತು. ಬಡಿದ ರಭಸಕ್ಕೆ ತಲೆ ಒಡೆದು ಬಳಬಳನೆ ರಕ್ತ ಸುರಿಯಲು ಆರಂಭವಾಗಿತ್ತು. ತಕ್ಷಣವೇ ಹೆದರಿದ ಸತೀಶ ಮಾಸ್ತರ್ರು ಆಟವನ್ನು ಖೈದು ಮಾಡಿದ್ದರು. ಓಡಿ ಹೋದ ಕುಳ್ಳೀಶ್ವರ ಮಾಸ್ತರ್ರು ತಾವು ಚಾ ಮಾಡಲು ಬಳಕೆ ಮಾಡುತ್ತಿದ್ದ ಚಾಸೊಪ್ಪನ್ನು ತಂದು ಗಾಯಗೊಂಡ ನನ್ನ ತಲೆಗೆ ಹಾಕಿದ್ದರು. ರಕ್ತ ಬರುವುದು ನಿಂತಿತ್ತು. ಈಗಲೂ ನನ್ನ ತಲೆಯ ಮೇಲೆ ಚಿಕ್ಕಂದಿನ ಆ ಗಾಯ ಹಾಗೇ ಉಳಿದುಕೊಂಡಿದೆ. ಆ ಗಾಯದ ಕಲೆಯನ್ನು ಮುಟ್ಟಿಕೊಂಡಾಗೆಲ್ಲ ಸತೀಶ ಮಾಸ್ತರ್ರು, ಕುಳ್ಳೀಶ್ವರ ಮಾಸ್ತರ್ರು, ಪುಟಬಾಲ್ ಆಟ ಹಾಗೂ ನನಗೆ ಢಿಕ್ಕಿ ಹೊಡೆದ ದತ್ತಾತ್ರೇಯ ನೆನಪಾಗುತ್ತಿರುತ್ತಾರೆ.

(ಮುಂದುವರಿಯುತ್ತದೆ)

ಚುಟುಕು-ಗುಟುಕು

ದೂರದಿಂದ ಹಕ್ಕಿಯೊಂದು
ತನ್ನ ಮರಿಯ ಮನದಿ ನೆನೆದು
ಚಿಕ್ಕ ಗುಡುಕು ನೀಡಲೆಂದು
ಹಾರಿ ಬಂದಿತು ||

ಕಾಡಿನಲ್ಲಿ ಬೇಟೆಯರಸಿ
ನದಿಗಳಲ್ಲಿ ಮೀನು ಹುಡುಕಿ
ಮರಿಯ ಹಸಿವು ತಣಿಸಲೆಂದು
ಗುಟುಕು ತಂದಿತು ||

ಮರಿಯು ತಾನು ದಾಹದಿಂದ
ತಾಯ ತಾನು ಬೇಗ ಕರೆಯೆ
ಮರಿಯ ಧ್ವನಿಯ ತಾನು ಕೇಳಿ
ಓದಿ ಬಂದಿತು ||

ತಾನು ತಂದ ಬೇಟೆಯನ್ನು
ಚಿಕ್ಕ ಪುಟ್ಟ ಮರಿಗೆ ನೀಡಿ
ತನ್ನ ಮರಿಯ ಹಸಿವು ನೀಗಿ
ಖುಷಿಯ ಹೊಂದಿತು ||

ಈ ದೃಶ್ಯ ಕವಿಗೆ ಕಂಡು
ಕವಿಯ ಹೃದಯ ಪುಳಕಗೊಂಡು
ಕವನವೊಂದು ಹೊರಗೆ ಬರಲು
ತವಕಗೊಂಡಿತು ||

ಕವಿಯು ಬರೆದ ನಾಲ್ಕು ಸಾಲೆ
ಬಾವ ತುಂಬಿ ಹಾಡಿದಾಗ
ಬರೆದ ಬರಹವದು ಆಗ
ಕವನವಾಯಿತು ||

**********

(ಈ ಕವಿತೆಯನ್ನು ಬರೆದಿರುವುದು 26-11-2004ರಂದು ನಾಣೀಕಟ್ಟಾದಲ್ಲಿ)
(ಪಿಯುಸಿ ಓದುತ್ತಿದ್ದ ಸಂದರ್ಭ. ಆಗಷ್ಟೇ ಕವಿತೆಗಳನ್ನು ಬರೆಯಲು ಆರಂಭ ಮಾಡಿದ್ದೆ. ಒಂದಿಷ್ಟು ಬಾಲಿಶ ಕವಿತೆಗಳನ್ನು ಬರೆದು ವಗಾಯಿಸಿದ್ದೆ. ಅದನ್ನು ದೋಸ್ತರು ಕಂಡು ನನಗೆ ಕವಿಯೆಂಬ ಪಟ್ಟವನ್ನೂ ಕಟ್ಟಿಬಿಟ್ಟಿದ್ದರು. ಈ ವಿಷಯ ನಮ್ಮ ಕನ್ನಡ ಉಪನ್ಯಾಸಕರಾದ ವಿ. ಎಸ್. ಹೆಗಡೆಯವರ ಕಿವಿಗೂ ಬಿದ್ದಿತ್ತು. ನನ್ನ ಕವಿತೆ ಯಾವ ರೀತಿ ಇರಬಹುದು ಎಂಬುದನ್ನು ಪರೀಕ್ಷೆ ಮಾಡಲು ಬಹುಶಃ ಇಟ್ಟರೇನೋ ಅನ್ನಿಸುತ್ತಿದೆ. ಒಂದು ಕವನ ಬರೆಯುವ ಸ್ಪರ್ಧೆ ಇಟ್ಟರು. ಹಕ್ಕಿಯ ಚಿತ್ರವೊಂದನ್ನು ಇಟ್ಟರು. ಗುಟುಕು ನೀಡುತ್ತಿದ್ದ ಹಕ್ಕಿಯ ಚಿತ್ರ ಅದು. ಅದನ್ನು ನೋಡಿ ಕವಿತೆ ಬರೆಯಬೇಕಿತ್ತು. ಎಲ್ಲರಿಗಿಂತ ಲೇಟಾಗಿ ಬಂದು ಕವಿತೆ ಬರೆಯಲು ಕುಳಿತು ಏನೋ ಬರೆದು ಕೊಟ್ಟು ಬಂದಿದ್ದೆ. ಮಜಾ ಅಂದರೆ ನನ್ನ ಕವಿತೆಗೆ ಮೊದಲ ಸ್ಥಾನ ಬಂದಿತ್ತು. ನನ್ನ ಕವಿತೆ ಚನ್ನಾಗಿರಲಿಲ್ಲ ಎಂದುಕೊಂಡಿದ್ದೆ. ಮೊದಲ ಪ್ರಶಸ್ತಿ ಬಂದ ನಂತರ ಅನ್ನಿಸಿದ್ದೆಂದರೆ ಉಳಿದವರೆಲ್ಲರೂ ನನಗಿಂತ ಕೆಟ್ಟದಾಗಿ ಬರೆದಿದ್ದರು ಎನ್ನುವುದು. ಅದೇ ಕವಿತೆ ಇಲ್ಲಿದೆ ನೋಡಿ. 2004-05ನೇ ಸಾಲಿನ ಕವಿತಾ ರಚನೆ ಸ್ಪರ್ಧೆಯಲ್ಲಿ ಮೊಟ್ಟಮೊದಲ ಬಹುಮಾನ ತಂದುಕೊಟ್ಟ ಕವಿತೆ)

ಅಘನಾಶಿನಿ ಕಣಿವೆಯಲ್ಲಿ-19

           ತೊಂಭತ್ತು ವಸಂತಗಳ ಮೇಲೆ ನಾಲ್ಕೈದು ವಸಂತಗಳನ್ನು ಕಳೆದಿದ್ದ ಗಣಪಜ್ಜನ ಬಳಿ ಮಾತನಾಡಿದಂತೆಲ್ಲ ಬೆರಗಿಗೆ ಕಾರಣವಾದ. ನಮ್ಮ ಹಿರಿಯರು ಅದೆಷ್ಟೆಲ್ಲ ಕೆಲಗಳಲ್ಲಿ ಕ್ರಿಯಾಶೀಲರಾಗಿ ಇರುತ್ತಿದ್ದರಲ್ಲ ಎನ್ನಿಸಿತು. ಗಣಪಜ್ಜನ ನೆನಪಿನ ಖಜಾನೆಯೊಳಗಿನ ಒಂದೆರಡು ಮುತ್ತುಗಳನ್ನಷ್ಟೇ ಯುವಪಡೆ ಪಡೆದುಕೊಂಡಿತ್ತು. ಅಷ್ಟಕ್ಕೇ ಅಚ್ಚರಿಯೊಂದಿಗೆ ಬಾಯಿ ಬಾಯಿ ಬಿಡಲು ಆರಂಭವಾಗಿತ್ತು. ಖಜಾನೆಯಲ್ಲಿ ಇನ್ನೂ ಲಕ್ಷಾಂತರ ಮುತ್ತುಗಳು ಬಾಕಿಯಿದ್ದವು. ಅನಂತ ಭಟ್ಟನ ಅಪ್ಪೆಮಿಡಿ ತಳಿಯನ್ನು ರಕ್ಷಣೆ ಮಾಡಿ, ಬೆಳೆಸಿದ ಬಗೆ, ಅಡಿಕೆಯಿಂದ ಪಾನೀಯವನ್ನು ತಯಾರು ಮಾಡಿದ್ದು, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಸೆರೆಮನೆ ವಾಸ ಇನ್ನೂ ಅದೆಷ್ಟೋ ವಿಷಯಗಳು ಗಣಪಜ್ಜನ ಬಾಯಿಂದ ಕೇಳಬೇಕೆನ್ನಿಸಿತ್ತು. ಮತ್ತೊಮ್ಮೆ ಇವುಗಳನ್ನು ಕೇಳಲು ಬರುತ್ತೇವೆ ಎಂದು ಎಲ್ಲರೂ ವಾಪಸಾದರು.
              ವಿನಾಯಕನ ಮನೆಗೆ ಮರಳಿದ ನಂತರವೂ ಗಣಪಜ್ಜ ಮಾತುಗಳು ಎಲ್ಲರ ಮನಸ್ಸಿನಲ್ಲಿ ತಕ ಥೈ ಆಡುತ್ತಿತ್ತು. ಮತ್ತೆ ಮತ್ತೆ ಚರ್ಚೆ ಮಾಡಿದರು ಎಲ್ಲರೂ. ಹುಲಿ ಹೊಡೆದ ಗಣಪಜ್ಜ ಜಿಮ್ ಕಾರ್ಬೆಟ್ಟನ ಹಾಗೇ ಆಗಿಬಿಟ್ಟಿದ್ದ. ವಿನಾಯಕನ ಮನೆಯಲ್ಲಿ ಈ ವಿಷಯವನ್ನು ಚರ್ಚೆ ಮಾಡುತ್ತಿದ್ದಾಗಲೇ ಒಂದಿಬ್ಬರು ಹಿರಿಯರು ಗಣಪಜ್ಜ ಹುಲಿ ಹೊಡೆದಿರಲಿಲ್ಲವೆಂದೂ ಮುತ್ಮುರ್ಡಿನ ಸುಬ್ಬಜ್ಜ ಹುಲಿ ಹೊಡೆದವನೆಂದೂ ಆಗ ಜೊತೆಯಲ್ಲಿ ಇದ್ದವನು ಮಾತ್ರ ಗಣಪಜ್ಜನೆಂದೂ ಹೇಳಿದರು. ಗಣಪಜ್ಜನೇ ಹುಲಿ ಹೊಡೆದನಾ ಅಥವಾ ಸುಬ್ಬಜ್ಜ ಹೊಡೆದನಾ ಎನ್ನುವ ಬಗ್ಗೆ ಕೆಲಕಾಲ ಚರ್ಚೆಯೂ ನಡೆಯಿತು. ಕೊನೆಗೆ ಯಾರೇ ಹುಲಿ ಹೊಡೆದಿರಲಿ, ಅದೊಂದು ವಿಶೇಷ ಘಟನೆಯೇ ಹೌದು. ಹುಲಿಯನ್ನು ಹೊಡೆಯುವುದು ಸಾಮಾನ್ಯ ಕೆಲಸವಲ್ಲ. ಗಣಪಜ್ಜ ತಾನು ಹುಲಿ ಹೊಡೆದಿದ್ದೇನೆ ಎಂದು ಘಂಟಾ ಘೋಷವಾಗಿ ಹೇಳುತ್ತಿದ್ದಾನೆ ಎಂದರೆ ಆತ ಖಂಡಿತವಾಗಿಯೂ ಹೊಡೆದಿರಲೇಬೇಕು ಎಂದುಕೊಂಡರು ಎಲ್ಲರೂ.

***

            `ಹಾಗಾದರೆ ಬಂದವರು ಯಾರು? ಪೋಲೀಸರೇನಲ್ಲವಲ್ಲ.' ಎಂದು ಆ ಗುಂಪಿಗೆ ನಾಯಕನೆನ್ನಿಸಿಕೊಂಡವನು ಕೇಳಿದ್ದ.
            `ಅಲ್ಲ. ಅವರು ಪೊಲೀಸರಲ್ಲ. ಪೊಲೀಸರಿಗೆ ಮಾಹಿತಿ ಕೊಡುವವರೂ ಅಲ್ಲ. ಅದೇನೋ ಕಾಡು ಸುತ್ತುವವರಂತೆ. ಕಾಡಿನ ಬಗ್ಗೆ ರಿಸರ್ಚ್ ಮಾಡುವವರಂತೆ ನೋಡಿ. ಪಾತರಗಿತ್ತಿಯ ಬಗ್ಗೆ ಮಾಹಿತಿ ಕಲೆಹಾಕಲು ಬಂದಿದ್ದಾರಂತೆ. ಅವನೊಬ್ಬನಿದ್ದಾನಲ್ಲ ಆ ದಂಟಕಲ್ಲಿನಲ್ಲಿ ಓದಿಕೊಂಡವನು. ವಿನಾಯಕ. ಅವನ ನೆಂಟರಂತೆ ನೋಡಿ. ಒಂದಿಬ್ಬರು ಹೊರಗಿನಿಂದಲೂ ಬಂದಿದ್ದಾರಂತೆ. ಇವರಿಂದ ನಮಗೆ ಏನೂ ತೊಂದರೆಯಾಗಲಿಕ್ಕಿಲ್ಲ' ಎಂದು ಇನ್ನೊಬ್ಬ ಮಾಹಿತಿ ನೀಡಿದ.
              `ಊಹೂ. ಅವರು ಯಾವುದೇ ಕಾರಣಕ್ಕೆ ಬಂದಿರಲಿ. ಅವರನ್ನು ನಂಬುವ ಮುಟ್ಠಾಳತನವಂತೂ ಮಾಡಲೇಬಾರದು. ಮೊದಲು ಅವರನ್ನು ನಮ್ಮ ಕಾಡಿನಿಂದ ದೂರಕ್ಕೆ ಓಡಿಸಲೇಬೇಕಾದ ಅನಿವಾರ್ಯತೆಯಿದೆ. ಅದಕ್ಕೆ ಅಗತ್ಯವಾದ ಎಲ್ಲ ಕ್ರಮ ಕೈಗೊಳ್ಳಿ. ಎಚ್ಚರ ಎಲ್ಲಿಯೂ ಇದು ನಮ್ಮ ಕೆಲಸ ಎಂದು ಗೊತ್ತಾಗದಂತೆ ಮುಂದುವರಿಯಿರಿ. ಮೊದಲು ಅವರನ್ನು ಇಲ್ಲಿಂದ ಕಳಿಸಿ.' ಎಂದು ಆಜ್ಞೆ ನೀಡಿದ್ದ ಮುಖ್ಯಸ್ಥ. ಮಾಹಿತಿ ನೀಡಲು ಬಂದಿದ್ದವನು ಸರಿ ಎಂದು ಹೇಳಿ ಅಲ್ಲಿಂದ ಹೊರಟು ಹೋಗಿದ್ದ.

***

            ದಂಟಕಲ್ ಎಂದ ಕೂಡಲೇ ಗತ ಇತಿಹಾಸದಲ್ಲಿ  ಕಳೆದುಹೋಗಿರುವ ವಿದ್ಯುತ್ ಉತ್ಪಾದನಾ ಕೇಂದ್ರ ಹೇಗೆ ನೆನಪಿಗೆ ಬರುತ್ತದೆಯೋ ಅದೇ ರೀತಿ ಅಪ್ಪೆಮಿಡಿಯೂ ಕೂಡ. ಉಪ್ಪಿನಕಾಯಿ ಪ್ರಿಯರಿಗೆಲ್ಲ ಅಪ್ಪೆಮಿಡಿ ಪರಮಾಪ್ತ. ಅಚ್ಚುಮೆಚ್ಚು. ಅಪ್ಪೆಮಿಡಿ ಪ್ರಿಯರೆಲ್ಲ ಅನಂತ ಭಟ್ಟನ ಅಪ್ಪೆಮಿಡಿಯನ್ನು ಇಷ್ಟಪಡುತ್ತಾರೆ. ಇಂತಹ ಅಪ್ಪೆಮಿಡಿ ತಳಿ ಅವಸಾನದ ಅಂಚಿನಲ್ಲಿದ್ದಾಗ ಅದನ್ನು ಉಳಿಸಿ ಬೆಳೆಸಿದ ಕೀರ್ತಿ ದಂಟಕಲ್ಲಿಗೆ ಸಲ್ಲುತ್ತದೆ. ದಂಟಕಲ್ಲಿನ ಸ್ವಾತಂತ್ರ್ಯ ಹೋರಾಟಗಾರ ಗಣೇಶಜ್ಜ, ಗಣೇಶಜ್ಜನ ಮಗ ಗಣಪಜ್ಜ, ದೊಡ್ಡಮನೆಯ ವಿಘ್ನೇಶ್ವರ ಹೆಗಡೇರು ಈ ಮುಂತಾದವರೆಲ್ಲ ಅನಂತ ಭಟ್ಟನ ಅಪ್ಪೆಮಿಡಿ ತಳಿಯನ್ನು ಸಂರಕ್ಷಿಸಿದವರು ಎಂದರೆ ತಪ್ಪಾಗಲಿಕ್ಕಿಲ್ಲ.
              ಹಳೆಯ ಇತಿಹಾಸದ ಘಟನೆಗಳನ್ನು ಈಗಿನ ಜಮಾನಾಕ್ಕೆ ಹೇಳಬೇಕೆಂದರೆ ಗಣಪಜ್ಜ ಮಾತ್ರ ಉಳಿದುಕೊಂಡಿದ್ದ. ಊರಿನಲ್ಲಿ ಶತ ವಸಂತಗಳ ಹತ್ತಿರ ವಯಸ್ಸನ್ನು ಕಂಡಿದ್ದವನು ಗಣಪಜ್ಜ ಮಾತ್ರವೇ. ಆತ ಮಾತ್ರ ತನ್ನೂರಿನಲ್ಲಿ ನಡೆದ 1 ಶತಮಾನದ ಘಟನೆಗಳನ್ನು ಹೇಳಬಲ್ಲವನಾಗಿದ್ದ. ಆದ್ದರಿಂದ ನಮ್ಮ ಕಥೆಯ ನಾಯಕರು ಆತನ ಬೆನ್ನು ಬಿದ್ದಿದ್ದರು. ವಯಸ್ಸಾಗಿದ್ದರೂ ಗಪ್ಪಜ್ಜನಿಗೆ ಹರೆಯದ ಹುಡುಗರು ತನ್ನ ಬಳಿ ಮಾತನಾಡಲು ಬಂದ ತಕ್ಷಣ ಯವ್ವನ ಮರಳಿದಂತೆ ಕ್ರಿಯಾಶೀಲನಾಗಿದ್ದ. ಹೊಸ ಹುರುಪಿನೊಂದಿಗೆ ಕಾರ್ಯಪ್ರವೃತ್ತನೂ ಆಗಿದ್ದ.
             ಅಪ್ಪೆಮಿಡಿಯ ಪರಿಚಯ ಮಾಡಿಕೊಡು ಎಂದು ಯುವಪಡೆ ಹೇಳಿದ ತಕ್ಷಣವೇ ಗಪ್ಪಜ್ಜ ತನ್ನ ತೋಟದ ಕಡೆಗೆ ಎಲ್ಲರನ್ನೂ ಕರೆದೊಯ್ದಿದ್ದ. ತೋಟದ ಸಾಲಿನಲ್ಲಂತೂ ಎತ್ತ ನೋಡಿದರತ್ತ ಅಪ್ಪೆಮಿಡಿಯ ಮರಗಳು. 30-40-50 ವರ್ಷಗಳಾಗಿದ್ದ ಅಪ್ಪೆಯ ಮರಗಳು. ಎಪ್ರಿಲ್ ತಿಂಗಳಾಗಿದ್ದ ಕಾರಣ ಆಗಷ್ಟೇ ಮಾವಿನ ಕಸ್ತ್ರಗಳು ಕಾಯಾಗುತ್ತಿದ್ದವು. ಒಂದೆರಡು ಕಡೆಗಳಲ್ಲಿ ಕಾಯಿಗಳನ್ನು ಕೊಯ್ಯಲೂ ಆರಂಭಿಸಲಾಗಿತ್ತು. ಹೋದವರೇ ಅಜ್ಜ ತಮ್ಮ ಜಮೀನಿನಲ್ಲಿದ್ದ ಅಪ್ಪೆಮಿಡಿಯ ಮರಗಳನ್ನೆಲ್ಲ ತೋರಿಸಿದರು. ಒಂದೆರಡು ಕಡೆಗಳಲ್ಲಿ ಕೊಯ್ಯುತ್ತಿದ್ದ ಅಪ್ಪೆಮಿಡಿಗಳನ್ನು ತಿನ್ನಲೂ ಕೊಟ್ಟರು. `ಮಿಡಿಯನ್ನು ಚೂರು ಮಾಡಿ ಬಾಯಿಗಿಟ್ಟವರಿಗೆ ಒಮ್ಮೆಲೆ ಆಹ್.. ಎನ್ನುವ ಉದ್ಘಾರ. ಅಷ್ಟು ರುಚಿಕರವಾಗಿತ್ತು ಅಪ್ಪೆಮಿಡಿ.
           `ತಮಾ ಯಾರಾದ್ರೂ ಬೆಂಕಿಪೆಟ್ಗೆ ತಂಜ್ರಾ?' ಎಂದು ಕೇಳಿದ್ದ ಗಣಪಜ್ಜ.
           ಪ್ರದೀಪ ತನ್ನ ಬಳಿ ಲೈಟರ್ ಇದೆ ಎಂದು ಹೇಳಿದವನೇ ಕೊಟ್ಟ. `ತಮಾ ನೀ ಲೈಟರ್ ಹಚ್ಚು. ನಾ ಎಂತದ್ದೋ ತೋರಿಸ್ತಿ' ಎಂದರು. ಅಲ್ಲೇ ಇದ್ದ ಅಪ್ಪೆಮಿಡಿಯನ್ನು ಅದರ ಚೊಟ್ಟಿನ ಸಮೇತ ತಂದರು. `ಈಗ ಲೈಟರ್ ಹಚ್ಚು' ಎಂದರು. ಪ್ರದೀಪ ಲೈಟರ್ ಹಚ್ಚಿದ ತಕ್ಷಣ ಅಪ್ಪೆಮಿಡಿಯ ಚೊಟ್ಟನ್ನು ಚಟ್ಟನೆ ಮುರಿದರು. ಮುರಿದ ರಭಸಕ್ಕೆ ಅಪ್ಪೆಮಿಡಿಯ ಸೊನೆ ಭುರ್ರನೆ ಹಾರಿತು. ಲೈಟರ್ ನಲ್ಲಿ ಹೊತ್ತಿಸಿದ್ದ ಬೆಂಕಿಗೆ ಆ ಸೊನೆಯನ್ನು ಹಿಡಿದರು ಗಣಪಜ್ಜ. ಇದ್ದಕ್ಕಿದ್ದಂತೆ ಆ ಸೊನೆಗೆ ಭರ್ರನೆ ಬೆಂಕಿ ಹೊತ್ತಿಕೊಂಡಿತು. ಅಷ್ಟೇ ಅಲ್ಲದೇ ಅಪ್ಪೆಮಿಡಿಯ ಚೊಟ್ಟಿಗೂ ಬೆಂಕಿ ಹಿಡಿದು ಕೆಲಕಾಲ ಸರಸರನೆ ಉರಿಯಿತು. ಎಲ್ಲರ ಕಣ್ಣಲ್ಲೂ ವಿಸ್ಮಯ. `ನೋಡಿ ಯಾವ ಅಪ್ಪೆಮಿಡಿಯ ಸೊನೆಗೆ ಚನ್ನಾಗಿ ಬೆಂಕಿ ಹೊತ್ತಿಕೊಳ್ಳುತ್ತದೆಯೋ ಅಂವು ಅತ್ಯುತ್ತಮ ತಳಿಯ ಅಪ್ಪೆಮಿಡಿ ಎನ್ನುವ ಮಾತಿದ್ದು. ನೋಡಿ ಈ ಅಪ್ಪೆಮಿಡಿಗೆ ಅದ್ಯಾವ್ ರೀತಿ ಬೆಂಕಿ ಹತ್ತಿಗ್ಯಂಜು ಹೇಳಿ. ಹಿಂಗ್ ಇರವು ಅಪ್ಪೆಮಿಡಿ ಅಂದ್ರೆ. ಅಗ್ ದಿ ಹೈಕ್ಲಾಸ್ ಅಪ್ಪೆಮಿಡಿ ಇದು.' ಎಂದರು ಅಜ್ಜ.
            `ಅಪ್ಪೆಮಿಡಿಯ ಸೊನೆಯಲ್ಲಿ ಸ್ಪರಿಟ್ ಇರುತ್ತದೆ ಎಂದು ಕೇಳಿದ್ದೆ..' ಎಂದ ವಿನಾಯಕ
             `ಸ್ಪರಿಟ್ಟೋ ಎಂತದ್ದೋ.. ಯಂಗಂತೂ ಗೊತ್ತಿಲ್ಲೆ ತಮಾ. ಅನಂತಭಟ್ಟನ ಅಪ್ಪೆಮಿಡಿಯ ಸೊನೆಗೆ ಚೊಲೋ ಬೆಂಕಿ ಹತ್ತಿಗ್ಯತ್ತು ನೋಡು. ಅದೇ ರೀತಿ ಜೀರಿಗೆ ವಾಸನೆ, ಯಾಲಕ್ಕಿ ವಾಸನೆ, ಗುಂಡಪ್ಪೆ ಇವ್ಕೂ ಚೊಲೋ ಬೆಂಕಿ ಹತ್ತಿಗ್ಯತ್ತು. ಆದರೆ ವಾಸನೆ ಇಲ್ಲದ್ದೇ ಹೋದ ಅಪ್ಪೆಮಿಡಿಗೆ ಹಿಂಗ್ ಬೆಂಕಿ ತಗತ್ತಿಲ್ಲೆ ನೋಡಿ..' ಎಂದರು ಗಣಪಜ್ಜ.
             ಹಳ್ಳಿಗರ ಜ್ಞಾನ ಅದೆಷ್ಟು ವಿಶಿಷ್ಟವಾಗಿರುತ್ತದೆಯಲ್ಲ ಎಂದುಕೊಂಡರು ಎಲ್ಲರೂ. `ದೇಶಾದ್ಯಂತ ಅಪ್ಪೆಮಿಡಿ ಮರಗಳನ್ನು ನೆಟ್ಟು ಬಿಡೋಣ. ಆಮೇಲೆ ಅದರ ಸೊನೆ ಸಂಗ್ರಹ ಮಾಡಿ ಇಂಧನ ತಯಾರಿಸೋಣ. ದೇಶಕ್ಕೆ ಅಗತ್ಯವಾಗಿರುವ ಪೆಟ್ರೂಲ್, ಡಿಸೇಲ್, ಅಡುಗೆ ಇಂಧನದ ಹೊರೆ ತಪ್ಪುತ್ತದೆ ಅಲ್ಲವಾ?' ಎಂದ ಪ್ರದೀಪ. ಎಲ್ಲರೂ ಒಮ್ಮೆಲೆ ನಕ್ಕರು.
            `ತಮಾ.. ಅಪ್ಪೆಮಿಡಿ ಸೊನೆ ಸಂಗ್ರಹ ಮಾಡೋದು ಸುಲಭ ಅಲ್ಲ. 100 ಎಂ. ಎಲ್ ಸೊನೆ ಸಂಗ್ರಹ ಮಾಡವು ಅಂದ್ರೆ ಹೆಚ್ಚೂ ಕಡಿಮೆ 10 ಸಾವಿರಕ್ಕೂ ಜಾಸ್ತಿ ಅಪ್ಪೆಮಿಡಿ ಬೇಕಾಗ್ತು ನೋಡು. ಒಂದೊಂದು ಮರಕ್ಕೆ 10 ಲಕ್ಷ ಕಾಯಿ ಬಿಟ್ಟರೆ ಹೆಚ್ಚೂ ಕಡಿಮೆ 1 ಲೀಟರ್ ಸೊನೆ ಸಂಗ್ರಹ ಮಾಡ್ಲಕ್ಕು. ಅಪ್ಪೆಮಿಡಿ ಸೊನೆಗೆ 100 ಎಂ.ಎಲ್.ಗೆ ಹೆಚ್ಚೂ ಕಡಿಮೆ 1000 ರೂಪಾಯಿ ಇದ್ದು. ಇದು ಸುಲಭ ಅಲ್ದೋ. ದುಬಾರಿ ಆಗ್ತು. ನಿನ್ ಪ್ಲಾನು ಬಿಟ್ಟಾಕು. ಆದರೆ ಅಪ್ಪೆಮಿಡಿ ಮರ ಬೇಳೆಸು ಅಡ್ಡಿಲ್ಲೆ..' ಎಂದರು ಗಣಪಜ್ಜ.
              ಬೆಂಕಿಗೆ ಅನಂತಭಟ್ಟನ ಅಪ್ಪೆಮಿಡಿ ಸೊನೆ ಸುಟ್ಟ ವಾಸನೆ ಘಮ್ಮೆನ್ನುತ್ತಿತ್ತು. ಅಪ್ಪೆಮಿಡಿ ಚೂರನ್ನು ತಿಂದವರಿಗೆ ಬಾಯೆಲ್ಲ ಅಪ್ಪೆಮಿಡಿ ಸುವಾಸನೆಯಾದಂತೆ ಅನ್ನಿಸುತ್ತಿತ್ತು. ಬಾಯಿಂದ ತೇಗು ಬಂದರೂ ಅಪ್ಪೆಮಿಡಿಯ ಸುವಾಸನೆಯೇ ಬರುತ್ತಿತ್ತು. `ತಮಾ ಇದು ಬಹಳ ಜೀರ್ಣಕಾರಿ. ನೀವ್ ಎಷ್ಟೇ ಊಟ ಮಾಡ್ಕ್ಯಂಡ್ ಬಂದಿದ್ದರೂ ಅಪ್ಪೆಮಿಡಿ ಬೇಗನೇ ಜೀರ್ಣ ಮಾಡಿ ಹಾಕ್ ಬಿಡ್ತು. ಅದ್ಕೇ ಉಪ್ಪಿನಕಾಯಿಗೆ ಅನಂತಭಟ್ಟನ ಮಿಡಿ ಅಂದ್ರೆ ಶ್ರೇಷ್ಟ ಅಂತಾ ಹೇಳ್ತ. ಇಡೀ ಉಪ್ಪಿನಕಾಯಿ ಭರಣಿಗೆ 100 ರು ಅಪ್ಪೆಮಿಡಿ ಹಾಕಿ ಅದರಲ್ಲಿ 5-6 ಅನಂತಭಟ್ಟನ ಅಪ್ಪೆಮಿಡಿ ಮಿಕ್ಸ್ ಮಾಡಿದ್ರೆ ಇಡೀ ಭರಣಿಯ ರುಚಿಯನ್ನೇ ಬದಲು ಮಾಡಿಬಿಡ್ತಿ ಇದು. ಎಲ್ಲ ಅಪ್ಪೆ ಮಿಡಿನೂ ಅನಂತ ಭಟ್ಟನ ಅಪ್ಪೆಮಿಡಿಯೇನೋ ಅಂಬಂತೆ ಮಾಡತು' ನೋಡಿ ಎಂದರು ಗಣಪಜ್ಜ.
              ತಿಂದರೆ ತೆಂಗಿನ ಕಾಯಿಯ ಚೂರಿನಂತೆ ಕರಂ ಕರಂ ಎನ್ನುತ್ತಿದ್ದ ಅಪ್ಪೆಮಿಡಿ ಅಷ್ಟು ಹುಳಿಯೂ ಆಗಿರಲಿಲ್ಲ. ಮಾರುಕಟ್ಟೆಯಲ್ಲಿ ಮಿಕ್ಸ್ ಉಪ್ಪಿನಕಾಯಿಯ ನಾಲ್ಕು ಪಟ್ಟು ದರ ಅನಂತ ಭಟ್ಟನ ಅಪ್ಪೆಮಿಡಿ ಉಪ್ಪಿನಕಾಯಿಗೆ ಇದೆ ಎಂಬುದು ಎಲ್ಲರಿಗೂ ನೆನಪಾಯಿತು. `ಅಜ್ಜಾ.. ಈ ಅನಂತಭಟ್ಟನ ಅಪ್ಪೆಮಿಡಿ ತಳಿ ಉಳಿಸಿದ ಸಾಹಸಗಾಥೆ ನಂಗಕ್ಕಿಗೆ ಹೇಳಿ' ಎಂದ ವಿನಾಯಕ.
             `ಅದೊಂದ್ ದೊಡ್ಡ ಕಥೆ. ಈಗ ಇಲ್ಲೆಲ್ಲಾ ಇಷ್ಟೆಲ್ಲಾ ಅನಂತಭಟ್ಟನ ಅಪ್ಪೆಮಿಡಿ ಮರಗಳು ಕಾಣ್ತಲಾ. ಆದರೆ ಮೊದಲು ಇಲ್ಲೆಲ್ಲೂ ಅಪ್ಪೆಮಿಡಿ ಮರ ಇತ್ತಿಲ್ಲೆ. ಬಾಳೂರು ಹತ್ತಿರ ಭಯಂಕರ ಎತ್ತರದ ಮರ ಒಂದಿತ್ತು. ಅದೇ ಈ ನಮ್ಮೆ ಎಲ್ಲಾ ಅನಂತ ಭಟ್ಟನ ಅಪ್ಪೆಮಿಡಿ ಮರಗಳ ಅಪ್ಪ-ಅಮ್ಮ. ಅಂತಹ ದೈತ್ಯ ಮರವನ್ನ ಯಾರೂ ಹತ್ತತ್ವಿದ್ದಿಲ್ಲೆ. ಆದರೆ ಅನಂತಭಟ್ಟ ಹೇಳಂವ ಒಬ್ಬಂವ ಪ್ರತಿ ವರ್ಷ ಆ ಮರ ಹತ್ತಿ ಅಪ್ಪೆಮಿಡಿ ಕೊಯ್ಕಂಡು ಬರ್ತಿದ್ದ. ಒಂದ್ ವರ್ಷ ಅಂವ ಮರದಿಂದ ಉರ್ಡಿ ಬಿದ್ದು ಸತ್ತೋದ. ಆ ಮೇಲೆ ಈ ಅಪ್ಪೆಮಿಡಿಗೆ ಅನಂತಭಟ್ಟನ ಅಪ್ಪೆಮಿಡಿ ಎಂದೂ ಹೆಸರು ಬಂತು. ಮರಕ್ಕೆ ಅನಂತಭಟ್ಟನ ಅಪ್ಪೆಮರ ಅಂತನೂ ಹೆಸರು ಬಂತು. ಮರಕ್ಕೆ ಭಯಂಕರ ವಯಸ್ಸಾಗಿತ್ತು. ಯನ್ನ ಅಪ್ಪಯ್ಯ ಗಣೇಶ ಹೆಗಡೇರು ಆ ಮರದ ಟೊಂಗೆ ತಗಂಡು ಬಂದು ಅದರ ಕಸಿ ಮಾಡಿ ಬೆಳೆಸಿದ್ರು. ಈಗ ದಂಟಕಲ್ ತುಂಬ ಅನಂತಭಟ್ಟನ ಅಪ್ಪೆಮರವೇ ಕಾಣಿಸ್ತು. ಇಷ್ಟೇ ಅಲ್ಲ. ಈ ಅಪ್ಪೆಮರ ಎಲ್ಲ ಕಡೆಗಳಲ್ಲಿ ಸೀಮೋಲ್ಲೋಂಘನವೂ ಮಾಡಿದ್ದು.'
               `ಕನ್ನಡದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೆ. ಶಿವರಾಮ ಕಾರಂತರ ಸಹೋದರ ಕೋ.ಲ. ಕಾರಂತರು ಈ ಅಪ್ಪೆಮಿಡಿ ಕಸಿ ಮಾಡಿ ತಮ್ಮೂರಲ್ಲಿ ಅನಂತಭಟ್ಟನ ಅಪ್ಪೆಮರದ ಫಾರ್ಮನ್ನೇ ಮಾಡಿದ್ದರು. ಆದರೆ ಅವರ ಊರಿನಲ್ಲಿ ಮರಕ್ಕೆ ಒಂದೇ ಒಂದೂ ಕಾಯಿ ಬಂಜಿಲ್ಲೆ. ಅಘನಾಶಿನಿ ನದಿ ದಡದ ಮೇಲೆ ಇದ್ದರೆ ಮಾತ್ರ ಅನಂತಭಟ್ಟನ ಅಪ್ಪೆಮರ ಕಾಯಿ ಬಿಡ್ತು ಹೇಳಿ ಮಾತಿದ್ದು. ಅದ್ಕೆ ಬೇರೆ ಕಡೆ ಎಲ್ಲೂ ಕಾಯಿ ಬಿಡ್ತಿಲ್ಲೆ. ಇಲ್ಲಿ ಇಷ್ಟೆಲ್ಲ ಹುಲುಸಾಗಿ ಬೆಳೆಯುವ ಅಪ್ಪೆಮಿಡಿ, ಅಪ್ಪೆಮರ ಬೇರೆ ಕಡೆ ಇಷ್ಟ ಚೊಲೋ ಬೆಳಿತಿಲ್ಲೆ. ಬಹುಶಃ ಈ ಮಣ್ಣಿನ ಗುಣ ಈ ಅಪ್ಪೆಮಿಡಿ ಮರಕ್ಕೆ ಚೊಲೋ ಆಗ್ಲಕ್ಕು. ಇಲ್ಲಿಯ ಜೈವಿಕ ವಿಕಾಸ ಅನಂತಭಟ್ಟನ ಅಪ್ಪೆಮಿಡಿ ಮರಕ್ಕೆ ಚೊಲೋ ಆಗ್ತಿಕ್ಕು ನೋಡಿ' ಎಂದರು ಗಣಪಜ್ಜ.
             ಅಪ್ಪೇಮಿಡಿಯ ವಿಶಿಷ್ಟತೆಗಳು ಎಲ್ಲರಲ್ಲಿಯೂ ಬೆರಗನ್ನು ತಂದಿತ್ತು. `ತಗಳಿ ಈ ಅಪ್ಪೆಮಿಡಿನ ಮನೆಗೆ ತಗಂಡು ಹೋಗಿ ಚಟ್ನಿ, ಅಪ್ಪೆಹುಳಿ ಮಾಡ್ಕಂಡು ಊಟ ಮಾಡಿ' ಎಂದು 100ಕ್ಕೂ ಹೆಚ್ಚು ಅಪ್ಪೆಮಿಡಿಗಳನ್ನು ಕೊಟ್ಟರು. ಮಾರುಕಟ್ಟೆಯಲ್ಲಿ 1 ಅನಂತಭಟ್ಟನ ಅಪ್ಪೆಮಿಡಿಗೆ ಕನಿಷ್ಟ 10 ರು. ಇದೆ ಎಂದು ವಿನಾಯಕ ಪಿಸುಗುಟ್ಟಿದ. ವಾಪಾಸು ಮನೆಗೆ ಬಂದು ಅಪ್ಪೆಮಿಡಿ ಚಟ್ನಿ ಮಾಡಿಸಿಕೊಂಡು ತಿಂದರು ಎಲ್ಲರೂ. ಅಪ್ಪೆಮಿಡಿಯ ಅಪ್ಪೆಹುಳಿ ಮಾಡಿಸಿಕೊಂಡು ಊಟ ಮಾಡಿದರು. ಪ್ರದೀಪನಂತೂ ಎಂದೂ ಕಾಣದವನಂತೆ ಅಪ್ಪೆಹುಳಿಯನ್ನು ಊಟಕ್ಕೆ ಬಡಿಸಿಕೊಂಡು ಉಂಡ. ಅಷ್ಟೇ ಅಲ್ಲದೇ ಅಪ್ಪೆಹುಳಿಯನ್ನು ಪದೇ ಪದೆ ಕುಡಿದ. ಪ್ರದೀಪ ಅಪ್ಪೆಹುಳಿಯ ಪರಮಾಪ್ತ ಅಭಿಮಾನಿಯಾಗಿಬಿಟ್ಟಿದ್ದ.
           ಅಷ್ಟರಲ್ಲಿ ತುಂಟತನ ಮಾಡಿದ ವಿನಾಯಕ `ಈ ಅಪ್ಪೆಹುಳಿ ಇದೆಯಲ್ಲ ಇದು ಬ್ರಾಹ್ಮಣರ ಪಾಲಿಗೆ ವೈನ್ ಎಂದೇ ಕರೆಸಿಕೊಳ್ಳುತ್ತದೆ. ಅಷ್ಟು ಕಿಕ್ ಕೊಡುತ್ತದೆ ಮಾರಾಯಾ. ಇದನ್ನು ಊಟ ಮಾಡಿದರೆ ಸಿಕ್ಕಾಪಟ್ಟೆ ನಿದ್ದೆ ಬರುತ್ತದೆ. ಅಷ್ಟೇ ಅಲ್ಲ ಮಂಪರೂ ಕೂಡ.. ನೀನು ಅಷ್ಟೆಲ್ಲ ಊಟ ಮಾಡಿದೆಯಲ್ಲ. ಇದೀಗ ನಿನ್ನನ್ನು ಮಂಪರು ಪರೀಕ್ಷೆಗೆ ಒಳಪಡಿಸುತ್ತೇವೆ ಇರು ' ಎಂದ. ಪ್ರದೀಪ ಹೌಹಾರಿದ. ಊಟ ಮಾಡಿದ ತಕ್ಷಣವೇ ಪ್ರದೀಪನಿಗೆ ಗಡದ್ದು ನಿದ್ದೆ. ಗಣಪಜ್ಜನ ಜೊತೆಯಲ್ಲಿ ಹೀಗೊಂದು ದಿನ ಸಾರ್ಥಕವಾಗಿ ಕಳೆಯಿತು ಎಂದುಕೊಂಡಳು ವಿಜೇತಾ. ಮಾಡುವ ಕೆಲಸ ಇನ್ನೂ ಸಾಕಷ್ಟಿತ್ತು. ಸೂರ್ಯಕುದುರೆಯನ್ನು ಹುಡುಕಬೇಕಿತ್ತು. ಸೂರ್ಯಶಿಖಾರಿಯನ್ನೂ ಕೈಗೊಳ್ಳಬೇಕಿತ್ತು. ನಾಳೆಯಿಂದಲೇ ಈ ಕೆಲಸಕ್ಕೆ ತೊಡಗಿಕೊಳ್ಳಬೇಕು ಎಂದುಕೊಂಡಳು ವಿಜೇತಾ. ಆದರೆ ಮರುದಿನ ಮಾತ್ರ ಎಂದಿನಂತಿರಲಿಲ್ಲ. ಬೆಳ್ಳಂಬೆಳಿಗ್ಗೆ ದೊಡ್ಡದೊಂದು ಶಾಕ್ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು.

(ಮುಂದುವರಿಯುತ್ತದೆ)

Wednesday, May 20, 2015

ಪ್ರಕೃತಿ

(ಚಿತ್ರ : ಬಾಲಸುಬ್ರಹ್ಮಣ್ಯ, ನಿಮ್ಮೊಳಗೊಬ್ಬ ಬಾಲು)
ಈ ಭೂಮಿಯು ದೇವ ಮಂದಿರ
ಸೃಷ್ಟಿ ಸೊಬಗಿದು ಸುಂದರ
ಜೀವ ಜೀವವು ಸೇರಿ ಇರುವೆಡೆ
ಇರುವ ಬಾನಿನ ಚಂದಿರ ||

ಶಿಲ್ಪಕಲೆಗಳ ಹಾಗೆ ಇರುವ
ಗುಡ್ಡ ಬೆಟ್ಟ ನದಿಗಳು
ಸಾಲು ಸಾಲು ಗಿಡಮರಗಳು
ಬಾಗಿ ತೂಗುತಿರ್ಪವು ||

ಜಗಕೆ ಬೆಳಕೇ ಆಗಿರುವ
ಸರ್ವ ವಂದ್ಯ ಸೂರ್ಯನು
ದಿನ ದಿನವೂ ದಣಿಯದೇ
ಅಮರ ಜೀವ ಕೊಡುವನು ||

ತೇಗ ಮತ್ತಿಯ ಮರಗಳೆಲ್ಲವು
ಹಸಿರ ಹೊನ್ನು ಆಗಿದೆ
ಮಾನವನ ಜೀವದೊಡನೆ
ಪ್ರಕೃತಿಯ ಸೊಬಗು ನರಳಿದೆ ||

***
(ನಾನು ಪಿಯುಸಿ ಓದುವಾಗ ಬರೆದ ಕವಿತೆಗಳ ಮಾಲಿಕೆಯಲ್ಲಿ ಇದೂ ಒಂದು. ಇನ್ನೂ ಕವಿ ಮನಸ್ಸು ಅರಳುತ್ತಿದ್ದ ಕಾಲದ ಕವಿತೆ. ಸ್ವಲ್ಪ ಸುಧಾರಿಸಿಕೊಂಡು ಓದಿ)
(ಈ ಕವಿತೆ ಬರೆದಿರುವುದು 08-07-2004ರಂದು ದಂಟಕಲ್ಲಿನಲ್ಲಿ)
(ಬಾಲಸುಬ್ರಹ್ಮಣ್ಯ, ನಿಮ್ಮೊಳಗೊಬ್ಬ ಬಾಲು ಅವರ ಚಿತ್ರವನ್ನು ಅವರ ಅನುಮತಿ ಇಲ್ಲದೇ ಬಳಕೆ ಮಾಡಿಕೊಂಡಿದ್ದೇನೆ. ಅವರ ಬಳಿ ಕ್ಷಮೆ ಕೋರುತ್ತಾ..)

Tuesday, May 19, 2015

ಕರೆ

ಹೇ ಯುವಕ ಸಾಧಿಸು
ಫಲ ಸಿಗುವ ವರೆಗೆ ಸಾಧಿಸು
ಗುರಿ ತಲುಪುವ ವರೆಗೆ ಸಾಧಿಸು
ಜೀವ ವಿರುವ ವರೆಗೂ ಜಯಿಸು ||

ಕಲ್ಲು ಮುಳ್ಳುಗಳ ದಾರಿ
ಈ ಬಾಳಿನೊಳು ತುಂಬಿಹುದು
ಅವನೆಲ್ಲ ಸರಿಸಿ ಪಕ್ಕಕ್ಕಿಟ್ಟು ನೀ
ಲೋಕದೊಳು ಜಯಗಳಿಸು ||

ಈ ಜೀವನವೊಂದು ಸ್ಪರ್ಧೆ
ಗೆಲುವೊಂದೆ ಬಾಳಿನ ಗುರಿ
ಕೊನೆಯ ಜಯವ ಪಡೆದು ನಿಲ್ಲಲು
ಅತಿಮ ಚರಣದವರೆಗೂ ಸಾಧಿಸು ||

ದುಃಖ ನಿರಾಸೆ ಬಾಳಿನಲಿ
ತುಂಬಿಹುದು ಪ್ರತಿ ಕ್ಷಣದಲಿ
ಅವುಗಳೆಲ್ಲವ ತಾಳುಮೆಯಿಂದ
ಜಯಿಸು ನೀ ಜಗದಲಿ ||

****
(ಈ ಕವಿತೆಯನ್ನು ಬರೆದಿರುವುದು 15-03-2004ರಂದು ದಂಟಕಲ್ಲಿನಲ್ಲಿ)
(11 ವಸಂತಗಳ ಹಿಂದೆ ಬರೆದ ಈ ಕವಿತೆ ನನ್ನ ನನ್ನ ಬರವಣಿಗೆಯ ಪಯಣದ ನಾಲ್ಕನೇ ಕವಿತೆ. ಮೊದಲ ತೊದಲು ಹೀಗಿದೆ ನೋಡಿ)

Tuesday, May 12, 2015

ಸಿಡಿ ರೂಪದಲ್ಲಿ ಹವ್ಯಕರ ಹಾಡು

(ವೀಣಾ ಜೋಶಿ)
ಸಮಾಜದಲ್ಲಿ ಸಂಪ್ರದಾಯ ಹಾಡುಗಳಿಗೆ ವಿಶೇಷವಾದ ಬೆಲೆಯಿದೆ. ತಲೆಮಾರಿನಿಂದ ತಲೆಮಾರಿಗೆ ಹರಿದು ಬಂದ ಹಾಡುಗಳನ್ನು ಎಲ್ಲರೂ ಹಾಡುತ್ತ ಬಂದಿರುವ ಸಂಪ್ರದಾಯಗದ ಹಾಡುಗಳು ವಿಶೇಷ ಆಕರ್ಷಣೆಗೂ ಕಾರಣವಾಗಿದೆ. ಶಿರಸಿಯ ಜೋಶಿ ಮತ್ತು ಕಂಪನಿ ಹವ್ಯಕರ ಸಂಪ್ರದಾಯದ ಹಾಡುಗಳ ಸಿಡಿಯನ್ನು ಹೊರ ತಂದಿದ್ದು ಎಲ್ಲರ ಮೆಚ್ಚುಗೆಯನ್ನು ಗಳಿಸಿಕೊಳ್ಳುತ್ತಿದೆ.
ಕರ್ನಾಟಕದಲ್ಲಿ ಸಾವಿರಾರು ವರ್ಷಗಳಿಂದ ಸಮಾಜದಲ್ಲಿ ನಿರುಪದ್ರವಿಗಳಾಗಿ ಬದುಕುತ್ತಿರುವ ಜನಾಂಗವೆಂದರೆ ಹವ್ಯಕರು. ಕೃಷಿಯನ್ನೇ ಪ್ರಧಾನ ಉದ್ಯೋಗವನ್ನಾಗಿ ನಂಬಿರುವ ಇವರು ಸರಳ ಜೀವಿಗಳು. ಹವ್ಯಕರಲ್ಲಿ ಧಾರ್ಮಿಕ ಸಂಪ್ರದಾಯಗಳಿಗೆ ಎಲ್ಲಿಲ್ಲದ ಆದ್ಯತೆ. ಹವ್ಯಕ ಕುಟುಂಬಗಳಲ್ಲಿ ನಡೆಯುವ ಶುಭ ಸಮಾರಂಭಗಳು, ಹಬ್ಬ ಹರಿದಿನಗಳಿಗೆ ವಿಶೇಷವಾದ ಮಹತ್ವವಿದೆ. ಇಂಥ ಸಂಧರ್ಭಗಳಲ್ಲಿ ಹಾಡಲ್ಪಡುವ ಸಂಪ್ರದಾಯದ ಹಾಡುಗಳು ಕೇಳಲು ಇಂಪಾಗಿರುವುದು ಮಾತ್ರವಲ್ಲ, ಸಂಸ್ಕೃತಿಯನ್ನು ಎತ್ತಿ ಹಿಡಿಯುವಂತಿವೆ.
ಶಿರಸಿಯ ವೀಣಾ ಜೋಶಿಯವರ ಪರಿಕಲ್ಪನೆಯಲ್ಲಿ ಹೊರ ಬಂದಿರುವ ವಿಘ್ನೇಶ್ವರನ ಬಲಗೊಂಬೆ ಎನ್ನುವ ಹವ್ಯಕರ ಸಂಪ್ರದಾಯದ ಹಾಡುಗಳ ಸಿಡಿ ಎಲ್ಲರ ಮನಸ್ಸನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಮೊದಲ ಪೂಜೆಯನ್ನು ಸಾರುವ ವಿಘ್ನೇಶ್ವರನ ಬಲಗೊಂಬೆ, ಅಕ್ಕಿ ತೊಳೆಸುವ ಸೂವಿ ಸೂವಿ, ಅಕ್ಷತೆ ಕಲೆಸುವ ಹಾಡು, ಮಂಗಳಾರತಿಯ ಗೈವೆ ಎಂಬ ಆರತಿ ಮಾಡಿದ ಹಾಡು, ಬಿಡಬೇಡ ಸದ್ಗುಣವ ಎಂಬ ಹಾಡು, ಎದುರುಗೊಳ್ಳುವ ಹಾಡು, ಹೆಣ್ಣು ಕೇಳಿದ್ದು, ಹಸೆಗೆ ಕರೆತಂದಿದ್ದು, ವಧು ಮಂಟಪಕ್ಕೆ ತಂದಿದ್ದು, ಮಾಲೆ ಹಾಕಿದ್ದು, ಮಂಗಲಸೂತ್ರವನ್ನು ಕಟ್ಟಿದ್ದು, ಆರತಿ ಮಾಡಿದ್ದು, ಹೊಸ್ತಿಲ ಪೂಜೆ ಹಾಗೂ ವಧುವರರಿಗೆ ಹರಸುವ ಅಂಶಗಳನ್ನು ಹೊಂದಿರುವ ವಿಘ್ನೇಶ್ವರನ ಬಲಗೊಂಬೆ ಸಿಡಿಯಲ್ಲಿ 15 ಹಾಡುಗಳಿವೆ.
ಕೆಲವು ಹಾಡುಗಳು ಪುರಾಣದ ಕಥೆಯನ್ನು ಹೇಳಿದರೆ, ಕೆಲವು ನೀತಿಯನ್ನು ಬೋಧಿಸುತ್ತವೆ. ಮತ್ತೆ ಕೆಲವು ಭಗವಂತನ ನಾಮವನ್ನು ಕೊಂಡಾಡುತ್ತವೆ.ನಮ್ಮ ದೇಶದ ಇನ್ಯಾವುದೇ ಭಾಗದಲ್ಲೂ ಈ ರೀತಿಯ ಹಾಡುಗಳನ್ನು ನಾವು ಕೇಳಲು ಸಾದ್ಯವಿಲ್ಲ. ಎಷ್ಟೋ ಹಾಡುಗಳು ಲಿಖಿತ ರೂಪದಲ್ಲಿ ಇರದೇ ಬಾಯಿಯಿಂದ ಬಾಯಿಗೆ ಹರಡಿ ಜನಪ್ರಿಯವಾಗಿವೆ. ಆದರೆ ಹಿಂದಿನ ಕಾಲದಲ್ಲಿ ಎಲ್ಲಾ ಶುಭಕಾರ್ಯಗಳಲ್ಲೂ ಅನಿವಾರ್ಯವಾಗಿದ್ದ ಇಂಥ ಸಂಪ್ರದಾಯದ ಹಾಡುಗಳು ಇಂದು ತೀರಾ ವಿರಳವಾಗುತ್ತಿರುವುದು ದುರಾದೃಷ್ಟವೇ ಸರಿ. ಆದ್ದರಿಂದ ಅಂಥ ಹಾಡುಗಳನ್ನು ಸಂಗ್ರಹಿಸಿ, ಪರಿಷ್ಕರಿಸಿ, ಧ್ವನಿಸುರುಳಿಯನ್ನು ತಯಾರಿಸಿ ಅವುಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ವರ್ಗಾಯಿಸಬೇಕೆಂಬುದು ಸಿಡಿ ತಯಾರಿಸಿದ ವೀಣಾ ಜೋಶಿಯವರ ಬಹುದಿನಗಳ ಕನಸು. ಈ ನಿಟ್ಟಿನಲ್ಲಿ ಸಿಡಿಯನ್ನು ಹೊರ ತರುವ ಮೂಲಕ ಕನಸನ್ನು ನನಸು ಮಾಡಿಕೊಂಡಿದ್ದಾರೆ.
ಆ ಹಾಡುಗಳಿಗೆ ಹಿನ್ನೆಲೆ ಸಂಗೀತವನ್ನು ಸೇರಿಸಬೇಕೆ? ಬೇಡವೇ? ಸೇರಿಸಿದರೂ ಎಷ್ಟು ಸೇರಿಸಬೇಕು? ಹೇಗಿರಬೇಕು? ಎಂಬ ವಿಚಾರಗಳನ್ನು ವೀಣಾ ಜೋಶಿಯವರು ಸಿಡಿಗೆ ಸಂಗೀತ ನಿರ್ಧೇಶಿಸಿರುವ ಗುರುಮೂರ್ತಿ ವೈದ್ಯ ಅವರೊಂದಿಗೆ ಚರ್ಚಿಸಿದಾಗ ಅವರು ದಾರಿ ತೋರಿಸಿದರು. ಅವರ ಸಹಕಾರದಿಂದ ಈ ದ್ವನಿಸುರುಳಿಯನ್ನು ತಯಾರಿಸಲು ಸಾದ್ಯವಾಗಿದೆ. ಹವ್ಯಕರಲ್ಲದೆ ಬೇರೆ ಬೇರೆ ಸಮುದಾಯದ ಜನರು ಕೂಡ ಇದನ್ನು ಕೇಳಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಸಾಂಪ್ರದಾಯಿಕ ಹಾಡುಗಳು ಮರೆತು ಮೂಲೆಗುಂಪಾಗಿರುವ ಇಂದಿನ ದಿನಗಳಲ್ಲಿ ಜನರು ಈ ಧ್ವನಿಸುರುಳಿಯನ್ನು ಕೇಳಿ ತನ್ಮೂಲಕ ಅದರಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡು ಕಲಿತು ಹಾಡುವಂತಾದರೆ ಎಲ್ಲರ ಶ್ರಮ ಸಾರ್ಥಕವಾಗಲಿದೆ.
ಕೇವಲ ಹವ್ಯಕ ಸಮುದಾಯಕ್ಕೆ ಮಾತ್ರ ಸೀಮಿತವಾಗಿರದೇ ಎಲ್ಲ ಸಮುದಾಯಕ್ಕೂ ಅತ್ಯಗತ್ಯವೆನ್ನಿಸುವಂತಹ ಸಂಪ್ರದಾಯದ ಹಾಡುಗಳ ಸಿಡಿ ಇದಾಗಿದ್ದು, ಸಂಪ್ರದಾಯದ ಹಾಡುಗಳ ರಕ್ಷಣೆಯಲ್ಲಿ ಮುಖ್ಯ ಪಾತ್ರ ವಹಿಸಲಿದೆ. ನಾಗವೇಣಿ ಭಟ್, ರಶ್ಮಿ ಭಟ್ ಅವರ ಸಹಗಾಯನವಿರುವ ಈ ಸಿಡಿಯ ಬೆಲೆ 100 ರೂಪಾಯಿಗಳಾಗಿದೆ. ಸಿಡಿಯ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ 9449715611 ಈ ದೂರವಾಣಿಗೆ ಕರೆ ಮಾಡಬಹುದಾಗಿದೆ.
***
ಸಂಪ್ರದಾಯದ ಹಾಡುಗಳ ಸಂಗ್ರಹಣೆ ಮಾಡಿ, ಅವನ್ನು ಸಿಡಿ ರೂಪದಲ್ಲಿ ಹೊರತರಬೇಕೆನ್ನುವುದು ಬಹುದಿನಗಳ ಕನಸಾಗಿತ್ತು. ಪ್ರಾರಂಭಿಕ ಹಂತದಲ್ಲಿ ಈ ಸಿಡಿಯನ್ನು ಹೊರತರಲಾಗಿದೆ. ಮುಂದಿನ ದಿನಗಳಲ್ಲಿ ಸಂಪ್ರದಾಯದ ಹಾಡುಗಳನ್ನು ಇನ್ನಷ್ಟು ಹೊರ ತರುವ ಕನಸಿದೆ. ಈ ನಿಟ್ಟಿನಲ್ಲಿ ಪ್ರಯತ್ನಗಳನ್ನು ಕೈಗೊಳ್ಳಲಾಗಿದೆ.
ವೀಣಾ ಜೋಶಿ
ಹವ್ಯಕರ ಸಂಪ್ರದಾಯದ ಹಾಡಿನ ಸಿಡಿಯ ರೂವಾರಿ 

Saturday, May 9, 2015

ಅರ್ಥವಾಗಬೇಕು ಗೆಳತಿ

ಅರ್ಥವಾಗ ಬೇಕು ಗೆಳತಿ
ನಾನು ನೀನು ಇಬ್ಬರೂ |

ಸನಿಹ ಜೊತೆಗೆ ಬಂದ ಹಾಗೆ
ಅಲ್ಪ ಸ್ವಲ್ಪ ದೂರ
ಒಲವ, ಮನಸು ಅರಿವ ವೇಳೆ
ಬದುಕು ಮತ್ತೆ ಭಾರ ||

ಹೆಜ್ಜೆ ಹೆಜ್ಜೆ ಜೊತೆಗೆ ಇಟ್ಟು
ಮೈಲು ದೂರ ಬಂದೆವು
ಅರಿಯ ಹಾಗೆ ನಟನೆ ಮಾಡಿ
ನಮ್ಮ ನಾವು ಮರೆತೆವು ||

ವ್ಯರ್ಥವಾಗದಂತೆ ಎಂದೂ
ನಮ್ಮ ಪ್ರೀತಿ ನಿಲ್ಲಲಿ
ಅರಿತು ನಡೆದು, ಕಲೆಯು ಉಳಿದು
ಗಾಯ ಮರೆತು ಹೋಗಲಿ ||

ನನ್ನ ಕನಸು ನಿನ್ನ ಮನಸು
ಬೆರೆಯ ಬೇಕು ಜೊತೆಯಲಿ
ಅರ್ಥೈವಾಗಬೇಕು ನಾವು
ಪ್ರೀತಿ ಸದಾ ಉಳಿಯಲಿ||


Friday, May 8, 2015

ಶಿರ್ಲೆ : ಜಲಪಾತದ ಊರಿನಲ್ಲಿ ಸಮಸ್ಯೆಗಳ ಸರಮಾಲೆ

(ಶಿರ್ಲೆ ಜಲಪಾತ)
ಜಿಲ್ಲೆಯಲ್ಲಿ ಅನೇಕ ಪ್ರವಾಸಿ ತಾಣಗಳಿವೆ. ಮನಸೆಳೆಯುವ ಜಲಪಾತಗಳಿವೆ. ದೂರ ದೂರದ ಪ್ರದೇಶಗಳ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿವೆ. ಆದರೆ ಇಂತಹ ಪ್ರವಾಸಿ ತಾಣಕ್ಕೆ ತೆರಳುವ ರಸ್ತೆಗಳು ಮಾತ್ರ ಸಮರ್ಪಕವಾಗಿಲ್ಲ. ಇಂತದ್ದಕ್ಕೊಂದು ತಾಜಾ ಉದಾಹರಣೆಯೆಂದರೆ ಯಲ್ಲಾಪುರ ತಾಲೂಕಿನ ಶಿರ್ಲೆ ಜಲಪಾತಕ್ಕೆ ತೆರಳುವ ಮಾರ್ಗವಾಗಿದೆ.
ಯಲ್ಲಾಪುರ ಪಟ್ಟಣದಿಂದ 15 ಕಿ.ಮಿ ದೂರದಲ್ಲಿರುವ ಶಿರ್ಲೆ ಜಲಪಾತ ದಿನವಹಿ ನೂರಾರು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಯಲ್ಲಾಪುರ, ಹುಬ್ಬಳ್ಳಿ, ಕಾರವಾರ, ಕುಮಟಾ, ಶಿರಸಿ, ಶಿವಮೊಗ್ಗ ಸೇರಿದಂತೆ ಹಲವಾರು ಪ್ರದೇಶಗಳಿಂದ ಯುವಕರು, ಮಹಿಳೆಯರೆನ್ನದೇ ತಂಡೋಪತಂಡವಾಗಿ ಆಗಮಿಸಿ ಜಲಪಾತ ವೀಕ್ಷಣೆ ಮಾಡಿ ಹೋಗುತ್ತಾರೆ. 50 ಅಡಿಗೂ ಅಧಿಕ ಎತ್ತರದಿಂದ ಧುಮ್ಮಿಕ್ಕುವ ಜಲಪಾತ ತನ್ನ ಸೌಂದರ್ಯದಿಂದ ಎಲ್ಲರನ್ನೂ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಆಗಮಿಸುವ ಪ್ರವಾಸಿಗರು ಜಲಪಾತದ ನೀರಿಗೆ ತಲೆಯೊಡ್ಡಿ ಸ್ನಾನ ಮಾಡಿ ಸಂತಸವನ್ನೂ ಅನುಭವಿಸುತ್ತಾರೆ. ಆದರೆ ಇಂತಹ ಜಲಪಾತ ಮೂಲಬೂತ ಸೌಕರ್ಯದ ಕೊರತೆಯನ್ನು ಎದುರಿಸುತ್ತಿದೆ.
ಜಲಪಾತವಿರುವ ಶಿರ್ಲೆ ಗ್ರಾಮದಲ್ಲಿ 8-10 ಮನೆಗಳಿವೆ. ಇಡಗುಂದಿ ಗ್ರಾಮ ಪಂಚಾಯತದ ಅರಬೈಲ್ ಮಜರೆಯಲ್ಲಿರುವ ಈ ಜಲಪಾತವಿದೆ. ಇಂತಹ ಸುಂದರ ಜಲಪಾತವಿರುವ ಶಿರ್ಲೆ ಗ್ರಾಮಕ್ಕೆ ತೆರಳವುದು ಮಾತ್ರ ದುಸ್ತರ ಎನ್ನುವಂತಹ ಪರಿಸ್ಥಿತಿಯಿದೆ. ಮುಖ್ಯ ರಸ್ತೆಯಿಂದ 1.5 ಕಿ.ಮಿ ದೂರ ಕಡಿದಾದ ಘಟ್ಟದ ರಸ್ತೆಯಿದೆ. ರಸ್ತೆ ಕೂಡ ಚೂಪಾದ ಕಲ್ಲುಗಳು ಹಾಗೂ ಕೊರಕಲುಗಹಳಿಂದ ಆವೃತವಾಗಿದೆ. ದಿನಂಪ್ರತಿ 25ಕ್ಕೂ ಅಧಿಕ ವಾಹನಗಳು ಈ ರಸ್ತೆಯಲ್ಲಿ ಓಡಾಡುತ್ತವೆ. ಆದರೆ ರಸ್ತೆ ಸಮರ್ಪಕವಾಗಿ ಇಲ್ಲದ ಕಾರಣ ಈ ರಸ್ತೆಯಲ್ಲಿ ಪ್ರಾಣ ಕೈಯಲ್ಲಿ ಹಿಡಿದು ಓಡಾಡಬೇಕು ಎನ್ನುವಂತಹ ಪರಿಸ್ಥಿತಿಯಿದೆ.
ಶಿರ್ಲೆ ಗ್ರಾಮಕ್ಕೆ ಸರ್ವಋತು ರಸ್ತೆ ನಿರ್ಮಾಣ ಮಾಡಿಕೊಡಿ ಎಂದು ಅನೇಕ ಸಾರಿ ಸ್ಥಳೀಯರು ಬೇಡಿಕೆಗಳನ್ನು ಇಟ್ಟಿದ್ದಾರೆ. ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿಗಳನ್ನೂ ಸಲ್ಲಿಸಿದ್ದಾರೆ. ಬೇಸಿಗೆಯಲ್ಲಿಯೇ ಓಡಾಡಲು ತೊಂದರೆಯಾಗುವ ಈ ರಸ್ತೆಯಲ್ಲಿ ಮಳೆಗಾಲ ಬಂತೆಂದರೆ ಮತ್ತಷ್ಟು ತೊಂದರೆ ಅನುಭವಿಸುವ ಅನಿವಾರ್ಯವಿದೆ. ತಮ್ಮ ಊರಿಗೆ ಸಮರ್ಪಕ ರಸ್ತೆ ನಿರ್ಮಾಣ ಮಾಡುವುದು ಬೇಡ. ಬದಲಾಗಿ ಜಲಪಾತಕ್ಕೆ ತೆರಳುವವರಿಗಾದರೂ ರಸ್ತೆ ನಿರ್ಮಾಣ ಮಾಡಿಕೊಡಿ. ಜಲಪಾತದ ನೆಪದಲ್ಲಿ ನಮ್ಮೂರಿಗಾದರೂ ಉತ್ತಮ ರಸ್ತೆಯ ಭಾಗ್ಯ ಸಿಗಲಿ ಎಂದು ಸ್ಥಳೀಯರು ತಮ್ಮ ಬೇಡಿಕೆ ಮುಂದಿಡುತ್ತಿದ್ದಾರೆ. ರಾಜ್ಯದ ಪ್ರವಾಸೋದ್ಯಮ ಸಚಿವರು ಜಿಲ್ಲೆಯವರೇ ಆಗಿದ್ದಾರೆ. ಅವರ ಬಗ್ಗೆ ಭರವಸೆಯನ್ನು ಹೊಂದಿದ್ದ ಸ್ಥಳೀಯರು ಇದೀಗ ಹತಾಶೆಯನ್ನು ಅನುಭವಿಸುತ್ತಿದ್ದಾರೆ.
ದಟ್ಟ ಕಾನನದ ನಡುವೆ ಇರುವ ಶಿರ್ಲೆ ಗ್ರಾಮದಲ್ಲಿ ಅಜಮಾಸು 35ರಷ್ಟು ಜನಸಂಖ್ಯೆಯಿದೆ. ದಟ್ಟ ಕಾನನದ ನಡುವೆ ಇರುವ ಈ ಗ್ರಾಮದ ನಿವಾಸಿಗಳ ಬವಣೆ ಒಂದೆರಡಲ್ಲ. ಈ ಗ್ರಾಮಸ್ಥರು ಸೊಸೈಟಿ, ಪಡಿತರ ಹಾಗೂ ಶಾಲೆಗಳಿಗೆ 5 ಕಿ.ಮಿ ದೂರದಲ್ಲಿರುವ ಇಡಗುಂದಿಯನ್ನೇ ನೆಚ್ಚಿಕೊಳ್ಳಬೇಕಾದಂತಹ ಪರಿಸ್ಥಿತಿಯಿದೆ. ಶಿರ್ಲೆ ಗ್ರಾಮದಲ್ಲಿ ಕಿ. ಪ್ರಾ. ಶಾಲೆಯನ್ನು ಆರಂಭಿಸಲು ಅವಕಾಶಗಳಿದ್ದರೂ ಸರ್ಕಾರ ಮಾತ್ರ ಕಡಿಮೆ ಮಕ್ಕಳ ಸಂಖ್ಯೆಯ ನೆಪವನ್ನೊಡ್ಡಿ ಶಾಲೆಗೆ ಅವಕಾಶ ನೀಡುತ್ತಿಲ್ಲ. ಈ ಗ್ರಾಮದ ನಿವಾಸಿಗಳು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಂಬಂಧಿಕರ ಮನೆಗಳನ್ನೇ ನಂಬಿಕೊಂಡಿದ್ದಾರೆ. ಮಕ್ಕಳನ್ನು ತಮ್ಮ ನೆಂಟರ ಮನೆಗಳಲ್ಲಿ ಇಟ್ಟು ಓದಿಸುತ್ತಿದ್ದಾರೆ.
ಈ ಊರಿನ ಶಾಲೆ, ಸೊಸೈಟಿ ಹಾಗೂ ಪಡಿತರದ ಕುರಿತು ಬವಣೆ ಒಂದು ರೀತಿಯಾದರೆ ಈ ಗ್ರಾಮಸ್ಥರು ಮತದಾನ ಮಾಡಬೇಕೆಂದರೆ ಇನ್ನಷ್ಟು ತೊಂದರೆ ಅನುಭವಿಸಬೇಕಾದ ಪರಿಸ್ಥಿತಿ ಇನ್ನೊಂದು ಕಡೆ. ಈ ಊರಿನ ಮತದಾರರು ಮತದಾನ ಮಾಡಬೇಕೆಂದರೆ 13 ಕಿ.ಮಿ ಸಾಗುವುದು ಅನಿವಾರ್ಯ. ತಮ್ಮ ಗ್ರಾಮದಿಂದ 13 ಕಿ.ಮಿ ದೂರದಲ್ಲಿರುವ ಬೀರಗದ್ದೆಗೆ ತೆರಳಿ ಮತದಾನ ಮಾಡಿ ಬರುತ್ತಿದ್ದಾರೆ. ಮತದಾನಕ್ಕೆ ಅಷ್ಟು ದೂರ ತೆರಳುವುದು ಅಸಾಧ್ಯ, ಈ ಕಾರಣದಿಂದ ಶಿರ್ಲೆ ಗ್ರಾಮದಲ್ಲಿ ಮತಗಟ್ಟೆ ಸ್ಥಾಪಿಸಿ ಎಂದು ಅಧಿಕಾರಿಗಳಿಗೆ ಬೇಡಿಕೆಯನ್ನಿಟ್ಟಿದ್ದರೂ ಅದಕ್ಕೆ ಮನ್ನಣೆ ಸಿಕ್ಕಿಲ್ಲ. ಬಹುದೂರ ಹೋಗಿ ಬರುವ ಕಾರಣದಿಂದ ಚುನಾವಣೆಗಳಲ್ಲಿ ಅನೇಕರು ಮತದಾನವನ್ನೇ ಮಾಡಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.
ಇವು ಜಲಪಾತಕ್ಕೆ ತೆರಳುವ ರಸ್ತೆ ಹಾಗೂ ಜಲಪಾತವಿರುವ ಗ್ರಾಮದ ಸಮಸ್ಯೆಯಾದರೆ, ನಯನಮನೋಹರ ಜಲಪಾತವಿರುವ ಪರಿಸರದ ಕಥೆ ಮತ್ತಷ್ಟು ಶೋಚನೀಯವಾಗಿದೆ. ಶಿರ್ಲೆಯ ಜಲಪಾತವನ್ನು ಕಣ್ತುಂಬಿಕೊಳ್ಳಲು ಆಗಮಿಸುವ ಪ್ರವಾಸಿಗರು ಸುಮ್ಮನೆ ಬರುತ್ತಿಲ್ಲ. ಮದ್ಯದ ಬಾಟಲಿ, ಪ್ಲಾಸ್ಟಿಕ್ ಇತ್ಯಾದಿಗಳನ್ನು ತರುತ್ತಾರೆ. ಮದ್ಯಪಾನ ಮಾಡಿದ ನಂತರ ಬಾಟಲಿಗಳನ್ನು ಎಲ್ಲೆಂದರಲ್ಲಿ ಬಿಸಾಡಿ ಹೋಗುತ್ತಿದ್ದಾರೆ. ಕಟ್ಟಿಕೊಂಡು ಬರುವ ತಿಂಡಿಯ ಪ್ಯಾಕೇಟ್ಗಳನ್ನು ಕಂಡಕಂಡಲ್ಲಿ ಎಸೆಯುತ್ತಿದ್ದಾರೆ. ಇದರಿಂದಾಗಿ ಜಲಪಾತದ ಸೌಂದರ್ಯಕ್ಕೆ ಕುಂದುಂಟಾಗುತ್ತಿದೆ. ಪ್ರವಾಸೋದ್ಯಮ ಎಂದು ಭಾಷಣಗಳಲ್ಲಿ ಭಾರಿ ಭಾರಿ ಮಾತನಾಡುವ ಜನಪ್ರತಿನಿಧಿಗಳು ಇಂತಹ ಸಮಸ್ಯೆಗಳನ್ನು ಪರಿಹರಿಸಲು ಮನಸ್ಸು ಮಾಡುತ್ತಿಲ್ಲ ಎಂದು ಸ್ಥಳೀಯರು ದೂರುತ್ತಾರೆ. ನಿಸರ್ಗದ ನಡುವೆ ಇರುವ ಸುಂದರ ಜಲಪಾತ ಹಾಗೂ ಗ್ರಾಮದ ಸಮಸ್ಯೆಗಳಿಗೆ ಪೂರ್ಣವಿರಾಮ ಹಾಕಲು ಪ್ರವಾಸೋದ್ಯಮ ಸಚಿವರು, ಯಲ್ಲಾಪುರ ಶಾಸಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಇನ್ನಾದರೂ ಮುಂದಾಗಬೇಕಿದೆ.
***
ನಮ್ಮೂರಿಗೆ ಸಮರ್ಪಕ ರಸ್ತೆ ನಿರ್ಮಾಣ ಮಾಡಿಕೊಡಿ. ರಾಷ್ಟ್ರೀಯ ಹೆದ್ದಾರಿಯಿಂದ ಕೇವಲ 1.5 ಕಿಮಿ ಅಂತರದಲ್ಲಿ ನಮ್ಮೂರಿದ್ದರೂ ಇಲ್ಲಿ ಸಂಚಾರ ಮಾಡುವುದು ಮಾತ್ರ ತೀರಾ ಅಪಾಯಕಾರಿ ಎನ್ನುವಂತಹ ಪರಿಸ್ಥಿತಿಯಿದೆ. ಅಪಾಯವನ್ನು ಸದಾ ಕೈಯಲ್ಲಿ ಹಿಡಿದು ನಾವು ಪ್ರಯಾಣ ಮಾಡುತ್ತಿದ್ದೇವೆ. ಜಲಪಾತಕ್ಕೆ ಬಹಳಷ್ಟು ಪ್ರವಾಸಿಗರು ಬರುತ್ತಿದ್ದಾರೆ. ಜಲಪಾತದ ಅಭಿವೃದ್ಧಿಯ ಹೆಸರಿನಲ್ಲಾದರೂ ನಮಗೊಂದು ಸರ್ವಋತು ರಸ್ತೆ ಮಾಡಿಕೊಡಬೇಕಾಗಿದೆ.
ನಾರಾಯಣ ರಾಮಚಂದ್ರ ಭಟ್
ಶಿರ್ಲೆ ನಿವಾಸಿ

Thursday, May 7, 2015

ವಿರಹದ ಹನಿಗಳು

ವಿರಹವೇ
ಸರಸಕ್ಕೆ
ಮೂಲ!

***

ಅವಳಿಗಾಗಿ
ಸೋಲುವುದರಲ್ಲೂ
ಖುಷಿಯಿದೆ
ಗೆಳೆಯ
ಅವಳು
ಸಿಕ್ಕಾಳು..!



***

ನಿನಗೆ
ಸೋತಿದ್ದೇನೆ
ಗೆಳತಿ
ಇನ್ನಾದರೂ
ನಿನ್ನ
ಗೆಲ್ಲಬೇಕು!


***

ಕರ್ಪೂರ
ಉರಿಯಿತು
ವಿರಹ
ಇರಿಯಿತು |

ತೆರೆಮರೆಯ ಸಾಧಕಿ ನಿವೇದಿತಾ ಭಟ್ಟ

ನಮ್ಮ ನಡುವೆ ಅನೇಕ ಪ್ರತಿಭಾವಂತರಿದ್ದಾರೆ. ತೆರೆಮರೆಯಲ್ಲಿ ಸದ್ದಿಲ್ಲದೇ ತಮ್ಮೊಳಗಿನ ಪ್ರತಿಭೆಯನ್ನು ಪೋಷಿಕೊಂಡು ಬರುತ್ತಿರುವವರು ಹಲವರು. ಪೇಪರ್ ಕಟಿಂಗ್ ಹಾಗೂ ಕ್ವಿಲ್ಲಿಂಗ್ ಪೇಪರ್ ಮೂಲಕ ಕಲಾಕೃತಿಗಳನ್ನು ಮಾಡುತ್ತ ತಮ್ಮೊಳಗಿನ ಪ್ರತಿಭೆಯನ್ನು ಅನಾವರಣ ಮಾಡುವವರೊಬ್ಬರು ಇಲ್ಲಿದ್ದಾರೆ. ಅವರೇ ನಿವೇದಿತಾ ಭಟ್ಟ.
ಸಣ್ಣಳ್ಳಿ ಮೂಲದವರಾದ ನಿವೇದಿತಾ ಭಟ್ಟ ಅವರು ಚಿಕ್ಕಂದಿನಿಂದ ಒಂದಲ್ಲ ಒಂದು ಕ್ರಿಯಾಶೀಲ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಂದವರು. ಕಸದಿಂದ ರಸ ತಯಾರಿಕೆಯಲ್ಲಿ ನಿವೇದಿತಾ ಭಟ್ಟರು ಕೈಚಳಕ ತೋರುತ್ತಿದ್ದಾರೆ. ನಮ್ಮ ನಡುವೆ ಹಾಳಾಗುವ ವಸ್ತುಗಳನ್ನೇ ಬಳಕೆ ಮಾಡುವ ಮೂಲಕ ಸಂಗ್ರಾಹ್ಯ ವಸ್ತುಗಳನ್ನು, ಗಿಫ್ಟ್ ಗಳನ್ನು ತಯಾರಿಸುತ್ತಿದ್ದಾರೆ. ತಮ್ಮ ಐದನೇ ಕ್ಲಾಸಿನಿಂದಲೇ ಈ ಕಾರ್ಯವನ್ನು ಕೈಗೊಳ್ಳುತ್ತ ಬಂದಿರುವ ನಿವೇದಿತಾ ಅವರ ಮನೆಯಲ್ಲಿ ಅದೆಷ್ಟೋ ಬಗೆ ಬಗೆಯ ಹೂದಾನಿಗಳು, ಸಿರಾಮಿಕ್ ಪ್ಲೇಟ್ಗಳು, ಕ್ವಿಲ್ಲಿಂಗ್ ಪೇಪರ್ ಕಲಾಕೃತಿಗಳು, ಗೋಡೆಗೆ ತೂಗುಹಾಕುವ ವಸ್ತುಗಳಿವೆ.
ನಿವೇದಿತಾ ಅವರು ಅಡಿಕೆ ಹಾಳೆಯಿಂದ ಹೂವನ್ನು ತಯಾರಿಸುತ್ತಾರೆ. ಬಾಳೆಪಟ್ಟೆಯಿಂದ ಸುಂದರ ಕಲಾಕೃತಿಗಳನ್ನು ತಯಾರು ಮಾಡುತ್ತಾರೆ. ಹಲಸಿನ ಹಣ್ಣನ್ನು ತಿಂದ ನಂತರ ಒಗೆಯಲಾಗುವ ಹಲಸಿನ ಹಣ್ಣಿನ ಬೇಳೆ (ಬೀಜ)ದಿಂದ ಬಗೆ ಬಗೆಯ ಹಕ್ಕಿಗಳು ಸೇರಿದಂತೆ ಹಲವಾರು ಕಲಾಕೃತಿಗಳನ್ನು ಅವರು ತಯಾರು ಮಾಡುತ್ತಾರೆ. ವೆಲ್ವೆಟ್ ಬಟ್ಟೆಯಿಂದ ವಿವಿಧ ಕಲಾಕರತಿಗಳು, ಕ್ವಿಲ್ಲಿಂಗ್ ಪೇಪರ್ ರಚನೆಗಳನ್ನು ಮಾಡುವ ನಿವೇದಿತಾ ಅವರು ಇದೀಗ ಮದುವೆ ಮಂಟಪಕ್ಕೆ ವೆಲ್ವಟ್ ಬಟ್ಟೆ ಹಾಗೂ ಕ್ವಿಲ್ಲಿಂಗ್ ಪೇಪರ್ ಮೂಲಕ ಹೊಸ ಬಗೆಯ ರಚನೆಯನ್ನು ತಯಾರು ಮಾಡುತ್ತಿದ್ದಾರೆ. ಮದುವೆ ಮಂಟಪಕ್ಕೆ ಇದೇ ಮೊಟ್ಟ ಮೊದಲ ಬಾರಿಗೆ ವೆಲ್ವೆಟ್ ಬಟ್ಟೆ ಹಾಗೂ ಕ್ವಿಲ್ಲಿಂಗ್ ಪೇಪರ್ ಬಳಕೆ ಮಾಡಿ ಹೊಸ ಬಗೆಯ ವಿನ್ಯಾಸ ರೂಪಿಸುವತ್ತ ಇವರು ಗಮನ ಹರಿಸಿದ್ದಾರೆ.
ಎಂಕಾಂ ಓದುತ್ತಿರುವ ನಿವೇದಿತಾ ಭಟ್ ಹಲವು ಬಗೆಯ ಕರ್ಚೀಫ್ ವರ್ಕ್ ಗಳನ್ನು ಕೈಗೊಂಡಿದ್ದಾರೆ. ಕರ್ಚೀಪ್ ಮೇಲೆ ಸರಸರನೆ ಬಗೆ ಬಗೆಯ ರಚನೆಗಳನ್ನು ಮೂಡಿಸುವ ಇವರಿಗೆ ಕಲಾದೇವಿ ಒಲಿದಿದ್ದಾಳೆ ಎಂದರೆ ತಪ್ಪಾಗಲಿಕ್ಕಿಲ್ಲ. ಬಾಯಾರಿಕೆಯಾದಾಗ ಕುಡಿಯುವ ಸಾಫ್ಟ್ ಡ್ರಿಂಕ್ಸ್ ಬಾಟಲಿಗಳು ಹಾಗೂ ಆ ಬಾಟಲಿಗಳ ಮುಚ್ಚಳಗಳನ್ನು ಒಗೆಯದೇ ಅದರಿಂದ ವಿಶಿಷ್ಟ ಬಗೆಯ ಕಲಾಕೃತಿಗಳನ್ನು ತಯಾರಿಸುವಲ್ಲಿ ನಿವೇದಿತಾ ಸಿದ್ಧಹಸ್ತರು. ಡ್ರಾಯಿಂಗ್ ಶೀಟ್ ಕೆಲಸಗಳು ಹಾಗೂ ಗ್ಲಾಸ್ ಪೇಂಟಿಂಗ್ಗಳನ್ನೂ ಇವರು ಕೈಗೊಳ್ಳುತ್ತಾರೆ.
ಬಾಲ್ಯದಲ್ಲಿ ಹವ್ಯಾಸಿಯಾಗಿ ರಚನೆ ಮಾಡುತ್ತಿದ್ದೆ. ಚಿಕ್ಕಂದಿನಲ್ಲಿ ಯಾವುದಾದರೂ ಸ್ಪರ್ಧೆಗಳಿಗೆ ನಾನೇ ಕಲಾಕೃತಿಗಳನ್ನು ತಯಾರು ಮಾಡುತ್ತಿದ್ದೆ. ಇವುಗಳಿಗೆ ಬಹುಮಾನಗಳೂ ಬಂದಿದ್ದವು. ಈಗ ಈ ಕುರಿತು ಅಂತರ್ಜಾಲದಲ್ಲಿ ಹುಡುಕಾಟ ನಡೆಸಿ, ಮಾಹಿತಿಯನ್ನು ಪಡೆದು ಹೊಸ ಹೊಸ ಕಲಾಕೃತಿ ತಯಾರು ಮಾಡುವತ್ತ ಪ್ರಯತ್ನಿಸುತ್ತಿದ್ದೇನೆ. ಹಿರಿಯರ ಕಲಾಕೃತಿಗಳನ್ನೂ ಗಮನಿಸಿ, ಅಂತರ್ಜಾಲದ ಕಲಾಕೃತಿಗಳನ್ನು ಮನಸ್ಸಿನಲ್ಲಿಟ್ಟು, ನನ್ನದೇ ಆದ ಹೊಸ ಬಗೆಯ ಕಲಾಕೃತಿಗಳನ್ನು ತಯಾರು ಮಾಡುತ್ತಿದ್ದೇನೆ. ಇಂತಹ ಪ್ರತಿಭೆಗೆ ತಮ್ಮ ತಾಯಿಯವರಾದ ಗೀತಾ ಭಟ್ಟರೇ ಸ್ಪೂರ್ತಿ ಎಂದು ಹೇಳುವ ನಿವೇದಿತಾ ಭಟ್ಟರು ಸಿರಾಮಿಕ್ ವರ್ಕ್ಸ್ ಮಾಡುವುದರಲ್ಲೂ ಸಿದ್ಧಹಸ್ತರು. ಸಿರಾಮಿಕ್ ಮೂಲಕ ಗಣಪತಿ ಸೇರಿದಂತೆ ಗೋಡೆಗೆ ತೂಗು ಹಾಕುವ ಅನೇಕ ರಚನೆಗಳನ್ನು ಮಾಡಿದ್ದಾರೆ.
2014ರಲ್ಲಿ ತಾಲೂಕಿನ ಸೋಂದಾ ಸ್ವರ್ಣವಲ್ಲಿ ಮಠದಲ್ಲಿ ನಡೆದ ಕೃಷಿ ಜಯಂತಿಯಲ್ಲಿ ಸ್ಥಳದಲ್ಲಿಯೇ ವಸ್ತು ತಯಾರಿಕೆಯಲ್ಲಿ ಮೊದಲ ಸ್ಥಾನ ಪಡೆದಿರುವ ನಿವೇದಿತಾ ಭಟ್ಟರಿಗೆ ಮುಂದಿನ ದಿನಗಳಲ್ಲಿ ಇಂತಹ ರಚನೆಗಳನ್ನು ತಯಾರು ಮಾಡುವ ಬಗ್ಗೆ ಆಸಕ್ತರಿಗೆ ತರಗತಿಗಳನ್ನು ನಡೆಸುವ ಆಲೋಚನೆಯೂ ಇದೆ. ಓದಿನ ಜೊತೆ ಜೊತೆಯಲ್ಲಿ ಹವ್ಯಾಸವಾಗಿ ಬೆಳೆಸಿಕೊಂಡು ಬಂದಿರುವ ಇಂತಹ ಪ್ರತಿಭೆಯನ್ನು ಮುಂದಿನ ದಿನಗಳಲ್ಲಿ ಆದಾಯದ ಮೂಲವನ್ನಾಗಿ ಮಾಡಿಕೊಳ್ಳುವ ಆಲೋಚನೆಯೂ ಇದೆ. ಓದಿನಲ್ಲಿಯೂ ಮುಂದಿರುವ ನಿವೇದಿತಾ ಅವರು ಕಾಲೇಜು ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಬಹುಮಾನ ಪಡೆದುಕೊಂಡಿದ್ದಾರೆ.
ಪೇಪರ್ ವರ್ಕ್ ಹಾಗೂ ವಿಶಿಷ್ಟ ಕಲಾಕೃತಿಗಳನ್ನು ತಯಾರು ಮಾಡುವ ನಿವೇದಿತಾ ಅವರನ್ನು 948190**49 ಈ ದೂರವಾಣಿಯ ಮೂಲಕ ಸಂಪರ್ಕಿಸಬಹುದಾಗಿದೆ. ಇಂತಹ ತೆರೆಮರೆಯ ಪ್ರತಿಭೆಗಳು ಅದೆಷ್ಟೋ ಇವೆ. ಇಂತಹ ಪ್ರತಿಭೆಗಳಿಗೆ ಮತ್ತಷ್ಟು ಬೆಲೆ ಸಿಗಬೇಕಾದ ಅಗತ್ಯವಿದೆ. ಸಮಾಜ ಇಂತಹ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಬೆಲೆ ನೀಡಿದರೆ ಅವರೊಳಗಿನ ಪ್ರತಿಭೆಗೂ ಬೆಲೆ ಸಿಗಬಹುದಾಗಿದೆ.

Tuesday, May 5, 2015

ಅಘನಾಶಿನಿ ಕಣಿವೆಯಲ್ಲಿ-18

(ಜಿಮ್ ಕಾರ್ಬೆಟ್ ತಾನೇ ಹೊಡೆದ ಹುಲಿಯೊಂದಿಗೆ)
                    `ತಮಾ... ಕವಳ ಹಾಕ್ತ್ರನಾ..ತಗಳಿ..' ಎಂದು ಕವಳದ ಬಟ್ಟಲನ್ನು ಎಲ್ಲರ ಮುಂದಕ್ಕೆ ಹಿಡಿದರು. ಎಲ್ಲರೂ ಕವಳ ಹಾಕ್ತ್ನಿಲ್ಲೆ..' ಎಂದರು.
                   `ತಮ್ಮಂದಿಕ್ಕಳಾ.. ಅಡಿಕೆ ಬೆಳೆಗಾರ ಆಕ್ಯಂಡು ನೀವು ಕವಳ ಹಾಕ್ತ್ನಿಲ್ಲೆ ಅಂದ್ರೆ ಬೆಳೆಗಾರರಿಗೆ ಮೋಸ ಮಾಡಿದಾಂಗೆ ಆಗ್ತಾ.. ನಾವು ಬೆಳೆದಿದ್ದು ನಾವೇ ತಿನ್ನದಿಂದ್ರೆ ಹೆಂಗೆ..? ಕವಳ ಹಾಕಡಿ, ಭಂಗಿ ಪಾನಕ ಕುಡಿಯಡಿ.. ನಿಂಗವ್ವು ಈಗಿನವ್ವು ಇಂತದ್ದು ಮಾಡದೇ ಅದೆಂತಾ ನಮನಿ ಬಾಳ್ವೆ ಮಾಡತ್ರೋ..' ಎಂದು ಛೇಡಿಸಿದರು. ಎಲ್ಲರೂ ನಾಚಿಕೆಯಿಂದ ತಲೆತಗ್ಗಿಸಿದರು
                 `ಎಲ್ಲಿ ತಂಕಾ ಹೇಳಿದ್ನಾ..' ಎಂದು ಕೇಳಿದಾಗ `ಕೊಟ್ಟಿಗೆಯಲ್ಲಿ ಹುಲಿ ಅಬ್ಬರ'ದ ಬಗ್ಗೆ ನೆನಪು ಮಾಡಿದ ವಿಕ್ರಮ.
                 `ಕೊಟ್ಗೇಲಿ ಯನ್ನ ಕೈಯಲ್ಲಿದ್ದ ಲಾಟೀನಿನ ಬೆಳಕು ಆಮೇಲೆ ಬ್ಯಾಟರಿ ಲೈಟಿಗೆ ಎಂತದ್ದೂ ಸರಿ ಕಾಣ್ತಾ ಇತ್ತಿಲ್ಲೆ. ಮಸುಬು ಮಸುಬಾಗಿ ಕಾಣ್ತಾ ಇತ್ತು. ಹುಲಿಯದ್ದಾ ಬೇರೆ ಎಂತ್ರದ್ದೋ ಗೊತ್ತಾಜಿಲ್ಲೆ.. ಗ್ವರ್ ಗುಡದೊಂದು ಕೇಳತಿತ್ತು. ಸದ್ದು ಬಂದ್ ಬದಿಗೆ ಬಂದೂಕು ಗುರಿ ಇಟ್ಟು ಢಂ.. ಅನ್ನಿಸಿದಿ.. ಬಂದೂಕಿನಿಂದ ಗುಂಡು ಹಾರುವಾಗ ಒಂದ್ ಸಾರಿ ಬಂದೂಕು ಹಿಂದೆ ವದ್ಚು ನೋಡು.. ಯನ್ನ ಭುಜ ನಾಕ್ ದಿನ ಕೆಂಪಗೆ ಆಕ್ಯಂಡು ಇತ್ತು..ಇಡೀ ಅಘನಾಶಿನಿ ಕಣಿವೆಯಲ್ಲಿ ಅದರ ಶಬ್ದ ಗುಡ್ಡದಿಂದ ಗುಡ್ಡಕ್ಕೆ ಬಡಿದು ಪ್ರತಿಫಲನ ಆಗುತ್ತಿತ್ತು.. ಯಾರಾದ್ರೂ ಶಬ್ದ ಕೇಳಿ ಹೆದರ್ಕಂಡಿರ್ಲಕ್ಕೂ ಸಾಕು.. ಗುಂಡು ಹೊಡೆ ಮೇಲೆ ಎಂತದೋ ಓಡಿ ಹೋದಾಂಗೆ ಅನುಭವ ಆತು. ಹೆಂಗಿದ್ರೂ ಹುಲಿ ಬಿದ್ದಿರ್ತು ತಗಾ.. ಅಂದ್ಕಂಡಿ.. ಲಾಟೀನ್ ಬೆಳಕು ದೊಡ್ಡದು ಮಾಡಿ ನೋಡಿದ್ರೆ ಕೊಟಗೇಲಿ ಎಂತದೂ ಕಂಡಿದ್ದಿಲ್ಲೆ.. ಸುಮಾರ್ ಹೊತ್ತು ಹುಡುಕಿದಿ.. ಊಹೂಂ.. ಕತ್ಲೆಲ್ಲಿ ಯಂತದೂ ಕಂಡಿದ್ದಿಲ್ಲೆ..ಸಾಯ್ಲಿ ಇದು ಹೇಳಿ ಬೈಕ್ಯಂಡು ಆವತ್ತು ಮನಗಿ ಬೆಳಗು ಹಾಯಿಸಿದಿ ನೋಡು..' ಎಂದ ಗಪ್ಪಜ್ಜ ..
                  ಎಲ್ಲರಿಗೂ ಕುತೂಹಲ ಇಮ್ಮಡಿಸಿತ್ತು... ಜಿಮ್ ಕಾರ್ಬೆಟ್ಟನ ಹುಲಿ ಕೊಮದ ಕಥೆಗಳನ್ನು ಓದಿ ತಿಳಿದವರಿಗೆ ಎದುರಿಗೆ ಅಜ್ಜ ಹೇಳುತ್ತಿದ್ದ ಕಥೆ ಮೈಯಲ್ಲಿ ರೂಮಾಂಚನ ಹುಟ್ಟು ಹಾಕಿತ್ತು `ಮುಂದೆಂತಾ ಆತಾ..? ಹುಲಿ ಬಿದ್ದಿತ್ತಾ..?.. ನೀ ಬಾಲ ಕಿತ್ಕಂಡು ಹೋಗಿ ಪಟೇಲಂಗೆ ಕೊಟ್ಯಾ..?' ಗಡಬಡೆಯಿಂದ ಕೇಳಿದ ವಿಕ್ರಮ.
                 `ತಡ್ಯಾ ತಮಾ.. ಸಾವಕಾಶ ಹೇಳ್ತಿ.. ಯಂಗೆ ವಯಸ್ಸಾತು.. ಇಷ್ಟೆಲ್ಲ ಜೋರು ಹೇಳಲಾಗ್ತಿಲ್ಲೆ.. ಎಂದು ಮತ್ತೊಂದು ಕವಳವನ್ನು ಹೊಸೆಯತೊಡಗಿದರು.
                 `ಬೆಳಿಗ್ಗೆ ಎಲ್ಲಾ ಏಳದಕ್ಕಿಂತ ಮುಂಚೆ ಎದ್ದು ನೋಡಿದ್ರೆ ಕ್ವಟ್ಗೆಲಲ್ಲ.. ಅದರ ಸುತ್ತಮುತ್ತಲೆಲ್ಲೂ ಹುಲಿ ಬಿದ್ದ ಕುರುಹು ಇಲ್ಲೆ. ಆ ಗುಂಡು ಹೊಡೆದಿದ್ದು ಎಂತಾ ಆಗಿಕ್ಕು ಹೇಳಿ ಹುಡುಕಾಡದಿ.. ಕ್ವಟ್ಗೆ ಕಂಭಕ್ಕೆ ತಾಗಿತ್ತು. ಆದರೆ ಇಡೀ ಕೊಟ್ಗೆ ತುಂಬಾ ನೆತ್ತರು ಹರಕಂಡು ಇತ್ತು. ಅರೇ ಹುಲಿಗೆ ಗುಂಡು ತಾಗಿಕ್ಕಾ.. ಅಂದ್ಕಂಡ್ರೆ ಒಂದು ಹಂಡಾ ಪಟ್ಟೆ ದನೀಕರ ರಾತ್ರಿ ಹುಲಿ ಬಾಯಿಗೆ ಸಿಕ್ಕು ಸತ್ತುಬಿದ್ದಕಂಡು ಇತ್ತು. ರಾತ್ರಿ ಹುಲಿ ಆ ದನಿಕರದ ಕುತ್ಗಿಗೆ ಬಾಯಿ ಹಾಕಿತ್ತು.. ಅದು ಕಚ್ಚಿದ ಜಾಗದಿಂದ ನೆತ್ತರು ರಾಶಿ ಹರಿದು ಹೋಗಿತ್ತು.. ಕರ ಸತ್ತಬಿದ್ದಿತ್ತು.. ಓಹೋ ರಾತ್ರಿ ಬಂದ ಗ್ವರ ಗ್ವರ ಶಬ್ದ ಇದೇಯಾ ಅಂದಕಂಡಿ..ಥೋ.. ಯಮ್ಮನೆ ಕೊಟ್ಗಿಗೆ ಬಂದು ದನಿಕರ ಕೊಂದಿದ್ದಲಾ ಹುಲಿ.. ಇದರ ಬಿಟ್ರೆ ಸುಖ ಇಲ್ಲೆ ಅಂದ್ಕಂಡು ಕೋವಿ ಎತ್ಗಂಡು ಹೊಂಟಿ.. ಎಲ್ಲೇ ಹೋದ್ರೂ ಆ ಹುಲಿ ಕೊಲ್ಲದೇಯಾ.. ಅಷ್ಟರ ಮೇಲೆ ಆ ಮನಿಗೆ ಬರ್ತಿ ಹೇಳಿ ಅಪ್ಪಯ್ಯಂಗೆ ಹೇಳಿ ಅಂವ ಉತ್ರ ಕೊಡದ್ರೋಳಗೆ ಹೊರಟಿದ್ದಿ.. ಆಸ್ರಿಗೆನೂ ಕುಡದಿದ್ನಿಲ್ಯಾ ಆವತ್ತು ಮಾರಾಯಾ..' ಎಂದ ಗಪ್ಪಜ್ಜ..
                    `ಹುಲಿ ಸಾಮಾನ್ಯವಾಗಿ ಹಿಂಗೇ ಹೋಗಿಕ್ಕು ಹೇಳಿ ಜಾಡು ಹಿಡದು ಹೊಂಟಿ. ಅದು ಮುತ್ಮುರ್ಡ್ ಬದಿಗೆ ಹೋಗಿತ್ತು. ಆನೂ ಅದೇ ಹಾದಿ ಕೂಡದಿ.. ಮುತ್ಮೂರ್ಡ್ ಹತ್ರಕ್ಕೆ ಹೋಪಕಿದ್ರೆ ಯನ್ನ, ಸುಬ್ಬಜ್ಜ ಇದ್ನಲಾ.. ಅಂವ ಕಂಡ..ಎಂತದಾ ಗಪ್ಪತಿ.. ಕೋವಿ ಹಿಡಕಂಡು ಹೊಂಟಿದ್ದೆ.. ಯತ್ಲಾಗೆ ಹೊಂಟಿದ್ಯಾ..? ಎಂದ..
                   `ಆನು ಹುಲಿ ಸುದ್ದಿ ಹೇಳಿ ಹಿಂಗಿಂಗೆ ಅಂದಿ.. ಅಂವ ಹೌದಾ ಮಾರಾಯಾ.. ಮದ್ಯರಾತ್ರಿಯಪ್ಪಗೆ ಬಂದಿತ್ತಾ.. ಅದು ಬಾಳಗಾರ ದಿಕ್ಕಿಗೆ ಹೋದಾಂಗಾಜು ನೋಡು.. ಅಂದ.. ಆ ಇನ್ನೇನು ಹೊರಡವ್ವು ಹೇಳಿ ಇದ್ದಾಗ ಸುಬ್ಬಜ್ಜ ತಡಿಯಾ.. ಆನು ಬತ್ತಿ... ಅಲ್ಲಿಗೆ ಹೋಪನ.. ಆ ಹುಲಿಗೆ ಒಂದ್ ಗತಿ ಕಾಣಿಸದೇ ಇದ್ರೆ ನಮಗೆ ಉಳಿಗಾಲ ಇಲ್ಲೆ.. ಎಂದ ತನ್ನತ್ರ ಇದ್ದಿದ್ದ  ಕೋವೀನು ತಗಂಡು ಬಂದ.. ಯಂಗಳ ಸವಾರಿ ಬಾಳಗಾರ ಬದಿಗೆ ಹೊಂಟ್ಚು.. ಅಲ್ಲಿಗೆ ಹೋಗಿ ಕೇಳದಾಗ ಬೆಳಗಿನ ಜಾವದಲ್ಲಿ ಹುಲಿ ಕೂಗಿದ್ದು ಕೇಳಿದ್ಯ ಅಂದ.. ಬಂದಳಿಕೆ ಬದಿಗೆ ಹೋಗಿಕ್ಕು ನೋಡು ಅಂದ.. ಬಂದಳಿಕೆಗೆ ಬಂದ್ರೆ ಅವರ ಮನೆಯಲ್ಲಿ ಒಂದ್ ದನ ಹಿದಡು ಎಳಕಂಡು ಹೋಗಿತ್ತಡಾ ಹುಲಿ.. ಯಂಗಂತೂ ಪಿತ್ಥ ನೆತ್ತಿಗೆ ಏರಿದಂತಾತು.. ಸಿಟ್ಟು ಸಿಕ್ಕಾಪಟ್ಟೆ ಬಂತು.. ಸುಬ್ರಾಯಾ.. ಇವತ್ತು ಈ ಹುಲಿ ಬಿಡಲಾಗ್ದಾ.. ಎಂದೆ... ಸುಬ್ಬಜ್ಜನೂ ಹೌದಾ.. ಎಂದ'
                  ಮತ್ತೊಮ್ಮೆ ತನ್ನ ಮಾತಿನ ಸರಣಿಗೆ ನಿಲುಗಡೆ ನೀಡಿದ ಗಪ್ಪಜ್ಜ .. ಇಂವ ಇಂತಕ್ಕೆ ಜೋರಾಗಿ ಓಡ್ತಾ ಇರೋ ಬಾಳೆಸರ ಬಸ್ಸು ಆಗಾಗ ನಿತ್ಕಂಡ ಹಾಂಗೆ ನಿತ್ಕತ್ತ ಅಷ್ಟ್ ಅಷ್ಟ್ ಹೊತ್ತೊಗೆ ಸುಮ್ಮನಾಗ್ತಾ ಎಂದು ವಿನಾಯಕನ ಮನಸ್ಸಿನಲ್ಲಿ ಮೂಡಿದರೂ ಕೇಳಿಲು ಹೋಗಲಿಲ್ಲ.
                   `ಬಂದಳಿಕೆಯಲ್ಲಿ ದನವನ್ನು ಎಳಕಂಡ್ ಹೋಗಿದ್ ಹುಲಿ ಅಲ್ಲಿಂದ ಭತ್ತಗುತ್ತಿಗೆ ಹೋಗುವ ಹಾದಿ ಮಧ್ಯದ ದೊಡ್ಡ ಮುರ್ಕಿ ಹತ್ರ ಇರೋ ಮರದ ಹತ್ತಿರ ದನದ ದೇಹ ವಗದಿಕ್ ಹೋಗಿತ್ತು. ಸುಮಾರ್ ಹೊತ್ತು ಯಂಗ ಅಲ್ಲಿ ಸುಳಿದಾಡಿದ್ರೂ ಹುಲಿ ಪತ್ತೆಯಾಜಿಲ್ಲೆ.. ಕೊನೆಗೆ ಬಂದಳಿಕೆಗೆ ವಾಪಸ್ ಹೋಗಿ ಊಟ ಮುಗಿಸ್ಕಂಡು ಮತ್ತೆ ವಾಪಸ್ ಬಂದು ಮರ ಹತ್ತಿ ಕುತ್ಗಂಡ್ಯ. ಮದ್ಯಾಹ್ನ ಆತು, ಸಾಯಂಕಾಲ ಆದ್ರೂ  ಹುಲಿ ಪತ್ತೇನೇ ಇಲ್ಲೆ. ಈ ಹುಲಿ ಹಿಂದ್ ಹೋಪ ಸಾವಾಸ ಸಾಕ್ರೋ.. ಹೇಳಿ ಅನಿಶಿ ಹೋತು. ಹಗೂರ್ಕೆ ಸೂರ್ಯನೂ ಕಂತತಾ ಇದ್ದಿದ್ದ.. ಕಪ್ಪಾಪ್ಲೆ ಆಗ್ತಾ ಇತ್ತು. ಯಂಗಕ್ಕಿಗೆ ಮರ ಇಳಿಯಲೆ ಒಂಥರಾ ಆಪಲೆ ಹಿಡತ್ತು. ಹಂಗೆ ಹೇಳಿ ಅಲ್ಲೇ ಕುತ್ಗಂಡು ಇಪ್ಪಲೂ ಆಗ್ತಿಲ್ಲೆ.. ಹಿಂಗೆ ಸುಮಾರ್ ಹೊತ್ತಾತು. ಕೊನಿಗೆ ಸುಮಾರ್ ಕಪ್ಪಾಗ್ತಾ ಇದ್ದು ಹೇಳ ಹೊತ್ತಿಗೆ ಬಂತು ನೋಡು ಹುಲಿ.. ಅನಾಮತ್ತು 8 ಅಡಿ ಉದ್ದ ಇತ್ತು. ಎಂತಾ ಗಾಂಭೀರ್ಯದಲ್ಲಿ ಅದು ನೆಡ್ಕಂಡು ಬಂತು ಅಂದ್ರೆ.. ಆಹಾ.. ಅದು ಸೀದಾ ದನದ ಹತ್ರಕ್ಕೆ ಬಂತು. ಯಂಗಂತೂ ಮೈ ರೋಮೆಲ್ಲಾ ನೆಟ್ಟಗಾಗಿತ್ತು. ಮೊದಲನೇ ಸಾರಿ ಹುಲಿ ಹೊಡೆತಾ ಇದ್ದಿದ್ನಲಾ.. ಜೊತಿಗೆ ನಿನ್ನೆ ರಾತ್ರಿ ಹಾರಿಸಿದ ಈಡು ಹುಸಿಯಾಗಿತ್ತಲಾ.. ಕೋವಿ ನೆಟ್ಟಗ್ ಮಾಡ್ಕಂಡು ಗುರಿ ಹಿಡದಿ. ಮತ್ತೂ ಹತ್ರಕ್ಕೆ ಬಂತು. ಹಂಗೇ ಢಂ. ಅನ್ಸಿದಿ. ಪಕ್ಕದಲ್ಲಿ ಕುತ್ಗಂಡ್ ಇದ್ದಿದ್ದ ಸುಬ್ಬಜ್ಜ ಒಂದ್ ಸಾರಿ ಕುಮಟಿ ಬಿದ್ದಿದ್ದ. ಮೈಯೆಲ್ಲಾ ಥರಗುಡ್ತಾ ಇತ್ತು. ಹುಲಿಗೆ ಗುಂಡು ತಾಗಿತ್ತು. ಬಿದ್ದಿದ್ದು ಕಾಣ್ತಾ ಇತ್ತು. ಯಾವ್ದಕ್ಕೂ ಇರಲಿ, ಎಲ್ಲಾರೂ ಜೀಂವ ಇದ್ದಿಕ್ಕು ಹೇಳಿ ಇನ್ನೊಂದು ಕೋವಿ ಲೋಡು ಮಾಡ್ಕ್ಯಂಡಿ. ಸುಮಾರ್ ಹೊತ್ತಾತು.. ಹುಲಿ ಬಿದ್ಕಂಡಿದ್ದು ಮಿಸುಕಾಡಿದ್ದಿಲ್ಲೆ.. ಇನ್ನೇನು ಇಳಿಯವು ಹೇಳ ಹೊತ್ತಲ್ಲಿ ಆ ಹುಲಿ ಹತ್ರಕ್ಕೆ ಎಂತದೋ ಅಲ್ಲಾಡಿದ ಹಂಗಾತು. ಸರಿಯಾಗಿ ನೋಡಿದ್ರೆ ಎರಡು ಹುಲಿಮರಿ..' ಎಂದು ಹೇಳಿ ಸುಮ್ಮನಾದ ಗಪ್ಪಜ್ಜ ..
                 ಮುಂದೇನಾಯ್ತು ಎಂಬ ಕುತೂಹಲ ಎಲ್ಲರಲ್ಲಿಯೂ ಮೂಡಿದ್ದು ಸುಳ್ಳಲ್ಲ.. ಹುಲಿ ಹೊಡೆದ ಎನ್ನುವ ವಿಷಯವೇನೋ ತಿಳಿಯುತು. ಹುಲಿಮರಿಯನ್ನೂ ಹೊಡೆದ್ನಾ? `ಮುಂದೆಂತ ಆತು..?' ಕುತೂಹಲ ತಡೆಯಲಾಗದೇ ಕೇಳಿದ್ದಳು ವಿಜೇತಾ.
                 `ಆವಾಗ್ಲೆ ಹೇಳಿದ್ನಲೆ.. ಮಧ್ಯ ಬಾಯಿ ಹಾಕಡಾ ಹೇಳಿ.. ಸ್ವಲ್ಪ ಸಂಪ್ರನ್ಶಕತ್ತಿ ತಡಿ..' ಅಂದ. ನಾನು ಸುಮ್ಮನೆ ಕುಳಿತೆ.
                 `ಹ್ವಾ ಗಪ್ಪತಿ... ಹೆಣ್ಣು ಹುಲಿಯಾಗಿತ್ತು ಕಾಣ್ತಾ ಹೊಡೆದಿದ್ದು.. ಮರೀನೂ ಇದ್ದಲಾ.. ಹೊಡೆಯದೇಯನಾ..? ಎರಡಿದ್ದು ಎಂದು ಕೇಳಿದ ಪಕ್ಕದಲ್ಲಿದ್ದ ಸುಬ್ಬಜ್ಜ.
                  `ಮರಿ ಪಾಪದ್ದಲಾ ಬಿಟ್ಹಾಕನನಾ..? ಆನು ಕೇಳಿದಿ.. ಬ್ಯಾಡದಾ ಗಪ್ಪತಿ.. ಹಾವು ಸಣ್ಣದಿದ್ರೂ ದೊಡ್ಡದಿದ್ರೂ ವಿಷನೇ ಅಲ್ದನಾ.. ಹಂಗೇಯಾ ಹುಲಿನೂವಾ ಮಾರಾಯಾ.. ಮರಿ ಇದ್ರೂ ಸೇಡಿಟ್ಕತ್ತಡಾ.. ಮುಂದೆ ದೊಡ್ಡಾಗಿ ತ್ರಾಸು ಕೊಡ್ತ್ವಿಲ್ಯನಾ..? ಒಂದ್ ಹುಲಿ ಒಂದ್ ಬಾಲ ಒಂದೇ  ಇನಾಮು ಸಿಕ್ತಿತ್ತಲಾ.. ಈಗ ಇವೆರಡನ್ನೂ ಕೊಂದ್ರೆ ಮೂರು ಹುಲಿ, ಮೂರು ಬಾಲ, ಮೂರು ಇನಾಮು ಸಿಕ್ತಲಾ.. ಹೊಡಿಯಾ ಗುಂಡ.. ಎಂದ. ಯಂಗೆ ಮನಸಿತ್ತಿಲ್ಲೆ.. ಕೊನಿಗೆ ಹ್ಯಾಂಗಂದ್ರೂ ಕೋವಿ ಲೋಡಾಕ್ಕಂಡಿತ್ತು ಒಂದ್ ಮರಿಗೆ ಹೊಡದಿ. ಅದನ್ನು ನೋಡಿ ಇನ್ನೊಂದು ತಪಶ್ಗ್ಯಂಡ್ ಹೋಪಲೆ ನೋಡಚು.. ಸುಬ್ಬಜ್ಜನ ಕೈಲಿದ್ದ ಬಂದೂಕಿಂದ ಅವನೂ ಗುಂಡು ಹೊಡೆದ  ಅದೂ ಬಿತ್ತು.. ಸುಮಾರ್ ಹೊತ್ತು ಬಿಟ್ಟು ಯಂಗವ್ ಮರ ಇಳಿದ್ಯ. ಅಷ್ಟೊತ್ತಿಗೆ ಯಂಗಳ ಕೋವಿ ಸದ್ದು ಕೇಳಿ ಹುಲಿ ಹೊಡೆದಿಕ್ಕು ಹೇಳಿ ಭತ್ತಗುತ್ತಿಗೆ, ಬಂದಳಿಕೆಯಿಂದ ಒಂದೆರಡು ಜನ ಬಪ್ಪಲೆ ಹಿಡದ.
                     ಆನು ಹುಲಿ ಹತ್ತಿರಕ್ಕೆ ಹೋಗಿ ನೋಡದಿ. ಎಂತಾ ಹುಲಿ ಗೊತ್ತಿದ್ದ. ಅಗಲಕ್ಕಿತ್ತು.. ಉದ್ದವೂ ಇತ್ತು. ಮರಿಗಳು ಚಂದಿದ್ವಾ.. ಆದ್ರೆ ಅವನ್ ಹೊಡೆದಿದ್ದಕ್ಕೆ ಯಂಗೆ ಬೇಜಾರಾಗೋತು.. ಅಷ್ಟೊತ್ತಿಗೆ ಯಲ್ಲಾ ಬಂದಿದ್ವಲಾ... ಯಂಗಳನ್ ಹೊಗಳಲೆ ಹಿಡಿದ್ವಾ.. ಹುಲಿ ಬೇಟೆಯಂತೂ ಆತು.. ಮುಂದಿನ ಕೆಲಸ ಮಾಡಕಾತು ಹೇಳಿ ಅಲ್ಲಿದ್ದವ್ಕೆ ಹೇಳದಿ. ಎಂತೆಂತೋ ತಂದ. ಹುಲಿ ಬಾಲ ತಗಂಡು ಹೊಂಟ್ಯ. ಕೊನಿಗೆ ಇನಾಮೂ ಸಿಕ್ತು. ಹುಲಿ ಚರ್ಮ ಇದ್ದಾ..' ಎಂದ ಗಪ್ಪಜ್ಜ .
                       `ಯಂಗೆ ಹುಲಿ ಬಾಲ ನೋಡಕಾಗಿತ್ತಲಾ.. ತೋರಿಸ್ತ್ಯಾ..?' ಎಂದು ವಿಜೇತಾ ಕೇಳಿದ ತಕ್ಷಣ ಇದ್ದಕ್ಕಿದ್ದಂತೆ ರೇಗಿದ ಗಪ್ಪಜ್ಜ ` ಎಂತದೇ.. ಮಧ್ಯ ಮಾತಾಡಡಾ ಹೇಳಿದ್ನಲೆ.. ಅದೆಂತಾ ಮಧ್ಯ ಮಧ್ಯ ಕಚಪಚ ಹಲುಬ್ತ್ಯೇ? ಸುಮ್ನೆ ಕುತ್ಗ ನೋಡನ' ಎಂದ..
                      ಮುಂದುವರಿದು `ಹುಲಿ ಬಾಲ ಇತ್ತಾ.. ಮೊನ್ನೆ ಮೊನ್ನೆವರೆಗೂ ಇತ್ತು. ಯನ್ನ ಮಗ ಬೆಂಗಳೂರಲ್ಲಿದ್ನಲಾ.. ಅಂವ ಬೇಕು ಹೇಳಿ ತಗಂಡ್ ಹೋದ..' ಅಂದ ಗಪ್ಪಜ್ಜ..
                      `ನಿಂಗವ್ ಬೇಕಾದ್ರೆ ಒಂದ್ ಸಾರಿ ಭತ್ತಗುತ್ತಿಗೆ ಗೆ ಹೋಗ್ ಬನ್ನಿ.. ಆ ಹುಲಿ ಹೊಡೆದ ಜಾಗ ನೋಡ್ಕ್ಯಂಡ್ ಬನ್ನಿ.. ದೊಡ್ ಮರ ಇದ್ದು..  ಭತ್ತಗುತ್ತಿಗೆ ಹೊಳೆ ಇದ್ದಲ್ರಾ ಅದಕ್ಕಿಂತ ಸ್ವಲ್ಪ ಮೇಲೆ ಆಗ್ತು.. ಅಲ್ಲೊಂದು ಯತ್ನಗಾಡಿ ರಸ್ತೆ ಇತ್ತು ಆಗ. ಅಲ್ಲೇ ಆಗ್ತು. ಆಗ ರಾಶಿ ಕಾಡಿತ್ತಾ.. ಕೊನಿಗೆ ಎಲ್ಲಾ ಬೋಳು ಹರಸಿಗಿದ. ಆನು ಮರ ಹತ್ತಗ್ಯಂಡು ಗುಂಡು ಹೊಡೆದ ಮರ ಇದ್ದ, ಕಡದಿಗಿದ್ವ ಗೊತ್ತಿಲ್ಲೆ.. ನಿಂಗವ್ ನೋಡ್ಕ್ಯಂಡು ಬನ್ನಿ.. ಯಂಗೂ ಹೇಳಿ ಹೀಗ ಅಲ್ಲಿ ಹ್ಯಾಂಗಿದ್ದು ಹೇಳಿ ಎಂದು ಸುಮ್ಮನಾದ.
                    ಗಪ್ಪಜ್ಜನ ಸಾಹಸಗಾಥೆ ಎಲ್ಲರಲ್ಲಿಯೂ ಬೆರಗನ್ನು ಮೂಡಿಸಿತು. ಆ ಕಾಲದಲ್ಲಿ ಹೀಗೆಲ್ಲಾ ನಡೆದಿತ್ತಾ ಎಂದುಕೊಂಡರು ಎಲ್ಲರೂ. ಪ್ರತಿಯೊಬ್ಬರಿಗೂ ಜಿಮ್ ಕಾರ್ಬೆಟ್ಟಿನ ಹುಲಿ ಹೊಡೆದ ಕಥೆಯನ್ನು ಕಣ್ಣಾರೆ ಕಂಡೆವೇನೋ ಎನ್ನುವಂತಹ ಅನುಭವ. ಯಾರಿಗೂ ಕ್ಷಣಕಾಲ ಬಾಯಿಂದ ಮಾತು ಹೊರಡಲೇ ಇಲ್ಲ. ಎಲ್ಲರೂ ಅಚ್ಚರಿಯಿಂದ ಕೇಳುತ್ತಲೇ ಇದ್ದರು. ಈಗಲೇ ಗವ್ವೆನ್ನುವ ಕಾಡು ಆಗ ಹೇಗಿ ಇದ್ದಿರಬೇಡ ಎಂದುಕೊಂಡರು ಎಲ್ಲರೂ. ಹಲವು ಕ್ಷಣಗಳ ನಂತರ ಎಲ್ಲರೂ ವಾಸ್ತವಕ್ಕೆ ಮರಳಿದರು.
                 `ಮೂರು ಹುಲಿಗಳದ್ದೂ ಬಾಲ ಕಿತ್ತುಕಂಡು ಹೋಗಿ ಯಂಗವ್ವು ಪಟೇಲಂಗೆ ತೋರ್ಸಿದ್ಯ. ನಂಗಕ್ಕಿಗೆ ಇನಾಮು ಸಿಕ್ಕಿತ್ತು. ಹುಲಿ ಹೊಡೆದ ಎರಡು ದಿನ ಭತ್ತಗುತ್ತಿಗೆ ಯಿಂದ ಹಿಡಿದು ಕುಚಗುಂಡಿ ತನಕ ಎಲ್ಲೆಲ್ಲಿ ಹುಲಿ ಕಾಟ ಇತ್ತೋ ಅಲ್ಲೆಲ್ಲ ಹುಲಿ ಹೊಡೆದ ಯಂಗಳನ್ನು ಮೆರವಣಿಗೆ ಮಾಡಿಸಿದ್ದ. ಹಬ್ಬ ಮಾಡಿದಿದ್ದ. ಅದಿನ್ನೂ ಯನ್ನ ಕಣ್ಣಲ್ಲಿ ಕಟ್ಟಿದ ಹಾಂಗೆ ಇದ್ದು ನೋಡಿ..' ಎಂದರು ಗಣಪಜ್ಜ. ಎಲ್ಲರಿಗೂ ಗಣಪಜ್ಜನ ಎದುರು ಒಮ್ಮೆ ಎದ್ದು ನಿಂತು ಸೆಲ್ಯೂಟ್ ಮಾಡಬೇಕು ಎನ್ನಿಸಿತು. ಒಂದಿಬ್ಬರು ಎದ್ದು ನಿಂತೂ ನಿಂತಿದ್ದರು.

(ಮುಂದುವರಿಯುತ್ತದೆ..)

ಅಘನಾಶಿನಿ ಕಣಿವೆಯಲ್ಲಿ-17

(ಹುಲಿ ಶಿಖಾರಿಯ ಸಾಂದರ್ಭಿಕ ಚಿತ್ರ)
        `ಆ ಕಾಲದ ಬಗ್ಗೆ ಹೇಳೋದು ಅಂದ್ರೆ ಎಷ್ಟು ಖುಷಿಯ ಸಂಗ್ತಿ ಗೊತ್ತಿದ್ದಾ? ಆವಾಗ ನಾವು ಇಲ್ಲಿಂದ ದಿಲ್ಲಿಯವರೆಗಾದ್ರೂ ಬರಿಗಾಲಲ್ಲಿ ನಡ್ಕೊಂಡೇ ಹೋಗ್ತಿದ್ಯಾ. ಈಗಿನ ಹಾಂಗೆ ಬೈಕು-ಕಾರು ಇತ್ತಿಲ್ಲೆ. ರೈಲು ಇತ್ತು. ಆದರೆ ರೈಲು ಹತ್ತಲೆ ಹೋಗವು ಅಂದ್ರೂ ಅದೆಷ್ಟೋ ಕಿಲೋಮೀಟರ್ ದೂರ ಹೋಗಕಾಗಿತ್ತು. ಬಗಲ ಚೀಲದ ತುಂಬ ಊಟ ಕಟ್ಟಿಕ್ಯಂಡು ನಡೆಯಲೆ ಶುರು ಹಚ್ಚಿಕ್ಯಂಡ್ರೆ ಅದೆಷ್ಟು ಮೈಲಿ ದೂರ ಒಂದೇ ಉಸಿರಿಗೆ ನಡ್ಕೊಂಡು ಹೋಗ್ತಿದ್ಯ ಗೊತ್ತಿದ್ದಾ. ನಾ ಆಗ ಸಣ್ಣಕ್ಕಿದ್ದಿದ್ದೆ. ನಂಗಿನ್ನೂ ಅದು ಅಸ್ಪಷ್ಟ ನೆನಪು. ಈಗ ನಮ್ಮೂರ ಹೊಳೆ ದಂಡೆಯ ಮೇಲೆ ವಾಟೆಮಟ್ಟಿ ಬೆಳೆದುಕೊಂಡಿದ್ದಲ್ಲಾ.. ಅಲ್ಲಿ ಮೊದಲು ನಮ್ಮೂರಿನ ಎತ್ತಿನ ಗಾಡಿ ರಸ್ತೆ ಇತ್ತು. ಶಿರಸಿಯಿಂದ ಹೋಗಿ ಬಂದು ಮಾಡವು ಅಂದ್ರ ಅದೇ ರಸ್ತೆ ಅವಲಂಬನೆ ಮಾಡಕಾಗಿತ್ತು. ನಮ್ಮೂರಿನಿಂದ ಹೊಳೆ ತೀರದಲ್ಲಿ ನಡ್ಕೊಂಡು ಹೋಗಿ, ಮುತ್ಮೂರ್ಡು ತಲುಪಿ, ಅಲ್ಲಿಂದ ಬಾಳಗಾರಿಗೆ ಹೋಗಿ ಆಮೇಲೆ ಭತ್ತಗುತ್ತಿಗೆ ತಲುಪಿ ಅಲ್ಲಿಂದ ಶಿರಸಿಗೆ ಹೋಗಕಾಗಿತ್ತು. ನಮ್ಮೂರಲ್ಲಂತೂ ಈಗಿರೋದಕ್ಕಿಂತ ಹತ್ತು ಪಟ್ಟು ಕಾಡಿತ್ತು. ಮನೆ ಬಾಗಿಲಲ್ಲೇ ಹುಲಿಯ ಬಿಡಾರ ಇತ್ತು ಅಂದ್ರೂ ತಪ್ಪಿಲ್ಲೆ ನೋಡಿ. ಆಗ್ಲೇ ನಾನು ಮೂರು ಹುಲಿ ಕೊಂದಿದ್ದಿ ಗೊತ್ತಿದ್ದಾ..' ಎಂದರು ಗಪ್ಪಜ್ಜ.
          ಎಲ್ಲರೂ ಒಮ್ಮೆಲೆ ಬೆಚ್ಚಿ ಬಿದ್ದು `ವಾಟ್...' ಎಂಬ ಉದ್ಗಾರದೊಂದಿಗೆ ಕುಮುಟಿ ಬಿದ್ದರು.
            ಹುಲಿ ಹೊಡೆಯುವುದು ಸಾಮಾನ್ಯವೇ..? ಇಲಿಯನ್ನು ಕೊಲ್ಲಲು ಹಲವರು ಹೆದರುವ ಇಂದಿನ ದಿನಮಾನದಲ್ಲಿ ಹುಲಿ ಹೊಡೆಯುವುದು ಅಂದರೆ ಸುಲಭವೇನಲ್ಲ ಬಿಡಿ. ಗಪ್ಪಜ್ಜ ಇಂತಹ ಸಾಹಸ ಮಾಡಿದ್ದಾನೆ ಎಂದಿದ್ದನ್ನು ಕೇಳಿ ಎಲ್ಲರಿಗೂ ಒಳಗೊಳಗೆ ಖುಷಿ. ಊರಿನ ತುಂಬೆಲ್ಲ ಗಪ್ಪಜ್ಜನಿಗೆ ಹುಲಿ ಹೊಡೆದ ಗಪ್ಪಜ್ಜ ಎನ್ನುವ ಮಾತು ಚಾಲ್ತಿಯಲ್ಲಿ ಬಂದಿತ್ತು. ವಿನಾಯಕನಿಗೆ ಇದು ಒಮ್ಮೆಲೆ ನೆನಪಿಗೆ ಬಂದಿತು. ಅಲ್ಲದೇ ಅಜ್ಜ ಎದುರು ಸಿಕ್ಕಾಗಲೆಲ್ಲ `ಗಪ್ಪಜ್ಜ .. ಹುಲಿ ಹೊಡೆದಿದ್ನಡಾ ಮಾರಾಯಾ..' ಎಂದು ಹೇಳುವ ಮೂಲಕ ಗಪ್ಪಜ್ಜ ನೆಂದರೆ ಕನ್ನಡ ಚಿತ್ರರಂಗದ ವಿಲನ್ನೇ ಇರಬೇಕು ಎಂದು ಅನೇಕರು ನನ್ನಲ್ಲಿ ಭೀತಿಯನ್ನು ಹುಟ್ಟುಹಾಕಿದ್ದರು. ವಿನಾಯಕನಲ್ಲಿ ಈ ಮಾತು ಬಹಳ ಕುತೂಹಲಕ್ಕೆ ಕಾರಣವಾಗಿತ್ತು. ತಾನು ಚಿಕ್ಕವನಾಗಿದ್ದಾಗ ಸದಾ ಕಿಲಾಡಿ ಮಾಡುವ ನಮ್ಮ ವಿರುದ್ಧ ಗಪ್ಪಜ್ಜ ಬೈಗುಳಗಳ ಸುರಿಮಳೆಯನ್ನೇ ಸುರಿಸುತ್ತಿದ್ದ. ಆಗಾಗ ತನ್ನ ಊರುಗೋಲಿನಿಂದ ಬಾಸುಂಡೆ ಬರುವಂತೆ ಬಡಿದಿದ್ದೂ ಇದೆ. ಇಂತಹ `ಗಪ್ಪಜ್ಜ ಹುಲಿ ಹೊಡೆದಿದ್ನಡಾ..' ಎಂದು ದಂಟಕಲ್ಲಿನ ಹಿರಿಯರ ಆದಿಯಾಗಿ ಹೇಳುತ್ತಿದ್ದ ಮಾತು ಚಿಕ್ಕಂದಿನಲ್ಲಿ ಭಯವನ್ನು ಹುಟ್ಟಿಸಿದರೂ ದೊಡ್ಡವನಾದ ಮೇಲೆ ಕುತೂಹಲಕ್ಕೆ ಕಾರಣವಾಗಿತ್ತು.
                ವಿನಾಯಕನಿಗೆ ದೊಡ್ಡವನಾದಂತೆಲ್ಲ ಗಪ್ಪಜ್ಜ ನ ಮೇಲಿದ್ದ ಭಯ ದೂರವಾಗಿತ್ತು. ಅಷ್ಟರಲ್ಲಿ ವಯಸ್ಸಾಗಿದ್ದ ಗಪ್ಪಜ್ಜ ತನ್ನ ಸಿಟ್ಟು ಸೆಡವನ್ನು ದೂರ ಮಾಡಿಕೊಂಡು ಪರಿಸ್ಥಿತಿಗೆ ತಕ್ಕಂತೆ ಅಸಹಾಯಕತೆಯನ್ನು, ಸೌಮ್ಯ ಸ್ವಭಾವವನ್ನೂ ಹೊಂದಿದ್ದ. ವಿನಾಯಕ ಕಾಲೇಜಿಗೆ ಹೋಗಿ ಬರುತ್ತಿದ್ದ ಸಂದರ್ಭದಲ್ಲೆಲ್ಲ ಆಗಾಗ ಮಾತಿಗೆ ಸಿಗುತ್ತಿದ್ದ ಗಣಪಜ್ಜ `ಹ್ವಾ..ಶಿರಸಿಂದ ಬರಕಿದ್ರೆ ಸಂಯುಕ್ತ ಕರ್ನಾಟಕ ತಗಂಡು ಬಾರಾ..ಓದಕಾಗಿತ್ತು..' ಎಂದು ಹೇಳುವ ಮೂಲಕ ಮಾತಿಗೆ ಪೀಠಿಕೆ ಹಾಕುತ್ತಿದ್ದ. ವಿನಾಯಕನೂ ಮೊದ ಮೊದಲು ಭಯದಿಂದ ಮಾತನಾಡುತ್ತಿದ್ದ. ಕೊನೆ ಕೊನೆಗೆ ಮಾತು ಆಪ್ತವಾಗುವ ಹಂತಕ್ಕೆ ಬಂದಿತ್ತು. ಸಲಿಗೆಯೂ, ಕುಶಾಲಿ ಮಾಡುವ ಹಂತವೂ ತಲುಪಿತ್ತು.
                ವಿನಾಯಕ ನೆನಪು ಮಾಡಿಕೊಳ್ಳುತ್ತಿದ್ದಂತೆಯೇ ವಿಜೇತಾ ಹಾಗೂ ವಿಕ್ರಮರು ಗಪ್ಪಜ್ಜನ ಬಳಿ ಹುಲಿ ಹೊಡೆದ ವೃತ್ತಾಂತವನ್ನು ಹೇಳುವಂತೆ ಪೀಡಿಸಲು ಆರಂಭಿಸಿದರು. ತನ್ನ ಯವ್ವನದಲ್ಲಿ ಹುಲಿಯಂತೆಯೇ ಅಬ್ಬರದಿಂದ ಮೆರೆದಿದ್ದ ಗಪ್ಪಜ್ಜ ನ ಬಳಿ ಆತನ ಯವ್ವನದ ದಿನಗಳ ಬಗ್ಗೆ ಹೇಳು ಎಂದಾಗ ಆತ ಬಿಡುತ್ತಾನೆಯೇ..? ವಯಸ್ಸಾದ ಮೇಲೆ ಆತನಿಗೂ ಹೊತ್ತು ಹೋಗಬೇಕು. ಮನೆಯಲ್ಲಿ ಮಾತುಕೆಳುತ್ತಿದ್ದವರೆಲ್ಲ ಈಗ ದೊಡ್ಡವರಾಗಿದ್ದಾರೆ. ಆತನಿಗೆ ಮಾತನಾಡಲು ಒಬ್ಬರು ಬೇಕಿತ್ತು. ಅದೇ ಸಮಯಕ್ಕೆ ಸಿಕ್ಕು ಕೇಳಿದ್ದರು. `ತಡಿರಾ ತಮಾ ಚಾ ಕುಡ್ಕತ್ತ ಮಾತಾಡನಾ..' ಎಂದು ಹೇಳಿ ಮೊಟ್ಟ ಮೊದಲನೇ ಸಾರಿ ತಾನು ಹುಲಿ ಹೊಡೆದ ಕಥೆಯನ್ನು ಹೇಳಲು ಶುರು ಮಾಡಿದ್ದ. ತೊಂಭತ್ತು ವಸಂತಗಳನ್ನು ಮೀರಿದ್ದ ಗಪ್ಪಜ್ಜ ತನ್ನ ಇಪ್ಪತ್ತರ ಹರೆಯದಲ್ಲಿ ಮಾಡಿದ್ದ ಸಾಹಸದ ವಿವರವನ್ನು ಕೇಳಲು ಎಲ್ಲರೂ ಅವರ ಮನೆಯ ಖುರ್ಚಿಯ ತುದಿಯಲ್ಲಿ ಚೂಪಗೆ ಕುಂತಿದ್ದರು..

**
            `ನಂಗಾಗ  ಇಪ್ಪತ್ತೋ ಇಪ್ಪತ್ತೈದೋ.. ಸಮಾ ನೆನಪಿಲ್ಲೆ.. ಆಗ ಆನು ಅಂದ್ರೆ ಸುತ್ತಮುತ್ತಲೆಲ್ಲ ಭಯಂಕರ ಹೆದರ್ತಿದ್ದ. ಉರಾಉರಿ ಕಾಲ.. ಯನ್ನ ಉರಾಉರಿ ನೋಡಿ ಎಷ್ಟ್ ಜನ ಯನ್ನ ಅಪ್ಪಯ್ಯನ ಕೈಲಿ ಬಂದ್ ಪುಕಾರು ಹೇಳಿದ್ವೇನ. ಯನ್ನ ಅಪ್ಪಯ್ಯನೂ ಅಷ್ಟೇ ಅಬ್ಬರದ ಮನುಷ್ಯ ಆಗಿದ್ದ. ಅದಕಾಗೇ ಆ ದಿನಗಳಲ್ಲಿ ಆನು ಬಹಳಷ್ಟು ಹಾರಾಡಿದ್ರೂ ಅಂವ ಯಂಗೆ ಎಂತದ್ದೂ ಮಾಡ್ತಿದ್ನಿಲ್ಲೆ..' ಎಂದ.
`ಹೂಂ.. ಹೂಂ..' ಎಂದರು ಎಲ್ಲರೂ
                     'ಈಗ ಯಂಗೆ ತೊಂಭತ್ತಾತ ಮಾರಾಯಾ.. ಯಂಗೆ ಇಪ್ಪತ್ತು ವರ್ಷದ ಆಜು ಬಾಜಲ್ಲಿ ನಡೆದಿದ್ದು ಅಂದ್ರೆನಿಮಗೆಂತದಾದ್ರೂ ತಲಿಗೆ ಹೋಗ್ಲಕ್ಕ..? ಆಗಿನ ಕಾಲ, ಹೆಂಗಿತ್ತು ಗೊತ್ತಿದ್ದ.. ಈ ಊರಿದ್ದಲಾ ಇದರ ಸುತ್ತಮುತ್ತ ಈಗ ಬೋಳು ಗುಡ್ಡ ಕಾಣ್ತಲಾ.. ಆಗೆಲ್ಲಾ ಬರೀ ಕಾನೇ ಇದ್ದಿತ್ತು.. ಈಗ ಯಮ್ಮನೆ ಕೊಟ್ಗೆ ಇದ್ದಲಾ ಅಲ್ಲೀವರಿಗೆ ಹುಲಿ ಬಂದು ದನ-ಕರ ಎಲ್ಲಾ ಹೊತ್ಕಂಡು ಹೋಗ್ತಿತ್ತು ಹುಲಿ. ಹುಲಿಯ ಅಬ್ಬರಕ್ಕೆ ದನಗಳ ಜೊತೆಗೆ ಜನಗಳೂ ಬೆಚ್ಚಿ ಬಸವಳಿದು ಬಿಟ್ಟಿದಿದ್ದ ಒಂದು ಕಾಲದಲ್ಲಿ.. ಬ್ರಿಟೀಷರ ಕಾಲ ಬೇರೆ ನೋಡು...' ಎಂದರು.
                      ಎಲ್ಲರೂ ಅವರು ಹೇಳಿದಂತೆಲ್ಲ ಕಣ್ಮುಂದೆ ಎಪ್ಪತ್ತು ವರ್ಷಗಳ ಹಿಂದಿನ ಚಿತ್ರಣ ಅಂದರೆ 1930-40ರ ದಶಕದ ಚಿತ್ರಣವನ್ನು ಕಟ್ಟಿಕೊಳ್ಳುತ್ತ ಹೋದರು. ಅವರು ಹುಲಿಯನ್ನು ರೌಧ್ರ ಭಯಂಕರವಾಗಿ ಚಿತ್ರಿಸುತ್ತ ಹೋದರು. ಎಲ್ಲರ ಕಣ್ಣಮುಂದೆ ಹುಲಿಯೆಂದರೆ ರೌದ್ರ ಎನ್ನಿಸಲೇ ಇಲ್ಲ. ಅಂದಿನ ಹಾಗೆ ಹುಲಿ ಕಣ್ಣೆದುರಿಗೆ ಬಂದು ಎಡತಾಕಿ ಹಾಯ್ ಹೇಳಿ ಹೋಗುವುದಿಲ್ಲ ನೋಡಿ. ಹುಲಿಯ ಭಯವೂ ಇಲ್ಲವಲ್ಲ. ಅದಕ್ಕೆ ಹುಲಿಯೆಂದರೆ ಬಹುತೇಕ ದಂತಕಥೆಯಂತೆ, ಚಿಕ್ಕಮಕ್ಕಳ ಪಾಲಿಗೆ ಆಟಿಕೆಯಂತೆ ಅನ್ನಿಸಿತು. ಅದಕ್ಕೆ ತಕ್ಕಂತೆ ಚಿತ್ರಣ ಕೂಡ.
                      `ಯಂಗವ್ವು ನಿಂಗಳ ಹಾಂಗೆ ಇದ್ದ ಕಾಲ ಅದು. ಬ್ರಿಟೀಷ್ ರೂಲಿತ್ತು. ಈಗಿನ ಹಾಂಗೆ ಹುಲಿ ಬೇಟೆ ನಿಷೇಧ ಇತ್ತಿಲ್ಲೆ. ಮತ್ತೊಂದ್ ವಿಷ್ಯ ಅಂದ್ರೆ ಆಗ ಬ್ರಿಟೀಷರೇ ಹುಲಿ ಹೊಡೆಯಲೆ ಅಡ್ಡಿಲ್ಲೆ ಹೇಳಿ ಹೇಳಿದಿದ್ದ. ಹುಲಿ ಹೊಡೆದು ಅದರ ಬಾಲ ತಂದು ಪಟೇಲನ ಬಳಿ ತೋರಿಶಿದವ್ಕೆ ಇನಾಮೂ ಸಿಕ್ತಿತ್ತು. ನಮ್ಮೂರಲ್ಲೂ ಹುಲಿ ಕಾಟ ಇತ್ತಲಾ.. ಹುಲಿ ಹೊಡಿಯದೇ ಸೈ..ಅಂದಕಂಡಿ..ಬಂದೂಕು ಬೇಕು ಹೇಳಿ ಅಪ್ಪಯ್ಯನ ಹತ್ರೆ ಕೇಳದು ಹೆಂಗೆ..? ತಲೆಬಿಶಿ ಶಿಕ್ಕಾಪಟ್ಟೆ ಆಗೋತು. ಅಪ್ಪಯ್ಯನ ಹತ್ರ ಕೇಳಿರೆ ಎಲ್ಲಾದ್ರೂ ಬೈದು ಸುಮ್ಮಂಗಿರಾ.. ನೀ ಹುಲಿ ಉಸಾಬರಿಗೆ ಹೋಗದು ಬ್ಯಾಡಾ.. ಹೇಳಿ ಹೇಳಿದ್ರೆ ಎನ್ನುವ ಹೆದ್ರಿಕೆ ಇತ್ತು.. ಕೊನಿಗೂ ಬಿಟ್ಟಿದ್ನಿಲ್ಲೆ.. ಕೇಳ್ದಿ ಹೇಳಾತು.. ಅಪ್ಪಯ್ಯ ಅಡ್ಡಿಲ್ಲೆ ಅಂದ್ ಬಿಟ್ನಾ..
                   ಈಗಿನ ಹಾಂಗೆ ಬಸ್ಸಿತ್ತಿಲ್ಯಲಾ..ಅದೇ ಖುಷಿಯಲ್ಲಿ ಶಿರಸಿಗೆ ನೆಡ್ಕಂಡು ಹೋಗಿ ಬಂದೂಕು ತಗಂಡ್ ಬಂದಿ.. ತಗಾ.. ಇದೇ ಇಲ್ನೋಡು.. ಇದೇ ಬಂದೂಕು..' ಎಂದು ಗಪ್ಪಜ್ಜ ಬಂದೂಕು ತೋರಿಸಿದಾಗ ಗಪ್ಪಜ್ಜ ಹುಲಿ ಹೇಗೆ ಹೊಡೆದಿರಬಹುದು ಎನ್ನುವ ಕಲ್ಪನೆ ಮನದಲ್ಲಿ ಮೂಡಿ ಎಲ್ಲರಲ್ಲೂ ರೋಮಾಂಚನ..
                   ಹಳೇ ತೇಗದ ಮರದ ದೊಡ್ಡ ಹಿಡಿಕೆ ಹೊಂದಿದ್ದ ಬಂದೂಕು ಅದು. 70 ವರ್ಷ ಹಿಂದಿಂದು ಬೇರೆ. ಈಗತಾನೆ ಎಣ್ಣೆ ಹಾಕಿ ಒರೆಸಿ ಇಟ್ಟಿದ್ದರೋ ಎನ್ನುವಂತೆ ಮಿಂಚುತ್ತಿತ್ತು. ತಗಳ್ರಾ ಎಂದು ಹೇಳಿದವರೇ ಎಲ್ಲರ ಮುಂದೆ ಬಂದೂಕನ್ನು ಹಿಡಿದರು.. ಪ್ರದೀಪ ಎತ್ತಿಕೊಂಡ.. ರಾವಣ ಬಿಲ್ಲನ್ನೆತ್ತಲೂ ಅಷ್ಟು ಕಷ್ಟಪಟ್ಟಿದ್ದನೋ ಇಲ್ಲವೋ.. ಅದರ ಭಾರಕ್ಕೆ ಒಮ್ಮೆ ಆಯ ತಪ್ಪಿದ.. `ತಮಾ.. ನಿಂಗೆ ಎತ್ತಲೆ ಆಗ್ತಿಲ್ಲೆ.. ನೋಡು.. ಆಗ ಯಂಗವ್ವು ಇದನ್ನ ವಂದೇ ಕೈಯಲ್ಲಿ ಹಿಡಕಂಡು ಬೇಟೆ ಮಾಡ್ತಿದ್ಯ.. ಹುಲಿ ಹೊಡೆದಿದ್ದೂ ಇದರಲ್ಲೇಯಾ.. ಅಂದ್ರೆ ನೀ ನಂಬ್ತಿಲ್ಲೆ..' ಎಂದಾಗ ಪ್ರದೀಪ ಕಕ್ಕಾಬಿಕ್ಕಿ.
ಗಪ್ಪಜ್ಜ ಮುಂದುವರಿದ..
                     `ಒಂದು ಚಳಿಗಾಲ ಹುಲಿಗೆ ಗತಿ ಕಾಣ್ಸವು ಹೇಳಿ ಅಂದಕಂಡಿದ್ದಿದ್ದಿ. ಆನು ಬಂದೂಕು ತಂದಿಟ್ಟು ತಿಂಗಳು ಗಟ್ಟಲೆ ಆಗಿತ್ತು.. ಆದರೆ ಎಲ್ಲೋ ಅದಕ್ಕೆ ಸೂಟು ಸಿಕ್ಕಿತ್ತು ಕಾಣ್ತು.. ಹುಲಿಯ ಪತ್ತೇನೆ ಇಲ್ಲೆ.. ಅಪ್ಪಯ್ಯಂತೂ ಗಪ್ಪತಿ ಬಂದೂಕು ತಗಬಂಜಾ ಹೇಳಿ ಹುಲಿಗೆ ಗೊತ್ತಾಗೋಜು ಕಾಣ್ತು.. ಹುಲಿ ಇತ್ಲಾಗೆ ಮಕಾನೆ ಹಾಕಿದ್ದಿಲ್ಲೆ ಹೇಳಿ ಹೇಳಲೆ ಶುರು ಮಾಡಿದ್ದ. ವಾರಕ್ಕೆ ಎರಡು ಸಾರಿಯಾದರೂ ಬಂದು ಕೊಟ್ಗೆ ಮೇಲೆ ದಾಳಿ ಮಾಡ್ತಾ ಇದ್ದಿದ್ ಹುಲಿ ಎತ್ಲಾಗ್ ಹೋತು ಅನ್ನೋ ತಲೆಬಿಸಿ... ಹಿಂಗೆ ಸ್ವಲ್ಪ ದಿನ ಆದ್ಮೇಲೆ ಒಂದಿನ ಮೂರು ಸಂಜೆ ಹೊತ್ತಲ್ಲಿ ನಮ್ಮೂರ್ ಜೀಡೆಹೊಂಡ ಇದ್ದಲಾ ಅಲ್ಲಿ ಹುಲಿ ಗಂವ್ ಅಂತಾ.. ಹೋ ಬಂತು ಹುಲಿ ಅಂದ್ಕಂಡಿ.. ಮೈಯೆಲ್ಲಾ ಚುರು ಚುರುಗುಡಲೆ ಹಿಡತ್ತು.. ಹುಲಿ ಹೊಡೆಯವ್ವು ಹೇಳಿ ಒಂಥರಾ ಖುಷಿ.. ಬಂದೂಕು ಎತ್ತಿ ಲೋಡು ಮಾಡಿಟ್ಗಂಡಿ..
                     `ಸುಮಾರ್ ಹೊತ್ತಾತು..ಜೀಡೆ ಹೊಂಡದಲ್ಲಿ ಕೂಗೋ ಹುಲಿ ಮನೆ ಹತ್ರ ಬತ್ತೇ ಇಲ್ಲೆ.. ಯಂಗಂತೂ ಯದೆಯಲ್ಲಿ ಢವ ಢವ.. ರಾತ್ರಿ ಎಂಟ್ ಗಂಟೆ ಆದ್ರೂ ಹುಲಿ ಬಪ್ಪ ಲಕ್ಷಣನೇ ಇಲ್ಲೆ .. ಈ ಹುಲಿಗೆ ಹುಲಿ ಹಿಡಿಲಿ ಹೇಳಿ ಬೈದು ದಣೀ ಬಂದು ಊಟಕ್ ಕುಂತಿದ್ದಿದ್ದಿ.. ಕ್ವಟ್ಗೇಲಿ ದನ ಕರ ಎಲ್ಲಾ ಹುಯ್ಯಲೆಬ್ಸಿಬಿಟ್ಟ.. ಓಹೋ ಹುಲಿ ಬಂಜು ಅಂದ್ಕಂಡಿ.. ಅದಕ್ ಸರಿಯಾಗಿ ಅಪ್ಪಯ್ಯ.. ತಮಾ ಕೊಟ್ಗಿಗೆ ಹುಲಿ ಬಂಜು ಕಾಣ್ತು.. ನೋಡು.. ಎಂದ.. ಅಲ್ಲೆಲ್ಲೋ ಇಟ್ಟಿದ್ದು ಲಾಟನ್ ಹಿಡ್ಕಂಡು ಕ್ವಟ್ಗಿಗೆ ಹೋದ್ರೆ ಹೌದು.. ಹುಲಿ ಬಂಜು..'
                   ಎಂದು ನಿಟ್ಟುಸಿರಿಟ್ಟರು..
                  ಎಲ್ಲರಿಗೂ ಮುಂದೇನಾಯ್ತು ಅನ್ನುವ ಕುತೂಹಲ.. ಆಮೇಲೆ ಎಂದರು.. ತಡಿರಾ ವಂದಕ್ಕೆ ಹೋಗಿ ಬತ್ತಿ ಎಂದರು ಗಪ್ಪಜ್ಜ .. ಎಲ್ಲರಿಗೂ ಸಿನೆಮಾ ಮಧ್ಯ ಇಂಟರ್ವಲ್ ಬಂದಂಗಾಯ್ತು.. ವಂದಕ್ಕೆ ಹೋದ ಗಪ್ಪಜ್ಜ ವಾಪಾಸು ಬರುವುದರೊಳಗಾಗಿ ಬಂದೂಕನ್ನು ನೋಡಿ ಅದರ ಭಾರದ ಕಾರಣ ಉಸಾಬರಿ ಬ್ಯಾಡ ಎಂದು ಪ್ರದೀಪ ಅದನ್ನು ದೂರಕ್ಕಿಟ್ಟು ಪೆಕರನಂತೆ ನಕ್ಕಿದ್ದ..
                     ಅವರ ಹಳೆಯ ಮನೆಯ ಗೋಡೆಯ ಮೇಲೆ ಹತ್ತು ಹಲವು ತರಹೇವಾರಿ ಕ್ಯಾಲೆಂಡರುಗಳಿದ್ದರೂ ಅಲ್ಲೊಂದು ಕಡೆಗೆ ಪ್ಲಾಸ್ಟಿಕ್ ಹೂವಿನ ಹಾರ ಹಾಕಿದ ಒಂದು ಪೋಟೋ ಹಾಗೂ ಅದರ ಕೆಳಭಾಗದಲ್ಲಿದ್ದ ತಾಮ್ರಪಟ ಕಣ್ಣಿಗೆ ಕಂಡಿತು. ಹತ್ತಿರ ಹೋಗಿ ನೋಡಿದಳು ವಿಜೇತಾ. ಅದು ಗಪ್ಪಜ್ಜ ನ ಅಪ್ಪಯ್ಯ ಗಣೇಶಜ್ಜನ ಪೋಟೋ ಹಾಗೂ ಆತ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಕ್ಕಾಗಿ ಭಾರತ ಸರ್ಕಾರ ನೀಡಿದ ಗೌರವ ಫಲಕವಾಗಿತ್ತು.. ಅದರಲ್ಲಿ ಬರೆದಿದ್ದ ಇಂಗ್ಲೀಷ್ ಹಾಗೂ ಹಿಂದಿ ಅಕ್ಷರಗಳನ್ನು ಹೆಕ್ಕಿ ಹೆಕ್ಕಿ ಓದಿ ಮುಗಿಸುವುದರೊಳಗಾಗಿ ಒಂದು ನಂಬರ್ ಕಾರ್ಯ ಮುಗಿಸಿ ಬಂದ ಗಪ್ಪಜ್ಜ ಅವರ ಮನೆಯ ಕಾಲಮಣೆ ಮೇಲೆ ಕುಳಿತು ಮಾತಿಗೆ ತೊಡಗಿದ್ದರು.

(ಮುಂದುವರಿಯುತ್ತದೆ...)

ಸೆಳೆಯುತ್ತಿದೆ ಕಲ್ಪ-ಶಿಲ್ಪ


             ಶಿರಸಿ ತಾಲೂಕಿನ ಸೋಂದಾ ಸ್ವರ್ಣವಲ್ಲಿ ಮಠದಲ್ಲಿ ನಡೆದ ಕೃಷಿ ಜಯಂತಿ ಹಲವಾರು ವಿಶೇಷತೆಗಳನ್ನು ಅನಾವರಣಗೊಳಿಸಿತು. ರೈತರು, ತೋಟಿಗರು ಪೋಷಿಸಿಕೊಂಡು ಬಂದಿರುವ ಹಲವಾರು ಕಲೆ, ವೈವಿಧ್ಯತೆಗಳನ್ನು ಅನಾವರಣಗೊಳಿಸಿತು. ಶ್ರೀಮಠದಲ್ಲಿ ಅನಾವರಣಗೊಂಡ ಕಲಾ ವಿಶಿಷ್ಟತೆಯಲ್ಲಿ ಕಲ್ಪ ಶಿಲ್ಪವೂ ಒಂದು.
      ಕುಮಟಾ ತಾಲೂಕಿನ ಮೂರೂರಿನ ಸಿದ್ಧರ ಮಠದ ಶಿವಮೂರ್ತಿ ಭಟ್ಟರ ಕೈಯಲ್ಲರಳಿದ ಬೇರು ಬೊಗಟೆ ಕಲಾಕೃತಿಗಳು, ತೆಂಗಿನ ಚಿಪ್ಪಿನ ಕಲಾಕೃತಿಗಳು, ಮರದ ವಿಶಿಷ್ಟ ಕೆತ್ತನೆಗಳು ಶ್ರೀಮಠದ ಆವರಣದಲ್ಲಿ ಪ್ರದರ್ಶನಕ್ಕಿದ್ದವು. ಹಲವಾರು ವರ್ಷಗಳ ಶ್ರಮದಿಂದ ಮೂಡಿದ್ದ ವಿಶಿಷ್ಟ ಆಕೃತಿಗಳು ಪ್ರದರ್ಶನದಲ್ಲಿದ್ದವು. ಕೃಷಿ ಜಯಂತಿಗೆ ಆಗಮಿಸಿದ್ದ ಕೃಷಿಕರ, ರೈತರ ಹಾಗೂ ತೋಟಿಗರ ಮನಸ್ಸನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದವು.      

                    ಚಿಕ್ಕ ಕಿರುಬೆರಳ ಗಾತ್ರದ ಆಕೃತಿಗಳಿಂದ ಹಿಡಿದು ಒಂದಡಿ ಎತ್ತರದ ಬೇರು ಬೊಗಟೆ ಕಲಾಕೃತಿಗಳೂ ಕಲ್ಪ ಶಿಲ್ಪದಲ್ಲಿದ್ದವು. ತೆಂಗಿನ ಕಾಯಿಯ ಚಿಪ್ಪಿನಿಂದ ತಯಾರಿಸಲಾಗಿದ್ದ ಬಗೆ ಬಗೆಯ ಆಕೃತಿಗಳಂತೂ ಎಲ್ಲರನ್ನೂ ಸೆಳೆದವು. ಕಲ್ಲಿನಿಂದಲೇ ಮಾಡಿದ್ದ ಕೊಳಲು ಎಲ್ಲರಲ್ಲಿಯೂ ಬೆರಗು ಮೂಡಿಸಿತು. ಕಲ್ಲಿನಿಂದ ಕೊಳಲನ್ನು ಮಾಡಲು ಸಾಧ್ಯವಿದೆ ಎನ್ನುವುದು ವಿಸ್ಮಯಕ್ಕೆ ಕಾರಣವಾಯಿತು. ಬಿದಿರು, ಶಮೆ ಹಾಗೂ ವಾಟೆ ಬಿದಿರಿನಿಂದ ಕೊಳಲನ್ನು ಮಾಡಲಾಗುತ್ತದೆ. ಆದರೆ ಕಲ್ಲಿನಿಂದ ಕೊಳಲನ್ನು ಮಾಡುವ ಪರಿಕಲ್ಪನೆಯೇ ವಿಶಿಷ್ಟವಾದುದು. ಶಿಲ್ಪ ಕಲ್ಪದ ರೂವಾರಿಯಾದ ಶಿವಮೂರ್ತಿ ಭಟ್ಟರ ತನ್ಮಯತೆ ಕಲ್ಲಿನ ಕೊಳಲಿಗೆ ಕಾರಣವಾಗಿದೆ. ಎರಡು ದಿನಗಳ ಕಾಲ ಶೃದ್ಧೆಯಿಂದ ಕೆಲಸ ಮಾಡಿ ಕಲ್ಲಿನ ಕೊಳಲನ್ನು ತಯಾರಿಸಿದ್ದೇನೆ ಎಂದು ಭಟ್ಟರು ಹೇಳುತ್ತಾರೆ. ಕಲ್ಲಿನ ಕೊಳಲಿನಿಂದ ಧ್ವನಿಯನ್ನು ಹೊರಡಿಸಬಹುದೇ ಎಂದು ಕೃಷಿಜಯಂತಿಗೆ ಆಗಮಿಸಿದ್ದ ಜನಸಾಮಾನ್ಯರು ಪರೀಕ್ಷೆ ಮಾಡಿ, ಕೊಳಲನ್ನು ಊದಿ ನೋಡುತ್ತಿದ್ದುದು ವಿಶೇಷವಾಗಿತ್ತು.  

                           ತನ್ನ ತಂದೆ ಸತ್ಯನಾರಾಯಣ ಭಟ್ಟರು ಬೇರು ಬೊಗಟೆ ಕಲಾಕೃತಿಗಳನ್ನು ಮಾಡುತ್ತಿದ್ದರು. ಅವರೇ ತನಗೆ ಸ್ಪೂರ್ತಿ ಎಂದು ಹೇಳುವ ಶಿವಮೂರ್ತಿ ಭಟ್ಟರು ತೆಂಗಿನಕಾಯಿಯ ಚಿಪ್ಪಿನಿಂದ ಸ್ಪ್ರಿಂಗ್, ಗಣಪತಿ, ವಾಲ್ ಪ್ಲೇಟ್, 50-60ಕ್ಕೂ ಹೆಚ್ಚಿನ ವಿವಿಧ ಕೀಟಗಳು, ಇಲಿ, ಮುಖ, ಆಮೆ, ಪಿಗ್ಮಿ ಮನುಷ್ಯ, ತಾಯಿ-ಮಗು, ಜಿರಾಫೆ, ಸಿಯಾಳದ ಚಿಪ್ಪಿನಿಂದ ಬೇಲೂರು ಶಿಲಾಬಾಲಿಕೆ ಹೀಗೆ ಹಲವು ಬಗೆಯ ಕಲಾಕೃತಿಗಳನ್ನು ತಯಾರು ಮಾಡಿದ್ದಾರೆ. ಕಳೆದ 10-12 ವರ್ಷಗಳಿಂದ ಈ ಕಾರ್ಯವನ್ನು ಕೈಗೊಳ್ಳುತ್ತ ಬಂದಿದ್ದೇನೆ ಎಂದು ಭಟ್ಟರು ತಿಳಿಸುತ್ತಾರೆ.
ಶಿವಮೂರ್ತಿ ಭಟ್ಟರು ಓದಿರುವುದು ಕೇವಲ ಎಸ್ಎಸ್ಎಲ್ಸಿ ಆದರೆ ಅವರು ತಮ್ಮ ಕೈಚಳಕದ ಮೂಲಕ ಮಹತ್ತರ ಸಾಧನೆಯ ಹಾದಿಯಲ್ಲಿದ್ದಾರೆ. ಇವರು ತಯಾರಿಸಿರುವ ಅಡಿಕೆ ದಬ್ಬೆಯ ಚಾಕುವಂತೂ ಎಲ್ಲರಲ್ಲಿಯೂ ಬೆರಗನ್ನು ಮೂಡಿಸುತ್ತಿದೆ. ಪ್ರಾಚೀನ ಕಾಲದಲ್ಲಿ ರಾಜ ಮಹಾರಾಜರು ಬಳಕೆ ಮಾಡುತ್ತಿದ್ದ ಕತ್ತಿಯಂತೆಯೇ ಇರುವ ಈ ಚಾಕುವಿನ ಮೇಲೆ ಕೆತ್ತಲಾಗಿರುವ ವಿಶಿಷ್ಟ ಕೆತ್ತನೆಗಳು ಎಲ್ಲರನ್ನೂ ಸೆಳೆಯುತ್ತಿದೆ. ಕತ್ತಿಯ ಹಿಡಿಕೆಯ ಮೇಲಿನ ಚಿತ್ತಾರಗಳು ಮತ್ತಷ್ಟು ಆಕರ್ಷಕವಾಗಿದೆ.

               ಮರದ ತುಂಡುಗಳಿಂದ ವ್ಯಾನಿಟಿ ಬ್ಯಾಗ್ ಒಂದನ್ನು ತಯಾರಿಸಿದ್ದು ಮನಮೋಹಕವಾಗಿದೆ. ಹೂಜಿಗಳು, ಹೂದಾನಿಗಳು, ಚಿಕ್ಕ ಪೆಟ್ಟಿಗೆ ಇತ್ಯಾದಿಗಳ ಅಷ್ಟೇ ಸುಂದರವಾಗಿದೆ. ವಾಣಿಜ್ಯ ಉದ್ದೇಶಕ್ಕಾಗಿ ಈ ಕಲಾಕೃತಿಗಳನ್ನು ಮಾಡುತ್ತಿಲ್ಲ. ಬದಲಾಗಿ ಹವ್ಯಾಸವಾಗಿ ಇವನ್ನು ತಯಾರು ಮಾಡುತ್ತಿದ್ದೇನೆ. ಅನೇಕ ಕಡೆಗಳಲ್ಲಿ ಪ್ರದರ್ಶನಕ್ಕಾಗಿ ಒಯ್ದಿದ್ದೇನೆ. ಎಲ್ಲ ಕಡೆಗಳಲ್ಲಿ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದೆ. ಒಂದೆರಡು ಸಾರಿ ಮಾರಾಟಕ್ಕಾಗಿ ಬೇಡಿಕೆಗಳು ಬಂದಿದ್ದವು. ಆದರೆ ಮಾರಾಟ ಮಾಡಿಲ್ಲ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಲಾಕೃತಿಗಳು, ಕಾಷ್ಟಶಿಲ್ಪ ರಚನೆಗಳನ್ನು ಮಾಡುವ ಉದ್ದೇಶವಿದೆ ಎಂದು ಶಿವಮೂರ್ತಿ ಭಟ್ಟರು ಹೇಳುತ್ತಾರೆ.
ಶಿವಮೂರ್ತಿ ಭಟ್ಟರು ತಯಾರಿಸಿದ ಇಂತಹ ಕಲಾಕೃತಿಗಳನ್ನು ವೀಕ್ಷಣೆ ಮಾಡಲು ಮುರೂರಿಗೆ ತೆರಳಬಹುದಾಗಿದೆ. ಇಲ್ಲವಾದಲ್ಲಿ ಅವರನ್ನು 08386-268205 ಅಥವಾ ಮೊಬೈಲ್ ಸಂಖ್ಯೆ 9902451009 ಈ ದೂರವಾಣಿ ಸಂಖ್ಯೆ ಮೂಲಕ ಸಂಪರ್ಕಿಸಬಹುದಾಗಿದೆ.


Thursday, April 30, 2015

ಅಬ್ಬರದ ಗಾಳಿ, ಮಳೆಗೆ ನಲುಗಿದ ಉಂಚಳ್ಳಿ

(ಚಲ್ಲಾಪಿಲ್ಲಿಯಾಗಿರುವ ಹಂಚು)
ಎತ್ತ ನೋಡಿದರತ್ತ ಮುರಿದು ಬಿದ್ದು ಭೂಮಿಪಾಲಾಗಿರುವ ಬಾಳೆಯ ಗಿಡಗಳು, ಅಲ್ಲಲ್ಲಿ ನೆಲಕಚ್ಚಿರುವ ತೆಂಗಿನ ಮರಗಳು, ಮುರಿತು ಬಿದ್ದ ಅಡಿಕೆಯ ಮರಗಳು, ಕಿತ್ತುಬಿದ್ದಿರುವ ಮಾವು, ಹಲಸಿನ ಮರಗಳು. ಅಬ್ಬರದ ಗಾಳಿಯ ಪರಿಣಾಮವಾಗಿ ಫಸಲು ಬಿಡುತ್ತಿದ್ದ ಮರಗಳೆಲ್ಲ ಕಿತ್ತು ಬಿದ್ದಿರುವ ದೃಶ್ಯ ತಾಲೂಕಿನ ಉಂಚಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಉಪಳೇಕೊಪ್ಪದಲ್ಲಿ ಕಾಣಸಿಗುತ್ತಿದೆ.
ತಾಲೂಕಿನಾದ್ಯಂತ ಬೀಸಿದ ಗಾಳಿ ಕೆಲವು ಕಡೆಗಳಲ್ಲಿ ತೀವ್ರ ಪ್ರತಾಪವನ್ನೇ ತೋರಿದೆ. ಮಳೆಯಿಂದ ಹಾನಿ ಅಷ್ಟಾಗಿ ಸಂಭವಿಸದೇ ಇದ್ದರೂ ಮಳೆಗೂ ಪೂರ್ವ ಬೀಸಿದ ಅಬ್ಬರದ ಗಾಳಿಗೆ ಉಂಚಳ್ಳಿ, ಕೆರೆಕೊಪ್ಪ ಹಾಗೂ ಉಪಳೇಕೊಪ್ಪಗಳಲ್ಲಿ ಭಾರಿ ಹಾನಿಯನ್ನುಂಟುಮಾಡಿದೆ. ಕೆರೆಕೊಪ್ಪದಲ್ಲಿ ಮನೆಯೊಂದರ ಮೇಲೆ ತೆಂಗಿನಮರ ಮುರಿದು ಬಿದ್ದು ಹಾನಿ ಸಂಭವಿಸಿದ್ದರೆ ಉಂಚಳ್ಳಿಯಲ್ಲಿ 10ಕ್ಕೂ ಅಧಿಕ ತೆಂಗಿನ ಮರಗಳು ನೆಲಕಚ್ಚಿವೆ. ಉಪಳೇಕೊಪ್ಪದಲ್ಲಂತೂ ಗಾಳಿಯ ಹಾನಿ ತೀವ್ರವಾಗಿತ್ತು. ಸಂಜೆ 6 ಗಂಟೆಯ ಸುಮಾರಿಗೆ 20 ರಿಂದ 25 ನಿಮಿಷಗಳ ಕಾಲ ಬೀಸಿದ ಅಬ್ಬರದ ಗಾಳಿಗೆ ಗ್ರಾಮದ 8-10 ಮನೆಗಳ ಹಂಚುಗಳು ಹಾರಿ ಹೋಗಿದೆ. ವಿದ್ಯುತ್ ತಂತಿಗಳ ಮೇಲೂ ಮರಗಳು ಮುರಿದು ಬಿದ್ದಿದ್ದು ತಂತಿಗಳು ತುಂಡಾಗಿದೆ. 5-10 ವಿದ್ಯುತ್ ಕಂಬಗಳು ಮುರಿದು ಹೋಗಿದೆ.
ಉಪಳೇಕೊಪ್ಪದ ವಿಘ್ನೇಶ್ವರ ಗೋವಿಂದ ನಾಯ್ಕ ಅವರು 3 ಎಕರೆ ಪ್ರದೇಶದಲ್ಲಿ ಬಾಳೆಯನ್ನು ಬೆಳೆದಿದ್ದರು. ಅವರು ಬೆಳೆದ ಬಾಳೆ ಇನ್ನೊಂದೆರಡು ತಿಂಗಳಿನಲ್ಲಿ ಫಸಲನ್ನು ಬಿಡಲು ತಯಾರಾಗಿತ್ತು. 2 ಲಕ್ಷಕ್ಕೂ ಅಧಿಕ ರು. ಖರ್ಚು ಮಾಡಿ ಬಾಳೆಯನ್ನು ಬೆಳೆದಿದ್ದ ಅವರು ಲಕ್ಷಗಟ್ಟಲೆ ಆದಾಯದ ನಿರೀಕ್ಷೆಯಲ್ಲಿದ್ದರು. ಆದರೆ ಬಿರುಗಾಳಿ ಅವರ ಆಸೆಯನ್ನು ಮಣ್ಣುಪಾಲು ಮಾಡಿದೆ. ತೋಟದಲ್ಲಿ ಬಹುತೇಕ ಬಾಳೆಯ ಮರಗಳು ಕಿತ್ತು ಬಿದ್ದಿದೆ. ಇಷ್ಟೂ ಸಾಲದು ಎನ್ನುವಂತೆ ತೋಟದ ಸುತ್ತಮುತ್ತಲೂ ಬೆಳೆದಿದ್ದ ದೈತ್ಯ ಮರಗಳು ಬಾಳೆಯ ತೋಟದ ಮೇಲೆ ಕಿತ್ತು ಬಿದ್ದಿವೆ. ಮನೆಯ ಪಕ್ಕದಲ್ಲೇ ಇದ್ದ ಹಲಸಿನ ಮರವೊಂದು ಕಿತ್ತು ಬಿದ್ದಿದೆ. ಇದರಿಂದಾಗಿ ಇನ್ನೂ ಬೆಳೆಯದ 150ಕ್ಕೂ ಅಧಿಕ ಹಲಸಿನ ಕಾಯಿ ಎಲ್ಲೆಂದರಲ್ಲಿ ಬಿದ್ದುಕೊಂಡಿದೆ. ಫಲ ಬರುತ್ತಿದ್ದ ತೆಂಗಿನ ಮರ ಮುರಿದು ಬಿದ್ದಿದೆ. ಎರಡು ಗೇರು ಮರಗಳು ಕಿತ್ತು ಬಿದ್ದಿವೆ. 200 ಕ್ಕೂ ಅಧಿಕ ಹಂಚುಗಳು ಗಾಳಿಗೆ ಹಾರಿ ಹೋಗಿದೆ.
ಕವಿ, ಬರಹಗಾರ ಎನ್. ವಿ. ಮಂಜುನಾಥ ಅವರ ಮನೆಯ ಪರಿಸ್ಥಿತಿಯೂ ಇದಕ್ಕಿಂತ ಹೊರತಾಗಿಲ್ಲ. ಅವರ ಮನೆಯ 500 ಹಂಚುಗಳು ಗಾಳಿಯ ಅಬ್ಬರಕ್ಕೆ ಹಾರಿ ಹೋಗಿ ಪುಡಿ ಪುಡಿಯಾಗಿದೆ. ಮಾವಿನ ಮರವೊಂದು ಕೊಟ್ಟಿಗೆಯ ಮೇಲೆ ಉರುಳಿ ಬಿದ್ದಿದೆ. 25 ವರ್ಷ ಪ್ರಾಯದ ಕಳೆದ 15 ವರ್ಷಗಳಿಂದ ಫಲ ನೀಡುತ್ತಿದ್ದ ತೆಂಗಿನ ಮರ ಅರ್ಧದಲ್ಲಿಯೇ ಮುರಿದು ಬಿದ್ದಿದೆ. ಮೇವಿಗಾಗಿ ಹುಲ್ಲನ್ನು ತಂದು ಪೇರಿಸಿ ಇಡಲಾಗಿತ್ತು. ಅದರ ಮೇಲೆ ದೈತ್ಯ ಮಾವಿನ ಮರ ಉರುಳಿದೆ. ತೋಟದಲ್ಲಿದ್ದ ಬಾಳೆಯ ಗಿಡಗಳಂತೂ ಅರ್ಧದಲ್ಲಿಯೇ ಮುರಿದು ನಿಂತಿದೆ. 25ಕ್ಕೂ ಅಧಿಕ ಅಡಿಕೆಯ ಮರಗಳು ಗಾಳಿಯ ಅಬ್ಬರಕ್ಕೆ ಮುರಿದು ಹೋಗಿದೆ.
      ಉಪಳೇಕೊಪ್ಪದ ಜಾನಕಿ ನಾರಾಯಣ ನಾಯ್ಕ, ಜಗದೀಶ ರಾಮ ನಾಯ್ಕ, ವೀರಭದ್ರ ಶೇಷಗಿರಿ ನಾಯ್ಕ, ನೀಲಕಂಠ ರಾಮ ನಾಯ್ಕ, ಸುರೇಶ ಗಣಪತಿ ನಾಯ್ಕ, ವಿಘ್ನೇಶ್ವರ ಗಣಪತಿ ನಾಯ್ಕ, ಲೋಕೇಶ ಗೋಪಾಲ ನಾಯ್ಕ, ಕೇಶವ ಶ್ರೀಧರ ನಾಯ್ಕ, ಕನ್ನ ಬಡಿಯಾ ನಾಯ್ಕ, ವೆಂಕಟೇಶ ರಾಮ ನಾಯ್ಕ ಅವರ ಮನೆಯ ಹಂಚುಗಳು ಹಾರಿ ಹೋಗಿದೆ. ಫಲ ಬಿಡುತ್ತಿದ್ದ ಹಣ್ಣಿನ ಮರಗಳು ಕಿತ್ತು ಬಿದ್ದಿವೆ. ಅಷ್ಟೇ ಅಲ್ಲದೇ ಬಾಳೆಯ ಮರಗಳು, ಅಡಿಕೆ ಗಿಡಗಳು ಮುರಿದು ಬಿದ್ದಿವೆ. ಮುನಿದ ಪ್ರಕೃತಿ ಅದೆಷ್ಟೋ ವರ್ಷಗಳ ಶ್ರಮವನ್ನು ಮಣ್ಣುಪಾಲು ಮಾಡಿದೆ. ಅದೆಷ್ಟೋ ಲಕ್ಷ ರು. ಆದಾಯವನ್ನು ತರಬೇಕಿದ್ದ ಹಣ್ಣಿನ ಮರಗಳು, ತೋಟಗಾರಿಕೆ ಗಿಡಗಳೆಲ್ಲ ಧರಾಶಾಹಿಯಾಗಿವೆ. ಇದರಿಂದಾಗಿ ಉಪಳೇಕೊಪ್ಪದ ಗ್ರಾಮಸ್ಥರು ಕಂಗಾಲಾಗಿದ್ದಾರೆ. ಗಾಳಿಯ ಅಬ್ಬರ ಉಪಳೇಕೊಪ್ಪಕ್ಕೆ ಸೀಮಿತವಾಗದೇ ಹಳೆ ಉಂಚಳ್ಳಿ, ಉಂಚಳ್ಳಿ ಹಾಗೂ ಕೆರೆಕೊಪ್ಪಗಳಲ್ಲಿಯೂ ಪ್ರತಾಪವನ್ನು ತೋರಿದೆ. ಕನಿಷ್ಟ 25 ಲಕ್ಷಕ್ಕೂ ಅಧಿಕ ರು. ಹಾನಿಯಾಗಿರಬಹುದು ಎಂದು ಅಂದಾಜು ಮಾಡಲಾಗಿದೆ.
ಬಡ, ಕೂಲಿ ಕಾರ್ಮಿಕರಾದ ಉಪಳೇಕೊಪ್ಪದ ನಿವಾಸಿಗಳು ಪ್ರಕೃತಿಯ ಮುನಿಸಿನ ಪರಿಣಾಮ ಕಂಗಾಲಾಗಿದ್ದಾರೆ. ಜೀವನಾಧಾರವಾಗಿದ್ದ ಬೆಳೆಯೆಲ್ಲ ಮಣ್ಣುಪಾಲಾಗಿರುವ ಕಾರಣ ಮುಂದೆ ಜೀವನವನ್ನು ಯಾವ ರೀತಿ ನಡೆಸಬೇಕು ಎನ್ನುವುದು ತಿಳಿಯದೇ ತಲೆಯ ಮೇಲೆ ಕೈಹೊತ್ತು ಕುಳಿತಿದ್ದಾರೆ. ಸರ್ಕಾರ ಕೂಡಲೇ ಬೆಳೆಹಾನಿಯನ್ನು ಅಂದಾಜು ಮಾಡಿ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಶಿರಸಿಯ ತಹಶಿಲ್ದಾರ್ ಬಸಪ್ಪ ಪೂಜಾರ, ಶಾನುಭೋಗರಾದ ಆರ್. ಎಂ. ನಾಯ್ಕ ಹಾಗೂ ಉಂಚಳ್ಳಿ ಪಂಚಾಯತ ಅಭಿವೃದ್ಧಿ ಅಧಿಕಾರಿ ದತ್ತಾತ್ರೆಯ ಭಟ್ ಅವರು ಭೇಟಿ ನೀಡಿ ಹಾನಿಯನ್ನು ಪರಿಶೀಲಿಸಿ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ.
***
25 ನಿಮಿಷ ಬೀಸಿದ ಗಾಳಿ 25 ವರ್ಷಗಳ ಶ್ರಮವನ್ನು ಮಣ್ಣುಪಾಲು ಮಾಡಿದೆ. ಮನೆಯ ಮಕ್ಕಳಂತೆ ಪ್ರೀತಿಯಿಂದ ಸಲಹಿ ಬೆಳೆಸಿದ್ದ ಗಿಡ ಮರಗಳೆಲ್ಲ ನೆಲಕಚ್ಚಿವೆ. ದೇವರು ನಮ್ಮ ಮೇಲೆ ಯಾಕೆ ಸಿಟ್ಟಾಗಿದ್ದಾನೆ ಎನ್ನುವುದು ತಿಳಿಯುತ್ತಿಲ್ಲ. ರಾತ್ರಿಯ ಅಬ್ಬರದ ಗಾಳಿ ಎಲ್ಲರಲ್ಲೂ ಭಯವನ್ನು ಹುಟ್ಟು ಹಾಕಿದೆ. ಮರಗಳನ್ನೆಲ್ಲ ತಿರುಗಿಸಿ ತಿರುಗಿಸಿ ಒಗೆಯುತ್ತಿತ್ತು. ಮನೆಯ ಹಂಚುಗಳನ್ನೆಲ್ಲ ಹಾರಿಸುತ್ತಿತ್ತು. ನಮಗೆ ಮನೆಯೊಳಗೆ ಕುಳಿತುಕೊಳ್ಳಲೂ ಭಯ, ಮನೆಯಿಂದ ಹೊರಗೆ ಬರಲೂ ಭಯ ಎನ್ನುವಂತಾಗಿತ್ತು.
ರಾಧಾ ವೆಂಕಟ್ರಮಣ ನಾಯ್ಕ
ಉಪಳೇಕೊಪ್ಪ
ಅಧಿಕಾರಿಗಳು ನಮ್ಮೂರಿಗೆ ಭೇಟಿ ನೀಡಿ ಆಗಿರುವ ಹಾನಿಯನ್ನು ಅಂದಾಜು ಮಾಡಿ ಪರಿಹಾರ ನೀಡುವ ಭರವಸೆ ಕೊಟ್ಟು ಹೋಗಿದ್ದಾರೆ. ಸರ್ಕಾರ ನಮಗೆ ಕೊಡುವ ಪರಿಹಾರ ಸಾವಿರ ಸಾವಿರ ರು.ಗಳ ಮಟ್ಟದಲ್ಲಿರುತ್ತದೆ. ಆದರೆ ನಮಗೆ ಆಗಿರುವ ಹಾನಿ ಮಾತ್ರ ಲಕ್ಷಾಂತರ ರು. ಸರ್ಕಾರ ನೀಡುವ ಪರಿಹಾರವೂ ಇನ್ನೂ ನಾಲ್ಕೈದು ತಿಂಗಳುಗಳ ನಂತರ ನಮ್ಮ ಕೈಗೆ ತಲುಪುತ್ತದೆ. ಆದ್ದರಿಂದ ಸರ್ಕಾರ ಪರಿಹಾರ ನೀಡುವಲ್ಲಿ ವಿಳಂಬವನ್ನು ಮಾಡಬಾರದು. ಆಗಿರುವ ಹಾನಿಯನ್ನು ಸರಿಯಾಗಿ ಅಂದಾಜು ಮಾಡಿ ಅದಕ್ಕೆ ತಕ್ಕ ಪರಿಹಾರ ಒದಗಿಸಬೇಕಾಗಿದೆ.
ವೆಂಕಟೇಶ ರಾಮಾ ನಾಯ್ಕ

Tuesday, April 28, 2015

ಅಂ-ಕಣ-5

ಸ್ವಲ್ಪ ವಿಚಿತ್ರ ಬಾಸ್ :

ಮನೆಗಳಿಗೆ ಚಿತ್ರ ವಿಚಿತ್ರ ಹೆಸರಿಡುವುದು ಫ್ಯಾಷನ್..
ಅಂತದ್ದೊಂದು ವಿಚಿತ್ರ ಹೆಸರು
.....
ಪ್ರವೇಶ-ವಿಲ್ಲಾ !!

ಒಟ್ಟಿಗೆ ಓದಿ ಹಾಗೂ ಬಿಡಿಸಿ ಓದಿ

ಇನ್ನೊಂದು ಮನೆಯ ಎದುರು ಕಂಡ ಹೆಸರು
ರಾಧಾ ಕೇ ಶವ್ |


ಸುಮ್ನೆ ಒಂದು ದುರಾಲೋಚನೆ :

ರಾಮಂಗೂ ಮಾರ್ಚ್ ಎಂಡು
ಭೀಮಂಗೂ ಮಾರ್ಚ್ ಎಂಡು..
ನಿಂಗೂ ಮಾರ್ಚ್ ಎಂಡು..
ನನಗೂ ಮಾರ್ಚ್ ಎಂಡು..
ಈ ಮಾರ್ಚ್ ತಿಂಗಳಿಂದಲೇ ಇಷ್ಟೆಲ್ಲ ಸಮಸ್ಯೆ..
ಮಾರ್ಚ್ ತಿಂಗಳು ಇಲ್ಲದೇ ಇರುವ ಕ್ಯಾಲೆಂಡರ್ ತಂದರೆ ಹೇಗೆ?

ಸುಮ್ನೆ ಒಂದ್ ಟಾಂಗು :

ಇವತ್ತು ಮನೆ
ಮನೆಗಳಲ್ಲಿ
ಕ್ಯಾಂಡಲ್ ಲೈಟ್ ಡಿನ್ನರ್
ಕಾರಣ
ವಿದ್ಯುತ್ ವ್ಯತ್ಯಯ ||

ಮತ್ತೊಂಚೂರು ಹಿಡಿಶಾಪ :

ಓಹ್..
ಮತ್ತೊಮ್ಮೆ  ಕ್ಯಾಂಡಲ್
ಲೈಟ್ ಡಿನ್ನರ್ |
ವಿದ್ಯುತ್ ವ್ಯತ್ಯಯದೊಂದಿಗೆ
ಸಹಕರಿಸಿದ್ದಕ್ಕಾಗಿ
ಥ್ಯಾಂಕ್ಸ್ ಟು ಹೆಸ್ಕಾಂ ||